ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನ ಮನೋಭಾವ ನಿಮ್ಮಲ್ಲಿರಲಿ

ಕ್ರಿಸ್ತನ ಮನೋಭಾವ ನಿಮ್ಮಲ್ಲಿರಲಿ

ಕ್ರಿಸ್ತನ ಮನೋಭಾವ ನಿಮ್ಮಲ್ಲಿರಲಿ

“ದೇವರು ಕ್ರಿಸ್ತ ಯೇಸುವಿನಲ್ಲಿದ್ದ ಅದೇ ಮನೋಭಾವವನ್ನು ನಿಮಗೂ ದಯಪಾಲಿಸಲಿ.”—ರೋಮ. 15:5.

1. ಕ್ರಿಸ್ತನ ಮನೋಭಾವ ನಮ್ಮಲ್ಲಿರುವಂತೆ ನಾವೇಕೆ ಪ್ರಯತ್ನಿಸಬೇಕು?

“ನನ್ನ ಬಳಿಗೆ ಬನ್ನಿರಿ” ಎಂದು ಆಮಂತ್ರಿಸುತ್ತಾ ಯೇಸು ಕ್ರಿಸ್ತನು ಹೇಳಿದ್ದು: “ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ . . . ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ.” (ಮತ್ತಾ. 11:28, 29) ಈ ಹಾರ್ದಿಕ ಆಮಂತ್ರಣ ಯೇಸುವಿನ ಪ್ರೀತಿಭರಿತ ಮನೋಭಾವವನ್ನು ಬಲು ಚೆನ್ನಾಗಿ ವ್ಯಕ್ತಪಡಿಸುತ್ತದೆ. ಅನುಸರಿಸಲು ಅವನಷ್ಟು ಉತ್ತಮ ಮಾದರಿಯನ್ನು ಬೇರಾವ ಮಾನವನೂ ಇಟ್ಟಿಲ್ಲ. ದೇವರ ಬಲಿಷ್ಠ ಮಗನಾಗಿದ್ದರೂ ಯೇಸು ವಿಶೇಷವಾಗಿ ಅಗತ್ಯದಲ್ಲಿದ್ದವರ ಕಡೆಗೆ ಪರಾನುಭೂತಿ ಮತ್ತು ಕೋಮಲಭಾವ ತೋರಿಸಿದನು.

2. ಯೇಸುವಿನ ಮನೋಭಾವದ ಯಾವ ಅಂಶಗಳನ್ನು ನಾವು ಪರಿಗಣಿಸಲಿದ್ದೇವೆ?

2 ನಾವು ಹೇಗೆ ಕ್ರಿಸ್ತನ ಮನೋಭಾವವನ್ನು ಬೆಳೆಸಿಕೊಳ್ಳಬಲ್ಲೆವು, ಕಾಪಾಡಿಕೊಳ್ಳಬಲ್ಲೆವು ಮತ್ತು ನಮ್ಮ ಜೀವನದಲ್ಲಿ “ಕ್ರಿಸ್ತನ ಮನಸ್ಸನ್ನು” ಪ್ರತಿಫಲಿಸಬಲ್ಲೆವು ಎಂಬುದನ್ನು ಈ ಲೇಖನ ಮತ್ತು ಮುಂದಿನ ಎರಡು ಲೇಖನಗಳಲ್ಲಿ ಪರಿಗಣಿಸಲಿದ್ದೇವೆ. (1 ಕೊರಿಂ. 2:16) ಯೇಸುವಿನ ಸೌಮ್ಯಭಾವ ಹಾಗೂ ದೀನಭಾವ, ದಯೆ, ದೈವಿಕ ವಿಧೇಯತೆ, ಧೈರ್ಯ, ನಿರಂತರ ಪ್ರೀತಿ ಎಂಬ ಐದು ಅಂಶಗಳ ಮೇಲೆ ಪ್ರಧಾನವಾಗಿ ಗಮನ ಕೇಂದ್ರೀಕರಿಸುವೆವು.

ಕ್ರಿಸ್ತನ ಸೌಮ್ಯಭಾವದಿಂದ ಕಲಿಯಿರಿ

3. (ಎ) ದೀನಭಾವದ ವಿಷಯದಲ್ಲಿ ಯೇಸು ತನ್ನ ಶಿಷ್ಯರಿಗೆ ಕಲಿಸಿದ ಒಂದು ಪಾಠ ಯಾವುದು? (ಬಿ) ತನ್ನ ಶಿಷ್ಯರ ಬಲಹೀನತೆಗಳಿಗೆ ಯೇಸು ಹೇಗೆ ಪ್ರತಿಕ್ರಿಯಿಸಿದನು?

