ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನನ್ನು ನೀವು ಪೂರ್ಣವಾಗಿ ಅನುಸರಿಸುತ್ತಿದ್ದೀರೊ?

ಕ್ರಿಸ್ತನನ್ನು ನೀವು ಪೂರ್ಣವಾಗಿ ಅನುಸರಿಸುತ್ತಿದ್ದೀರೊ?

ಕ್ರಿಸ್ತನನ್ನು ನೀವು ಪೂರ್ಣವಾಗಿ ಅನುಸರಿಸುತ್ತಿದ್ದೀರೊ?

‘ಈಗಾಗಲೇ ನೀವು ನಡೆಯುತ್ತಿರುವ ಪ್ರಕಾರವೇ, ಮುಂದಕ್ಕೂ ಅದನ್ನು ಹೆಚ್ಚು ಪೂರ್ಣವಾಗಿ ಮಾಡುತ್ತಾ ಇರಿ.’—1 ಥೆಸ. 4:1.

1, 2. (ಎ) ಯೇಸುವಿನ ಕಾಲದ ಅನೇಕ ಜನರು ಯಾವ ಮಹತ್ತಾದ ವಿಷಯಗಳನ್ನು ಕಣ್ಣಾರೆ ಕಂಡರು? (ಬಿ) ನಮ್ಮ ಸದ್ಯದ ಯುಗವು ಸಹ ಗಮನಾರ್ಹವಾಗಿದೆ ಏಕೆ?

ಯೇಸು ಭೂಮಿಯಲ್ಲಿದ್ದಾಗ ನೀವು ಜೀವಿಸುತ್ತಿದ್ದಲ್ಲಿ ಅದೆಷ್ಟು ಒಳ್ಳೇದಿರುತ್ತಿತ್ತೆಂದು ನೀವೆಂದಾದರೂ ಯೋಚಿಸಿದ್ದುಂಟೊ? ಯೇಸುವಿನಿಂದ ವಾಸಿಯಾಗುವ ಪ್ರತೀಕ್ಷೆಯ ಕುರಿತು ನೀವು ಯೋಚಿಸುತ್ತಾ ಹೀಗೆ ಯಾವುದೇ ಕ್ಲೇಶಕರ ಶಾರೀರಿಕ ಅಸೌಖ್ಯದಿಂದ ತಪ್ಪಿಸಿಕೊಳ್ಳುತ್ತಿದ್ದೆ ಎಂದು ನೆನಸೀರಿ. ಅಥವಾ ಯೇಸುವನ್ನು ನೋಡುವುದರಿಂದ ಮತ್ತು ಅವನಿಗೆ ಕಿವಿಗೊಡುವುದರಿಂದ ಸಿಗುವ ಮಹದಾನಂದವನ್ನು ನೀವು ಪರಿಗಣಿಸಬಹುದು. ಅವನಿಂದ ಕಲಿತುಕೊಳ್ಳಲು ಶಕ್ತರಾಗುವುದು ಅಥವಾ ಅವನು ಯಾವುದೇ ಅದ್ಭುತವನ್ನು ನಡಿಸುವುದನ್ನು ನೋಡುವುದು ಸಹ ಅದರಲ್ಲಿ ಸೇರಿದ್ದೀತು. (ಮಾರ್ಕ 4:1, 2; ಲೂಕ 5:3-9; 9:11) ಯೇಸು ಆ ಎಲ್ಲ ಮಹತ್ಕಾರ್ಯಗಳನ್ನು ಮಾಡಿದಾಗ ಅಲ್ಲಿದ್ದಿರುವುದು ಅದೆಷ್ಟು ದೊಡ್ಡ ಸೌಭಾಗ್ಯ! (ಲೂಕ 19:37) ಅಂಥ ಸಂಗತಿಗಳನ್ನು ಅನಂತರ ಯಾವ ಸಂತತಿಯೂ ಕಣ್ಣಾರೆ ಕಾಣಲಿಲ್ಲ ಮತ್ತು ಯೇಸು ಭೂಮಿಯಲ್ಲಿ ‘ತನ್ನನ್ನು ಯಜ್ಞವಾಗಿ ಅರ್ಪಿಸಿ’ ಪೂರೈಸಿದ ಕೆಲಸವು ಇನ್ನೊಮ್ಮೆ ಪುನರಾವರ್ತಿಸದು.—ಇಬ್ರಿ. 9:26; ಯೋಹಾ. 14:19.

2 ನಮ್ಮ ಸದ್ಯದ ಯುಗವು ಸಹ ಗಮನಾರ್ಹವಾಗಿದೆ. ಏಕೆ? ದೇವರ ವಾಕ್ಯವು “ಅಂತ್ಯಕಾಲ” ಮತ್ತು ‘ಕಡೇ ದಿವಸಗಳು’ ಎಂದು ಮುಂತಿಳಿಸುವ ಸಮಯದಲ್ಲಿ ನಾವೀಗ ಜೀವಿಸುತ್ತಿದ್ದೇವೆ. (ದಾನಿ. 12:1-4, 9; 2 ತಿಮೊ. 3:1) ಈ ಕಾಲಾವಧಿಯಲ್ಲಿ ಸೈತಾನನು ಸ್ವರ್ಗದಿಂದ ಹೊರಗೆ ಹಾಕಲ್ಪಟ್ಟನು. ಶೀಘ್ರದಲ್ಲೇ ಅವನನ್ನು ಬಂಧಿಸಿ “ಅಗಾಧ ಸ್ಥಳಕ್ಕೆ” ದೊಬ್ಬಲಾಗುವುದು. (ಪ್ರಕ. 12:7-9, 12; 20:1-3) ಬರಲಿರುವ ಪರದೈಸಿನ ನಿರೀಕ್ಷೆಯ ಕುರಿತು ಜನರಿಗೆ ತಿಳಿಸುತ್ತಾ ‘ರಾಜ್ಯದ ಸುವಾರ್ತೆಯನ್ನು’ ಲೋಕವ್ಯಾಪಕವಾಗಿ ಪ್ರಕಟಪಡಿಸುವ ಮಹಾ ಸುಯೋಗವು ನಮಗಿರುವುದು ಸಹ ಇದೇ ಸಮಯದಲ್ಲಿ. ಈ ಕೆಲಸವು ಎಂದೂ ಪುನರಾವರ್ತಿಸಲ್ಪಡದು.—ಮತ್ತಾ. 24:14.

3. ಸ್ವರ್ಗಕ್ಕೆ ಏರಿಹೋಗುವ ಸ್ವಲ್ಪ ಮುಂಚಿತವಾಗಿ ಯೇಸು ತನ್ನ ಹಿಂಬಾಲಕರಿಗೆ ಏನು ಮಾಡಲು ಹೇಳಿದನು, ಮತ್ತು ಅದರಲ್ಲಿ ಏನು ಕೂಡಿರಲಿಕ್ಕಿತ್ತು?

