ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನಂತೆ ವಿಧೇಯರೂ ಧೈರ್ಯಶಾಲಿಗಳೂ ಆಗಿರಿ

ಕ್ರಿಸ್ತನಂತೆ ವಿಧೇಯರೂ ಧೈರ್ಯಶಾಲಿಗಳೂ ಆಗಿರಿ

ಕ್ರಿಸ್ತನಂತೆ ವಿಧೇಯರೂ ಧೈರ್ಯಶಾಲಿಗಳೂ ಆಗಿರಿ

“ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ.”—ಯೋಹಾ. 16:33.

1. ಯೇಸು ಎಷ್ಟರ ಮಟ್ಟಿಗೆ ದೇವರಿಗೆ ವಿಧೇಯನಾದನು?

ಯೇಸು ಕ್ರಿಸ್ತನು ಯಾವಾಗಲೂ ದೇವರ ಚಿತ್ತವನ್ನು ಮಾಡಿದನು. ತನ್ನ ಸ್ವರ್ಗೀಯ ತಂದೆಗೆ ಅವಿಧೇಯನಾಗುವ ಯೋಚನೆಯೂ ಅವನ ಮನಸ್ಸಿಗೆ ಬರಲಿಲ್ಲ. (ಯೋಹಾ. 4:34; ಇಬ್ರಿ. 7:26) ಹಾಗಿದ್ದರೂ ವಿಧೇಯತೆ ತೋರಿಸುವುದು ಅವನಿಗೆ ತೀರ ಸುಲಭವಾಗಿತ್ತೆಂದು ಇದರರ್ಥವಲ್ಲ. ಏಕೆಂದರೆ ಭೂಮಿಯಲ್ಲಿದ್ದಾಗ ಅವನು ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದನು. ಯೇಸು ಸಾರಲಾರಂಭಿಸಿದಂದಿನಿಂದ, ಸೈತಾನನನ್ನೂ ಸೇರಿಸಿ ಅವನ ಶತ್ರುಗಳೆಲ್ಲರೂ ಅವನು ತನ್ನ ನಂಬಿಗಸ್ತಿಕೆಯ ಮಾರ್ಗಕ್ರಮವನ್ನು ಬಿಟ್ಟುಬಿಡುವಂತೆ ಅವನಿಗೆ ಮನದಟ್ಟುಮಾಡಲು, ಒತ್ತಾಯಪಡಿಸಲು ಅಥವಾ ವಂಚಿಸಲು ಪ್ರಯತ್ನಿಸಿದರು. (ಮತ್ತಾ. 4:1-11; ಲೂಕ 20:20-25) ಈ ಶತ್ರುಗಳು ಯೇಸುವಿಗೆ ತೀಕ್ಷ್ಣವಾದ ಮಾನಸಿಕ, ಭಾವನಾತ್ಮಕ ಮತ್ತು ಶಾರೀರಿಕ ನೋವನ್ನುಂಟುಮಾಡಿದರು. ಅಂತಿಮವಾಗಿ ಅವನನ್ನು ಯಾತನಾ ಕಂಬಕ್ಕೆ ಜಡಿದು ಸಾಯಿಸಿಯೇ ಬಿಟ್ಟರು. (ಮತ್ತಾ. 26:37, 38; ಲೂಕ 22:44; ಯೋಹಾ. 19:1, 17, 18) ಎಲ್ಲಾ ಕಷ್ಟಗಳ ಮಧ್ಯೆಯೂ ಯೇಸು “ಮರಣವನ್ನು ಹೊಂದುವಷ್ಟರ ಮಟ್ಟಿಗೆ ವಿಧೇಯನಾದನು.”—ಫಿಲಿಪ್ಪಿ 2:8 ಓದಿ.

2, 3. ಯೇಸು ಕಷ್ಟಗಳ ಎದುರಲ್ಲೂ ವಿಧೇಯನಾಗಿದ್ದ ಸಂಗತಿಯಿಂದ ನಾವೇನು ಕಲಿಯಬಲ್ಲೆವು?

2 ಮಾನವನಾಗಿ ಯೇಸುವಿಗೆ ಭೂಮಿಯ ಮೇಲಾದ ಅನುಭವವು, ಅವನು ಹಿಂದೆಂದೂ ಅನುಭವಿಸಿರದ ಪರಿಸ್ಥಿತಿಗಳಲ್ಲಿ ವಿಧೇಯತೆ ತೋರಿಸುವುದು ಹೇಗಿರುತ್ತದೆಂಬುದನ್ನು ಕಲಿಸಿತು. (ಇಬ್ರಿ. 5:8) ಯೇಸುವಿಗೆ ಬಹಳ ದೀರ್ಘ ಸಮಯದಿಂದ ಯೆಹೋವನೊಂದಿಗೆ ಆಪ್ತ ಒಡನಾಟವಿತ್ತು ಮತ್ತು ಸೃಷ್ಟಿಕಾರ್ಯದಲ್ಲಿ ಅವನು ದೇವರ ಕುಶಲ “ಶಿಲ್ಪಿಯಾಗಿ” ಕೆಲಸಮಾಡಿದ್ದನು. ಆದ್ದರಿಂದ ಯೆಹೋವನಿಗೆ ಸೇವೆಸಲ್ಲಿಸುವುದರ ಬಗ್ಗೆ ಅವನಿಗೆ ಇನ್ನೇನು ಕಲಿಯಲಿಕ್ಕಿತ್ತು ಎಂದು ನಾವೆಣಿಸಬಹುದು. (ಜ್ಞಾನೋ. 8:30) ಆದರೆ ವಾಸ್ತವದಲ್ಲಿ ಒಬ್ಬ ಮಾನವನಾಗಿ ಅವನು ಸ್ವತಃ ಕಷ್ಟಗಳನ್ನು ನಂಬಿಗಸ್ತಿಕೆಯಿಂದ ತಾಳಿಕೊಂಡಾಗ ಅವನ ಪೂರ್ಣ ಸಮಗ್ರತೆ ರುಜುವಾಯಿತು. ದೇವರ ಮಗನಾದ ಯೇಸು ತನ್ನ ತಂದೆಗೆ ಹೆಚ್ಚು ಆಪ್ತನಾದನು. ಅವನ ಅನುಭವದಿಂದ ನಾವೇನು ಕಲಿಯಬಲ್ಲೆವು?

