ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಶುಶ್ರೂಷೆಗೆ ಉಪಯುಕ್ತನಾದ’ ಮಾರ್ಕ

‘ಶುಶ್ರೂಷೆಗೆ ಉಪಯುಕ್ತನಾದ’ ಮಾರ್ಕ

‘ಶುಶ್ರೂಷೆಗೆ ಉಪಯುಕ್ತನಾದ’ ಮಾರ್ಕ

ಅಂತಿಯೋಕ್ಯ ಸಭೆಯಲ್ಲಿ ಕೆಲವೊಂದು ಸಮಸ್ಯೆಗಳಿದ್ದವು. ಆದರೆ ಅಪೊಸ್ತಲರಾದ ಪೌಲಬಾರ್ನಬರ ನಡುವಣ ಭಿನ್ನಾಭಿಪ್ರಾಯವಾದರೊ ಬೇರೆ ರೀತಿಯ ಸಮಸ್ಯೆಯಾಗಿತ್ತು. ಮಿಷನೆರಿ ಸಂಚಾರವೊಂದನ್ನು ಮಾಡಲು ಅವರು ಯೋಜಿಸುತ್ತಿದ್ದರು. ಆದರೆ ತಮ್ಮೊಂದಿಗೆ ಯಾರನ್ನು ಒಯ್ಯಬೇಕೆಂಬ ತೀರ್ಮಾನಕ್ಕೆ ಬಂದಾಗ ಅವರ ನಡುವೆ “ತೀಕ್ಷ್ಣ ವಾಗ್ವಾದ” ಉಂಟಾಯಿತು. (ಅ. ಕಾ. 15:39) ಭಿನ್ನಾಭಿಪ್ರಾಯದಿಂದ ಬೇರ್ಪಟ್ಟವರಾಗಿ ಅವರು ತಮ್ಮ ತಮ್ಮ ದಾರಿಹಿಡಿದು ಹೋದರು. ಅವರ ವಾಗ್ವಾದ ಇನ್ನೊಬ್ಬ ಮಿಷನೆರಿಯ ಕುರಿತಾಗಿತ್ತು. ಅವನೇ ಮಾರ್ಕ.

ಈ ಮಾರ್ಕನು ಯಾರು? ಅವನ ಬಗ್ಗೆ ವಾಗ್ವಾದ ಮಾಡಲು ಆ ಇಬ್ಬರು ಅಪೊಸ್ತಲರನ್ನು ನಡಿಸಿದ್ದು ಯಾವುದು? ಆ ಕುರಿತು ಅವರಲ್ಲಿ ಅಂಥ ತೀಕ್ಷ್ಣ ಭಿನ್ನಾಭಿಪ್ರಾಯಗಳು ಎದ್ದದ್ದೇಕೆ? ಆ ಅಭಿಪ್ರಾಯಗಳು ಅನಂತರ ಎಂದಾದರೂ ಬದಲಾದವೊ? ಅಷ್ಟುಮಾತ್ರವಲ್ಲ ಮಾರ್ಕನ ವೃತ್ತಾಂತದಿಂದ ನೀವೇನಾದರೂ ಕಲಿಯಬಲ್ಲಿರೊ?

ಯೆರೂಸಲೇಮಿನ ಮನೆಯಲ್ಲಿ

ಮಾರ್ಕನು ಶ್ರೀಮಂತ ಯೆಹೂದಿ ಕುಟುಂಬದಲ್ಲಿ ಹುಟ್ಟಿದವನಿರಬೇಕು. ಅವನು ಬೆಳೆದು ದೊಡ್ಡವನಾದದ್ದು ಯೆರೂಸಲೇಮಿನಲ್ಲಿ. ಅವನ ಕುರಿತು ನಾವು ಮೊದಲಾಗಿ ನಿರ್ದಿಷ್ಟರೂಪದಲ್ಲಿ ತಿಳಿಯುವುದು ಆದಿ ಕ್ರೈಸ್ತ ಸಭೆಯ ಚರಿತ್ರೆಯ ಸಂಬಂಧದಲ್ಲೇ. ಸುಮಾರು ಕ್ರಿ.ಶ. 44ರಲ್ಲಿ ಯೆಹೋವನ ದೂತನು ಅಪೊಸ್ತಲ ಪೇತ್ರನನ್ನು 1ನೇ ಹೆರೋದ ಅಗ್ರಿಪ್ಪನ ಸೆರೆಮನೆಯಿಂದ ಅದ್ಭುತಕರವಾಗಿ ಬಿಡಿಸಿದಾಗ ಪೇತ್ರನು, “ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಹೋದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥಿಸುತ್ತಿದ್ದರು” ಎಂದು ಬೈಬಲು ತಿಳಿಸುತ್ತದೆ.—ಅ. ಕಾ. 12:1-12. *

