ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವಿವಾಹಿತರೂ ಆನಂದಿತರು ಹೇಗೆ?

ಅವಿವಾಹಿತರೂ ಆನಂದಿತರು ಹೇಗೆ?

ಅವಿವಾಹಿತರೂ ಆನಂದಿತರು ಹೇಗೆ?

“ಅವರು ಮದುವೆಯಾಗಿ ಸುಖವಾಗಿದ್ದರು.” ಈ ಮಾತುಗಳಿಂದ ಮಕ್ಕಳ ಕಥೆಗಳಲ್ಲಿ ಹೆಚ್ಚಿನವುಗಳು ಅಂತ್ಯಗೊಳ್ಳುತ್ತವೆ. ಮದುವೆಯಾದರೆ ಮಾತ್ರ ಸುಖ ಸಿಗುತ್ತದೆ ಎಂಬ ಸಂದೇಶ ಪ್ರಣಯಾತ್ಮಕ ಚಲನಚಿತ್ರಗಳಲ್ಲೂ ಕಾದಂಬರಿಗಳಲ್ಲೂ ಇರುತ್ತದೆ. ಅಷ್ಟುಮಾತ್ರವಲ್ಲದೆ, ಹೆಚ್ಚಿನ ಸಂಸ್ಕೃತಿಗಳಲ್ಲಿ ವಯಸ್ಸಿಗೆ ಬಂದ ಯುವ ಜನರಿಗೆ ಮದುವೆಯಾಗಲು ತುಂಬ ಒತ್ತಡವಿರುತ್ತದೆ. 25ರ ಅಸುಪಾಸಿನ ವಯಸ್ಸಿನ ಡೆಬಿ ಎಂಬಾಕೆ ಹೇಳುವುದು: “ಮದುವೆಯಾಗುವುದೊಂದು ಬಿಟ್ಟರೆ ಹುಡುಗಿಯರಿಗೆ ಜೀವನದಲ್ಲಿ ಬೇರೇನೂ ಇಲ್ಲ, ಬದುಕು ಆರಂಭವಾಗುವುದೇ ಮದುವೆ ನಂತರ ಎಂಬ ಅಭಿಪ್ರಾಯವನ್ನು ಜನರು ನಿಮ್ಮಲ್ಲಿ ಮೂಡಿಸುತ್ತಾರೆ.”

ಆದರೆ ಒಬ್ಬ ಆಧ್ಯಾತ್ಮಿಕ ವ್ಯಕ್ತಿಗೆ ಮದುವೆ ಬಗ್ಗೆ ಇಂಥ ದೃಷ್ಟಿಕೋನವಿರುವುದಿಲ್ಲ. ಇಸ್ರಾಯೇಲ್ಯರಲ್ಲಿ ವಿವಾಹವು ಸಾಮಾನ್ಯವಾಗಿತ್ತಾದರೂ, ಪ್ರತಿಫಲದಾಯಕ ಜೀವನ ನಡೆಸಿದ ಅವಿವಾಹಿತ ಸ್ತ್ರೀಪುರುಷರ ಕುರಿತಾಗಿಯೂ ಬೈಬಲ್‌ ತಿಳಿಸುತ್ತದೆ. ಇಂದು ಕೆಲವು ಮಂದಿ ಕ್ರೈಸ್ತರು ಸ್ವಇಚ್ಛೆಯಿಂದ ಅವಿವಾಹಿತರಾಗಿ ಉಳಿಯುತ್ತಾರೆ. ಇನ್ನೂ ಕೆಲವರು, ಪರಿಸ್ಥಿತಿಗಳ ನಿಮಿತ್ತ ಅವಿವಾಹಿತರಾಗಿ ಉಳಿಯಬೇಕಾಗುತ್ತದೆ. ಅವರು ಅವಿವಾಹಿತರಾಗಿರುವುದಕ್ಕೆ ಕಾರಣ ಏನೇ ಆಗಿರಲಿ, ಮುಖ್ಯ ಪ್ರಶ್ನೆಯೇನೆಂದರೆ, ಅವಿವಾಹಿತ ಕ್ರೈಸ್ತನೊಬ್ಬನು ಹೇಗೆ ಆನಂದಿತನಾಗಿರಬಲ್ಲನು?

ಯೇಸು ಸಹ ಮದುವೆಯಾಗಲಿಲ್ಲ. ಅವನಿಗೆ ಕೊಡಲಾಗಿದ್ದ ನೇಮಕವನ್ನು ಪರಿಗಣಿಸುವಾಗ ಅವನ ಈ ನಿರ್ಧಾರ ಸರಿಯೆನಿಸುತ್ತದೆ. ತನ್ನ ಹಿಂಬಾಲಕರಲ್ಲೂ ಕೆಲವರು ಅವಿವಾಹಿತ ಸ್ಥಿತಿಗೆ “ಆಸ್ಪದ ಮಾಡಿಕೊಡುವ”ರೆಂದು ಅವನು ಶಿಷ್ಯರಿಗೆ ಹೇಳಿದನು. (ಮತ್ತಾ. 19:10-12) ಹೀಗೆ ಯೇಸು ಸೂಚಿಸಿದ್ದೇನೆಂದರೆ ಅವಿವಾಹಿತ ಸ್ಥಿತಿಯನ್ನು ಸದುಪಯೋಗಿಸಲಿಕ್ಕಾಗಿ ನಾವು ಆ ಜೀವನರೀತಿಯನ್ನು ನಮ್ಮ ಹೃದಮನಗಳಲ್ಲಿ ಸ್ವೀಕರಿಸಬೇಕು, ಇಲ್ಲವೇ ಅದಕ್ಕೆ ಆಸ್ಪದಮಾಡಿಕೊಡಬೇಕು.

