ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಇತಿಮಿತಿಗಳನ್ನು ಬಲ್ಲಾತನು

ನಮ್ಮ ಇತಿಮಿತಿಗಳನ್ನು ಬಲ್ಲಾತನು

ದೇವರ ಸಮೀಪಕ್ಕೆ ಬನ್ನಿರಿ

ನಮ್ಮ ಇತಿಮಿತಿಗಳನ್ನು ಬಲ್ಲಾತನು

ಯಾಜಕಕಾಂಡ 5:2-11

ದೇವರನ್ನು ಮೆಚ್ಚಿಸಲು ತಾನು ಮಾಡಿದ ಪ್ರಯತ್ನಗಳ ವಿಷಯದಲ್ಲಿ ಒಬ್ಬಾಕೆ ಮಹಿಳೆ ಅಂದದ್ದು: “ನಾನೆಷ್ಟೇ ಹೆಚ್ಚು ಪ್ರಯತ್ನಿಸಿದ್ದರೂ ಅದು ಸಾಕೆಂದು ನನಗೆ ಅನಿಸಲೇ ಇಲ್ಲ.” ಯೆಹೋವನು ತನ್ನ ಆರಾಧಕರ ಪರಿಶ್ರಮದ ಪ್ರಯತ್ನಗಳನ್ನು ಸ್ವೀಕರಿಸುತ್ತಾನೋ? ಅವರ ಶಕ್ತಿಸಾಮರ್ಥ್ಯಗಳನ್ನು ಮತ್ತು ಪರಿಸ್ಥಿತಿಗಳನ್ನು ಆತನು ಎಣಿಕೆಗೆ ತರುತ್ತಾನೋ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು, ಮೋಶೆಯ ಧರ್ಮಶಾಸ್ತ್ರದಲ್ಲಿ ಕೆಲವು ಯಜ್ಞಾರ್ಪಣೆಗಳ ಕುರಿತು ಏನು ಹೇಳಲಾಗಿದೆಯೋ ಅದನ್ನು ಪರಿಗಣಿಸುವುದು ನಮಗೆ ಸಹಾಯಕರ. ಅದು ಯಾಜಕಕಾಂಡ 5:2-11ರಲ್ಲಿ ಕಂಡುಬರುತ್ತದೆ.

ಧರ್ಮಶಾಸ್ತ್ರದ ಕೆಳಗೆ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ವಿವಿಧ ಯಜ್ಞಹೋಮಗಳನ್ನು ಅರ್ಪಿಸಬೇಕೆಂಬ ಆಜ್ಞೆಯನ್ನು ದೇವರು ಕೊಟ್ಟಿದ್ದನು. ಈ ವಚನಗಳಲ್ಲಿ ಕೊಡಲಾದ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿಯು ಬುದ್ಧಿಪೂರ್ವಕವಲ್ಲದೆ ಇಲ್ಲವೆ ತಿಳಿಯದೆ ಪಾಪಮಾಡುತ್ತಾನೆ. (ವಚನಗಳು 2-4) ಈ ವಿಷಯವು ಅವನಿಗೆ ತಿಳಿದು ಬಂದಾಗ ಅವನು ತನ್ನ ಪಾಪಗಳನ್ನು ಅರಿಕೆಮಾಡಿ ದೋಷಪರಿಹಾರಕ ಯಜ್ಞವನ್ನು ಅಂದರೆ “ಹೆಣ್ಣು ಕುರಿಯನ್ನಾಗಲಿ ಹೆಣ್ಣು ಮೇಕೆಯನ್ನಾಗಲಿ” ಸಮರ್ಪಿಸಬೇಕಿತ್ತು. (ವಚನಗಳು 5, 6) ಆದರೆ ಅವನು ಬಡವನಾಗಿದ್ದು ಅವನಲ್ಲಿ ಕುರಿಯಾಗಲಿ ಮೇಕೆಯಾಗಲಿ ಇರದಿದ್ದಲ್ಲಿ ಆಗೇನು? ಅವನು ಅಂಥಾ ಒಂದು ಪ್ರಾಣಿಯನ್ನು ಸಾಲಮಾಡಿಯಾದರೂ ಕೊಂಡುಕೊಂಡು ಅರ್ಪಿಸಲೇ ಬೇಕೆಂದು ಧರ್ಮಶಾಸ್ತ್ರವು ಅವನನ್ನು ಒತ್ತಾಯಪಡಿಸಿತ್ತೋ? ಅವನು ಒಂದು ಪ್ರಾಣಿಯನ್ನು ಖರೀದಿಸಲು ಶಕ್ತನಾಗುವ ತನಕ ದುಡಿದು ಹೀಗೆ ತನ್ನ ಪಾಪಗಳಿಗಾಗಿ ಪರಿಹಾರ ಯಜ್ಞವನ್ನು ಮುಂದೂಡಬೇಕಿತ್ತೊ?

