ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದಲಾವಣೆಗಳ ಹೊರತೂ ದೇವರ ಮೆಚ್ಚಿಕೆಯಲ್ಲಿ ಉಳಿಯಿರಿ

ಬದಲಾವಣೆಗಳ ಹೊರತೂ ದೇವರ ಮೆಚ್ಚಿಕೆಯಲ್ಲಿ ಉಳಿಯಿರಿ

ಬದಲಾವಣೆಗಳ ಹೊರತೂ ದೇವರ ಮೆಚ್ಚಿಕೆಯಲ್ಲಿ ಉಳಿಯಿರಿ

ನೀವು ಜೀವನದಲ್ಲಿ ಬದಲಾವಣೆಗಳನ್ನು ಎದುರಿಸುತ್ತಿದ್ದೀರೊ? ಆ ಬದಲಾವಣೆಗಳನ್ನು ಮಾಡಲಿಕ್ಕೆ ನಿಮಗೆ ಕಷ್ಟವಾಗುತ್ತಿದೆಯೊ? ನಮ್ಮಲ್ಲಿ ಹೆಚ್ಚಿನವರು ಆ ಸನ್ನಿವೇಶದಲ್ಲಿ ಇದ್ದೆವು ಅಥವಾ ಮುಂದಕ್ಕೆ ಇರುವೆವು. ಹಿಂದಿನ ಕಾಲದ ಕೆಲವು ನಿಜ ಜೀವನದ ಉದಾಹರಣೆಗಳು ಉಪಯುಕ್ತವಾಗಿರುವ ಕೆಲವು ಗುಣಗಳನ್ನು ಗುರುತಿಸಲು ನಮಗೆ ಸಹಾಯಕಾರಿಯಾಗಿ ಇರಬಲ್ಲವು.

ಉದಾಹರಣೆಗೆ, ದಾವೀದನನ್ನು ಮತ್ತು ಅವನು ತನ್ನ ಜೀವನದಲ್ಲಿ ಮಾಡಬೇಕಾಗಿದ್ದ ಅನೇಕ ಬದಲಾವಣೆಗಳನ್ನು ಪರಿಗಣಿಸಿ. ಸಮುವೇಲನು ಅವನನ್ನು ಮುಂದಿನ ರಾಜನಾಗಿ ಅಭಿಷೇಕಿಸಿದಾಗ ಅವನು ಕೇವಲ ಒಬ್ಬ ಕುರುಬ ಹುಡುಗನಾಗಿದ್ದನು. ಅವನಿನ್ನೂ ಚಿಕ್ಕವನಾಗಿದ್ದಾಗ ಫಿಲಿಷ್ಟಿಯ ದೈತ್ಯನಾದ ಗೊಲ್ಯಾತನೊಂದಿಗೆ ಹೋರಾಡಲು ಮುಂದೆ ಬಂದನು. (1 ಸಮು. 17:26-32, 42) ಯುವ ದಾವೀದನನ್ನು ರಾಜ ಸೌಲನ ಆಸ್ಥಾನದಲ್ಲಿ ಇರಲು ಕರೆಯಲಾಯಿತು ಹಾಗೂ ಸೈನ್ಯಾಧಿಕಾರಿಯನ್ನಾಗಿ ನೇಮಿಸಲಾಯಿತು. ತನ್ನ ಜೀವನದಲ್ಲಿ ಈ ಎಲ್ಲ ಬದಲಾವಣೆಗಳು ಸಂಭವಿಸುವವೆಂದು ದಾವೀದನು ಕನಸುಮನಸಲ್ಲೂ ನೆನಸಿರಲಿಕ್ಕಿಲ್ಲ. ಮಾತ್ರವಲ್ಲ ಮುಂದೆ ಏನಾಗಲಿತ್ತು ಎಂಬುದನ್ನು ಯೋಚಿಸಿರಲಿಕ್ಕೂ ಇಲ್ಲ.

