ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀಕ್ಷಾಸ್ನಾನ—ಯಾರ ಮತ್ತು ಯಾವುದರ ಹೆಸರಿನಲ್ಲಿ?

ದೀಕ್ಷಾಸ್ನಾನ—ಯಾರ ಮತ್ತು ಯಾವುದರ ಹೆಸರಿನಲ್ಲಿ?

ದೀಕ್ಷಾಸ್ನಾನ—ಯಾರ ಮತ್ತು ಯಾವುದರ ಹೆಸರಿನಲ್ಲಿ?

“ಆದುದರಿಂದ ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ.”—ಮತ್ತಾ. 28:19.

1, 2. (ಎ) ಕ್ರಿ.ಶ. 33ರ ಪಂಚಾಶತ್ತಮದಂದು ಯೆರೂಸಲೇಮಿನಲ್ಲಿ ಏನು ಸಂಭವಿಸಿತು? (ಬಿ) ಜನಸಮೂಹಗಳಲ್ಲಿದ್ದ ಅನೇಕರು ದೀಕ್ಷಾಸ್ನಾನ ಪಡೆದುಕೊಳ್ಳುವಂತೆ ಏಕೆ ಪ್ರಚೋದಿಸಲ್ಪಟ್ಟರು?

ಯೆರೂಸಲೇಮ್‌ ಅನೇಕ ದೇಶಗಳಿಂದ ಬಂದ ಜನಜಂಗುಳಿಯಿಂದ ಗಿಜಿಗುಟ್ಟುತ್ತಿತ್ತು. ಕ್ರಿ.ಶ. 33ರ ಪಂಚಾಶತ್ತಮದಂದು ಒಂದು ಪ್ರಮುಖ ಹಬ್ಬ ಆಚರಿಸಲ್ಪಡುತ್ತಿತ್ತು ಮತ್ತು ಅನೇಕ ಸಂದರ್ಶಕರು ಅದರಲ್ಲಿ ಪಾಲಿಗರಾಗಿದ್ದರು. ಆದರೆ ಒಂದು ಅಸಾಧಾರಣ ಘಟನೆ ನಡೆಯಿತು. ಅದರ ನಂತರ ಅಪೊಸ್ತಲ ಪೇತ್ರನು ಕೊಟ್ಟ ಪ್ರಚೋದನಾತ್ಮಕ ಭಾಷಣಕ್ಕೆ ಆಶ್ಚರ್ಯಕರ ಫಲಿತಾಂಶ ಸಿಕ್ಕಿತು. ಅವನ ಮಾತುಗಳು ಸುಮಾರು 3,000 ಮಂದಿ ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳ ಮನಃಸ್ಪರ್ಶಿಸಿದ್ದರಿಂದ ಅವರು ಪಶ್ಚಾತ್ತಾಪಪಟ್ಟು ನೀರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು. ಹೀಗೆ ಹೊಸದಾಗಿ ಸ್ಥಾಪಿತಗೊಂಡ ಕ್ರೈಸ್ತ ಸಭೆಗೆ ಅವರು ಕೂಡಿಸಲ್ಪಟ್ಟರು. (ಅ. ಕಾ. 2:41) ಯೆರೂಸಲೇಮಿನ ಸುತ್ತಮುತ್ತ ಇದ್ದ ಕೊಳಗಳು ಅಥವಾ ಜಲಾಶಯಗಳಲ್ಲಿ ಇಷ್ಟು ಮಂದಿ ದೀಕ್ಷಾಸ್ನಾನ ಪಡೆದುಕೊಂಡದ್ದು ತುಂಬ ಕೋಲಾಹಲವನ್ನು ಉಂಟುಮಾಡಿರಬೇಕು.

2 ಇಷ್ಟು ಮಂದಿ ದೀಕ್ಷಾಸ್ನಾನ ಪಡೆದುಕೊಳ್ಳುವಂತೆ ಮಾಡಿದ್ದು ಯಾವುದು? ಆ ದಿನದಲ್ಲಿ ಸ್ವಲ್ಪ ಮುಂಚೆ ‘ರಭಸವಾಗಿ ಗಾಳಿಯು ಬೀಸುತ್ತಿದೆಯೋ ಎಂಬಂತೆ ಒಂದು ಶಬ್ದವು ಆಕಾಶದಿಂದ ಥಟ್ಟನೆ ಉಂಟಾಗಿತ್ತು.’ ಆಗ ಒಂದು ಮನೆಯ ಮೇಲಂತಸ್ತಿನ ಕೋಣೆಯಲ್ಲಿ ಯೇಸುವಿನ ಶಿಷ್ಯರಲ್ಲಿ 120 ಮಂದಿ ಪವಿತ್ರಾತ್ಮದಿಂದ ತುಂಬಿಸಲ್ಪಟ್ಟರು. ತದನಂತರ ಕೂಡಿಬಂದ ದೇವಭಕ್ತ ಸ್ತ್ರೀಪುರುಷರು, ಶಿಷ್ಯರು ‘ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಲಾರಂಭಿಸಿದ್ದನ್ನು’ ಕೇಳಿ ಬೆರಗಾದರು. ಇವರು ಪೇತ್ರನು ಹೇಳಿದ್ದನ್ನು ಮತ್ತು ಮುಖ್ಯವಾಗಿ ಯೇಸುವಿನ ಮರಣದ ಕುರಿತು ಅವನು ಮಾಡಿದ ನಿರ್ದಿಷ್ಟ ಹೇಳಿಕೆಗಳನ್ನು ಕೇಳಿದಾಗ ‘ಹೃದಯದಲ್ಲಿ ಇರಿಯಲ್ಪಟ್ಟರು.’ ಅವರೇನು ಮಾಡಬೇಕಿತ್ತು? ಪೇತ್ರನು ಉತ್ತರಿಸಿದ್ದು: “ಪಶ್ಚಾತ್ತಾಪಪಡಿರಿ ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರು . . . ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಿರಿ; ಆಗ ನೀವು ಪವಿತ್ರಾತ್ಮದ ಉಚಿತ ವರವನ್ನು ಪಡೆದುಕೊಳ್ಳುವಿರಿ.”—ಅ. ಕಾ. 2:1-4, 36-38.

3. ಪಂಚಾಶತ್ತಮ ದಿನದಂದು ಪಶ್ಚಾತ್ತಾಪಿ ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳು ಏನು ಮಾಡಬೇಕಿತ್ತು?