ಯೆಹೋವನ ಕೋಮಲ ಪರಿಗಣನೆಯ ಕುರಿತು ಧರ್ಮಶಾಸ್ತ್ರವು ತಿಳಿಸಿದ್ದು: “ಕುರಿಯನ್ನು ಕೊಡುವದಕ್ಕೆ ಅವನಿಗೆ ಗತಿಯಿಲ್ಲದ ಪಕ್ಷದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಬಂದು . . . ಯೆಹೋವನಿಗೆ ಸಮರ್ಪಿಸಬೇಕು.” (ವಚನ 7) “ಕೊಡುವುದಕ್ಕೆ ಅವನಿಗೆ ಗತಿಯಿಲ್ಲದ ಪಕ್ಷದಲ್ಲಿ” ಎಂಬ ವಾಕ್ಯವನ್ನು “ಅದು ಅವನ ಕೈಲಾಗದಿದ್ದಲ್ಲಿ” ಎಂದೂ ಅನುವಾದಿಸಬಹುದಾಗಿದೆ. ಒಬ್ಬ ಇಸ್ರಾಯೇಲ್ಯನು ಕುರಿಯನ್ನು ಕೊಳ್ಳಲಾಗದಷ್ಟು ತೀರಾ ಬಡವನಾಗಿದ್ದಲ್ಲಿ, ಆಗ ಅವನು ಏನನ್ನು ಅರ್ಪಿಸಶಕ್ತನೋ ಅದನ್ನು ಅಂದರೆ ಎರಡು ಬೆಳವಕ್ಕಿಗಳನ್ನು ಅಥವಾ ಎರಡು ಪಾರಿವಾಳಗಳನ್ನು ನೀಡುವುದಾದರೆ ದೇವರು ಅದನ್ನು ಮೆಚ್ಚಿಕೆಯಿಂದ ಸ್ವೀಕರಿಸುತ್ತಿದ್ದನು.

ಒಂದುವೇಳೆ ಆ ವ್ಯಕ್ತಿಗೆ ಆ ಎರಡು ಹಕ್ಕಿಗಳನ್ನು ಕೊಡಲು ಸಹ ಸಾಧ್ಯವಿಲ್ಲವಾದರೆ ಆಗೇನು? ಆಗ “ಅವನು ದೋಷಪರಿಹಾರಕ್ಕಾಗಿ ಮೂರು ಸೇರು ಗೋದಿಹಿಟ್ಟನ್ನು ತರಬೇಕು” ಎಂದು ಧರ್ಮಶಾಸ್ತ್ರವು ಹೇಳಿತ್ತು. (ವಚನ 11) ಕಡುಬಡವರಿಗಾಗಿ ಯೆಹೋವನು ವಿನಾಯತಿಯನ್ನು ತೋರಿಸಿ, ಈ ರೀತಿಯ ರಕ್ತರಹಿತ ಅರ್ಪಣೆಯನ್ನು ನೀಡುವಂತೆ ಅನುಮತಿಸಿದನು. * ಇಸ್ರಾಯೇಲಿನಲ್ಲಿ ದೋಷಪರಿಹಾರಕ ಯಜ್ಞದ ಆಶೀರ್ವಾದವನ್ನು ಅಥವಾ ದೇವರೊಂದಿಗೆ ಸಮಾಧಾನವಾಗುವ ಸುಯೋಗವನ್ನು ಆನಂದಿಸಲು ಬಡತನವು ಯಾರಿಗೂ ಅಡ್ಡಿಯಾಗಿರಲಿಲ್ಲ.

