ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಂಡಂದಿರೇ, ಕ್ರಿಸ್ತನ ಪ್ರೀತಿಯನ್ನು ಅನುಕರಿಸಿರಿ!

ಗಂಡಂದಿರೇ, ಕ್ರಿಸ್ತನ ಪ್ರೀತಿಯನ್ನು ಅನುಕರಿಸಿರಿ!

ಗಂಡಂದಿರೇ, ಕ್ರಿಸ್ತನ ಪ್ರೀತಿಯನ್ನು ಅನುಕರಿಸಿರಿ!

ಯೇಸು ತನ್ನ ಭೂಜೀವಿತದ ಕೊನೆಯ ರಾತ್ರಿಯಂದು ತನ್ನ ನಂಬಿಗಸ್ತ ಅಪೊಸ್ತಲರಿಗೆ ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಅದೇನೆಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.” (ಯೋಹಾ. 13:34, 35) ಆದ್ದರಿಂದ ಸತ್ಯ ಕ್ರೈಸ್ತರು ಒಬ್ಬರನ್ನೊಬ್ಬರು ಪ್ರೀತಿಸಬೇಕು.

ಕ್ರಿಸ್ತನ ಹಿಂಬಾಲಕರಲ್ಲಿ ಗಂಡಂದಿರನ್ನು ಉದ್ದೇಶಿಸಿ ಅಪೊಸ್ತಲ ಪೌಲನು ಬರೆದದ್ದು: “ಗಂಡಂದಿರೇ, ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ.” (ಎಫೆ. 5:25) ಬೈಬಲಿನ ಈ ಬುದ್ಧಿವಾದವನ್ನು ಕ್ರೈಸ್ತ ಗಂಡನು ಹೇಗೆ ತನ್ನ ವಿವಾಹದಲ್ಲಿ ಪಾಲಿಸಬಹುದು, ಅದರಲ್ಲೂ ತನ್ನ ಹೆಂಡತಿ ಯೆಹೋವನ ಓರ್ವ ಸಮರ್ಪಿತ ಸೇವಕಿಯಾಗಿರುವಾಗ ಇದನ್ನು ಹೇಗೆ ಮಾಡಬಹುದು?

ಕ್ರಿಸ್ತನು ಸಭೆಯನ್ನು ಪೋಷಿಸಿದನು

“ಗಂಡಂದಿರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನಲ್ಲಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ; ಯಾವನೂ ಎಂದೂ ಸ್ವಶರೀರವನ್ನು ದ್ವೇಷಿಸಿದ್ದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ; ಕ್ರಿಸ್ತನು ಸಹ ಸಭೆಯನ್ನು ಪೋಷಿಸಿ ಸಂರಕ್ಷಿಸುತ್ತಾನೆ” ಎಂದು ಬೈಬಲ್‌ ತಿಳಿಸುತ್ತದೆ. (ಎಫೆ. 5:28, 29) ಯೇಸು ತನ್ನ ಶಿಷ್ಯರೆಡೆಗೆ ಅಕ್ಕರೆ ಒಲವು ಉಳ್ಳವನಾಗಿದ್ದು ಅವರನ್ನು ಪೋಷಿಸಿದನು. ಅಪರಿಪೂರ್ಣರಾಗಿದ್ದರೂ ಅವರೊಂದಿಗೆ ಕೋಮಲಭಾವ ಮತ್ತು ದಯೆಯಿಂದ ನಡೆದುಕೊಂಡನು. ‘ಸಭೆಯನ್ನು ಅದರ ವೈಭವದಲ್ಲಿ’ ತನ್ನೆದುರಿಗೆ ನಿಲ್ಲಿಸಿಕೊಳ್ಳಬೇಕೆಂದು ಯೇಸು ತನ್ನ ಶಿಷ್ಯರ ಒಳ್ಳೇ ಗುಣಗಳಿಗೆ ಹೆಚ್ಚು ಗಮನ ಕೊಟ್ಟನು.—ಎಫೆ. 5:27.

