ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನೇ ಪ್ರಭಾವಿಸಿದ ಮಹಾ ವ್ಯಕ್ತಿ

ಜಗತ್ತನ್ನೇ ಪ್ರಭಾವಿಸಿದ ಮಹಾ ವ್ಯಕ್ತಿ

ಜಗತ್ತನ್ನೇ ಪ್ರಭಾವಿಸಿದ ಮಹಾ ವ್ಯಕ್ತಿ

ಭೂಮಿಯ ಮೇಲೆ ಲಕ್ಷಾಂತರ ಮಂದಿ ಹುಟ್ಟಿ ಮರೆಯಾಗಿದ್ದಾರೆ. ಹೆಚ್ಚಿನವರು ಮರಳಿನ ಮೇಲಿನ ಹೆಜ್ಜೆಗುರುತಿನಂತೆ ಕಣ್ಮರೆಯಾಗಿದ್ದಾರೆ. ಕೆಲವರಾದರೋ ಹೊಸ ಇತಿಹಾಸವನ್ನೇ ಸೃಷ್ಟಿಸಿ ನಮ್ಮ ದೈನಂದಿನ ಬದುಕನ್ನು ಸದಾ ಪ್ರಭಾವಿಸುವಂಥ ಸಾಧನೆಗಳನ್ನು ಮಾಡಿದ್ದಾರೆ.

ಬೆಳಗ್ಗಿನ ಸಮಯ. ಈಗಷ್ಟೇ ಎದ್ದಿದ್ದೀರಿ. ಕೆಲಸಕ್ಕೆ ಹೋಗಬೇಕು. ರೆಡಿಯಾಗುವಾಗ ಲೈಟ್‌ ಹಾಕುತ್ತೀರಿ, ಬಸ್ಸಿನಲ್ಲಿ ಓದಲು ಒಂದು ಪುಸ್ತಕ ಕೈಗೆತ್ತಿಕೊಳ್ಳುತ್ತೀರಿ, ಹಾಗೇ ಡಾಕ್ಟರ್‌ ಕೊಟ್ಟ ಆ್ಯಂಟಿಬಯಾಟಿಕ್‌ ಅನ್ನೂ ತೆಗೆದುಕೊಳ್ಳುತ್ತೀರಿ. ಹೀಗೆ ದಿನ ಆರಂಭವಾದ ಸ್ವಲ್ಪ ಹೊತ್ತಲ್ಲೇ, ಕೆಲವು ಪ್ರಖ್ಯಾತ ವ್ಯಕ್ತಿಗಳು ಹಿಂದೆ ಮಾಡಿದ ಸಾಧನೆಗಳಿಂದ ನೀವು ಪ್ರಯೋಜನ ಪಡೆಯುತ್ತೀರಿ. ಅವರು ಯಾರೆಂದು ನಿಮಗೆ ಗೊತ್ತೇ?

ಮೈಕಲ್‌ ಫ್ಯಾರಡೆ: 1791ರಲ್ಲಿ ಹುಟ್ಟಿದ ಈ ಭೌತವಿಜ್ಞಾನಿಗೆ ವಿದ್ಯುತ್‌ಚಾಲಕ (ಎಲೆಕ್ಟ್ರಿಕ್‌ ಮೋಟರ್‌) ಮತ್ತು ಡೈನಮೋ ಕಂಡುಹಿಡಿದ ಕೀರ್ತಿ ಸಲ್ಲುತ್ತದೆ. ಇವನ ಆವಿಷ್ಕಾರಗಳಿಂದಾಗಿ ಜನರು ವಿದ್ಯುತ್ತನ್ನು ನಾನಾ ಉದ್ದೇಶಗಳಿಗೆ ಬಳಸಲು ಸಾಧ್ಯವಾಗಿದೆ.

ಟ್ಸೈಲುನ್‌: ಚೀನಾದಲ್ಲಿ ರಾಜನ ಆಸ್ಥಾನದಲ್ಲಿ ಒಬ್ಬ ಅಧಿಕಾರಿಯಾಗಿದ್ದ ಈತನು ಕ್ರಿ.ಪೂ. 105ರಷ್ಟಕ್ಕೆ ಕಾಗದ ಉತ್ಪಾದನಾ ವಿಧಾನವೊಂದನ್ನು ಕಂಡುಹಿಡಿದನು. ಇದು ಭಾರಿ ಪ್ರಮಾಣದ ಕಾಗದ ಉತ್ಪಾದನೆಗೆ ದಾರಿಮಾಡಿತು.

