ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವನ್ನು ಅನುಕರಿಸುತ್ತಾ ಪ್ರೀತಿಯಿಂದ ಬೋಧಿಸಿರಿ

ಯೇಸುವನ್ನು ಅನುಕರಿಸುತ್ತಾ ಪ್ರೀತಿಯಿಂದ ಬೋಧಿಸಿರಿ

ಯೇಸುವನ್ನು ಅನುಕರಿಸುತ್ತಾ ಪ್ರೀತಿಯಿಂದ ಬೋಧಿಸಿರಿ

“ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ.” —ಯೋಹಾ. 7:46.

1. ಯೇಸುವಿನ ಬೋಧನಾ ವಿಧಾನಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದರು?

ಯೇಸು ಬೋಧಿಸುತ್ತಿದ್ದಾಗ ಅದನ್ನು ಕೇಳಿಸಿಕೊಂಡವರಿಗೆ ಎಷ್ಟು ರೋಮಾಂಚನ ಆಗಿದ್ದಿರಬೇಕು! ಅವರ ಮೇಲಾದ ಪರಿಣಾಮದ ನಸುನೋಟಗಳು ಬೈಬಲ್‌ನಲ್ಲಿವೆ. ಉದಾಹರಣೆಗೆ, ಸುವಾರ್ತಾ ಲೇಖಕನಾದ ಲೂಕನಿಗನುಸಾರ, ಯೇಸುವಿನ ಸ್ವಂತ ಊರಿನ ಜನರು ‘ಅವನ ಬಾಯಿಂದ ಬರುತ್ತಿದ್ದ ಮನವೊಲಿಸುವ ಮಾತುಗಳಿಗೆ ಆಶ್ಚರ್ಯಪಟ್ಟರು.’ ಮತ್ತಾಯನ ವರದಿಗನುಸಾರ, ಯೇಸು ಪರ್ವತ ಪ್ರಸಂಗವನ್ನು ಕೊಡುತ್ತಿದ್ದಾಗ ಆಲಿಸುತ್ತಿದ್ದ ಜನರು ‘ಅವನು ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟರು.’ ಯೋಹಾನನಿಗನುಸಾರ, ಯೇಸುವನ್ನು ದಸ್ತಗಿರಿ ಮಾಡಲು ಕಳುಹಿಸಲಾಗಿದ್ದ ಅಧಿಕಾರಿಗಳು ಬರೀಗೈಯಲ್ಲಿ ಹಿಂದಿರುಗಿ, “ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ” ಎಂದು ಹೇಳಿದರು.—ಲೂಕ 4:22; ಮತ್ತಾ. 7:28; ಯೋಹಾ. 7:46.

2. ಯೇಸು ಯಾವ ಬೋಧನಾ ವಿಧಾನಗಳನ್ನು ಬಳಸಿದನು?

2 ಆ ಅಧಿಕಾರಿಗಳು ಹೇಳಿದ ಮಾತಲ್ಲಿ ಎಳ್ಳಷ್ಟೂ ಸುಳ್ಳಿರಲಿಲ್ಲ. ಏಕೆಂದರೆ, ಯೇಸು ಜೀವಿಸಿರುವವರಲ್ಲೇ ಅತ್ಯಂತ ಮಹಾನ್‌ ಬೋಧಕನೆಂಬುದರಲ್ಲಿ ಎರಡು ಮಾತಿಲ್ಲ. ಅವನು ಸ್ಪಷ್ಟವಾಗಿಯೂ ಸರಳವಾಗಿಯೂ ಬೋಧಿಸಿದನು ಮತ್ತು ಮರುಪ್ರಶ್ನೆ ಹಾಕಲಾಗದಂಥ ರೀತಿಯ ವಾದಸರಣಿಯನ್ನು ಬಳಸಿದನು. ದೃಷ್ಟಾಂತಗಳು ಹಾಗೂ ಪ್ರಶ್ನೆಗಳ ಬಳಕೆಯಲ್ಲೂ ಅವನು ನಿಸ್ಸೀಮನಾಗಿದ್ದನು. ತನ್ನ ಕೇಳುಗರು ಗಣ್ಯರಾಗಿರಲಿ, ಜನಸಾಮಾನ್ಯರಾಗಿರಲಿ ಅವರ ಗ್ರಹಣ ಸಾಮರ್ಥ್ಯಕ್ಕೆ ತಕ್ಕಂತೆ ತನ್ನ ಬೋಧನಾ ವಿಧಾನವನ್ನು ಹೊಂದಿಸುತ್ತಿದ್ದನು. ಅವನು ಬೋಧಿಸಿದ ಸತ್ಯಗಳು ಗ್ರಹಿಸಲು ಸುಲಭವಾಗಿದ್ದರೂ, ಗಹನವಾಗಿದ್ದವು. ಆದರೆ, ಕೇವಲ ಈ ವಿಷಯಗಳಿಂದಾಗಿ ಅವನು ಮಹಾನ್‌ ಬೋಧಕನಾಗಲಿಲ್ಲ.

ಪ್ರೀತಿ ಪ್ರಾಮುಖ್ಯ

3. ಒಬ್ಬ ಬೋಧಕನಾಗಿ ಯೇಸುವಿಗೂ ಆ ಕಾಲದ ಧಾರ್ಮಿಕ ಮುಖಂಡರಿಗೂ ಯಾವ ವ್ಯತ್ಯಾಸವಿತ್ತು?

