ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಹಿಂದೊಮ್ಮೆ ಸೇವೆಮಾಡಿದ್ದೀರೋ? ಅದನ್ನು ಪುನಃ ಮಾಡಬಲ್ಲಿರೋ?

ನೀವು ಹಿಂದೊಮ್ಮೆ ಸೇವೆಮಾಡಿದ್ದೀರೋ? ಅದನ್ನು ಪುನಃ ಮಾಡಬಲ್ಲಿರೋ?

ನೀವು ಹಿಂದೊಮ್ಮೆ ಸೇವೆಮಾಡಿದ್ದೀರೋ? ಅದನ್ನು ಪುನಃ ಮಾಡಬಲ್ಲಿರೋ?

ನೀವು ಹಿಂದೊಮ್ಮೆ ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಸೇವೆಸಲ್ಲಿಸಿದ್ದೀರೋ? ಬಹುಶಃ ನೀವೊಬ್ಬ ಶುಶ್ರೂಷಾ ಸೇವಕರೋ ಹಿರಿಯರೋ ಪೂರ್ಣ ಸಮಯದ ಸೇವಕರೋ ಆಗಿದ್ದಿರಬಹುದು. ನಿಮ್ಮ ನೇಮಕಗಳಲ್ಲಿ ನೀವು ಖಂಡಿತ ಸಂತೋಷ ಮತ್ತು ತೃಪ್ತಿ ಪಡೆದುಕೊಂಡಿದ್ದಿರಬಹುದು. ಆದರೆ ಕಾರಣಾಂತರಗಳಿಂದ ನೀವು ಅವುಗಳನ್ನು ಬಿಟ್ಟುಕೊಟ್ಟಿರಬಹುದು.

ಬಹುಶಃ ಕುಟುಂಬದ ಸದಸ್ಯರನ್ನು ನೋಡಿಕೊಳ್ಳಲಿಕ್ಕಾಗಿ ನೀವು ಹಾಗೆ ಮಾಡಿರಬಹುದು. ಇಳಿವಯಸ್ಸು ಅಥವಾ ಅನಾರೋಗ್ಯವೂ ಕಾರಣವಾಗಿದ್ದಿರಬಹುದು. ನೀವು ತೆಗೆದುಕೊಂಡಿರುವ ಈ ನಿರ್ಣಯಗಳು ಯೆಹೋವನ ಸೇವೆಯಲ್ಲಿ ನೀವು ಸೋತಿದ್ದೀರೆಂಬುದನ್ನು ಸೂಚಿಸುವುದಿಲ್ಲ. (1 ತಿಮೊ. 5:8) ಪ್ರಥಮ ಶತಮಾನದಲ್ಲಿ, ಮಿಷನೆರಿಯಾಗಿ ಸೇವೆಸಲ್ಲಿಸಿದ ಫಿಲಿಪ್ಪನು ತದನಂತರ ತನ್ನ ಕುಟುಂಬವನ್ನು ನೋಡಿಕೊಳ್ಳಲಿಕ್ಕಾಗಿ ಕೈಸರೈಯದಲ್ಲಿ ನೆಲೆಸಿದನು. (ಅ. ಕಾ. 21:8, 9) ಪುರಾತನ ಇಸ್ರಾಯೇಲಿನ ರಾಜ ದಾವೀದನು ವೃದ್ಧನಾದಾಗ ತನ್ನ ಮಗನಾದ ಸೊಲೊಮೋನನನ್ನು ಉತ್ತರಾಧಿಕಾರಿಯಾಗಿ ನೇಮಿಸಿದನು. (1 ಅರ. 1:1, 32-35) ಆದಾಗ್ಯೂ, ಫಿಲಿಪ್ಪ ಮತ್ತು ದಾವೀದರಿಬ್ಬರನ್ನೂ ಯೆಹೋವನು ಪ್ರೀತಿಸಿದನು ಮತ್ತು ಗಣ್ಯಮಾಡಿದನು. ಅಷ್ಟೇ ಅಲ್ಲ ಇಂದಿನ ವರೆಗೆ ಜನರೂ ಅವರನ್ನು ಗೌರವಿಸುತ್ತಾರೆ.

