ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ನಿಮ್ಮನ್ನು ಏಕೆ ಸಮರ್ಪಿಸಿಕೊಳ್ಳಬೇಕು?

ಯೆಹೋವನಿಗೆ ನಿಮ್ಮನ್ನು ಏಕೆ ಸಮರ್ಪಿಸಿಕೊಳ್ಳಬೇಕು?

ಯೆಹೋವನಿಗೆ ನಿಮ್ಮನ್ನು ಏಕೆ ಸಮರ್ಪಿಸಿಕೊಳ್ಳಬೇಕು?

‘ನಾನು ಯಾರಿಗೆ ಸೇರಿದ್ದೇನೋ ಆ ದೇವರ ದೂತನೊಬ್ಬನು ಕಳೆದ ರಾತ್ರಿ ನನ್ನ ಹತ್ತಿರ ಬಂದು ನಿಂತನು.’ —ಅ. ಕಾರ್ಯಗಳು 27:23.

1. ದೀಕ್ಷಾಸ್ನಾನಕ್ಕಾಗಿ ತಮ್ಮನ್ನು ನೀಡಿಕೊಳ್ಳುತ್ತಿರುವವರು ಈಗಾಗಲೇ ಯಾವ ಹೆಜ್ಜೆಗಳನ್ನು ತೆಗೆದುಕೊಂಡಿದ್ದಾರೆ, ಮತ್ತು ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?

“ಯೇಸು ಕ್ರಿಸ್ತನ ಯಜ್ಞದ ಆಧಾರದ ಮೇಲೆ ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ಯೆಹೋವನ ಚಿತ್ತವನ್ನು ಮಾಡಲು ನಿಮ್ಮನ್ನೇ ಆತನಿಗೆ ಸಮರ್ಪಿಸಿಕೊಂಡಿದ್ದೀರೊ?” ದೀಕ್ಷಾಸ್ನಾನ ಭಾಷಣದ ಅಂತ್ಯದಲ್ಲಿ ದೀಕ್ಷಾಸ್ನಾನದ ಅಭ್ಯರ್ಥಿಗಳಿಂದ ಉತ್ತರಿಸಲ್ಪಡುವ ಎರಡು ಪ್ರಶ್ನೆಗಳಲ್ಲಿ ಇದು ಒಂದು. ಕ್ರೈಸ್ತರು ಏಕೆ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವ ಅಗತ್ಯವಿದೆ? ದೇವರಿಗೆ ಸಮರ್ಪಿಸಿಕೊಂಡಿರುವುದು ನಮಗೆ ಹೇಗೆ ಪ್ರಯೋಜನ ತರುವುದು? ದೇವರಿಗೆ ತನ್ನನ್ನು ಸಮರ್ಪಿಸಿಕೊಂಡಿರದೆ ಇದ್ದಲ್ಲಿ ಒಬ್ಬನು ಏಕೆ ಆತನನ್ನು ಅಂಗೀಕಾರಾರ್ಹವಾಗಿ ಆರಾಧಿಸಲು ಸಾಧ್ಯವಿಲ್ಲ? ಈ ಪ್ರಶ್ನೆಗಳ ಉತ್ತರಗಳನ್ನು ಅರ್ಥಮಾಡಿಕೊಳ್ಳಲು ಮೊದಲು ನಾವು ಸಮರ್ಪಣೆ ಅಂದರೆ ಏನು ಎಂಬುದನ್ನು ಪರಿಗಣಿಸಬೇಕು.

2. ಒಬ್ಬನು ತನ್ನನ್ನು ದೇವರಿಗೆ ಸಮರ್ಪಿಕೊಳ್ಳುವುದೆಂದರೆ ಏನು ಅರ್ಥ?

2 ಒಬ್ಬನು ತನ್ನನ್ನು ದೇವರಿಗೆ ಸಮರ್ಪಿಕೊಳ್ಳುವುದೆಂದರೆ ಏನು ಅರ್ಥ? ಅಪೊಸ್ತಲ ಪೌಲನು ದೇವರೊಂದಿಗೆ ಹೊಂದಿದ್ದ ಸಂಬಂಧವನ್ನು ಹೇಗೆ ವರ್ಣಿಸಿದ್ದಾನೆ ಎಂಬುದನ್ನು ಗಮನಿಸಿ. ಅಪಾಯಕ್ಕೆ ಸಿಲುಕಿಕೊಂಡಿದ್ದ ಒಂದು ಹಡಗಿನಲ್ಲಿದ್ದ ಅನೇಕರ ಮುಂದೆ ಅವನು ಯೆಹೋವನನ್ನು ‘ನಾನು ಯಾರಿಗೆ ಸೇರಿದ್ದೇನೋ ಆ ದೇವರು’ ಎಂದು ಕರೆದನು. (ಅ. ಕಾರ್ಯಗಳು 27:22-24 ಓದಿ.) ನಿಜ ಕ್ರೈಸ್ತರೆಲ್ಲರೂ ಯೆಹೋವನಿಗೆ ಸೇರಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಲೋಕವೆಲ್ಲವೂ “ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾ. 5:19) ಕ್ರೈಸ್ತರು ಪ್ರಾರ್ಥನೆಯಲ್ಲಿ ಸ್ವೀಕರಣೀಯ ಸಮರ್ಪಣೆಯನ್ನು ಮಾಡಿಕೊಳ್ಳುವಾಗ ಯೆಹೋವನಿಗೆ ಸೇರಿದವರಾಗುತ್ತಾರೆ. ಇಂಥ ಸಮರ್ಪಣೆಯು ಒಂದು ವೈಯಕ್ತಿಕ ಪ್ರತಿಜ್ಞೆಯಾಗಿದೆ. ಇದರ ನಂತರ ನೀರಿನ ದೀಕ್ಷಾಸ್ನಾನ ಮಾಡಲಾಗುತ್ತದೆ.

3. ಯೇಸುವಿನ ದೀಕ್ಷಾಸ್ನಾನ ಯಾವುದರ ಸಂಕೇತವಾಗಿತ್ತು, ಮತ್ತು ಅವನ ಹಿಂಬಾಲಕರು ಅವನ ಮಾದರಿಯನ್ನು ಹೇಗೆ ಅನುಕರಿಸಬಲ್ಲರು?

