ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ದೇವರ ರಾಜ್ಯದ ಕುರಿತು ಏನು ಕಲಿಸಿದನು?

ಯೇಸು ದೇವರ ರಾಜ್ಯದ ಕುರಿತು ಏನು ಕಲಿಸಿದನು?

ಯೇಸು ದೇವರ ರಾಜ್ಯದ ಕುರಿತು ಏನು ಕಲಿಸಿದನು?

“[ಯೇಸು] ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರಿಂದ ಊರಿಗೂ ಹಳ್ಳಿಯಿಂದ ಹಳ್ಳಿಗೂ ಪ್ರಯಾಣಿಸಿದನು.”—ಲೂಕ 8:1.

ನಮಗೆ ತುಂಬ ಮಹತ್ವದ್ದಾಗಿರುವ, ತುಂಬ ಇಷ್ಟವಾಗುವ ವಿಷಯಗಳ ಬಗ್ಗೆ ಮಾತಾಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ಸ್ವತಃ ಯೇಸು ಹೇಳಿದಂತೆ, “ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತಾಡುತ್ತದೆ.” (ಮತ್ತಾಯ 12:34) ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ ಮಾತಾಡಿದ ಸಂಗತಿಗಳಿಂದ ದೇವರ ರಾಜ್ಯವೇ ಆತನಿಗೆ ತುಂಬ ಇಷ್ಟವಾದ ವಿಷಯವಾಗಿತ್ತೆಂದು ನಮಗೆ ಗೊತ್ತಾಗುತ್ತದೆ.

ದೇವರ ರಾಜ್ಯ ಅಂದರೇನು? ರಾಜ್ಯ ಎಂಬುದು ರಾಜನು ಆಳ್ವಿಕೆ ನಡೆಸುವ ಒಂದು ಸರ್ಕಾರ. ಹೀಗೆ, ದೇವರ ರಾಜ್ಯ ಅಂದರೆ ದೇವರು ಸ್ಥಾಪಿಸಿರುವ ಒಂದು ಸರ್ಕಾರ. ಅದರ ಕುರಿತು ಯೇಸು ತುಂಬ ಮಾತಾಡಿದನು. ಆತನ ಸಂದೇಶದ ಮುಖ್ಯವಿಷಯವೇ ಅದಾಗಿತ್ತು. ಬೈಬಲಿನಲ್ಲಿರುವ ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ 110ಕ್ಕಿಂತಲೂ ಹೆಚ್ಚು ಸಲ ಆ ರಾಜ್ಯದ ಬಗ್ಗೆ ಉಲ್ಲೇಖಗಳಿವೆ. ಆದರೆ ಯೇಸು ದೇವರ ರಾಜ್ಯದ ಬಗ್ಗೆ ಬರೀ ಮಾತುಗಳಲ್ಲಿ ಬೋಧಿಸಲಿಲ್ಲ. ತನ್ನ ಕ್ರಿಯೆಗಳ ಮೂಲಕವೂ ಅದರ ಬಗ್ಗೆ, ಅದೇನು ಮಾಡಲಿದೆ ಎಂಬುದರ ಬಗ್ಗೆ ಆತನು ಬಹಳಷ್ಟನ್ನು ಕಲಿಸಿದನು.

ರಾಜನು ಯಾರು? ದೇವರ ರಾಜ್ಯದ ರಾಜನನ್ನು ಚುನಾಯಿಸಿದ್ದು ಮಾನವ ಮತದಾರರಲ್ಲ. ಆತನನ್ನು ಆಯ್ಕೆಮಾಡಿದವನು ದೇವರೇ. ದೇವರು ಆಯ್ಕೆಮಾಡಿದ ಆ ರಾಜನು ತಾನೇ ಆಗಿದ್ದೇನೆಂದು ಯೇಸು ತನ್ನ ಬೋಧನೆಯಲ್ಲಿ ಪ್ರಕಟಪಡಿಸಿದನು.

