ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಂಬಿಗಸ್ತ ಮನೆವಾರ್ತೆಯವ ಮತ್ತು ಆಡಳಿತ ಮಂಡಲಿ

ನಂಬಿಗಸ್ತ ಮನೆವಾರ್ತೆಯವ ಮತ್ತು ಆಡಳಿತ ಮಂಡಲಿ

ನಂಬಿಗಸ್ತ ಮನೆವಾರ್ತೆಯವ ಮತ್ತು ಆಡಳಿತ ಮಂಡಲಿ

“ತಕ್ಕ ಸಮಯಕ್ಕೆ ತನ್ನ ಸೇವಕರ ಗುಂಪಿಗೆ ಅವರ ಪಾಲಿನ ಆಹಾರವನ್ನು ಅಳೆದುಕೊಡುತ್ತಾ ಇರಲಿಕ್ಕಾಗಿ ಯಜಮಾನನು ನೇಮಿಸುವ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಮನೆವಾರ್ತೆಯವನು ನಿಜವಾಗಿಯೂ ಯಾರು?”—ಲೂಕ 12:42.

1, 2. ಕಡೇ ದಿವಸಗಳ ಸೂಚನೆ ಕೊಡುತ್ತಿದ್ದಾಗ ಯೇಸು ಯಾವ ಪ್ರಾಮುಖ್ಯ ಪ್ರಶ್ನೆ ಕೇಳಿದನು?

ಯೇಸು ಕಡೇ ದಿವಸಗಳ ಬಗ್ಗೆ, ಅನೇಕ ಘಟನೆಗಳಿಂದ ಕೂಡಿದ ಒಂದು ಸೂಚನೆಯನ್ನು ಕೊಡುತ್ತಿದ್ದಾಗ, “ತನ್ನ ಮನೆಯವರಿಗೆ ತಕ್ಕ ಸಮಯಕ್ಕೆ ಆಹಾರವನ್ನು ಕೊಡಲಿಕ್ಕಾಗಿ ಯಜಮಾನನು ನೇಮಿಸಿದ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?” ಎಂದು ಕೇಳಿದನು. ಅವನೇ ಮುಂದುವರಿಸುತ್ತಾ, ಈ ಆಳು ತನ್ನ ಕೆಲಸವನ್ನು ನಂಬಿಗಸ್ತಿಕೆಯಿಂದ ಮಾಡಿದ್ದಕ್ಕಾಗಿ ಯಜಮಾನನು ಅವನನ್ನು ತನ್ನೆಲ್ಲ ಆಸ್ತಿಯ ಮೇಲೆ ನೇಮಿಸುವ ಮೂಲಕ ಪ್ರತಿಫಲಕೊಡುವನೆಂದು ಹೇಳಿದನು.—ಮತ್ತಾ. 24:45-47.

2 ಅದೇ ರೀತಿಯ ಪ್ರಶ್ನೆಯನ್ನು ಯೇಸು ಕೆಲವು ತಿಂಗಳುಗಳ ಹಿಂದೆಯೂ ಕೇಳಿದ್ದನು. (ಲೂಕ 12:42-44 ಓದಿ.) ಆ ಸಂದರ್ಭದಲ್ಲಿ ಅವನು ಆಳನ್ನು ಒಬ್ಬ “ಮನೆವಾರ್ತೆಯವ” ಎಂದೂ, ‘ಮನೆಯವರನ್ನು’ ‘ತನ್ನ ಸೇವಕರ ಗುಂಪು’ ಎಂದೂ ಕರೆದನು. ಒಬ್ಬ ಮನೆವಾರ್ತೆಯವನು, ಸೇವಕರ ಮೇಲೆ ನೇಮಿಸಲಾಗಿರುವ ಒಬ್ಬ ಗೃಹನಿರ್ವಾಹಕ ಇಲ್ಲವೇ ಆಡಳಿತಗಾರನಾಗಿರುತ್ತಾನೆ. ಅವನು ಸಹ ಒಬ್ಬ ಸೇವಕನೇ. ಆದರೆ ಯೇಸು ತಿಳಿಸಿದ ಆಳು ಇಲ್ಲವೇ ಮನೆವಾರ್ತೆಯವ ಯಾರು ಮತ್ತು ಅವನು ‘ತಕ್ಕ ಸಮಯಕ್ಕೆ ಆಹಾರ ಕೊಡುವುದು’ ಹೇಗೆ? ಆಧ್ಯಾತ್ಮಿಕ ಆಹಾರವನ್ನು ಒದಗಿಸಲಿಕ್ಕಾಗಿ ಬಳಸಲಾಗುವ ಈ ಮಾಧ್ಯಮವನ್ನು ನಾವೆಲ್ಲರೂ ಅಂಗೀಕರಿಸುವುದು ಅತ್ಯಾವಶ್ಯಕ.

3. (ಎ) ‘ಆಳಿನ’ ಕುರಿತ ಯೇಸುವಿನ ಹೇಳಿಕೆಗಳನ್ನು ಕ್ರೈಸ್ತಪ್ರಪಂಚದ ವ್ಯಾಖ್ಯಾನಕಾರರು ಹೇಗೆ ವಿವರಿಸಿದ್ದಾರೆ? (ಬಿ) “ಮನೆವಾರ್ತೆಯವ” ಇಲ್ಲವೇ “ಆಳು” ಯಾರು, ಮತ್ತು ‘ಸೇವಕರು’ ಇಲ್ಲವೇ ‘ಮನೆಯವರು’ ಯಾರು?