ಸೌಲನೊಂದಿಗೆ ದಾವೀದನಿಗಿದ್ದ ಸಂಬಂಧವು ತುಂಬ ಕೆಟ್ಟಿತು. (1 ಸಮು. 18:8, 9; 19:9, 10) ತನ್ನ ಜೀವವನ್ನು ಕಾಪಾಡಲು ದಾವೀದನು ಹಲವಾರು ವರ್ಷಗಳ ವರೆಗೆ ಅಲೆಮಾರಿಯಾಗಿ ಜೀವಿಸಬೇಕಾಯಿತು. ಅಷ್ಟುಮಾತ್ರವಲ್ಲ, ದಾವೀದನು ಇಸ್ರಾಯೇಲಿನ ರಾಜನಾಗಿ ಆಳುತ್ತಿದ್ದಾಗಲೂ, ವಿಶೇಷವಾಗಿ ಅವನು ವ್ಯಭಿಚಾರಗೈದಾಗ ಹಾಗೂ ತಾನು ಮಾಡಿದ ಆ ತಪ್ಪನ್ನು ಮುಚ್ಚಿಡಲಿಕ್ಕಾಗಿ ಕೊಲೆಗೈದಾಗ ಅವನ ಜೀವನದಲ್ಲಿ ತೀವ್ರ ಬದಲಾವಣೆಗಳು ಉಂಟಾದವು. ತನ್ನ ಸ್ವಂತ ಪಾಪಗಳ ಫಲಿತಾಂಶವಾಗಿ ಕುಟುಂಬದಲ್ಲೂ ಅನೇಕ ವಿಪತ್ತುಗಳನ್ನು ಅವನು ಎದುರಿಸಿದನು. ದಾವೀದನು ಅನುಭವಿಸಿದ ವಿಷಯಗಳಲ್ಲಿ ಒಂದು ಅವನ ಮಗನಾದ ಅಬ್ಷಾಲೋಮನು ಅವನ ವಿರುದ್ಧ ದಂಗೆಯೆದ್ದದ್ದೇ. (2 ಸಮು. 12:10-12; 15:1-14) ಆದರೂ ತಾನು ಮಾಡಿದ ವ್ಯಭಿಚಾರ ಮತ್ತು ಕೊಲೆಪಾತಕ್ಕಾಗಿ ದಾವೀದನು ಪಶ್ಚಾತ್ತಾಪಪಟ್ಟಾಗ ಯೆಹೋವನು ಅವನನ್ನು ಕ್ಷಮಿಸಿದನು ಹಾಗೂ ಪುನಃ ಒಮ್ಮೆ ಅವನು ಯೆಹೋವನ ಮೆಚ್ಚಿಕೆಗೆ ಪಾತ್ರನಾದನು.

ನಿಮ್ಮ ಸನ್ನಿವೇಶಗಳೂ ಬದಲಾಗಬಲ್ಲವು. ಆರೋಗ್ಯ ಸಮಸ್ಯೆಗಳು, ಆರ್ಥಿಕ ಮುಗ್ಗಟ್ಟುಗಳು, ಕುಟುಂಬ ಸಮಸ್ಯೆಗಳು ಅಥವಾ ನಮ್ಮ ಸ್ವಂತ ಕೃತ್ಯಗಳು ಸಹ ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ತರುತ್ತವೆ. ನಾವು ಇಂಥ ಸವಾಲುಗಳನ್ನು ನಿಭಾಯಿಸಲಿಕ್ಕಾಗಿ ಸುಸಜ್ಜಿತರಾಗಿರಲು ಯಾವ ಗುಣಗಳು ಸಹಾಯಮಾಡಬಲ್ಲವು?

ದೀನತೆ ಸಹಾಯಕರ

ದೀನತೆಯಲ್ಲಿ ಅಧೀನಭಾವ ಒಳಗೂಡಿದೆ. ನಮ್ಮ ನಿಜ ಸ್ಥಿತಿಯನ್ನು ಹಾಗೂ ಇತರರ ನಿಜ ಸ್ಥಿತಿಯನ್ನು ಇದ್ದಹಾಗೆಯೇ ನೋಡಲು ನಿಜ ದೀನತೆಯು ಸಾಧ್ಯಗೊಳಿಸುತ್ತದೆ. ಇತರರ ಗುಣಗಳನ್ನು ಮತ್ತು ಸಾಫಲ್ಯಗಳನ್ನು ಕಡೆಗಣಿಸದೆ ಇರುವ ಮೂಲಕ ಅವರನ್ನು ಮತ್ತು ಅವರ ಕ್ರಿಯೆಗಳನ್ನು ನಾವು ಇನ್ನೂ ಉತ್ತಮವಾಗಿ ಗಣ್ಯಮಾಡುವೆವು. ತದ್ರೀತಿಯಲ್ಲಿ, ವಿಷಯಗಳು ನಮಗೇಕೆ ಸಂಭವಿಸಿವೆ ಮತ್ತು ಅವನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ದೀನತೆ ಸಹಾಯಮಾಡುತ್ತದೆ.

