ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುರುಷರೇ, ಕ್ರಿಸ್ತನ ತಲೆತನಕ್ಕೆ ನೀವು ಅಧೀನರಾಗುತ್ತೀರೊ?

ಪುರುಷರೇ, ಕ್ರಿಸ್ತನ ತಲೆತನಕ್ಕೆ ನೀವು ಅಧೀನರಾಗುತ್ತೀರೊ?

ಪುರುಷರೇ, ಕ್ರಿಸ್ತನ ತಲೆತನಕ್ಕೆ ನೀವು ಅಧೀನರಾಗುತ್ತೀರೊ?

“ಪ್ರತಿ ಪುರುಷನಿಗೆ ಕ್ರಿಸ್ತನು ತಲೆ.” —1 ಕೊರಿಂ. 11:3.

1. ಯೆಹೋವನು ಶಾಂತಿಯ ದೇವರಾಗಿದ್ದಾನೆ ಎಂಬುದನ್ನು ಯಾವುದು ತೋರಿಸುತ್ತದೆ?

“ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು” ಎಂದು ಪ್ರಕಟನೆ 4:11 ಹೇಳುತ್ತದೆ. ಯೆಹೋವ ದೇವರು ಸೃಷ್ಟಿಕರ್ತನಾಗಿರುವ ಕಾರಣ ವಿಶ್ವವೆಲ್ಲಾದರ ಸರ್ವೋಚ್ಚ ಪರಮಾಧಿಕಾರಿ ಆಗಿದ್ದಾನೆ ಮತ್ತು ತನ್ನ ಸೃಷ್ಟಿಯಲ್ಲೆಲ್ಲಾ ಶ್ರೇಷ್ಠನೂ ಆಗಿದ್ದಾನೆ. ಯೆಹೋವನು “ಶಾಂತಿಯ ದೇವರಾಗಿದ್ದಾನೆಯೇ ಹೊರತು ಗಲಿಬಿಲಿಯ ದೇವರಲ್ಲ” ಎಂಬುದು ಆತನ ದೇವದೂತ ಕುಟುಂಬವು ಸಂಘಟಿಸಲ್ಪಟ್ಟಿರುವ ರೀತಿಯಿಂದ ತೋರಿಬರುತ್ತದೆ. —1 ಕೊರಿಂ. 14:33; ಯೆಶಾ. 6:1-3; ಇಬ್ರಿ. 12:22, 23.

2, 3. (ಎ) ಯೆಹೋವನ ಪ್ರಥಮ ಸೃಷ್ಟಿ ಯಾರಾಗಿದ್ದನು? (ಬಿ) ಜೇಷ್ಠಪುತ್ರನಿಗೆ ತಂದೆಯ ಸಂಬಂಧದಲ್ಲಿ ಯಾವ ಸ್ಥಾನವಿದೆ?

2 ಯಾವ ಸೃಷ್ಟಿಯನ್ನೂ ನಿರ್ಮಿಸುವುದಕ್ಕೆ ಮುಂಚೆ ದೇವರು ಅಗಣಿತ ಕಾಲದಿಂದ ತಾನೊಬ್ಬನೇ ಅಸ್ತಿತ್ವದಲ್ಲಿದ್ದನು. ಆತನ ಪ್ರಪ್ರಥಮ ಸೃಷ್ಟಿಯು “ವಾಕ್ಯ” ಎಂದು ಕರೆಯಲ್ಪಟ್ಟ ಆತ್ಮಜೀವಿಯಾಗಿದ್ದನು. ಏಕೆಂದರೆ ಅವನು ಯೆಹೋವನ ವಕ್ತಾರನಾಗಿದ್ದನು. ಈ ವಾಕ್ಯದ ಮೂಲಕವಾಗಿಯೇ ಬೇರೆಲ್ಲವೂ ಅಸ್ತಿತ್ವಕ್ಕೆ ಬಂತು. ಅನಂತರ ಅವನು ಈ ಭೂಮಿಗೆ ಪರಿಪೂರ್ಣ ಮಾನವನಾಗಿ ಬಂದು ಯೇಸು ಕ್ರಿಸ್ತನೆಂಬ ಹೆಸರಿನಿಂದ ಖ್ಯಾತನಾದನು.—ಯೋಹಾನ 1:1-3, 14 ಓದಿ.

3 ದೇವರ ಮತ್ತು ಆತನ ಜೇಷ್ಠಪುತ್ರನ ಪರಸ್ಪರ ಸ್ಥಾನಗಳ ಕುರಿತು ಶಾಸ್ತ್ರಗ್ರಂಥವು ಏನು ಹೇಳುತ್ತದೆ? ದೇವಪ್ರೇರಣೆಯ ಕೆಳಗೆ ಬರೆಯುತ್ತಾ ಅಪೊಸ್ತಲ ಪೌಲನು ನಮಗನ್ನುವುದು: “ಈ ವಿಷಯವನ್ನು ನೀವು ತಿಳಿದಿರಬೇಕೆಂಬುದು ನನ್ನ ಬಯಕೆ, ಅದೇನೆಂದರೆ ಪ್ರತಿ ಪುರುಷನಿಗೆ ಕ್ರಿಸ್ತನು ತಲೆ; ಸ್ತ್ರೀಗೆ ಪುರುಷನು ತಲೆ; ಕ್ರಿಸ್ತನಿಗೆ ದೇವರು ತಲೆ.” (1 ಕೊರಿಂ. 11:3) ಕ್ರಿಸ್ತನು ತನ್ನ ತಂದೆಯ ತಲೆತನದ ಕೆಳಗಿದ್ದಾನೆ. ಬುದ್ಧಿಜೀವಿಗಳ ನಡುವೆ ಶಾಂತಿಯೂ ಕ್ರಮಬದ್ಧತೆಯೂ ಇರಬೇಕಾದರೆ ತಲೆತನ ಮತ್ತು ಅಧೀನತೆಯು ಅತ್ಯಾವಶ್ಯಕ. ‘ಯಾರ ಮೂಲಕವಾಗಿ ಎಲ್ಲವೂ ಸೃಷ್ಟಿಸಲ್ಪಟ್ಟವೋ’ ಅವನು ಸಹ ದೇವರ ತಲೆತನಕ್ಕೆ ಅಧೀನನಾಗುವಂತೆ ಅವಶ್ಯಪಡಿಸಲಾಗಿದೆ.—ಕೊಲೊ. 1:16.

