ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೌಢತೆಯ ಕಡೆಗೆ ಮುಂದೊತ್ತಿ—‘ಯೆಹೋವನ ಮಹಾದಿನ ಹತ್ತಿರವಿದೆ’

ಪ್ರೌಢತೆಯ ಕಡೆಗೆ ಮುಂದೊತ್ತಿ—‘ಯೆಹೋವನ ಮಹಾದಿನ ಹತ್ತಿರವಿದೆ’

ಪ್ರೌಢತೆಯ ಕಡೆಗೆ ಮುಂದೊತ್ತಿ—‘ಯೆಹೋವನ ಮಹಾದಿನ ಹತ್ತಿರವಿದೆ’

“ಪ್ರೌಢತೆಯ ಕಡೆಗೆ ಮುಂದೊತ್ತೋಣ.”—ಇಬ್ರಿ. 6:1.

1, 2. ಪ್ರಥಮ ಶತಮಾನದಲ್ಲಿ ಯೆರೂಸಲೇಮ್‌ ಮತ್ತು ಯೂದಾಯದಲ್ಲಿದ್ದ ಕ್ರೈಸ್ತರಿಗೆ ‘ಬೆಟ್ಟಗಳಿಗೆ ಓಡಿಹೋಗಲು’ ಯಾವ ಅವಕಾಶವಿತ್ತು?

ಯೇಸು ಭೂಮಿಯಲ್ಲಿದ್ದಾಗ ಶಿಷ್ಯರು ಅವನ ಬಳಿ, “ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?” ಎಂದು ಕೇಳಿದರು. ಈ ಪ್ರಶ್ನೆಗೆ ಯೇಸು ಕೊಟ್ಟ ಉತ್ತರದ ಆರಂಭದ ನೆರವೇರಿಕೆ ಪ್ರಥಮ ಶತಮಾನದಲ್ಲಾಯಿತು. ಆಗ ನಡೆಯಲಿದ್ದ ಒಂದು ಅಸಾಮಾನ್ಯ ಘಟನೆಯ ಬಗ್ಗೆ ಯೇಸು ಹೇಳಿದ್ದನು. ಆ ಘಟನೆಯು ಅಂತ್ಯ ಅತಿ ನಿಕಟವಿದೆ ಎಂಬುದನ್ನು ಸೂಚಿಸಲಿತ್ತು ಮತ್ತು ಅದನ್ನು ನೋಡಿ ‘ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗತೊಡಗಬೇಕಿತ್ತು.’ (ಮತ್ತಾ. 24:1-3, 15-22) ಯೇಸುವಿನ ಶಿಷ್ಯರು ಆ ಸೂಚನೆಯನ್ನು ಗುರುತಿಸಿ ಅವನು ಕೊಟ್ಟ ಸಲಹೆಗಳನ್ನು ಪಾಲಿಸಲಿದ್ದರೋ?

2 ಸುಮಾರು ಮೂರು ದಶಕಗಳ ಬಳಿಕ ಅಂದರೆ ಸಾ.ಶ. 61ರಲ್ಲಿ ಅಪೊಸ್ತಲ ಪೌಲನು, ಯೆರೂಸಲೇಮ್‌ ಮತ್ತು ಸುತ್ತಲ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಇಬ್ರಿಯ ಕ್ರೈಸ್ತರಿಗೆ ದೃಢವಾದ ಮತ್ತು ಗಂಭೀರವಾದ ಸಂದೇಶವನ್ನು ಬರೆದನು. ‘ಮಹಾ ಸಂಕಟದ’ ಆರಂಭದ ಹಂತವನ್ನು ಗುರುತಿಸುವ ಸೂಚನೆ ಕೇವಲ ಐದು ವರ್ಷಗಳಲ್ಲೇ ಕಾಣಿಸಲಿತ್ತು ಎಂಬುದು ಪೌಲನಿಗಾಗಲಿ ಅವನ ಜೊತೆವಿಶ್ವಾಸಿಗಳಿಗಾಗಲಿ ತಿಳಿದಿರಲಿಲ್ಲ. (ಮತ್ತಾ. 24:21) ಸಾ.ಶ. 66ರಲ್ಲಿ ಸೆಸ್ಟಿಯಸ್‌ ಗ್ಯಾಲಸ್‌ನ ನೇತೃತ್ವದಲ್ಲಿ ಬಂದ ರೋಮನ್‌ ಸೈನ್ಯ ಯೆರೂಸಲೇಮಿನ ಮೇಲೆ ಆಕ್ರಮಣ ಮಾಡಿತು. ಆದರೆ ಈ ದಾಳಿ ಇನ್ನೇನು ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ ಎನ್ನುವಾಗ ಅವನು ತಟ್ಟನೇ ಅದನ್ನು ನಿಲ್ಲಿಸಿ ಹಿಂದೆ ಹೋದನು. ಇದು ಅಪಾಯದಲ್ಲಿದ್ದವರಿಗೆ ಅಲ್ಲಿಂದ ಪಲಾಯನಗೈದು ಸುರಕ್ಷಿತರಾಗಿರಲು ಅವಕಾಶ ಕೊಟ್ಟಿತು.

3. ಪೌಲನು ಇಬ್ರಿಯ ಕ್ರೈಸ್ತರಿಗೆ ಯಾವ ಬುದ್ಧಿವಾದ ಕೊಟ್ಟನು, ಮತ್ತು ಏಕೆ?

3 ನಡೆಯುತ್ತಿರುವ ಘಟನೆಗಳು ಯೇಸುವಿನ ಮಾತುಗಳ ನೆರವೇರಿಕೆಯಾಗಿವೆ ಎಂಬುದನ್ನು ಗ್ರಹಿಸಿ, ಅಲ್ಲಿಂದ ಓಡಿಹೋಗಲು ಆ ಕ್ರೈಸ್ತರಿಗೆ ಸೂಕ್ಷ್ಮ ವಿವೇಚನಾಶಕ್ತಿ ಮತ್ತು ಆಧ್ಯಾತ್ಮಿಕ ಗ್ರಹಣಶಕ್ತಿಯ ಅಗತ್ಯವಿತ್ತು. ಆದರೆ ಕೆಲವರ ‘ಕಿವಿಗಳು ಮಂದವಾಗಿದ್ದವು.’ ಅವರು ಆಧ್ಯಾತ್ಮಿಕ ರೀತಿಯಲ್ಲಿ “ಹಾಲಿನ” ಆವಶ್ಯಕತೆಯುಳ್ಳ ಕೂಸುಗಳಂತಿದ್ದರು. (ಇಬ್ರಿಯ 5:11-13 ಓದಿ.) ಹಲವಾರು ದಶಕಗಳಿಂದ ಸತ್ಯದ ಮಾರ್ಗದಲ್ಲಿ ನಡೆದ ಕೆಲವರಲ್ಲೂ “ಜೀವವುಳ್ಳ ದೇವರಿಂದ ದೂರಹೋಗುವ” ಲಕ್ಷಣಗಳು ತೋರಿಬಂದಿದ್ದವು. (ಇಬ್ರಿ. 3:12) ಭಯಂಕರವಾದ “ಆ ದಿನವು ಸಮೀಪಿಸುತ್ತಾ” ಇರುವ ಸಮಯದಲ್ಲೂ ಕೆಲವರು ಕ್ರೈಸ್ತ ಕೂಟಗಳಿಗೆ ಹಾಜರಾಗುವುದನ್ನು “ರೂಢಿಯಾಗಿ” ಬಿಟ್ಟುಬಿಟ್ಟಿದ್ದರು. (ಇಬ್ರಿ. 10:24, 25) ಆದದರಿಂದ ಪೌಲನು ಅವರಿಗೆ ಸಮಯೋಚಿತ ಬುದ್ಧಿವಾದ ಕೊಡುತ್ತಾ, “ನಾವು ಕ್ರಿಸ್ತನ ಕುರಿತಾದ ಪ್ರಾಥಮಿಕ ಸಿದ್ಧಾಂತವನ್ನು ಬಿಟ್ಟುಬಿಟ್ಟಿರುವುದರಿಂದ ಪ್ರೌಢತೆಯ ಕಡೆಗೆ ಮುಂದೊತ್ತೋಣ” ಎಂದು ಹೇಳಿದನು.—ಇಬ್ರಿ. 6:1.