3 ಯೇಸುವು ದೇವರ ಚಿತ್ತವನ್ನು ಮಾಡುವ ವೈಯಕ್ತಿಕ ಆಯ್ಕೆಯನ್ನು ಮಾಡಿದಾಗ ನಮಗೆ ಒಂದು ಒಳ್ಳೆಯ ಮಾದರಿಯನ್ನಿಟ್ಟನು. ಅವನು ಸಮರ್ಪಿತ ಜನಾಂಗವಾಗಿದ್ದ ಇಸ್ರಾಯೇಲ್‌ನಲ್ಲಿ ಹುಟ್ಟಿದ್ದರಿಂದ ಈ ಮೊದಲೇ ದೇವರಿಗೆ ಸಮರ್ಪಿತನಾಗಿದ್ದನು. ಆದರೂ ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಧರ್ಮಶಾಸ್ತ್ರದಿಂದ ಅಗತ್ಯಪಡಿಸಲಾದದ್ದಕ್ಕಿಂತ ಹೆಚ್ಚಿನದ್ದನ್ನು ಅವನು ಮಾಡಿದನು. ಅವನು ಹೀಗಂದನೆಂದು ದೇವರ ವಾಕ್ಯವು ಸೂಚಿಸುತ್ತದೆ: “ಇಗೋ ದೇವರೇ, ನಾನು . . . ನಿನ್ನ ಚಿತ್ತವನ್ನು ಮಾಡಲು ಬಂದಿದ್ದೇನೆ.” (ಇಬ್ರಿ. 10:7; ಲೂಕ 3:21) ಆದುದರಿಂದ ಯೇಸುವಿನ ದೀಕ್ಷಾಸ್ನಾನವು ಅವನ ತಂದೆಯ ಚಿತ್ತವನ್ನು ಮಾಡಲು ತನ್ನನ್ನು ದೇವರಿಗೆ ಅರ್ಪಿಸಿಕೊಂಡದ್ದರ ಸಂಕೇತವಾಗಿತ್ತು. ಅವನ ಹಿಂಬಾಲಕರು ತಮ್ಮನ್ನು ದೀಕ್ಷಾಸ್ನಾನಕ್ಕಾಗಿ ನೀಡಿಕೊಳ್ಳುವಾಗ ಅವನ ಮಾದರಿಯನ್ನು ಅನುಕರಿಸುತ್ತಾರೆ. ಆದರೆ ಅವರು ನೀರಿನ ದೀಕ್ಷಾಸ್ನಾನ ಪಡೆದುಕೊಳ್ಳುವುದು, ಪ್ರಾರ್ಥನೆಯಲ್ಲಿ ದೇವರಿಗೆ ವೈಯಕ್ತಿಕ ಸಮರ್ಪಣೆಯನ್ನು ಮಾಡಿಕೊಂಡಿದ್ದಾರೆ ಎಂಬುದರ ಬಹಿರಂಗ ತೋರ್ಪಡಿಸುವಿಕೆಯಾಗಿದೆ.

ಸಮರ್ಪಣೆ ನಮಗೆ ಹೇಗೆ ಪ್ರಯೋಜನಕರ?

4. ದಾವೀದ ಮತ್ತು ಯೋನಾತಾನರ ನಡುವಣ ಗೆಳೆತನವು ವಚನಬದ್ಧತೆಯ ಕುರಿತು ನಮಗೇನನ್ನು ತಿಳಿಸುತ್ತದೆ?

4 ಕ್ರೈಸ್ತ ಸಮರ್ಪಣೆ ಒಂದು ಗಂಭೀರ ವಿಷಯ. ಅದು ಕೇವಲ ವಚನಬದ್ಧತೆಗಿಂತ ಹೆಚ್ಚಿನದ್ದು. ಹಾಗಾದರೆ ಸಮರ್ಪಣೆ ಮಾಡುವುದು ನಮಗೆ ಹೇಗೆ ಪ್ರಯೋಜನಕರ? ಹೋಲಿಕೆಗಾಗಿ, ಮಾನವ ಸಂಬಂಧಗಳಲ್ಲಿ ವಚನಬದ್ಧತೆಯನ್ನು ತೋರಿಸುವುದು ಹೇಗೆ ಪ್ರಯೋಜನಗಳನ್ನು ತರುತ್ತದೆ ಎಂಬುದನ್ನು ಪರಿಗಣಿಸೋಣ. ಉದಾಹರಣೆಗೆ ಗೆಳೆತನವನ್ನು ತೆಗೆದುಕೊಳ್ಳಿ. ನಮಗೆ ಒಬ್ಬ ಗೆಳೆಯನಿರುವ ಸುಯೋಗವು ಸಿಗಬೇಕಾದರೆ ಅವನ ಗೆಳೆಯನಾಗಿರುವ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳಬೇಕು. ಇದರಲ್ಲಿ ವಚನಬದ್ಧತೆಯು ಒಳಗೂಡಿರುತ್ತದೆ. ಅಂದರೆ ನಿಮ್ಮ ಸ್ನೇಹಿತನ ಬಗ್ಗೆ ಚಿಂತನೆ ತೋರಿಸುವ ಹೊಣೆಗಾರಿಕೆ ನಿಮಗಿರುವುದು. ಬೈಬಲ್‌ನಲ್ಲಿ ತಿಳಿಸಲಾದ ಒಂದು ಅತಿ ಎದ್ದುಕಾಣುವ ಗೆಳೆತನವು ದಾವೀದ ಮತ್ತು ಯೋನಾತಾನರದ್ದು. ಅವರು ಪರಸ್ಪರ ಗೆಳೆತನದ ಒಡಂಬಡಿಕೆಯನ್ನೂ ಮಾಡಿಕೊಂಡರು. (1 ಸಮುವೇಲ 17:57; 18:1, 3 ಓದಿ.) ಆ ರೀತಿಯ ವಚನಬದ್ಧತೆಯ ಮಟ್ಟವು ಅಪರೂಪ. ಆದರೂ, ಗೆಳೆಯ-ಗೆಳತಿಯರು ವಚನಬದ್ಧರಾಗಿರುವಾಗ ಅಥವಾ ಪರಸ್ಪರ ಹೊಣೆಗಾರಿಕೆ ತೋರಿಸುವಾಗ ಹೆಚ್ಚಿನ ಗೆಳೆತನಗಳು ಯಶಸ್ವಿಯಾಗುತ್ತವೆ.—ಜ್ಞಾನೋ. 17:17; 18:24.

5. ಒಳ್ಳೇ ಯಜಮಾನನಿಗೆ ಸೇರಿಕೊಳ್ಳುವ ಆಳೊಬ್ಬನು ತನ್ನ ಧಣಿಯಿಂದ ಹೇಗೆ ಶಾಶ್ವತವಾಗಿ ಪ್ರಯೋಜನ ಹೊಂದಬಹುದಿತ್ತು?

