ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶಾಲ ಕೆಂಪು ದ್ವೀಪಕ್ಕೆ ಬೈಬಲ್‌ ತಲಪಿತು

ವಿಶಾಲ ಕೆಂಪು ದ್ವೀಪಕ್ಕೆ ಬೈಬಲ್‌ ತಲಪಿತು

ವಿಶಾಲ ಕೆಂಪು ದ್ವೀಪಕ್ಕೆ ಬೈಬಲ್‌ ತಲಪಿತು

ಆಫ್ರಿಕದ ನೈರುತ್ಯ ಕರಾವಳಿಯಿಂದಾಚೆ ಸುಮಾರು 400 ಕಿಲೋಮೀಟರ್‌ ದೂರದಲ್ಲಿ ನೆಲೆಸಿರುವ ಮಡಗಾಸ್ಕರ್‌ ಲೋಕದಲ್ಲಿ ನಾಲ್ಕನೆಯ ಅತಿ ದೊಡ್ಡ ದ್ವೀಪ. ಅಲ್ಲಿಯ ಭಾಷೆ ಮಲಗಾಸಿ. ಆ ಭಾಷೆಯ ಜನರಿಗೆ ಬಹಳ ಕಾಲದಿಂದ ಯೆಹೋವನ ನಾಮದ ಪರಿಚಯವಿದೆ. ಏಕೆಂದರೆ ದೇವರ ಹೆಸರು ಅಡಕವಾಗಿರುವ ಬೈಬಲ್‌ನ ಮಲಗಾಸಿ ಭಾಷಾಂತರಗಳು 170 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಲಭ್ಯವಿವೆ. ಮಲಗಾಸಿ ಭಾಷೆಯ ಬೈಬಲ್‌ ಭಾಷಾಂತರವು ಹೇಗೆ ರಚಿಸಲ್ಪಟ್ಟಿತೆಂಬುದು ತಾನೇ ಸತತ ಪ್ರಯತ್ನ ಮತ್ತು ಏಕಾಗ್ರಚಿತ್ತದ ಒಂದು ನೈಜ ಕಥೆಯಾಗಿದೆ.

ಬೈಬಲನ್ನು ಮಲಗಾಸಿ ಭಾಷೆಗೆ ಭಾಷಾಂತರಿಸಲು ಮಾಡಲಾದ ಪ್ರಯತ್ನಗಳು ಮೊದಲು ಆರಂಭಗೊಂಡದ್ದು ಸಮೀಪದ ಮೊರೀಷಿಯಸ್‌ ದ್ವೀಪದಲ್ಲಿ. ಇಸವಿ 1813ರಷ್ಟು ಹಿಂದೆ ಮೊರೀಷಿಯಸ್‌ನ ಬ್ರಿಟಿಷ್‌ ಗವರ್ನರ್‌ ಸರ್‌ ರಾಬರ್ಟ್‌ ಫರ್ಕ್ಯುಹರ್‌ ಬೈಬಲಿನ ಸುವಾರ್ತೆ ಪುಸ್ತಕಗಳನ್ನು ಮಲಗಾಸಿ ಭಾಷೆಗೆ ತರ್ಜುಮೆಮಾಡುವ ಕೆಲಸವನ್ನು ಕೈಕೊಂಡರು. ಅನಂತರ ಮಡಗಾಸ್ಕರದ ರಾಜ 1ನೆಯ ರಡಾಮನನ್ನು ಉತ್ತೇಜಿಸಿ ಲಂಡನ್‌ ಮಿಷನೆರಿ ಸೊಸೈಟಿ (LMS)ಯಿಂದ ಶಿಕ್ಷಕರನ್ನು ಕೆಂಪು ದ್ವೀಪಕ್ಕೆ ಆಮಂತ್ರಿಸುವಂತೆ ಮಾಡಿದರು. ಮಡಗಾಸ್ಕರನ್ನು ಹೆಚ್ಚಾಗಿ ವಿಶಾಲ ಕೆಂಪು ದ್ವೀಪವೆಂದೇ ಕರೆಯಲಾಗುತ್ತದೆ.

ಆಗಸ್ಟ್‌ 18, 1818ರಲ್ಲಿ ವೇಲ್ಸಿನ ಇಬ್ಬರು ಮಿಷನೆರಿಗಳಾದ ಡೇವಿಡ್‌ ಜೋನ್ಸ್‌ ಮತ್ತು ಥಾಮಸ್‌ ಬೆವನ್‌ ಮೋರಿಷಿಯಸ್‌ನಿಂದ ಟೊಮಸೀನ ರೇವು ಪಟ್ಟಣಕ್ಕೆ ಆಗಮಿಸಿದರು. ಗಾಢ ಧರ್ಮಶ್ರದ್ಧೆಯುಳ್ಳ ಒಂದು ಜನಸಮುದಾಯವನ್ನು ಅಲ್ಲಿ ಅವರು ಕಂಡರು. ಆ ಜನರಲ್ಲಿ ಪೂರ್ವಜರ ಆರಾಧನೆ ಮತ್ತು ಮೌಖಿಕ ಸಂಪ್ರದಾಯಗಳು ದಿನನಿತ್ಯದ ರೂಢಿಯಾಗಿದ್ದವು. ಮಲಗಾಸಿ ಜನರು ಮುಖ್ಯವಾಗಿ ಮಲಯೊ-ಪಾಲಿನೇಷಿಯನ್‌ ಮೂಲದ ಒಂದು ಬಹುರಂಗಿನ ಭಾಷೆಯನ್ನಾಡುತ್ತಿದ್ದರು.