3 ದೇವರ ಪರಿಪೂರ್ಣ ಮಗನಾದ ಯೇಸು, ಅಪರಿಪೂರ್ಣರಾದ ಪಾಪಿ ಮಾನವರ ಸೇವೆಮಾಡಲಿಕ್ಕಾಗಿ ಸಿದ್ಧಮನಸ್ಸಿನಿಂದ ಭೂಮಿಗೆ ಬಂದನು. ಇವರಲ್ಲೇ ಕೆಲವರು ತದನಂತರ ಅವನನ್ನು ಕೊಲ್ಲಲಿದ್ದರು. ಆದರೂ ಯೇಸು ಯಾವಾಗಲೂ ತನ್ನ ಸಂತೋಷ ಮತ್ತು ಸ್ವನಿಯಂತ್ರಣವನ್ನು ಕಾಪಾಡಿಕೊಂಡನು. (1 ಪೇತ್ರ 2:21-23) ಯೇಸುವಿನ ಮಾದರಿಯ ಮೇಲೆ ‘ದೃಷ್ಟಿನೆಡುವಲ್ಲಿ,’ ಇತರರ ತಪ್ಪುಗಳು ಮತ್ತು ಕುಂದುಕೊರತೆಗಳು ನಮ್ಮನ್ನು ಕೆರಳಿಸುವಾಗಲೆಲ್ಲ ನಮ್ಮ ಸಂತೋಷ ಮತ್ತು ಸ್ವನಿಯಂತ್ರಣವನ್ನು ಕಾಯ್ದುಕೊಳ್ಳಲು ನಮಗೆ ಸಾಧ್ಯವಾಗುವುದು. (ಇಬ್ರಿ. 12:2) ಯೇಸು ತನ್ನ ಶಿಷ್ಯರಿಗೆ, ತನ್ನೊಂದಿಗೆ ತನ್ನ ನೊಗದಡಿ ಬರುವಂತೆ ಮತ್ತು ಹೀಗೆ ತನ್ನಿಂದ ಕಲಿತುಕೊಳ್ಳುವಂತೆ ಆಮಂತ್ರಿಸಿದನು. (ಮತ್ತಾ. 11:29) ಅವರೇನನ್ನು ಕಲಿಯಸಾಧ್ಯವಿತ್ತು? ಒಂದು ವಿಷಯ, ಯೇಸು ಸೌಮ್ಯಭಾವದವನಾಗಿದ್ದನು ಮತ್ತು ತನ್ನ ಶಿಷ್ಯರು ತಪ್ಪುಗಳನ್ನು ಮಾಡಿದಾಗಲೂ ಅವರೊಂದಿಗೆ ತಾಳ್ಮೆಯಿಂದ ನಡೆದುಕೊಂಡನು. ಅವನು ಸಾಯುವುದಕ್ಕೆ ಮುಂಚಿನ ರಾತ್ರಿ ತನ್ನ ಶಿಷ್ಯರ ಪಾದಗಳನ್ನು ತೊಳೆದನು. ಈ ಮೂಲಕ ತನ್ನ ಶಿಷ್ಯರಿಗೆ “ದೀನಹೃದಯ”ದವರಾಗಿರುವ ವಿಷಯದಲ್ಲಿ ಎಂದೂ ಮರೆಯಲಾಗದಂಥ ಪಾಠ ಕಲಿಸಿದನು. (ಯೋಹಾನ 13:14-17 ಓದಿ.) ತದನಂತರ ಪೇತ್ರ, ಯಾಕೋಬ ಮತ್ತು ಯೋಹಾನರು ‘ಎಚ್ಚರವಾಗಿರಲು’ ತಪ್ಪಿಹೋದಾಗ ಯೇಸು ಅವರ ಬಲಹೀನತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾ ಅನುಕಂಪ ತೋರಿಸಿದನು. “ಸೀಮೋನನೇ, ನೀನು ನಿದ್ರಿಸುತ್ತಿದ್ದೀಯಾ?” ಎಂದು ಅವನು ಕೇಳಿದನು. ತದನಂತರ ಅವನಂದದ್ದು: “ನೀವು ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸುತ್ತಿರಿ. ಹೃದಯವು ಸಿದ್ಧವಾಗಿದೆ ನಿಜ, ಆದರೆ ದೇಹಕ್ಕೆ ಬಲ ಸಾಲದು.”—ಮಾರ್ಕ 14:32-38.

4, 5. ಯೇಸುವಿನ ಮಾದರಿಯು ನಾವು ಇತರರ ಕುಂದುಕೊರತೆಗಳೊಂದಿಗೆ ವ್ಯವಹರಿಸುವಾಗ ಹೇಗೆ ಸಹಾಯ ಮಾಡುತ್ತದೆ?

4 ಒಬ್ಬ ಸಹೋದರ/ಸಹೋದರಿಗೆ ಸ್ಪರ್ಧಾತ್ಮಕ ಮನೋಭಾವ, ಮುಂಗೋಪ ಇರುವಲ್ಲಿ ಇಲ್ಲವೇ ಹಿರಿಯರಿಂದಾಗಲಿ ‘ನಂಬಿಗಸ್ತ ಮತ್ತು ವಿವೇಚನೆಯುಳ್ಳ ಆಳಿನಿಂದಾಗಲಿ’ ಬರುವ ಸಲಹೆಯನ್ನು ಕೂಡಲೇ ಅನ್ವಯಿಸುವ ಸ್ವಭಾವ ಇಲ್ಲದಿರುವಲ್ಲಿ ನಾವು ಅವರೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ? (ಮತ್ತಾ. 24:45-47) ಅಂಥ ದೋಷಗಳು ಲೋಕದ ಜನರಲ್ಲಿದ್ದರೆ ಅದನ್ನು ಸರ್ವಸಾಮಾನ್ಯ ಎಂದೆಣಿಸುತ್ತಾ ಅವರನ್ನು ಕ್ಷಮಿಸಲು ನಾವು ಸಿದ್ಧರಿರಬಹುದು. ಆದರೆ ನಮ್ಮ ಸಹೋದರರಲ್ಲಿ ಅಂಥದ್ದೇ ದೋಷಗಳಿರುವಲ್ಲಿ ಅವರನ್ನು ಕ್ಷಮಿಸಲು ನಮಗೆ ಕಷ್ಟವಾಗುತ್ತಿರಬಹುದು. ಇತರರು ತಪ್ಪುಮಾಡುವಾಗ ನಮಗೆ ಕೂಡಲೇ ಸಿಟ್ಟುಬರುವಲ್ಲಿ, ‘ನಾನು “ಕ್ರಿಸ್ತನ ಮನಸ್ಸನ್ನು” ಇನ್ನೂ ಉತ್ತಮವಾಗಿ ಹೇಗೆ ಪ್ರತಿಫಲಿಸಬಲ್ಲೆ?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು. ತನ್ನ ಶಿಷ್ಯರು ಆಧ್ಯಾತ್ಮಿಕ ಬಲಹೀನತೆ ತೋರಿಸಿದಾಗಲೂ ಯೇಸು ಕುಪಿತನಾಗಲಿಲ್ಲ ಎಂಬುದನ್ನು ಮನಸ್ಸಿನಲ್ಲಿಡಿ.

