ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ಸೇರಿದ ಜನರಾಗಿರುವುದು—ಆತನ ಅಪಾತ್ರ ದಯೆಯೇ

ಯೆಹೋವನಿಗೆ ಸೇರಿದ ಜನರಾಗಿರುವುದು—ಆತನ ಅಪಾತ್ರ ದಯೆಯೇ

ಯೆಹೋವನಿಗೆ ಸೇರಿದ ಜನರಾಗಿರುವುದು—ಆತನ ಅಪಾತ್ರ ದಯೆಯೇ

‘ನಾವು ಯೆಹೋವನಿಗೆ ಸೇರಿದವರೇ.’—ರೋಮ. 14:8.

1, 2. (ಎ) ನಮಗೆ ಯಾವ ಸುಯೋಗವು ಇದೆ? (ಬಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

ಯೆಹೋವನು ಇಸ್ರಾಯೇಲ್ಯರಿಗೆ, “ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ” ಎಂದು ಹೇಳಿದಾಗ ಎಂಥ ಅಮೂಲ್ಯ ಸುಯೋಗವನ್ನು ಆ ಜನಾಂಗಕ್ಕೆ ನೀಡಲಾಯಿತು. (ವಿಮೋ. 19:5) ಯೆಹೋವನಿಗೆ ಸೇರಿದವರಾಗಿರುವ ಗೌರವವು ಇಂದು ಕ್ರೈಸ್ತ ಸಭೆಯ ಸದಸ್ಯರಿಗೂ ಇದೆ. (1 ಪೇತ್ರ 2:9; ಪ್ರಕ. 7:9, 14, 15) ಆ ಸುಯೋಗವು ನಮಗೆ ಸದಾಕಾಲವೂ ಪ್ರಯೋಜನಕರವಾಗಿರಬಲ್ಲದು.

2 ಯೆಹೋವನಿಗೆ ಸೇರಿರುವುದು ಒಂದು ಸುಯೋಗ ಮಾತ್ರವಲ್ಲದೆ ಒಂದು ಜವಾಬ್ದಾರಿ ಕೂಡ ಆಗಿದೆ. ಕೆಲವರು ಹೀಗೆ ಯೋಚಿಸಬಹುದು: ‘ಯೆಹೋವನು ನನ್ನಿಂದ ಅಪೇಕ್ಷಿಸುವುದನ್ನು ನಾನು ಮಾಡಶಕ್ತನೊ? ನಾನೆಂದಾದರೂ ಪಾಪ ಮಾಡಿಬಿಟ್ಟರೆ ಆತನು ನನ್ನನ್ನು ತೊರೆದುಬಿಡುವನೊ? ಯೆಹೋವನಿಗೆ ಸೇರಿದವನಾಗಿರುವುದು ನನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದೊ?’ ಇಂಥ ಚಿಂತನೆಗಳು ಪರಿಗಣನೆಗೆ ಯೋಗ್ಯ. ಆದರೆ ಮೊದಲು ಇನ್ನೊಂದು ಪ್ರಶ್ನೆಯನ್ನು ನಾವು ಜಾಗ್ರತೆಯಿಂದ ಗಮನಿಸಬೇಕು. ಅದೇನೆಂದರೆ, ಯೆಹೋವನಿಗೆ ಸೇರಿದವರಾಗಿರುವುದರಿಂದ ಸಿಗುವ ಪ್ರಯೋಜನಗಳೇನು?

ಯೆಹೋವನಿಗೆ ಸೇರಿರುವುದು ಸಂತೋಷಕ್ಕೆ ನಡೆಸುತ್ತದೆ

3. ಯೆಹೋವನನ್ನು ಸೇವಿಸಲು ರಾಹಾಬಳು ಮಾಡಿದ ನಿರ್ಣಯವು ಅವಳಿಗೆ ಹೇಗೆ ಪ್ರಯೋಜನವನ್ನು ತಂದಿತು?

3 ಯೆಹೋವನಿಗೆ ಸೇರಿರುವ ಜನರು ಅದರಿಂದ ಪ್ರಯೋಜನವನ್ನು ಹೊಂದುತ್ತಾರೊ? ಪುರಾತನ ಯೆರಿಕೋವಿನಲ್ಲಿ ವಾಸಿಸಿದ್ದ ವೇಶ್ಯೆ ರಾಹಾಬಳನ್ನು ಪರಿಗಣಿಸಿರಿ. ಕಾನಾನ್ಯ ದೇವತೆಗಳ ಹೀನ ಆರಾಧನಾ ಪದ್ಧತಿಯಲ್ಲಿ ಅವಳು ಬೆಳೆಸಲ್ಪಟ್ಟಿದ್ದಳೆಂಬುದು ನಿಸ್ಸಂಶಯ. ಆದರೂ ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ಯುದ್ಧವಿಜಯಗಳ ಕುರಿತು ಕೇಳಿದಾಗ ಆಕೆ ಯೆಹೋವನೇ ಸತ್ಯ ದೇವರೆಂಬುದನ್ನು ಮನಗಂಡಳು. ಆದುದರಿಂದ ದೇವರಾದುಕೊಂಡ ಜನರನ್ನು ರಕ್ಷಿಸಲಿಕ್ಕಾಗಿ ಅವಳು ತನ್ನ ಜೀವವನ್ನೇ ಪಣಕ್ಕೊಡ್ಡಿದಳು. ಇದರಿಂದಾಗಿ ಅವಳು ಮುಂದೆ ತನ್ನ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಬೈಬಲನ್ನುವುದು: “ವೇಶ್ಯೆಯಾದ ರಾಹಾಬಳು ಸಹ ಸಂದೇಶವಾಹಕರನ್ನು ಆದರಾತಿಥ್ಯದಿಂದ ಬರಮಾಡಿಕೊಂಡು ಅವರನ್ನು ಇನ್ನೊಂದು ಮಾರ್ಗವಾಗಿ ಕಳುಹಿಸಿಕೊಟ್ಟ ಬಳಿಕವೇ ಕ್ರಿಯೆಗಳ ಮೂಲಕ ನೀತಿವಂತಳೆಂದು ನಿರ್ಣಯಿಸಲ್ಪಟ್ಟಳಲ್ಲವೆ?” (ಯಾಕೋ. 2:25) ದೇವರ ಶುದ್ಧಾರಾಧನೆಯನ್ನು ಮಾಡಿದ ಹಾಗೂ ಪ್ರೀತಿ ಮತ್ತು ನ್ಯಾಯದ ಮಾರ್ಗಗಳಲ್ಲಿ ಆತನ ನಿಯಮಗಳಿಂದ ಶಿಕ್ಷಿತರಾದ ಜನರ ಭಾಗವಾಗಿ ಪರಿಣಮಿಸಿದಾಗ ಅವಳಿಗೆ ದೊರೆತ ಪ್ರಯೋಜನಗಳನ್ನು ಊಹಿಸಿಕೊಳ್ಳಿರಿ. ತನ್ನ ಹಿಂದಣ ಜೀವನಮಾರ್ಗವನ್ನು ತೊರೆದುಬಿಟ್ಟದ್ದಕ್ಕಾಗಿ ಅವಳೆಷ್ಟು ಸಂತೋಷಿತಳಾಗಿದ್ದಿರಬೇಕು! ಅವಳು ನಂತರ ಒಬ್ಬ ಇಸ್ರಾಯೇಲ್ಯನನ್ನು ಮದುವೆಯಾಗಿ ಬೋವಜನೆಂಬ ಮಗನನ್ನು ಹೆತ್ತು ಅವನನ್ನು ಅಸಾಧಾರಣ ದೇವಭಕ್ತಿಯಿದ್ದ ಒಬ್ಬ ವ್ಯಕ್ತಿಯಾಗಿ ಬೆಳೆಸಿದಳು.—ಯೆಹೋ. 6:25; ರೂತ. 2:4-12; ಮತ್ತಾ. 1:5, 6.