4, 5. ಯೆಹೋವನ ಸಂಬಂಧದಲ್ಲಿ ತನಗಿದ್ದ ಸ್ಥಾನದ ಕುರಿತು ಯೇಸುವಿನ ಮನೋಭಾವ ಹೇಗಿತ್ತು?

4 ಯೆಹೋವನ ತಲೆತನಕ್ಕೆ ಅಧೀನನಾಗುತ್ತಾ ಈ ಭೂಮಿಗೆ ಬರುವ ವಿಷಯದಲ್ಲಿ ಯೇಸುವಿನ ಮನೋಭಾವ ಹೇಗಿತ್ತು? ಶಾಸ್ತ್ರಗ್ರಂಥ ಹೇಳುವುದು: “ಅವನು ದೇವರ ಸ್ವರೂಪದಲ್ಲಿದ್ದರೂ, ವಶಪಡಿಸಿಕೊಳ್ಳುವುದಕ್ಕೆ ಅಂದರೆ ದೇವರಿಗೆ ಸಮಾನನಾಗಿರಬೇಕೆಂಬುದಕ್ಕೆ ಯಾವುದೇ ಪರಿಗಣನೆಯನ್ನು ತೋರಿಸಲಿಲ್ಲ. ಅದರ ಬದಲಿಗೆ ಅವನು ತನ್ನನ್ನು ಬರಿದುಮಾಡಿಕೊಂಡು ದಾಸನ ರೂಪವನ್ನು ಧರಿಸಿ ಮನುಷ್ಯರಿಗೆ ಸದೃಶನಾದನು. ಅದಕ್ಕಿಂತಲೂ ಹೆಚ್ಚಾಗಿ, ಅವನು ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಯಾತನಾ ಕಂಬದ ಮೇಲೆ ಮರಣವನ್ನು ಹೊಂದುವಷ್ಟರ ಮಟ್ಟಿಗೆ ವಿಧೇಯನಾದನು.”—ಫಿಲಿ. 2:5-8.

5 ಯೇಸು ಎಲ್ಲ ಸಮಯದಲ್ಲಿಯೂ ತನ್ನ ತಂದೆಯ ಚಿತ್ತಕ್ಕೆ ದೀನತೆಯಿಂದ ಅಧೀನನಾದನು. ಅವನಂದದ್ದು: “ನನ್ನ ಸ್ವಪ್ರೇರಣೆಯಿಂದ ನಾನು ಏನನ್ನೂ ಮಾಡಲಾರೆ, . . . ನಾನು ನನ್ನ ಚಿತ್ತವನ್ನಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಲು ಬಯಸುವುದರಿಂದ ನಾನು ನೀಡುವ ತೀರ್ಪು ನೀತಿಯುಳ್ಳದ್ದಾಗಿದೆ.” (ಯೋಹಾ. 5:30) ‘ನಾನು [ನನ್ನ ತಂದೆಗೆ] ಮೆಚ್ಚಿಕೆಯಾಗಿರುವುದನ್ನೇ ಯಾವಾಗಲೂ ಮಾಡುತ್ತೇನೆ’ ಎಂದು ಅವನು ಘೋಷಿಸಿದನು. (ಯೋಹಾ. 8:29) ಭೂಮಿಯಲ್ಲಿ ತನ್ನ ಜೀವನದ ಕೊನೆಗೆ ಯೇಸು ಪ್ರಾರ್ಥನಾಪೂರ್ವಕವಾಗಿ ತನ್ನ ತಂದೆಗೆ ಹೇಳಿದ್ದು: “ನೀನು ನನಗೆ ಮಾಡಲು ಕೊಟ್ಟಿರುವ ಕೆಲಸವನ್ನು ಪೂರೈಸುವ ಮೂಲಕ ನಾನು ಈ ಭೂಮಿಯಲ್ಲಿ ನಿನ್ನನ್ನು ಮಹಿಮೆಪಡಿಸಿದ್ದೇನೆ.” (ಯೋಹಾ. 17:4) ದೇವರ ತಲೆತನವನ್ನು ಮಾನ್ಯಮಾಡುವುದರಲ್ಲಿ ಮತ್ತು ಸ್ವೀಕರಿಸುವುದರಲ್ಲಿ ಯೇಸುವಿಗೆ ಏನೂ ಸಮಸ್ಯೆ ಇರಲಿಲ್ಲ ಎಂಬುದು ಸ್ಪಷ್ಟ.

ತಂದೆಗೆ ಅಧೀನತೆ ಮಗನಿಗೆ ಪ್ರಯೋಜನಕರ

6. ಯಾವ ಆಶ್ಚರ್ಯಕರ ಗುಣಗಳನ್ನು ಯೇಸು ತೋರಿಸಿದನು?

