ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನುಷ್ಯನಿಗಲ್ಲ ದೇವರಿಗೆ ಭಯಪಡಲು ಐದು ಕಾರಣಗಳು

ಮನುಷ್ಯನಿಗಲ್ಲ ದೇವರಿಗೆ ಭಯಪಡಲು ಐದು ಕಾರಣಗಳು

ಮನುಷ್ಯನಿಗಲ್ಲ ದೇವರಿಗೆ ಭಯಪಡಲು ಐದು ಕಾರಣಗಳು

ಆಯುವಕನು ಆನಂದಾಶ್ಚರ್ಯದಿಂದ ತುಂಬಿಹೋದನು. ಏಕೆ? ಏಕೆಂದರೆ ತೀರ ಅನಿರೀಕ್ಷಿತವಾದ ವಿಷಯವೊಂದು ಸಂಭವಿಸಿತ್ತು. ಅವನು ಆಗಲೇ ಯೆಹೋವನ ಸಾಕ್ಷಿಗಳೊಂದಿಗೆ ಮಾಡಿದ ಚರ್ಚೆಯು ಅವನ ಕಣ್ಮನಗಳನ್ನು ತೆರೆಸಿತ್ತು. ದೇವರು ಕಷ್ಟಗಳನ್ನು ಏಕೆ ಅನುಮತಿಸುತ್ತಾನೆ ಎಂಬ ಪ್ರಶ್ನೆ ವರ್ಷಗಳಿಂದ ಅವನನ್ನು ಕಾಡುತ್ತಿತ್ತು. ಈಗ ಬೈಬಲ್‌ ಅದನ್ನು ಸ್ಪಷ್ಟವಾಗಿ ವಿವರಿಸಿತು. ಬೈಬಲಿನಲ್ಲಿ ಅಂತಹ ಮಹತ್ವವಾದ ಹಾಗೂ ಸಂತೃಪ್ತಿಕರ ಮಾಹಿತಿಯಿದೆ ಎಂಬುದು ಅವನಿಗೆ ತಿಳಿದಿರಲಿಲ್ಲ.

ಆ ಸಂದರ್ಶಕರು ಹೊರಟುಹೋದ ಸ್ವಲ್ಪದರಲ್ಲೇ ಮನೆಯೊಡತಿಯು ರಭಸದಿಂದ ಕೋಣೆಯನ್ನು ಪ್ರವೇಶಿಸಿ ಕೋಪದಿಂದ, “ಬಂದವರು ಯಾರು?” ಎಂದು ಕೇಳಿದಳು.

ತಬ್ಬಿಬ್ಬಾದ ಯುವಕನು ಏನೂ ತೋಚದೆ ಉತ್ತರವನ್ನೇ ಕೊಡಲಿಲ್ಲ.

“ಅವರು ಯಾರೆಂದು ನನಗೆ ಗೊತ್ತು. ಅವರನ್ನು ಪುನಃ ನೀನು ಬರಗೊಡಿಸಿದರೆ ನೀನು ಇಲ್ಲಿಂದ ಜಾಗ ಖಾಲಿ ಮಾಡಿ ಬೇರೆ ಮನೆ ನೋಡ್ಕೋ” ಎಂದು ಅರಚುತ್ತಾ ಬಾಗಿಲನ್ನು ದಢಾರೆಂದು ಮುಚ್ಚಿ ಹೊರಟುಹೋದಳು.

