ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ದೇವರ ಕುರಿತು ಏನು ಕಲಿಸಿದನು?

ಯೇಸು ದೇವರ ಕುರಿತು ಏನು ಕಲಿಸಿದನು?

ಯೇಸು ದೇವರ ಕುರಿತು ಏನು ಕಲಿಸಿದನು?

“ತಂದೆಯ ಬಗ್ಗೆ ನಿಜವಾಗಿ ತಿಳಿದಿರುವ ಏಕೈಕ ವ್ಯಕ್ತಿ ಮಗನೇ. ಇತರರೂ ತನ್ನ ತಂದೆಯ ಬಗ್ಗೆ ತಿಳಿದುಕೊಳ್ಳಬೇಕೆಂದು ಮಗನು ಆತನ ಬಗ್ಗೆ ತಿಳಿಸಲು ಬಯಸುತ್ತಾನೆ.”—ಲೂಕ 10:22, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌.

ಮಾನವನಾಗಿ ಹುಟ್ಟುವ ಮುಂಚೆ ಸ್ವರ್ಗದಲ್ಲಿದ್ದ ದೇವರ ಜ್ಯೇಷ್ಠಪುತ್ರನಾದ ಯೇಸುವಿಗೆ ತನ್ನ ತಂದೆಯೊಂದಿಗೆ ಅಸಂಖ್ಯಾತ ಯುಗಗಳ ಆಪ್ತ ಒಡನಾಟವಿತ್ತು. (ಕೊಲೊಸ್ಸೆ 1:15) ಹೀಗೆ ಆತನು ತಂದೆಯಾದ ಯೆಹೋವ ದೇವರ ವಿಚಾರಗಳನ್ನು, ಭಾವನೆಗಳನ್ನು, ಕಾರ್ಯವಿಧಾನಗಳನ್ನು ತಿಳಿದುಕೊಂಡನು. ಈ ಜ್ಯೇಷ್ಠಪುತ್ರನು ಸಮಯಾನಂತರ ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟಿದಾಗ ತನ್ನ ತಂದೆಯ ಬಗ್ಗೆ ಸತ್ಯವನ್ನು ಜನರಿಗೆ ಕಲಿಸಲು ತುಂಬ ಉತ್ಸುಕನಾಗಿದ್ದನು. ಯೇಸು ಏನು ಕಲಿಸಿದನೋ ಅದಕ್ಕೆ ಗಮನಕೊಡುವಲ್ಲಿ ನಾವು ದೇವರ ಬಗ್ಗೆ ಹೆಚ್ಚನ್ನು ಕಲಿಯಬಲ್ಲೆವು.

ದೇವರ ಹೆಸರು. ಯೆಹೋವ ಎಂಬ ದೇವನಾಮಕ್ಕೆ ಯೇಸು ಬಹಳ ಮಹತ್ವ ಕೊಟ್ಟನು. ಈ ಪ್ರಿಯ ಪುತ್ರನಿಗೆ, ಜನರು ತನ್ನ ತಂದೆಯ ಹೆಸರನ್ನು ತಿಳಿಯಬೇಕು, ಬಳಸಬೇಕು ಎಂಬ ಅಪೇಕ್ಷೆಯಿತ್ತು. ಅಷ್ಟೇ ಅಲ್ಲ, ಯೇಸು ಎಂಬ ಹೆಸರಿನ ಅರ್ಥವೇ “ಯೆಹೋವನೇ ರಕ್ಷಣೆಯಾಗಿದ್ದಾನೆ” ಎಂದಾಗಿದೆ. ಆದ್ದರಿಂದಲೇ, ಯೇಸು ಸಾಯುವುದಕ್ಕೆ ಹಿಂದಿನ ರಾತ್ರಿ ಯೆಹೋವನಿಗೆ ಪ್ರಾರ್ಥನೆ ಮಾಡುವಾಗ “ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ” ಎಂದು ಹೇಳಶಕ್ತನಾಗಿದ್ದನು. (ಯೋಹಾನ 17:26) ದೇವರ ಹೆಸರನ್ನು ಯೇಸು ಬಳಸಿದ್ದರಲ್ಲಿ ಮತ್ತು ಜನರಿಗೆ ತಿಳಿಯಪಡಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ ಯೆಹೋವ ದೇವರ ಹೆಸರೂ ಅದರ ಅರ್ಥವೂ ಜನರಿಗೆ ತಿಳಿಸದಿದ್ದಲ್ಲಿ ಆತನ ಕುರಿತ ಸತ್ಯವನ್ನು ಅವರು ಅರ್ಥಮಾಡಿಕೊಳ್ಳುವುದಾದರೂ ಹೇಗೆ? *