3 ಯೇಸುವಿನ ಮಾತುಗಳು, ಕ್ರೈಸ್ತರೆಂದು ಹೇಳಿಕೊಳ್ಳುವವರ ಮಧ್ಯೆ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಸೂಚಿಸುತ್ತವೆ ಎಂಬುದು ಕ್ರೈಸ್ತಪ್ರಪಂಚದ ವ್ಯಾಖ್ಯಾನಕಾರರಲ್ಲಿ ಅನೇಕರ ಅಭಿಪ್ರಾಯ. ಆದರೆ ಆ ದೃಷ್ಟಾಂತದಲ್ಲಿ ತಿಳಿಸಲಾದ ‘ಯಾಜಮಾನ’ ಅಂದರೆ ಯೇಸು, ಕ್ರೈಸ್ತಪ್ರಪಂಚದ ವಿಭಿನ್ನ ಪಂಗಡಗಳಾದ್ಯಂತ ಹಲವಾರು ಆಳುಗಳು ಇರುವರೆಂದು ಹೇಳಲಿಲ್ಲ. ಬದಲಾಗಿ, ಕೇವಲ ಒಬ್ಬ “ಮನೆವಾರ್ತೆಯವ” ಇಲ್ಲವೇ “ಆಳು” ಇರುವನು ಮತ್ತು ಅವನನ್ನು ತನ್ನ ಎಲ್ಲ ಆಸ್ತಿಯ ಮೇಲೆ ನೇಮಿಸುವೆನೆಂದು ಸ್ಪಷ್ಟವಾಗಿ ತಿಳಿಸಿದನು. ಆದುದರಿಂದ ಈ ಪತ್ರಿಕೆ ಅನೇಕ ಸಲ ವಿವರಿಸಿರುವಂತೆ, ‘ಚಿಕ್ಕ ಹಿಂಡು’ ಇಲ್ಲವೇ ಭೂಮಿಯ ಮೇಲಿರುವ ಅಭಿಷಿಕ್ತ ಶಿಷ್ಯರನ್ನು ಒಂದು ಗುಂಪಾಗಿ ಸೂಚಿಸಲು ಮನೆವಾರ್ತೆಯವ ಎಂಬ ಪದ ಬಳಸಲಾಗಿದೆ. ಲೂಕ ಪುಸ್ತಕದಲ್ಲಿನ ಹಿಂದಿನ ವಚನಗಳಲ್ಲಿ ಯೇಸು ಆ ಅಭಿಷಿಕ್ತರ ಬಗ್ಗೆಯೇ ಮಾತಾಡಿದ್ದನು. (ಲೂಕ 12:32) ಆದರೆ ಅದೇ ಗುಂಪಿನ ಸದಸ್ಯರನ್ನು ಸೂಚಿಸುವಾಗ ‘ಸೇವಕರು’ ಇಲ್ಲವೇ ‘ಮನೆಯವರು’ ಎಂಬ ಪದಗಳನ್ನು ಬಳಸಲಾಗಿದೆ. ಈಗ ಏಳುವ ಆಸಕ್ತಿಕರ ಪ್ರಶ್ನೆಯೇನೆಂದರೆ, ತಕ್ಕ ಸಮಯದಲ್ಲಿ ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಕೆಲಸದಲ್ಲಿ ಈ ಆಳುವರ್ಗದ ಪ್ರತಿಯೊಬ್ಬ ಸದಸ್ಯನೂ ಪಾಲ್ಗೊಳ್ಳುತ್ತಾನೋ? ಬೈಬಲನ್ನು ಕೂಲಂಕಷವಾಗಿ ಪರಿಶೀಲಿಸುವಾಗ ನಮಗೆ ಉತ್ತರ ಸಿಗುತ್ತದೆ.

ಗತಕಾಲದಲ್ಲಿ ಯೆಹೋವನ ಸೇವಕ

4. ಯೆಹೋವನು ಪ್ರಾಚೀನ ಇಸ್ರಾಯೇಲ್‌ ಜನಾಂಗವನ್ನು ಏನೆಂದು ಕರೆದನು, ಮತ್ತು ಆ ಜನಾಂಗದ ಬಗ್ಗೆ ಗಮನ ಕೊಡಬೇಕಾದ ಸಂಗತಿಯೇನು?

4 ಯೆಹೋವನು ತನ್ನ ಜನರಾಗಿದ್ದ ಪ್ರಾಚೀನಕಾಲದ ಇಸ್ರಾಯೇಲ್‌ ಜನಾಂಗದ ಸದಸ್ಯರೆಲ್ಲರನ್ನು ಒಟ್ಟಾಗಿ ಒಬ್ಬ ಸೇವಕನು ಎಂದು ಕರೆದನು. “ಯೆಹೋವನ ಮಾತೇನಂದರೆ—ನೀವು [ಬಹುವಚನ] ನನ್ನ ಸಾಕ್ಷಿ [ಏಕವಚನ], ನಾನು ಆರಿಸಿಕೊಂಡಿರುವ ಸೇವಕನು [ಏಕವಚನ].” (ಯೆಶಾ. 43:10) ಆ ಜನಾಂಗದ ಸದಸ್ಯರೆಲ್ಲರೂ ಆ ಒಂದೇ ಸೇವಕವರ್ಗಕ್ಕೆ ಸೇರಿದವರಾಗಿದ್ದರು. ಆದರೆ ಗಮನ ಕೊಡಬೇಕಾದ ಸಂಗತಿಯೇನೆಂದರೆ, ಆ ಜನಾಂಗಕ್ಕೆ ಉಪದೇಶಿಸುವ ಜವಾಬ್ದಾರಿ ಯಾಜಕರಿಗೆ ಮತ್ತು ಯಾಜಕರಲ್ಲದ ಲೇವ್ಯರಿಗೆ ಮಾತ್ರ ಇತ್ತು.—2 ಪೂರ್ವ. 35:3; ಮಲಾ. 2:7.

5. ಯೇಸುವಿಗನುಸಾರ ಯಾವ ಪ್ರಮುಖ ಬದಲಾವಣೆ ನಡೆಯಲಿತ್ತು?

5 ಯೇಸು ತಿಳಿಸಿದ ಆಳು, ಇಸ್ರಾಯೇಲ್‌ ಜನಾಂಗವಾಗಿತ್ತೋ? ಇಲ್ಲ. ಏಕೆಂದರೆ ತನ್ನ ದಿನದ ಯೆಹೂದ್ಯರಿಗೆ ಯೇಸು ಹೀಗಂದಿದ್ದನು: “ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವುದು.” (ಮತ್ತಾ. 21:43) ಒಂದು ಬದಲಾವಣೆ ಆಗಲಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಸ್ರಾಯೇಲ್‌ ಜನಾಂಗದ ಬದಲಿಗೆ ಯೆಹೋವನು ಒಂದು ಹೊಸ ಜನಾಂಗವನ್ನು ಬಳಸಲಿದ್ದನು. ಹಾಗಿದ್ದರೂ ಆಧ್ಯಾತ್ಮಿಕ ಉಪದೇಶದ ವಿಷಯದಲ್ಲಿ ಯೇಸುವಿನ ದೃಷ್ಟಾಂತದಲ್ಲಿನ ಆಳು, ಪ್ರಾಚೀನ ಇಸ್ರಾಯೇಲೆಂಬ ದೇವರ ‘ಸೇವಕ’ನಂತೆಯೇ ಕಾರ್ಯನಿರ್ವಹಿಸುತ್ತದೆ.