4. ಯೆಹೋವನನ್ನು ಸೇವಿಸುವ ತನ್ನ ನಿರ್ಣಯದಿಂದ ರೂತಳು ಹೇಗೆ ಪ್ರಯೋಜನ ಹೊಂದಿದಳು?

4 ಮೋವಾಬ್ಯಳಾಗಿದ್ದ ರೂತಳು ಸಹ ಯೆಹೋವನನ್ನು ಸೇವಿಸುವ ನಿರ್ಣಯವನ್ನು ಮಾಡಿದಳು. ಅವಳು ಚಿಕ್ಕವಳಾಗಿದ್ದಾಗ ಕೆಮೋಷನೆಂಬ ದೇವನನ್ನು ಮತ್ತು ಮೋವಾಬ್ಯರ ಇತರ ದೇವರುಗಳನ್ನು ಆರಾಧಿಸಿದ್ದಿರಬಹುದು. ಆದರೆ ಅವಳು ಸತ್ಯ ದೇವರಾದ ಯೆಹೋವನನ್ನು ತಿಳುಕೊಂಡಳು ಮತ್ತು ತನ್ನ ದೇಶದಲ್ಲಿ ಆಶ್ರಯಕ್ಕಾಗಿ ಬಂದ ಒಬ್ಬ ಇಸ್ರಾಯೇಲ್ಯ ಪುರುಷನನ್ನು ವಿವಾಹವಾದಳು. (ರೂತಳು 1:1-6 ಓದಿ.) ತದನಂತರ, ರೂತ ಮತ್ತು ಅವಳ ಓರಗಿತ್ತಿ ಒರ್ಫಾಳು ತಮ್ಮ ಅತ್ತೆಯಾದ ನೊವೊಮಿಯೊಂದಿಗೆ ಬೇತ್ಲೆಹೇಮಿಗೆ ಹೊರಟಾಗ ನೊವೊಮಿ ಈ ಇಬ್ಬರು ಸ್ತ್ರೀಯರಿಗೆ ತಮ್ಮ ತಮ್ಮ ಮನೆಗೆ ಹಿಂದಿರುಗುವಂತೆ ಒತ್ತಾಯಿಸಿದಳು. ಏಕೆಂದರೆ ಇಸ್ರಾಯೇಲಿನಲ್ಲಿ ಉಳುಕೊಳ್ಳುವುದು ಅವರಿಗೆ ಅಷ್ಟೇನು ಸುಲಭವಾಗಿರಲಿಕ್ಕಿಲ್ಲ. ಒರ್ಫಾಳಾದರೋ “ತನ್ನ ಜನರ ಬಳಿಗೂ ದೇವತೆಗಳ ಬಳಿಗೂ” ಹಿಂದಿರುಗಿದಳು. ಆದರೆ ರೂತಳು ಹೋಗಲಿಲ್ಲ. ಅವಳು ತನ್ನ ನಂಬಿಕೆಗನುಸಾರ ಕ್ರಿಯೆಗೈದಳು ಮತ್ತು ತಾನು ಯಾರಿಗೆ ಸೇರಿರಬೇಕು ಎಂದವಳಿಗೆ ತಿಳಿದಿತ್ತು. ಆದುದರಿಂದ ಅವಳು ನೊವೊಮಿಗೆ ಹೇಳಿದ್ದು: “ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.” (ರೂತ. 1:15, 16) ರೂತಳು ಯೆಹೋವನನ್ನು ಸೇವಿಸುವ ಆಯ್ಕೆಯನ್ನು ಮಾಡಿದ ಕಾರಣ ದೇವರ ಧರ್ಮಶಾಸ್ತ್ರದ ನಿಯಮದಿಂದ ಪ್ರಯೋಜನ ಹೊಂದಿದಳು. ಹೇಗೆಂದರೆ ಅದು ವಿಧವೆಯರಿಗೆ, ಬಡವರಿಗೆ ಮತ್ತು ನಿರ್ಗತಿಕರಿಗೆ ವಿಶೇಷ ಒದಗಿಸುವಿಕೆಗಳನ್ನು ಮಾಡಿತ್ತು. ಯೆಹೋವನ ಆಶ್ರಯದಲ್ಲಿ ಅವಳು ಸಂತೋಷ, ರಕ್ಷಣೆ ಮತ್ತು ಭದ್ರತೆಯನ್ನು ಪಡೆದುಕೊಂಡಳು.

5. ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುವವರಲ್ಲಿ ನೀವೇನನ್ನು ಗಮನಿಸಿದ್ದೀರಿ?

5 ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡ ಬಳಿಕ ಹಲವಾರು ದಶಕಗಳಿಂದ ಆತನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುತ್ತಿರುವ ಕೆಲವರ ಬಗ್ಗೆ ನಿಮಗೆ ತಿಳಿದಿರಬಹುದು. ಆತನ ಸೇವೆಮಾಡುವುದರಿಂದ ಅವರು ಹೇಗೆ ಪ್ರಯೋಜನ ಪಡೆದುಕೊಂಡರು ಎಂದು ಕೇಳಿರಿ. ಸಮಸ್ಯೆಗಳಿಲ್ಲದವರು ಯಾರೂ ಇಲ್ಲವಾದರೂ, ಸೇವೆಮಾಡಿದವರಿಗೆ ಸಿಕ್ಕಿದ ಸಾಕ್ಷ್ಯವು ಕೀರ್ತನೆಗಾರನ ಮಾತುಗಳನ್ನು ಅತ್ಯಧಿಕವಾಗಿ ಬೆಂಬಲಿಸುತ್ತದೆ. ಅವನು ಹೇಳಿದ್ದು: “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು.”—ಕೀರ್ತ. 144:15.

ಯೆಹೋವನ ನ್ಯಾಯಸಮ್ಮತ ಅಪೇಕ್ಷೆಗಳು

6. ಯೆಹೋವನು ನಮ್ಮಿಂದ ಅಪೇಕ್ಷಿಸುವ ವಿಷಯವನ್ನು ನಾವು ಮಾಡಸಾಧ್ಯವೋ ಎಂದು ಭಯಪಡುವ ಅವಶ್ಯವಿಲ್ಲವೇಕೆ?