ಕ್ರಿಸ್ತನ ನಿಜ ಶಿಷ್ಯರಿಗೆ ವಿರೋಧ ಖಂಡಿತ

ಈ ಯೌವನಸ್ಥನಿಗಾದ ಅನುಭವವು ಅಪರೂಪವಲ್ಲ. ದೇವರ ವಾಕ್ಯವಾದ ಬೈಬಲ್‌ ವಿವರಿಸುವುದು: “ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ದೇವಭಕ್ತಿಯಿಂದ ಜೀವಿಸಲು ಬಯಸುವವರೆಲ್ಲರೂ ಹಿಂಸೆಗೂ ಒಳಗಾಗುವರು.” (2 ತಿಮೊಥೆಯ 3:12) ನಿಜ ಕ್ರೈಸ್ತರು ಸಾಮಾನ್ಯವಾಗಿ ಜನಪ್ರಿಯರಲ್ಲ ಮತ್ತು ಜನಪ್ರಿಯರಾಗಿರಲೂ ಇಲ್ಲ. ಏಕೆ? ಅಪೊಸ್ತಲ ಯೋಹಾನನು ತನ್ನ ಜೊತೆ ಕ್ರೈಸ್ತರಿಗೆ ಹೇಳಿದ್ದು: “ನಾವು ದೇವರಿಂದ ಹುಟ್ಟಿದವರೆಂದು, ಆದರೆ ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ ಎಂದು ನಮಗೆ ತಿಳಿದಿದೆ.” ಅಲ್ಲದೆ ಪಿಶಾಚನಾದ ಸೈತಾನನು “ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ” ಎಂದೂ ಹೇಳಲಾಗಿದೆ. (1 ಯೋಹಾನ 5:19; 1 ಪೇತ್ರ 5:8) ಸೈತಾನನ ಅತಿ ಪರಿಣಾಮಕಾರಿ ಆಯುಧಗಳಲ್ಲಿ ಮನುಷ್ಯ ಭಯವೂ ಒಂದು.

ಯಾವ ಪಾಪವನ್ನೂ ಮಾಡದೆ ಒಳ್ಳೇದನ್ನೇ ಮಾಡಿದ ಯೇಸು ಕ್ರಿಸ್ತನು ಸಹ ಅಪಹಾಸ್ಯಗೊಳಗಾದನು, ಹಿಂಸಿಸಲ್ಪಟ್ಟನು. ಅವನು ಹೇಳಿದ್ದು: “ಯಾವುದೇ ಕಾರಣವಿಲ್ಲದೆ ಅವರು ನನ್ನನ್ನು ದ್ವೇಷಿಸಿದರು.” (ಯೋಹಾನ 15:25) ಅವನು ತನ್ನ ಮರಣದ ಹಿಂದಿನ ರಾತ್ರಿಯಂದು ಶಿಷ್ಯರನ್ನು ಮುಂದೆ ಬರಲಿರುವ ಹಿಂಸೆಗಾಗಿ ಈ ಮಾತುಗಳಿಂದ ಸಿದ್ಧಗೊಳಿಸಿದನು: “ಲೋಕವು ನಿಮ್ಮನ್ನು ದ್ವೇಷಿಸುವುದಾದರೆ ಅದು ನಿಮ್ಮನ್ನು ದ್ವೇಷಿಸುವುದಕ್ಕಿಂತ ಮುಂಚೆ ನನ್ನನ್ನು ದ್ವೇಷಿಸಿದೆ ಎಂಬುದು ನಿಮಗೆ ಗೊತ್ತಿದೆ. ಒಬ್ಬ ಆಳು ತನ್ನ ಯಜಮಾನನಿಗಿಂತ ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿರುವಲ್ಲಿ ನಿಮ್ಮನ್ನೂ ಹಿಂಸೆಪಡಿಸುವರು.”—ಯೋಹಾನ 15:18, 20.

ಈ ಕಾರಣದಿಂದಲೇ ಅನೇಕರು ಸತ್ಯಾರಾಧನೆಗಾಗಿ ತಮ್ಮ ನಿಲುವನ್ನು ತಕ್ಕೊಳ್ಳಲು ಹಿಂಜರಿದಿದ್ದರು. ಒಂದು ಸಂದರ್ಭದಲ್ಲಿ ಯೇಸುವನ್ನು ಹುಡುಕುತ್ತಿದ್ದವರ ಕುರಿತು ಬೈಬಲ್‌ ತಿಳಿಸುವುದು: “ಯೆಹೂದ್ಯರ ಭಯದಿಂದ ಯಾರೂ ಅವನ ಕುರಿತು ಬಹಿರಂಗವಾಗಿ ಮಾತಾಡುತ್ತಿರಲಿಲ್ಲ.” (ಯೋಹಾನ 7:13; 12:42) ಯಾರಾದರೂ ಯೇಸುವಿನಲ್ಲಿ ನಂಬಿಕೆಯಿಡುವಲ್ಲಿ ಧಾರ್ಮಿಕ ಮುಖಂಡರು ಅವರನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದರು. ಹೀಗೆ ಮನುಷ್ಯ ಭಯವು ಅನೇಕರನ್ನು ಕ್ರೈಸ್ತರಾಗದಂತೆ ತಡೆದಿತ್ತು.—ಅ. ಕಾರ್ಯಗಳು 5:13.

