ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಶುಭವಾರ್ತೆಯ ದಿವಸದಲ್ಲಿ’ ಅಪಕರ್ಷಣೆಗಳನ್ನು ದೂರವಿಡಿ

‘ಶುಭವಾರ್ತೆಯ ದಿವಸದಲ್ಲಿ’ ಅಪಕರ್ಷಣೆಗಳನ್ನು ದೂರವಿಡಿ

‘ಶುಭವಾರ್ತೆಯ ದಿವಸದಲ್ಲಿ’ ಅಪಕರ್ಷಣೆಗಳನ್ನು ದೂರವಿಡಿ

ನಾಲ್ಕು ಮಂದಿ ಕುಷ್ಠ ರೋಗಿಗಳು ತಮ್ಮ ಮುಂದಿದ್ದ ಆಯ್ಕೆಗಳ ಬಗ್ಗೆ ಯೋಚಿಸುತ್ತಿದ್ದರು. ಏಕೆಂದರೆ ಊರುಬಾಗಲಿನ ಬಳಿ ಅವರಿಗೆ ಯಾರೂ ಭಿಕ್ಷೆ ಕೊಟ್ಟಿರಲಿಲ್ಲ. ಸಮಾರ್ಯವನ್ನು ಮುತ್ತಿಗೆಹಾಕಿದ್ದ ಅರಾಮ್ಯರು ಆಹಾರದ ಸರಬರಾಯಿಯನ್ನು ತಡೆದದ್ದರಿಂದ ಜನರು ಉಪವಾಸಬಿದ್ದಿದ್ದರು. ಆದ್ದರಿಂದ ಊರೊಳಗೆ ಹೋದರೂ ಏನೂ ಪ್ರಯೋಜನವಿರಲಿಲ್ಲ; ಆಹಾರದ ಬೆಲೆ ಗಗನಕ್ಕೇರಿತ್ತು. ಅಲ್ಲದೆ, ನರಭಕ್ಷಣೆಯ ಒಂದು ಪ್ರಕರಣವೂ ವರದಿಯಾಗಿತ್ತು.—2 ಅರ. 6:24-29.

ಹೀಗಿರುವುದರಿಂದ ಆ ಕುಷ್ಠರೋಗಿಗಳು, ‘ನಾವು ಆರಾಮ್ಯರ ಪಾಳೆಯಕ್ಕೆ ಏಕೆ ಹೋಗಬಾರದು? ಆದದ್ದು ಆಗಲಿ, ಹೋಗಿಯೇ ಬಿಡೋಣ’ ಎಂದೆಣಿಸಿದರು. ಆ ಸಾಯಂಕಾಲ ಕತ್ತಲಾದ ಮೇಲೆ ಅವರು ಹೊರಟರು. ಆ ಪಾಳೆಯಕ್ಕೆ ತಲಪಿದಾಗ ಎಲ್ಲೆಡೆಯೂ ಮೌನ ಮನೆಮಾಡಿಕೊಂಡಿತ್ತು. ಕಾವಲುಗಾರರು ಯಾರೂ ಕಣ್ಣಿಗೆ ಬೀಳಲಿಲ್ಲ. ಪಾಳೆಯದೊಳಗೆ ಕುದುರೆಗಳು ಹಾಗೂ ಕತ್ತೆಗಳನ್ನು ಕಟ್ಟಿಹಾಕಲಾಗಿತ್ತು, ಆದರೆ ಸೈನಿಕರ ಸುಳಿವೇ ಇರಲಿಲ್ಲ. ಆ ನಾಲ್ವರೂ ಒಂದು ಗುಡಾರದೊಳಗೆ ಇಣುಕಿದರು. ಅಲ್ಲಿ ಯಾರೂ ಇರಲಿಲ್ಲವಾದರೂ, ಆಹಾರಪಾನೀಯಗಳು ಯಥೇಚ್ಛವಾಗಿದ್ದವು. ಅವರು ಹೊಟ್ಟೆತುಂಬ ತಿಂದುಕುಡಿದರು. ಅಲ್ಲಿ ಚಿನ್ನ, ಬೆಳ್ಳಿ, ಉಡುಪುಗಳು ಹಾಗೂ ಇನ್ನಿತರ ಸಾಮಾನುಗಳಿರುವುದನ್ನೂ ನೋಡಿದರು. ಅವುಗಳನ್ನು ತೆಗೆದುಕೊಂಡು ಹೋಗಿ ಒಂದು ಕಡೆ ಬಚ್ಚಿಟ್ಟು, ಇನ್ನಷ್ಟನ್ನು ಕೊಂಡೊಯ್ಯಲು ಪುನಃ ಬಂದರು. ಆ ಇಡೀ ಪಾಳೆಯದಲ್ಲಿ ಯಾವ ನರಪ್ರಾಣಿಯೂ ಇರಲಿಲ್ಲ. ನಡೆದ ಸಂಗತಿಯೇನೆಂದರೆ, ಈ ಅರಾಮ್ಯರಿಗೆ ಒಂದು ಮಹಾಸೈನ್ಯ ಘೋಷವು ಕೇಳಿಸುವಂತೆ ಯೆಹೋವನು ಚಮತ್ಕಾರ ಮಾಡಿದ್ದನು. ಯಾರೋ ತಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದಾರೆಂದು ನೆನಸಿ ಅರಾಮ್ಯರು ಅಲ್ಲಿಂದ ಓಡಿಹೋಗಿದ್ದರು. ಹೀಗಿರುವುದರಿಂದ ಅಲ್ಲಿದ್ದದ್ದೆಲ್ಲವನ್ನೂ ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದಿತ್ತು, ಕೇಳುವವರೇ ಇರಲಿಲ್ಲ!