ಇದರ ಉತ್ತಮ ಉದಾಹರಣೆ ಸೌಲನ ಮಗ ಯೋನಾತಾನನಾಗಿದ್ದಾನೆ. ಅವನ ನಿಯಂತ್ರಣಕ್ಕೆ ಮೀರಿದ ಘಟನೆಗಳಿಂದ ಅವನ ಸನ್ನಿವೇಶಗಳು ಬದಲಾದವು. ಯೆಹೋವನು ಸೌಲನಿಂದ ರಾಜ್ಯವನ್ನು ತೆಗೆದುಬಿಡುವನೆಂದು ಸಮುವೇಲನು ಹೇಳಿದಾಗ ಅವನ ನಂತರ ಯೋನಾತಾನನು ರಾಜನಾಗುವನೆಂದು ಹೇಳಲಿಲ್ಲ. (1 ಸಮು. 15:28; 16:1, 12, 13) ದೇವರು ದಾವೀದನನ್ನು ಇಸ್ರಾಯೇಲಿನ ಮುಂದಿನ ಅರಸನನ್ನಾಗಿ ಆರಿಸಿಕೊಂಡದ್ದರಲ್ಲಿ ಯೋನಾತಾನನಿಗೆ ರಾಜ್ಯಪದ ಲಭಿಸಲಿಲ್ಲ. ಒಂದರ್ಥದಲ್ಲಿ ಸೌಲನ ಅವಿಧೇಯತೆಯು ಯೋನಾತಾನನ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು. ಸೌಲನ ತಪ್ಪಿಗೆ ಯೋನಾತಾನನು ಜವಾಬ್ದಾರನು ಆಗಿರಲಿಲ್ಲವಾದರೂ ಅವನು ತಂದೆಯ ಉತ್ತರಾಧಿಕಾರಿ ಆಗುವಂತಿರಲಿಲ್ಲ. (1 ಸಮು. 20:30, 31) ಈ ಸನ್ನಿವೇಶಕ್ಕೆ ಯೋನಾತಾನನು ಹೇಗೆ ಪ್ರತಿಕ್ರಿಯಿಸಿದನು? ಈ ಸಂದರ್ಭವು ಕೈತಪ್ಪಿದ್ದಕ್ಕಾಗಿ ಅವನು ಮನಸ್ಸಿನಲ್ಲೇ ದ್ವೇಷವನ್ನು ಬೆಳೆಸಿಕೊಂಡು ದಾವೀದನ ಮೇಲೆ ಹೊಟ್ಟೆಕಿಚ್ಚುಪಟ್ಟನೊ? ಇಲ್ಲ. ದಾವೀದನಿಗಿಂತ ತುಂಬ ದೊಡ್ಡವನೂ ಹೆಚ್ಚು ಅನುಭವಸ್ಥನೂ ಆಗಿದ್ದರೂ ಅವನು ದಾವೀದನಿಗೆ ನಿಷ್ಠೆಯ ಬೆಂಬಲ ಕೊಟ್ಟನು. (1 ಸಮು. 23:16-18) ಯಾರಿಗೆ ದೇವರ ಆಶೀರ್ವಾದ ಇತ್ತೆಂಬುದನ್ನು ಅರ್ಥಮಾಡಿಕೊಳ್ಳಲು ಅವನಿಗೆ ದೀನತೆಯು ಸಹಾಯಮಾಡಿತು ಮತ್ತು ಅವನು ‘ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಲಿಲ್ಲ.’ (ರೋಮ. 12:3) ಯೆಹೋವನು ತನ್ನಿಂದ ಏನನ್ನು ಅಪೇಕ್ಷಿಸಿದನೆಂಬುದನ್ನು ಯೋನಾತಾನನು ಗ್ರಹಿಸಿಕೊಂಡು ಆ ವಿಷಯದಲ್ಲಿ ಆತನ ನಿರ್ಣಯವನ್ನು ಸ್ವೀಕರಿಸಿದನು.