3 ಪೇತ್ರನಿಗೆ ಕಿವಿಗೊಟ್ಟ ಆ ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳ ಧಾರ್ಮಿಕ ಸನ್ನಿವೇಶದ ಕುರಿತು ಯೋಚಿಸಿ. ಅವರು ಈಗಾಗಲೇ ಯೆಹೋವನನ್ನು ತಮ್ಮ ದೇವರಾಗಿ ಸ್ವೀಕರಿಸಿದ್ದರು. ಮಾತ್ರವಲ್ಲದೆ ಪವಿತ್ರಾತ್ಮ ದೇವರ ಕಾರ್ಯಕಾರಿ ಶಕ್ತಿಯಾಗಿದ್ದು ಸೃಷ್ಟಿಯ ಸಮಯದಲ್ಲಿ ಮತ್ತು ಅನಂತರ ಕೂಡ ಉಪಯೋಗಿಸಲ್ಪಟ್ಟಿತ್ತು ಎಂಬುದನ್ನು ಅವರು ಹೀಬ್ರು ಶಾಸ್ತ್ರಗ್ರಂಥದಿಂದ ತಿಳಿದಿದ್ದರು. (ಆದಿ. 1:2; ನ್ಯಾಯ. 14:5, 6; 1 ಸಮು. 10:6; ಕೀರ್ತ. 33:6) ಆದರೆ ಈಗ ಅವರಿಗೆ ಇನ್ನೊಂದು ವಿಷಯವನ್ನು ತಿಳಿಯುವ ಅಗತ್ಯವಿತ್ತು. ದೇವರ ರಕ್ಷಣಾ ಮಾಧ್ಯಮವಾದ ಮೆಸ್ಸೀಯನ, ಯೇಸುವಿನ ಕುರಿತು ಅವರು ಅರ್ಥಮಾಡಿಕೊಂಡು ಅವನನ್ನು ಸ್ವೀಕರಿಸಬೇಕಿತ್ತು. ಆದುದರಿಂದ ಅವರು ‘ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ’ ಆವಶ್ಯಕತೆಯನ್ನು ಪೇತ್ರನು ಎತ್ತಿತೋರಿಸಿದನು. ಕೆಲವು ದಿನಗಳ ಹಿಂದೆ ಪುನರುತ್ಥಿತ ಯೇಸುವು ಪೇತ್ರನಿಗೆ ಮತ್ತು ಇತರರಿಗೆ “ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ” ಜನರಿಗೆ ದೀಕ್ಷಾಸ್ನಾನ ಮಾಡಿಸಿ ಎಂದು ಆಜ್ಞಾಪಿಸಿದ್ದನು. (ಮತ್ತಾ. 28:19, 20) ಈ ವಿಷಯಕ್ಕೆ ಪ್ರಥಮ ಶತಮಾನದಲ್ಲಿ ಮಹತ್ವಾರ್ಥವಿತ್ತು, ಈಗಲೂ ಇದೆ. ಅದರ ಮಹತ್ವಾರ್ಥ ಏನು?

ತಂದೆಯ ಹೆಸರಿನಲ್ಲಿ

4. ಯೆಹೋವನೊಂದಿಗೆ ಸುಸಂಬಂಧವನ್ನು ಹೊಂದಿದ್ದ ಜನರ ವಿಷಯದಲ್ಲಿ ಯಾವ ಬದಲಾವಣೆ ಉಂಟಾಗಿತ್ತು?

4 ಈಗಾಗಲೇ ಗಮನಿಸಿದಂತೆ, ಪೇತ್ರನ ಭಾಷಣಕ್ಕೆ ಪ್ರತಿಕ್ರಿಯಿಸಿದವರು ಯೆಹೋವನನ್ನು ಆರಾಧಿಸುತ್ತಿದ್ದರು ಮತ್ತು ಈ ಮುಂಚೆಯೇ ಆತನೊಂದಿಗೆ ಸುಸಂಬಂಧವನ್ನು ಹೊಂದಿದ್ದರು. ಅವರು ಆತನ ಧರ್ಮಶಾಸ್ತ್ರವನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದರು. ಈ ಕಾರಣದಿಂದಲೇ ಬೇರೆ ದೇಶಗಳಲ್ಲಿದ್ದ ಜನರೂ ಯೆರೂಸಲೇಮಿಗೆ ಬಂದಿದ್ದರು. (ಅ. ಕಾ. 2:5-11) ಆದರೆ ದೇವರು ಮಾನವರೊಂದಿಗೆ ತಾನು ವ್ಯವಹರಿಸಲಿರುವ ರೀತಿಯಲ್ಲಿ ಆಗತಾನೇ ಒಂದು ಗಮನಾರ್ಹ ಬದಲಾವಣೆಯನ್ನು ಮಾಡಿದ್ದನು. ಆತನು ಯೆಹೂದ್ಯರನ್ನು ತಿರಸ್ಕರಿಸಿದನು. ಅವರಿನ್ನು ಆತನ ಸ್ವಕೀಯ ಜನಾಂಗವಾಗಿರಲಿಲ್ಲ. ಧರ್ಮಶಾಸ್ತ್ರವನ್ನು ಪಾಲಿಸುವುದರಿಂದ ಇನ್ನು ಮುಂದೆ ಅವರಿಗೆ ಆತನ ಅನುಗ್ರಹ ಸಿಗುವ ಸಾಧ್ಯತೆ ಇರಲಿಲ್ಲ. (ಮತ್ತಾ. 21:43; ಕೊಲೊ. 2:14) ಯೆಹೋವನೊಂದಿಗೆ ಅದೇ ಸಂಬಂಧದಲ್ಲಿ ಉಳಿಯಬೇಕಾದಲ್ಲಿ ಅವರು ಇನ್ನೇನನ್ನೋ ಮಾಡಬೇಕಿತ್ತು.

5, 6. ದೇವರೊಂದಿಗೆ ಸುಸಂಬಂಧವನ್ನು ಹೊಂದಿರಲಿಕ್ಕಾಗಿ ಪ್ರಥಮ ಶತಮಾನದ ಅನೇಕ ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳು ಏನು ಮಾಡಿದರು?

5 ಅವರು ಮಾಡಬೇಕಾಗಿದ್ದ ವಿಷಯವು ತಮ್ಮ ಜೀವದಾತನಾದ ಯೆಹೋವನಿಂದ ದೂರಹೋಗುವುದಂತೂ ಆಗಿರಲಿಲ್ಲ. (ಅ. ಕಾ. 4:24) ಏಕೆಂದರೆ ಯೆಹೋವನು ದಯಾಪರ ತಂದೆಯಾಗಿದ್ದನು ಎಂಬುದನ್ನು ಪೇತ್ರನ ವಿವರಣೆಗೆ ಪ್ರತಿಕ್ರಿಯಿಸುತ್ತಿದ್ದವರು ಈಗ ಇನ್ನಷ್ಟು ಸ್ಪಷ್ಟವಾಗಿ ನೋಡಸಾಧ್ಯವಿತ್ತು. ಇವರನ್ನು ಬಿಡಿಸಲಿಕ್ಕಾಗಿ ಆತನು ಮೆಸ್ಸೀಯನನ್ನು ಕಳುಹಿಸಿದನು ಮತ್ತು ಪೇತ್ರನು ಯಾರಿಗೆ “ನೀವು ಶೂಲಕ್ಕೇರಿಸಿದ ಈ ಯೇಸುವನ್ನು ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ ಎಂಬುದು ಇಸ್ರಾಯೇಲ್‌ ಮನೆತನದವರೆಲ್ಲರಿಗೆ ನಿಶ್ಚಯವಾಗಿಯೂ ತಿಳಿದಿರಲಿ” ಎಂದು ಹೇಳಸಾಧ್ಯವಿತ್ತೋ ಅವರನ್ನು ಸಹ ಕ್ಷಮಿಸಲು ಸಿದ್ಧನಾಗಿದ್ದನು. ವಾಸ್ತವದಲ್ಲಿ ಪೇತ್ರನ ಮಾತುಗಳನ್ನು ಅನ್ವಯಿಸುವವರಿಗೆ, ದೇವರೊಂದಿಗೆ ಸುಸಂಬಂಧವನ್ನು ಹೊಂದಿರಲು ಬಯಸುವವರೆಲ್ಲರಿಗಾಗಿ ತಂದೆ ಏನು ಮಾಡಿದ್ದಾನೆ ಎಂಬುದನ್ನು ಗಣ್ಯಮಾಡಲು ಈಗ ಇನ್ನೂ ಹೆಚ್ಚಿನ ಕಾರಣವಿತ್ತು.—ಅ. ಕಾರ್ಯಗಳು 2:30-36 ಓದಿ.