6 ಯೆಹೋವನು ನಿಮ್ಮಿಂದ ಏನನ್ನು ಅಪೇಕ್ಷಿಸುತ್ತಾನೋ ಅದನ್ನು ನೀವು ಮಾಡಸಾಧ್ಯವಿದೆಯೋ ಎಂದು ಯೋಚಿಸಿದ್ದಿರಬಹುದು. ದೇವರ ಸೇವಕನಾಗಿರುವುದರ ಬಗ್ಗೆ, ಆತನ ನಿಯಮಕ್ಕನುಸಾರ ಜೀವಿಸುವುದರ ಬಗ್ಗೆ ಮತ್ತು ಆತನ ಹೆಸರನ್ನೆತ್ತಿ ಮಾತಾಡುವುದರ ಬಗ್ಗೆ ಯೋಚಿಸುವಾಗ ಇದು ಹೇಗಪ್ಪಾ ಸಾಧ್ಯ ಎಂದು ನೆನಸುವುದು ಸುಲಭ. ಉದಾಹರಣೆಗೆ, ಇಸ್ರಾಯೇಲ್ಯರೊಂದಿಗೆ ಮತ್ತು ಈಜಿಪ್ಟಿನ ರಾಜನೊಂದಿಗೆ ಮಾತಾಡುವಂತೆ ಕಳುಹಿಸಲ್ಪಟ್ಟಾಗ ಮೋಶೆ ಅದನ್ನು ಮಾಡಲು ತಾನು ಅಸಮರ್ಥನೆಂದು ನೆನಸಿದನು. ಆದರೆ ದೇವರು ಮೋಶೆಯಿಂದ ಅಪೇಕ್ಷಿಸಿದ ವಿಷಯವು ಅವನ ಶಕ್ತಿಗೆ ಮೀರಿದ್ದಾಗಿರಲಿಲ್ಲ. ಯೆಹೋವನು ‘ಅವನು ಮಾಡಬೇಕಾದದ್ದನ್ನು ಬೋಧಿಸಿದನು.’ (ವಿಮೋಚನಕಾಂಡ 3:11; 4:1, 10, 13-15 ಓದಿ.) ಮೋಶೆ ತನಗೆ ಕೊಡಲ್ಪಟ್ಟ ಸಹಾಯವನ್ನು ಸ್ವೀಕರಿಸಿದ್ದರಿಂದ ದೇವರ ಚಿತ್ತವನ್ನು ಮಾಡಿ ಅದನ್ನು ಪೂರೈಸುವ ಸಂತೋಷವನ್ನು ಅನುಭವಿಸಿದನು. ಯೆಹೋವನು ನಮ್ಮಿಂದ ಅಪೇಕ್ಷಿಸುವ ವಿಷಯಗಳಲ್ಲೂ ಅಷ್ಟೇ ನ್ಯಾಯಸಮ್ಮತನಾಗಿದ್ದಾನೆ. ಅವನು ನಮ್ಮ ಅಪರಿಪೂರ್ಣ ಪ್ರಕೃತಿಯನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಮಗೆ ಸಹಾಯಮಾಡಲು ಬಯಸುತ್ತಾನೆ. (ಕೀರ್ತ. 103:14) ಯೇಸುವಿನ ಶಿಷ್ಯರಾಗಿ ದೇವರ ಸೇವೆಮಾಡುವುದು ದಿಗ್ಭ್ರಮೆಗೊಳಿಸುವಂಥದ್ದಾಗಿರದೆ ಚೈತನ್ಯವನ್ನು ಕೊಡುವಂಥದ್ದಾಗಿದೆ. ಏಕೆಂದರೆ ಇಂಥ ಜೀವನಕ್ರಮವು ಇತರರಿಗೆ ಪ್ರಯೋಜನವನ್ನು ತರುತ್ತದೆ ಮತ್ತು ಯೆಹೋವನ ಹೃದಯವನ್ನು ಹರ್ಷಗೊಳಿಸುತ್ತದೆ. ಯೇಸು ಹೇಳಿದ್ದು: “ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು. ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ.”—ಮತ್ತಾ. 11:28, 29.

7. ಯೆಹೋವನು ನಿಮ್ಮಿಂದ ಅಪೇಕ್ಷಿಸುವ ವಿಷಯವನ್ನು ಮಾಡಲು ನಿಮಗೆ ಸಹಾಯ ಕೊಡುವನು ಎಂಬ ಭರವಸೆಯಿಂದಿರಬಲ್ಲಿರಿ ಏಕೆ?

7 ನಾವು ಬಲಕ್ಕಾಗಿ ಯೆಹೋವನ ಮೇಲೆ ಹೊಂದಿಕೊಂಡಿರುವ ವರೆಗೆ ಆತನು ನಮಗೆ ಅಗತ್ಯವಿರುವ ಪ್ರೋತ್ಸಾಹವನ್ನು ಯಾವಾಗಲೂ ಕೊಡುತ್ತಿರುವನು. ಉದಾಹರಣೆಗೆ, ಯೆರೆಮೀಯನು ಸ್ವಾಭಾವಿಕವಾಗಿಯೇ ಧೈರ್ಯದಿಂದ ಮಾತಾಡುವ ವ್ಯಕ್ತಿಯಾಗಿರಲಿಲ್ಲ ಎಂಬುದು ವ್ಯಕ್ತ. ಆದುದರಿಂದ ಯೆಹೋವನು ಅವನನ್ನು ತನ್ನ ಪ್ರವಾದಿಯಾಗಿ ನೇಮಿಸಿದಾಗ ಯೆರೆಮೀಯನು, “ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು” ಎಂದು ಹೇಳಿದನು. ಅನಂತರ ಅವನು, “ಆತನ ಹೆಸರಿನಲ್ಲಿ ಇನ್ನು ಮಾತಾಡೆನು” ಎಂದು ಸಹ ಹೇಳಿದನು. (ಯೆರೆ. 1:6; 20:9) ಆದರೂ ಯೆಹೋವನಿಂದ ಪ್ರೋತ್ಸಾಹ ಸಿಕ್ಕಿದಾಗ ಯೆರೆಮೀಯನು ಜನಪ್ರಿಯವಲ್ಲದ ಒಂದು ಸಂದೇಶವನ್ನು 40 ವರ್ಷ ಸಾರಿದನು. ಯೆಹೋವನು ಪದೇಪದೇ ಅವನಿಗೆ, “ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು” ಎಂದು ಹೇಳಿ ಧೈರ್ಯ ತುಂಬಿಸಿದನು.—ಯೆರೆ. 1:8, 19; 15:20.

