ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೆಸ್ಸೀಯ! ದೇವರ ರಕ್ಷಣಾ ಮಾಧ್ಯಮ

ಮೆಸ್ಸೀಯ! ದೇವರ ರಕ್ಷಣಾ ಮಾಧ್ಯಮ

ಮೆಸ್ಸೀಯ! ದೇವರ ರಕ್ಷಣಾ ಮಾಧ್ಯಮ

“ಆದಾಮನಿಂದಾಗಿ ಎಲ್ಲರೂ ಸಾಯುತ್ತಿರುವಂತೆಯೇ ಕ್ರಿಸ್ತನಿಂದಾಗಿ ಎಲ್ಲರೂ ಜೀವಿತರಾಗುವರು.” —1 ಕೊರಿಂ. 15:22.

1, 2. (ಎ) ಯೇಸುವನ್ನು ಸಂಧಿಸಿದಾಗ ಅಂದ್ರೆಯ ಮತ್ತು ಫಿಲಿಪ್ಪರು ಹೇಗೆ ಪ್ರತಿಕ್ರಿಯಿಸಿದರು? (ಬಿ) ಯೇಸುವಿನ ಮೆಸ್ಸೀಯತ್ವದ ಕುರಿತು ಪ್ರಥಮ ಶತಮಾನದ ಕ್ರೈಸ್ತರಿಗಿಂತ ನಮಗೆ ಹೆಚ್ಚಿನ ರುಜುವಾತಿದೆ ಎಂದು ನಾವು ಏಕೆ ಹೇಳುತ್ತೇವೆ?

“ನಮಗೆ ಮೆಸ್ಸೀಯನು ಸಿಕ್ಕಿದ್ದಾನೆ” ಎಂದು ಅಂದ್ರೆಯನು ತನ್ನ ಸಹೋದರ ಪೇತ್ರನಿಗೆ ತಿಳಿಸಿದನು. ನಜರೇತಿನ ಯೇಸುವೇ ದೇವರ ಅಭಿಷಿಕ್ತನು ಎಂಬ ಮನವರಿಕೆ ಅವನಿಗೆ ಆಗಿತ್ತು. ಫಿಲಿಪ್ಪನು ಸಹ ಇದನ್ನು ನಂಬಿ ತನ್ನ ಸ್ನೇಹಿತನಾದ ನತಾನಯೇಲನನ್ನು ಹುಡುಕಿ ಅವನಿಗೆ, “ಯಾರ ಕುರಿತು ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ ಅವನು ನಮಗೆ ಸಿಕ್ಕಿದ್ದಾನೆ; ಅವನು ನಜರೇತಿನ ಯೋಸೇಫನ ಮಗನಾದ ಯೇಸುವೇ” ಎಂದು ಹೇಳಿದನು.—ಯೋಹಾ. 1:40, 41, 45.

2 ‘ರಕ್ಷಣೆಯ ಮುಖ್ಯ ನಿಯೋಗಿಯಾಗಿರುವ’ ಯೇಸುವೇ ವಾಗ್ದತ್ತ ಮೆಸ್ಸೀಯನು ಎಂಬ ಸಂಪೂರ್ಣ ಮನವರಿಕೆ ನಿಮಗಾಗಿದೆಯೊ? (ಇಬ್ರಿ. 2:10) ಯೇಸುವಿನ ಪ್ರಥಮ ಶತಮಾನದ ಹಿಂಬಾಲಕರಿಗಿದ್ದ ರುಜುವಾತಿಗಿಂತ ಇಂದು ನಮಗೆ ಯೇಸುವಿನ ಮೆಸ್ಸೀಯತ್ವದ ಕುರಿತು ಹೆಚ್ಚಿನ ರುಜುವಾತಿದೆ. ಯೇಸುವಿನ ಜನನದಿಂದ ಪುನರುತ್ಥಾನದ ವರೆಗೆ ಅವನೇ ಕ್ರಿಸ್ತನು ಎಂಬುದಕ್ಕೆ ದೇವರ ವಾಕ್ಯವು ಮನಗಾಣಿಸುವ ರುಜುವಾತನ್ನು ಕೊಡುತ್ತದೆ. (ಯೋಹಾನ 20:30, 31 ಓದಿ.) ಯೇಸು ಮೆಸ್ಸೀಯನಾಗಿ ತನ್ನ ಪಾತ್ರವನ್ನು ಸ್ವರ್ಗದಿಂದ ನಿರ್ವಹಿಸುವುದನ್ನು ಮುಂದುವರಿಸುವನು ಎಂದು ಸಹ ಬೈಬಲ್‌ ತಿಳಿಸುತ್ತದೆ. (ಯೋಹಾ. 6:40; 1 ಕೊರಿಂಥ 15:22 ಓದಿ.) ಆಧ್ಯಾತ್ಮಿಕ ಅರ್ಥದಲ್ಲಿ, ನೀವು ಸಹ ಇಂದು “ಮೆಸ್ಸೀಯನು ಸಿಕ್ಕಿದ್ದಾನೆ” ಎಂದು ಹೇಳಬಲ್ಲಿರಿ. ಆದರೆ ಮೊದಲಾಗಿ, ಮೆಸ್ಸೀಯನು ಸಿಕ್ಕಿದನು ಎಂಬ ಸರಿಯಾದ ತೀರ್ಮಾನವನ್ನು ಆ ಆರಂಭದ ಶಿಷ್ಯರು ಹೇಗೆ ಮಾಡಿದರು ಎಂಬುದನ್ನು ಪರಿಗಣಿಸೋಣ.

ಮೆಸ್ಸೀಯನ ಕುರಿತ “ಪವಿತ್ರ ರಹಸ್ಯ” ಪ್ರಗತಿಪರವಾಗಿ ಪ್ರಕಟಗೊಂಡಿತು

3, 4. (ಎ) ಪ್ರಥಮ ಶತಮಾನದ ಶಿಷ್ಯರಿಗೆ ‘ಮೆಸ್ಸೀಯನು ಸಿಕ್ಕಿದ್ದು’ ಹೇಗೆ? (ಬಿ) ಯೇಸು ಮಾತ್ರವೇ ಮೆಸ್ಸೀಯನಿಗೆ ಸಂಬಂಧಿಸಿದ ಎಲ್ಲ ಪ್ರವಾದನೆಗಳನ್ನು ನಿಜವಾಗಿ ನೆರವೇರಿಸಿದನು ಎಂದು ಏಕೆ ಹೇಳುತ್ತೀರಿ?