3 ಶಾಸ್ತ್ರಿಗಳು ಹಾಗೂ ಫರಿಸಾಯರಲ್ಲೂ ಮೇಧಾವಿಗಳಿದ್ದರು. ಅವರ ಬಳಿಯೂ ಜ್ಞಾನ ಹಾಗೂ ಅದನ್ನು ಇತರರಿಗೆ ಹಂಚುವ ಕೌಶಲಗಳಿದ್ದವು. ಹೀಗಿರುವಾಗ ಯೇಸುವಿನ ಬೋಧನಾ ವಿಧಾನ ಅವರದ್ದಕ್ಕಿಂತ ಭಿನ್ನವಾಗಿದ್ದದ್ದು ಹೇಗೆ? ಯೇಸುವಿನ ಕಾಲದ ಧಾರ್ಮಿಕ ಮುಖಂಡರಿಗೆ ಸಾಮಾನ್ಯ ಜನರ ಮೇಲೆ ಕಿಂಚಿತ್ತೂ ಪ್ರೀತಿಯಿರಲಿಲ್ಲ, ಬದಲಾಗಿ ಅವರನ್ನು “ಶಾಪಗ್ರಸ್ತರು” ಎಂದು ಹಂಗಿಸುತ್ತಿದ್ದರು. (ಯೋಹಾ. 7:49) ಯೇಸುವಾದರೋ, ಜನರು “ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದಾರಲ್ಲ” ಎಂದು ಅವರ ಮೇಲೆ ಕನಿಕರಪಡುತ್ತಿದ್ದನು. (ಮತ್ತಾ. 9:36) ಅವನು ಕೋಮಲಭಾವ, ಸಹಾನುಭೂತಿ ಮತ್ತು ದಯೆ ತೋರಿಸುತ್ತಿದ್ದನು. ಆ ಧಾರ್ಮಿಕ ಮುಖಂಡರಿಗೆ ದೇವರ ಮೇಲೂ ನಿಜವಾದ ಪ್ರೀತಿಯಿರಲಿಲ್ಲ. (ಯೋಹಾ. 5:42) ಯೇಸುವಿಗಾದರೋ ತನ್ನ ತಂದೆಯ ಮೇಲೆ ಪ್ರೀತಿಯಿತ್ತು. ಆತನ ಚಿತ್ತವನ್ನು ಮಾಡಲು ಅವನು ಹರ್ಷಿಸಿದನು. ಧಾರ್ಮಿಕ ಮುಖಂಡರು ತಮ್ಮ ಅನುಕೂಲಕ್ಕಾಗಿ ದೇವರ ಮಾತುಗಳನ್ನು ತಿರುಚಿದರು. ಯೇಸುವಾದರೋ “ದೇವರ ವಾಕ್ಯವನ್ನು” ಪ್ರೀತಿಸಿದನು. ಅದನ್ನೇ ಕಲಿಸಿದನು, ವಿವರಿಸಿದನು, ಸಮರ್ಥಿಸಿದನು ಮತ್ತು ಅದರ ಪ್ರಕಾರ ಜೀವಿಸಿದನು. (ಲೂಕ 11:28) ಪ್ರೀತಿಯು ಕ್ರಿಸ್ತನ ಕಣಕಣದಲ್ಲೂ ಇತ್ತು ಹಾಗೂ ಅವನ ಬೋಧನೆ, ಜನರೊಂದಿಗಿನ ವ್ಯವಹಾರ ಮತ್ತು ಬೋಧನಾ ವಿಧಾನವನ್ನೂ ವ್ಯಾಪಿಸಿತ್ತು.

4, 5. (ಎ) ಪ್ರೀತಿಯಿಂದ ಬೋಧಿಸುವುದು ಪ್ರಾಮುಖ್ಯವೇಕೆ? (ಬಿ) ಬೋಧಿಸುವಾಗ ಜ್ಞಾನ ಮತ್ತು ಕೌಶಲ ಸಹ ಪ್ರಾಮುಖ್ಯವೇಕೆ?

4 ನಮ್ಮ ಕುರಿತೇನು? ಕ್ರಿಸ್ತನ ಹಿಂಬಾಲಕರಾಗಿರುವ ನಾವು ನಮ್ಮ ಶುಶ್ರೂಷೆಯಲ್ಲೂ ಜೀವನದಲ್ಲೂ ಅವನನ್ನು ಅನುಕರಿಸಲು ಬಯಸುತ್ತೇವೆ. (1 ಪೇತ್ರ 2:21) ಆದದ್ದರಿಂದ ನಮ್ಮ ಗುರಿ, ಇತರರಿಗೆ ಬೈಬಲ್‌ ಜ್ಞಾನವನ್ನು ಕೊಡುವುದು ಮಾತ್ರವಲ್ಲ ಯೆಹೋವನ ಗುಣಗಳನ್ನು ಅದರಲ್ಲೂ ವಿಶೇಷವಾಗಿ ಪ್ರೀತಿಯನ್ನು ಪ್ರತಿಫಲಿಸುವುದೇ ಆಗಿದೆ. ನಮ್ಮ ಬಳಿ ಜ್ಞಾನ ಮತ್ತು ಬೋಧನಾ ಕೌಶಲಗಳು ಬಹಳವೇ ಇರಲಿ ಸ್ವಲ್ಪವೇ ಇರಲಿ ನಾವು ಸಾರುವ ಸಂದೇಶ ಜನರ ಹೃದಯವನ್ನು ತಲುಪುವಂತೆ ಸಹಾಯ ಮಾಡುವುದು ನಾವು ತೋರಿಸುವ ಪ್ರೀತಿಯೇ. ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ನಿಜಕ್ಕೂ ಪರಿಣಾಮಕಾರಿ ಆಗಿರಬೇಕಾದರೆ ಯೇಸುವನ್ನು ಅನುಕರಿಸುತ್ತಾ ಪ್ರೀತಿಯಿಂದ ಬೋಧಿಸಲೇಬೇಕು.

5 ಉತ್ತಮ ಬೋಧಕರಾಗಿರಲಿಕ್ಕಾಗಿ, ನಾವು ಕಲಿಸುತ್ತಿರುವ ವಿಷಯದ ಜ್ಞಾನ ಮತ್ತು ಆ ಜ್ಞಾನವನ್ನು ಹಂಚಲಿಕ್ಕೆ ಕೌಶಲ ಖಂಡಿತ ಬೇಕು. ಇವೆರಡನ್ನೂ ಗಳಿಸುವಂತೆ ಯೇಸು ತನ್ನ ಶಿಷ್ಯರಿಗೆ ಸಹಾಯ ಮಾಡಿದನು. ಇಂದು ನಮಗಾದರೋ ಯೆಹೋವನು ತನ್ನ ಸಂಘಟನೆಯ ಮೂಲಕ ಸಹಾಯ ಮಾಡುತ್ತಿದ್ದಾನೆ. (ಯೆಶಾಯ 54:13; ಲೂಕ 12:42 ಓದಿ.) ಆದರೆ ಬೋಧಿಸುವಾಗ ನಮ್ಮ ಮನಸ್ಸು ಮಾತ್ರವಲ್ಲ ನಮ್ಮ ಹೃದಯವೂ ಒಳಗೂಡಿರಬೇಕು. ನಮ್ಮ ಬೋಧನಾ ವಿಧಾನದಲ್ಲಿ ಜ್ಞಾನ, ಕೌಶಲ ಮತ್ತು ಪ್ರೀತಿಯ ಸಮ್ಮಿಲನವಾಗುವಾಗ ಸಿಗುವ ಫಲಿತಾಂಶಗಳು ಹೆಚ್ಚು ತೃಪ್ತಿಕರವಾಗಿರುವವು. ಹಾಗಾದರೆ ನಾವು ಬೋಧಿಸುವಾಗ ಪ್ರೀತಿ ತೋರಿಸುವುದು ಹೇಗೆ? ಯೇಸು ಮತ್ತವನ ಶಿಷ್ಯರು ಇದನ್ನು ಮಾಡಿದ್ದು ಹೇಗೆ? ನಾವೀಗ ನೋಡೋಣ.

ನಾವು ಯೆಹೋವನನ್ನು ಪ್ರೀತಿಸಬೇಕು

6. ನಮಗೆ ಯಾರ ಮೇಲೆ ಪ್ರೀತಿಯಿದೆಯೋ ಅವರ ಬಗ್ಗೆ ನಾವು ಹೇಗೆ ಮಾತಾಡುತ್ತೇವೆ?

