ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದೇ ಹಿಂಡು, ಒಬ್ಬನೇ ಕುರುಬ

ಒಂದೇ ಹಿಂಡು, ಒಬ್ಬನೇ ಕುರುಬ

ಒಂದೇ ಹಿಂಡು, ಒಬ್ಬನೇ ಕುರುಬ

“ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.”—ಮತ್ತಾ. 19:28.

1. ಯೆಹೋವನು ಅಬ್ರಹಾಮನ ಸಂತತಿಯವರೊಂದಿಗೆ ಹೇಗೆ ವ್ಯವಹರಿಸಿದನು, ಮತ್ತು ಇದರ ಅರ್ಥವು ಆತನು ಬೇರೆಲ್ಲ ಜನಾಂಗಗಳನ್ನು ಪೂರ್ಣವಾಗಿ ಅಲಕ್ಷಿಸಿದನು ಎಂದಲ್ಲ ಏಕೆ?

ಯೆಹೋವನು ಅಬ್ರಹಾಮನನ್ನು ಪ್ರೀತಿಸಿದನು, ಆದ್ದರಿಂದ ಅವನ ಸಂತತಿಯವರಿಗೆ ನಿಷ್ಠಾವಂತ ಪ್ರೀತಿಯನ್ನು ತೋರಿಸಿದನು. ಸುಮಾರು 15 ಶತಕಕ್ಕಿಂತಲೂ ಹೆಚ್ಚು ಕಾಲ ಅಬ್ರಹಾಮನ ಸಂತತಿಯವರಾದ ಇಸ್ರಾಯೇಲ್‌ ಜನಾಂಗವನ್ನು ತಾನಾದುಕೊಂಡ ಜನರಾಗಿ, ತನ್ನ ‘ಸ್ವಕೀಯಜನರಾಗಿ’ ವೀಕ್ಷಿಸಿದನು. (ಧರ್ಮೋಪದೇಶಕಾಂಡ 7:6 ಓದಿ.) ಹಾಗಾದರೆ ಬೇರೆ ಜನಾಂಗಗಳ ಜನರನ್ನು ಯೆಹೋವನು ಪೂರ್ಣವಾಗಿ ಅಲಕ್ಷಿಸಿದನು ಎಂದು ಇದರ ಅರ್ಥವೊ? ಇಲ್ಲ. ಆ ಸಮಯದಲ್ಲಿ ಯೆಹೋವನನ್ನು ಆರಾಧಿಸಲು ಬಯಸಿದ ಇಸ್ರಾಯೇಲ್ಯರಲ್ಲದ ಬೇರೆ ಜನರು ಸಹ ಆತನ ಸ್ವಕೀಯಜನಾಂಗದೊಂದಿಗೆ ತಮ್ಮನ್ನು ಸೇರಿಸಿಕೊಳ್ಳುವಂತೆ ಅನುಮತಿಸಲಾಯಿತು. ಈ ಪರಿವರ್ತಿತರು ಅಥವಾ ಮತಾವಲಂಬಿಗಳು ಇಸ್ರಾಯೇಲ್‌ ಜನಾಂಗದ ಭಾಗವಾಗಿ ವೀಕ್ಷಿಸಲ್ಪಟ್ಟಿದ್ದರು. ಅವರನ್ನು ಸಹೋದರರಾಗಿ ಉಪಚರಿಸಬೇಕಿತ್ತು. (ಯಾಜ. 19:33, 34) ಮಾತ್ರವಲ್ಲದೆ ಯೆಹೋವನ ಎಲ್ಲ ನಿಯಮಗಳಿಗೆ ವಿಧೇಯರಾಗುವಂತೆ ಅವರಿಂದ ಅಪೇಕ್ಷಿಸಲ್ಪಟ್ಟಿತ್ತು.—ಯಾಜ. 24:22.

2. ಯೇಸು ಯಾವ ಅಚ್ಚರಿಗೊಳಿಸುವ ಘೋಷಣೆಯನ್ನು ಮಾಡಿದನು, ಮತ್ತು ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?

2 ಆದರೂ ಯೇಸು ತನ್ನ ದಿನದ ಯೆಹೂದ್ಯರಿಗೆ ಈ ಅಚ್ಚರಿಗೊಳಿಸುವ ಘೋಷಣೆಯನ್ನು ಮಾಡಿದನು: “ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವುದು.” (ಮತ್ತಾ. 21:43) ಯಾರು ಈ ಹೊಸ ಜನಾಂಗದ ಭಾಗವಾಗುವರು ಮತ್ತು ಈ ಬದಲಾವಣೆಯಿಂದ ಇಂದು ನಾವು ಹೇಗೆ ಪ್ರಭಾವಿತರಾಗುತ್ತೇವೆ?

ಹೊಸ ಜನಾಂಗ

3, 4. (ಎ) ಹೊಸ ಜನಾಂಗವನ್ನು ಅಪೊಸ್ತಲ ಪೇತ್ರನು ಗುರುತಿಸಿದ್ದು ಹೇಗೆ? (ಬಿ) ಯಾರು ಈ ಹೊಸ ಜನಾಂಗದಲ್ಲಿ ಕೂಡಿರುತ್ತಾರೆ?

3 ಈ ಹೊಸ ಜನಾಂಗವನ್ನು ಅಪೊಸ್ತಲ ಪೇತ್ರನು ಸ್ಪಷ್ಟವಾಗಿ ಗುರುತಿಸಿದನು. ತನ್ನ ಜೊತೆ ಕ್ರೈಸ್ತರಿಗೆ ಅವನು ಹೀಗೆಂದು ಬರೆದನು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ‘ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ ಪ್ರಕಟಿಸುವುದಕ್ಕಾಗಿ ಆರಿಸಿಕೊಳ್ಳಲ್ಪಟ್ಟಿರುವ ಕುಲವೂ ರಾಜವಂಶಸ್ಥರಾದ ಯಾಜಕರೂ ಪವಿತ್ರ ಜನಾಂಗವೂ ವಿಶೇಷ ಒಡೆತನಕ್ಕಾಗಿರುವ ಜನರೂ’ ಆಗಿದ್ದೀರಿ.” (1 ಪೇತ್ರ 2:9) ಮುಂತಿಳಿಸಲ್ಪಟ್ಟಂತೆ ಯೇಸುವನ್ನು ಮೆಸ್ಸೀಯನಾಗಿ ಸ್ವೀಕರಿಸಿದ ಮಾಂಸಿಕ ಯೆಹೂದ್ಯರು ಆ ಹೊಸ ಜನಾಂಗದ ಮೊದಲ ಸದಸ್ಯರಾಗಿದ್ದರು. (ದಾನಿ. 9:27ಎ; ಮತ್ತಾ. 10:6) ಅನಂತರ ಇಸ್ರಾಯೇಲ್ಯರಲ್ಲದ ಅನೇಕರು ಸಹ ಆ ಜನಾಂಗದೊಳಗೆ ಸೇರಿಸಲ್ಪಟ್ಟರು. ಇದರ ಕುರಿತು ಪೇತ್ರನು ಮತ್ತೂ ಅಂದದ್ದು: “ಮೊದಲು ನೀವು ಜನರಾಗಿರಲಿಲ್ಲ, ಆದರೆ ಈಗ ದೇವರ ಜನರಾಗಿದ್ದೀರಿ.”—1 ಪೇತ್ರ 2:10.