4. ನಾವೇಕೆ ಆಧ್ಯಾತ್ಮಿಕವಾಗಿ ಎಚ್ಚರದಿಂದಿರಬೇಕು, ಮತ್ತು ಅದನ್ನು ಮಾಡಲು ಯಾವುದು ಸಹಾಯ ನೀಡಬಲ್ಲದು?

4 ನಾವಿಂದು ಯೇಸುವಿನ ಪ್ರವಾದನೆಯ ಅಂತಿಮ ನೆರವೇರಿಕೆಯ ದಿನಗಳಲ್ಲಿ ಜೀವಿಸುತ್ತಿದ್ದೇವೆ. “ಯೆಹೋವನ ಮಹಾದಿನ” ಅಂದರೆ ಸೈತಾನನ ಇಡೀ ವ್ಯವಸ್ಥೆಗೆ ಆತನು ಅಂತ್ಯ ತರಲಿರುವ ದಿನ “ಹತ್ತಿರ” ಇದೆ. (ಚೆಫ. 1:14) ಆದ್ದರಿಂದ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನಾವು ಆಧ್ಯಾತ್ಮಿಕವಾಗಿ ಚುರುಕಾಗಿರಬೇಕು ಮತ್ತು ಎಚ್ಚರದಿಂದಿರಬೇಕು. (1 ಪೇತ್ರ 5:8) ನಾವು ನಿಜವಾಗಿಯೂ ಹಾಗೆ ಮಾಡುತ್ತಿದ್ದೇವೋ? ಕಾಲಪ್ರವಾಹದಲ್ಲಿ ಎಲ್ಲಿದ್ದೇವೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸುವಂತೆ ಕ್ರೈಸ್ತ ಪ್ರೌಢತೆ ನಮಗೆ ಸಹಾಯ ನೀಡಬಲ್ಲದು.

ಕ್ರೈಸ್ತ ಪ್ರೌಢತೆ ಎಂದರೇನು?

5, 6. (ಎ) ಕ್ರೈಸ್ತ ಪ್ರೌಢತೆ ಎಂದರೇನು? (ಬಿ) ನಾವು ಪ್ರೌಢತೆಯ ಕಡೆಗೆ ಮುಂದೊತ್ತಬೇಕಾದರೆ ಯಾವ ಎರಡು ಸಂಗತಿಗಳನ್ನು ಮಾಡಬೇಕು?

5 ಪೌಲನು ಪ್ರಥಮ ಶತಮಾನದ ಇಬ್ರಿಯ ಕ್ರೈಸ್ತರಿಗೆ ಪ್ರೌಢತೆಯ ಕಡೆಗೆ ಮುಂದೊತ್ತುವಂತೆ ಹೇಳಿದ್ದು ಮಾತ್ರವಲ್ಲ ಆಧ್ಯಾತ್ಮಿಕ ಪ್ರೌಢತೆ ಎಂದರೇನು ಎಂಬುದನ್ನೂ ತಿಳಿಸಿದನು. (ಇಬ್ರಿಯ 5:14 ಓದಿ.) “ಪ್ರೌಢ” ವ್ಯಕ್ತಿಗಳು ಕೇವಲ ‘ಹಾಲು’ ಕುಡಿದು ತೃಪ್ತರಾಗುವುದಿಲ್ಲ. ಅವರು “ಗಟ್ಟಿಯಾದ ಆಹಾರ”ವನ್ನು ಸೇವಿಸುತ್ತಾರೆ. ಆದ್ದರಿಂದ ಅವರು ಸತ್ಯದ “ಪ್ರಾಥಮಿಕ ವಿಷಯಗಳನ್ನು” ಮಾತ್ರವಲ್ಲ, “ಅಗಾಧವಾದ ವಿಷಯಗಳನ್ನೂ” ತಿಳಿದಿರುತ್ತಾರೆ. (1 ಕೊರಿಂ. 2:10) ಅಷ್ಟುಮಾತ್ರವಲ್ಲದೇ ಅವರ ಗ್ರಹಣ ಶಕ್ತಿಗಳು ಉಪಯೋಗದ ಮೂಲಕ ತರಬೇತುಗೊಂಡಿವೆ, ಅಂದರೆ ಅವರೇನನ್ನು ತಿಳಿದಿದ್ದಾರೋ ಅದನ್ನು ಅವರು ಅನ್ವಯಿಸಿಕೊಳ್ಳುತ್ತಾರೆ. ಇದು ಅವರಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ತಿಳಿಯಲು ಶಕ್ತಗೊಳಿಸುತ್ತದೆ. ಈ ತರಬೇತಿ ಅವರು ನಿರ್ಣಯಗಳನ್ನು ಮಾಡಬೇಕಾಗಿರುವಾಗ, ಒಳಗೂಡಿರುವ ಶಾಸ್ತ್ರಾಧಾರಿತ ಮೂಲತತ್ತ್ವಗಳು ಮತ್ತು ಅವುಗಳ ಅನ್ವಯವನ್ನು ವಿವೇಚಿಸಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