ಕ್ರೈಸ್ತ ಸಭೆಯು ಸ್ಥಾಪಿಸಲ್ಪಟ್ಟ ಸ್ವಲ್ಪ ಸಮಯದ ನಂತರ ಯೆರೂಸಲೇಮಿನ ಸಭೆಗೆ “ಮಹಾ ಹಿಂಸೆಯು” ಉಂಟಾಯಿತು. (ಅ. ಕಾರ್ಯಗಳು 8:1) ವಾಸ್ತವದಲ್ಲಿ ರೋಮ್‌ ಪ್ರಾಂತದಾದ್ಯಂತ ಕ್ರೈಸ್ತರು ಹಿಂಸೆಯನ್ನು ಅನುಭವಿಸಿದರು. ರೋಮ್‌ನ ಗಣ್ಯ ವ್ಯಕ್ತಿಗಳು ಅಪೊಸ್ತಲ ಪೌಲನಿಗೆ ಅಂದದ್ದು: “ಎಲ್ಲ ಕಡೆಗಳಲ್ಲಿ ಈ ಭಿನ್ನಪಂಥದ ವಿರುದ್ಧವಾಗಿ ಮಾತಾಡಲಾಗುತ್ತಿದೆ ಎಂಬುದು ನಮಗೆ ತಿಳಿದಿದೆ.” (ಅ. ಕಾರ್ಯಗಳು 28:22) ಹೌದು, ನಿಜ ಕ್ರೈಸ್ತರು ಎಲ್ಲ ಕಡೆಗಳಲ್ಲೂ ವಿರೋಧವನ್ನು ಎದುರಿಸಿದರು.

ಇಂದು ಸಹ ಕ್ರಿಸ್ತನ ನಿಜ ಶಿಷ್ಯರಾಗದಂತೆ ಅನೇಕರನ್ನು ತಡೆಯಲು ಸೈತಾನನು ಮನುಷ್ಯ ಭಯವನ್ನು ಶಸ್ತ್ರವನ್ನಾಗಿ ಉಪಯೋಗಿಸುತ್ತಾನೆ. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡುವ ಪ್ರಾಮಾಣಿಕ ಜನರು ಶಾಲೆಯಲ್ಲಿ, ಕೆಲಸದ ಸ್ಥಳಗಳಲ್ಲಿ, ನೆರೆಹೊರೆಯಲ್ಲಿ, ಸಮಾಜದಲ್ಲಿ ವಿರೋಧ ಅಥವಾ ಕುಚೋದ್ಯಕ್ಕೆ ಗುರಿಯಾಗುತ್ತಾರೆ. ಅವರು ಜನಮನ್ನಣೆ, ಸ್ನೇಹ ಅಥವಾ ಭೌತಿಕ ಬೆಂಬಲ ಕಳಕೊಳ್ಳುವ ಭಯದಲ್ಲಿರಬಹುದು. ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿನ ರೈತರು ಕೊಯ್ಲಿನ ಸಮಯದಲ್ಲಿ ಅಥವಾ ತಮ್ಮ ದನಕರುಗಳ ಪಾಲನೆಯಲ್ಲಿ ನೆರೆಯವರು ಸಹಾಯ ಮಾಡಲಿಕ್ಕಿಲ್ಲ ಎಂದು ಭಯಪಡಬಹುದು. ಅಂಥಾ ಭಯಗಳ ಮಧ್ಯೆಯೂ ಲಕ್ಷಾಂತರ ಮಂದಿ ದೇವರಲ್ಲಿ ಭರವಸೆಯಿಡಲು ಮತ್ತು ದೇವರ ವಾಕ್ಯಕ್ಕನುಸಾರವಾಗಿ ಜೀವಿಸಲು ನಿರ್ಧರಿಸಿದ್ದಾರೆ. ಇದನ್ನು ಅವರು ಮಾಡುವುದು ಯೇಸು ಕ್ರಿಸ್ತನ ಅನುಕರಣೆಯಲ್ಲೇ. ಹಾಗೆ ಮಾಡುವುದಕ್ಕಾಗಿ ಯೆಹೋವ ದೇವರು ಅವರನ್ನು ಆಶೀರ್ವದಿಸಿದ್ದಾನೆ.