ಕ್ರಿಸ್ತನು ಸಭೆಗೆ ಪ್ರೀತಿ ತೋರಿಸಿದಂತೆಯೇ ಗಂಡನು ಹೆಂಡತಿಗೆ ತನ್ನ ನಡೆನುಡಿಯಲ್ಲಿ ಪ್ರೀತಿ ತೋರಿಸಬೇಕು. ಗಂಡನ ಪ್ರೀತಿಯ ಹೂಮಳೆಯಲ್ಲಿ ದಿನವೂ ಆನಂದಿಸುವ ಪತ್ನಿ ತಾನು ಪೋಷಿತಳು ಎಂಬ ಭಾವನೆ ಹೊಂದಿರುತ್ತಾಳೆ. ಆದರೆ ಮನೆಯಲ್ಲಿ ಸಕಲ ಸೌಕರ್ಯಗಳಿದ್ದೂ ಒಬ್ಬಾಕೆ ಹೆಣ್ಣು ತನ್ನ ಬಾಳ ಸಂಗಾತಿಯಿಂದ ನಿರ್ಲಕ್ಷ್ಯಕ್ಕೊಳಗಾದರೆ ಅವಳು ಅತೀವ ದುಃಖ ಅನುಭವಿಸುವಳು.

ತನ್ನ ಪತ್ನಿಯನ್ನು ಪ್ರೀತಿಸುತ್ತೇನೆಂದು ಗಂಡನೊಬ್ಬನು ಹೇಗೆ ತೋರಿಸಸಾಧ್ಯವಿದೆ? ಇತರರಿಗೆ ಪರಿಚಯಿಸುವಾಗ ಅವನು ಆಕೆಗೆ ಗೌರವ ಮರ್ಯಾದೆಯನ್ನು ಕೊಡುತ್ತಾನೆ. ಅಲ್ಲದೆ, ಆಕೆಯು ಕೊಡುವ ಬೆಂಬಲಕ್ಕಾಗಿ ಮನಸಾರೆ ಎಲ್ಲರ ಮುಂದೆ ಹೊಗಳುತ್ತಾನೆ. ತನ್ನ ಪತ್ನಿಯ ಮಹತ್ತರ ಪಾತ್ರದಿಂದಾಗಿ ಕುಟುಂಬವು ಯಾವುದಾದರೊಂದು ವಿಷಯದಲ್ಲಿ ಯಶಸ್ಸು ಪಡೆಯುವಾಗ ಅದನ್ನು ಇತರರ ಮುಂದೆ ಹೇಳಲು ಅವನು ಹಿಂದೆಮುಂದೆ ನೋಡುವುದಿಲ್ಲ. ಇಬ್ಬರೇ ಇರುವಾಗಲೂ ಆಕೆ ತನ್ನ ಗಂಡನ ಪ್ರೀತಿಯನ್ನು ಗ್ರಹಿಸುತ್ತಾಳೆ. ಒಂದು ಸ್ನೇಹಪೂರ್ಣ ಸ್ಪರ್ಶ, ಮುಗುಳ್ನಗೆ, ಅಪ್ಪುಗೆ ಮತ್ತು ಪ್ರಶಂಸೆಯ ಮಾತು ಅಷ್ಟೊಂದು ದೊಡ್ಡ ವಿಷಯಗಳೆಂಬಂತೆ ತೋರಲಿಕ್ಕಿಲ್ಲ. ಆದರೆ ಅವು ಒಬ್ಬಾಕೆ ಹೆಣ್ಣಿನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಬಲ್ಲವು.

‘ಅವರನ್ನು “ಸಹೋದರರು” ಎಂದು ಕರೆಯಲು ನಾಚಿಕೆಪಡಲಿಲ್ಲ’