3 ಯೇಸುವೇ ಮೆಸ್ಸೀಯನೆಂದು ಅವನ ಪ್ರಥಮ ಶತಮಾನದ ಹಿಂಬಾಲಕರು ಹೇಗೆ ಖಾತ್ರಿಯಿಂದ ಹೇಳಬಹುದಿತ್ತು? ಯೆಹೋವನು ಬರಲಿರುವ ಮೆಸ್ಸೀಯನ ಕುರಿತು ಪ್ರವಾದಿಗಳ ಮೂಲಕ ಗುರುತು ಚಿಹ್ನೆಗಳನ್ನು ಪ್ರಗತಿಪರವಾಗಿ ಪ್ರಕಟಿಸಿದನು. ಒಬ್ಬ ಬೈಬಲ್‌ ವಿದ್ವಾಂಸನು ಈ ಪ್ರಕ್ರಿಯೆಯನ್ನು ಶಿಲಾತುಂಡುಗಳಿಂದ ಮಾಡಲ್ಪಟ್ಟ ವಿಗ್ರಹವೊಂದನ್ನು ಜೋಡಿಸುವ ಕಾರ್ಯವಿಧಾನಕ್ಕೆ ಹೋಲಿಸಿದ್ದಾನೆ. ಒಬ್ಬರೊಂದಿಗೊಬ್ಬರು ಎಂದೂ ಸಂವಾದಿಸದ ಅನೇಕ ವ್ಯಕ್ತಿಗಳಲ್ಲಿ ಪ್ರತಿಯೊಬ್ಬರು ಶಿಲೆಯ ಒಂದೊಂದು ತುಂಡನ್ನು ತಂದು ವಿಗ್ರಹವನ್ನು ಜೋಡಿಸಲು ಪ್ರಯತ್ನಿಸುತ್ತಾರೆ ಎಂದು ನೆನಸಿ. ಹಾಗೆ ಜೋಡಿಸಿದಾಗ ಒಂದು ಚಂದದ ವಿಗ್ರಹವು ರೂಪುಗೊಂಡಲ್ಲಿ ಅದು ನಿಜವಾಗಿಯೂ ಆಕಸ್ಮಿಕ ಘಟನೆಯಲ್ಲ, ಅದನ್ನು ನಿರ್ದೇಶಿಸುವವನು ಯಾರೋ ಇದ್ದಾನೆ ಮತ್ತು ಅವನು ಅದನ್ನು ನಿರ್ದಿಷ್ಟ ವಿವರಣೆಯೊಂದಿಗೆ ತುಂಡುತುಂಡುಗಳಾಗಿ ಮಾಡಿ ಪ್ರತಿಯೊಂದನ್ನು ಆ ಒಬ್ಬೊಬ್ಬ ವ್ಯಕ್ತಿಗೆ ಕಳುಹಿಸಿದ್ದಿರಬೇಕು ಎಂದು ನೀವು ತರ್ಕಬದ್ಧವಾಗಿ ತೀರ್ಮಾನಿಸುವಿರಿ. ವಿಗ್ರಹದ ಪ್ರತಿಯೊಂದು ತುಂಡಿನಂತೆಯೇ ಮೆಸ್ಸೀಯನ ಕುರಿತ ಪ್ರತಿಯೊಂದು ಪ್ರವಾದನೆಯೂ ಅವನ ವಿಷಯದಲ್ಲಿ ಅವಶ್ಯವಾದ ನಿರ್ದಿಷ್ಟ ಮಾಹಿತಿಯನ್ನು ನೀಡಲಿತ್ತು.

4 ಹಾಗಾದರೆ ಒಬ್ಬನೇ ಒಬ್ಬ ವ್ಯಕ್ತಿಯಲ್ಲಿ ಮೆಸ್ಸೀಯನ ಕುರಿತಾದ ಎಲ್ಲ ಪ್ರವಾದನೆಗಳು ಆಕಸ್ಮಿಕವಾಗಿ ನೆರವೇರುವುದು ಸಾಧ್ಯವೊ? ಒಬ್ಬ ವ್ಯಕ್ತಿ ಮೆಸ್ಸೀಯ ಪ್ರವಾದನೆಗಳನ್ನು ಆಕಸ್ಮಿಕವಾಗಿ ನೆರವೇರಿಸಿದನೆಂಬುದು “ಎಷ್ಟು ಅಸಂಭವವೆಂದರೆ” ಅದನ್ನು ಅಸಾಧ್ಯವೆಂದೇ ವೀಕ್ಷಿಸಬೇಕು. “ಇತಿಹಾಸ್ಯದಾದ್ಯಂತ ಯೇಸು, ಕೇವಲ ಯೇಸು ಮಾತ್ರವೇ ಅದನ್ನು ನಿರ್ವಹಿಸಶಕ್ತನಾದನು” ಎಂದು ಸಂಶೋಧಕನೊಬ್ಬನು ಹೇಳಿದನು.

5, 6. (ಎ) ಸೈತಾನನ ವಿರುದ್ಧ ತೀರ್ಪು ಹೇಗೆ ಜಾರಿಗೆ ತರಲ್ಪಡುವುದು? (ಬಿ) ವಾಗ್ದತ್ತ ‘ಸಂತಾನದ’ ವಂಶಾವಳಿಯನ್ನು ದೇವರು ಹೇಗೆ ಪ್ರಗತಿಪರವಾಗಿ ಪ್ರಕಟಗೊಳಿಸಿದನು?

5 ಮೆಸ್ಸೀಯನ ಪ್ರವಾದನೆಗಳ ಕೇಂದ್ರಬಿಂದುವೇ ಒಂದು “ಪವಿತ್ರ ರಹಸ್ಯವಾಗಿದೆ.” ಅದರಲ್ಲಿ ವಿಶ್ವ ಪ್ರಮುಖತೆಯನ್ನು ಹೊಂದಿರುವ ಅನೇಕ ವೈಶಿಷ್ಟ್ಯಗಳಿವೆ. (ಕೊಲೊ. 1:26, 27; ಆದಿ. 3:15) ಮಾನವಕುಲವನ್ನು ಪಾಪ ಮತ್ತು ಮರಣಕ್ಕೆ ಧುಮುಕಿಸಿದ “ಪುರಾತನ ಸರ್ಪ” ಅಂದರೆ ಪಿಶಾಚನಾದ ಸೈತಾನನ ವಿರುದ್ಧವಾದ ತೀರ್ಪು ಆ ರಹಸ್ಯದಲ್ಲಿ ಒಳಗೂಡಿತ್ತು. (ಪ್ರಕ. 12:9) ಆ ತೀರ್ಪು ಹೇಗೆ ಜಾರಿಗೆ ತರಲ್ಪಡುವುದು? ಒಬ್ಬಾಕೆ ‘ಸ್ತ್ರೀಯಿಂದ’ ಬರಲಿಕ್ಕಿದ್ದ ಒಂದು ‘ಸಂತಾನವು’ ಸೈತಾನನ ತಲೆಯನ್ನು ಜಜ್ಜುವುದು ಎಂದು ಯೆಹೋವನು ಮುಂತಿಳಿಸಿದನು. ಮುಂತಿಳಿಸಲ್ಪಟ್ಟ ಆ ‘ಸಂತಾನವು’ ಸರ್ಪನ ತಲೆಯನ್ನು ಜಜ್ಜುವ ಮೂಲಕ ದಂಗೆ, ಅಸ್ವಸ್ಥತೆ ಮತ್ತು ಮರಣದ ಕಾರಣಕರ್ತನನ್ನು ಅಳಿಸಿಹಾಕುವುದು. ಆದರೆ ದೇವರ ಅನುಮತಿಯ ಮೇರೆಗೆ ಸೈತಾನನು ಮೊದಲು ಸ್ತ್ರೀಯ ‘ಸಂತಾನದ’ ಹಿಮ್ಮಡಿಯನ್ನು ಸಾಂಕೇತಿಕವಾಗಿ ಕಚ್ಚಲಿದ್ದನು.

