ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವಜನರೇ, ನಿಮ್ಮ ಅಭಿವೃದ್ಧಿಯನ್ನು ಪ್ರಕಟಪಡಿಸಿ

ಯುವಜನರೇ, ನಿಮ್ಮ ಅಭಿವೃದ್ಧಿಯನ್ನು ಪ್ರಕಟಪಡಿಸಿ

ಯುವಜನರೇ, ನಿಮ್ಮ ಅಭಿವೃದ್ಧಿಯನ್ನು ಪ್ರಕಟಪಡಿಸಿ

“ಈ ಸಂಗತಿಗಳ ಕುರಿತು ಪರ್ಯಾಲೋಚಿಸು; ಅವುಗಳಲ್ಲಿ ಮಗ್ನನಾಗಿರು. ಹೀಗಾದರೆ ನಿನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು.”—1 ತಿಮೊ. 4:15.

1. ಯುವ ವ್ಯಕ್ತಿಗಳಿಗಾಗಿ ದೇವರು ಏನನ್ನು ಬಯಸುತ್ತಾನೆ?

“ಯೌ ವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ.” (ಪ್ರಸಂ. 11:9) ಇದನ್ನು ಬರೆದವನು ಪುರಾತನ ಇಸ್ರಾಯೇಲಿನ ವಿವೇಕಿ ರಾಜ ಸೊಲೊಮೋನನು. ಈ ಮಾತುಗಳ ಮೂಲನಾದ ಯೆಹೋವ ದೇವರು ನೀವು ಯುವ ಪ್ರಾಯದಲ್ಲಿ ಮಾತ್ರವಲ್ಲ ವೃದ್ಧರಾದಾಗಲೂ ಸಂತೋಷದಿಂದಿರಬೇಕೆಂದು ಬಯಸುತ್ತಾನೆ. ಆದರೆ ಹೆಚ್ಚಾಗಿ ಯುವ ಜನರು ಯೌವನದ ದಿನಗಳಲ್ಲಿ ತಪ್ಪುಗಳನ್ನು ಮಾಡಿ ಭವಿಷ್ಯದ ಸಂತೋಷವನ್ನು ಕೈಯಾರೆ ಹಾಳು ಮಾಡಿಕೊಳ್ಳುತ್ತಾರೆ. ನಂಬಿಗಸ್ತ ಯೋಬನು ಕೂಡ “ಯೌವನದ ತಪ್ಪುಗಳ ಪರಿಣಾಮಗಳನ್ನು” ಅನುಭವಿಸಬೇಕಾದದ್ದಕ್ಕೆ ವ್ಯಥೆಪಟ್ಟನು. (ಯೋಬ 13:26, NW) ಹದಿಹರೆಯದಲ್ಲಿ ಮತ್ತು ತದನಂತರದ ವರ್ಷಗಳಲ್ಲಿ ಯುವ ಪ್ರಾಯದ ಕ್ರೈಸ್ತರು ಅನೇಕ ಗಂಭೀರ ನಿರ್ಣಯಗಳನ್ನು ಮಾಡಲಿಕ್ಕಿರುತ್ತದೆ. ತಪ್ಪಾದ ನಿರ್ಣಯಗಳು ಭಾವನಾತ್ಮಕವಾಗಿ ಎಂದೂ ಮಾಸದ ಗಾಯಗಳನ್ನು ಮಾಡಬಹುದು ಮತ್ತು ಉಳಿದ ಜೀವಿತಾವಧಿಯನ್ನು ಬಾಧಿಸುವ ಸಮಸ್ಯೆಗಳನ್ನು ತಂದೊಡ್ಡಬಹುದು.—ಪ್ರಸಂ. 11:10.

2. ಬೈಬಲ್‌ನ ಯಾವ ಸಲಹೆ ಯುವ ಜನರು ಗಂಭೀರ ತಪ್ಪುಗಳನ್ನು ಮಾಡದಂತೆ ತಡೆಯುವುದು?

2 ಯುವ ಜನರು ನಿರ್ಣಯಗಳನ್ನು ಮಾಡುವಾಗ ವಿವೇಚನೆಯನ್ನು ಬಳಸಬೇಕು. ಅಪೊಸ್ತಲ ಪೌಲನು ಕೊರಿಂಥದವರಿಗೆ ಕೊಟ್ಟ ಈ ಬುದ್ಧಿವಾದವನ್ನು ಪರಿಗಣಿಸಿ: “ಸಹೋದರರೇ, ತಿಳಿವಳಿಕೆಯ ಸಾಮರ್ಥ್ಯದಲ್ಲಿ ಬಾಲಕರಾಗಿರಬೇಡಿರಿ, . . . ತಿಳಿವಳಿಕೆಯ ಸಾಮರ್ಥ್ಯದಲ್ಲಿ ಪೂರ್ಣ ಬೆಳೆದವರೂ ಆಗಿರಿ.” (1 ಕೊರಿಂ. 14:20) ಪೂರ್ಣವಾಗಿ ಬೆಳೆದ ವ್ಯಕ್ತಿಯಂತೆ ಯೋಚಿಸುವ ಮತ್ತು ವಿವೇಚಿಸುವ ಸಾಮರ್ಥ್ಯವನ್ನು ಗಳಿಸಬೇಕೆಂಬ ಈ ಸಲಹೆಯನ್ನು ಪಾಲಿಸುವುದು ಯುವ ಜನರು ಗಂಭೀರ ತಪ್ಪುಗಳನ್ನು ಮಾಡದಂತೆ ತಡೆಯುವುದು.

3. ಪ್ರೌಢರಾಗಲು ನೀವೇನು ಮಾಡಬಲ್ಲಿರಿ?