ಯೇಸುವಿನ ಆ ಸಲಹೆಯು, ದೇವಪ್ರಭುತ್ವಾತ್ಮಕ ನೇಮಕಗಳಿಗೆ ಪೂರ್ಣ ಗಮನಕೊಡಲಿಕ್ಕೆಂದು ಜೀವನಪೂರ್ತಿ ಅವಿವಾಹಿತರಾಗಿ ಉಳಿಯಲು ಆಯ್ಕೆಮಾಡಿರುವವರಿಗೆ ಮಾತ್ರ ಅನ್ವಯಿಸುತ್ತದೋ? (1 ಕೊರಿಂ. 7:34, 35) ಹಾಗೇನಿಲ್ಲ. ಮದುವೆಯಾಗಲು ಬಯಸುವುದಾದರೂ, ಸೂಕ್ತ ವಿವಾಹ ಸಂಗಾತಿ ಸದ್ಯಕ್ಕೆ ಸಿಕ್ಕಿರದ ಕ್ರೈಸ್ತಳೊಬ್ಬಳ ಸನ್ನಿವೇಶವನ್ನು ಪರಿಗಣಿಸಿರಿ. 30-40ರೊಳಗಿನ ಪ್ರಾಯದ ಅವಿವಾಹಿತ ಸಹೋದರಿ ಆನಾ ಹೇಳಿದ್ದು: “ಇತ್ತೀಚೆಗೆ, ಸಾಕ್ಷಿಯಾಗಿರದ ನನ್ನ ಜೊತೆಕಾರ್ಮಿಕನು ಅನಿರೀಕ್ಷಿತವಾಗಿ ಮದುವೆ ಪ್ರಸ್ತಾಪವನ್ನು ಮುಂದಿಟ್ಟನು. ಆ ಕ್ಷಣ ನನಗೆ ನನ್ನ ಬಗ್ಗೆಯೇ ಹೆಮ್ಮೆಯೆನಿಸಿತಾದರೂ, ಆ ಅನಿಸಿಕೆಯನ್ನು ಕೂಡಲೇ ಅದುಮಿಹಿಡಿದೆ, ಏಕೆಂದರೆ ನನ್ನನ್ನು ಯೆಹೋವನ ಇನ್ನಷ್ಟು ಹತ್ತಿರಕ್ಕೆ ಕೊಂಡೊಯ್ಯಬಲ್ಲ ವ್ಯಕ್ತಿಯನ್ನು ಮಾತ್ರ ಮದುವೆ ಆಗಬೇಕೆಂದಿದ್ದೇನೆ.”

“ಕರ್ತನಲ್ಲಿರುವವನನ್ನು” ಮದುವೆಯಾಗಬೇಕೆಂಬ ಅಪೇಕ್ಷೆ, ಆನಾಳಂತೆ ಅನೇಕ ಸಹೋದರಿಯರಿಗೆ ಅವಿಶ್ವಾಸಿಯನ್ನು ಮದುವೆಯಾಗದಿರಲು ಸಹಾಯಮಾಡುತ್ತದೆ. * (1 ಕೊರಿಂ. 7:39; 2 ಕೊರಿಂ. 6:14) ಮೇಲ್ಕಂಡ ದೇವರ ಮಾತುಗಳಿಗೆ ಬೆಲೆಕೊಡುತ್ತಾ, ಅವರು ಕಡಿಮೆಪಕ್ಷ ಸದ್ಯಕ್ಕಾದರೂ ಅವಿವಾಹಿತರಾಗಿ ಉಳಿಯಲು ನಿರ್ಧರಿಸುತ್ತಾರೆ. ಅವಿವಾಹಿತ ಸ್ಥಿತಿಯಲ್ಲೂ ಅವರು ಹೇಗೆ ಆನಂದಿತರಾಗಿರಬಲ್ಲರು?

ಸಕಾರಾತ್ಮಕ ಅಂಶಗಳನ್ನು ನೋಡಲು ಕಲಿಯಿರಿ

ನಮ್ಮ ಮನೋಭಾವ, ನಮ್ಮ ಇಚ್ಛೆಗೆ ವಿರುದ್ಧವಾಗಿರುವ ಸನ್ನಿವೇಶವನ್ನು ಸ್ವೀಕರಿಸಲು ಸಹಾಯ ಮಾಡುತ್ತದೆ. 40-50ರೊಳಗಿನ ಪ್ರಾಯದ ಕಾರ್ಮೆನ್‌ ಎಂಬ ಅವಿವಾಹಿತ ಸಹೋದರಿ ಹೇಳುವುದು: “ನನ್ನ ಬಳಿ ಏನಿದೆಯೋ ಅದರಲ್ಲೇ ಖುಷಿಪಡುತ್ತೇನೆ ಹೊರತು ಏನಿಲ್ಲವೋ ಅದರ ಬಗ್ಗೆ ಕನಸು ಕಾಣುತ್ತಾ ಇರುವುದಿಲ್ಲ.” ಕೆಲವೊಮ್ಮೆ ಏಕಾಂಗಿತನ ಇಲ್ಲವೇ ಹತಾಶೆಯ ಅನುಭವವಾಗುವುದಂತೂ ಸಹಜ. ಆದರೆ ಲೋಕದಾದ್ಯಂತವಿರುವ ಸಹೋದರರ ಬಳಗದಲ್ಲಿ ವಿವಾಹಿತರು ಸಹ ಇದನ್ನು ಅನುಭವಿಸುತ್ತಾರೆಂಬ ಅರಿವು, ಭರವಸೆಯಿಂದ ಮುಂದೊತ್ತುವಂತೆ ನಮ್ಮನ್ನು ಉತ್ತೇಜಿಸುತ್ತದೆ. ಅವಿವಾಹಿತರಾಗಿರುವಾಗ ಆನಂದಿತರಾಗಿರಲು ಮತ್ತು ಇತರ ಸವಾಲುಗಳನ್ನು ನಿಭಾಯಿಸಲು ಯೆಹೋವನು ಅನೇಕರಿಗೆ ಸಹಾಯಮಾಡಿದ್ದಾನೆ.—1 ಪೇತ್ರ 5:9, 10.