6 ನಮಗೆ ತುಂಬ ಇಷ್ಟವಾಗುವಂಥ ವಿಷಯಗಳ ಬಗ್ಗೆ ಮಾತಾಡಲು ಬಹಳ ಖುಷಿಯಾಗುತ್ತದೆ. ಅಂತಹ ವಿಷಯಗಳ ಕುರಿತು ಮಾತಾಡುವಾಗ ನಮ್ಮಲ್ಲಿ ಕಳೆತುಂಬಿ ಉತ್ಸಾಹ ಮತ್ತು ಲವಲವಿಕೆ ತೋರಿಬರುತ್ತದೆ. ನಮಗೆ ಯಾರ ಮೇಲೆ ಪ್ರೀತಿಯಿದೆಯೋ ಅಂಥವರ ಬಗ್ಗೆ ಮಾತಾಡುವಾಗಲಂತೂ ಇದು ಸತ್ಯ. ಸಾಮಾನ್ಯವಾಗಿ, ಆ ವ್ಯಕ್ತಿಯ ಕುರಿತು ನಮಗೇನು ಗೊತ್ತಿದೆಯೋ ಅದನ್ನು ಇತರರಿಗೆ ತಿಳಿಸುವ ಅವಕಾಶಕ್ಕಾಗಿ ಕಾಯುತ್ತಿರುತ್ತೇವೆ. ನಾವು ಆ ವ್ಯಕ್ತಿಯ ಗುಣಗಾನ ಮಾಡುತ್ತೇವೆ, ಅವರನ್ನು ಗೌರವಿಸುತ್ತೇವೆ ಮತ್ತು ಅವರ ಪರವಹಿಸಿ ಮಾತಾಡುತ್ತೇವೆ. ಇತರರು ಕೂಡ ನಮ್ಮಂತೆಯೇ ಆ ವ್ಯಕ್ತಿಯ ಕಡೆಗೆ ಹಾಗೂ ಆತನ ಗುಣಗಳೆಡೆಗೆ ಆಕರ್ಷಿತರಾಗಬೇಕೆಂದು ನಾವು ಬಯಸುವುದರಿಂದಲೇ ಹೀಗೆ ಮಾಡುತ್ತೇವೆ.

7. ದೇವರ ಮೇಲಣ ಪ್ರೀತಿ ಏನು ಮಾಡುವಂತೆ ಯೇಸುವನ್ನು ಪ್ರಚೋದಿಸಿತು?

7 ಇತರರಲ್ಲಿ ಯೆಹೋವನಿಗಾಗಿ ಪ್ರೀತಿಯನ್ನು ಬೆಳೆಸುವ ಮೊದಲು ಸ್ವತಃ ನಾವು ಆತನನ್ನು ಅರಿತಿರಬೇಕು ಹಾಗೂ ಪ್ರೀತಿಸಬೇಕು. ಎಷ್ಟೆಂದರೂ ಸತ್ಯಾರಾಧನೆಯು ದೇವರ ಮೇಲಣ ಪ್ರೀತಿಯ ಮೇಲೆ ಆಧರಿತವಾಗಿದೆ. (ಮತ್ತಾ. 22:36-38) ಇದರಲ್ಲಿ ಯೇಸು ಪರಿಪೂರ್ಣ ಮಾದರಿಯನ್ನಿಟ್ಟಿದ್ದಾನೆ. ಅವನು ಯೆಹೋವನನ್ನು ಪೂರ್ಣ ಹೃದಯ, ಮನಸ್ಸು, ಪ್ರಾಣ ಮತ್ತು ಬಲದಿಂದ ಪ್ರೀತಿಸಿದನು. ಯೇಸು ಕೋಟ್ಯಂತರ ವರ್ಷಗಳಿಂದ ತನ್ನ ತಂದೆಯೊಟ್ಟಿಗೆ ಸ್ವರ್ಗದಲ್ಲಿ ಜೀವಿಸಿದ್ದರಿಂದ ಆತನ ಬಗ್ಗೆ ಚೆನ್ನಾಗಿ ಅರಿತಿದ್ದನು. ಫಲಿತಾಂಶ? “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂದು ಯೇಸು ಹೇಳಿದನು. (ಯೋಹಾ. 14:31) ಯೇಸುವಿನ ಪ್ರತಿಯೊಂದು ಮಾತು ಹಾಗೂ ಕ್ರಿಯೆಗಳಲ್ಲಿ ಆ ಪ್ರೀತಿ ತೋರಿಬಂತು. ಯಾವಾಗಲೂ ದೇವರಿಗೆ ಮೆಚ್ಚಿಕೆಯಾದದ್ದನ್ನೇ ಮಾಡುವಂತೆ ಪ್ರೀತಿ ಅವನನ್ನು ಪ್ರಚೋದಿಸಿತು. (ಯೋಹಾ. 8:29) ದೇವರನ್ನು ಪ್ರತಿನಿಧಿಸುತ್ತಿದ್ದೇವೆಂದು ಹೇಳಿಕೊಳ್ಳುತ್ತಿದ್ದ ಕಪಟ ಧಾರ್ಮಿಕ ಮುಖಂಡರನ್ನು ಬಹಿರಂಗವಾಗಿ ಖಂಡಿಸುವಂತೆಯೂ ಈ ಪ್ರೀತಿ ಅವನನ್ನು ಪ್ರೇರಿಸಿತು. ಇದು, ಇತರರೊಂದಿಗೆ ಯೆಹೋವನ ಕುರಿತು ಮಾತಾಡಲು ಮತ್ತು ಅವರು ಆತನನ್ನು ಅರಿತು ಪ್ರೀತಿಸಲು ಸಹಾಯ ಮಾಡುವಂತೆಯೂ ಯೇಸುವನ್ನು ಪ್ರಚೋದಿಸಿತು.

8. ದೇವರ ಮೇಲಣ ಪ್ರೀತಿ ಏನು ಮಾಡುವಂತೆ ಯೇಸುವಿನ ಶಿಷ್ಯರಿಗೆ ಸ್ಫೂರ್ತಿ ನೀಡಿತು?