6 ಆ ವಾಗ್ದತ್ತ ‘ಸಂತಾನವು’ ಯಾರಾಗಲಿದ್ದನು ಎಂಬುದನ್ನು ಯೆಹೋವನು ಪ್ರಗತಿಪರವಾಗಿ ಪ್ರಕಟಪಡಿಸಿದನು. ದೇವರು ಅಬ್ರಹಾಮನಿಗೆ, “ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ [ಸಂತಾನದ] ಮೂಲಕ ಆಶೀರ್ವಾದವುಂಟಾಗುವದು” ಎಂದು ಮಾತುಕೊಟ್ಟನು. (ಆದಿ. 22:18) ಈ ಸಂತಾನ ಮೋಶೆಗಿಂತ ಶ್ರೇಷ್ಠವಾದ ‘ಪ್ರವಾದಿಯಾಗಿರುವನು’ ಎಂದು ಸ್ವತಃ ಮೋಶೆಯೇ ಮುಂತಿಳಿಸಿದನು. (ಧರ್ಮೋ. 18:18, 19) ಮೆಸ್ಸೀಯನು ದಾವೀದನ ವಂಶದಲ್ಲಿ ಬರುವನು ಮತ್ತು ದಾವೀದನ ಸಿಂಹಾಸನವನ್ನು ಶಾಶ್ವತವಾಗಿ ಪಡೆದುಕೊಳ್ಳುವನು ಎಂದು ದಾವೀದನಿಗೆ ಆಶ್ವಾಸನೆ ಕೊಡಲಾಯಿತು ಮತ್ತು ತದನಂತರ ಬಂದ ಪ್ರವಾದಿಗಳು ಇದನ್ನು ದೃಢೀಕರಿಸಿದರು.—2 ಸಮು. 7:12, 16; ಯೆರೆ. 23:5, 6.

ಯೇಸುವೇ ಮೆಸ್ಸೀಯನೆಂಬುದಕ್ಕೆ ಆಧಾರಗಳು

7. ಯೇಸು ಹೇಗೆ ದೇವರ ‘ಸ್ತ್ರೀಯಿಂದ’ ಬಂದನು?

7 ದೇವರು ತನ್ನ ಮೊದಲ ಸೃಷ್ಟಿಯಾದ ತನ್ನ ಕುಮಾರನನ್ನು ವಾಗ್ದತ್ತ ‘ಸಂತಾನವಾಗುವಂತೆ’ ಸ್ವರ್ಗದಲ್ಲಿರುವ ಆತ್ಮಜೀವಿಗಳ ಪತ್ನಿಸದೃಶ ಸಂಘಟನೆಯಿಂದ ಭೂಮಿಗೆ ಕಳುಹಿಸಿದನು. ದೇವರ ಏಕೈಕಜಾತ ಪುತ್ರನು ಸ್ವರ್ಗೀಯ ಜೀವನವನ್ನು ಬಿಟ್ಟು ತನ್ನನ್ನು “ಬರಿದುಮಾಡಿಕೊಂಡು” ಪರಿಪೂರ್ಣ ಮಾನವನಾಗಿ ಹುಟ್ಟುವುದನ್ನು ಇದು ಅವಶ್ಯಪಡಿಸಿತು. (ಫಿಲಿ. 2:5-7; ಯೋಹಾ. 1:14) ಮರಿಯಳು ಪವಿತ್ರಾತ್ಮದಿಂದ ‘ಆವರಿಸಲ್ಪಟ್ಟದ್ದರಿಂದಲೇ’ ನಿಶ್ಚಯವಾಗಿಯೂ ಅವಳಿಗೆ ಹುಟ್ಟಲಿದ್ದ ಮಗು ‘ಪವಿತ್ರನೆಂದೂ ದೇವರ ಮಗನೆಂದೂ ಕರೆಯಲ್ಪಟ್ಟಿತು.’—ಲೂಕ 1:35.

8. ಯೇಸು ನೀರಿನ ದೀಕ್ಷಾಸ್ನಾನ ಪಡೆದುಕೊಳ್ಳಲು ತನ್ನನ್ನೇ ನೀಡಿಕೊಂಡಾಗ ಮೆಸ್ಸೀಯನಿಗೆ ಸಂಬಂಧಿಸಿದ ಪ್ರವಾದನೆಯನ್ನು ಹೇಗೆ ನೆರವೇರಿಸಿದನು?

8 ಯೇಸು ಎಲ್ಲಿ ಮತ್ತು ಯಾವಾಗ ಹುಟ್ಟುವನು ಎಂಬುದನ್ನು ಮೆಸ್ಸೀಯನಿಗೆ ಸಂಬಂಧಿಸಿದ ಪ್ರವಾದನೆಗಳು ಸೂಚಿಸಿದವು. ಮುಂತಿಳಿಸಲ್ಪಟ್ಟಂತೆಯೇ ಯೇಸು ಬೇತ್ಲೆಹೇಮಿನಲ್ಲಿ ಹುಟ್ಟಿದನು. (ಮೀಕ 5:2) ಪ್ರಥಮ ಶತಮಾನದಲ್ಲಿ ಯೆಹೂದ್ಯರು ಮೆಸ್ಸೀಯನ ಬರೋಣದ ವಿಷಯದಲ್ಲಿ ಉಚ್ಚ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಕೆಲವರು ಸ್ನಾನಿಕನಾದ ಯೋಹಾನನ ಬಗ್ಗೆ, “ಪ್ರಾಯಶಃ ಇವನೇ ಕ್ರಿಸ್ತನಾಗಿರಬಹುದೊ” ಎಂದು ಕೇಳಿದರು. ಆದರೆ ಯೋಹಾನನು ಅದಕ್ಕೆ, “ನನಗಿಂತ ಹೆಚ್ಚು ಬಲಶಾಲಿಯಾಗಿರುವಾತನು ಬರುತ್ತಾನೆ” ಎಂದು ಉತ್ತರಕೊಟ್ಟನು. (ಲೂಕ 3:15, 16) ಕ್ರಿ.ಶ. 29ರಲ್ಲಿ 30 ವರ್ಷದವನಾದ ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಯೋಹಾನನ ಬಳಿಗೆ ಬರುವ ಮೂಲಕ ಸರಿಯಾದ ಸಮಯಕ್ಕೆ ತನ್ನನ್ನು ಮೆಸ್ಸೀಯನಾಗಿ ನೀಡಿಕೊಂಡನು. (ದಾನಿ. 9:25) ಅನಂತರ ಅವನು, “ನೇಮಿತ ಕಾಲವು ನೆರವೇರಿದೆ. ದೇವರ ರಾಜ್ಯವು ಸಮೀಪಿಸಿದೆ” ಎಂದು ಹೇಳುತ್ತಾ ತನ್ನ ಮಹತ್ವಭರಿತ ಶುಶ್ರೂಷೆಯನ್ನು ಆರಂಭಿಸಿದನು.—ಮಾರ್ಕ 1:14, 15.