ಆ ಕುಷ್ಠರೋಗಿಗಳು ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ ಬಚ್ಚಿಟ್ಟು ವಾಪಸ್ಸು ಬರುತ್ತಿದ್ದರು. ಆದರೆ, ತಮ್ಮ ನೆರೆಯ ಸಮಾರ್ಯದವರು ಹೊಟ್ಟೆಗಿಲ್ಲದೆ ಇರುವುದು ನೆನಪಾದಾಗ ಅವರ ಮನಸ್ಸಾಕ್ಷಿ ಚುಚ್ಚಲಾರಂಭಿಸಿತು. ಅವರು ಒಬ್ಬರಿಗೊಬ್ಬರು, “ಇದು ಶುಭವಾರ್ತೆಯ ದಿವಸವಾಗಿದೆ; ನಾವು ಇದನ್ನು ಪ್ರಕಟಿಸದಿರುವದು ಒಳ್ಳೇದಲ್ಲ” ಎಂದು ಹೇಳಿಕೊಂಡರು. ಆದುದರಿಂದ ಅವರು ಅವಸರವಸರದಿಂದ ಸಮಾರ್ಯಕ್ಕೆ ಹೋಗಿ, ತಾವು ಕಂಡುಹಿಡಿದ ಸಂಗತಿಗಳ ಕುರಿತ ಶುಭವಾರ್ತೆಯನ್ನು ತಿಳಿಸಿದರು.—2 ಅರ. 7:1-11.

ಇಂದು ನಾವು ಸಹ “ಶುಭವಾರ್ತೆಯ ದಿವಸ” ಎಂದು ಕರೆಯಲಾಗುವ ಸಮಯದಲ್ಲಿ ಜೀವಿಸುತ್ತಿದ್ದೇವೆ. ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆ’ಯಲ್ಲಿರುವ ಒಂದು ಗಮನಾರ್ಹ ವೈಶಿಷ್ಟ್ಯಕ್ಕೆ ಬೊಟ್ಟುಮಾಡುತ್ತಾ ಯೇಸು ಅಂದದ್ದು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” (ಮತ್ತಾ. 24:3, 14) ಈ ಸಂಗತಿಯು ನಮ್ಮನ್ನು ಹೇಗೆ ಪ್ರಭಾವಿಸಬೇಕು?