ನಂಬಿಗಸ್ತ ಆಳು ತೋರಿಬರುತ್ತಾನೆ

6. ಸಾ.ಶ. 33ರ ಪಂಚಾಶತ್ತಮದಂದು ಯಾವ ಹೊಸ ಜನಾಂಗ ಅಸ್ತಿತ್ವಕ್ಕೆ ಬಂತು, ಮತ್ತು ಯಾರು ಅದರ ಭಾಗವಾದರು?

6 ‘ದೇವರ ಇಸ್ರಾಯೇಲ್‌’ ಎಂಬ ಹೊಸ ಜನಾಂಗದ ಸದಸ್ಯರು ಆಧ್ಯಾತ್ಮಿಕ ಇಸ್ರಾಯೇಲ್ಯರಾಗಿದ್ದಾರೆ. (ಗಲಾ. 6:16; ರೋಮ. 2:28, 29; 9:6) ಈ ಜನಾಂಗವು ಸಾ.ಶ. 33ರ ಪಂಚಾಶತ್ತಮದಲ್ಲಿ ದೇವರಾತ್ಮವು ಸುರಿಸಲ್ಪಟ್ಟಾಗ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಆತ್ಮಾಭಿಷಿಕ್ತ ಕ್ರೈಸ್ತರೆಲ್ಲರೂ ಆ ಜನಾಂಗದ ಭಾಗವಾದರು. ಆ ಜನಾಂಗವೇ ಯಜಮಾನನಾದ ಯೇಸು ಕ್ರಿಸ್ತನು ನೇಮಿಸಿದ ಆಳುವರ್ಗವಾಯಿತು. ಆ ಜನಾಂಗದ ಪ್ರತಿಯೊಬ್ಬ ಸದಸ್ಯನಿಗೂ, ಸುವಾರ್ತೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ನೇಮಕ ಕೊಡಲಾಯಿತು. (ಮತ್ತಾ. 28:19, 20) ಆದರೆ ಆ ಗುಂಪಿನ ಪ್ರತಿಯೊಬ್ಬ ಸದಸ್ಯನೂ, ತಕ್ಕ ಸಮಯದಲ್ಲಿ ಆಧ್ಯಾತ್ಮಿಕ ಆಹಾರವನ್ನು ಒದಗಿಸುವುದರಲ್ಲಿ ಪಾಲ್ಗೊಳ್ಳಲಿದ್ದನೋ? ಈ ಪ್ರಶ್ನೆಗೆ ಬೈಬಲ್‌ ಹೇಗೆ ಉತ್ತರಕೊಡುತ್ತದೆಂದು ನೋಡೋಣ.

7. ಆರಂಭದಲ್ಲಿ ಅಪೊಸ್ತಲರ ಪ್ರಮುಖ ನೇಮಕವೇನಾಗಿತ್ತು, ಮತ್ತು ಆ ನೇಮಕವನ್ನು ತದನಂತರ ಹೇಗೆ ವಿಸ್ತರಿಸಲಾಯಿತು?

7 ಯೇಸು ತನ್ನ 12 ಮಂದಿ ಅಪೊಸ್ತಲರನ್ನು ಆಯ್ಕೆಮಾಡಿದಾಗ ಅವರ ಪ್ರಮುಖ ನೇಮಕದಲ್ಲಿ, ಇತರರಿಗೆ ಸುವಾರ್ತೆ ಸಾರಲು ಕಳುಹಿಸಲ್ಪಡುವುದು ಸೇರಿತ್ತು. (ಮಾರ್ಕ 3:13-15 ಓದಿ.) ಅವರ ಈ ನೇಮಕವು “ಕಳುಹಿಸಲ್ಪಡು” ಎಂಬರ್ಥವಿರುವ ಅಪೊಸ್ಟೊಲೊಸ್‌ ಎಂಬ ಗ್ರೀಕ್‌ ಕ್ರಿಯಾಪದಕ್ಕೆ ಹೊಂದಿಕೆಯಲ್ಲಿದೆ. ಆದರೆ ಸಮಯ ದಾಟಿ ಕ್ರೈಸ್ತ ಸಭೆಯ ಸ್ಥಾಪನೆಯಾಗಲಿದ್ದಾಗ, ಅಪೊಸ್ತಲರ ಪಾತ್ರವು “ಮೇಲ್ವಿಚಾರಣೆಯ ಸ್ಥಾನ”ವಾಗಿ ಪರಿಣಮಿಸಿತು.—ಅ. ಕಾ. 1:20-26.

8, 9. (ಎ) 12 ಮಂದಿ ಅಪೊಸ್ತಲರ ಪ್ರಧಾನ ಕೆಲಸವೇನಾಗಿತ್ತು? (ಬಿ) ಇನ್ನಾರಿಗೆ ಕೊಡಲಾದ ಹೆಚ್ಚಿನ ಜವಾಬ್ದಾರಿಗಳನ್ನು ಆಡಳಿತ ಮಂಡಲಿಯು ದೃಢೀಕರಿಸಿತು?