3 ಯೇಸು ಒಬ್ಬ ಪರಿಪೂರ್ಣ ಮಾನವನಾಗಿದ್ದರೂ ಪರಿಪೂರ್ಣವಾಗಿ ವಿಧೇಯನಾಗಿ ಉಳಿಯಲು ತನ್ನನ್ನೇ ಅವಲಂಬಿಸಿಕೊಳ್ಳಲಿಲ್ಲ ಬದಲಾಗಿ ದೇವರ ಸಹಾಯವನ್ನು ಬೇಡಿಕೊಂಡನು. (ಇಬ್ರಿಯ 5:7 ಓದಿ.) ನಾವು ಕೂಡ ವಿಧೇಯರಾಗಿ ಉಳಿಯಬೇಕಾದರೆ ದೀನರಾಗಿರಬೇಕು ಮತ್ತು ದೇವರ ಸಹಾಯಕ್ಕಾಗಿ ಕ್ರಮವಾಗಿ ಪ್ರಾರ್ಥಿಸಬೇಕು. ಈ ಕಾರಣದಿಂದ ಅಪೊಸ್ತಲ ಪೌಲನು ಕ್ರೈಸ್ತರಿಗೆ ಸಲಹೆನೀಡಿದ್ದು: “ಕ್ರಿಸ್ತ ಯೇಸುವಿನಲ್ಲಿದ್ದ ಈ ಮನೋಭಾವವು ನಿಮ್ಮಲ್ಲಿಯೂ ಇರಲಿ.” ಅವನು, “ತನ್ನನ್ನು ತಗ್ಗಿಸಿಕೊಂಡು ಮರಣವನ್ನು . . . ಹೊಂದುವಷ್ಟರ ಮಟ್ಟಿಗೆ ವಿಧೇಯನಾದನು.” (ಫಿಲಿ. 2:5-8) ದುಷ್ಟ ಮಾನವ ಸಮಾಜದ ಮಧ್ಯೆ ಇದ್ದರೂ ಮಾನವರು ವಿಧೇಯತೆ ತೋರಿಸಸಾಧ್ಯವೆಂಬುದನ್ನು ಯೇಸುವಿನ ಜೀವನಕ್ರಮ ತೋರಿಸಿತು. ಆದರೆ ಯೇಸು ಪರಿಪೂರ್ಣನಾಗಿದ್ದನು. ಅಪರಿಪೂರ್ಣ ಮಾನವರಾದ ನಮ್ಮ ಕುರಿತೇನು?

ಅಪರಿಪೂರ್ಣರಾಗಿದ್ದರೂ ವಿಧೇಯರಾಗಬಲ್ಲೆವು

4. ನಮಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟಿರುವುದರ ಅರ್ಥವೇನು?

4 ದೇವರು ಆದಾಮ ಹವ್ವರನ್ನು ಬುದ್ಧಿ ಜೀವಿಗಳಾಗಿ ಸೃಷ್ಟಿಸಿ ಅವರಿಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟಿದ್ದನು. ಅವರ ವಂಶಜರಾಗಿರುವ ನಮಗೂ ಇಚ್ಛಾಸ್ವಾತಂತ್ರ್ಯವಿದೆ. ಇದರ ಅರ್ಥವೇನು? ಒಳ್ಳೇದನ್ನು ಮಾಡಬೇಕೋ ಕೆಟ್ಟದ್ದನ್ನು ಮಾಡಬೇಕೋ ಎಂಬುದನ್ನು ನಿರ್ಣಯಿಸುವ ಹಕ್ಕು ನಮಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ದೇವರಿಗೆ ವಿಧೇಯತೆ ತೋರಿಸುವ ಇಲ್ಲವೇ ತೋರಿಸದಿರುವ ಆಯ್ಕೆಮಾಡಬಹುದು. ಆ ಸ್ವಾತಂತ್ರ್ಯವನ್ನು ಆತನು ಕೊಟ್ಟಿದ್ದಾನೆ. ಅಂಥ ಅಮೂಲ್ಯ ಸ್ವಾತಂತ್ರ್ಯದ ಜೊತೆಗೆ ನಮ್ಮ ಮೇಲೆ ಜವಾಬ್ದಾರಿಯೂ ಹೊಣೆಗಾರಿಕೆಯೂ ಬರುತ್ತದೆ. ನಾವು ಮಾಡುವ ನೈತಿಕ ನಿರ್ಣಯಗಳು, ನಮಗೆ ಜೀವನ್ಮರಣದ ವಿಷಯವಾಗಿರಬಲ್ಲವು. ಅವು ನಮ್ಮ ಸುತ್ತಲಿರುವವರ ಮೇಲೂ ಪ್ರಭಾವಬೀರುತ್ತವೆ.

5. ನಮ್ಮೆಲ್ಲರಲ್ಲೂ ಯಾವ ಹೋರಾಟ ನಡೆಯುತ್ತಿರುತ್ತದೆ, ಮತ್ತು ನಾವು ಹೇಗೆ ಯಶಸ್ವಿಗಳಾಗಬಲ್ಲೆವು?

5 ಬಾಧ್ಯತೆಯಾಗಿ ಬಂದಿರುವ ಅಪರಿಪೂರ್ಣತೆಯಿಂದಾಗಿ ನಾವು ಸ್ವಾಭಾವಿಕವಾಗಿ ವಿಧೇಯತೆ ತೋರಿಸಲಾರೆವು. ದೇವರ ನಿಯಮಗಳಿಗೆ ವಿಧೇಯರಾಗುವುದು ಯಾವಾಗಲೂ ಸುಲಭವಲ್ಲ. ವಿಧೇಯತೆ ತೋರಿಸಲು ಪೌಲನು ತನ್ನೊಡನೆಯೇ ಹೋರಾಡಬೇಕಾಯಿತು. ಅವನು ಬರೆದದ್ದು: “ನನ್ನ ಅಂಗಗಳಲ್ಲಿ ಇನ್ನೊಂದು ನಿಯಮವಿರುವುದನ್ನು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನ ನಿಯಮಕ್ಕೆ ವಿರುದ್ಧವಾಗಿ ಹೋರಾಡಿ ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಸೆರೆಯವನನ್ನಾಗಿ ಮಾಡುತ್ತಿದೆ.” (ರೋಮ. 7:23) ತ್ಯಾಗ, ಶ್ರಮ ಇಲ್ಲವೇ ಅನನುಕೂಲತೆ ಸೇರಿರದಿರುವಾಗ ವಿಧೇಯತೆ ತೋರಿಸುವುದು ಬಲು ಸುಲಭ. ಆದರೆ ವಿಧೇಯರಾಗಿರಲು ನಮಗಿರುವ ಆಶೆ ಮತ್ತು “ಶರೀರದಾಶೆ, ಕಣ್ಣಿನಾಶೆ”ಗಳ ನಡುವೆ ಸಂಘರ್ಷ ಉಂಟಾದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಈ ತಪ್ಪು ಆಶೆಗಳು ನಮ್ಮ ಅಪರಿಪೂರ್ಣತೆಯ ಕಾರಣದಿಂದ ಮತ್ತು ನಮ್ಮ ಸುತ್ತಲಿರುವ ‘ಲೋಕದ ಮನೋಭಾವದ’ ಪ್ರಭಾವದಿಂದಾಗಿ ಹುಟ್ಟುತ್ತವೆ ಮತ್ತು ಅವು ತುಂಬ ಬಲವಾಗಿರುತ್ತವೆ. (1 ಯೋಹಾ. 2:16; 1 ಕೊರಿಂ. 2:12) ಇವುಗಳನ್ನು ಪ್ರತಿರೋಧಿಸಲು, ನಾವು ಯಾವುದೇ ಪರೀಕ್ಷೆ ಅಥವಾ ಶೋಧನೆಯನ್ನು ಎದುರಿಸುವ ಮುಂಚೆಯೇ ನಮ್ಮ ‘ಹೃದಯವನ್ನು ಸಿದ್ಧಪಡಿಸಿಕೊಳ್ಳಬೇಕು’ ಮತ್ತು ಏನೇ ಆದರೂ ನಾವು ಯೆಹೋವನಿಗೆ ವಿಧೇಯರಾಗುವೆವು ಎಂಬ ದೃಢಸಂಕಲ್ಪ ಮಾಡಬೇಕು. (ಕೀರ್ತ. 78:8, NW) ತಮ್ಮ ಹೃದಯವನ್ನು ಸಿದ್ಧಪಡಿಸಿಕೊಂಡದ್ದರಿಂದ ಯಶಸ್ವಿಗಳಾದ ಅನೇಕ ವ್ಯಕ್ತಿಗಳ ಉದಾಹರಣೆಗಳು ಬೈಬಲ್‌ನಲ್ಲಿವೆ.—ಎಜ್ರ 7:10; ದಾನಿ. 1:8.