6 ಪೌಲನು ಬರೆದದ್ದು: “ನಾವು ಎಂದಿಗೂ ನಂಬಿಕೆಯಿಂದ ದೂರ ತೇಲಿಹೋಗದಂತೆ ನಾವು ಕೇಳಿಸಿಕೊಂಡ ಸಂಗತಿಗಳಿಗೆ ಸಾಮಾನ್ಯವಾದುದಕ್ಕಿಂತ ಹೆಚ್ಚಿನ ಗಮನವನ್ನು ಕೊಡುವ ಅಗತ್ಯವಿದೆ.” (ಇಬ್ರಿ. 2:1) ನಾವು ನಂಬಿಕೆಯಿಂದ ದೂರ ತೇಲಿಹೋಗುತ್ತಿರುವುದು ನಮ್ಮ ಅರಿವಿಗೇ ಬರಲಿಕ್ಕಿಲ್ಲ. ಹೀಗಾಗದಿರಲು ನಾವು, ಮನೆಯಲ್ಲಾಗಲಿ ಕ್ರೈಸ್ತ ಒಕ್ಕೂಟಗಳಲ್ಲಾಗಲಿ ಬೈಬಲ್‌ ಅಧ್ಯಯನ ಮಾಡುವಾಗ, “ಸಾಮಾನ್ಯವಾದುದಕ್ಕಿಂತ ಹೆಚ್ಚಿನ ಗಮನವನ್ನು ಕೊಡುವ ಅಗತ್ಯವಿದೆ.” ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳಬೇಕು: ‘ನಾನೀಗಲೂ ಪ್ರಾಥಮಿಕ ಸಂಗತಿಗಳನ್ನೇ ಕಲಿಯುತ್ತಿದ್ದೇನೋ? ಸತ್ಯಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಮನಃಪೂರ್ವಕವಾಗಿ ಮುಳುಗಿರುವ ಬದಲು ಅವುಗಳನ್ನು ಕೇವಲ ಯಾಂತ್ರಿಕವಾಗಿ ಯಾ ಅರೆಮನಸ್ಸಿನಿಂದ ಮಾಡುತ್ತಾ ಒಂದರ್ಥದಲ್ಲಿ ಮೇಲಿಂದ ಮೇಲೆ ತೇಲುತ್ತಿದ್ದೇನೋ? ಸತ್ಯದಲ್ಲಿ ನಾನು ಹೇಗೆ ನಿಜವಾದ ಪ್ರಗತಿ ಮಾಡಬಲ್ಲೆ?’ ಪ್ರೌಢತೆಯ ಕಡೆಗೆ ಮುಂದೊತ್ತಲು ನಾವು ಕಡಿಮೆಪಕ್ಷ ಎರಡು ಸಂಗತಿಗಳನ್ನು ಮಾಡಲು ಶ್ರಮಿಸಬೇಕು. ನಾವು ದೇವರ ವಾಕ್ಯದೊಂದಿಗೆ ಚಿರಪರಿಚಿತರಾಗಬೇಕು ಮತ್ತು ವಿಧೇಯತೆ ಕಲಿಯಬೇಕು.

ವಾಕ್ಯದೊಂದಿಗೆ ಚಿರಪರಿಚಿತರಾಗಿ

7. ದೇವರ ವಾಕ್ಯದೊಂದಿಗೆ ಚಿರಪರಿಚಿತರಾಗುವುದರಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು?

7 ಪೌಲನು ಬರೆದದ್ದು: ‘ಹಾಲನ್ನು ಸೇವಿಸುವ ಪ್ರತಿಯೊಬ್ಬನಿಗೆ ನೀತಿಯ ವಾಕ್ಯದ ಪರಿಚಯವಿರುವುದಿಲ್ಲ’ ಏಕೆಂದರೆ ‘ಅವನು ಕೂಸಿನಂತಿದ್ದಾನೆ.’ (ಇಬ್ರಿ. 5:13) ನಾವು ಪ್ರೌಢತೆಯನ್ನು ಮುಟ್ಟಬೇಕಾದರೆ, ನಮಗಾಗಿರುವ ದೇವರ ಸಂದೇಶದೊಂದಿಗೆ ಸುಪರಿಚಿತರಾಗಬೇಕು. ಈ ಸಂದೇಶವು ಆತನ ವಾಕ್ಯವಾದ ಬೈಬಲ್‌ನಲ್ಲಿ ಅಡಕವಾಗಿದೆ. ಆದದರಿಂದ, ನಾವು ಬೈಬಲಿನ ಮತ್ತು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಒದಗಿಸುವ ಪ್ರಕಾಶನಗಳ ಒಳ್ಳೇ ವಿದ್ಯಾರ್ಥಿಗಳಾಗಿರಬೇಕು. (ಮತ್ತಾ. 24:45-47) ಈ ರೀತಿಯ ಅಧ್ಯಯನದಿಂದಾಗಿ ದೇವರ ಆಲೋಚನಾರೀತಿಯನ್ನು ಕಲಿಯುವುದು ನಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಲು ಸಹಾಯ ಮಾಡುತ್ತದೆ. ಆರ್ಕಿಡ್‌ ಎಂಬ ಕ್ರೈಸ್ತಳ ಉದಾಹರಣೆಯನ್ನು ಪರಿಗಣಿಸಿ. * ಆಕೆ ಹೇಳುವುದು: “ಕ್ರಮವಾಗಿ ಬೈಬಲ್‌ ಓದಬೇಕೆಂಬ ಮರುಜ್ಞಾಪನವು ನನ್ನ ಜೀವನದ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವಬೀರಿದೆ. ಇಡೀ ಬೈಬಲನ್ನು ಓದಿ ಮುಗಿಸಲು ಸುಮಾರು ಎರಡು ವರ್ಷ ಹಿಡಿಯಿತಾದರೂ ಇದೇ ಪ್ರಥಮ ಬಾರಿ ಸೃಷ್ಟಿಕರ್ತನ ಕುರಿತು ತಿಳಿದುಕೊಳ್ಳುತ್ತಿದ್ದೇನೆಂದು ನನಗನಿಸಿತು. ನಾನು ಆತನ ಮಾರ್ಗಗಳು, ಇಷ್ಟಾನಿಷ್ಟಗಳು, ಶಕ್ತಿಯ ಪ್ರಮಾಣ ಮತ್ತು ವಿವೇಕದ ಅಗಾಧತೆಯ ಕುರಿತು ಕಲಿತೆ. ನನ್ನ ಜೀವನದ ಅತ್ಯಂತ ಕರಾಳ ಕ್ಷಣಗಳಲ್ಲಿ, ನನ್ನ ದೈನಂದಿನ ಬೈಬಲ್‌ ಓದುವಿಕೆ ನನಗೆ ಬಲ ಕೊಟ್ಟಿದೆ.”

8. ದೇವರ ವಾಕ್ಯ ನಮ್ಮನ್ನು ಹೇಗೆ ಪ್ರಭಾವಿಸುತ್ತದೆ?