ಒಂದು ಚಿಕ್ಕ ಶಾಲೆಯನ್ನು ತೆರೆದಾದ ಸ್ವಲ್ಪದರಲ್ಲೇ ಜೋನ್ಸ್‌ ಮತ್ತು ಬೆವನ್‌ ತಮ್ಮ ಹೆಂಡತಿ ಮಕ್ಕಳನ್ನು ಮೊರೀಷಿಯಸ್‌ನಿಂದ ಟೊಮಸೀನಕ್ಕೆ ಕರತಂದರು. ಆದರೆ ವಿಷಾದಕರವಾಗಿ ಅವರೆಲ್ಲರಿಗೆ ಅಲ್ಲಿ ಮಲೇರಿಯ ರೋಗ ತಗಲಿತು. ಜೋನ್ಸ್‌ರ ಹೆಂಡತಿ ಮತ್ತು ಮಗು 1818ರ ಡಿಸೆಂಬರ್‌ ತಿಂಗಳಲ್ಲಿ ತೀರಿಕೊಂಡರು. ಎರಡು ತಿಂಗಳ ನಂತರ ಬೆವನ್‌ ಕುಟುಂಬವನ್ನೂ ಮಲೇರಿಯ ರೋಗವು ಬಲಿತಕ್ಕೊಂಡಿತು. ಆಗ ಆ ಗುಂಪಿನಲ್ಲಿ ಬದುಕಿ ಉಳಿದವರು ಡೇವಿಡ್‌ ಜೋನ್ಸ್‌ ಮಾತ್ರ.

ಆದರೆ ಆ ದುರಂತವು ತನ್ನನ್ನು ಧೈರ್ಯಗೆಡಿಸುವಂತೆ ಜೋನ್ಸ್‌ ಬಿಡಲಿಲ್ಲ. ಮಡಗಾಸ್ಕರದ ಜನರಿಗೆ ದೇವರ ವಾಕ್ಯವು ಲಭ್ಯವಾಗುವಂತೆ ಮಾಡಲು ಅವರು ದೃಢಸಂಕಲ್ಪಮಾಡಿದ್ದರು. ಜೋನ್ಸ್‌ ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮೊರೀಷಿಯಸ್‌ಗೆ ಹೋದಮೇಲೆ ಮಲಗಾಸಿ ಭಾಷೆಯನ್ನು ಕಲಿಯುವ ಕಷ್ಟದ ಕೆಲಸವನ್ನು ಕೈಕೊಂಡರು. ಅನಂತರ ಬೇಗನೆ ಯೋಹಾನನ ಸುವಾರ್ತೆಯನ್ನು ಅನುವಾದಿಸುವ ಆರಂಭದ ಕಾರ್ಯಕ್ಕೆ ತೊಡಗಿದರು.

ಇಸವಿ 1820ರ ಅಕ್ಟೋಬರ್‌ನಲ್ಲಿ ಜೋನ್ಸ್‌ ಮಡಗಾಸ್ಕರಕ್ಕೆ ಹಿಂತಿರುಗಿ ಬಂದರು. ರಾಜಧಾನಿ ಆಂಟಾನಾನಾರೀಓದಲ್ಲಿ ಅವರು ಬಂದಿಳಿದು ಅಲ್ಲಿ ಬೇಗನೆ ಒಂದು ಹೊಸ ಮಿಷನೆರಿ ಶಾಲೆಯನ್ನು ಸ್ಥಾಪಿಸಿದರು. ಆದರೆ ಅದರಲ್ಲಿದ್ದ ಸೌಲಭ್ಯಗಳು ಕೊಂಚವೇ. ಪಠ್ಯಪುಸ್ತಕಗಳಾಗಲಿ ಕರಿಹಲಗೆ ಅಥವಾ ಡೆಸ್ಕ್‌ಗಳಾಗಲಿ ಇರಲಿಲ್ಲ. ಆದರೆ ಪಾಠಕ್ರಮವಾದರೊ ಅತ್ಯುತ್ತಮವಾಗಿತ್ತು. ಪಾಠಕಲಿಯಲು ಮಕ್ಕಳು ಬಹಳ ಆತುರದಿಂದಿದ್ದರು.