3 ನೀವು ಯುವ ಪ್ರಾಯದವರಾಗಿರುವಲ್ಲಿ ನೆನಪಿಡಿ, ಪ್ರೌಢರಾಗಲು ಪ್ರಯತ್ನ ಅಗತ್ಯ. ಪೌಲನು ತಿಮೊಥೆಯನಿಗಂದದ್ದು: “ನಿನ್ನ ಯೌವನವನ್ನು ಯಾವನೂ ಎಂದಿಗೂ ಕಡೆಗಣಿಸದಿರಲಿ. ಬದಲಾಗಿ ಮಾತಿನಲ್ಲಿಯೂ ನಡತೆಯಲ್ಲಿಯೂ ಪ್ರೀತಿಯಲ್ಲಿಯೂ ನಂಬಿಕೆಯಲ್ಲಿಯೂ ನೈತಿಕ ಶುದ್ಧತೆಯಲ್ಲಿಯೂ ನಂಬಿಗಸ್ತರಿಗೆ ಮಾದರಿಯಾಗಿರು. . . . ಸಾರ್ವಜನಿಕ ವಾಚನದಲ್ಲಿಯೂ ಬುದ್ಧಿಹೇಳುವುದರಲ್ಲಿಯೂ ಬೋಧಿಸುವುದರಲ್ಲಿಯೂ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು. . . . ಈ ಸಂಗತಿಗಳ ಕುರಿತು ಪರ್ಯಾಲೋಚಿಸು; ಅವುಗಳಲ್ಲಿ ಮಗ್ನನಾಗಿರು. ಹೀಗಾದರೆ ನಿನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು.” (1 ತಿಮೊ. 4:12-15) ಕ್ರೈಸ್ತ ಯುವ ಜನರು ಪ್ರಗತಿ ಮಾಡಬೇಕು ಮತ್ತು ಅವರ ಅಭಿವೃದ್ಧಿ ಇತರರಿಗೆ ಪ್ರಕಟವಾಗಬೇಕು.

ಅಭಿವೃದ್ಧಿ ಎಂದರೇನು?

4. ಆಧ್ಯಾತ್ಮಿಕ ಪ್ರಗತಿ ಮಾಡುವುದರಲ್ಲಿ ಏನೆಲ್ಲ ಸೇರಿದೆ?

4 ಅಭಿವೃದ್ಧಿ ಎಂಬ ಪದದ ಅರ್ಥ “ಪ್ರಗತಿ, ಏಳಿಗೆ” ಎಂದಾಗಿದೆ. ಪೌಲನು ತಿಮೊಥೆಯನಿಗೆ ಮಾತು, ನಡತೆ, ಪ್ರೀತಿ, ನಂಬಿಕೆ ಮತ್ತು ನೈತಿಕ ಶುದ್ಧತೆಯಲ್ಲಿ ಮಾತ್ರವಲ್ಲ, ತನ್ನ ಶುಶ್ರೂಷೆಯನ್ನು ಪೂರೈಸುವ ವಿಧದಲ್ಲೂ ಪ್ರಗತಿ ಮಾಡುವಂತೆ ತಿಳಿಸಿದನು. ಅವನು ತನ್ನ ಜೀವನವನ್ನು ಇತರರಿಗೆ ಮಾದರಿಯಾಗಿಡಲು ಶ್ರಮಿಸಬೇಕಿತ್ತು. ಆದ್ದರಿಂದ ತಿಮೊಥೆಯನು ಆಧ್ಯಾತ್ಮಿಕ ಪ್ರಗತಿ ಮಾಡುತ್ತಲೇ ಇರಬೇಕಿತ್ತು.

5, 6. (ಎ) ತಿಮೊಥೆಯನ ಅಭಿವೃದ್ಧಿ ಯಾವಾಗ ಪ್ರಕಟವಾಯಿತು? (ಬಿ) ಅಭಿವೃದ್ಧಿ ಮಾಡುವ ವಿಷಯದಲ್ಲಿ ಇಂದಿನ ಯುವ ಜನರು ತಿಮೊಥೆಯನನ್ನು ಹೇಗೆ ಅನುಕರಿಸಬಹುದು?

5 ಪೌಲನು ಆ ಸಲಹೆಯನ್ನು ಸುಮಾರು ಸಾ.ಶ. 61 ಮತ್ತು 64ರ ನಡುವೆ ಕೊಟ್ಟಾಗ ತಿಮೊಥೆಯನು ಆಗತಾನೇ ಆಧ್ಯಾತ್ಮಿಕ ಅಭಿವೃದ್ಧಿ ಮಾಡಲಾರಂಭಿಸಿರಲಿಲ್ಲ. ಅವನು ಈಗಾಗಲೇ ಒಬ್ಬ ನುರಿತ ಹಿರಿಯನಾಗಿದ್ದನು. ಸಾ.ಶ. 49 ಅಥವಾ 50ರಲ್ಲಿ ತಿಮೊಥೆಯನು ಬಹುಶಃ 20ರ ಆಸುಪಾಸಿನ ಪ್ರಾಯದವನಾಗಿದ್ದಾಗ ಅವನ ಆಧ್ಯಾತ್ಮಿಕ ಪ್ರಗತಿಯನ್ನು ಗಮನಿಸಿದ “ಲುಸ್ತ್ರ ಮತ್ತು ಇಕೋನ್ಯದಲ್ಲಿದ್ದ ಸಹೋದರರು ಅವನ ಕುರಿತಾಗಿ ಒಳ್ಳೇ ಸಾಕ್ಷಿಹೇಳುತ್ತಿದ್ದರು.” (ಅ. ಕಾ. 16:1-5) ಆ ಸಮಯದಲ್ಲೇ ಪೌಲನು ತಿಮೊಥೆಯನನ್ನು ತನ್ನೊಂದಿಗೆ ಮಿಷನೆರಿ ಸಂಚಾರಕ್ಕಾಗಿ ಕರೆದುಕೊಂಡು ಹೋದನು. ತಿಮೊಥೆಯನು ಮಾಡುತ್ತಿದ್ದ ಪ್ರಗತಿಯನ್ನು ಕೆಲವು ತಿಂಗಳು ನೋಡಿ, ಪೌಲನು ಅವನನ್ನು ಥೆಸಲೊನೀಕದಲ್ಲಿದ್ದ ಕ್ರೈಸ್ತರನ್ನು ಸಂತೈಸಲು ಮತ್ತು ಬಲಪಡಿಸಲು ಆ ಪಟ್ಟಣಕ್ಕೆ ಕಳುಹಿಸಿದನು. (1 ಥೆಸಲೊನೀಕ 3:1-3, 6 ಓದಿ.) ಹೌದು, ತಿಮೊಥೆಯನು ಯುವ ಪ್ರಾಯದಲ್ಲಿ ತನ್ನ ಅಭಿವೃದ್ಧಿಯನ್ನು ಇತರರಿಗೆ ಪ್ರಕಟಪಡಿಸಲು ಆರಂಭಿಸಿದನು.