8 ದೇವರ ವಾಕ್ಯದ ಒಂದಿಷ್ಟು ಭಾಗವನ್ನು ಕ್ರಮವಾಗಿ ಓದುವುದರಿಂದ ಅದರ ಸಂದೇಶ ನಮ್ಮನ್ನು ಪ್ರಭಾವಿಸುತ್ತದೆ ಅಥವಾ ನಮ್ಮನ್ನು ‘ಪ್ರಬಲಗೊಳಿಸುತ್ತದೆ.’ (ಇಬ್ರಿಯ 4:12 ಓದಿ.) ಅಂಥ ಓದುವಿಕೆಯು ನಮ್ಮ ಅಂತರ್ಯವನ್ನು ರೂಪಿಸಿ ನಾವು ಯೆಹೋವನನ್ನು ಹೆಚ್ಚು ಸಂತೋಷಪಡಿಸುವಂತೆ ಮಾಡಬಲ್ಲದು. ಬೈಬಲ್‌ ಓದಲು ಮತ್ತು ಅದರ ಕುರಿತು ಧ್ಯಾನಿಸಲು ಹೆಚ್ಚಿನ ಸಮಯವನ್ನು ಬದಿಗಿರಿಸುವ ಅಗತ್ಯ ನಿಮಗಿದೆಯೋ?

9, 10. ದೇವರ ವಾಕ್ಯದೊಂದಿಗೆ ಪರಿಚಿತರಾಗುವುದರಲ್ಲಿ ಏನು ಸೇರಿದೆ? ದೃಷ್ಟಾಂತಿಸಿ.

9 ಬೈಬಲಿನೊಂದಿಗೆ ಪರಿಚಿತರಾಗುವುದರ ಅರ್ಥ, ಅದರಲ್ಲೇನಿದೆಯೋ ಅದನ್ನು ಬರೀ ತಿಳಿದುಕೊಳ್ಳುವುದು ಮಾತ್ರವಲ್ಲ. ಪೌಲನ ದಿನಗಳಲ್ಲಿ ಆಧ್ಯಾತ್ಮಿಕ ರೀತಿಯಲ್ಲಿ ಕೂಸುಗಳಾಗಿದ್ದವರಿಗೆ ದೇವರ ಪ್ರೇರಿತ ವಾಕ್ಯದ ಪರಿಚಯವೇ ಇರಲಿಲ್ಲ ಎಂದೇನಿಲ್ಲ. ಪರಿಚಯ ಇತ್ತು, ಆದರೆ ಅವರದನ್ನು ವೈಯಕ್ತಿಕವಾಗಿ ಬಳಸಿರಲಿಲ್ಲ ಮತ್ತು ಅದನ್ನು ಕಾರ್ಯರೂಪಕ್ಕೆ ಹಾಕಿ ಅದರ ಮೌಲ್ಯವನ್ನು ಪರೀಕ್ಷಿಸಿರಲಿಲ್ಲ. ಜೀವನದಲ್ಲಿ ವಿವೇಕಯುತ ನಿರ್ಣಯಗಳನ್ನು ಮಾಡಲು ದೇವರ ಸಂದೇಶವನ್ನು ತಮ್ಮ ಮಾರ್ಗದರ್ಶಿಯಾಗಿ ಬಳಸಲಿಲ್ಲ. ಈ ಅರ್ಥದಲ್ಲಿ ಅವರು ಅದರೊಂದಿಗೆ ಪರಿಚಿತರಾಗಿರಲಿಲ್ಲ.

10 ದೇವರ ವಾಕ್ಯದೊಂದಿಗೆ ಪರಿಚಿತರಾಗುವುದರ ಅರ್ಥ, ಆ ವಾಕ್ಯ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಪಡೆದ ಜ್ಞಾನವನ್ನು ಕಾರ್ಯರೂಪಕ್ಕೆ ಹಾಕುವುದಾಗಿದೆ. ಇದನ್ನು ಹೇಗೆ ಮಾಡುವುದೆಂಬುದನ್ನು ಕೈಲ್‌ ಎಂಬ ಹೆಸರಿನ ಕ್ರೈಸ್ತ ಸಹೋದರಿಯ ಅನುಭವ ತೋರಿಸುತ್ತದೆ. ಒಮ್ಮೆ ಆಕೆ ಮತ್ತು ಆಕೆಯ ಸಹಕರ್ಮಿಯ ಮಧ್ಯೆ ವಾಗ್ವಾದವಾಯಿತು. ಇದರಿಂದುಂಟಾದ ಬಿರುಕನ್ನು ಮುಚ್ಚಲು ಆಕೆ ಏನು ಮಾಡಿದಳು? ಆಕೆ ವಿವರಿಸುವುದು: “ತಟ್ಟನೆ ನನ್ನ ಮನಸ್ಸಿಗೆ ಬಂದ ವಚನ ರೋಮನ್ನರು 12:18 ಆಗಿತ್ತು. ಅದು ಹೇಳುವುದು: ‘ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ.’ ಆದ್ದರಿಂದ ಕೆಲಸದ ನಂತರ ಆ ಸಹಕರ್ಮಿಯೊಂದಿಗೆ ಮಾತಾಡಲು ನಾನು ಸಮಯ ನಿಗದಿಪಡಿಸಿದೆ.” ಈ ಭೇಟಿ ಸಫಲವಾಯಿತು ಮತ್ತು ಕೈಲ್‌ ತೆಗೆದುಕೊಂಡ ಈ ಹೆಜ್ಜೆಯಿಂದ ಆಕೆಯ ಸಹಕರ್ಮಿ ಪ್ರಭಾವಿತಳಾದಳು. ಕೈಲ್‌ ಹೇಳುವುದು: “ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುವುದರಿಂದ ಯಾವತ್ತೂ ಎಡವಟ್ಟಾಗುವುದಿಲ್ಲ ಎಂಬುದನ್ನು ನಾನು ಕಲಿತೆ.”

ವಿಧೇಯತೆ ಕಲಿಯಿರಿ

11. ಕಷ್ಟಕರ ಸನ್ನಿವೇಶಗಳಲ್ಲಿ ವಿಧೇಯತೆ ತೋರಿಸುವುದು ಸವಾಲಾಗಿರಬಲ್ಲದೆಂದು ಯಾವುದು ತೋರಿಸುತ್ತದೆ?