ವಾಗ್ದತ್ತ ಮೆಸ್ಸೀಯನು ಶಾಶ್ವತವಾಗಿರುವ ಒಂದು ರಾಜ್ಯದಲ್ಲಿ ಆಳ್ವಿಕೆ ನಡೆಸುವನೆಂದು ಬೈಬಲ್‌ ಪ್ರವಾದನೆಗಳು ಮುಂತಿಳಿಸಿದ್ದ ಸಂಗತಿ ಯೇಸುವಿಗೆ ತಿಳಿದಿತ್ತು. (2 ಸಮುವೇಲ 7:12-14; ದಾನಿಯೇಲ 7:13, 14; ಮತ್ತಾಯ 26:63, 64) ಮುಂತಿಳಿಸಲಾದ ಮೆಸ್ಸೀಯನು ತಾನೇ ಎಂದು ಯೇಸು ಸಮಾರ್ಯ ಸ್ತ್ರೀಗೆ ನೇರವಾಗಿ ತಿಳಿಯಪಡಿಸಿದ್ದನ್ನು ನೆನಪಿಸಿಕೊಳ್ಳಿ. ಹೀಗೆ, ತಾನೇ ದೇವನೇಮಿತ ಅರಸನೆಂದು ಯೇಸು ಅಂಗೀಕರಿಸಿದನು. (ಯೋಹಾನ 4:25, 26) ಆದುದರಿಂದ ಆತನು ಸೂಕ್ತವಾಗಿಯೇ “ನನ್ನ ರಾಜ್ಯ” ಎಂಬ ಅಭಿವ್ಯಕ್ತಿಯನ್ನು ಹಲವಾರು ಸಲ ಬಳಸಿದನು.—ಯೋಹಾನ 18:36.

ಆ ರಾಜ್ಯದಲ್ಲಿ ತನ್ನೊಟ್ಟಿಗೆ ಇತರರೂ ಆಳುವರೆಂದು ಯೇಸು ಕಲಿಸಿದನು. (ಲೂಕ 22:28-30) ಆತನು ಈ ಜೊತೆ ಅರಸರನ್ನು ‘ಚಿಕ್ಕ ಹಿಂಡು’ ಎಂದು ಕರೆದನು. ಏಕೆಂದರೆ ಅವರ ಸಂಖ್ಯೆ ಚಿಕ್ಕದ್ದಾಗಿರಲಿತ್ತು. ಅವರ ಬಗ್ಗೆ ಆತನಂದದ್ದು: “ನಿಮಗೆ ರಾಜ್ಯವನ್ನು ಕೊಡುವುದಕ್ಕೆ ನಿಮ್ಮ ತಂದೆಯು ಒಪ್ಪಿಗೆ ಕೊಟ್ಟಿದ್ದಾನೆ.” (ಲೂಕ 12:32) ಕ್ರಿಸ್ತನೊಂದಿಗೆ ಆಳುವ ಸುಯೋಗ ಪಡೆಯುವವರ ಒಟ್ಟು ಸಂಖ್ಯೆ 1,44,000 ಎಂದು ಬೈಬಲಿನ ಕೊನೆ ಪುಸ್ತಕ ತೋರಿಸುತ್ತದೆ.—ಪ್ರಕಟನೆ 5:9, 10; 14:1.

ದೇವರ ರಾಜ್ಯ ಎಲ್ಲಿದೆ? “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ” ಎಂದನು ಯೇಸು ರೋಮನ್‌ ಅಧಿಕಾರಿ ಪೊಂತ್ಯ ಪಿಲಾತನಿಗೆ. (ಯೋಹಾನ 18:36) ಕ್ರಿಸ್ತನು ರಾಜನಾಗಿರುವ ದೇವರ ರಾಜ್ಯವು ಮಾನವ ಪ್ರತಿನಿಧಿಗಳ ಮೂಲಕ ಆಳ್ವಿಕೆ ನಡೆಸುವುದಿಲ್ಲ. ದೇವರ ಆ ರಾಜ್ಯವನ್ನು ಯೇಸು ಪದೇ ಪದೇ “ಸ್ವರ್ಗದ ರಾಜ್ಯ” ಎಂದು ಕರೆದನು. * (ಮತ್ತಾಯ 4:17; 5:3, 10, 19, 20) ಹಾಗಾದರೆ ದೇವರ ರಾಜ್ಯವು ಸ್ವರ್ಗದಿಂದ ಆಳುವ ಸರ್ಕಾರವಾಗಿದೆ.