3 ಯೇಸು ಸ್ವರ್ಗಕ್ಕೆ ಏರಿಹೋಗುವ ಸ್ವಲ್ಪ ಮುಂಚಿತವಾಗಿ ತನ್ನ ಹಿಂಬಾಲಕರಿಗೆ ಹೇಳಿದ್ದು: “ನೀವು . . . ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ.” (ಅ. ಕಾ. 1:8) ಈ ಕೆಲಸದಲ್ಲಿ ಲೋಕವ್ಯಾಪಕ ಬೋಧನಾ ಚಟುವಟಿಕೆಯು ಸೇರಿರಲಿತ್ತು. ಅದರ ಗುರಿಯೇನು? ಶಿಷ್ಯರನ್ನಾಗಿ ಮಾಡುವುದು ಅಂದರೆ ಅಂತ್ಯ ಬರುವ ಮೊದಲು ಹೆಚ್ಚಿನ ಜನರನ್ನು ಕ್ರಿಸ್ತನ ಹಿಂಬಾಲಕರನ್ನಾಗಿ ಮಾಡುವುದೇ. (ಮತ್ತಾ. 28:19, 20) ಕ್ರಿಸ್ತನ ಈ ಆಜ್ಞೆಯನ್ನು ಯಶಸ್ವಿಕರವಾಗಿ ಪೂರೈಸಲು ಬಯಸುವುದಾದರೆ ನಾವೇನು ಮಾಡಬೇಕು?

4. (ಎ) ಎರಡನೇ ಪೇತ್ರ 3:11, 12ರಲ್ಲಿ ಕಂಡುಬರುವ ಪೇತ್ರನ ಬಲವತ್ತಾದ ಮಾತುಗಳು ಯಾವ ಅಗತ್ಯವನ್ನು ಒತ್ತಿಹೇಳುತ್ತವೆ? (ಬಿ) ಯಾವುದರ ವಿಷಯದಲ್ಲಿ ನಾವು ಜಾಗ್ರತೆವಹಿಸುವ ಅಗತ್ಯವಿದೆ?

4 ಅಪೊಸ್ತಲ ಪೇತ್ರನ ಈ ಬಲವತ್ತಾದ ಮಾತುಗಳನ್ನು ಗಮನಿಸಿ: “ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿರಿ. ನೀವು ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರಬೇಕು, ಏಕೆಂದರೆ ನೀವು ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ ಮನಸ್ಸಿನಲ್ಲಿ ನಿಕಟವಾಗಿ ಇಡುತ್ತಾ ಇದ್ದೀರಲ್ಲಾ.” (2 ಪೇತ್ರ 3:11, 12) ಈ ಕಡೇ ದಿವಸಗಳಲ್ಲಿ ನಮ್ಮ ಜೀವನವು ದೇವಭಕ್ತಿಯ ಕ್ರಿಯೆಗಳಲ್ಲಿ ಕೇಂದ್ರಿತವಾಗಿರುವ ವಿಷಯಕ್ಕೆ ನಾವು ನಿಕಟ ಗಮನವನ್ನು ಕೊಡಬೇಕೆಂಬ ಅಗತ್ಯವನ್ನು ಪೇತ್ರನ ಈ ಮಾತುಗಳು ಒತ್ತಿಹೇಳುತ್ತವೆ. ಅಂಥ ಕ್ರಿಯೆಗಳಲ್ಲಿ ಸುವಾರ್ತೆಯನ್ನು ಸಾರುವುದೂ ಸೇರಿರುತ್ತದೆ. ಹೀಗಿರಲಾಗಿ ಸಾರಲು ಕ್ರಿಸ್ತನು ಕೊಟ್ಟ ಆಜ್ಞೆಯನ್ನು ಪೂರೈಸುವುದರಲ್ಲಿ ಲೋಕವ್ಯಾಪಕವಾಗಿ ನಮ್ಮ ಸಹೋದರರು ಹುರುಪಿನಿಂದ ಭಾಗವಹಿಸುವುದನ್ನು ಕಾಣುವುದು ಎಷ್ಟು ಸಂತೋಷ! ಅದೇ ಸಮಯದಲ್ಲಿ ದೇವರ ಈ ಸೇವೆಯನ್ನು ಮಾಡುವುದರಲ್ಲಿ ನಮಗಿರುವ ಹುರುಪು ಸೈತಾನನ ಲೋಕದ ದೈನಂದಿನ ಒತ್ತಡಗಳಿಂದ ಹಾಗೂ ಅನುವಂಶಿಕವಾಗಿ ಬಂದಿರುವ ನಮ್ಮ ಸ್ವಂತ ಶಾರೀರಿಕ ಪ್ರವೃತ್ತಿಗಳಿಂದ ಕಡಿಮೆಯಾಗಬಾರದು. ಈ ವಿಷಯದಲ್ಲಿ ಜಾಗ್ರತೆವಹಿಸುವ ಅಗತ್ಯವನ್ನು ಸಹ ನಾವು ಮನಗಾಣುತ್ತೇವೆ. ಆದುದರಿಂದ ಕ್ರಿಸ್ತನನ್ನು ಹಿಂಬಾಲಿಸುವುದನ್ನು ಮುಂದುವರಿಸುವ ವಿಷಯದಲ್ಲಿ ಹೇಗೆ ದೃಢನಿಶ್ಚಯದಿಂದಿರಸಾಧ್ಯವಿದೆ ಎಂಬುದನ್ನು ನಾವೀಗ ಪರಿಗಣಿಸೋಣ.

ದೇವದತ್ತ ಜವಾಬ್ದಾರಿಗಳನ್ನು ಸಂತೋಷದಿಂದ ಸ್ವೀಕರಿಸಿ

5, 6. (ಎ) ಯೆರೂಸಲೇಮಿನಲ್ಲಿದ್ದ ತನ್ನ ಜೊತೆವಿಶ್ವಾಸಿಗಳನ್ನು ಪೌಲನು ಪ್ರಶಂಸಿಸಿದ್ದು ಏತಕ್ಕೆ, ಮತ್ತು ಯಾವುದರ ಕುರಿತು ಅವನು ಎಚ್ಚರಿಸಿದನು? (ಬಿ) ನಮ್ಮ ದೇವದತ್ತ ಜವಾಬ್ದಾರಿಗಳನ್ನು ನಾವು ಹಗುರವಾಗಿ ತಕ್ಕೊಳ್ಳಬಾರದು ಏಕೆ?

5 ಯೆರೂಸಲೇಮಿನ ಕ್ರೈಸ್ತರಿಗೆ ಬರೆದ ತನ್ನ ಪತ್ರದಲ್ಲಿ ತನ್ನ ಜೊತೆವಿಶ್ವಾಸಿಗಳು ಹಿಂಸೆಯ ಕೆಳಗೂ ತೋರಿಸಿದ ನಂಬಿಗಸ್ತ ತಾಳ್ಮೆಯ ಗತದಾಖಲೆಗಾಗಿ ಅಪೊಸ್ತಲ ಪೌಲನು ಅವರನ್ನು ಪ್ರಶಂಸಿಸಿದನು. ಅವನಂದದ್ದು: “ನೀವು ಜ್ಞಾನೋದಯ ಹೊಂದಿದ ಬಳಿಕ ಕಷ್ಟಾನುಭವಗಳ ಕೆಳಗೆ ದೊಡ್ಡ ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ ಇರಿ.” ಹೌದು, ಯೆಹೋವನು ಅವರ ನಂಬಿಗಸ್ತ ಮಾರ್ಗವನ್ನು ಜ್ಞಾಪಿಸಿಕೊಂಡನು. (ಇಬ್ರಿ. 6:10; 10:32-34) ಪೌಲನ ಹೃತ್ಪೂರ್ವಕವಾದ ಪ್ರಶಂಸಾಮಾತುಗಳು ಆ ಹೀಬ್ರು ಕ್ರೈಸ್ತರನ್ನು ಬಹಳವಾಗಿ ಪ್ರೋತ್ಸಾಹಿಸಿದ್ದಿರಬೇಕು. ಆದರೂ ಮಾನವ ಪ್ರವೃತ್ತಿಯನ್ನು ಅಂಕೆಯಲ್ಲಿಡದೇ ಇದ್ದಲ್ಲಿ ಅದು ದೇವರ ಸೇವೆಯಲ್ಲಿ ಒಬ್ಬನ ಹುರುಪನ್ನು ಕುಂದಿಸಬಹುದಾದ ವಿಷಯದಲ್ಲಿಯೂ ಅದೇ ಪತ್ರದಲ್ಲಿ ಪೌಲನು ಎಚ್ಚರಿಸಿದನು. ದೇವರ ಆಜ್ಞೆಗಳ ಪಾಲನೆಯಿಂದ ‘ನೆವಹೇಳಿ ತಪ್ಪಿಸಿಕೊಳ್ಳುವ’ ವಿಷಯದಲ್ಲಿ ಕ್ರೈಸ್ತರು ಜಾಗ್ರತೆವಹಿಸಬೇಕೆಂದು ಅವನು ಹೇಳಿದನು.—ಇಬ್ರಿ. 12:25.