6 ವಾಸ್ತವದಲ್ಲಿ ಯೆಹೋವನೊಂದಿಗೆ ಸುಸಂಬಂಧವನ್ನು ಇಟ್ಟುಕೊಳ್ಳಬೇಕಾದರೆ ಆತನನ್ನು ಯೇಸುವಿನ ಮೂಲಕ ರಕ್ಷಣೆಯನ್ನು ಕೊಡುವಾತನಾಗಿಯೂ ಸ್ವೀಕರಿಸಬೇಕು ಎಂಬುದನ್ನು ಆ ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳು ಈಗ ನೋಡಸಾಧ್ಯವಿತ್ತು. ಆದುದರಿಂದ ಅವರು ತಮ್ಮ ಪಾಪಗಳಿಗಾಗಿ, ಯೇಸುವನ್ನು ಕೊಲ್ಲಿಸುವುದರಲ್ಲಿ ತಿಳಿದೋ ತಿಳಿಯದೆಯೋ ಭಾಗವಹಿಸಿದ ಪಾಪಕ್ಕಾಗಿಯೂ ಪಶ್ಚಾತ್ತಾಪಪಟ್ಟ ಕಾರಣವನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರಿ. ಮತ್ತು ಮುಂದಿನ ದಿನಗಳಲ್ಲಿ ‘ಅವರು ಅಪೊಸ್ತಲರ ಬೋಧನೆಗೆ ತಮ್ಮನ್ನು ಮೀಸಲಾಗಿಟ್ಟುಕೊಂಡರು’ ಎಂಬುದು ಸಹ ಅರ್ಥಗರ್ಭಿತ. (ಅ. ಕಾ. 2:42) ಅವರು ‘ಅಪಾತ್ರ ದಯೆಯ ಸಿಂಹಾಸನವನ್ನು ವಾಕ್ಸರಳತೆಯಿಂದ ಸಮೀಪಿಸ’ಸಾಧ್ಯವಿತ್ತು ಮತ್ತು ಹಾಗೆ ಮಾಡಲು ಬಯಸಿದರು ಕೂಡ.—ಇಬ್ರಿ. 4:16.

7. ಇಂದು ಅನೇಕರು ಹೇಗೆ ದೇವರ ವಿಷಯದಲ್ಲಿ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದ್ದಾರೆ ಮತ್ತು ತಂದೆಯ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದಾರೆ?

7 ಇಂದು, ಹಲವಾರು ಹಿನ್ನೆಲೆಗಳಿಂದ ಬಂದಿರುವ ಲಕ್ಷಾಂತರ ಮಂದಿ ಜನರು ಯೆಹೋವನ ಕುರಿತಾದ ಬೈಬಲ್‌ ಸತ್ಯವನ್ನು ತಿಳಿದುಕೊಂಡಿದ್ದಾರೆ. (ಯೆಶಾ. 2:2, 3) ಕೆಲವರು ನಾಸ್ತಿಕರು ಅಥವಾ ತಾರ್ಕಿಕ ದೈವವಾದಿಗಳಾಗಿದ್ದರು. * ಆದರೆ ಒಬ್ಬ ಸೃಷ್ಟಿಕರ್ತನಿದ್ದಾನೆ ಮತ್ತು ಆತನೊಂದಿಗೆ ಅರ್ಥಭರಿತ ಸಂಬಂಧವನ್ನು ಹೊಂದಸಾಧ್ಯವಿದೆ ಎಂಬ ಮನವರಿಕೆ ಅವರಿಗಾಯಿತು. ಇತರರು ತ್ರಿತಯೈಕ್ಯ ದೇವರನ್ನು ಅಥವಾ ಬೇರೆ ಬೇರೆ ವಿಗ್ರಹಗಳನ್ನು ಆರಾಧಿಸಿದ್ದರು. ಈಗ ಅವರು ಯೆಹೋವನು ಮಾತ್ರ ಸರ್ವಶಕ್ತ ದೇವರಾಗಿದ್ದಾನೆ ಎಂಬುದನ್ನು ತಿಳಿದುಕೊಂಡು ಆತನ ವೈಯಕ್ತಿಕ ಹೆಸರಿನಿಂದಲೇ ಆತನನ್ನು ಕರೆಯುತ್ತಾರೆ. ಇದು ತನ್ನ ಶಿಷ್ಯರು ತಂದೆಯ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕು ಎಂಬ ಯೇಸುವಿನ ಮಾತಿಗೆ ಹೊಂದಿಕೆಯಲ್ಲಿದೆ.

8. ಆದಾಮನಿಂದ ಬಂದ ಪಾಪದ ಕುರಿತು ತಿಳಿಯದಿದ್ದವರು ತಂದೆಯ ಕುರಿತು ಏನನ್ನು ಗ್ರಹಿಸಿಕೊಳ್ಳಬೇಕಿತ್ತು?