ಸುಮಾರು ಏಳು ತಿಂಗಳುಗಳ ತನಕ ಒಂಟಿಯಾಗಿ ಕೆಲಸಮಾಡಿದ ಬಳಿಕ ಜೋನ್ಸ್‌ಗೆ ಡೇವಿಡ್‌ ಗ್ರಿಫಿತ್ಸ್‌ ಎಂಬ ಹೊಸ ಮಿಷನೆರಿ ಸಹಕರ್ಮಿ ದೊರೆತರು. ಇವರು ಮಾಜಿ ಬೆವನ್‌ರ ಬದಲಾಗಿ ಕಳುಹಿಸಲ್ಪಟ್ಟಿದ್ದರು. ಬೈಬಲನ್ನು ಮಲಗಾಸಿ ಭಾಷೆಗೆ ಭಾಷಾಂತರ ಮಾಡುವುದಕ್ಕೆ ಈಗ ಇಬ್ಬರೂ ಕೂಡಿ ಅವಿಶ್ರಾಂತವಾಗಿ ದುಡಿದರು.

ಭಾಷಾಂತರ ಪ್ರಗತಿಪಥದಲ್ಲಿ

ಇಸವಿ 1820ರ ಆರಂಭದಲ್ಲಿ ಮಲಗಾಸಿ ಭಾಷೆಗೆ ಸೊರಬಿ ಎಂಬ ಹೆಸರಿನ ಏಕಮಾತ್ರ ಲಿಖಿತ ರೂಪವಿತ್ತು. ಅದು ಮಲಗಾಸಿ ಶಬ್ದಗಳನ್ನು ಆ್ಯರಬಿಕ್‌ ಅಕ್ಷರಗಳಲ್ಲಿ ಬರೆಯುವ ಲಿಖಿತರೂಪ. ಇದನ್ನು ಓದಶಕ್ತರಾಗಿದ್ದವರು ಕೇವಲ ಕೊಂಚ ಮಂದಿ. ಆದ್ದರಿಂದ ಮಿಷನೆರಿಗಳು ರಾಜ 1ನೆಯ ರಡಾಮನನ್ನು ಸಂಧಿಸಿ ಮಾತುಕತೆ ನಡಿಸಿದರು. ರೋಮನ್‌ ಅಕ್ಷರಮಾಲೆಯನ್ನು ಆರಿಸಿಕೊಳ್ಳುವಂತೆ ಮತ್ತು ಸೊರಬಿಯ ಬದಲಾಗಿ ರೋಮನ್‌ ಅಕ್ಷರಮಾಲೆಯನ್ನು ಉಪಯೋಗಿಸುವಂತೆ ರಾಜನು ಅವರಿಗೆ ಅನುಮತಿ ಕೊಟ್ಟನು.

ಬೈಬಲಿನ ಮಲಗಾಸಿ ಭಾಷಾಂತರವು ಸೆಪ್ಟೆಂಬರ್‌ 10, 1823ರಲ್ಲಿ ಆರಂಭಿಸಿತು. ಜೋನ್ಸ್‌ ಆದಿಕಾಂಡ ಮತ್ತು ಮತ್ತಾಯ ಪುಸ್ತಕವನ್ನು ಅನುವಾದಿಸಲು ಆರಂಭಿಸಿದರು. ಗ್ರಿಫಿತ್ಸ್‌ ವಿಮೋಚನಕಾಂಡ ಮತ್ತು ಲೂಕ ಪುಸ್ತಕದ ಭಾಷಾಂತರಕ್ಕೆ ತೊಡಗಿದರು. ಇಬ್ಬರೂ ನಿರಾಯಾಸದಿಂದ ಶ್ರಮಪಟ್ಟು ದುಡಿದರು. ಹೆಚ್ಚಿನ ಭಾಷಾಂತರವನ್ನು ತಾವಾಗಿಯೇ ಮಾಡಿದ್ದಲ್ಲದೆ ಬೆಳಿಗ್ಗೆ- ಮಧ್ಯಾಹ್ನ ಶಾಲೆಯಲ್ಲೂ ಪಾಠ ಕಲಿಸುವುದನ್ನು ಮುಂದುವರಿಸಿದರು. ಅದಲ್ಲದೆ ಮೂರು ವಿವಿಧ ಭಾಷೆಗಳಲ್ಲಿ ಚರ್ಚ್‌ ಸರ್ವಿಸ್‌ಗಾಗಿ ತಯಾರಿಸಿದರು ಮಾತ್ರವಲ್ಲ ಅದನ್ನು ಪ್ರಸ್ತುತಪಡಿಸಿದರು ಸಹ. ಆದರೂ ಎಲ್ಲಾದಕ್ಕಿಂತ ಹೆಚ್ಚು ಪ್ರಮುಖತೆಯನ್ನು ಅವರು ಕೊಟ್ಟದ್ದು ಭಾಷಾಂತರ ಕೆಲಸಕ್ಕೇ.