ಮಾರ್ಕನ ತಾಯಿಯ ಮನೆಯನ್ನು ಯೆರೂಸಲೇಮ್‌ ಸಭೆಯು ಕೂಟಗಳಿಗಾಗಿ ಉಪಯೋಗಿಸುತ್ತಿತ್ತೆಂಬುದು ವ್ಯಕ್ತ. ಅಲ್ಲಿ “ಅನೇಕರು” ಕೂಡಿಬಂದ ವಿಷಯದಿಂದ ಅದೊಂದು ದೊಡ್ಡ ಮನೆಯೆಂದು ತಿಳಿಯುತ್ತದೆ. ಪೇತ್ರನು “ಕದವನ್ನು” ಅಂದರೆ ಪ್ರಾಕಾರದ ದ್ವಾರವನ್ನು ತಟ್ಟಿದಾಗ ಬಾಗಿಲನ್ನು ತೆರೆದವಳು ರೋದೆ ಎಂಬ ಹೆಸರಿನ ಮರಿಯಳ ಸೇವಕಿ. ಈ ವಿವರಗಳು ಮರಿಯಳನ್ನು ಸಾಧಾರಣ ಶ್ರೀಮಂತೆ ಸ್ತ್ರೀಯಾಗಿ ಸೂಚಿಸುತ್ತದೆ. ಮಾತ್ರವಲ್ಲ ಮನೆಯು ಮರಿಯಳದ್ದು ಎಂದು ತಿಳಿಸಲಾಗಿದೆಯೇ ಹೊರತು ಅವಳ ಗಂಡನದ್ದೆಂದು ಹೇಳಿರುವುದಿಲ್ಲ. ಇದರಿಂದ ಆಕೆ ವಿಧವೆಯಾಗಿದ್ದಿರಬೇಕೆಂದೂ ಮತ್ತು ಮಾರ್ಕನು ಇನ್ನೂ ಪ್ರಾಯದಲ್ಲಿ ಚಿಕ್ಕವನಿದ್ದನೆಂದೂ ಹೇಳಸಾಧ್ಯವಿದೆ.—ಅ. ಕಾ. 12:13.

ಪ್ರಾರ್ಥನೆಗಾಗಿ ಕೂಡಿಬಂದವರಲ್ಲಿ ಮಾರ್ಕನು ಒಬ್ಬನಾಗಿದ್ದನೆಂಬುದು ಸಂಭಾವ್ಯ. ಯೇಸುವಿನ ಶುಶ್ರೂಷೆಯ ಘಟನೆಗಳನ್ನು ಕಣ್ಣಾರೆ ಕಂಡಿದ್ದ ಯೇಸುವಿನ ಶಿಷ್ಯರ ಮತ್ತು ಇತರರ ಒಳ್ಳೆಯ ಪರಿಚಯವು ಮಾರ್ಕನಿಗೆ ಇದ್ದಿರಬೇಕು. ವಾಸ್ತವದಲ್ಲಿ ಯೇಸು ಕೈದುಮಾಡಲ್ಪಟ್ಟ ಮೊದಲಲ್ಲಿ ಅವನ ಹಿಂದೆ ಹೋಗಲು ಪ್ರಯತ್ನಿಸಿದ ಅರೆಕೊರೆ ಬಟ್ಟೆಧಾರಿ ಯೌವನಸ್ಥನು ಮಾರ್ಕನೇ ಆಗಿದ್ದಿರಬಹುದು. ಆದರೆ ಜನರು ಹಿಡಿಯಲು ಪ್ರಯತ್ನಿಸಿದಾಗ ಮಾರ್ಕನು ಪಲಾಯನಗೈದನು.—ಮಾರ್ಕ 14:51, 52.

ಸಭೆಯಲ್ಲಿ ಸುಯೋಗಗಳು

ಬಲಿತ ಕ್ರೈಸ್ತರ ಸಹವಾಸವು ಮಾರ್ಕನನ್ನು ಧನಾತ್ಮಕವಾಗಿ ಪ್ರಭಾವಿಸಿತ್ತೆಂಬುದಕ್ಕೆ ಸಂದೇಹವಿಲ್ಲ. ಅವನು ಆಧ್ಯಾತ್ಮಿಕವಾಗಿ ಬೆಳೆದು ಜವಾಬ್ದಾರಿಯುತ ಸಹೋದರರ ಗಮನವನ್ನು ಸೆಳೆದನು. ಕ್ರಿ.ಶ. 46ರ ಸುಮಾರಿಗೆ, ಕ್ಷಾಮದ ದುಷ್ಪರಿಣಾಮವನ್ನು ನೀಗಿಸಲಿಕ್ಕಾಗಿ “ಪರಿಹಾರ ಕಾರ್ಯವನ್ನು” ತಲಪಿಸಲು ಪೌಲ ಮತ್ತು ಬಾರ್ನಬರು ಅಂತಿಯೋಕ್ಯದಿಂದ ಯೆರೂಸಲೇಮಿಗೆ ಹೋದಾಗ ಮಾರ್ಕನಲ್ಲಿ ಆಸಕ್ತಿ ತೋರಿಸಿದರು. ಅವರು ಅಂತಿಯೋಕ್ಯಕ್ಕೆ ಹಿಂದಿರುಗಿ ಬಂದಾಗ ಮಾರ್ಕನನ್ನು ತಮ್ಮೊಂದಿಗೆ ಕರತಂದರು.—ಅ. ಕಾ. 11:27-30; 12:25.