6, 7. ವಿವೇಕಯುತ ಆಯ್ಕೆಗಳನ್ನು ಮಾಡಲು ವೈಯಕ್ತಿಕ ಅಧ್ಯಯನ ಹೇಗೆ ಸಹಾಯ ಮಾಡುತ್ತದೆಂಬುದನ್ನು ದೃಷ್ಟಾಂತಿಸಿ.

6 ನಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳುವ ಒಂದು ವಿಧವು, ಬೈಬಲನ್ನು ಮತ್ತು ಬೈಬಲಾಧರಿತ ಪ್ರಕಾಶನಗಳನ್ನು ಶ್ರದ್ಧೆಯಿಂದ ಅಧ್ಯಯನ ಮಾಡುವುದಾಗಿದೆ. ಈ ಕೆಳಗಿನ ಸನ್ನಿವೇಶದಲ್ಲಿ ಸ್ವತಃ ನಿಮ್ಮನ್ನೇ ಇಟ್ಟುಕೊಳ್ಳಿ. ನಾಳೆ ಸಂಜೆ ಟಿ.ವಿ.ಯಲ್ಲಿ ಒಂದು ಚಲನಚಿತ್ರವನ್ನು ನೋಡಲು ನೀವು ಯೋಜನೆ ಮಾಡಿದ್ದೀರಿ. ಆ ಚಲನಚಿತ್ರ ಒಳ್ಳೇದಾಗಿದೆ ಎಂದು ವಿಮರ್ಶಕರು ಮತ್ತು ಇತರರು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದರೂ ಅದರಲ್ಲಿ ಸ್ವಲ್ಪ ಅನೈತಿಕತೆ, ಹಿಂಸಾಚಾರ ಇರುವುದು ನಿಮಗೆ ಗೊತ್ತಿದೆ. ಆದರೆ ಇವತ್ತು ಸಂಜೆ ನಿಮ್ಮ ವೈಯಕ್ತಿಕ ಅಧ್ಯಯನದ ಸಮಯ. ಅಧ್ಯಯನ ಮಾಡಲಾರಂಭಿಸುವಾಗ ನೀವು ಯೆಹೋವನ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ, ಆತನ ವಾಕ್ಯದಿಂದ ಕಲಿತದ್ದನ್ನು ಅನ್ವಯಿಸಿಕೊಳ್ಳುವಂತೆ ಸಹಾಯ ಕೇಳುತ್ತೀರಿ.

7 ನೀವೀಗ ಎಫೆಸ 5:3ರಲ್ಲಿರುವ ಪೌಲನ ಈ ಸಲಹೆಯ ಬಗ್ಗೆ ಯೋಚಿಸುತ್ತೀರಿ: “ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆ ಅಥವಾ ಲೋಭ ಇವುಗಳ ಪ್ರಸ್ತಾಪವೂ ನಿಮ್ಮಲ್ಲಿರಬಾರದು. ಇವುಗಳಿಂದ ದೂರವಿರುವುದು ಪವಿತ್ರ ಜನರಿಗೆ ಯೋಗ್ಯವಾದದ್ದಾಗಿದೆ.” ಫಿಲಿಪ್ಪಿ 4:8 (ಓದಿ)ರಲ್ಲಿ ಪೌಲನು ಕೊಟ್ಟಿರುವ ಬುದ್ಧಿವಾದವನ್ನೂ ನೀವು ಜ್ಞಾಪಿಸಿಕೊಳ್ಳುತ್ತೀರಿ. ಈ ದೇವಪ್ರೇರಿತ ಸಲಹೆಯ ಕುರಿತು ಧ್ಯಾನಿಸುವಾಗ ನೀವು ನಿಮ್ಮನ್ನೇ ಹೀಗೆ ಕೇಳಿಕೊಳ್ಳುತ್ತೀರಿ: ‘ನಾನು ಬೇಕುಬೇಕೆಂದೇ ಅಂಥ ಕಾರ್ಯಕ್ರಮಗಳಿಗೆ ನನ್ನ ಹೃದಮನಗಳನ್ನು ಒಡ್ಡಿಕೊಳ್ಳುವಲ್ಲಿ, ಚಾಚೂತಪ್ಪದೆ ದೇವರಿಗೆ ವಿಧೇಯತೆ ತೋರಿಸುವುದರ ಕುರಿತ ಯೇಸುವಿನ ಮಾದರಿಯನ್ನು ಅನುಸರಿಸಿದಂತಾಗುವುದೋ?’ ಈಗ ನೀವೇನು ಮಾಡುವಿರಿ? ಆ ಚಲನಚಿತ್ರವನ್ನು ನೋಡುವಿರೋ?

8. ಉಚ್ಚ ನೈತಿಕ ಹಾಗೂ ಆಧ್ಯಾತ್ಮಿಕ ಮಟ್ಟಗಳನ್ನು ನಾವೇಕೆ ಕಾಯ್ದುಕೊಳ್ಳಬೇಕು?

