ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೆರೆಯವನೊಂದಿಗೆ ಸತ್ಯವನ್ನೇ ಆಡೋಣ

ನೆರೆಯವನೊಂದಿಗೆ ಸತ್ಯವನ್ನೇ ಆಡೋಣ

ನೆರೆಯವನೊಂದಿಗೆ ಸತ್ಯವನ್ನೇ ಆಡೋಣ

“ಈಗ ನೀವು ಸುಳ್ಳುತನವನ್ನು ತೆಗೆದುಹಾಕಿರುವುದರಿಂದ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನೊಂದಿಗೆ ಸತ್ಯವನ್ನೇ ಆಡಲಿ.” —ಎಫೆ. 4:25.

1, 2. ಸತ್ಯದ ಬಗ್ಗೆ ಅನೇಕರ ನೋಟವೇನು?

ಮನುಷ್ಯನು ಸತ್ಯವಂತನಾಗಿರಲು ಇಲ್ಲವೇ ಸತ್ಯವನ್ನು ತಿಳಿದುಕೊಳ್ಳಲು ನಿಜಕ್ಕೂ ಸಾಧ್ಯವೋ ಎಂಬ ಸಂಗತಿ ಬಹು ಹಿಂದಿನಿಂದಲೂ ವ್ಯಾಪಕ ಚರ್ಚೆಯ ವಿಷಯವಾಗಿದೆ. ಸಾ.ಶ.ಪೂ. 6ನೇ ಶತಮಾನದ ಗ್ರೀಕ್‌ ಕವಿ ಆಲ್ಕೇಯಸನು ಹೇಳಿದ್ದು: “ಸತ್ಯವು ಶರಾಬಿನಲ್ಲಿದೆ.” ಇದರರ್ಥ, ನಶೆಯೇರಿದಾಗಲೇ ಒಬ್ಬ ವ್ಯಕ್ತಿ ಸತ್ಯವನ್ನಾಡುತ್ತಾನೆ ಮತ್ತು ಮಾತಾಡಲು ಉತ್ಸುಕನಾಗಿರುತ್ತಾನೆ. ಪ್ರಥಮ ಶತಮಾನದ ರೋಮನ್‌ ರಾಜ್ಯಪಾಲ ಪೊಂತ್ಯ ಪಿಲಾತನಿಗೂ ಸತ್ಯದ ಬಗ್ಗೆ ವಕ್ರ ನೋಟವಿತ್ತು. ಇದು ಅವನು ಯೇಸುವಿಗೆ, “ಸತ್ಯ ಎಂದರೇನು?” ಎಂದು ಸಂಶಯದಿಂದ ಕೇಳಿದಾಗ ವ್ಯಕ್ತವಾಯಿತು.—ಯೋಹಾ. 18:38.

2 ನಮ್ಮೀ ದಿನಗಳಲ್ಲೂ ಸತ್ಯದ ಕುರಿತು ಒಂದಕ್ಕೊಂದು ವಿರುದ್ಧವಾದ ಅಭಿಪ್ರಾಯಗಳಿವೆ. ಅನೇಕರಿಗನುಸಾರ, “ಸತ್ಯ” ಎಂಬ ಪದಕ್ಕೆ ಹಲವಾರು ಅರ್ಥಗಳಿವೆ ಇಲ್ಲವೇ ಒಬ್ಬನಿಗೆ ಸತ್ಯವೆಂದು ತೋಚುವಂಥದ್ದು ಇನ್ನೊಬ್ಬನಿಗೆ ಸತ್ಯವೆನಿಸಲಿಕ್ಕಿಲ್ಲ. ಇನ್ನೂ ಕೆಲವರು ತಮಗೆ ಅನುಕೂಲವಿದ್ದಾಗ ಅಥವಾ ಲಾಭವಿದ್ದಾಗ ಮಾತ್ರ ಸತ್ಯವನ್ನಾಡುತ್ತಾರೆ. ಸುಳ್ಳಾಡುವುದರ ಮಹತ್ತ್ವ (ಇಂಗ್ಲಿಷ್‌) ಎಂಬ ಪುಸ್ತಕ ಹೇಳುವುದು: “ಪ್ರಾಮಾಣಿಕತೆ ಎಂಬುದು ಉನ್ನತ ಅದರ್ಶವೇನೋ ನಿಜ, ಆದರೆ ಬದುಕು ಹಾಗೂ ಭದ್ರತೆಗಾಗಿ ಇಂದು ನಡೆಯುತ್ತಿರುವ ಜೀವನ್ಮರಣದ ಹೋರಾಟದಲ್ಲಿ ಅದಕ್ಕೇನೂ ಬೆಲೆಯಿಲ್ಲ. ಬದುಕಲು ಸುಳ್ಳಾಡಲೇಬೇಕು, ಅನ್ಯ ಮಾರ್ಗವಿಲ್ಲ.”

3. ಸತ್ಯವನ್ನಾಡುವ ವಿಷಯದಲ್ಲಿ ಯೇಸುವಿನ ಮಾದರಿ ಗಮನಾರ್ಹವೇಕೆ?

3 ಕ್ರಿಸ್ತನ ಶಿಷ್ಯರಿಗಾದರೋ ಭಿನ್ನ ನೋಟವಿದೆ! ಏಕೆಂದರೆ ಸತ್ಯದ ಬಗ್ಗೆ ಯೇಸುವಿನ ನೋಟ ವಕ್ರವಾಗಿರಲಿಲ್ಲ. ಅವನು ಯಾವಾಗಲೂ ಸತ್ಯವನ್ನಾಡಿದನು. ಅವನ ವೈರಿಗಳು ಸಹ ಒಪ್ಪಿಕೊಂಡದ್ದು: “ಬೋಧಕನೇ, ನೀನು ಸತ್ಯವಂತನೂ ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುವವನೂ ಯಾರಿಗೂ ಭಯಪಡದವನೂ ಆಗಿದ್ದೀ . . . ಎಂಬುದನ್ನು ನಾವು ಬಲ್ಲೆವು.” (ಮತ್ತಾ. 22:16) ಅದೇ ರೀತಿಯಲ್ಲಿ ಇಂದು ನಿಜ ಕ್ರೈಸ್ತರು ಯೇಸುವಿನ ಮಾದರಿಯನ್ನು ಅನುಕರಿಸುತ್ತಾರೆ. ಅವರು ಸತ್ಯವನ್ನಾಡಲು ಹಿಂಜರಿಯುವುದಿಲ್ಲ. “ಈಗ ನೀವು ಸುಳ್ಳುತನವನ್ನು ತೆಗೆದುಹಾಕಿರುವುದರಿಂದ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನೊಂದಿಗೆ ಸತ್ಯವನ್ನೇ ಆಡಲಿ” ಎಂದು ಜೊತೆ ವಿಶ್ವಾಸಿಗಳಿಗೆ ಬುದ್ಧಿಹೇಳಿದ ಅಪೊಸ್ತಲ ಪೌಲನೊಂದಿಗೆ ಅವರು ಮನಃಪೂರ್ವಕವಾಗಿ ಸಮ್ಮತಿಸುತ್ತಾರೆ. (ಎಫೆ. 4:25) ಪೌಲನ ಆ ಮಾತುಗಳಲ್ಲಿರುವ ಮೂರು ಅಂಶಗಳನ್ನು ನಾವೀಗ ಪರಿಗಣಿಸೋಣ. ಮೊದಲನೆಯದು, ನಮ್ಮ ನೆರೆಯವನು ಯಾರು? ಎರಡನೆಯದು, ಸತ್ಯವನ್ನಾಡುವುದರ ಅರ್ಥವೇನು? ಮೂರನೆಯದು, ಇದನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬಹುದು?