ಈ ಮೂವರಲ್ಲಿ ಕ್ರೈಸ್ತ ಸಹೋದರತ್ವದ ಅಧ್ಯಾತ್ಮಿಕ ಸಂಬಂಧವೇ ಹೊರತು ಬೇರೇನೂ ಇರಲಿಲ್ಲವೆಂದೂ ಮಾರ್ಕನಲ್ಲಿದ್ದ ಪ್ರತಿಭಾ ಸಾಮರ್ಥ್ಯಗಳ ಕಾರಣ ಮಾತ್ರದಿಂದಲೇ ಪೌಲಬಾರ್ನಬರು ಅವನನ್ನು ತಮ್ಮೊಂದಿಗೆ ಸೇರಿಸಿಕೊಂಡರೆಂದೂ ವೃತ್ತಾಂತದ ಮೇಲುಮೇಲಿನ ವಾಚಕನು ನೆನಸಿಯಾನು. ಆದರೆ ನಿಜವಾಗಿ ಮಾರ್ಕನು ಬಾರ್ನಬನ ಸೋದರ ಸಂಬಂಧಿಯಾಗಿದ್ದನೆಂದು ಪೌಲನ ಪತ್ರಗಳಲ್ಲೊಂದು ತಿಳಿಸುತ್ತದೆ. (ಕೊಲೊ. 4:10) ಇದು, ತದನಂತರ ಮಾರ್ಕನನ್ನು ಒಳಗೂಡಿದ್ದ ಘಟನೆಗಳನ್ನು ಅರ್ಥಮಾಡುವಂತೆ ನೆರವಾಗಬಲ್ಲದು.

ಹೆಚ್ಚುಕಡಿಮೆ ವರ್ಷ ದಾಟಿದಾಗ ಪವಿತ್ರಾತ್ಮವು ಪೌಲಬಾರ್ನಬರನ್ನು ಮಿಷನೆರಿ ಸಂಚಾರಕ್ಕೆ ತೆರಳುವಂತೆ ಮಾರ್ಗದರ್ಶಿಸಿತು. ಅವರು ಅಂತಿಯೋಕ್ಯದಿಂದ ಸೈಪ್ರಸ್‌ಗೆ ಹೊರಟುನಿಂತರು. ಯೋಹಾನ ಮಾರ್ಕನೂ “ಪರಿಚಾರಕನಾಗಿ” ಅವರೊಂದಿಗೆ ಹೋದನು. (ಅ. ಕಾ. 13:2-5) ಸಂಚಾರದ ಸಮಯದಲ್ಲಿ ಅಪೊಸ್ತಲರು ಆಧ್ಯಾತ್ಮಿಕ ಕೆಲಸದಲ್ಲಿ ನಿರತರಾಗಿರಲು ಸಾಧ್ಯವಾಗುವಂತೆ ಅವರ ವ್ಯಾವಹಾರಿಕ ಅಗತ್ಯಗಳನ್ನು ನೋಡಿಕೊಳ್ಳಲು ಪ್ರಾಯಶಃ ಮಾರ್ಕನು ಅಲ್ಲಿದ್ದನು.

ಪೌಲಬಾರ್ನಬ ಮತ್ತು ಮಾರ್ಕರು ಸೈಪ್ರಸ್‌ಗೆ ಪ್ರಯಾಣಿಸಿ ತಾವು ಹೋದಲ್ಲೆಲ್ಲಾ ಸಾರುತ್ತಾ ಏಷ್ಯಾ ಮೈನರಿನ ಕಡೆಗೆ ಮುಂದುವರಿದರು. ಅಲ್ಲಿಗೆ ಬಂದಾಗ ಯೋಹಾನ ಮಾರ್ಕನು ಮಾಡಿದ ನಿರ್ಣಯವೊಂದು ಪೌಲನನ್ನು ನಿರಾಶೆಗೊಳಿಸಿತು. ಅವರು ಪೆರ್ಗಕ್ಕೆ ಆಗಮಿಸಿದಾಗ “ಯೋಹಾನನು ಅವರನ್ನು ಬಿಟ್ಟು ಯೆರೂಸಲೇಮಿಗೆ ಹಿಂದಿರುಗಿದನು” ಎಂದು ವೃತ್ತಾಂತವು ತಿಳಿಸುತ್ತದೆ. (ಅ. ಕಾ. 13:13) ಅವನು ಹಾಗೆ ಮಾಡಿದ್ದೇಕೆಂದು ತಿಳಿಸಲಾಗಿಲ್ಲ.