6 ಸಭೆಯಲ್ಲಿರುವ ಯುವ ಜನರೇ, ಅವಶ್ಯವಿರುವ ಆಧ್ಯಾತ್ಮಿಕ ಗುಣಗಳನ್ನು ಈಗಲೇ ಬೆಳೆಸಿಕೊಳ್ಳಲು ಶ್ರಮಿಸಿ. ಹೀಗೆ ಕ್ರೈಸ್ತ ಜೀವನದಲ್ಲಿ ನೀವು ಮಾಡುತ್ತಿರುವ ಅಭಿವೃದ್ಧಿ ಮತ್ತು ಬೈಬಲ್‌ ಸತ್ಯಗಳನ್ನು ಬೋಧಿಸುವ ನಿಮ್ಮ ಸಾಮರ್ಥ್ಯವು ಸ್ಪಷ್ಟವಾಗಿ ತೋರಿಬರುವುದು. ಯೇಸು 12ರ ಪ್ರಾಯದಿಂದಲೇ ‘ವಿವೇಕದಲ್ಲಿ ಪ್ರಗತಿಹೊಂದುತ್ತಾ ಹೋದನು.’ (ಲೂಕ 2:52) ಆದ್ದರಿಂದ ಜೀವನದ ಈ ಮೂರು ಕ್ಷೇತ್ರಗಳಲ್ಲಿ ಅಂದರೆ, (1) ಕಷ್ಟಗಳನ್ನು ಎದುರಿಸುವಾಗ, (2) ಮದುವೆಯಾಗಲು ಸಿದ್ಧತೆಗಳನ್ನು ಮಾಡುವಾಗ, (3) ‘ಒಳ್ಳೇ ಶುಶ್ರೂಷಕರಾಗಲು’ ಪ್ರಯತ್ನಿಸುವಾಗ ನಿಮ್ಮ ಅಭಿವೃದ್ಧಿಯನ್ನು ಹೇಗೆ ಪ್ರಕಟಪಡಿಸಬಹುದೆಂಬುದನ್ನು ಈಗ ಪರಿಗಣಿಸೋಣ.—1 ತಿಮೊ. 4:6.

ಸ್ವಸ್ಥಬುದ್ಧಿ”ಯಿಂದ ಸಮಸ್ಯೆಗಳನ್ನು ನಿಭಾಯಿಸಿ

7. ಒತ್ತಡಭರಿತ ಸನ್ನಿವೇಶಗಳು ಯುವ ಜನರ ಮೇಲೆ ಯಾವ ಪ್ರಭಾವಬೀರಬಲ್ಲವು?

7 ಕ್ಯಾರಲ್‌ ಎಂಬ ಹೆಸರಿನ 17 ವರ್ಷದ ಕ್ರೈಸ್ತ ಯುವತಿ ಹೇಳುವುದು: “ಕೆಲವೊಮ್ಮೆ ನಾನು ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಎಷ್ಟು ದುರ್ಬಲಳಾಗುತ್ತೇನೆಂದರೆ, ಬೆಳಗ್ಗೆ ಏಳಲೂ ನನಗೆ ಮನಸ್ಸಾಗುವುದಿಲ್ಲ.” * ಅವಳ ಮನೋವೇದನೆಗೆ ಕಾರಣವೇನು? ಆಕೆ ಹತ್ತು ವರ್ಷದವಳಾಗಿದ್ದಾಗ, ಹೆತ್ತವರ ವಿಚ್ಛೇದದಿಂದಾಗಿ ಆಕೆಯ ಕುಟುಂಬ ಛಿದ್ರವಾಯಿತು. ಆದ್ದರಿಂದ, ಬೈಬಲಿನ ನೈತಿಕ ಮಟ್ಟಗಳನ್ನು ತಿರಸ್ಕರಿಸುತ್ತಿದ್ದ ತನ್ನ ತಾಯಿಯೊಂದಿಗೆ ಕ್ಯಾರಲ್‌ ಜೀವಿಸಬೇಕಾಯಿತು. ಕ್ಯಾರಲ್‌ಳಂತೆ ನೀವು ಸಹ, ಎಂದೂ ಬದಲಾಗದಂತೆ ತೋರುವ ಒತ್ತಡಭರಿತ ಸನ್ನಿವೇಶದಲ್ಲಿರಬಹುದು.

8. ಯಾವ ಸಮಸ್ಯೆಗಳೊಂದಿಗೆ ತಿಮೊಥೆಯನು ಹೋರಾಡಿದನು?

8 ಆಧ್ಯಾತ್ಮಿಕ ಪ್ರಗತಿ ಮಾಡುವಾಗ ತಿಮೊಥೆಯನು ಸಹ ಪ್ರತಿಕೂಲ ಸನ್ನಿವೇಶಗಳೊಂದಿಗೆ ಹೋರಾಡಿದನು. ಉದಾಹರಣೆಗೆ, ಅವನಿಗೆ ಹೊಟ್ಟೆಯ ಸಮಸ್ಯೆಯಿಂದಾಗಿ ‘ಆಗಾಗ ಅಸ್ವಸ್ಥತೆ ಉಂಟಾಗುತ್ತಿತ್ತು.’ (1 ತಿಮೊ. 5:23) ಅವನು ನಾಚಿಕೆ ಅಥವಾ ಅಂಜುವ ಸ್ವಭಾವದವನೂ ಆಗಿದ್ದನೆಂದು ತೋರುತ್ತದೆ. ಆದ್ದರಿಂದಲೇ ಪೌಲನು, ಕೊರಿಂಥದಲ್ಲಿದ್ದ ಕೆಲವರು ಅಪೊಸ್ತಲನಾಗಿ ತನಗಿರುವ ಅಧಿಕಾರವನ್ನು ಪ್ರಶ್ನಿಸಿ ಎಬ್ಬಿಸಿದ ಸಮಸ್ಯೆಗಳನ್ನು ನಿರ್ವಹಿಸಲಿಕ್ಕಾಗಿ ತಿಮೊಥೆಯನನ್ನು ಅಲ್ಲಿಗೆ ಕಳುಹಿಸಿದಾಗ, ತಿಮೊಥೆಯನು ಆ ಸಭೆಯವರ ಮಧ್ಯೆ “ಭಯವಿಲ್ಲದೆ” ಇರುವಂತೆ ಅವನೊಂದಿಗೆ ಸಹಕರಿಸಲು ಅವರನ್ನು ಕೇಳಿಕೊಂಡನು.—1 ಕೊರಿಂ. 4:17; 16:10, 11.

9. ಸ್ವಸ್ಥಬುದ್ಧಿ ಎಂದರೇನು, ಮತ್ತು ಹೇಡಿತನದ ಮನೋವೃತ್ತಿಗಿಂತ ಅದು ಹೇಗೆ ಭಿನ್ನವಾಗಿದೆ?