ಅನೇಕ ಮಂದಿ ಕ್ರೈಸ್ತ ಸಹೋದರ ಸಹೋದರಿಯರು, ಅವಿವಾಹಿತರಾಗಿರುವಾಗ ಆನಂದಿಸಬಹುದಾದ ಸಕಾರಾತ್ಮಕ ಅಂಶಗಳನ್ನೂ ಕಂಡುಹಿಡಿದಿದ್ದಾರೆ. 35ರ ಆಸುಪಾಸಿನ ವಯಸ್ಸಿನ ಎಸ್ಟರ್‌ ಎಂಬ ಅವಿವಾಹಿತ ಸಹೋದರಿ ಹೇಳುವುದು: “ನಾವು ಯಾವುದೇ ಸನ್ನಿವೇಶದಲ್ಲಿರಲಿ ಅದರ ಸಕಾರಾತ್ಮಕ ಅಂಶಗಳನ್ನು ಆನಂದಿಸಲು ಶಕ್ತರಾಗಿರುವುದರಲ್ಲೇ ಸಂತೋಷದ ಗುಟ್ಟು ಅಡಕವಾಗಿದೆಯೆಂದು ನನಗನಿಸುತ್ತದೆ.” ಕಾರ್ಮೆನ್‌ ಇದಕ್ಕೆ ಕೂಡಿಸಿ ಹೇಳಿದ್ದು: “ನನಗೆ ಮದುವೆಯಾಗಲಿ ಆಗದಿರಲಿ, ನಾನು ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಟ್ಟರೆ, ನನಗೆ ಸಿಗಬೇಕಾದ ಒಳ್ಳೇ ಸಂಗತಿಯನ್ನು ಯೆಹೋವನು ಕೊಡದೆ ಇರುವುದಿಲ್ಲವೆಂಬುದು ನನ್ನ ನಂಬಿಕೆ.” (ಕೀರ್ತ. 84:11) “ನನ್ನ ಬದುಕಿನಲ್ಲಿ ಎಲ್ಲವೂ ನಾನು ಯೋಜಿಸಿದಂತೆ ಚಾಚೂತಪ್ಪದೆ ನಡೆದಿಲ್ಲವಾದರೂ ಸಂತೋಷವಾಗಿದ್ದೇನೆ ಮತ್ತು ಹಾಗೆಯೇ ಮುಂದುವರಿಯುವೆ” ಎಂದಾಕೆ ಹೇಳುತ್ತಾಳೆ.

ಅವಿವಾಹಿತರ ಕುರಿತು ಬೈಬಲ್‌ನಲ್ಲಿರುವ ಮಾದರಿಗಳು

ಯೆಫ್ತಾಹನ ಮಗಳು ಅವಿವಾಹಿತಳಾಗಿರಲು ಯೋಜಿಸಿರಲಿಲ್ಲ. ಆದರೆ ಆಕೆಯ ತಂದೆ ಮಾಡಿದ ಪ್ರಮಾಣದಿಂದಾಗಿ, ಆಕೆ ತನ್ನ ಯೌವನದಿಂದಲೇ ದೇವಗುಡಾರದಲ್ಲಿ ಸೇವೆಸಲ್ಲಿಸಬೇಕಾಯಿತು. ಈ ಅನಿರೀಕ್ಷಿತ ನೇಮಕದಿಂದಾಗಿ ಆಕೆ ತನ್ನ ವೈಯಕ್ತಿಕ ಯೋಜನೆಗಳನ್ನು ಬದಲಾಯಿಸಬೇಕಾಯಿತು ಮತ್ತು ಸಹಜ ಕಾಮನೆಗಳಿಗೆ ವಿರುದ್ಧವಾದದ್ದನ್ನು ಮಾಡಬೇಕಾಯಿತು. ತಾನು ಮದುವೆಯಾಗಲಾರೆ ಮತ್ತು ಸಂಸಾರ ಹೂಡಲಾರೆ ಎಂಬುದನ್ನು ಗ್ರಹಿಸಿದ ಆಕೆ ಎರಡು ತಿಂಗಳುಗಳ ವರೆಗೆ ಶೋಕಿಸಿದಳು. ನಂತರ ಆಕೆ ತನ್ನ ಹೊಸ ಸನ್ನಿವೇಶವನ್ನು ಸ್ವೀಕರಿಸಿ, ಉಳಿದ ಜೀವಮಾನವೆಲ್ಲ ಸಿದ್ಧಮನಸ್ಸಿನಿಂದ ದೇವಗುಡಾರದಲ್ಲಿ ಸೇವೆಮಾಡಿದಳು. ಇತರ ಇಸ್ರಾಯೇಲ್ಯ ಸ್ತ್ರೀಯರು ಪ್ರತಿವರ್ಷ ಅವಳನ್ನು ಭೇಟಿಯಾಗಿ ಅವಳ ಸ್ವತ್ಯಾಗದ ಮನೋಭಾವವನ್ನು ಶ್ಲಾಘಿಸುತ್ತಿದ್ದರು.—ನ್ಯಾಯ. 11:36-40.