ಮನುಷ್ಯನಿಗಲ್ಲ ದೇವರಿಗೆ ಭಯಪಡಬೇಕೇಕೆ?

ನಾವು ಮನುಷ್ಯರಿಗೆ ಭಯಪಡದೆ ದೇವರಿಗೆ ಭಯಪಡಬೇಕೆಂದು ಬೈಬಲ್‌ ಉತ್ತೇಜಿಸುತ್ತದೆ. ಅದು ಹೇಳುವುದು: “ಯೆಹೋವನ ಭಯವೇ ಜ್ಞಾನಕ್ಕೆ ಮೂಲವು.” (ಕೀರ್ತನೆ 111:10) ಈ ಭಯವು ಶಿಕ್ಷೆಯಾಗುವುದೆಂಬ ವಿಕೃತ ಭಯವಾಗಿರುವುದಿಲ್ಲ ಬದಲಾಗಿ ಜೀವದಾತನನ್ನು ಅಸಂತೋಷಗೊಳಿಸದಿರುವ ಹಿತಕರವಾದ ಭಯವಾಗಿದೆ. ಈ ಹಿತಕರ ಭಯವು ಪ್ರೀತಿಗೆ ನಿಕಟವಾಗಿ ಸಂಬಂಧಿಸಿದೆ. ಹೀಗಿರಲಾಗಿ ನಾವು ಮನುಷ್ಯನಿಗಲ್ಲ ದೇವರಿಗೆ ಏಕೆ ಭಯಪಡಬೇಕು? ಇದಕ್ಕಿರುವ ಐದು ಕಾರಣಗಳನ್ನು ನಾವು ಪರಿಗಣಿಸೋಣ.

ಯೆಹೋವನು ಸರ್ವೋನ್ನತ ದೇವರು. ಯಾವನೇ ಮನುಷ್ಯನಿಗಿಂತ ಯೆಹೋವನು ಅತ್ಯಂತ ಮಹಾ ಶಕ್ತಿಶಾಲಿ. ದೇವರಿಗೆ ಭಯಪಡುವ ಮೂಲಕ ನಾವು ಸರ್ವಶಕ್ತನ ಪಕ್ಷವನ್ನು ತೆಗೆದುಕೊಳ್ಳುತ್ತೇವೆ. ಆತನ ದೃಷ್ಟಿಯಲ್ಲಿ “ಜನಾಂಗಗಳು ಕಪಿಲೆಯಿಂದುದುರುವ ತುಂತುರಿನಂತೆ” ಇವೆ. (ಯೆಶಾಯ 40:15) ದೇವರು ಸರ್ವಶಕ್ತನಾಗಿರುವ ಕಾರಣ ಆತನ ನಿಷ್ಠಾವಂತ ಸೇವಕರನ್ನು ‘ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದಂತೆ’ ಆತನು ಮಾಡಶಕ್ತನು. (ಯೆಶಾಯ 54:17) ನಿತ್ಯಜೀವ ಪಡೆಯಲು ಯಾರು ಯೋಗ್ಯರೆಂದು ನಿರ್ಧರಿಸುವವನು ದೇವರಾಗಿರುವುದರಿಂದ ಆತನ ಕುರಿತು ಕಲಿಯಲು, ಆತನ ಚಿತ್ತವನ್ನು ಮಾಡಲು ನಮ್ಮನ್ನು ಯಾವುದೂ ತಡೆಯದಂತೆ ಬಿಡದಿರುವುದು ವಿವೇಕಯುತ.—ಪ್ರಕಟನೆ 14:6, 7.

ದೇವರು ನಮಗೆ ಸಹಾಯ ಮತ್ತು ರಕ್ಷಣೆಯನ್ನು ಕೊಡುವನು. “ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ” ಎನ್ನುತ್ತದೆ ಬೈಬಲ್‌ ಜ್ಞಾನೋಕ್ತಿ 29:25ರಲ್ಲಿ. ಮನುಷ್ಯ ಭಯವು ಉರುಲು ಏಕೆಂದರೆ ಅದು ದೇವರಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವುದರಿಂದ ಹಿಂಜರಿಯುವಂತೆ ಮಾಡಬಲ್ಲದು. ತನ್ನ ರಕ್ಷಣಾಶಕ್ತಿಯ ಕುರಿತು ದೇವರು ಆಶ್ವಾಸನೆ ಕೊಡುವುದು: “ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.”—ಯೆಶಾಯ 41:10.