8 ಹಿಂಸಾತ್ಮಕ, ಅನೈತಿಕ ಮನೋರಂಜನೆಯ ರೂಪದಲ್ಲಿರುವ ದುಸ್ಸಹವಾಸವನ್ನು ಸೇರಿಸಿ ಬೇರೆಲ್ಲಾ ರೀತಿಯ ದುಸ್ಸಹವಾಸವು ನಮ್ಮ ಮೇಲೆ ಯಾವುದೇ ಪರಿಣಾಮಬೀರದು ಎಂದೆಣಿಸುತ್ತಾ ನಮ್ಮ ನೈತಿಕ ಹಾಗೂ ಆಧ್ಯಾತ್ಮಿಕ ಮಟ್ಟಗಳನ್ನು ಕೆಳಮಟ್ಟಕ್ಕಿಳಿಸುವುದು ದೊಡ್ಡ ತಪ್ಪಾಗಿರುವುದು. ಹಾಗೆ ಮಾಡುವ ಬದಲು, ಸೈತಾನನ ಮನೋಭಾವವನ್ನು ಪ್ರತಿಬಿಂಬಿಸುವ ಭ್ರಷ್ಟ ಪ್ರಭಾವಗಳಿಂದ ನಾವು ಸ್ವತಃ ನಮ್ಮನ್ನು ಮತ್ತು ನಮ್ಮ ಮಕ್ಕಳನ್ನು ಕಾಪಾಡಬೇಕು. ಕಂಪ್ಯೂಟರ್‌ ಬಳಕೆಗಾರರು ಕಂಪ್ಯೂಟರ್‌ನ ದತ್ತಾಂಶಗಳನ್ನು ಅಳಿಸಿಹಾಕಬಲ್ಲ, ಅದರ ಕೆಲಸವನ್ನು ಸ್ಥಗಿತಗೊಳಿಸಬಲ್ಲ ಮತ್ತು ಇಡೀ ಯಂತ್ರವನ್ನು ವ್ಯಾಪಿಸಿ ಅದರ ಮೂಲಕ ಇತರ ಕಂಪ್ಯೂಟರ್‌ಗಳ ಮೇಲೆ ದಾಳಿಮಾಡಬಲ್ಲ ಹಾನಿಕಾರಕ ವೈರಸ್‌ಗಳಿಂದ ಕಂಪ್ಯೂಟರನ್ನು ರಕ್ಷಿಸಲು ತುಂಬ ಕಷ್ಟಪಡುತ್ತಾರೆ. ಹೀಗಿರುವಾಗ, ಸೈತಾನನ “ತಂತ್ರೋಪಾಯಗಳ” ವಿರುದ್ಧ ನಮ್ಮನ್ನು ಕಾಪಾಡಿಕೊಳ್ಳಲು ನಾವು ಇದಕ್ಕಿಂತ ಹೆಚ್ಚು ಎಚ್ಚರದಿಂದಿರಬೇಕಲ್ಲವೇ?—ಎಫೆ. 6:11.

9. ಪ್ರತಿದಿನವೂ ಯೆಹೋವನಿಗೆ ವಿಧೇಯರಾಗಿರಲು ನಾವೇಕೆ ದೃಢಸಂಕಲ್ಪದಿಂದಿರಬೇಕು?

9 ನಾವು ವಿಷಯಗಳನ್ನು ಯೆಹೋವನ ಮಾರ್ಗಕ್ಕನುಸಾರ ಮಾಡುವೆವೋ ಇಲ್ಲವೋ ಎಂಬುದರ ಬಗ್ಗೆ ಹೆಚ್ಚುಕಡಿಮೆ ಪ್ರತಿದಿನ ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಆದರೆ ರಕ್ಷಣೆ ಪಡೆಯಬೇಕಾದರೆ ನಾವು ದೇವರಿಗೆ ವಿಧೇಯರಾಗಲೇಬೇಕು ಮತ್ತು ಆತನ ನೀತಿಯುತ ಮಟ್ಟಗಳಿಗನುಸಾರ ಜೀವಿಸಲೇಬೇಕು. ಈ ಸಂಬಂಧದಲ್ಲಿ, “ಮರಣವನ್ನು ಹೊಂದುವಷ್ಟರ ಮಟ್ಟಿಗೆ” ವಿಧೇಯನಾದ ಯೇಸುವಿನ ಮಾದರಿಯನ್ನು ಅನುಸರಿಸುವ ಮೂಲಕ ನಮ್ಮ ನಂಬಿಕೆ ಯಥಾರ್ಥವಾದದ್ದು ಎಂಬುದನ್ನು ತೋರಿಸುತ್ತೇವೆ. ನಮ್ಮ ನಂಬಿಗಸ್ತಿಕೆಯ ಮಾರ್ಗಕ್ರಮವನ್ನು ಯೆಹೋವನು ಖಂಡಿತ ಆಶೀರ್ವದಿಸುವನು. ಯೇಸು ಮಾತುಕೊಟ್ಟದ್ದು: “ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು.” (ಮತ್ತಾ. 24:13) ಹೀಗೆ ಮಾಡಲು ಖಂಡಿತವಾಗಿಯೂ ಯೇಸು ತೋರಿಸಿದಂಥ ನಿಜವಾದ ಧೈರ್ಯವನ್ನು ನಾವು ಬೆಳೆಸಿಕೊಳ್ಳುವುದು ಅಗತ್ಯ.—ಕೀರ್ತ. 31:24.

ಯೇಸು—ಧೈರ್ಯದ ಅತ್ಯುತ್ಕೃಷ್ಟ ಮಾದರಿ

10. ನಮ್ಮ ಮೇಲೆ ಯಾವ ರೀತಿಯ ಒತ್ತಡಗಳು ಬರಬಹುದು, ಮತ್ತು ನಾವು ಹೇಗೆ ಪ್ರತಿಕ್ರಿಯಿಸಬೇಕು?

10 ಇಂದು ಲೋಕದ ಮನೋಭಾವಗಳು ಮತ್ತು ನಡತೆ ನಮ್ಮ ಸುತ್ತಲೂ ವ್ಯಾಪಕವಾಗಿರುವುದರಿಂದ, ಅದರಿಂದ ಭ್ರಷ್ಟರಾಗದಿರಲು ನಮಗೆ ಧೈರ್ಯ ಬೇಕು. ಯೆಹೋವನ ನೀತಿಯುತ ಮಟ್ಟಗಳಿಂದ ದೂರಸರಿಯುವಂತೆ ಮಾಡಬಲ್ಲ ನೈತಿಕ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಒತ್ತಡಗಳನ್ನು ಕ್ರೈಸ್ತರು ಎದುರಿಸಬೇಕಾಗುತ್ತದೆ. ಅನೇಕರಿಗೆ ಕುಟುಂಬದವರ ವಿರೋಧವಿದೆ. ಕೆಲವು ದೇಶಗಳಲ್ಲಿ, ವಿಕಾಸವಾದವನ್ನು ಕಲಿಯಲು ಶೈಕ್ಷಣಿಕ ಸಂಸ್ಥೆಗಳು ಹೇರುತ್ತಿರುವ ಒತ್ತಡವು ಹೆಚ್ಚೆಚ್ಚಾಗುತ್ತಿದೆ ಮತ್ತು ನಾಸ್ತಿಕವಾದ ಕೂಡ ಹೆಚ್ಚು ಜನಪ್ರಿಯವಾಗುತ್ತಿದೆ. ಇಂಥ ಒತ್ತಡಗಳ ಎದುರಿನಲ್ಲಿ ನಾವು ಸುಮ್ಮನೆ ಕೈಕಟ್ಟಿ ಕುಳಿತಿರಲು ಸಾಧ್ಯವಿಲ್ಲ. ಅವುಗಳನ್ನು ಪ್ರತಿರೋಧಿಸಲು ಮತ್ತು ಹೀಗೆ ನಮ್ಮನ್ನೇ ಕಾಪಾಡಿಕೊಳ್ಳಲು ಕ್ರಮಗೈಯಲೇಬೇಕು. ನಾವಿದರಲ್ಲಿ ಯಶಸ್ವಿಗಳಾಗುವುದು ಹೇಗೆಂಬುದನ್ನು ಯೇಸುವಿನ ಮಾದರಿ ತೋರಿಸುತ್ತದೆ.