5 ವಚನಬದ್ಧತೆಯನ್ನು ತೋರಿಸುವ ಮೂಲಕ ಪ್ರಯೋಜನ ಪಡೆದ ಇನ್ನೊಂದು ಸಂಬಂಧವನ್ನು ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವು ವಿವರಿಸುತ್ತದೆ. ಒಳ್ಳೇ ಯಜಮಾನನಿಂದ ದೊರೆಯುವ ಭದ್ರತೆಗಾಗಿ ದಾಸನೊಬ್ಬನು ಅವನಲ್ಲಿ ಖಾಯಂ ಉಳಿಯಲು ಬಯಸುವುದಾದರೆ, ಅವನು ಧಣಿಯೊಂದಿಗೆ ಒಂದು ಶಾಶ್ವತ ಹಾಗೂ ಕಟ್ಟುಪಡಿಸುವ ಕರಾರನ್ನು ಮಾಡಿಕೊಳ್ಳಬಹುದಿತ್ತು. ಧರ್ಮಶಾಸ್ತ್ರ ಹೇಳುವುದು: “ಆ ದಾಸನು—ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿ ಮಕ್ಕಳನ್ನೂ ಪ್ರೀತಿಸುತ್ತೇನಾದದರಿಂದ ಅವರನ್ನು ಅಗಲಿ ಬಿಡುಗಡೆಯಾಗಿ ಹೋಗಲೊಲ್ಲೆನೆಂದು ದೃಢವಾಗಿ ಹೇಳಿದರೆ ಅವನ ಯಜಮಾನನು ದೇವರ ಬಳಿಗೆ ಅವನನ್ನು ಕರಕೊಂಡು ಬಂದು ಕದದ ಹತ್ತಿರ ಅಥವಾ ಬಾಗಲಿನ ನಿಲುವು ಪಟ್ಟಿಗಳ ಹತ್ತಿರ ನಿಲ್ಲಿಸಿ ಅವನ ಕಿವಿಯನ್ನು ಸಲಾಕೆಯಿಂದ ಚುಚ್ಚಬೇಕು. ಆ ಹೊತ್ತಿನಿಂದ ಇವನು ಶಾಶ್ವತವಾಗಿ ಅವನಿಗೆ ದಾಸನಾಗಿರಬೇಕು.”—ವಿಮೋ. 21:5, 6.

6, 7. (ಎ) ವಚನಬದ್ಧತೆ ಜನರಿಗೆ ಹೇಗೆ ಪ್ರಯೋಜನ ತರುತ್ತದೆ? (ಬಿ) ಯೆಹೋವನೊಂದಿಗಿರುವ ನಮ್ಮ ಸಂಬಂಧದ ಕುರಿತು ಅದೇನನ್ನು ಸೂಚಿಸುತ್ತದೆ?

6 ಮೇಲ್ಮಟ್ಟದ ವಚನಬದ್ಧತೆಯನ್ನು ಅವಶ್ಯಪಡಿಸುವ ಇನ್ನೊಂದು ಸಂಬಂಧವು ವಿವಾಹ. ಅದು ಒಬ್ಬ ವ್ಯಕ್ತಿಗೆ ತೋರಿಸುವ ವಚನಬದ್ಧತೆಯಾಗಿದೆ, ಒಂದು ಕರಾರಿಗಲ್ಲ. ಮದುವೆಮಾಡಿಕೊಳ್ಳದೆ ಒಟ್ಟಿಗೆ ಜೀವಿಸುವ ಇಬ್ಬರು ವ್ಯಕ್ತಿಗಳಾಗಲಿ ಅವರಿಗೆ ಹುಟ್ಟುವ ಮಕ್ಕಳಾಗಲಿ ನಿಜ ಭದ್ರತೆಯನ್ನು ಎಂದೂ ಆನಂದಿಸಶಕ್ತರಲ್ಲ. ಆದರೆ ಗೌರವಾರ್ಹ ಮದುವೆಯಲ್ಲಿ ಒಬ್ಬರಿಗೊಬ್ಬರು ವಚನಬದ್ಧರಾಗಿರುವ ವಿವಾಹ ಜೊತೆಯು, ಸಮಸ್ಯೆಗಳೆದ್ದಾಗ ತಮ್ಮ ಕಷ್ಟಗಳನ್ನು ಪ್ರೀತಿಯಿಂದ ಬಗೆಹರಿಸಲು ಶ್ರಮಿಸುವಂತೆ ದೇವರ ವಾಕ್ಯವು ಬಲವಾದ ಕಾರಣವನ್ನು ಕೊಡುತ್ತದೆ.—ಮತ್ತಾ. 19:5, 6; 1 ಕೊರಿಂ. 13:7, 8; ಇಬ್ರಿ. 13:4.

7 ಬೈಬಲ್‌ ಕಾಲದಲ್ಲಿ ಜನರು ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಬದ್ಧಪಡಿಸುವ ಕರಾರುಗಳ ಮೂಲಕವಾಗಿ ಪ್ರಯೋಜನ ಹೊಂದುತ್ತಿದ್ದರು. (ಮತ್ತಾ. 20:1, 2, 8) ಇಂದು ಸಹ ಅದೇ ರೀತಿ ಇದೆ. ಉದಾಹರಣೆಗೆ, ನಾವು ಒಂದು ವ್ಯಾಪಾರೋದ್ಯಮಕ್ಕೆ ಕೈಹಾಕುವ ಮೊದಲು ಅಥವಾ ಒಂದು ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುವ ಮೊದಲು ಬದ್ಧಪಡಿಸುವ ಲಿಖಿತ ಒಪ್ಪಂದ ಅಥವಾ ಲಿಖಿತ ಕರಾರನ್ನು ಮಾಡಿಕೊಳ್ಳುವುದರಿಂದ ಪ್ರಯೋಜನ ಪಡೆಯುತ್ತೇವೆ. ಹೀಗೆ ವಚನಬದ್ಧತೆಯು ಗೆಳೆತನ, ವಿವಾಹ ಮತ್ತು ಉದ್ಯೋಗದಂಥ ಸಂಬಂಧಗಳನ್ನು ಉತ್ತಮಗೊಳಿಸುವುದಾದರೆ, ಯೆಹೋವನೊಂದಿಗಿನ ಸಂಬಂಧದಿಂದಾಗಿ ನೀವು ಮಾಡುವ ಷರತ್ತಿಲ್ಲದ ಸಮರ್ಪಣೆಯು ನಿಮಗೆ ಇನ್ನೂ ಹೆಚ್ಚಿನ ಪ್ರಯೋಜನವನ್ನು ತರುವುದು ಖಂಡಿತ! ಯೆಹೋವ ದೇವರಿಗೆ ಸಮರ್ಪಣೆ ಮಾಡಿಕೊಳ್ಳುವುದರ ಮೂಲಕ ಪೂರ್ವಕಾಲದಲ್ಲಿ ಜನರು ಹೇಗೆ ಪ್ರಯೋಜನ ಪಡೆದರು ಮತ್ತು ಇದು ಹೇಗೆ ಕೇವಲ ವಚನಬದ್ಧತೆಗಿಂತಲೂ ಹೆಚ್ಚಿನದ್ದನ್ನು ಒಳಗೂಡಿತ್ತು ಎಂಬುದನ್ನು ನಾವೀಗ ಪರಿಗಣಿಸೋಣ.