8. ನಾವು ಯೆಹೋವನಲ್ಲಿ ಭರವಸೆಯಿಟ್ಟಿದ್ದೇವೆ ಎಂಬುದನ್ನು ಹೇಗೆ ತೋರಿಸುತ್ತೇವೆ?

8 ಯೆಹೋವನು ಮೋಶೆ ಮತ್ತು ಯೆರೆಮೀಯರನ್ನು ಬಲಪಡಿಸಿದಂತೆಯೇ ಇಂದು ಕ್ರೈಸ್ತರಿಂದ ಅಪೇಕ್ಷಿಸುವ ವಿಷಯಗಳನ್ನು ಮಾಡಲು ಸಹ ಸಹಾಯಮಾಡಬಲ್ಲನು. ಈ ಸಹಾಯ ಬೇಕಾದಲ್ಲಿ ನಾವು ದೇವರ ಮೇಲೆ ಆತುಕೊಳ್ಳುವುದು ಅವಶ್ಯ. “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 3:5, 6) ಯೆಹೋವನು ತನ್ನ ವಾಕ್ಯ ಮತ್ತು ಸಭೆಯ ಮೂಲಕ ಕೊಡುವ ಸಹಾಯವನ್ನು ಸದುಪಯೋಗಿಸಿಕೊಳ್ಳುವಾಗ ನಾವು ಆತನಲ್ಲಿ ಭರವಸೆಯಿಟ್ಟಿದ್ದೇವೆ ಎಂದು ತೋರಿಸಿಕೊಡುತ್ತೇವೆ. ಜೀವನದಲ್ಲಿ ಯೆಹೋವನು ನಮ್ಮನ್ನು ಮಾರ್ಗದರ್ಶಿಸುವಂತೆ ಬಿಡುವಲ್ಲಿ ನಾವು ಆತನಿಗೆ ನಂಬಿಗಸ್ತಿಕೆ ತೋರಿಸುವುದನ್ನು ಯಾವುದೂ ತಡೆಗಟ್ಟಲಾರದು.

ಯೆಹೋವನು ತನ್ನ ಜನರಲ್ಲಿ ಒಬ್ಬೊಬ್ಬರನ್ನೂ ಪರಾಮರಿಸುತ್ತಾನೆ

9, 10. ತೊಂಬತ್ತೊಂದನೇ ಕೀರ್ತನೆಯು ಯಾವ ರೀತಿಯ ಸಂರಕ್ಷಣೆಯ ವಾಗ್ದಾನವನ್ನು ನೀಡುತ್ತದೆ?

9 ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ತೀರ್ಮಾನವನ್ನು ಮಾಡುವುದರ ಕುರಿತು ಯೋಚಿಸುತ್ತಿರುವಾಗ ಕೆಲವರು ಪಾಪದಲ್ಲಿ ಬೀಳುವ, ಅಯೋಗ್ಯರಾಗುವ ಮತ್ತು ಯೆಹೋವನಿಂದ ತಿರಸ್ಕರಿಸಲ್ಪಡುವ ಅಪಾಯದ ಕುರಿತು ಯೋಚಿಸಿರಬಹುದು. ಸಂತೋಷಕರವಾಗಿ, ನಾವು ಯೆಹೋವನೊಂದಿಗೆ ಹೊಂದಿರುವ ಅಮೂಲ್ಯ ಸಂಬಂಧವನ್ನು ಕಾಪಾಡಿಕೊಳ್ಳಲು ಬೇಕಾದ ಎಲ್ಲ ಸಂರಕ್ಷಣೆಯನ್ನು ಆತನು ಕೊಡುತ್ತಾನೆ. 91ನೇ ಕೀರ್ತನೆಯಲ್ಲಿ ಅದು ಹೇಗೆ ವ್ಯಕ್ತಪಡಿಸಲ್ಪಟ್ಟಿದೆ ಎಂಬುದನ್ನು ನೋಡೋಣ.

10 ಆ ಕೀರ್ತನೆ ಆರಂಭಿಸುವುದು: ‘ಪರಾತ್ಪರನ [ಗುಪ್ತ ಸ್ಥಳದಲ್ಲಿರುವವನು] ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು. ನಾನು ಯೆಹೋವನಿಗೆ—ನೀನೇ ನನ್ನ ಶರಣನು ನನ್ನ ದುರ್ಗವು ನಾನು ಭರವಸವಿಟ್ಟಿರುವ ನನ್ನ ದೇವರು ಎಂದು ಹೇಳುವೆನು. ನಿನ್ನನ್ನು ಬೇಟೆಗಾರನ ಬಲೆಯಿಂದ ತಪ್ಪಿಸುವವನು ಆತನೇ.’ (ಕೀರ್ತ. 91:1-3) ತನ್ನನ್ನು ಪ್ರೀತಿಸಿ ತನ್ನಲ್ಲಿ ಭರವಸೆಯಿಡುವವರನ್ನು ಸಂರಕ್ಷಿಸುತ್ತೇನೆಂದು ದೇವರು ವಾಗ್ದಾನಮಾಡುವುದನ್ನು ಗಮನಿಸಿ. (ಕೀರ್ತನೆ 91:9, 14 ಓದಿ.) ಯಾವ ರೀತಿಯ ಸಂರಕ್ಷಣೆಯ ಬಗ್ಗೆ ದೇವರು ಮಾತಾಡುತ್ತಿದ್ದಾನೆ? ಯೆಹೋವನು ಪ್ರಾಚೀನಕಾಲದ ತನ್ನ ಸೇವಕರಲ್ಲಿ ಕೆಲವರನ್ನು ಶಾರೀರಿಕವಾಗಿ ಸಂರಕ್ಷಿಸಿದನು; ವಾಗ್ದತ್ತ ಮೆಸ್ಸೀಯನ ವರೆಗೆ ನಡಿಸುವ ವಂಶಾವಳಿಯನ್ನು ಸಂರಕ್ಷಿಸಲಿಕ್ಕಾಗಿ ಕೆಲವೊಮ್ಮೆ ಹಾಗೆ ಮಾಡಿದನು. ಆದರೆ ಇತರ ಅನೇಕ ನಂಬಿಗಸ್ತ ಪುರುಷರು ಸೆರೆಯಲ್ಲಿ ಹಾಕಲ್ಪಟ್ಟರು, ಯಾತನೆಗೆ ಒಳಗಾದರು ಮತ್ತು ದೇವರಿಗೆ ಅವರು ತೋರಿಸುವ ನಂಬಿಗಸ್ತಿಕೆಯನ್ನು ತೊರೆದುಬಿಡುವಂತೆ ಮಾಡುವ ಪೈಶಾಚಿಕ ಪ್ರಯತ್ನಗಳಲ್ಲಿ ಕೊಲ್ಲಲ್ಪಟ್ಟರು. (ಇಬ್ರಿ. 11:34-39) ಅವರು ತಾಳಿಕೊಳ್ಳಲು ಬೇಕಾದ ಧೈರ್ಯವನ್ನು ಕಂಡುಕೊಂಡರು. ಏಕೆಂದರೆ ತಮ್ಮ ಸಮಗ್ರತೆಯನ್ನು ತೊರೆದುಬಿಡಸಾಧ್ಯವಿದ್ದ ಅಪಾಯದಿಂದ ಯೆಹೋವನು ಅವರನ್ನು ಆಧ್ಯಾತ್ಮಿಕವಾಗಿ ಸಂರಕ್ಷಿಸಿದನು. ಆದುದರಿಂದ 91ನೇ ಕೀರ್ತನೆಯನ್ನು ಆಧ್ಯಾತ್ಮಿಕ ಸಂರಕ್ಷಣೆಯ ವಾಗ್ದಾನವಾಗಿ ನಾವು ಅರ್ಥಮಾಡಿಕೊಳ್ಳಬಹುದು.