11. ಕ್ರಿಸ್ತನ ಮಾದರಿಯನ್ನು ಮನನ ಮಾಡುವುದು ನಮಗೆ ಹೇಗೆ ಹೆಚ್ಚಿನ ಧೈರ್ಯ ಕೊಡುವುದು?

11 ಯೇಸು ತನ್ನ ಶಿಷ್ಯರಿಗಂದದ್ದು: “ಲೋಕದಲ್ಲಿ ನಿಮಗೆ ಸಂಕಟವಿರುವುದು, ಆದರೆ ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾ. 16:33) ಲೋಕದ ಪ್ರಭಾವಕ್ಕೆ ಅವನೆಂದೂ ಮಣಿಯಲಿಲ್ಲ. ಸಾರುವ ನೇಮಕವನ್ನು ಪೂರೈಸುವುದರಿಂದ ಅವನನ್ನು ತಡೆಯಲು ಲೋಕವು ಪ್ರಯತ್ನಿಸಿದರೂ ಅದಕ್ಕವನು ಆಸ್ಪದಕೊಡಲಿಲ್ಲ. ಅಥವಾ ಲೋಕವು, ಸತ್ಯಾರಾಧನೆ ಮತ್ತು ಯೋಗ್ಯ ನಡತೆಯ ವಿಷಯದಲ್ಲಿ ತನ್ನ ಮಟ್ಟಗಳನ್ನು ಕೆಳಕ್ಕಿಳಿಸುವಂತೆಯೂ ಅವನು ಬಿಡಲಿಲ್ಲ. ನಾವು ಕೂಡ ಅವನಂತಿರಬೇಕು. ಪ್ರಾರ್ಥನೆಯಲ್ಲಿ ಯೇಸು ತನ್ನ ಶಿಷ್ಯರ ಬಗ್ಗೆ ಹೇಳಿದ್ದು: “ನಾನು ಲೋಕದ ಭಾಗವಾಗಿಲ್ಲದ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲ.” (ಯೋಹಾ. 17:16) ಧೈರ್ಯ ತೋರಿಸುವುದರಲ್ಲಿ ಕ್ರಿಸ್ತನಿಟ್ಟ ಮಾದರಿಯನ್ನು ಅಧ್ಯಯನ ಮಾಡಿ, ಮನನ ಮಾಡುವುದು ಲೋಕದಿಂದ ಪ್ರತ್ಯೇಕರಾಗಿರುವಂತೆ ಬೇಕಾದ ಧೈರ್ಯವನ್ನು ನಮಗೆ ಕೊಡುವುದು.

ಯೇಸುವಿನಿಂದ ಧೈರ್ಯವನ್ನು ಕಲಿಯಿರಿ

12-14. ಯೇಸು ಧೈರ್ಯವನ್ನು ತೋರಿಸಿದ್ದರ ಕುರಿತ ಉದಾಹರಣೆಗಳನ್ನು ಕೊಡಿ.

12 ಯೇಸು ತನ್ನ ಶುಶ್ರೂಷೆಯಾದ್ಯಂತ ಅಸಾಮಾನ್ಯ ಧೈರ್ಯ ತೋರಿಸಿದನು. ದೇವರ ಮಗನಾಗಿ ತನಗಿದ್ದ ಅಧಿಕಾರವನ್ನು ನಿರ್ಭೀತಿಯಿಂದ ಬಳಸುತ್ತಾ ಅವನು, “ದೇವಾಲಯವನ್ನು ಪ್ರವೇಶಿಸಿ ಅದರೊಳಗೆ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದನು ಮತ್ತು ಹಣವಿನಿಮಯಗಾರರ ಮೇಜುಗಳನ್ನು ಹಾಗೂ ಪಾರಿವಾಳಗಳನ್ನು ಮಾರುತ್ತಿದ್ದವರ ಕಾಲ್ಮಣೆಗಳನ್ನು ಕೆಡವಿದನು.” (ಮತ್ತಾ. 21:12) ಯೇಸು ಸಾಯುವುದಕ್ಕೆ ಮುಂಚಿನ ರಾತ್ರಿಯಂದು ಸೈನಿಕರು ಅವನನ್ನು ಬಂಧಿಸಲು ಬಂದಾಗ ಅವನು ತನ್ನ ಶಿಷ್ಯರನ್ನು ರಕ್ಷಿಸಲಿಕ್ಕಾಗಿ ಧೈರ್ಯದಿಂದ ಮುಂದೆ ಬಂದು, “ನೀವು ನನ್ನನ್ನು ಹುಡುಕುತ್ತಿರುವುದಾದರೆ ಇವರನ್ನು ಹೋಗಲು ಬಿಡಿರಿ” ಎಂದು ಹೇಳಿದನು. (ಯೋಹಾ. 18:8) ಕೆಲವು ಕ್ಷಣಗಳ ನಂತರ, ಅವನು ಪೇತ್ರನಿಗೆ ಅವನ ಕತ್ತಿಯನ್ನು ಒರೆಯಲ್ಲಿ ಸೇರಿಸುವಂತೆ ಹೇಳಿದನು. ಹೀಗೆ ತನ್ನ ಭರವಸೆಯ ಮೂಲ, ಮಾನವನಿರ್ಮಿತ ಆಯುಧಗಳಲ್ಲ ಬದಲಾಗಿ ಯೆಹೋವನೇ ಎಂದು ತೋರಿಸಿದನು.—ಯೋಹಾ. 18:11.

13 ಯೇಸು ತನ್ನ ದಿನಗಳಲ್ಲಿದ್ದ ಪ್ರೀತಿರಹಿತ ಸುಳ್ಳು ಬೋಧಕರನ್ನೂ ಅವರ ಸುಳ್ಳು ಬೋಧನೆಗಳನ್ನೂ ನಿರ್ಭೀತಿಯಿಂದ ಬಯಲುಪಡಿಸಿದನು. ಅವನು ಅವರಿಗಂದದ್ದು: “ಕಪಟಿಗಳಾದ ಶಾಸ್ತ್ರಿಗಳೇ ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಮನುಷ್ಯರ ಮುಂದೆ ಸ್ವರ್ಗದ ರಾಜ್ಯವನ್ನು ಮುಚ್ಚಿಬಿಡುತ್ತೀರಿ. . . . ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ನ್ಯಾಯ, ಕರುಣೆ ಮತ್ತು ನಂಬಿಗಸ್ತಿಕೆಯಂಥ ಪ್ರಾಮುಖ್ಯ ವಿಷಯಗಳನ್ನು ನೀವು ಕಡೆಗಣಿಸಿದ್ದೀರಿ. . . . ನೀವು ಲೋಟ ಮತ್ತು ಬಟ್ಟಲಿನ ಹೊರಭಾಗವನ್ನು ಮಾತ್ರ ಶುಚಿಮಾಡುತ್ತೀರಿ, ಆದರೆ ಒಳಗೆ ಅವು ಸುಲಿಗೆಯಿಂದಲೂ ಅತಿರೇಕದಿಂದಲೂ ತುಂಬಿರುತ್ತವೆ.” (ಮತ್ತಾ. 23:13, 23, 25) ಯೇಸುವಿನ ಶಿಷ್ಯರಿಗೂ ತದ್ರೀತಿಯ ಧೈರ್ಯದ ಅವಶ್ಯಕತೆಯಿತ್ತು. ಏಕೆಂದರೆ ಸುಳ್ಳು ಧಾರ್ಮಿಕ ನಾಯಕರು ಅವರನ್ನೂ ಹಿಂಸಿಸಲಿದ್ದರು ಮತ್ತು ಅವರಲ್ಲಿ ಕೆಲವರನ್ನು ಕೊಲ್ಲಲಿದ್ದರು ಸಹ.—ಮತ್ತಾ. 23:34; 24:9.

