ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಕ್ರಿಸ್ತನ ಸಂದೇಶ ನಿಮಗೆ ಪ್ರಾಮುಖ್ಯವೇಕೆ?

ಯೇಸು ಕ್ರಿಸ್ತನ ಸಂದೇಶ ನಿಮಗೆ ಪ್ರಾಮುಖ್ಯವೇಕೆ?

ಯೇಸು ಕ್ರಿಸ್ತನ ಸಂದೇಶ ನಿಮಗೆ ಪ್ರಾಮುಖ್ಯವೇಕೆ?

“ನಾನಾದರೋ [ಅವರು] ಜೀವವನ್ನು ಪಡೆಯುವಂತೆ ಮತ್ತು ಬಹುಕಾಲ ಬದುಕುವಂತೆ ಬಂದಿದ್ದೇನೆ.” —ಯೋಹಾನ 10:10.

ಯೇಸು ಕ್ರಿಸ್ತನು ಭೂಮಿಗೆ ಬಂದದ್ದು ಬೇರೆಯವರಿಗೆ ಕೊಡಲಿಕ್ಕೆ, ತಕ್ಕೊಳ್ಳಲು ಅಲ್ಲ. ಆತನು ತನ್ನ ಶುಶ್ರೂಷೆಯ ಮೂಲಕ ಮಾನವಕುಲಕ್ಕೆ ಬೆಲೆಕಟ್ಟಲಾಗದ ಉಡುಗೊರೆಯನ್ನು ಕೊಟ್ಟನು. ಅದೇನು? ದೇವರ ಮತ್ತು ಆತನ ಉದ್ದೇಶದ ಕುರಿತ ಸತ್ಯವನ್ನು ಪ್ರಕಟಿಸಿದ ಸಂದೇಶವೇ ಅದು. ಆ ಸಂದೇಶವನ್ನು ಸ್ವೀಕರಿಸುವವರು ಇಂದು ಅತ್ಯುತ್ತಮ ಜೀವನವನ್ನು ನಡೆಸಸಾಧ್ಯ. ಈ ಮಾತಿಗೆ ಲಕ್ಷಾಂತರ ನಿಜ ಕ್ರೈಸ್ತರು ಸಾಕ್ಷ್ಯವಾಗಿದ್ದಾರೆ. * ಯೇಸು ಕೊಟ್ಟಿರುವ ಉಡುಗೊರೆಗಳಲ್ಲಿ ಅತಿ ಅಮೂಲ್ಯವಾದದ್ದು ಆತನು ತನ್ನ ಪರಿಪೂರ್ಣ ಜೀವವನ್ನು ನಮಗಾಗಿ ಕೊಟ್ಟದ್ದೇ. ಇದು ಆತನು ಸಾರಿದ ಸಂದೇಶದ ಪ್ರಧಾನ ಅಂಶವೂ ಆಗಿತ್ತು. ಆತನ ಈ ಅಮೂಲ್ಯ ಉಡುಗೊರೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ನಮ್ಮ ಅನಂತ ಹಿತಕ್ಷೇಮವು ಹೊಂದಿಕೊಂಡಿದೆ.

ದೇವರು ಮತ್ತು ಕ್ರಿಸ್ತ ಏನು ಕೊಟ್ಟರು? ವಿರೋಧಿಗಳ ಕೈಯಲ್ಲಿ ತಾನು ಯಾತನಾಮಯ ಮರಣಕ್ಕೀಡಾಗಲಿದ್ದೇನೆ ಎಂದು ಯೇಸುವಿಗೆ ತಿಳಿದಿತ್ತು. (ಮತ್ತಾಯ 20:17-19) ಹಾಗಿದ್ದರೂ ಯೋಹಾನ 3:16ರಲ್ಲಿ ಯೇಸು ಅಂದದ್ದು: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” ಯೇಸು ತಾನು ‘ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೆ ಬಂದೆನು’ ಎಂದೂ ಹೇಳಿದನು. (ಮತ್ತಾಯ 20:28) ತನ್ನ ಜೀವವನ್ನು ತೆಗೆಯಲಾಗುವುದು ಎಂದು ಹೇಳದೆ ಕೊಡಲಾಗುವುದು ಎಂದು ಯೇಸು ಹೇಳಿದ್ದೇಕೆ?