ಯೇಸು ಕ್ರಿಸ್ತನು ‘[ತನ್ನ ಅಭಿಷಿಕ್ತ ಹಿಂಬಾಲಕರನ್ನು] “ಸಹೋದರರು” ಎಂದು ಕರೆಯಲು ನಾಚಿಕೆಪಡಲಿಲ್ಲ.’ (ಇಬ್ರಿ. 2:11, 12, 17) ನೀವು ಕ್ರೈಸ್ತ ಗಂಡನಾಗಿರುವಲ್ಲಿ ನಿಮ್ಮ ಮಡದಿ ನಿಮ್ಮ ಕ್ರೈಸ್ತ ಸಹೋದರಿಯೂ ಆಗಿದ್ದಾಳೆ ಎಂಬುದನ್ನು ನೆನಪಿನಲ್ಲಿಡಿ. ಅವಳು ನಿಮ್ಮ ಕೈಹಿಡಿಯುವ ಮೊದಲೇ ದೀಕ್ಷಾಸ್ನಾನ ತೆಗೆದುಕೊಂಡಿರಲಿ ಇಲ್ಲವೆ ನಂತರ ತೆಗೆದುಕೊಂಡಿರಲಿ, ಯೆಹೋವನಿಗೆ ಅವಳು ಮಾಡಿರುವ ಸಮರ್ಪಣೆಯು ಅವಳ ವಿವಾಹದ ಪ್ರತಿಜ್ಞೆಗಿಂತಲೂ ಪ್ರಾಮುಖ್ಯವಾಗಿದೆ. ಕ್ರೈಸ್ತ ಕೂಟವನ್ನು ನಡೆಸುತ್ತಿರುವ ಸಹೋದರನು ಹೇಳಿಕೆ ನೀಡುವಂತೆ ನಿಮ್ಮ ಪತ್ನಿಯನ್ನು ಕೇಳಿಕೊಳ್ಳುವಾಗ ಯೋಗ್ಯವಾಗಿಯೇ ಆಕೆಯನ್ನು “ಸಹೋದರಿ—” ಎಂದು ಸಂಬೋಧಿಸುತ್ತಾನೆ. ಆಕೆ ರಾಜ್ಯ ಸಭಾಗೃಹದಲ್ಲಿ ಮಾತ್ರವಲ್ಲ, ಮನೆಯಲ್ಲೂ ನಿಮ್ಮ ಸಹೋದರಿಯಾಗಿದ್ದಾಳೆ. ರಾಜ್ಯ ಸಭಾಗೃಹದಲ್ಲಿ ಹೇಗೆ ಆಕೆಗೆ ಪ್ರೀತಿ ಮರ್ಯಾದೆ ತೋರಿಸುತ್ತೀರೋ ಹಾಗೆಯೇ ಮನೆಯಲ್ಲಿಯೂ ತೋರಿಸುವುದು ಪ್ರಾಮುಖ್ಯ.

ಸಭೆಯಲ್ಲಿ ನಿಮಗೆ ತುಂಬ ಜವಾಬ್ದಾರಿಗಳಿರುವಲ್ಲಿ ಸಭೆ ಹಾಗೂ ಕುಟುಂಬದ ಜವಾಬ್ದಾರಿಗಳೆರಡನ್ನೂ ನಿಭಾಯಿಸುವುದು ನಿಮಗೆ ಕೆಲವೊಮ್ಮೆ ಕಷ್ಟವೆನಿಸಬಹುದು. ಹಿರಿಯರ ಮತ್ತು ಶುಶ್ರೂಷಾ ಸೇವಕರ ಮಧ್ಯೆ ತುಂಬು ಹೃದಯದ ಸಹಕಾರವಿರುವಾಗ ಹಾಗೂ ಕೆಲವು ಜವಾಬ್ದಾರಿಗಳನ್ನು ಇತರರಿಗೆ ವಹಿಸಿಕೊಡುವಾಗ ನಿಮ್ಮನ್ನೇ ನೆಚ್ಚಿಕೊಂಡಿರುವ ನಿಮ್ಮ ಸಹೋದರಿಯೂ ಆಗಿರುವ ನಿಮ್ಮ ಪತ್ನಿಗಾಗಿ ಸಮಯ ಮಾಡಿಕೊಳ್ಳಲು ಅದು ನಿಮಗೆ ನೆರವಾಗುವುದು. ನಿಮಗೆ ವಹಿಸಲಾಗಿರುವ ಸಭಾ ಜವಾಬ್ದಾರಿಗಳನ್ನು ಬೇರೆ ಅನೇಕ ಸಹೋದರರು ನಿರ್ವಹಿಸಸಾಧ್ಯವಿದೆ, ಆದರೆ ದಾಂಪತ್ಯದಲ್ಲಿ ನಿಮ್ಮ ಪತ್ನಿಯೊಂದಿಗೆ ಐಕ್ಯರಾಗಿರುವ ಸಹೋದರನೆಂದರೆ ನೀವೊಬ್ಬರೇ ಎಂಬುದನ್ನು ನೆನಪಿನಲ್ಲಿಡಿ.

