ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೇಸು ಇಸ್ರಾಯೇಲ್‌ ದೇಶದಾದ್ಯಂತ ಸಂಚರಿಸಿ ಸಾರಿದನು. ಹಾಗಿರುವಾಗ, ಯೆಹೂದಿ ಜನರು ಮತ್ತು ಅವರ ಅಧಿಪತಿಗಳು ಅವನನ್ನು ವಧಿಸಿದಾಗ, ‘ಅಜ್ಞಾನದಿಂದ ವರ್ತಿಸಿದರು’ ಎಂದು ಅಪೊಸ್ತಲ ಪೇತ್ರನು ಹೇಗೆ ಹೇಳಸಾಧ್ಯ?—ಅ. ಕಾ. 3:17.

ಅಪೊಸ್ತಲ ಪೇತ್ರನು ಯೆಹೂದ್ಯರ ಒಂದು ಗುಂಪನ್ನು ಸಂಬೋಧಿಸುತ್ತಾ, ಮೆಸ್ಸೀಯನ ಮರಣದಲ್ಲಿ ಅವರ ಕೈವಾಡದ ಬಗ್ಗೆ ಹೇಳಿದ್ದು: “ನಿಮ್ಮ ಅಧಿಪತಿಗಳು ಮಾಡಿದಂತೆಯೇ ನೀವು ಸಹ ಅಜ್ಞಾನದಿಂದ ಹೀಗೆ ವರ್ತಿಸಿದಿರಿ ಎಂಬುದು ನನಗೆ ತಿಳಿದಿದೆ.” (ಅ. ಕಾ. 3:14-17) ಕೆಲವು ಯೆಹೂದ್ಯರಿಗೆ ಯೇಸುವೇ ಮೆಸ್ಸೀಯನೆಂದಾಗಲಿ ಅವನ ಬೋಧನೆಗಳಾಗಲಿ ಅರ್ಥವಾಗಿರಲಿಕ್ಕಿಲ್ಲ. ಇತರ ಯೆಹೂದ್ಯರಲ್ಲಾದರೋ ದೇವರನ್ನು ಮೆಚ್ಚಿಸಬೇಕೆಂಬ ಬಯಕೆಯಿರಲಿಲ್ಲ ಮತ್ತು ಅವರಲ್ಲಿ ಪೂರ್ವಾಗ್ರಹ, ಅಸೂಯೆ ಮತ್ತು ದ್ವೇಷವಿತ್ತು. ಇವುಗಳೇ ಅವರ ಆಧ್ಯಾತ್ಮಿಕ ಅಜ್ಞಾನಕ್ಕೆ ಕಾರಣಗಳಾಗಿದ್ದವು.

ಯೆಹೋವನನ್ನು ಮೆಚ್ಚಿಸಬೇಕೆಂಬ ಬಯಕೆ ಅನೇಕರಲ್ಲಿ ಇಲ್ಲದಿದ್ದದ್ದು, ಯೇಸುವಿನ ಬೋಧನೆಯ ಕುರಿತ ಅವರ ನೋಟವನ್ನು ಹೇಗೆ ಬಾಧಿಸಿತೆಂಬುದನ್ನು ಪರಿಗಣಿಸಿರಿ. ಯೇಸು ಹೆಚ್ಚಾಗಿ ದೃಷ್ಟಾಂತಗಳನ್ನು ಬಳಸಿ ಬೋಧಿಸಿದನು. ಹೆಚ್ಚನ್ನು ಕಲಿಯಲು ಬಯಸುವವರಿಗೆ ಅವನು ಆ ದೃಷ್ಟಾಂತಗಳನ್ನು ವಿವರಿಸಿ ಹೇಳುತ್ತಿದ್ದನು. ಕೆಲವರಾದರೋ ಆ ದೃಷ್ಟಾಂತಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಬದಲು ಸುಮ್ಮನೆ ಎದ್ದು ಹೋಗುತ್ತಿದ್ದರು. ಒಂದು ಸಂದರ್ಭದಲ್ಲಂತೂ, ಯೇಸು ಬಳಸಿದ ಒಂದು ಭಾಷಾಲಂಕಾರದ ಬಗ್ಗೆ ಕೆಲವು ಶಿಷ್ಯರು ಸಹ ಕೋಪಗೊಂಡರು. (ಯೋಹಾ. 6:52-66) ಯೇಸುವಿನ ದೃಷ್ಟಾಂತಗಳು, ತಮ್ಮ ಯೋಚನಾರೀತಿ ಹಾಗೂ ನಡತೆಯನ್ನು ಬದಲಾಯಿಸಲು ತಾವು ಎಷ್ಟರ ಮಟ್ಟಿಗೆ ಸಿದ್ಧರಾಗಿದ್ದೇವೆಂಬುದನ್ನು ಪರೀಕ್ಷಿಸುತ್ತವೆ ಎಂಬ ಮಾತನ್ನು ಇಂಥವರು ಗ್ರಹಿಸಿರಲಿಲ್ಲ. (ಯೆಶಾ. 6:9, 10; 44:18; ಮತ್ತಾ. 13:10-15) ಮೆಸ್ಸೀಯನು ತನ್ನ ಬೋಧನೆಯಲ್ಲಿ ದೃಷ್ಟಾಂತಗಳನ್ನು ಬಳಸುವನೆಂಬುದರ ಕುರಿತಾದ ಪ್ರವಾದನೆಯನ್ನೂ ಅವರು ಅಲಕ್ಷಿಸಿದರು.—ಕೀರ್ತ. 78:2.

