ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು ಪ್ರಾಟೆಸ್ಟಂಟರೋ?

ಯೆಹೋವನ ಸಾಕ್ಷಿಗಳು ಪ್ರಾಟೆಸ್ಟಂಟರೋ?

ನಮ್ಮ ಓದುಗರ ಪ್ರಶ್ನೆ

ಯೆಹೋವನ ಸಾಕ್ಷಿಗಳು ಪ್ರಾಟೆಸ್ಟಂಟರೋ?

ಯೆಹೋವನ ಸಾಕ್ಷಿಗಳು ತಮ್ಮನ್ನು ಪ್ರಾಟೆಸ್ಟಂಟರೆಂದು ಪರಿಗಣಿಸುವುದಿಲ್ಲ. ಏಕೆ?

ಪ್ರಾಟೆಸ್ಟಂಟ್‌ ಧರ್ಮ ಯುರೋಪಿನಲ್ಲಿ 16ನೇ ಶತಮಾನದಲ್ಲಿ ತಲೆಯೆತ್ತಿತು. ಅದರ ಉದ್ದೇಶ ರೋಮನ್‌ ಕ್ಯಾಥೊಲಿಕ್‌ ಚರ್ಚನ್ನು ತಿದ್ದಿ ಸುಧಾರಿಸುವುದೇ ಆಗಿತ್ತು. ಇಸವಿ 1529ರಲ್ಲಿ ಸ್ಪೆಯರ್‌ ನಗರದಲ್ಲಿ ನಡೆದ ಮಹಾಸಭೆಯಲ್ಲಿ (ಡಯೆಟ್‌ ಆಫ್‌ ಸ್ಪೆಯರ್‌) ಮಾರ್ಟಿನ್‌ ಲೂಥರನ ಹಿಂಬಾಲಕರಿಗೆ “ಪ್ರಾಟೆಸ್ಟಂಟ್‌” ಎಂಬ ಹೆಸರನ್ನು ಮೊತ್ತಮೊದಲ ಬಾರಿ ಅನ್ವಯಿಸಲಾಗಿತ್ತು. ಅಂದಿನಿಂದ ಆ ಪದವನ್ನು ‘ಮತಸುಧಾರಣಾ ಕ್ರಾಂತಿಯ’ ತತ್ತ್ವ, ಧ್ಯೇಯಗಳನ್ನು ಪಾಲಿಸುವವರೆಲ್ಲರಿಗೆ ಅನ್ವಯಿಸಲಾಗುತ್ತಿದೆ. ಹೀಗಿರುವುದರಿಂದ “ನಂಬಿಕೆಯಿಂದ ಮಾತ್ರ ರಕ್ಷಣೆ ಸಾಧ್ಯ, ಯಾವ ವಿಶ್ವಾಸಿಯೂ ಪಾದ್ರಿಯಾಗಬಲ್ಲನು, ದೇವರ ಸತ್ಯದ ಏಕೈಕ ಮೂಲ ಬೈಬಲ್‌ ಆಗಿದೆ ಎಂಬ ಮತಸುಧಾರಣಾ ಕ್ರಾಂತಿಯ ತತ್ತ್ವಗಳಿಗೆ ಅಂಟಿಕೊಳ್ಳುವ ಹಾಗೂ ಪೋಪರ ಸಾರ್ವತ್ರಿಕ ಅಧಿಕಾರವನ್ನು ನಿರಾಕರಿಸುವ ಹಲವಾರು ಪಂಗಡಗಳಲ್ಲಿ ಯಾವುದೇ ಒಂದಕ್ಕೆ ಸೇರಿರುವ ಸದಸ್ಯನು” ಒಬ್ಬ ಪ್ರಾಟೆಸ್ಟಂಟ್‌ ಆಗಿದ್ದಾನೆಂದು ಮೆರ್ಯಮ್‌-ವೆಬ್‌ಸ್ಟರ್ಸ್‌ ಕಾಲಿಜೀಯೆಟ್‌ ಡಿಕ್ಷನೆರಿ 11ನೇ ಆವೃತ್ತಿ ಅರ್ಥನಿರೂಪಿಸುತ್ತದೆ.