ನಮ್ಮ ನೆರೆಯವನು ಯಾರು?

4. ಯೇಸು ಪ್ರಥಮ ಶತಮಾನದ ಯೆಹೂದಿ ಮುಖಂಡರಂತಿರದೆ, ನಮ್ಮ ನೆರೆಯವನು ಯಾರು ಎಂಬುದರ ಬಗ್ಗೆ ಯೆಹೋವನ ನೋಟವನ್ನು ಪ್ರತಿಬಿಂಬಿಸಿದ್ದು ಹೇಗೆ?

4 ಸಾ.ಶ. ಪ್ರಥಮ ಶತಮಾನದಲ್ಲಿ ಕೆಲವು ಯೆಹೂದಿ ಮುಖಂಡರು, ಬರೀ ಯೆಹೂದ್ಯರು ಇಲ್ಲವೇ ಆಪ್ತ ಮಿತ್ರರು ಮಾತ್ರ ‘ನೆರೆಯವರು’ ಆಗಿದ್ದಾರೆಂದು ಕಲಿಸಿದರು. ಯೇಸುವಾದರೋ, ತನ್ನ ತಂದೆಯ ವ್ಯಕ್ತಿತ್ವ ಹಾಗೂ ಯೋಚನಾಧಾಟಿಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು. (ಯೋಹಾ. 14:9) ಆದುದರಿಂದ, ದೇವರು ಒಂದು ಜಾತಿ ಇಲ್ಲವೇ ರಾಷ್ಟ್ರವನ್ನು ಇನ್ನೊಂದಕ್ಕಿಂತ ಶ್ರೇಷ್ಠವೆಂದೆಣಿಸುವುದಿಲ್ಲವೆಂದು ತನ್ನ ಶಿಷ್ಯರಿಗೆ ಕಲಿಸಿದನು. (ಯೋಹಾ. 4:5-26) ಅಷ್ಟುಮಾತ್ರವಲ್ಲದೆ, ಪವಿತ್ರಾತ್ಮವು ಅಪೊಸ್ತಲ ಪೇತ್ರನಿಗೆ ಪ್ರಕಟಪಡಿಸಿದ್ದು: “ದೇವರು ಪಕ್ಷಪಾತಿಯಲ್ಲ . . . ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.” (ಅ. ಕಾ. 10:28, 34, 35) ಹೀಗಿರುವುದರಿಂದ ನಾವು ಎಲ್ಲ ಜನರನ್ನು ನಮ್ಮ ನೆರೆಯವರಾಗಿ ಪರಿಗಣಿಸಬೇಕು. ಶತ್ರುಗಳಂತೆ ನಡೆದುಕೊಳ್ಳುವವರನ್ನೂ ನಾವು ಪ್ರೀತಿಸಬೇಕು.—ಮತ್ತಾ. 5:43-45.

5. ನಮ್ಮ ನೆರೆಯವನೊಂದಿಗೆ ಸತ್ಯವನ್ನಾಡುವುದರ ಅರ್ಥವೇನು?

5 ಆದರೆ ನಾವು ನಮ್ಮ ನೆರೆಯವನೊಂದಿಗೆ ಸತ್ಯವನ್ನೇ ಆಡಬೇಕೆಂದು ಪೌಲನು ಬರೆದ ಮಾತುಗಳ ಅರ್ಥವೇನಾಗಿತ್ತು? ಸತ್ಯವನ್ನಾಡುವುದರ ಅರ್ಥ, ವಂಚನೆಯ ಮಾತುಗಳನ್ನಾಡದೇ ವಾಸ್ತವಾಂಶಗಳನ್ನು ತಿಳಿಸುವುದಾಗಿದೆ. ಸತ್ಯ ಕ್ರೈಸ್ತರು ಇತರರ ದಾರಿತಪ್ಪಿಸಲಿಕ್ಕಾಗಿ ನಿಜಾಂಶಗಳನ್ನು ತಿರುಚಿ ಹೇಳುವುದಿಲ್ಲ ಇಲ್ಲವೇ ಅವುಗಳನ್ನು ತಪ್ಪಾಗಿ ಬಣ್ಣಿಸುವುದಿಲ್ಲ. ಅವರು ‘ಕೆಟ್ಟದ್ದನ್ನು ಹೇಸುತ್ತಾರೆ, ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾರೆ.’ (ರೋಮ. 12:9) “ಸತ್ಯದ ದೇವರಾದ ಯೆಹೋವ”ನನ್ನು ಅನುಕರಿಸುತ್ತಾ ನಾವು ನಮ್ಮೆಲ್ಲ ನಡೆನುಡಿಯಲ್ಲಿ ಪ್ರಾಮಾಣಿಕರೂ ಮುಚ್ಚುಮರೆಯಿಲ್ಲದವರೂ ಆಗಿರಬೇಕು. (ಕೀರ್ತ. 15:1, 2; 31:5, NIBV) ಮುಜುಗರದ ಇಲ್ಲವೇ ಅಹಿತಕರ ಸನ್ನಿವೇಶಗಳಲ್ಲೂ ಸುಳ್ಳಾಡುವ ಬದಲು ನಮ್ಮ ಮಾತುಗಳನ್ನು ಜಾಗ್ರತೆಯಿಂದ ಆಯ್ಕೆಮಾಡುವ ಮೂಲಕ ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಸಾಧ್ಯವಿದೆ.—ಕೊಲೊಸ್ಸೆ 3:9, 10 ಓದಿ.

6, 7. (ಎ) ಸತ್ಯವನ್ನಾಡಬೇಕೆಂಬುದರ ಅರ್ಥ, ಯಾರು ಏನೇ ಕೇಳಿದರೂ ಎಲ್ಲವನ್ನೂ ಅಂದರೆ ವೈಯಕ್ತಿಕ ವಿವರಗಳನ್ನೂ ಹೇಳಿಬಿಡಬೇಕೆಂದೋ? ವಿವರಿಸಿ. (ಬಿ) ನಾವು ಭರವಸೆಯಿಂದ ಯಾರಿಗೆ ಪೂರ್ತಿ ಮಾಹಿತಿಯನ್ನು ಕೊಡಬಹುದು?

