ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿನ್ನ ಅರಸುತನ ಸದಾಕಾಲ ಸ್ಥಿರವಾಗಿರುವುದು’

‘ನಿನ್ನ ಅರಸುತನ ಸದಾಕಾಲ ಸ್ಥಿರವಾಗಿರುವುದು’

ದೇವರ ಸಮೀಪಕ್ಕೆ ಬನ್ನಿರಿ

‘ನಿನ್ನ ಅರಸುತನ ಸದಾಕಾಲ ಸ್ಥಿರವಾಗಿರುವುದು’

2 ಸಮುವೇಲ 7:1-16

ಇತಿಹಾಸದುದ್ದಕ್ಕೂ ಅನೇಕ ಮಾನವ ಅಧಿಪತಿಗಳನ್ನು ಅವರ ಅಧಿಕಾರಸ್ಥಾನದಿಂದ ಉರುಳಿಸಲಾಗಿದೆ. ಕೆಲವರನ್ನು ವಜಾಮಾಡಲಾಗಿದೆ, ಇನ್ನೂ ಕೆಲವರನ್ನು ಬಲವಂತವಾಗಿ ಉಚ್ಚಾಟಿಸಲಾಗಿದೆ. ದೇವರ ಸ್ವರ್ಗೀಯ ರಾಜ್ಯದ ಅರಸನಾದ ಯೇಸು ಕ್ರಿಸ್ತನ ಬಗ್ಗೆ ಏನು? ದೇವರ ನೇಮಿತ ಅರಸನಾಗಿ ಆಳುವುದರಿಂದ ಅವನನ್ನು ಯಾವುದಾದರೂ ತಡೆಯಸಾಧ್ಯವೋ? ಇದಕ್ಕೆ ಉತ್ತರವನ್ನು ಅರಸ ದಾವೀದನಿಗೆ ಯೆಹೋವನು ತಿಳಿಸಿದ ಮಾತುಗಳಲ್ಲಿ ನಾವು ನೋಡಸಾಧ್ಯ. ಅವು 2 ಸಮುವೇಲ ಅಧ್ಯಾಯ 7ರಲ್ಲಿವೆ.

ಆ ಅಧ್ಯಾಯದ ಆರಂಭದಲ್ಲಿ ನಾವು ನೋಡುವಂತೆ ದಾವೀದನಿಗೆ ಒಬ್ಬ ಮಾನವ ಅರಸನಾದ ತಾನು ಸುಂದರವಾದ ಅರಮನೆಯಲ್ಲಿ ವಾಸಿಸುತ್ತೇನಾದರೂ ದೇವರ ಮಂಜೂಷವು ಸಾಧಾರಣ ಮನೆಯಲ್ಲಿದೆಯಲ್ಲಾ ಎಂಬ ವ್ಯಥೆಯಿತ್ತು. * ಹಾಗಾಗಿ ಅವನು ಯೆಹೋವ ದೇವರಿಗೆ ಯೋಗ್ಯವಾದ ಒಂದು ಮನೆಯನ್ನು ಅಂದರೆ ಆಲಯವನ್ನು ಕಟ್ಟುವ ತನ್ನ ಮನದಿಚ್ಛೆಯನ್ನು ವ್ಯಕ್ತಪಡಿಸಿದನು. (ವಚನ 2) ಆದರೆ ಆಲಯವನ್ನು ಕಟ್ಟುವವನು ತಾನಲ್ಲವೆಂದು ದಾವೀದನಿಗೆ ತಿಳಿದುಬಂತು. ಅವನ ಗಂಡುಮಕ್ಕಳಲ್ಲಿ ಒಬ್ಬನು ಆಲಯವನ್ನು ಕಟ್ಟುವನೆಂದು ಯೆಹೋವನು ಪ್ರವಾದಿ ನಾತಾನನ ಮೂಲಕ ದಾವೀದನಿಗೆ ಹೇಳಿದನು.—ವಚನ 4, 5, 12, 13.