ಇನ್ನೊಂದು ಕಡೆಯಲ್ಲಿ, ನಿಮಗಿದ್ದ ಸೇವಾ ಸುಯೋಗವನ್ನು ತೆಗೆದುಹಾಕಲಾಗಿರಬಹುದು. ಇದಕ್ಕೆ, ಅವಿವೇಕದ ನಡತೆ ಅಥವಾ ಕೌಟುಂಬಿಕ ಸಮಸ್ಯೆಗಳು ಕಾರಣವಾಗಿದ್ದಿರಬಹುದು. (1 ತಿಮೊ. 3:2, 4, 10, 12) ಈ ಕ್ರಮವನ್ನು ಕೈಗೊಳ್ಳುವ ಅವಶ್ಯಕತೆಯಿರಲಿಲ್ಲ ಎಂದು ನೀವು ಆಗ ಅಸಮ್ಮತಿ ಸೂಚಿಸಿದ್ದಿರಬಹುದು ಮತ್ತು ಅಸಮಾಧಾನದ ಭಾವನೆ ಬಹುಶಃ ಈಗಲೂ ನಿಮ್ಮಲ್ಲಿರಬಹುದು.

ಪುನಃ ಸೇವೆಮಾಡಲು ನೀವು ಎಟುಕಿಸಿಕೊಳ್ಳಬಲ್ಲಿರಿ

ಒಮ್ಮೆ ಕಳೆದುಕೊಂಡ ಸೇವಾ ಸುಯೋಗವನ್ನು ಪುನಃ ಎಂದೂ ಪಡೆಯಲಾಗದೋ? ಹೆಚ್ಚಿನ ಸಂದರ್ಭಗಳಲ್ಲಿ ಹಾಗಿರುವುದಿಲ್ಲ. ಪುನಃ ಸೇವೆಮಾಡಬೇಕಾದರೆ ಅದನ್ನು ಎಟುಕಿಸಿಕೊಳ್ಳುವ ಅಪೇಕ್ಷೆ ನಿಮಗಿರಬೇಕು. (1 ತಿಮೊ. 3:1) ಆ ಅಪೇಕ್ಷೆ ಯಾಕೆ ಇರಬೇಕು? ನೀವು ಯಾವ ಕಾರಣಕ್ಕೆ ನಿಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಿರೋ ಅದಕ್ಕಾಗಿಯೇ, ಅಂದರೆ ಯೆಹೋವನ ಕಡೆಗಿನ ಮತ್ತು ಆತನ ಸೇವೆ ಮಾಡುವವರ ಕಡೆಗಿನ ಪ್ರೀತಿಯಿಂದಾಗಿಯೇ. ಈ ಪ್ರೀತಿಯನ್ನು ನೀವು ಪುನಃ ಸೇವೆಮಾಡುವ ಮೂಲಕ ತೋರಿಸಲು ಬಯಸುತ್ತಿರುವಲ್ಲಿ, ಸುಯೋಗವನ್ನು ಕಳೆದುಕೊಳ್ಳುವ ಮುಂಚೆ ಹಾಗೂ ತದನಂತರ ನೀವು ಪಡೆದಿರುವ ಅನುಭವವನ್ನು ಉಪಯೋಗಿಸಲು ಯೆಹೋವನಿಗೆ ಸಾಧ್ಯವಾಗುವುದು.

ಇಸ್ರಾಯೇಲ್‌ ಜನಾಂಗವು ನ್ಯಾಯವಾಗಿಯೇ ಅದರ ಸೇವಾ ಸುಯೋಗಗಳನ್ನು ಕಳೆದುಕೊಂಡಿತ್ತಾದರೂ ಯೆಹೋವನು ಆ ಜನಾಂಗಕ್ಕೆ ಕೊಟ್ಟ ಆಶ್ವಾಸನೆಯನ್ನು ನೆನಪಿಗೆ ತನ್ನಿ. ಆತನ ವಾಕ್ಯ ಹೇಳುವುದು: “ಯೆಹೋವನಾದ ನಾನು ಮಾರ್ಪಟ್ಟಿಲ್ಲ; ಆದದರಿಂದ ಯಾಕೋಬ ಸಂತತಿಯವರೇ, ನೀವು ನಾಶವಾಗಲಿಲ್ಲ.” (ಮಲಾ. 3:6) ಇಸ್ರಾಯೇಲ್ಯರನ್ನು ಯೆಹೋವನು ಪ್ರೀತಿಸುತ್ತಿದ್ದ ಕಾರಣ ಅವರನ್ನು ಪುನಃ ಉಪಯೋಗಿಸಲು ಬಯಸಿದನು. ಅದೇ ರೀತಿ ಭವಿಷ್ಯದಲ್ಲಿ ನಿಮ್ಮನ್ನು ಉಪಯೋಗಿಸುವ ಆಸಕ್ತಿ ಯೆಹೋವನಿಗಿದೆ. ನಿಮ್ಮ ಸದ್ಯದ ಸನ್ನಿವೇಶದಲ್ಲಿ ಏನು ಮಾಡಬಲ್ಲಿರಿ? ಸಭೆಯಲ್ಲಿ ನಿಮಗೆ ಈಗ ಹೆಚ್ಚಿನ ಜವಾಬ್ದಾರಿಗಳಿಲ್ಲದಿರುವುದರಿಂದ ನಿಮ್ಮ ಆಧ್ಯಾತ್ಮಿಕತೆಯನ್ನು ಬಲಗೊಳಿಸುವುದರತ್ತ ಹೆಚ್ಚು ಗಮನಹರಿಸಿ. ಏಕೆಂದರೆ, ದೇವಪ್ರಭುತ್ವಾತ್ಮಕ ಅಭಿರುಚಿಗಳ ಅಭಿವೃದ್ಧಿಗಾಗಿ ಸೇವೆಮಾಡುವುದು ನಮ್ಮ ಸಹಜ ಸಾಮರ್ಥ್ಯಕ್ಕಿಂತ ಆಧ್ಯಾತ್ಮಿಕ ಆರೋಗ್ಯದ ಮೇಲೆ ಹೆಚ್ಚು ಹೊಂದಿಕೊಂಡಿದೆ.