11 ಬೈಬಲ್‌ನಿಂದ ಕಲಿತದ್ದನ್ನು ಅನ್ವಯಿಸುವುದು ವಿಶೇಷವಾಗಿ ಕಷ್ಟಕರ ಸನ್ನಿವೇಶಗಳಲ್ಲಿ ಸವಾಲಾಗಿರುತ್ತದೆ. ಉದಾಹರಣೆಗೆ, ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದ ಬಂದಿವಾಸದಿಂದ ಬಿಡಿಸಿದ ಸ್ವಲ್ಪದರಲ್ಲೇ ಅವರು ‘ಮೋಶೆಯ ಸಂಗಡ ವಾದಿಸಿದರು’ ಮತ್ತು ಈ ಮೂಲಕ ‘ಯೆಹೋವನನ್ನು ಪರೀಕ್ಷಿಸಿದರು.’ ಅವರಿದನ್ನು ಮಾಡಿದ್ದೇಕೆ? ಕುಡಿಯುವ ನೀರಿನ ಕೊರತೆಯಿಂದಲೇ. (ವಿಮೋ. 17:1-4) ಅವರು ದೇವರ ಒಡಂಬಡಿಕೆಯೊಳಗೆ ಸೇರುವಾಗ, “ಯೆಹೋವನ ಮಾತುಗಳನ್ನೆಲ್ಲಾ ಅನುಸರಿಸಿ ನಡೆಯುವೆವು” ಎಂದು ಒಮ್ಮತದಿಂದ ಒಪ್ಪಿಕೊಂಡು ಎರಡು ತಿಂಗಳು ಕೂಡ ಕಳೆದಿರಲಿಲ್ಲ. ಅಷ್ಟರಲ್ಲೇ ಅವರು ವಿಗ್ರಹಾರಾಧನೆಯ ಕುರಿತ ಆತನ ಆಜ್ಞೆಯನ್ನು ಮುರಿದರು. (ವಿಮೋ. 24:3, 12-18; 32:1, 2, 7-9) ಮೋಶೆ ಹೋರೇಬ್‌ ಬೆಟ್ಟದ ಮೇಲೆ ಸೂಚನೆಗಳನ್ನು ಪಡೆಯುತ್ತಿದ್ದು, ತುಂಬ ಸಮಯ ಅವರೊಂದಿಗೆ ಇಲ್ಲದ್ದರಿಂದ ಅವರು ಭಯದಿಂದ ಹೀಗೆ ಮಾಡಿದ್ದಿರಬಹುದೋ? ಮೋಶೆಯ ಅನುಪಸ್ಥಿತಿಯಲ್ಲಿ ಅಮಾಲೇಕ್ಯರು ಪುನಃ ಒಮ್ಮೆ ದಾಳಿಮಾಡುವರು ಮತ್ತು ತಾವು ಅಸಹಾಯಕರಾಗಿರುವೆವು ಎಂಬುದಾಗಿ ಇಸ್ರಾಯೇಲ್ಯರು ಯೋಚಿಸಿದ್ದಿರಬಹುದೋ? ಏಕೆಂದರೆ ಈ ಮುಂಚೆ ಮೋಶೆಯ ಎತ್ತಿಹಿಡಿಯಲ್ಪಟ್ಟ ಕೈಗಳು ಅಮಾಲೇಕ್ಯರ ವಿರುದ್ಧ ಜಯ ತಂದುಕೊಟ್ಟಿದ್ದವು. (ವಿಮೋ. 17:8-16) ವಿಷಯವು ಹಾಗೆ ಇದ್ದಿರಬಹುದು. ಆದರೆ ಏನೇ ಇರಲಿ ಇಸ್ರಾಯೇಲ್ಯರು ‘ವಿಧೇಯರಾಗಲು ನಿರಾಕರಿಸಿದರು.’ (ಅ. ಕಾ. 7:39-41) ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಲು ಹೆದರಿದಾಗ ತೋರಿಸಿದ ‘ಅದೇ ನಮೂನೆಯ ಅವಿಧೇಯತೆಗೆ ಬೀಳದಂತೆ ಪರಮ ಪ್ರಯತ್ನವನ್ನು ಮಾಡಲು’ ಪೌಲನು ಕ್ರೈಸ್ತರಿಗೆ ಹೇಳಿದನು.—ಇಬ್ರಿ. 4:3, 11.

12. ಯೇಸು ವಿಧೇಯತೆ ಕಲಿತದ್ದು ಹೇಗೆ, ಮತ್ತು ಅದರಿಂದೇನು ಪ್ರಯೋಜನವಾಯಿತು?

12 ಪ್ರೌಢತೆಯ ಕಡೆಗೆ ಮುಂದೊತ್ತಬೇಕಾದರೆ ನಾವು ಯೆಹೋವನಿಗೆ ವಿಧೇಯರಾಗಿರಲು ಶತಪ್ರಯತ್ನ ಮಾಡಬೇಕು. ಯೇಸು ಕ್ರಿಸ್ತನ ಮಾದರಿ ತೋರಿಸುವಂತೆ, ಬಾಧೆಗಳನ್ನು ಅನುಭವಿಸುವಾಗಲೇ ಅನೇಕವೇಳೆ ವಿಧೇಯತೆಯನ್ನು ಕಲಿಯಲಿಕ್ಕಾಗುತ್ತದೆ. (ಇಬ್ರಿಯ 5:8, 9 ಓದಿ.) ಭೂಮಿಗೆ ಬರುವ ಮೊದಲು ಯೇಸು ತನ್ನ ತಂದೆಗೆ ವಿಧೇಯನಾಗಿದ್ದನು. ಆದರೆ ಭೂಮಿಯಲ್ಲಿದ್ದಾಗ ತನ್ನ ತಂದೆಯ ಚಿತ್ತವನ್ನು ಮಾಡಲಿಕ್ಕಾಗಿ ಅವನು ಶಾರೀರಿಕ ಮತ್ತು ಮಾನಸಿಕ ಬಾಧೆಗಳನ್ನು ಅನುಭವಿಸಬೇಕಾಯಿತು. ತೀಕ್ಷ್ಣ ಒತ್ತಡಗಳ ಕೆಳಗೂ ವಿಧೇಯತೆ ತೋರಿಸುವ ಮೂಲಕ ಯೇಸು ತನಗಾಗಿ ದೇವರು ಅಣಿಮಾಡಿದ ಹೊಸ ಸ್ಥಾನಕ್ಕಾಗಿ ಅಂದರೆ ರಾಜನೂ ಮಹಾ ಯಾಜಕನೂ ಆಗಲು ‘ಪರಿಪೂರ್ಣಗೊಳಿಸಲ್ಪಟ್ಟನು.’

13. ನಾವು ವಿಧೇಯತೆಯನ್ನು ಕಲಿತಿದ್ದೇವೆಂಬುದನ್ನು ಯಾವುದು ತೋರಿಸುತ್ತದೆ?