9 ತಿಮೊಥೆಯನಿಗೆ ಸಹಾಯ ಮಾಡಲು ಪೌಲನು ಸಮಯಾನಂತರ ಅವನಿಗೆ ನೆನಪಿಸಿದ್ದು: “ದೇವರು ನಮಗೆ ಹೇಡಿತನದ ಮನೋವೃತ್ತಿಯನ್ನು ಕೊಡದೆ ಶಕ್ತಿ, ಪ್ರೀತಿ ಮತ್ತು ಸ್ವಸ್ಥಬುದ್ಧಿಯ ಮನೋವೃತ್ತಿಯನ್ನು ಕೊಟ್ಟಿದ್ದಾನೆ.” (2 ತಿಮೊ. 1:7) “ಸ್ವಸ್ಥಬುದ್ಧಿ”ಯನ್ನು ಹೊಂದಿರುವುದರ ಅರ್ಥ ವಿವೇಚನೆಯಿಂದ ಯೋಚಿಸಲು ಮತ್ತು ತರ್ಕಿಸಲು ಶಕ್ತರಾಗಿರುವುದಾಗಿದೆ. ಇದರಲ್ಲಿ, ಎಲ್ಲವನ್ನು ಅಂದರೆ ಸನ್ನಿವೇಶ ನಿಮಗೆ ಇಷ್ಟವಾಗಲಿ ಇಲ್ಲದಿರಲಿ ಅದನ್ನು ಎದುರಿಸುವ ಸಾಮರ್ಥ್ಯವು ಒಳಗೂಡಿದೆ. ಕೆಲವು ಅಪ್ರೌಢ ಯುವ ಜನರು ಹೇಡಿತನದ ಮನೋವೃತ್ತಿಯನ್ನು ತೋರಿಸುತ್ತಾ, ಅತಿಯಾದ ನಿದ್ದೆ, ವಿಪರೀತ ಟಿ.ವಿ. ವೀಕ್ಷಣೆ, ಮಾದಕ ವಸ್ತು ಇಲ್ಲವೇ ಅಮಲೌಷಧಗಳ ದುರುಪಯೋಗ, ಯಾವಾಗಲೂ ಪಾರ್ಟಿಗಳಿಗೆ ಹೋಗುವ ಅಥವಾ ಲೈಂಗಿಕ ಅನೈತಿಕತೆಯಲ್ಲಿ ತೊಡಗುವ ಮೂಲಕ ಕಷ್ಟಕರ ಸನ್ನಿವೇಶಗಳ ಒತ್ತಡವನ್ನು ದೂರಮಾಡಲು ಪ್ರಯತ್ನಿಸುತ್ತಾರೆ. ಕ್ರೈಸ್ತರನ್ನಾದರೋ, “ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ ವಿಸರ್ಜಿಸಿ ಈ ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಸ್ವಸ್ಥಬುದ್ಧಿಯಿಂದಲೂ ನೀತಿಯಿಂದಲೂ ದೇವಭಕ್ತಿಯಿಂದಲೂ ಜೀವಿಸುವಂತೆ” ಉತ್ತೇಜಿಸಲಾಗಿದೆ.—ತೀತ 2:12.

10, 11. ಸ್ವಸ್ಥಬುದ್ಧಿಯು ನಮಗೆ ಆಧ್ಯಾತ್ಮಿಕ ಬಲವನ್ನು ಪಡೆದುಕೊಳ್ಳಲು ಹೇಗೆ ಸಹಾಯ ಮಾಡುವುದು?

10 “ಸ್ವಸ್ಥಮನಸ್ಸುಳ್ಳವರಾಗಿರುವಂತೆ ಯುವ ಪುರುಷರಿಗೆ” ಬೈಬಲ್‌ ಬುದ್ಧಿಹೇಳುತ್ತದೆ. (ತೀತ 2:6) ಈ ಸಲಹೆಯನ್ನು ಪಾಲಿಸುವುದರ ಅರ್ಥ, ನೀವು ಸಮಸ್ಯೆಗಳನ್ನು ಪ್ರಾರ್ಥನಾಪೂರ್ವಕವಾಗಿ ಎದುರಿಸುವಿರಿ ಮತ್ತು ದೇವದತ್ತ ಬಲದ ಮೇಲೆ ಅವಲಂಬಿಸುವಿರಿ ಎಂದಾಗಿದೆ. (1 ಪೇತ್ರ 4:7 ಓದಿ.) ಹೀಗೆ ಮಾಡುವುದರಿಂದ, “ದೇವರು ಒದಗಿಸುವ ಶಕ್ತಿಯ ಮೇಲೆ” ನಿಮ್ಮ ಹೃತ್ಪೂರ್ವಕ ಭರವಸೆ ಬೆಳೆಯುವುದು.—1 ಪೇತ್ರ 4:11.

11 ಕ್ಯಾರಲ್‌ಗೆ ಸ್ವಸ್ಥಬುದ್ಧಿ ಮತ್ತು ಪ್ರಾರ್ಥನೆಯು ಸಹಾಯ ಮಾಡಿತು. ಆಕೆ ಹೇಳುವುದು: “ನನ್ನ ತಾಯಿಯ ಅನೈತಿಕ ಜೀವನಶೈಲಿಯ ವಿರುದ್ಧ ನಿಲುವನ್ನು ತೆಗೆದುಕೊಂಡಿದ್ದು ನಾನು ಈವರೆಗೆ ಮಾಡಿದ ಸಂಗತಿಗಳಲ್ಲಿ ಅತ್ಯಂತ ಕಠಿನವಾದದ್ದಾಗಿತ್ತು. ಆದರೆ ಪ್ರಾರ್ಥನೆ ಸಹಾಯ ಮಾಡಿತು. ಯೆಹೋವನು ನನ್ನೊಂದಿಗಿದ್ದಾನೆಂದು ನನಗೆ ಗೊತ್ತಿರುವುದರಿಂದ ನನಗೀಗ ಹೆದರಿಕೆಯಿಲ್ಲ.” ಕಷ್ಟಗಳು ನಿಮ್ಮನ್ನು ಪರಿಷ್ಕರಿಸಬಲ್ಲವು ಮತ್ತು ಬಲಪಡಿಸಬಲ್ಲವು ಎಂಬುದನ್ನು ನೆನಪಿಡಿ. (ಕೀರ್ತ. 105:17-19; ಪ್ರಲಾ. 3:27) ನೀವು ಏನೇ ಅನುಭವಿಸಲಿ ದೇವರೆಂದೂ ನಿಮ್ಮ ಕೈಬಿಡನು. ಆತನು ಖಂಡಿತ ‘ನಿಮಗೆ ಸಹಾಯಕೊಡುವನು.’—ಯೆಶಾ. 41:10.