4 ಪೇತ್ರನು ಇಲ್ಲಿ ಯಾರನ್ನು ಉದ್ದೇಶಿಸಿ ಮಾತಾಡುತ್ತಿದ್ದನು? ತನ್ನ ಪತ್ರದ ಆರಂಭದಲ್ಲಿ ಅವನು ಹೇಳಿದ್ದು: “[ದೇವರು] ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಪುನರುತ್ಥಾನಗೊಳಿಸುವ ಮೂಲಕ ತನ್ನ ಮಹಾ ಕರುಣೆಯಿಂದ ನಮಗೆ ಜೀವಕರವಾದ ನಿರೀಕ್ಷೆಗಾಗಿ ಒಂದು ಹೊಸ ಜನನವನ್ನು ಕೊಟ್ಟನು. ಆ ಹೊಸ ಜನನವು ನಿರ್ಲಯವಾದ, ಕಳಂಕರಹಿತವಾದ ಮತ್ತು ಬಾಡಿಹೋಗದ ಬಾಧ್ಯತೆಯೇ ಆಗಿದೆ. ಆ ಬಾಧ್ಯತೆಯು ಸ್ವರ್ಗದಲ್ಲಿ ನಿಮಗೋಸ್ಕರ ಕಾದಿರಿಸಲ್ಪಟ್ಟಿದೆ.” (1 ಪೇತ್ರ 1:3, 4) ಆದ್ದರಿಂದ ಈ ಹೊಸ ಜನಾಂಗವು ಸ್ವರ್ಗೀಯ ನಿರೀಕ್ಷೆಯಿರುವ ಅಭಿಷಿಕ್ತ ಕ್ರೈಸ್ತರಿಂದ ಕೂಡಿರುತ್ತದೆ. ಅವರೇ ‘ದೇವರ ಇಸ್ರಾಯೇಲ್ಯರು.’ (ಗಲಾ. 6:16) ಅಪೊಸ್ತಲನಾದ ಯೋಹಾನನು ತನ್ನ ದರ್ಶನದಲ್ಲಿ ಈ ಆಧ್ಯಾತ್ಮಿಕ ಇಸ್ರಾಯೇಲ್ಯರ ಸಂಖ್ಯೆಯು 1,44,000 ಎಂದು ಕಂಡನು. ಅವರು ‘ಮಾನವಕುಲದ ಮಧ್ಯದಿಂದ ದೇವರಿಗೂ ಕುರಿಮರಿಗೂ ಪ್ರಥಮಫಲವಾಗಿ ಕೊಂಡುಕೊಳ್ಳಲ್ಪಟ್ಟವರಾಗಿ’ “[ಯೇಸುವಿನೊಂದಿಗೆ] . . . ಸಾವಿರ ವರ್ಷ ರಾಜರಾಗಿ ಆಳುವರು” ಮತ್ತು “ಯಾಜಕರಾಗಿ” ಸೇವೆಮಾಡುವರು.—ಪ್ರಕ. 5:10; 7:4; 14:1, 4; 20:6; ಯಾಕೋ. 1:18.

ಬೇರೆಯವರು ಸಹ ಒಳಗೂಡಿದ್ದಾರೊ?

5. (ಎ) ‘ದೇವರ ಇಸ್ರಾಯೇಲ್‌’ ಎಂಬ ಅಭಿವ್ಯಕ್ತಿ ಯಾರಿಗೆ ಸೂಚಿತವಾಗಿದೆ? (ಬಿ) ‘ಇಸ್ರಾಯೇಲ್‌’ ಎಂಬ ಪದವು ಬೇರೆ ಯಾವ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆ?

5 ಹಾಗಾದರೆ ಗಲಾತ್ಯ 6:16ರ ‘ದೇವರ ಇಸ್ರಾಯೇಲ್‌’ ಎಂಬ ವಾಕ್ಯವು ಅಭಿಷಿಕ್ತ ಕ್ರೈಸ್ತರಿಗೆ ಮಾತ್ರವೇ ಸೂಚಿಸುತ್ತದೆ ಎಂಬುದು ಸ್ಪಷ್ಟ. ಆದರೆ ಯೆಹೋವನು ಇಸ್ರಾಯೇಲ್‌ ಜನಾಂಗವನ್ನು ಚಿತ್ರರೂಪವಾಗಿ ಅಥವಾ ದೃಷ್ಟಾಂತವಾಗಿ ಉಪಯೋಗಿಸುವಾಗ ಅದರಲ್ಲಿ ಅಭಿಷಿಕ್ತರನ್ನು ಮಾತ್ರವಲ್ಲದೆ ಇತರ ಕ್ರೈಸ್ತರನ್ನೂ ಒಳಗೂಡಿಸಿದ ಸಂದರ್ಭಗಳಿವೆಯೊ? ಇದಕ್ಕೆ ಉತ್ತರವು ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೆ ಹೇಳಿದ ಈ ಮಾತುಗಳಲ್ಲಿ ಕಂಡುಬರಬಲ್ಲದು: “ನನ್ನ ತಂದೆಯು ನನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿರುವಂತೆ ನಾನು ನಿಮ್ಮೊಂದಿಗೆ ಒಂದು ರಾಜ್ಯಕ್ಕಾಗಿ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ. ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಬಳಿಯಲ್ಲಿ ಕುಳಿತುಕೊಂಡು ಊಟಮಾಡುವಿರಿ, ಕುಡಿಯುವಿರಿ ಮತ್ತು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸಲು ಸಿಂಹಾಸನಗಳ ಮೇಲೆ ಕುಳಿತುಕೊಳ್ಳುವಿರಿ.” (ಲೂಕ 22:28-30) ಇದು ಕ್ರಿಸ್ತನ ಸಹಸ್ರವರ್ಷದಾಳಿಕೆಯ ಸಮಯದಲ್ಲಿ “ಹೊಸ ಸೃಷ್ಟಿಯಾಗುವಾಗ” ಅಥವಾ ಪುನರುತ್ಪತ್ತಿಯಾಗುವಾಗ ಸಂಭವಿಸುವುದು.—ಮತ್ತಾಯ 19:28 ಓದಿ.