6 ಇತರರೊಂದಿಗೆ ಸತ್ಯವನ್ನಾಡಬೇಕು ಎಂಬುದರ ಅರ್ಥ, ಯಾರು ಏನೇ ಕೇಳಿದರೂ ನಮಗೆ ಗೊತ್ತಿರುವುದೆಲ್ಲವನ್ನೂ ಹೇಳಿಬಿಡಬೇಕೆಂದೋ? ಹಾಗೇನಿಲ್ಲ. ಎಲ್ಲರಿಗೂ ನೇರವಾದ ಉತ್ತರ ಇಲ್ಲವೇ ನಿರ್ದಿಷ್ಟ ಮಾಹಿತಿ ಕೊಡುವ ಆವಶ್ಯಕತೆಯಿಲ್ಲವೆಂದು ಯೇಸು ಭೂಮಿಯಲ್ಲಿದ್ದಾಗ ತೋರಿಸಿಕೊಟ್ಟನು. ಉದಾಹರಣೆಗೆ, ಯಾವ ಅಧಿಕಾರದಿಂದ ಅವನು ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಮಾಡುತ್ತಾನೆಂದು ಕಪಟಿಗಳಾದ ಧಾರ್ಮಿಕ ಮುಖಂಡರು ಕೇಳಿದಾಗ ಅವನಂದದ್ದು: “ನಾನು ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರಕೊಟ್ಟರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ.” ಇದಕ್ಕೆ ಆ ಶಾಸ್ತ್ರಿಗಳು ಮತ್ತು ಹಿರೀಪುರುಷರು ಉತ್ತರಕೊಡಲು ಇಚ್ಛಿಸದಿದ್ದಾಗ ಯೇಸು ಹೇಳಿದ್ದು: “ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆ ಎಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ.” (ಮಾರ್ಕ 11:27-33) ಅವರ ಭ್ರಷ್ಟ ಕೆಲಸಗಳು ಹಾಗೂ ನಂಬಿಕೆಹೀನ ಮಾದರಿಯ ಕಾರಣ, ಅವರ ಪ್ರಶ್ನೆಗೆ ಉತ್ತರ ಕೊಡಲೇಬೇಕೆಂದು ಅವನಿಗನಿಸಲಿಲ್ಲ. (ಮತ್ತಾ. 12:10-13; 23:27, 28) ಅದೇ ರೀತಿಯಲ್ಲಿ ಇಂದು, ಸ್ವಾರ್ಥ ಉದ್ದೇಶಗಳಿಗಾಗಿ ಕುಯುಕ್ತಿ ಹಾಗೂ ವಂಚನೆಯನ್ನು ಬಳಸುವ ಧರ್ಮಭ್ರಷ್ಟರು ಮತ್ತು ಇತರ ದುಷ್ಟರ ವಿಷಯದಲ್ಲಿ ಯೆಹೋವನ ಜನರು ಎಚ್ಚರವಾಗಿರಬೇಕು.—ಮತ್ತಾ. 10:16; ಎಫೆ. 4:14.

7 ಕೆಲವು ಜನರಿಗೆ ನಾವು ಪೂರ್ತಿ ಮಾಹಿತಿ ಕೊಡುವ ಆವಶ್ಯಕತೆಯಿಲ್ಲ ಎಂಬುದನ್ನು ಪೌಲನು ಸಹ ಸೂಚಿಸಿದನು. ‘ಹರಟೆಮಾತಾಡುವವರು ಮತ್ತು ಬೇರೆಯವರ ವಿಷಯಗಳಲ್ಲಿ ತಲೆಹಾಕುವವರು ಮಾತಾಡಬಾರದ ವಿಷಯಗಳನ್ನು ಮಾತಾಡುತ್ತಾರೆ’ ಎಂದು ಅವನು ಹೇಳಿದನು. (1 ತಿಮೊ. 5:13) ಹೌದು, ಇತರರ ವಿಷಯಗಳಲ್ಲಿ ಅನಾವಶ್ಯಕವಾಗಿ ತಲೆಹಾಕುವವರಿಗೆ ಇಲ್ಲವೇ ಯಾವುದೇ ಮಾಹಿತಿಯನ್ನು ತಮ್ಮಲ್ಲೇ ಇಟ್ಟುಕೊಳ್ಳದವರಿಗೆ ಯಾರೂ ವೈಯಕ್ತಿಕ ವಿಷಯಗಳನ್ನು ಹೇಳಲು ಇಷ್ಟಪಡುವುದಿಲ್ಲ. ಹೀಗಿರುವುದರಿಂದ ಪೌಲನು ಕೊಟ್ಟ ಈ ಪವಿತ್ರಾತ್ಮಪ್ರೇರಿತ ಸಲಹೆಯನ್ನು ಅನ್ವಯಿಸಿಕೊಳ್ಳುವುದು ಎಷ್ಟು ಹೆಚ್ಚು ಉತ್ತಮ: “ನೆಮ್ಮದಿಯಿಂದ ಜೀವಿಸುವುದನ್ನು, ಮತ್ತೊಬ್ಬರ ಕಾರ್ಯದಲ್ಲಿ ತಲೆಹಾಕದೆ ಸ್ವಂತ ಕಾರ್ಯವನ್ನೇ ಮಾಡಿಕೊಂಡಿರುವುದನ್ನು . . . ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ.” (1 ಥೆಸ. 4:11) ಆದರೆ ಕೆಲವೊಮ್ಮೆ ಹಿರಿಯರು, ತಮ್ಮ ನೇಮಿತ ಕರ್ತವ್ಯಗಳನ್ನು ಪೂರೈಸಲಿಕ್ಕೋಸ್ಕರ ವೈಯಕ್ತಿಕ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕಾಗಬಹುದು. ಅಂಥ ಸಂದರ್ಭದಲ್ಲಿ, ಸತ್ಯವನ್ನಾಡುವ ಮೂಲಕ ನಾವು ಸಹಕರಿಸಿದರೆ ಅವರದನ್ನು ತುಂಬ ಮಾನ್ಯಮಾಡುವರು ಮತ್ತು ಅದರಿಂದ ತುಂಬ ಸಹಾಯವೂ ಆಗುವುದು.—1 ಪೇತ್ರ 5:2.

ಕೌಟುಂಬಿಕ ವಿಷಯಗಳಲ್ಲಿ ಸತ್ಯವನ್ನಾಡಿರಿ

8. ಸತ್ಯವನ್ನಾಡುವುದರಿಂದ ಕುಟುಂಬ ಸದಸ್ಯರು ಹೇಗೆ ಹೆಚ್ಚು ಆಪ್ತರಾಗುವರು?

