ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಹುಮಾನದ ಮೇಲೆ ದೃಷ್ಟಿಯನ್ನಿಡಿರಿ

ಬಹುಮಾನದ ಮೇಲೆ ದೃಷ್ಟಿಯನ್ನಿಡಿರಿ

ಬಹುಮಾನದ ಮೇಲೆ ದೃಷ್ಟಿಯನ್ನಿಡಿರಿ

‘ನಾನು ಬಹುಮಾನದ ಗುರಿಯ ಕಡೆಗೆ ಓಡುತ್ತಾ ಇದ್ದೇನೆ.’​—⁠ಫಿಲಿ. 3:​14, NW.

ಅಪೊಸ್ತಲ ಪೌಲನು, ಒಂದು ಪ್ರತಿಷ್ಠಿತ ಕುಟುಂಬದಿಂದ ಬಂದವನಾಗಿದ್ದನು. ಅವನು ತಾರ್ಸದ ಸೌಲ ಎಂಬ ಹೆಸರಿನಿಂದಲೂ ಪರಿಚಿತನಾಗಿದ್ದನು. ಪ್ರಸಿದ್ಧ ಧರ್ಮಶಾಸ್ತ್ರ ಬೋಧಕನಾದ ಗಮಲಿಯೇಲನ ಪಾದಸನ್ನಿಧಿಯಲ್ಲಿ ಅವನಿಗೆ ಪಿತೃಗಳ ಧರ್ಮದ ಬಗ್ಗೆ ಶಿಕ್ಷಣ ದೊರಕಿತು. (ಅ. ಕೃ. 22:⁠3) ಎಲ್ಲರೂ ಅತ್ಯುತ್ತಮವೆಂದು ಎಣಿಸುತ್ತಿದ್ದ ಈ ವೃತ್ತಿಯನ್ನು ಪೌಲನು ಸಹ ಹಿಡಿಯಬಹುದಿತ್ತಾದರೂ, ತನ್ನ ಧರ್ಮ ತೊರೆದು ಕ್ರೈಸ್ತನಾದನು. ಅಂದಿನಿಂದ ಅವನು ತನ್ನ ಮುಂದೆ ಇಡಲಾಗಿದ್ದ ನಿತ್ಯಜೀವಕ್ಕೆ, ಅಂದರೆ ಪರದೈಸ್‌ ಭೂಮಿ ಮೇಲೆ ಆಳಲಿರುವ ದೇವರ ಸ್ವರ್ಗೀಯ ರಾಜ್ಯದಲ್ಲಿ ಒಬ್ಬ ಅಮರ ರಾಜ ಹಾಗೂ ಯಾಜಕನಾಗುವ ಬಹುಮಾನವನ್ನು ಎದುರುನೋಡಿದನು.​—⁠ಮತ್ತಾ. 6:10; ಪ್ರಕ. 7:4; 20:⁠6.

2 ಆ ಬಹುಮಾನವನ್ನು ಅತ್ಯಮೂಲ್ಯವೆಂದೆಣಿಸುತ್ತಾ ಪೌಲನಂದದ್ದು: “ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.” (ಫಿಲಿ. 3:​7, 8) ಹೆಚ್ಚಿನ ಜನರಿಗೆ ಹಣ, ಅಂತಸ್ತು, ಉದ್ಯೋಗ, ಪ್ರತಿಷ್ಠೆ ಇವುಗಳೇ ಸರ್ವಸ್ವ ಆಗಿಬಿಟ್ಟಿವೆ. ಆದರೆ ಇವುಗಳನ್ನೇ ಪೌಲನು, ಮಾನವಕುಲಕ್ಕಾಗಿ ಯೆಹೋವನ ಉದ್ದೇಶವೇನೆಂದು ಕಲಿತ ಬಳಿಕ ಕಸವೆಂದೆಣಿಸಿದನು.

3 ಅಂದಿನಿಂದ, ಯೆಹೋವ ಹಾಗೂ ಕ್ರಿಸ್ತನ ಕುರಿತ ಅಮೂಲ್ಯ ಜ್ಞಾನವೇ ಪೌಲನಿಗೆ ಸರ್ವಸ್ವವಾಯಿತು. ಈ ಜ್ಞಾನದ ಬಗ್ಗೆ ಯೇಸು ಪ್ರಾರ್ಥನೆಯಲ್ಲಿ ಅಂದದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾ. 17:⁠3) ನಿತ್ಯಜೀವ ಗಳಿಸಲು ಪೌಲನಿಗಿದ್ದ ಕಡುಬಯಕೆ, ಫಿಲಿಪ್ಪಿ 3:14ರಲ್ಲಿ (NW) ದಾಖಲಾಗಿರುವ ಅವನ ಈ ಮಾತುಗಳಲ್ಲಿ ವ್ಯಕ್ತವಾಗುತ್ತದೆ: “ಕ್ರಿಸ್ತ ಯೇಸುವಿನ ಮೂಲಕ ದೇವರು ಕೊಡುವ ಮೇಲಣ ಕರೆಯ ಬಹುಮಾನದ ಗುರಿಯ ಕಡೆಗೆ ಓಡುತ್ತಾ ಇದ್ದೇನೆ.” ಹೌದು, ದೇವರ ರಾಜ್ಯ ಸರಕಾರದ ಭಾಗವಾಗಿ ಪರಲೋಕದಲ್ಲಿ ನಿತ್ಯಜೀವ ಪಡೆಯುವ ಬಹುಮಾನದ ಮೇಲೆ ಅವನ ದೃಷ್ಟಿ ನೆಟ್ಟಿತ್ತು.