6, 7. ಮತ್ತಾಯ 19:28 ಮತ್ತು ಲೂಕ 22:30ರ ಪೂರ್ವಾಪರದಲ್ಲಿ ‘ಇಸ್ರಾಯೇಲಿನ ಹನ್ನೆರಡು ಕುಲಗಳು’ ಎಂಬ ಅಭಿವ್ಯಕ್ತಿ ಯಾರಿಗೆ ಸೂಚಿಸುತ್ತದೆ?

6 ಸಹಸ್ರವರ್ಷದಾಳಿಕೆಯಲ್ಲಿ ಈ 1,44,000 ಮಂದಿ ಸ್ವರ್ಗೀಯ ರಾಜರೂ ಯಾಜಕರೂ ನ್ಯಾಯಾಧಿಪತಿಗಳೂ ಆಗಿ ಸೇವೆಮಾಡುವರು. (ಪ್ರಕ. 20:4) ಅವರು ಯಾರಿಗೆ ನ್ಯಾಯತೀರಿಸುವರು ಮತ್ತು ಯಾರ ಮೇಲೆ ರಾಜರಾಗಿ ಆಳುವರು? ಮತ್ತಾಯ 19:28 ಮತ್ತು ಲೂಕ 22:30ರಲ್ಲಿ ಅವರು “ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ” ನ್ಯಾಯತೀರಿಸುವರು ಎಂದು ಹೇಳಲಾಗಿದೆ. ಈ ಪೂರ್ವಾಪರದಲ್ಲಿ ‘ಇಸ್ರಾಯೇಲಿನ ಹನ್ನೆರಡು ಕುಲಗಳು’ ಯಾರನ್ನು ಚಿತ್ರಿಸುತ್ತವೆ? ಅವು ಯೇಸುವಿನ ಯಜ್ಞದಲ್ಲಿ ನಂಬಿಕೆಯಿಡುವ ಆದರೆ ರಾಜವಂಶಸ್ಥರಾದ ಯಾಜಕ ವರ್ಗದಲ್ಲಿ ಸೇರಿರದ ಭೂನಿರೀಕ್ಷೆಯುಳ್ಳ ಎಲ್ಲರನ್ನು ಪ್ರತಿನಿಧಿಸುತ್ತವೆ. (ಪಟ್ಟಿಮಾಡಲ್ಪಟ್ಟ ಮಾಂಸಿಕ ಇಸ್ರಾಯೇಲ್ಯರ 12 ಕುಲಗಳಲ್ಲಿ ಲೇವಿ ಕುಲವು ಸೇರಿರಲಿಲ್ಲ.) ಈ ಪೂರ್ವಾಪರದಲ್ಲಿ ತಿಳಿಸಲಾದ ಇಸ್ರಾಯೇಲಿನ 12 ಕುಲಗಳು 1,44,000 ಮಂದಿಯ ಯಾಜಕ ಸೇವೆಯಿಂದ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯುವವರು ಆಗಿದ್ದಾರೆ. ಯಾಜಕರಲ್ಲದ ಈ ಫಲಾನುಭವಿಗಳು ಕೂಡ ದೇವಜನರಾಗಿದ್ದಾರೆ ಮತ್ತು ದೇವರು ಅವರನ್ನು ಪ್ರೀತಿಸುತ್ತಾನೆ, ಸ್ವೀಕರಿಸುತ್ತಾನೆ. ಪುರಾತನಕಾಲದ ಆತನ ಜನರಿಗೆ ಅವರು ಹೋಲಿಸಲ್ಪಡುವುದು ಸೂಕ್ತವಾಗಿದೆ.

7 ಮಹಾ ಸಂಕಟಕ್ಕೆ ಮುಂಚಿತವಾಗಿ ಕೊನೆಯ ಮುದ್ರೆಯೊತ್ತಲ್ಪಟ್ಟ 1,44,000 ಆಧ್ಯಾತ್ಮಿಕ ಇಸ್ರಾಯೇಲ್ಯರನ್ನು ಅಪೊಸ್ತಲ ಯೋಹಾನನು ನೋಡಿದ ನಂತರ “ಎಲ್ಲ ಜನಾಂಗಗಳಿಂದ” ಹೊರಟುಬರುವ ಅಗಣಿತ ‘ಮಹಾ ಸಮೂಹವನ್ನು’ ಸಹ ಅವನು ನೋಡಿದ್ದು ಸೂಕ್ತವಾಗಿತ್ತು. (ಪ್ರಕ. 7:9) ಇವರು ಮಹಾ ಸಂಕಟವನ್ನು ಪಾರಾಗಿ ಕ್ರಿಸ್ತನ ಸಹಸ್ರವರ್ಷದಾಳಿಕೆಯನ್ನು ಪ್ರವೇಶಿಸುವರು. ಅಲ್ಲಿ ಅವರು ಪುನರುತ್ಥಾನಗೊಂಡ ಕೋಟ್ಯಂತರ ಜನರನ್ನು ಜೊತೆಗೂಡುವರು. (ಯೋಹಾ. 5:28, 29; ಪ್ರಕ. 20:13) ಇವರೆಲ್ಲರೂ ಕೂಡಿ ಸಾಂಕೇತಿಕ ‘ಇಸ್ರಾಯೇಲಿನ ಹನ್ನೆರಡು ಕುಲಗಳಾಗುವರು’ ಮತ್ತು ಯೇಸುವೂ ಅವನ 1,44,000 ಜೊತೆ ರಾಜರೂ ಅವರಿಗೆ ನ್ಯಾಯತೀರಿಸುವರು.—ಅ. ಕಾ. 17:31; 24:15; ಪ್ರಕ. 20:12.