ವೈಯಕ್ತಿಕ ಚಿಂತೆಗಳು ನಮ್ಮನ್ನು ಕುಗ್ಗಿಸಬಲ್ಲವು

ಆ ಕುಷ್ಠರೋಗಿಗಳು ಕಂಡುಹಿಡಿದ ಸಂಗತಿಗಳಿಂದಾಗಿ ಎಷ್ಟು ಅತ್ಯಾನಂದಪಟ್ಟರೆಂದರೆ ಸ್ವಲ್ಪ ಸಮಯ ಸಮಾರ್ಯವನ್ನೇ ಮರೆತುಬಿಟ್ಟರು. ಅವರ ಮನಸ್ಸೆಲ್ಲ ತಾವೇನು ತೆಗೆದುಕೊಂಡು ಹೋಗಬಹುದು ಎಂಬುದರ ಮೇಲೆಯೇ ಕೇಂದ್ರೀಕೃತವಾಗಿತ್ತು. ನಮಗೂ ಹೀಗೆ ಸಂಭವಿಸಬಹುದೋ? ‘ಆಹಾರದ ಕೊರತೆಯು’ ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸಮಯವನ್ನು ಗುರುತಿಸುವಂಥ ಸಂಘಟಿತ ಸೂಚನೆಯ ಒಂದು ವೈಶಿಷ್ಟ್ಯವಾಗಿದೆ. (ಲೂಕ 21:7, 11) ಯೇಸು ತನ್ನ ಶಿಷ್ಯರನ್ನು ಎಚ್ಚರಿಸಿದ್ದು: “ನಿಮ್ಮ ಹೃದಯಗಳು ಎಂದಿಗೂ ಅತಿಯಾದ ಭೋಜನ, ವಿಪರೀತವಾದ ಕುಡಿತ ಮತ್ತು ಜೀವನದ ಚಿಂತೆಗಳ ಭಾರದಿಂದ ಕುಗ್ಗಿಹೋಗದಂತೆ . . . ನಿಮಗೆ ಗಮನಕೊಟ್ಟುಕೊಳ್ಳಿರಿ.” (ಲೂಕ 21:34, 35) ಹೀಗಿರುವುದರಿಂದ ದೈನಂದಿನ ಜೀವನದ ಕುರಿತ ಚಿಂತೆಗಳು ಕ್ರೈಸ್ತರಾದ ನಮ್ಮನ್ನು, ನಾವೀಗ ‘ಶುಭವಾರ್ತೆಯ ದಿವಸದಲ್ಲಿ’ ಜೀವಿಸುತ್ತಿದ್ದೇವೆಂಬ ವಾಸ್ತವಾಂಶವನ್ನು ಮರೆತುಬಿಡುವಂತೆ ಮಾಡಲು ಅನುಮತಿಸಬಾರದು.

ಬ್ಲೆಸ್ಸಿಂಗ್‌ ಎಂಬ ಹೆಸರಿನ ಕ್ರೈಸ್ತಳೊಬ್ಬಳು ವೈಯಕ್ತಿಕ ಚಿಂತೆಗಳು ತನ್ನನ್ನು ಕುಗ್ಗಿಸುವಂತೆ ಬಿಡಲಿಲ್ಲ. ಆಕೆ ಒಬ್ಬ ಪಯನೀಯರಳಾಗಿ ಸೇವೆಸಲ್ಲಿಸುತ್ತಿದ್ದಳು. ವಿದ್ಯಾಭ್ಯಾಸ ಮುಗಿಸಿ, ಸಮಯಾನಂತರ ಬೆತೆಲಿನ ಸಹೋದರನೊಬ್ಬನನ್ನು ಮದುವೆಯಾಗಿ, ಬೆನಿನ್‌ ದೇಶದ ಬೆತೆಲ್‌ ಕುಟುಂಬದ ಸದಸ್ಯಳಾದಳು. ಅವಳನ್ನುವುದು: “ನಾನಿಲ್ಲಿ ಹೌಸ್‌ಕೀಪರ್‌ ಆಗಿ ಕೆಲಸಮಾಡುತ್ತಾ ನನ್ನ ನೇಮಕದಲ್ಲಿ ಆನಂದಿಸುತ್ತಿದ್ದೇನೆ.” ಈ ತನಕ ಬ್ಲೆಸ್ಸಿಂಗ್‌ ಪೂರ್ಣ ಸಮಯದ ಸೇವೆಯಲ್ಲಿ 12 ವರ್ಷ ಕಳೆದಿರುವುದಕ್ಕೆ ಮತ್ತು ನಾವೀಗ ಜೀವಿಸುತ್ತಿರುವ ‘ಶುಭವಾರ್ತೆಯ ದಿವಸದ’ ಮೇಲೆ ತನ್ನ ಗಮನ ಕೇಂದ್ರೀಕರಿಸಿರುವುದಕ್ಕೆ ಸಂತೋಷಪಡುತ್ತಾಳೆ.