ಯೆಶಾಯನ ಸಮಯದಲ್ಲಿದ್ದ ನಪುಂಸಕರು, ತಮ್ಮ ಸ್ಥಿತಿಯಿಂದಾಗಿ ತುಂಬ ನಿರಾಶರಾಗಿದ್ದಿರಬಹುದು. ಇವರು ನಪುಂಸಕರಾದದ್ದು ಹೇಗೆಂಬುದನ್ನು ಬೈಬಲ್‌ ಹೇಳುವುದಿಲ್ಲ. ಆದರೆ ಅವರು ಪೂರ್ತಿಯಾಗಿ ಇಸ್ರಾಯೇಲ್‌ ಸಭೆಯ ಸದಸ್ಯರಾಗಲು ಸಾಧ್ಯವಿರಲಿಲ್ಲ ಮತ್ತು ಮದುವೆಯಾಗಲು ಹಾಗೂ ಮಕ್ಕಳನ್ನು ಹುಟ್ಟಿಸಲು ಶಕ್ತರಾಗಿರಲಿಲ್ಲ. (ಧರ್ಮೋ. 23:1) ಹಾಗಿದ್ದರೂ ಯೆಹೋವನು ಅವರ ಭಾವನೆಗಳನ್ನು ಅರ್ಥಮಾಡಿಕೊಂಡನು ಮತ್ತು ತನ್ನ ಒಡಂಬಡಿಕೆಗೆ ಅವರು ತೋರಿಸಿದ ಮನಃಪೂರ್ವಕ ವಿಧೇಯತೆಯನ್ನು ಶ್ಲಾಘಿಸಿದನು. ತನ್ನ ಆಲಯದಲ್ಲಿ ಅವರ ‘ಜ್ಞಾಪಕಾರ್ಥಕವಾಗಿ ಶಿಲೆಯನ್ನಿಡುವೆನು’ ಮತ್ತು ಅವರು “ಶಾಶ್ವತನಾಮವನ್ನು” ಹೊಂದಿರುವರೆಂದು ಆತನು ಹೇಳಿದನು. ಬೇರೆ ಮಾತಿನಲ್ಲಿ ಹೇಳುವುದಾದರೆ, ಈ ನಂಬಿಗಸ್ತ ನಪುಂಸಕರಿಗೆ ಯೇಸುವಿನ ಮೆಸ್ಸೀಯ ಆಳ್ವಿಕೆಯಡಿ ನಿತ್ಯಜೀವವನ್ನು ಆನಂದಿಸುವ ನಿಶ್ಚಿತ ನಿರೀಕ್ಷೆ ಇದೆ. ಯೆಹೋವನು ಅವರನ್ನೆಂದೂ ಮರೆಯನು. —ಯೆಶಾ. 56:3-5.

ಯೆರೆಮೀಯನ ಪರಿಸ್ಥಿತಿಗಳಾದರೋ ತುಂಬ ಭಿನ್ನವಾಗಿದ್ದವು. ಅವನನ್ನು ಪ್ರವಾದಿಯಾಗಿ ನೇಮಿಸಿದ ಬಳಿಕ ದೇವರು ಅವನಿಗೆ ಅವಿವಾಹಿತನಾಗಿರಲು ಹೇಳಿದನು. ಏಕೆಂದರೆ ಅವನು ಜೀವಿಸುತ್ತಿದ್ದ ಸಮಯವು ಕಠಿನ ಕಾಲವಾಗಿತ್ತು ಮಾತ್ರವಲ್ಲ ಅವನ ನೇಮಕವೂ ಕಷ್ಟಕರವಾಗಿತ್ತು. ಯೆಹೋವನು ಹೇಳಿದ್ದು: “ನೀನು ಮದುವೆಯಾಗಬೇಡ, ಗಂಡು ಹೆಣ್ಣುಮಕ್ಕಳು ಈ ಸ್ಥಳದಲ್ಲಿ ನಿನಗೆ ಹುಟ್ಟದಿರಲಿ.” (ಯೆರೆ. 16:1-4) ಈ ಸಲಹೆಸೂಚನೆಗಳನ್ನು ಕೇಳಿ ಯೆರೆಮೀಯನಿಗೆ ಹೇಗನಿಸಿದ್ದಿರಬಹುದು ಎಂಬುದನ್ನು ಬೈಬಲ್‌ ಹೇಳುವುದಿಲ್ಲ. ಆದರೆ ಅವನು ಖಂಡಿತವಾಗಿಯೂ ಯೆಹೋವನ ನುಡಿಗಳಲ್ಲಿ ಹರ್ಷಿಸುತ್ತಿದ್ದ ವ್ಯಕ್ತಿಯಾಗಿದ್ದನೆಂಬ ಆಶ್ವಾಸನೆಯನ್ನು ಅದು ಕೊಡುತ್ತದೆ. (ಯೆರೆ. 15:16) ತದನಂತರದ ವರ್ಷಗಳಲ್ಲಿ ಯೆರೆಮೀಯನು ಯೆರೂಸಲೇಮಿನಲ್ಲಿ 18 ತಿಂಗಳುಗಳ ಘೋರ ಮುತ್ತಿಗೆಯನ್ನು ತಾಳಿಕೊಂಡಾಗ, ಅವಿವಾಹಿತನಾಗಿರಲು ಯೆಹೋವನು ಕೊಟ್ಟ ಅಪ್ಪಣೆಯನ್ನು ತಾನು ಪಾಲಿಸಿದ್ದು ಎಷ್ಟು ವಿವೇಕಯುತವಾಗಿತ್ತೆಂಬುದನ್ನು ಖಂಡಿತ ಗ್ರಹಿಸಿರಬೇಕು.—ಪ್ರಲಾ. 4:4, 10.