8. ವಾರ್ಷಿಕ ದೋಷಪರಿಹಾರಕ ದಿನದ ಘಟನೆಗಳು 1,44,000 ಮಂದಿ ಮತ್ತು ಉಳಿದ ಮಾನವಕುಲದ ನಡುವಣ ಸಂಬಂಧವನ್ನು ಹೇಗೆ ಮುನ್ಸೂಚಿಸುತ್ತವೆ?

8 ಈ 1,44,000 ಮಂದಿ ಮತ್ತು ಉಳಿದ ಮಾನವಕುಲದ ನಡುವಣ ಸಂಬಂಧವು ವಾರ್ಷಿಕ ದೋಷಪರಿಹಾರಕ ದಿನದ ಘಟನೆಗಳಲ್ಲಿ ಮುನ್ಸೂಚಿತವಾಗಿತ್ತು. (ಯಾಜ. 16:6-10) ಮಹಾ ಯಾಜಕನು ಮೊತ್ತಮೊದಲಾಗಿ “ತನಗೋಸ್ಕರವೂ ತನ್ನ ಮನೆತನದವರಿಗೋಸ್ಕರವೂ” ಒಂದು ಹೋರಿಯನ್ನು ದೋಷಪರಿಹಾರಕವಾಗಿ ಅರ್ಪಿಸಬೇಕಿತ್ತು. ಹೀಗೆ ಯೇಸುವಿನ ಯಜ್ಞವು ಅವನ ಉಪಯಾಜಕ ಮನೆವಾರ್ತೆಯವರಿಗೆ ಅಂದರೆ ಅವನೊಂದಿಗೆ ಸ್ವರ್ಗದಲ್ಲಿ ಸೇವೆಮಾಡುವವರಿಗೆ ಮೊತ್ತಮೊದಲಾಗಿ ಅನ್ವಯಿಸುತ್ತದೆ. ಹಾಗೂ ಪುರಾತನ ದೋಷಪರಿಹಾರಕ ದಿನದಲ್ಲಿ ಇತರ ಇಸ್ರಾಯೇಲ್ಯರ ಪಾಪಗಳಿಗಾಗಿ ಎರಡು ಹೋತಗಳನ್ನು ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ, ಯಾಜಕ ವರ್ಗವು 1,44,000 ಮಂದಿಯನ್ನು ಪ್ರತಿನಿಧಿಸುವಾಗ ಬೇರೆ ಇಸ್ರಾಯೇಲ್ಯರು ಭೂನಿರೀಕ್ಷೆಯನ್ನು ಹೊಂದಿರುವವರೆಲ್ಲರನ್ನು ಚಿತ್ರಿಸುತ್ತಾರೆ. ಈ ಅನ್ವಯವು ಮತ್ತಾಯ 19:28ರಲ್ಲಿರುವ ‘ಇಸ್ರಾಯೇಲಿನ ಹನ್ನೆರಡು ಕುಲಗಳು’ ಎಂಬ ಪದವು ಯೇಸುವಿನ ಆತ್ಮಜಾತ ಉಪಯಾಜಕರಿಗೆ ಅಲ್ಲ ಬದಲಿಗೆ ಯೇಸುವಿನ ಯಜ್ಞದಲ್ಲಿ ನಂಬಿಕೆಯಿಡುವ ಬೇರೆ ಎಲ್ಲರಿಗೆ ಅನ್ವಯಿಸುತ್ತದೆಂದು ತೋರಿಸುತ್ತದೆ. *

9. ಯೆಹೆಜ್ಕೇಲನ ಆಲಯದ ದರ್ಶನದಲ್ಲಿ ಯಾಜಕರು ಯಾರನ್ನು ಪ್ರತಿನಿಧಿಸುತ್ತಾರೆ, ಮತ್ತು ಯಾಜಕರಲ್ಲದ ಇಸ್ರಾಯೇಲ್ಯರು ಯಾರನ್ನು ಪ್ರತಿನಿಧಿಸುತ್ತಾರೆ?

9 ಇನ್ನೊಂದು ಉದಾಹರಣೆಯನ್ನೂ ಪರಿಗಣಿಸಿರಿ. ಪ್ರವಾದಿಯಾದ ಯೆಹೆಜ್ಕೇಲನಿಗೆ ಯೆಹೋವನ ದೇವಾಲಯದ ಒಂದು ವ್ಯಾಪಕವಾದ ದರ್ಶನವು ಕೊಡಲ್ಪಟ್ಟಿತು. (ಯೆಹೆ., ಅಧ್ಯಾ. 40-48) ಆ ದಾರ್ಶನಿಕ ದೃಶ್ಯದಲ್ಲಿ ಯಾಜಕರು ದೇವಾಲಯದಲ್ಲಿ ಜನರಿಗೆ ಬೋಧಿಸುತ್ತಾ ಯೆಹೋವನ ಸಲಹೆಸೂಚನೆಗಳನ್ನು ಮತ್ತು ತಿದ್ದುಪಾಟನ್ನು ಸ್ವೀಕರಿಸುತ್ತಾ ಸೇವೆಮಾಡಿದರು. (ಯೆಹೆ. 44:23-31) ಅದೇ ದೃಶ್ಯದಲ್ಲಿ ಬೇರೆ ಬೇರೆ ಕುಲಗಳ ಸದಸ್ಯರು ಆರಾಧನೆಗಾಗಿ ಮತ್ತು ಯಜ್ಞಗಳನ್ನು ಅರ್ಪಿಸುವುದಕ್ಕಾಗಿ ಕೂಡಿಬಂದರು. (ಯೆಹೆ. 45:16, 17) ಹೀಗಿರಲಾಗಿ ಈ ಪೂರ್ವಾಪರದಲ್ಲಿ ಯಾಜಕರು ಅಭಿಷಿಕ್ತರನ್ನು ಚಿತ್ರಿಸುವಾಗ ಯಾಜಕರಲ್ಲದ ಕುಲಗಳ ಇಸ್ರಾಯೇಲ್ಯರು ಭೂನಿರೀಕ್ಷೆಯುಳ್ಳವರನ್ನು ಚಿತ್ರಿಸುತ್ತಾರೆ. ಈ ಎರಡೂ ಗುಂಪುಗಳು ಏಕಮೇಳವಾಗಿ ಸೇವೆ ನಡಿಸುವುದನ್ನು ದರ್ಶನವು ಒತ್ತಿಹೇಳುತ್ತದೆ. ಆದರೆ ಯಾಜಕ ವರ್ಗವು ಶುದ್ಧಾರಾಧನೆಯಲ್ಲಿ ಮುಂದಾಳುತ್ವ ವಹಿಸಿತ್ತು.