5 ಅಪೊಸ್ತಲ ಪೇತ್ರನಿಗೆ ಸಂಬಂಧಪಟ್ಟ ಈ ಘಟನೆಯನ್ನು ಪರಿಗಣಿಸಿ. ದೋಣಿಯಿಂದ ಇಳಿದು ನೀರಿನ ಮೇಲೆ ನಡೆಯುತ್ತಾ ತನ್ನ ಕಡೆಗೆ ಬರುವಂತೆ ಯೇಸು ಪೇತ್ರನಿಗೆ ಹೇಳಿದಾಗ ಅವನು ಸ್ವಲ್ಪ ದೂರ ನಡೆದುಬಂದನು. ಆದರೆ ನಂತರ ಬಿರುಗಾಳಿಯನ್ನು ನೋಡಿ ಭಯಪಟ್ಟದ್ದರಿಂದ ಮುಳುಗಲಾರಂಭಿಸಿದನು. ಯೇಸು ಅವನ ಮೇಲೆ ಕೋಪಿಸಿಕೊಂಡು, “ನಿನಗೆ ಹಾಗೇ ಆಗಬೇಕಿತ್ತು! ಈಗಲಾದರೂ ಬುದ್ಧಿಬಂತ?” ಎಂದು ಹೇಳಿದನೋ? ಇಲ್ಲ! “ಆ ಕೂಡಲೆ ಯೇಸು ಕೈಚಾಚಿ ಅವನನ್ನು ಹಿಡಿದು, ‘ಎಲೈ ಅಲ್ಪವಿಶ್ವಾಸಿಯೇ, ನೀನೇಕೆ ಸಂಶಯಕ್ಕೆ ಆಸ್ಪದಕೊಟ್ಟೆ?’ ಎಂದನು.” (ಮತ್ತಾ. 14:28-31) ಒಬ್ಬ ಸಹೋದರನಲ್ಲಿ ನಂಬಿಕೆಯ ಕೊರತೆಯಿರುವುದು ನಮಗೆ ಗೊತ್ತಾಗುವಾಗ ಅವನು ಹೆಚ್ಚಿನ ನಂಬಿಕೆಯನ್ನು ಪಡೆಯುವಂತೆ ಸಹಾಯ ಮಾಡಲು ನಾವು ಸಾಂಕೇತಿಕವಾಗಿ ನಮ್ಮ ಕೈಚಾಚಬಲ್ಲೆವೋ? ಈ ಪಾಠವು, ಯೇಸು ಸೌಮ್ಯಭಾವದಿಂದ ಪೇತ್ರನಿಗೆ ಮಾಡಿದ ಸಹಾಯದಿಂದ ಸ್ಪಷ್ಟವಾಗಿ ತೋರಿಬರುತ್ತದೆ.

6. ಗಣ್ಯ ಸ್ಥಾನಮಾನವನ್ನು ಗಿಟ್ಟಿಸಿಕೊಳ್ಳುವುದರ ಕುರಿತು ಯೇಸು ತನ್ನ ಅಪೊಸ್ತಲರಿಗೆ ಏನನ್ನು ಕಲಿಸಿದನು?

6 ತಮ್ಮಲ್ಲಿ ಯಾರು ದೊಡ್ಡವರು ಎಂಬುದರ ಬಗ್ಗೆ ಅಪೊಸ್ತಲರ ಮಧ್ಯೆ ಆಗಾಗ್ಗೆ ನಡೆಯುತ್ತಿದ್ದ ವಾಗ್ವಾದದಲ್ಲೂ ಪೇತ್ರನು ಶಾಮೀಲಾಗಿದ್ದನು. ಯಾಕೋಬ ಮತ್ತು ಯೋಹಾನರು ಯೇಸುವಿನ ರಾಜ್ಯದಲ್ಲಿ ಅವನ ಎಡಬಲಗಳಲ್ಲಿ ಕುಳಿತುಕೊಳ್ಳಲು ಬಯಸಿದರು. ಇದು ಪೇತ್ರ ಮತ್ತು ಇತರ ಅಪೊಸ್ತಲರಿಗೆ ತಿಳಿದುಬಂದಾಗ ಕೋಪದಿಂದ ಕೆರಳಿದರು. ತಾವು ಬೆಳೆದುಬಂದ ಸಮಾಜದಿಂದ ಅಂಥ ಸ್ಪರ್ಧಾತ್ಮಕ ಮನೋಭಾವ ಈ ಅಪೊಸ್ತಲರಿಗೆ ಬಂದಿರಬಹುದೆಂದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಅವರನ್ನು ತನ್ನ ಬಳಿಗೆ ಕರೆದು ಹೀಗಂದನು: “ಅನ್ಯಜನಾಂಗಗಳನ್ನು ಆಳುವವರು ಅವರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಮತ್ತು ದೊಡ್ಡವರು ಅವರ ಮೇಲೆ ಅಧಿಕಾರ ಚಲಾಯಿಸುತ್ತಾರೆ ಎಂಬುದು ನಿಮಗೆ ತಿಳಿದಿದೆ. ಆದರೆ ನಿಮ್ಮಲ್ಲಿ ಹೀಗಿರುವುದಿಲ್ಲ; ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು, ಮತ್ತು ನಿಮ್ಮಲ್ಲಿ ಮೊದಲಿನವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು.” ತದನಂತರ ತನ್ನ ಸ್ವಂತ ಮಾದರಿಗೆ ಸೂಚಿಸುತ್ತಾ ಯೇಸುವಂದದ್ದು: “ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಸೇವೆಮಾಡುವುದಕ್ಕೂ ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೂ ಬಂದನು.”—ಮತ್ತಾ. 20:20-28.

7. ನಮ್ಮಲ್ಲಿ ಪ್ರತಿಯೊಬ್ಬರೂ ಸಭೆಯ ಏಕತೆಯನ್ನು ಹೇಗೆ ವರ್ಧಿಸಬಹುದು?

7 ಯೇಸುವಿನ ದೀನ ಮನೋಭಾವದ ಕುರಿತ ಮನನವು, ಸಹೋದರರ ನಡುವೆ ‘ನಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳಲು’ ಸಹಾಯ ಮಾಡುವುದು. (ಲೂಕ 9:46-48) ಹೀಗೆ ನಡೆದುಕೊಳ್ಳುವುದು ಏಕತೆಯನ್ನು ವರ್ಧಿಸುತ್ತದೆ. ಒಂದು ದೊಡ್ಡ ಕುಟುಂಬದ ತಂದೆಯೋಪಾದಿ ಯೆಹೋವನು, ತನ್ನ ಮಕ್ಕಳು ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುತ್ತಾ ‘ಒಂದಾಗಿರಬೇಕೆಂದು’ ಬಯಸುತ್ತಾನೆ. (ಕೀರ್ತ. 133:1) ‘ನೀನು ನನ್ನನ್ನು ಕಳುಹಿಸಿದ್ದೀ ಎಂದೂ ನೀನು ನನ್ನನ್ನು ಪ್ರೀತಿಸುವಂತೆಯೇ ಇವರನ್ನೂ ಪ್ರೀತಿಸುತ್ತೀ ಎಂದೂ ಲೋಕವು ತಿಳಿದುಕೊಳ್ಳುವ’ ಸಲುವಾಗಿ ಎಲ್ಲ ನಿಜ ಕ್ರೈಸ್ತರನ್ನು ಐಕ್ಯವಾಗಿಡಬೇಕೆಂದು ಯೇಸು ತನ್ನ ತಂದೆಗೆ ಪ್ರಾರ್ಥಿಸಿದನು. (ಯೋಹಾ. 17:23) ಹೀಗೆ ನಮ್ಮ ಏಕತೆಯು ನಮ್ಮನ್ನು ಕ್ರಿಸ್ತನ ಹಿಂಬಾಲಕರೆಂದು ಗುರುತಿಸುತ್ತದೆ. ಆದರೆ ನಮ್ಮಲ್ಲಿ ಅಂಥ ಐಕ್ಯವಿರಬೇಕಾದರೆ, ಇತರರ ಕುಂದುಕೊರತೆಗಳ ಕಡೆಗೆ ಯೇಸುವಿಗಿದ್ದ ಮನೋಭಾವ ನಮಗೂ ಇರಬೇಕು. ಯೇಸು ಇತರರನ್ನು ಕ್ಷಮಿಸುತ್ತಿದ್ದನು ಹಾಗೂ ಇತರರನ್ನು ಕ್ಷಮಿಸಿದರೆ ಮಾತ್ರ ನಮಗೆ ಕ್ಷಮೆ ಸಿಗುವುದೆಂದು ಕಲಿಸಿದನು.—ಮತ್ತಾಯ 6:14, 15 ಓದಿ.