ನಂಬಿಕೆಯಲ್ಲಿ ‘ಬಲಿಷ್ಠರಾಗಿ ಬೆಳೆಯಲು’ ನೀವು ‘ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಬೇಕು.’ (1 ಕೊರಿಂ. 16:13; ಕೀರ್ತ. 105:4) ಇದನ್ನು ಮಾಡುವ ಒಂದು ವಿಧ, ಹೃತ್ಪೂರ್ವಕವಾಗಿ ಪ್ರಾರ್ಥಿಸುವುದಾಗಿದೆ. ನಿಮ್ಮ ಸನ್ನಿವೇಶವನ್ನು ಯೆಹೋವನಿಗೆ ವಿವರಿಸುವಾಗ ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಆತನ ಆತ್ಮಕ್ಕಾಗಿ ಕೇಳಿಕೊಳ್ಳಿ. ಹೀಗೆ ಮಾಡುವುದರಿಂದ ನೀವು ಯೆಹೋವನಿಗೆ ಹೆಚ್ಚು ಆಪ್ತರಾಗುವಿರಿ ಮತ್ತು ಇದು ನಿಮ್ಮನ್ನು ಬಲಪಡಿಸುವುದು. (ಕೀರ್ತ. 62:8; ಫಿಲಿ. 4:6, 13) ನಿಮ್ಮ ಆಧ್ಯಾತ್ಮಿಕತೆಯನ್ನು ಬಲಪಡಿಸುವ ಇನ್ನೊಂದು ವಿಧವು ವೈಯಕ್ತಿಕ ಬೈಬಲ್‌ ಅಧ್ಯಯನದ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ. ಸದ್ಯಕ್ಕೆ ನಿಮಗಿರುವ ಜವಾಬ್ದಾರಿಗಳು ಕಡಿಮೆಯಾಗಿರುವುದರಿಂದ, ನೀವು ವೈಯಕ್ತಿಕ ಮತ್ತು ಕುಟುಂಬ ಅಧ್ಯಯನವನ್ನು ಹೆಚ್ಚಾಗಿ ಮಾಡಲು ಶಕ್ತರಾಗಬಹುದು. ಹೀಗೆ ಮಾಡುವ ಮೂಲಕ ಬಹುಶಃ ಹಿಂದೆ ನಿಮಗೆ ಪಾಲಿಸಲು ಕಷ್ಟವಾಗುತ್ತಿದ್ದ ನಿಯತಕ್ರಮವನ್ನು ಪುನಃ ಆರಂಭಿಸಲು ಶಕ್ತರಾಗುವಿರಿ.

ಖಂಡಿತ ನೀವು ಈಗಲೂ ಯೆಹೋವನನ್ನು ಆತನ ಸಾಕ್ಷಿಗಳಲ್ಲೊಬ್ಬರಾಗಿ ಪ್ರತಿನಿಧಿಸುತ್ತೀರಿ. (ಯೆಶಾ. 43:10-12) “ದೇವರ ಜೊತೆಕೆಲಸಗಾರ”ರಲ್ಲಿ ಒಬ್ಬರಾಗಿರುವುದು ತಾನೇ ನಮಗಿರಬಹುದಾದ ಅತ್ಯುತ್ಕೃಷ್ಟ ಸುಯೋಗವಾಗಿದೆ. (1 ಕೊರಿಂ. 3:9) ಕ್ಷೇತ್ರ ಸೇವೆಯನ್ನು ಹೆಚ್ಚಿಸುವುದು ನಿಮ್ಮ ಮತ್ತು ಶುಶ್ರೂಷೆಯಲ್ಲಿ ನಿಮ್ಮ ಜೊತೆಗಾರರಾಗಿರುವವರ ಆಧ್ಯಾತ್ಮಿಕತೆಯನ್ನು ಬಲಗೊಳಿಸುವ ಅತ್ಯುತ್ತಮ ಮಾರ್ಗವಾಗಿದೆ.