ಭೂಮಿಯಲ್ಲಿನ ತನ್ನ ಕೆಲಸವನ್ನು ಪೂರೈಸಿದ ಬಳಿಕ ಸ್ವರ್ಗಕ್ಕೆ ಹಿಂದಿರುಗುವ ಪೂರ್ಣ ನಿರೀಕ್ಷೆ ಯೇಸುವಿಗಿತ್ತು. ಅಲ್ಲಿ ತಾನು ‘ಸ್ಥಳವನ್ನು ಸಿದ್ಧಪಡಿಸುವೆನು’ ಅಂದರೆ ತನ್ನ ಜೊತೆ ಅರಸರಿಗೆ ತನ್ನೊಂದಿಗೆ ಸೇರಲು ದಾರಿಮಾಡುವೆನೆಂದು ಆತನು ಹೇಳಿದನು.—ಯೋಹಾನ 14:2, 3.

ಆ ರಾಜ್ಯ ಏನನ್ನು ಸಾಧಿಸುತ್ತದೆ? ದೇವರಿಗೆ ಹೀಗೆ ಪ್ರಾರ್ಥಿಸುವಂತೆ ಯೇಸು ಕಲಿಸಿದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ಸ್ವರ್ಗದಲ್ಲಿ ಈಗಾಗಲೇ ದೇವರ ಚಿತ್ತ ನೆರವೇರುತ್ತಾ ಇದೆ. ಆದರೆ ಭೂಮಿಯಲ್ಲಿ ದೇವರ ಉದ್ದೇಶವನ್ನು ಪೂರೈಸುವ ಮಾಧ್ಯಮವು ಆತನ ರಾಜ್ಯವಾಗಿದೆ. ಈ ನಿಟ್ಟಿನಲ್ಲಿ ಆ ರಾಜ್ಯವು ಭೂಮಿಯ ಮೇಲೆ ಮಹತ್ತರ ಬದಲಾವಣೆಗಳನ್ನು ಮಾಡಲಿರುವುದು.

ಆ ರಾಜ್ಯವು ಭೂಮಿಯ ಮೇಲೆ ಏನು ಮಾಡುವುದು? ಕೆಡುಕರನ್ನು ತೆಗೆದುಹಾಕುವ ಮೂಲಕ ದೇವರ ರಾಜ್ಯವು ದುಷ್ಟತನವನ್ನು ಅಳಿಸಿಹಾಕುವುದು. (ಮತ್ತಾಯ 25:31-34, 46) ಆಗ ಎಲ್ಲ ವಿಧದ ಭ್ರಷ್ಟಾಚಾರ ಹಾಗೂ ದುಷ್ಟತನಕ್ಕೆ ಪೂರ್ಣ ವಿರಾಮ ಬೀಳುವುದು. ಅನಂತರ “ಸೌಮ್ಯಭಾವದವರು,” ನೀತಿವಂತರು, ಕರುಣೆಯುಳ್ಳವರು, “ಹೃದಯದಲ್ಲಿ ಶುದ್ಧರಾಗಿರುವವರು” ಮತ್ತು ಶಾಂತಿಶೀಲರು ಭೂಮಿಯಲ್ಲಿ ತುಂಬಿರುವರೆಂದು ಯೇಸು ಕಲಿಸಿದನು.—ಮತ್ತಾಯ 5:5-9.