ಭೂಮಿಯ ಮೇಲೆ ಸದಾಕಾಲದ ಜೀವನ

4 ದೇವರ ಚಿತ್ತವನ್ನು ಮಾಡುವ ಅಧಿಕಾಂಶ ಮಂದಿಯಾದರೋ, ಆತನು ತರುವ ಹೊಸ ಲೋಕದಲ್ಲಿ ನಿತ್ಯಜೀವವೆಂಬ ಬಹುಮಾನಕ್ಕಾಗಿ ಶ್ರಮಪಡಬೇಕು. (ಕೀರ್ತ. 37:​11, 29) ಇದೊಂದು ನಿಶ್ಚಿತ ನಿರೀಕ್ಷೆಯೆಂದು ಯೇಸು ದೃಢೀಕರಿಸಿದನು. ಅವನಂದದ್ದು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾ. 5:⁠5) ಕೀರ್ತನೆ 2:8 ಸೂಚಿಸುವಂತೆ ಸ್ವತಃ ಯೇಸುವೇ ಭೂಮಿಯ ಪ್ರಧಾನ ಬಾಧ್ಯಸ್ಥನು ಮತ್ತು ಆತನಿಗೆ ಸ್ವರ್ಗದಲ್ಲಿ 1,44,000 ಮಂದಿ ಜೊತೆ ಅರಸರಿರುವರು. (ದಾನಿ. 7:​13, 14, 22, 27) ಭೂಮಿಯ ಮೇಲೆ ಜೀವಿಸಲಿರುವ ಕುರಿಸದೃಶ ಜನರು, ‘ಲೋಕಾದಿಯಿಂದ ಅವರಿಗೋಸ್ಕರ ಸಿದ್ಧ ಮಾಡಿದ ರಾಜ್ಯದ’ ಭೂಕ್ಷೇತ್ರಕ್ಕೆ “ಬಾಧ್ಯರಾಗುವರು.” (ಮತ್ತಾ. 25:​34, 46) ಈ ಎಲ್ಲ ವಿಷಯಗಳು ನೆರವೇರುವವೆಂಬ ಖಾತ್ರಿ ನಮಗಿದೆ ಏಕೆಂದರೆ ಇವುಗಳ ಬಗ್ಗೆ ಮಾತುಕೊಟ್ಟಿರುವವನು “ಸುಳ್ಳಾಡದ” ದೇವರಾಗಿದ್ದಾನೆ. (ತೀತ 1:⁠2) ಯೆಹೋಶುವನು ಇಸ್ರಾಯೇಲ್ಯರಿಗಂದದ್ದು: ‘ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವು.’ ದೇವರ ವಾಗ್ದಾನಗಳು ನೆರವೇರುತ್ತವೆ ಎಂಬ ದೃಢಭರವಸೆ ಯೆಹೋಶುವನಿಗಿದ್ದಂತೆಯೇ ನಮಗೂ ಇರಬಲ್ಲದು.​—⁠ಯೆಹೋ. 23:⁠14.

5 ದೇವರ ಹೊಸ ಲೋಕದಲ್ಲಿನ ಜೀವನ ಇಂದಿನಂತೆ ನಿರಾಶಾಜನಕವಾಗಿರುವುದಿಲ್ಲ. ಎಲ್ಲವೂ ಭಿನ್ನವಾಗಿರುವುದು: ಯುದ್ಧ, ಅಪರಾಧ, ಬಡತನ, ಅನ್ಯಾಯ, ಕಾಯಿಲೆ ಮತ್ತು ಮರಣ ಅಲ್ಲಿರದು. ಆಗ ಜನರಿಗೆ ಪರಿಪೂರ್ಣ ಆರೋಗ್ಯವಿರುವುದು ಮತ್ತು ಅವರು ಪರದೈಸಾಗಿ ಮಾರ್ಪಟ್ಟಿರುವ ಭೂಮಿಯ ಮೇಲೆ ಜೀವಿಸುವರು. ಆ ಜೀವನವು, ನಾವು ಕಂಡ ಎಲ್ಲ ಸವಿಗನಸುಗಳನ್ನು ಮೀರುವುದು. ಹೌದು, ಒಂದೊಂದು ದಿನವೂ ಅತ್ಯಂತ ಹರ್ಷೋಲ್ಲಾಸದ ದಿನವಾಗಿರುವುದು. ಇದೆಷ್ಟು ಅದ್ಭುತಕರ ಬಹುಮಾನ!

6 ನೂತನ ಲೋಕದಲ್ಲಿ ಭೂವ್ಯಾಪಕವಾಗಿ ನಡೆಯಲಿರುವ ಅತ್ಯದ್ಭುತ ಸಂಗತಿಗಳನ್ನು, ಯೇಸು ಭೂಮಿಯಲ್ಲಿದ್ದಾಗಲೇ ಪವಿತ್ರಾತ್ಮದ ಶಕ್ತಿಯಿಂದ ಮಾಡಿತೋರಿಸಿದನು. ಉದಾಹರಣೆಗೆ, 38 ವರ್ಷಗಳಿಂದ ಲಕ್ವಹೊಡೆದಿದ್ದ ಒಬ್ಬ ಮನುಷ್ಯನಿಗೆ ಯೇಸು ನಡೆಯುವಂತೆ ಹೇಳಿದಾಗ ಅವನು ನಡೆದನೆಂದು ಬೈಬಲ್‌ ವರದಿಸುತ್ತದೆ. (ಯೋಹಾನ 5:​5-9 ಓದಿ.) ಇನ್ನೊಂದು ಸಂದರ್ಭದಲ್ಲಿ, “ಹುಟ್ಟುಕುರುಡ”ನಾಗಿದ್ದ ವ್ಯಕ್ತಿಯನ್ನು ಯೇಸು ವಾಸಿಮಾಡಿದನು. ಅನಂತರ, ಈ ವ್ಯಕ್ತಿಗೆ ಅವನನ್ನು ವಾಸಿಮಾಡಿದವನ ಬಗ್ಗೆ ಕೆಲವರು ಕೇಳಿದಾಗ ಅವನುತ್ತರಿಸಿದ್ದು: “ಹುಟ್ಟುಕುರುಡನಿಗೆ ಯಾರಾದರೂ ಕಣ್ಣು ಕೊಟ್ಟ ಸಂಗತಿಯನ್ನು ಲೋಕಾದಿಯಿಂದ ಒಬ್ಬರೂ ಕೇಳಿದ್ದಿಲ್ಲ; ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು.” (ಯೋಹಾ. 9:​1, 6, 7, 32, 33) ಯೇಸು ಇದೆಲ್ಲವನ್ನು ಮಾಡಿದ್ದು ದೇವರ ಶಕ್ತಿಯಿಂದಲೇ. ಅವನು ಹೋದಲ್ಲೆಲ್ಲ “ಕ್ಷೇಮ ಬೇಕಾದವರಿಗೆ ವಾಸಿಮಾಡಿದನು.”​—⁠ಲೂಕ 9:⁠11.