8 ಹನ್ನೆರಡು ಮಂದಿ ಅಪೊಸ್ತಲರ ಪ್ರಧಾನ ಕೆಲಸವೇನಾಗಿತ್ತು? ಇದನ್ನು, ಪಂಚಾಶತ್ತಮ ದಿನದ ನಂತರದ ಘಟನೆಗಳಿಂದ ತಿಳಿದುಕೊಳ್ಳಬಹುದು. ವಿಧವೆಯರಿಗೆ ಪ್ರತಿದಿನ ಮಾಡಲಾಗುತ್ತಿದ್ದ ಆಹಾರ ವಿತರಣೆಯ ಕುರಿತು ಒಂದು ವಿವಾದವೆದ್ದಿತು. ಆಗ 12 ಮಂದಿ ಅಪೊಸ್ತಲರು ಶಿಷ್ಯರನ್ನು ಒಟ್ಟುಗೂಡಿಸಿ, “ದೇವರ ವಾಕ್ಯವನ್ನು ಬೋಧಿಸುವುದನ್ನು ಬಿಟ್ಟು ಆಹಾರ ವಿತರಣೆಯಲ್ಲಿ ತೊಡಗುವುದು ನಮಗೆ ಹಿತವೆನಿಸುವುದಿಲ್ಲ” ಎಂದು ಹೇಳಿದರು. (ಅ. ಕಾರ್ಯಗಳು 6:1-6 ಓದಿ.) ಆದುದರಿಂದ ಅಪೊಸ್ತಲರು ಆಧ್ಯಾತ್ಮಿಕ ಅರ್ಹತೆಯುಳ್ಳ ಇತರ ಸಹೋದರರನ್ನು ಈ ‘ಆವಶ್ಯಕ ಕೆಲಸದ ಮೇಲೆ ನೇಮಿಸಿದರು.’ ಹೀಗೆ ಅಪೊಸ್ತಲರು ‘ವಾಕ್ಯಕ್ಕೆ ಸಂಬಂಧಿಸಿದ ಶುಶ್ರೂಷಾ ಕಾರ್ಯದಲ್ಲಿ ನಿರತರಾಗಿರಲು’ ಸಾಧ್ಯವಾಯಿತು. ಈ ಏರ್ಪಾಡಿನ ಮೇಲೆ ಯೆಹೋವನ ಆಶೀರ್ವಾದ ಇದ್ದದ್ದರಿಂದಲೇ “ದೇವರ ವಾಕ್ಯವು ಅಭಿವೃದ್ಧಿಹೊಂದುತ್ತಾ ಮತ್ತು ಯೆರೂಸಲೇಮಿನಲ್ಲಿ ಶಿಷ್ಯರ ಸಂಖ್ಯೆಯು ಬಹಳವಾಗಿ ಹೆಚ್ಚುತ್ತಾ ಹೋಯಿತು.” (ಅ. ಕಾ. 6:7) ಹಾಗಾದರೆ, ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಮುಖ್ಯ ಜವಾಬ್ದಾರಿ ಅಪೊಸ್ತಲರದ್ದಾಗಿತ್ತು ಎಂಬುದು ತಿಳಿದುಬರುತ್ತದೆ.—ಅ. ಕಾ. 2:42.

9 ಸಕಾಲದಲ್ಲಿ ಇತರರಿಗೂ ಭಾರೀ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಪವಿತ್ರಾತ್ಮದ ನಿರ್ದೇಶನದ ಮೇರೆಗೆ ಅಂತಿಯೋಕ್ಯದ ಸಭೆಯು ಪೌಲಬಾರ್ನಬರನ್ನು ಮಿಷನೆರಿಗಳಾಗಿ ಕಳುಹಿಸಿತು. ಆರಂಭದಲ್ಲಿ ಯೇಸು ಆರಿಸಿದ 12 ಮಂದಿ ಅಪೊಸ್ತಲರ ಗುಂಪಿನಲ್ಲಿ ಇವರು ಇಲ್ಲದಿದ್ದರೂ ಅಪೊಸ್ತಲರೆಂದು ಪ್ರಸಿದ್ಧರಾದರು. (ಅ. ಕಾ. 13:1-3; 14:14; ಗಲಾ. 1:19) ಅವರ ನೇಮಕವನ್ನು ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿ ದೃಢೀಕರಿಸಿತು. (ಗಲಾ. 2:7-10) ಇದಾಗಿ ಸ್ವಲ್ಪ ಸಮಯದಲ್ಲೇ, ಪೌಲನು ಸಹ ಆಧ್ಯಾತ್ಮಿಕ ಆಹಾರವನ್ನು ಕೊಡುವುದರಲ್ಲಿ ಪಾಲ್ಗೊಳ್ಳುತ್ತಾ ತನ್ನ ಪ್ರಪ್ರಥಮ ಪ್ರೇರಿತ ಪತ್ರ ಬರೆದನು.

10. ಪ್ರಥಮ ಶತಮಾನದಲ್ಲಿ ಎಲ್ಲಾ ಆತ್ಮಾಭಿಷಿಕ್ತ ಕ್ರೈಸ್ತರು ಆಧ್ಯಾತ್ಮಿಕ ಆಹಾರವನ್ನು ತಯಾರಿಸುವುದರಲ್ಲಿ ಒಳಗೂಡಿದ್ದರೋ? ವಿವರಿಸಿ.

10 ಆದರೆ, ಸಾರುವ ಕೆಲಸದ ಮೇಲ್ವಿಚಾರಣೆಯಲ್ಲಿ ಮತ್ತು ಆಧ್ಯಾತ್ಮಿಕ ಆಹಾರವನ್ನು ತಯಾರಿಸುವುದರಲ್ಲಿ ಎಲ್ಲ ಆತ್ಮಾಭಿಷಿಕ್ತ ಕ್ರೈಸ್ತರು ಒಳಗೂಡಿದ್ದರೋ? ಇಲ್ಲ. ಅಪೊಸ್ತಲ ಪೌಲನು ಹೀಗನ್ನುತ್ತಾನೆ: “ಎಲ್ಲರೂ ಅಪೊಸ್ತಲರಲ್ಲ, ಅಲ್ಲವೆ? ಎಲ್ಲರೂ ಪ್ರವಾದಿಗಳಲ್ಲ, ಅಲ್ಲವೆ? ಎಲ್ಲರೂ ಬೋಧಕರಲ್ಲ, ಅಲ್ಲವೆ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವುದಿಲ್ಲ, ಅಲ್ಲವೆ?” (1 ಕೊರಿಂ. 12:29) ಆತ್ಮಾಭಿಷಿಕ್ತ ಕ್ರೈಸ್ತರೆಲ್ಲರೂ ಸಾರುವ ಕೆಲಸದಲ್ಲಿ ಪಾಲ್ಗೊಂಡಿದ್ದರೂ, ಸೀಮಿತ ಸಂಖ್ಯೆಯ ಪುರುಷರನ್ನು ಅಂದರೆ ಬರೀ 8 ಮಂದಿಯನ್ನು, ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ 27 ಪುಸ್ತಕಗಳನ್ನು ಬರೆಯಲು ಉಪಯೋಗಿಸಲಾಯಿತು.

ಆಧುನಿಕ ಸಮಯಗಳಲ್ಲಿ ನಂಬಿಗಸ್ತ ಆಳು

11. ಆಳನ್ನು ಯಾವ ‘ಆಸ್ತಿಯ’ ಮೇಲೆ ನೇಮಿಸಲಾಗಿದೆ?