ಯಶಸ್ವಿ ವಿವಾಹಕ್ಕೆ ಸಿದ್ಧತೆ

12. ವಿವಾಹವಾಗಲು ಬಯಸುವ ಕ್ರೈಸ್ತನೊಬ್ಬನು ಜ್ಞಾನೋಕ್ತಿ 20:25ರಲ್ಲಿರುವ ಮೂಲತತ್ತ್ವವನ್ನು ಏಕೆ ಪರಿಗಣಿಸಬೇಕು?

12 ಅಸಂತೋಷ, ಒಂಟಿತನ, ಬೇಸರ ಮತ್ತು ಮನೆಯಲ್ಲಿರುವ ಸಮಸ್ಯೆಗಳಿಗೆ ಮದುವೆಯೇ ಪರಿಹಾರ ಎಂಬುದಾಗಿ ಯೋಚಿಸುತ್ತಾ ಕೆಲವು ಯುವ ಜನರು ಚಿಕ್ಕ ಪ್ರಾಯದಲ್ಲೇ ಮದುವೆಯಾಗಿದ್ದಾರೆ. ಆದರೆ ವಿವಾಹದ ಪ್ರತಿಜ್ಞೆಗಳು ಗಂಭೀರವಾದ ವಿಷಯವಾಗಿವೆ. ಬೈಬಲ್‌ ಸಮಯಗಳಲ್ಲಿ ಕೆಲವರು ಪವಿತ್ರ ಹರಕೆ ಅಥವಾ ಪ್ರತಿಜ್ಞೆಯಲ್ಲಿ ಏನು ಒಳಗೂಡಿದೆ ಎಂಬುದನ್ನು ಯೋಚಿಸದೇ ದುಡುಕಿ ಅವುಗಳನ್ನು ಮಾಡುತ್ತಿದ್ದರು. (ಜ್ಞಾನೋಕ್ತಿ 20:25 ಓದಿ.) ವಿವಾಹವಾಗುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ಕೆಲವು ಯುವ ಜನರು ಗಂಭೀರವಾಗಿ ಯೋಚಿಸುವುದಿಲ್ಲ. ಆದರೆ, ತಾವು ಎಣಿಸಿದ್ದಕ್ಕಿಂತ ಹೆಚ್ಚಿನದ್ದು ಅದರಲ್ಲಿ ಸೇರಿದೆ ಎಂಬುದು ಮದುವೆಯಾದ ಬಳಿಕವೇ ಅವರಿಗೆ ಗೊತ್ತಾಗುತ್ತದೆ.

13. ಮದುವೆಯಾಗಬೇಕೆಂದಿರುವವರು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು, ಮತ್ತು ಅವರಿಗೆ ಯಾವ ಸಹಾಯಕರ ಸಲಹೆ ಲಭ್ಯವಿದೆ?

13 ಆದ್ದರಿಂದ ನೀವು ಒಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಬೇಕೆಂದಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ನಾನೇಕೆ ಮದುವೆಯಾಗಲು ಬಯಸುತ್ತೇನೆ? ಮದುವೆಯ ಬಗ್ಗೆ ನನ್ನ ನಿರೀಕ್ಷಣೆಗಳೇನು? ಈ ವ್ಯಕ್ತಿ ನನಗೆ ಸರಿಯಾದ ಜೋಡಿಯೋ? ವಿವಾಹದ ಬಳಿಕ ಬರುವ ಜವಾಬ್ದಾರಿಗಳನ್ನು ಹೊರಲು ನಾನು ನಿಜವಾಗಿ ಸಿದ್ಧನಾಗಿದ್ದೇನೋ?’ ಈ ವಿಷಯವನ್ನು ಆಳವಾಗಿ ಪರಿಶೋಧಿಸಲಿಕ್ಕಾಗಿ ನಿಮಗೆ ಸಹಾಯ ಮಾಡಲು, “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಸವಿಸ್ತಾರವಾದ ಲೇಖನಗಳನ್ನು ಪ್ರಕಾಶಿಸಿದೆ. * (ಮತ್ತಾ. 24:45-47) ಅಂಥ ಮಾಹಿತಿಯನ್ನು ಯೆಹೋವನು ನಿಮಗೆ ಕೊಡುವ ಸಲಹೆಯಾಗಿ ಪರಿಗಣಿಸಿ. ಅಲ್ಲಿರುವ ವಿಷಯಗಳನ್ನು ಜಾಗರೂಕತೆಯಿಂದ ವಿಶ್ಲೇಷಿಸಿ ಅದನ್ನು ಅನ್ವಯಿಸಿಕೊಳ್ಳಿ. “ವಿವೇಕಹೀನರಾಗಿ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ” ಎಂದೂ ಆಗಬೇಡಿರಿ. (ಕೀರ್ತ. 32:8, 9) ವಿವಾಹಜೀವನ ಏನನ್ನು ಕೇಳಿಕೊಳ್ಳುತ್ತದೋ ಅದರ ಕುರಿತ ತಿಳಿವಳಿಕೆಯಲ್ಲಿ ಪೂರ್ಣವಾಗಿ ಬೆಳೆದವರಾಗಿರಿ. ಒಂದುವೇಳೆ ನೀವು ಆ ವ್ಯಕ್ತಿಯನ್ನು ಮದುವೆಯಾಗಲು ಅರ್ಹರೆಂದು ನಿಮಗನಿಸುವಲ್ಲಿ ನಿಮ್ಮ ಮದುವೆಯ ಮುಂಚಿನ ಭೇಟಿಗಳಲ್ಲಿ (ಕೋರ್ಟ್‌ಷಿಪ್‌) ಯಾವಾಗಲೂ ‘ನೈತಿಕ ಶುದ್ಧತೆಯಲ್ಲಿ ಮಾದರಿಯಾಗಿರಲು’ ಮರೆಯದಿರಿ.—1 ತಿಮೊ. 4:12.

14. ಆಧ್ಯಾತ್ಮಿಕ ಅಭಿವೃದ್ಧಿಯು ನೀವು ಮದುವೆಯಾಗುವಾಗ ಹೇಗೆ ಸಹಾಯ ಮಾಡಬಲ್ಲದು?