13 ನಮ್ಮ ಕುರಿತೇನು? ತೀಕ್ಷ್ಣ ಸಮಸ್ಯೆಗಳು ಎದುರಾದಾಗಲೂ ನಾವು ಯೆಹೋವನಿಗೆ ವಿಧೇಯರಾಗಿರಲು ದೃಢನಿಶ್ಚಯದಿಂದಿದ್ದೇವೋ? (1 ಪೇತ್ರ 1:6, 7 ಓದಿ.) ನೈತಿಕತೆ, ಪ್ರಾಮಾಣಿಕತೆ, ನಾಲಿಗೆಯ ಸರಿಯಾದ ಉಪಯೋಗ, ವೈಯಕ್ತಿಕ ಬೈಬಲ್‌ ವಾಚನ ಮತ್ತು ಅಧ್ಯಯನ, ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತಿ ಮತ್ತು ಸಾರುವ ಕೆಲಸದಲ್ಲಿ ಭಾಗವಹಿಸುವಿಕೆಯ ಕುರಿತು ದೇವರ ವಾಕ್ಯವು ಸ್ಪಷ್ಟ ಸಲಹೆಯನ್ನು ಕೊಡುತ್ತದೆ. (ಯೆಹೋ. 1:8; ಮತ್ತಾ. 28:19, 20; ಎಫೆ. 4:25, 28, 29; 5:3-5; ಇಬ್ರಿ. 10:24, 25) ಈ ಎಲ್ಲಾ ವಿಷಯಗಳಲ್ಲಿ ನಾವು ಕಷ್ಟಕರ ಪರಿಸ್ಥಿತಿಗಳಲ್ಲೂ ಯೆಹೋವನಿಗೆ ವಿಧೇಯರಾಗಿದ್ದೇವೋ? ನಮ್ಮ ವಿಧೇಯತೆಯು ನಾವು ಪ್ರೌಢತೆಯ ಕಡೆಗೆ ಪ್ರಗತಿಮಾಡಿದ್ದೇವೆ ಎಂಬುದರ ಸೂಚನೆಯಾಗಿದೆ.

ಕ್ರೈಸ್ತ ಪ್ರೌಢತೆ ಪ್ರಯೋಜನಕರವೇಕೆ?

14. ಪ್ರೌಢತೆಯ ಕಡೆಗೆ ಮುಂದೊತ್ತುವುದು ಹೇಗೆ ಸಂರಕ್ಷಣೆಯಾಗಿದೆ ಎಂಬುದನ್ನು ದೃಷ್ಟಾಂತಿಸಿ.

14 “ಸಂಪೂರ್ಣ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡ” ಈ ಜಗತ್ತಿನಲ್ಲಿ ಸರಿ ಮತ್ತು ತಪ್ಪಿನ ನಡುವಿನ ಬೇಧವನ್ನು ತಿಳಿಯಲಿಕ್ಕಾಗಿ ಕ್ರೈಸ್ತನೊಬ್ಬನಿಗೆ ಸರಿಯಾಗಿ ತರಬೇತುಗೊಂಡಿರುವ ಗ್ರಹಣ ಶಕ್ತಿಗಳಿರುವುದು ನಿಜಕ್ಕೂ ಸುರಕ್ಷೆಯಾಗಿದೆ. (ಎಫೆ. 4:19) ಉದಾಹರಣೆಗೆ, ಬೈಬಲಾಧರಿತ ಪ್ರಕಾಶನಗಳನ್ನು ಕ್ರಮವಾಗಿ ಓದುತ್ತಿದ್ದ ಹಾಗೂ ಬಹಳ ಗಣ್ಯಮಾಡುತ್ತಿದ್ದ ಜೇಮ್ಸ್‌ ಎಂಬ ಸಹೋದರನನ್ನು ಪರಿಗಣಿಸಿ. ಈತನು ಹೊಸದಾಗಿ ಕೆಲಸಕ್ಕೆ ಸೇರಿದ ಸ್ಥಳದಲ್ಲಿ ಸಹೋದ್ಯೋಗಿಗಳೆಲ್ಲರೂ ಮಹಿಳೆಯರಾಗಿದ್ದರು. ಜೇಮ್ಸ್‌ ಹೇಳುವುದು: “ಅವರಲ್ಲಿ ಹೆಚ್ಚಿನವರಿಗೆ ನೈತಿಕ ಪ್ರಜ್ಞೆ ಇಲ್ಲದಿದ್ದದ್ದು ಸ್ಪಷ್ಟವಾಗಿ ತೋರಿಬರುತ್ತಿತ್ತು. ಅವರಲ್ಲಿ ಒಬ್ಬಾಕೆ ಮಾತ್ರ ಒಳ್ಳೆಯವಳಂತೆ ತೋರಿದಳು ಮತ್ತು ಬೈಬಲ್‌ ಸತ್ಯದಲ್ಲೂ ಆಸಕ್ತಿ ತೋರಿಸಿದಳು. ಆದರೆ ಒಮ್ಮೆ ಕೆಲಸದ ಸ್ಥಳದಲ್ಲಿನ ಒಂದು ಕೋಣೆಯಲ್ಲಿ ನಾವಿಬ್ಬರೇ ಇದ್ದಾಗ ಆಕೆ ನನ್ನನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿದಳು. ಆಕೆ ತಮಾಷೆ ಮಾಡುತ್ತಿದ್ದಾಳೆಂದು ಮೊದಮೊದಲು ನನಗನಿಸಿತು. ಆದರೆ ನಾನು ಆಕೆಯನ್ನು ತಡೆಯಲು ಪ್ರಯತ್ನಿಸಿದಾಗ ಆಕೆ ನಿಲ್ಲಿಸಲಿಲ್ಲ. ಆಗಲೇ ನನಗೆ ಕಾವಲಿನಬುರುಜುವಿನಲ್ಲಿದ್ದ ಒಬ್ಬ ಸಹೋದರನ ಅನುಭವ ನೆನಪಿಗೆ ಬಂತು. ಆ ಸಹೋದರನು ಕೆಲಸದ ಸ್ಥಳದಲ್ಲಿ ಇದೇ ರೀತಿಯ ಶೋಧನೆಗೊಳಗಾಗಿದ್ದನು. ಆ ಲೇಖನದಲ್ಲಿ ಯೋಸೇಫ ಮತ್ತು ಫೋಟೀಫರನ ಹೆಂಡತಿಯ ಉದಾಹರಣೆಯನ್ನು ಉಪಯೋಗಿಸಲಾಗಿತ್ತು. * ಆದ್ದರಿಂದ ನಾನು ತಡಮಾಡದೇ ಆ ಹುಡುಗಿಯನ್ನು ತಳ್ಳಿಬಿಟ್ಟೆ. ಆಕೆ ಹೊರಗೆ ಓಡಿ ಹೋದಳು.” (ಆದಿ. 39:7-12) ಇನ್ನೇನೂ ಆಗದೇ ಇದ್ದದ್ದಕ್ಕಾಗಿ ಮತ್ತು ತಾನು ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಲು ಶಕ್ತನಾದದ್ದಕ್ಕೆ ಜೇಮ್ಸ್‌ ಸಂತೋಷಪಡುತ್ತಾನೆ.—1 ತಿಮೊ. 1:5.

15. ಪ್ರೌಢತೆಯ ಕಡೆಗೆ ಮುಂದೊತ್ತುವುದು ನಮ್ಮ ಸಾಂಕೇತಿಕ ಹೃದಯವನ್ನು ಬಲಪಡಿಸುವುದು ಹೇಗೆ?