11 ಭೂಮಿಯ ಮೇಲೆ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳುವರ್ಗ ಅಂತ್ಯಕಾಲದಲ್ಲೂ ಇರುವುದು ಎಂಬುದನ್ನು ಮತ್ತಾಯ 24:45ರಲ್ಲಿರುವ ಯೇಸುವಿನ ಮಾತುಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಪ್ರಕಟನೆ 12:17ರಲ್ಲಿ ಆ ವರ್ಗದವರನ್ನು, ಸ್ತ್ರೀಯ ಸಂತಾನದಲ್ಲಿ ‘ಉಳಿದವರು’ ಎಂದು ಕರೆಯಲಾಗಿದೆ. ಈ ಉಳಿಕೆಯವರನ್ನು ಒಂದು ಗುಂಪಾಗಿ, ಭೂಮಿಯ ಮೇಲಿನ ಕ್ರಿಸ್ತನ ಎಲ್ಲ ಆಸ್ತಿಯ ಮೇಲೆ ನೇಮಿಸಲಾಗಿದೆ. ನಂಬಿಗಸ್ತ ಮನೆವಾರ್ತೆಯವನಿಗೆ ನೋಡಿಕೊಳ್ಳುವಂತೆ ನೇಮಿಸಲಾಗಿರುವ ಈ “ಆಸ್ತಿ,” ಭೂಮಿ ಮೇಲಿರುವ ಯಜಮಾನನ ಅಭಿರುಚಿಗಳಾಗಿವೆ. ಇದರಲ್ಲಿ, ರಾಜ್ಯದ ಭೂಪ್ರಜೆಗಳು ಮತ್ತು ಸುವಾರ್ತೆ ಸಾರಲು ಬಳಸಲಾಗಿರುವ ಭೌತಿಕ ಸೌಕರ್ಯಗಳು ಸೇರಿವೆ.

12, 13. ಒಬ್ಬ ಕ್ರೈಸ್ತನಿಗೆ/ಳಿಗೆ ತನಗೆ ಸ್ವರ್ಗೀಯ ಕರೆ ಸಿಕ್ಕಿದೆಯೆಂದು ಹೇಗೆ ಗೊತ್ತಾಗುತ್ತದೆ?

12 ತನಗೆ ಸ್ವರ್ಗೀಯ ನಿರೀಕ್ಷೆಯಿದೆ ಮತ್ತು ಆಧ್ಯಾತ್ಮಿಕ ಇಸ್ರಾಯೇಲ್ಯರ ಉಳಿಕೆಯವರಲ್ಲಿ ತಾನೂ ಒಬ್ಬನೆಂದು ಕ್ರೈಸ್ತನೊಬ್ಬನಿಗೆ ತಿಳಿದುಬರುವುದು ಹೇಗೆ? ಇದಕ್ಕೆ, ಸ್ವರ್ಗೀಯ ನಿರೀಕ್ಷೆಯಲ್ಲಿ ತನ್ನೊಂದಿಗೆ ಭಾಗಿಗಳಾಗಿರುವವರಿಗೆ ಅಪೊಸ್ತಲ ಪೌಲನು ಹೇಳಿದ ಈ ಮಾತುಗಳಲ್ಲಿ ಉತ್ತರವಿದೆ: “ದೇವರಾತ್ಮದಿಂದ ನಡೆಸಲ್ಪಡುವವರೆಲ್ಲರು ದೇವರ ಪುತ್ರರಾಗಿದ್ದಾರೆ. ದೇವರ ಪವಿತ್ರಾತ್ಮವು ನಮ್ಮನ್ನು ದಾಸತ್ವಕ್ಕೆ ನಡೆಸುವುದಿಲ್ಲ ಮತ್ತು ಅದು ಭಯವನ್ನು ಉಂಟುಮಾಡುವುದಿಲ್ಲ, ಆದರೆ ಅದು ನಮ್ಮನ್ನು ಪುತ್ರರಂತೆ ದತ್ತುತೆಗೆದುಕೊಳ್ಳುವುದಕ್ಕೆ ನಡೆಸುತ್ತದೆ. ಈ ಪವಿತ್ರಾತ್ಮದಿಂದಲೇ ನಾವು ‘ಅಪ್ಪಾ, ತಂದೆಯೇ’ ಎಂದು ಕರೆಯುತ್ತೇವೆ. ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ. ನಾವು ಮಕ್ಕಳಾಗಿರುವುದಾದರೆ ಬಾಧ್ಯರೂ ಆಗಿದ್ದೇವೆ; ದೇವರಿಗೆ ಬಾಧ್ಯರು ಮತ್ತು ಕ್ರಿಸ್ತನೊಂದಿಗೆ ಜೊತೆ ಬಾಧ್ಯರೂ ಆಗಿದ್ದೇವೆ. ನಾವು ಕ್ರಿಸ್ತನೊಂದಿಗೆ ಕಷ್ಟಾನುಭವಿಸಿದರೆ ಅವನೊಂದಿಗೆ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.”—ರೋಮ. 8:14-17.

13 ಸರಳವಾಗಿ ಹೇಳುವುದಾದರೆ, ಈ ವ್ಯಕ್ತಿಗಳು ದೇವರ ಪವಿತ್ರಾತ್ಮದಿಂದ ಅಭಿಷಿಕ್ತರಾಗಿ, ಸ್ವರ್ಗೀಯ “ಕರೆ” ಅಥವಾ ಆಮಂತ್ರಣ ಪಡೆಯುತ್ತಾರೆ. (ಇಬ್ರಿ. 3:1) ಈ ವೈಯಕ್ತಿಕ ಆಮಂತ್ರಣ ಅವರಿಗೆ ದೇವರಿಂದ ಬಂದಿರುತ್ತದೆ. ಈ ಕರೆಗೆ ಅವರು ಕೂಡಲೇ ಸ್ಪಂದಿಸುತ್ತಾ, ತಮ್ಮನ್ನು ದೇವರ ಪುತ್ರರಾಗಿ ತೆಗೆದುಕೊಳ್ಳಲಾಗಿರುವುದನ್ನು ಮರುಸವಾಲೆತ್ತದೆ ಇಲ್ಲವೇ ಕಿಂಚಿತ್ತೂ ಸಂದೇಹ, ಭಯವಿಲ್ಲದೆ ಸ್ವೀಕರಿಸುತ್ತಾರೆ. (1 ಯೋಹಾನ 2:20, 21 ಓದಿ.) ಹೀಗೆ, ಈ ನಿರೀಕ್ಷೆಯನ್ನು ಸ್ವತಃ ಅವರು ಆಯ್ಕೆಮಾಡಿಕೊಂಡಿಲ್ಲ ಬದಲಾಗಿ ಯೆಹೋವನೇ ಅವರ ಮೇಲೆ ತನ್ನ ಮುದ್ರೆಯೊತ್ತಿದ್ದಾನೆ ಅಂದರೆ ಪವಿತ್ರಾತ್ಮ ಸುರಿಸಿದ್ದಾನೆ.—2 ಕೊರಿಂ. 1:21, 22; 1 ಪೇತ್ರ 1:3, 4.