8 ಸಾಮಾನ್ಯವಾಗಿ ನಮ್ಮ ಕುಟುಂಬದವರೊಂದಿಗೆ ನಮಗೆ ಅತ್ಯಾಪ್ತ ಬಂಧವಿರುತ್ತದೆ. ಈ ಬಂಧವನ್ನು ಬಲಪಡಿಸಲು ನಾವು ಕುಟುಂಬ ಸದಸ್ಯರೊಂದಿಗೆ ಸತ್ಯವನ್ನಾಡಲೇಬೇಕು. ಅವರೊಂದಿಗಿನ ನಮ್ಮ ಸಂವಾದವು ಮುಚ್ಚುಮರೆಯಿಲ್ಲದ್ದೂ, ಪ್ರಾಮಾಣಿಕವೂ, ದಯಾಪರವೂ ಆಗಿದ್ದರೆ ಸಮಸ್ಯೆಗಳೂ ಮನಸ್ತಾಪಗಳೂ ಕಡಿಮೆಯಾಗುವವು ಇಲ್ಲವೇ ಬಗೆಹರಿಯುವವು. ಉದಾಹರಣೆಗೆ, ನಾವು ತಪ್ಪು ಮಾಡಿರುವಲ್ಲಿ, ನಮ್ಮ ವಿವಾಹ ಸಂಗಾತಿಗಾಗಲಿ, ಮಕ್ಕಳಿಗಾಗಲಿ, ಕುಟುಂಬದ ಇತರ ಆಪ್ತ ಸದಸ್ಯರಿಗಾಗಲಿ ‘ನನ್ನಿಂದ ತಪ್ಪಾಯಿತು’ ಎಂದು ಹೇಳಲು ಹಿಂಜರಿಯುತ್ತೇವೋ? ಹಿಂಜರಿಯದೆ ಮನಃಪೂರ್ವಕವಾಗಿ ಅವರಿಂದ ಕ್ಷಮೆಕೋರಿದರೆ, ಕುಟುಂಬದ ಒಗ್ಗಟ್ಟು ಮತ್ತು ಶಾಂತಿ ಹೆಚ್ಚಾಗುವುದು.—1 ಪೇತ್ರ 3:8-10 ಓದಿ.

9. ಸತ್ಯವನ್ನಾಡುತ್ತಿದ್ದೇವೆಂಬ ಕಾರಣಕ್ಕೆ ನಿಷ್ಠುರವಾಗಿ ಇಲ್ಲವೇ ಒರಟಾಗಿ ಮಾತಾಡುವುದು ಸರಿಯಲ್ಲವೇಕೆ?

9 ಸತ್ಯವನ್ನಾಡುವುದರ ಅರ್ಥ, ನಾವು ನಿಷ್ಠುರವಾಗಿ, ಕಡ್ಡಿ ಮುರಿದ ಹಾಗೆ ಮಾತಾಡಬೇಕೆಂದಲ್ಲ. ಒರಟಾಗಿ ಮಾತಾಡುವುದರಿಂದ ಸತ್ಯದ ಮೌಲ್ಯ ಇಲ್ಲವೇ ಪ್ರಭಾವ ಹೆಚ್ಚುವುದಿಲ್ಲ. ಪೌಲನು ಹೇಳಿದ್ದು: “ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ. ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ ದೇವರು ಕ್ರಿಸ್ತನ ಮೂಲಕ ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರಿ.” (ಎಫೆ. 4:31, 32) ನಾವು ದಯೆಯಿಂದಲೂ ಗೌರವದಿಂದಲೂ ಮಾತಾಡುವಾಗ, ನಮ್ಮ ಸಂದೇಶದ ಮೌಲ್ಯ ಹೆಚ್ಚಾಗುತ್ತದೆ ಮತ್ತು ಯಾರೊಂದಿಗೆ ಮಾತಾಡುತ್ತೇವೋ ಅವರಿಗೆ ಗೌರವ ತೋರಿಸಿದಂತಾಗುತ್ತದೆ.—ಮತ್ತಾ. 23:12.

ಸಭಾ ವಿಷಯಗಳಲ್ಲಿ ಸತ್ಯವನ್ನಾಡಿರಿ

10. ಕ್ರೈಸ್ತ ಹಿರಿಯರು ಸತ್ಯವನ್ನಾಡುವ ವಿಷಯದಲ್ಲಿ ಯೇಸುವಿನ ಉತ್ಕೃಷ್ಟ ಮಾದರಿಯಿಂದ ಏನು ಕಲಿಯಬಲ್ಲರು?

10 ಯೇಸು ತನ್ನ ಶಿಷ್ಯರೊಂದಿಗೆ ಸರಳವಾಗಿ ಮತ್ತು ನೇರವಾಗಿ ಮಾತಾಡಿದನು. ಅವನ ಸಲಹೆಯು ಯಾವಾಗಲೂ ಪ್ರೀತಿಯಿಂದ ಕೂಡಿದ್ದಾಗಿತ್ತು. ಆದರೂ ಅವನು ತನ್ನ ಕೇಳುಗರನ್ನು ಖುಷಿಪಡಿಸಲಿಕ್ಕಾಗಿ ಸತ್ಯದ ತೀಕ್ಷ್ಣತೆಯನ್ನು ಕಡಿಮೆ ಮಾಡಲಿಲ್ಲ. (ಯೋಹಾ. 15:9-12) ಉದಾಹರಣೆಗೆ, ಅವನ ಅಪೊಸ್ತಲರು ತಮ್ಮಲ್ಲಿ ಶ್ರೇಷ್ಠರು ಯಾರೆಂದು ಪುನಃ ಪುನಃ ವಾದಮಾಡುತ್ತಿದ್ದಾಗ, ಅವರಲ್ಲಿ ದೀನಭಾವ ಇರಬೇಕೆಂಬುದನ್ನು ಅರ್ಥಮಾಡಿಸಲು ಅವನು ದೃಢವಾಗಿ ಆದರೆ ತಾಳ್ಮೆಯಿಂದ ಸಹಾಯಮಾಡಿದನು. (ಮಾರ್ಕ 9:33-37; ಲೂಕ 9:46-48; 22:24-27; ಯೋಹಾ. 13:14) ಅದೇ ರೀತಿಯಲ್ಲಿ ಇಂದು ಕ್ರೈಸ್ತ ಹಿರಿಯರು ನೀತಿಗಾಗಿ ದೃಢರಾಗಿದ್ದರೂ, ದೇವರ ಮಂದೆಯ ಮೇಲೆ ಪ್ರಭುತ್ವ ನಡೆಸುವುದಿಲ್ಲ. (ಮಾರ್ಕ 10:42-44) ಇತರರೊಂದಿಗೆ “ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ” ವ್ಯವಹರಿಸುವ ಮೂಲಕ ಅವರು ಕ್ರಿಸ್ತನನ್ನು ಅನುಕರಿಸುತ್ತಾರೆ.

