ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಮ್ಮಿಂದ ಏನು ಕೇಳಿಕೊಳ್ಳುತ್ತಾನೆ?

ಯೆಹೋವನು ನಮ್ಮಿಂದ ಏನು ಕೇಳಿಕೊಳ್ಳುತ್ತಾನೆ?

ದೇವರ ಸಮೀಪಕ್ಕೆ ಬನ್ನಿರಿ

ಯೆಹೋವನು ನಮ್ಮಿಂದ ಏನು ಕೇಳಿಕೊಳ್ಳುತ್ತಾನೆ?

ಧರ್ಮೋಪದೇಶಕಾಂಡ 10:12, 13

ವಿಧೇಯನಾಗಬೇಕೋ ಬೇಡವೋ? ಈ ನಿರ್ಣಯಮಾಡುವುದು ಯಾವಾಗಲೂ ಸುಲಭವಲ್ಲ. ದಬ್ಬಾಳಿಕೆ ಮಾಡುವ ನಿರ್ದಯಿ ಅಧಿಕಾರಿಯೊಬ್ಬನಿಗೆ ಅವನ ಕೈಕೆಳಗಿರುವವರು ವಿಧೇಯತೆ ತೋರಿಸಬಹುದು ನಿಜ. ಆದರೆ ಒಲ್ಲದ ಮನಸ್ಸಿನಿಂದ. ಯೆಹೋವ ದೇವರಾದರೋ ತನ್ನ ಆರಾಧಕರು ಸ್ವಇಚ್ಛೆಯಿಂದ ತನಗೆ ವಿಧೇಯರಾಗಬೇಕೆಂದು ಬಯಸುತ್ತಾನೆ. ಏಕೆ? ಉತ್ತರಕ್ಕಾಗಿ ಬೈಬಲಿನ ಧರ್ಮೋಪದೇಶಕಾಂಡ 10:12, 13ರಲ್ಲಿರುವ ಮೋಶೆಯ ಮಾತುಗಳನ್ನು ನಾವೀಗ ಪರಿಗಣಿಸೋಣ. *

ದೇವರು ಅವಶ್ಯಪಡಿಸುವ ವಿಷಯಗಳನ್ನು ಮೋಶೆ ಸಾರಾಂಶಿಸುವಾಗ, “ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಬೇರೇನು ಕೇಳಿಕೊಳ್ಳುತ್ತಾನೆ?” ಎಂಬ ಆಸಕ್ತಿಕರ ಪ್ರಶ್ನೆ ಕೇಳಿದನು. (ವಚನ 13) ದೇವರಿಗೆ ನಮ್ಮಿಂದ ಏನನ್ನು ಬೇಕಾದರೂ ಕೇಳುವ ಹಕ್ಕಿದೆ. ಏಕೆಂದರೆ ಆತನೇ ಪರಮಾಧಿಕಾರಿ ಪ್ರಭು, ನಮ್ಮ ಜೀವದಾತ, ಜೀವಪೋಷಕ ಆಗಿದ್ದಾನೆ. (ಕೀರ್ತನೆ 36:9; ಯೆಶಾಯ 33:22) ವಿಧೇಯರಾಗುವಂತೆ ಹೇಳಲು ದೇವರಿಗೆ ಹಕ್ಕಿರುವುದಾದರೂ ನಾವು ಒತ್ತಾಯದಿಂದ ವಿಧೇಯರಾಗಬೇಕೆಂದು ಆತನು ಬಯಸುವುದಿಲ್ಲ. ಆತನು ಏನು ಬಯಸುತ್ತಾನೆ? ನಾವು “ಹೃದಯದಿಂದ ವಿಧೇಯ”ರಾಗಬೇಕೆಂದೇ.—ರೋಮನ್ನರಿಗೆ 6:17.

ಸ್ವಇಚ್ಛೆಯಿಂದ ದೇವರಿಗೆ ವಿಧೇಯರಾಗುವಂತೆ ನಮ್ಮನ್ನು ಯಾವುದು ಪ್ರಚೋದಿಸುತ್ತದೆ? ಒಂದು ಅಂಶವನ್ನು ಮೋಶೆ ಹೀಗೆ ತಿಳಿಸುತ್ತಾನೆ: ‘ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರಿ.’ * (ವಚನ 12) ಈ ಭಯವು ಅಹಿತಕರ ಭೀತಿಯಲ್ಲ, ಬದಲಾಗಿ ದೇವರ ಮತ್ತು ಆತನ ಮಾರ್ಗಗಳ ಕಡೆಗೆ ಹಿತಕರವಾದ ಭಕ್ತಿಪೂರ್ವಕ ಗೌರವವಾಗಿದೆ. ನಮ್ಮಲ್ಲಿ ಆ ರೀತಿಯ ಅಪಾರ ಭಯಭಕ್ತಿಯಿರುವಲ್ಲಿ ದೇವರ ಮನನೋಯಿಸದಿರುವೆವು.