ಸರಿಯಾದ ದೃಷ್ಟಿಕೋನ

14. ಅಭಿಷಿಕ್ತರಿಗೆ ತಮಗೆ ಸಿಕ್ಕಿರುವ ಕರೆಯ ಬಗ್ಗೆ ಯಾವ ನೋಟವಿದೆ?

14 ಸ್ವರ್ಗೀಯ ಬಹುಮಾನಕ್ಕಾಗಿ ಕಾಯುತ್ತಿರುವ ಅಭಿಷಿಕ್ತರಿಗೆ ತಮ್ಮ ಬಗ್ಗೆ ಯಾವ ನೋಟವಿರಬೇಕು? ತಮಗೊಂದು ಅದ್ಭುತಕರ ಆಮಂತ್ರಣ ಸಿಕ್ಕಿದೆಯಾದರೂ, ಅದು ಬರೀ ಆಮಂತ್ರಣವಷ್ಟೇ ಎಂಬುದನ್ನು ಅವರು ನೆನಪಿನಲ್ಲಿಡುತ್ತಾರೆ. ಆ ಬಹುಮಾನ ಸಿಗಬೇಕಾದರೆ ಅವರು ಮರಣಪರ್ಯಂತ ನಂಬಿಗಸ್ತರಾಗಿರಬೇಕು. ನಮ್ರತೆಯಿಂದ ಅವರು ಪೌಲನ ಈ ಮಾತುಗಳನ್ನು ಪ್ರತಿಧ್ವನಿಸುತ್ತಾರೆ: “ಸಹೋದರರೇ, ನಾನು ಅದನ್ನು ಆಗಲೇ ಹಿಡಿದಿದ್ದೇನೆಂದು ಈ ವರೆಗೂ ಎಣಿಸಿಕೊಳ್ಳುವುದಿಲ್ಲ; ಆದರೆ ಒಂದು ವಿಷಯವೇನೆಂದರೆ, ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನ ವಿಷಯಗಳ ಕಡೆಗೆ ಮುಂದೊತ್ತುತ್ತಾ, ಕ್ರಿಸ್ತ ಯೇಸುವಿನ ಮೂಲಕ ದೇವರು ಕೊಡುವ ಮೇಲಣ ಕರೆಯ ಬಹುಮಾನದ ಗುರಿಯ ಕಡೆಗೆ ಓಡುತ್ತಾ ಇದ್ದೇನೆ.” (ಫಿಲಿ. 3:13, 14) ಅಭಿಷಿಕ್ತ ಉಳಿಕೆಯವರು, ‘ಅವರಿಗೆ ಕೊಡಲಾಗಿರುವ ಕರೆಗೆ ಯೋಗ್ಯರಾಗಿ ನಡೆದುಕೊಳ್ಳಲು’ ತಮ್ಮಿಂದಾದುದೆಲ್ಲವನ್ನು “ಪೂರ್ಣ ದೀನಮನಸ್ಸಿನಿಂದಲೂ” “ಭಯದಿಂದಲೂ ನಡುಕದಿಂದಲೂ” ಮಾಡಬೇಕು.—ಎಫೆ. 4:1, 2; ಫಿಲಿ. 2:12; 1 ಥೆಸ. 2:12.

15. ಜ್ಞಾಪಕಾಚರಣೆಯಲ್ಲಿ ಕುರುಹುಗಳನ್ನು ಸೇವಿಸುವವರನ್ನು ಕ್ರೈಸ್ತರು ಹೇಗೆ ನೋಡಬೇಕು, ಮತ್ತು ಸ್ವತಃ ಅಭಿಷಿಕ್ತರಿಗೆ ತಮ್ಮ ಬಗ್ಗೆ ಯಾವ ನೋಟವಿದೆ?

15 ಆದರೆ, ಒಬ್ಬ ವ್ಯಕ್ತಿ ತಾನು ಅಭಿಷಿಕ್ತನು ಎಂದು ಹೇಳಿ ಜ್ಞಾಪಕಾಚರಣೆಯಲ್ಲಿ ಕುರುಹುಗಳನ್ನು ಸೇವಿಸಲಾರಂಭಿಸುವಲ್ಲಿ ಬೇರೆ ಕ್ರೈಸ್ತರು ಆ ವ್ಯಕ್ತಿಯನ್ನು ಹೇಗೆ ನೋಡಬೇಕು? ಅವನ ಅಥವಾ ಅವಳ ಬಗ್ಗೆ ತೀರ್ಪುಮಾಡಬಾರದು. ಇದು, ಆ ವ್ಯಕ್ತಿ ಹಾಗೂ ಯೆಹೋವನ ನಡುವಿನ ವಿಷಯವಾಗಿದೆ. (ರೋಮ. 14:12) ಆದರೆ ನಿಜಕ್ಕೂ ಅಭಿಷೇಕಿತರಾದ ಕ್ರೈಸ್ತರು ತಮಗೆ ವಿಶೇಷ ಗಮನ ಕೊಡಬೇಕೆಂದು ಕೇಳಿಕೊಳ್ಳುವುದಿಲ್ಲ. ತಾವು ಅಭಿಷಿಕ್ತರಾಗಿರುವುದರಿಂದ, ‘ಮಹಾ ಸಮೂಹದಲ್ಲಿ’ ಕೆಲವು ಅನುಭವೀ ಸದ್ಯಸರಿಗೂ ಇರದ ವಿಶೇಷ ಜ್ಞಾನ ತಮಗಿದೆಯೆಂದು ಅವರೆಣಿಸುವುದಿಲ್ಲ. (ಪ್ರಕ. 7:9) ‘ಬೇರೆ ಕುರಿಗಳವರಾದ’ ತಮ್ಮ ಒಡನಾಡಿಗಳಿಗಿಂತ ತಮ್ಮ ಮೇಲೆ ಹೆಚ್ಚಿನ ಪವಿತ್ರಾತ್ಮವಿದೆಯೆಂದೂ ಅವರು ನೆನಸುವುದಿಲ್ಲ. (ಯೋಹಾ. 10:16) ತಮಗೆ ವಿಶೇಷ ಉಪಚಾರ ಸಿಗಬೇಕೆಂದು ಅವರು ನಿರೀಕ್ಷಿಸುವುದಿಲ್ಲ, ಇಲ್ಲವೇ ತಾವು ಜ್ಞಾಪಕದ ಕುರುಹಗಳನ್ನು ಸೇವಿಸುತ್ತಿರುವ ಕಾರಣ ಸಭೆಯ ನೇಮಿತ ಹಿರಿಯರಿಗಿಂತ ಶ್ರೇಷ್ಠರಾಗಿದ್ದೇವೆಂದು ಹೇಳಿಕೊಳ್ಳುವುದಿಲ್ಲ.