6 ದೇವದತ್ತ ಜವಾಬ್ದಾರಿಗಳನ್ನು ಸ್ವೀಕರಿಸಲು ‘ನೆವಹೇಳಿ ತಪ್ಪಿಸಿಕೊಳ್ಳುವ’ ವಿರುದ್ಧ ಕೊಡಲಾದ ಆ ಎಚ್ಚರಿಕೆಯು ಇಂದಿನ ಕ್ರೈಸ್ತರಿಗೂ ಅನ್ವಯಿಸುತ್ತದೆ. ನಮ್ಮ ಕ್ರೈಸ್ತ ಜವಾಬ್ದಾರಿಗಳನ್ನು ಎಂದಿಗೂ ಹಗುರವಾಗಿ ತಕ್ಕೊಳ್ಳದಂತೆ ಮತ್ತು ದೇವರ ಸೇವೆಯಲ್ಲಿ ನಮ್ಮ ಹುರುಪು ಎಂದೂ ಕುಂದದಂತೆ ನೋಡಿಕೊಳ್ಳಲು ದೃಢಸಂಕಲ್ಪ ಮಾಡುವ ಅಗತ್ಯವಿದೆ ಎಂಬುದನ್ನು ನಾವು ಮನಗಾಣುತ್ತೇವೆ. (ಇಬ್ರಿ. 10:39) ಎಷ್ಟೆಂದರೂ ಪವಿತ್ರ ಸೇವೆಯನ್ನು ಸಲ್ಲಿಸುವುದು ಸಾವು ಮತ್ತು ಬದುಕಿನ ವಿಷಯವಾಗಿದೆ.—1 ತಿಮೊ. 4:16.

7, 8. (ಎ) ದೇವರ ಸೇವೆಗಾಗಿ ನಮ್ಮ ಹುರುಪನ್ನು ಕಾಪಾಡಲು ಯಾವುದು ಸಹಾಯಕಾರಿ? (ಬಿ) ಮೊದಲಿದ್ದ ನಮ್ಮ ಹುರುಪಿನಲ್ಲಿ ಸ್ವಲ್ಪವನ್ನು ಕಳಕೊಂಡಿರುವುದಾದರೆ ಯೆಹೋವ ಮತ್ತು ಯೇಸುವಿನ ಕುರಿತು ನಾವೇನನ್ನು ನೆನಪಿನಲ್ಲಿಡಬೇಕು?

7 ದೇವರೆಡೆಗಿನ ನಮ್ಮ ಕರ್ತವ್ಯಗಳನ್ನು ನೆರವೇರಿಸುವುದರಿಂದ ತಪ್ಪಿಸಿಕೊಳ್ಳುವ ವಿರುದ್ಧ ಎಚ್ಚರವಿರಲು ಯಾವುದು ಸಹಾಯಕಾರಿ? ಆ ಪ್ರವೃತ್ತಿಯನ್ನು ಎದುರಿಸುವ ಒಂದು ಪ್ರಾಮುಖ್ಯ ವಿಧವು ನಮ್ಮ ಸಮರ್ಪಣಾ ಪ್ರತಿಜ್ಞೆಯ ಅರ್ಥವನ್ನು ಕ್ರಮವಾಗಿ ಮನನ ಮಾಡುವುದೇ ಆಗಿದೆ. ಮೂಲತಃ ನಾವು ಯೆಹೋವನ ಚಿತ್ತವನ್ನು ಮಾಡುವುದನ್ನು ನಮ್ಮ ಜೀವನದಲ್ಲಿ ಪ್ರಾಮುಖ್ಯವಾಗಿ ಇಡುವೆವು ಎಂದು ಆತನಿಗೆ ವಚನ ಕೊಟ್ಟಿದ್ದೇವೆ ಮತ್ತು ಆ ವಚನವನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. (ಮತ್ತಾಯ 16:24 ಓದಿ.) ಆದುದರಿಂದ ಕೆಲವೊಮ್ಮೆ ನಾವು ನಮ್ಮನ್ನು ಹೀಗೆ ಕೇಳಿಕೊಳ್ಳುವ ಅಗತ್ಯವಿದೆ: ‘ದೀಕ್ಷಾಸ್ನಾನದ ಸಮಯದಲ್ಲಿ, ದೇವರಿಗೆ ನಾನು ಮಾಡಿದ ಸಮರ್ಪಣೆಗನುಸಾರ ಜೀವಿಸುವ ವಿಷಯದಲ್ಲಿ ನನಗಿದ್ದ ದೃಢನಿಶ್ಚಯವು ಈಗಲೂ ಇದೆಯೊ? ಅಥವಾ ಅಂದಿನಿಂದ ದಾಟಿಹೋದ ವರ್ಷಗಳಲ್ಲಿ ನನ್ನ ಆರಂಭದ ಹುರುಪು ಸ್ವಲ್ಪ ಕುಂದಿಹೋಗಿದೆಯೊ?’