8. ದೀರ್ಘಕಾಲದಿಂದ ಯೆಹೋವನ ಸೇವಕರಾಗಿರುವವರ ಮಾದರಿಯಿಂದ ನಾವೇನು ಕಲಿಯಬಲ್ಲೆವು?

8 ಹಲವಾರು ವರ್ಷಗಳಿಂದ ಯೇಸುವನ್ನು ಅನುಕರಿಸುತ್ತಿರುವವರ ನಂಬಿಕೆಯನ್ನು ಅನುಕರಿಸುವ ಮೂಲಕವೂ ನಾವು ಹೆಚ್ಚನ್ನು ಕಲಿಯಬಲ್ಲೆವು. ಯೇಸುವಿನಂತೆಯೇ ದೇವರ ಈ ಸೇವಕರು ಸಹ ಇತರರ ಕುಂದುಕೊರತೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಕ್ರಿಸ್ತಸದೃಶ್ಯ ಕರುಣೆಯನ್ನು ತೋರಿಸುವುದರಿಂದ ‘ಬಲವಿಲ್ಲದವರ ಬಲಹೀನತೆಗಳನ್ನು ತಾಳಿಕೊಳ್ಳಲು’ ಮಾತ್ರವಲ್ಲ ಏಕತೆಯನ್ನು ವರ್ಧಿಸಲೂ ಸಹಾಯವಾಗುತ್ತದೆಂದು ಅವರು ಕಲಿತಿದ್ದಾರೆ. ಅಲ್ಲದೇ, ಇದು ಕ್ರಿಸ್ತನ ಮನೋಭಾವವನ್ನು ಪ್ರತಿಫಲಿಸುವಂತೆ ಇಡೀ ಸಭೆಗೆ ಪ್ರೋತ್ಸಾಹ ನೀಡುತ್ತದೆ. ತಮ್ಮ ಸಹೋದರರೂ ಅದೇ ಮನೋಭಾವವನ್ನು ಪ್ರತಿಫಲಿಸುವಂತೆ ಮತ್ತು ತದ್ರೀತಿಯ ಫಲಿತಾಂಶಗಳನ್ನು ಪಡೆಯುವಂತೆ ಅವರು ಬಯಸುತ್ತಾರೆ. ಅಪೊಸ್ತಲ ಪೌಲನು ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಅದನ್ನೇ ಬಯಸಿದನು. ಅವನಂದದ್ದು: “ತಾಳ್ಮೆಯನ್ನೂ ಸಾಂತ್ವನವನ್ನೂ ಒದಗಿಸುವ ದೇವರು ಕ್ರಿಸ್ತ ಯೇಸುವಿನಲ್ಲಿದ್ದ ಅದೇ ಮನೋಭಾವವನ್ನು ನಿಮಗೂ ದಯಪಾಲಿಸಲಿ. ಹೀಗೆ ನೀವು ಏಕಮನಸ್ಸಿನಿಂದಲೂ ಒಮ್ಮುಖವಾಗಿಯೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆದಾತನನ್ನು ಮಹಿಮೆಪಡಿಸುವಂತಾಗುವುದು.” (ರೋಮ. 15:1, 5, 6) ಹೌದು, ನಮ್ಮ ಐಕ್ಯ ಆರಾಧನೆಯು ಯೆಹೋವನಿಗೆ ಸ್ತುತಿ ತರುತ್ತದೆ.

9. ಯೇಸುವಿನ ಮಾದರಿಯನ್ನು ಅನುಕರಿಸಲು ನಮಗೆ ಪವಿತ್ರಾತ್ಮ ಏಕೆ ಅಗತ್ಯ?

9 “ದೀನಹೃದಯ”ದವರಾಗಿರುವುದಕ್ಕೂ ಪವಿತ್ರಾತ್ಮದ ಫಲದ ಭಾಗವಾದ ಸೌಮ್ಯಭಾವಕ್ಕೂ ಸಂಬಂಧವಿದೆಯೆಂದು ಯೇಸು ತಿಳಿಸಿದನು. ಆದ್ದರಿಂದ ಯೇಸುವಿನ ಮಾದರಿಯನ್ನು ಸರಿಯಾಗಿ ಅನುಕರಿಸಲು ಅವನ ಮಾದರಿಯ ಅಧ್ಯಯನದೊಂದಿಗೆ ಯೆಹೋವನ ಪವಿತ್ರಾತ್ಮವೂ ನಮಗೆ ಅಗತ್ಯ. ನಾವು ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ ಅದರ ಫಲವಾದ, “ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣ” ಎಂಬ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. (ಗಲಾ. 5:22, 23) ಹೀಗೆ, ದೀನತೆ ಮತ್ತು ಸೌಮ್ಯಭಾವದ ವಿಷಯದಲ್ಲಿ ಯೇಸು ಇಟ್ಟಿರುವ ಮಾದರಿಯನ್ನು ಅನುಸರಿಸುವ ಮೂಲಕ ನಾವು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನನ್ನು ಸಂತೋಷಪಡಿಸುತ್ತೇವೆ.

ಯೇಸು ಇತರರನ್ನು ದಯೆಯಿಂದ ಉಪಚರಿಸಿದನು

10. ಯೇಸು ಹೇಗೆ ದಯೆ ತೋರಿಸಿದನು?