ಹನ್ನೆರಡು ಮಂದಿ ವಿದ್ಯಾರ್ಥಿಗಳ ಸಹಾಯದಿಂದ ಈ ಇಬ್ಬರು ಮಿಷನೆರಿಗಳು ಇಡೀ ಗ್ರೀಕ್‌ ಶಾಸ್ತ್ರಗ್ರಂಥವನ್ನು ಮತ್ತು ಹೀಬ್ರು ಶಾಸ್ತ್ರಗ್ರಂಥದ ಅನೇಕ ಪುಸ್ತಕಗಳನ್ನು ಕೇವಲ 18 ತಿಂಗಳಲ್ಲೇ ಭಾಷಾಂತರ ಮಾಡಿ ಮುಗಿಸಿದರು. ಮರು ವರ್ಷದಲ್ಲಿ ಇಡೀ ಬೈಬಲಿನ ಒಂದು ಪೀಠಿಕಾರೂಪದ ಅನುವಾದವನ್ನು ಮಾಡಿ ಮುಗಿಸಲಾಯಿತು. ಆದರೆ ಅದರಲ್ಲಿ ತಿದ್ದುಪಡಿ ಹಾಗೂ ಪರಿಷ್ಕಾರಗಳನ್ನು ಮಾಡುವ ಅಗತ್ಯವಿತ್ತು. ಸಹಾಯಕ್ಕಾಗಿ ಡೇವಿಡ್‌ ಜಾನ್ಸ್‌ ಮತ್ತು ಜೋಸಫ್‌ ಫ್ರೀಮೆನ್‌ ಎಂಬ ಇಬ್ಬರು ಭಾಷಾಪಂಡಿತರನ್ನು ಇಂಗ್ಲೆಂಡಿನಿಂದ ಕಳುಹಿಸಲಾಯಿತು.

ತಡೆಗಟ್ಟುಗಳನ್ನು ತಾಳಿಕೊಂಡದ್ದು

ಮಲಗಾಸಿ ಭಾಷಾಂತರವು ಮುಗಿದಾಗ, ಮಡಗಾಸ್ಕರದ ಮೊದಲನೆಯ ಪ್ರಿಂಟಿಂಗ್‌ ಪ್ರೆಸ್ಸನ್ನು ಸ್ಥಾಪಿಸಲು ಚಾರ್ಲ್ಸ್‌ ಹಾವೆನ್‌ಡೆನ್‌ ಎಂಬವರನ್ನು LMS ಕಳುಹಿಸಿಕೊಟ್ಟಿತು. ಹಾವೆನ್‌ಡೆನ್‌ ನವೆಂಬರ್‌ 21, 1826ರಲ್ಲಿ ಅಲ್ಲಿಗೆ ಆಗಮಿಸಿದರು. ಆದರೆ ಬಂದ ಒಂದೇ ತಿಂಗಳೊಳಗೆ ಅವರೂ ಮಲೇರಿಯಕ್ಕೆ ತುತ್ತಾಗಿ ತೀರಿಕೊಂಡರು. ಹೀಗೆ ಪ್ರಿಂಟಿಂಗ್‌ ಪ್ರೆಸ್ಸನ್ನು ನಡಿಸಲು ತಿಳಿದಿರುವವರು ಅಲ್ಲಿ ಬೇರೆ ಯಾರೂ ಇರಲಿಲ್ಲ. ಮುಂದಿನ ವರ್ಷ ಸ್ಕಾಟ್‌ಲೆಂಡಿನ ಕುಶಲ ವ್ಯಾಪಾರಿ ಜೇಮ್ಸ್‌ ಕ್ಯಾಮರನ್‌ ಎಂಬವರು ಯಂತ್ರಸಲಕರಣೆಯ ಮಧ್ಯೆ ದೊರೆತ ಒಂದು ಕೈಪಿಡಿಯ ಸಹಾಯದಿಂದ ಪ್ರೆಸ್ಸನ್ನು ಜೋಡಿಸಲು ಶಕ್ತರಾದರು. ತುಂಬ ಪ್ರಯೋಗ-ಪ್ರಮಾದದ ನಂತರ ಆದಿಕಾಂಡ 1ನೆಯ ಅಧ್ಯಾಯದ ಭಾಗವೊಂದನ್ನು ಡಿಸೆಂಬರ್‌ 4, 1827ರಂದು ಪ್ರಿಂಟ್‌ ಮಾಡಲು ಕ್ಯಾಮರನ್‌ ಶಕ್ತರಾದರು. *