ಸಮಯ ಕಬಳಿಸುವ ಅಪಕರ್ಷಣೆಗಳ ಕುರಿತು ಎಚ್ಚರವಾಗಿರಿ

ಯೇಸು ತನ್ನ 70 ಮಂದಿ ಶಿಷ್ಯರನ್ನು ಸಾರಲು ಕಳುಹಿಸಿದಾಗ ಹೀಗಂದನು: “ಕೊಯ್ಲು ನಿಶ್ಚಯವಾಗಿಯೂ ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ.” (ಲೂಕ 10:2) ಕೊಯ್ಲಿನ ಸಮಯದಲ್ಲಿ ತಡಮಾಡುವಲ್ಲಿ ಫಸಲು ಹಾಳಾಗಿಹೋಗುವಂತೆಯೇ ಸಾರುವ ಕೆಲಸವನ್ನು ನಿರ್ಲಕ್ಷಿಸುವಲ್ಲಿ ಜನರ ಜೀವಗಳು ನಷ್ಟವಾಗಸಾಧ್ಯವಿದೆ. ಹೀಗಿರುವುದರಿಂದ ಯೇಸು ಕೂಡಿಸಿ ಹೇಳಿದ್ದು: “ದಾರಿಯಲ್ಲಿ ಯಾರಿಗೂ ವಂದನೆಯಲ್ಲಿ ಅಪ್ಪಿಕೊಳ್ಳಬೇಡಿ.” (ಲೂಕ 10:4) “ವಂದನೆ”ಗಾಗಿರುವ ಮೂಲಭಾಷಾ ಪದದ ಅರ್ಥ, ಬರೀ ‘ನಮಸ್ಕಾರ’ ಹೇಳುವುದಷ್ಟೇ ಅಲ್ಲ. ಅದರಲ್ಲಿ, ನಾವು ಒಬ್ಬ ಸ್ನೇಹಿತನನ್ನು ಭೇಟಿಯಾಗುವಾಗ ಮಾಡುವ ಆಲಿಂಗನಗಳು ಮತ್ತು ಉದ್ದುದ್ದ ಸಂಭಾಷಣೆಗಳು ಸೇರಿರಬಹುದು. ಹೀಗಿರುವುದರಿಂದಲೇ ಯೇಸು ತನ್ನ ಹಿಂಬಾಲಕರಿಗೆ ಅನವಶ್ಯಕ ಅಪಕರ್ಷಣೆಗಳನ್ನು ದೂರವಿಟ್ಟು, ಸಮಯವನ್ನು ಸದುಪಯೋಗಿಸುವಂತೆ ಹೇಳಿದನು. ಏಕೆಂದರೆ ಅವರು ಸಾರಬೇಕಾಗಿದ್ದ ಸಂದೇಶವು ತುರ್ತಿನದ್ದಾಗಿತ್ತು.