14 ಯೇಸು ದೆವ್ವಗಳ ವಿರುದ್ಧವೂ ಧೈರ್ಯಭರಿತ ನಿಲುವನ್ನು ತೆಗೆದುಕೊಂಡನು. ಒಂದು ಸಂದರ್ಭದಲ್ಲಿ, ದೆವ್ವಹಿಡಿದಿದ್ದ ಮನುಷ್ಯನೊಬ್ಬನು ಅವನಿಗೆ ಎದುರಾದನು. ಅವನೆಷ್ಟು ಬಲಿಷ್ಠನಾಗಿದ್ದನೆಂದರೆ, ಅಷ್ಟರತನಕ ಯಾರಿಗೂ ಅವನನ್ನು ಸರಪಣಿಯಿಂದ ಕಟ್ಟಿಹಾಕಲೂ ಸಾಧ್ಯವಾಗಿರಲಿಲ್ಲ. ಯೇಸು ಹೆದರದೆ, ಆ ಮನುಷ್ಯನನ್ನು ಹತೋಟಿಯಲ್ಲಿಟ್ಟುಕೊಂಡ ಆ ಹಲವಾರು ದೆವ್ವಗಳನ್ನು ಹೊರಡಿಸಿಬಿಟ್ಟನು. (ಮಾರ್ಕ 5:1-13) ಇಂದು, ಇಂಥ ಅದ್ಭುತಗಳನ್ನು ಮಾಡುವ ಶಕ್ತಿಯನ್ನು ದೇವರು ಕ್ರೈಸ್ತರಿಗೆ ಕೊಟ್ಟಿಲ್ಲ. ಆದರೂ ನಮ್ಮ ಸಾರುವ ಮತ್ತು ಬೋಧಿಸುವ ಕೆಲಸದಲ್ಲಿ ನಮಗೆ, ‘ಅವಿಶ್ವಾಸಿಗಳ ಮನಸ್ಸನ್ನು ಕುರುಡುಮಾಡಿರುವ’ ಸೈತಾನನ ವಿರುದ್ಧ ಆಧ್ಯಾತ್ಮಿಕ ಯುದ್ಧವನ್ನು ಹೋರಾಡಲಿಕ್ಕಿದೆ. (2 ಕೊರಿಂ. 4:4) ಯೇಸುವಿನಂತೆಯೇ ನಮ್ಮ ಆಯುಧಗಳು, “ಶಾರೀರಿಕವಾದವುಗಳಾಗಿರದೆ ಬಲವಾಗಿ ಬೇರೂರಿರುವ ವಿಷಯಗಳನ್ನು” ಅಂದರೆ, ಆಳವಾಗಿ ಬೇರುಬಿಟ್ಟಿರುವ ಧಾರ್ಮಿಕ ತಪ್ಪುಕಲ್ಪನೆಗಳನ್ನು “ಕೆಡವಿಹಾಕಲು ದೇವರಿಂದ ಶಕ್ತಿಯನ್ನು ಹೊಂದಿದವುಗಳಾಗಿವೆ.” (2 ಕೊರಿಂ. 10:4) ದೇವರು ಕೊಟ್ಟಿರುವ ಈ ಆಯುಧಗಳನ್ನು ಬಳಸುವ ರೀತಿಯ ಬಗ್ಗೆ ನಾವು ಯೇಸುವಿನ ಮಾದರಿಯಿಂದ ಬಹಳಷ್ಟನ್ನು ಕಲಿಯಬಲ್ಲೆವು.

15. ಯೇಸುವಿನ ಧೈರ್ಯ ಯಾವುದರ ಮೇಲೆ ಆಧರಿತವಾಗಿತ್ತು?

15 ಯೇಸುವಿನ ಧೈರ್ಯ ಶೌರ್ಯದ ಮೇಲಲ್ಲ, ಬದಲಾಗಿ ನಂಬಿಕೆಯ ಮೇಲೆ ಆಧರಿತವಾಗಿತ್ತು. ನಮ್ಮ ಧೈರ್ಯವೂ ಹಾಗೆಯೇ ಇರಬೇಕು. (ಮಾರ್ಕ 4:40) ನಿಜ ನಂಬಿಕೆಯನ್ನು ನಾವು ಹೇಗೆ ಪಡೆಯಬಲ್ಲೆವು? ಇಲ್ಲಿಯೂ ಯೇಸುವಿನ ಮಾದರಿ ನಮ್ಮನ್ನು ಮಾರ್ಗದರ್ಶಿಸುತ್ತದೆ. ಶಾಸ್ತ್ರವಚನಗಳ ಬಗ್ಗೆ ತನಗಿದ್ದ ಪೂರ್ಣ ಜ್ಞಾನ ಮತ್ತು ಅವುಗಳಲ್ಲಿ ತನಗಿದ್ದ ಪೂರ್ಣ ಭರವಸೆಯನ್ನು ಅವನು ತೋರಿಸಿದನು. ಅವನು ಆಯುಧವಾಗಿ ಬಳಸಿದ್ದು ಅಕ್ಷರಾರ್ಥಕ ಕತ್ತಿಯನ್ನಲ್ಲ ಬದಲಾಗಿ ಪವಿತ್ರಾತ್ಮದ ಕತ್ತಿಯಾದ ದೇವರ ವಾಕ್ಯವನ್ನೇ. ಆಗಿಂದಾಗ್ಗೆ ಶಾಸ್ತ್ರವಚನಗಳಿಗೆ ಸೂಚಿಸಿ ಮಾತಾಡುವ ಮೂಲಕ ಅವನು ತನ್ನ ಬೋಧನೆಗಳಿಗೆ ಆಧಾರಕೊಟ್ಟನು. ಅವನು ಮಾತಾಡುತ್ತಿದ್ದಾಗಲೆಲ್ಲ ಹೆಚ್ಚಿನ ಬಾರಿ, “ಎಂದು ಬರೆದಿದೆ” ಎನ್ನುವ ಮೂಲಕ ದೇವರ ವಾಕ್ಯಕ್ಕೆ ಸೂಚಿಸುತ್ತಿದ್ದನು. *

16. ನಾವು ಹೆಚ್ಚಿನ ನಂಬಿಕೆಯನ್ನು ಹೇಗೆ ಪಡೆಯಬಲ್ಲೆವು?