ಇನ್ನೊಂದು ತಡೆಗಟ್ಟು ಬಂದದ್ದು ಜುಲೈ 27, 1828ರಲ್ಲಿ 1ನೆಯ ರಡಾಮನ ಮರಣದ ನಂತರ. ರಾಜ ರಡಾಮನು ಭಾಷಾಂತರ ಯೋಜನೆಗೆ ಬಹು ಬೆಂಬಲವನ್ನು ಕೊಟ್ಟಿದ್ದನು. ಆ ಸಮಯ ಡೇವಿಡ್‌ ಜೋನ್ಸ್‌ ಹೇಳಿದ್ದು: “ರಾಜ ರಡಾಮನು ಅತ್ಯಂತ ದಯಾಳುವೂ ಸೌಜನ್ಯಪರನೂ ಆಗಿದ್ದಾನೆ. ಅವನು ಶಿಕ್ಷಣದ ಮಹಾ ಪಕ್ಷವಾದಿ. ತನ್ನ ಪ್ರಜೆಗಳು ಸುಸಂಸ್ಕೃತರಾಗಿ ಶಿಕ್ಷಣ ಹೊಂದುವುದು ಅವನಿಗೆ ಬೆಳ್ಳಿಬಂಗಾರಕ್ಕಿಂತಲೂ ಹೆಚ್ಚು ಮೂಲ್ಯ.” ಆದರೆ ಅರಸನು ಮೃತನಾದ ಮೇಲೆ ಅವನ ಪತ್ನಿ 1ನೆಯ ರನವಲೋನ ಪಟ್ಟಕ್ಕೆ ಬಂದಳು. ಆದರೆ ಈಕೆ ತನ್ನ ಗಂಡನಂತೆ ಆ ಕೆಲಸಕ್ಕೆ ಅಷ್ಟು ಬೆಂಬಲ ಕೊಡಲಿಕ್ಕಿಲ್ಲವೆಂಬುದು ಬೇಗನೆ ತೋರಿಬಂತು.

ರಾಣಿಯು ಪಟ್ಟಕ್ಕೆ ಬಂದ ಸ್ವಲ್ಪ ಸಮಯದ ನಂತರ ಇಂಗ್ಲೆಂಡಿನ ಸಂದರ್ಶಕರೊಬ್ಬರು ಭಾಷಾಂತರ ಕೆಲಸದ ಕುರಿತು ಮಾತಾಡಲು ರಾಣಿಯನ್ನು ಭೇಟಿಯಾಗ ಬಯಸಿದರು. ಆದರೆ ಅವರ ವಿನಂತಿ ನಿರಾಕರಿಸಲ್ಪಟ್ಟಿತು. ಇನ್ನೊಂದು ಸಂದರ್ಭದಲ್ಲಿ, ಪ್ರಜೆಗಳಿಗೆ ಹೀಬ್ರು ಮತ್ತು ಗ್ರೀಕ್‌ ಭಾಷೆ ಸೇರಿದಂತೆ ಇನ್ನೂ ಹೆಚ್ಚಿನ ವಿಷಯಗಳನ್ನು ಕಲಿಸಬೇಕಾಗಿದೆಯೆಂದು ಮಿಷನೆರಿಗಳು ರಾಣಿಗೆ ಹೇಳಿದಾಗ ಅವಳಂದದ್ದು: “ಹೀಬ್ರು, ಗ್ರೀಕ್‌ ಭಾಷೆಗಳ ಬಗ್ಗೆ ನನಗೆ ಪರಿವೆಯಿಲ್ಲ. ಆದರೆ ನನ್ನ ಪ್ರಜೆಗಳಿಗೆ ಏನಾದರೂ ಹೆಚ್ಚು ಉಪಯುಕ್ತ ಕೆಲಸವನ್ನು ಅಂದರೆ ಸೋಪನ್ನು ತಯಾರಿಸುವುದೇ ಮುಂತಾದ ಕೆಲಸವನ್ನು ನೀವು ಕಲಿಸಬಲ್ಲಿರೊ ಎಂದು ನಾನು ತಿಳಿಯ ಬಯಸುವೆ.” ಮಲಗಾಸಿ ಬೈಬಲ್‌ನ ಕೆಲಸ ಮುಗಿಯುವ ಮುಂಚೆಯೇ ತಮ್ಮನ್ನು ದೇಶದಿಂದ ಹೊರಡಿಸಿಬಿಡುವಳೋ ಏನೋ ಎಂಬುದನ್ನು ಮನಗಂಡು, ರಾಣಿಯ ಅಪೇಕ್ಷೆಯ ಕುರಿತು ಯೋಚಿಸಲು ಒಂದು ವಾರದ ಸಮಯ ಕೊಡಬೇಕೆಂದು ಕ್ಯಾಮರನ್‌ ಕೇಳಿಕೊಂಡರು.