ದೇವರು ತೋರಿಸಿದ ಮಹಾ ಪ್ರೀತಿ. ‘ತಂದೆಯೇ, ಲೋಕಾದಿಗಿಂತ ಮುಂಚೆ ನೀನು ನನ್ನನ್ನು ಪ್ರೀತಿಸಿದ್ದಿ’ ಎಂದು ಯೇಸು ಪ್ರಾರ್ಥನೆಯಲ್ಲಿ ಒಮ್ಮೆ ದೇವರಿಗೆ ಹೇಳಿದನು. (ಯೋಹಾನ 17:24) ಸ್ವರ್ಗದಲ್ಲಿ ದೇವರ ಪ್ರೀತಿಯನ್ನು ಪ್ರತ್ಯಕ್ಷವಾಗಿ ಸವಿದಿದ್ದ ಯೇಸು ಆ ಪ್ರೀತಿಯ ಸೊಗಸಾದ ನಾನಾ ಮುಖಗಳನ್ನು ಜನರಿಗೆ ಪ್ರಕಟಪಡಿಸಿದನು.

ಯೆಹೋವನ ಪ್ರೀತಿ ಅಪಾರ ಎಂದು ಯೇಸು ತೋರಿಸಿದನು. ಆತನಂದದ್ದು: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾನ 3:16) ಇಲ್ಲಿ “ಲೋಕ” ಎಂಬದಕ್ಕೆ ಯೇಸು ಬಳಸಿದ ಗ್ರೀಕ್‌ ಪದದ ಅರ್ಥ “ಭೂಮಿ” ಎಂದಲ್ಲ. ಅದು ಮಾನವರನ್ನು ಅಂದರೆ ಇಡೀ ಮಾನವಕುಲವನ್ನು ಸೂಚಿಸುತ್ತದೆ. ಯೆಹೋವನು ಮಾನವಕುಲವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಅವರಿಗಾಗಿ ತನ್ನ ಅಮೂಲ್ಯ ಪುತ್ರನನ್ನೇ ನೀಡಿದನು. ಈ ಮೂಲಕ ನಂಬಿಗಸ್ತ ಮಾನವರು ಪಾಪಮರಣದ ಬಿಗಿಮುಷ್ಟಿಯಿಂದ ಬಿಡುಗಡೆಹೊಂದಿ ಶಾಶ್ವತವಾಗಿ ಬದುಕುವ ಆಶೀರ್ವಾದವನ್ನು ಪಡೆದುಕೊಳ್ಳುವರು. ಆ ಮಹಾ ಪ್ರೀತಿಯ ಆಳವನ್ನು ನಮ್ಮಿಂದ ಅಳೆಯಸಾಧ್ಯವಿಲ್ಲ.—ರೋಮನ್ನರಿಗೆ 8:38, 39.