7 ಯೇಸು ಅಸ್ವಸ್ಥರನ್ನು ಮತ್ತು ಅಂಗವಿಕಲರನ್ನು ಗುಣಪಡಿಸಿದ್ದು ಮಾತ್ರವಲ್ಲ, ಮೃತರನ್ನೂ ಜೀವಕ್ಕೆ ತರಶಕ್ತನಾಗಿದ್ದನು. ಉದಾಹರಣೆಗೆ, 12 ವರ್ಷ ಪ್ರಾಯದ ಹುಡುಗಿಯೊಬ್ಬಳು ಸತ್ತಾಗ ಆಕೆಯ ಹೆತ್ತವರಿಗಾದ ದುಃಖ ಹೇಳತೀರದು. ಆದರೆ ಯೇಸು ಆ ಹುಡುಗಿಯ ಕಡೆಗೆ ನೋಡಿ ಹೇಳಿದ್ದು: “ಅಮ್ಮಣ್ಣೀ, ಏಳನ್ನುತ್ತೇನೆ.” ಅವಳು ಎದ್ದಳು! ಅಲ್ಲೇ ಇದ್ದ ಅವಳ ಹೆತ್ತವರ ಹಾಗೂ ಇತರರ ಪ್ರತಿಕ್ರಿಯೆಯನ್ನು ಊಹಿಸಿಕೊಳ್ಳಬಲ್ಲಿರೋ? (ಮಾರ್ಕ 5:​38-43 ಓದಿ.) ದೇವರ ಹೊಸ ಲೋಕದಲ್ಲಿ ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.’ ಹೀಗೆ ಕೋಟಿಗಟ್ಟಲೆ ಜನರ ಪುನರುತ್ಥಾನವಾಗುವಾಗ, ಎಲ್ಲರೂ ‘ಆಶ್ಚರ್ಯದಿಂದ ಬೆರಗಾಗುವರು.’ (ಅ. ಕೃ. 24:15; ಯೋಹಾ. 5:​28, 29) ಪುನರುತ್ಥಾನವಾಗುವವರು ಹೊಸದಾಗಿ ಜೀವಿಸಲು ಆರಂಭಿಸುವರು ಮಾತ್ರವಲ್ಲದೆ ಅವರಿಗೆ ಸದಾಕಾಲ ಜೀವಿಸುವ ಪ್ರತೀಕ್ಷೆಯೂ ಇರುವುದು.

8 ಪುನರುತ್ಥಿತ ಜನರಿಗೆ ನಿತ್ಯಜೀವ ಗಳಿಸುವ ಒಂದು ಅವಕಾಶವಿದೆ. ಅವರು ಸಾಯುವ ಮುಂಚೆ ಮಾಡಿದ ಪಾಪಗಳಿಗಾಗಿ ಅವರನ್ನು ದಂಡಿಸಲಾಗದು. (ರೋಮಾ. 6:⁠7) ಕ್ರಿಸ್ತನ ಸಹಸ್ರಮಾನದ ಆಳ್ವಿಕೆಯಲ್ಲಿ ವಿಮೋಚನಾ ಮೌಲ್ಯದ ಯಜ್ಞದ ಪ್ರಯೋಜನಗಳನ್ನು ಅನ್ವಯಿಸಲಾಗುವುದರಿಂದ ರಾಜ್ಯದ ವಿಧೇಯ ಪ್ರಜೆಗಳು ಪರಿಪೂರ್ಣತೆಗೇರಿ, ಕಟ್ಟಕಡೆಗೆ ಆದಾಮನ ಪಾಪದ ಪರಿಣಾಮಗಳಿಂದ ಪೂರ್ಣವಾಗಿ ಮುಕ್ತರಾಗುವರು. (ರೋಮಾ. 8:21) ಯೆಹೋವನು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” (ಯೆಶಾ. 25:⁠8) ಆಗ ‘ಪುಸ್ತಕಗಳು ತೆರೆಯಲ್ಪಡುವವು’ ಎಂದೂ ದೇವರ ವಾಕ್ಯ ಹೇಳುತ್ತದೆ. ಇದು, ಆ ಕಾಲದಲ್ಲಿ ಜೀವಿಸುವವರಿಗೆ ಹೊಸ ಮಾಹಿತಿಯನ್ನು ಕೊಡಲಾಗುವುದೆಂಬುದನ್ನು ಸೂಚಿಸುತ್ತದೆ. (ಪ್ರಕ. 20:12) ಭೂಮಿಯು ಒಂದು ಪರದೈಸಾಗಿ ಮಾರ್ಪಡುವಾಗ, ‘ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುವರು.’​—⁠ಯೆಶಾ. 26:​9, NIBV.