ನಿಮ್ಮ ಭಾವನೆಗಳನ್ನು ಸಮರ್ಥವಾಗಿ ನಿಭಾಯಿಸುವುದು

ಸೇವಾ ಸುಯೋಗವನ್ನು ಕಳೆದುಕೊಂಡಾಗ ನಿಮ್ಮಲ್ಲಿ ಅವಮಾನ ಅಥವಾ ವಿಷಾದದ ಭಾವನೆ ಹುಟ್ಟಿರಬಹುದು. ನೀವು ಮಾಡಿದ್ದು ಸರಿ ಎಂದು ಸಮರ್ಥಿಸಿಕೊಳ್ಳುವ ಪ್ರವೃತ್ತಿ ನಿಮಗಿರಬಹುದು. ಆದರೆ ಜವಾಬ್ದಾರಿಯುತ ಸಹೋದರರು ನಿಮ್ಮ ಮಾತುಗಳನ್ನು ಕೇಳಿಸಿಕೊಂಡ ಬಳಿಕವೂ ನಿಮಗಿದ್ದ ನಿರ್ದಿಷ್ಟ ಸುಯೋಗವನ್ನು ತೆಗೆದುಹಾಕಿರುವಲ್ಲಿ ಆಗೇನು? ನಕಾರಾತ್ಮಕ ಭಾವನೆಗಳು ನಿಮ್ಮಲ್ಲಿ ಸುಳಿದಾಡುತ್ತಾ ಆ ಸುಯೋಗಕ್ಕಾಗಿ ಪುನಃ ಎಟುಕಿಸಿಕೊಳ್ಳದಂತೆ ನಿಮ್ಮನ್ನು ತಡೆಯಬಹುದು ಅಥವಾ ಆದ ಅನುಭವದಿಂದ ಪಾಠ ಕಲಿಯುವುದನ್ನು ಕಷ್ಟಕರವನ್ನಾಗಿ ಮಾಡಬಹುದು. ನಕಾರಾತ್ಮಕ ಭಾವನೆಗಳನ್ನು ಸಮರ್ಥವಾಗಿ ನಿಭಾಯಿಸಲು ಯೋಬ, ಮನಸ್ಸೆ ಮತ್ತು ಯೋಸೇಫನ ಅನುಭವಗಳು ಹೇಗೆ ಸಹಾಯ ಮಾಡುತ್ತವೆಂಬುದನ್ನು ನಾವೀಗ ಪರಿಗಣಿಸೋಣ.

ಯೋಬನು ಒಂದು ಸಮಯದಲ್ಲಿ ಯೆಹೋವನೆದುರು ಇತರರನ್ನು ಪ್ರತಿನಿಧಿಸುತ್ತಿದ್ದನು ಹಾಗೂ ಪುರುಷಪ್ರಧಾನ ಸಮಾಜದಲ್ಲಿ ಒಬ್ಬ ಹಿರಿಯನಾಗಿ, ನ್ಯಾಯಾಧಿಪತಿಯಾಗಿ ಸೇವೆಸಲ್ಲಿಸುತ್ತಿದ್ದನು. (ಯೋಬ 1:5; 29:7-17, 21-25) ಆದರೆ ತನ್ನ ಜೀವನದ ಉತ್ತುಂಗದಲ್ಲಿದ್ದಾಗಲೇ ಯೋಬನು ತನ್ನೆಲ್ಲಾ ಸಂಪತ್ತು, ಮಕ್ಕಳು ಹಾಗೂ ಆರೋಗ್ಯವನ್ನು ಕಳೆದುಕೊಂಡನು. ಇದರ ಜೊತೆಗೆ ಜನರ ಮುಂದೆ ತನಗಿದ್ದ ಒಳ್ಳೇ ಹೆಸರನ್ನು ಸಹ ಕಳೆದುಕೊಂಡನು. “ನನಗಿಂತ ಚಿಕ್ಕವಯಸ್ಸಿನವರು ನನ್ನನ್ನು ಪರಿಹಾಸ್ಯಮಾಡುತ್ತಾರೆ” ಎಂದು ಯೋಬನು ಹೇಳಿದನು.—ಯೋಬ 30:1.

ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಯೋಬನಿಗನಿಸಿತು. ಆದ್ದರಿಂದ ಅವನು ದೇವರ ಮುಂದೆ ತನ್ನನ್ನು ಸಮರ್ಥಿಸಲು ಇಚ್ಛಿಸಿದನು. (ಯೋಬ 13:15) ಆದರೂ ಯೋಬನು ಯೆಹೋವನಿಗಾಗಿ ಕಾಯಲು ಸಿದ್ಧನಿದ್ದನು ಮತ್ತು ಹೀಗೆ ಮಾಡಿದ್ದಕ್ಕಾಗಿ ಅವನಿಗೆ ಆಶೀರ್ವಾದ ಸಿಕ್ಕಿತು. ತನಗೆ ತಿದ್ದುಪಾಟಿನ ಆವಶ್ಯಕತೆಯಿದೆ, ವಿಶೇಷವಾಗಿ ತನಗೆದುರಾದ ಪರೀಕ್ಷೆಗಳಿಗೆ ತಾನು ಹೇಗೆ ಪ್ರತಿಕ್ರಿಯೆ ತೋರಿಸಿದೆನೋ ಆ ಕಾರಣದಿಂದ ಅದು ಅವಶ್ಯವೆಂದು ಯೋಬನು ಕಲಿತನು. (ಯೋಬ 40:6-8; 42:3, 6) ಯೋಬನು ದೀನಭಾವ ತೋರಿಸಿದ್ದರಿಂದ, ದೇವರಿಂದ ಹೇರಳ ಆಶೀರ್ವಾದ ಪಡೆದನು.—ಯೋಬ 42:10-13.

ಒಂದುವೇಳೆ ನೀವು ಮಾಡಿರುವ ಯಾವುದೋ ತಪ್ಪಿನಿಂದಾಗಿ ಸುಯೋಗಗಳನ್ನು ಕಳೆದುಕೊಂಡಿರುವಲ್ಲಿ, ಯೆಹೋವನು ಮತ್ತು ಕ್ರೈಸ್ತ ಸಹೋದರರು ನಿಮ್ಮನ್ನು ಎಂದಾದರೂ ನಿಜವಾಗಿ ಕ್ಷಮಿಸಿ ಆ ತಪ್ಪನ್ನು ಮರೆತುಬಿಡುವರೋ ಎಂಬ ಚಿಂತೆ ನಿಮಗಿರಬಹುದು. ಯೆಹೂದದ ರಾಜನಾದ ಮನಸ್ಸೆಯ ಉದಾಹರಣೆಯನ್ನು ಪರಿಗಣಿಸಿ. ಅವನು “ಯೆಹೋವನಿಗೆ ಕೋಪವನ್ನು ಎಬ್ಬಿಸಲು ಆತನ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿದನು.” (2 ಅರ. 21:6, NIBV) ಆದರೆ ಸಾಯುವಾಗ ಮನಸ್ಸೆ ಒಬ್ಬ ನಂಬಿಗಸ್ತ ರಾಜನಾಗಿದ್ದನೆಂದು ಬೈಬಲ್‌ ಹೇಳುತ್ತದೆ. ಇದು ಹೇಗೆ?

ಕಟ್ಟಕಡೆಗೆ ಮನಸ್ಸೆ ತನಗೆ ಸಿಕ್ಕಿದ ಶಿಸ್ತಿಗೆ ಸರಿಯಾಗಿ ಸ್ಪಂದಿಸಿದನು. ಅವನು ಎಚ್ಚರಿಕೆಗಳನ್ನು ತಿರಸ್ಕರಿಸಿದಾಗ ಯೆಹೋವನು ಅವನ ವಿರುದ್ಧ ಅಶ್ಶೂರ್ಯರನ್ನು ಕಳುಹಿಸಿದನು. ಅವರು ಅವನಿಗೆ ಬೇಡಿಗಳನ್ನು ಹಾಕಿ ದೂರದ ಬಾಬೆಲಿಗೆ ಕರೆದೊಯ್ದರು. ಅಲ್ಲಿ ಮನಸ್ಸೆ ‘ತನ್ನ ದೇವರಾದ ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು. ಅವನು ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನನ್ನು ಪ್ರಾರ್ಥಿಸಿದನು.’ ಮನಸ್ಸೆ ತನ್ನ ಕ್ರಿಯೆಗಳಲ್ಲಿ ಹೃತ್ಪೂರ್ವಕ ಪಶ್ಚಾತ್ತಾಪ ತೋರಿಸಿದನು ಮತ್ತು ಅವನಿಗೆ ಕ್ಷಮೆ ಸಿಕ್ಕಿತು.—2 ಪೂರ್ವ. 33:12, 13.