ಅನೇಕ ಬದಲಾವಣೆಗಳು ಸಂಭವಿಸುವಾಗ ಸನ್ನಿವೇಶ ಕಷ್ಟಕರವಾಗುತ್ತದೆ ಎಂಬುದು ನಿಜ. ಯೋನಾತಾನನು ಒಂದು ಸಂದರ್ಭದಲ್ಲಿ ತನಗೆ ಆಪ್ತರಾಗಿದ್ದ ಇಬ್ಬರು ವ್ಯಕ್ತಿಗಳೊಂದಿಗೆ ವ್ಯವಹರಿಸಬೇಕಾಗಿತ್ತು. ಒಬ್ಬನು ದೇವರಿಂದ ಆಯ್ಕೆಗೊಂಡ ಭಾವೀ ಅರಸನೂ ಮಿತ್ರನೂ ಆಗಿದ್ದ ದಾವೀದನು. ಇನ್ನೊಬ್ಬನು ಯೆಹೋವನಿಂದ ತಿರಸ್ಕರಿಸಲ್ಪಟ್ಟಿದ್ದ ಆದರೂ ರಾಜನಾಗಿ ಆಳುತ್ತಿದ್ದ ತಂದೆ ಸೌಲನು. ಈ ಸನ್ನಿವೇಶವು ಯೆಹೋವನ ಮೆಚ್ಚಿಕೆಯಲ್ಲಿ ಉಳಿಯಲು ಪ್ರಯತ್ನಿಸುತ್ತಿದ್ದ ಯೋನಾತಾನನಿಗೆ ಭಾವನಾತ್ಮಕ ಒತ್ತಡವನ್ನು ತಂದಿರಬೇಕು. ಅಂತೆಯೇ ನಾವು ಎದುರಿಸಬೇಕಾದ ಬದಲಾವಣೆಗಳು ನಮಗೆ ತುಸು ಮಟ್ಟಿನ ಚಿಂತೆಯನ್ನೂ ಕಳವಳವನ್ನೂ ತರಬಲ್ಲವು. ಆದರೆ ಯೆಹೋವನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಾದರೆ ನಾವು ಅಂಥ ಬದಲಾದ ಸನ್ನಿವೇಶಗಳನ್ನು ನಿಭಾಯಿಸುತ್ತಿರುವಾಗಲೂ ಯೆಹೋವನನ್ನು ನಿಷ್ಠೆಯಿಂದ ಸೇವಿಸುತ್ತಾ ಮುಂದುವರಿಯಲು ಶಕ್ತರಾಗುವೆವು.

ವಿನಯಶೀಲತೆಯ ಪ್ರಮುಖತೆ

ಒಬ್ಬನು ತನ್ನ ಇತಿಮಿತಿಗಳನ್ನು ತಿಳಿದಿರುವುದೇ ವಿನಯಶೀಲತೆಯಾಗಿದೆ. ವಿನಯಶೀಲತೆಯೇ ದೀನತೆಯೆಂದು ತಪ್ಪರ್ಥಮಾಡಿಕೊಳ್ಳಬಾರದು. ಏಕೆಂದರೆ ಒಬ್ಬ ವ್ಯಕ್ತಿ ದೀನನಾಗಿದ್ದರೂ ಅವನಿಗೆ ತನ್ನಲ್ಲಿರುವ ಇತಿಮಿತಿಗಳ ಪೂರ್ಣಪ್ರಜ್ಞೆ ಇರಲಿಕ್ಕಿಲ್ಲ.

ದಾವೀದನು ವಿನಯಶೀಲನಾಗಿದ್ದನು. ಯೆಹೋವನು ಅವನನ್ನು ರಾಜನಾಗಿ ಆರಿಸಿದ್ದರೂ ಅನೇಕ ವರ್ಷಗಳ ವರೆಗೆ ದಾವೀದನಿಗೆ ಸಿಂಹಾಸನವನ್ನೇರುವ ಸಂದರ್ಭ ಸಿಗಲಿಲ್ಲ. ವಿಳಂಬದಂತೆ ಕಂಡುಬಂದ ಈ ವಿಷಯಕ್ಕೆ ಕಾರಣವೇನೆಂದು ಯೆಹೋವನು ದಾವೀದನಿಗೆ ವಿವರಿಸಿದನೆಂದೂ ಹೇಳಲಾಗಿಲ್ಲ. ಆದರೂ ಹತಾಶೆಯಂತೆ ತೋರಿದ ಈ ವಿಳಂಬವು ದಾವೀದನನ್ನು ಕಳವಳಗೊಳಿಸಲಿಲ್ಲ. ಅವನಿಗೆ ತನ್ನ ಇತಿಮಿತಿಗಳ ಅರಿವಿತ್ತು. ಆ ಸನ್ನಿವೇಶವನ್ನು ಅನುಮತಿಸಿದ್ದ ಯೆಹೋವನು ಎಲ್ಲವನ್ನು ಹತೋಟಿಯಲ್ಲಿಟ್ಟಿದ್ದನೆಂದು ಅವನು ಅರ್ಥಮಾಡಿಕೊಂಡನು. ಆದ್ದರಿಂದ ತನ್ನ ಸ್ವಂತ ಜೀವವನ್ನು ಉಳಿಸಲಿಕ್ಕಾಗಿ ಸಹ ದಾವೀದನು ಸೌಲನನ್ನು ಕೊಲ್ಲಲಿಲ್ಲ; ಮಾತ್ರವಲ್ಲ ತನ್ನ ಸಂಗಡಿಗ ಅಬೀಷೈ ಸಹ ಹಾಗೆ ಮಾಡುವಂತೆ ಅವನು ಬಿಡಲಿಲ್ಲ.—1 ಸಮು. 26:6-9.