11. ಸಹೋದರ ಪ್ರೀತಿ ನಾವು ನಾಲಿಗೆಯನ್ನು ಯಾವ ರೀತಿಯಲ್ಲಿ ಬಳಸುವಂತೆ ಪ್ರಚೋದಿಸಬೇಕು?

11 ನಾವು ಸಹೋದರರೊಂದಿಗೆ ಮುಚ್ಚುಮರೆಯಿಲ್ಲದೆ ಮಾತಾಡಬೇಕಾದರೂ ಅದನ್ನು ಅತಿಯಾಗಿ ಮಾಡದಿರುವ ಮೂಲಕ, ಅವರಿಗೆ ಸಿಟ್ಟುಬರದಂತೆ ನೋಡಿಕೊಳ್ಳುವೆವು. ನಮ್ಮ ನಾಲಿಗೆ “ಹದವಾದ ಕ್ಷೌರಕತ್ತಿಯಂತೆ” ಇರಬಾರದು. ದೂಷಣೀಯ ಇಲ್ಲವೇ ಅವಮಾನಕಾರೀ ಮಾತುಗಳನ್ನಾಡಿ ಮನನೋಯಿಸುವ ಗಾಯಗಳನ್ನು ಮಾಡಲು ನಾಲಿಗೆಯನ್ನು ಬಳಸಬಾರದು. (ಕೀರ್ತ. 52:2; ಜ್ಞಾನೋ. 12:18) ನಮ್ಮ ಸಹೋದರರ ಮೇಲಿನ ಪ್ರೀತಿಯು ನಾವು ‘ಕೇಡಿನಿಂದ ನಮ್ಮ ನಾಲಿಗೆಯನ್ನೂ ಮೋಸವನ್ನು ನುಡಿಯದ ಹಾಗೆ ನಮ್ಮ ತುಟಿಗಳನ್ನೂ ಕಾದುಕೊಳ್ಳಲು’ ಪ್ರಚೋದಿಸುವುದು. (ಕೀರ್ತ. 34:13, NIBV) ಈ ವಿಧದಲ್ಲಿ ನಾವು ದೇವರನ್ನು ಗೌರವಿಸುವೆವು ಮತ್ತು ಸಭೆಯ ಐಕ್ಯವನ್ನು ವರ್ಧಿಸುವೆವು.

12. ಸುಳ್ಳಾಡುವಿಕೆಯ ವಿಷಯದಲ್ಲಿ ಯಾವಾಗ ನ್ಯಾಯನಿರ್ಣಾಯಕ ಕ್ರಮಕೈಗೊಳ್ಳಬೇಕು? ವಿವರಿಸಿ.

12 ದುರುದ್ದೇಶಭರಿತ ಸುಳ್ಳು ಹೇಳುವವರಿಂದ ಸಭೆಯನ್ನು ರಕ್ಷಿಸಲಿಕ್ಕಾಗಿ ಹಿರಿಯರು ಶ್ರದ್ಧೆಯಿಂದ ಕೆಲಸಮಾಡುತ್ತಾರೆ. (ಯಾಕೋಬ 3:14-16 ಓದಿ.) ದುರುದ್ದೇಶಭರಿತ ಸುಳ್ಳನ್ನು ಒಬ್ಬ ವ್ಯಕ್ತಿಗೆ ಹಾನಿಮಾಡಲಿಕ್ಕಾಗಿ ಹೇಳಲಾಗುತ್ತದೆ. ಆ ವ್ಯಕ್ತಿಯನ್ನು ಯಾವುದಾದರೊಂದು ವಿಧದಲ್ಲಿ ಕಷ್ಟಕ್ಕೊಳಪಡಿಸಬೇಕೆಂಬ ಉದ್ದೇಶದಿಂದ ಅಂಥ ಸುಳ್ಳನ್ನು ಹೇಳಲಾಗುತ್ತದೆ. ಈ ರೀತಿಯ ಸುಳ್ಳು ಹೇಳುವಿಕೆಯು ಚಿಕ್ಕಪುಟ್ಟ ತಪ್ಪು ಹೇಳಿಕೆಗಳನ್ನು ಮಾಡುವುದು ಇಲ್ಲವೇ ನಿಜಾಂಶಗಳಿಗೆ ಬಣ್ಣಕಟ್ಟಿ ಹೇಳುವುದಕ್ಕಿಂತ ಹೆಚ್ಚಿನದ್ದಾಗಿರುತ್ತದೆ. ಯಾವುದೇ ರೀತಿಯಲ್ಲಿ ಸುಳ್ಳಾಡುವುದು ತಪ್ಪು ಎಂಬುದಂತೂ ನಿಜ. ಆದರೆ ಅಸತ್ಯವನ್ನಾಡಲಾಗಿರುವ ಪ್ರತಿಯೊಂದು ಸಂದರ್ಭದಲ್ಲಿ ನ್ಯಾಯನಿರ್ಣಾಯಕ ಕ್ರಮ ಕೈಗೊಳ್ಳಬೇಕಾಗಿರುವುದಿಲ್ಲ. ಒಂದುವೇಳೆ ಒಬ್ಬ ವ್ಯಕ್ತಿಗೆ ಬೇಕುಬೇಕೆಂದು ಹಾಗೂ ದುರುದ್ದೇಶದಿಂದ ಸುಳ್ಳು ಹೇಳುವ ಚಾಳಿ ಇರುವಲ್ಲಿ ನ್ಯಾಯನಿರ್ಣಾಯಕ ಕ್ರಮ ಕೈಗೊಳ್ಳಬೇಕಾದೀತು. ಆದುದರಿಂದ ಒಬ್ಬ ವ್ಯಕ್ತಿ ಅಸತ್ಯ ಹೇಳಿಕೆಗಳನ್ನು ಮಾಡಿರುವಾಗ, ನ್ಯಾಯನಿರ್ಣಾಯಕ ಕ್ರಮ ಕೈಗೊಳ್ಳಬೇಕೋ ಬೈಬಲ್‌ನಿಂದ ದೃಢವಾದ ಪ್ರೀತಿಪರ ಬುದ್ಧಿವಾದ ಕೊಟ್ಟರೆ ಸಾಕೋ ಎಂಬುದನ್ನು ನಿರ್ಣಯಿಸಲು ಹಿರಿಯರು ಸಮತೋಲನ, ವಿವೇಚನಾಶಕ್ತಿ ಹಾಗೂ ಉತ್ತಮ ವಿಮರ್ಶನಾಶಕ್ತಿಯನ್ನು ಬಳಸಬೇಕಾದೀತು.