8 ಯೇಸುವಿನಂತೆಯೇ, ಪ್ರಥಮ ಶತಮಾನದ ಅವನ ಶಿಷ್ಯರು ಯೆಹೋವನನ್ನು ಪ್ರೀತಿಸಿದರು. ಇದು ತಾನೇ ಅವರಿಗೆ, ಸುವಾರ್ತೆಯನ್ನು ಧೈರ್ಯ ಹಾಗೂ ಹುರುಪಿನಿಂದ ಸಾರುವಂತೆ ಸ್ಫೂರ್ತಿ ನೀಡಿತು. ಅಧಿಕಾರಶಾಹಿ ಧಾರ್ಮಿಕ ಮುಖಂಡರ ವಿರೋಧದ ಮಧ್ಯೆಯೂ ಯೆರೂಸಲೇಮನ್ನು ಅವರ ಬೋಧನೆಯಿಂದ ತುಂಬಿಸಿದರು. ತಾವು ನೋಡಿದ ಮತ್ತು ಕೇಳಿಸಿಕೊಂಡ ಸಂಗತಿಗಳನ್ನು ಹೇಳದೇ ಇರಲು ಶಿಷ್ಯರಿಂದಾಗಲಿಲ್ಲ. (ಅ. ಕಾ. 4:20; 5:28) ಯೆಹೋವನು ತಮ್ಮೊಂದಿಗಿದ್ದು ತಮ್ಮನ್ನು ಆಶೀರ್ವದಿಸುವನು ಎಂಬುದು ಅವರಿಗೆ ತಿಳಿದಿತ್ತು ಮತ್ತು ಹಾಗೆಯೇ ಆಯಿತು. ಆದ್ದರಿಂದಲೇ, ಯೇಸು ಮೃತಪಟ್ಟು 30 ವರ್ಷಗಳು ಕಳೆಯುವುದರೊಳಗೆ “ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ” ಸುವಾರ್ತೆ ಸಾರಲಾಗಿದೆ ಎಂದು ಪೌಲನು ಬರೆಯಲು ಸಾಧ್ಯವಾಯಿತು.—ಕೊಲೊ. 1:23.

9. ದೇವರ ಕಡೆಗಿನ ನಮ್ಮ ಪ್ರೀತಿಯನ್ನು ಹೇಗೆ ಬಲಗೊಳಿಸುತ್ತಿರಬಹುದು?

9 ಪರಿಣಾಮಕಾರಿ ಬೋಧಕರಾಗಬೇಕಾದರೆ, ನಾವು ಸಹ ದೇವರ ಕಡೆಗಿನ ಪ್ರೀತಿಯನ್ನು ಬಲಗೊಳಿಸುತ್ತ ಇರಬೇಕು. ಅದನ್ನು ಹೇಗೆ ಮಾಡಬಲ್ಲೆವು? ಪ್ರಾರ್ಥನೆಯಲ್ಲಿ ದೇವರೊಂದಿಗೆ ಅನೇಕ ಸಲ ಮಾತಾಡುವ ಮೂಲಕವೇ. ದೇವರ ವಾಕ್ಯದ ಅಧ್ಯಯನ, ಬೈಬಲಾಧರಿತ ಪ್ರಕಾಶನಗಳ ವಾಚನ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವ ಮೂಲಕವೂ ನಾವು ಆತನ ಮೇಲಣ ಪ್ರೀತಿಯನ್ನು ಬಲಪಡಿಸುತ್ತೇವೆ. ನಾವು ದೇವರ ಕುರಿತ ಜ್ಞಾನದಲ್ಲಿ ಬೆಳೆದಂತೆ ನಮ್ಮ ಹೃದಯಗಳಲ್ಲಿ ಆತನ ಕಡೆಗಿನ ಪ್ರೀತಿ ಹೆಚ್ಚುವುದು. ನಾವು ದೇವರ ಕಡೆಗಿನ ನಮ್ಮ ಪ್ರೀತಿಯನ್ನು ಮಾತು ಹಾಗೂ ಕೃತ್ಯಗಳಲ್ಲಿ ವ್ಯಕ್ತಪಡಿಸುವಾಗ, ಅದನ್ನು ಇತರರು ಗಮನಿಸಿ ಯೆಹೋವನ ಹತ್ತಿರಕ್ಕೆ ಸೆಳೆಯಲ್ಪಡುವರು.—ಕೀರ್ತನೆ 104:33, 34 ಓದಿ.

ನಾವೇನನ್ನು ಬೋಧಿಸುತ್ತೇವೋ ಅದನ್ನು ಪ್ರೀತಿಸಬೇಕು

10. ಉತ್ತಮ ಬೋಧಕನ ಗುರುತೇನು?

10 ಒಬ್ಬ ಉತ್ತಮ ಬೋಧಕನ ಗುರುತೇನೆಂದರೆ, ಅವನೇನನ್ನು ಬೋಧಿಸುತ್ತಾನೋ ಅದನ್ನು ಅವನು ಪ್ರೀತಿಸುತ್ತಾನೆ. ತಾನು ಬೋಧಿಸುತ್ತಿರುವ ವಿಷಯ ಸತ್ಯವಾದದ್ದೂ ಮಹತ್ತ್ವದ್ದೂ ಅಮೂಲ್ಯವಾದದ್ದೂ ಆಗಿದೆ ಎಂಬುದನ್ನು ಅವನು ನಂಬಬೇಕು. ಬೋಧಕನು ಯಾವುದರ ಬಗ್ಗೆ ಕಲಿಸುತ್ತಾನೋ ಅದರಲ್ಲಿ ಅವನಿಗೆ ಆಸಕ್ತಿಯಿರುವಲ್ಲಿ, ಅವನ ಉತ್ಸಾಹ ತೋರಿಬರುತ್ತದೆ ಮತ್ತು ಅದು ಅವನು ಯಾರಿಗೆ ಬೋಧಿಸುತ್ತಾನೋ ಅವರ ಮೇಲೆ ಬಲವಾದ ಪ್ರಭಾವಬೀರುತ್ತದೆ. ಒಂದು ವೇಳೆ ತಾನು ಕಲಿಸುವ ವಿಷಯದಲ್ಲಿ ಬೋಧಕನಿಗೇ ಆಸಕ್ತಿಯಿಲ್ಲದಿರುವಲ್ಲಿ, ವಿದ್ಯಾರ್ಥಿಗಳು ಅದನ್ನು ಅಮೂಲ್ಯವೆಂದೆಣಿಸಬೇಕು ಎಂದು ಅವನು ಹೇಗೆ ತಾನೇ ನಿರೀಕ್ಷಿಸಸಾಧ್ಯ? ದೇವರ ವಾಕ್ಯದ ಬೋಧಕರೋಪಾದಿ ನಿಮ್ಮ ಮಾದರಿಯ ಮೌಲ್ಯವನ್ನು ಎಂದೂ ಕಡಿಮೆ ಅಂದಾಜುಮಾಡದಿರಿ. ಯೇಸು ಹೇಳಿದ್ದು: “ಚೆನ್ನಾಗಿ ತರಬೇತಿ ಹೊಂದಿದ ವಿದ್ಯಾರ್ಥಿ ತನ್ನ ಬೋಧಕನಂತಾಗುತ್ತಾನೆ.”—ಲೂಕ 6:40, ದ ನ್ಯೂ ಬಾರ್ಕ್ಲೆ ವರ್ಷನ್‌ ಇನ್‌ ಮಾಡರ್ನ್‌ ಇಂಗ್ಲಿಷ್‌.

11. ಯೇಸು ತಾನು ಏನನ್ನು ಬೋಧಿಸಿದನೋ ಅದನ್ನು ಪ್ರೀತಿಸಿದ್ದೇಕೆ?