11. ‘ಪರಾತ್ಪರನ ಗುಪ್ತ ಸ್ಥಳ’ ಏನಾಗಿದೆ, ಮತ್ತು ದೇವರು ಅದರಲ್ಲಿ ಯಾರನ್ನು ಸಂರಕ್ಷಿಸುತ್ತಾನೆ?

11 ಆದುದರಿಂದ ಕೀರ್ತನೆಗಾರನಿಂದ ತಿಳಿಸಲ್ಪಟ್ಟ ‘ಪರಾತ್ಪರನ ಗುಪ್ತ ಸ್ಥಳವು’ ಆಧ್ಯಾತ್ಮಿಕ ಸಂರಕ್ಷಣೆ ಸಿಗುವ ಸಾಂಕೇತಿಕ ಸ್ಥಳವಾಗಿದೆ. ಅದರಲ್ಲಿ ದೇವರೊಂದಿಗೆ ಅತಿಥಿಗಳಾಗಿ ಇಳುಕೊಂಡಿರುವವರು ತಮ್ಮ ನಂಬಿಕೆ ಮತ್ತು ದೇವರ ಮೇಲಣ ಪ್ರೀತಿಯನ್ನು ಅಪಾಯಕ್ಕೊಡ್ಡುವ ಯಾವುದೇ ವಿಷಯದಿಂದ ಮತ್ತು ಯಾವನೇ ವ್ಯಕ್ತಿಯಿಂದ ಸುಭದ್ರವಾಗಿರುತ್ತಾರೆ. (ಕೀರ್ತ. 15:1, 2; 121:5) ಅವಿಶ್ವಾಸಿಗಳು ಈ ಸ್ಥಳವನ್ನು ಗ್ರಹಿಸಿಕೊಳ್ಳಲು ಶಕ್ತರಲ್ಲ. ಆದುದರಿಂದ ಅದು ಒಂದು ಗುಪ್ತ ಸ್ಥಳವಾಗಿದೆ. ‘ನಾನು ಭರವಸವಿಟ್ಟಿರುವ ನನ್ನ ದೇವರು ನೀನೇ’ ಎಂದು ಕಾರ್ಯತಃ ಹೇಳುವ ಜನರನ್ನು ಯೆಹೋವನು ಇಲ್ಲಿ ಸಂರಕ್ಷಿಸುತ್ತಾನೆ. ಈ ಆಶ್ರಯ ಸ್ಥಳದಲ್ಲಿ ನಾವು ಉಳಿಯುವುದಾದರೆ, ‘ಬೇಟೆಗಾರನಾದ’ ಸೈತಾನನ ಪಾಶಕ್ಕೆ ಸಿಕ್ಕಿಕೊಂಡು ದೇವರ ಮೆಚ್ಚಿಗೆಯನ್ನು ಕಳೆದುಕೊಳ್ಳುವೆವೋ ಎಂದು ಅತಿಯಾಗಿ ಚಿಂತಿಸುವ ಅಗತ್ಯವಿರುವುದಿಲ್ಲ.

12. ದೇವರೊಂದಿಗಿನ ನಮ್ಮ ಸಂಬಂಧವನ್ನು ಯಾವ ವಿಷಯಗಳು ಅಪಾಯಕ್ಕೊಡ್ಡುತ್ತವೆ?

12 ದೇವರೊಂದಿಗಿನ ನಮ್ಮ ಅಮೂಲ್ಯ ಸಂಬಂಧವನ್ನು ಯಾವ ವಿಷಯಗಳು ಅಪಾಯಕ್ಕೊಡ್ಡುತ್ತವೆ? ಕೀರ್ತನೆಗಾರನು ಹಲವಾರು ಅಪಾಯಗಳ ಕುರಿತು ತಿಳಿಸುತ್ತಾನೆ. ಅವುಗಳಲ್ಲಿ ‘ಕತ್ತಲೆಯಲ್ಲಿ ಸಂಚರಿಸುವ ವಿಪತ್ತು ಮತ್ತು ಹಾನಿಕರವಾದ ಮಧ್ಯಾಹ್ನದ ಕೇಡೂ’ ಸೇರಿವೆ. (ಕೀರ್ತ. 91:5, 6) ಸ್ವತಂತ್ರರಾಗಿರುವ ಸ್ವಾರ್ಥ ಬಯಕೆಯನ್ನು ಬೆಳೆಸಿಕೊಳ್ಳುವಂತೆ ಮಾಡುವ ಮೂಲಕವೂ ‘ಬೇಟೆಗಾರನು’ ಅನೇಕರನ್ನು ತನ್ನ ಪಾಶಕ್ಕೆ ಸಿಕ್ಕಿಸಿಹಾಕಿದ್ದಾನೆ. (2 ಕೊರಿಂ. 11:3) ದುರಾಶೆ, ಅಹಂಭಾವ ಮತ್ತು ಪ್ರಾಪಂಚಿಕತೆಯಂಥ ವಿಷಯಗಳನ್ನು ಪ್ರವರ್ಧಿಸುವ ಮೂಲಕ ಇತರರನ್ನು ಹಿಡಿಯುತ್ತಾನೆ. ಇನ್ನಿತರರನ್ನು ದೇಶಭಕ್ತಿ, ವಿಕಾಸವಾದ ಮತ್ತು ಸುಳ್ಳು ಧರ್ಮದಂಥ ವಿಷಯಗಳ ಮೂಲಕ ದಾರಿತಪ್ಪಿಸುತ್ತಾನೆ. (ಕೊಲೊ. 2:8) ಮಾತ್ರವಲ್ಲದೆ ಅನೇಕರು ಅಕ್ರಮ ಲೈಂಗಿಕ ಸಂಬಂಧಗಳ ಪಾಶದೆಡೆಗೆ ಸೆಳೆಯಲ್ಪಟ್ಟಿದ್ದಾರೆ. ಆಧ್ಯಾತ್ಮಿಕವಾಗಿ ಹಾನಿಗೊಳಿಸುವ ಇಂಥ ಪಿಡುಗುಗಳು ಲಕ್ಷಾಂತರ ಮಂದಿ ದೇವರ ಮೇಲಣ ತಮ್ಮ ಪ್ರೀತಿಯನ್ನು ಕಳೆದುಕೊಳ್ಳುವಂತೆ ಮಾಡಿವೆ.—ಕೀರ್ತನೆ 91:7-10 ಓದಿ; ಮತ್ತಾ. 24:12.