6 ಭೂಮಿಯಲ್ಲಿದ್ದಾಗ ಯೇಸು ಅನೇಕ ಆಶ್ಚರ್ಯಕರ ಗುಣಗಳನ್ನು ತೋರಿಸಿದನು. ಅವುಗಳಲ್ಲಿ ತನ್ನ ತಂದೆಗೆ ಅವನು ತೋರಿಸಿದ ಮಹಾ ಪ್ರೀತಿಯು ಸೇರಿತ್ತು. “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂದು ಅವನು ಹೇಳಿದನು. (ಯೋಹಾ. 14:31) ಜನರ ಕಡೆಗೂ ಅವನು ಮಹಾ ಪ್ರೀತಿಯನ್ನು ತೋರಿಸಿದನು. (ಮತ್ತಾಯ 22:35-40 ಓದಿ.) ಯೇಸು ದಯಾಪರನೂ ಪರಿಗಣನೆಯುಳ್ಳವನೂ ಆಗಿದ್ದನು. ನಿರ್ದಯನೂ ದರ್ಪದಿಂದ ವರ್ತಿಸುವವನೂ ಆಗಿರಲಿಲ್ಲ. ಅವನಂದದ್ದು: “ಎಲೈ ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು. ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ. ಏಕೆಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.” (ಮತ್ತಾ. 11:28-30) ಕುರಿಸದೃಶರಾದ ಎಲ್ಲ ವಯಸ್ಸಿನ ಜನರು, ವಿಶೇಷವಾಗಿ ದಬ್ಬಲ್ಪಟ್ಟವರೂ ಪೀಡನೆಗೆ ಒಳಗಾದವರೂ ಯೇಸುವಿನ ಹರ್ಷಕರ ವ್ಯಕ್ತಿತ್ವದಲ್ಲಿ ಮತ್ತು ಉತ್ಕೃಷ್ಟಕ ಸಂದೇಶದಲ್ಲಿ ಮಹಾ ಸಾಂತ್ವನವನ್ನು ಕಂಡುಕೊಂಡರು.

7, 8. ರಕ್ತಸ್ರಾವವಿದ್ದ ಸ್ತ್ರೀಯ ಮೇಲೆ ಧರ್ಮಶಾಸ್ತ್ರವು ಯಾವ ನಿರ್ಬಂಧವನ್ನು ಹೊರಿಸಿತ್ತು? ಆದರೆ ಯೇಸು ಅವಳೊಂದಿಗೆ ಹೇಗೆ ವ್ಯವಹರಿಸಿದನು?

7 ಸ್ತ್ರೀಯರ ಸಂಗಡ ಯೇಸುವಿನ ವರ್ತನೆ ಹೇಗಿತ್ತು ಎಂಬುದನ್ನು ಪರಿಗಣಿಸಿ. ಇತಿಹಾಸದುದ್ದಕ್ಕೂ ಅನೇಕ ಪುರುಷರು ಸ್ತ್ರೀಯರನ್ನು ಅತಿ ಕೆಟ್ಟದಾಗಿ ಉಪಚರಿಸಿದ್ದಾರೆ. ಪುರಾತನ ಇಸ್ರಾಯೇಲಿನ ಧಾರ್ಮಿಕ ಮುಖಂಡರ ವಿಷಯದಲ್ಲಿಯೂ ಅದು ಸತ್ಯ. ಆದರೆ ಯೇಸು ಸ್ತ್ರೀಯರನ್ನು ಗೌರವಭಾವದಿಂದ ಉಪಚರಿಸಿದನು. 12 ವರ್ಷಗಳಿಂದ ರಕ್ತಸ್ರಾವರೋಗದಿಂದ ಬಳಲುತ್ತಿದ್ದ ಸ್ತ್ರೀಯೊಬ್ಬಳೊಂದಿಗೆ ಅವನು ವರ್ತಿಸಿದ ರೀತಿಯಿಂದ ಇದು ಸ್ಪಷ್ಟವಾಗುತ್ತದೆ. ವೈದ್ಯರಿಂದ ‘ಬಹು ಕಷ್ಟವನ್ನು ಅನುಭವಿಸಿದ್ದ ಅವಳು’ ಗುಣವಾಗಲು ಪ್ರಯತ್ನಿಸುತ್ತಾ ತನ್ನಲ್ಲಿದ್ದದ್ದೆಲ್ಲವನ್ನು ಖರ್ಚುಮಾಡಿದ್ದಳು. ಅಷ್ಟೆಲ್ಲ ಪ್ರಯಾಸ ಪಟ್ಟಿದ್ದರೂ ಅವಳ “ರೋಗವು ಇನ್ನೂ ಹೆಚ್ಚಾಗಿತ್ತು.” ಧರ್ಮಶಾಸ್ತ್ರದ ಕೆಳಗೆ ಅವಳನ್ನು ಅಶುದ್ಧಳಾಗಿ ಪರಿಗಣಿಸಲಾಗಿತ್ತು. ಅವಳನ್ನು ಮುಟ್ಟುವವರು ಸಹ ಅಶುದ್ಧರಾಗುತ್ತಿದ್ದರು.—ಯಾಜ. 15:19, 25.

8 ಯೇಸು ರೋಗಿಗಳನ್ನು ವಾಸಿಮಾಡುತ್ತಾನೆ ಎಂಬ ಸುದ್ದಿಯನ್ನು ಆ ಸ್ತ್ರೀಯು ಕೇಳಿದಾಗ ಅವಳು ಅವನ ಸುತ್ತಲೂ ಇದ್ದ ಜನರ ಗುಂಪಿನೊಂದಿಗೆ ಸೇರಿಕೊಂಡು “ನಾನು ಅವನ ಮೇಲಂಗಿಯನ್ನು ಮುಟ್ಟಿದರೆ ಸಾಕು, ವಾಸಿಯಾಗುವೆನು” ಅಂದುಕೊಂಡಳು. ಅವಳು ಯೇಸುವನ್ನು ಮುಟ್ಟಿದಳು ಮತ್ತು ಆ ಕೂಡಲೆ ಅವಳಿಗೆ ಗುಣವಾಯಿತು. ತನ್ನ ಮೇಲಂಗಿಯನ್ನು ಅವಳು ಮುಟ್ಟಬಾರದಿತ್ತು ಎಂದು ಯೇಸುವಿಗೆ ತಿಳಿದಿತ್ತು. ಆದರೂ ಅವನು ಅವಳನ್ನು ಗದರಿಸಲಿಲ್ಲ, ಬದಲಾಗಿ ಕರುಣೆ ತೋರಿಸಿದನು. ಅಷ್ಟೆಲ್ಲ ವರುಷಗಳಿಂದ ರೋಗದಿಂದ ನರಳುತ್ತಿದ್ದ ಅವಳಿಗೆ ಹೇಗನಿಸಿದ್ದಿರಬೇಕು ಎಂಬುದನ್ನು ಅವನು ಅರ್ಥಮಾಡಿಕೊಂಡನು ಮತ್ತು ಸಹಾಯದ ಅತ್ಯಾವಶ್ಯಕತೆ ಆಕೆಗಿತ್ತು ಎಂಬುದನ್ನು ಕಂಡನು. ಕನಿಕರದಿಂದ ಯೇಸು ಅವಳಿಗಂದದ್ದು: “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು; . . . ಆರೋಗ್ಯದಿಂದಿರು.”—ಮಾರ್ಕ 5:25-34.