ವ್ಯಾಪಾರ ವಹಿವಾಟುಗಳಲ್ಲಿ ಸತ್ಯವನ್ನಾಡಿರಿ

13, 14. (ಎ) ಕೆಲವು ಜನರು ತಮ್ಮ ಧಣಿಗಳೊಂದಿಗೆ ಸತ್ಯವಂತರಾಗಿರಲು ತಪ್ಪುವುದು ಹೇಗೆ? (ಬಿ) ಕೆಲಸದ ಸ್ಥಳದಲ್ಲಿ ಪ್ರಾಮಾಣಿಕರೂ ಸತ್ಯವಂತರೂ ಆಗಿರುವುದರಿಂದ ಯಾವ ಒಳ್ಳೇ ಫಲಿತಾಂಶ ಸಿಗಬಲ್ಲದು?

13 ನಾವಿಂದು ಜೀವಿಸುತ್ತಿರುವ ಯುಗದಲ್ಲಿ ಅಪ್ರಾಮಾಣಿಕತೆ ರಾರಾಜಿಸುತ್ತಿದೆ. ಆದುದರಿಂದ ಕೆಲಸದ ಸ್ಥಳದಲ್ಲಿ ಧಣಿಯೊಂದಿಗೆ ಅಪ್ರಾಮಾಣಿಕತೆಯಿಂದ ನಡೆದುಕೊಳ್ಳಲು ನಮಗೂ ಮನಸ್ಸಾಗಬಹುದು. ಎಷ್ಟೋ ಮಂದಿ, ಉದ್ಯೋಗಕ್ಕಾಗಿ ಅರ್ಜಿಹಾಕುವಾಗ ಸ್ವಲ್ಪವೂ ಅಳುಕಿಲ್ಲದೆ ಸುಳ್ಳಿನ ಕಂತೆಯನ್ನೇ ಕಟ್ಟುತ್ತಾರೆ. ಉದಾಹರಣೆಗೆ, ಇನ್ನಷ್ಟು ಒಳ್ಳೆಯ ಇಲ್ಲವೇ ಹೆಚ್ಚು ಸಂಬಳದ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲಿಕ್ಕಾಗಿ ಅವರು ಅರ್ಜಿಹಾಕುವಾಗ ತಮಗಿರುವ ಅನುಭವ ಇಲ್ಲವೇ ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿ ಬರೆಯುತ್ತಾರೆ. ಇನ್ನೊಂದು ಬದಿಯಲ್ಲಿ ಅನೇಕ ಮಂದಿ ಉದ್ಯೋಗಿಗಳು ಕೆಲಸಮಾಡುತ್ತಿದ್ದೇವೆಂದು ಹೇಳುತ್ತಾರಾದರೂ ನಿಜವಾಗಿ ಆ ಸಮಯದಲ್ಲಿ ಕಂಪೆನಿಯ ನಿಯಮಗಳಿಗೆ ವಿರುದ್ಧವಾಗಿ ವೈಯಕ್ತಿಕ ಕೆಲಸ ಮಾಡುತ್ತಿರುತ್ತಾರೆ. ಅವರು ತಮ್ಮ ಕೆಲಸಕ್ಕೆ ಸಂಬಂಧವಿಲ್ಲದ ಮಾಹಿತಿಯನ್ನು ಓದುತ್ತಿರುತ್ತಾರೆ, ವೈಯಕ್ತಿಕ ಫೋನ್‌ ಕರೆಗಳನ್ನು ಮಾಡುತ್ತಿರುತ್ತಾರೆ, ಕಂಪ್ಯೂಟರ್‌ ಇಲ್ಲವೇ ಮೊಬೈಲ್‌ ಮೂಲಕ ವೈಯಕ್ತಿಕ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ ಅಥವಾ ಇಂಟರ್‌ನೆಟ್‌ ಬ್ರೌಸ್‌ ಮಾಡುತ್ತಿರುತ್ತಾರೆ.

14 ಪ್ರಾಮಾಣಿಕರು ಮತ್ತು ಸತ್ಯವಂತರು ಆಗಿರುವುದು ತಮ್ಮ ಆಯ್ಕೆಗೆ ಬಿಟ್ಟ ವಿಷಯವಲ್ಲ ಎಂಬುದು ಸತ್ಕ್ರೈಸ್ತರಿಗೆ ಗೊತ್ತು. (ಜ್ಞಾನೋಕ್ತಿ 6:16-19 ಓದಿ.) ಪೌಲನಂದದ್ದು: ‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುತ್ತೇವೆ.’ (ಇಬ್ರಿ. 13:18) ಈ ಕಾರಣ ಕ್ರೈಸ್ತರು, ತಮಗೆ ಕೊಡಲಾಗುವ ಇಡೀ ದಿನದ ಸಂಬಳಕ್ಕೆ ಪ್ರತಿಯಾಗಿ ತಮ್ಮ ಧಣಿಗಳಿಗಾಗಿ ಇಡೀ ದಿನ ಪ್ರಾಮಾಣಿಕವಾಗಿ ಕೆಲಸಮಾಡುತ್ತಾರೆ. (ಎಫೆ. 6:5-8) ಶ್ರದ್ಧಾಪೂರ್ವಕ ದುಡಿಮೆಯು ನಮ್ಮ ಸ್ವರ್ಗೀಯ ತಂದೆಗೂ ಸ್ತುತಿ ತರುತ್ತದೆ. (1 ಪೇತ್ರ 2:12) ಉದಾಹರಣೆಗೆ, ಸ್ಪೆಯ್ನ್‌ನಲ್ಲಿರುವ ರಾಬರ್ಟೋವಿನ ಧಣಿಯು ಅವನೊಬ್ಬ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಕೆಲಸಗಾರನಾಗಿದ್ದಾನೆಂದು ಬೆನ್ನುತಟ್ಟಿದನು. ರಾಬರ್ಟೋವಿನ ಉತ್ತಮ ನಡತೆಯ ಕಾರಣ ಆ ಕಂಪೆನಿಯು ಇನ್ನಿತರ ಸಾಕ್ಷಿಗಳನ್ನೂ ಕೆಲಸಕ್ಕಿಟ್ಟುಕೊಂಡಿತು. ಇವರು ಸಹ ತುಂಬ ಒಳ್ಳೇ ಕೆಲಸಗಾರರಾಗಿದ್ದರು. ಇಷ್ಟರ ತನಕ ರಾಬರ್ಟೋ 23 ಮಂದಿ ದೀಕ್ಷಾಸ್ನಾತ ಸಹೋದರರಿಗೆ ಮತ್ತು 8 ಮಂದಿ ಬೈಬಲ್‌ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾನೆ!