11 ಯೇಸು ಏನನ್ನು ಬೋಧಿಸಿದನೋ ಅದನ್ನು ಪ್ರೀತಿಸಿದನು. ಇತರರೊಂದಿಗೆ ಹಂಚಿಕೊಳ್ಳಲು ಅಮೂಲ್ಯವಾದದ್ದು ಅಂದರೆ, ಸ್ವರ್ಗೀಯ ತಂದೆಯ ಕುರಿತ ಸತ್ಯಗಳು, ‘ದೇವರ ಮಾತುಗಳು’ ಹಾಗೂ “ನಿತ್ಯಜೀವದ ಮಾತುಗಳು” ತನ್ನ ಬಳಿ ಇವೆ ಎಂಬುದು ಅವನಿಗೆ ತಿಳಿದಿತ್ತು. (ಯೋಹಾ. 3:34; 6:68) ಯೇಸು ಕಲಿಸಿದ ಸತ್ಯಗಳು ತೀಕ್ಷ್ಣವಾದ ಬೆಳಕಿನಂತೆ ಕೆಟ್ಟದ್ದನ್ನು ಬಯಲುಮಾಡಿ ಒಳ್ಳೇದನ್ನು ಎತ್ತಿತೋರಿಸಿದವು. ಸುಳ್ಳು ಧಾರ್ಮಿಕ ಮುಖಂಡರ ಮೋಸಕ್ಕೆ ಮತ್ತು ಪಿಶಾಚನ ದಬ್ಬಾಳಿಕೆಗೆ ಒಳಗಾದ ದೀನ ಜನರಿಗೆ ಅವು ನಿರೀಕ್ಷೆ ಮತ್ತು ಸಾಂತ್ವನ ನೀಡಿದವು. (ಅ. ಕಾ. 10:38) ಸತ್ಯದ ಕಡೆಗೆ ಯೇಸುವಿಗಿದ್ದ ಪ್ರೀತಿ ಅವನ ಬೋಧನೆಗಳಲ್ಲಿ ಮಾತ್ರವಲ್ಲ ಅವನೇನು ಮಾಡಿದನೋ ಅದರಲ್ಲೆಲ್ಲ ತೋರಿಬಂತು.

12. ಸುವಾರ್ತೆಯ ಕಡೆಗೆ ಅಪೊಸ್ತಲ ಪೌಲನ ಮನೋಭಾವ ಏನಾಗಿತ್ತು?

12 ಯೇಸುವಿನಂತೆಯೇ ಅವನ ಶಿಷ್ಯರೂ ಯೆಹೋವನ ಮತ್ತು ಕ್ರಿಸ್ತನ ಕುರಿತ ಸತ್ಯವನ್ನು ಪ್ರೀತಿಸಿದರು ಮತ್ತು ಅಮೂಲ್ಯವೆಂದೆಣಿಸಿದರು. ಎಷ್ಟರ ಮಟ್ಟಿಗೆಂದರೆ ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ವಿರೋಧಿಗಳಿಗೂ ಅವರನ್ನು ತಡೆಯಲಾಗಲಿಲ್ಲ. ಪೌಲನು ರೋಮ್‌ನಲ್ಲಿದ್ದ ಜೊತೆ ಕ್ರೈಸ್ತರಿಗೆ ಬರೆದದ್ದು: “ಸುವಾರ್ತೆಯನ್ನು ಪ್ರಕಟಪಡಿಸಬೇಕೆಂಬ ತೀವ್ರಾಭಿಲಾಷೆ ನನಗಿದೆ. ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವುದಿಲ್ಲ; ವಾಸ್ತವದಲ್ಲಿ, ಅದು . . . ನಂಬಿಕೆಯನ್ನಿಡುವ ಪ್ರತಿಯೊಬ್ಬರಿಗೂ ರಕ್ಷಣೆಯನ್ನು ಒದಗಿಸುವ ದೇವರ ಶಕ್ತಿಯಾಗಿದೆ.” (ರೋಮ. 1:15, 16) ಸತ್ಯವನ್ನು ಘೋಷಿಸುವುದು ತನಗಿರುವ ಗೌರವವೆಂದು ಪೌಲನು ಎಣಿಸಿದನು. ಅವನು ಬರೆದದ್ದು: “ನನಗೆ, ಕ್ರಿಸ್ತನ ಅಗಾಧವಾದ ಐಶ್ವರ್ಯದ ಕುರಿತಾದ ಸುವಾರ್ತೆಯನ್ನು ಅನ್ಯಜನಾಂಗಗಳಿಗೆ ಪ್ರಕಟಿಸಲಿಕ್ಕಾಗಿ . . . ಈ ಅಪಾತ್ರ ದಯೆಯು ಕೊಡಲ್ಪಟ್ಟಿತು.” (ಎಫೆ. 3:8, 9) ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತು ಪೌಲನು ಎಷ್ಟು ಉತ್ಸಾಹದಿಂದ ಬೋಧಿಸಿರಬಹುದೆಂಬುದನ್ನು ನಾವು ಊಹಿಸಿಕೊಳ್ಳಬಹುದಲ್ಲವೇ!

13. ಸುವಾರ್ತೆಯನ್ನು ಪ್ರೀತಿಸಲು ನಮಗೆ ಯಾವ ಕಾರಣಗಳಿವೆ?

13 ದೇವರ ವಾಕ್ಯದಲ್ಲಿರುವ ಸುವಾರ್ತೆಯು ನಾವು ಸೃಷ್ಟಿಕರ್ತನನ್ನು ಅರಿತು ಆತನೊಂದಿಗೆ ಪ್ರೀತಿಯ ಸಂಬಂಧವನ್ನು ಹೊಂದುವಂತೆ ಸಾಧ್ಯಮಾಡುತ್ತದೆ. ಆ ಸುವಾರ್ತೆಯು ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಕೊಡುತ್ತದೆ. ನಮ್ಮ ಜೀವನವನ್ನು ಪರಿವರ್ತಿಸುವ, ನಮಗೆ ನಿರೀಕ್ಷೆಯನ್ನು ಕೊಡುವ, ಕಷ್ಟದ ಸಮಯದಲ್ಲಿ ನಮ್ಮನ್ನು ಬಲಪಡಿಸುವ ಶಕ್ತಿಯೂ ಅದಕ್ಕಿದೆ. ಅಲ್ಲದೆ, ಅದು ಎಂದೂ ಕೊನೆಗೊಳ್ಳದ ಅರ್ಥಭರಿತ ಜೀವನದ ಮಾರ್ಗದೆಡೆಗೆ ಕೈತೋರಿಸುತ್ತದೆ. ಸುವಾರ್ತೆಗಿಂತ ಅಮೂಲ್ಯವಾದ ಇಲ್ಲವೇ ಮಹತ್ತ್ವದ ಜ್ಞಾನಭಂಡಾರ ಬೇರೊಂದಿಲ್ಲ. ಇದು ನಮಗೆ ಕೊಡಲಾಗಿರುವ ಬೆಲೆಕಟ್ಟಲಾಗದ ಉಡುಗೊರೆಯಾಗಿದ್ದು ಅತುಲ್ಯ ಆನಂದವನ್ನು ತರುತ್ತದೆ. ಈ ಉಡುಗೊರೆಯನ್ನು ನಾವು ಇತರರೊಂದಿಗೆ ಹಂಚುವಾಗ ಆ ಆನಂದ ದುಪ್ಪಟ್ಟಾಗುತ್ತದೆ.—ಅ. ಕಾ. 20:35.