8 ಆದಾಮನಿಂದ ಪಾಪವನ್ನು ಪಿತ್ರಾರ್ಜಿತವಾಗಿ ಪಡೆದಿದ್ದೇವೆ ಎಂಬುದನ್ನು ಸಹ ಅವರು ತಿಳಿದುಕೊಂಡಿದ್ದಾರೆ. (ರೋಮ. 5:12) ಇದು ಹೊಸ ವಿಷಯವಾಗಿದ್ದು, ಅವರಿದನ್ನು ಸತ್ಯವೆಂದು ಸ್ವೀಕರಿಸಬೇಕಿತ್ತು. ಇಂಥವರನ್ನು ತನಗೊಂದು ಕಾಯಿಲೆ ಇದೆಯೆಂದು ತಿಳಿಯದಿದ್ದ ಒಬ್ಬ ರೋಗಗ್ರಸ್ತ ಮನುಷ್ಯನಿಗೆ ಹೋಲಿಸಬಹುದು. ಅವನಲ್ಲಿ ಆಗಾಗ ನೋವು ಮುಂತಾದ ರೋಗಲಕ್ಷಣಗಳು ತೋರಿಬಂದಿರಬಹುದು. ಆದರೆ ಇಂಥದ್ದೇ ಒಂದು ರೋಗ ಇದೆ ಎಂದು ರೋಗನಿದಾನ ಮಾಡಿಲ್ಲವಾದ್ದರಿಂದ ತನಗೆ ಮೂಲತಃ ಒಳ್ಳೇ ಆರೋಗ್ಯ ಇದೆ ಎಂದವನು ನೆನಸಿರಬಹುದು. ಆದರೆ ನಿಜ ಸಂಗತಿ ಬೇರೆಯೇ ಆಗಿತ್ತು. (1 ಕೊರಿಂಥ 4:4 ಹೋಲಿಸಿ.) ಅವನಿಗೆ ನಿಷ್ಕೃಷ್ಟವಾದ ರೋಗನಿದಾನ ಸಿಕ್ಕಿದರೆ ಆಗೇನು? ಪ್ರಸಿದ್ಧವಾದ, ಗುಣಕಾರಿಯೆಂದು ಸಾಬೀತಾದ ಮತ್ತು ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಅವನು ಕಂಡುಕೊಂಡು ಸ್ವೀಕರಿಸುವುದು ವಿವೇಕಯುತವಲ್ಲವೆ? ತದ್ರೀತಿಯಲ್ಲಿ, ಪಿತ್ರಾರ್ಜಿತವಾಗಿ ಬಂದಿರುವ ಪಾಪದ ನಿಜತ್ವದ ಕುರಿತು ತಿಳಿದುಕೊಂಡ ಬಳಿಕ ಅನೇಕರು ಬೈಬಲಿನ “ರೋಗನಿದಾನ”ವನ್ನು ಸ್ವೀಕರಿಸಿದ್ದಾರೆ ಮತ್ತು ದೇವರು “ರೋಗವಾಸಿ”ಯನ್ನು ಕೊಡುತ್ತಿದ್ದಾನೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಹೌದು, ತಂದೆಯಿಂದ ವಿಮುಖರಾಗಿರುವವರೆಲ್ಲರೂ ತಮ್ಮ “ರೋಗವಾಸಿ”ಮಾಡಬಲ್ಲಾತನ ಕಡೆಗೆ ತಿರುಗಿಕೊಳ್ಳಬೇಕು.—ಎಫೆ. 4:17-19.

9. ಆತನೊಂದಿಗೆ ಸುಸಂಬಂಧವನ್ನು ಹೊಂದಲು ಸಾಧ್ಯವಾಗುವಂತೆ ಯೆಹೋವನು ಏನು ಮಾಡಿದನು?

9 ನೀವು ಈಗಾಗಲೇ ನಿಮ್ಮ ಜೀವನವನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಂಡು ಸ್ನಾತ ಕ್ರೈಸ್ತರಾಗಿರುವಲ್ಲಿ, ಆತನೊಂದಿಗೆ ಸುಸಂಬಂಧವನ್ನು ಹೊಂದಿರುವುದು ಎಂಥ ಅದ್ಭುತಕರ ವಿಷಯ ಎಂಬುದನ್ನು ಬಲ್ಲವರಾಗಿದ್ದೀರಿ. ನಿಮ್ಮ ತಂದೆಯಾದ ಯೆಹೋವನು ಎಷ್ಟು ಪ್ರೀತಿಪರನು ಎಂಬುದನ್ನು ನೀವು ಈಗ ಗಣ್ಯಮಾಡಬಲ್ಲಿರಿ. (ರೋಮನ್ನರಿಗೆ 5:8 ಓದಿ.) ಆದಾಮಹವ್ವರು ಆತನ ವಿರುದ್ಧ ಪಾಪಮಾಡಿದರಾದರೂ ನಮ್ಮನ್ನೂ ಒಳಗೊಂಡ ಅವರ ವಂಶಜರೆಲ್ಲರು ಆತನೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿರಲು ಬೇಕಾದುದನ್ನು ಮಾಡಲು ಮೊದಲು ಮುಂದೆ ಬಂದದ್ದು ದೇವರೇ. ಇದರ ಸಲುವಾಗಿ ದೇವರು ತನ್ನ ಪ್ರಿಯ ಮಗನು ಕಷ್ಟಾನುಭವಿಸಿ ಸಾಯುವುದನ್ನು ನೋಡುವ ವೇದನೆಯನ್ನು ತಾಳಿಕೊಳ್ಳಬೇಕಾಗಿ ಬಂತು. ಇದನ್ನು ತಿಳಿಯುವುದರಿಂದ, ದೇವರ ಅಧಿಕಾರವನ್ನು ಸ್ವೀಕರಿಸಿ ಆತನ ಆಜ್ಞೆಗಳಿಗೆ ಪ್ರೀತಿಯಿಂದ ವಿಧೇಯರಾಗಲು ನಮಗೆ ಸಹಾಯ ಸಿಗುವುದಿಲ್ಲವೆ? ನೀವು ಈಗಾಗಲೇ ದೇವರಿಗೆ ನಿಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಂಡಿಲ್ಲವಾದರೆ ಈಗ ಅದನ್ನು ಮಾಡಲು ಸಕಾರಣಗಳಿವೆ.

ಮಗನ ಹೆಸರಿನಲ್ಲಿ

10, 11. (ಎ) ನೀವು ಯೇಸುವಿಗೆ ಎಷ್ಟು ಕೃತಜ್ಞರಾಗಿದ್ದೀರಿ? (ಬಿ) ಯೇಸು ತನ್ನನ್ನು ವಿಮೋಚನಾ ಮೌಲ್ಯ ಯಜ್ಞವಾಗಿ ಅರ್ಪಿಸಿಕೊಂಡದ್ದರ ಬಗ್ಗೆ ನಿಮಗೆ ಹೇಗನಿಸುತ್ತದೆ?