ಆದರೆ ನಾವು ದೇವರಿಗೆ ವಿಧೇಯರಾಗುವ ಪ್ರಧಾನ ಕಾರಣ ಏನಾಗಿರಬೇಕು? ‘ಯೆಹೋವನನ್ನು ಪ್ರೀತಿಸುತ್ತಾ ಸಂಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡುತ್ತಾ ಇರಿ’ ಎನ್ನುತ್ತಾನೆ ಮೋಶೆ. (ವಚನ 12) ದೇವರನ್ನು ಪ್ರೀತಿಸುವುದರಲ್ಲಿ ಕೇವಲ ಭಾವನೆಗಳು ಕೂಡಿಲ್ಲ. ಒಂದು ಪರಾಮರ್ಶೆ ಕೃತಿ ವಿವರಿಸುವುದು: “ಹೀಬ್ರು ಭಾಷೆಯಲ್ಲಿ ಭಾವನೆಗಳಿಗೆ ಬಳಸಲಾಗಿರುವ ಕ್ರಿಯಾ ಪದಗಳು ಭಾವನೆಗಳಿಂದ ಪ್ರಚೋದಿತವಾದ ಕ್ರಿಯೆಗಳನ್ನೂ ಸೂಚಿಸುತ್ತವೆ.” ದೇವರನ್ನು ಪ್ರೀತಿಸುವುದೆಂದರೆ ಆ “ಪ್ರೀತಿಯನ್ನು ಕ್ರಿಯೆಗಳಲ್ಲಿ ತೋರಿಸುವುದಾಗಿದೆ” ಎನ್ನುತ್ತದೆ ಆ ಕೃತಿ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ನಾವು ನಿಜವಾಗಿಯೂ ದೇವರನ್ನು ಪ್ರೀತಿಸುವಲ್ಲಿ ಆತನು ಮೆಚ್ಚುವ ರೀತಿಯಲ್ಲೇ ನಡೆಯುವೆವು.—ಜ್ಞಾನೋಕ್ತಿ 27:11.

ನಾವು ಎಷ್ಟರ ಮಟ್ಟಿಗೆ ದೇವರಿಗೆ ವಿಧೇಯರಾಗಿರಬೇಕು? ಮೋಶೆ ಹೇಳುವುದು: ‘ಎಲ್ಲಾ ವಿಷಯಗಳಲ್ಲಿಯೂ ದೇವರು ಹೇಳುವ ಮಾರ್ಗದಲ್ಲೇ ನಡೆಯುತ್ತಾ ಇರಿ.’ (ವಚನ 12) ಯೆಹೋವನು ನಮ್ಮಿಂದ ಕೇಳಿಕೊಳ್ಳುವುದೆಲ್ಲವನ್ನೂ ಮಾಡಬೇಕೆಂಬುದು ಆತನ ಇಚ್ಛೆ. ಇಂಥ ಸಂಪೂರ್ಣ ವಿಧೇಯತೆಯಿಂದ ನಮಗೆ ನಷ್ಟವಾದೀತೆ? ಅದಂತೂ ಅಸಾಧ್ಯ.