10 ದಯೆ ಕೂಡ ಪವಿತ್ರಾತ್ಮದ ಫಲದ ಭಾಗವಾಗಿದೆ. ಯೇಸು ಯಾವಾಗಲೂ ಇತರರನ್ನು ದಯೆಯಿಂದ ಉಪಚರಿಸಿದನು. ಯಾರು ಯಥಾರ್ಥವಾಗಿ ತನ್ನ ಬಳಿ ಬಂದರೋ ಅವರೆಲ್ಲರನ್ನು ಯೇಸು ದಯೆಯಿಂದ ಅಂದರೆ ‘ಆದರದಿಂದ ಬರಮಾಡಿಕೊಂಡನು.’ (ಲೂಕ 9:11 ಓದಿ.) ಯೇಸು ತೋರಿಸಿದ ದಯೆಯಿಂದ ನಾವೇನನ್ನು ಕಲಿಯಬಲ್ಲೆವು? ಒಬ್ಬ ದಯಾಪರ ವ್ಯಕ್ತಿ, ಸ್ನೇಹಮಯಿಯೂ, ಕೋಮಲನೂ, ಸಹಾನುಭೂತಿಯುಳ್ಳವನೂ ಮತ್ತು ವಿನೀತನೂ ಆಗಿರುತ್ತಾನೆ. ಯೇಸು ಸಹ ಅಂಥ ವ್ಯಕ್ತಿಯಾಗಿದ್ದನು. ಜನರು, “ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದಾರಲ್ಲ ಎಂದು” ಅವರ ಮೇಲೆ ಕನಿಕರಪಟ್ಟನು.—ಮತ್ತಾ. 9:35, 36.

11, 12. (ಎ) ಯೇಸು, ಅನುಕಂಪವನ್ನು ಕ್ರಿಯೆಯಲ್ಲಿ ತೋರಿಸಿದ ಒಂದು ಉದಾಹರಣೆಯನ್ನು ವಿವರಿಸಿ. (ಬಿ) ಈ ಉದಾಹರಣೆಯಿಂದ ನೀವೇನು ಕಲಿಯಬಹುದು?

11 ಯೇಸು ಕನಿಕರ ಹಾಗೂ ಅನುಕಂಪವನ್ನು ಕ್ರಿಯೆಯಲ್ಲೂ ತೋರಿಸಿದನು. ಒಂದು ಉದಾಹರಣೆ ಪರಿಗಣಿಸಿ. ಒಬ್ಬ ಸ್ತ್ರೀ 12 ವರ್ಷಗಳಿಂದ ಅಸಾಮಾನ್ಯ ರಕ್ತಸ್ರಾವದಿಂದ ಬಳಲುತ್ತಿದ್ದಳು. ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಈ ಸ್ಥಿತಿಯಿಂದಾಗಿ ತಾನು ಅಶುದ್ಧಳು ಮತ್ತು ಬೇರೆ ಜನರೊಂದಿಗೆ ಸೇರಿ ದೇವರನ್ನು ಆರಾಧಿಸುವಂತಿಲ್ಲ ಎಂಬುದು ಮಾತ್ರವಲ್ಲ, ತನ್ನನ್ನು ಮುಟ್ಟುವವರೂ ಅಶುದ್ಧರಾಗುತ್ತಾರೆ ಎಂಬುದು ಆಕೆಗೆ ಗೊತ್ತಿತ್ತು. (ಯಾಜ. 15:25-27) ಯೇಸುವಿನ ಪ್ರಖ್ಯಾತಿ ಹಾಗೂ ಅವನು ಜನರನ್ನು ಉಪಚರಿಸುತ್ತಿದ್ದ ರೀತಿಯಿಂದಾಗಿ ಅವನು ತನ್ನನ್ನು ವಾಸಿಮಾಡಶಕ್ತನು ಮಾತ್ರವಲ್ಲ ಖಂಡಿತ ಹಾಗೆ ಮಾಡುವನೆಂದು ಆಕೆಗೆ ಮನದಟ್ಟಾಗಿತ್ತು. ಆಕೆ ತನ್ನಲ್ಲೇ, “ನಾನು ಅವನ ಮೇಲಂಗಿಯನ್ನು ಮುಟ್ಟಿದರೆ ಸಾಕು, ವಾಸಿಯಾಗುವೆನು” ಅಂದುಕೊಳ್ಳುತ್ತಾ ಇದ್ದಳು. ಆದ್ದರಿಂದ ತನ್ನಲ್ಲಿದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಅವನ ಮೇಲಂಗಿಯನ್ನು ಮುಟ್ಟಿದಳು. ತಕ್ಷಣ ತಾನು ವಾಸಿಯಾಗಿರುವುದು ಆಕೆಗೆ ತಿಳಿದುಬಂತು.

12 ತನ್ನನ್ನು ಯಾರೋ ಮುಟ್ಟಿರುವುದು ಯೇಸುವಿಗೆ ಗೊತ್ತಾದಾಗ ಅದು ಯಾರೆಂದು ನೋಡಲು ಸುತ್ತಲೂ ಕಣ್ಣಾಡಿಸಿದನು. ಆಗ ಆ ಸ್ತ್ರೀ, ತಾನು ಧರ್ಮಶಾಸ್ತ್ರವನ್ನು ಉಲ್ಲಂಘಿಸಿದ್ದರಿಂದ ಯೇಸು ಎಲ್ಲಿ ಗದರಿಸುತ್ತಾನೊ ಎಂಬ ಭಯದಿಂದ ಗಡಗಡನೆ ನಡುಗುತ್ತಾ ಅವನ ಮುಂದೆ ಅಡ್ಡಬಿದ್ದು ನಡೆದದ್ದನ್ನೆಲ್ಲಾ ಹೇಳಿಬಿಟ್ಟಳು. ಕಷ್ಟಕ್ಕೊಳಗಾಗಿದ್ದ ಆ ಅಸಹಾಯಕ ಸ್ತ್ರೀಯನ್ನು ಯೇಸು ಗದರಿಸಿದನೋ? ಇಲ್ಲವೇ ಇಲ್ಲ! ಬದಲಿಗೆ ಅವಳಲ್ಲಿ ಧೈರ್ಯತುಂಬಿಸುತ್ತಾ, “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು” ಎಂದು ಹೇಳಿದನು. (ಮಾರ್ಕ 5:25-34) ಆ ದಯಾಭರಿತ ಮಾತುಗಳನ್ನು ಕೇಳಿ ಆಕೆಯ ಹೃದಯ ಎಷ್ಟು ಹಗುರವಾಗಿರಬೇಕು!

13. (ಎ) ಯೇಸುವಿನ ಮನೋಭಾವವು ಫರಿಸಾಯರ ಮನೋಭಾವಕ್ಕಿಂತ ಹೇಗೆ ಭಿನ್ನವಾಗಿತ್ತು? (ಬಿ) ಯೇಸು ಮಕ್ಕಳನ್ನು ಹೇಗೆ ಉಪಚರಿಸಿದನು?