14 ಆಧ್ಯಾತ್ಮಿಕ ಪ್ರೌಢತೆ ಮದುವೆಯ ನಂತರವೂ ಯಶಸ್ಸನ್ನು ತರುತ್ತದೆ. ಪ್ರೌಢ ಕ್ರೈಸ್ತನೊಬ್ಬನು, “ಕ್ರಿಸ್ತನ ಸಂಪೂರ್ಣತೆಗೆ ಸೇರಿರುವ ಪರಿಪಕ್ವತೆಯ ಪ್ರಮಾಣವನ್ನು” ಮುಟ್ಟಲು ಶ್ರಮಿಸುತ್ತಾನೆ. (ಎಫೆ. 4:11-14) ಕ್ರಿಸ್ತಸದೃಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಅವನು ಕಷ್ಟಪಡುತ್ತಾನೆ. ನಮ್ಮ ಮಾದರಿಯಾದ “ಕ್ರಿಸ್ತನು ಸಹ ತನ್ನನ್ನು ತಾನೇ ಮೆಚ್ಚಿಸಿಕೊಳ್ಳಲಿಲ್ಲ.” (ರೋಮ. 15:3) ವಿವಾಹಿತ ವ್ಯಕ್ತಿಯೊಬ್ಬನು ತನ್ನ ಹಿತವನ್ನು ಮಾತ್ರವಲ್ಲ ತನ್ನ ಸಂಗಾತಿಯ ಹಿತವನ್ನೂ ಚಿಂತಿಸುವಾಗ ಆ ದಂಪತಿಯ ಕುಟುಂಬ ಜೀವನ ಶಾಂತಿ ಸಮೃದ್ಧಿಯಿಂದ ತುಂಬಿರುವುದು. (1 ಕೊರಿಂ. 10:24) ಗಂಡನು ಸ್ವತ್ಯಾಗದ ಪ್ರೀತಿ ತೋರಿಸುವನು ಮತ್ತು ಯೇಸು ತನ್ನ ಶಿರಸ್ಸಿಗೆ ಅಧೀನನಾಗಿರುವಂತೆಯೇ ಹೆಂಡತಿ ತನ್ನ ಗಂಡನಿಗೆ ದೃಢಮನಸ್ಸಿನಿಂದ ಅಧೀನತೆ ತೋರಿಸುವಳು.—1 ಕೊರಿಂ. 11:3; ಎಫೆ. 5:25.

“ನಿನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು”

15, 16. ಶುಶ್ರೂಷೆಯಲ್ಲಿ ನಿಮ್ಮ ಅಭಿವೃದ್ಧಿ ಪ್ರಕಟವಾಗಬೇಕಾದರೆ ನೀವೇನು ಮಾಡಬೇಕು?

15 ತಿಮೊಥೆಯನ ಪ್ರಮುಖ ನೇಮಕದ ಕಡೆಗೆ ಗಮನಹರಿಸುತ್ತಾ ಪೌಲನು ಬರೆದದ್ದು: ‘ದೇವರ ಮುಂದೆಯೂ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಗಂಭೀರವಾಗಿ ಆಜ್ಞಾಪಿಸುವುದೇನೆಂದರೆ, ವಾಕ್ಯವನ್ನು ಸಾರು; ತುರ್ತಿನಿಂದ ಅದರಲ್ಲಿ ತಲ್ಲೀನನಾಗಿರು.’ ಅವನು ಕೂಡಿಸಿ ಹೇಳಿದ್ದು: “ಸೌವಾರ್ತಿಕನ ಕೆಲಸವನ್ನು ಮಾಡು, ನಿನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು.” (2 ತಿಮೊ. 4:1, 2, 5) ಈ ನೇಮಕವನ್ನು ಪೂರೈಸಲು ತಿಮೊಥೆಯನು, ‘ನಂಬಿಕೆಯ ವಾಕ್ಯಗಳಿಂದ ಪೋಷಿಸಲ್ಪಡಬೇಕಿತ್ತು.’—1 ತಿಮೊಥೆಯ 4:6 ಓದಿ.

16 ನೀವು ಹೇಗೆ ‘ನಂಬಿಕೆಯ ವಾಕ್ಯಗಳಿಂದ ಪೋಷಿಸಲ್ಪಡಬಹುದು’? ಪೌಲನು ಬರೆದದ್ದು: “ಸಾರ್ವಜನಿಕ ವಾಚನದಲ್ಲಿಯೂ ಬುದ್ಧಿಹೇಳುವುದರಲ್ಲಿಯೂ ಬೋಧಿಸುವುದರಲ್ಲಿಯೂ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು. ಈ ಸಂಗತಿಗಳ ಕುರಿತು ಪರ್ಯಾಲೋಚಿಸು; ಅವುಗಳಲ್ಲಿ ಮಗ್ನನಾಗಿರು.” (1 ತಿಮೊ. 4:13, 15) ಅಭಿವೃದ್ಧಿ ಮಾಡಲು ಶ್ರದ್ಧಾಪೂರ್ವಕ ವೈಯಕ್ತಿಕ ಅಧ್ಯಯನ ಅಗತ್ಯ. “ಮಗ್ನನಾಗಿರು” ಎಂಬ ಅಭಿವ್ಯಕ್ತಿಯು ಒಂದು ಕೆಲಸದಲ್ಲಿ ತಲ್ಲೀನರಾಗಿರುವುದನ್ನು ಸೂಚಿಸುತ್ತದೆ. ನಿಮ್ಮ ಅಧ್ಯಯನ ರೂಢಿಗಳು ಹೇಗಿವೆ? “ದೇವರ ಅಗಾಧವಾದ ವಿಷಯ”ಗಳಲ್ಲಿ ನೀವು ಮಗ್ನರಾಗಿದ್ದೀರೋ? (1 ಕೊರಿಂ. 2:10) ಅಥವಾ ನೀವು ಅಧ್ಯಯನ ಮಾಡುವಾಗ ಅತಿ ಕಡಿಮೆ ಪ್ರಯತ್ನ ಹಾಕುತ್ತೀರೊ? ಅಧ್ಯಯನ ಮಾಡಿದ ವಿಷಯಗಳ ಬಗ್ಗೆ ಪರ್ಯಾಲೋಚಿಸುವುದು ನಿಮ್ಮ ಹೃದಯವನ್ನು ಪ್ರಚೋದಿಸುವುದು.—ಜ್ಞಾನೋಕ್ತಿ 2:1-5 ಓದಿ.

17, 18. (ಎ) ನೀವು ಯಾವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಶ್ರಮಿಸಬೇಕು? (ಬಿ) ತಿಮೊಥೆಯನಲ್ಲಿದ್ದ ಮನೋಭಾವವನ್ನು ಬೆಳೆಸಿಕೊಳ್ಳುವುದು ಶುಶ್ರೂಷೆಯಲ್ಲಿ ನಿಮಗೆ ಹೇಗೆ ಸಹಾಯ ಮಾಡುವುದು?