ಯೇಸು ಭರವಸೆ ಮೂಡಿಸುವ ಸತ್ಯವೊಂದನ್ನು ದೃಢೀಕರಿಸಿದನು. ಅದೇನೆಂದರೆ ತನ್ನ ಒಂದೊಂದು ಕುರಿಯನ್ನು ವಿಶಿಷ್ಟವೂ ಅಮೂಲ್ಯವೂ ಎಂದೆಣಿಸುವ ಕುರುಬನಂತೆ ಯೆಹೋವನು ತನ್ನ ಪ್ರತಿಯೊಬ್ಬ ಭಕ್ತನನ್ನೂ ಗಾಢವಾಗಿ ಪ್ರೀತಿಸುತ್ತಾನೆ. (ಮತ್ತಾಯ 18:12-14) ಯೆಹೋವನಿಗೆ ತಿಳಿಯದೆ ಒಂದೇ ಒಂದು ಗುಬ್ಬಿಯೂ ನೆಲಕ್ಕೆ ಬೀಳುವುದಿಲ್ಲ ಎಂದು ಯೇಸು ಹೇಳಿದನು. ಇದಕ್ಕೆ ಕೂಡಿಸಿ, “ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ” ಎಂದೂ ಹೇಳಿದನು. (ಮತ್ತಾಯ 10:29-31) ಒಂದು ಗೂಡಿನಿಂದ ಗುಬ್ಬಿಯೊಂದು ಕಾಣೆಯಾಗಿರುವುದನ್ನು ಗಮನಿಸಬಲ್ಲ ಯೆಹೋವನು ತನ್ನ ಪ್ರತಿಯೊಬ್ಬ ಭಕ್ತನನ್ನು ಹೆಚ್ಚು ನಿಗಾವಹಿಸಿ ಪರಾಮರಿಸುವನಲ್ಲವೇ? ನಮ್ಮ ತಲೆಯಲ್ಲಿರುವ ಕೂದಲ ಸಂಖ್ಯೆಯನ್ನೂ ತಿಳಿದಿರುವ ಯೆಹೋವನಿಗೆ ನಮ್ಮ ಅಗತ್ಯಗಳು, ಕಷ್ಟಗಳು, ಚಿಂತೆಗಳು ಹೀಗೆ ನಮ್ಮ ಬದುಕಿನ ಬಗ್ಗೆ ತಿಳಿಯದೆ ಇರುವ ಯಾವುದೇ ಸಂಗತಿ ಇದ್ದೀತೆ?

ಸ್ವರ್ಗೀಯ ತಂದೆ. ಹಿಂದಿನ ಲೇಖನದಲ್ಲಿ ನಾವು ನೋಡಿರುವಂತೆ ಯೇಸು ಕ್ರಿಸ್ತನು ದೇವರ ಏಕೈಕಜಾತ ಪುತ್ರ. ಆದ್ದರಿಂದಲೇ ಅವನು ಯೆಹೋವನೊಂದಿಗೆ ಮಾತಾಡುವಾಗ ಮತ್ತು ಆತನ ಬಗ್ಗೆ ಇತರರಿಗೆ ತಿಳಿಸುವಾಗ ಆತನನ್ನು ತನ್ನ “ತಂದೆ” ಎಂದನು. ಬೈಬಲಿನಲ್ಲಿ ಯೇಸುವಿನ ಮಾತುಗಳ ಕುರಿತ ಪ್ರಥಮ ದಾಖಲೆಯು ಅವನು ಕೇವಲ 12 ವರ್ಷದವನಾಗಿದ್ದಾಗ ಆಡಿದ ಮಾತುಗಳಾಗಿವೆ. ಅಲ್ಲಿ ಅವನು ಯೆಹೋವನನ್ನು “ನನ್ನ ತಂದೆ” ಎಂದು ಕರೆದಿರುವುದನ್ನು ನಾವು ಗಮನಿಸಬಹುದು. (ಲೂಕ 2:49) ಬೈಬಲಿನ ಸುವಾರ್ತಾ ವೃತ್ತಾಂತಗಳಲ್ಲಿ ಯೆಹೋವನಿಗೆ ಸೂಚಿಸಿ “ತಂದೆ” ಎಂಬ ಪದ ಸುಮಾರು 190 ಬಾರಿ ಕಂಡುಬರುತ್ತದೆ. ಯೇಸು ಯೆಹೋವನನ್ನು “ನಿಮ್ಮ ತಂದೆ,” “ನಮ್ಮ ತಂದೆ,” “ನನ್ನ ತಂದೆ” ಎಂದೂ ವಿಧವಿಧವಾಗಿ ವರ್ಣಿಸಿದ್ದಾನೆ. (ಮತ್ತಾಯ 5:16; 6:9; 7:21) ಯೇಸು ಯೆಹೋವನನ್ನು ಪದೇ ಪದೇ ಹೀಗೆ ಸಂಬೋಧಿಸುವ ಮೂಲಕ ಪಾಪಿಗಳಾದ ಅಪರಿಪೂರ್ಣ ಮಾನವರು ಆತನೊಂದಿಗೆ ಒಳ್ಳೆಯ, ವಿಶ್ವಾಸಾರ್ಹ ಸಂಬಂಧವನ್ನು ಹೊಂದಬಲ್ಲರೆಂದು ಕಲಿಸಿದನು.