ನಾವು ಸ್ವಇಚ್ಛೆಯಿಂದ ತೋರಿಸುವ ವಿಧೇಯತೆ ಆಶೀರ್ವಾದಗಳನ್ನೇ ತರುತ್ತದೆ. ಮೋಶೆ ಬರೆದದ್ದು: ‘ನಾನು ನಿಮ್ಮ ಮೇಲಿಗಾಗಿ ಈಗ ಬೋಧಿಸುವ ಆತನ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಇರಿ.’ (ವಚನ 13) ಹೌದು, ಯೆಹೋವನ ಪ್ರತಿಯೊಂದು ಆಜ್ಞೆ ಅಂದರೆ ಆತನು ನಮ್ಮಿಂದ ಕೇಳಿಕೊಳ್ಳುವ ಪ್ರತಿಯೊಂದೂ ನಮ್ಮ ಒಳಿತಿಗಾಗಿಯೇ ಇದೆ. ಅದರಿಂದ ನಮಗೆ ಕೆಡುಕಾಗಲು ಸಾಧ್ಯವೇ ಇಲ್ಲ ಏಕೆಂದರೆ ಬೈಬಲ್‌ ತಿಳಿಸುವಂತೆ “ದೇವರು ಪ್ರೀತಿಯಾಗಿದ್ದಾನೆ.” (1 ಯೋಹಾನ 4:8) ಆತನು ಕೊಟ್ಟಿರುವ ಆಜ್ಞೆಗಳು ನಮಗೆ ನಿತ್ಯಕ್ಕೂ ಕ್ಷೇಮವನ್ನು ಉಂಟುಮಾಡುವಂಥವುಗಳೇ. (ಯೆಶಾಯ 48:17) ಯೆಹೋವನು ಹೇಳಿದ್ದೆಲ್ಲವನ್ನೂ ಮಾಡುವುದು ಇಂದು ನಮ್ಮನ್ನು ಅನೇಕ ಚಿಂತೆ, ಹತಾಶೆಗಳಿಂದ ಮುಕ್ತಗೊಳಿಸುತ್ತದೆ ಮತ್ತು ಮುಂದೆ ಆತನ ರಾಜ್ಯದಾಳಿಕೆಯ ಅಡಿಯಲ್ಲಿ ಅನಂತ ಆಶೀರ್ವಾದಗಳನ್ನು ತರುತ್ತದೆ. *

ಯೆಹೋವನ ಮಾತಿಗೆ ವಿಧೇಯರಾಗಬೇಕೋ ಬೇಡವೋ ಎಂಬ ಆಯ್ಕೆ ನಮ್ಮ ಮುಂದಿರುವಾಗ ಆತನಿಗೆ ಸ್ವಇಚ್ಛೆಯಿಂದ ಸಂಪೂರ್ಣವಾಗಿ ವಿಧೇಯರಾಗುವುದೇ ಯಾವಾಗಲೂ ಅತ್ಯುತ್ತಮ. ಅದೊಂದೇ ವಿವೇಕಯುತ ಆಯ್ಕೆಯೂ ಹೌದು. ಇಂಥ ನಂಬಿಗಸ್ತಿಕೆ, ಯಾವಾಗಲೂ ನಮಗೆ ಅತ್ಯುತ್ತಮವಾದದ್ದನ್ನೇ ಬಯಸುವ ಪ್ರೀತಿಭರಿತ ದೇವರಾದ ಯೆಹೋವನಿಗೆ ಇನ್ನಷ್ಟೂ ಆಪ್ತರನ್ನಾಗಿ ಮಾಡುತ್ತದೆ. (w09-E 10/01)

[ಪಾದಟಿಪ್ಪಣಿಗಳು]

^ ಪ್ಯಾರ. 4 ಆ ಮಾತುಗಳನ್ನು ಮೋಶೆ ಪ್ರಾಚೀನ ಇಸ್ರಾಯೇಲ್ಯರಿಗೆ ಹೇಳಿದ್ದರೂ ಅವು ಇಂದು ದೇವರನ್ನು ಮೆಚ್ಚಿಸ ಬಯಸುವವರೆಲ್ಲರಿಗೂ ಅನ್ವಯಿಸುತ್ತದೆ.—ರೋಮನ್ನರಿಗೆ 15:4.

^ ಪ್ಯಾರ. 6 ದೇವಭಯವು ದೇವಭಕ್ತರ ಬದುಕಿನ ಮಾರ್ಗದರ್ಶಿ ಸೂತ್ರವಾಗಿರಬೇಕೆಂದು ಮೋಶೆ ಧರ್ಮೋಪದೇಶಕಾಂಡ ಪುಸ್ತಕದಾದ್ಯಂತ ಒತ್ತಿಹೇಳುತ್ತಾನೆ.—ಧರ್ಮೋಪದೇಶಕಾಂಡ 4:10; 6:13, 24; 8:6; 13:4; 31:12, 13.

^ ಪ್ಯಾರ. 9 ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ “ಭೂಮಿಗಾಗಿ ದೇವರ ಉದ್ದೇಶವೇನು?” ಎಂಬ 3ನೇ ಅಧ್ಯಾಯ ನೋಡಿ.