ದೇವರ ಮೇಲಣ ನಿಮ್ಮ ಪ್ರೀತಿಯನ್ನು ಕಾಪಾಡುವುದು

13. ನಮ್ಮ ಆಧ್ಯಾತ್ಮಿಕ ಸುಕ್ಷೇಮವನ್ನು ಅಪಾಯಕ್ಕೊಡ್ಡುವ ವಿಷಯಗಳಿಂದ ಯೆಹೋವನು ನಮ್ಮನ್ನು ಹೇಗೆ ಸಂರಕ್ಷಿಸುತ್ತಾನೆ?

13 ಯೆಹೋವನು ತನ್ನ ಜನರನ್ನು ಈ ಆಧ್ಯಾತ್ಮಿಕ ಅಪಾಯಗಳಿಂದ ಹೇಗೆ ಸಂರಕ್ಷಿಸುತ್ತಾನೆ? ಕೀರ್ತನೆಯು ಹೇಳುವುದು: “ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆ ಕೊಡುವನು.” (ಕೀರ್ತ. 91:11) ನಾವು ಸುವಾರ್ತೆಯನ್ನು ಸಾರುವಂತಾಗಲು ಸ್ವರ್ಗೀಯ ದೇವದೂತರು ನಮ್ಮನ್ನು ಮಾರ್ಗದರ್ಶಿಸಿ ಸಂರಕ್ಷಿಸುತ್ತಾರೆ. (ಪ್ರಕ. 14:6) ದೇವದೂತರು ಮಾತ್ರವಲ್ಲದೆ ಸಭಾ ಹಿರಿಯರೂ ನಮಗೆ ಸಹಾಯ ಕೊಡುತ್ತಾರೆ. ಹೇಗೆಂದರೆ, ಅವರು ತಮ್ಮ ಬೋಧನೆಯನ್ನು ಶಾಸ್ತ್ರಗ್ರಂಥದ ಮೇಲೆ ದೃಢವಾಗಿ ಆಧರಿಸಿ ಕೊಡುವುದರಿಂದ ನಾವು ಸುಳ್ಳಾದ ತರ್ಕಗಳಿಂದ ವಂಚಿಸಲ್ಪಡದಂತೆ ಕಾಪಾಡುತ್ತಾರೆ. ಲೌಕಿಕ ಮನೋಭಾವಗಳನ್ನು ಜಯಿಸಲು ಹೆಣಗಾಡುತ್ತಿರುವ ಯಾರಿಗಾದರೂ ಅವರು ವೈಯಕ್ತಿಕ ನೆರವನ್ನು ನೀಡಬಲ್ಲರು. (ತೀತ 1:9; 1 ಪೇತ್ರ 5:2) ಮಾತ್ರವಲ್ಲದೆ ವಿಕಾಸವಾದ, ಅನೈತಿಕ ಇಚ್ಛೆಗಳ ಸೆಳೆತ, ಐಶ್ವರ್ಯ ಹಾಗೂ ಪ್ರಖ್ಯಾತಿಯ ಬೆನ್ನಟ್ಟುವಿಕೆ ಮತ್ತು ಇತರ ಅನೇಕ ಹಾನಿಕರ ಬಯಕೆಗಳು ಹಾಗೂ ಪ್ರಭಾವಗಳಿಂದ ನಮ್ಮನ್ನು ಸಂರಕ್ಷಿಸಲು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ವರ್ಗವು ಆಧ್ಯಾತ್ಮಿಕ ಆಹಾರವನ್ನು ಒದಗಿಸುತ್ತದೆ. (ಮತ್ತಾ. 24:45) ಆ ಅಪಾಯಗಳಲ್ಲಿ ಕೆಲವನ್ನು ಪ್ರತಿರೋಧಿಸಲು ನಿಮಗೆ ಯಾವುದು ಸಹಾಯಮಾಡಿದೆ?

14. ದೇವರು ಒದಗಿಸುವ ಸಂರಕ್ಷಣೆಯನ್ನು ನಾವು ಹೇಗೆ ಸದುಪಯೋಗಿಸಿಕೊಳ್ಳಸಾಧ್ಯವಿದೆ?

14 ದೇವರ ಸಂರಕ್ಷಣೆಯ ‘ಗುಪ್ತ ಸ್ಥಳದಲ್ಲಿ’ ಉಳಿಯಲು ನಾವೇನು ಮಾಡಬೇಕು? ಅಪಘಾತಗಳು, ಅಪರಾಧಿಗಳು ಅಥವಾ ಸೋಂಕುರೋಗಗಳಂಥ ಶಾರೀರಿಕ ಅಪಾಯಗಳಿಂದ ನಾವು ಸದಾ ನಮ್ಮನ್ನು ಸಂರಕ್ಷಿಸಿಕೊಳ್ಳುವ ಅಗತ್ಯವಿರುವಂತೆಯೇ ಆಧ್ಯಾತ್ಮಿಕ ಅಪಾಯಗಳಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲು ಯಾವಾಗಲೂ ಕ್ರಿಯೆಗೈಯುವ ಅಗತ್ಯವಿದೆ. ಇದಕ್ಕಾಗಿ ಯೆಹೋವನು ನಮ್ಮ ಪ್ರಕಾಶನಗಳಲ್ಲಿ, ಸಭಾ ಕೂಟಗಳಲ್ಲಿ ಹಾಗೂ ಸಮ್ಮೇಳನಗಳಲ್ಲಿ ಕೊಡುವ ಮಾರ್ಗದರ್ಶನವನ್ನು ನಾವು ಯಾವಾಗಲೂ ಸದುಪಯೋಗಿಸಿಕೊಳ್ಳಬೇಕು. ನಾವು ಹಿರಿಯರ ಸಲಹೆಯನ್ನೂ ಪಡೆದುಕೊಳ್ಳುತ್ತೇವೆ. ಮಾತ್ರವಲ್ಲದೆ ನಮ್ಮ ಕ್ರೈಸ್ತ ಸಹೋದರ ಸಹೋದರಿಯರು ತೋರಿಸುವ ವಿವಿಧ ಗುಣಗಳಿಂದಲೂ ನಾವು ಪ್ರಯೋಜನ ಹೊಂದುವುದಿಲ್ಲವೆ? ವಾಸ್ತವದಲ್ಲಿ ಸಭೆಯೊಂದಿಗಿನ ನಮ್ಮ ಸಹವಾಸವು ವಿವೇಕವನ್ನು ಪಡೆದುಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ.—ಜ್ಞಾನೋ. 13:20; 1 ಪೇತ್ರ 4:10 ಓದಿ.