16-18. (ಎ) ಹೊಸ ಆಧ್ಯಾತ್ಮಿಕ ಸತ್ಯಗಳನ್ನು ಪ್ರಕಟಿಸುವುದರಲ್ಲಿ ಎಲ್ಲ ಅಭಿಷಿಕ್ತರು ಒಳಗೂಡಿದ್ದಾರೋ? ದೃಷ್ಟಾಂತಿಸಿರಿ. (ಬಿ) ಆಡಳಿತ ಮಂಡಲಿಯು, ಅಭಿಷಿಕ್ತರೆಂದು ಹೇಳಿಕೊಳ್ಳುವ ಪ್ರತಿಯೊಬ್ಬರ ಅಭಿಪ್ರಾಯ ಕೇಳಬೇಕಾಗಿಲ್ಲ ಏಕೆ?

16 ಭೂಮ್ಯಾದ್ಯಂತವಿರುವ ಎಲ್ಲ ಅಭಿಷಿಕ್ತರು ಹೊಸ ಆಧ್ಯಾತ್ಮಿಕ ಸತ್ಯಗಳನ್ನು ಪ್ರಕಟಿಸುವ ಕೆಲಸದಲ್ಲಿ ಒಳಗೂಡಿದ್ದಾರೋ? ಇಲ್ಲ. ಒಂದು ಗುಂಪಾಗಿ ಆಳುವರ್ಗಕ್ಕೆ, ಕ್ರಿಸ್ತನ ಮನೆತನಕ್ಕೆ ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಜವಾಬ್ದಾರಿಯಿದ್ದರೂ, ಆ ವರ್ಗಕ್ಕೆ ಸೇರಿರುವ ಎಲ್ಲ ವ್ಯಕ್ತಿಗಳಿಗೆ ಒಂದೇ ರೀತಿಯ ಜವಾಬ್ದಾರಿಗಳು ಇಲ್ಲವೇ ಕೆಲಸದ ನೇಮಕಗಳಿಲ್ಲ. (1 ಕೊರಿಂಥ 12:14-18 ಓದಿ.) ಈ ಹಿಂದೆ ತಿಳಿಸಲಾಗಿರುವಂತೆ, ಪ್ರಥಮ ಶತಮಾನದಲ್ಲಿ ಅತಿ ಪ್ರಾಮುಖ್ಯವಾದ ಸಾರುವ ಕೆಲಸದಲ್ಲಿ ಅಭಿಷಿಕ್ತರೆಲ್ಲರು ಒಳಗೂಡಿದ್ದರು. ಆದರೆ ತೀರ ಕೊಂಚ ಮಂದಿಯನ್ನು ಮಾತ್ರ ಬೈಬಲ್‌ ಪುಸ್ತಕಗಳನ್ನು ಬರೆಯಲಿಕ್ಕಾಗಿ ಮತ್ತು ಕ್ರೈಸ್ತ ಸಭೆಯ ಮೇಲ್ವಿಚಾರಣೆಗಾಗಿ ಬಳಸಲಾಯಿತು.

17 ದೃಷ್ಟಾಂತಕ್ಕಾಗಿ, ನ್ಯಾಯನಿರ್ಣಾಯಕ ವಿಷಯಗಳನ್ನು ನಿರ್ವಹಿಸುವಾಗ “ಸಭೆ” ಕ್ರಮಕೈಗೊಳ್ಳುತ್ತದೆಂದು ಬೈಬಲ್‌ ಹೇಳುತ್ತದೆ. (ಮತ್ತಾ. 18:17) ಆದರೆ ವಾಸ್ತವದಲ್ಲಿ ಕ್ರಮಕೈಗೊಳ್ಳುವವರು ಸಭೆಯ ಪ್ರತಿನಿಧಿಗಳಾಗಿರುವ ಹಿರಿಯರು ಮಾತ್ರ. ಅವರು ನಿರ್ಣಯ ಮಾಡುವ ಮುಂಚೆ ಸಭೆಯ ಎಲ್ಲ ಸದಸ್ಯರನ್ನು ಸಂಪರ್ಕಿಸಿ ಅಭಿಪ್ರಾಯಗಳನ್ನು ಕೇಳುವುದಿಲ್ಲ. ಅವರು ತಮ್ಮ ಪಾತ್ರವನ್ನು ದೇವಪ್ರಭುತ್ವಾತ್ಮಕ ರೀತಿಯಲ್ಲಿ ಪೂರೈಸುತ್ತಾರೆ; ಅವರು ಇಡೀ ಸಭೆಯ ಪರವಾಗಿ ಕ್ರಮಗೈಯುತ್ತಾರೆ.