14. ನಾವೇನನ್ನು ಬೋಧಿಸುತ್ತೇವೋ ಅದರ ಕಡೆಗಿನ ಪ್ರೀತಿಯನ್ನು ಹೇಗೆ ಬಲಪಡಿಸಬಹುದು?

14 ಸುವಾರ್ತೆಯ ಕಡೆಗಿನ ನಿಮ್ಮ ಪ್ರೀತಿಯನ್ನು ಇನ್ನಷ್ಟು ಬಲಪಡಿಸಲು ನೀವೇನು ಮಾಡಬಲ್ಲಿರಿ? ದೇವರ ವಾಕ್ಯವನ್ನು ಓದುತ್ತಿರುವಾಗ ಏನನ್ನು ಓದಿದ್ದೀರೋ ಅದನ್ನು ಮನನ ಮಾಡಲಿಕ್ಕಾಗಿ ಆಗಾಗ ನಿಲ್ಲಿಸಿ. ಉದಾಹರಣೆಗೆ, ಯೇಸುವಿನ ಭೂಶುಶ್ರೂಷೆಯ ಸಮಯದಲ್ಲಿ ನೀವು ಆತನೊಂದಿಗಿದ್ದೀರಿ ಎಂದು ಊಹಿಸಿ ಅಥವಾ ಅಪೊಸ್ತಲ ಪೌಲನೊಂದಿಗೆ ಪ್ರಯಾಣಿಸುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನೀವು ನೂತನ ಲೋಕದಲ್ಲಿ ಇದ್ದೀರೆಂದು ಭಾವಿಸಿ ಅಲ್ಲಿನ ಭಿನ್ನ ಜೀವನರೀತಿಯನ್ನು ಕಣ್ಮುಂದೆ ತಂದುಕೊಳ್ಳಿ. ಅಲ್ಲದೇ, ಸುವಾರ್ತೆಗೆ ವಿಧೇಯರಾಗಿದ್ದರಿಂದ ನೀವು ಈಗಾಗಲೇ ಗಳಿಸಿರುವ ಆಶೀರ್ವಾದಗಳ ಕುರಿತೂ ಯೋಚಿಸಿ. ಸುವಾರ್ತೆಗಾಗಿ ನಿಮ್ಮಲ್ಲಿ ಬಲವಾದ ಪ್ರೀತಿಯಿರುವಲ್ಲಿ, ನೀವು ಯಾರಿಗೆ ಬೋಧಿಸುತ್ತೀರೋ ಅವರದನ್ನು ಗ್ರಹಿಸುವರು. ಆದ್ದರಿಂದ ನಾವೇನನ್ನು ಕಲಿತಿದ್ದೇವೋ ಅದನ್ನು ಪರ್ಯಾಲೋಚಿಸಬೇಕು ಮತ್ತು ನಮ್ಮ ಬೋಧನೆಗೆ ಗಮನಕೊಡಬೇಕು.—1 ತಿಮೊಥೆಯ 4:15, 16 ಓದಿ.

ನಾವು ಜನರನ್ನು ಪ್ರೀತಿಸಬೇಕು

15. ಬೋಧಕನು ತನ್ನ ವಿದ್ಯಾರ್ಥಿಗಳನ್ನು ಏಕೆ ಪ್ರೀತಿಸಬೇಕು?

15 ಉತ್ತಮ ಬೋಧಕನು ಬೋಧಿಸುವಾಗ ತನ್ನ ವಿದ್ಯಾರ್ಥಿಗಳು ಹಾಯಾಗಿರುವಂತೆ ನೋಡಿಕೊಳ್ಳುತ್ತಾನೆ. ಆಗ ಅವರು ಕಲಿಯಲು ಮತ್ತು ಮುಕ್ತವಾಗಿ ಭಾಗವಹಿಸಲು ಹಾತೊರೆಯುತ್ತಾರೆ. ಒಬ್ಬ ಪ್ರೀತಿಪರ ಬೋಧಕನು ಜ್ಞಾನವನ್ನು ಹಂಚುವುದರ ಕಾರಣ ವಿದ್ಯಾರ್ಥಿಗಳ ಬಗ್ಗೆ ಅವನಿಗಿರುವ ಯಥಾರ್ಥ ಚಿಂತೆಯೇ ಆಗಿದೆ. ಅವರ ಅಗತ್ಯಗಳು ಹಾಗೂ ಬುದ್ಧಿಮಟ್ಟಕ್ಕೆ ಅನುಗುಣವಾಗಿ ತನ್ನ ಬೋಧಿಸುವಿಕೆಯನ್ನು ಹೊಂದಿಸಿಕೊಳ್ಳುತ್ತಾನೆ. ತನ್ನ ವಿದ್ಯಾರ್ಥಿಗಳ ಸಾಮರ್ಥ್ಯಗಳು ಹಾಗೂ ಸನ್ನಿವೇಶಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳುತ್ತಾನೆ. ಬೋಧಕರ ಇಂಥ ಪ್ರೀತಿಯನ್ನು ವಿದ್ಯಾರ್ಥಿಗಳು ಗ್ರಹಿಸುತ್ತಾರೆ ಮತ್ತು ಆಗ ಬೋಧಿಸುವುದು ಹಾಗೂ ಕಲಿಯುವುದು ಆನಂದದಾಯಕವಾಗಿರುತ್ತದೆ.

16. ಯೇಸು ಯಾವ ವಿಧಗಳಲ್ಲಿ ಜನರಿಗೆ ಪ್ರೀತಿ ತೋರಿಸಿದನು?