8 ಪ್ರಾಮಾಣಿಕ ಸ್ವಪರೀಕ್ಷಣೆಯಿಂದ ನಾವು ಸ್ವಲ್ಪಮಟ್ಟಿಗೆ ಹುರುಪನ್ನು ಕಳಕೊಂಡಿದ್ದೇವೆ ಎಂದು ತಿಳಿದುಕೊಂಡರೆ ಪ್ರವಾದಿ ಚೆಫನ್ಯನಿಂದ ಹೇಳಲ್ಪಟ್ಟ ಉತ್ತೇಜಕ ಮಾತುಗಳನ್ನು ನೆನಪಿಸಿಕೊಳ್ಳುವುದು ಒಳ್ಳೇದು. ಅವನು ಹೇಳಿದ್ದು: “ನಿನ್ನ ಕೈಗಳು ಜೋಲುಬೀಳದಿರಲಿ; ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು.” (ಚೆಫ. 3:16, 17) ಈ ಆಶ್ವಾಸನೆಯ ಮಾತುಗಳು ಬಾಬೆಲಿನ ಬಂದಿವಾಸದಿಂದ ಯೆರೂಸಲೇಮಿಗೆ ಹಿಂತಿರುಗಿ ಬಂದ ಪುರಾತನ ಇಸ್ರಾಯೇಲ್ಯರಿಗೆ ಮೊದಲಾಗಿ ಅನ್ವಯಿಸಿದವು. ಆದರೂ ಈ ಆಶ್ವಾಸನೆಯು ಇಂದಿನ ದೇವಜನರಿಗೂ ಅನ್ವಯಿಸುತ್ತದೆ. ನಾವು ಮಾಡುವ ಕೆಲಸವು ಯೆಹೋವನ ಕೆಲಸವಾಗಿರುವುದರಿಂದ ಯೆಹೋವನೂ ಆತನ ಮಗನೂ ನಮ್ಮನ್ನು ಬೆಂಬಲಿಸುತ್ತಾರೆ ಮತ್ತು ನಾವು ನಮ್ಮ ದೇವದತ್ತ ಜವಾಬ್ದಾರಿಯನ್ನು ಪೂರ್ಣವಾಗಿ ನೆರವೇರಿಸುವಂತೆ ನಮ್ಮನ್ನು ಬಲಪಡಿಸುತ್ತಾರೆ ಎಂಬುದನ್ನು ಮನಸ್ಸಿನಲ್ಲಿಡಬೇಕು. (ಮತ್ತಾ. 28:20; ಫಿಲಿ. 4:13) ನಾವು ದೇವರ ಕೆಲಸವನ್ನು ಶ್ರಮದಿಂದ ಮಾಡುತ್ತಾ ಮುಂದುವರಿಯುವುದಾದರೆ ಆತನು ನಮ್ಮನ್ನು ಆಶೀರ್ವದಿಸಿ ಆಧ್ಯಾತ್ಮಿಕವಾಗಿ ಸಮೃದ್ಧರಾಗುವಂತೆ ಸಹಾಯಮಾಡುವನು.

ಹುರುಪಿನಿಂದ ‘ಮೊದಲು ರಾಜ್ಯವನ್ನು ಹುಡುಕುವುದು’

9, 10. ದೊಡ್ಡ ಸಂಧ್ಯಾ ಔತಣದ ಕುರಿತು ಯೇಸು ಕೊಟ್ಟ ಸಾಮ್ಯದ ಮುಖ್ಯ ಅಂಶವೇನು, ಮತ್ತು ಅದರಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

9 ಫರಿಸಾಯರ ಮುಖ್ಯಸ್ಥನ ಮನೆಯಲ್ಲಿ ಊಟವನ್ನು ಮಾಡುತ್ತಿದ್ದಾಗ ಒಂದು ದೊಡ್ಡ ಸಂಧ್ಯಾ ಔತಣದ ಕುರಿತಾದ ದೃಷ್ಟಾಂತವನ್ನು ಯೇಸು ಕೊಟ್ಟನು. ಆ ದೃಷ್ಟಾಂತದಲ್ಲಿ ಸ್ವರ್ಗರಾಜ್ಯದ ಸಾಲಿನಲ್ಲಿ ನಿಲ್ಲಲು ವಿವಿಧ ಜನರಿಗೆ ಕೊಡಲಾದ ಅವಕಾಶವನ್ನು ಯೇಸು ವರ್ಣಿಸಿದನು. ‘ನೆವಹೇಳಿ ತಪ್ಪಿಸಿಕೊಳ್ಳುವುದರ’ ಅರ್ಥವೇನೆಂದೂ ಅವನು ದೃಷ್ಟಾಂತದಲ್ಲಿ ತೋರಿಸಿದನು. (ಲೂಕ 14:16-21 ಓದಿ.) ಯೇಸುವಿನ ದೃಷ್ಟಾಂತದ ಆಮಂತ್ರಿತ ಅತಿಥಿಗಳು ಔತಣಕ್ಕೆ ಹಾಜರಾಗದೇ ಇರಲು ನೆವನಗಳನ್ನು ಕೊಟ್ಟರು. ತಾನು ಆಗತಾನೇ ಖರೀದಿಸಿದ ಹೊಲವನ್ನು ನೋಡಲು ಹೋಗಬೇಕು ಎಂದು ಒಬ್ಬನು ಹೇಳಿದನು. ಇನ್ನೊಬ್ಬನು ಕೆಲವು ಎತ್ತುಗಳನ್ನು ಖರೀದಿಸಿದ್ದರಿಂದ ಅವನ್ನು ಪರೀಕ್ಷಿಸಲು ಹೋಗಬೇಕು ಎಂದನು. ಮತ್ತೊಬ್ಬನು ಹೇಳಿದ್ದು: “ನಾನು ಈಗಷ್ಟೇ ಮದುವೆಮಾಡಿಕೊಂಡಿದ್ದೇನೆ; ಆದುದರಿಂದ ನನಗೆ ಬರಲಾಗುವುದಿಲ್ಲ.” ಇವೆಲ್ಲವೂ ಪೊಳ್ಳು ನೆವನಗಳು. ಹೊಲವನ್ನು ಕೊಂಡುಕೊಳ್ಳುವ ಅಥವಾ ಎತ್ತುಗಳನ್ನು ಖರೀದಿಸುವ ಒಬ್ಬನು ಸಾಮಾನ್ಯವಾಗಿ ಅವನ್ನು ಮೊದಲಾಗಿಯೇ ಪರೀಕ್ಷಿಸಿ ಖರೀದಿಸುತ್ತಾನೆ. ಆದುದರಿಂದ ನಂತರ ಅವನ್ನು ತುರ್ತಿನಿಂದ ಪರೀಕ್ಷಿಸುವ ಅವಶ್ಯಕತೆ ಅಷ್ಟೇನೂ ಇಲ್ಲ. ಅದಲ್ಲದೆ ಇತ್ತೀಚೆಗೆ ಆದ ಮದುವೆಯೊಂದು ಅಂಥ ಒಂದು ಪ್ರಾಮುಖ್ಯ ಆಮಂತ್ರಣವನ್ನು ಸ್ವೀಕರಿಸುವುದನ್ನೇಕೆ ತಡೆಯಬೇಕು? ಈ ನೆವಗಳಿಂದಾಗಿ ದೃಷ್ಟಾಂತದಲ್ಲಿನ ಆತಿಥೇಯನು ಕೋಪಗೊಂಡದ್ದರಲ್ಲಿ ಆಶ್ಚರ್ಯವೇನಿಲ್ಲ!