ನಿಮ್ಮ ಬಾಳನ್ನು ಸಂಪನ್ನಗೊಳಿಸುವ ವಿಧಾನಗಳು

ಮೇಲೆ ತಿಳಿಸಲಾಗಿರುವ ಬೈಬಲ್‌ ವ್ಯಕ್ತಿಗಳು ಅವಿವಾಹಿತರಾಗಿದ್ದರು. ಹಾಗಿದ್ದರೂ ಅವರಿಗೆ ಯೆಹೋವನ ಬೆಂಬಲವಿತ್ತು ಮತ್ತು ಅವರು ಆತನ ಸೇವೆಯಲ್ಲಿ ತಲ್ಲೀನರಾದರು. ಅದೇ ರೀತಿಯಲ್ಲಿ ಇಂದು, ನಮ್ಮ ಬಾಳನ್ನು ಸಂಪನ್ನಗೊಳಿಸುವುದರಲ್ಲಿ ಅರ್ಥಪೂರ್ಣ ಚಟುವಟಿಕೆಯ ಪಾತ್ರ ಬಲು ದೊಡ್ಡದು. ಶುಭವಾರ್ತೆಯನ್ನು ತಿಳಿಸುವ ಸ್ತ್ರೀಸಮೂಹವು ದೊಡ್ಡದಿರುವುದೆಂದು ಬೈಬಲ್‌ ಮುಂತಿಳಿಸಿತ್ತು. (ಕೀರ್ತ. 68:11) ಈ ಸಮೂಹದಲ್ಲಿ ಸಾವಿರಾರು ಮಂದಿ ಸಹೋದರಿಯರು ಅವಿವಾಹಿತರು. ಅವರ ಫಲಪ್ರದ ಶುಶ್ರೂಷೆಯಿಂದಾಗಿ, ಅನೇಕರಿಗೆ ಆಧ್ಯಾತ್ಮಿಕ ಮಕ್ಕಳನ್ನು ಪಡೆಯುವ ಆಶೀರ್ವಾದ ಸಿಕ್ಕಿದೆ.—ಮಾರ್ಕ 10:29, 30; 1 ಥೆಸ. 2:7, 8.

ಪಯನೀಯರ್‌ ಸೇವೆಯಲ್ಲಿ 14 ವರ್ಷಗಳನ್ನು ಕಳೆದಿರುವ ಲೊಲಿ ಎಂಬವರು ವಿವರಿಸುವುದು: “ಪಯನೀಯರ್‌ ಸೇವೆಯಿಂದ ನನ್ನ ಬಾಳಿಗೆ ಗುರಿ ಸಿಕ್ಕಿದಂತಾಗಿದೆ. ಅವಿವಾಹಿತಳಾಗಿರುವ ನಾನು, ಕಾರ್ಯಮಗ್ನ, ಚಟುವಟಿಕೆಭರಿತ ಜೀವನ ನಡೆಸುತ್ತೇನೆ. ಇದರಿಂದಾಗಿ ನನಗೆ ಒಂಟಿಭಾವನೆ ಕಾಡುವುದಿಲ್ಲ. ಪ್ರತಿದಿನದ ಅಂತ್ಯದಲ್ಲಿ ನನಗೆ ತೃಪ್ತಿಯಿರುತ್ತದೆ ಏಕೆಂದರೆ ನನ್ನ ಶುಶ್ರೂಷೆಯಿಂದ ಜನರಿಗೆ ನಿಜವಾಗಿ ಸಹಾಯವಾಗುತ್ತಿರುವುದನ್ನು ನೋಡಲು ಸಾಧ್ಯವಾಗುತ್ತದೆ. ಇದು ನನಗೆ ಅಪಾರ ಸಂತೋಷವನ್ನು ಕೊಡುತ್ತದೆ.”

ಅನೇಕ ಮಂದಿ ಸಹೋದರಿಯರು ಹೊಸ ಭಾಷೆಯನ್ನು ಕಲಿತು, ವಿದೇಶಿ ಭಾಷೆಯನ್ನಾಡುವ ಜನರಿಗೆ ಸಾರುವುದರ ಮೂಲಕ ತಮ್ಮ ಶುಶ್ರೂಷೆಯನ್ನು ವಿಸ್ತರಿಸಿದ್ದಾರೆ. ಈ ಹಿಂದೆ ತಿಳಿಸಲಾಗಿರುವ ಆನಾ ಹೇಳಿದ್ದು: “ನಾನು ವಾಸಿಸುತ್ತಿರುವ ನಗರದಲ್ಲಿ ಸಾವಿರಾರು ವಿದೇಶೀಯರಿದ್ದಾರೆ.” ಆನಾಗೆ ಫ್ರೆಂಚ್‌ ಭಾಷೆಯನ್ನಾಡುವ ಜನರೊಂದಿಗೆ ಮಾತಾಡುವುದೆಂದರೆ ಇಷ್ಟ. “ಅವರೊಂದಿಗೆ ಮಾತಾಡಲಿಕ್ಕಾಗಿ ನಾನು ಈ ಭಾಷೆಯನ್ನು ಕಲಿತಿರುವುದರಿಂದ, ಚಟುವಟಿಕೆಯ ಹೊಸ ಕ್ಷೇತ್ರ ದೊರೆತಿದೆ ಮತ್ತು ನನ್ನ ಸಾರುವ ಕೆಲಸವು ತುಂಬ ಆಸಕ್ತಿಕರವಾಗಿಬಿಟ್ಟಿದೆ.”