ಕೆಲವೊಮ್ಮೆ ನಮ್ಮ ಸ್ಥಳಿಕ ಸಭೆಯಲ್ಲಿ ಒಂದು ಸಮಸ್ಯೆಯು ಏಳಬಹುದು. ಅದು ನಮಗೆ ಅರ್ಥವಾಗದಿರಬಹುದು ಅಥವಾ ಅದನ್ನು ಉತ್ತಮವಾಗಿ ಹಾಗೂ ಹೆಚ್ಚು ಕ್ರಮಬದ್ಧ ರೀತಿಯಲ್ಲಿ ಬಗೆಹರಿಸಲಾಗಿಲ್ಲ ಎಂದು ನಾವು ಅಭಿಪ್ರಯಿಸಬಹುದು. ಸಭೆಯ ಶಿರಸ್ಸು ಯೇಸುವಾಗಿದ್ದಾನೆ ಮತ್ತು ಮುಂದಾಳುತ್ವ ವಹಿಸಲು ನೇಮಿತ ಹಿರಿಯರ ಮಂಡಲಿಯ ಮೂಲಕ ಅವನು ಕ್ರಿಯೆಗೈಯುತ್ತಾನೆ ಎಂಬುದನ್ನು ನಾವು ವಿನಯಶೀಲತೆಯಿಂದ ಅಂಗೀಕರಿಸುತ್ತೇವೊ? ಯೆಹೋವನ ಮೆಚ್ಚಿಕೆಯಲ್ಲಿ ಉಳಿಯಬೇಕಾದರೆ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ನಡೆಸುವಂತೆ ಆತನಲ್ಲಿ ಕಾದಿರಬೇಕೆಂಬುದನ್ನು ಅರಿತುಕೊಂಡು ವಿನಯಶೀಲತೆಯನ್ನು ತೋರಿಸುತ್ತೇವೊ? ಇದು ಕಷ್ಟಕರ ಸವಾಲಾಗಿರುವುದಾದರೂ ನಾವು ವಿನಯಶೀಲರಾಗಿ ಕಾದುಕೊಂಡಿರುವೆವೊ?—ಜ್ಞಾನೋ. 11:2.

ಸಕಾರಾತ್ಮಕರಾಗಿರಲು ನಮ್ರತೆ ಸಹಾಯಕರ

ಸೌಮ್ಯಭಾವವೇ ನಮ್ರತೆ. ಇದು ಬಾಧೆಯನ್ನು ತಾಳ್ಮೆಯಿಂದ, ರೇಗಾಟವಿಲ್ಲದೆ, ಕೋಪಗೊಳ್ಳದೆ, ಪ್ರತೀಕಾರ ತೋರಿಸದೆ ಸಹಿಸಿಕೊಳ್ಳಲು ನಮ್ಮನ್ನು ಸಾಧ್ಯಗೊಳಿಸುತ್ತದೆ. ನಮ್ರತೆಯೆಂಬ ಗುಣವನ್ನು ಬೆಳೆಸಿಕೊಳ್ಳುವುದು ಕಷ್ಟಕರ ನಿಜ. ಆಸಕ್ತಿಕರವಾಗಿ ಬೈಬಲಿನ ಒಂದು ವಚನದಲ್ಲಿ ‘ಲೋಕದ ನಮ್ರರು ನಮ್ರತೆಯನ್ನು ಹೊಂದಿಕೊಳ್ಳುವಂತೆ’ ಆಮಂತ್ರಿಸಲ್ಪಟ್ಟಿದ್ದಾರೆ. (ಚೆಫ. 2:3, NW) ನಮ್ರತೆಯು ದೀನತೆ ಮತ್ತು ವಿನಯಶೀಲತೆಗೆ ಸಂಬಂಧಿಸಿದೆ. ಆದರೆ ಒಳ್ಳೇತನ ಮತ್ತು ಸೌಮ್ಯಭಾವದಂಥ ಇತರ ಗುಣಗಳನ್ನೂ ಅದು ಆವರಿಸುತ್ತದೆ. ಒಬ್ಬ ನಮ್ರ ವ್ಯಕ್ತಿಯು ಇತರರಿಂದ ಕಲಿಯಲು ಸಿದ್ಧನಾಗಿರುವ ಮೂಲಕ ಹಾಗೂ ತನ್ನನ್ನು ರೂಪಿಸಲು ಬಿಟ್ಟುಕೊಡುವ ಮೂಲಕ ಆಧ್ಯಾತ್ಮಿಕವಾಗಿ ಬೆಳೆಯಬಲ್ಲನು.