10 ಯೇಸುವಿನ ಈ ಸಾಮ್ಯದಿಂದ ದೇವಜನರೆಲ್ಲರೂ ಒಂದು ಪಾಠವನ್ನು ಕಲಿಯಸಾಧ್ಯವಿದೆ. ಅದೇನು? ಯೇಸು ಕೊಟ್ಟ ದೃಷ್ಟಾಂತದಲ್ಲಿ ತಿಳಿಸಲಾದ ಅಂಥ ವೈಯಕ್ತಿಕ ವಿಷಯಗಳು ದೇವರ ಸೇವೆಯಿಂದ ನಮ್ಮನ್ನು ಬದಿಗೊತ್ತುವಷ್ಟು ಪ್ರಾಮುಖ್ಯವಾಗುವಂತೆ ನಾವೆಂದೂ ಬಿಡಬಾರದು. ಕ್ರೈಸ್ತನೊಬ್ಬನು ವೈಯಕ್ತಿಕ ವಿಷಯಗಳನ್ನು ಅದರ ಯೋಗ್ಯ ಸ್ಥಾನದಲ್ಲಿ ಇಡದಿದ್ದರೆ ಶುಶ್ರೂಷೆಯಲ್ಲಿ ಅವನ ಹುರುಪು ಮೆಲ್ಲಮೆಲ್ಲನೆ ಕಡಿಮೆಯಾಗುವುದು. (ಲೂಕ 8:14 ಓದಿ.) ಹಾಗಾಗುವುದನ್ನು ತಡೆಯಲಿಕ್ಕಾಗಿ ಯೇಸು ಕೊಟ್ಟ ಈ ಬುದ್ಧಿವಾದವನ್ನು ನಾವು ಪಾಲಿಸುತ್ತೇವೆ: “ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ.” (ಮತ್ತಾ. 6:33) ಆ ಪ್ರಾಮುಖ್ಯ ಸಲಹೆಯನ್ನು ಯುವ ಜನರೂ ವೃದ್ಧರೂ ಆಗಿರುವ ದೇವರ ಸೇವಕರು ಅನ್ವಯಿಸುತ್ತಿರುವುದನ್ನು ಕಾಣುವುದು ಎಷ್ಟು ಉತ್ತೇಜನೀಯ! ವಾಸ್ತವದಲ್ಲಿ ಶುಶ್ರೂಷೆಗೆ ಹೆಚ್ಚು ಸಮಯ ಕೊಡಲಿಕ್ಕಾಗಿ ಅನೇಕರು ತಮ್ಮ ಜೀವನಶೈಲಿಯನ್ನು ಸರಳೀಕರಿಸಲು ಹೆಜ್ಜೆಗಳನ್ನು ತೆಗೆದುಕೊಂಡಿದ್ದಾರೆ. ಹುರುಪಿನಿಂದ ಮೊದಲು ರಾಜ್ಯವನ್ನು ಹುಡುಕುವ ಮೂಲಕ ನಿಜ ಸಂತೋಷವೂ ಮಹಾ ಸಂತೃಪ್ತಿಯೂ ಸಿಗುವುದೆಂದು ಅವರು ಸ್ವಂತ ಅನುಭವದಿಂದ ತಿಳಿಯುತ್ತಾರೆ.

11. ದೇವರ ಸೇವೆಯನ್ನು ಹುರುಪಿನಿಂದಲೂ ಮನಃಪೂರ್ವಕವಾಗಿಯೂ ಮಾಡುವ ಪ್ರಾಮುಖ್ಯತೆಯನ್ನು ಯಾವ ಬೈಬಲ್‌ ವೃತ್ತಾಂತವು ದೃಷ್ಟಾಂತಿಸುತ್ತದೆ?

11 ದೇವರ ಸೇವೆಯಲ್ಲಿ ಹುರುಪಿನಿಂದಿರುವ ಪ್ರಾಮುಖ್ಯತೆಯನ್ನು ದೃಷ್ಟಾಂತಿಸಲು ಇಸ್ರಾಯೇಲಿನ ಅರಸ ಯೆಹೋವಾಷನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಪರಿಗಣಿಸಿ. ಅರಾಮ್ಯರ ಕೈಯಿಂದ ಇಸ್ರಾಯೇಲ್ಯರು ಸೋಲನ್ನಪ್ಪುವ ಸಂಭಾವ್ಯತೆಯನ್ನು ಮನಗಂಡು ಚಿಂತಾಕ್ರಾಂತನಾದ ಯೆಹೋವಾಷನು ಎಲೀಷನ ಬಳಿಗೆ ಅಳುತ್ತಾ ಬಂದನು. ಕಿಟಕಿಯನ್ನು ತೆರೆದು ಅರಾಮ್ಯರ ದಿಕ್ಕಿಗೆ ಒಂದು ಬಾಣವನ್ನೆಸೆಯುವಂತೆ ಪ್ರವಾದಿಯು ಅವನಿಗೆ ಹೇಳಿದನು. ಯೆಹೋವನ ಹಸ್ತವು ಅರಾಮ್ಯರ ವಿರುದ್ಧ ಜಯಗಳಿಸುವುದು ಎಂಬುದನ್ನು ಇದು ಸೂಚಿಸಿತು. ನಿಶ್ಚಯವಾಗಿಯೂ ಇದು ಅರಸನನ್ನು ಉತ್ತೇಜಿಸಿದ್ದಿರಬೇಕು. ಬಳಿಕ ಎಲೀಷನು, ಬಾಣಗಳನ್ನು ತೆಗೆದುಕೊಂಡು ಅವುಗಳಿಂದ ನೆಲವನ್ನು ಹೊಡೆಯುವಂತೆ ಯೆಹೋವಾಷನಿಗೆ ಹೇಳಿದನು. ಆದರೆ ಅವನು ಮೂರು ಸಾರಿ ಹೊಡೆದನು. ಇದರಿಂದ ಎಲೀಷನು ತುಂಬ ಕೋಪಗೊಂಡನು. ಏಕೆಂದರೆ ನೆಲವನ್ನು ಐದು ಅಥವಾ ಆರು ಬಾರಿ ಹೊಡೆದಲ್ಲಿ ಅದು ‘ಅರಾಮ್ಯರು ನಿರ್ನಾಮವಾಗಿ ಹೋಗುವುದನ್ನು’ ಸೂಚಿಸುತ್ತಿತ್ತು. ಆದರೆ ಈಗ ಯೆಹೋವಾಷನು ಕೇವಲ ಮೂರು ಆಂಶಿಕ ವಿಜಯಗಳನ್ನು ಪಡೆಯಲಿದ್ದನು. ಏಕೆಂದರೆ ಅವನು ಹುರುಪುರಹಿತನಾಗಿ ಕ್ರಿಯೆಗೈದನು. ಆದುದರಿಂದಲೇ ಸೀಮಿತ ಯಶಸ್ಸನ್ನು ಪಡೆದನು. (2 ಅರ. 13:14-19) ಆ ವೃತ್ತಾಂತದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? ಯೆಹೋವನ ಕೆಲಸವನ್ನು ನಾವು ಮನಃಪೂರ್ವಕವಾಗಿಯೂ ಹುರುಪಿನಿಂದಲೂ ಮಾಡಿದರೆ ಮಾತ್ರ ಆತನು ನಮ್ಮನ್ನು ಹೇರಳವಾಗಿ ಆಶೀರ್ವದಿಸುವನು.

12. (ಎ) ಜೀವನದ ಕಷ್ಟಸಂಕಟಗಳನ್ನು ನಿಭಾಯಿಸುತ್ತಾ ಇರುವಾಗ ದೇವರ ಸೇವೆಯಲ್ಲಿ ಹುರುಪನ್ನು ಕಾಪಾಡಿಕೊಳ್ಳಲು ನಮಗೆ ಯಾವುದು ಸಹಾಯಕಾರಿ? (ಬಿ) ಶುಶ್ರೂಷೆಯಲ್ಲಿ ಕಾರ್ಯಮಗ್ನರಾಗಿರುವುದರಿಂದ ನೀವು ಹೇಗೆ ಪ್ರಯೋಜನ ಪಡೆಯುತ್ತಿದ್ದೀರಿ ಎಂದು ತಿಳಿಸಿ.