ಕಳಕೊಂಡ ಸುಯೋಗಗಳೆಲ್ಲವನ್ನೂ ಒಮ್ಮೆಗೇ ಪುನಃ ಕೊಡಲಾಗುವುದಿಲ್ಲ. ಆದರೆ ಸಮಯಸಂದಂತೆ ಕೆಲವೊಂದು ಚಿಕ್ಕಪುಟ್ಟ ಜವಾಬ್ದಾರಿಗಳು ನಿಮಗೆ ಕೊಡಲ್ಪಡಬಹುದು. ಅವುಗಳನ್ನು ಸ್ವೀಕರಿಸಿ ನಿಮ್ಮಿಂದಾದಷ್ಟು ಉತ್ತಮವಾಗಿ ನಿರ್ವಹಿಸುವಲ್ಲಿ ನಿಮಗೆ ಹೆಚ್ಚಿನ ನೇಮಕಗಳು ಸಿಗಬಹುದು. ಇದರರ್ಥ ನೀವೆಣಿಸಿದಷ್ಟು ಸುಲಭವಾಗಿ ನಿಮ್ಮ ಸನ್ನಿವೇಶ ಬದಲಾಗುತ್ತದೆಂದಲ್ಲ. ಕೆಲವೊಮ್ಮೆ ನಿಮಗೆ ನಿರಾಶೆಯಾಗಬಹುದು. ಹಾಗಿದ್ದರೂ ನಿಮಗೆ ಸಿದ್ಧಮನಸ್ಸಿರುವಲ್ಲಿ ಮತ್ತು ನೀವು ಪಟ್ಟುಹಿಡಿಯುವಲ್ಲಿ ಉತ್ತಮ ಫಲಿತಾಂಶಗಳು ಸಿಗುವವು.

ಉದಾಹರಣೆಗಾಗಿ, ಯಾಕೋಬನ ಮಗನಾದ ಯೋಸೇಫನನ್ನು ತೆಗೆದುಕೊಳ್ಳಿ. ಅವನು 17 ವರ್ಷದವನಾಗಿದ್ದಾಗ ಅವನ ಅಣ್ಣಂದಿರು ಅವನನ್ನು ಅನ್ಯಾಯವಾಗಿ ದಾಸತ್ವಕ್ಕೆ ಮಾರಿದರು. (ಆದಿ. 37:2, 26-28) ಇಂಥ ವರ್ತನೆಯನ್ನು ಯೋಸೇಫನು ಅವರಿಂದ ನಿರೀಕ್ಷಿಸಿರಲೇ ಇಲ್ಲ. ಹಾಗಿದ್ದರೂ ಅವನು ದಾಸನಾಗಿ ಕೆಲಸಮಾಡಲು ಸಿದ್ಧನಿದ್ದನು ಮತ್ತು ಅವನ ಮೇಲೆ ಯೆಹೋವನ ಆಶೀರ್ವಾದ ಇದ್ದದ್ದರಿಂದ ‘ಆ ದಣಿಯು ಅವನಿಗೆ ತನ್ನ ಮನೆಯಲ್ಲಿ ಪಾರುಪತ್ಯವನ್ನು ಕೊಟ್ಟನು.’ (ಆದಿ. 39:4) ಕಾಲಾನಂತರ ಯೋಸೇಫನನ್ನು ಸೆರೆಮನೆಗೆ ದೊಬ್ಬಲಾಯಿತು. ಆದರೆ ಯೋಸೇಫನು ನಂಬಿಗಸ್ತನಾಗಿ ಉಳಿದನು ಮತ್ತು ಯೆಹೋವನು ಅವನ ಸಂಗಡ ಇದ್ದನು. ಹೀಗಿರುವುದರಿಂದ ಸೆರೆಮನೆಗೆ ಸಂಬಂಧಪಟ್ಟ ಎಲ್ಲ ವಿಚಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವನಿಗೆ ವಹಿಸಿಕೊಡಲಾಯಿತು.—ಆದಿ. 39:21-23.