13 ನಿರ್ದಯಿ ಫರಿಸಾಯರಂತೆ ಯೇಸು ಜನರ ಮೇಲೆ ಇನ್ನಷ್ಟು ಭಾರವನ್ನು ಹೊರಿಸಲು ತನ್ನ ಅಧಿಕಾರವನ್ನೆಂದೂ ದುರ್ಬಳಕೆ ಮಾಡಲಿಲ್ಲ. (ಮತ್ತಾ. 23:4) ಬದಲಾಗಿ, ಅವನು ದಯೆ ಹಾಗೂ ತಾಳ್ಮೆಯಿಂದ ಯೆಹೋವನ ಮಾರ್ಗಗಳನ್ನು ಇತರರಿಗೆ ಕಲಿಸಿದನು. ಯೇಸು ತನ್ನ ಶಿಷ್ಯರಿಗೆ ಒಬ್ಬ ವಾತ್ಸಲ್ಯಭರಿತ ಜೊತೆಗಾರನಾಗಿದ್ದನು. ಅವನು ಯಾವಾಗಲೂ ಪ್ರೀತಿಭರಿತನೂ ದಯಾಭರಿತನೂ ಆಗಿದ್ದು, ಒಬ್ಬ ನಿಜ ಸ್ನೇಹಿತನಾಗಿದ್ದನು. (ಜ್ಞಾನೋ. 17:17; ಯೋಹಾ. 15:11-15) ಮಕ್ಕಳು ಸಹ ಅವನೊಂದಿಗಿದ್ದಾಗ ಹಾಯಾಗಿದ್ದರು ಮತ್ತು ಅವನೂ ಅವರೊಂದಿಗೆ ಹಾಯಾಗಿದ್ದನು. ಅವನು ಎಷ್ಟೇ ಕಾರ್ಯಮಗ್ನನಾಗಿದ್ದರೂ ಪುಟ್ಟ ಮಕ್ಕಳೊಂದಿಗಿರಲು ಸಮಯಮಾಡಿಕೊಂಡನು. ಒಂದು ಸಂದರ್ಭದಲ್ಲಿ ಜನರು ತಮ್ಮ ಚಿಕ್ಕ ಮಕ್ಕಳನ್ನು ಯೇಸು ಮುಟ್ಟಬೇಕೆಂದು ಅವನ ಬಳಿ ತರುತ್ತಿದ್ದಾಗ, ಶಿಷ್ಯರು ಆಗಿನ ಧಾರ್ಮಿಕ ಮುಖಂಡರಂತೆ ತಾವೇ ಶ್ರೇಷ್ಠರೆಂದೆಣಿಸುತ್ತಾ ಅವರನ್ನು ತಡೆಯಲು ಪ್ರಯತ್ನಿಸಿದರು. ಶಿಷ್ಯರ ಈ ವರ್ತನೆ ಯೇಸುವಿಗೆ ಇಷ್ಟವಾಗಲಿಲ್ಲ. ಅವನು ಅವರಿಗೆ, “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ; ಅವುಗಳನ್ನು ತಡೆಯಲು ಪ್ರಯತ್ನಿಸಬೇಡಿ, ಏಕೆಂದರೆ ದೇವರ ರಾಜ್ಯವು ಇಂಥವರಿಗೆ ಸೇರಿದ್ದಾಗಿದೆ” ಎಂದು ಹೇಳಿದನು. ನಂತರ ಆ ಮಕ್ಕಳನ್ನು ಉಪಯೋಗಿಸುತ್ತಾ ತನ್ನ ಶಿಷ್ಯರಿಗೆ ಒಂದು ಪ್ರಾಮುಖ್ಯ ಪಾಠ ಕಲಿಸಿದನು. ಅವನಂದದ್ದು: “ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.”—ಮಾರ್ಕ 10:13-15.

14. ಮಕ್ಕಳ ಕಡೆಗೆ ಯಥಾರ್ಥ ಆಸಕ್ತಿ ತೋರಿಸುವುದರ ಪ್ರಯೋಜನವೇನು?

14 ಒಂದು ಕ್ಷಣ ಯೋಚಿಸಿ: ವರ್ಷಗಳಾನಂತರ ಆ ಮಕ್ಕಳಲ್ಲಿ ಕೆಲವರು ದೊಡ್ಡವರಾಗಿ, ಯೇಸು ಕ್ರಿಸ್ತನು ತಮ್ಮನ್ನು ‘ತನ್ನ ತೋಳುಗಳಲ್ಲಿ ಎತ್ತಿಕೊಂಡು ಆಶೀರ್ವದಿಸಿದ್ದನ್ನು’ ನೆನಪಿಸಿಕೊಂಡಾಗ ಅವರಿಗೆ ಹೇಗನಿಸಿರಬೇಕು! (ಮಾರ್ಕ 10:16) ಹಾಗೆಯೇ ಇಂದಿನ ಮಕ್ಕಳು ದೊಡ್ಡವರಾದಾಗ, ತಮ್ಮ ಬಗ್ಗೆ ಯಥಾರ್ಥ ಆಸಕ್ತಿ ತೋರಿಸಿದ ಹಿರಿಯರನ್ನೂ ಇತರರನ್ನೂ ಮೆಚ್ಚುಗೆಯಿಂದ ನೆನೆಯುವರು. ಇದಕ್ಕಿಂತ ಮಿಗಿಲಾಗಿ, ಚಿಕ್ಕಪ್ರಾಯದಿಂದಲೇ ಇಂಥ ಯಥಾರ್ಥ ಆಸಕ್ತಿಗೆ ಪಾತ್ರರಾಗಿರುವ ಮಕ್ಕಳಿಗೆ, ದೇವರಾತ್ಮವು ಆತನ ಜನರ ಮೇಲಿದೆ ಎಂಬುದು ಗೊತ್ತಾಗುತ್ತದೆ.

ನಿರ್ದಯ ಲೋಕದಲ್ಲಿ ದಯೆ ತೋರಿಸಿ

15. ಇಂದು ಜನರಲ್ಲಿರುವ ದಯೆಯ ಕೊರತೆಯನ್ನು ನೋಡಿ ನಮಗೇಕೆ ಆಶ್ಚರ್ಯವಾಗುವುದಿಲ್ಲ?