ಅವಿವಾಹಿತರಿಗೆ ಕುಟುಂಬದ ಜವಾಬ್ದಾರಿಗಳು ಕಡಿಮೆ ಇರುವುದರಿಂದ, ಕೆಲವರು ತಮ್ಮ ಈ ಸನ್ನಿವೇಶವನ್ನು ಸದುಪಯೋಗಿಸುತ್ತಾ, ಪ್ರಚಾರಕರ ಹೆಚ್ಚು ಅಗತ್ಯವಿರುವ ಪ್ರದೇಶಕ್ಕೆ ಹೋಗಿ ಸೇವೆಸಲ್ಲಿಸುತ್ತಾರೆ. 35ರ ಆಸುಪಾಸಿನ ವಯಸ್ಸಿನ ಲಿಡ್ಯಾನ ಎಂಬಾಕೆ ಹೆಚ್ಚಿನ ಪ್ರಚಾರಕರ ಅಗತ್ಯವಿರುವ ದೇಶಗಳಿಗೆ ಹೋಗಿ ಸೇವೆಸಲ್ಲಿಸಿದ್ದಾಳೆ. ಅವಳು ಹೇಳುವುದು: “ನನ್ನ ಅಭಿಪ್ರಾಯವೇನೆಂದರೆ, ನಾವು ಎಷ್ಟು ಹೆಚ್ಚಾಗಿ ಯೆಹೋವನ ಸೇವೆಯನ್ನು ಮಾಡುತ್ತೇವೋ, ಅಷ್ಟೇ ಸುಲಭವಾಗಿ ಆಪ್ತ ಸ್ನೇಹಿತರನ್ನು ಮಾಡಿಕೊಳ್ಳಬಹುದು ಮತ್ತು ಇತರರ ಪ್ರೀತಿಗೆ ಪಾತ್ರರಾಗಬಹುದು. ಭಿನ್ನಭಿನ್ನ ಹಿನ್ನಲೆ ಹಾಗೂ ದೇಶಗಳ ಅನೇಕ ಆಪ್ತ ಮಿತ್ರರು ನನಗಿದ್ದಾರೆ. ಈ ಗೆಳೆತನಗಳು ನನ್ನ ಬಾಳನ್ನು ಸಂಪನ್ನಗೊಳಿಸಿವೆ.”

ಪ್ರವಾದಿಸುವ ಕೆಲಸ ಮಾಡುತ್ತಿದ್ದ ನಾಲ್ಕು ಮಂದಿ ಅವಿವಾಹಿತ ಹೆಣ್ಣುಮಕ್ಕಳು ಫಿಲಿಪ್ಪ ಎಂಬ ಸೌವಾರ್ತಿಕನಿಗಿದ್ದರೆಂದು ಬೈಬಲ್‌ನಲ್ಲಿ ತಿಳಿಸಲಾಗಿದೆ. (ಅ. ಕಾ. 21:8, 9) ಅವರಿಗೆ ತಮ್ಮ ತಂದೆಯಂತೆಯೇ ದೇವರ ಸೇವೆಯಲ್ಲಿ ಹುರುಪು ಇದ್ದಿರಬಹುದು. ಅವರು ತಮ್ಮ ಪ್ರವಾದಿಸುವ ವರವನ್ನು ಕೈಸರೈಯದಲ್ಲಿದ್ದ ತಮ್ಮ ಜೊತೆ ಕ್ರೈಸ್ತರ ಪ್ರಯೋಜನಾರ್ಥವಾಗಿ ಉಪಯೋಗಿಸಿದ್ದಿರಬಹುದು. (1 ಕೊರಿಂ. 14:1, 3) ಇಂದು ಸಹ ಅನೇಕ ಮಂದಿ ಅವಿವಾಹಿತ ಸಹೋದರಿಯರು, ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗಿ, ಅವುಗಳಲ್ಲಿ ಭಾಗವಹಿಸುವ ಮೂಲಕ ಇತರರ ಭಕ್ತಿವೃದ್ಧಿ ಮಾಡುತ್ತಾರೆ.

ಫಿಲಿಪ್ಪಿಯಲ್ಲಿದ್ದ ಲುದ್ಯ ಎಂಬ ಕ್ರೈಸ್ತಳನ್ನಾದರೋ ಆಕೆಯ ಅತಿಥಿಸತ್ಕಾರಕ್ಕಾಗಿ ಬೈಬಲ್‌ ಶ್ಲಾಘಿಸುತ್ತದೆ. (ಅ. ಕಾ. 16:14, 15, 40) ಲುದ್ಯ ಬಹುಶಃ ಅವಿವಾಹಿತಳಾಗಿದ್ದಳು ಇಲ್ಲವೇ ವಿಧವೆಯಾಗಿದ್ದಳು. ಆಕೆ ತುಂಬ ಉದಾರಭಾವದವಳಾಗಿದ್ದರಿಂದ ಪೌಲ, ಸೀಲ ಮತ್ತು ಲೂಕರಂಥ ಸಂಚರಣಾ ಮೇಲ್ವಿಚಾರಕರೊಂದಿಗಿನ ಸಹವಾಸವನ್ನು ಆನಂದಿಸಶಕ್ತಳಾದಳು ಮತ್ತು ಪ್ರಯೋಜನ ಪಡೆದಳು. ಅಂಥ ಮನೋಭಾವ ಇಂದು ಸಹ ತದ್ರೀತಿಯ ಆಶೀರ್ವಾದಗಳನ್ನು ತರುತ್ತದೆ.