12 ಜೀವನದ ಕಷ್ಟಸಂಕಟಗಳು ದೇವರ ಸೇವೆಯಲ್ಲಿ ನಮಗಿರುವ ಹುರುಪು ಮತ್ತು ಭಯಭಕ್ತಿಯನ್ನು ಪರೀಕ್ಷಿಸುತ್ತವೆ. ಅನೇಕ ಸಹೋದರ ಸಹೋದರಿಯರು ಕಷ್ಟಕರವಾದ ಆರ್ಥಿಕ ಪರಿಸ್ಥಿತಿಗಳನ್ನು ನಿಭಾಯಿಸುತ್ತಿದ್ದಾರೆ. ಗಂಭೀರವಾದ ಕಾಯಿಲೆಯು ತಮ್ಮನ್ನು ಯೆಹೋವನ ಸೇವೆಯಲ್ಲಿ ಸೀಮಿತಗೊಳಿಸುವುದರಿಂದ ಇತರರು ಹತಾಶೆಗೊಂಡಿದ್ದಾರೆ. ಆದರೂ ನಾವು ಪ್ರತಿಯೊಬ್ಬರು ನಮ್ಮ ಹುರುಪನ್ನು ಕಾಪಾಡಿಕೊಂಡು ಕ್ರಿಸ್ತನನ್ನು ಪೂರ್ಣವಾಗಿ ಅನುಸರಿಸುವುದನ್ನು ಮುಂದುವರಿಸುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಜ್ಜೆಗಳನ್ನು ತಕ್ಕೊಳ್ಳಸಾಧ್ಯವಿದೆ. “ಕ್ರಿಸ್ತನನ್ನು ಅನುಸರಿಸುತ್ತಾ ಇರಲು ಯಾವುದು ಸಹಾಯಕಾರಿ?” ಎಂಬ ಚೌಕದಲ್ಲಿ ಕೊಡಲಾಗಿರುವ ಕೆಲವು ಸಲಹೆಗಳು ಮತ್ತು ಶಾಸ್ತ್ರವಚನಗಳನ್ನು ದಯವಿಟ್ಟು ಗಮನಿಸಿ. ಅವನ್ನು ಹೇಗೆ ಪೂರ್ಣವಾಗಿ ಅನ್ವಯಿಸಬಲ್ಲಿರಿ ಎಂಬುದನ್ನು ಪರಿಗಣಿಸಿ. ಹಾಗೆ ಮಾಡುವಲ್ಲಿ ನಿಜ ಪ್ರಯೋಜನಗಳನ್ನು ಪಡೆಯುವಿರಿ. ಶುಶ್ರೂಷೆಯಲ್ಲಿ ಕಾರ್ಯಮಗ್ನರಾಗಿರುವುದು ನಮ್ಮನ್ನು ದೃಢಗೊಳಿಸುತ್ತದೆ, ನಮ್ಮ ಜೀವನವನ್ನು ಸಂಪದ್ಭರಿತಗೊಳಿಸುತ್ತದೆ ಮತ್ತು ಹೆಚ್ಚಿನ ಶಾಂತಿ ಸಂತೋಷವನ್ನು ತರುತ್ತದೆ. (1 ಕೊರಿಂ. 15:58) ಅದಲ್ಲದೆ ದೇವರ ಸೇವೆಯಲ್ಲಿ ಪೂರ್ಣ ಪ್ರಾಣದಿಂದ ಭಾಗವಹಿಸುವುದು ‘ಯೆಹೋವನ ದಿನದ ಸಾನ್ನಿಧ್ಯವನ್ನು ಮನಸ್ಸಿನಲ್ಲಿ ನಿಕಟವಾಗಿ ಇಡಲು’ ನಮಗೆ ಸಹಾಯಕಾರಿ.—2 ಪೇತ್ರ 3:12.

ಪ್ರಾಮಾಣಿಕ ಪರಿಶೀಲನೆ ಮಾಡಿ

13. ಪೂರ್ಣ ಪ್ರಾಣದ ಸೇವೆಯು ನಮಗೆ ವೈಯಕ್ತಿಕವಾಗಿ ಯಾವ ಅರ್ಥದಲ್ಲಿದೆ ಎಂದು ಹೇಗೆ ನಿರ್ಧರಿಸಬಲ್ಲೆವು?

13 ಆದರೂ, ಪೂರ್ಣ ಪ್ರಾಣದ ಸೇವೆಯೆಂದರೆ ಶುಶ್ರೂಷೆಯಲ್ಲಿ ನಾವೆಷ್ಟು ಸಮಯ ಕಳೆಯುತ್ತೇವೆ ಎಂಬ ವಿಷಯವಲ್ಲ ಎಂಬುದನ್ನು ಜ್ಞಾಪಕದಲ್ಲಿಡುವುದು ಒಳ್ಳೇದು. ವೈಯಕ್ತಿಕ ಪರಿಸ್ಥಿತಿಗಳು ಬೇರೆಬೇರೆಯಾಗಿರುತ್ತವೆ. ಒಬ್ಬನು ಕ್ಷೇತ್ರ ಸೇವೆಯಲ್ಲಿ ಪ್ರತಿ ತಿಂಗಳು ಕೇವಲ ಒಂದೆರಡು ತಾಸುಗಳನ್ನು ಹಾಕಿದರೂ ಅವನಿಗೆ ತನ್ನ ಶಕ್ತ್ಯಾನುಸಾರ ಅಷ್ಟೇ ಹಾಕಲು ಸಾಧ್ಯವಿರುವುದಾದರೆ ಅದು ಯೆಹೋವನಿಗೆ ಅತಿಪ್ರಿಯವಾಗಿರಬಹುದು. (ಮಾರ್ಕ 12:41-44 ಹೋಲಿಸಿ.) ಆದಕಾರಣ ದೇವರಿಗೆ ಪೂರ್ಣ ಪ್ರಾಣದ ಸೇವೆ ಸಲ್ಲಿಸುವುದು ನಮಗೆ ವೈಯಕ್ತಿಕವಾಗಿ ಯಾವ ಅರ್ಥದಲ್ಲಿದೆ ಎಂಬುದನ್ನು ನಿರ್ಧರಿಸಲು ನಾವು ನಮ್ಮ ಸಾಮರ್ಥ್ಯಗಳನ್ನು ಮತ್ತು ಪರಿಸ್ಥಿತಿಗಳನ್ನು ಪ್ರಾಮಾಣಿಕವಾಗಿ ಪರಿಶೀಲಿಸುವ ಅಗತ್ಯವಿದೆ. ಕ್ರಿಸ್ತನ ಹಿಂಬಾಲಕರೋಪಾದಿ ನಮ್ಮ ದೃಷ್ಟಿಕೋನವನ್ನು ಅವನ ದೃಷ್ಟಿಕೋನದೊಂದಿಗೆ ಹೊಂದಿಸಿಕೊಳ್ಳಲೂ ನಾವು ಬಯಸಬೇಕು. (ರೋಮನ್ನರಿಗೆ 15:5 ಓದಿ; 1 ಕೊರಿಂ. 2:16) ಯೇಸು ತನ್ನ ಜೀವನದಲ್ಲಿ ಯಾವುದನ್ನು ಪ್ರಪ್ರಥಮವಾಗಿಟ್ಟನು? ಕಪೆರ್ನೌಮಿನ ಜನರ ಗುಂಪಿಗೆ ಅವನು ಹೇಳಿದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” (ಲೂಕ 4:43; ಯೋಹಾ. 18:37) ಶುಶ್ರೂಷೆಯಲ್ಲಿ ಯೇಸುವಿಗಿದ್ದ ಹುರುಪನ್ನು ಮನಸ್ಸಿನಲ್ಲಿಟ್ಟವರಾಗಿ ನೀವು ನಿಮ್ಮ ಶುಶ್ರೂಷೆಯನ್ನು ಇನ್ನೂ ಹೆಚ್ಚಿಸಸಾಧ್ಯವಿದೆಯೇ ಎಂದು ನಿಮ್ಮ ಪರಿಸ್ಥಿತಿಗಳನ್ನು ತೂಗಿನೋಡಿ.—1 ಕೊರಿಂ. 11:1.