ಇನ್ನೂ ಕೆಲವರು ಪೂರ್ವಾಗ್ರಹದಿಂದಾಗಿ ಯೇಸುವಿನ ಬೋಧನೆಗಳನ್ನು ತಿರಸ್ಕರಿಸಿದರು. ಅವನು ತನ್ನ ಊರಾದ ನಜರೇತಿನಲ್ಲಿದ್ದ ಸಭಾಮಂದಿರದಲ್ಲಿ ಬೋಧಿಸಿದಾಗ ಅಲ್ಲಿನ ಜನರು ‘ಅತ್ಯಾಶ್ಚರ್ಯಪಟ್ಟರು.’ ಹಾಗಿದ್ದರೂ, ಅವರು ಯೇಸುವನ್ನು ಮೆಸ್ಸೀಯನೆಂದು ಸ್ವೀಕರಿಸುವ ಬದಲು, ಅವನ ಹಿನ್ನಲೆ ಬಗ್ಗೆ ಪ್ರಶ್ನಿಸುತ್ತಾ ಹೀಗಂದರು: “ಇವನು ಈ ವಿಷಯಗಳನ್ನು ಎಲ್ಲಿಂದ ಪಡೆದುಕೊಂಡನು? . . . ಇವನು ಬಡಗಿಯಲ್ಲವೆ? ಇವನು ಮರಿಯಳ ಮಗನಲ್ಲವೆ? ಇವನು ಯಾಕೋಬ, ಯೋಸೇಫ, ಯೂದ ಮತ್ತು ಸೀಮೋನರ ಅಣ್ಣನಲ್ಲವೆ? ಇವನ ತಂಗಿಯರು ನಮ್ಮಲ್ಲಿದ್ದಾರಲ್ಲವೆ?” (ಮಾರ್ಕ 6:1-3) ಯೇಸು ಒಂದು ಬಡ ಕುಟುಂಬದಲ್ಲಿ ಬೆಳೆದವನು ಎಂಬ ಸಂಗತಿಯಿಂದಾಗಿ ನಜರೇತಿನ ಜನರು ಅವನ ಬೋಧನೆಗಳಿಗೆ ಬೆಲೆಕೊಡಲಿಲ್ಲ.

ಧಾರ್ಮಿಕ ಮುಖಂಡರ ಕುರಿತೇನು? ಅವರಲ್ಲಿ ಹೆಚ್ಚಿನವರು ಈ ಕಾರಣಗಳಿಗಾಗಿಯೇ ಅವನಿಗೆ ಕಿವಿಗೊಡಲಿಲ್ಲ. (ಯೋಹಾ. 7:47-52) ಯೇಸುವಿಗೆ ಜನರಿಂದ ಮನ್ನಣೆ ಸಿಗುತ್ತಿದ್ದದ್ದರಿಂದಲೂ ಅವರು ಅವನ ಬಗ್ಗೆ ಅಸೂಯೆಪಟ್ಟು ಅವನ ಬೋಧನೆಗಳನ್ನು ತಿರಸ್ಕರಿಸಿದರು. (ಮಾರ್ಕ 15:10) ಅನೇಕ ಗಣ್ಯವ್ಯಕ್ತಿಗಳ ಕಪಟತನ ಹಾಗೂ ವಂಚನೆಯನ್ನು ಅವನು ಖಂಡಿಸಿದಾಗ ಅವರ ಪ್ರತಿಕ್ರಿಯೆ ತುಂಬ ಕೆಟ್ಟದ್ದಾಗಿತ್ತು. (ಮತ್ತಾ. 23:13-36) ಅವರ ಈ ಉದ್ದೇಶಪೂರ್ವಕ ಅಜ್ಞಾನವನ್ನು ಯೇಸು ಸೂಕ್ತವಾಗಿಯೇ ಖಂಡಿಸುತ್ತಾ ಹೇಳಿದ್ದು: “ಧರ್ಮಶಾಸ್ತ್ರದಲ್ಲಿ ಪ್ರವೀಣರಾಗಿರುವ ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಜ್ಞಾನದ ಕೀಲಿ ಕೈಯನ್ನು ತೆಗೆದುಕೊಂಡು ಹೋದಿರಿ; ನೀವು ಹೇಗೂ [ರಾಜ್ಯದ] ಒಳಗೆ ಹೋಗಲಿಲ್ಲ, ಒಳಗೆ ಹೋಗುವವರನ್ನೂ ತಡೆದಿರಿ.”—ಲೂಕ 11:37-52.