ತನ್ನನ್ನು ಸಮೀಪಿಸುವವರನ್ನು ದೇವರು ಪ್ರೀತಿಸುತ್ತಾನೆ. ಅಪೊಸ್ತಲ ಪೌಲನು ಈ ಮನಸ್ಪರ್ಶಿಸುವ ಮಾತುಗಳನ್ನು ಬರೆದನು: “ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ಸರಕಾರಗಳಾಗಲಿ ಇಂದಿನ ಸಂಗತಿಗಳಾಗಲಿ ಮುಂದೆ ಬರಲಿರುವ ಸಂಗತಿಗಳಾಗಲಿ ಶಕ್ತಿಗಳಾಗಲಿ ಎತ್ತರವಾಗಲಿ ಆಳವಾಗಲಿ ಬೇರೆ ಯಾವುದೇ ಸೃಷ್ಟಿಯಾಗಲಿ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸಲಾರದೆಂಬ ಖಾತ್ರಿ ನನಗಿದೆ.” (ರೋಮನ್ನರಿಗೆ 8:37-39) ನಾವು ದೇವರಲ್ಲಿ ಭರವಸೆಯಿಟ್ಟು ಆತನಿಗೆ ವಿಧೇಯರಾಗುವಲ್ಲಿ ಆ ವಿಶ್ವಪರಮಾಧಿಕಾರಿಯ ಅಗಲಿಸಲಾಗದ ಪ್ರೀತಿಯಲ್ಲಿ ಆನಂದಿಸಬಲ್ಲೆವು. ಎಂಥ ಸೌಭಾಗ್ಯ!

ದೇವರು ಮಾಡಿರುವ ಸಕಲ ವಿಷಯಕ್ಕೆ ಋಣಿಗಳು. ಯೆಹೋವನು ನಮ್ಮ ನಿರ್ಮಾಣಿಕನು. ನಮಗೆ ಜೀವ ಕೊಟ್ಟಾತನೂ ಆತನೇ. ಅದಲ್ಲದೆ ಜೀವನಾವಶ್ಯಕತೆಗಳನ್ನು ಮಾತ್ರವಲ್ಲದೆ ಜೀವಿತವನ್ನು ಆನಂದದಾಯಕ ಹಾಗೂ ಆಸಕ್ತಿಕರವನ್ನಾಗಿ ಮಾಡಲು ಬೇಕಾದ ಎಲ್ಲವನ್ನೂ ಆತನು ಒದಗಿಸಿದ್ದಾನೆ. ನಿಶ್ಚಯವಾಗಿ ಆತನು ಎಲ್ಲ ಒಳ್ಳೇ ದಾನಗಳ ಮೂಲನು. (ಯಾಕೋಬ 1:17) ದೇವರ ಪ್ರೀತಿಪೂರ್ವಕ ದಯೆಯನ್ನು ಗಣ್ಯಮಾಡಿದ ನಂಬಿಗಸ್ತ ದಾವೀದನು ಬರೆದದ್ದು: “ಯೆಹೋವನೇ, ನನ್ನ ದೇವರೇ, . . . ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ.”—ಕೀರ್ತನೆ 40:5.