9. ಸಂಪೂರ್ಣ ವಿವರಗಳು ಗೊತ್ತಿರದಿದ್ದರೂ ಯೇಸುವಿನ ಶಿಷ್ಯರಿಗೆ ಯಾವ ನಿಶ್ಚಿತಾಭಿಪ್ರಾಯವಿತ್ತು?

9 ಆದರೆ ಜನರು ತಮ್ಮ ನಿರೀಕ್ಷೆಗಳನ್ನು ಹೊಂದಿಸಿಕೊಳ್ಳಬೇಕಿತ್ತು. ಆ ಯೆಹೂದ್ಯರು ಯೇಸುವನ್ನು ರಾಜನೆಂದು ಹೊಗಳಿದ್ದು ಯುಕ್ತವಾಗಿದ್ದರೂ ಅವನ ರಾಜ್ಯಭಾರವು ಭವಿಷ್ಯತ್ತಿನಲ್ಲಿ ಸ್ಥಾಪಿಸಲ್ಪಡುವುದು ಮತ್ತು ಸ್ವರ್ಗದಿಂದ ನಡೆಸಲ್ಪಡುವುದು ಎಂಬುದು ಅನಂತರವೇ ಸಂಪೂರ್ಣವಾಗಿ ಅರ್ಥವಾಗಲಿಕ್ಕಿತ್ತು. (ಯೋಹಾ. 12:12-16; 16:12, 13; ಅ. ಕಾ. 2:32-36) ಆದರೆ “ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಯೇಸು ಕೇಳಿದಾಗ, ಪೇತ್ರನು ಯಾವುದೇ ಹಿಂಜರಿಕೆಯಿಲ್ಲದೆ, “ನೀನು ಕ್ರಿಸ್ತನು, ಜೀವವುಳ್ಳ ದೇವರ ಮಗನು” ಎಂದು ಉತ್ತರಕೊಟ್ಟನು. (ಮತ್ತಾ. 16:13-16) ಯೇಸುವಿನ ಬೋಧನೆಯೊಂದನ್ನು ಕೇಳಿ ಅನೇಕರು ಎಡವಿದಾಗಲೂ ಪೇತ್ರನು ಇದೇ ರೀತಿಯ ಉತ್ತರವನ್ನು ಕೊಟ್ಟನು.—ಯೋಹಾನ 6:68, 69 ಓದಿ.

ಮೆಸ್ಸೀಯನಿಗೆ ಕಿವಿಗೊಡುವುದು

10. ತನ್ನ ಕುಮಾರನಿಗೆ ಕಿವಿಗೊಡಬೇಕಾದ ಅಗತ್ಯವನ್ನು ಯೆಹೋವನು ಏಕೆ ಒತ್ತಿಹೇಳಿದನು?

10 ಸ್ವರ್ಗದಲ್ಲಿ ದೇವರ ಏಕೈಕಜಾತ ಪುತ್ರನು ಶಕ್ತಿಶಾಲಿ ಆತ್ಮಜೀವಿಯಾಗಿದ್ದನು. ಭೂಮಿಯಲ್ಲಿ ಯೇಸು ‘ತಂದೆಯ ಪ್ರತಿನಿಧಿಯಾಗಿದ್ದನು.’ (ಯೋಹಾ. 16:27, 28) “ನಾನು ಏನನ್ನು ಬೋಧಿಸುತ್ತೇನೋ ಅದು ನನ್ನದಲ್ಲ, ನನ್ನನ್ನು ಕಳುಹಿಸಿದಾತನಿಗೆ ಸೇರಿದ್ದು” ಎಂದವನು ಹೇಳಿದನು. (ಯೋಹಾ. 7:16) ರೂಪಾಂತರದ ಸಮಯದಲ್ಲಿ ಯೇಸುವಿನ ಮೆಸ್ಸೀಯತ್ವವನ್ನು ಖಾತ್ರಿಗೊಳಿಸುತ್ತಾ “ಇವನ ಮಾತಿಗೆ ಕಿವಿಗೊಡಿರಿ” ಎಂದು ಯೆಹೋವನು ಆದೇಶಿಸಿದನು. (ಲೂಕ 9:35) ಹೌದು, ದೇವರು ಆರಿಸಿಕೊಂಡ ಯೇಸುವಿಗೆ ಕಿವಿಗೊಡಬೇಕಿತ್ತು ಅಥವಾ ವಿಧೇಯರಾಗಿರಬೇಕಿತ್ತು. ಇದು ನಂಬಿಕೆ ಮತ್ತು ಸತ್ಕ್ರಿಯೆಗಳನ್ನು ಅವಶ್ಯಪಡಿಸಿತು. ಇವೆರಡೂ ದೇವರನ್ನು ಮೆಚ್ಚಿಸಲು ಮತ್ತು ನಿತ್ಯಜೀವವನ್ನು ಪಡೆಯಲು ಅತ್ಯಾವಶ್ಯಕ.—ಯೋಹಾ. 3:16, 35, 36.

11, 12. (ಎ) ಯಾವ ಕಾರಣಗಳಿಗಾಗಿ ಪ್ರಥಮ ಶತಮಾನದ ಯೆಹೂದ್ಯರು ಯೇಸುವನ್ನು ಮೆಸ್ಸೀಯನೆಂದು ಸ್ವೀಕರಿಸಲಿಲ್ಲ? (ಬಿ) ಯಾರು ಯೇಸುವಿನಲ್ಲಿ ನಂಬಿಕೆಯಿಟ್ಟರು?

11 ಯೇಸುವೇ ಮೆಸ್ಸೀಯನೆಂಬುದನ್ನು ರುಜುಪಡಿಸಲು ಅತ್ಯಧಿಕವಾದ ಆಧಾರಗಳಿದ್ದರೂ ಪ್ರಥಮ ಶತಮಾನದ ಯೆಹೂದ್ಯರಲ್ಲಿ ಬಹುತೇಕ ಮಂದಿ ಅವನನ್ನು ಮೆಸ್ಸೀಯನಾಗಿ ಸ್ವೀಕರಿಸಲಿಲ್ಲ. ಏಕೆ? ಏಕೆಂದರೆ ಅವರಿಗೆ ಮೆಸ್ಸೀಯನ ಬಗ್ಗೆ ತಮ್ಮದೇ ಆದ ಪೂರ್ವಕಲ್ಪಿತ ಅಭಿಪ್ರಾಯಗಳಿದ್ದವು. ಅವನು ರೋಮನ್‌ ದಬ್ಬಾಳಿಕೆಯಿಂದ ತಮ್ಮನ್ನು ಬಿಡಿಸಲಿಕ್ಕಿದ್ದ ರಾಜಕೀಯ ಮೆಸ್ಸೀಯನಾಗಿರುವನು ಎಂಬ ಆಲೋಚನೆಯೂ ಇದರಲ್ಲಿ ಸೇರಿತ್ತು. (ಯೋಹಾನ 12:34 ಓದಿ.) ಆದುದರಿಂದ ಮೆಸ್ಸೀಯನು ಧಿಕ್ಕರಿಸಲ್ಪಡುವನು, ಅವನನ್ನು ಮನುಷ್ಯರು ಸೇರಿಸಿಕೊಳ್ಳುವುದಿಲ್ಲ, ಸಂಕಷ್ಟಕ್ಕೊಳಗಾಗುವನು ಮತ್ತು ವ್ಯಾಧಿಪೀಡಿತನಾಗುವನು ಹಾಗೂ ಕೊನೆಯಲ್ಲಿ ಕೊಲ್ಲಲ್ಪಡುವನು ಎಂಬ ಪ್ರವಾದನೆಗಳನ್ನು ನೆರವೇರಿಸಿದ ವ್ಯಕ್ತಿಯನ್ನು ಅವರಿಂದ ಸ್ವೀಕರಿಸಲಾಗಲಿಲ್ಲ. (ಯೆಶಾ. 53:3, 5) ಯೇಸು ಅವರಿಗೆ ರಾಜಕೀಯ ಬಿಡುಗಡೆಯನ್ನು ತಾರದಿದ್ದಾಗ ಅವನ ನಿಷ್ಠಾವಂತ ಶಿಷ್ಯರಲ್ಲಿ ಕೆಲವರು ಸಹ ನಿರಾಶೆಗೊಂಡರು. ಆದರೂ ಅವರು ನಿಷ್ಠಾವಂತರಾಗಿ ಉಳಿದರು ಮತ್ತು ಕಾಲಕ್ರಮೇಣ ಅವರಿಗೆ ನಿಷ್ಕೃಷ್ಟ ತಿಳಿವಳಿಕೆ ಕೊಡಲ್ಪಟ್ಟಿತು.—ಲೂಕ 24:21.