ಅಷ್ಟೇ ಅಲ್ಲ, ನೀವು ನಿಮ್ಮ ಪತ್ನಿಯ ಶಿರಸ್ಸಾಗಿದ್ದೀರಿ. “ಪ್ರತಿ ಪುರುಷನಿಗೆ ಕ್ರಿಸ್ತನು ತಲೆ; ಸ್ತ್ರೀಗೆ ಪುರುಷನು ತಲೆ; ಕ್ರಿಸ್ತನಿಗೆ ದೇವರು ತಲೆ” ಎಂದು ಬೈಬಲ್‌ ತಿಳಿಸುತ್ತದೆ. (1 ಕೊರಿಂ. 11:3) ಈ ತಲೆತನವನ್ನು ನೀವು ಹೇಗೆ ನಿರ್ವಹಿಸುವಿರಿ? ಪ್ರೀತಿಯಿಂದಲೇ ಹೊರತು ಮೇಲಿನ ವಚನವನ್ನು ಪದೇ ಪದೇ ಸೂಚಿಸಿ ಗೌರವ ಕೊಡುವಂತೆ ದಬಾಯಿಸುವ ಮೂಲಕವಂತೂ ಖಂಡಿತ ಅಲ್ಲ. ನಿಮ್ಮ ಪ್ರಿಯ ಮಡದಿಯನ್ನು ನೋಡಿಕೊಳ್ಳುವುದರಲ್ಲಿ ಯೇಸು ಕ್ರಿಸ್ತನನ್ನು ಅನುಕರಿಸುವುದೇ ತಲೆತನವನ್ನು ಸರಿಯಾಗಿ ನಿರ್ವಹಿಸುವುದರ ಕೀಲಿಕೈ ಆಗಿದೆ.—1 ಪೇತ್ರ 2:21.

“ನೀವು ನನ್ನ ಸ್ನೇಹಿತರು”

ಯೇಸು ತನ್ನ ಶಿಷ್ಯರನ್ನು ಸ್ನೇಹಿತರು ಎಂದು ಕರೆದನು. “ನಾನು ಇನ್ನೆಂದೂ ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ, ಏಕೆಂದರೆ ಯಜಮಾನನು ಏನು ಮಾಡುತ್ತಾನೋ ಅದು ಆಳಿಗೆ ತಿಳಿದಿರುವುದಿಲ್ಲ. ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯಿಂದ ನಾನು ಕೇಳಿಸಿಕೊಂಡಿರುವ ಎಲ್ಲ ವಿಷಯಗಳನ್ನು ನಿಮಗೆ ತಿಳಿಯಪಡಿಸಿದ್ದೇನೆ” ಎಂದು ಯೇಸು ಅವರಿಗೆ ಹೇಳಿದನು. (ಯೋಹಾ. 15:14, 15) ಯೇಸು ಮತ್ತು ಅವನ ಶಿಷ್ಯರ ಮಧ್ಯೆ ಉತ್ತಮ ಸಂವಾದವಿತ್ತು. ಅವರು ಜೊತೆಯಾಗಿ ಕೆಲಸಕಾರ್ಯ ಮಾಡಿದರು. ಕಾನಾದಲ್ಲಿ ಒಂದು ಮದುವೆಯ ಔತಣಕ್ಕೆ ಕೂಡ ‘ಯೇಸು ಮತ್ತು ಅವನ ಶಿಷ್ಯರನ್ನು’ ಕರೆಯಲಾಗಿತ್ತು. (ಯೋಹಾ. 2:2) ಗೆತ್ಸೆಮನೆ ತೋಟದಂಥ ಮೆಚ್ಚಿನ ತಾಣಗಳಲ್ಲಿ ಅವರು ಒಟ್ಟುಸೇರುತ್ತಿದ್ದರು. “ಯೇಸು ಅಲ್ಲಿ ಅನೇಕ ಸಾರಿ ತನ್ನ ಶಿಷ್ಯರೊಂದಿಗೆ ಕೂಡಿಬಂದಿದ್ದನು” ಎಂದು ಬೈಬಲ್‌ ಹೇಳುತ್ತದೆ.—ಯೋಹಾ. 18:2.

ಗಂಡನ ಅತೀ ಹತ್ತಿರದ ಅಥವಾ ಆಪ್ತ ಒಡನಾಡಿ ತಾನೇ ಎಂಬ ಭಾವನೆ ಹೆಂಡತಿಗೆ ಉಂಟಾಗಬೇಕು. ಪತಿಪತ್ನಿಯರಾದ ನೀವಿಬ್ಬರೂ ಜೊತೆಗೂಡಿ ಜೀವನವನ್ನು ಸವಿಯುವುದು ಎಷ್ಟು ಉತ್ತಮ! ಜೊತೆಯಾಗಿ ದೇವರ ಸೇವೆಯನ್ನು ಮಾಡಿರಿ. ಆನಂದದಿಂದ ಜೊತೆಯಾಗಿ ಬೈಬಲ್‌ ಅಧ್ಯಯನ ಮಾಡಿರಿ. ಜೊತೆಯಾಗಿ ನಡೆದಾಡುತ್ತಾ, ಮಾತಾಡುತ್ತಾ, ತಿನ್ನುತ್ತಾ ಸಮಯ ಕಳೆಯಿರಿ. ಜೀವನದಲ್ಲಿ ಕೇವಲ ಗಂಡ ಹೆಂಡತಿಯರಾಗಿ ಅಲ್ಲ, ನೆಚ್ಚಿನ ಸ್ನೇಹಿತರಾಗಿ ಇರ್ರಿ.