ವಿರೋಧಿಗಳ ಮನಸ್ಸು ಬದಲಾದೀತು. ನಿಮ್ಮನ್ನು ವಿರೋಧಿಸುವವರೊಂದಿಗೆ ರಾಜಿಮಾಡಿಕೊಳ್ಳದೆ ದೇವರ ಭಯ ಮತ್ತು ಪ್ರೀತಿಯಲ್ಲಿ ದೃಢರಾಗಿ ನಿಲ್ಲುವ ಮೂಲಕ ನೀವು ಅವರಿಗೆ ಸಹಾಯಮಾಡಬಲ್ಲಿರಿ. ಯೇಸುವಿನ ಸಂಬಂಧಿಕರನ್ನು ಪರಿಗಣಿಸಿ. ಮೊದಮೊದಲು ಅವರು ಅವನಲ್ಲಿ ನಂಬಿಕೆಯನ್ನಿಡಲಿಲ್ಲ, ಬದಲಾಗಿ “ಇವನಿಗೆ ಹುಚ್ಚುಹಿಡಿದಿದೆ” ಎಂದು ಹೇಳಿದ್ದರು. (ಮಾರ್ಕ 3:21; ಯೋಹಾನ 7:5) ಯೇಸುವಿನ ಮರಣ ಮತ್ತು ಪುನರುತ್ಥಾನದ ನಂತರವೇ ಅವರಲ್ಲಿ ಅನೇಕರು ಯೇಸುವನ್ನು ನಂಬಿದರು. ಯೇಸುವಿನ ಮಲತಮ್ಮಂದಿರಾದ ಯಾಕೋಬ ಮತ್ತು ಯೂದರು ಬೈಬಲಿನ ಭಾಗಗಳನ್ನು ಬರೆದರು ಸಹ. ಮತಾಂಧ ಹಿಂಸಕನಾದ ಸೌಲನು ಕೂಡ ಸಮಯಾನಂತರ ಅಪೊಸ್ತಲ ಪೌಲನಾದನು. ಈಗ ನಮ್ಮನ್ನು ಹಿಂಸಿಸುವ ಕೆಲವರೂ ನಮ್ಮ ಧೀರ ನಿಲುವಿನ ಕಾರಣದಿಂದಾಗಿ ನಾವು ಬೈಬಲಿನ ಸತ್ಯವನ್ನು ಹೊಂದಿದ್ದೇವೆ ಎಂದು ಕಂಡು ಕ್ರಮೇಣ ಮನಸ್ಸು ಬದಲಿಸಿಯಾರು.—1 ತಿಮೊಥೆಯ 1:13.

ಉದಾಹರಣೆಗೆ, ಆಫ್ರಿಕದ ಅಬೀರಾಷ್‌ ಎಂಬ ಮಹಿಳೆಯು ಸತ್ಯವನ್ನು ಕಂಡುಕೊಳ್ಳಲು ಪ್ರಾರ್ಥಿಸುತ್ತಿದ್ದಳು. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನವನ್ನು ಮಾಡಲು ಆರಂಭಿಸಿದ ನಂತರ ಅವಳಿಗೆ ಕುಟುಂಬ ಸದಸ್ಯರಿಂದ ಮತ್ತು ಧರ್ಮ ಮುಖಂಡರಿಂದ ತೀವ್ರ ವಿರೋಧ ಬಂತು. ಅಧ್ಯಯನವನ್ನು ಆರಂಭಿಸಿದ ಅವಳ ಸಂಬಂಧಿಕರಲ್ಲಿ ಕೆಲವರು ಮನುಷ್ಯ ಭಯದ ಕಾರಣ ಅಧ್ಯಯನ ನಿಲ್ಲಿಸಿದರು. ಆದರೆ ಅವಳು ಬಲ ಮತ್ತು ಧೈರ್ಯಕ್ಕಾಗಿ ದೇವರಿಗೆ ಮೊರೆಯಿಡುತ್ತಾ ಮುಂದುವರಿದು ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದಳು. ಪರಿಣಾಮ? ಅವಳ ಸಂಬಂಧಿಕರಲ್ಲಿ ಎಂಟು ಮಂದಿ ಧೈರ್ಯವನ್ನು ಹೊಂದಿದವರಾಗಿ ಪುನಃ ಬೈಬಲ್‌ ಅಧ್ಯಯನವನ್ನು ಆರಂಭಿಸಿದರು. ಅವರೀಗ ಒಳ್ಳೇ ಆಧ್ಯಾತ್ಮಿಕ ಪ್ರಗತಿಯನ್ನು ಮಾಡುತ್ತಿದ್ದಾರೆ.