15. ಒಬ್ಬ ಕ್ರೈಸ್ತ ವ್ಯಾಪಾರಸ್ಥನು, ತಾನು ಸತ್ಯವನ್ನಾಡುತ್ತೇನೆಂದು ಹೇಗೆ ತೋರಿಸಬಹುದು?

15 ನಾವು ಸ್ವ-ಉದ್ಯೋಗಸ್ಥರಾಗಿರುವಲ್ಲಿ, ನಮ್ಮೆಲ್ಲ ವ್ಯಾಪಾರ ವಹಿವಾಟುಗಳಲ್ಲಿ ಸತ್ಯವಂತರಾಗಿದ್ದೇವೋ, ಅಥವಾ ಕೆಲವೊಮ್ಮೆ ನಮ್ಮ ನೆರೆಯವನೊಂದಿಗೆ ಅಸತ್ಯವನ್ನಾಡುತ್ತೇವೋ? ಕ್ರೈಸ್ತ ವ್ಯಾಪಾರಸ್ಥನೊಬ್ಬನು ಒಂದು ಉತ್ಪನ್ನ ಇಲ್ಲವೇ ಸೇವಾಸೌಲಭ್ಯವನ್ನು ತ್ವರಿತವಾಗಿ ಮಾರಾಟ ಮಾಡಲಿಕ್ಕೋಸ್ಕರ ಅವುಗಳ ಬಗ್ಗೆ ತಪ್ಪು ಮಾಹಿತಿ ಕೊಡಬಾರದು. ಅವನು ಲಂಚ ಕೊಡಲೂಬಾರದು, ತೆಗೆದುಕೊಳ್ಳಲೂಬಾರದು. ಇತರರು ನಮ್ಮೊಂದಿಗೆ ಹೇಗೆ ವ್ಯವಹರಿಸಬೇಕೆಂದು ಅಪೇಕ್ಷಿಸುತ್ತೇವೋ ಅದೇ ರೀತಿಯಲ್ಲಿ ನಾವು ಅವರೊಂದಿಗೆ ವ್ಯವಹರಿಸಬೇಕು.—ಜ್ಞಾನೋ. 11:1; ಲೂಕ 6:31.

ಸರಕಾರೀ ಅಧಿಕಾರಿಗಳೊಂದಿಗೆ ಸತ್ಯವನ್ನಾಡಿರಿ

16. ಕ್ರೈಸ್ತರು ಸರಕಾರೀ ಅಧಿಕಾರಿಗಳಿಗೆ ಏನನ್ನು ಕೊಡುತ್ತಾರೆ, ಮತ್ತು ಯೆಹೋವನಿಗೆ ಏನನ್ನು ಕೊಡುತ್ತಾರೆ?

16 ಯೇಸು ಅಂದದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ.” (ಮತ್ತಾ. 22:21) ನಾವು ಕೈಸರನಿಗೆ ಅಂದರೆ ಸರಕಾರೀ ಅಧಿಕಾರಿಗಳಿಗೆ ಏನು ಕೊಡಬೇಕು? ಯೇಸು ಈ ಮಾತುಗಳನ್ನಾಡಿದಾಗ ತೆರಿಗೆಗಳ ಕುರಿತ ಚರ್ಚೆ ನಡೆಯುತ್ತಿತ್ತು. ದೇವರ ಹಾಗೂ ಮನುಷ್ಯರ ಮುಂದೆ ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಕ್ರೈಸ್ತರು ದೇಶದ ಕಾನೂನನ್ನು ಪಾಲಿಸುತ್ತಾರೆ ಮತ್ತು ಇದರಲ್ಲಿ, ತೆರಿಗೆಗಳನ್ನು ಸಲ್ಲಿಸುವ ಕಾನೂನು ಕೂಡ ಒಂದು. (ರೋಮ. 13:5, 6) ಆದರೆ ಏಕೈಕ ಸತ್ಯ ದೇವರಾದ ಯೆಹೋವನೇ ಪರಮಾಧಿಕಾರಿ ಪ್ರಭುವೆಂದು ನಾವು ಅಂಗೀಕರಿಸುತ್ತೇವೆ ಮತ್ತು ಆತನನ್ನು ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಬಲದಿಂದ ಪ್ರೀತಿಸುತ್ತೇವೆ. (ಮಾರ್ಕ 12:30; ಪ್ರಕ. 4:11) ಈ ಕಾರಣದಿಂದ ನಾವು ಆತನೊಬ್ಬನಿಗೆ ಮಾತ್ರ ಷರತ್ತಿಲ್ಲದ ಅಧೀನತೆ ತೋರಿಸುತ್ತೇವೆ.—ಕೀರ್ತನೆ 86:11, 12 ಓದಿ.

17. ಸರಕಾರೀ ನೆರವನ್ನು ಪಡೆಯುವುದರ ಬಗ್ಗೆ ಯೆಹೋವನ ಜನರ ನೋಟವೇನು?

17 ಅನೇಕ ದೇಶಗಳು, ಆರ್ಥಿಕ ಬೆಂಬಲದ ಅಗತ್ಯವಿರುವವರಿಗೆ ಸಹಾಯಮಾಡುವ ಸಾಮಾಜಿಕ ಯೋಜನೆಗಳು ಇಲ್ಲವೇ ಸೌಲಭ್ಯಗಳನ್ನು ದೊರಕಿಸಿಕೊಡುತ್ತವೆ. ಕ್ರೈಸ್ತನೊಬ್ಬನು ಇಂಥ ನೆರವನ್ನು ಪಡೆಯಲು ಅರ್ಹನಾಗಿರುವಲ್ಲಿ ಅದನ್ನು ತೆಗೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ನಾವು ನಮ್ಮ ನೆರೆಯವನೊಂದಿಗೆ ಸತ್ಯವನ್ನಾಡುವವರಾಗಿರುವಲ್ಲಿ, ಇಂಥ ನೆರವನ್ನು ಪಡೆಯಲಿಕ್ಕೋಸ್ಕರ ಸರಕಾರೀ ಅಧಿಕಾರಿಗಳಿಗೆ ಸುಳ್ಳು ಅಥವಾ ತಪ್ಪಾದ ಮಾಹಿತಿಯನ್ನು ಕೊಡುವುದಿಲ್ಲ.

ಸತ್ಯವಂತರಾಗಿರುವುದರಿಂದ ಸಿಗುವ ಆಶೀರ್ವಾದಗಳು

18-20. ನಮ್ಮ ನೆರೆಯವನೊಂದಿಗೆ ಸತ್ಯವಂತರಾಗಿರುವುದರಿಂದ ಸಿಗುವ ಆಶೀರ್ವಾದಗಳಾವುವು?