9. ಮಕ್ಕಳು ಯೇಸುವಿನ ಬಳಿಗೆ ಬರುವುದನ್ನು ಅವನ ಶಿಷ್ಯರು ತಡೆದಾಗ ಅವನ ಪ್ರತಿವರ್ತನೆ ಏನಾಗಿತ್ತು?

9 ಚಿಕ್ಕ ಮಕ್ಕಳು ಸಹ ಯೇಸುವಿನ ಎದುರಲ್ಲಿ ಹಾಯಾಗಿ ಇರುತ್ತಿದ್ದರು. ಒಂದು ಸಂದರ್ಭದಲ್ಲಿ ಜನರು ಮಕ್ಕಳನ್ನು ಅವನ ಬಳಿ ಕರೆತಂದಾಗ ಅವನ ಶಿಷ್ಯರು ಅವರನ್ನು ಗದರಿಸಿದರು. ಮಕ್ಕಳ ಕಾಟವನ್ನು ಯೇಸು ಇಷ್ಟಪಡಲಾರ ಎಂದವರು ನೆನಸಿದ್ದಿರಬೇಕು. ಆದರೆ ಯೇಸುವಿನ ಮನೋಭಾವ ಆ ರೀತಿ ಇರಲಿಲ್ಲ. ಶಾಸ್ತ್ರಗ್ರಂಥದ ದಾಖಲೆಯು ನಮಗನ್ನುವುದು: “ಇದನ್ನು ನೋಡಿ ಯೇಸು ಕೋಪಗೊಂಡು [ಶಿಷ್ಯರಿಗೆ], ‘ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ; ಅವುಗಳನ್ನು ತಡೆಯಲು ಪ್ರಯತ್ನಿಸಬೇಡಿ, ಏಕೆಂದರೆ ದೇವರ ರಾಜ್ಯವು ಇಂಥವರಿಗೆ ಸೇರಿದ್ದಾಗಿದೆ’” ಎಂದನು. ತದನಂತರ “ಅವನು ಮಕ್ಕಳನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಅವುಗಳ ಮೇಲೆ ತನ್ನ ಕೈಗಳನ್ನಿಟ್ಟು ಆಶೀರ್ವದಿಸತೊಡಗಿದನು.” ಯೇಸು ಮಕ್ಕಳನ್ನು ಬರೇ ಸಹಿಸಿಕೊಂಡದ್ದಲ್ಲ, ಹೃತ್ಪೂರ್ವಕವಾಗಿ ತನ್ನ ಬಳಿಗೆ ಸೇರಿಸಿಕೊಂಡನು ಸಹ.—ಮಾರ್ಕ 10:13-16.

10. ಯೇಸು ತೋರಿಸಿದ ಆ ಗುಣಗಳನ್ನು ಅವನು ಹೇಗೆ ಹೊಂದಸಾಧ್ಯವಾಯಿತು?

10 ಭೂಮಿಯ ಮೇಲೆ ಜೀವಿಸಿದ್ದಾಗ ಯೇಸು ತೋರಿಸಿದ ಆ ಗುಣಗಳನ್ನು ಅವನು ಹೇಗೆ ಹೊಂದಸಾಧ್ಯವಾಯಿತು? ತನ್ನ ಮಾನವಪೂರ್ವ ಜೀವಿತದಲ್ಲಿ ಅವನು ಅನೇಕ ಯುಗಗಳಾದ್ಯಂತ ತನ್ನ ಸ್ವರ್ಗೀಯ ತಂದೆಯನ್ನು ನೋಡಿದ್ದನು ಮತ್ತು ಆತನ ಮಾರ್ಗಗಳನ್ನು ಕಲಿತಿದ್ದನು. (ಜ್ಞಾನೋಕ್ತಿ 8:22, 23, 30 ಓದಿ.) ಯೆಹೋವನು ತನ್ನ ಎಲ್ಲ ಸೃಷ್ಟಿಯ ಮೇಲೆ ಪ್ರೀತಿಪೂರ್ವಕವಾದ ತಲೆತನ ನಡಿಸುವುದನ್ನು ಅವನು ಸ್ವರ್ಗದಲ್ಲಿದ್ದಾಗ ನೋಡಿದ್ದನು ಮತ್ತು ಅದನ್ನು ತನ್ನ ಸ್ವಂತದ್ದಾಗಿ ಮಾಡಿಕೊಂಡನು. ಒಂದುವೇಳೆ ಯೇಸು ಅಧೀನನಾಗಿರದೇ ಇದ್ದಲ್ಲಿ ಅದನ್ನು ಮಾಡಲು ಶಕ್ತನಾಗುತ್ತಿದ್ದನೊ? ತನ್ನ ತಂದೆಗೆ ಅಧೀನತೆಯಲ್ಲಿರುವುದು ಅವನಿಗೆ ಒಂದು ಹರ್ಷಕರ ವಿಷಯವಾಗಿತ್ತು ಮತ್ತು ಅಂಥ ಅಧೀನ ಮಗನು ತನಗಿದ್ದದಕ್ಕಾಗಿ ಯೆಹೋವನು ಸಂತೋಷಪಟ್ಟನು. ಭೂಮಿಯಲ್ಲಿದ್ದಾಗ ಯೇಸು ತನ್ನ ಸ್ವರ್ಗೀಯ ತಂದೆಯ ಅದ್ಭುತಕರ ಗುಣಗಳನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು. ಸ್ವರ್ಗೀಯ ರಾಜ್ಯದ ದೇವರ ನೇಮಿತ ಅರಸನಾದ ಕ್ರಿಸ್ತನಿಗೆ ಅಧೀನರಾಗಿರುವುದು ನಮಗೆ ಎಂಥ ಗೌರವ!