ಇಸ್ರಾಯೇಲು ದೇವರಿಗೆ ಮಾಡಿಕೊಂಡ ಸಮರ್ಪಣೆಯಿಂದ ಪ್ರಯೋಜನ

8. ಇಸ್ರಾಯೇಲು ದೇವರಿಗೆ ಸಮರ್ಪಿತವಾಗಿರುವುದರಲ್ಲಿ ಏನು ಒಳಗೂಡಿತ್ತು?

8 ಇಸ್ರಾಯೇಲು ದೇವರಿಗೆ ಒಂದು ಪ್ರತಿಜ್ಞೆಯನ್ನು ಮಾಡಿದಾಗ ಆ ಇಡೀ ಜನಾಂಗವು ಯೆಹೋವನಿಗೆ ಸಮರ್ಪಿತವಾಯಿತು. ಯೆಹೋವನು ಅವರೆಲ್ಲರನ್ನು ಸೀನಾಯಿ ಬೆಟ್ಟದ ಬಳಿ ಕೂಡಿಸಿ, “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ” ಎಂದು ಹೇಳಿದನು. ಅದಕ್ಕೆ ಜನರು, “ಯೆಹೋವನು ಹೇಳಿದಂತೆಯೇ ಮಾಡುವೆವು” ಎಂದು ಒಗ್ಗಟ್ಟಾಗಿ ಉತ್ತರಕೊಟ್ಟರು. (ವಿಮೋ. 19:4-8) ಇಸ್ರಾಯೇಲು ದೇವರಿಗೆ ಸಮರ್ಪಿತವಾಗಿರುವುದರಲ್ಲಿ ಕೇವಲ ಯೆಹೋವನು ಹೇಳುವುದನ್ನು ಮಾಡುವ ಬದ್ಧತೆಗಿಂತಲೂ ಹೆಚ್ಚಿನದ್ದು ಒಳಗೂಡಿತ್ತು. ಅವರು ಯೆಹೋವನಿಗೆ ಸೇರಿದ್ದಾರೆ ಎಂಬುದು ಇದರಲ್ಲಿ ಒಳಗೂಡಿತ್ತು ಮತ್ತು ಯೆಹೋವನು ಅವರನ್ನು ‘ಸ್ವಕೀಯಜನರಾಗಿ’ ಉಪಚರಿಸಿದನು.

9. ದೇವರಿಗೆ ಸಮರ್ಪಿತವಾಗಿರುವುದರಿಂದ ಇಸ್ರಾಯೇಲ್‌ ಹೇಗೆ ಪ್ರಯೋಜನ ಪಡೆಯಿತು?

9 ಯೆಹೋವನಿಗೆ ಸೇರಿದವರಾಗಿರುವ ಮೂಲಕ ಇಸ್ರಾಯೇಲ್ಯರು ಪ್ರಯೋಜನ ಪಡೆದರು. ಒಬ್ಬ ಪ್ರೀತಿಯುಳ್ಳ ತಂದೆ ತನ್ನ ಮಗುವಿನ ಕಾಳಜಿ ವಹಿಸುವಂತೆ ಆತನು ನಿಷ್ಠಾವಂತನಾಗಿದ್ದು ಅವರ ಕಾಳಜಿ ವಹಿಸಿದನು. ಇಸ್ರಾಯೇಲಿಗೆ ದೇವರು ಹೇಳಿದ್ದು: “ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ.” (ಯೆಶಾ. 49:15) ಯೆಹೋವನು ಅವರಿಗೆ ಧರ್ಮಶಾಸ್ತ್ರದ ಮಾರ್ಗದರ್ಶನೆ, ಪ್ರವಾದಿಗಳ ಪ್ರೋತ್ಸಾಹನೆ ಮತ್ತು ದೇವದೂತರ ಸಂರಕ್ಷಣೆಯನ್ನು ಒದಗಿಸಿದನು. ಒಬ್ಬ ಕೀರ್ತನೆಗಾರನು ಬರೆದದ್ದು: “ಆತನು ತನ್ನ ವಾಕ್ಯವನ್ನು ಯಾಕೋಬ್ಯರಿಗೆ ತಿಳಿಸುತ್ತಾನೆ; ತನ್ನ ನಿಯಮವಿಧಿಗಳನ್ನು ಇಸ್ರಾಯೇಲ್ಯರಿಗೆ ಪ್ರಕಟಿಸುತ್ತಾನೆ. ಬೇರೆ ಯಾವ ಜನಾಂಗದವರಿಗೂ ಆತನು ಹೀಗೆ ಮಾಡಲಿಲ್ಲ.” (ಕೀರ್ತ. 147:19, 20; ಕೀರ್ತನೆ 34:7, 19; 48:14 ಓದಿ.) ಯೆಹೋವನು ಪೂರ್ವಕಾಲದಲ್ಲಿ ತನಗೆ ಸೇರಿದ್ದ ಆ ಜನಾಂಗದ ಕಾಳಜಿ ವಹಿಸಿದಂತೆಯೇ ಇಂದು ತನಗೆ ಸಮರ್ಪಣೆ ಮಾಡಿಕೊಳ್ಳುವವರ ಕಾಳಜಿ ವಹಿಸುವನು.

ದೇವರಿಗೆ ನಮ್ಮನ್ನು ಏಕೆ ಸಮರ್ಪಿಸಿಕೊಳ್ಳಬೇಕು?

10, 11. ನಾವು ದೇವರ ವಿಶ್ವವ್ಯಾಪಿ ಕುಟುಂಬದ ಭಾಗವಾಗಿ ಹುಟ್ಟಿದ್ದೇವೊ? ವಿವರಿಸಿ.