ಪ್ರೀತಿಯೆಂಬ ಅಗತ್ಯವನ್ನು ಪೂರೈಸಿಕೊಳ್ಳುವುದು

ನಮ್ಮ ಜೀವನ ಅರ್ಥಪೂರ್ಣ ಚಟುವಟಿಕೆಯಿಂದ ತುಂಬಿರುವುದಾದರೂ, ಪ್ರೀತಿ ಮಮತೆಯನ್ನು ಪಡೆಯುವ ಅಗತ್ಯ ನಮಗೆಲ್ಲರಿಗೂ ಇದೆ. ಅವಿವಾಹಿತ ವ್ಯಕ್ತಿಗಳು ಆ ಅಗತ್ಯವನ್ನು ಹೇಗೆ ಪೂರೈಸಿಕೊಳ್ಳಬಲ್ಲರು? ಮೊದಲನೆಯದಾಗಿ ನಮ್ಮನ್ನು ಪ್ರೀತಿಸಲು, ಬಲಪಡಿಸಲು ಮತ್ತು ನಮಗೆ ಕಿವಿಗೊಡಲು ಯೆಹೋವನು ಯಾವಾಗಲೂ ಇದ್ದೇ ಇರುತ್ತಾನೆ. ರಾಜ ದಾವೀದನು ಕೆಲವೊಮ್ಮೆ ‘ಒಬ್ಬೊಂಟಿಗನಾಗಿದ್ದನು ಮತ್ತು ಬಾಧೆಪಟ್ಟನು.’ ಆದರೆ ತಾನು ಯಾವುದೇ ಸಮಯದಲ್ಲೂ ಯೆಹೋವನ ಮೊರೆಹೊಕ್ಕಿ ಆತನ ಆಸರೆ ಪಡೆಯಬಲ್ಲೆ ಎಂದು ಅವನಿಗೆ ತಿಳಿದಿತ್ತು. (ಕೀರ್ತ. 25:16; 55:22) ಅವನು ಬರೆದದ್ದು: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತ. 27:10) ದೇವರು ತನ್ನೆಲ್ಲ ಸೇವಕರಿಗೆ, ತನ್ನ ಸಮೀಪಕ್ಕೆ ಬರುವಂತೆ ಮತ್ತು ತನ್ನ ಆಪ್ತಮಿತ್ರರಾಗುವಂತೆ ಕರೆಕೊಡುತ್ತಾನೆ.—ಕೀರ್ತ. 25:14; ಯಾಕೋ. 2:23; 4:8.

ಅಷ್ಟುಮಾತ್ರವಲ್ಲದೆ, ನಮ್ಮ ಜಗದ್ವ್ಯಾಪಕ ಸಹೋದರತ್ವದಲ್ಲಿ ಆಧ್ಯಾತ್ಮಿಕ ತಂದೆ, ತಾಯಿ, ಸಹೋದರ, ಸಹೋದರಿಯರಿದ್ದಾರೆ. ಇವರ ಪ್ರೀತಿ ನಮ್ಮ ಬಾಳನ್ನು ಸಂಪನ್ನಗೊಳಿಸುವುದು. (ಮತ್ತಾ. 19:29; 1 ಪೇತ್ರ 2:17) ಅನೇಕ ಅವಿವಾಹಿತ ಕ್ರೈಸ್ತರು, “ಸತ್ಕ್ರಿಯೆಗಳಲ್ಲಿಯೂ ದಾನಧರ್ಮಗಳಲ್ಲಿಯೂ ಸದಾ ನಿರತಳಾಗಿದ್ದ” ದೊರ್ಕಳ ಮಾದರಿಯನ್ನು ಅನುಸರಿಸುವುದರಿಂದ ಸಂತೃಪ್ತಿಯನ್ನು ಪಡೆದುಕೊಂಡಿದ್ದಾರೆ. (ಅ. ಕಾ. 9:36, 39) ಲೊಲಿ ವಿವರಿಸುವುದು: “ನಾನು ಎಲ್ಲೇ ಹೋದರೂ, ನಿರಾಶೆಗೊಂಡಿರುವಾಗ ನನ್ನನ್ನು ಪ್ರೀತಿಸುವ ಮತ್ತು ಬೆಂಬಲಿಸುವಂಥ ನಿಜ ಮಿತ್ರರನ್ನು ಹುಡುಕುತ್ತೇನೆ. ನಾನು ಅವರಿಗೆ ಪ್ರೀತಿ ಹಾಗೂ ಆಸಕ್ತಿ ತೋರಿಸುವ ಮೂಲಕ ಆ ಗೆಳೆತನಗಳನ್ನು ಭದ್ರಪಡಿಸುತ್ತೇನೆ. ನಾನು ಎಂಟು ಸಭೆಗಳಲ್ಲಿ ಸೇವೆಮಾಡಿದ್ದೇನೆ ಮತ್ತು ಪ್ರತಿಯೊಂದು ಕಡೆಯೂ ನಿಜ ಮಿತ್ರರನ್ನು ಕಂಡುಕೊಂಡಿದ್ದೇನೆ. ಈ ಸಹೋದರಿಯರಲ್ಲಿ ಹೆಚ್ಚಿನವರು ನನ್ನ ಪ್ರಾಯದವರಲ್ಲ. ಕೆಲವರು ವೃದ್ಧರು, ಇನ್ನಿತರರು ಹದಿವಯಸ್ಕರಾಗಿದ್ದಾರೆ.” ಪ್ರತಿಯೊಂದು ಸಭೆಯಲ್ಲಿ, ಪ್ರೀತಿ ಮತ್ತು ಸಾಂಗತ್ಯದ ಅಗತ್ಯವಿರುವವರು ಇದ್ದೇ ಇರುತ್ತಾರೆ. ಅಂಥವರಲ್ಲಿ ಯಥಾರ್ಥ ಆಸಕ್ತಿ ತೋರಿಸುವುದರಿಂದ ಅವರಿಗೆ ಬಹಳಷ್ಟು ಸಹಾಯವಾಗುವುದು ಮಾತ್ರವಲ್ಲ, ಪ್ರೀತಿಸಬೇಕು ಮತ್ತು ಪ್ರೀತಿಸಲ್ಪಡಬೇಕು ಎಂಬ ನಮ್ಮ ಆಸೆ ಸಹ ಪೂರೈಸಲ್ಪಡುವುದು.—ಲೂಕ 6:38.