ಕ್ರಿಸ್ತನ ಗುಣಗಳನ್ನು ಅನುಕರಿಸಿ

11. (ಎ) ಯಾರನ್ನು ಅನುಕರಿಸಲು ನಾವು ಶ್ರಮಿಸಬೇಕು? (ಬಿ) ಸಭೆಯಲ್ಲಿರುವ ಪುರುಷರು ಯೇಸುವನ್ನು ಅನುಕರಿಸಲು ವಿಶೇಷವಾಗಿ ಶ್ರಮಿಸಬೇಕು ಏಕೆ?

11 ಕ್ರೈಸ್ತ ಸಭೆಯಲ್ಲಿರುವ ಎಲ್ಲರೂ ವಿಶೇಷವಾಗಿ ಪುರುಷರು ಕ್ರಿಸ್ತನ ಗುಣಗಳನ್ನು ಅನುಕರಿಸಲು ಸದಾ ಶ್ರಮಿಸಬೇಕು. ಈ ಮೊದಲೇ ಗಮನಿಸಿದ ಪ್ರಕಾರ “ಪ್ರತಿ ಪುರುಷನಿಗೆ ಕ್ರಿಸ್ತನು ತಲೆ” ಎಂದು ಬೈಬಲ್‌ ಘೋಷಿಸುತ್ತದೆ. ಕ್ರಿಸ್ತನು ತನ್ನ ತಲೆಯಾದ ಸತ್ಯ ದೇವರನ್ನು ಅನುಕರಿಸಿದ ಹಾಗೆಯೇ ಕ್ರೈಸ್ತ ಪುರುಷರು ತಮ್ಮ ತಲೆಯಾದ ಕ್ರಿಸ್ತನನ್ನು ಅನುಕರಿಸಲು ಪ್ರಯಾಸಪಡಬೇಕು. ಅಪೊಸ್ತಲ ಪೌಲನು ಸಹ ಕ್ರೈಸ್ತನಾದಾಗ ಅದನ್ನೇ ಮಾಡಿದನು. “ನಾನು ಕ್ರಿಸ್ತನನ್ನು ಅನುಕರಿಸುವವನಾಗಿರುವಂತೆಯೇ ನೀವೂ ನನ್ನನ್ನು ಅನುಕರಿಸುವವರಾಗಿರಿ” ಎಂದು ಜೊತೆಕ್ರೈಸ್ತರಿಗೆ ಅವನು ಬುದ್ಧಿಹೇಳಿದನು. (1 ಕೊರಿಂ. 11:1) ಅಲ್ಲದೆ ಅಪೊಸ್ತಲ ಪೇತ್ರನು ಹೇಳಿದ್ದು: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ, ಏಕೆಂದರೆ ಕ್ರಿಸ್ತನು ಸಹ ನಿಮಗೋಸ್ಕರ ಕಷ್ಟವನ್ನು ಅನುಭವಿಸಿ ನೀವು ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಕ್ರಿಸ್ತನನ್ನು ಅನುಕರಿಸಲು ಕೊಟ್ಟ ಈ ಬುದ್ಧಿವಾದವು ಪುರುಷರಿಗೆ ಇನ್ನೊಂದು ಕಾರಣಕ್ಕಾಗಿಯೂ ವಿಶೇಷವಾಗಿ ಆಸಕ್ತಿಕರ. ಏಕೆಂದರೆ ಅವರು ಹಿರಿಯರಾಗಿ ಮತ್ತು ಶುಶ್ರೂಷಾ ಸೇವಕರಾಗಿ ಸೇವೆ ಮಾಡುತ್ತಾರೆ. ಯೆಹೋವನನ್ನು ಅನುಕರಿಸುವುದರಲ್ಲಿ ಯೇಸು ಸಂತೋಷವನ್ನು ಕಂಡುಕೊಂಡಂತೆಯೇ ಕ್ರೈಸ್ತ ಪುರುಷರು ಕ್ರಿಸ್ತನನ್ನೂ ಅವನ ಗುಣಗಳನ್ನೂ ಅನುಕರಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕು.

12, 13. ಹಿರಿಯರು ತಮ್ಮ ವಶಕ್ಕೆ ಕೊಡಲ್ಪಟ್ಟ ಕುರಿಗಳೊಂದಿಗೆ ಹೇಗೆ ವ್ಯವಹರಿಸಬೇಕು?