ಕೆಲವು ವರ್ಷಗಳ ತರುವಾಯ ಪೌಲಬಾರ್ನಬ ಮತ್ತು ಮಾರ್ಕರು ಅಂತಿಯೋಕ್ಯಕ್ಕೆ ಹಿಂತಿರುಗಿ ಬಂದರು. ಮೊದಲನೆ ಮಿಷನೆರಿ ಸಂಚಾರದಲ್ಲಿ ಸಿಕ್ಕಿದ ಆಸಕ್ತ ಜನರನ್ನು ಹೆಚ್ಚು ಬಲಪಡಿಸಲು ಎರಡನೆಯ ಮಿಷನೆರಿ ಸಂಚಾರ ಮಾಡುವ ಕುರಿತು ಆ ಇಬ್ಬರು ಅಪೊಸ್ತಲರು ಚರ್ಚಿಸುತ್ತಿದ್ದರು. ಬಾರ್ನಬನು ತನ್ನ ಸೋದರ ಸಂಬಂಧಿಯನ್ನು ಸಂಗಡ ಒಯ್ಯಲು ಬಯಸಿದನು. ಆದರೆ ಪೌಲನು ಖಂಡಿತ ಒಪ್ಪಲಿಲ್ಲ, ಯಾಕೆಂದರೆ ಹಿಂದೊಮ್ಮೆ ಮಾರ್ಕನು ಅವರನ್ನು ಬಿಟ್ಟು ಹಿಂತಿರುಗಿ ಹೋಗಿದ್ದನು. ಲೇಖನದ ಆರಂಭದಲ್ಲಿ ವಿವರಿಸಲಾದ ಆ ವಾಗ್ವಾದವನ್ನು ಉದ್ರೇಕಿಸಿದ್ದು ಈ ವಿಷಯವೇ. ಆದುದರಿಂದ ಬಾರ್ನಬನು ಮಾರ್ಕನನ್ನು ಕರಕೊಂಡು ಸೇವೆಗಾಗಿ ತನ್ನ ಸ್ವದೇಶವಾದ ಸೈಪ್ರಸ್‌ಗೆ ಹೋದನು. ಪೌಲನಾದರೊ ಸಿರಿಯ ದೇಶದ ಕಡೆಗೆ ಮುಂದುವರಿದನು. (ಅ. ಕಾ. 15:36-41) ಮಾರ್ಕನು ಆ ಮುಂಚೆ ಮಾಡಿದ್ದ ನಿರ್ಣಯವನ್ನು ಪೌಲಬಾರ್ನಬರು ಭಿನ್ನ ದೃಷ್ಟಿಕೋನದಿಂದ ನೋಡಿದ್ದರೆಂಬುದು ಸ್ಪಷ್ಟ.

ರಾಜಿಯಾದದ್ದು

ಈ ಘಟನೆಯಿಂದಾಗಿ ಮಾರ್ಕನು ನೊಂದಿದ್ದನು ಎಂಬುದಂತೂ ನಿಸ್ಸಂದೇಹ. ಆದರೂ ಅವನು ನಂಬಿಗಸ್ತ ಶುಶ್ರೂಷಕನಾಗಿ ಉಳಿದನು. ಪೌಲನೊಂದಿಗಾದ ಈ ಘಟನೆಯ ಸುಮಾರು 11 ಅಥವಾ 12 ವರ್ಷಗಳ ಬಳಿಕ ಮಾರ್ಕನು ಕ್ರೈಸ್ತತ್ವದ ಆರಂಭದ ಇತಿಹಾಸದಲ್ಲಿ ಪುನಃ ತೋರಿಬರುತ್ತಾನೆ. ಎಲ್ಲಿ? ನೀವು ಸ್ವಲ್ಪವೂ ನಿರೀಕ್ಷಿಸದಂಥ ಸ್ಥಳದಲ್ಲಿ ಅಂದರೆ ಪೌಲನ ಜೊತೆಯಲ್ಲಿಯೇ!

ಈಗ ಪವಿತ್ರ ಶಾಸ್ತ್ರಗ್ರಂಥದ ಭಾಗವಾಗಿರುವ ಹಲವಾರು ಪತ್ರಗಳನ್ನು ಕ್ರಿ.ಶ. 60-61ರಲ್ಲಿ ಪೌಲನು ರೋಮಿನಲ್ಲಿ ಸೆರೆವಾಸಿಯಾಗಿದ್ದಾಗ ಕಳುಹಿಸಿದ್ದನು. ಕೊಲೊಸ್ಸೆಯರಿಗೆ ಬರೆದ ಪತ್ರ ಅದರಲ್ಲಿ ಒಂದು. ಅದರಲ್ಲಿ ಪೌಲನು ಬರೆದದ್ದು: “ನನ್ನ ಜೊತೆ ಸೆರೆಯಾಳಾಗಿರುವ ಅರಿಸ್ತಾರ್ಕನೂ ಬಾರ್ನಬನ ಸಹೋದರ ಸಂಬಂಧಿಯಾದ ಮಾರ್ಕನೂ ನಿಮಗೆ ತಮ್ಮ ವಂದನೆಯನ್ನು ತಿಳಿಸುತ್ತಾರೆ; (ಅವನು ನಿಮ್ಮ ಬಳಿಗೆ ಬರುವುದಾದರೆ ನೀವು ಅವನನ್ನು ಸೇರಿಸಿಕೊಳ್ಳುವಂತೆ ಅಪ್ಪಣೆಗಳನ್ನು ಹೊಂದಿದ್ದೀರಲ್ಲಾ.) . . . ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆಕೆಲಸಗಾರರಾಗಿದ್ದಾರೆ ಮತ್ತು ಇವರೇ ನನಗೆ ಬಲವರ್ಧಕ ಸಹಾಯವಾಗಿದ್ದಾರೆ.”—ಕೊಲೊ. 4:10, 11