ಮೂರುವರೆ ವರ್ಷಗಳ ತನಕ ಯೇಸು ದೇಶದಾದ್ಯಂತ ಸುವಾರ್ತೆ ಸಾರಿದನು. ಈ ಕೆಲಸದಲ್ಲಿ ಪಾಲ್ಗೊಳ್ಳಲು ಅವನು ಇನ್ನೂ ಅನೇಕರನ್ನು ತರಬೇತಿಗೊಳಿಸಿದನು. (ಲೂಕ 9:1, 2; 10:1, 16, 17) ಯೇಸು ಮತ್ತು ಅವನ ಶಿಷ್ಯರು ಎಷ್ಟು ಪರಿಣಾಮಕಾರಿಯಾಗಿ ಬೋಧಿಸಿದರೆಂದರೆ, “ಇಡೀ ಲೋಕವೇ ಅವನ ಹಿಂದೆ ಹೋಗಿದೆಯಲ್ಲಾ” ಎಂದು ಫರಿಸಾಯರು ದೂರಿದರು. (ಯೋಹಾ. 12:19) ಆದುದರಿಂದ ಹೆಚ್ಚಿನ ಯೆಹೂದ್ಯರಿಗೆ ಏನೂ ಗೊತ್ತಿರಲಿಲ್ಲವೆಂದು ಹೇಳಲಾಗದು. ಆದರೆ ಮೂಲತಃ ಅವರು “ಅಜ್ಞಾನದಿಂದ” ಇದ್ದದ್ದು, ಯೇಸು ಮೆಸ್ಸೀಯನೆಂಬ ವಿಷಯದಲ್ಲೇ. ಮೆಸ್ಸೀಯನ ಕುರಿತ ಜ್ಞಾನ ಹಾಗೂ ಆತನ ಕಡೆಗಿನ ಪ್ರೀತಿಯನ್ನು ಅವರು ಇನ್ನಷ್ಟು ಗಾಢಗೊಳಿಸಬಹುದಿತ್ತಾದರೂ ಹಾಗೆ ಮಾಡಲಿಲ್ಲ. ಕೆಲವರಂತೂ ಯೇಸುವನ್ನು ಕೊಲ್ಲುವುದರಲ್ಲೂ ಶಾಮೀಲಾದರು. ಹೀಗಿರುವುದರಿಂದ ಅಪೊಸ್ತಲ ಪೇತ್ರನು ಅವರಲ್ಲಿ ಅನೇಕರಿಗೆ ಹೀಗೆ ಬುದ್ಧಿಹೇಳಿದನು: “ಆದುದರಿಂದ ನಿಮ್ಮ ಪಾಪಗಳು ಅಳಿಸಿಬಿಡಲ್ಪಡುವಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ; ಆಗ ಯೆಹೋವನ ಸಮ್ಮುಖದಿಂದ ಚೈತನ್ಯದಾಯಕ ಸಮಯಗಳು ಬರುವವು ಮತ್ತು ನಿಮಗಾಗಿ ನೇಮಿಸಲ್ಪಟ್ಟಿರುವ ಕ್ರಿಸ್ತನನ್ನು, ಯೇಸುವನ್ನು ಆತನು ಕಳುಹಿಸಿಕೊಡುವನು.” (ಅ. ಕಾ. 3:19, 20) ಸಾವಿರಾರು ಮಂದಿ ಯೆಹೂದ್ಯರು, “ಯಾಜಕರಲ್ಲಿಯೂ ಬಹು ಜನರು” ಈ ಮಾತನ್ನು ಪಾಲಿಸಲಾರಂಭಿಸಿದ್ದು ಗಮನಾರ್ಹ. ಅಂದಿನಿಂದ ಅವರು ಅಜ್ಞಾನದಿಂದ ವರ್ತಿಸಲಿಲ್ಲ. ಬದಲಿಗೆ ಪಶ್ಚಾತ್ತಾಪಪಟ್ಟು ಯೆಹೋವನ ಅನುಗ್ರಹ ಪಡೆದರು.—ಅ. ಕಾ. 2:41; 4:4; 5:14; 6:7.