ದೇವರೆಂದೂ ಮರೆಯನು

ನಾವೀಗ ಜೀವಿಸುತ್ತಿರುವ ಕಾಲ ಕಷ್ಟಕರವಾದದ್ದರಿಂದ, ಎಲ್ಲ ಕ್ರೈಸ್ತರು ತ್ಯಾಗಗಳನ್ನು ಮಾಡಲೇಬೇಕಾಗುತ್ತದೆಂದು ಬೈಬಲ್‌ ಸೂಚಿಸುತ್ತದೆ. (1 ಕೊರಿಂ. 7:29-31) ಕರ್ತನಲ್ಲಿರುವವರನ್ನು ಮಾತ್ರ ಮದುವೆಯಾಗಬೇಕೆಂಬ ದೈವಿಕ ಆಜ್ಞೆಯನ್ನು ಪಾಲಿಸುವ ತಮ್ಮ ದೃಢನಿರ್ಧಾರದಿಂದಾಗಿ ಅವಿವಾಹಿತರಾಗಿರುವವರು ಖಂಡಿತವಾಗಿಯೂ ವಿಶೇಷವಾದ ಗೌರವ ಹಾಗೂ ಪರಿಗಣನೆಗೆ ಯೋಗ್ಯರು. (ಮತ್ತಾ. 19:12) ಆದರೆ ಅವರು ಮಾಡಿರುವ ಈ ಪ್ರಶಂಸಾರ್ಹ ತ್ಯಾಗದಿಂದಾಗಿ ತಮ್ಮ ಜೀವನವನ್ನು ಪೂರ್ತಿಯಾಗಿ ಆನಂದಿಸಲಾರರು ಎಂದೇನಿಲ್ಲ.

ಲಿಡ್ಯಾನ ಹೇಳುವುದು: “ನನ್ನ ಜೀವನ ಸಂತೃಪ್ತಿಕರವಾಗಿದೆ ಮತ್ತು ಇದಕ್ಕೆ ಕಾರಣ, ಯೆಹೋವನೊಂದಿಗಿನ ನನ್ನ ಸಂಬಂಧ ಹಾಗೂ ಆತನಿಗೆ ಸಲ್ಲಿಸುತ್ತಿರುವ ಸೇವೆಯೇ. ವಿವಾಹವಾಗಿ ಸುಖವಾಗಿರುವವರ ಮತ್ತು ಸುಖದಿಂದಿಲ್ಲದವರ ಪರಿಚಯವೂ ನನಗಿದೆ. ಈ ನಿಜತ್ವವು, ಸಂತೋಷದಿಂದಿರುವುದಕ್ಕೂ ಮದುವೆಯಾಗುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನನಗೆ ಮನಗಾಣಿಸುತ್ತದೆ.” ಯೇಸು ಹೇಳಿದಂತೆ, ಸಂತೋಷವು ಮುಖ್ಯವಾಗಿ, ಕೊಡುವುದರಿಂದ ಮತ್ತು ಸೇವೆಸಲ್ಲಿಸುವುದರಿಂದ ಸಿಗುತ್ತದೆ. ಇದು ಎಲ್ಲ ಕ್ರೈಸ್ತರಿಗೂ ಸಾಧ್ಯ.—ಯೋಹಾ. 13:14-17; ಅ. ಕಾ. 20:35.

ನಾವು ಯೆಹೋವನ ಚಿತ್ತಕ್ಕೋಸ್ಕರ ಯಾವುದೇ ತ್ಯಾಗಮಾಡಿದರೂ ಆತನು ನಮ್ಮನ್ನು ಆಶೀರ್ವದಿಸುವನು ಎಂಬ ಅರಿವೇ ನಮ್ಮ ಆನಂದಕ್ಕೆ ಮಹತ್ತರ ಕಾರಣವೆಂಬುದು ನಿಶ್ಚಯ. ಬೈಬಲ್‌ ನಮಗೆ ಈ ಆಶ್ವಾಸನೆ ಕೊಡುತ್ತದೆ: “ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನೀತಿವಂತನಲ್ಲ.”—ಇಬ್ರಿ. 6:10.

[ಪಾದಟಿಪ್ಪಣಿ]

^ ಪ್ಯಾರ. 6 ನಾವಿಲ್ಲಿ ಕ್ರೈಸ್ತ ಸಹೋದರಿಯರಿಗೆ ಸೂಚಿಸುತ್ತೇವಾದರೂ, ಮೂಲತತ್ತ್ವಗಳು ಸಹೋದರರಿಗೂ ಅನ್ವಯಿಸುತ್ತವೆ.

[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನ್ನ ಬಳಿ ಏನಿದೆಯೋ ಅದರಲ್ಲೇ ಖುಷಿಪಡುತ್ತೇನೆ ಹೊರತು ಏನಿಲ್ಲವೋ ಅದರ ಬಗ್ಗೆ ಕನಸು ಕಾಣುತ್ತಾ ಇರುವುದಿಲ್ಲ.”—ಕಾರ್ಮೆನ್‌

[ಪುಟ 26ರಲ್ಲಿರುವ ಚಿತ್ರ]

ಲೊಲಿ ಮತ್ತು ಲಿಡ್ಯಾನ, ಹೆಚ್ಚಿನ ಪ್ರಚಾರಕರ ಅಗತ್ಯವಿರುವ ಸ್ಥಳಗಳಲ್ಲಿ ಸೇವೆಮಾಡುವುದರಲ್ಲಿ ಆನಂದಿಸುತ್ತಾರೆ

[ಪುಟ 27ರಲ್ಲಿರುವ ಚಿತ್ರ]

ದೇವರು ತನ್ನೆಲ್ಲ ಸೇವಕರಿಗೆ ತನ್ನ ಸಮೀಪಕ್ಕೆ ಬರುವಂತೆ ಕರೆಕೊಡುತ್ತಾನೆ