10, 11. (ಎ) ಯೇಸುವಿನ ಮಾತುಗಳ ಯಾವ ನಂಬಿಕೆವರ್ಧಕ ನೆರವೇರಿಕೆಯನ್ನು ನಾವು ಕಂಡಿದ್ದೇವೆ? (ಬಿ) ಬೇರೆ ಕುರಿಗಳ ಕುರಿತು ಯಾವ ಪ್ರಶ್ನೆ ಏಳುತ್ತದೆ?

10 ‘ಚಿಕ್ಕ ಹಿಂಡಾದ’ ತನ್ನ ಅಭಿಷಿಕ್ತ ಹಿಂಬಾಲಕರ ಅದೇ “ಹಟ್ಟಿಗೆ” ಸೇರದಿರುವ ‘ಬೇರೆ ಕುರಿಗಳ’ ಕುರಿತಾಗಿಯೂ ಯೇಸು ಮಾತಾಡಿದನು. (ಯೋಹಾ. 10:16; ಲೂಕ 12:32) ಅವನು ಹೇಳಿದ್ದು: “ಅವುಗಳನ್ನೂ ನಾನು ತರಬೇಕು, ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಅವು ಒಂದೇ ಹಿಂಡಾಗುವವು, ಒಬ್ಬನೇ ಕುರುಬನಿರುವನು.” ಆ ಮಾತುಗಳ ನೆರವೇರಿಕೆಯನ್ನು ಕಾಣುವುದು ನಮ್ಮ ನಂಬಿಕೆಯನ್ನು ಎಷ್ಟು ಬಲಪಡಿಸಿರುತ್ತದೆ! ಎರಡೂ ಗುಂಪಿನ ಜನರು, ಅಂದರೆ ಅಭಿಷಿಕ್ತರ ಚಿಕ್ಕ ಗುಂಪು ಮತ್ತು ಬೇರೆ ಕುರಿಗಳ ದೊಡ್ಡ ಗುಂಪು ಒಟ್ಟಾಗಿ ಐಕ್ಯವಾಗಿದ್ದಾರೆ. (ಜೆಕರ್ಯ 8:23 ಓದಿ.) ಬೇರೆ ಕುರಿಗಳು ಆಧ್ಯಾತ್ಮಿಕ ಆಲಯದ ಒಳಗಣ ಪ್ರಾಕಾರದಲ್ಲಿ ಸಾಂಕೇತಿಕವಾಗಿ ಸೇವೆಮಾಡುವುದಿಲ್ಲವಾದರೂ ಅವರು ಆ ಆಲಯದ ಹೊರಗಣ ಪ್ರಾಕಾರದಲ್ಲಿ ಸೇವೆಮಾಡುತ್ತಾರೆ ನಿಶ್ಚಯ.

11 ಯೆಹೋವನು ಈ ಬೇರೆ ಕುರಿಗಳನ್ನು ಚಿತ್ರಿಸಲು ಪುರಾತನ ಇಸ್ರಾಯೇಲಿನ ಯಾಜಕರಲ್ಲದ ಸದಸ್ಯರನ್ನು ಕೆಲವೊಮ್ಮೆ ಉಪಯೋಗಿಸುತ್ತಾನಾದರೆ ಭೂನಿರೀಕ್ಷೆಯಿರುವವರು ಸಹ ಜ್ಞಾಪಕಾಚರಣೆಯ ಕುರುಹುಗಳಲ್ಲಿ ಪಾಲ್ಗೊಳ್ಳಬೇಕೊ? ಈ ಪ್ರಶ್ನೆಗೆ ಉತ್ತರವನ್ನು ನಾವೀಗ ಪರಿಗಣಿಸುವೆವು.

ಹೊಸ ಒಡಂಬಡಿಕೆ

12. ಯಾವ ಹೊಸ ಏರ್ಪಾಡನ್ನು ಯೆಹೋವನು ಮುಂತಿಳಿಸಿದನು?

12 ಯೆಹೋವನು ತನ್ನ ಜನರಿಗಾಗಿ ಒಂದು ಹೊಸ ಏರ್ಪಾಡನ್ನು ಮುಂತಿಳಿಸಿದಾಗ ಹೇಳಿದ್ದು: “ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್‌ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು—ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.” (ಯೆರೆ. 31:31-33) ಈ ಹೊಸ ಒಡಂಬಡಿಕೆಯ ಮೂಲಕವಾಗಿ ಅಬ್ರಹಾಮನಿಗೆ ಯೆಹೋವನು ಮಾಡಿದ ವಾಗ್ದಾನವು ಒಂದು ಮಹಿಮಾಯುತ ಹಾಗೂ ಶಾಶ್ವತ ನೆರವೇರಿಕೆಯನ್ನು ಹೊಂದಲಿಕ್ಕಿತ್ತು.—ಆದಿಕಾಂಡ 22:18 ಓದಿ.

13, 14. (ಎ) ಹೊಸ ಒಡಂಬಡಿಕೆಯಲ್ಲಿ ಯಾರು ಪಾಲಿಗರು? (ಬಿ) ಫಲಾನುಭವಿಗಳು ಯಾರು, ಮತ್ತು ಅವರು ಈ ಹೊಸ ಒಡಂಬಡಿಕೆಯನ್ನು ‘ಭದ್ರವಾಗಿ ಹಿಡಿಯುವುದು’ ಹೇಗೆ?