16 ಯೇಸುವಿನ ಶಿಷ್ಯರಾಗಿರುವುದರಿಂದ ನಮಗೆ ಖಂಡಿತ ಪರೀಕ್ಷೆಗಳು ಬರುವವು. ಅವುಗಳನ್ನು ಎದುರಿಸಲು ಬೇಕಾದ ನಂಬಿಕೆಯನ್ನು ಬೆಳೆಸಿಕೊಳ್ಳಲು ನಾವು ದಿನಾಲೂ ಬೈಬಲನ್ನು ಓದಿ ಅಧ್ಯಯನ ಮಾಡಬೇಕು ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗಬೇಕು. ಹೀಗೆ ನಂಬಿಕೆಗೆ ಆಧಾರವಾಗಿರುವ ಸತ್ಯಗಳನ್ನು ನಮ್ಮ ಮನಸ್ಸಿನಲ್ಲಿ ತುಂಬಿಸಬೇಕು. (ರೋಮ. 10:17) ನಾವೇನನ್ನು ಕಲಿಯುತ್ತೇವೋ ಅದನ್ನು ಧ್ಯಾನಿಸಲೂ ಬೇಕು ಅಂದರೆ ಗಾಢವಾಗಿ ಮನನ ಮಾಡಬೇಕು. ಹೀಗೆ ಅದು ನಮ್ಮ ಹೃದಯಕ್ಕಿಳಿಯುವಂತೆ ಬಿಡಬೇಕು. ಸಜೀವವಾದ ನಂಬಿಕೆ ಮಾತ್ರ ಧೈರ್ಯದಿಂದ ಕೆಲಸಮಾಡುವಂತೆ ನಮ್ಮನ್ನು ಪ್ರೇರಿಸಬಲ್ಲದು. (ಯಾಕೋ. 2:17) ಅಷ್ಟುಮಾತ್ರವಲ್ಲದೆ ನಾವು ಪವಿತ್ರಾತ್ಮಕ್ಕಾಗಿಯೂ ಬೇಡಿಕೊಳ್ಳಬೇಕು ಏಕೆಂದರೆ ನಂಬಿಕೆಯು ಪವಿತ್ರಾತ್ಮದ ಫಲದ ಭಾಗವಾಗಿದೆ.—ಗಲಾ. 5:22.

17, 18. ಒಬ್ಬಾಕೆ ಯುವ ಸಹೋದರಿ ಶಾಲೆಯಲ್ಲಿ ಹೇಗೆ ಧೈರ್ಯ ತೋರಿಸಿದಳು?

17 ಕಿಟ್ಟಿ ಎಂಬ ಹೆಸರಿನ ಯುವ ಸಹೋದರಿಯೊಬ್ಬಳು, ನಿಜ ನಂಬಿಕೆ ಹೇಗೆ ಧೈರ್ಯ ಕೊಡುತ್ತದೆಂಬುದನ್ನು ಅನುಭವದಿಂದ ಕಂಡುಕೊಂಡಳು. ಶಾಲೆಯಲ್ಲಿ ತಾನು ‘ಸುವಾರ್ತೆಯ ವಿಷಯದಲ್ಲಿ ನಾಚಿಕೆಪಡಬಾರದು’ ಎಂಬುದು ಆಕೆಗೆ ಚಿಕ್ಕ ಪ್ರಾಯದಿಂದಲೂ ಗೊತ್ತಿತ್ತು. ತನ್ನ ಸಹಪಾಠಿಗಳಿಗೆ ಉತ್ತಮ ಸಾಕ್ಷಿಕೊಡಲು ಆಕೆಗೆ ನಿಜವಾಗಿಯೂ ಮನಸ್ಸಿತ್ತು. (ರೋಮ. 1:16) ಪ್ರತಿ ವರ್ಷ ಆಕೆ ಸುವಾರ್ತೆ ಸಾರಲು ದೃಢಸಂಕಲ್ಪ ಮಾಡುತ್ತಿದ್ದಳಾದರೂ, ಮಾತಾಡಲು ಹಿಂದೇಟುಹಾಕುತ್ತಿದ್ದಳು. ಆಕೆಗೆ ಧೈರ್ಯ ಸಾಲುತ್ತಿರಲಿಲ್ಲ. ಕೆಲವು ವರ್ಷಗಳ ನಂತರ ಆಕೆ ತನ್ನ ಶಾಲೆಯನ್ನು ಬದಲಾಯಿಸಿದಳು. ಆಕೆ ಹೇಳಿದ್ದು: “ಕೈಜಾರಿ ಹೋಗುವಂತೆ ಬಿಟ್ಟ ಅವಕಾಶಗಳನ್ನು ನಾನು ಈ ಸಲ ಖಂಡಿತ ಬಳಸುತ್ತೇನೆ.” ಕ್ರಿಸ್ತಸದೃಶ ಧೈರ್ಯಕ್ಕಾಗಿ, ವಿವೇಚನೆಗಾಗಿ ಮತ್ತು ಸೂಕ್ತ ಅವಕಾಶಕ್ಕಾಗಿ ಕಿಟ್ಟಿ ಪ್ರಾರ್ಥಿಸಿದಳು.

18 ಶಾಲೆಯ ಪ್ರಥಮ ದಿನದಂದು, ತಮ್ಮನ್ನು ಪರಿಚಯಿಸಿಕೊಳ್ಳುವಂತೆ ಪ್ರತಿ ವಿದ್ಯಾರ್ಥಿಯನ್ನು ಕೇಳಲಾಯಿತು. ಅನೇಕರು ತಮ್ಮ ಧಾರ್ಮಿಕ ಹಿನ್ನೆಲೆಯನ್ನು ತಿಳಿಸಿ, ತಮ್ಮ ಧರ್ಮವನ್ನು ತಾವು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲವೆಂದು ಹೇಳಿದರು. ತಾನು ಯಾವ ಅವಕಾಶಕ್ಕಾಗಿ ಪ್ರಾರ್ಥಿಸಿದ್ದೆನೋ ಅದು ತನಗೆ ದಕ್ಕಿದೆ ಎಂಬುದನ್ನು ಕಿಟ್ಟಿ ಗ್ರಹಿಸಿದಳು. ತನ್ನ ಸರದಿ ಬಂದಾಗ ಆಕೆ ಆತ್ಮವಿಶ್ವಾಸದಿಂದ, “ನಾನು ಯೆಹೋವನ ಸಾಕ್ಷಿ. ಆಧ್ಯಾತ್ಮಿಕ ಮತ್ತು ನೈತಿಕ ವಿಷಯಗಳಲ್ಲಿ ನನ್ನ ಮಾರ್ಗದರ್ಶಿ ಬೈಬಲೇ” ಎಂದು ಹೇಳಿದಳು. ಆಕೆ ಮಾತಾಡುವುದನ್ನು ಮುಂದುವರಿಸಿದಾಗ ಕೆಲವು ವಿದ್ಯಾರ್ಥಿಗಳು ಆಕೆಯ ನಂಬಿಕೆ ಹುಚ್ಚುತನವಾಗಿದೆ ಎಂದು ತಮ್ಮ ಮುಖಭಾವದಿಂದ ತೋರಿಸಿದರು. ಆದರೆ ಇತರರು ಗಮನಕೊಟ್ಟು ಆಲಿಸಿದರು ಮತ್ತು ತದನಂತರ ಪ್ರಶ್ನೆಗಳನ್ನು ಕೇಳಿದರು. ಒಬ್ಬ ವ್ಯಕ್ತಿ ತನ್ನ ನಂಬಿಕೆಗಳನ್ನು ಹೇಗೆ ಸಮರ್ಥಿಸಬೇಕೆಂಬುದನ್ನು ಕಿಟ್ಟಿಯಿಂದ ಕಲಿತುಕೊಳ್ಳಬೇಕೆಂದು ಅಧ್ಯಾಪಕನು ಹೇಳಿದನು. ಧೈರ್ಯ ತೋರಿಸುವುದರಲ್ಲಿ ಯೇಸುವಿಟ್ಟ ಮಾದರಿಯಿಂದ ಕಲಿತುಕೊಂಡದ್ದಕ್ಕಾಗಿ ಕಿಟ್ಟಿ ತುಂಬ ಸಂತೋಷಪಡುತ್ತಾಳೆ.