14. ಯಾವ ವಿಧಗಳಲ್ಲಿ ನಾವು ನಮ್ಮ ಶುಶ್ರೂಷೆಯನ್ನು ಇನ್ನೂ ಹೆಚ್ಚು ವಿಸ್ತರಿಸಸಾಧ್ಯವಿದೆ?

14 ನಮ್ಮ ಪರಿಸ್ಥಿತಿಗಳನ್ನು ಜಾಗರೂಕತೆಯಿಂದ ಪರೀಕ್ಷಿಸುವ ಮೂಲಕ ಶುಶ್ರೂಷೆಯಲ್ಲಿ ನಾವು ಕಳೆಯುವ ಸಮಯದ ಮೊತ್ತವನ್ನು ಹೆಚ್ಚಿಸಸಾಧ್ಯವಿದೆ ಎಂಬ ತೀರ್ಮಾನಕ್ಕೆ ನಾವು ಬರಬಹುದು. (ಮತ್ತಾ. 9:37, 38) ಉದಾಹರಣೆಗೆ, ಇತ್ತೀಚೆಗೆ ತಮ್ಮ ಶಾಲಾವ್ಯಾಸಂಗವನ್ನು ಮುಗಿಸಿದ ನಮ್ಮ ಯುವ ಜನರಲ್ಲಿ ಸಾವಿರಾರು ಮಂದಿ ತಮ್ಮ ಶುಶ್ರೂಷೆಯನ್ನು ವಿಸ್ತರಿಸಿ, ಪಯನೀಯರರಾಗಿ ಹುರುಪಿನಿಂದ ಸೇವೆಮಾಡುವುದರಿಂದ ಬರುವ ಸಂತೋಷವನ್ನು ಈಗ ಅನುಭವಿಸುತ್ತಿದ್ದಾರೆ. ಆ ಸಂತೋಷವನ್ನು ನೀವು ಸಹ ಸವಿಯಲು ಬಯಸುತ್ತೀರೊ? ಕೆಲವು ಸಹೋದರ ಸಹೋದರಿಯರು ತಮ್ಮ ಪರಿಸ್ಥಿತಿಗಳನ್ನು ಪರಿಗಣಿಸಿ ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವ ತಮ್ಮ ದೇಶದ ಇನ್ನೊಂದು ಕ್ಷೇತ್ರಕ್ಕೆ ಅಥವಾ ಪರದೇಶಕ್ಕೂ ಹೋಗಲು ನಿರ್ಣಯವನ್ನು ಮಾಡಿರುತ್ತಾರೆ. ಇನ್ನಿತರರು ಪರಭಾಷೆಯನ್ನಾಡುವ ಜನರಿಗೆ ಸಹಾಯಮಾಡಲಿಕ್ಕಾಗಿ ಇನ್ನೊಂದು ಭಾಷೆಯನ್ನು ಕಲಿತಿದ್ದಾರೆ. ನಮ್ಮ ಶುಶ್ರೂಷೆಯನ್ನು ವಿಸ್ತರಿಸುವುದು ಕಷ್ಟವಾಗಿರಬಲ್ಲದಾದರೂ ಅದು ಹೇರಳ ಆಶೀರ್ವಾದಗಳನ್ನು ತರುತ್ತದೆ ಮಾತ್ರವಲ್ಲ ಇತರ ಅನೇಕರು ‘ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು’ ಸಹಾಯಮಾಡುತ್ತದೆ.—1 ತಿಮೊ. 2:3, 4; 2 ಕೊರಿಂ. 9:6.

ಅನುಸರಿಸಲು ಬೈಬಲ್‌ ಮಾದರಿಗಳು

15, 16. ಕ್ರಿಸ್ತನ ಹುರುಪಿನ ಹಿಂಬಾಲಕರಾಗಿರುವುದರಲ್ಲಿ ಯಾರ ಮಾದರಿಗಳನ್ನು ನಾವು ಅನುಕರಿಸಬಲ್ಲೆವು?

15 ಅಪೊಸ್ತಲರಾದ ಕೆಲವರನ್ನು ಕ್ರಿಸ್ತನು ತನ್ನ ಹಿಂಬಾಲಕರಾಗುವಂತೆ ಕರೆದಾಗ ಅವರು ಹೇಗೆ ಪ್ರತಿಕ್ರಿಯಿಸಿದರು? ಮತ್ತಾಯನ ಕುರಿತಾಗಿ ವೃತ್ತಾಂತವು ತಿಳಿಸುವುದು: “ಅವನು ಎಲ್ಲವನ್ನೂ ಬಿಟ್ಟು ಎದ್ದು ಅವನನ್ನು ಹಿಂಬಾಲಿಸಿದನು.” (ಲೂಕ 5:27, 28) ಮೀನು ಹಿಡಿಯುತ್ತಿದ್ದ ಪೇತ್ರ ಮತ್ತು ಅಂದ್ರೆಯರ ಕುರಿತು ನಾವು ಓದುವುದು: “ಆ ಕೂಡಲೆ ಅವರು ಬಲೆಗಳನ್ನು ಬಿಟ್ಟು ಅವನನ್ನು ಹಿಂಬಾಲಿಸಿದರು.” ಯೇಸು ಅನಂತರ, ತಮ್ಮ ತಂದೆಯೊಂದಿಗೆ ಬಲೆಯನ್ನು ಸರಿಮಾಡುತ್ತಿದ್ದ ಯಾಕೋಬ ಯೋಹಾನರನ್ನು ಕಂಡನು. ಅವರು ಯೇಸುವಿನ ಕರೆಗೆ ಹೇಗೆ ಪ್ರತಿಕ್ರಿಯಿಸಿದರು? “ತಕ್ಷಣವೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಅವನನ್ನು ಹಿಂಬಾಲಿಸಿದರು.”—ಮತ್ತಾ. 4:18-22.

16 ಇನ್ನೊಂದು ಉತ್ತಮ ಉದಾಹರಣೆಯು ಅಪೊಸ್ತಲ ಪೌಲನಾಗಿ ಪರಿಣಮಿಸಿದ ಸೌಲನದ್ದು. ಅವನು ಕ್ರಿಸ್ತನ ಹಿಂಬಾಲಕರ ಮತಾಂಧ ಹಿಂಸಕನಾಗಿದ್ದರೂ ತನ್ನ ಮಾರ್ಗವನ್ನು ಬದಲಾಯಿಸಿಕೊಂಡು ಕ್ರಿಸ್ತನ ಹೆಸರನ್ನು ಪ್ರಸಿದ್ಧಪಡಿಸಲು ಅವನು ‘ಆರಿಸಿಕೊಂಡ ಸಾಧನವಾದನು.’ ಅವನು “ತಡಮಾಡದೆ ಸಭಾಮಂದಿರಗಳಿಗೆ ಹೋಗಿ ಯೇಸುವೇ ದೇವಕುಮಾರನೆಂದು ಸಾರತೊಡಗಿದನು.” (ಅ. ಕಾ. 9:3-22) ತನ್ನ ಕೆಲಸದಲ್ಲಿ ಹೆಚ್ಚಿನ ಕಷ್ಟ ಮತ್ತು ಹಿಂಸೆಯನ್ನು ತಾಳಿಕೊಳ್ಳಬೇಕಾಗಿದ್ದರೂ ಪೌಲನು ತನ್ನ ಹುರುಪನ್ನು ಎಂದೂ ಕಳಕೊಳ್ಳಲಿಲ್ಲ.—2 ಕೊರಿಂ. 11:23-29; 12:15.