ಈ ನಂಬಿಗಸ್ತರು ಮಲಿನವಾದ ಈ ಭೂಗ್ರಹದಲ್ಲಿ ಜೀವಿಸುವರೋ? ಖಂಡಿತ ಇಲ್ಲ! ದೇವರ ರಾಜ್ಯದಡಿ ಈ ಭೂಮಿ ಅದ್ಭುತವಾದ ಬದಲಾವಣೆಗಳಿಗೆ ಒಳಗಾಗಲಿದೆಯೆಂದು ಯೇಸು ವಾಗ್ದಾನಿಸಿದನು. ಆತನು ಸಾಯುವಾಗ ಪಕ್ಕದಲ್ಲಿ ಕಂಬಕ್ಕೆ ನೇತುಹಾಕಲಾಗಿದ್ದ ಒಬ್ಬ ವ್ಯಕ್ತಿ ಆತನಿಗೆ ಹೇಳಿದ್ದು: “ಯೇಸುವೇ, ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ಜ್ಞಾಪಿಸಿಕೋ.” ಅದಕ್ಕೆ ಉತ್ತರವಾಗಿ ಯೇಸು ಅವನಿಗೆ, “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ಈಹೊತ್ತೇ ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ” ಎಂದನು. (ಲೂಕ 23:42, 43) ಹೌದು ದೇವರ ರಾಜ್ಯವು ಈ ಇಡೀ ಭೂಮಿಯನ್ನು ಒಂದು ಪರದೈಸಾಗಿ ಅಂದರೆ ಏದೆನ್‌ ತೋಟದಂತೆ ಮಾಡಿ ಅಂದಗೊಳಿಸಲಿದೆ.

ಆ ರಾಜ್ಯವು ಮಾನವಕುಲಕ್ಕಾಗಿ ಇನ್ನೇನು ಮಾಡುವುದು? ದೇವರ ರಾಜ್ಯ ಏನು ಮಾಡಲಿದೆ ಎಂಬುದರ ಬಗ್ಗೆ ಯೇಸು ಬರೀ ವಾಗ್ದಾನಮಾಡಲಿಲ್ಲ. ಅದೇನು ಮಾಡಲಿದೆ ಎಂಬುದನ್ನು ಆತನು ತೋರಿಸಿಕೊಟ್ಟನು ಸಹ. ಅನೇಕರನ್ನು ಅದ್ಭುತಕರವಾಗಿ ವಾಸಿಮಾಡಿದನು. ಹೀಗೆ ಆತನು ಮುಂದೆ ತನ್ನ ರಾಜ್ಯದಾಳಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಏನನ್ನು ಮಾಡಲಿರುವನೊ ಅದನ್ನು ಆಗ ಚಿಕ್ಕ ಪ್ರಮಾಣದಲ್ಲಿ ಮಾಡಿತೋರಿಸಿದನು. ಯೇಸುವಿನ ಬಗ್ಗೆ ದೇವಪ್ರೇರಿತವಾದ ಸುವಾರ್ತಾ ವೃತ್ತಾಂತ ಹೀಗನ್ನುತ್ತದೆ: “ಅವನು ಗಲಿಲಾಯದಾದ್ಯಂತ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರ ಎಲ್ಲ ರೀತಿಯ ರೋಗಗಳನ್ನೂ ದೇಹದೌರ್ಬಲ್ಯಗಳನ್ನೂ ಗುಣಪಡಿಸುತ್ತಾ ಬಂದನು.”—ಮತ್ತಾಯ 4:23.