13 ತನ್ನ ಮರಣಕ್ಕೆ ಮುಂಚಿನ ರಾತ್ರಿಯಲ್ಲಿ ಯೇಸು ಈ ಹೊಸ ಒಡಂಬಡಿಕೆಗೆ ಸೂಚಿಸುತ್ತಾ ಹೇಳಿದ್ದು: “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡಲಿರುವ ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.” (ಲೂಕ 22:20; 1 ಕೊರಿಂ. 11:25) ಈ ಹೊಸ ಒಡಂಬಡಿಕೆಯಲ್ಲಿ ಎಲ್ಲ ಕ್ರೈಸ್ತರು ಸೇರಿದ್ದಾರೊ? ಇಲ್ಲ. ಆ ಸಂಜೆ ಆ ಪಾತ್ರೆಯಲ್ಲಿ ಕುಡಿದ ಅಪೊಸ್ತಲರಂತೆ ಕೆಲವರು ಮಾತ್ರ ಹೊಸ ಒಡಂಬಡಿಕೆಯಲ್ಲಿ ಪಾಲಿಗರು ಆಗಿದ್ದಾರೆ. * ತನ್ನ ರಾಜ್ಯದಲ್ಲಿ ಜೊತೆಯಾಗಿ ಆಳಲಿಕ್ಕೆ ಯೇಸು ಅವರೊಂದಿಗೆ ಇನ್ನೊಂದು ಒಡಂಬಡಿಕೆಯನ್ನೂ ಮಾಡಿದನು. (ಲೂಕ 22:28-30) ಅವರು ಯೇಸುವಿನ ರಾಜ್ಯದಲ್ಲಿ ಅವನೊಂದಿಗೆ ಕೂಡಿ ಆಳುವರು.—ಲೂಕ 22:15, 16.

14 ಅವನ ರಾಜ್ಯದ ಕೆಳಗೆ ಭೂಮಿಯ ಮೇಲೆ ಜೀವಿಸುವವರ ಕುರಿತೇನು? ಅವರು ಹೊಸ ಒಡಂಬಡಿಕೆಯ ಫಲಾನುಭವಿಗಳು. (ಗಲಾ. 3:8, 9) ಅವರು ಒಡಂಬಡಿಕೆಯಲ್ಲಿ ಪಾಲಿಗರಲ್ಲದಿದ್ದರೂ ಅದರ ಆವಶ್ಯಕತೆಗಳಿಗೆ ಅಧೀನರಾಗುವ ಮೂಲಕ ಒಡಂಬಡಿಕೆಯನ್ನು ‘ಭದ್ರವಾಗಿ ಹಿಡಿಯುತ್ತಾರೆ.’ ಪ್ರವಾದಿ ಯೆಶಾಯನು ಇದನ್ನೇ ಮುಂತಿಳಿಸಿದ್ದಾನೆ: “ಅನ್ಯದೇಶೀಯರಲ್ಲಿ ಯಾರು ಯೆಹೋವನೆಂಬ ನನ್ನನ್ನು ಅವಲಂಬಿಸಿ ಸೇವಿಸಿ ನನ್ನ ನಾಮವನ್ನು ಪ್ರೀತಿಸಿ ನನಗೆ ದಾಸರಾಗಿ ಸಬ್ಬತ್‌ ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿಯುತ್ತಾರೋ ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು.” ಅನಂತರ ಯೆಹೋವನು ಹೇಳುವುದು: “ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು.”—ಯೆಶಾ. 56:6, 7.

ಕುರುಹುಗಳಲ್ಲಿ ಯಾರು ಪಾಲಿಗರಾಗಬೇಕು?

15, 16. (ಎ) ಅಪೊಸ್ತಲ ಪೌಲನು ಹೊಸ ಒಡಂಬಡಿಕೆಯನ್ನು ಯಾವುದಕ್ಕೆ ಜೋಡಿಸಿದನು? (ಬಿ) ಭೂನಿರೀಕ್ಷೆಯುಳ್ಳವರು ಜ್ಞಾಪಕದ ಕುರುಹುಗಳಲ್ಲಿ ಪಾಲಿಗರಾಗಬಾರದು ಏಕೆ?

15 ಹೊಸ ಒಡಂಬಡಿಕೆಯಲ್ಲಿ ಇರುವವರಿಗೆ “ಪವಿತ್ರ ಸ್ಥಳಕ್ಕೆ ಹೋಗುವ ಮಾರ್ಗವನ್ನು ಪ್ರವೇಶಿಸುವ ಧೈರ್ಯವು” ಇದೆ. (ಇಬ್ರಿಯ 10:15-20 ಓದಿ.) ‘ಯಾರೂ ಅಲುಗಾಡಿಸಲಾರದ ರಾಜ್ಯವನ್ನು ಹೊಂದಲಿಕ್ಕಿರುವವರು’ ಇವರೇ. (ಇಬ್ರಿ. 12:28) ಹೀಗಿರಲಾಗಿ ಯೇಸು ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ರಾಜರು ಮತ್ತು ಯಾಜಕರಾಗಿರುವವರು ಮಾತ್ರವೇ ಹೊಸ ಒಡಂಬಡಿಕೆಯನ್ನು ಪ್ರತಿನಿಧಿಸುವ “ಪಾತ್ರೆ”ಯಲ್ಲಿ ಕುಡಿಯಬೇಕು. ಹೊಸ ಒಡಂಬಡಿಕೆಯಲ್ಲಿರುವ ಈ ಪಾಲಿಗರು ಕುರಿಮರಿಯೊಂದಿಗೆ ವಿವಾಹ ವಾಗ್ದಾನ ಹೊಂದಿದವರಾಗಿದ್ದಾರೆ. (2 ಕೊರಿಂ. 11:2; ಪ್ರಕ. 21:2, 9) ವಾರ್ಷಿಕ ಜ್ಞಾಪಕಾಚರಣೆಗೆ ಹಾಜರಾಗುವ ಇತರರೆಲ್ಲರು ಗೌರವವನ್ನು ತೋರಿಸುವ ಪ್ರೇಕ್ಷಕರಾಗಿದ್ದಾರೇ ಹೊರತು ಕುರುಹುಗಳಲ್ಲಿ ಪಾಲಿಗರಾಗುವುದಿಲ್ಲ.