ಕ್ರಿಸ್ತಸದೃಶ ನಂಬಿಕೆ ಮತ್ತು ಧೈರ್ಯ ತೋರಿಸಿ

19. (ಎ) ನಿಜ ನಂಬಿಕೆಯನ್ನು ಹೊಂದಿರುವುದರಲ್ಲಿ ಏನು ಸೇರಿದೆ? (ಬಿ) ನಾವು ಯೆಹೋವನನ್ನು ಹೇಗೆ ಸಂತೋಷಪಡಿಸಬಹುದು?

19 ಅಪೊಸ್ತಲರೂ, ತಮ್ಮ ಧೈರ್ಯಭರಿತ ಕ್ರಿಯೆಗಳು ನಂಬಿಕೆಯ ಮೇಲೆ ಆಧರಿತವಾಗಿರಬೇಕೆಂದು ಗ್ರಹಿಸಿದರು. “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು” ಎಂದು ಅವರು ಯೇಸುವಿನ ಬಳಿ ಬೇಡಿಕೊಂಡರು. (ಲೂಕ 17:5, 6 ಓದಿ.) ದೇವರಿದ್ದಾನೆ ಎಂದು ನಂಬುವುದಷ್ಟೇ ನಿಜ ನಂಬಿಕೆಯಲ್ಲ. ಒಂದು ಚಿಕ್ಕ ಮಗುವಿಗೆ ದಯಾಪರ, ಪ್ರೀತಿಯುಳ್ಳ ತಂದೆಯೊಂದಿಗಿರುವಂಥ ರೀತಿಯ ಗಾಢವಾದ ಮತ್ತು ಭರವಸೆ ತುಂಬಿದ ಸಂಬಂಧವನ್ನು ನಾವು ಯೆಹೋವನೊಂದಿಗೆ ಬೆಳೆಸಿಕೊಳ್ಳುವುದು ನಿಜ ನಂಬಿಕೆಯಲ್ಲಿ ಸೇರಿದೆ. ದೇವಪ್ರೇರಣೆಯಿಂದ ಸೊಲೊಮೋನನು ಬರೆದದ್ದು: “ಕಂದಾ, ನಿನ್ನ ಮನಸ್ಸಿಗೆ ಜ್ಞಾನವುಂಟಾದರೆ ನನ್ನ ಮನಸ್ಸಿಗೂ ಉಲ್ಲಾಸವಾಗುವದು. ಹೌದು, ನಿನ್ನ ತುಟಿಗಳು ನೀತಿಯನ್ನಾಡಿದರೆ ನನ್ನ ಅಂತರಾತ್ಮವು ಹಿಗ್ಗುವದು.” (ಜ್ಞಾನೋ. 23:15, 16) ಹಾಗೆಯೇ, ನೀತಿಯುತ ಮೂಲತತ್ತ್ವಗಳನ್ನು ಪಾಲಿಸಲು ನಾವು ತೆಗೆದುಕೊಳ್ಳುವ ಧೈರ್ಯಭರಿತ ನಿಲುವು ಯೆಹೋವನಿಗೆ ಸಂತೋಷವನ್ನು ತರುತ್ತದೆ ಮತ್ತು ಈ ಸಂಗತಿಯ ಅರಿವು ನಮ್ಮ ಧೈರ್ಯವನ್ನೂ ಹೆಚ್ಚಿಸುತ್ತದೆ. ಆದ್ದರಿಂದ ಯಾವಾಗಲೂ ಯೇಸುವಿನ ಮಾದರಿಯನ್ನು ಅನುಕರಿಸುತ್ತಾ ನೀತಿಗಾಗಿ ಧೈರ್ಯಭರಿತ ನಿಲುವನ್ನು ತೆಗೆದುಕೊಳ್ಳೋಣ!

[ಪಾದಟಿಪ್ಪಣಿ]

ನೀವು ವಿವರಿಸಬಲ್ಲಿರೋ?

• ಅಪರಿಪೂರ್ಣರಾಗಿದ್ದರೂ ವಿಧೇಯರಾಗಿ ಉಳಿಯಲು ನಮಗೆ ಯಾವುದು ಸಹಾಯ ಮಾಡಬಲ್ಲದು?

• ನಿಜ ನಂಬಿಕೆ ಯಾವುದರ ಮೇಲೆ ಆಧರಿತವಾಗಿದೆ, ಮತ್ತು ಅದು ನಮಗೆ ಧೈರ್ಯದಿಂದಿರುವಂತೆ ಹೇಗೆ ಸಹಾಯ ಮಾಡಬಲ್ಲದು?

• ನಾವು ವಿಧೇಯತೆ ಮತ್ತು ಕ್ರಿಸ್ತಸದೃಶ ಧೈರ್ಯ ತೋರಿಸುವಾಗ ಫಲಿತಾಂಶ ಏನಾಗಿರುವುದು?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ಶೋಧನೆಗಳನ್ನು ಪ್ರತಿರೋಧಿಸಲು ನೀವು ‘ನಿಮ್ಮ ಹೃದಯವನ್ನು ಸಿದ್ಧಪಡಿಸುತ್ತಿದ್ದೀರೋ?’

[ಪುಟ 15ರಲ್ಲಿರುವ ಚಿತ್ರ]

ಯೇಸುವಿನಂತೆಯೇ ನಾವು ನಂಬಿಕೆಯ ಮೇಲಾಧರಿತವಾದ ಧೈರ್ಯವನ್ನು ತೋರಿಸಬಲ್ಲೆವು