ಅಪಕರ್ಷಣೆಗಳು ಎಷ್ಟು ಸಮಯವನ್ನು ಕಬಳಿಸಬಲ್ಲವೆಂಬುದರ ಕುರಿತು ಯೋಚಿಸಿ. ಟೆಲಿವಿಷನ್‌, ಅನೇಕಾನೇಕ ವರ್ಷಗಳಿಂದ ಸಮಯ ಹಾಳುಮಾಡುವ ಅತ್ಯಂತ ಪ್ರಧಾನ ಅಪಕರ್ಷಣೆ ಆಗಿ ಮೆರೆದಿದೆ. ಆದರೆ ಮೊಬೈಲ್‌ಗಳು ಹಾಗೂ ವೈಯಕ್ತಿಕ ಕಂಪ್ಯೂಟರ್‌ಗಳ ಕುರಿತೇನು? ಬ್ರಿಟನ್‌ನಲ್ಲಿ 1,000 ಮಂದಿ ವಯಸ್ಕರನ್ನು ಸಮೀಕ್ಷೆಮಾಡಿದಾಗ ತಿಳಿದುಬಂದ ಸಂಗತಿಯೇನೆಂದರೆ, “ಸರಾಸರಿಯಾಗಿ ಒಬ್ಬ ಬ್ರಿಟಿಷ್‌ ವ್ಯಕ್ತಿ ಒಂದು ದಿನಕ್ಕೆ ಲ್ಯಾಂಡ್‌ಲೈನ್‌ ಫೋನಿನಲ್ಲಿ ಮಾತಾಡಲು 88 ನಿಮಿಷ, ಮೊಬೈಲ್‌ನಲ್ಲಿ ಮಾತಾಡಲು 62 ನಿಮಿಷ, ಇ-ಮೇಲ್‌ಗಾಗಿ 53 ನಿಮಿಷ ಮತ್ತು ಎಸ್‌.ಎಮ್‌.ಎಸ್‌.ಗಳಿಗಾಗಿ 22 ನಿಮಿಷ ಕಳೆಯುತ್ತಾನೆ.” ಇವೆಲ್ಲವನ್ನು ಕೂಡಿಸುವಲ್ಲಿ, ಅದು ಒಬ್ಬ ಆಕ್ಸಿಲಿಯರಿ ಪಯನೀಯರ್‌ ಒಂದು ದಿನಕ್ಕೆ ಶುಶ್ರೂಷೆಯಲ್ಲಿ ಕಳೆಯುವ ಸಮಯಕ್ಕಿಂತ ಎರಡುಪಟ್ಟು ಹೆಚ್ಚಿನ ಸಮಯವಾಗಿಬಿಡುತ್ತದೆ! ಈ ಸಂಬಂಧದಲ್ಲಿ ನಿಮ್ಮ ರೂಢಿಗಳೇನು?

ಅರ್ನ್‌ಸ್ಟ್‌ ಮತ್ತು ಹಿಲ್ಡೆಗಾರ್ಟ್‌ ಸೆಲಿಗರ್‌ ಎಂಬ ದಂಪತಿ ತಮ್ಮ ಸಮಯವನ್ನು ಜಾಗರೂಕತೆಯಿಂದ ಬಳಸುತ್ತಿದ್ದರು. ನಾಸಿ ಸೆರೆಶಿಬಿರಗಳಲ್ಲಿ ಮತ್ತು ಕಮ್ಯೂನಿಸ್ಟ್‌ ಸೆರೆಮನೆಗಳಲ್ಲಿ ಅವರಿಬ್ಬರೂ ಕೆಳದಿರುವ ಸಮಯವನ್ನು ಕೂಡಿಸಿದರೆ 40ಕ್ಕಿಂತ ಹೆಚ್ಚು ವರ್ಷಗಳಾಗುತ್ತವೆ. ಬಿಡುಗಡೆಯಾದ ಬಳಿಕ ಅವರು ತಮ್ಮ ಭೂಜೀವಿತದ ಅಂತ್ಯದ ವರೆಗೂ ಪಯನೀಯರರಾಗಿ ಸೇವೆಸಲ್ಲಿಸಿದರು.

ಅನೇಕರು ಈ ದಂಪತಿಯೊಂದಿಗೆ ಪತ್ರವ್ಯವಹಾರ ಮಾಡಲಿಚ್ಛಿಸಿದರು. ಈ ದಂಪತಿಯು ತಮ್ಮ ಹೆಚ್ಚಿನ ಸಮಯವನ್ನು ಇಂಥ ಪತ್ರಗಳನ್ನು ಓದುತ್ತಾ ಬರೆಯುತ್ತಾ ಕಳೆಯಬಹುದಿತ್ತು. ಆದರೆ ಅವರು ತಮ್ಮ ಬದುಕಿನಲ್ಲಿ ಆಧ್ಯಾತ್ಮಿಕ ವಿಷಯಗಳಿಗೆ ಮೊದಲ ಆದ್ಯತೆ ಕೊಟ್ಟರು.

ನಮ್ಮ ಪ್ರಿಯ ಜನರ ಪತ್ರಗಳು ಇಲ್ಲವೇ ಫೋನ್‌ ಕರೆಗಳು ಬಂದಾಗ ನಮಗೆಲ್ಲರಿಗೂ ಸಂತೋಷವಾಗುತ್ತದೆ ನಿಜ. ಈ ರೀತಿಯ ಸಂವಾದದಲ್ಲಿ ತಪ್ಪೇನಿಲ್ಲ. ನಮ್ಮ ನಿತ್ಯದ ದಿನಚರಿಗಿಂತ ಭಿನ್ನವಾದ, ಹಿತಕರ ಚಟುವಟಿಕೆಗಳಲ್ಲಿ ತೊಡಗುವುದು ಉಪಯುಕ್ತವೇ ಸರಿ. ಹಾಗಿದ್ದರೂ, ಸುವಾರ್ತೆ ಸಾರಲಿಕ್ಕಾಗಿರುವ ಈ ದಿವಸದಲ್ಲಿ ಸಮಯ ಕಬಳಿಸುವ ಅಪಕರ್ಷಣೆಗಳಿಗೆ ಕಡಿವಾಣಹಾಕಲು ಎಚ್ಚರದಿಂದಿರುವುದು ವಿವೇಕಯುತ.