ಎಂಥ ಪೂರ್ತಿ ಬದಲಾವಣೆ! ಪೌಲನ ತೀವ್ರ ಅಸಮಾಧಾನಕ್ಕೆ ಗುರಿಯಾಗಿದ್ದ ಮಾರ್ಕನು ಈಗ ಪುನಃ ಅವನ ನೆಚ್ಚಿನ ಜೊತೆಕೆಲಸದವನು. ಮಾರ್ಕನು ಅವರ ಬಳಿಗೆ ಬರಬಹುದಾಗಿದ್ದ ಸಂಭಾವ್ಯತೆಯನ್ನು ಪೌಲನು ಕೊಲೊಸ್ಸೆಯವರಿಗೆ ತಿಳಿಸಿದ್ದನೆಂಬುದು ವ್ಯಕ್ತ. ಒಂದುವೇಳೆ ಮಾರ್ಕನು ಅವರನ್ನು ಸಂದರ್ಶಿಸಿದ್ದಲ್ಲಿ ಅವನು ಪೌಲನ ಪ್ರತಿನಿಧಿಯಾಗಿ ಅಲ್ಲಿ ಕಾರ್ಯನಡಿಸಲಿಕ್ಕಿದ್ದನು.

ವರ್ಷಗಳ ಹಿಂದೆ ಪೌಲನು ಮಾರ್ಕನನ್ನು ಟೀಕಿಸಿದ್ದು ಅತಿಯಾಗಿತ್ತೊ? ಅಗತ್ಯವಿದ್ದ ತಿದ್ದುಪಾಟಿನಿಂದಾಗಿ ಮಾರ್ಕನು ಪ್ರಯೋಜನ ಪಡೆದಿದ್ದನೊ? ಅಥವಾ ಈ ಎರಡೂ ಕಾರಣಗಳು ಪ್ರಾಯಶಃ ನಿಜವಾಗಿದ್ದಿರ ಸಾಧ್ಯವೊ? ವಿಷಯವು ಏನೇ ಆಗಿದ್ದಿರಲಿ, ಅವರು ನಂತರ ರಾಜಿಯಾದದ್ದು ಪೌಲ ಮತ್ತು ಮಾರ್ಕರ ಆಧ್ಯಾತ್ಮಿಕ ಪ್ರೌಢತೆಗೆ ಸಾಕ್ಷ್ಯ. ಆಗಿಹೋದದ್ದನ್ನು ಮರೆತು ಅವರು ಒಂದಾಗಿ ಪುನಃ ಕಾರ್ಯಕ್ಕೆ ತೊಡಗಿದರು. ಜೊತೆ ಕ್ರೈಸ್ತನೊಂದಿಗೆ ಭಿನ್ನಾಭಿಪ್ರಾಯವಿದ್ದ ಯಾವನಿಗಾದರೂ ಎಂಥ ಅತ್ಯುತ್ತಮ ಮಾದರಿಯಿದು!

ಸಂಚಾರಿ ಮಾರ್ಕ

ಮಾರ್ಕನು ಮಾಡಿದ ವಿವಿಧ ಸಂಚಾರಗಳನ್ನು ನೀವು ಓದುವಾಗ ಅವನು ವಿಸ್ತಾರ ಪ್ರಯಾಣಗಳನ್ನು ಕೈಕೊಂಡಿದ್ದನೆಂದು ತಿಳಿದುಬರುತ್ತದೆ. ಅವನು ಯೆರೂಸಲೇಮಿನಿಂದ ಬಂದನು, ನಂತರ ಅಂತಿಯೋಕ್ಯಕ್ಕೆ ಸ್ಥಳಾಂತರಿಸಿದನು. ಅಲ್ಲಿಂದ ಹಡಗುಹತ್ತಿ ಸೈಪ್ರಸ್‌ ಮತ್ತು ಪೆರ್ಗಗಳಿಗೆ ತೆರಳಿದನು. ಅನಂತರ ರೋಮಿಗೆ ಹೊರಟನು. ಅಲ್ಲಿಂದ ಪೌಲನು ಅವನನ್ನು ಕೊಲೊಸ್ಸೆಗೆ ಕಳುಹಿಸಲು ಬಯಸಿದನು. ಮಾತ್ರವಲ್ಲ ಇನ್ನೂ ಹೆಚ್ಚಿನ ಸ್ಥಳಗಳಿಗೆ ಹೋದನು.