17. (ಎ) ಕ್ರಿಸ್ತನನ್ನು ಅನುಸರಿಸುವ ವಿಷಯದಲ್ಲಿ ನಿಮ್ಮ ಅಪೇಕ್ಷೆಯೇನು? (ಬಿ) ನಮ್ಮ ಪೂರ್ಣ ಹೃದಯ ಮತ್ತು ಶಕ್ತಿಯಿಂದ ಯೆಹೋವನ ಚಿತ್ತವನ್ನು ಮಾಡುವ ಕಾರಣ ನಾವು ಯಾವ ಆಶೀರ್ವಾದಗಳನ್ನು ಆನಂದಿಸುತ್ತೇವೆ?

17 ನಿಶ್ಚಯವಾಗಿಯೂ ನಾವು ಆ ಶಿಷ್ಯರ ಉತ್ತಮ ಮಾದರಿಯನ್ನು ಅನುಕರಿಸಿ, ಆತುರದಿಂದಲೂ ಮನಃಪೂರ್ವಕವಾಗಿಯೂ ಕ್ರಿಸ್ತನ ಆಮಂತ್ರಣಕ್ಕೆ ಪ್ರತಿಕ್ರಿಯೆಯನ್ನು ತೋರಿಸಬಯಸುತ್ತೇವೆ. (ಇಬ್ರಿ. 6:11, 12) ಕ್ರಿಸ್ತನನ್ನು ಹುರುಪಿನಿಂದಲೂ ಪೂರ್ಣವಾಗಿಯೂ ಅನುಸರಿಸಲು ಶ್ರಮಿಸುತ್ತಾ ಇರುವಾಗ ನಾವು ಯಾವ ಆಶೀರ್ವಾದಗಳನ್ನು ಆನಂದಿಸುತ್ತೇವೆ? ದೇವರ ಚಿತ್ತವನ್ನು ಮಾಡುವುದರಲ್ಲಿ ನಿಜ ಆನಂದವನ್ನು ಕಂಡುಕೊಳ್ಳುತ್ತೇವೆ ಹಾಗೂ ಸಭೆಯಲ್ಲಿ ಹೆಚ್ಚಿನ ಸೇವಾಸುಯೋಗಗಳು ಮತ್ತು ಜವಾಬ್ದಾರಿಗಳನ್ನು ಸ್ವೀಕರಿಸುವುದರಿಂದ ಬರುವ ಸಂತೃಪ್ತಿಯನ್ನು ಅನುಭವಿಸುತ್ತೇವೆ. (ಕೀರ್ತ. 40:8; 1 ಥೆಸಲೊನೀಕ 4:1 ಓದಿ.) ಹೌದು, ಕ್ರಿಸ್ತನನ್ನು ಅನುಸರಿಸುವುದರಲ್ಲಿ ನಾವು ಪರಿಶ್ರಮಪೂರ್ವಕವಾಗಿ ದುಡಿಯುವ ಮೂಲಕ ಮನಶ್ಶಾಂತಿ, ಸಂತೃಪ್ತಿ, ಸಮಾಧಾನ, ದೇವರ ಮೆಚ್ಚುಗೆ ಮತ್ತು ನಿತ್ಯಜೀವದ ಪ್ರತೀಕ್ಷೆಯಂತಹ ಸಮೃದ್ಧ ಹಾಗೂ ಬಾಳುವ ಆಶೀರ್ವಾದಗಳನ್ನು ಪಡೆಯುತ್ತೇವೆ.—1 ತಿಮೊ. 4:10.

ನಿಮಗೆ ಜ್ಞಾಪಕವಿದೆಯೊ?

• ಯಾವ ಪ್ರಾಮುಖ್ಯ ಕೆಲಸ ನಮಗೆ ಕೊಡಲ್ಪಟ್ಟಿದೆ, ಮತ್ತು ನಾವದನ್ನು ಹೇಗೆ ವೀಕ್ಷಿಸಬೇಕು?

• ಯಾವ ಮಾನುಷ ಪ್ರವೃತ್ತಿಯ ವಿರುದ್ಧ ನಾವು ಜಾಗ್ರತೆವಹಿಸಬೇಕು, ಮತ್ತ ಏಕೆ?

• ಯಾವ ಪ್ರಾಮಾಣಿಕ ಪರಿಶೀಲನೆಯನ್ನು ನಾವು ಮಾಡಬೇಕು?

• ಕ್ರಿಸ್ತನನ್ನು ಅನುಸರಿಸುತ್ತಾ ಇರಲು ನಮಗೆ ಯಾವುದು ಸಹಾಯಕಾರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 27ರಲ್ಲಿರುವ ಚೌಕ/ಚಿತ್ರ]

ಕ್ರಿಸ್ತನನ್ನು ಅನುಸರಿಸುತ್ತಾ ಇರಲು ಯಾವುದು ಸಹಾಯಕಾರಿ?

▪ ದೇವರ ವಾಕ್ಯವನ್ನು ದಿನಂಪ್ರತಿ ಓದಿ, ಮತ್ತು ಓದಿದ ವಿಷಯಗಳ ಕುರಿತು ಮನನಮಾಡಿ.—ಕೀರ್ತ. 1:1-3; 1 ತಿಮೊ. 4:15.

▪ ದೇವರ ಆತ್ಮದ ಬೆಂಬಲ ಮತ್ತು ಮಾರ್ಗದರ್ಶನೆಗಾಗಿ ಆಗಾಗ್ಗೆ ಪ್ರಾರ್ಥಿಸಿ.—ಜೆಕ. 4:6; ಲೂಕ 11:9, 13.

▪ ಶುಶ್ರೂಷೆಯ ವಿಷಯದಲ್ಲಿ ಹೃತ್ಪೂರ್ವಕ ಹುರುಪನ್ನು ತೋರಿಸುವವರೊಂದಿಗೆ ಸಹವಾಸ ಮಾಡಿ.—ಜ್ಞಾನೋ. 13:20; ಇಬ್ರಿ. 10:24, 25.

▪ ನಾವು ಜೀವಿಸುತ್ತಿರುವ ಸಮಯದ ತುರ್ತುಪ್ರಜ್ಞೆಯನ್ನು ಗುರುತಿಸಿ.—ಎಫೆ. 5:15, 16.

▪ ‘ನೆವಹೇಳಿ ತಪ್ಪಿಸಿಕೊಳ್ಳುವುದರ’ ಗಂಭೀರ ದುಷ್ಪರಿಣಾಮಗಳನ್ನು ಸದಾ ಮನಸ್ಸಿನಲ್ಲಿಡಿ.—ಲೂಕ 9:59-62.

▪ ನಿಮ್ಮ ಸಮರ್ಪಣೆಯ ಪ್ರತಿಜ್ಞೆಯನ್ನು ಹಾಗೂ ಯೆಹೋವನನ್ನು ಸೇವಿಸುವುದರಿಂದ ಮತ್ತು ಕ್ರಿಸ್ತನನ್ನು ಅನುಸರಿಸುವುದರಿಂದ ಸಿಗುವ ಹೇರಳ ಆಶೀರ್ವಾದಗಳ ಕುರಿತು ಕ್ರಮವಾಗಿ ಪರ್ಯಾಲೋಚಿಸಿ.—ಕೀರ್ತ. 116:12-14; 133:3; ಜ್ಞಾನೋ. 10:22.