18 ಸತ್ಯವಂತರಾಗಿರುವದರಿಂದ ಬರುವ ಆಶೀರ್ವಾದಗಳೋ ಅನೇಕ. ನಮಗೆ ಶುದ್ಧ ಮನಸ್ಸಾಕ್ಷಿ ಇರುತ್ತದೆ. ಇದರಿಂದ ನಮಗೆ ಮನಶ್ಶಾಂತಿಯೂ ಪ್ರಶಾಂತ ಹೃದಯವೂ ಸಿಗುತ್ತದೆ. (ಜ್ಞಾನೋ. 14:30; ಫಿಲಿ. 4:6, 7) ನಮಗಿರುವ ಶುದ್ಧ ಮನಸ್ಸಾಕ್ಷಿಗೆ ದೇವರ ದೃಷ್ಟಿಯಲ್ಲಿ ತುಂಬ ಬೆಲೆಯುಂಟು. ಅಲ್ಲದೆ, ನಾವು ಎಲ್ಲ ವಿಷಯಗಳಲ್ಲೂ ಸತ್ಯವಂತರಾಗಿರುವಾಗ, ಯಾರಾದರೂ ನಮ್ಮ ಬಣ್ಣ ಬಯಲುಮಾಡುವರು ಇಲ್ಲವೇ ನಾವು ಯಾರ ಕೈಗಾದರೂ ಸಿಕ್ಕಿಬೀಳುವೆವೆಂಬ ಚಿಂತೆ ಇರುವುದಿಲ್ಲ.—1 ತಿಮೊ. 5:24.

19 ಇನ್ನೊಂದು ಆಶೀರ್ವಾದವನ್ನು ಪರಿಗಣಿಸಿರಿ. ಪೌಲನಂದದ್ದು: ‘ಸತ್ಯವಾದ ಮಾತಿನಿಂದ ಪ್ರತಿಯೊಂದು ವಿಧದಲ್ಲಿ ನಾವು ದೇವರ ಶುಶ್ರೂಷಕರಾಗಿ ನಮ್ಮನ್ನು ಶಿಫಾರಸ್ಸು ಮಾಡಿಕೊಳ್ಳುತ್ತಿದ್ದೇವೆ.’ (2 ಕೊರಿಂ. 6:4, 7) ಈ ಮಾತು, ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಸಾಕ್ಷಿಯೊಬ್ಬನ ವಿಷಯದಲ್ಲಿ ಸತ್ಯವಾಗಿತ್ತು. ಅವನಿಗೆ ತನ್ನ ಕಾರನ್ನು ಮಾರಲಿಕ್ಕಿತ್ತು. ಬಂದಂಥ ಒಬ್ಬ ಗಿರಾಕಿಗೆ ಅವನು ಆ ಕಾರ್‌ನ ಒಳ್ಳೇ ಅಂಶಗಳನ್ನೂ, ದೋಷಗಳನ್ನೂ—ಕಣ್ಣಿಗೆ ಬೀಳದಂಥ ದೋಷಗಳನ್ನೂ ತಿಳಿಸಿದನು. ಆ ಕಾರನ್ನು ಪರೀಕ್ಷಿಸಲಿಕ್ಕಾಗಿ ಒಮ್ಮೆ ಓಡಿಸಿ ನೋಡಿದ ಬಳಿಕ ಆ ಗಿರಾಕಿಯು ಸಹೋದರನಿಗೆ, ನೀನೊಬ್ಬ ಯೆಹೋವನ ಸಾಕ್ಷಿಯೋ ಎಂದು ಕೇಳಿದನು. ಅವನಿಗೆ ಹಾಗೆ ಅನಿಸಿದ್ದೇಕೆ? ಆ ವ್ಯಕ್ತಿ ನಮ್ಮ ಸಹೋದರನ ಪ್ರಾಮಾಣಿಕತೆ ಹಾಗೂ ನೀಟಾದ ತೋರಿಕೆಯನ್ನು ಗಮನಿಸಿದ್ದನು. ಮುಂದೆ ನಡೆದ ಚರ್ಚೆಯಿಂದಾಗಿ ಆ ವ್ಯಕ್ತಿಗೆ ಉತ್ತಮ ಸಾಕ್ಷಿಯನ್ನು ಕೊಡಲಾಯಿತು.

20 ನಮ್ಮ ಉತ್ತಮ ನೈತಿಕ ನಡತೆಯಿಂದ ನಾವು ಸಹ ಅದೇ ರೀತಿಯಲ್ಲಿ ನಮ್ಮ ಸೃಷ್ಟಿಕರ್ತನಿಗೆ ಸ್ತುತಿ ತರುತ್ತೇವೋ? ಪೌಲನಂದದ್ದು: ‘ನಾವು ನಾಚಿಕೆಪಡುವಂಥ ಗುಪ್ತಕಾರ್ಯಗಳನ್ನು ಬಿಟ್ಟುಬಿಟ್ಟಿದ್ದೇವೆ ಮತ್ತು ಕುತಂತ್ರದಿಂದಲೂ ನಡೆಯುವುದಿಲ್ಲ.’ (2 ಕೊರಿಂ. 4:2) ಹೀಗಿರುವುದರಿಂದ ನಮ್ಮ ನೆರೆಯವನೊಂದಿಗೆ ಸತ್ಯವನ್ನಾಡಲು ನಮ್ಮಿಂದಾದುದ್ದೆಲ್ಲವನ್ನು ಮಾಡೋಣ. ಹೀಗೆ, ನಮ್ಮ ಸ್ವರ್ಗೀಯ ತಂದೆಗೂ ಆತನ ಜನರಿಗೂ ಮಹಿಮೆ ತರುವೆವು.

ನಿಮ್ಮ ಉತ್ತರವೇನು?

• ನಮ್ಮ ನೆರೆಯವನು ಯಾರು?

• ನಮ್ಮ ನೆರೆಯವನೊಂದಿಗೆ ಸತ್ಯವನ್ನಾಡುವುದರ ಅರ್ಥವೇನು?

• ಸತ್ಯವಂತರಾಗಿರುವುದು ದೇವರಿಗೆ ಮಹಿಮೆ ತರುವುದು ಹೇಗೆ?

• ಸತ್ಯವಂತರಾಗಿರುವುದರಿಂದ ಸಿಗುವ ಆಶೀರ್ವಾದಗಳಾವುವು?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

ಚಿಕ್ಕಪುಟ್ಟ ತಪ್ಪುಗಳನ್ನು ಸಹ ಕೂಡಲೇ ಒಪ್ಪಿಕೊಳ್ಳುತ್ತೀರೋ?

[ಪುಟ 18ರಲ್ಲಿರುವ ಚಿತ್ರ]

ಕೆಲಸಕ್ಕೆ ಅರ್ಜಿಹಾಕುವಾಗ ಸತ್ಯವನ್ನಾಡುತ್ತೀರೋ?