9 ಪುನರುತ್ಥಾನವಾದವರಿಗೆ, ಅವರು ಆದಾಮನಿಂದ ಬಾಧ್ಯತೆಯಾಗಿ ಪಡೆದಿರುವ ಪಾಪದ ಆಧಾರದ ಮೇಲಲ್ಲ ಬದಲಾಗಿ, ಸ್ವತಃ ಅವರೇನು ಮಾಡುತ್ತಾರೋ ಅದರ ಆಧಾರದ ಮೇಲೆ ತೀರ್ಪಾಗುವುದು. ಪ್ರಕಟನೆ 20:12 ಹೇಳುವುದು: “ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ಸತ್ತವರಿಗೆ ನ್ಯಾಯತೀರ್ಪಾಯಿತು.” ಇಲ್ಲಿ ತಿಳಿಸಲಾಗಿರುವ ಕೃತ್ಯಗಳು ಅವರು ಪುನರುತ್ಥಾನದ ಬಳಿಕ ನಡೆಸುವಂಥವುಗಳಾಗಿವೆ. ಯೆಹೋವನ ನ್ಯಾಯ, ಕರುಣೆ ಹಾಗೂ ಪ್ರೀತಿಯ ಎಂಥ ಅದ್ಭುತ ಉದಾಹರಣೆ! ಅಷ್ಟುಮಾತ್ರವಲ್ಲದೆ, ಅವರು ಈ ಹಿಂದೆ ಜೀವಿಸಿದ್ದಾಗ ಹಳೇ ಲೋಕದಲ್ಲಿ ಅನುಭವಿಸಿದ ನೋವಿನ ಸಂಗತಿಗಳನ್ನು “ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾ. 65:17) ಭಕ್ತಿವರ್ಧಕ ಹೊಸ ಮಾಹಿತಿ ಲಭ್ಯವಿರುವುದರಿಂದ ಹಾಗೂ ಜೀವನದಲ್ಲಿ ಒಳ್ಳೊಳ್ಳೇ ಸಂಗತಿಗಳೇ ತುಂಬಿರುವುದರಿಂದ, ಗತಕಾಲದ ಕೆಟ್ಟ ವಿಷಯಗಳು ಅವರನ್ನು ಕಾಡದಿರುವವು. ಆ ಕೆಟ್ಟ ಅನುಭವಗಳು ಮನಃಪಟಲದಿಂದ ಅಳಿದುಹೋಗುವವು. (ಪ್ರಕ. 21:⁠4) ಈ ಮಾತು, ಅರ್ಮಗೆದ್ದೋನ್‌ನಿಂದ ಪಾರಾಗುವ “ಮಹಾ ಸಮೂಹ”ದವರ ಕುರಿತೂ ಸತ್ಯವಾಗಿರುವುದು.​—⁠ಪ್ರಕ. 7:​9, 10, 14.

10 ದೇವರ ಹೊಸ ಲೋಕದಲ್ಲಿ ಜನರು ಅಸ್ವಸ್ಥರಾಗುವುದಿಲ್ಲ ಇಲ್ಲವೇ ಸಾಯುವುದಿಲ್ಲ. “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾ. 33:24) ಕಟ್ಟಕಡೆಗೆ ನೂತನ ಭೂಮಂಡಲದ ನಿವಾಸಿಗಳಿಗೆ ಪ್ರತಿದಿನವೂ ಪರಿಪೂರ್ಣ ಆರೋಗ್ಯವಿರುವುದು. ಅವರು ದಿನಾಲೂ ಬೆಳಗ್ಗೆ ಏಳುವಾಗ ತಮ್ಮ ಮುಂದಿರುವ ಅದ್ಭುತ ದಿನವನ್ನು ಉಲ್ಲಾಸದಿಂದ ಎದುರುನೋಡುವರು. ಅವರು ತೃಪ್ತಿದಾಯಕ ಕೆಲಸವನ್ನೂ, ತಮ್ಮ ಒಳಿತನ್ನೇ ಬಯಸುವವರೊಂದಿಗಿನ ಸಹವಾಸವನ್ನೂ ಮುನ್ನೋಡುವರು. ಇಂಥ ಜೀವನವು ಅತ್ಯದ್ಭುತಕರ ಬಹುಮಾನವೇ ಸರಿ! ನಿಮಗೊಂದು ಚಿಕ್ಕ ಸಲಹೆ: ನಿಮ್ಮ ಬೈಬಲಿನಲ್ಲಿ ಯೆಶಾಯ 33:24 ಮತ್ತು 35:​5-7ರಲ್ಲಿರುವ ಪ್ರವಾದನೆಗಳನ್ನು ತೆರೆದು ಓದಿ. ನಿಮ್ಮನ್ನು ಆ ದೃಶ್ಯದಲ್ಲಿರಿಸಲು ಪ್ರಯತ್ನಿಸಿ. ಇದು ಬಹುಮಾನದ ಮೇಲೆ ನಿಮ್ಮ ದೃಷ್ಟಿಯನ್ನಿಡಲು ಸಹಾಯ ಮಾಡುವುದು.