10 ಸಮರ್ಪಣೆ ಮತ್ತು ದೀಕ್ಷಾಸ್ನಾನದ ಕುರಿತು ಕೆಲವರು ಯೋಚಿಸುತ್ತಿರುವಾಗ, ‘ದೇವರಿಗೆ ನನ್ನನ್ನು ಸಮರ್ಪಿಸಿಕೊಳ್ಳದೆಯೇ ನಾನು ಆತನನ್ನು ಏಕೆ ಆರಾಧಿಸಲು ಸಾಧ್ಯವಿಲ್ಲ?’ ಎಂದು ನೆನಸಬಹುದು. ದೇವರೊಂದಿಗೆ ನಾವು ಈಗ ಹೊಂದಿರುವ ನಿಲುವಿನ ನಿಜತ್ವವನ್ನು ಪರಿಗಣಿಸುವಾಗ ಕಾರಣ ಸ್ಪಷ್ಟವಾಗುತ್ತದೆ. ಆದಾಮನ ಪಾಪದಿಂದಾಗಿ ನಾವೆಲ್ಲರೂ ದೇವರ ಕುಟುಂಬದ ಹೊರಗೆ, ಆತನಿಗೆ ಸೇರಿದವರಾಗಿಲ್ಲದೆ ಹುಟ್ಟಿದ್ದೇವೆ ಎಂಬುದನ್ನು ಜ್ಞಾಪಕದಲ್ಲಿಡಿ. (ರೋಮ. 3:23; 5:12) ದೇವರ ವಿಶ್ವವ್ಯಾಪಿ ಕುಟುಂಬದಲ್ಲಿ ಸ್ವೀಕರಿಸಲ್ಪಡಲು ನಾವು ನಮ್ಮನ್ನು ಆತನಿಗೆ ಸಮರ್ಪಿಸಿಕೊಳ್ಳುವುದು ಅತ್ಯಾವಶ್ಯಕ. ಅದು ಏಕೆಂದು ನೋಡೋಣ.

11 ಮಾನವಕುಲದಲ್ಲಿರುವ ಯಾವ ತಂದೆಯಿಂದಲೂ ತನ್ನ ಮಕ್ಕಳಿಗೆ ಪರಿಪೂರ್ಣ ಜೀವವನ್ನು ದಾಟಿಸಲು ಸಾಧ್ಯವಿರಲಿಲ್ಲ. (1 ತಿಮೊ. 6:19) ನಾವು ದೇವರ ಮಕ್ಕಳಾಗಿ ಜನಿಸಲಿಲ್ಲ. ಏಕೆಂದರೆ ಪ್ರಥಮ ಮಾನವ ದಂಪತಿ ಪಾಪಮಾಡಿದಾಗ ಮಾನವರು ಅವರ ಪ್ರೀತಿಪರ ತಂದೆ ಮತ್ತು ಸೃಷ್ಟಿಕರ್ತನಿಂದ ಬೇರ್ಪಡಿಸಲ್ಪಟ್ಟರು. (ಧರ್ಮೋಪದೇಶಕಾಂಡ 32:5 ಹೋಲಿಸಿ.) ಆ ಸಮಯದಿಂದ ಇಡೀ ಮಾನವಕುಲವು ಯೆಹೋವನ ವಿಶ್ವವ್ಯಾಪಿ ಕುಟುಂಬದ ಹೊರಗೆ, ದೇವರಿಂದ ವಿಮುಖವಾಗಿ ಜೀವಿಸಿದೆ.

12. (ಎ) ಅಪರಿಪೂರ್ಣ ಮಾನವರು ಹೇಗೆ ದೇವರ ಕುಟುಂಬದ ಸದಸ್ಯರಾಗಬಲ್ಲರು? (ಬಿ) ದೀಕ್ಷಾಸ್ನಾನಕ್ಕೆ ಮುಂಚೆ ನಾವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು?

12 ಆದರೂ ವ್ಯಕ್ತಿಗತವಾಗಿ ನಮ್ಮನ್ನು ಆತನ ಅಂಗೀಕೃತ ಸೇವಕರ ಕುಟುಂಬದೊಳಗೆ ಸ್ವೀಕರಿಸುವಂತೆ ನಾವು ದೇವರನ್ನು ಕೇಳಿಕೊಳ್ಳಬಲ್ಲೆವು. * ಅದು ನಮ್ಮಂಥ ಪಾಪಿಗಳಿಗೆ ಹೇಗೆ ಸಾಧ್ಯ? ಅಪೊಸ್ತಲ ಪೌಲನು ಬರೆದದ್ದು: ‘ನಾವು ವೈರಿಗಳಾಗಿದ್ದಾಗಲೇ ದೇವರ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನ ಸಂಬಂಧಕ್ಕೆ ಬಂದೆವು.’ (ರೋಮ. 5:10) ದೀಕ್ಷಾಸ್ನಾನದ ಸಮಯದಲ್ಲಿ, ನಮಗೆ ಒಳ್ಳೇ ಮನಸ್ಸಾಕ್ಷಿ ಕೊಡುವಂತೆ ದೇವರನ್ನು ವಿನಂತಿಸುತ್ತೇವೆ. ಆಗ ದೇವರು ನಮ್ಮನ್ನು ಸ್ವೀಕರಿಸುವಂತಾಗುವುದು. (1 ಪೇತ್ರ 3:21) ಆದರೆ ದೀಕ್ಷಾಸ್ನಾನಕ್ಕೆ ಮುಂಚೆ ನಾವು ತೆಗೆದುಕೊಳ್ಳಬೇಕಾದ ಕೆಲವು ಹೆಜ್ಜೆಗಳಿವೆ. ನಾವು ದೇವರ ಕುರಿತು ತಿಳಿದುಕೊಳ್ಳಬೇಕು, ಆತನಲ್ಲಿ ಭರವಸೆ ಇಡಲು ಕಲಿಯಬೇಕು, ಪಶ್ಚಾತ್ತಾಪಪಡಬೇಕು ಮತ್ತು ನಮ್ಮ ಮಾರ್ಗಗಳನ್ನು ಬದಲಾಯಿಸಿಕೊಳ್ಳಬೇಕು. (ಯೋಹಾ. 17:3; ಅ. ಕಾ. 3:19; ಇಬ್ರಿ. 11:6) ಮಾತ್ರವಲ್ಲದೆ ನಾವು ದೇವರ ಕುಟುಂಬದಲ್ಲಿ ಸ್ವೀಕರಿಸಲ್ಪಡುವುದಕ್ಕಿಂತ ಮುಂಚೆ ಇನ್ನೇನನ್ನೋ ಮಾಡುವ ಅಗತ್ಯವಿದೆ. ಏನದು?

13. ಯೆಹೋವನ ಅಂಗೀಕೃತ ಆರಾಧಕರ ಕುಟುಂಬದ ಭಾಗವಾಗಲು ಒಬ್ಬನು ದೇವರಿಗೆ ಸಮರ್ಪಣೆಯ ಪ್ರತಿಜ್ಞೆಯನ್ನು ಮಾಡುವುದು ಏಕೆ ಸೂಕ್ತವಾಗಿದೆ?