10 ಪೇತ್ರನು ಜನಸಮೂಹಕ್ಕೆ ಏನು ಹೇಳಿದನೆಂಬುದನ್ನು ಪುನಃ ನೆನಪಿಗೆ ತನ್ನಿ. ಅವನು ಯೇಸುವನ್ನು ಸ್ವೀಕರಿಸುವುದಕ್ಕೆ ಒತ್ತುಕೊಟ್ಟನು. ಇದು ‘ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕೆ’ ನೇರವಾಗಿ ಸಂಬಂಧಿಸಿದೆ. ಅದು ಆಗ ಏಕೆ ಪ್ರಾಮುಖ್ಯವಾಗಿತ್ತು, ಮತ್ತು ಈಗ ಏಕೆ ಪ್ರಾಮುಖ್ಯವಾಗಿದೆ? ಯೇಸುವನ್ನು ಸ್ವೀಕರಿಸಿ ಅವನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದು ಅಂದರೆ ಸೃಷ್ಟಿಕರ್ತನೊಂದಿಗಿನ ನಮ್ಮ ಸಂಬಂಧದಲ್ಲಿ ಅವನು ವಹಿಸುವ ಪಾತ್ರವನ್ನು ಮಾನ್ಯಮಾಡುವುದಾಗಿದೆ. ಯೆಹೂದ್ಯರಿಂದ ಧರ್ಮಶಾಸ್ತ್ರದ ಶಾಪವನ್ನು ತೆಗೆದುಹಾಕಲಿಕ್ಕಾಗಿ ಯೇಸುವನ್ನು ಯಾತನಾ ಕಂಬದ ಮೇಲೆ ತೂಗಹಾಕಬೇಕಿತ್ತು, ಆದರೆ ಅವನ ಮರಣದಿಂದ ಹೆಚ್ಚಿನ ಪ್ರಯೋಜನ ಸಿಗಸಾಧ್ಯವಿತ್ತು. (ಗಲಾ. 3:13) ಅವನು ಇಡೀ ಮಾನವಕುಲಕ್ಕೆ ಬೇಕಾಗಿದ್ದ ವಿಮೋಚನಾ ಮೌಲ್ಯ ಯಜ್ಞವನ್ನು ಒದಗಿಸಿದನು. (ಎಫೆ. 2:15, 16; ಕೊಲೊ. 1:20; 1 ಯೋಹಾ. 2:1, 2) ಈ ಕಾರಣಕ್ಕಾಗಿ ಯೇಸು ಅನ್ಯಾಯ, ದೂಷಣೆ, ಯಾತನೆ ಮತ್ತು ಅಂತಿಮವಾಗಿ ಮರಣವನ್ನು ತಾಳಿಕೊಂಡನು. ನೀವು ಅವನ ತ್ಯಾಗವನ್ನು ಎಷ್ಟು ಗಣ್ಯಮಾಡುತ್ತೀರಿ? 1912ರಲ್ಲಿ ಒಂದು ನೀರ್ಗಲ್ಲ ಗುಡ್ಡಕ್ಕೆ ಬಡಿದು ಸಮುದ್ರದಲ್ಲಿ ಮುಳುಗಿಹೋದ ಟೈಟಾನಿಕ್‌ ಹಡಗಿನ ಬಗ್ಗೆ ನಿಮಗೆ ತಿಳಿದಿರಬಹುದು. ಅದರಲ್ಲಿ ಪ್ರಯಾಣಿಸುತ್ತಿರುವ 12 ವರ್ಷದ ಬಾಲಕ ನೀವಾಗಿದ್ದೀರಿ ಎಂದು ನೆನಸಿ. ಜೀವರಕ್ಷೆಗಾಗಿ ನೀವು ಒಂದು ಕಾಪು ದೋಣಿಯಲ್ಲಿ ಹತ್ತಿಕೊಳ್ಳಲು ಪ್ರಯತ್ನಿಸುತ್ತೀರಿ, ಆದರೆ ಅದರಲ್ಲಿ ಸ್ಥಳವಿಲ್ಲ. ಆಗ ಕಾಪು ದೋಣಿಯಲ್ಲಿರುವ ಒಬ್ಬ ವ್ಯಕ್ತಿ ತನ್ನ ಪತ್ನಿಗೆ ಮುದ್ದಿಟ್ಟು, ವಿದಾಯಹೇಳಿ, ಹಡಗಿನ ಅಟ್ಟಕ್ಕೆ ವಾಪಸ್‌ ಬಂದು ನಿಮ್ಮನ್ನು ಕಾಪು ದೋಣಿಯಲ್ಲಿ ಕೂರಿಸುತ್ತಾನೆ. ನಿಮಗೆ ಹೇಗನಿಸುತ್ತದೆ? ನೀವು ಖಂಡಿತ ಅವನಿಗೆ ಚಿರಋಣಿಯಾಗಿರುವಿರಿ! ಇದನ್ನು ಸ್ವತಃ ಅನುಭವಿಸಿದ ಒಬ್ಬ ಹುಡುಗನಿಗೆ ಹೇಗನಿಸಿರಬೇಕು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರಿ. * ಆದರೆ ಯೇಸು ನಿಮಗೆ ಇದಕ್ಕಿಂತ ಹೆಚ್ಚಿನದ್ದನ್ನು ಮಾಡಿದನು. ನಿಮಗೆ ಅನಂತಕಾಲದ ಜೀವನ ಸಿಗುವಂತಾಗಲು ಅವನು ಪ್ರಾಣಕೊಟ್ಟನು.

11 ದೇವರ ಕುಮಾರನು ನಿಮಗೋಸ್ಕರ ಏನು ಮಾಡಿದನೆಂದು ತಿಳಿದುಕೊಂಡಾಗ ನಿಮಗೆ ಹೇಗನಿಸಿತು? (2 ಕೊರಿಂಥ 5:14, 15 ಓದಿ.) ನಿಮ್ಮಲ್ಲಿ ಆಳವಾದ ಕೃತಜ್ಞತೆ ಉಂಟಾಗಿರಬೇಕು. ಇದು ದೇವರಿಗೆ ನಿಮ್ಮ ಜೀವನವನ್ನು ಸಮರ್ಪಿಸಿಕೊಳ್ಳುವಂತೆ ಪ್ರಚೋದಿಸಲು ಸಹಾಯಮಾಡಿತು ಮತ್ತು ‘ಇನ್ನು ಮುಂದೆ ಸ್ವತಃ ನಿಮಗಾಗಿ ಜೀವಿಸದೆ ನಿಮಗೋಸ್ಕರ ಸತ್ತು ಎಬ್ಬಿಸಲ್ಪಟ್ಟವನಿಗಾಗಿ ಜೀವಿಸುವಂತೆ’ ಮಾಡಿತು. ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದು ಅಂದರೆ ಯೇಸು ನಿಮಗೋಸ್ಕರ ಏನು ಮಾಡಿದನೋ ಅದನ್ನು ಅಂಗೀಕರಿಸಿ ‘ಜೀವದ ಮುಖ್ಯ ನಿಯೋಗಿಯಾದ’ ಅವನ ಅಧಿಕಾರವನ್ನು ಸ್ವೀಕರಿಸುವುದಾಗಿದೆ. (ಅ. ಕಾ. 3:15; 5:31) ಇದಕ್ಕೆ ಮುಂಚೆ ನಿಮಗೆ ಸೃಷ್ಟಿಕರ್ತನೊಂದಿಗೆ ಸುಸಂಬಂಧವಿರಲಿಲ್ಲ ಮತ್ತು ನಿಮಗೆ ನಿಜವಾದ ನಿರೀಕ್ಷೆ ಇರಲಿಲ್ಲ. ಆದರೆ ಯೇಸು ಕ್ರಿಸ್ತನು ಸುರಿಸಿದ ರಕ್ತದಲ್ಲಿ ನಂಬಿಕೆಯಿಟ್ಟು ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ನಿಮಗೆ ಈಗ ತಂದೆಯೊಂದಿಗೆ ಒಂದು ಸುಸಂಬಂಧವಿದೆ. (ಎಫೆ. 2:12, 13) ಅಪೊಸ್ತಲ ಪೌಲನು ಬರೆದದ್ದು: “ನಿಮ್ಮ ಮನಸ್ಸುಗಳು ದುಷ್ಕೃತ್ಯಗಳ ಮೇಲಿದ್ದ ಕಾರಣ ಈ ಹಿಂದೆ ದೇವರಿಂದ ದೂರಸರಿದವರೂ ವೈರಿಗಳೂ ಆಗಿದ್ದ ನಿಮ್ಮನ್ನು ಆತನು ಈಗ ಪುನಃ [ಯೇಸುವಿನ] ಐಹಿಕ ದೇಹದ ಮರಣದ ಮೂಲಕ ಸಮಾಧಾನ ಸಂಬಂಧಕ್ಕೆ ತಂದು, ನಿಮ್ಮನ್ನು ಪವಿತ್ರರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ . . . ತನ್ನ ಮುಂದೆ ನಿಲ್ಲಿಸಿದನು.”—ಕೊಲೊ. 1:21, 22.