ಮುಂದಿನ ವಾರ ಕ್ಯಾಮರನ್‌ ಆಸ್ಥಾನದ ಸಂದೇಶವಾಹಕರಿಗೆ ಸ್ಥಳಿಕ ಸಾಮಗ್ರಿಗಳಿಂದ ತಯಾರಿಸಲ್ಪಟ್ಟ ಎರಡು ಚಿಕ್ಕ ಬಾರ್‌ ಸೋಪುಗಳನ್ನು ತಂದು ಒಪ್ಪಿಸಿದರು. ಇದು ಮತ್ತು ಮಿಷನೆರಿ ಕುಶಲಕರ್ಮಿಗಳಿಂದ ನಡಿಸಲಾದ ಇತರ ಜನಹಿತ ಕಾರ್ಯಗಳು ರಾಣಿಯನ್ನು ತತ್ಕಾಲ ಶಮನಗೊಳಿಸಿದ್ದರಿಂದ, ಹೀಬ್ರು ಶಾಸ್ತ್ರಗ್ರಂಥದ ಕೆಲವೇ ಪುಸ್ತಕಗಳ ಹೊರತು ಬೇರೆಲ್ಲಾ ಪುಸ್ತಕಗಳನ್ನು ಪ್ರಿಂಟ್‌ಮಾಡಿ ಮುಗಿಸಲು ಸಾಕಷ್ಟು ಸಮಯ ಸಿಕ್ಕಿತು.

ಆಶ್ಚರ್ಯ, ಮತ್ತೆ ನಿರಾಶೆ

ರಾಣಿಯು ಆರಂಭದಲ್ಲಿ ಮಿಷನೆರಿಗಳ ಕೋರಿಕೆಯನ್ನು ಧಿಕ್ಕರಿಸಿದ್ದರೂ ಮೇ 1831ರಲ್ಲಿ ಅನಿರೀಕ್ಷಿತ ಆಜ್ಞೆಯೊಂದನ್ನು ಹೊರಡಿಸಿದಳು. ತನ್ನ ಪ್ರಜೆಗಳು ಕ್ರೈಸ್ತರಾಗಿ ದೀಕ್ಷಾಸ್ನಾನ ಪಡೆದುಕೊಳ್ಳಲು ಅನುಮತಿಯನ್ನು ಕೊಡುತ್ತೇನೆಂದಳು! ಆದರೆ ಈ ಅನುಮತಿಯು ಬಾಳಿದ್ದು ಮಾತ್ರ ಕೊಂಚ ಸಮಯ. ಎ ಹಿಸ್ಟರಿ ಆಫ್‌ ಮಡಗಾಸ್ಕರ್‌ ಪುಸ್ತಕ ಹೇಳುವುದು: “ಹೆಚ್ಚು ಜನರು ದೀಕ್ಷಾಸ್ನಾನ ಪಡೆದುಕೊಂಡದ್ದನ್ನು ಕಂಡು ರಾಣಿಯ ಆಸ್ಥಾನದ ಸಂಪ್ರದಾಯವಾದಿ ಅಧಿಕಾರಿಗಳು ತತ್ತರಗೊಂಡರು. ಕ್ರೈಸ್ತ ಪ್ರಭುಭೋಜನ ಸಂಸ್ಕಾರವು ಬ್ರಿಟಿಷ್‌ ಸಾಮ್ರಾಜ್ಯಕ್ಕೆ ರಾಜನಿಷ್ಠೆ ತೋರಿಸುವುದಕ್ಕೆ ಸಮನಾಗಿದೆ ಎಂದು ಅವರು ರಾಣಿಯನ್ನು ಮನಗಾಣಿಸಿದರು.” ಹೀಗೆ ಕ್ರೈಸ್ತ ದೀಕ್ಷಾಸ್ನಾನಕ್ಕಾಗಿ ಕೊಟ್ಟ ಅನುಮತಿಯನ್ನು 1831ರ ಅಂತ್ಯದಲ್ಲಿ ಅಂದರೆ ಅದು ನೀಡಲ್ಪಟ್ಟ ಕೇವಲ ಆರೇ ತಿಂಗಳುಗಳ ನಂತರ ಹಿಂದೆಗೆಯಲಾಯಿತು.

ರಾಣಿಯ ಇಂಥ ಹೊಯ್ದಾಟಗಳು ಹಾಗೂ ಸರಕಾರದಲ್ಲಿ ಬೆಳೆಯುತ್ತಿದ್ದ ಸಂಪ್ರದಾಯವಾದಿಗಳ ವರ್ಚಸ್ಸು, ಬೈಬಲಿನ ಮುದ್ರಣ ಕೆಲಸವನ್ನು ಬೇಗನೆ ಮುಗಿಸಿಬಿಡುವಂತೆ ಮಿಷನೆರಿಗಳನ್ನು ಎಚ್ಚರಿಸಿತು. ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ಪ್ರಿಂಟಿಂಗ್‌ ಈಗಾಗಲೇ ಮುಗಿದಿತ್ತು ಮತ್ತು ಅದರ ಸಾವಿರಾರು ಪ್ರತಿಗಳು ವಿತರಣೆಯಾಗುತ್ತಲಿದ್ದವು. ಆದರೂ ಮಾರ್ಚ್‌ 1, 1835ರಂದು ಇನ್ನೊಂದು ಅಡಚಣೆ ಎದುರಾಯಿತು. ಕ್ರೈಸ್ತತ್ವವು ಕಾನೂನುಬಾಹಿರವೆಂದು ರಾಣಿ 1ನೆಯ ರನವಲೋನ ಘೋಷಿಸಿದಳು ಮತ್ತು ಕ್ರೈಸ್ತ ಪುಸ್ತಕಗಳೆಲ್ಲವನ್ನು ಅಧಿಕಾರಿಗಳ ವಶಪಡಿಸಬೇಕೆಂಬ ಆಜ್ಞೆ ಹೊರಡಿಸಿದಳು.