ಬಹುಮಾನದ ಮೇಲೆ ದೃಷ್ಟಿ ನೆಡಲು ತಪ್ಪಿಹೋದವರು

11 ಬಹುಮಾನದ ಕುರಿತು ಕಲಿತ ಬಳಿಕ ಅದರ ಮೇಲೇ ನಮ್ಮ ದೃಷ್ಟಿಯನ್ನು ನೆಡಲು ಪ್ರಯಾಸಪಡಬೇಕು. ಇಲ್ಲದಿದ್ದಲ್ಲಿ, ಬಹುಮಾನದ ಮೇಲಿದ್ದ ನಮ್ಮ ದೃಷ್ಟಿ ಬೇರೆಡೆಗೆ ಸರಿಯುವ ಸಾಧ್ಯತೆಯಿದೆ. ಸೊಲೊಮೋನನ ಉದಾಹರಣೆ ತೆಗೆದುಕೊಳ್ಳೋಣ. ಅವನು ಪ್ರಾಚೀನ ಇಸ್ರಾಯೇಲಿನ ರಾಜನಾದಾಗ, ತನ್ನ ಪ್ರಜೆಗಳನ್ನು ಸರಿಯಾದ ರೀತಿಯಲ್ಲಿ ಆಳಲು ತಿಳುವಳಿಕೆ ಹಾಗೂ ವಿವೇಚನಾಶಕ್ತಿಯನ್ನು ಕೊಡುವಂತೆ ನಮ್ರತೆಯಿಂದ ದೇವರಿಗೆ ಪ್ರಾರ್ಥಿಸಿದನು. (1 ಅರಸುಗಳು 3:​6-12 ಓದಿ.) ಆಗ, ‘ದೇವರು ಸೊಲೊಮೋನನಿಗೆ ಅಪರಿಮಿತವಾದ ಜ್ಞಾನವಿವೇಕಗಳನ್ನು ಅನುಗ್ರಹಿಸಿದನು’ ಎಂದು ಬೈಬಲ್‌ ತಿಳಿಸುತ್ತದೆ. ಹೌದು, ಸೊಲೊಮೋನನ “ಜ್ಞಾನವು ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ ಐಗುಪ್ತ್ಯರ ಜ್ಞಾನಕ್ಕಿಂತಲೂ ಮಿಗಿಲಾದದ್ದು” ಆಗಿತ್ತು.​—⁠1 ಅರ. 4:​29-32.

12 ಆದರೆ ಇಸ್ರಾಯೇಲಿನ ಅರಸನಾಗುವವನು, “ತನಗಾಗಿ ಕುದುರೆಗಳನ್ನು ಹೆಚ್ಚಿಸಿಕೊಳ್ಳಬಾರದು” ಮತ್ತು “ಅವನು ದಾರಿತಪ್ಪಿ ಹೋಗದಂತೆ ತನಗೆ ಹೆಚ್ಚು ಜನ ಹೆಂಡತಿಯರನ್ನು ಹೊಂದಬಾರದು” ಎಂದು ಯೆಹೋವನು ಹಿಂದೆಯೇ ಎಚ್ಚರಿಸಿದ್ದನು. (ಧರ್ಮೋ. 17:​14-17, NIBV) ರಾಜನು ಕುದುರೆಗಳನ್ನು ಹೆಚ್ಚಿಸಿಕೊಳ್ಳುವುದು, ಅವನು ತನ್ನ ಜನಾಂಗದ ಸಂರಕ್ಷಣೆಗಾಗಿ ರಕ್ಷಕನಾದ ಯೆಹೋವನ ಮೇಲೆ ಅವಲಂಬಿಸುವ ಬದಲು ಮಿಲಿಟರಿ ಶಕ್ತಿಯ ಮೇಲೆ ಅವಲಂಬಿಸಿದ್ದಾನೆ ಎಂಬದನ್ನು ತೋರಿಸಿಕೊಡುವುದು. ಹೆಚ್ಚು ಹೆಂಡತಿಯರನ್ನು ಹೊಂದುವುದೂ ಅಪಾಯಕಾರಿ ಆಗಿತ್ತು. ಏಕೆಂದರೆ ಅವರಲ್ಲಿ ಕೆಲವರು ಸುತ್ತಲ ವಿಧರ್ಮಿ ಜನಾಂಗದವರಾಗಿರುವ ಸಾಧ್ಯತೆಯಿತ್ತು ಮತ್ತು ಅವರು ಸುಳ್ಳಾರಾಧಕರು ಆಗಿರುವುದರಿಂದ ರಾಜನು ಯೆಹೋವನ ಆರಾಧನೆಯನ್ನು ತೊರೆಯುವಂತೆ ಮಾಡಸಾಧ್ಯವಿತ್ತು.

13 ಸೊಲೊಮೋನನು ಆ ಎಚ್ಚರಿಕೆಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಬದಲಿಗೆ ಅರಸರು ಏನನ್ನು ಮಾಡಬಾರದೆಂದು ಯೆಹೋವನು ಹೇಳಿದ್ದನೋ ಅದನ್ನೇ ಮಾಡಿದನು. ಅವನು ಸಾವಿರಾರು ಕುದುರೆಗಳನ್ನೂ ರಾಹುತರನ್ನೂ ಕೂಡಿಸಿಕೊಂಡನು. (1 ಅರ. 4:26) ಅವನಿಗೆ 700 ಮಂದಿ ಪತ್ನಿಯರೂ 300 ಮಂದಿ ಉಪಪತ್ನಿಯರೂ ಇದ್ದರು. ಇವರಲ್ಲಿ ಅನೇಕರು ಹತ್ತಿರದ ವಿಧರ್ಮಿ ಜನಾಂಗಗಳವರಾಗಿದ್ದರು. “ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಯಥಾರ್ಥಭಕ್ತಿಯನ್ನು ಕಳೆದುಕೊಂಡನು.” ತನ್ನ ವಿಧರ್ಮಿ ಪತ್ನಿಯರು ಮಾಡುತ್ತಿದ್ದ ಅಸಹ್ಯಕರ ಸುಳ್ಳಾರಾಧನೆಯನ್ನು ಸೊಲೊಮೋನನೂ ಮಾಡತೊಡಗಿದನು. ಆದುದರಿಂದ ಯೆಹೋವನು ಸೊಲೊಮೋನನಿಗಂದದ್ದು: ‘ನಿನ್ನ ರಾಜ್ಯವನ್ನು ನಿನ್ನಿಂದ ಕಿತ್ತುಕೊಳ್ಳುವೆನು.’​—⁠1 ಅರ. 11:​1-6, 11.