12 ಜನರು ಯೇಸುವನ್ನು ವಾಗ್ದತ್ತ ಮೆಸ್ಸೀಯನೆಂದು ಸ್ವೀಕರಿಸದೇ ಇರಲಿಕ್ಕೆ ಮತ್ತೊಂದು ಕಾರಣ ಅವನ ಬೋಧನೆಗಳು. ಅನೇಕರು ಅವನ್ನು ಸ್ವೀಕರಿಸುವುದು ಕಷ್ಟವೆಂದು ನೆನಸಿದರು. ಏಕೆಂದರೆ ರಾಜ್ಯವನ್ನು ಪ್ರವೇಶಿಸಬೇಕಾದರೆ ಒಬ್ಬನು ‘ತನ್ನನ್ನೇ ನಿರಾಕರಿಸಬೇಕು,’ ಯೇಸುವಿನ ಮಾಂಸ ಮತ್ತು ರಕ್ತವನ್ನು ‘ತಿನ್ನಬೇಕು,’ ‘ಪುನಃ ಹುಟ್ಟಬೇಕು’ ಮತ್ತು ‘ಲೋಕದ ಭಾಗವಾಗಿರಬಾರದು’ ಎಂದು ಯೇಸು ಬೋಧಿಸಿದನು. (ಮಾರ್ಕ 8:34; ಯೋಹಾ. 3:3; 6:53; 17:14, 16) ಅಹಂಭಾವವುಳ್ಳವರು, ಶ್ರೀಮಂತರು ಮತ್ತು ಕಪಟಿಗಳು ಈ ಆವಶ್ಯಕತೆಗಳನ್ನು ಪೂರೈಸುವುದು ತುಂಬ ಕಷ್ಟವೆಂದು ವೀಕ್ಷಿಸಿದರು. ಆದರೆ ಸಮಾರ್ಯಕ್ಕೆ ಸೇರಿದ ಕೆಲವರಂತೆ ದೀನರಾಗಿದ್ದ ಯೆಹೂದ್ಯರು ಯೇಸುವನ್ನು ಮೆಸ್ಸೀಯನೆಂದು ಸ್ವೀಕರಿಸಿದರು. ಆ ಸಮಾರ್ಯದವರು ಹೇಳಿದ್ದು: “ಈ ಮನುಷ್ಯನು ಖಂಡಿತವಾಗಿಯೂ ಲೋಕದ ರಕ್ಷಕನು.”—ಯೋಹಾ. 4:25, 26, 41, 42; 7:31.

13. ಯೇಸು ಆ ಸಾಂಕೇತಿಕ ಹಿಮ್ಮಡಿಯ ಗಾಯವನ್ನು ಅನುಭವಿಸಿದ್ದು ಹೇಗೆ?

13 ತಾನು ಮುಖ್ಯ ಯಾಜಕರಿಂದ ದಂಡನೆಗೆ ಒಳಪಡಿಸಲ್ಪಡುವೆನು ಮತ್ತು ಅನ್ಯಜನರಿಂದ ಶೂಲಕ್ಕೇರಿಸಲ್ಪಡುವೆನು, ಆದರೂ ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವೆನು ಎಂದು ಯೇಸು ಮುಂತಿಳಿಸಿದ್ದನು. (ಮತ್ತಾ. 20:17-19) ತಾನು ‘ದೇವರ ಮಗನಾದ ಕ್ರಿಸ್ತನಾಗಿದ್ದೇನೆಂದು’ ಹಿರೀಸಭೆಯ ಮುಂದೆ ಯೇಸು ಒಪ್ಪಿಕೊಂಡದ್ದು ದೇವದೂಷಣೆಯಾಗಿ ತೀರ್ಪುಮಾಡಲ್ಪಟ್ಟಿತು. (ಮತ್ತಾ. 26:63-66) ಪಿಲಾತನು ಅವನಲ್ಲಿ “ಮರಣಕ್ಕೆ ಯೋಗ್ಯವಾದದ್ದೇನನ್ನೂ” ಕಾಣಲಿಲ್ಲ. ಆದರೆ ಯೆಹೂದ್ಯರು ಅವನ ಮೇಲೆ ದೇಶದ್ರೋಹದ ಅಪವಾದವನ್ನೂ ಹಾಕಿದ್ದರಿಂದ ಪಿಲಾತನು “ಯೇಸುವನ್ನು ಅವರು ತಮ್ಮ ಇಷ್ಟದಂತೆ ಮಾಡಲು ಒಪ್ಪಿಸಿಕೊಟ್ಟನು.” (ಲೂಕ 23:13-15, 25) ಹೀಗೆ ಅವರು “ಜೀವದ ಮುಖ್ಯ ನಿಯೋಗಿಯನ್ನು” ‘ನಿರಾಕರಿಸಿದರು’ ಮತ್ತು ಅವನು ದೇವರಿಂದ ಕಳುಹಿಸಲ್ಪಟ್ಟವನು ಎಂಬುದಕ್ಕೆ ಅತ್ಯಧಿಕವಾದ ರುಜುವಾತಿದ್ದರೂ ಅವನನ್ನು ಕೊಲ್ಲಲು ಪಿತೂರಿ ನಡಿಸಿದರು. (ಅ. ಕಾ. 3:13-15) ಮುಂತಿಳಿಸಲ್ಪಟ್ಟಂತೆ ಮೆಸ್ಸೀಯನು ‘ಛೇದಿಸಲ್ಪಟ್ಟನು.’ ಕ್ರಿ.ಶ. 33ರ ಪಸ್ಕಹಬ್ಬದಂದು ಅವನನ್ನು ಕಂಬಕ್ಕೆ ಜಡಿಯಲಾಯಿತು. (ದಾನಿ. 9:26, 27; ಅ. ಕಾ. 2:22, 23) ಈ ಕ್ರೂರವಾದ ಮರಣದ ಮೂಲಕ ಅವನು ಆದಿಕಾಂಡ 3:15ರಲ್ಲಿ ಮುಂತಿಳಿಸಲ್ಪಟ್ಟ “ಹಿಮ್ಮಡಿಯ” ಗಾಯವನ್ನು ಅನುಭವಿಸಿದನು.