ಸುವಾರ್ತೆಯನ್ನು ಕೂಲಂಕಷವಾಗಿ ಸಾರಿರಿ

‘ಶುಭವಾರ್ತೆಯ ದಿವಸದಲ್ಲಿ’ ಜೀವಿಸುವುದು ಎಂಥ ಆಶೀರ್ವಾದ! ಆ ನಾಲ್ಕು ಮಂದಿ ಕುಷ್ಠರೋಗಿಗಳು ಆರಂಭದಲ್ಲಿ ಅಪಕರ್ಷಿತರಾದಂತೆ ನಾವು ಅಪಕರ್ಷಿತರಾಗದಿರೋಣ. ಆದರೆ ನೆನಪಿಡಿ, ಅವರು ತದನಂತರ, “ನಾವು ಇದನ್ನು ಪ್ರಕಟಿಸದಿರುವದು ಒಳ್ಳೇದಲ್ಲ” ಎಂಬ ತೀರ್ಮಾನಕ್ಕೆ ಬಂದರು. ಹಾಗೆಯೇ ನಾವು, ವೈಯಕ್ತಿಕ ಕೆಲಸಕಾರ್ಯಗಳು ಇಲ್ಲವೇ ಸಮಯ ಕಬಳಿಸುವ ಅಪಕರ್ಷಣೆಗಳು ಶುಶ್ರೂಷೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವುದರಿಂದ ನಮ್ಮನ್ನು ತಡೆಯುವಂತೆ ಬಿಡುವುದು ಒಳ್ಳೇದಲ್ಲ.

ಈ ಸಂಬಂಧದಲ್ಲಿ ಅನುಸರಿಸಲಿಕ್ಕಾಗಿ ನಮಗೊಂದು ಉತ್ಕೃಷ್ಟ ಮಾದರಿಯಿದೆ. ಅಪೊಸ್ತಲ ಪೌಲನು ತನ್ನ ಶುಶ್ರೂಷೆಯ ಆರಂಭದ 20 ವರ್ಷಗಳನ್ನು ಮರುಕಳಿಸುತ್ತಾ ಬರೆದದ್ದು: “ನಾನು . . . ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಕೂಲಂಕಷವಾಗಿ ಸಾರಿಹೇಳಿದ್ದೇನೆ.” (ರೋಮ. 15:19) ಯಾವುದೂ ತನ್ನ ಹುರುಪನ್ನು ಕುಂದಿಸುವಂತೆ ಪೌಲನು ಬಿಡಲಿಲ್ಲ. ನಾವು ಈ ‘ಶುಭವಾರ್ತೆಯ ದಿವಸದಲ್ಲಿ’ ರಾಜ್ಯದ ಸಂದೇಶವನ್ನು ಘೋಷಿಸುವಾಗ ಅವನಷ್ಟೇ ಹುರುಪುಳ್ಳವರಾಗಿರೋಣ.

[ಪುಟ 28ರಲ್ಲಿರುವ ಚಿತ್ರ]

ವೈಯಕ್ತಿಕ ಚಿಂತೆಗಳು ತನ್ನ ಪೂರ್ಣ ಸಮಯದ ಸೇವೆಗೆ ಅಡ್ಡಬರುವಂತೆ ಬ್ಲೆಸ್ಸಿಂಗ್‌ ಬಿಡಲಿಲ್ಲ

[ಪುಟ 29ರಲ್ಲಿರುವ ಚಿತ್ರ]

ಸೆಲಿಗರ್‌ ದಂಪತಿ ತಮ್ಮ ಸಮಯವನ್ನು ಜಾಗರೂಕತೆಯಿಂದ ಬಳಸಿದರು