14 ಸತ್ಯ ದೇವರನ್ನು ಪ್ರತಿನಿಧಿಸುವ ಅಮೂಲ್ಯ ಸುಯೋಗ ತನಗಿದೆಯೆಂಬುದನ್ನು ಸೊಲೊಮೋನನು ಮರೆತುಬಿಟ್ಟು, ಸುಳ್ಳಾರಾಧನೆಯಲ್ಲಿ ಪೂರ್ತಿ ಮುಳುಗಿಹೋದನು. ಕಾಲಾನಂತರ ಇಡೀ ಜನಾಂಗವು ಧರ್ಮಭ್ರಷ್ಟವಾಯಿತು, ಮತ್ತು ಕೊನೆಗೆ ಸಾ.ಶ.ಪೂ. 607ರಲ್ಲಿ ನಾಶವಾಯಿತು. ಕಟ್ಟಕಡೆಗೆ ಯೆಹೂದ್ಯರು ಸತ್ಯಾರಾಧನೆಯನ್ನು ಪುನಃಸ್ಥಾಪಿಸಿದರು. ಆದರೆ ಇದಾಗಿ ಕೆಲವು ಶತಮಾನಗಳು ಕಳೆದ ಬಳಿಕ ಯೇಸು ಹೀಗೆ ಘೋಷಿಸಿದನು: “ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು.” ಹಾಗೆಯೇ ಆಯಿತು. ಯೇಸು ಘೋಷಿಸಿದ್ದು: “ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.” (ಮತ್ತಾ. 21:43; 23:​37, 38) ಆ ಜನಾಂಗದ ಅಪನಂಬಿಗಸ್ತಿಕೆಯಿಂದಾಗಿ, ಅದು ಸತ್ಯ ದೇವರನ್ನು ಪ್ರತಿನಿಧಿಸುವ ಮಹಾ ಸುಯೋಗವನ್ನು ಕಳೆದುಕೊಂಡಿತು. ಸಾ.ಶ. 70ರಲ್ಲಿ ರೋಮನ್‌ ಸೈನಿಕರು ಬಂದು ಯೆರೂಸಲೇಮ್‌ ಹಾಗೂ ಅದರ ಆಲಯವನ್ನು ನೆಲಸಮಗೊಳಿಸಿ, ಬದುಕಿ ಉಳಿದ ಯೆಹೂದ್ಯರಲ್ಲಿ ಅನೇಕರನ್ನು ದಾಸರನ್ನಾಗಿ ಕೊಂಡೊಯ್ದರು.

15 ಇಸ್ಕರಿಯೋತ ಯೂದನು, ಯೇಸುವಿನ 12 ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿದ್ದನು. ಅವನು ಯೇಸುವಿನ ಅದ್ಭುತ ಬೋಧನೆಗಳನ್ನು ಕೇಳಿಸಿಕೊಂಡಿದ್ದನು. ಯೇಸು ಪವಿತ್ರಾತ್ಮದ ಶಕ್ತಿಯಿಂದ ನಡೆಸಿದ್ದ ಅದ್ಭುತಗಳನ್ನೂ ನೋಡಿದ್ದನು. ಹೀಗಿದ್ದರೂ ಯೂದನು ತನ್ನ ಹೃದಯವನ್ನು ಕಾಪಾಡಿಕೊಳ್ಳಲಿಲ್ಲ. ಯೇಸು ಹಾಗೂ 12 ಮಂದಿ ಅಪೊಸ್ತಲರ ಹಣವಿದ್ದ ಚೀಲವನ್ನು ನೋಡಿಕೊಳ್ಳಲು ಅವನಿಗೆ ಕೊಡಲಾಗಿತ್ತು. ಆದರೆ ‘ಅವನು ಕಳ್ಳನಾಗಿದ್ದು ತನ್ನ ವಶದಲ್ಲಿದ್ದ ಅವರ ಹಣದ ಚೀಲದಲ್ಲಿ ಹಾಕಿದ್ದನ್ನು ತಕ್ಕೊಳ್ಳುತ್ತಿದ್ದನು.’ (ಯೋಹಾ. 12:⁠6) ಅವನಲ್ಲಿ ಎಷ್ಟು ದುರಾಸೆಯಿತ್ತೆಂದರೆ, 30 ಬೆಳ್ಳಿ ನಾಣ್ಯಗಳಿಗಾಗಿ ಅವನು ಕಪಟಿ ಯಾಜಕರೊಂದಿಗೆ ಸೇರಿಕೊಂಡು ಯೇಸುವಿಗೇ ದ್ರೋಹವೆಸಗುವ ಒಳಸಂಚು ಮಾಡಿದನು. (ಮತ್ತಾ. 26:​14-16) ಮಹತ್ತ್ವದ ಸಂಗತಿಗಳ ಮೇಲೆ ದೃಷ್ಟಿ ನೆಡಲು ತಪ್ಪಿಹೋದ ಇನ್ನೊಬ್ಬ ವ್ಯಕ್ತಿ ದೇಮನಾಗಿದ್ದಾನೆ. ಈತನು ಅಪೊಸ್ತಲ ಪೌಲನ ಸಂಗಡಿಗನಾಗಿದ್ದರೂ, ತನ್ನ ಹೃದಯವನ್ನು ಕಾಪಾಡಿಕೊಳ್ಳಲು ತಪ್ಪಿದನು. ಪೌಲನು ಹೇಳಿದ್ದು: ‘ದೇಮನು ಇಹಲೋಕವನ್ನು ಪ್ರೀತಿಸಿ ನನ್ನನ್ನು ಬಿಟ್ಟು ಹೋದನು.’​—⁠2 ತಿಮೊ. 4:10; ಜ್ಞಾನೋಕ್ತಿ 4:23 ಓದಿ.