16 ಯೇಸು ಅದೇ ತರಹದ ಪ್ರೀತಿಯನ್ನು ತೋರಿಸಿದನು. ಇತರರ ರಕ್ಷಣೆಗೆಂದು ಆತನು ತನ್ನ ಪರಿಪೂರ್ಣ ಮಾನವ ಜೀವವನ್ನು ಬಲಿಯರ್ಪಿಸಿದ್ದು ಅವನ ಪ್ರೀತಿಯ ಅತ್ಯುತ್ಕೃಷ್ಟ ಅಭಿವ್ಯಕ್ತಿಯಾಗಿದೆ. (ಯೋಹಾ. 15:13) ಯೇಸು, ತನ್ನ ಶುಶ್ರೂಷೆಯ ಸಮಯದಲ್ಲಿ ಜನರ ಶಾರೀರಿಕ ಹಾಗೂ ಅಧ್ಯಾತ್ಮಿಕ ಹಿತಕ್ಷೇಮಕ್ಕೋಸ್ಕರ ಅವಿರತವಾಗಿ ದುಡಿದನು. ಜನರು ತನ್ನ ಬಳಿ ಬರಬೇಕೆಂದು ಕಾಯದೇ, ಸುವಾರ್ತೆಯನ್ನು ಅವರಿಗೆ ತಿಳಿಸಲಿಕ್ಕಾಗಿ ನೂರಾರು ಮೈಲಿ ದೂರ ನಡೆದುಕೊಂಡೇ ಹೋದನು. (ಮತ್ತಾ. 4:23-25; ಲೂಕ 8:1) ಅವನು ತಾಳ್ಮೆ ಹಾಗೂ ಸಹಾನುಭೂತಿಯುಳ್ಳವನಾಗಿದ್ದನು. ಶಿಷ್ಯರಿಗೆ ತಿದ್ದುಪಾಟು ನೀಡಬೇಕಾದಾಗ ಅದನ್ನು ಪ್ರೀತಿಯಿಂದ ನೀಡಿದನು. (ಮಾರ್ಕ 9:33-37) ಅವರು ಕೂಡ ಸುವಾರ್ತೆಯನ್ನು ಪರಿಣಾಮಕಾರಿಯಾಗಿ ಸಾರಬಲ್ಲರು ಎಂಬ ಭರವಸೆಯನ್ನು ವ್ಯಕ್ತಪಡಿಸುವ ಮೂಲಕ ಯೇಸು ಅವರನ್ನು ಉತ್ತೇಜಿಸಿದನು. ಯೇಸುವಿನಷ್ಟು ಪ್ರೀತಿಪರ ಬೋಧಕನಾಗಿರಲು ಬೇರೆ ಯಾರಿಗೂ ಸಾಧ್ಯವಿಲ್ಲ. ಅವನು ತೋರಿಸಿದ ಪ್ರೀತಿ ಅವನ ಶಿಷ್ಯರು ಕೂಡ ಅವನನ್ನು ಪ್ರೀತಿಸುವಂತೆ ಮತ್ತು ಅವನ ಆಜ್ಞೆಗಳನ್ನು ಪಾಲಿಸುವಂತೆ ಮಾಡಿತು.—ಯೋಹಾನ 14:15 ಓದಿ.

17. ಯೇಸುವಿನ ಶಿಷ್ಯರು ಹೇಗೆ ಇತರರಿಗೆ ಪ್ರೀತಿ ತೋರಿಸಿದರು?

17 ಯೇಸುವಿನಂತೆಯೇ ಅವನ ಶಿಷ್ಯರು ಕೂಡ ತಾವು ಸಾರುತ್ತಿದ್ದ ಜನರ ಕಡೆಗೆ ಆಳವಾದ ಪ್ರೀತಿ ಮತ್ತು ಅಕ್ಕರೆ ತೋರಿಸಿದರು. ಹಿಂಸೆಯನ್ನು ತಾಳಿಕೊಂಡು, ಜೀವವನ್ನು ಅಪಾಯಕ್ಕೊಡ್ಡಿ ಇತರರಿಗೆ ಸುವಾರ್ತೆ ಸಾರಿದರು ಮತ್ತು ಆ ಕೆಲಸದಲ್ಲಿ ಯಶಸ್ಸನ್ನು ಗಿಟ್ಟಿಸಿಕೊಂಡರು. ಸುವಾರ್ತೆಯನ್ನು ಸ್ವೀಕರಿಸಿದವರ ಕಡೆಗೆ ಅವರಿಗೆಷ್ಟು ಅಕ್ಕರೆಯಿತ್ತು! ಅಪೊಸ್ತಲ ಪೌಲನ ಈ ಮುಂದಿನ ಮಾತುಗಳು ನಿಜಕ್ಕೂ ಮನಸ್ಪರ್ಶಿಸುತ್ತವೆ: “ಒಬ್ಬ ತಾಯಿಯು ತನ್ನ ಮಕ್ಕಳಿಗೆ ಹಾಲುಣಿಸಿ ಪೋಷಿಸುವಂತೆಯೇ ನಾವು ನಿಮ್ಮ ಮಧ್ಯೆ ವಾತ್ಸಲ್ಯದಿಂದ ನಡೆದುಕೊಂಡೆವು. ನೀವು ನಮಗೆ ಅತಿ ಪ್ರಿಯರಾದ ಕಾರಣ ನಿಮ್ಮ ವಿಷಯದಲ್ಲಿ ಕೋಮಲ ಮಮತೆಯುಳ್ಳವರಾಗಿದ್ದು ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ ನಮ್ಮ ಸ್ವಂತ ಪ್ರಾಣಗಳನ್ನೇ ಕೊಡುವುದಕ್ಕೂ ಸಂತೋಷಿಸಿದೆವು.”—1 ಥೆಸ. 2:7, 8.

18, 19. (ಎ) ಸಾರುವ ಕೆಲಸಕ್ಕಾಗಿ ನಾವೇಕೆ ಇಷ್ಟಪೂರ್ವಕವಾಗಿ ತ್ಯಾಗಗಳನ್ನು ಮಾಡುತ್ತೇವೆ? (ಬಿ) ನಾವು ತೋರಿಸುವ ಪ್ರೀತಿ ಇತರರ ಗಮನಕ್ಕೆ ಬರುತ್ತದೆ ಎಂಬುದಕ್ಕೆ ಒಂದು ಅನುಭವ ತಿಳಿಸಿ.

18 ತದ್ರೀತಿಯಲ್ಲಿ ಇಂದು ಯೆಹೋವನ ಸಾಕ್ಷಿಗಳು ದೇವರನ್ನು ಅರಿಯಲು ಮತ್ತು ಆರಾಧಿಸಲು ಹಾತೊರೆಯುವ ಜನರನ್ನು ಭೂಮಿಯಾದ್ಯಂತ ಹುಡುಕಾಡುತ್ತಿದ್ದಾರೆ. ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಕಳೆದ 17 ವರ್ಷಗಳಲ್ಲಿ ಅನುಕ್ರಮವಾಗಿ ಪ್ರತಿ ವರ್ಷ ನೂರು ಕೋಟಿಗಿಂತಲೂ ಹೆಚ್ಚು ತಾಸುಗಳನ್ನು ಕಳೆದಿದ್ದೇವೆ ಮತ್ತು ಅದನ್ನು ಈಗಲೂ ಮುಂದುವರಿಸುತ್ತಿದ್ದೇವೆ. ಸಾರುವ ಕೆಲಸಕ್ಕಾಗಿ ನಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ತ್ಯಾಗಮಾಡಬೇಕಾಗಿ ಬಂದರೂ ಅದನ್ನು ಇಷ್ಟಪೂರ್ವಕವಾಗಿ ಮಾಡುತ್ತೇವೆ. ನಿತ್ಯಜೀವಕ್ಕೆ ನಡೆಸುವ ಜ್ಞಾನ ಜನರಿಗೆ ಸಿಗಬೇಕೆಂದು ನಮ್ಮ ಪ್ರೀತಿಪರ ಸ್ವರ್ಗೀಯ ತಂದೆ ಬಯಸುತ್ತಾನೆ ಎಂಬುದು ಯೇಸುವಿನಂತೆಯೇ ನಮಗೂ ತಿಳಿದಿದೆ. (ಯೋಹಾ. 17:3; 1 ತಿಮೊ. 2:3, 4) ನಮ್ಮಂತೆಯೇ ಯೆಹೋವನನ್ನು ಅರಿಯಲು ಮತ್ತು ಪ್ರೀತಿಸಲು ಸಹೃದಯದ ಜನರಿಗೆ ಸಹಾಯ ಮಾಡುವಂತೆ ಪ್ರೀತಿ ಪ್ರಚೋದಿಸುತ್ತದೆ.