12, 13. (ಎ) ಯಾರಾದರೂ ನಿಮ್ಮ ಮನನೋಯಿಸುವಲ್ಲಿ, ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವ ವಿಷಯವು ನಿಮ್ಮ ಪ್ರತಿಕ್ರಿಯೆಯನ್ನು ಹೇಗೆ ಪ್ರಭಾವಿಸಬೇಕು? (ಬಿ) ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವ ಕ್ರೈಸ್ತರಾದ ನಿಮ್ಮ ಮೇಲೆ ಯಾವ ಹೊಣೆಗಾರಿಕೆ ಇದೆ?

12 ನೀವು ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿದ್ದೀರಾದರೂ ನಿಮ್ಮ ಸ್ವಂತ ಪಾಪಪ್ರವೃತ್ತಿಗಳ ಬಗ್ಗೆ ನಿಮಗೆ ಪೂರ್ಣ ಪರಿವೆಯಿದೆ. ಆ ಪರಿಜ್ಞಾನವು ಪ್ರತಿದಿನವೂ ಸಹಾಯಕರ. ಉದಾಹರಣೆಗೆ, ಯಾರಾದರೂ ನಿಮ್ಮ ಮನನೋಯಿಸುವಲ್ಲಿ ನೀವಿಬ್ಬರೂ ಪಾಪಿಗಳಾಗಿದ್ದೀರಿ ಎಂಬುದನ್ನು ಜ್ಞಾಪಕದಲ್ಲಿಡುತ್ತೀರೊ? ನಿಮ್ಮಿಬ್ಬರಿಗೂ ದೇವರಿಂದ ಕ್ಷಮಾಪಣೆಯ ಅಗತ್ಯವಿದೆ ಮತ್ತು ನೀವಿಬ್ಬರೂ ಕ್ಷಮಿಸುವವರಾಗಿರಬೇಕು. (ಮಾರ್ಕ 11:25) ಇದರ ಅಗತ್ಯವನ್ನು ಅಚ್ಚೊತ್ತಲು ಯೇಸು ಒಂದು ದೃಷ್ಟಾಂತ ಕೊಟ್ಟನು: ಒಬ್ಬ ಯಜಮಾನನು ತನ್ನ ಆಳಿನ ಹತ್ತು ಸಾವಿರ ತಲಾಂತುಗಳ (6 ಕೋಟಿ ದಿನಾರುಗಳು) ಸಾಲವನ್ನು ಮನ್ನಾಮಾಡಿದನು. ಆದರೆ ಆ ಬಳಿಕ ಈ ಆಳು ತನಗೆ 100 ದಿನಾರುಗಳನ್ನು ಕೊಡಲಿಕ್ಕಿದ್ದ ಜೊತೆ ಆಳಿನ ಸಾಲವನ್ನು ಬಿಟ್ಟುಬಿಡಲು ಸಿದ್ಧನಿರಲಿಲ್ಲ. ಯೇಸು ಬಳಿಕ ಈ ಅಂಶವನ್ನು ತಿಳಿಸಿದನು: ತನ್ನ ಸಹೋದರನನ್ನು ಕ್ಷಮಿಸದ ವ್ಯಕ್ತಿಯನ್ನು ಯೆಹೋವನು ಕ್ಷಮಿಸುವುದಿಲ್ಲ. (ಮತ್ತಾ. 18:23-35) ಹೌದು, ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದೆಂದರೆ ಯೇಸುವಿನ ಅಧಿಕಾರವನ್ನು ಅಂಗೀಕರಿಸುವುದು ಮತ್ತು ಅವನ ಮಾದರಿ ಹಾಗೂ ಬೋಧನೆಗಳನ್ನು ಅನುಸರಿಸಲು ಶ್ರಮಿಸುವುದಾಗಿದೆ. ಇದರಲ್ಲಿ ಇತರರನ್ನು ಕ್ಷಮಿಸಲು ಸಿದ್ಧರಾಗಿರುವುದೂ ಒಳಗೂಡಿದೆ.—1 ಪೇತ್ರ 2:21; 1 ಯೋಹಾ. 2:6.

13 ಅಪರಿಪೂರ್ಣರಾಗಿರುವ ಕಾರಣ ನೀವು ಯೇಸುವನ್ನು ಪೂರ್ಣವಾಗಿ ಅನುಕರಿಸಲಾರಿರಿ. ಆದರೂ ನೀವು ದೇವರಿಗೆ ಮಾಡಿಕೊಂಡಿರುವ ಪೂರ್ಣಹೃದಯದ ಸಮರ್ಪಣೆಗೆ ಹೊಂದಿಕೆಯಲ್ಲಿ ಯೇಸುವನ್ನು ನಿಮ್ಮಿಂದ ಸಾಧ್ಯವಿರುವಷ್ಟು ಮಟ್ಟಿಗೆ ಅನುಕರಿಸಲು ಬಯಸುತ್ತೀರಿ. ಇದರಲ್ಲಿ ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಪ್ರಯತ್ನಿಸುತ್ತಾ ಇರುವುದು ಒಳಗೂಡಿದೆ. (ಎಫೆಸ 4:20-24 ಓದಿ.) ನಿಮಗೆ ಒಬ್ಬ ಸ್ನೇಹಿತನ ಮೇಲೆ ಗೌರವಭಾವ ಹುಟ್ಟುವಾಗ ನೀವು ಅವನ ಮಾದರಿ ಮತ್ತು ಒಳ್ಳೇ ಗುಣಗಳಿಂದ ಕಲಿಯಲು ಪ್ರಯತ್ನಿಸುವುದು ಸಂಭಾವ್ಯ. ತದ್ರೀತಿಯಲ್ಲಿ ನೀವು ಕ್ರಿಸ್ತನಿಂದ ಕಲಿತು ಅವನನ್ನು ಅನುಕರಿಸಲು ಬಯಸುತ್ತೀರಿ.

14. ಸ್ವರ್ಗೀಯ ರಾಜನಾದ ಯೇಸುವಿನ ಅಧಿಕಾರವನ್ನು ನೀವು ಅಂಗೀಕರಿಸುತ್ತೀರಿ ಎಂಬುದನ್ನು ಹೇಗೆ ತೋರಿಸಬಲ್ಲಿರಿ?