ಯೆಹೋವನ ಸಾಕ್ಷಿಗಳು ಪೋಪನ ಸಾರ್ವತ್ರಿಕ ಅಧಿಕಾರವನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಬೈಬಲೇ ಸರ್ವೋತ್ಕೃಷ್ಟ ಎಂದು ಸಮರ್ಥಿಸುತ್ತಾರಾದರೂ ಅವರಿಗೂ ಪ್ರಾಟೆಸ್ಟಂಟ್‌ ಧರ್ಮಗಳಿಗೂ ಅನೇಕ ವಿಧಗಳಲ್ಲಿ ದೊಡ್ಡ ಅಂತರವಿದೆ. ವಾಸ್ತವದಲ್ಲಿ, ಯೆಹೋವನ ಸಾಕ್ಷಿಗಳು “ಭಿನ್ನರು” ಎಂದು ಧರ್ಮದ ವಿಶ್ವಕೋಶ (ಇಂಗ್ಲಿಷ್‌) ಹೇಳುತ್ತದೆ. ಅವರು ಭಿನ್ನರಾಗಿರುವ ಮೂರು ವಿಧಗಳನ್ನು ಪರಿಗಣಿಸಿರಿ.

ಮೊದಲನೆಯದಾಗಿ, ಪ್ರಾಟೆಸ್ಟಂಟ್‌ ಧರ್ಮದ ಮತಸುಧಾರಣಾ ನಾಯಕರು ಕ್ಯಾಥೊಲಿಕ್‌ ಧರ್ಮದ ಕೆಲವು ಆಚಾರವಿಚಾರಗಳನ್ನು ತಳ್ಳಿಹಾಕಿದರೂ ತ್ರಯೈಕ್ಯ, ನರಕಾಗ್ನಿ, ಮಾನವ ಆತ್ಮದ ಅಮರತ್ವ ಇತ್ಯಾದಿ ಕ್ಯಾಥೊಲಿಕ್‌ ಬೋಧನೆಗಳನ್ನು ಹಾಗೆಯೇ ಉಳಿಸಿಕೊಂಡರು. ಯೆಹೋವನ ಸಾಕ್ಷಿಗಳಾದರೋ, ಆ ಬೋಧನೆಗಳು ಬೈಬಲಿಗೆ ವಿರುದ್ಧವೆಂದೂ ಅವು ದೇವರ ಬಗ್ಗೆ ತಪ್ಪುಕಲ್ಪನೆಗಳನ್ನು ಮೂಡಿಸುತ್ತವೆಂದೂ ನಂಬುತ್ತಾರೆ.