ಮೆಸ್ಸೀಯನು ಏಕೆ ಸಾಯಬೇಕಿತ್ತು?

14, 15. (ಎ) ಯಾವ ಎರಡು ಕಾರಣಗಳಿಗಾಗಿ ಯೇಸು ಸಾಯುವಂತೆ ಯೆಹೋವನು ಅನುಮತಿಸಿದನು? (ಬಿ) ಪುನರುತ್ಥಾನಗೊಳಿಸಲ್ಪಟ್ಟ ಬಳಿಕ ಯೇಸು ಏನು ಮಾಡಿದನು?

14 ಎರಡು ಪ್ರಾಮುಖ್ಯ ಕಾರಣಗಳಿಗಾಗಿ ಯೇಸು ಸಾವನ್ನು ಅನುಭವಿಸುವಂತೆ ಯೆಹೋವನು ಅನುಮತಿಸಿದನು. ಮೊದಲನೆಯದಾಗಿ, ಮರಣದ ತನಕ ಯೇಸು ತೋರಿಸಿದ ನಂಬಿಗಸ್ತಿಕೆಯು ‘ಪವಿತ್ರ ರಹಸ್ಯದ’ ಒಂದು ಮುಖ್ಯ ಅಂಶವನ್ನು ಇತ್ಯರ್ಥಗೊಳಿಸಿತು. ಒಬ್ಬ ಪರಿಪೂರ್ಣ ವ್ಯಕ್ತಿ ಮರಣದ ತನಕ ‘ದೇವಭಕ್ತಿಯನ್ನು’ ಕಾಪಾಡಿಕೊಳ್ಳಬಲ್ಲನು ಮತ್ತು ಸೈತಾನನಿಂದ ತರಲ್ಪಡುವ ಅತಿ ಕಠಿನಕರ ಪರೀಕ್ಷೆಗಳ ಮಧ್ಯೆಯೂ ದೇವರ ಪರಮಾಧಿಕಾರವನ್ನು ಎತ್ತಿಹಿಡಿಯಬಲ್ಲನು ಎಂಬುದನ್ನು ಅವನು ರುಜುಪಡಿಸಿ ತೋರಿಸಿದನು. (1 ತಿಮೊ. 3:16) ಎರಡನೆಯದಾಗಿ, ಯೇಸು ಹೇಳಿದಂತೆ ‘ಮನುಷ್ಯಕುಮಾರನು ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೆ ಬಂದನು.’ (ಮತ್ತಾ. 20:28) ಈ ‘ಅನುರೂಪವಾದ ವಿಮೋಚನಾ ಮೌಲ್ಯವು’ ಆದಾಮನ ಸಂತತಿಯವರು ಬಾಧ್ಯತೆಯಾಗಿ ಪಡೆದಿರುವ ಪಾಪಕ್ಕೆ ಬೆಲೆಯಾಗಿ ನೀಡಲ್ಪಟ್ಟಿತು. ಯೇಸುವನ್ನು ದೇವರ ರಕ್ಷಣಾ ಮಾಧ್ಯಮ ಎಂದು ಸ್ವೀಕರಿಸುವವರು ನಿತ್ಯಜೀವ ಪಡೆಯುವುದನ್ನು ಅದು ಸಾಧ್ಯಗೊಳಿಸಿತು.—1 ತಿಮೊ. 2:5, 6.

15 ಮೂರು ದಿನ ಸಮಾಧಿಯಲ್ಲಿದ್ದ ಮೇಲೆ ಕ್ರಿಸ್ತನು ಪುನರುತ್ಥಾನಗೊಳಿಸಲ್ಪಟ್ಟನು. ಅನಂತರ 40 ದಿನಗಳ ತನಕ ತನ್ನ ಶಿಷ್ಯರಿಗೆ ಕಾಣಿಸಿಕೊಳ್ಳುವ ಮೂಲಕ ತಾನು ಜೀವಂತವಾಗಿದ್ದೇನೆ ಎಂಬುದಕ್ಕೆ ರುಜುವಾತನ್ನು ಕೊಟ್ಟನು ಮತ್ತು ಅವರಿಗೆ ಹೆಚ್ಚಿನ ನಿರ್ದೇಶನಗಳನ್ನೂ ಕೊಟ್ಟನು. (ಅ. ಕಾ. 1:3-5) ಬಳಿಕ ಅವನು ತನ್ನ ಅಮೂಲ್ಯ ಯಜ್ಞದ ಬೆಲೆಯನ್ನು ಯೆಹೋವನಿಗೆ ಸಮರ್ಪಿಸಲು ಮತ್ತು ಮೆಸ್ಸೀಯ ರಾಜನಾಗಿ ಆಳಲಾರಂಭಿಸುವ ನೇಮಿತ ಸಮಯವು ಬರುವ ತನಕ ಕಾಯಲು ಸ್ವರ್ಗಕ್ಕೆ ಏರಿಹೋದನು. ಈತನ್ಮಧ್ಯೆ ಅವನಿಗೆ ಹೆಚ್ಚನ್ನು ಮಾಡಲಿಕ್ಕಿತ್ತು.

ಮೆಸ್ಸೀಯನಾಗಿ ತನ್ನ ಪಾತ್ರವನ್ನು ಪೂರೈಸುವುದು

16, 17. ಸ್ವರ್ಗಕ್ಕೆ ಏರಿಹೋದ ಮೇಲೆ ಮೆಸ್ಸೀಯನೋಪಾದಿ ಯೇಸು ನಿರ್ವಹಿಸುತ್ತಿರುವ ಪಾತ್ರವನ್ನು ವಿವರಿಸಿ.

16 ತಾನು ಪುನರುತ್ಥಾನಗೊಳಿಸಲ್ಪಟ್ಟ ಬಳಿಕ ಶತಮಾನಗಳಾದ್ಯಂತ ಯೇಸು ಕ್ರೈಸ್ತ ಸಭೆಯ ಚಟುವಟಿಕೆಗಳ ಮೇಲೆ ನಂಬಿಗಸ್ತಿಕೆಯಿಂದ ಉಸ್ತುವಾರಿ ನಡೆಸಿದ್ದಾನೆ. ಅದರ ಮೇಲೆ ಅವನು ರಾಜನಾಗಿ ಆಳುತ್ತಾ ಬಂದಿದ್ದಾನೆ. (ಕೊಲೊ. 1:13) ನೇಮಿತ ಸಮಯ ಬಂದಾಗ ಅವನು ದೇವರ ರಾಜ್ಯದ ರಾಜನಾಗಿ ತನ್ನ ಅಧಿಕಾರವನ್ನು ಚಲಾಯಿಸಲು ಆರಂಭಿಸುವನು. ರಾಜನಾಗಿ ಅವನ ಸಾನ್ನಿಧ್ಯವು 1914ರಲ್ಲಿ ಆರಂಭಿಸಿತು ಎಂದು ಬೈಬಲ್‌ ಪ್ರವಾದನೆಗಳು ಮತ್ತು ಲೋಕ ಘಟನೆಗಳು ಖಚಿತಪಡಿಸುತ್ತವೆ. “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಕೂಡ ಆ ವರ್ಷದಲ್ಲೇ ಆರಂಭಿಸಿತು. (ಮತ್ತಾ. 24:3; ಪ್ರಕ. 11:15) ಇದಾದ ಸ್ವಲ್ಪದರಲ್ಲೇ ಅವನು ಪವಿತ್ರ ದೇವದೂತರೊಂದಿಗೆ ಸೇರಿ ಸೈತಾನನನ್ನೂ ಅವನ ದೆವ್ವಗಳನ್ನೂ ಸ್ವರ್ಗದಿಂದ ದೊಬ್ಬಿಬಿಟ್ಟನು.—ಪ್ರಕ. 12:7-10.