15. ತನ್ನ ಮೆಚ್ಚಿಗೆಯನ್ನು ಕಳೆದುಕೊಳ್ಳುವಂತೆ ಮಾಡುವ ಯಾವುದೇ ವಿಷಯದಿಂದ ಯೆಹೋವನು ನಿಮ್ಮನ್ನು ಸಂರಕ್ಷಿಸಬಲ್ಲನು ಎಂಬ ಖಾತ್ರಿ ನಿಮಗಿರಸಾಧ್ಯವಿದೆ ಏಕೆ?

15 ತನ್ನ ಮೆಚ್ಚಿಗೆಯನ್ನು ಕಳೆದುಕೊಳ್ಳುವಂತೆ ಮಾಡುವ ಯಾವುದೇ ವಿಷಯದಿಂದ ಯೆಹೋವನು ನಮ್ಮನ್ನು ಸಂರಕ್ಷಿಸುವನು ಎಂಬುದರ ಬಗ್ಗೆ ಸಂಶಯಪಡಲು ನಮಗೆ ಯಾವುದೇ ಕಾರಣವಿಲ್ಲ. (ರೋಮ. 8:38, 39) ಶಕ್ತಿಶಾಲಿ ಧಾರ್ಮಿಕ ಹಾಗೂ ರಾಜಕೀಯ ವೈರಿಗಳಿಂದ ದೇವರು ಸಭೆಯನ್ನು ಸಂರಕ್ಷಿಸಿದ್ದಾನೆ. ಸಾಮಾನ್ಯವಾಗಿ ಅವರ ಉದ್ದೇಶವು ನಮ್ಮನ್ನು ಕೊಲ್ಲುವುದಾಗಿರುವುದಿಲ್ಲ, ಬದಲಿಗೆ ನಮ್ಮ ಪವಿತ್ರ ದೇವರಿಂದ ನಮ್ಮನ್ನು ಬೇರ್ಪಡಿಸುವುದಾಗಿದೆ. ಹೀಗೆ, “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು” ಎಂಬ ಯೆಹೋವನ ವಾಗ್ದಾನ ನಿಜವಾಗಿ ಪರಿಣಮಿಸಿದೆ.—ಯೆಶಾ. 54:17.

ನಿಜ ಸ್ವಾತಂತ್ರ್ಯವನ್ನು ಕೊಡುವಾತನು ಯಾರು?

16. ಲೋಕ ನಮಗೆ ನಿಜ ಸ್ವಾತಂತ್ರ್ಯವನ್ನು ಕೊಡಲಾರದು ಏಕೆ?

16 ಯೆಹೋವನಿಗೆ ಸೇರಿದವರಾಗಿರುವುದು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದೊ? ಇಲ್ಲ, ಲೋಕಕ್ಕೆ ಸೇರಿದವರಾಗಿರುವುದು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು. ಲೋಕವು ದೇವರಿಂದ ವಿಮುಖವಾಗಿದೆ ಮತ್ತು ಜನರನ್ನು ತನ್ನ ದಾಸರನ್ನಾಗಿ ಮಾಡುವ ಒಬ್ಬ ಕ್ರೂರ ದೇವರಿಂದ ಆಳಲ್ಪಡುತ್ತದೆ. (ಯೋಹಾ. 14:30) ಉದಾಹರಣೆಗೆ, ಜನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸೈತಾನನ ವಿಷಯಗಳ ವ್ಯವಸ್ಥೆಯು ಆರ್ಥಿಕ ಒತ್ತಡವನ್ನು ಉಪಯೋಗಿಸುತ್ತದೆ. (ಪ್ರಕಟನೆ 13:16, 17 ಹೋಲಿಸಿ.) ಪಾಪವು ಸಹ ಜನರನ್ನು ತನ್ನ ದಾಸ್ಯದಲ್ಲಿ ಇಟ್ಟುಕೊಳ್ಳಲು ಮೋಸಕರ ಪ್ರಭಾವವನ್ನು ಬೀರುತ್ತದೆ. (ಯೋಹಾ. 8:34; ಇಬ್ರಿ. 3:13) ಆದುದರಿಂದ ಅವಿಶ್ವಾಸಿಗಳು ಯೆಹೋವನ ಬೋಧನೆಗಳಿಗೆ ವಿರುದ್ಧವಾದ ಜೀವನ ರೀತಿಯನ್ನು ಪ್ರವರ್ಧಿಸುವಾಗ ಅದರಿಂದ ಸ್ವಾತಂತ್ರ್ಯ ಸಿಗುತ್ತದೆಂದು ವಚನ ಕೊಡುತ್ತಾರೆ. ಆದರೆ ಅವರಿಗೆ ಕಿವಿಗೊಡುವ ವ್ಯಕ್ತಿಗಳು ತಾವು ಪಾಪಭರಿತ, ಹೀನ ಜೀವನ ಶೈಲಿಗೆ ದಾಸರಾಗಿದ್ದಾರೆ ಎಂಬುದನ್ನು ಶೀಘ್ರವೇ ಕಂಡುಕೊಳ್ಳುವರು.—ರೋಮ. 1:24-32.

17. ಯೆಹೋವನು ನಮಗೆ ಯಾವ ಸ್ವಾತಂತ್ರ್ಯವನ್ನು ನೀಡುತ್ತಾನೆ?