19 ನಾವು ತೋರಿಸುವ ಪ್ರೀತಿ ಇತರರ ಗಮನಕ್ಕೆ ಬರುತ್ತದೆ. ಉದಾಹರಣೆಗೆ, ಯುನೈಟೆಡ್‌ ಸ್ಟೇಟ್ಸ್‌ನಲ್ಲಿನ ಒಬ್ಬಾಕೆ ಪಯನೀಯರ್‌ ಸಹೋದರಿ, ಮರಣದಲ್ಲಿ ತಮ್ಮ ಪ್ರಿಯ ಜನರನ್ನು ಕಳೆದುಕೊಂಡವರಿಗೆ ಪತ್ರ ಬರೆಯುತ್ತಾಳೆ. ಇಂಥ ಪತ್ರವೊಂದಕ್ಕೆ ಉತ್ತರಕೊಡುತ್ತಾ ಒಬ್ಬನು ಬರೆದದ್ದು: “ಒಬ್ಬಳು, ತನಗೆ ಸ್ವಲ್ಪವೂ ಪರಿಚಯವಿಲ್ಲದ ಒಬ್ಬ ವ್ಯಕ್ತಿಗೆ ಅವನ ಕಷ್ಟದ ಸಮಯದಲ್ಲಿ ಸಹಾಯ ಮಾಡಲಿಕ್ಕಾಗಿ ಪತ್ರವನ್ನು ಬರೆಯುವಷ್ಟು ಶ್ರಮವಹಿಸಿರುವುದನ್ನು ನೋಡಿ ನನಗೆ ಒಮ್ಮೆಗೆ ಆಶ್ಚರ್ಯವಾಯಿತು. ನಿಮಗೆ ಜೊತೆ ಮಾನವರ ಕಡೆಗೆ ಮತ್ತು ಜನರನ್ನು ಜೀವದ ಮಾರ್ಗದೆಡೆಗೆ ನಡೆಸುವ ದೇವರ ಕಡೆಗೆ ಪ್ರೀತಿಯಿದೆ ಎಂಬುದನ್ನಂತೂ ನಾನು ಖಂಡಿತ ಹೇಳಬಲ್ಲೆ.”

20. ಪ್ರೀತಿಯಿಂದ ಬೋಧಿಸುವುದು ಎಷ್ಟು ಪ್ರಾಮುಖ್ಯ?

20 ಪ್ರೀತಿ ಹಾಗೂ ಕೌಶಲವು ಬೆರೆತ ಕೆಲಸದ ಫಲಿತಾಂಶ ಅತ್ಯುತ್ತಮವಾಗಿರುತ್ತದೆ ಎಂಬ ಮಾತಿದೆ. ನಮ್ಮ ಬೋಧನಾ ವಿಧಾನದ ಮೂಲಕ, ಯೆಹೋವನನ್ನು ಅರಿತಿರುವ ಮನಸ್ಸನ್ನು ಹಾಗೂ ಆತನನ್ನು ಪ್ರೀತಿಸುವ ಹೃದಯವನ್ನು ಬೆಳೆಸಿಕೊಳ್ಳುವಂತೆ ನಮ್ಮ ವಿದ್ಯಾರ್ಥಿಗಳಿಗೆ ಸಹಾಯಮಾಡುತ್ತೇವೆ. ಹೌದು, ನಿಜವಾಗಿ ಪರಿಣಾಮಕಾರಿಯಾದ ಬೋಧಕರಾಗಿರಲು, ನಮ್ಮಲ್ಲಿ ದೇವರ ಕಡೆಗೆ ಪ್ರೀತಿ, ಸತ್ಯಕ್ಕಾಗಿ ಪ್ರೀತಿ ಮತ್ತು ಜನರ ಕಡೆಗೆ ಪ್ರೀತಿ ಇರಬೇಕು. ಇಂಥ ಪ್ರೀತಿಯನ್ನು ಬೆಳೆಸಿಕೊಂಡು ಅದನ್ನು ನಮ್ಮ ಶುಶ್ರೂಷೆಯಲ್ಲಿ ಪ್ರದರ್ಶಿಸುವಾಗ, ಕೊಡುವುದರಿಂದ ಸಿಗುವ ಆನಂದ ಮಾತ್ರವಲ್ಲ ಯೇಸುವನ್ನು ಅನುಕರಿಸುತ್ತಿದ್ದೇವೆ ಮತ್ತು ಯೆಹೋವನನ್ನು ಸಂತೋಷಪಡಿಸುತ್ತಿದ್ದೇವೆ ಎಂಬ ತೃಪ್ತಿಯೂ ನಮ್ಮದಾಗುವುದು.

ನಿಮ್ಮ ಉತ್ತರವೇನು?

• ಇತರರಿಗೆ ಸುವಾರ್ತೆಯನ್ನು ಬೋಧಿಸುವಾಗ ಈ ಕೆಳಗಿನವು ಪ್ರಾಮುಖ್ಯವೇಕೆ?

ದೇವರ ಕಡೆಗೆ ಪ್ರೀತಿ

ಏನನ್ನು ಬೋಧಿಸುತ್ತೇವೋ ಅದಕ್ಕಾಗಿ ಪ್ರೀತಿ

ಯಾರಿಗೆ ಬೋಧಿಸುತ್ತೇವೋ ಅವರ ಕಡೆಗೆ ಪ್ರೀತಿ

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಯೇಸುವಿನ ಬೋಧನಾ ವಿಧಾನವು ಶಾಸ್ತ್ರಿಗಳ ಹಾಗೂ ಫರಿಸಾಯರ ವಿಧಾನಕ್ಕಿಂತ ಭಿನ್ನವಾಗಿರಲು ಕಾರಣವೇನು?

[ಪುಟ 18ರಲ್ಲಿರುವ ಚಿತ್ರ]

ಉತ್ತಮವಾಗಿ ಬೋಧಿಸಲು ಜ್ಞಾನ, ಕೌಶಲ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಪ್ರೀತಿ ಅಗತ್ಯ