ದೋಷಪರಿಹಾರಕ ಯಜ್ಞಗಳ ಕುರಿತ ಯೆಹೋವನ ನಿಯಮದಿಂದ ನಾವೇನನ್ನು ಕಲಿಯುತ್ತೇವೆ? ಆತನು ತನ್ನ ಆರಾಧಕರ ಇತಿಮಿತಿಗಳನ್ನು ಗಣನೆಗೆ ತೆಗೆದುಕೊಳ್ಳುವ ಕನಿಕರವೂ ವಿವೇಚನೆಯೂ ಉಳ್ಳ ದೇವರು ಆಗಿದ್ದಾನೆ ಎಂಬುದೇ. (ಕೀರ್ತನೆ 103:14) ನಾವಾತನ ಸಮೀಪದ ಸಂಬಂಧಕ್ಕೆ ಬರುವಂತೆ ಆತನು ಬಯಸುತ್ತಾನೆ. ವೃದ್ಧಾಪ್ಯ, ಅನಾರೋಗ್ಯ, ಕುಟುಂಬ ಮತ್ತು ಇತರ ಸಮಸ್ಯೆಗಳೇ ಮೊದಲಾದ ಸಂಕಷ್ಟದ ಸವಾಲುಗಳ ಮಧ್ಯೆಯೂ ನಾವಾತನೊಂದಿಗೆ ಒಳ್ಳೇ ಸಂಬಂಧವನ್ನು ಬೆಳೆಸಿಕೊಳ್ಳಬೇಕೆಂದೇ ಆತನ ಅಪೇಕ್ಷೆ. ನಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ನಾವು ಮಾಡುವಾಗ ಯೆಹೋವ ದೇವರು ಸಂತೋಷಿಸುತ್ತಾನೆ ಎಂದು ತಿಳಿಯುವುದರಲ್ಲಿ ಸಾಂತ್ವನವನ್ನು ಪಡೆಯಬಲ್ಲೆವು. (w09 6/1)

[ಪಾದಟಿಪ್ಪಣಿ]

^ ಪ್ಯಾರ. 7 ಯಜ್ಞಾರ್ಪಿತ ಪ್ರಾಣಿಯ ದೋಷಪರಿಹಾರಕ ಮೌಲ್ಯವು ಅದರ ರಕ್ತದಲ್ಲಿತ್ತು. ದೇವರು ರಕ್ತವನ್ನು ಪರಿಶುದ್ಧವೆಂದೆಣಿಸಿದನು. (ಯಾಜಕಕಾಂಡ 17:11) ಹೀಗಿರಲಾಗಿ ಬಡವರು ಅರ್ಪಿಸುತ್ತಿದ್ದ ಆ ಹಿಟ್ಟು ಏನೂ ಬೆಲೆಯಿಲ್ಲದ್ದಾಗಿತ್ತೋ? ಖಂಡಿತ ಇಲ್ಲ. ಆ ಅರ್ಪಣೆಗಳನ್ನು ಮಾಡಿದವರ ದೀನ ಹಾಗೂ ಸಿದ್ಧ ಮನಸ್ಸನ್ನು ಯೆಹೋವನು ಅಮೂಲ್ಯವೆಂದೆಣಿಸಿದನು ನಿಶ್ಚಯ. ಅದಲ್ಲದೆ ಬಡವರೂ ಸೇರಿದಂತೆ ಇಡೀ ಜನಾಂಗದ ಪಾಪಗಳು ವಾರ್ಷಿಕ ದೋಷಪರಿಹಾರಕ ದಿನದಲ್ಲಿ ದೇವರಿಗೆ ಅರ್ಪಿಸಲಾಗುತ್ತಿದ್ದ ಪ್ರಾಣಿಗಳ ರಕ್ತದಿಂದ ನಿವಾರಿಸಲ್ಪಡುತ್ತಿದ್ದವು.—ಯಾಜಕಕಾಂಡ 16:29, 30.