ನಮ್ಮ ಜೀವಿತದ ಹೊಸ ಹೊಸ ಹಂತಗಳನ್ನು ನಿಭಾಯಿಸಲು ನಮ್ರತೆಯು ಹೇಗೆ ಸಹಾಯಕರ? ಅನೇಕರು ಜೀವಿತದ ಬದಲಾವಣೆಗಳನ್ನು ನಕಾರಾತ್ಮಕವಾಗಿ ವೀಕ್ಷಿಸುವ ಪ್ರವೃತ್ತಿಯುಳ್ಳವರಾಗಿರುವುದನ್ನು ನೀವು ಗಮನಿಸಿರಬಹುದು. ಆದರೆ ವಾಸ್ತವದಲ್ಲಿ ಅಂಥ ಬದಲಾವಣೆಗಳು ಯೆಹೋವನಿಂದ ಹೆಚ್ಚು ತರಬೇತಿ ಪಡೆದುಕೊಳ್ಳುವ ಅವಕಾಶಗಳಾಗಿರಬಲ್ಲವು. ಅದನ್ನು ಮೋಶೆಯ ಜೀವನವು ದೃಷ್ಟಾಂತಿಸುತ್ತದೆ.

ಮೋಶೆಯು 40 ವರ್ಷದವನಾಗಿದ್ದಾಗಲೇ ಅವನಲ್ಲಿ ಅತ್ಯುತ್ತಮ ಗುಣಗಳಿದ್ದವು. ಅವನು ದೇವಜನರ ಅಗತ್ಯಗಳಿಗೆ ಸಂವೇದಿಸುತ್ತಾ ಸ್ವತ್ಯಾಗ ಮನೋಭಾವವನ್ನು ತೋರಿಸಿದ್ದನು. (ಇಬ್ರಿ. 11:24-26) ಆದರೂ ಇಸ್ರಾಯೇಲ್ಯರನ್ನು ಈಜಿಪ್ಟಿನಿಂದ ಹೊರತರಲು ಯೆಹೋವನಿಂದ ನೇಮಿಸಲ್ಪಡುವ ಮೊದಲು ಮೋಶೆ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾಯಿತು ಮತ್ತು ಆ ಬದಲಾವಣೆಗಳು ಅವನನ್ನು ಹೆಚ್ಚು ನಮ್ರನನ್ನಾಗಿ ಮಾಡಿದವು. ಈಜಿಪ್ಟಿನಿಂದ ಓಡಿಹೋಗಿ, ಯಾವುದೇ ಪ್ರಖ್ಯಾತಿಯಿಲ್ಲದೆ ಮಿದ್ಯಾನಿನಲ್ಲಿ ಕುರುಬನಾಗಿ ಕೆಲಸಮಾಡುತ್ತಾ 40 ವರ್ಷ ಜೀವಿಸಬೇಕಾಯಿತು. ಫಲಿತಾಂಶ? ಆ ಬದಲಾವಣೆ ಅವನನ್ನು ಇನ್ನೂ ಉತ್ತಮ ವ್ಯಕ್ತಿಯನ್ನಾಗಿ ಮಾಡಿತು. (ಅರ. 12:3) ತನ್ನ ವೈಯಕ್ತಿಕ ಅಭಿರುಚಿಗಳಿಗಿಂತ ಆಧ್ಯಾತ್ಮಿಕ ಅಭಿರುಚಿಗಳಿಗೆ ಪ್ರಮುಖತೆ ಕೊಡಲು ಅವನು ಕಲಿತನು.