ಕರುಣಾಳು ಮತ್ತು ಕ್ಷಮಾಶೀಲನು. ಅಪರಿಪೂರ್ಣ ಮಾನವರಿಗೆ ಯೆಹೋವನ ಅಪಾರ ಕರುಣೆ ಬೇಕೇ ಬೇಕು ಎಂದು ಯೇಸುವಿಗೆ ಗೊತ್ತಿತ್ತು. ಪೋಲಿಹೋದ ಮಗನ ದೃಷ್ಟಾಂತದಲ್ಲಿ ಯೇಸು ಯೆಹೋವನನ್ನು, ಪಶ್ಚಾತ್ತಾಪಪಟ್ಟು ಹಿಂದಿರುಗುವ ಮಗನನ್ನು ತನ್ನೆರಡೂ ಕೈಗಳನ್ನು ಚಾಚುತ್ತಾ ಸ್ವಾಗತಿಸುವ ಕರುಣಾಳು, ಕ್ಷಮಾಶೀಲ ತಂದೆಗೆ ಹೋಲಿಸುತ್ತಾನೆ. (ಲೂಕ 15:11-32) ಹೀಗೆ, ಯೆಹೋವನು ಒಬ್ಬ ಪಾಪಿಗೆ ಕರುಣೆತೋರಿಸಲು ಸಾಧ್ಯವಾಗುವಂತೆ ಅವನಲ್ಲಿ ಏನಾದರೂ ಮನಃಪರಿವರ್ತನೆ ಆಗಿದೆಯೋ ಎಂದು ನೋಡುತ್ತಿರುತ್ತಾನೆ ಎಂಬ ಭರವಸೆಯನ್ನು ಯೇಸುವಿನ ಮಾತುಗಳು ಕೊಡುತ್ತವೆ. ಪಶ್ಚಾತ್ತಾಪಪಡುವ ವ್ಯಕ್ತಿಯನ್ನು ಕ್ಷಮಿಸಲು ಯೆಹೋವನು ಸಿದ್ಧನಾಗಿದ್ದಾನೆ. “ಪಶ್ಚಾತ್ತಾಪದ ಅಗತ್ಯವಿಲ್ಲದ ತೊಂಬತ್ತೊಂಬತ್ತು ಮಂದಿ ನೀತಿವಂತರಿಗಿಂತ ಪಶ್ಚಾತ್ತಾಪಪಡುವ ಒಬ್ಬ ಪಾಪಿಯ ವಿಷಯದಲ್ಲಿ ಸ್ವರ್ಗದಲ್ಲಿ ಹೆಚ್ಚು ಸಂತೋಷ ಉಂಟಾಗುವುದೆಂದು ನಿಮಗೆ ಹೇಳುತ್ತೇನೆ” ಎಂದನು ಯೇಸು. (ಲೂಕ 15:7) ಇಂಥ ಕರುಣಾಳು ದೇವರನ್ನು ಯಾರು ತಾನೇ ಇಷ್ಟಪಡಲಿಕ್ಕಿಲ್ಲ ಹೇಳಿ?

ಪ್ರಾರ್ಥನೆಗಳನ್ನು ಕೇಳುವಾತನು. ಯೆಹೋವನು ‘ಪ್ರಾರ್ಥನೆಯನ್ನು ಕೇಳುವವನು’ ಎಂಬದನ್ನೂ ತನ್ನ ಭಕ್ತರ ಪ್ರಾರ್ಥನೆಗಳನ್ನು ಕೇಳಲು ಹರ್ಷಿಸುತ್ತಾನೆ ಎಂಬದನ್ನೂ ಯೇಸು ಸ್ವರ್ಗದಲ್ಲಿದ್ದಾಗ ಕಣ್ಣಾರೆ ಕಂಡಿದ್ದನು. (ಕೀರ್ತನೆ 65:2) ಆದ್ದರಿಂದಲೇ ಹೇಗೆ ಮತ್ತು ಯಾವುದಕ್ಕಾಗಿ ಪ್ರಾರ್ಥಿಸಬೇಕೆಂದು ತನ್ನ ಶುಶ್ರೂಷೆಯ ಸಮಯದಲ್ಲಿ ಆತನು ಕಲಿಸಿಕೊಟ್ಟನು. ‘ಹೇಳಿದ್ದನ್ನೇ ಪುನಃ ಪುನಃ ಹೇಳಬೇಡಿ’ ಎಂದೂ ಸಲಹೆಕೊಟ್ಟನು. ದೇವರ ಚಿತ್ತವು “ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ” ಎಂದು ಬೇಡುವಂತೆ ಉತ್ತೇಜನ ನೀಡಿದನು. ಅಷ್ಟೇ ಅಲ್ಲ ನಮ್ಮ ದಿನನಿತ್ಯದ ಆಹಾರಕ್ಕಾಗಿ, ಪಾಪಗಳ ಕ್ಷಮಾಪಣೆಗಾಗಿ, ಪ್ರಲೋಭನೆಗಳನ್ನು ಜಯಿಸಲಿಕ್ಕಾಗಿಯೂ ಪ್ರಾರ್ಥಿಸಬಹುದೆಂದು ಕಲಿಸಿದನು. (ಮತ್ತಾಯ 6:5-13) ತನ್ನ ಭಕ್ತರು ನಂಬಿಕೆಯಿಂದ ಮಾಡಿದ ವಿನಂತಿಗಳನ್ನು ಪೂರೈಸುವ ಮೂಲಕ ಯೆಹೋವನು ಅವರ ಪ್ರಾರ್ಥನೆಗಳಿಗೆ ಪ್ರೀತಿಪರ ತಂದೆಯಂತೆ ಪ್ರತಿಕ್ರಿಯಿಸುತ್ತಾನೆಂದು ಯೇಸು ಕಲಿಸಿದನು.—ಮತ್ತಾಯ 7:7-11.