13 ದೇವರಿಂದ ವಿಮುಖನಾಗಿರುವ ಒಬ್ಬ ವ್ಯಕ್ತಿ ದೇವರ ಅಂಗೀಕೃತ ಸೇವಕರ ಕುಟುಂಬದ ಸದಸ್ಯನಾಗುವ ಮುಂಚೆ ಯೆಹೋವನಿಗೆ ಗಂಭೀರವಾಗಿ ಮಾತುಕೊಡಬೇಕು. ಏಕೆ ಎಂದು ಅರ್ಥಮಾಡಿಕೊಳ್ಳಲು, ಒಬ್ಬ ಅನಾಥ ಯುವಕನಲ್ಲಿ ದಯಾಭರಿತ ಆಸಕ್ತಿಯನ್ನು ತೋರಿಸುವ ಒಬ್ಬ ಗೌರವಸ್ಥ ತಂದೆಯನ್ನು ಚಿತ್ರಿಸಿಕೊಳ್ಳಿ. ಅವನು ಆ ಅನಾಥ ಹುಡುಗನನ್ನು ತನ್ನ ಕುಟುಂಬದ ಸದಸ್ಯನಾಗಿ ದತ್ತುತೆಗೆದುಕೊಳ್ಳಲು ಬಯಸುತ್ತಾನೆ. ಈ ತಂದೆ ಒಬ್ಬ ಒಳ್ಳೇ ವ್ಯಕ್ತಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಅವನು ಆ ಯುವಕನನ್ನು ತನ್ನ ಮಗನಾಗಿ ಸ್ವೀಕರಿಸುವುದಕ್ಕಿಂತ ಮುಂಚೆ ಹುಡುಗನು ಒಂದು ಮಾತುಕೊಡಬೇಕೆಂದು ಬಯಸುತ್ತಾನೆ. ಆದುದರಿಂದ ತಂದೆ ಹೇಳುವುದು: “ನಾನು ನಿನ್ನನ್ನು ನನ್ನ ಮಗನಾಗಿ ಸ್ವೀಕರಿಸುವುದಕ್ಕಿಂತ ಮುಂಚೆ ನೀನು ನನ್ನನ್ನು ನಿನ್ನ ತಂದೆಯಾಗಿ ಪ್ರೀತಿಸಿ ಗೌರವಿಸುವಿಯೋ ಎಂದು ತಿಳಿದುಕೊಳ್ಳಲು ಬಯಸುತ್ತೇನೆ.” ಆ ಯುವಕನು ಗಂಭೀರವಾಗಿ ಮಾತುಕೊಡಲು ಬಯಸುವುದಾದರೆ ಮಾತ್ರ ಈ ವ್ಯಕ್ತಿ ಅವನನ್ನು ತನ್ನ ಕುಟುಂಬದಲ್ಲಿ ಸೇರಿಸಿಕೊಳ್ಳುವನು. ಇದು ನ್ಯಾಯಸಮ್ಮತವಲ್ಲವೆ? ತದ್ರೀತಿಯಲ್ಲಿ, ತನಗೆ ಸಮರ್ಪಣೆಯ ಪ್ರತಿಜ್ಞೆಯನ್ನು ಮಾಡಲು ಬಯಸುವವರನ್ನು ಮಾತ್ರ ಯೆಹೋವನು ತನ್ನ ಕುಟುಂಬದಲ್ಲಿ ಸೇರಿಸಿಕೊಳ್ಳುತ್ತಾನೆ. ಬೈಬಲ್‌ ಹೇಳುವುದು: “ನಿಮ್ಮನ್ನೇ ಆತನಿಗೆ ಒಂದು ಸಜೀವ ಯಜ್ಞವಾಗಿ, ಸಮರ್ಪಿತರಾಗಿ ಮತ್ತು ಆತನ ಅಂಗೀಕಾರಕ್ಕೆ ಯೋಗ್ಯರಾಗಿ ಅರ್ಪಿಸಿಕೊಳ್ಳಿ.”—ರೋಮ. 12:1, ದ ನ್ಯೂ ಇಂಗ್ಲಿಷ್‌ ಬೈಬಲ್‌.

ಪ್ರೀತಿ ಮತ್ತು ನಂಬಿಕೆಯ ಕ್ರಿಯೆ

14. ಸಮರ್ಪಣೆಯು ಯಾವ ವಿಧದಲ್ಲಿ ಪ್ರೀತಿಯ ಅಭಿವ್ಯಕ್ತಿಯಾಗಿದೆ?

14 ದೇವರಿಗೆ ಸಮರ್ಪಣೆಯ ಪ್ರತಿಜ್ಞೆಯನ್ನು ಮಾಡುವುದು ಯೆಹೋವನ ಮೇಲೆ ನಾವಿಟ್ಟಿರುವ ಹೃತ್ಪೂರ್ವಕ ಪ್ರೀತಿಯ ಅಭಿವ್ಯಕ್ತಿಯಾಗಿದೆ. ಕೆಲವು ವಿಧಗಳಲ್ಲಿ ಇದು ವಿವಾಹದ ಪ್ರತಿಜ್ಞೆಗೆ ಹೋಲುತ್ತದೆ. ಒಬ್ಬ ಕ್ರೈಸ್ತ ವರನು, ಏನೇ ಆದರೂ ತನ್ನ ವಧುವಿಗೆ ನಿಷ್ಠಾವಂತನಾಗಿರುವೆನು ಎಂದು ಪ್ರತಿಜ್ಞೆಮಾಡುವ ಮೂಲಕ ಅವನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಇದು ಏನನ್ನೋ ಮಾಡುತ್ತೇನೆಂದು ಕೇವಲ ಮಾತುಕೊಡುವುದಲ್ಲ, ಒಬ್ಬ ವ್ಯಕ್ತಿಗೆ ಮಾಡುವ ಪ್ರತಿಜ್ಞೆಯಾಗಿದೆ. ಒಬ್ಬ ಕ್ರೈಸ್ತ ವರನು ವಿವಾಹದ ಪ್ರತಿಜ್ಞೆಯನ್ನು ಮಾಡದಿದ್ದಲ್ಲಿ ತನ್ನ ವಧುವಿನೊಂದಿಗೆ ಜೀವಿಸುವ ಸುಯೋಗ ತನಗೆ ಸಿಗಲಿಕ್ಕಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾನೆ. ತದ್ರೀತಿಯಲ್ಲಿ, ಸಮರ್ಪಣೆಯ ಪ್ರತಿಜ್ಞೆಯನ್ನು ಮಾಡದೆ ನಾವು ಯೆಹೋವನ ಕುಟುಂಬದ ಸದಸ್ಯರಾಗಿರುವುದರ ಪ್ರಯೋಜನಗಳನ್ನು ಸಂಪೂರ್ಣವಾಗಿ ಆನಂದಿಸಲಾರೆವು. ಆದುದರಿಂದ ನಾವು ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುತ್ತೇವೆ. ಏಕೆಂದರೆ ನಮ್ಮ ಅಪರಿಪೂರ್ಣತೆಯ ಹೊರತಾಗಿಯೂ ನಾವು ಆತನಿಗೆ ಸೇರಿದವರಾಗಿರಲು ಬಯಸುತ್ತೇವೆ ಮತ್ತು ಏನೇ ಆದರೂ ಆತನಿಗೆ ನಿಷ್ಠೆಯನ್ನು ತೋರಿಸುವ ದೃಢತೀರ್ಮಾನವನ್ನು ಮಾಡುತ್ತೇವೆ.—ಮತ್ತಾ. 22:37.