ದಾವೀದನ ಈ ಮನದಾಳದ ಆಶೆಯು ಯೆಹೋವನ ಮನಸ್ಪರ್ಶಿಸಿತು. ಆತನು ದಾವೀದನ ಭಕ್ತಿಯನ್ನು ಮೆಚ್ಚಿದನು ಮತ್ತು ತನ್ನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಅವನ ರಾಜವಂಶದಲ್ಲಿ ಶಾಶ್ವತವಾಗಿ ಆಳುವವನು ಬರುವನೆಂದು ಅವನೊಂದಿಗೆ ಒಡಂಬಡಿಕೆ ಮಾಡಿದನು. “ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನವು ಶಾಶ್ವತವಾಗಿರುವದು” ಎಂದು ಯೆಹೋವನು ಹೃತ್ಪೂರ್ವಕವಾಗಿ ಮಾಡಿದ ವಾಗ್ದಾನವನ್ನು ನಾತಾನನು ದಾವೀದನಿಗೆ ತಿಳಿಸಿದನು. (ವಚನ 16) ಈ ಒಡಂಬಡಿಕೆಯ ಶಾಶ್ವತ ಬಾಧ್ಯಸ್ಥನು ಅಂದರೆ ನಿತ್ಯನಿರಂತರಕ್ಕೂ ಆಳುವಾತನು ಯಾರು?—ಕೀರ್ತನೆ 89:20, 29, 34-36.

ನಜರೇತಿನ ಯೇಸು ದಾವೀದನ ವಂಶಜ. ಯೇಸುವಿನ ಜನನದ ಕುರಿತು ಪ್ರಕಟಿಸುವಾಗ ಒಬ್ಬ ದೇವದೂತನು ಹೇಳಿದ್ದು: “ಯೆಹೋವ ದೇವರು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಅವನಿಗೆ ಕೊಡುವನು ಮತ್ತು ಅವನು ಯಾಕೋಬನ ಮನೆತನದ ಮೇಲೆ ಸದಾಕಾಲಕ್ಕೂ ರಾಜನಾಗಿ ಆಳುವನು, ಅವನ ರಾಜ್ಯಕ್ಕೆ ಅಂತ್ಯವೇ ಇರದು.” (ಲೂಕ 1:32, 33) ಹೌದು, ದೇವರು ದಾವೀದನೊಂದಿಗೆ ಮಾಡಿದ ಒಡಂಬಡಿಕೆಯು ಯೇಸು ಕ್ರಿಸ್ತನಲ್ಲಿ ನೆರವೇರಿತು. ಆದುದರಿಂದ ಆತನು ಆಳ್ವಿಕೆ ನಡೆಸುವುದು ಮಾನವರ ಆಯ್ಕೆಯಿಂದಾಗಿ ಅಲ್ಲ ಬದಲಾಗಿ ನಿತ್ಯಕ್ಕೂ ಆಳುವ ಹಕ್ಕನ್ನು ಕೊಡುವೆನೆಂದು ದೇವರು ವಾಗ್ದಾನ ಮಾಡಿದ್ದರಿಂದಲೇ. ನೆನಪಿಡಿ, ದೇವರ ವಾಗ್ದಾನಗಳು ಯಾವಾಗಲೂ ಸತ್ಯವಾಗುತ್ತವೆ.—ಯೆಶಾಯ 55:10, 11.