ನಮ್ರತೆಯ ವಿಷಯದಲ್ಲಿ ಮೋಶೆ ಇಟ್ಟ ಮಾದರಿಯನ್ನು ಪರಿಗಣಿಸೋಣ. ಯೆಹೋವನು ಅವಿಧೇಯ ಇಸ್ರಾಯೇಲ್‌ ಜನಾಂಗವನ್ನು ತಿರಸ್ಕರಿಸಿ ಮೋಶೆಯ ವಂಶವನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನೆಂದಾಗ ಮೋಶೆ ಏನು ಮಾಡಿದನು? (ಅರ. 14:11-20) ಮೋಶೆಯು ಇಸ್ರಾಯೇಲ್ಯರ ಪರವಾಗಿ ಯೆಹೋವನಿಗೆ ಬಿನ್ನೈಸಿದನು. ಅವನು ತನ್ನ ಸ್ವಅಭಿರುಚಿಗಳ ಕುರಿತಲ್ಲ ಬದಲಾಗಿ ದೇವರ ಪ್ರಖ್ಯಾತಿ ಹಾಗೂ ತನ್ನ ಸಹೋದರರ ಹಿತಾಸಕ್ತಿಯ ಕುರಿತು ಹೆಚ್ಚು ಚಿಂತಿತನಾಗಿದ್ದನೆಂದು ಅವನ ಮಾತುಗಳು ತೋರಿಸುತ್ತವೆ. ಜನಾಂಗದ ನಾಯಕ ಅಥವಾ ಮಧ್ಯಸ್ಥನಾಗಿ ಮೋಶೆಯ ಪಾತ್ರಕ್ಕೆ ನಮ್ರ ವ್ಯಕ್ತಿಯ ಅಗತ್ಯವಿತ್ತು. ಮಿರ್ಯಾಮ ಮತ್ತು ಆರೋನರು ಮೋಶೆಯ ವಿರುದ್ಧ ಗುಣುಗುಟ್ಟಿದರು, ಆದರೂ ಅವನು “ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಎಂದು ಬೈಬಲ್‌ ದಾಖಲೆ ಹೇಳುತ್ತದೆ. (ಅರ. 12:1-3, 9-15) ಅವರು ತನಗೆ ಮಾಡಿದ ಅವಮಾನಗಳನ್ನು ಮೋಶೆ ನಮ್ರಭಾವದಿಂದ ಸಹಿಸಿಕೊಂಡಿದ್ದಿರಬೇಕೆಂದು ತೋರುತ್ತದೆ. ಒಂದುವೇಳೆ ಮೋಶೆಯು ನಮ್ರನಾಗಿರದಿದ್ದಲ್ಲಿ ಏನಾಗಿದ್ದಿರಬಹುದು?

ಇನ್ನೊಂದು ಸಂದರ್ಭದಲ್ಲಿ ಹೀಗೆ ನಡೆಯಿತು. ಯೆಹೋವನ ಆತ್ಮವು ಕೆಲವು ಪುರುಷರ ಮೇಲೆ ಬಂದು ಅವರು ಪ್ರವಾದಿಸತೊಡಗಿದರು. ಆ ಇಸ್ರಾಯೇಲ್ಯ ಪುರುಷರು ಅಯೋಗ್ಯವಾಗಿ ವರ್ತಿಸುತ್ತಿದ್ದಾರೆಂದು ಮೋಶೆಯ ಶಿಷ್ಯ ಯೆಹೋಶುವನಿಗೆ ಅನಿಸಿತು. ಮೋಶೆಯಾದರೋ ನಮ್ರತೆಯಿಂದ ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಿದನು ಹಾಗೂ ತನ್ನ ಅಧಿಕಾರ ತಪ್ಪಿಹೋಗುತ್ತದೆಂದು ಚಿಂತಿತನಾಗಲಿಲ್ಲ. (ಅರ. 11:26-29) ಮೋಶೆಯಲ್ಲಿ ನಮ್ರತೆ ಇಲ್ಲದಿರುತ್ತಿದ್ದಲ್ಲಿ ಯೆಹೋವನ ಏರ್ಪಾಡಿನಲ್ಲಾದ ಈ ಬದಲಾವಣೆಯನ್ನು ಅವನು ಅಂಗೀಕರಿಸುತ್ತಿದ್ದನೊ?

ದೇವರಿಂದ ಕೊಡಲಾದ ದೊಡ್ಡ ಅಧಿಕಾರವನ್ನು ಹಾಗೂ ನೇಮಕವಾದ ಪಾತ್ರವನ್ನು ಉತ್ತಮವಾಗಿ ಬಳಸಲು ಮೋಶೆಗೆ ನಮ್ರತೆಯು ಸಹಾಯಮಾಡಿತು. ಯೆಹೋವನು ಮೋಶೆಗೆ ಹೋರೇಬ್‌ ಬೆಟ್ಟದ ಮೇಲೆ ಹೋಗುವಂತೆ ಹೇಳಿದನು. ತದನಂತರ ಮೋಶೆ ಜನರ ಮುಂದೆ ನಿಂತಾಗ ದೇವರು ಒಬ್ಬ ದೇವದೂತನ ಮೂಲಕ ಅವನೊಂದಿಗೆ ಮಾತಾಡಿದನು ಹಾಗೂ ಅವನನ್ನು ಒಡಂಬಡಿಕೆಯ ಮಧ್ಯಸ್ಥನಾಗಿ ನೇಮಿಸಿದನು. ಅಧಿಕಾರದಲ್ಲಾದ ಈ ದೊಡ್ಡ ಬದಲಾವಣೆಯನ್ನು ಸ್ವೀಕರಿಸಿಯೂ ಯೆಹೋವನ ಮೆಚ್ಚಿಕೆಯಲ್ಲಿ ಉಳಿಯಲು ನಮ್ರತೆಯು ಮೋಶೆಗೆ ಸಾಧ್ಯಮಾಡಿತು.