ಮನುಷ್ಯ ಭಯವನ್ನು ಜಯಿಸಬಲ್ಲಿರಿ

ಮನುಷ್ಯ ಭಯಕ್ಕೆ ಬಲಿಯಾಗುವುದನ್ನು ತಡೆಯಲು ದೇವರ ಮೇಲಣ ನಿಮ್ಮ ಪ್ರೀತಿಯನ್ನು ಬಲಗೊಳಿಸಲಿಕ್ಕಾಗಿ ನಿಮ್ಮಿಂದಾದುದೆಲ್ಲವನ್ನೂ ಮಾಡಿರಿ. ಇದನ್ನು ನೀವು ಹೇಗೆ ಮಾಡಬಲ್ಲಿರಿ? ಬೈಬಲನ್ನು ಅಧ್ಯಯನ ಮಾಡುವ ಮೂಲಕ ಮತ್ತು ಇಬ್ರಿಯ 13:6ರಂಥ ವಚನವನ್ನು ಮನನ ಮಾಡುವ ಮೂಲಕ ಇದನ್ನು ಮಾಡಬಲ್ಲಿರಿ. ಅದು ಅನ್ನುವುದು: “ಯೆಹೋವನು ನನ್ನ ಸಹಾಯಕನು; ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?” ಮನುಷ್ಯನಿಗಿಂತ ದೇವರಿಗೆ ಭಯಪಡುವುದೇ ಸರಿಯಾದದ್ದು ಮತ್ತು ವಿವೇಕಯುತವಾದದ್ದು ಎಂಬುದಕ್ಕಿರುವ ಕಾರಣಗಳನ್ನು ಮರೆಯದಿರಿ.

ಬೈಬಲಿನಿಂದ ನೀವು ಕಲಿಯುವ ವಿಷಯಗಳನ್ನು ಅನ್ವಯಿಸಿಕೊಳ್ಳುವ ಮೂಲಕ ಬರುವ ಅನೇಕ ಆಶೀರ್ವಾದಗಳನ್ನೂ ಮನಸ್ಸಿನಲ್ಲಿಡಿರಿ. ಹೀಗೆ ಮಾಡಿದರೆ ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಸಂತೃಪ್ತಿಕರ ಉತ್ತರಗಳನ್ನು ಕಂಡುಕೊಳ್ಳುವಿರಿ. ಬದುಕಿನ ಸಮಸ್ಯೆಗಳನ್ನು ಬಗೆಹರಿಸಲು ವ್ಯಾವಹಾರಿಕ ವಿವೇಕವನ್ನು ಪಡಕೊಳ್ಳುವಿರಿ. ಇಂದಿನ ಕಂಗೆಡಿಸುವ ಪರಿಸ್ಥಿತಿಗಳ ಮಧ್ಯೆಯೂ ಅದ್ಭುತಕರ ನಿರೀಕ್ಷೆಯಲ್ಲಿ ನೀವು ಆನಂದಿಸಬಹುದು. ಅಲ್ಲದೆ, ನೀವು ಯಾವುದೇ ಸಮಯದಲ್ಲಿ ಸರ್ವಶಕ್ತನಾದ ದೇವರನ್ನು ಪ್ರಾರ್ಥನೆಯ ಮೂಲಕ ಸಮೀಪಿಸಬಹುದು.

ಅಪೊಸ್ತಲ ಯೋಹಾನನು ಬರೆದದ್ದು: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.” (1 ಯೋಹಾನ 2:17) ನಾವು ದೇವಭಯದಲ್ಲಿ ನಡೆಯುತ್ತಾ ದೃಢವಾಗಿ ನಿಂತುಕೊಳ್ಳುವ ಸಮಯವು ಇದೇ ಆಗಿದೆ. ಮನುಷ್ಯ ಭಯದಿಂದಾಗಿ ಬಿದ್ದುಹೋಗುವ ಬದಲಿಗೆ ದೇವರ ಈ ಬುದ್ಧಿವಾದಕ್ಕೆ ಪ್ರತಿವರ್ತನೆ ತೋರಿಸಿ. “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” (ಜ್ಞಾನೋಕ್ತಿ 27:11) ಅದೆಂಥ ಮಹಾ ಸುಯೋಗ!

ದೇವರು ತನಗೆ ಭಯಪಡುವವರಿಗೆ ಏನನ್ನು ಕೊಡುವನೋ ಅದನ್ನು ಯಾವ ಮನುಷ್ಯನೂ ನಮಗೆ ಕೊಡಲಾರನೆಂದು ನೆನಪಿಡಿರಿ. ಏಕೆಂದರೆ ದೇವರ ವಾಕ್ಯವನ್ನುವುದು: “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ.”—ಜ್ಞಾನೋಕ್ತಿ 22:4. (w09 3/1)

[ಪುಟ 30ರಲ್ಲಿರುವ ಚಿತ್ರ]

ಅಬೀರಾಷ್‌ಳ ಧೀರ ನಿಲುವಿನಿಂದಾಗಿ ಅವಳ ಸಂಬಂಧಿಕರಲ್ಲಿ ಎಂಟು ಮಂದಿ ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡುತ್ತಿದ್ದಾರೆ