ಅಪೊಸ್ತಲ ಪೇತ್ರನು ತನ್ನ ಮೊದಲನೆಯ ಪತ್ರವನ್ನು ಬರೆದದ್ದು ಕ್ರಿ.ಶ. 62ರಿಂದ 64ರ ಸುಮಾರಿಗೆ. ಅವನು ಹೇಳಿದ್ದು: “ಬಾಬೆಲಿನಲ್ಲಿರುವ ಸಭೆಯು ನಿಮಗೆ ವಂದನೆಗಳನ್ನು ತಿಳಿಸುತ್ತದೆ; ನನ್ನ ಮಗನಾದ ಮಾರ್ಕನೂ ವಂದನೆಗಳನ್ನು ಕಳುಹಿಸುತ್ತಾನೆ.” (1 ಪೇತ್ರ 5:13) ಹೀಗೆ ವರ್ಷಗಳ ಹಿಂದೆ ತನ್ನ ತಾಯಿಯ ಮನೆಯಲ್ಲಿ ಕ್ರೈಸ್ತ ಕೂಟಗಳಿಗೆ ಹಾಜರಾಗಿದ್ದ ಅಪೊಸ್ತಲನ ಸಂಗಡ ಸೇವೆಮಾಡಲು ಮಾರ್ಕನು ಈಗ ಬಾಬೆಲಿಗೆ ಪ್ರಯಾಣಮಾಡಿದ್ದ.

ಕ್ರಿ.ಶ. 65ರ ಸುಮಾರಿಗೆ ಪೌಲನು ರೋಮಿನಲ್ಲಿ ಎರಡನೆ ಬಾರಿ ಸೆರೆವಾಸದಲ್ಲಿದ್ದಾಗ ತಿಮೊಥೆಯನನ್ನು ಎಫೆಸದಿಂದ ಬರುವಂತೆ ಕರೆದ ಸಮಯದಲ್ಲಿ, “ಮಾರ್ಕನನ್ನು ನಿನ್ನೊಂದಿಗೆ ಕರೆದುಕೊಂಡು ಬಾ” ಎಂದು ಹೇಳಿದನು. (2 ತಿಮೊ. 4:11) ಹಾಗಾದರೆ ಮಾರ್ಕನು ಆಗ ಎಫೆಸದಲ್ಲಿದ್ದನು. ತಿಮೊಥೆಯನ ಸಂಗಡ ರೋಮಿಗೆ ಬರುವಂತೆ ಪೌಲನು ಕೊಟ್ಟ ಆದೇಶಕ್ಕೆ ಮಾರ್ಕನ ಪ್ರತಿಕ್ರಿಯೆಯನ್ನು ನಾವು ಸಂದೇಹಿಸಬಲ್ಲೆವೊ? ಇಲ್ಲ. ಆ ಕಾಲದಲ್ಲಿ ಪ್ರಯಾಣವು ಸುಲಭಸಾಧ್ಯವಿರದಿದ್ದರೂ ಮಾರ್ಕನು ಸಿದ್ಧಮನಸ್ಸಿನಿಂದ ಆ ಪ್ರಯಾಣಗಳನ್ನು ಮಾಡಿದನು.

ಇನ್ನೊಂದು ಮಹಾ ಸುಯೋಗ

ಮಾರ್ಕನು ಆನಂದಿಸಿದ ಇನ್ನೊಂದು ಮಹಾ ಸುಯೋಗ ಯಾವುದೆಂದರೆ ಸುವಾರ್ತೆಗಳಲ್ಲೊಂದನ್ನು ಬರೆಯಲು ಯೆಹೋವನಿಂದ ಪ್ರೇರಿಸಲ್ಪಟ್ಟದ್ದೇ. ಎರಡನೇ ಸುವಾರ್ತೆಯು ಅದನ್ನು ಬರೆದವನ ಹೆಸರನ್ನು ತಿಳಿಸುವುದಿಲ್ಲವಾದರೂ ಅತ್ಯಾರಂಭದ ಸಾಂಪ್ರದಾಯಿಕ ಕೃತಿಗಳು ಮಾರ್ಕನೇ ಅದರ ಕರ್ತೃವೆಂದೂ ಹಾಗೂ ಅವನಿಗೆ ಆ ಮಾಹಿತಿ ಪೇತ್ರನಿಂದ ಸಿಕ್ಕಿತೆಂದೂ ಅಭಿಪ್ರಯಿಸುತ್ತವೆ. ವಾಸ್ತವದಲ್ಲಿ ಮಾರ್ಕನು ದಾಖಲಿಸಿರುವ ಹೆಚ್ಚುಕಡಿಮೆ ಎಲ್ಲಾ ವಿಷಯಗಳನ್ನು ಪೇತ್ರನು ಕಣ್ಣಾರೆ ಕಂಡಿದ್ದನು.