12 ಕ್ರೈಸ್ತ ಸಭೆಯಲ್ಲಿರುವ ಹಿರಿಯರಿಗೆ ಕ್ರಿಸ್ತನಂತಿರಲು ಕಲಿಯುವ ಜವಾಬ್ದಾರಿಯಿದೆ. ಪೇತ್ರನು ಹಿರೀಪುರುಷರಿಗೆ ಅಥವಾ ಹಿರಿಯರಿಗೆ ಈ ಬುದ್ಧಿವಾದವನ್ನಿತ್ತನು: “ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ; ನಿರ್ಬಂಧದಿಂದಲ್ಲ, ಇಚ್ಛಾಪೂರ್ವಕವಾಗಿ ಮಾಡಿರಿ; ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯಿಂದಲ್ಲ, ಸಿದ್ಧಮನಸ್ಸಿನಿಂದ ಮಾಡಿರಿ. ದೇವರ ಸೊತ್ತಾಗಿರುವವರ ಮೇಲೆ ದೊರೆತನ ಮಾಡುವವರಾಗಿರದೆ ಮಂದೆಗೆ ಮಾದರಿಗಳಾಗಿರಿ.” (1 ಪೇತ್ರ 5:1-3) ಕ್ರೈಸ್ತ ಹಿರಿಯರು ದಬ್ಬಾಳಿಕೆ ನಡೆಸುವವರೂ ದರ್ಪದಿಂದ ವರ್ತಿಸುವವರೂ ಸ್ವೇಚ್ಛಾನುಸಾರ ನಡೆಯುವವರೂ ಅಥವಾ ನಿರ್ದಯರೂ ಆಗಿರಬಾರದು. ಕ್ರಿಸ್ತನ ಮಾದರಿಯನ್ನು ಅನುಕರಿಸುತ್ತಾ ಅವರು ಪ್ರೀತಿಪರರೂ, ಪರಿಗಣನೆಯುಳ್ಳವರೂ, ದೀನರೂ ಮತ್ತು ತಮ್ಮ ವಶಕ್ಕೆ ಕೊಡಲ್ಪಟ್ಟ ಕುರಿಗಳನ್ನು ಪಾಲಿಸುವುದರಲ್ಲಿ ದಯಾಪರರೂ ಆಗಿರಲು ಪ್ರಯಾಸಪಡಬೇಕು.

13 ಸಭೆಯಲ್ಲಿ ಮೇಲ್ವಿಚಾರಣೆ ನಡೆಸುವವರು ಅಪರಿಪೂರ್ಣ ಪುರುಷರಾಗಿದ್ದಾರೆ ಮತ್ತು ಅವರು ಈ ಕೊರತೆಯನ್ನು ಸದಾ ಅರಿತವರಾಗಿರಬೇಕು. (ರೋಮ. 3:23) ಆದುದರಿಂದ ಅವರು ಯೇಸುವಿನ ಕುರಿತು ಕಲಿಯಲು ಮತ್ತು ಅವನ ಪ್ರೀತಿಯನ್ನು ಅನುಕರಿಸಲು ಆತುರವುಳ್ಳವರಾಗಿರಬೇಕು. ದೇವರು ಮತ್ತು ಕ್ರಿಸ್ತನು ಜನರನ್ನು ಯಾವ ರೀತಿಯಲ್ಲಿ ಉಪಚರಿಸುತ್ತಾರೆ ಎಂಬ ವಿಷಯವನ್ನು ಪರ್ಯಾಲೋಚಿಸಿ ಅನಂತರ ಅವರನ್ನು ಅನುಕರಿಸುವ ಅಗತ್ಯವು ಅವರಿಗಿದೆ. ಪೇತ್ರನು ನಮ್ಮನ್ನು ಪ್ರಬೋಧಿಸುವುದು: “ನೀವೆಲ್ಲರೂ ಒಬ್ಬರ ಕಡೆಗೊಬ್ಬರು ದೀನಮನಸ್ಸಿನಿಂದ ನಡುಕಟ್ಟಲ್ಪಟ್ಟವರಾಗಿರಿ, ಏಕೆಂದರೆ ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ ದೀನರಿಗೆ ಅಪಾತ್ರ ದಯೆಯನ್ನು ಅನುಗ್ರಹಿಸುತ್ತಾನೆ.”—1 ಪೇತ್ರ 5:5.

14. ಹಿರಿಯರು ಇತರರಿಗೆ ಎಷ್ಟರ ಮಟ್ಟಿಗೆ ಗೌರವವನ್ನು ತೋರಿಸಬೇಕು?

14 ದೇವರ ಮಂದೆಯೊಂದಿಗೆ ವ್ಯವಹರಿಸುವಾಗ ಸಭೆಯಲ್ಲಿರುವ ನೇಮಿತ ಪುರುಷರು ಉತ್ತಮ ಗುಣಗಳನ್ನು ಪ್ರದರ್ಶಿಸಬೇಕು. ರೋಮನ್ನರಿಗೆ 12:10 ಹೇಳುವುದು: “ಸಹೋದರ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” ಹಿರಿಯರು ಮತ್ತು ಶುಶ್ರೂಷಾ ಸೇವಕರು ಇತರರಿಗೆ ಗೌರವ ತೋರಿಸುತ್ತಾರೆ. ಕ್ರೈಸ್ತರೆಲ್ಲರಂತೆ ಈ ಪುರುಷರು ‘ಕಲಹಶೀಲ ಮನೋಭಾವದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ದೀನಮನಸ್ಸಿನಿಂದ ಇತರರನ್ನು ತಮಗಿಂತಲೂ ಶ್ರೇಷ್ಠರೆಂದು ಎಣಿಸಬೇಕು.’ (ಫಿಲಿ. 2:3) ಮುಂದಾಳುತ್ವ ವಹಿಸುವವರು ಇತರರನ್ನು ತಮಗಿಂತ ಶ್ರೇಷ್ಠರೆಂದು ವೀಕ್ಷಿಸಬೇಕು ನಿಶ್ಚಯ. ಹಾಗೆ ಮಾಡುವ ಮೂಲಕ ಈ ನೇಮಿತ ಪುರುಷರು ಪೌಲನ ಸಲಹೆಯನ್ನು ಅನುಸರಿಸುವವರಾಗುವರು. ಅವನಂದದ್ದು: “ಬಲವುಳ್ಳವರಾದ ನಾವು ಬಲವಿಲ್ಲದವರ ಬಲಹೀನತೆಗಳನ್ನು ತಾಳಿಕೊಳ್ಳಬೇಕು; ನಮ್ಮನ್ನು ನಾವೇ ಸಂತೋಷಪಡಿಸಿಕೊಳ್ಳುವವರಾಗಿ ಇರಬಾರದು. ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಭಕ್ತಿವೃದ್ಧಿಗಾಗಿ ಒಳ್ಳೇದನ್ನೇ ಮಾಡುತ್ತಾ ಅವನನ್ನು ಮೆಚ್ಚಿಸಲಿ. ಕ್ರಿಸ್ತನು ಸಹ ತನ್ನನ್ನು ತಾನೇ ಮೆಚ್ಚಿಸಿಕೊಳ್ಳಲಿಲ್ಲ.”—ರೋಮ. 15:1-3.