14 ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ನೀವು ತೋರಿಸಬಲ್ಲ ಇನ್ನೊಂದು ವಿಧ ಇದೆ. ದೇವರು “ಎಲ್ಲವನ್ನೂ [ಯೇಸುವಿನ] ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದನು ಮತ್ತು ಸಭೆಯ ಒಳಿತಿಗಾಗಿ ಅವನನ್ನು ಎಲ್ಲವುಗಳ ಮೇಲೆ ಶಿರಸ್ಸಾಗಿ ನೇಮಿಸಿದನು.” (ಎಫೆ. 1:22) ಆದುದರಿಂದ ಯೆಹೋವನಿಗೆ ಸಮರ್ಪಿಸಿಕೊಂಡಿರುವವರನ್ನು ಯೇಸು ಮಾರ್ಗದರ್ಶಿಸುವ ವಿಧಕ್ಕೆ ನೀವು ಗೌರವ ತೋರಿಸುವ ಅಗತ್ಯವಿದೆ. ಕ್ರಿಸ್ತನು ಸ್ಥಳಿಕ ಸಭೆಗಳಲ್ಲಿ ಅಪರಿಪೂರ್ಣ ಮಾನವರನ್ನು, ಮುಖ್ಯವಾಗಿ ಆಧ್ಯಾತ್ಮಿಕ ಹಿರೀಪುರುಷರಾಗಿರುವ ನೇಮಿತ ಹಿರಿಯರನ್ನು ಉಪಯೋಗಿಸುತ್ತಿದ್ದಾನೆ. “ಪವಿತ್ರ ಜನರನ್ನು ಸರಿಹೊಂದಿಸುವ ದೃಷ್ಟಿಯಿಂದಲೂ . . . ಕ್ರಿಸ್ತನ ದೇಹವನ್ನು ಕಟ್ಟುವುದಕ್ಕಾಗಿಯೂ” ಇಂಥ ಪುರುಷರನ್ನು ನೇಮಿಸಲಾಗಿದೆ. (ಎಫೆ. 4:11, 12) ಒಬ್ಬ ಅಪರಿಪೂರ್ಣ ಮನುಷ್ಯನು ಒಂದು ತಪ್ಪುಮಾಡುವುದಾದರೂ ಸ್ವರ್ಗೀಯ ರಾಜ್ಯದ ರಾಜನಾದ ಯೇಸು ಅದನ್ನು ತನ್ನದೇ ಸಮಯದಲ್ಲಿ ಮತ್ತು ವಿಧದಲ್ಲಿ ನಿರ್ವಹಿಸಲು ಶಕ್ತನಾಗಿದ್ದಾನೆ. ನಿಮಗೆ ಇದರಲ್ಲಿ ನಂಬಿಕೆ ಇದೆಯೊ?

15. ನಿಮಗಿನ್ನೂ ದೀಕ್ಷಾಸ್ನಾನವಾಗಿಲ್ಲವಾದರೆ, ದೀಕ್ಷಾಸ್ನಾನದ ನಂತರ ನೀವು ಯಾವ ಆಶೀರ್ವಾದಗಳಿಗಾಗಿ ಮುನ್ನೋಡಬಲ್ಲಿರಿ?

15 ಆದರೆ ಕೆಲವರಿನ್ನೂ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಂಡಿಲ್ಲ. ನೀವು ಇವರಲ್ಲಿ ಒಬ್ಬರಾಗಿದ್ದರೆ, ಮೇಲೆ ಪರಿಗಣಿಸಿದ ವಿಷಯದಿಂದ ಮಗನನ್ನು ಅಂಗೀಕರಿಸುವುದು ನೀವು ಮಾಡಸಾಧ್ಯವಿರುವ ತರ್ಕಸಮ್ಮತ ಹಾಗೂ ಮೆಚ್ಚತಕ್ಕ ವಿಷಯವಾಗಿದೆ ಎಂಬುದನ್ನು ನೋಡಬಲ್ಲಿರೊ? ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವುದು ಮಹತ್ತಾದ ಆಶೀರ್ವಾದಗಳನ್ನು ಪಡೆದುಕೊಳ್ಳುವ ಬಾಗಿಲನ್ನು ನಿಮಗೆ ತೆರೆಯುವುದು.—ಯೋಹಾನ 10:9-11 ಓದಿ.

ಪವಿತ್ರಾತ್ಮದ ಹೆಸರಿನಲ್ಲಿ

16, 17. ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದು ನಿಮಗೆ ಯಾವ ಅರ್ಥದಲ್ಲಿದೆ?

16 ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದೆಂದರೆ ಏನು ಅರ್ಥ? ಈ ಹಿಂದೆಯೇ ಗಮನಿಸಿದಂತೆ, ಪಂಚಾಶತ್ತಮ ದಿನದಂದು ಪೇತ್ರನಿಗೆ ಕಿವಿಗೊಡುತ್ತಿದ್ದವರಿಗೆ ಪವಿತ್ರಾತ್ಮದ ಬಗ್ಗೆ ತಿಳಿದಿತ್ತು. ವಾಸ್ತವದಲ್ಲಿ ದೇವರು ಪವಿತ್ರಾತ್ಮವನ್ನು ಉಪಯೋಗಿಸುವುದನ್ನು ಮುಂದುವರಿಸಿದ್ದಾನೆ ಎಂಬುದರ ರುಜುವಾತನ್ನು ಅವರು ತಮ್ಮ ಕಣ್ಣ ಮುಂದೆಯೇ ನೋಡಸಾಧ್ಯವಿತ್ತು. ‘ಪವಿತ್ರಾತ್ಮದಿಂದ ತುಂಬಿದವರಾಗಿ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಲಾರಂಭಿಸಿದವರಲ್ಲಿ’ ಪೇತ್ರನು ಒಬ್ಬನಾಗಿದ್ದನು. (ಅ. ಕಾ. 2:4, 8) “ಹೆಸರಿನಲ್ಲಿ” ಎಂಬ ಪದಬಳಕೆಯು ಒಬ್ಬ ವ್ಯಕ್ತಿಯ ಹೆಸರಿಗೆ ಸೂಚಿಸಬೇಕಾಗಿಲ್ಲ. ಇಂದು ಎಷ್ಟೋ ವಿಷಯಗಳು “ಸರಕಾರದ ಹೆಸರಿನಲ್ಲಿ” ನಡೆಸಲ್ಪಡುತ್ತವೆ. ಆದರೆ ಸರಕಾರ ಒಬ್ಬ ವ್ಯಕ್ತಿಯಂತೂ ಅಲ್ಲ. ಆ ವಿಷಯಗಳು ಸರಕಾರದ ಅಧಿಕಾರದಿಂದ ನಡೆಸಲ್ಪಡುತ್ತವೆ. ತದ್ರೀತಿಯಲ್ಲಿ, ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವ ಒಬ್ಬನು ಪವಿತ್ರಾತ್ಮ ವ್ಯಕ್ತಿಯಲ್ಲ, ಯೆಹೋವನ ಕಾರ್ಯಕಾರಿ ಶಕ್ತಿಯಾಗಿದೆ ಎಂಬುದನ್ನು ಗ್ರಹಿಸುತ್ತಾನೆ. ಇಂಥ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ವ್ಯಕ್ತಿ ದೇವರ ಉದ್ದೇಶದಲ್ಲಿ ಪವಿತ್ರಾತ್ಮ ವಹಿಸುವ ಪಾತ್ರವನ್ನು ಅಂಗೀಕರಿಸುತ್ತಾನೆ ಎಂದರ್ಥ.