ಮಲಗಾಸಿ ಅಪ್ರೆಂಟಿಸ್‌ಗಳು ಪ್ರಿಂಟಿಂಗ್‌ ಯೋಜನೆಯಲ್ಲಿ ಇನ್ನುಮುಂದೆ ಪಾಲ್ಗೊಳ್ಳ ಸಾಧ್ಯವಿಲ್ಲವೆಂಬುದನ್ನೂ ರಾಣಿಯ ಆಜ್ಞೆಯು ಸೂಚಿಸಿತು. ಹೀಗೆ ಕೆಲಸ ಮುಗಿಸಲು ಕೆಲವೇ ಮಿಷನೆರಿಗಳಿದ್ದರಿಂದ ಅವರು ಹಗಲೂರಾತ್ರಿ ಕೆಲಸಮಾಡಿ ಕೊನೆಗೆ ಜೂನ್‌ 1835ರಲ್ಲಿ ಇಡೀ ಬೈಬಲ್‌ ಹೊರಡಿಸಲ್ಪಟ್ಟಿತು. ಹೌದು, ಕೊನೆಗೂ ಮಲಗಾಸಿ ಬೈಬಲಿನ ಜನನವಾಯಿತು!

ನಿಷೇಧ ಜಾರಿಯಲ್ಲಿದ್ದ ಕಾರಣ ಬೈಬಲುಗಳನ್ನು ಬೇಗಬೇಗನೆ ವಿತರಿಸಲಾಯಿತು. ಶಾಸ್ತ್ರಗ್ರಂಥದ 70 ಪ್ರತಿಗಳನ್ನು ವಿಧ್ವಂಸದಿಂದ ತಪ್ಪಿಸಲಿಕ್ಕಾಗಿ ಹುದುಗಿಡಲಾಯಿತು. ಇದು ಒಳ್ಳೆಯ ನಿರ್ಣಯವಾಗಿತ್ತು, ಏಕೆಂದರೆ ಒಂದು ವರ್ಷಕ್ಕೂ ಕಡಿಮೆ ಸಮಯದೊಳಗೆ ದ್ವೀಪದಲ್ಲಿ ಇಬ್ಬರು ಮಿಷನೆರಿಗಳು ಮಾತ್ರ ಉಳಿದಿದ್ದರು. ಆದರೆ ದೇವರ ವಾಕ್ಯವು ಆ ವಿಶಾಲ ಕೆಂಪು ದ್ವೀಪದಲ್ಲಿ ಹಬ್ಬುತ್ತಾಬಂತು.

ಮಲಗಾಸಿ ಜನರ ಬೈಬಲ್‌ ಪ್ರೇಮ

ತಮ್ಮ ಸ್ವಂತ ಭಾಷೆಯಲ್ಲಿ ದೇವರ ವಾಕ್ಯವನ್ನು ಓದಲು ಸಾಧ್ಯವಾಗಿರುವುದು ಮಡಗಾಸ್ಕರದ ಜನರಿಗೆ ಎಂಥ ಸಂತಸದ ಸಂಗತಿ! ಆ ಭಾಷಾಂತರದಲ್ಲಿ ತಪ್ಪು-ಒಪ್ಪುಗಳಿವೆ ಮಾತ್ರವಲ್ಲ ಭಾಷೆಯೂ ಈಗ ತುಂಬ ಹಳತಾಗಿದೆ ನಿಜ. ಆದರೂ ಅಲ್ಲಿ ಬೈಬಲ್‌ ಇಲ್ಲದ ಮನೆಗಳು ಇರುವುದು ಬಹಳ ಅಪರೂಪ. ಅನೇಕ ಮಲಗಾಸಿ ನಿವಾಸಿಗಳು ಅದನ್ನು ಕ್ರಮವಾಗಿ ಓದುತ್ತಾರೆ. ಈ ಭಾಷಾಂತರದ ಗಮನಾರ್ಹ ವಿಷಯವು ಏನೆಂದರೆ ಯೆಹೋವ ಎಂಬ ದೇವರ ನಾಮವನ್ನು ಇಡೀ ಹೀಬ್ರು ಶಾಸ್ತ್ರಗ್ರಂಥದಲ್ಲಿ ವಿಸ್ತಾರವಾಗಿ ಬಳಸಿರುವುದೇ. ಗ್ರೀಕ್‌ ಶಾಸ್ತ್ರಗ್ರಂಥದ ಮೂಲಪ್ರತಿಗಳಲ್ಲಿ ಸಹ ದೈವಿಕ ನಾಮವು ಕಂಡುಬರುತ್ತದೆ. ಇದರಿಂದಾಗಿ ಮಲಗಾಸಿಯ ಹೆಚ್ಚಿನ ಜನರಿಗೆ ದೇವರ ಹೆಸರಿನ ಉತ್ತಮ ಪರಿಚಯವಿದೆ.