‘ಪತ್ನಿಯರಿಗೆ ಗೌರವವನ್ನು ಸಲ್ಲಿಸಿರಿ’

15. ಗಂಡಂದಿರು ತಮ್ಮ ಪತ್ನಿಯರೊಂದಿಗೆ ಹೇಗೆ ವ್ಯವಹರಿಸಬೇಕು?

15 ವಿವಾಹಿತ ಪುರುಷರಿಗೆ ಪೇತ್ರನೀಯುವ ಸಲಹೆಯನ್ನು ಈಗ ಗಮನಿಸಿರಿ. ಅವನು ಬರೆದದ್ದು: “ಗಂಡಂದಿರೇ, ನೀವು ಅದೇ ರೀತಿಯಲ್ಲಿ [ನಿಮ್ಮ ಪತ್ನಿಯರೊಂದಿಗೆ] ಜ್ಞಾನಾನುಸಾರವಾಗಿ ಬಾಳುವೆ ಮಾಡಿರಿ; ದುರ್ಬಲ ಪಾತ್ರೆಗೋ ಎಂಬಂತೆ ಸ್ತ್ರೀಯರಿಗೆ ಗೌರವವನ್ನು ಸಲ್ಲಿಸಿರಿ.” (1 ಪೇತ್ರ 3:7) ಯಾರನ್ನಾದರೂ ಗೌರವಿಸುವುದೆಂದರೆ ಆ ವ್ಯಕ್ತಿಯನ್ನು ಹೆಚ್ಚು ಆದರದಿಂದ ನೋಡುವುದಾಗಿದೆ. ಹೀಗೆ ನೀವು ಅಂಥ ವ್ಯಕ್ತಿಯ ಅಭಿಪ್ರಾಯಗಳನ್ನು, ಅಗತ್ಯಗಳನ್ನು ಮತ್ತು ಅಪೇಕ್ಷೆಗಳನ್ನು ಪರಿಗಣಿಸುವಿರಿ ಮತ್ತು ಪ್ರಾಮುಖ್ಯ ಕಾರಣವಿದ್ದ ಹೊರತು ಬೇರೆ ಸಮಯಗಳಲ್ಲಿ ಅವರಿಗೆ ಮಣಿಯುವಿರಿ. ಗಂಡನು ಇದೇ ರೀತಿಯಲ್ಲಿ ತನ್ನ ಪತ್ನಿಯೊಂದಿಗೆ ವ್ಯವಹರಿಸಬೇಕು.

16. ಪತ್ನಿಯರನ್ನು ಗೌರವಿಸುವ ವಿಷಯದಲ್ಲಿ ಗಂಡಂದಿರಿಗೆ ದೇವರ ವಾಕ್ಯವು ಯಾವ ಎಚ್ಚರಿಕೆಯನ್ನು ಕೊಡುತ್ತದೆ?

16 ಹೆಂಡತಿಯರಿಗೆ ಗಂಡಂದಿರು ಗೌರವ ಸಲ್ಲಿಸುವ ಕುರಿತು ಹೇಳುವಾಗ ಪೇತ್ರನು ಈ ಎಚ್ಚರಿಕೆಯನ್ನು ಕೂಡಿಸುತ್ತಾನೆ: “ಹೀಗೆ ಮಾಡುವುದಾದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಾಗುವುದಿಲ್ಲ.” (1 ಪೇತ್ರ 3:7) ಪುರುಷನೊಬ್ಬನು ತನ್ನ ಪತ್ನಿಯನ್ನು ಉಪಚರಿಸುವ ವಿಧವನ್ನು ಯೆಹೋವನು ಎಷ್ಟು ಗಂಭೀರವಾಗಿ ವೀಕ್ಷಿಸುತ್ತಾನೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಆಕೆಗೆ ಗೌರವ ತೋರಿಸಲು ತಪ್ಪುವುದು ಅವನ ಪ್ರಾರ್ಥನೆಗಳಿಗೆ ಅಡ್ಡಿಯನ್ನು ತರಬಲ್ಲದು. ಅದಲ್ಲದೆ ತಮ್ಮ ಗಂಡಂದಿರಿಂದ ಗೌರವಪೂರ್ವಕವಾಗಿ ಉಪಚರಿಸಲ್ಪಡುವುದಕ್ಕೆ ಪತ್ನಿಯರು ಸಾಮಾನ್ಯವಾಗಿ ಧನಾತ್ಮಕವಾಗಿ ಪ್ರತಿಕ್ರಿಯಿಸುವುದಿಲ್ಲವೊ?

17. ಗಂಡನು ತನ್ನ ಹೆಂಡತಿಯನ್ನು ಎಷ್ಟರ ಮಟ್ಟಿಗೆ ಪ್ರೀತಿಸಬೇಕು?