17 ಯುವ ಪಯನೀಯರಳಾದ ಮೆಷಲ್‌ ಎಂಬಾಕೆ ಹೇಳುವುದು: “ಶುಶ್ರೂಷೆಯಲ್ಲಿ ನಿಜವಾಗಿ ಪರಿಣಾಮಕಾರಿಯಾಗಿರಲು ವೈಯಕ್ತಿಕ ಅಧ್ಯಯನಕ್ಕಾಗಿ ಒಳ್ಳೇ ಶೆಡ್ಯೂಲನ್ನು ಇಟ್ಟುಕೊಂಡಿದ್ದೇನೆ ಮತ್ತು ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತೇನೆ. ಇದರಿಂದಾಗಿ ನಾನು ಯಾವಾಗಲೂ ಆಧ್ಯಾತ್ಮಿಕವಾಗಿ ಬೆಳೆಯುತ್ತಿದ್ದೇನೆ.” ಪಯನೀಯರರಾಗಿ ಸೇವೆ ಸಲ್ಲಿಸುವುದರಿಂದ ಶುಶ್ರೂಷೆಯಲ್ಲಿ ಬೈಬಲನ್ನು ಉಪಯೋಗಿಸುವ ನಿಮ್ಮ ಕೌಶಲ ಹೆಚ್ಚುವುದು ಮತ್ತು ಆಧ್ಯಾತ್ಮಿಕ ಅಭಿವೃದ್ಧಿ ಮಾಡಲು ಸಹಾಯ ಸಿಗುವುದು. ಉತ್ತಮ ಓದುಗರಾಗಿರಲು ಮತ್ತು ಕೂಟಗಳಲ್ಲಿ ಅರ್ಥಭರಿತ ಹೇಳಿಕೆಗಳನ್ನು ಕೊಡಲು ಪ್ರಯತ್ನಿಸಿ. ಆಧ್ಯಾತ್ಮಿಕವಾಗಿ ಪ್ರೌಢರಾದ ಯುವ ವ್ಯಕ್ತಿಯೋಪಾದಿ ನೀವು, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿ ತಯಾರಿಸುವ ವಿದ್ಯಾರ್ಥಿ ಭಾಷಣಗಳು ನೇಮಿತ ವಿಷಯವಸ್ತುವಿಗೆ ಅಂಟಿಕೊಂಡು ಬೋಧಪ್ರದವಾಗಿರಬೇಕು.

18 ‘ಸೌವಾರ್ತಿಕನ ಕೆಲಸವನ್ನು ಮಾಡುವುದರ’ ಅರ್ಥ, ನಿಮ್ಮ ಶುಶ್ರೂಷೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿಸುವುದು ಮತ್ತು ರಕ್ಷಣೆ ಪಡೆಯಲು ಇತರರಿಗೆ ಸಹಾಯ ಮಾಡುವುದಾಗಿದೆ. ಇದಕ್ಕಾಗಿ ನಾವು “ಬೋಧಿಸುವ ಕಲೆ”ಯನ್ನು ಅಭಿವೃದ್ಧಿಪಡಿಸಬೇಕು. (2 ತಿಮೊ. 4:2) ತಿಮೊಥೆಯನು ಪೌಲನೊಂದಿಗೆ ಕೆಲಸಮಾಡುವಾಗ ಕಲಿತಂತೆ, ಹೆಚ್ಚು ಅನುಭವ ಪಡೆದವರೊಂದಿಗೆ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವರ ಬೋಧನಾ ವಿಧಾನಗಳನ್ನು ನೀವು ಕಲಿಯಬಹುದು. (1 ಕೊರಿಂ. 4:17) ಪೌಲನು ಸುವಾರ್ತೆಯನ್ನು ಇತರರಿಗೆ ತಿಳಿಸಿದ್ದು ಮಾತ್ರವಲ್ಲ ಅವರಿಗೆ ‘ಸ್ವಂತ ಪ್ರಾಣವನ್ನೂ’ ಕೊಟ್ಟನು ಅಂದರೆ ಅವರಿಗೆ ಸಹಾಯಮಾಡಲು ತನ್ನ ಬದುಕನ್ನೇ ಮುಡಿಪಾಗಿಟ್ಟನು ಏಕೆಂದರೆ ಅವರು ಅವನಿಗೆ ಅತಿ ಪ್ರಿಯರಾಗಿದ್ದರು. (1 ಥೆಸ. 2:8) ಶುಶ್ರೂಷೆಯಲ್ಲಿ ಪೌಲನ ಮಾದರಿಯನ್ನು ನೀವು ಅನುಸರಿಸಬೇಕಾದರೆ ನಿಮ್ಮಲ್ಲೂ ತಿಮೊಥೆಯನಲ್ಲಿದ್ದ ಮನೋಭಾವವಿರಬೇಕು. ಅವನು ಇತರರ ಕಡೆಗೆ ಯಥಾರ್ಥ ಆಸಕ್ತಿವಹಿಸಿದನು ಮತ್ತು “ಸುವಾರ್ತೆಯ ಅಭಿವೃದ್ಧಿಗಾಗಿ ಕಷ್ಟಪಟ್ಟು ಕೆಲಸಮಾಡಿದನು.” (ಫಿಲಿಪ್ಪಿ 2:19-23 ಓದಿ.) ಶುಶ್ರೂಷೆಯಲ್ಲಿ ನೀವೂ ಇಂಥ ಸ್ವತ್ಯಾಗದ ಮನೋಭಾವ ತೋರಿಸುತ್ತೀರೋ?

ಅಭಿವೃದ್ಧಿ ನಿಜ ಸಂತೃಪ್ತಿ ತರುತ್ತದೆ

19, 20. ಆಧ್ಯಾತ್ಮಿಕ ಅಭಿವೃದ್ಧಿ ಮಾಡುವುದು ಏಕೆ ಆನಂದ ತರುತ್ತದೆ?