17 ಯೇಸು ಕ್ರಿ.ಶ. 29ರಲ್ಲಿ ಆರಂಭಿಸಿದ ಸಾರುವ ಮತ್ತು ಬೋಧಿಸುವ ಕೆಲಸವು ಅದರ ಮಹಾ ಪರಮಾವಧಿಗೆ ಹತ್ತಿರವಾಗುತ್ತಿದೆ. ಶೀಘ್ರದಲ್ಲೇ ಅವನು ಜೀವಿಸುವವರೆಲ್ಲರ ಮೇಲೆ ನ್ಯಾಯತೀರ್ಪುಮಾಡುವನು. ಬಳಿಕ ಅವನು, ತನ್ನನ್ನು ಯೆಹೋವನ ರಕ್ಷಣಾ ಮಾಧ್ಯಮವೆಂದು ಸ್ವೀಕರಿಸುವ ಕುರಿಸದೃಶರಿಗೆ, “ಲೋಕದ ಆದಿಯಿಂದ ನಿಮಗಾಗಿ ಸಿದ್ಧಪಡಿಸಲ್ಪಟ್ಟಿರುವ ರಾಜ್ಯವನ್ನು ಬಾಧ್ಯತೆಯಾಗಿ ಪಡೆದುಕೊಳ್ಳಿರಿ” ಎಂದು ಹೇಳುವನು. (ಮತ್ತಾ. 25:31-34, 41) ಯೇಸುವನ್ನು ರಾಜನಾಗಿ ಸ್ವೀಕರಿಸದೆ ಹೋಗುವವರು ಅವನು ಎಲ್ಲ ದುಷ್ಟತನದ ವಿರುದ್ಧ ತನ್ನ ಸ್ವರ್ಗೀಯ ಸೈನ್ಯಗಳನ್ನು ನಡಿಸುವಾಗ ನಾಶಗೊಳಿಸಲ್ಪಡುವರು. ಅನಂತರ ಯೇಸು ಸೈತಾನನನ್ನು ಬಂಧಿಸಿ ಅವನನ್ನೂ ಅವನ ದೆವ್ವಗಳನ್ನೂ “ಅಗಾಧ ಸ್ಥಳಕ್ಕೆ” ದೊಬ್ಬಿಬಿಡುವನು.—ಪ್ರಕ. 19:11-14; 20:1-3.

18, 19. ಮೆಸ್ಸೀಯನಾಗಿ ತನ್ನ ಪಾತ್ರವನ್ನು ಪೂರೈಸುವುದರಲ್ಲಿ ಯೇಸು ಏನನ್ನು ಸಾಧಿಸುತ್ತಾನೆ, ಮತ್ತು ಇದು ವಿಧೇಯ ಮಾನವಕುಲಕ್ಕೆ ಯಾವ ಪ್ರಯೋಜನಗಳನ್ನು ತರುವುದು?

18 ತನ್ನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಯೇಸು “ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು” ಎಂಬಂಥ ತನ್ನೆಲ್ಲಾ ಬಿರುದುಗಳಿಗೆ ತಕ್ಕ ಹಾಗೆ ಸಂಪೂರ್ಣವಾಗಿ ನಡೆದುಕೊಳ್ಳುವನು. (ಯೆಶಾ. 9:6, 7) ಅವನ ರಾಜ್ಯದಾಳಿಕೆಯು ಮಾನವರನ್ನು ಪರಿಪೂರ್ಣತೆಗೆ ನಡಿಸುವುದು. ಅದರಲ್ಲಿ ಸತ್ತವರೊಳಗಿಂದ ಪುನರುತ್ಥಾನಗೊಂಡವರು ಸಹ ಸೇರಿರುತ್ತಾರೆ. (ಯೋಹಾ. 5:26-29) ಮೆಸ್ಸೀಯನು ಸಿದ್ಧಮನಸ್ಸಿನ ಮಾನವರನ್ನು “ಜೀವಜಲದ ಒರತೆಗಳ” ಬಳಿಗೆ ನಡಿಸುವ ಮೂಲಕ ವಿಧೇಯ ಮಾನವಕುಲವು ಯೆಹೋವನೊಂದಿಗೆ ಶಾಂತಿಭರಿತ ಸಂಬಂಧದಲ್ಲಿ ಆನಂದಿಸುವಂತೆ ಮಾಡುವನು. (ಪ್ರಕಟನೆ 7:16, 17 ಓದಿ.) ಅಂತಿಮ ಪರೀಕ್ಷೆಯ ಬಳಿಕ ಸೈತಾನನು ಮತ್ತು ಅವನ ದೆವ್ವಗಳು ಹಾಗೂ ದಂಗೆಕೋರರೆಲ್ಲರೂ ‘ಬೆಂಕಿ ಕೆರೆಗೆ ದೊಬ್ಬಲ್ಪಡುವರು.’ ಇದು ‘ಸರ್ಪದ’ ತಲೆಯನ್ನು ಜಜ್ಜುವ ಮರಣಕರ ಏಟು.—ಪ್ರಕ. 20:10.

19 ಯೇಸು ಮೆಸ್ಸೀಯನಾಗಿ ತನ್ನ ಪಾತ್ರವನ್ನು ಎಷ್ಟು ಅದ್ಭುತಕರವಾಗಿ ಮತ್ತು ಲೋಪವಿಲ್ಲದ್ದಾಗಿ ನಿರ್ವಹಿಸುತ್ತಾನೆ! ಪರದೈಸ ಭೂಮಿಯು ರಕ್ಷಿಸಲ್ಪಟ್ಟ ಮಾನವರಿಂದ ತುಂಬಿಸಲ್ಪಡುವುದು. ಆ ಮಾನವರು ಪರಿಪೂರ್ಣ ಆರೋಗ್ಯ ಮತ್ತು ಸಂತೋಷವನ್ನು ಸದಾಕಾಲಕ್ಕೂ ಅನುಭವಿಸುವರು. ಯೆಹೋವನ ಪವಿತ್ರ ನಾಮದ ಮೇಲೆ ಹೇರಲ್ಪಟ್ಟಿರುವ ಎಲ್ಲ ನಿಂದೆಯು ತೆಗೆದುಹಾಕಲ್ಪಟ್ಟಿರುವುದು ಮತ್ತು ಆತನ ವಿಶ್ವ ಪರಮಾಧಿಕಾರದ ಹಕ್ಕು ಸಂಪೂರ್ಣವಾಗಿ ನಿರ್ದೋಷೀಕರಿಸಲ್ಪಟ್ಟಿರುವುದು. ದೇವರ ಅಭಿಷಿಕ್ತನಿಗೆ ವಿಧೇಯರಾಗುವವರೆಲ್ಲರ ಪಾಲಿಗೆ ಎಂಥ ಮಹಿಮಾನ್ವಿತ ಸ್ಥಿತಿಗತಿಗಳು ಶೀಘ್ರದಲ್ಲೇ ಬರಲಿಕ್ಕಿವೆ!