ದೇವರಿಗೆ ಮಾನವರ ಮೇಲೆ ಅಪಾರ ಪ್ರೀತಿಯಿದೆ. ಆದ್ದರಿಂದ ಅವರನ್ನು ಬಾಧ್ಯತೆಯಾಗಿ ಪಡೆದ ಪಾಪ ಮತ್ತು ಅದರಿಂದಾಗಿ ಬಂದ ಅಪರಿಪೂರ್ಣತೆ ಹಾಗೂ ಮರಣದಿಂದ ವಿಮುಕ್ತಗೊಳಿಸಲು ಏರ್ಪಾಡುಮಾಡಿದನು. ಹೇಗೆ? ತನ್ನ ಒಬ್ಬನೇ ಪುತ್ರನನ್ನು ಯಜ್ಞಾರ್ಪಣೆಯಾಗಿ ಮರಣಹೊಂದುವಂತೆ ಭೂಮಿಗೆ ಕಳುಹಿಸುವ ಮೂಲಕವೇ. ಈ ಏರ್ಪಾಡಿಗೆ ಯೇಸು ಸಿದ್ಧಮನಸ್ಸಿನಿಂದ ಒಪ್ಪಿಕೊಂಡು ತನ್ನ ಪರಿಪೂರ್ಣ ಮಾನವ ಜೀವವನ್ನು ನಮಗಾಗಿ ಕೊಟ್ಟನು. ಇದಕ್ಕೆ ವಿಮೋಚನಾ ಮೌಲ್ಯ ಎಂದು ಹೆಸರು. ಇದು ದೇವರು ಮಾನವಕುಲಕ್ಕೆ ಕೊಟ್ಟಿರುವ ಮಹತ್ತಾದ ಉಡುಗೊರೆ. * ಅನಂತ ಜೀವನಕ್ಕೆ ನಡೆಸುವ ಉಡುಗೊರೆ ಇದು.

ನೀವೇನು ಮಾಡಬೇಕು? ವಿಮೋಚನಾ ಮೌಲ್ಯವು ದೇವರು ನಿಮಗೆ ಕೊಟ್ಟಿರುವ ವೈಯಕ್ತಿಕ ಉಡುಗೊರೆಯಾಗಿದೆಯೋ? ಉತ್ತರ ನಿಮ್ಮ ಮೇಲೆ ಹೊಂದಿಕೊಂಡಿದೆ. ಉದಾಹರಣೆಗೆ, ನಿಮ್ಮ ನೆಚ್ಚಿನವರೊಬ್ಬರು ಅಂದವಾಗಿ ಪ್ಯಾಕ್‌ಮಾಡಿದ ಒಂದು ಉಡುಗೊರೆಯನ್ನು ನಿಮಗೆ ಕೊಡುತ್ತಿದ್ದಾರೆಂದು ನೆನಸಿ. ನೀವು ಕೈಚಾಚಿ ಅದನ್ನು ಸ್ವೀಕರಿಸಿದಾಗ ಮಾತ್ರ ಆ ಉಡುಗೊರೆ ನಿಮ್ಮದಾಗುವುದು ಅಲ್ಲವೆ? ಅಂತೆಯೇ ಯೆಹೋವ ದೇವರು ವಿಮೋಚನಾ ಮೌಲ್ಯವೆಂಬ ಉಡುಗೊರೆಯನ್ನು ನಿಮಗೂ ಕೊಡಲಿಚ್ಛಿಸುತ್ತಾನೆ. ಆದರೆ ಅದು ನಿಮ್ಮದಾಗಬೇಕಾದರೆ ನೀವದನ್ನು ಸ್ವೀಕರಿಸಬೇಕು. ಹೇಗೆ?