ಯೋಹಾನ್ಸ್‌ ಗುಟನ್‌ಬರ್ಗ್‌: ಜರ್ಮನಿಯ ಈ ಸಂಶೋಧಕನು ಚಲಿಸುವ ಅಚ್ಚುಮೊಳೆಗಳಿರುವ ಮೊದಲ ಮುದ್ರಣ ಯಂತ್ರವನ್ನು ಸುಮಾರು 1450ರಲ್ಲಿ ವಿನ್ಯಾಸಿಸಿದನು. ಈ ಯಂತ್ರದಿಂದಾಗಿ ಮುದ್ರಣ ಬೆಲೆ ಅಗ್ಗವಾಯಿತು. ಹೀಗೆ ವೈವಿಧ್ಯಮಯ ಮಾಹಿತಿಗಳು ಜಗತ್ತಿನ ಮೂಲೆಮೂಲೆಗೂ ತಲಪಲು ಸಾಧ್ಯವಾಯಿತು.

ಅಲೆಗ್ಸಾಂಡರ್‌ ಫ್ಲೆಮಿಂಗ್‌: ಸ್ಕಾಟ್ಲೆಂಡಿನ ಈ ಸಂಶೋಧಕ 1928ರಲ್ಲಿ ಒಂದು ಪ್ರತಿಜೈವಿಕವನ್ನು (ಆ್ಯಂಟಿಬಯಾಟಿಕ್‌) ಕಂಡುಹಿಡಿದರು; ಅದಕ್ಕೆ ಪೆನ್ಸಿಲಿನ್‌ ಎಂದು ಹೆಸರಿಟ್ಟರು. ಬ್ಯಾಕ್ಟೀರಿಯಗಳಿಂದ ಬರುವ ಸೋಂಕು ರೋಗಗಳನ್ನು ಗುಣಪಡಿಸಲು ಇಂದು ಪ್ರತಿಜೈವಿಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಹೀಗೆ ಕೆಲವು ವ್ಯಕ್ತಿಗಳು ಮಾಡಿದ ಸಂಶೋಧನೆಗಳು ಮತ್ತು ಆವಿಷ್ಕಾರಗಳು ಕೋಟ್ಯಂತರ ಜನರಿಗೆ ಪ್ರಯೋಜನಗಳನ್ನು ಅಥವಾ ಉತ್ತಮ ಆರೋಗ್ಯವನ್ನು ಕೊಟ್ಟಿವೆ.

ಆದರೆ ಇವರೆಲ್ಲರಿಗಿಂತ ಒಬ್ಬ ವ್ಯಕ್ತಿ ಮಾತ್ರ ಭಿನ್ನನಾಗಿ ಎದ್ದುಕಾಣುತ್ತಾನೆ. ಅವನು ಯಾವುದೇ ವೈಜ್ಞಾನಿಕ ಸಂಶೋಧನೆಗಾಗಲಿ ವೈದ್ಯಕೀಯ ಆವಿಷ್ಕಾರಕ್ಕಾಗಲಿ ಪ್ರಸಿದ್ಧನಾದವನಲ್ಲ. ಬಡಕುಟುಂಬದಲ್ಲಿ ಹುಟ್ಟಿದ ಅವನು ಮರಣಪಟ್ಟು ಹೆಚ್ಚುಕಡಿಮೆ 2,000 ವರ್ಷಗಳೇ ಗತಿಸಿವೆಯಾದರೂ ಅಂದು ಅವನು ಸಾರಿದ ನಿರೀಕ್ಷೆ ಮತ್ತು ಸಾಂತ್ವನದ ಸಂದೇಶ ಇಂದಿಗೂ ಬಹಳ ಪ್ರಬಲವಾಗಿದೆ. ಅವನ ಸಂದೇಶವು ಜಗತ್ತಿನಾದ್ಯಂತ ಜನರನ್ನು ಎಷ್ಟು ಪ್ರಭಾವಿಸಿದೆ ಎಂದರೆ ಅವನು ಜಗತ್ತನ್ನೇ ಬದಲಾಯಿಸಿದ ಪುರುಷ ಎಂದು ಅನೇಕರು ಒಪ್ಪಿಕೊಳ್ಳುತ್ತಾರೆ.

ಆ ಪುರುಷ ಬೇರಾರೂ ಅಲ್ಲ, ಯೇಸು ಕ್ರಿಸ್ತನೇ. ಆತನು ಸಾರಿ ಹೇಳಿದ ಸಂದೇಶ ಏನಾಗಿತ್ತು? ಅದು ನಿಮ್ಮ ಜೀವನವನ್ನು ಹೇಗೆ ಪ್ರಭಾವಿಸಬಲ್ಲದು? (w10-E 04/01)