18 ಅದೇ ರೀತಿಯಲ್ಲಿ ಇಂದು ಆಳುವರ್ಗವನ್ನು ಪ್ರತಿನಿಧಿಸುವ ಜವಾಬ್ದಾರಿ, ಸೀಮಿತ ಸಂಖ್ಯೆಯ ಅಭಿಷಿಕ್ತ ಪುರುಷರಿಗೆ ಮಾತ್ರ ಇದೆ. ಇವರು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಆಗಿದ್ದಾರೆ. ಈ ಆತ್ಮಾಭಿಷಿಕ್ತ ಪುರುಷರು ರಾಜ್ಯದ ಕೆಲಸ ಮತ್ತು ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಕೆಲಸದ ಮೇಲ್ವಿಚಾರಣೆ ಮಾಡುತ್ತಾರೆ. ಆದರೆ ಪ್ರಥಮ ಶತಮಾನದ ಆಡಳಿತ ಮಂಡಲಿಯಂತೆಯೇ ಇವರು ಸಹ ಆಳುವರ್ಗದ ಪ್ರತಿಯೊಬ್ಬ ಸದಸ್ಯನೊಂದಿಗೆ ವಿಚಾರಿಸಿಕೊಂಡು ನಿರ್ಣಯಗಳನ್ನು ಮಾಡುವುದಿಲ್ಲ. (ಅ. ಕಾರ್ಯಗಳು 16:4, 5 ಓದಿ.) ಹಾಗಿದ್ದರೂ, ಅಭಿಷಿಕ್ತ ಸಾಕ್ಷಿಗಳೆಲ್ಲರೂ ಈಗ ನಡೆಯುತ್ತಿರುವ ಪ್ರಮುಖ ಕೊಯ್ಲು ಕೆಲಸದಲ್ಲಿ ಪೂರ್ಣವಾಗಿ ಒಳಗೂಡಿದ್ದಾರೆ. ಒಂದು ವರ್ಗವಾಗಿ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು” ಒಂದೇ ದೇಹವಾಗಿದೆ, ಆದರೆ ಅದರಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಬೇರೆಬೇರೆ ಕೆಲಸವಿದೆ.—1 ಕೊರಿಂ. 12:19-26.

19, 20. ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು’ ಮತ್ತು ಆಡಳಿತ ಮಂಡಲಿಯ ಬಗ್ಗೆ ಮಹಾ ಸಮೂಹದವರಿಗೆ ಯಾವ ಸಂತುಲಿತ ನೋಟವಿದೆ?

19 ಈ ಮೇಲಿನ ನಿಜಾಂಶಗಳು, ದಿನೇ ದಿನೇ ಹೆಚ್ಚುತ್ತಿರುವ ಮತ್ತು ಭೂಮಿ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳ ಮಹಾ ಸಮೂಹದವರ ಮೇಲೆ ಯಾವ ಪ್ರಭಾವಬೀರಬೇಕು? ರಾಜನ ಆಸ್ತಿಯ ಭಾಗವಾಗಿರುವ ಮಹಾ ಸಮೂಹದವರು, ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಪ್ರತಿನಿಧಿಸುವ ಆಡಳಿತ ಮಂಡಲಿಯೊಂದಿಗೆ ಸಂತೋಷದಿಂದ ಸಹಕರಿಸುತ್ತಾರೆ. ಆಡಳಿತ ಮಂಡಲಿಯ ನಿರ್ದೇಶನದ ಮೇರೆಗೆ ತಯಾರಾಗುತ್ತಿರುವ ಆಧ್ಯಾತ್ಮಿಕ ಆಹಾರವನ್ನು ಮಹಾ ಸಮೂಹದ ಸದಸ್ಯರು ಮಾನ್ಯಮಾಡುತ್ತಾರೆ. ಅವರು ಆ ಆಳನ್ನು ಒಂದು ವರ್ಗವಾಗಿ ಗೌರವಿಸುವುದಾದರೂ, ಆ ಆಳಿನ ಭಾಗವಾಗಿದ್ದೇವೆಂದು ಹೇಳಿಕೊಳ್ಳುವ ಯಾವುದೇ ವ್ಯಕ್ತಿಯನ್ನು ಇತರರಿಗಿಂತ ಮೇಲೆತ್ತದಂತೆ ಜಾಗ್ರತೆವಹಿಸುತ್ತಾರೆ. ದೇವರಾತ್ಮದಿಂದ ನಿಜವಾಗಿ ಅಭಿಷಿಕ್ತನಾಗಿರುವ ಯಾವ ಕ್ರೈಸ್ತನೂ ಅಂಥ ಉಪಚಾರವನ್ನು ಇಷ್ಟಪಡುವುದೂ ಇಲ್ಲ, ನಿರೀಕ್ಷಿಸುವುದೂ ಇಲ್ಲ.—ಅ. ಕಾ. 10:25, 26; 14:14, 15.

20 ನಾವು, ಮಹಾ ಸಮೂಹದವರಾಗಿರಲಿ ಇಲ್ಲವೇ ಅಭಿಷಿಕ್ತ ಉಳಿಕೆಯ ಸದಸ್ಯರಿಂದ ಕೂಡಿದ “ಮನೆಯವರು” ಆಗಿರಲಿ, ನಂಬಿಗಸ್ತ ಮನೆವಾರ್ತೆಯವ ಹಾಗೂ ಆಡಳಿತ ಮಂಡಲಿಯೊಂದಿಗೆ ಪೂರ್ಣವಾಗಿ ಸಹಕರಿಸುವುದೇ ನಮ್ಮ ದೃಢನಿರ್ಧಾರವಾಗಿರಲಿ. ನಮ್ಮಲ್ಲಿ ಪ್ರತಿಯೊಬ್ಬರೂ ‘ಸದಾ ಎಚ್ಚರವಾಗಿರೋಣ’ ಮತ್ತು ಅಂತ್ಯದ ವರೆಗೆ ನಂಬಿಗಸ್ತರಾಗಿ ಉಳಿಯೋಣ.—ಮತ್ತಾ. 24:13, 42.

ನಿಮಗೆ ನೆನಪಿದೆಯೋ?

• “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಯಾರು, ಮತ್ತು ಮನೆಯವರು ಯಾರು?

• ಒಬ್ಬ ವ್ಯಕ್ತಿಗೆ ಸ್ವರ್ಗೀಯ ಕರೆ ಸಿಕ್ಕಿದೆಯೆಂದು ಹೇಗೆ ಗೊತ್ತಾಗುತ್ತದೆ?

• ಹೊಸ ಆಧ್ಯಾತ್ಮಿಕ ಆಹಾರವನ್ನು ತಯಾರಿಸುವ ಮುಖ್ಯ ಜವಾಬ್ದಾರಿ ಯಾರಿಗಿದೆ?

• ಅಭಿಷಿಕ್ತನೊಬ್ಬನಿಗೆ ತನ್ನ ಬಗ್ಗೆ ಯಾವ ನೋಟವಿರಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 23ರಲ್ಲಿರುವ ಚಿತ್ರ]

ಇಂದು ಆಡಳಿತ ಮಂಡಲಿಯು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು ಪ್ರತಿನಿಧಿಸುತ್ತದೆ. ಪ್ರಥಮ ಶತಮಾನದಲ್ಲೂ ಇಂಥ ಏರ್ಪಾಡಿತ್ತು