ನಿಮಗೆ ಮೆಸ್ಸೀಯನು ಸಿಕ್ಕಿದ್ದಾನೊ?

20, 21. ಮೆಸ್ಸೀಯನ ಕುರಿತು ಇತರರಿಗೆ ತಿಳಿಸಲು ನಿಮಗೆ ಯಾವ ಕಾರಣಗಳಿವೆ?

20 ಇಸವಿ 1914ರಿಂದ ನಾವು ಕ್ರಿಸ್ತನ ಪರೂಸೀಯ, ಅಥವಾ ಸಾನ್ನಿಧ್ಯದ ಸಮಯದಲ್ಲಿ ಜೀವಿಸುತ್ತಾ ಬಂದಿದ್ದೇವೆ. ದೇವರ ರಾಜ್ಯದ ರಾಜನಾಗಿ ಅವನ ಸಾನ್ನಿಧ್ಯವು ಅಗೋಚರವಾಗಿರುವುದಾದರೂ ಪ್ರವಾದನೆಗಳ ನೆರವೇರಿಕೆಯಿಂದ ಅದು ಸ್ಪಷ್ಟವಾಗಿ ತಿಳಿದುಬರುತ್ತದೆ. (ಪ್ರಕ. 6:2-8) ಆದರೆ ಪ್ರಥಮ ಶತಮಾನದ ಯೆಹೂದ್ಯರಂತೆ ಇಂದಿನ ಬಹುತೇಕ ಮಂದಿ ಮೆಸ್ಸೀಯನ ಸಾನ್ನಿಧ್ಯದ ರುಜುವಾತನ್ನು ನಿರ್ಲಕ್ಷಿಸುತ್ತಾರೆ. ಇವರಿಗೂ ಒಬ್ಬ ರಾಜಕೀಯ ಮೆಸ್ಸೀಯನು ಬೇಕಾಗಿದ್ದಾನೆ ಅಥವಾ ಕಡಿಮೆಪಕ್ಷ ಮಾನವ ರಾಜಕೀಯ ಮುಖಂಡರ ಮೂಲಕ ಕೆಲಸಮಾಡುವ ವ್ಯಕ್ತಿ ಬೇಕಾಗಿದ್ದಾನೆ. ನೀವಾದರೋ ಯೇಸು ಈಗ ದೇವರ ರಾಜ್ಯದ ರಾಜನಾಗಿ ಆಳುತ್ತಿದ್ದಾನೆ ಎಂಬುದನ್ನು ತಿಳಿದುಕೊಂಡಿರಿ. ಅದನ್ನು ತಿಳಿದುಕೊಂಡಾಗ ನೀವು ಪುಳಕಗೊಳ್ಳಲಿಲ್ಲವೆ? ಪ್ರಥಮ ಶತಮಾನದ ಶಿಷ್ಯರಂತೆ ನೀವು ಸಹ “ನಮಗೆ ಮೆಸ್ಸೀಯನು ಸಿಕ್ಕಿದ್ದಾನೆ” ಎಂದು ಹೇಳುವಂತೆ ಪ್ರಚೋದಿಸಲ್ಪಟ್ಟಿರಿ.

21 ಇಂದು ನೀವು ಸತ್ಯದ ಕುರಿತು ಮಾತಾಡುವಾಗ ಮೆಸ್ಸೀಯನಾದ ಯೇಸುವಿನ ಪಾತ್ರವನ್ನು ಎತ್ತಿತೋರಿಸುತ್ತೀರೊ? ಹೀಗೆ ಮಾಡುವುದು ಅವನು ನಿಮಗಾಗಿ ಮಾಡಿರುವ, ಈಗ ಮಾಡುತ್ತಿರುವ ಮತ್ತು ಮುಂದಕ್ಕೆ ಮಾಡಲಿರುವ ವಿಷಯಗಳಿಗಾಗಿ ನಿಮ್ಮ ಗಣ್ಯತೆಯನ್ನು ಹೆಚ್ಚಿಸುವುದು. ಅಂದ್ರೆಯ ಮತ್ತು ಫಿಲಿಪ್ಪರಂತೆ ನೀವು ಈಗಾಗಲೇ ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಮೆಸ್ಸೀಯನ ಕುರಿತು ಮಾತಾಡಿದ್ದೀರಿ ಎಂಬುದರಲ್ಲಿ ಸಂಶಯವಿಲ್ಲ. ಈಗಲಾದರೋ ನವೀಕರಿಸಲ್ಪಟ್ಟ ಹುರುಪಿನೊಂದಿಗೆ ಅವರನ್ನು ಸಮೀಪಿಸಿ ಯೇಸು ಕ್ರಿಸ್ತನೇ ಆ ವಾಗ್ದತ್ತ ಮೆಸ್ಸೀಯ, ದೇವರ ರಕ್ಷಣಾ ಮಾಧ್ಯಮ ಎಂದು ಯಾಕೆ ತೋರಿಸಬಾರದು?

ನೀವು ವಿವರಿಸಬಲ್ಲಿರೊ?

• ಪ್ರಥಮ ಶತಮಾನದ ಶಿಷ್ಯರಿಗೆ ಮೆಸ್ಸೀಯನು ಸಿಕ್ಕಿದ್ದು ಹೇಗೆ?

• ಯಾವ ಎರಡು ಮುಖ್ಯ ಕಾರಣಗಳಿಗಾಗಿ ಯೇಸು ಸತ್ತನು?

• ಯೇಸು ಮೆಸ್ಸೀಯನಾಗಿ ತನ್ನ ಪಾತ್ರವನ್ನು ಪೂರೈಸುವುದರಲ್ಲಿ ಇನ್ನೂ ಏನನ್ನು ಮಾಡಲಿಕ್ಕಿದ್ದಾನೆ?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರಗಳು]

ಪ್ರಥಮ ಶತಮಾನದಲ್ಲಿದ್ದ ಜನರು ಯೇಸುವೇ ವಾಗ್ದತ್ತ ಮೆಸ್ಸೀಯನೆಂದು ಹೇಗೆ ಹೇಳಸಾಧ್ಯವಿತ್ತು?

[ಪುಟ 23ರಲ್ಲಿರುವ ಚಿತ್ರ]

ನೀವು ಇತರರೊಂದಿಗೆ ಮಾತಾಡುವಾಗ ಮೆಸ್ಸೀಯನಾದ ಯೇಸುವಿನ ಪಾತ್ರವನ್ನು ಎತ್ತಿತೋರಿಸುತ್ತೀರೊ?