ಈ ಎಲ್ಲ ಸಂಗತಿಗಳು ಒಂದು ಉದ್ದೇಶವನ್ನು ಪೂರೈಸಲಿವೆ ಎಂಬುದು ಯೋಸೇಫನಿಗೆ ಗೊತ್ತಿರಲಿಲ್ಲ. ಆದರೆ ತನ್ನಿಂದ ಏನನ್ನು ಮಾಡಲು ಸಾಧ್ಯವೋ ಅದನ್ನು ಮಾಡುತ್ತಾ ಮುಂದುವರಿದನು. ಹೀಗೆ ವಾಗ್ದತ್ತ ಸಂತಾನವು ಯಾವ ವಂಶದ ಮೂಲಕ ಬರಲಿತ್ತೋ ಆ ವಂಶವನ್ನು ಸಂರಕ್ಷಿಸಲಿಕ್ಕಾಗಿ ಯೆಹೋವನು ಅವನನ್ನು ಬಳಸಲು ಸಾಧ್ಯವಾಯಿತು. (ಆದಿ. 3:15; 45:5-8) ಯೋಸೇಫನಿಗಿದ್ದಂಥ ಪ್ರಧಾನ ಪಾತ್ರವನ್ನು ನಮ್ಮಲ್ಲಿ ಯಾರೂ ನಿರೀಕ್ಷಿಸಸಾಧ್ಯವಿಲ್ಲವಾದರೂ ಯೆಹೋವನ ಸೇವಕರು ಪಡೆದುಕೊಳ್ಳುವ ಸುಯೋಗಗಳಲ್ಲಿ ಆತನ ಹಸ್ತವಿರುತ್ತದೆ ಎಂಬುದನ್ನು ಈ ದೇವಪ್ರೇರಿತ ವೃತ್ತಾಂತ ತೋರಿಸುತ್ತದೆ. ಯೋಸೇಫನನ್ನು ಅನುಕರಿಸುವ ಮೂಲಕ ಸುಯೋಗಕ್ಕಾಗಿ ಬಾಗಿಲನ್ನು ಸದಾ ತೆರೆದಿಡಿ.

ಕಠಿನ ಅನುಭವಗಳಿಂದ ಕಲಿತುಕೊಳ್ಳುವುದು

ಯೋಬ, ಮನಸ್ಸೆ ಮತ್ತು ಯೋಸೇಫರಿಗೆ ನಿರಾಶಾದಾಯಕ ಅನುಭವಗಳಾದವು. ಈ ಮೂವರೂ ಯೆಹೋವನು ಅನುಮತಿಸಿದ್ದನ್ನು ಸ್ವೀಕರಿಸಿದರು ಮತ್ತು ಅಮೂಲ್ಯ ಪಾಠಗಳನ್ನು ಕಲಿತರು. ನೀವೇನನ್ನು ಕಲಿಯಬಹುದು?

ಯೆಹೋವನು ನಿಮಗೇನು ಕಲಿಸಲು ಪ್ರಯತ್ನಿಸುತ್ತಿದ್ದಾನೋ ಅದನ್ನು ಗ್ರಹಿಸಿಕೊಳ್ಳಿ. ಯೋಬನು ನಿರುತ್ಸಾಹದಿಂದ ಹೆಣಗಾಡುತ್ತಿದ್ದಾಗ ಸ್ವತಃ ತನ್ನ ಬಗ್ಗೆಯೇ ಯೋಚಿಸುತ್ತಾ ಮುಖ್ಯವಾದ ವಿವಾದಾಂಶಗಳನ್ನು ಮರೆತನು. ಆದರೆ ಯೆಹೋವನು ಪ್ರೀತಿಯಿಂದ ತಿದ್ದಿದಾಗ ಅವನು ಸಮತೋಲನವನ್ನು ಮರಳಿಪಡೆದುಕೊಂಡು ಹೀಗೆ ಒಪ್ಪಿಕೊಂಡನು: ‘ನಾನು ತಿಳಿಯದ ಸಂಗತಿಗಳನ್ನು ನನಗೆ ಗೊತ್ತಿಲ್ಲದೆ ಮಾತಾಡಿದ್ದೇನೆ.’ (ಯೋಬ 42:3) ಸುಯೋಗಗಳನ್ನು ಕಳೆದುಕೊಂಡದ್ದರಿಂದ ನೀವು ಮನನೊಂದವರಾಗಿರುವಲ್ಲಿ ‘ನಿಮ್ಮ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಬೇಡಿ. ಅದಕ್ಕೆ ಬದಲಾಗಿ ಸ್ವಸ್ಥಬುದ್ಧಿಯುಳ್ಳವರಾಗಿ ಭಾವಿಸಿಕೊಳ್ಳಿರಿ.’ (ರೋಮ. 12:3) ಯೆಹೋವನು ನಿಮ್ಮನ್ನು ಸರಿಪಡಿಸಲು ಪ್ರಯತ್ನಿಸುತ್ತಿರಬಹುದು ಮತ್ತು ಅದು ಈಗ ನಿಮಗೆ ಪೂರ್ಣವಾಗಿ ಅರ್ಥವಾಗಲಿಕ್ಕಿಲ್ಲ.