ಮಾರ್ಕನು ತನ್ನ ಸುವಾರ್ತೆಯನ್ನು ವಿದೇಶಿ ವಾಚಕರಿಗಾಗಿ ಬರೆದನೆಂದು ವಿಶ್ಲೇಷಕರು ನಂಬುತ್ತಾರೆ. ಅವನು ಯೆಹೂದಿ ಪದ್ಧತಿಗಳ ಸಹಾಯಕರ ಮಾಹಿತಿಯನ್ನು ಒದಗಿಸಿದ್ದಾನೆ. (ಮಾರ್ಕ 7:3; 14:12; 15:42) ಯೆಹೂದ್ಯೇತರ ಓದುಗರಿಗೆ ಅರ್ಥವಾಗದೇ ಇರಬಹುದಾಗಿದ್ದ ಆರಮೇಯಿಕ್‌ ಪದಗಳನ್ನು ಮಾರ್ಕನು ಭಾಷಾಂತರಮಾಡಿ ತಿಳಿಸುತ್ತಾನೆ. (ಮಾರ್ಕ 3:17; 5:41; 7:11, 34; 15:22, 34) ಅವನು ಅನೇಕ ಲ್ಯಾಟಿನ್‌ ಪದಗಳನ್ನು ಬಳಸುತ್ತಾನೆ ಹಾಗೂ ಲ್ಯಾಟಿನ್‌ ಪದಗಳನ್ನು ಉಪಯೋಗಿಸುವ ಮೂಲಕ ಸಾಮಾನ್ಯ ಗ್ರೀಕ್‌ ಪದಗಳನ್ನು ಸಹ ವಿವರಿಸುತ್ತಾನೆ. ಇವೆಲ್ಲವು ಮಾರ್ಕನು ತನ್ನ ಸುವಾರ್ತೆಯನ್ನು ರೋಮಿನಲ್ಲಿದ್ದಾಗ ಬರೆದನೆಂಬ ದೀರ್ಘಾವಧಿಯ ಸಾಂಪ್ರದಾಯಿಕ ಅಭಿಪ್ರಾಯದೊಂದಿಗೆ ಹೊಂದಿಕೆಯಲ್ಲಿವೆಯೆಂಬುದು ವ್ಯಕ್ತ.

ಶುಶ್ರೂಷೆಯ ಕೆಲಸದಲ್ಲಿ ಅವನು ನನಗೆ ಉಪಯುಕ್ತನು’

ಮಾರ್ಕನು ರೋಮಿನಲ್ಲಿ ತನ್ನ ಸುವಾರ್ತೆಯನ್ನು ಬರೆದದ್ದು ಮಾತ್ರವಲ್ಲ, ಬೇರೆ ವಿಷಯಗಳನ್ನೂ ಮಾಡಿದ್ದನು. ಪೌಲನು ತಿಮೊಥೆಯನಿಗೆ ಏನಂದನೆಂಬುದನ್ನು ನೆನಪಿಸಿರಿ: “ಮಾರ್ಕನನ್ನು ನಿನ್ನೊಂದಿಗೆ ಕರೆದುಕೊಂಡು ಬಾ.” ಏಕೆ? “ಏಕೆಂದರೆ ಶುಶ್ರೂಷೆಯ ಕೆಲಸದಲ್ಲಿ ಅವನು ನನಗೆ ಉಪಯುಕ್ತನಾಗಿದ್ದಾನೆ.”—2 ತಿಮೊ. 4:11.

ಶಾಸ್ತ್ರಗ್ರಂಥದ ಕಾಲಾನುಕ್ರಮದಲ್ಲಿ ಕೊನೆಯದಾದ ಮಾರ್ಕನ ಕುರಿತಾದ ಈ ಮಾಹಿತಿಯು ಅವನ ಬಗ್ಗೆ ಹೆಚ್ಚನ್ನು ತಿಳಿಸುತ್ತದೆ. ಮಾರ್ಕನ ದೇವಪ್ರಭುತ್ವಾತ್ಮಕ ಕಾರ್ಯಕ್ರಮದಲ್ಲೆಲ್ಲೂ ಅವನು ಒಬ್ಬ ಅಪೊಸ್ತಲನಾಗಿ ಅಥವಾ ಮುಖಂಡನಾಗಿ ಇಲ್ಲವೆ ಪ್ರವಾದಿಯಾಗಿ ಕಂಡುಬರುವುದಿಲ್ಲ. ಅವನೊಬ್ಬ ಶುಶ್ರೂಷಕನಾಗಿದ್ದನು ಅಂದರೆ ಇತರರ ಪರಿಚಾರಕನಾಗಿ ಸೇವೆಮಾಡಿದನು. ಅಲ್ಲದೆ ಪೌಲನ ಮರಣಕ್ಕೆ ಸ್ವಲ್ಪ ಮುಂಚಿತವಾದ ಈ ಅವಧಿಯಲ್ಲಿ ಮಾರ್ಕನ ಸಹಾಯದಿಂದ ಅಪೊಸ್ತಲನು ನಿಶ್ಚಯವಾಗಿಯೂ ಪ್ರಯೋಜನ ಪಡೆಯಸಾಧ್ಯವಿತ್ತು.