17 ನೀವು ಪವಿತ್ರಾತ್ಮದ ಕುರಿತು ತಿಳಿದುಕೊಂಡದ್ದು ಬೈಬಲನ್ನು ಅಧ್ಯಯನಮಾಡುವ ಮೂಲಕವೇ ಅಲ್ಲವೆ? ಉದಾಹರಣೆಗೆ, ಪವಿತ್ರಾತ್ಮದ ಪ್ರೇರಣೆಯಿಂದ ಶಾಸ್ತ್ರಗ್ರಂಥ ಬರೆಯಲ್ಪಟ್ಟಿತು ಎಂದು ನೀವು ಅರ್ಥಮಾಡಿಕೊಂಡಿರಿ. (2 ತಿಮೊ. 3:16) ನೀವು ಆಧ್ಯಾತ್ಮಿಕ ಪ್ರಗತಿ ಮಾಡುತ್ತಾ ಹೋದಂತೆ ‘ಸ್ವರ್ಗದಲ್ಲಿರುವ ತಂದೆಯು [ನೀವೂ ಸೇರಿದಂತೆ] ತನ್ನನ್ನು ಕೇಳುವವರೆಲ್ಲರಿಗೆ ಪವಿತ್ರಾತ್ಮವನ್ನು ಕೊಡುತ್ತಾನೆ’ ಎಂಬುದರ ಹೆಚ್ಚಿನ ತಿಳಿವಳಿಕೆಯನ್ನು ಪಡೆದುಕೊಂಡದ್ದು ಸಂಭವನೀಯ. (ಲೂಕ 11:13) ಪವಿತ್ರಾತ್ಮ ನಿಮ್ಮ ಜೀವನದಲ್ಲಿ ಕಾರ್ಯವೆಸಗುತ್ತಿರುವುದನ್ನು ನೀವು ಪ್ರಾಯಶಃ ನೋಡಿದಿರಿ. ಇನ್ನೊಂದು ಕಡೆ, ನೀವಿನ್ನೂ ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿಲ್ಲವಾದರೆ ಆಗೇನು? ತಂದೆಯು ಪವಿತ್ರಾತ್ಮವನ್ನು ಕೊಡುತ್ತಾನೆ ಎಂಬ ಯೇಸುವಿನ ಆಶ್ವಾಸನೆಯಲ್ಲಿ ಮುಂದಕ್ಕೆ ನೀವು ಈ ಪವಿತ್ರಾತ್ಮವನ್ನು ಪಡೆದುಕೊಳ್ಳುವಾಗ ನಿಮಗೆ ನಿಜವಾದ ಆಶೀರ್ವಾದಗಳು ಸಿಗುವವು ಎಂಬರ್ಥವಿದೆ.

18. ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವವರಿಗೆ ಯಾವ ಆಶೀರ್ವಾದಗಳು ಸಿಗುತ್ತವೆ?

18 ಇಂದು ಕೂಡ ಯೆಹೋವನು ಕ್ರೈಸ್ತ ಸಭೆಯನ್ನು ತನ್ನ ಪವಿತ್ರಾತ್ಮದ ಮೂಲಕ ಮಾರ್ಗದರ್ಶಿಸಿ ನಡೆಸುತ್ತಾನೆ ಎಂಬುದು ಸ್ಪಷ್ಟ. ಆ ಆತ್ಮ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮಗೆ ಸಹ ವೈಯಕ್ತಿಕವಾಗಿ ನೆರವು ನೀಡುತ್ತದೆ. ನಾವು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವುದೆಂದರೆ ನಮ್ಮ ಜೀವನದಲ್ಲಿ ಅದರ ಪಾತ್ರವನ್ನು ಗ್ರಹಿಸುವುದು ಮತ್ತು ಆ ಆತ್ಮದೊಂದಿಗೆ ಕೃತಜ್ಞತಾಭಾವದಿಂದ ಸಹಕರಿಸುವುದಾಗಿದೆ. ಆದರೆ, ನಾವು ಯೆಹೋವನಿಗೆ ಮಾಡಿರುವ ಸಮರ್ಪಣೆಗನುಸಾರ ಹೇಗೆ ಜೀವಿಸುವುದು ಮತ್ತು ಇದರಲ್ಲಿ ಪವಿತ್ರಾತ್ಮ ಹೇಗೆ ಒಳಗೂಡಿದೆ ಎಂದು ಕೆಲವರು ಯೋಚಿಸಬಹುದು. ನಾವಿದನ್ನು ಮುಂದೆ ಪರಿಗಣಿಸೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 7 ತಾರ್ಕಿಕ ದೈವವಾದಿಗಳು ದೇವರು ಅಸ್ತಿತ್ವದಲ್ಲಿದ್ದಾನೆಂದು ನಂಬುತ್ತಾರೆ, ಆದರೆ ಆತನಿಗೆ ತನ್ನ ಸೃಷ್ಟಿಯಲ್ಲಿ ಆಸಕ್ತಿಯಿದೆ ಎಂದು ನೆನಸುವುದಿಲ್ಲ.

^ ಪ್ಯಾರ. 10 ಇಸವಿ 1981, ಅಕ್ಟೋಬರ್‌ 22ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಪುಟ 3-8 ನೋಡಿ.

ನಿಮಗೆ ಜ್ಞಾಪಕವಿದೆಯೊ?

• ತಂದೆಯ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವುದು ನಿಮಗೆ ಯಾವ ಅರ್ಥದಲ್ಲಿದೆ?

• ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದೆಂದರೆ ಏನು ಅರ್ಥ?

• ತಂದೆ ಮತ್ತು ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮಹತ್ವವನ್ನು ನೀವು ಗಣ್ಯಮಾಡುತ್ತೀರಿ ಎಂಬುದನ್ನು ಹೇಗೆ ತೋರಿಸಬಲ್ಲಿರಿ?

• ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದೆಂದರೆ ಏನು ಅರ್ಥ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರಗಳು]

ಕ್ರಿ.ಶ. 33ರ ಪಂಚಾಶತ್ತಮದ ನಂತರ ಹೊಸ ಶಿಷ್ಯರು ತಂದೆಯೊಂದಿಗೆ ಯಾವ ಸಂಬಂಧಕ್ಕೆ ತರಲ್ಪಟ್ಟರು?

[ಕೃಪೆ]

By permission of the Israel Museum, Jerusalem