ಯೇಸು ನಾನಾ ರೀತಿಯ ವಾಸಿಮಾಡುವಿಕೆಗಳನ್ನು ನಡೆಸಿದನು. ಆತನು ‘ಹುಟ್ಟುಕುರುಡನಿಗೆ ದೃಷ್ಟಿ ಕೊಟ್ಟನು.’ (ಯೋಹಾನ 9:1-7, 32, 33) ಅಸಹ್ಯಕರವಾದ ಕುಷ್ಠ ರೋಗವಿದ್ದ ವ್ಯಕ್ತಿಯನ್ನು ಸೌಮ್ಯವಾಗಿ ಸ್ಪರ್ಶಿಸಿ ಗುಣಪಡಿಸಿದನು. (ಮಾರ್ಕ 1:40-42) “ಕಿವುಡನೂ ತೊದಲು ಮಾತಾಡುವವನೂ ಆಗಿದ್ದ ಒಬ್ಬ ಮನುಷ್ಯನನ್ನು” ಜನರು ಯೇಸುವಿನ ಬಳಿ ಕರೆತಂದಾಗ ಅವನನ್ನೂ ಗುಣಪಡಿಸಿದನು. ಹೀಗೆ “ಕಿವುಡರು ಕೇಳುವಂತೆಯೂ ಮೂಕರು ಮಾತಾಡುವಂತೆಯೂ” ತಾನು ಮಾಡಬಲ್ಲೆನೆಂದು ತೋರಿಸಿಕೊಟ್ಟನು.—ಮಾರ್ಕ 7:31-37.

ದೇವರ ನೇಮಿತ ರಾಜನಿಗೆ ಮರಣವನ್ನೂ ಜಯಿಸುವ ಶಕ್ತಿಯಿತ್ತು. ಬೈಬಲಿನಲ್ಲಿ ದಾಖಲಾಗಿರುವ ಮೂರು ಸಂದರ್ಭಗಳಲ್ಲಿ ಆತನು ಸತ್ತವರನ್ನು ಬದುಕಿಸಿದನು. ವಿಧವೆಯೊಬ್ಬಳ ಏಕೈಕ ಪುತ್ರ, 12 ವರ್ಷದ ಹುಡುಗಿ ಮತ್ತು ತನ್ನ ಪ್ರಿಯ ಮಿತ್ರನಾದ ಲಾಜರನನ್ನು ಯೇಸು ಪುನರುತ್ಥಾನಗೊಳಿಸಿದನು.—ಲೂಕ 7:11-15; 8:41-55; ಯೋಹಾನ 11:38-44.

ದೇವರ ರಾಜ್ಯದ ಪ್ರಜೆಗಳ ಮುಂದಿರುವ ಭವ್ಯ ಭವಿಷ್ಯತ್ತನ್ನು ವರ್ಣಿಸುತ್ತಾ ಯೇಸು ಅಪೊಸ್ತಲ ಯೋಹಾನನ ಮೂಲಕ ಮುಂತಿಳಿಸಿದ್ದು: “ಇಗೋ, ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು. ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.” (ಪ್ರಕಟನೆ 1:1; 21:3, 4) ದುಃಖದ ಕಣ್ಣೀರು, ನೋವು, ಅಷ್ಟೇಕೆ ಮರಣವೂ ಇಲ್ಲದ ಲೋಕ ಹೇಗಿರುವುದೆಂದು ಸ್ವಲ್ಪ ಊಹಿಸಿಕೊಳ್ಳಿ. ಆಗ, ದೇವರ ಚಿತ್ತವು ಸ್ವರ್ಗದಲ್ಲಿ ನೆರವೇರುವಂತೆ ಭೂಮಿ ಮೇಲೆ ನೆರವೇರಲಿ ಎಂಬ ಪ್ರಾರ್ಥನೆ ಪೂರ್ಣವಾಗಿ ಈಡೇರುವುದು.