ಯೇಸು ನಿಶ್ಚಯವಾಗಿಯೂ ಯೆಹೋವನ ಬಗ್ಗೆ, ಆತನ ಗುಣಗಳ ಬಗ್ಗೆ ಕಲಿಸಿದನು. ಆತನ ಬಗ್ಗೆ ಇನ್ನೊಂದು ವಿಷಯವನ್ನೂ ಕಲಿಸಲು ಉತ್ಸುಕನಾಗಿದ್ದನು. ಅದು, ಯೆಹೋವನು ಭೂಮಿ ಮತ್ತು ಮಾನವರ ಕಡೆಗಿರುವ ತನ್ನ ಉದ್ದೇಶವನ್ನು ಈಡೇರಿಸಲಿಕ್ಕಾಗಿ ಭೂವ್ಯಾಪಕ ಬದಲಾವಣೆಗಳನ್ನು ಮಾಡಲು ಬಳಸುವ ಮಾಧ್ಯಮದ ವಿಷಯವಾಗಿತ್ತು. ಯೇಸುವಿನ ಸಂದೇಶದ ಈ ಅಂಶವೇ ಆತನ ಸಾರುವಿಕೆಯ ಮುಖ್ಯ ವಿಷಯವೂ ಆಗಿತ್ತು. (w10-E 04/01)

[ಪಾದಟಿಪ್ಪಣಿ]

^ ಪ್ಯಾರ. 4 ಬೈಬಲಿನ ಮೂಲಪ್ರತಿಯಲ್ಲಿ ಯೆಹೋವ ಎಂಬ ಹೆಸರು ಸುಮಾರು 7,000 ಬಾರಿ ಕಂಡುಬರುತ್ತದೆ. ಆ ಹೆಸರಿಗೆ ಸಂಬಂಧಿಸಿದ ಅರ್ಥ “ನಾನು ಏನಾಗಿ ಪರಿಣಮಿಸಬೇಕೊ ಅದಾಗಿ ಪರಿಣಮಿಸುತ್ತೇನೆ” ಎಂದಾಗಿದೆ. (ವಿಮೋಚನಕಾಂಡ 3:14, NW) ತನ್ನ ಉದ್ದೇಶವನ್ನು ಪೂರೈಸಲು ತಾನು ಏನಾಗುವ ಅಗತ್ಯವಿದೆಯೆಂದು ದೇವರು ಎಣಿಸುತ್ತಾನೋ ಹಾಗೆಯೇ ಆಗಬಲ್ಲನು. ಹೀಗೆ ದೇವರು ಹೇಳಿದ್ದನ್ನು ಖಂಡಿತ ಮಾಡುವನು ಮತ್ತು ಆತನು ವಾಗ್ದಾನಿಸಿದ್ದೆಲ್ಲವೂ ನೆರವೇರುವುದು ಎಂಬದಕ್ಕೆ ಆತನ ಹೆಸರೇ ಖಾತ್ರಿ.