15 ಇತರರಿಗೆ ದಯೆ ತೋರಿಸಲು ತಮ್ಮ ಬಳಿ ಸಮಯವೇ ಇಲ್ಲವೆಂದು ಇಂದು ಅನೇಕರು ಭಾವಿಸುತ್ತಾರೆ. ಹೀಗಿರುವುದರಿಂದ, ಪ್ರತಿನಿತ್ಯ ಯೆಹೋವನ ಜನರು ಸಹ ಶಾಲೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಪ್ರಯಾಣಿಸುತ್ತಿರುವಾಗ ಹಾಗೂ ಶುಶ್ರೂಷೆಯಲ್ಲಿ ತೊಡಗಿರುವಾಗ ಲೋಕದ ಮನೋಭಾವವನ್ನು ಎದುರಿಸಬೇಕಾಗುತ್ತದೆ. ಜನರ ನಿರ್ದಯ ಮನೋಭಾವದಿಂದಾಗಿ ನಮಗೆ ಬೇಸರವಾಗುವುದಾದರೂ ಆಶ್ಚರ್ಯವಂತೂ ಆಗುವುದಿಲ್ಲ. ಏಕೆಂದರೆ ಕಠಿನವಾದ ಈ “ಕಡೇ ದಿವಸಗಳಲ್ಲಿ” ಸತ್ಯ ಕ್ರೈಸ್ತರು, “ಸ್ವಪ್ರೇಮಿಗಳೂ . . . ಸ್ವಾಭಾವಿಕ ಮಮತೆಯಿಲ್ಲದವರೂ” ಆಗಿರುವವರ ನಡುವೆ ಜೀವಿಸಬೇಕಾಗುವುದೆಂದು ಯೆಹೋವನು ಪೌಲನ ಮೂಲಕ ಮುನ್ನೆಚ್ಚರಿಸಿದ್ದಾನೆ.—2 ತಿಮೊ. 3:1-3.

16. ಕ್ರಿಸ್ತನು ತೋರಿಸಿದ ದಯೆಯನ್ನು ನಾವು ಹೇಗೆ ಸಭೆಯಲ್ಲಿ ಪ್ರವರ್ಧಿಸಬಲ್ಲೆವು?

16 ಇನ್ನೊಂದು ಬದಿಯಲ್ಲಿ, ಕ್ರೈಸ್ತ ಸಭೆಯಲ್ಲಿ ಹಿತಕರ ವಾತಾವರಣವಿದ್ದು, ಅದು ಈ ನಿರ್ದಯ ಲೋಕದ ವಾತಾವರಣಕ್ಕೆ ತದ್ವಿರುದ್ಧವಾಗಿದೆ. ಯೇಸುವನ್ನು ಅನುಕರಿಸುವ ಮೂಲಕ ನಮ್ಮಲ್ಲಿ ಪ್ರತಿಯೊಬ್ಬರೂ ಇಂಥ ಹಿತಕರ ವಾತಾವರಣಕ್ಕೆ ನಮ್ಮ ಕೊಡುಗೆಯನ್ನು ನೀಡಬಹುದು. ಇದನ್ನು ಹೇಗೆ ಮಾಡಬಲ್ಲೆವು? ಮೊದಲಿಗೆ, ಸಭೆಯಲ್ಲಿರುವ ಅನೇಕರಿಗೆ ನಮ್ಮ ಸಹಾಯ ಹಾಗೂ ಪ್ರೋತ್ಸಾಹದ ಅಗತ್ಯವಿದೆ. ಏಕೆಂದರೆ ಅವರಿಗೆ ಆರೋಗ್ಯ ಸಮಸ್ಯೆಗಳಿರುತ್ತವೆ ಅಥವಾ ಅವರು ಬೇರಾವುದೋ ಪ್ರತಿಕೂಲ ಸನ್ನಿವೇಶಗಳಲ್ಲಿರುತ್ತಾರೆ. ಇಂಥ ಸಮಸ್ಯೆಗಳು ಈ “ಕಡೇ ದಿವಸಗಳಲ್ಲಿ” ಹೆಚ್ಚಾಗುತ್ತಿರುವುದೇನೋ ನಿಜ, ಆದರೆ ಅವು ಹೊಸತೇನಲ್ಲ. ಬೈಬಲ್‌ ಸಮಯಗಳಲ್ಲೂ ಕ್ರೈಸ್ತರು ಇಂಥ ಸಮಸ್ಯೆಗಳಿಂದ ಬಾಧಿತರಾಗಿದ್ದರು. ಸಹಜವಾಗಿಯೇ, ನಮಗಿಂದು ಸಹಾಯದ ಅಗತ್ಯವಿರುವಂತೆಯೇ ಅಂದು ಜೀವಿಸುತ್ತಿದ್ದ ಕ್ರೈಸ್ತರಿಗೂ ಅಗತ್ಯವಿತ್ತು. ಉದಾಹರಣೆಗೆ ಪೌಲನು ಕ್ರೈಸ್ತರನ್ನು ಪ್ರೋತ್ಸಾಹಿಸಿದ್ದು: “ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರ ಕಡೆಗೆ ದೀರ್ಘ ಸಹನೆಯನ್ನು ತೋರಿಸಿರಿ.” (1 ಥೆಸ. 5:14) ಇದರಲ್ಲಿ, ಕ್ರಿಸ್ತನು ತೋರಿಸಿದ ದಯೆಯನ್ನು ಕ್ರಿಯೆಯಲ್ಲಿ ತೋರಿಸುವುದು ಸೇರಿದೆ.

17, 18. ಯೇಸುವಿನ ದಯೆಯನ್ನು ನಾವು ಅನುಕರಿಸಬಲ್ಲ ಕೆಲವೊಂದು ವಿಧಗಳಾವುವು?

17 ಕ್ರೈಸ್ತರಿಗೆ ‘ತಮ್ಮ ಸಹೋದರರನ್ನು ದಯಾಭಾವದಿಂದ ಸೇರಿಸಿಕೊಳ್ಳುವ,’ ಅವರನ್ನು ಯೇಸು ಹೇಗೆ ಉಪಚರಿಸುವನೋ ಹಾಗೇ ಉಪಚರಿಸುವ, ತಮಗೆ ಅನೇಕ ವರ್ಷಗಳಿಂದ ಪರಿಚಯವಿರುವವರಿಗೂ ಹಿಂದೆಂದೂ ಭೇಟಿಯಾಗಿರದವರಿಗೂ ನಿಜವಾದ ಮುತುವರ್ಜಿ ತೋರಿಸುವ ಜವಾಬ್ದಾರಿಯಿದೆ. (3 ಯೋಹಾ. 5-8) ಯೇಸುವಿನಂತೆ ನಾವು ಸಹ ಇತರರಿಗೆ ಕರುಣೆಯನ್ನು ತೋರಿಸಲು ಮುಂದಾಗಬೇಕು ಮತ್ತು ಯಾವಾಗಲೂ ಇತರರಿಗೆ ಚೈತನ್ಯದ ಚಿಲುಮೆಯಂತಿರಬೇಕು.—ಯೆಶಾ. 32:2; ಮತ್ತಾ. 11:28-30.