16 ಭೂನಿರೀಕ್ಷೆಯುಳ್ಳವರು ಜ್ಞಾಪಕದ ಕುರುಹುಗಳಲ್ಲಿ ಪಾಲುಗಾರರಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಲು ಪೌಲನು ಸಹ ನಮಗೆ ಸಹಾಯಮಾಡುತ್ತಾನೆ. ಅಭಿಷಿಕ್ತ ಕ್ರೈಸ್ತರಿಗೆ ಅವನಂದದ್ದು: “ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಿಂದ ಕುಡಿಯುವಷ್ಟು ಸಾರಿ ಕರ್ತನ ಮರಣವನ್ನು ಅವನು ಬರುವ ತನಕ ಪ್ರಕಟಪಡಿಸುತ್ತಾ ಇರುತ್ತೀರಿ.” (1 ಕೊರಿಂ. 11:26) ಕರ್ತನು ‘ಬರುವುದು’ ಯಾವಾಗ? ತನ್ನ ಅಭಿಷಿಕ್ತ ವಧುವರ್ಗದಲ್ಲಿರುವ ಕೊನೆಯವರನ್ನು ಅವರ ಸ್ವರ್ಗೀಯ ಮನೆಗೆ ಕರೆದೊಯ್ಯಲು ಬರುವಾಗಲೇ. (ಯೋಹಾ. 14:2, 3) ಸ್ಪಷ್ಟವಾಗಿ ಕರ್ತನ ಸಂಧ್ಯಾ ಭೋಜನದ ವಾರ್ಷಿಕ ಆಚರಣೆಯು ನಿರಂತರವಾಗಿ ಮುಂದುವರಿಯುವುದಿಲ್ಲ. ಭೂಮಿಯಲ್ಲಿ ಇನ್ನೂ ಇರುವ ಸ್ತ್ರೀಯ ಸಂತಾನದ ‘ಉಳಿದವರಲ್ಲಿ’ ಎಲ್ಲರು ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆದಾಗುವ ತನಕ ಈ ಭೋಜನದಲ್ಲಿ ಪಾಲಿಗರಾಗುವುದನ್ನು ಮುಂದುವರಿಸುವರು. (ಪ್ರಕ. 12:17) ಭೂಮಿಯ ಮೇಲೆ ಸದಾ ಜೀವಿಸಲಿರುವವರು ಈ ಕುರುಹುಗಳಲ್ಲಿ ಪಾಲಿಗರಾಗಲು ಒಂದುವೇಳೆ ಅರ್ಹರಾಗಿದ್ದಲ್ಲಿ ಈ ಜ್ಞಾಪಕಾಚರಣೆಯ ಭೋಜನವು ಸದಾ ಸರ್ವದಾ ಮುಂದುವರಿಯುವ ಅಗತ್ಯವಿರುವುದು.

“ಅವರು ನನಗೆ ಪ್ರಜೆಯಾಗಿರುವರು”

17, 18. ಯೆಹೆಜ್ಕೇಲ 37:26, 27ರಲ್ಲಿ ದಾಖಲಾದ ಪ್ರವಾದನೆಯು ಹೇಗೆ ನೆರವೇರಿದೆ?

17 ಯೆಹೋವನು ತನ್ನ ಜನರ ಐಕ್ಯತೆಯನ್ನು ಈ ಮಾತುಗಳಲ್ಲಿ ಮುಂತಿಳಿಸಿದನು: “ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವದು; ನಾನು ಅವರನ್ನು ನೆಲೆಗೊಳಿಸಿ ವೃದ್ಧಿಮಾಡಿ ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು. ಹೌದು, ನನ್ನ ವಾಸಸ್ಥಾನವು ಅವರ ಮಧ್ಯದಲ್ಲಿರುವದು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.”—ಯೆಹೆ. 37:26, 27.

18 ಈ ಅದ್ಭುತಕರ ವಾಗ್ದಾನದ, ಕ್ರೈಸ್ತ ಸಮಾಧಾನದ ಈ ಒಡಂಬಡಿಕೆಯ ನೆರವೇರಿಕೆಯಿಂದ ಪ್ರಯೋಜನ ಹೊಂದುವ ಸುಯೋಗವು ದೇವಜನರೆಲ್ಲರದ್ದಾಗಿದೆ. ಹೌದು, ಯೆಹೋವನು ತನ್ನ ವಿಧೇಯ ಸೇವಕರೆಲ್ಲರಿಗೆ ಸಮಾಧಾನದ ಖಾತ್ರಿಯನ್ನು ಕೊಟ್ಟಿದ್ದಾನೆ. ಆತನ ಆತ್ಮದ ಫಲವು ಅವರ ನಡುವೆ ಪ್ರತ್ಯಕ್ಷವಾಗಿ ಇದೆ. ಇಲ್ಲಿ ಕ್ರೈಸ್ತ ಶುದ್ಧಾರಾಧನೆಯನ್ನು ಚಿತ್ರಿಸುವ ಆತನ ಪವಿತ್ರಾಲಯವು ಅವರ ಮಧ್ಯೆ ಇದೆ. ಅವರು ನಿಜವಾಗಿಯೂ ಆತನ ಜನರಾಗಿದ್ದಾರೆ. ಏಕೆಂದರೆ ಅವರು ಎಲ್ಲ ತರದ ವಿಗ್ರಹಾರಾಧನೆಯನ್ನು ತೊರೆದಿದ್ದಾರೆ ಮತ್ತು ಯೆಹೋವನನ್ನು ಮಾತ್ರವೇ ತಾವು ಆರಾಧಿಸುವ ದೇವರಾಗಿ ಮಾಡಿದ್ದಾರೆ.

19, 20. ಯೆಹೋವನು “ನನ್ನ ಜನ” ಎಂದು ಕರೆಯುವ ಜನರಲ್ಲಿ ಯಾರು ಒಳಗೂಡಿದ್ದಾರೆ, ಮತ್ತು ಹೊಸ ಒಡಂಬಡಿಕೆಯು ಏನನ್ನು ಸಾಧ್ಯಗೊಳಿಸುತ್ತದೆ?

19 ನಮ್ಮ ಸಮಯದಲ್ಲಿ ಈ ಎರಡು ಗುಂಪುಗಳ ಒಂದುಗೂಡಿಸುವಿಕೆಯನ್ನು ಕಾಣುವುದು ಅದೆಷ್ಟು ರೋಮಾಂಚಕರ! ಸದಾ ವೃದ್ಧಿಯಾಗುತ್ತಿರುವ ಮಹಾ ಸಮೂಹಕ್ಕೆ ಸ್ವರ್ಗೀಯ ನಿರೀಕ್ಷೆ ಇಲ್ಲದಿದ್ದರೂ ಆ ನಿರೀಕ್ಷೆ ಇರುವವರೊಂದಿಗೆ ಜೊತೆಗೂಡಿರಲು ಅವರು ಹೆಮ್ಮೆಪಡುತ್ತಾರೆ. ದೇವರ ಇಸ್ರಾಯೇಲಿನೊಂದಿಗೆ ಅವರು ಒತ್ತಾದ ಸಂಬಂಧದಲ್ಲಿದ್ದಾರೆ. ಹೀಗೆ ಮಾಡುವ ಮೂಲಕ ಯಾರನ್ನು ಯೆಹೋವನು “ನನ್ನ ಜನ” ಎಂದು ಕರೆಯುತ್ತಾನೋ ಅವರೊಂದಿಗೆ ಸೇರಿಕೊಂಡಿದ್ದಾರೆ. ಅವರಲ್ಲಿ ಈ ಪ್ರವಾದನೆ ನೆರವೇರುವುದನ್ನು ನಾವು ಕಾಣುತ್ತೇವೆ: “ಆ ಕಾಲದಲ್ಲಿ ಬಹು ಜನಾಂಗಗಳು ಯೆಹೋವನಾದ ನನ್ನನ್ನು ಆಶ್ರಯಿಸಿಕೊಂಡು ನನ್ನ ಜನವಾಗುವವು; ನಾನು ನಿನ್ನ ಮಧ್ಯದಲ್ಲಿ ವಾಸಿಸುವೆನು.”—ಜೆಕ. 2:11; 8:21; ಯೆಶಾಯ 65:22; ಪ್ರಕಟನೆ 21:3, 4 ಓದಿ.