ಪ್ರತಿಯೊಬ್ಬರಿಗೂ ಪಾಠ

16 ದೇವರ ಸೇವಕರೆಲ್ಲರೂ ಬೈಬಲಿನಲ್ಲಿರುವ ಮಾದರಿಗಳ ಕುರಿತು ಗಂಭೀರವಾಗಿ ಯೋಚಿಸಬೇಕು, ಏಕೆಂದರೆ ನಮಗೆ ಹೀಗನ್ನಲಾಗಿದೆ: “ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ.” (1 ಕೊರಿಂ. 10:11) ಇಲ್ಲಿ ತಿಳಿಸಲಾಗಿರುವ ಯುಗಾಂತ್ಯ ಇಲ್ಲವೇ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲೇ ನಾವಿಂದು ಜೀವಿಸುತ್ತಿದ್ದೇವೆ.​—⁠2 ತಿಮೊ. 3:​1, 13.

17 ‘ಈ ಪ್ರಪಂಚದ ದೇವರಾಗಿರುವ’ ಪಿಶಾಚನಾದ ಸೈತಾನನಿಗೆ, ತನಗೆ ಉಳಿದಿರುವ ‘ಕಾಲವು ಸ್ವಲ್ಪವೆಂದು ತಿಳಿದಿದೆ.’ (2 ಕೊರಿಂ. 4:4; ಪ್ರಕ. 12:12) ಆದುದರಿಂದ ಅವನು, ಯೆಹೋವನ ಸೇವಕರು ಕ್ರೈಸ್ತ ಮೂಲತತ್ತ್ವಗಳಿಗೆ ವಿರುದ್ಧವಾಗಿ ವರ್ತಿಸುತ್ತಾ ಸಮಗ್ರತೆ ಕಳೆದುಕೊಳ್ಳುವಂತೆ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತಾನೆ. ಸೈತಾನನು ಈ ಲೋಕವನ್ನು ನಿಯಂತ್ರಿಸುತ್ತಾನೆ. ಇದರಲ್ಲಿ ಈ ಲೋಕದ ಪ್ರಸಾರ ಮಾಧ್ಯಮಗಳೂ ಸೇರಿವೆ. ಆದರೆ ಯೆಹೋವನ ಜನರಿಗೆ “ಅತ್ಯಧಿಕ ಬಲ” ಇದೆ. (2 ಕೊರಿಂ. 4:​7, NIBV) ದೇವರ ಈ ಶಕ್ತಿಯ ಮೇಲೆ ಅವಲಂಬಿಸಿದರೆ, ಸೈತಾನನು ನಮ್ಮ ಮೇಲೆ ಏನೇ ತರಲಿ ಅದನ್ನು ಎದುರಿಸಿನಿಲ್ಲಲು ಶಕ್ತರಾಗಿರುವೆವು. ಆದುದರಿಂದಲೇ, ಯೆಹೋವನು “ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡು”ವನು ಎಂಬ ದೃಢಭರವಸೆಯಿಂದ ಸತತವಾಗಿ ಪ್ರಾರ್ಥಿಸುವಂತೆ ನಮ್ಮನ್ನು ಉತ್ತೇಜಿಸಲಾಗಿದೆ.​—⁠ಲೂಕ 11:⁠13.

18 ಸೈತಾನ ಇಡೀ ವ್ಯವಸ್ಥೆಯೂ ಬೇಗನೆ ನಾಶವಾಗಲಿದೆಯಾದರೂ ನಿಜ ಕ್ರೈಸ್ತರು ಪಾರಾಗುವರು ಎಂಬ ತಿಳುವಳಿಕೆ ಸಹ ನಮಗೆ ಬಲಕೊಡುತ್ತದೆ. “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾ. 2:17) ಆದುದರಿಂದ ಯೆಹೋವನ ಸೇವಕನೊಬ್ಬನು, ದೇವರೊಂದಿಗಿನ ತನ್ನ ಸಂಬಂಧಕ್ಕಿಂತ ಹೆಚ್ಚು ಬಾಳುವ ಸಂಗತಿಯು ಸದ್ಯದ ಈ ವ್ಯವಸ್ಥೆಯಲ್ಲಿದೆಯೆಂದು ನೆನಸುವುದು ಎಂಥ ಮೂರ್ಖತನ! ಸೈತಾನನ ಮುಷ್ಟಿಯಲ್ಲಿರುವ ಈ ಲೋಕವು ಮುಳುಗುತ್ತಿರುವ ಹಡಗಿನಂತಿದೆ. ಯೆಹೋವನು ತನ್ನ ನಂಬಿಗಸ್ತ ಸೇವಕರಿಗಾಗಿ ಕ್ರೈಸ್ತ ಸಭೆಯನ್ನು ಒಂದು ‘ರಕ್ಷಾನೌಕೆ’ ಆಗಿ ಕೊಟ್ಟಿದ್ದಾನೆ. ಅವರು ಹೊಸ ಲೋಕದತ್ತ ಸಾಗುತ್ತಿರುವಾಗ ಈ ವಾಗ್ದಾನದಲ್ಲಿ ದೃಢಭರವಸೆಯಿಡಬಲ್ಲರು: “ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.” (ಕೀರ್ತ. 37:⁠9) ಹೀಗಿರುವುದರಿಂದ ನಿಮ್ಮ ದೃಷ್ಟಿಯನ್ನು ಸದಾ ಬಹುಮಾನದ ಮೇಲಿಡಿ!