ಗ್ರೀಕ್‌ ಶಾಸ್ತ್ರಗ್ರಂಥದ ಮೊತ್ತಮೊದಲ ಪ್ರತಿಗಳು ಪ್ರಿಂಟಾಗಿ ಹೊರಬಂದಾಗ ಪ್ರೆಸ್ಸಿನ ನಿರ್ವಾಹಕ ಶ್ರೀಯುತ ಬೇಕರ್‌ ಎಂಬವರು ಮಲಗಾಸಿಯ ಜನರ ಹರ್ಷಾನಂದವನ್ನು ಕಂಡು ಉದ್ಗಾರವೆತ್ತಿದ್ದು: “ನಾನು ಭವಿಷ್ಯ ನುಡಿಯುವುದಿಲ್ಲ, ಆದರೆ ದೇವರ ವಾಕ್ಯವು ಈ ದೇಶದಿಂದ ಎಂದಾದರೂ ನಿರ್ಮೂಲವಾಗುವುದೆಂದು ನಾನೆಂದೂ ನಂಬಲಾರೆ!” ಅವರ ಮಾತುಗಳು ಸತ್ಯವೆಂದು ರುಜುವಾಗಿವೆ. ಮಲೇರಿಯ ರೋಗವಾಗಲಿ ಕಷ್ಟದ ಭಾಷೆಯನ್ನು ಕಲಿಯುವ ಸವಾಲಾಗಲಿ ಶಾಸಕರ ಪ್ರತಿಬಂಧಕ ಆಜ್ಞೆಗಳಾಗಲಿ ಮಡಗಾಸ್ಕರದಲ್ಲಿ ದೇವರ ವಾಕ್ಯವು ಲಭ್ಯವಾಗುವುದನ್ನು ತಡೆಯಲು ಶಕ್ತವಾಗಲಿಲ್ಲ.

ಈಗಲಾದರೋ ಅಲ್ಲಿ ಪರಿಸ್ಥಿತಿಯು ಇನ್ನಷ್ಟು ಪ್ರಗತಿಹೊಂದಿದೆ. ಹೇಗೆ? 2008ರಲ್ಲಿ, ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರದ ಇಡೀ ಬೈಬಲ್‌ ಅಲ್ಲಿ ಬಿಡುಗಡೆಯಾಯಿತು. ಈ ಭಾಷಾಂತರವು ಒಂದು ಮಹಾ ಮುನ್ನೆಗೆತವನ್ನು ಸೂಚಿಸುತ್ತದೆ, ಏಕೆಂದರೆ ಇದು ಆಧುನಿಕ ಹಾಗೂ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿದೆ. ಹೀಗೆ ದೇವರ ವಾಕ್ಯವು ಈಗ ಆ ವಿಶಾಲವಾದ ಕೆಂಪು ದ್ವೀಪದಲ್ಲಿ ಇನ್ನಷ್ಟು ಹೆಚ್ಚು ಬಲವಾಗಿ ಬೇರೂರಿದೆ.—ಯೆಶಾ. 40:8

[ಪಾದಟಿಪ್ಪಣಿ]

^ ಪ್ಯಾರ. 14 ದಶಾಜ್ಞೆಗಳು ಮತ್ತು ಕರ್ತನ ಪ್ರಾರ್ಥನೆಯು ಮಲಗಾಸಿ ಭಾಷೆಯಲ್ಲಿ ಮುದ್ರಿಸಲಾದ ಮೊತ್ತಮೊದಲನೆಯ ಬೈಬಲ್‌ ಭಾಗಗಳಾಗಿದ್ದವು. ಇವು ಮೊರೀಷಿಯಸ್‌ನಲ್ಲಿ ಸುಮಾರು 1826ರ ಎಪ್ರಿಲ್‌-ಮೇ ತಿಂಗಳಲ್ಲಿ ಉತ್ಪಾದಿಸಲ್ಪಟ್ಟವು. ಆದರೂ ಅದರ ಪ್ರತಿಗಳನ್ನು ರಾಜ ರಡಾಮನ ಕುಟುಂಬಕ್ಕೆ ಹಾಗೂ ಕೆಲವು ಸರಕಾರಿ ಅಧಿಕಾರಿಗಳಿಗೆ ಮಾತ್ರ ವಿತರಿಸಲಾಯಿತು.

[ಪುಟ 31ರಲ್ಲಿರುವ ಚಿತ್ರ]

ಮಲಗಾಸಿ ಭಾಷೆಯ “ನೂತನ ಲೋಕ ಭಾಷಾಂತರ” ಯೆಹೋವ ಎಂಬ ದೇವರ ನಾಮವನ್ನು ಗೌರವಿಸುತ್ತದೆ