ಎರಡನೆಯದಾಗಿ, ಯೆಹೋವನ ಸಾಕ್ಷಿಗಳ ಧರ್ಮವು ಋಣಾತ್ಮಕ ಪ್ರತಿಭಟನೆಯನ್ನಲ್ಲ ಬದಲಾಗಿ ಧನಾತ್ಮಕ ಶಿಕ್ಷಣವನ್ನು ಪ್ರವರ್ಧಿಸುತ್ತದೆ. ಅದರ ಸದಸ್ಯರು ಬೈಬಲಿನ ಈ ಸಲಹೆಯನ್ನು ಗಂಭೀರವಾಗಿ ತಕ್ಕೊಳ್ಳುತ್ತಾರೆ: “ಕರ್ತನ ದಾಸನು ಜಗಳವಾಡದೆ ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು; ಅವನು ಬೋಧಿಸಲು ಅರ್ಹನೂ ಕೇಡನ್ನು ಅನುಭವಿಸುತ್ತಿರುವಾಗ ತಾಳಿಕೊಳ್ಳುವವನೂ ಎದುರಿಸುವವರನ್ನು ಸೌಮ್ಯಭಾವದಿಂದ ಉಪದೇಶಿಸುವವನೂ ಆಗಿರಬೇಕು.” (2 ತಿಮೊಥೆಯ 2:24, 25) ಬೈಬಲ್‌ ಬೋಧನೆಗಳಿಗೂ ಅನೇಕ ಧಾರ್ಮಿಕ ಪಂಗಡಗಳ ಬೋಧನೆಗಳಿಗೂ ಇರುವ ವ್ಯತ್ಯಾಸದೆಡೆಗೆ ಯೆಹೋವನ ಸಾಕ್ಷಿಗಳು ಗಮನಸೆಳೆಯುತ್ತಾರೇನೊ ನಿಜ. ಆದರೆ ಅವರ ಗುರಿ, ಬೇರೆ ಧಾರ್ಮಿಕ ಸಂಘಟನೆಗಳನ್ನು ತಿದ್ದಿ ಸುಧಾರಣೆಮಾಡುವುದಲ್ಲ. ಬದಲಾಗಿ, ದೇವರ ಕುರಿತು ಮತ್ತು ಆತನ ವಾಕ್ಯವಾದ ಬೈಬಲಿನ ಕುರಿತು ನಿಷ್ಕೃಷ್ಟ ಜ್ಞಾನ ಪಡೆದುಕೊಳ್ಳುವಂತೆ ಯಥಾರ್ಥ ಮನಸ್ಸಿನ ವ್ಯಕ್ತಿಗಳಿಗೆ ಸಹಾಯಮಾಡುವುದೇ ಆಗಿದೆ. (ಕೊಲೊಸ್ಸೆ 1:9, 10) ಭಿನ್ನ ನಂಬಿಕೆಗಳುಳ್ಳ ಜನರು ಹಠದಿಂದ ತಮ್ಮ ಅಭಿಪ್ರಾಯಕ್ಕೇ ಅಂಟಿಕೊಳ್ಳುವಾಗ ಯೆಹೋವನ ಸಾಕ್ಷಿಗಳು ಅವರೊಂದಿಗೆ ನಿರರ್ಥಕ ವಾಗ್ವಾದಗಳಲ್ಲಿ ಒಳಗೂಡುವುದಿಲ್ಲ.—2 ತಿಮೊಥೆಯ 2:23.

ಮೂರನೆಯದಾಗಿ, ಯೆಹೋವನ ಸಾಕ್ಷಿಗಳು ಪ್ರಾಟೆಸ್ಟಂಟ್‌ ಧರ್ಮದಂತೆ ನೂರಾರು ಪಂಗಡಗಳಾಗಿ ಛಿದ್ರಗೊಳ್ಳದೆ ಐಕ್ಯವಾದ ಭೌಗೋಳಿಕ ಸಹೋದರತ್ವವನ್ನು ಕಾಪಾಡಿಕೊಂಡಿದ್ದಾರೆ. ‘ಒಮ್ಮತದಿಂದ ಮಾತಾಡಬೇಕು’ ಎಂಬ ಅಪೊಸ್ತಲ ಪೌಲನ ಸಲಹೆಯನ್ನು 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು ಬೈಬಲ್‌ ಬೋಧನೆಗಳ ವಿಷಯದಲ್ಲಿ ಪಾಲಿಸುತ್ತಾರೆ. ಅವರ ಮಧ್ಯೆ ಯಾವ ಭೇದಗಳೂ ಇಲ್ಲ. ಅವರು ಯಥಾರ್ಥವಾಗಿ ‘ಏಕಮನಸ್ಸು ಮತ್ತು ಏಕವಿಚಾರಧಾರೆಯಿಂದ ಹೊಂದಿಕೊಂಡವರಾಗಿ ಐಕ್ಯದಿಂದ’ ಇದ್ದಾರೆ. (1 ಕೊರಿಂಥ 1:10) ಅವರು ತಮ್ಮ ಜೊತೆ ವಿಶ್ವಾಸಿಗಳೊಂದಿಗೆ “ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು” ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ.—ಎಫೆಸ 4:3. (w09-E 11/01)