17 ಆದರೆ ನಮ್ಮನ್ನು ಯೆಹೋವನ ಕೈಯಲ್ಲಿ ಒಪ್ಪಿಸುವುದಾದರೆ ನಮಗೆ ಹಾನಿಯನ್ನು ತರಬಲ್ಲ ಯಾವುದೇ ವಿಷಯದಿಂದ ಆತನು ನಮ್ಮನ್ನು ಬಿಡಿಸುವನು. ಕೆಲವು ವಿಧಗಳಲ್ಲಿ ನಮ್ಮ ಸನ್ನಿವೇಶವು ಒಬ್ಬ ನುರಿತ ಶಸ್ತ್ರಚಿಕಿತ್ಸಕನ ಕೈಯಲ್ಲಿ ತನ್ನನ್ನು ಬಿಟ್ಟುಕೊಡುವ ಒಬ್ಬ ವ್ಯಕ್ತಿಯ ಸನ್ನಿವೇಶದಂತಿದೆ. ಆ ಶಸ್ತ್ರಚಿಕಿತ್ಸಕನು ಜೀವಾಪಾಯಕರ ಸನ್ನಿವೇಶದಿಂದ ಆ ರೋಗಿಯನ್ನು ಬಿಡಿಸಬಲ್ಲನು. ನಾವೆಲ್ಲರೂ ಒಂದು ಜೀವಾಪಾಯಕರ ಸನ್ನಿವೇಶವನ್ನು ಎದುರಿಸುತ್ತೇವೆ. ಅದು ಪಾಪವನ್ನು ಬಾಧ್ಯತೆಯಾಗಿ ಪಡೆದಿರುವುದೇ ಆಗಿದೆ. ಕ್ರಿಸ್ತನ ಯಜ್ಞದ ಆಧಾರದ ಮೇಲೆ ನಾವು ನಮ್ಮನ್ನು ಯೆಹೋವನ ಕೈಯಲ್ಲಿ ಒಪ್ಪಿಸುವುದಾದರೆ ಮಾತ್ರ ಪಾಪದ ದುಷ್ಪರಿಣಾಮಗಳಿಂದ ಬಿಡಿಸಲ್ಪಡುವ ಮತ್ತು ಸದಾಕಾಲ ಜೀವಿಸುವ ನಿರೀಕ್ಷೆಯನ್ನು ಪಡೆದುಕೊಳ್ಳಬಲ್ಲೆವು. (ಯೋಹಾ. 3:36) ಒಬ್ಬ ಶಸ್ತ್ರಚಿಕಿತ್ಸಕನು ಎಷ್ಟು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಕರವಾಗಿ ಮಾಡಿದ್ದಾನೆ ಎಂಬುದನ್ನು ಕೇಳಿಸಿಕೊಳ್ಳುವಾಗ ಅವನಲ್ಲಿ ನಮ್ಮ ಭರವಸೆ ಹೆಚ್ಚಾಗುತ್ತದೆ. ಅದೇ ರೀತಿಯಲ್ಲಿ ನಾವು ಯೆಹೋವನ ಕುರಿತು ಕಲಿಯುತ್ತಾ ಹೋದಂತೆ ಆತನಲ್ಲಿ ನಮ್ಮ ಭರವಸೆ ಹೆಚ್ಚಾಗುವುದು. ಆದುದರಿಂದ ನಾವು ದೇವರ ವಾಕ್ಯವನ್ನು ಜಾಗರೂಕತೆಯಿಂದ ಅಧ್ಯಯನ ಮಾಡುವುದನ್ನು ಮುಂದುವರಿಸುತ್ತೇವೆ. ಏಕೆಂದರೆ ದೇವರಿಗೆ ಸೇರಿದವರಾಗುವ ವಿಷಯದಲ್ಲಿ ನಮಗಿರಬಹುದಾದ ಯಾವುದೇ ಭಯವನ್ನು ಅದು ತೆಗೆದುಹಾಕಿ ಆತನನ್ನು ಪ್ರೀತಿಸಲು ನಮಗೆ ಸಹಾಯ ಮಾಡುವುದು.—1 ಯೋಹಾ. 4:18.

18. ಯೆಹೋವನಿಗೆ ಸೇರಿದವರಾಗಿರುವವರಿಗೆ ಫಲಿತಾಂಶವಾಗಿ ಏನು ಸಿಗಲಿದೆ?

18 ಯೆಹೋವನು ಎಲ್ಲ ಜನರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ಕೊಡುತ್ತಾನೆ. ಆತನ ವಾಕ್ಯ ಹೇಳುವುದು: “ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ.” (ಧರ್ಮೋ. 30:19, 20) ಆತನ ಸೇವೆಮಾಡುವ ಸ್ವಂತ ಆಯ್ಕೆಯನ್ನು ಮಾಡುವ ಮೂಲಕ ಆತನ ಮೇಲಣ ಪ್ರೀತಿಯನ್ನು ನಾವು ವ್ಯಕ್ತಪಡಿಸಬೇಕೆಂದು ದೇವರು ಬಯಸುತ್ತಾನೆ. ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಬದಲಿಗೆ, ಪ್ರೀತಿಸುವ ದೇವರಿಗೆ ಸೇರಿದವರಾಗಿರುವುದು ಖಂಡಿತವಾಗಿ ನಮ್ಮನ್ನು ಸಂತೋಷಪಡಿಸುವುದು ಮತ್ತು ಸಂತೋಷವುಳ್ಳವರಾಗಿಯೇ ಇರಿಸುವುದು.

19. ಯೆಹೋವನಿಗೆ ಸೇರಿದವರಾಗಿರುವುದು ಏಕೆ ಆತನ ಅಪಾತ್ರ ದಯೆಯ ಅಭಿವ್ಯಕ್ತಿಯಾಗಿದೆ?

19 ಪಾಪಿಗಳಾದ ನಮಗೆ ಒಬ್ಬ ಪರಿಪೂರ್ಣ ದೇವರಿಗೆ ಸೇರಿದವರಾಗಿರುವ ಯೋಗ್ಯತೆ ಇಲ್ಲ. ಆದರೆ ದೇವರ ಅಪಾತ್ರ ದಯೆಯಿಂದಲೇ ನಮಗೆ ಈ ಸುಯೋಗ ಸಿಕ್ಕಿದೆ. (2 ತಿಮೊ. 1:9) ಆದುದರಿಂದ ಪೌಲನು ಬರೆದದ್ದು: “ನಾವು ಜೀವಿಸಿದರೆ ಯೆಹೋವನಿಗಾಗಿ ಜೀವಿಸುತ್ತೇವೆ, ಸತ್ತರೆ ಯೆಹೋವನಿಗಾಗಿ ಸಾಯುತ್ತೇವೆ. ಆದುದರಿಂದ ನಾವು ಜೀವಿಸಿದರೂ ಸತ್ತರೂ [ಯೆಹೋವನಿಗೆ ಸೇರಿದವರೇ].” (ರೋಮ. 14:8) ನಾವು ಯೆಹೋವನಿಗೆ ಸೇರಿದವರಾಗಿರಲು ಮಾಡಿದ ಆಯ್ಕೆಯನ್ನು ಎಂದಿಗೂ ವಿಷಾದಿಸುವುದಿಲ್ಲ.

ನಿಮ್ಮ ಉತ್ತರವೇನು?

• ಯೆಹೋವನಿಗೆ ಸೇರಿದವರಾಗಿರುವುದರಿಂದ ಯಾವ ಪ್ರಯೋಜನಗಳು ಸಿಗುತ್ತವೆ?

• ದೇವರು ನಮ್ಮಿಂದ ಅಪೇಕ್ಷಿಸುವುದನ್ನು ನಾವು ಮಾಡಸಾಧ್ಯವಿದೆ ಏಕೆ?

• ಯೆಹೋವನು ತನ್ನ ಸೇವಕರಿಗೆ ಹೇಗೆ ಸಂರಕ್ಷಣೆಯನ್ನು ಕೊಡುತ್ತಾನೆ?

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಚಿತ್ರಗಳು]

ಯೆಹೋವನಿಗೆ ಸೇರಿದವರಾಗಿರುವ ಮೂಲಕ ಹೇಗೆ ಪ್ರಯೋಜನ ಪಡೆದಿದ್ದಾರೆ ಎಂದು ಇತರರನ್ನು ಕೇಳಿ

[ಪುಟ 10ರಲ್ಲಿರುವ ಚಿತ್ರ]

ಯೆಹೋವನು ಸಂರಕ್ಷಣೆಯನ್ನು ಒದಗಿಸುವ ಕೆಲವು ವಿಧಗಳು ಯಾವುವು?