15 ಪ್ರೌಢತೆಯು ಪ್ರಯೋಜನಕರವೂ ಆಗಿದೆ, ಏಕೆಂದರೆ ಅದು ನಮ್ಮ ಹೃದಯವನ್ನು ಬಲಪಡಿಸುತ್ತದೆ ಮತ್ತು ನಾವು ‘ನಾನಾ ವಿಧವಾದ ಮತ್ತು ಅನ್ಯಬೋಧನೆಗಳ ಸೆಳೆತಕ್ಕೆ ಸಿಕ್ಕಿ ದಾರಿತಪ್ಪದಂತೆ’ ಮಾಡುತ್ತದೆ. (ಇಬ್ರಿಯ 13:9 ಓದಿ.) ನಾವು ಆಧ್ಯಾತ್ಮಿಕ ಪ್ರಗತಿ ಮಾಡಲು ಯತ್ನಿಸುತ್ತಿರುವಾಗ ನಮ್ಮ ಮನಸ್ಸು “ಹೆಚ್ಚು ಪ್ರಮುಖವಾದ ವಿಷಯಗಳ” ಮೇಲೆ ಕೇಂದ್ರೀಕೃತವಾಗಿರುತ್ತದೆ. (ಫಿಲಿ. 1:9, 10) ಹೀಗೆ ದೇವರಿಗಾಗಿ ಮತ್ತು ಆತನು ನಮಗಾಗಿ ಮಾಡಿರುವ ಎಲ್ಲಾ ಒದಗಿಸುವಿಕೆಗಳಿಗಾಗಿ ನಮ್ಮ ಕೃತಜ್ಞತೆ ಹೆಚ್ಚುವುದು. (ರೋಮ. 3:24) “ತಿಳಿವಳಿಕೆಯ ಸಾಮರ್ಥ್ಯದಲ್ಲಿ ಪೂರ್ಣ ಬೆಳೆದ” ಕ್ರೈಸ್ತನೊಬ್ಬನು ಅಂಥ ಕೃತಜ್ಞತಾಭಾವವನ್ನು ಬೆಳೆಸಿಕೊಳ್ಳುವನು ಮತ್ತು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಆನಂದಿಸುವನು.—1 ಕೊರಿಂ. 14:20.

16. ‘ಹೃದಯವನ್ನು ದೃಢಪಡಿಸಿಕೊಳ್ಳಲು’ ಒಬ್ಬ ಸಹೋದರಿಗೆ ಯಾವುದು ಸಹಾಯ ಮಾಡಿತು?

16 ಲೂವಿಜ್‌ ಎಂಬ ಸಹೋದರಿಯು, ತನ್ನ ದೀಕ್ಷಾಸ್ನಾನದ ನಂತರ ಸ್ವಲ್ಪ ಸಮಯ ಇತರರನ್ನು ಮೆಚ್ಚಿಸಲಿಕ್ಕೆಂದೇ ಕ್ರೈಸ್ತ ಚಟುವಟಿಕೆಗಳಲ್ಲಿ ತಾನು ಭಾಗವಹಿಸುತ್ತಿದ್ದೆ ಎಂಬುದಾಗಿ ಒಪ್ಪಿಕೊಳ್ಳುತ್ತಾಳೆ. ಆಕೆ ಹೇಳುವುದು: “ನಾನು ಯಾವುದೇ ತಪ್ಪು ಕೆಲಸ ಮಾಡುತ್ತಿರಲಿಲ್ಲ. ಆದರೆ ಯೆಹೋವನ ಸೇವೆ ಮಾಡಬೇಕೆಂಬ ಉತ್ಕಟ ಬಯಕೆ ನನ್ನಲ್ಲಿರಲಿಲ್ಲ. ಆದ್ದರಿಂದ ನನ್ನಿಂದಾದದ್ದೆಲ್ಲವನ್ನೂ ಯೆಹೋವನಿಗೆ ಕೊಡಲು ನಾನಿನ್ನೂ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ನನಗನಿಸಿತು. ಅವುಗಳಲ್ಲಿ ಅತಿ ದೊಡ್ಡ ಬದಲಾವಣೆಯು, ಆತನ ಆರಾಧನೆಯನ್ನು ಪೂರ್ಣ ಹೃದಯದಿಂದ ಮಾಡುವುದಾಗಿತ್ತು.” ಅದನ್ನು ಮಾಡಲೆತ್ನಿಸುವ ಮೂಲಕ ಲೂವಿಜ್‌ಳ ‘ಹೃದಯ ದೃಢವಾಯಿತು.’ ಇದು ಆಕೆ ಸಂಕಟಕರ ಆರೋಗ್ಯ ಸಮಸ್ಯೆಯನ್ನು ಎದುರಿಸಿದಾಗ ತುಂಬ ಉಪಯುಕ್ತವಾಗಿತ್ತು. (ಯಾಕೋ. 5:8) ಲೂವಿಜ್‌ ಹೇಳಿದ್ದು: “ನಾನು ತುಂಬ ಪ್ರಯಾಸಪಟ್ಟು ಯೆಹೋವನಿಗೆ ಆಪ್ತಳಾದೆ.”

‘ಹೃದಯದಿಂದ ವಿಧೇಯರಾಗಿರಿ’

17. ವಿಶೇಷವಾಗಿ ಪ್ರಥಮ ಶತಮಾನದಲ್ಲಿ ವಿಧೇಯತೆಯು ಏಕೆ ಪ್ರಾಮುಖ್ಯವಾಗಿತ್ತು?