17 ತಮ್ಮ ಪತ್ನಿಯರನ್ನು ಪ್ರೀತಿಸುವ ವಿಷಯದಲ್ಲಿ ದೇವರ ವಾಕ್ಯವು ಸಲಹೆ ನೀಡುವುದು: “ಗಂಡಂದಿರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನಲ್ಲಿದ್ದಾರೆ. . . . ಯಾವನೂ ಎಂದೂ ಸ್ವಶರೀರವನ್ನು ದ್ವೇಷಿಸಿದ್ದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ; ಕ್ರಿಸ್ತನು ಸಹ ಸಭೆಯನ್ನು ಪೋಷಿಸಿ ಸಂರಕ್ಷಿಸುತ್ತಾನೆ. . . . ನಿಮ್ಮಲ್ಲಿ ಪ್ರತಿಯೊಬ್ಬನು ವೈಯಕ್ತಿಕವಾಗಿ ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಲಿ.” (ಎಫೆ. 5:28, 29, 33) ಗಂಡಂದಿರು ತಮ್ಮ ಹೆಂಡತಿಯರನ್ನು ಎಷ್ಟರ ಮಟ್ಟಿಗೆ ಪ್ರೀತಿಸಬೇಕು? ಪೌಲನು ಬರೆದದ್ದು: “ಗಂಡಂದಿರೇ, ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ.” (ಎಫೆ. 5:25) ಹೌದು, ಕ್ರಿಸ್ತನು ಇತರರಿಗಾಗಿ ಮಾಡಿದಂತೆಯೇ ಗಂಡನು ತನ್ನ ಹೆಂಡತಿಗಾಗಿ ತನ್ನ ಪ್ರಾಣವನ್ನಾದರೂ ಕೊಡಲು ಸಿದ್ಧನಿರಬೇಕು. ಕ್ರೈಸ್ತ ಪತಿಯು ತನ್ನ ಪತ್ನಿಯೊಂದಿಗೆ ಕೋಮಲವಾಗಿ, ಪರಿಗಣನೆಯಿಂದ, ಆಸಕ್ತಿಪೂರ್ವಕವಾಗಿ ಹಾಗೂ ನಿಸ್ವಾರ್ಥದಿಂದ ವ್ಯವಹರಿಸುವಾಗ ಅವನ ತಲೆತನಕ್ಕೆ ಅಧೀನಳಾಗಿರಲು ಪತ್ನಿಗೆ ಸುಲಭವಾಗುತ್ತದೆ.

18. ವಿವಾಹದಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಪುರುಷರಿಗೆ ಯಾವ ಸಹಾಯ ಲಭ್ಯವಿದೆ?

18 ಈ ರೀತಿಯಲ್ಲಿ ಪತ್ನಿಯರಿಗೆ ಗೌರವ ಸಲ್ಲಿಸುವುದು ಗಂಡಂದಿರಿಂದ ತೀರ ಹೆಚ್ಚನ್ನು ಅಪೇಕ್ಷಿಸಿದಂತಾಗುತ್ತದೊ? ಇಲ್ಲ. ಯೆಹೋವನು ಅವರಿಂದ ಅವರ ಶಕ್ತಿ ಸಾಮರ್ಥ್ಯವನ್ನು ಮೀರುವ ಒಂದು ವಿಷಯವನ್ನು ಮಾಡಲು ಎಂದೂ ಕೇಳನು. ಅದಲ್ಲದೆ ಯೆಹೋವನ ಆರಾಧಕರಿಗೆ ವಿಶ್ವದಲ್ಲೇ ಅತಿ ಮಹತ್ತಾದ ಶಕ್ತಿಯ ಸಹಾಯ ಲಭ್ಯವಿದೆ. ಅದು ದೇವರ ಪವಿತ್ರಾತ್ಮವೇ. ಯೇಸುವಂದದ್ದು: “ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡುವುದು ಹೇಗೆಂದು ತಿಳಿದಿರುವಲ್ಲಿ ಸ್ವರ್ಗದಲ್ಲಿರುವ ತಂದೆಯು ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನು ಕೊಡುವನಲ್ಲವೆ?” (ಲೂಕ 11:13) ಗಂಡಂದಿರು ತಮ್ಮ ಪ್ರಾರ್ಥನೆಯಲ್ಲಿ, ಪತ್ನಿಯರೂ ಸೇರಿದಂತೆ ಇತರರೊಂದಿಗಿನ ತಮ್ಮ ವ್ಯವಹಾರದಲ್ಲಿ ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಸಹಾಯಮಾಡುವಂತೆ ಕೇಳಸಾಧ್ಯವಿದೆ.—ಅ. ಕಾರ್ಯಗಳು. 5:32 ಓದಿ.

19. ಮುಂದಿನ ಅಧ್ಯಯನ ಲೇಖನದಲ್ಲಿ ನಾವೇನನ್ನು ಚರ್ಚಿಸುವೆವು?

19 ಕ್ರಿಸ್ತನಿಗೆ ಅಧೀನರಾಗುವುದು ಹೇಗೆ ಮತ್ತು ಅವನ ತಲೆತನವನ್ನು ಅನುಕರಿಸುವುದು ಹೇಗೆ ಎಂದು ಕಲಿಯುವ ಗಂಭೀರವಾದ ಜವಾಬ್ದಾರಿಯನ್ನು ಪುರುಷರು ವಹಿಸುತ್ತಾರೆ ಎಂಬುದು ನಿಶ್ಚಯ. ಆದರೆ ಸ್ತ್ರೀಯರ ಕುರಿತು, ಅದರಲ್ಲೂ ವಿಶೇಷವಾಗಿ ಪತ್ನಿಯರ ಕುರಿತೇನು? ಯೆಹೋವನ ಏರ್ಪಾಡಿನಲ್ಲಿ ಅವರು ತಮ್ಮ ಪಾತ್ರವನ್ನು ಹೇಗೆ ವೀಕ್ಷಿಸಬೇಕು ಎಂಬುದನ್ನು ಮುಂದಿನ ಲೇಖನವು ಚರ್ಚಿಸುವುದು.

ನಿಮಗೆ ಜ್ಞಾಪಕವಿದೆಯೊ?

• ಯೇಸುವಿನ ಯಾವ ಗುಣಗಳನ್ನು ನಾವು ಅನುಕರಿಸಬೇಕು?

• ಹಿರಿಯರು ತಮ್ಮ ವಶದಲ್ಲಿರುವ ಕುರಿಗಳೊಂದಿಗೆ ಹೇಗೆ ವ್ಯವಹರಿಸಬೇಕು?

• ಗಂಡನು ತನ್ನ ಹೆಂಡತಿಯನ್ನು ಹೇಗೆ ಉಪಚರಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರಗಳು]

ಇತರರಿಗೆ ಗೌರವ ತೋರಿಸುವ ಮೂಲಕ ಯೇಸುವನ್ನು ಅನುಕರಿಸಿ