[ಅಧ್ಯಯನ ಪ್ರಶ್ನೆಗಳು]

1. ಅಪೊಸ್ತಲ ಪೌಲನ ಮುಂದೆ ಯಾವ ಬಹುಮಾನವಿತ್ತು?

2, 3. ಪೌಲನಿಗೆ ಸ್ವರ್ಗೀಯ ಜೀವವೆಂಬ ಬಹುಮಾನ ಎಷ್ಟು ಅತ್ಯಮೂಲ್ಯವಾಗಿತ್ತು?

4, 5. ಇಂದು ದೇವರ ಚಿತ್ತವನ್ನು ಮಾಡುತ್ತಿರುವ ಲಕ್ಷಾಂತರ ಮಂದಿಗೆ ಯಾವ ಬಹುಮಾನ ಕಾದಿದೆ?

6, 7. (ಎ) ದೇವರ ನೂತನ ಲೋಕದಲ್ಲಿ ನಾವು ನಿರೀಕ್ಷಿಸಬಹುದಾದ ಸಂಗತಿಗಳನ್ನು ಯೇಸು ಹೇಗೆ ತೋರಿಸಿಕೊಟ್ಟನು? (ಬಿ) ಮೃತರಿಗೂ ಹೇಗೆ ಹೊಸ ಆರಂಭವನ್ನು ಕೊಡಲಾಗುವುದು?

8, 9. (ಎ) ಆದಾಮನಿಂದ ಬಾಧ್ಯತೆಯಾಗಿ ಬಂದಿರುವ ಪಾಪಕ್ಕೆ ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ ಏನಾಗುವುದು? (ಬಿ) ಮೃತರಿಗೆ ಯಾವ ಆಧಾರದ ಮೇಲೆ ತೀರ್ಪಾಗುವುದು?

10. (ಎ) ದೇವರ ಹೊಸ ಲೋಕದಲ್ಲಿ ಜೀವನ ಹೇಗಿರುವುದು? (ಬಿ) ಬಹುಮಾನದ ಮೇಲೆ ನಿಮ್ಮ ದೃಷ್ಟಿಯನ್ನಿಡಲು ಯಾವುದು ಸಹಾಯ ಮಾಡುವುದು?

11. ಸೊಲೊಮೋನನ ಆಳ್ವಿಕೆಯ ಉತ್ತಮ ಆರಂಭವನ್ನು ವರ್ಣಿಸಿರಿ.

12. ಇಸ್ರಾಯೇಲಿನ ಅರಸರಾಗುವವರಿಗೆ ಯೆಹೋವನು ಯಾವ ಎಚ್ಚರಿಕೆ ಕೊಟ್ಟಿದ್ದನು?

13. ಸೊಲೊಮೋನನು ತನಗೇನು ಕೊಡಲಾಗಿತ್ತೋ ಅದರ ಮೇಲೆ ದೃಷ್ಟಿ ನೆಡಲು ಹೇಗೆ ತಪ್ಪಿಹೋದನು?

14. ಸೊಲೊಮೋನನ ಮತ್ತು ಇಸ್ರಾಯೇಲ್‌ ಜನಾಂಗದ ಅವಿಧೇಯತೆಯಿಂದಾಗಿ ಏನು ಫಲಿಸಿತು?

15. ನಿಜಕ್ಕೂ ಮಹತ್ತ್ವದ್ದಾಗಿದ್ದ ಸಂಗತಿಗಳ ಮೇಲೆ ದೃಷ್ಟಿ ನೆಡಲು ತಪ್ಪಿಹೋದ ಕೆಲವರ ಉದಾಹರಣೆ ಕೊಡಿ.

16, 17. (ಎ) ನಮಗೆದುರಾಗುವ ವಿರೋಧ ಎಷ್ಟು ತೀಕ್ಷ್ಣವಾಗಿದೆ? (ಬಿ) ಸೈತಾನನು ನಮ್ಮ ಮೇಲೆ ಏನೇ ತರಲಿ, ಅದನ್ನು ಎದುರಿಸಿನಿಲ್ಲಲು ಯಾವುದು ಸಹಾಯಮಾಡುವುದು?

18. ಈ ಸದ್ಯದ ಲೋಕದೆಡೆಗೆ ನಮ್ಮ ಮನೋಭಾವ ಏನಾಗಿರಬೇಕು?

[ಪುಟ 13ರಲ್ಲಿರುವ ಚಿತ್ರ]

ಬೈಬಲ್‌ ವೃತ್ತಾಂತಗಳನ್ನು ಓದುವಾಗ, ನೀವು ಬಹುಮಾನವನ್ನು ಪಡೆದುಕೊಳ್ಳುತ್ತಿರುವುದನ್ನು ಮನಸ್ಸಲ್ಲೇ ಚಿತ್ರಿಸಿಕೊಳ್ಳುತ್ತೀರೋ?

[ಪುಟ 14ರಲ್ಲಿರುವ ಚಿತ್ರ]

ನಿಮಗೆ ಜ್ಞಾಪಕವಿದೆಯೇ?

• ಪೌಲನಿಗೆ ತನ್ನ ಮುಂದಿದ್ದ ಬಹುಮಾನದ ಬಗ್ಗೆ ಹೇಗನಿಸಿತು?

• ಭೂಮಿಯ ಮೇಲೆ ಸದಾ ಜೀವಿಸಲಿರುವವರಿಗೆ ಯಾವ ಆಧಾರದ ಮೇಲೆ ತೀರ್ಪಾಗುವುದು?

• ನೀವೀಗ ಯಾವ ಕ್ರಮ ಕೈಗೊಳ್ಳುವುದು ವಿವೇಕಯುತ?