ಒಟ್ಟಾರೆ ಮಾರ್ಕನ ಕುರಿತು ನಾವು ಹೊಂದಿರುವ ಈ ಚಿಕ್ಕ ಚಿಕ್ಕ ಮಾಹಿತಿಯು ಲೋಕವ್ಯಾಪ್ತ ಕ್ಷೇತ್ರದ ವಿವಿಧ ಭಾಗಗಳಲ್ಲಿ ಸುವಾರ್ತೆಯನ್ನು ಪ್ರವರ್ಧಿಸಿದ ಒಬ್ಬ ಉತ್ಸಾಹಿ ವ್ಯಕ್ತಿಯ ಭಾವಚಿತ್ರವನ್ನು ಉತ್ಪಾದಿಸುತ್ತದೆ. ಇತರರ ಸೇವೆಯನ್ನು ಸಂತೋಷದಿಂದ ಮಾಡಿದ ವ್ಯಕ್ತಿಯಾತನು. ತನ್ನ ಕೆಲಸವನ್ನು ಎಂದೂ ಬಿಟ್ಟುಕೊಡದ ಕಾರಣ ಎಂಥ ಪ್ರತಿಫಲದಾಯಕ ಸುಯೋಗಗಳಲ್ಲಿ ಮಾರ್ಕನು ಆನಂದಿಸಿದನು!

ಮಾರ್ಕನಂತೆ ಇಂದು ದೇವರ ಸೇವಕರಾಗಿರುವ ನಾವು ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಅದೇ ದೃಢನಿಶ್ಚಯವನ್ನು ತೋರಿಸುತ್ತೇವೆ. ಮಾರ್ಕನು ಮಾಡಿದ ಹಾಗೆಯೇ ನಮ್ಮಲ್ಲಿ ಕೆಲವರು ಇತರ ಸ್ಥಳಗಳಿಗೆ, ಹೊರದೇಶಗಳಿಗೂ ಹೋಗಿ ಅಲ್ಲಿ ಸುವಾರ್ತೆಯನ್ನು ಸಾರಲು ಶಕ್ತರಾಗಿದ್ದೇವೆ. ನಮ್ಮಲ್ಲಿ ಹೆಚ್ಚಿನವರಿಗೆ ಹಾಗೆ ಮಾಡಲು ಸಾಧ್ಯವಿಲ್ಲದಿರಬಹುದಾದರೂ ನಾವೆಲ್ಲರೂ ಮಾರ್ಕನನ್ನು ಇನ್ನೊಂದು ಪ್ರಾಮುಖ್ಯ ರೀತಿಯಲ್ಲಿ ಅನುಕರಿಸಬಲ್ಲೆವು. ಅವನು ತನ್ನ ಕ್ರೈಸ್ತ ಸಹೋದರರ ಸೇವೆಗಾಗಿ ಶಕ್ತಿಮೀರಿ ಪ್ರಯತ್ನಿಸಿದಂತೆಯೇ ನಾವು ಸಹ ನಮ್ಮ ಜೊತೆವಿಶ್ವಾಸಿಗಳು ದೇವರ ಸೇವೆಯನ್ನು ಮಾಡುವಂತೆ ವ್ಯಾವಹಾರಿಕ ರೀತಿಗಳಲ್ಲಿ ನೆರವಾಗಲು ಸಿದ್ಧಮನಸ್ಸುಳ್ಳವರಾಗಿದ್ದೇವೆ. ನಾವಿದನ್ನು ಮಾಡುತ್ತಾ ಇರುವಾಗ ಯೆಹೋವನ ಆಶೀರ್ವಾದವನ್ನು ಪಡೆಯುತ್ತಾ ಇರುವೆವು ಎಂಬ ಖಾತ್ರಿ ನಮಗಿರಬಲ್ಲದು.—ಜ್ಞಾನೋ. 3:27; 10:22; ಗಲಾ. 6:2.

[ಪಾದಟಿಪ್ಪಣಿ]

^ ಪ್ಯಾರ. 5 ಮಾರ್ಕನ ಸಮಕಾಲೀನರಲ್ಲಿ ಹೀಬ್ರು ಅಥವಾ ವಿದೇಶಿ ಮೂಲದ ಹೆಸರನ್ನು ಉಪನಾಮವಾಗಿ ಇಟ್ಟುಕೊಳ್ಳುವುದು ಅಥವಾ ಸ್ವೀಕರಿಸುವುದು ಸರ್ವಸಾಮಾನ್ಯ. ಮಾರ್ಕನ ಯೆಹೂದಿ ಹೆಸರಾದ ಯೋಹಾನಾನ್‌ ಕನ್ನಡದಲ್ಲಿ ಯೋಹಾನ ಎಂದಾಗಿದೆ. ಅವನ ಲ್ಯಾಟಿನ್‌ ಉಪನಾಮ ಮಾರ್ಕಸ್‌ ಕನ್ನಡದಲ್ಲಿ ಮಾರ್ಕ.—ಅ. ಕಾ. 12:25.

[ಪುಟ 8, 9ರಲ್ಲಿರುವ ಭೂಪಟ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಮಾರ್ಕನು ಸಂದರ್ಶಿಸಿದ ಕೆಲವು ಪಟ್ಟಣಗಳು

ರೋಮ್‌

ಎಫೆಸ

ಕೊಲೊಸ್ಸೆ

ಪೆರ್ಗ

ಅಂತಿಯೋಕ್ಯ (ಸಿರಿಯ)

ಸೈಪ್ರಸ್‌

ಮೆಡಿಟರೇನಿಯನ್‌ ಸಮುದ್ರ

ಯೆರೂಸಲೇಮ್‌

ಬಾಬೆಲ್‌