ನಮ್ಮ ಕುರಿತೇನು? ವೈಯಕ್ತಿಕ ಬೆಳವಣಿಗೆಗೆ ನಮ್ರತೆಯು ಅನಿವಾರ್ಯ. ದೇವಜನರ ಮಧ್ಯೆ ಸುಯೋಗಗಳನ್ನು ಮತ್ತು ಅಧಿಕಾರವನ್ನು ಹೊಂದಿರುವವರೆಲ್ಲರು ನಮ್ರರಾಗಿರುವುದು ಅಗತ್ಯ. ಬದಲಾವಣೆಗಳು ಸಂಭವಿಸಿದಾಗ ಹೆಮ್ಮೆಪಡುವುದನ್ನು ಇದು ತಡೆಯುತ್ತದೆ ಹಾಗೂ ಸನ್ನಿವೇಶಗಳನ್ನು ಸರಿಯಾದ ಮನೋಭಾವದಿಂದ ನಿಭಾಯಿಸಲು ಶಕ್ತರನ್ನಾಗಿಸುತ್ತದೆ. ಯಾವುದೇ ಸನ್ನಿವೇಶಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆಂಬುದು ಪ್ರಾಮುಖ್ಯ. ಬದಲಾವಣೆಯನ್ನು ನಾವು ಸ್ವೀಕರಿಸುವೆವೊ? ಅದನ್ನು ಪ್ರಗತಿಮಾಡಲು ಒಂದು ಅವಕಾಶವಾಗಿ ವೀಕ್ಷಿಸುವೆವೊ? ಅದು ನಮ್ರತೆಯನ್ನು ಬೆಳೆಸಿಕೊಳ್ಳುವ ವಿಶೇಷ ಸಂದರ್ಭವಾಗಿ ರುಜುವಾಗಬಹುದು!

ನಮ್ಮ ಜೀವನದಲ್ಲಿ ಬದಲಾವಣೆಗಳು ಯಾವಾಗಲೂ ಬರುತ್ತಿರುವವು. ಕೆಲವೊಮ್ಮೆ ಅದು ಏಕೆ ಸಂಭವಿಸುತ್ತದೆ ಎಂದು ತಿಳಿಯುವುದೂ ಸುಲಭವಲ್ಲ. ವೈಯಕ್ತಿಕ ಇತಿಮಿತಿಗಳು ಹಾಗೂ ಭಾವನಾತ್ಮಕ ಒತ್ತಡವು ಆಧ್ಯಾತ್ಮಿಕ ಒಳನೋಟವನ್ನು ಕಾಪಾಡಿಕೊಳ್ಳಲು ಕಷ್ಟಕರವನ್ನಾಗಿ ಮಾಡಬಹುದು. ಆದರೂ ದೀನತೆ, ವಿನಯಶೀಲತೆ ಹಾಗೂ ನಮ್ರತೆಯಂಥ ಗುಣಗಳು ಬದಲಾವಣೆಗಳನ್ನು ಸ್ವೀಕರಿಸಲು ಮತ್ತು ದೇವರ ಮೆಚ್ಚಿಕೆಯಲ್ಲಿ ಉಳಿಯಲು ನಮಗೆ ಸಹಾಯಮಾಡುವವು.

[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಾವು ನಿಜವಾಗಿ ಏನಾಗಿದ್ದೇವೆಂದು ನೋಡಲು ನಿಜ ದೀನತೆಯು ಸಹಾಯಮಾಡುತ್ತದೆ

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಮ್ಮ ವೈಯಕ್ತಿಕ ಬೆಳವಣಿಗೆಗೆ ನಮ್ರತೆಯು ಅನಿವಾರ್ಯ

[ಪುಟ 5ರಲ್ಲಿರುವ ಚಿತ್ರ]

ಮೋಶೆಯು ಎದುರಿಸಬೇಕಾದ ಸವಾಲುಗಳು ಅವನನ್ನು ಹೆಚ್ಚು ನಮ್ರನನ್ನಾಗಿ ಮಾಡಿದವು