ತನ್ನಲ್ಲಿ ‘ನಂಬಿಕೆಯಿಡುವವರು’ ಅನಂತ ಜೀವನ ಪಡೆಯುವರೆಂದು ಯೇಸು ಹೇಳಿದನು. ನಂಬಿಕೆ ನಿಮ್ಮ ಜೀವನರೀತಿಯಿಂದಲೂ ತೋರಿಬರಬೇಕು. (ಯಾಕೋಬ 2:26) ಯೇಸುವಿನಲ್ಲಿ ನಂಬಿಕೆಯಿಡುವುದರ ಅರ್ಥ ಆತನು ಏನು ಹೇಳಿದನೋ, ಏನು ಮಾಡಿದನೋ ಅದಕ್ಕೆ ಹೊಂದಿಕೆಯಲ್ಲಿ ನಿಮ್ಮ ಜೀವನವನ್ನು ನಡಿಸುವುದೇ ಆಗಿದೆ. ಹಾಗೆ ಮಾಡಲು ನೀವು ಯೇಸುವನ್ನೂ ಆತನ ತಂದೆಯನ್ನೂ ಚೆನ್ನಾಗಿ ತಿಳಿದುಕೊಳ್ಳಬೇಕು. “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ” ಅಂದರೆ ಅನಂತ ಜೀವನವಾಗಿದೆ ಎಂದನು ಯೇಸು ಕ್ರಿಸ್ತ.—ಯೋಹಾನ 17:3.

ಸುಮಾರು 2,000 ವರ್ಷಗಳ ಹಿಂದೆ ಯೇಸು ಕ್ರಿಸ್ತನು ಸಾರಿದ ಸಂದೇಶವು ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವನಗಳನ್ನು ಬದಲಾಯಿಸಿದೆ. ಆ ಸಂದೇಶದ ಕುರಿತು ಹೆಚ್ಚನ್ನು ತಿಳುಕೊಳ್ಳಲು ನಿಮಗೆ ಮನಸ್ಸಿದೆಯೇ? ನೀವು ಮತ್ತು ನಿಮ್ಮ ಪ್ರಿಯ ಜನರು ಇಂದು ಮಾತ್ರವಲ್ಲ ಎಂದೆಂದಿಗೂ ಆ ಸಂದೇಶದಿಂದ ಹೇಗೆ ಪ್ರಯೋಜನ ಪಡೆಯಸಾಧ್ಯವೆಂದು ತಿಳಿಯಬೇಕೇ? ಇದನ್ನು ತಿಳಿಯಲಿಕ್ಕಾಗಿ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡಲು ಸಂತೋಷಿಸುತ್ತಾರೆ.

ಯೇಸು ಕ್ರಿಸ್ತನು ಸಾರಿದ ಸಂದೇಶ ಸದಾಕಾಲಕ್ಕೂ ನಿಮ್ಮ ಜೀವನವನ್ನು ಬದಲಾಯಿಸಬಲ್ಲದು. ಮುಂದಿನ ಲೇಖನಗಳು ಆತನ ಇನ್ನಷ್ಟು ಪರಿಚಯವನ್ನು ಮಾಡಿಕೊಡುವವು. (w10-E 04/01)

[ಪಾದಟಿಪ್ಪಣಿಗಳು]

^ ಪ್ಯಾರ. 3 ಕ್ರೈಸ್ತರೆಂದು ಹೇಳಿಕೊಳ್ಳುವವರೆಲ್ಲರೂ ಕ್ರಿಸ್ತನ ನಿಜ ಹಿಂಬಾಲಕರಲ್ಲ. ದೇವರ ಮತ್ತು ಆತನ ಚಿತ್ತದ ಕುರಿತು ಯೇಸು ಕಲಿಸಿದ ಸತ್ಯಗಳಿಗೆ ಅನುಗುಣವಾಗಿ ಜೀವಿಸುವವರೇ ಅವನ ನಿಜ ಹಿಂಬಾಲಕರು.—ಮತ್ತಾಯ 7:21-23.

^ ಪ್ಯಾರ. 5 ವಿಮೋಚನ ಮೌಲ್ಯದ ಕುರಿತ ಬೈಬಲ್‌ ಬೋಧನೆಯ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಲ್ಲಿ “ವಿಮೋಚನಾ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ” ಎಂಬ ಅಧ್ಯಾಯ 5 ನೋಡಿ. ಈ ಪುಸ್ತಕ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.