18 ನಮಗೆ ಇತರರ ಬಗ್ಗೆ ಕಾಳಜಿಯಿದೆ ಮತ್ತು ಅವರ ಸಮಸ್ಯೆಗಳು ಅರ್ಥವಾಗುತ್ತವೆ ಎಂಬುದನ್ನು ಕ್ರಿಯೆಗಳಲ್ಲಿ ವ್ಯಕ್ತಪಡಿಸುವ ಮೂಲಕ ನಮ್ಮಲ್ಲಿ ಪ್ರತಿಯೊಬ್ಬರು ದಯೆ ತೋರಿಸಬಹುದು. ಇದನ್ನು ಮಾಡಲು ಮಾರ್ಗಗಳನ್ನು ಹುಡುಕಿರಿ ಹಾಗೂ ಅವಕಾಶಗಳನ್ನು ಸೃಷ್ಟಿಸಿಕೊಳ್ಳಿ. ಪೌಲನು ಕ್ರೈಸ್ತರನ್ನು ಉತ್ತೇಜಿಸಿದ್ದು: “ಸಹೋದರ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮ. 12:10) ಇದರರ್ಥ, ಕ್ರಿಸ್ತನ ಮಾದರಿಯನ್ನು ಅನುಸರಿಸುತ್ತಾ ಇತರರನ್ನು ಕೋಮಲತೆಯಿಂದ ಹಾಗೂ ದಯೆಯಿಂದ ಉಪಚರಿಸುವುದು ಮತ್ತು ‘ನಿಷ್ಕಪಟವಾದ ಪ್ರೀತಿಯನ್ನು’ ತೋರಿಸಲು ಕಲಿಯುವುದಾಗಿದೆ. (2 ಕೊರಿಂ. 6:6) ಇಂಥ ಕ್ರಿಸ್ತಸದೃಶ ಪ್ರೀತಿಯನ್ನು ಪೌಲನು ಹೀಗೆ ವರ್ಣಿಸಿದನು: “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಜಂಬಕೊಚ್ಚಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ.” (1 ಕೊರಿಂ. 13:4) ನಮ್ಮ ಸಹೋದರ ಸಹೋದರಿಯರ ವಿರುದ್ಧ ಮನಸ್ಸಿನಲ್ಲಿ ಅಸಮಾಧಾನವನ್ನು ಇಟ್ಟುಕೊಳ್ಳುವ ಬದಲಿಗೆ ಈ ಬುದ್ಧಿವಾದಕ್ಕೆ ಕಿವಿಗೊಡೋಣ: “ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ ದೇವರು ಕ್ರಿಸ್ತನ ಮೂಲಕ ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರಿ.”—ಎಫೆ. 4:32.

19. ಕ್ರಿಸ್ತಸದೃಶ ದಯೆಯನ್ನು ತೋರಿಸುವುದರಿಂದ ಬರುವ ಒಳ್ಳೇ ಫಲಿತಾಂಶಗಳು ಯಾವುವು?

19 ನಾವು ಎಲ್ಲ ಸಮಯ ಹಾಗೂ ಸನ್ನಿವೇಶಗಳಲ್ಲಿ ಕ್ರಿಸ್ತಸದೃಶ ದಯೆಯನ್ನು ತೋರಿಸಲು ಪ್ರಯತ್ನಿಸುವುದರಿಂದ ಹೇರಳ ಪ್ರತಿಫಲ ಸಿಗುವುದು. ಯೆಹೋವನ ಪವಿತ್ರಾತ್ಮವು ಅದರ ಫಲವನ್ನು ಬೆಳೆಸಿಕೊಳ್ಳುವಂತೆ ಪ್ರತಿಯೊಬ್ಬರಿಗೂ ಸಹಾಯಮಾಡುತ್ತಾ ಸಭೆಯಲ್ಲಿ ಮುಕ್ತವಾಗಿ ಕೆಲಸಮಾಡುವುದು. ಅಷ್ಟುಮಾತ್ರವಲ್ಲದೆ, ಯೇಸು ಬಿಟ್ಟುಹೋದ ಮಾದರಿಯನ್ನು ನಾವು ಅನುಸರಿಸುವಾಗ ಮತ್ತು ಇತರರಿಗೂ ಅದನ್ನು ಮಾಡಲು ನೆರವುನೀಡುವಾಗ, ನಮ್ಮ ಸಂತೋಷಭರಿತ, ಐಕ್ಯ ಆರಾಧನೆಯು ಸ್ವತಃ ದೇವರಿಗೆ ಆನಂದ ತರುವುದು. ಹೀಗಿರುವುದರಿಂದ ನಾವು ಇತರರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ಯೇಸುವಿನ ಸೌಮ್ಯಭಾವ ಹಾಗೂ ದಯೆಯನ್ನು ಪ್ರತಿಫಲಿಸಲು ಸತತವಾಗಿ ಪ್ರಯತ್ನಿಸೋಣ.

ನೀವು ವಿವರಿಸಬಲ್ಲಿರೋ?

• ಯೇಸು ತಾನು “ಸೌಮ್ಯಭಾವದವನೂ ದೀನಹೃದಯದವನೂ” ಆಗಿದ್ದೇನೆಂದು ಹೇಗೆ ತೋರಿಸಿದನು?

• ಯೇಸು ದಯೆ ತೋರಿಸಿದ್ದು ಹೇಗೆ?

• ಈ ಅಪರಿಪೂರ್ಣ ಲೋಕದಲ್ಲಿ ನಾವು ಕ್ರಿಸ್ತನಂತೆ ಸೌಮ್ಯಭಾವ ಹಾಗೂ ದಯೆಯನ್ನು ತೋರಿಸುವ ಕೆಲವೊಂದು ವಿಧಗಳಾವುವು?

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಚಿತ್ರ]

ಪೇತ್ರನಿಗಾದಂತೆ ಸಹೋದರನೊಬ್ಬನ ನಂಬಿಕೆಯು ತತ್ತರಿಸುವಾಗ, ನಾವು ಸಹಾಯಹಸ್ತ ಚಾಚುತ್ತೇವೋ?

[ಪುಟ 10ರಲ್ಲಿರುವ ಚಿತ್ರ]

ಸಭೆಯನ್ನು ದಯೆಯ ಧಾಮವನ್ನಾಗಿ ಮಾಡಲು ನೀವೇನು ಮಾಡಬಲ್ಲಿರಿ?