15. ಸಮರ್ಪಣೆ ಹೇಗೆ ನಂಬಿಕೆಯ ಕ್ರಿಯೆಯಾಗಿದೆ?

15 ನಾವು ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವುದು ನಂಬಿಕೆಯ ಒಂದು ಕ್ರಿಯೆಯಾಗಿದೆ. ಏಕೆ? ಏಕೆಂದರೆ ಯೆಹೋವನಲ್ಲಿ ನಾವಿಟ್ಟಿರುವ ನಂಬಿಕೆಯು ‘ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದು’ ಎಂಬ ದೃಢಭರವಸೆಯನ್ನು ನಮಗೆ ಕೊಡುತ್ತದೆ. (ಕೀರ್ತ. 73:28, NIBV) ನಾವು “ವಿಕೃತವಾದ ಮತ್ತು ವಕ್ರವಾದ ಸಂತತಿಯ” ಮಧ್ಯೆ ಜೀವಿಸುತ್ತಿರುವಾಗ ದೇವರೊಂದಿಗೆ ನಡೆಯುವುದು ಯಾವಾಗಲೂ ಸುಲಭವಾಗಿರಲಿಕ್ಕಿಲ್ಲ ಎಂಬುದನ್ನು ಬಲ್ಲವರಾಗಿದ್ದೇವೆ. ಆದರೆ ನಮ್ಮ ಪ್ರಯತ್ನಗಳನ್ನು ಬೆಂಬಲಿಸುವೆನೆಂದು ದೇವರು ಕೊಟ್ಟಿರುವ ವಾಗ್ದಾನದಲ್ಲಿ ನಮಗೆ ಭರವಸೆಯಿದೆ. (ಫಿಲಿ. 2:15; 4:13) ನಾವು ಅಪರಿಪೂರ್ಣರು ಎಂಬುದು ನಮಗೆ ತಿಳಿದಿದೆ. ಆದರೆ ನಾವು ತಪ್ಪುಗಳನ್ನು ಮಾಡಿದಾಗ್ಯೂ ಯೆಹೋವನು ನಮ್ಮೊಂದಿಗೆ ಕನಿಕರದಿಂದ ವರ್ತಿಸುವನು ಎಂಬ ದೃಢನಿಶ್ಚಯ ನಮಗಿದೆ. (ಕೀರ್ತನೆ 103:13, 14; ರೋಮನ್ನರಿಗೆ 7:21-25 ಓದಿ.) ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳುವ ದೃಢತೀರ್ಮಾನವನ್ನು ಮಾಡಿರುವುದರಿಂದ ಯೆಹೋವನು ನಮ್ಮನ್ನು ಆಶೀರ್ವದಿಸುವನು ಎಂಬುದರಲ್ಲಿ ನಮಗೆ ನಂಬಿಕೆಯಿದೆ.—ಯೋಬ 27:5.

ದೇವರಿಗೆ ಮಾಡುವ ಸಮರ್ಪಣೆ ಸಂತೋಷಕ್ಕೆ ನಡಿಸುತ್ತದೆ

16, 17. ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳುವುದು ಏಕೆ ಸಂತೋಷಕ್ಕೆ ನಡಿಸುತ್ತದೆ?

16 ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳುವುದರಿಂದ ಸಂತೋಷ ಸಿಗುತ್ತದೆ. ಏಕೆಂದರೆ ಇದರಲ್ಲಿ ನಮ್ಮನ್ನೇ ಕೊಟ್ಟುಕೊಳ್ಳುವುದು ಸೇರಿರುತ್ತದೆ. ಯೇಸು, “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂದು ಹೇಳಿದಾಗ ಒಂದು ಮೂಲಭೂತ ಸತ್ಯವನ್ನು ತಿಳಿಸಿದನು. (ಅ. ಕಾ. 20:35) ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಕೊಡುವುದರಿಂದ ಸಿಗುವ ಸಂತೋಷವನ್ನು ಪೂರಾ ಅನುಭವಿಸಿದನು. ಜೀವಕ್ಕೆ ನಡಿಸುವ ದಾರಿಯನ್ನು ಕಂಡುಕೊಳ್ಳಲು ಇತರರಿಗೆ ಸಹಾಯಮಾಡಲಿಕ್ಕಾಗಿ ಅಗತ್ಯವಿದ್ದಾಗ ಅವನು ವಿಶ್ರಾಂತಿ, ಆಹಾರ ಮತ್ತು ಅನುಕೂಲವನ್ನು ಸಹ ತ್ಯಾಗಮಾಡಿದನು. (ಯೋಹಾ. 4:34) ಯೇಸು ತನ್ನ ತಂದೆಯ ಹೃದಯವನ್ನು ಸಂತೋಷಪಡಿಸುವುದರಲ್ಲಿ ಆನಂದವನ್ನು ಕಂಡುಕೊಂಡನು. ‘ನಾನು ಆತನಿಗೆ ಮೆಚ್ಚಿಕೆಯಾಗಿರುವುದನ್ನೇ ಯಾವಾಗಲೂ ಮಾಡುತ್ತೇನೆ’ ಎಂದವನು ಹೇಳಿದನು.—ಯೋಹಾ. 8:29; ಜ್ಞಾನೋ. 27:11.

17 ಹೀಗೆ ಯೇಸು ತನ್ನ ಹಿಂಬಾಲಕರಿಗೆ ಸಂತೃಪ್ತಿಕರ ಜೀವನಕ್ಕೆ ನಡಿಸುವ ಮಾರ್ಗವನ್ನು ತೋರಿಸುತ್ತಾ ಅಂದದ್ದು: ‘ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಬೇಕು.’ (ಮತ್ತಾ. 16:24) ಹಾಗೆ ಮಾಡುವುದು ನಮ್ಮನ್ನು ಯೆಹೋವನಿಗೆ ಹತ್ತಿರವಾಗಿ ಎಳೆಯುತ್ತದೆ. ಇದಕ್ಕಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುವ ಬೇರೆ ಯಾರ ಹಸ್ತದ ಕೆಳಗಾದರೂ ನಾವು ನಮ್ಮನ್ನಿರಿಸಲು ಸಾಧ್ಯವೊ?

18. ಬೇರೆ ಯಾವುದಕ್ಕಾಗಿ ಯಾರಿಗಾಗಲಿ ಸಮರ್ಪಿಸಿಕೊಂಡಿರುವುದಕ್ಕಿಂತ ಯೆಹೋವನಿಗೆ ಮಾಡಿರುವ ಸಮರ್ಪಣೆಗನುಸಾರ ಜೀವಿಸುವುದು ಏಕೆ ಹೆಚ್ಚು ಸಂತೋಷಕರ?