ಎರಡನೇ ಸಮುವೇಲ ಅಧ್ಯಾಯ 7ರಿಂದ ಎರಡು ಅಮೂಲ್ಯ ಪಾಠಗಳನ್ನು ಕಲಿಯಸಾಧ್ಯ. ಮೊದಲನೆಯದಾಗಿ, ಯೇಸು ಕ್ರಿಸ್ತನು ಅರಸನಾಗಿ ಆಳುವುದನ್ನು ಯಾವ ವಿಷಯವಾಗಲಿ ವ್ಯಕ್ತಿಯಾಗಲಿ ತಡೆಯಸಾಧ್ಯವಿಲ್ಲವೆಂಬ ದೃಢಭರವಸೆ ನಮಗಿರಬಲ್ಲದು. ಆದಕಾರಣ ಯೇಸು ತನ್ನ ಆಳ್ವಿಕೆಯ ಉದ್ದೇಶವೇನೆಂದು ತಿಳಿಸಿದನೋ ಅದನ್ನು ನೆರವೇರಿಸುವನೆಂಬ ಖಾತ್ರಿಯಿಂದಿರಬಲ್ಲೆವು. ಆ ಉದ್ದೇಶ, ದೇವರ ಚಿತ್ತವು ಸ್ವರ್ಗದಲ್ಲಿ ನೆರವೇರುವಂತೆ ಭೂಮಿಯಲ್ಲಿಯೂ ಪೂರ್ಣವಾಗಿ ನೆರವೇರುವಂತೆ ಮಾಡುವುದೇ ಆಗಿದೆ.—ಮತ್ತಾಯ 6:9, 10.

ಎರಡನೆಯದಾಗಿ ಈ ವೃತ್ತಾಂತವು ಯೆಹೋವನ ಕುರಿತು ಮನತಟ್ಟುವ ಪಾಠವನ್ನು ಕಲಿಸುತ್ತದೆ. ದಾವೀದನ ಮನದಿಚ್ಛೆಯನ್ನು ಯೆಹೋವನು ಗಮನಿಸಿ ಗಣ್ಯಮಾಡಿದ್ದನ್ನು ನೆನಪಿಸಿಕೊಳ್ಳಿ. ಯೆಹೋವನ ಆರಾಧನೆಗಾಗಿ ನಮಗಿರುವ ಭಕ್ತಿಯನ್ನು ಆತನು ಅಮೂಲ್ಯವಾಗಿ ಪರಿಗಣಿಸುತ್ತಾನೆಂಬುದನ್ನು ತಿಳಿಯುವುದು ನಮ್ಮಲ್ಲಿ ಭರವಸೆ ತುಂಬಿಸುತ್ತದೆ. ಹದಗೆಡುತ್ತಿರುವ ಆರೋಗ್ಯ, ವೃದ್ಧಾಪ್ಯ ಮುಂತಾದ ನಮ್ಮ ನಿಯಂತ್ರಣದಲ್ಲಿರದ ಸನ್ನಿವೇಶಗಳಿಂದ ಕೆಲವೊಮ್ಮೆ ದೇವರ ಸೇವೆಯನ್ನು ನಾವು ಬಯಸಿದಷ್ಟು ಮಾಡಲು ಆಗದಿರಬಹುದು. ಹಾಗಿರುವಲ್ಲಿ, ತನ್ನ ಆರಾಧನೆಗಾಗಿ ಭಕ್ತಿಯಿಂದ ಪ್ರಚೋದಿತವಾದ ಹೃದಯದಿಚ್ಛೆಯನ್ನು ಕೂಡ ಯೆಹೋವನು ಗಮನಿಸುತ್ತಾನೆಂಬ ನಿಜತ್ವದಿಂದ ಸಾಂತ್ವನ ಪಡೆಯೋಣ. (w10-E 04/01)

[ಪಾದಟಿಪ್ಪಣಿ]

^ ಪ್ಯಾರ. 5 ಒಡಂಬಡಿಕೆಯ ಮಂಜೂಷ ಅಂದರೆ ಒಂದು ಪವಿತ್ರ ಪೆಟ್ಟಿಗೆ. ಯೆಹೋವನ ನಿರ್ದೇಶನದ ಮೇರೆಗೆ ಆತನು ತಿಳಿಸಿದ ವಿನ್ಯಾಸಕ್ಕನುಸಾರ ಅದನ್ನು ನಿರ್ಮಿಸಲಾಗಿತ್ತು. ಪುರಾತನ ಇಸ್ರಾಯೇಲಿನಲ್ಲಿ ಅದು ಯೆಹೋವನ ಸಾನ್ನಿಧ್ಯದ ಸಂಕೇತವಾಗಿತ್ತು.—ವಿಮೋಚನಕಾಂಡ 25:22.