17 ‘ಪ್ರೌಢತೆಯ ಕಡೆಗೆ ಮುಂದೊತ್ತಲು’ ಪೌಲನು ಕೊಟ್ಟ ಸಲಹೆ ಪ್ರಥಮ ಶತಮಾನದಲ್ಲಿ ಯೆರೂಸಲೇಮ್‌ ಮತ್ತು ಯೂದಾಯದಲ್ಲಿದ್ದ ಕ್ರೈಸ್ತರಿಗೆ ಜೀವರಕ್ಷಕವಾಗಿ ಪರಿಣಮಿಸಿತು. ಈ ಸಲಹೆಯನ್ನು ಪಾಲಿಸಿದವರು ತೀಕ್ಷ್ಣ ಆಧ್ಯಾತ್ಮಿಕ ವಿವೇಚನೆಯನ್ನು ಹೊಂದಿದ್ದರಿಂದ ಯೇಸು ಕೊಟ್ಟ ಸೂಚನೆಯನ್ನು ಗುರುತಿಸಿ ‘ಬೆಟ್ಟಗಳಿಗೆ ಓಡಿಹೋಗತೊಡಗಿದರು.’ “ಹಾಳುಮಾಡುವ ಅಸಹ್ಯ ವಸ್ತುವು ಪವಿತ್ರ ಸ್ಥಳದಲ್ಲಿ ನಿಂತಿರುವುದನ್ನು” ಅಂದರೆ ರೋಮನ್‌ ಸೈನ್ಯ ಯೆರೂಸಲೇಮನ್ನು ಸುತ್ತುವರಿದು ಅದರೊಳಗೆ ನುಗ್ಗಲು ಪ್ರಯತ್ನಿಸುತ್ತಿರುವುದನ್ನು ನೋಡಿದಾಗ ಅದು ಓಡಿಹೋಗಲು ಸೂಕ್ತ ಸಮಯವೆಂದು ಅವರು ತಿಳಿದರು. (ಮತ್ತಾ. 24:15, 16) ಯೇಸುವಿನ ಪ್ರವಾದನಾತ್ಮಕ ಎಚ್ಚರಿಕೆಯನ್ನು ಪಾಲಿಸುತ್ತಾ ಕ್ರೈಸ್ತರು ಯೆರೂಸಲೇಮ್‌ ಪಟ್ಟಣದ ನಾಶನದ ಮುಂಚೆಯೇ ಅಲ್ಲಿಂದ ಓಡಿಹೋದರು. ಅಲ್ಲದೆ, ಚರ್ಚ್‌ ಇತಿಹಾಸಕಾರನಾದ ಯುಸೀಬಿಯಸ್‌ನ ಪ್ರಕಾರ, ಅವರು ಗಿಲ್ಯಾದಿನ ಪರ್ವತಪ್ರದೇಶದಲ್ಲಿದ್ದ ಪೆಲ ಎಂಬ ಪಟ್ಟಣದಲ್ಲಿ ನೆಲೆಸಿದರು. ಹೀಗೆ ಅವರು ಯೆರೂಸಲೇಮಿನ ಇತಿಹಾಸದಲ್ಲೇ ಅತ್ಯಂತ ಭೀಕರವಾದ ದುರಂತದಿಂದ ತಪ್ಪಿಸಿಕೊಂಡರು.

18, 19. (ಎ) ನಮ್ಮ ದಿನಗಳಲ್ಲಿ ವಿಧೇಯತೆ ಪ್ರಾಮುಖ್ಯವೇಕೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

18 ಪ್ರೌಢತೆಯ ಕಡೆಗೆ ಮುಂದೊತ್ತುವಾಗ ನಾವು ಬೆಳೆಸಿಕೊಳ್ಳುವ ವಿಧೇಯತೆಯು, “ಮಹಾ ಸಂಕಟವು ಇರುವುದು” ಎಂಬ ಯೇಸುವಿನ ಪ್ರವಾದನೆಯ ಪ್ರಮುಖ ನೆರವೇರಿಕೆ ಬೃಹತ್‌ ಪ್ರಮಾಣದಲ್ಲಿ ಆಗುವಾಗಲೂ ಜೀವರಕ್ಷಕವಾಗಿ ಪರಿಣಮಿಸುವುದು. (ಮತ್ತಾ. 24:21) ‘ನಂಬಿಗಸ್ತ ಮನೆವಾರ್ತೆಯವನಿಂದ’ ಮುಂದೆ ಸಿಗಬಹುದಾದ ಯಾವುದೇ ತುರ್ತಿನ ನಿರ್ದೇಶನಕ್ಕೆ ನಾವು ವಿಧೇಯರಾಗುವೆವೋ? (ಲೂಕ 12:42) ಆದ್ದರಿಂದ ‘ಹೃದಯದಿಂದ ವಿಧೇಯರಾಗಲು’ ಈಗಲೇ ಕಲಿಯುವುದು ಎಷ್ಟು ಪ್ರಾಮುಖ್ಯ!—ರೋಮ. 6:17.

19 ಪ್ರೌಢತೆಯನ್ನು ಮುಟ್ಟಲು ನಾವು ನಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಬೇಕು. ದೇವರ ವಾಕ್ಯದೊಂದಿಗೆ ಹೆಚ್ಚು ಪರಿಚಿತರಾಗಲು ಶ್ರಮಿಸುವ ಮೂಲಕ ಮತ್ತು ವಿಧೇಯತೆಯನ್ನು ಕಲಿಯುವ ಮೂಲಕ ನಾವಿದನ್ನು ಮಾಡಬಲ್ಲೆವು. ಕ್ರೈಸ್ತ ಪ್ರೌಢತೆಗೆ ಬೆಳೆಯುವುದು ಯುವ ಜನರಿಗೆ ಪ್ರತ್ಯೇಕವಾದ ಸವಾಲುಗಳನ್ನು ತಂದೊಡ್ಡುತ್ತದೆ. ಅಂಥ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವುದು ಹೇಗೆಂಬುದನ್ನು ಮುಂದಿನ ಲೇಖನದಲ್ಲಿ ಪರಿಗಣಿಸಲಿದ್ದೇವೆ.

[ಪಾದಟಿಪ್ಪಣಿಗಳು]

^ ಪ್ಯಾರ. 7 ಕೆಲವೊಂದು ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 14 ಅಕ್ಟೋಬರ್‌ 1, 1999ರ ಕಾವಲಿನಬುರುಜುವಿನಲ್ಲಿರುವ “ತಪ್ಪುಮಾಡುವಿಕೆಗೆ ಇಲ್ಲವೆಂದು ಹೇಳುವಂತೆ ಬಲಪಡಿಸಲ್ಪಟ್ಟದ್ದು” ಎಂಬ ಲೇಖನ ನೋಡಿ.

ನೀವೇನು ಕಲಿತಿರಿ?

• ಆಧ್ಯಾತ್ಮಿಕ ಪ್ರೌಢತೆ ಎಂದರೇನು, ಮತ್ತು ನಾವದನ್ನು ಹೇಗೆ ಪಡೆಯಬಲ್ಲೆವು?

• ಪ್ರೌಢತೆಯ ಕಡೆಗೆ ಮುಂದೊತ್ತುವುದರಲ್ಲಿ ದೇವರ ವಾಕ್ಯದೊಂದಿಗೆ ಪರಿಚಿತರಾಗುವುದರ ಪಾತ್ರವೇನು?

• ನಾವು ವಿಧೇಯತೆಯನ್ನು ಹೇಗೆ ಕಲಿಯಬಲ್ಲೆವು?

• ಪ್ರೌಢತೆ ಯಾವ ವಿಧಗಳಲ್ಲಿ ನಮಗೆ ಪ್ರಯೋಜನಕರ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

ಬೈಬಲ್‌ ಸಲಹೆಯನ್ನು ಅನ್ವಯಿಸಿಕೊಳ್ಳುವಲ್ಲಿ ಸಮಸ್ಯೆಗಳನ್ನು ಪ್ರೌಢತೆಯಿಂದ ನಿಭಾಯಿಸಬಹುದು

[ಪುಟ 12, 13ರಲ್ಲಿರುವ ಚಿತ್ರ]

ಯೇಸುವಿನ ಸಲಹೆಯನ್ನು ಅನುಸರಿಸಿದ್ದರಿಂದ ಆರಂಭದ ಕ್ರೈಸ್ತರು ಬದುಕುಳಿದರು