19 ಆಧ್ಯಾತ್ಮಿಕ ಪ್ರಗತಿ ಮಾಡಲು ಶ್ರಮಪಡಬೇಕು. ಆದರೆ ನಿಮ್ಮ ಬೋಧಿಸುವ ಕೌಶಲಗಳನ್ನು ತಾಳ್ಮೆಯಿಂದ ಬೆಳೆಸುವ ಮೂಲಕ ಕ್ರಮೇಣ ನಿಮಗೆ ಆಧ್ಯಾತ್ಮಿಕವಾಗಿ “ಅನೇಕರನ್ನು ಐಶ್ವರ್ಯವಂತರಾಗಿ ಮಾಡುವ” ಸುಯೋಗವಿರುವುದು ಮತ್ತು ಅವರು ನಿಮ್ಮ “ಆನಂದ” ಆಗುವರು ಅಥವಾ “ಹರ್ಷದ ಕಿರೀಟ”ವಾಗುವರು. (2 ಕೊರಿಂ. 6:10; 1 ಥೆಸ. 2:19) ಪೂರ್ಣಸಮಯದ ಶುಶ್ರೂಷಕನಾಗಿರುವ ಫ್ರೆಡ್‌ ತಿಳಿಸುವುದು: “ಈಗ ಇತರರಿಗೆ ಸಹಾಯ ಮಾಡುವುದರಲ್ಲಿ ನನ್ನ ಹೆಚ್ಚಿನ ಸಮಯವನ್ನು ಉಪಯೋಗಿಸುತ್ತಿದ್ದೇನೆ. ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ ಎಂಬ ಮಾತು ನೂರಕ್ಕೆ ನೂರು ಸತ್ಯ.”

20 ಯುವ ಪಯನೀಯರಳಾದ ಡ್ಯಾಫ್ನಿ ಆಧ್ಯಾತ್ಮಿಕವಾಗಿ ಬೆಳೆಯುವುದರ ಆನಂದ ಮತ್ತು ಸಂತೃಪ್ತಿಯ ಕುರಿತು ತಿಳಿಸಿದ್ದು: “ನಾನು ಯೆಹೋವನ ಕುರಿತು ಹೆಚ್ಚೆಚ್ಚು ಕಲಿತಂತೆ ಆತನೊಂದಿಗೆ ಹತ್ತಿರದ ಸಂಬಂಧ ಬೆಳೆಸಿಕೊಂಡೆ. ಪೂರ್ಣ ಸಾಮರ್ಥ್ಯದಿಂದ ಯೆಹೋವನನ್ನು ಸ್ತುತಿಸುವಾಗ ಹಿತವೆನಿಸುತ್ತದೆ ಮತ್ತು ನಿಜ ಸಂತೃಪ್ತಿಯ ಅನುಭವವಾಗುತ್ತದೆ.” ಆಧ್ಯಾತ್ಮಿಕ ಪ್ರಗತಿಯು ಯಾವಾಗಲೂ ಮಾನವರ ಕಣ್ಣಿಗೆ ಬೀಳಲಿಕ್ಕಿಲ್ಲ. ಆದರೆ ಯೆಹೋವನದನ್ನು ಯಾವಾಗಲೂ ನೋಡುತ್ತಾನೆ ಮತ್ತು ಅಮೂಲ್ಯವೆಂದೆಣಿಸುತ್ತಾನೆ. (ಇಬ್ರಿ. 4:13) ಯುವ ಕ್ರೈಸ್ತರಾದ ನೀವು ಸ್ವರ್ಗೀಯ ತಂದೆಗೆ ನಿಜವಾಗಿಯೂ ಘನತೆ ಮತ್ತು ಸ್ತುತಿಯನ್ನು ತರಬಲ್ಲಿರಿ. ನೀವು ಯಥಾರ್ಥವಾಗಿ ಅಭಿವೃದ್ಧಿ ಮಾಡುತ್ತಾ ಅದನ್ನು ಪ್ರಕಟಪಡಿಸುವಾಗ ಆತನ ಹೃದಯವನ್ನು ಸಂತೋಷಪಡಿಸುತ್ತೀರಿ.—ಜ್ಞಾನೋ. 27:11.

[ಪಾದಟಿಪ್ಪಣಿಗಳು]

^ ಪ್ಯಾರ. 7 ಕೆಲವೊಂದು ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 13 ಎಚ್ಚರ! 2007 ಜುಲೈ ಸಂಚಿಕೆಯಲ್ಲಿ, “ಈ ವ್ಯಕ್ತಿ ನನಗೆ ಸರಿಯಾದ ಜೋಡಿಯೋ?” ಎಂಬ ಲೇಖನ; ಕಾವಲಿನಬುರುಜು 2001 ಮೇ 15ರ ಸಂಚಿಕೆಯಲ್ಲಿ “ಒಬ್ಬ ವಿವಾಹ ಸಂಗಾತಿಯ ಆಯ್ಕೆಮಾಡಲು ದೈವಿಕ ಮಾರ್ಗದರ್ಶನ” ಎಂಬ ಲೇಖನ ಮತ್ತು ಎಚ್ಚರ! (ಇಂಗ್ಲಿಷ್‌) 1983 ಸಪ್ಟೆಂಬರ್‌ 22ರ ಸಂಚಿಕೆಯಲ್ಲಿ, “ಹದಿವಯಸ್ಸಿನಲ್ಲಿ ಮದುವೆಯಾಗುವುದು ಎಷ್ಟು ವಿವೇಕಯುತ?” ಎಂಬ ಲೇಖನ.

ನೀವೇನು ಕಲಿತಿರಿ?

• ಆಧ್ಯಾತ್ಮಿಕ ಅಭಿವೃದ್ಧಿ ಮಾಡುವುದರಲ್ಲಿ ಏನು ಸೇರಿದೆ?

• ಈ ಕೆಳಗಿನ ಸನ್ನಿವೇಶಗಳಲ್ಲಿ ನೀವು ಹೇಗೆ ನಿಮ್ಮ ಅಭಿವೃದ್ಧಿಯನ್ನು ಪ್ರಕಟಪಡಿಸಬಲ್ಲಿರಿ?

ಕಷ್ಟಗಳನ್ನು ಎದುರಿಸುವಾಗ

ಮದುವೆಯಾಗಲು ಸಿದ್ಧತೆಗಳನ್ನು ಮಾಡುವಾಗ

ಶುಶ್ರೂಷೆಯಲ್ಲಿ

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಕಷ್ಟಗಳನ್ನು ನಿಭಾಯಿಸಲು ಪ್ರಾರ್ಥನೆ ನಿಮಗೆ ಸಹಾಯ ಮಾಡಬಲ್ಲದು

[ಪುಟ 16ರಲ್ಲಿರುವ ಚಿತ್ರ]

ಯುವ ಪ್ರಚಾರಕರು ಪರಿಣಾಮಕಾರಿ ಬೋಧನಾ ವಿಧಾನಗಳನ್ನು ಹೇಗೆ ಬೆಳೆಸಿಕೊಳ್ಳಬಹುದು?