ಶಿಸ್ತನ್ನು ಸ್ವೀಕರಿಸಿ. ತನಗೆ ಇಷ್ಟೊಂದು ಕಠಿನ ಶಿಕ್ಷೆ ಸಿಗಬಾರದಿತ್ತು ಎಂಬುದಾಗಿ ಮನಸ್ಸೆ ಮೊದಲು ಎಣಿಸಿರಬಹುದು. ಆದರೂ ಅವನು ಆ ಶಿಸ್ತನ್ನು ಸ್ವೀಕರಿಸಿದನು, ಪಶ್ಚಾತ್ತಾಪಪಟ್ಟನು ಮತ್ತು ತನ್ನ ತಪ್ಪು ನಡತೆಯನ್ನು ಬಿಟ್ಟುಬಿಟ್ಟನು. ಕೊಡಲಾಗಿರುವ ಶಿಸ್ತಿನ ಬಗ್ಗೆ ನಿಮ್ಮ ಅನಿಸಿಕೆಗಳು ಏನೇ ಇರಲಿ, ‘ಯೆಹೋವನ ದೃಷ್ಟಿಯಲ್ಲಿ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಆಗ ಆತನು ನಿಮ್ಮನ್ನು ಉನ್ನತಕ್ಕೇರಿಸುವನು.’—1 ಪೇತ್ರ 5:6; ಯಾಕೋ. 4:10.

ತಾಳ್ಮೆಯಿಂದಿರಿ ಮತ್ತು ಸಿದ್ಧಮನಸ್ಸುಳ್ಳವರಾಗಿರಿ. ಯೋಸೇಫನಿಗಾದ ಅನುಭವಗಳಿಂದಾಗಿ ಅವನು ಸುಲಭವಾಗಿ ತನ್ನ ಮನಸ್ಸಿನಲ್ಲಿ ದ್ವೇಷ ಮತ್ತು ಸೇಡಿನ ಭಾವನೆಗಳನ್ನು ಪೋಷಿಸಸಾಧ್ಯವಿತ್ತು. ಅದರ ಬದಲು ಅವನು ಒಳನೋಟ ಮತ್ತು ಕರುಣೆಯನ್ನು ಬೆಳೆಸಿಕೊಂಡನು. (ಆದಿ. 50:15-21) ನಿಮಗೆ ನಿರಾಶೆಯಾಗಿರುವಲ್ಲಿ ತಾಳ್ಮೆಯಿಂದಿರಿ. ಯೆಹೋವನಿಂದ ತರಬೇತಿ ಹೊಂದಲು ಸಿದ್ಧಮನಸ್ಸನ್ನು ತೋರಿಸಿ.

ನೀವು ಹಿಂದೊಮ್ಮೆ ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಸೇವೆಸಲ್ಲಿಸಿದ್ದೀರೋ? ಭವಿಷ್ಯತ್ತಿನಲ್ಲಿ ನಿಮಗೆ ಸುಯೋಗಗಳನ್ನು ದಯಪಾಲಿಸಲು ಯೆಹೋವನಿಗೆ ಅವಕಾಶಕೊಡಿರಿ. ನಿಮ್ಮ ಆಧ್ಯಾತ್ಮಿಕತೆಯನ್ನು ಬಲಗೊಳಿಸಿರಿ. ತಾಳ್ಮೆ ಮತ್ತು ದೀನತೆಯಿಂದ ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಡಿ. ನಿಮಗೆ ಸಿಗುವ ಯಾವುದೇ ನೇಮಕಗಳನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸಿರಿ. ‘ಯೆಹೋವನು ಸದ್ಭಕ್ತರಿಗೆ ಶುಭವನ್ನು ದಯಪಾಲಿಸದೆ ಇರುವುದಿಲ್ಲ’ ಎಂಬ ಆಶ್ವಾಸನೆ ನಿಮಗಿರಲಿ.—ಕೀರ್ತ. 84:11.

[ಪುಟ 30ರಲ್ಲಿರುವ ಸಂಕ್ಷಿಪ್ತ ವಿವರಣೆ]

ಹೃತ್ಪೂರ್ವಕ ಪ್ರಾರ್ಥನೆಯ ಮೂಲಕ ನಂಬಿಕೆಯಲ್ಲಿ ಬಲಿಷ್ಠರಾಗಿ ಬೆಳೆಯಿರಿ

[ಪುಟ 31ರಲ್ಲಿರುವ ಚಿತ್ರ]

ಕ್ಷೇತ್ರ ಸೇವೆಯನ್ನು ಹೆಚ್ಚಿಸುವುದು ನಿಮ್ಮ ಆಧ್ಯಾತ್ಮಿಕತೆಯನ್ನು ಬಲಗೊಳಿಸುವ ಅತ್ಯುತ್ತಮ ಮಾರ್ಗ

[ಪುಟ 32ರಲ್ಲಿರುವ ಚಿತ್ರ]

ಭವಿಷ್ಯತ್ತಿನಲ್ಲಿ ನಿಮಗೆ ಸುಯೋಗಗಳನ್ನು ದಯಪಾಲಿಸಲು ಯೆಹೋವನಿಗೆ ಅವಕಾಶಕೊಡಿರಿ