“ಅವನು ಅವರನ್ನು ಕೊನೆಯ ವರೆಗೂ ಪ್ರೀತಿಸಿದನು”

ಯೇಸು ತನ್ನ ಶಿಷ್ಯರನ್ನು “ಕೊನೆಯ ವರೆಗೂ ಪ್ರೀತಿಸಿದನು.” (ಯೋಹಾ. 13:1) ಕೆಲವು ಗಂಡಂದಿರು ಈ ವಿಷಯದಲ್ಲಿ ಕ್ರಿಸ್ತನನ್ನು ಅನುಕರಿಸಲು ತಪ್ಪುತ್ತಾರೆ. ತರುಣಿಯೊಬ್ಬಳನ್ನು ಮದುವೆಯಾಗಲಿಕ್ಕಾಗಿ ಅವರು ತಮ್ಮ ‘ಯೌವನದ ಹೆಂಡತಿಯನ್ನು’ ತ್ಯಜಿಸಲೂಬಹುದು.—ಮಲಾ. 2:14, 15.

ಆದರೆ ‘ವಿಲಿ’ಯಂಥ ಇತರರು ಕ್ರಿಸ್ತನನ್ನು ಅನುಕರಿಸುತ್ತಾರೆ. ತನ್ನ ಪತ್ನಿಯ ಆರೋಗ್ಯ ಹದಗೆಡುತ್ತಿರುವುದರಿಂದ ಅನೇಕ ವರ್ಷಗಳ ಕಾಲ ವಿಲಿಯು ಅವಳಿಗೆ ಸತತ ಆರೈಕೆಯನ್ನು ಮಾಡಬೇಕಾಯಿತು. ಇದರ ಕುರಿತು ವಿಲಿಯ ಅಭಿಪ್ರಾಯವೇನಾಗಿತ್ತು? ಅವನು ಹೇಳಿದ್ದು: “ನನ್ನ ಹೆಂಡತಿಯು ದೇವರು ನನಗೆ ಕೊಟ್ಟ ಉಡುಗೊರೆಯಾಗಿದ್ದಾಳೆ. ಅವಳನ್ನು ಹಾಗೆಯೇ ನೋಡಿಕೊಂಡಿದ್ದೇನೆ. ಕಷ್ಟದಲ್ಲಿಯೂ ಸುಖದಲ್ಲಿಯೂ ಅವಳನ್ನು ಪ್ರೀತಿಸುತ್ತೇನೆಂದು 60 ವರ್ಷಗಳ ಹಿಂದೆ ನಾನು ಮಾತುಕೊಟ್ಟಿದ್ದೆ. ಆ ಪ್ರತಿಜ್ಞೆಯನ್ನು ನಾನೆಂದೂ ಮರೆಯಲಾರೆ.”

ಕ್ರೈಸ್ತ ಗಂಡಂದಿರೇ, ಕ್ರಿಸ್ತನು ತೋರಿಸಿದ ಪ್ರೀತಿಯನ್ನು ಅನುಕರಿಸಿರಿ. ನಿಮ್ಮ ಸಹೋದರಿ ಹಾಗೂ ಗೆಳತಿಯಾಗಿರುವ ನಿಮ್ಮ ಪತ್ನಿಯನ್ನು ಪ್ರೀತಿಸಿರಿ.

[ಪುಟ 20ರಲ್ಲಿರುವ ಚಿತ್ರ]

ನಿಮ್ಮ ಮಡದಿಯು ನಿಮ್ಮ ಅತ್ಯಾಪ್ತ ಸ್ನೇಹಿತೆಯೋ?

[ಪುಟ 20ರಲ್ಲಿರುವ ಚಿತ್ರ]

‘ನಿಮ್ಮ ಹೆಂಡತಿಯನ್ನು ಪ್ರೀತಿಸುತ್ತಾ ಇರಿ.’