ದೇವರ ರಾಜ್ಯ ಯಾವಾಗ ಬರುವುದು? ರಾಜನಾಗಿ ತಾನು ಆಳಲಾರಂಭಿಸುವ ಕಾಲದಲ್ಲೇ ಒಂದು ವಿಶಿಷ್ಟ ಕಾಲಾವಧಿ ಆರಂಭವಾಗುವುದೆಂದು ಯೇಸು ಹೇಳಿದನು. ಈ ಕಾಲಾವಧಿಯನ್ನು ತನ್ನ “ಸಾನ್ನಿಧ್ಯ” ಎಂದು ಕರೆದನು. ರಾಜ್ಯಾಧಿಕಾರದೊಂದಿಗಿನ ತನ್ನ ಸಾನ್ನಿಧ್ಯ ಯಾವಾಗ ಆರಂಭವಾಗುವುದೆಂಬದರ ಸೂಚನೆಯಾಗಿ ಯೇಸು ಒಂದು ವಿವರವಾದ ಪ್ರವಾದನೆಯನ್ನು ಕೊಟ್ಟನು. ಆ ಅವಧಿಯಲ್ಲಿ ಭೂಮ್ಯಾದ್ಯಂತ ಯುದ್ಧ, ಕ್ಷಾಮ, ಭೂಕಂಪ, ಅಂಟುರೋಗ, ಅನ್ಯಾಯ ಮತ್ತು ಇತರ ಸಮಸ್ಯೆಗಳಿರುವವು ಎಂದು ಯೇಸು ಮುಂತಿಳಿಸಿದ್ದನು. (ಮತ್ತಾಯ 24:3, 7-12; ಲೂಕ 21:10, 11) ಇವು, ಮತ್ತು ಯೇಸು ಮುಂತಿಳಿಸಿದ ಇನ್ನೂ ಅನೇಕ ಸಂಭವಗಳು ವಿಶೇಷವಾಗಿ 1914ರಿಂದ ತೋರಿಬರುತ್ತಿವೆ. ಆ ವರ್ಷದಲ್ಲೇ Iನೇ ಲೋಕ ಯುದ್ಧವು ಆರಂಭವಾಯಿತು. ಯೇಸು ಈಗ ಒಬ್ಬ ಅರಸನಾಗಿ ಆಳುತ್ತಿದ್ದಾನೆ ಎಂಬುದು ನಿಸ್ಸಂಶಯ. ದೇವರು ತನ್ನ ರಾಜ್ಯದ ಮೂಲಕ ಭೂಮಿಯ ಮೇಲೆ ತನ್ನ ಚಿತ್ತವನ್ನು ನೆರವೇರಿಸುವ ಕಾಲ ಸನ್ನಿಹಿತವಾಗಿದೆ. *

ದೇವರ ರಾಜ್ಯದ ಬರೋಣವು ವೈಯಕ್ತಿಕವಾಗಿ ನಿಮಗೆ ಯಾವ ಆಶೀರ್ವಾದಗಳನ್ನು ತರಲಿದೆ? ಇದು ನೀವು ಯೇಸುವಿನ ಸಂದೇಶಕ್ಕೆ ಹೇಗೆ ಪ್ರತಿಕ್ರಿಯಿಸುವಿರಿ ಎಂಬುದರ ಮೇಲೆ ಅವಲಂಬಿಸಿದೆ. (w10-E 04/01)

[ಪಾದಟಿಪ್ಪಣಿಗಳು]

^ ಪ್ಯಾರ. 8 “ಸ್ವರ್ಗದ ರಾಜ್ಯ” ಎಂಬ ಅಭಿವ್ಯಕ್ತಿಯು ಮತ್ತಾಯನ ಸುವಾರ್ತಾ ಪುಸ್ತಕದಲ್ಲಿ 30 ಬಾರಿ ಇದೆ.

^ ಪ್ಯಾರ. 17 ದೇವರ ರಾಜ್ಯವು ನಿಕಟವಿದೆಯೆಂದು ನಮಗೆ ತಿಳಿದಿರುವುದು ಹೇಗೆಂಬ ಸವಿವರ ಚರ್ಚೆಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ “ನಾವು ‘ಕಡೇ ದಿವಸಗಳಲ್ಲಿ’ ಜೀವಿಸುತ್ತಿದ್ದೇವೊ?” ಎಂಬ ಅಧ್ಯಾಯ 9 ನೋಡಿ. ಈ ಪುಸ್ತಕ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.