18 ನಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವುದು ಮತ್ತು ಅದರ ನಂತರ ಆತನ ಚಿತ್ತವನ್ನು ಮಾಡುವ ಮೂಲಕ ಆ ಸಮರ್ಪಣೆಗನುಸಾರ ಜೀವಿಸುವುದು, ಬೇರೆ ಯಾವುದಕ್ಕೇ ಅಥವಾ ಬೇರೆ ಯಾರಿಗೇ ಆಗಲಿ ಸಮರ್ಪಿಸಿಕೊಂಡಿರುವುದಕ್ಕಿಂತ ಹೆಚ್ಚಿನ ಸಂತೋಷವನ್ನು ತರುತ್ತದೆ. ಉದಾಹರಣೆಗೆ, ಅನೇಕ ಜನರು ಪ್ರಾಪಂಚಿಕ ಸ್ವತ್ತನ್ನು ಬೆನ್ನಟ್ಟುವುದಕ್ಕಾಗಿ ತಮ್ಮ ಇಡೀ ಜೀವನವನ್ನು ಮೀಸಲಾಗಿಡುತ್ತಾರೆ. ಅದರಿಂದ ಅವರಿಗೆ ನಿಜ ಸಂತೋಷ ಮತ್ತು ಸಂತೃಪ್ತಿ ಸಿಗುವುದಿಲ್ಲ. ಆದರೆ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವವರು ದೀರ್ಘಕಾಲ ಬಾಳುವ ಸಂತೋಷವನ್ನು ಪಡೆದುಕೊಳ್ಳುತ್ತಾರೆ. (ಮತ್ತಾ. 6:24) ‘ದೇವರ ಜೊತೆಕೆಲಸಗಾರರಾಗಿರುವ’ ಗೌರವವು ಅವರಿಗೆ ಸಂತೋಷವನ್ನು ತರುತ್ತದಾದರೂ ಅವರು ಮಾಡಿರುವ ಸಮರ್ಪಣೆ ಒಂದು ಕೆಲಸಕ್ಕಲ್ಲ, ಗಣ್ಯತಾಭಾವವುಳ್ಳ ನಮ್ಮ ದೇವರಿಗೇ. (1 ಕೊರಿಂ. 3:9) ಅವರ ಸ್ವತ್ಯಾಗವನ್ನು ಯೆಹೋವನು ಮೆಚ್ಚುವುದಕ್ಕಿಂತ ಹೆಚ್ಚಾಗಿ ಬೇರೆ ಯಾರೂ ಮೆಚ್ಚಸಾಧ್ಯವಿಲ್ಲ. ನಿಷ್ಠಾವಂತರು ತನ್ನ ಆರೈಕೆಯನ್ನು ಸದಾಕಾಲ ಅನುಭವಿಸುವಂತಾಗಲು ಆತನು ಅವರಿಗೆ ಯೌವನಾವಸ್ಥೆಯನ್ನೂ ಪುನಸ್ಸ್ಥಾಪಿಸುವನು.—ಯೋಬ 33:25; ಇಬ್ರಿಯ 6:10 ಓದಿ.

19. ಯೆಹೋವನಿಗೆ ಸಮರ್ಪಿಸಿಕೊಂಡಿರುವವರು ಯಾವ ಸುಯೋಗದಲ್ಲಿ ಆನಂದಿಸುತ್ತಾರೆ?

19 ಯೆಹೋವನಿಗೆ ನಿಮ್ಮ ಜೀವನವನ್ನು ಸಮರ್ಪಿಸಿಕೊಳ್ಳುವುದು ನಿಮ್ಮನ್ನು ಆತನೊಂದಿಗಿನ ಆಪ್ತ ಸಂಬಂಧಕ್ಕೆ ತರುತ್ತದೆ. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಬೈಬಲ್‌ ಹೇಳುತ್ತದೆ. (ಯಾಕೋ. 4:8; ಕೀರ್ತ. 25:14) ಮುಂದಿನ ಲೇಖನದಲ್ಲಿ, ಯೆಹೋವನಿಗೆ ಸೇರಿದವರಾಗಿರುವ ಆಯ್ಕೆಯನ್ನು ನಾವು ಏಕೆ ದೃಢನಿಶ್ಚಯದಿಂದ ಮಾಡಬಲ್ಲೆವು ಎಂಬುದನ್ನು ಪರಿಗಣಿಸುವೆವು.

[ಪಾದಟಿಪ್ಪಣಿ]

^ ಪ್ಯಾರ. 12 ಯೇಸುವಿನ ‘ಬೇರೆ ಕುರಿಗಳು’ ಅವನ ಸಾವಿರ ವರ್ಷದ ಆಳ್ವಿಕೆ ಮುಗಿಯುವ ವರೆಗೂ ದೇವರ ಪುತ್ರರಾಗುವುದಿಲ್ಲ. ಆದರೆ ಅವರು ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಿರುವುದರಿಂದ ಯೋಗ್ಯವಾಗಿಯೇ ಆತನನ್ನು “ತಂದೆ” ಎಂದು ಸಂಬೋಧಿಸಬಲ್ಲರು ಮತ್ತು ಸೂಕ್ತವಾಗಿಯೇ ಯೆಹೋವನ ಆರಾಧಕರ ಕುಟುಂಬದ ಸದಸ್ಯರಾಗಿ ಪರಿಗಣಿಸಲ್ಪಡಬಲ್ಲರು.—ಯೋಹಾ. 10:16; ಯೆಶಾ. 64:8; ಮತ್ತಾ. 6:9; ಪ್ರಕ. 20:5.

ನಿಮ್ಮ ಉತ್ತರವೇನು?

• ಒಬ್ಬನು ತನ್ನನ್ನು ದೇವರಿಗೆ ಸಮರ್ಪಿಸಿಕೊಳ್ಳುವುದೆಂದರೆ ಏನು ಅರ್ಥ?

• ದೇವರಿಗೆ ಸಮರ್ಪಿತರಾಗಿರುವುದರಿಂದ ನಮಗೆ ಹೇಗೆ ಪ್ರಯೋಜನ ಸಿಗುತ್ತದೆ?

• ಕ್ರೈಸ್ತರು ಏಕೆ ಯೆಹೋವನಿಗೆ ಸಮರ್ಪಿತರಾಗಿರುವ ಅಗತ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 6ರಲ್ಲಿರುವ ಚಿತ್ರ]

ನಮ್ಮ ಸಮರ್ಪಣೆಗನುಸಾರ ಜೀವಿಸುವುದು ನಮಗೆ ಬಾಳುವ ಸಂತೋಷವನ್ನು ತರುತ್ತದೆ