20 ಯೆಹೋವನು ಇವೆಲ್ಲವನ್ನು ಸಾಧ್ಯಮಾಡಿರುವುದು ಆ ಹೊಸ ಒಡಂಬಡಿಕೆಯ ಮೂಲಕವೇ. ಲಕ್ಷಾಂತರ ಮಂದಿ ಆಧ್ಯಾತ್ಮಿಕ ಅನ್ಯದೇಶೀಯರು ಯೆಹೋವನ ಮೆಚ್ಚುಗೆಯ ಜನಾಂಗದೊಂದಿಗೆ ಒಂದುಗೂಡಿದ್ದಾರೆ. (ಮೀಕ 4:1-5) ಆ ಒಡಂಬಡಿಕೆಯ ಒದಗಿಸುವಿಕೆಗಳನ್ನು ಸ್ವೀಕರಿಸುವ ಮೂಲಕ ಮತ್ತು ಅದರ ಅವಶ್ಯಕತೆಗಳಿಗೆ ವಿಧೇಯರಾಗುವ ಮೂಲಕ ಅದನ್ನು ಭದ್ರವಾಗಿ ಹಿಡಿದುಕೊಳ್ಳುವ ನಿರ್ಧಾರವನ್ನು ಮಾಡಿರುತ್ತಾರೆ. (ಯೆಶಾ. 56:6, 7) ಹೀಗೆ ಮಾಡುತ್ತಾ ದೇವರ ಇಸ್ರಾಯೇಲ್ಯರೊಂದಿಗೆ ಅವರು ನಿರಂತರ ಶಾಂತಿಯ ಹೇರಳ ಆಶೀರ್ವಾದವನ್ನು ಆನಂದಿಸುತ್ತಾರೆ. ಈಗಲೂ ನಿತ್ಯ ನಿರಂತರವೂ ಅದು ನಿಮ್ಮ ಆಶೀರ್ವಾದವಾಗಿಯೇ ಇರಲಿ!

[ಪಾದಟಿಪ್ಪಣಿಗಳು]

^ ಪ್ಯಾರ. 8 ತದ್ರೀತಿಯಲ್ಲಿ, ಅಭಿಷಿಕ್ತರು ಪ್ರಧಾನ ಅರ್ಥದಲ್ಲಿ ‘ಸಭೆಯಾಗಿ’ ತಿಳಿಸಲ್ಪಟ್ಟಿದ್ದಾರೆ. (ಇಬ್ರಿ. 12:23) ಆದರೂ “ಸಭೆ” ಎಂಬ ಶಬ್ದಕ್ಕೆ ಬೇರೊಂದು ಅರ್ಥವೂ ಇರಸಾಧ್ಯವಿದೆ. ಒಬ್ಬನ ನಿರೀಕ್ಷೆ ಯಾವುದೇ ಆಗಿರಲಿ ಆ ಶಬ್ದವು ಎಲ್ಲ ಕ್ರೈಸ್ತರಿಗೆ ಸೂಚಿಸುತ್ತದೆ.—2007, ಮೇ 1ರ ಕಾವಲಿನಬುರುಜುವಿನ ಪುಟ 9-11 ನೋಡಿ.

^ ಪ್ಯಾರ. 13 ಯೇಸು ಆ ಒಡಂಬಡಿಕೆಯ ಮಧ್ಯಸ್ಥನಾಗಿದ್ದಾನೇ ಹೊರತು ಪಾಲಿಗನಲ್ಲ. ಮಧ್ಯಸ್ಥನಾದ ಅವನು ಕುರುಹುಗಳಲ್ಲಿ ಪಾಲ್ಗೊಳ್ಳಲಿಲ್ಲ ಎಂಬುದು ಸ್ಪುಟ.

ನಿಮಗೆ ನೆನಪಿದೆಯೇ?

• 1,44,000 ಮಂದಿ ನ್ಯಾಯತೀರಿಸಲಿರುವ ‘ಇಸ್ರಾಯೇಲಿನ ಹನ್ನೆರಡು ಕುಲಗಳು’ ಯಾರನ್ನು ಪ್ರತಿನಿಧಿಸುತ್ತವೆ?

• ಅಭಿಷಿಕ್ತರಿಗೆ ಮತ್ತು ಬೇರೆ ಕುರಿಗಳಿಗೆ ಹೊಸ ಒಡಂಬಡಿಕೆಯೊಂದಿಗೆ ಯಾವ ಸಂಬಂಧವಿದೆ?

• ಜ್ಞಾಪಕದ ಕುರುಹುಗಳಲ್ಲಿ ಕ್ರೈಸ್ತರೆಲ್ಲರೂ ಪಾಲಿಗರಾಗಬೇಕೊ?

• ನಮ್ಮ ಸಮಯಕ್ಕಾಗಿ ಯಾವ ಐಕ್ಯತೆಯು ಮುಂತಿಳಿಸಲ್ಪಟ್ಟಿತು?

[ಅಧ್ಯಯನ ಪ್ರಶ್ನೆಗಳು]

[ಪುಟ 25ರಲ್ಲಿರುವ ನಕ್ಷೆ/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಅನೇಕರು ಈಗ ದೇವರ ಇಸ್ರಾಯೇಲ್ಯರೊಂದಿಗೆ ಕೂಡಿ ಸೇವೆಮಾಡುತ್ತಿದ್ದಾರೆ

73,13,173

40,17,213

14,83,430

3,73,430

1950 1970 1990 2009