ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನು ಪ್ರಾಮಾಣಿಕತೆ ಎನ್ನುತ್ತೀರೋ?

ಇದನ್ನು ಪ್ರಾಮಾಣಿಕತೆ ಎನ್ನುತ್ತೀರೋ?

ಇದನ್ನು ಪ್ರಾಮಾಣಿಕತೆ ಎನ್ನುತ್ತೀರೋ?

“ಅಪಘಾತದ ವರದಿಯಲ್ಲಿ ಸ್ವಲ್ಪ ಹೆಚ್ಚುಕಡಿಮೆ ಮಾಡಿ ಬರೆಯಿರಿ. ಕೆಲಸ ಸುಲಭವಾಗುತ್ತದೆ.”

“ತೆರಿಗೆ ಅಧಿಕಾರಿಗಳಿಗೆ ಎಲ್ಲ ಮಾಹಿತಿ ಕೊಡಬೇಕೆಂದೇನಿಲ್ಲ.”

“ಏನೇ ಮಾಡಿದರೂ ಸಿಕ್ಕಿಬೀಳಬಾರದು ಅಷ್ಟೇ.”

“ಬಿಟ್ಟಿ ಸಿಗುವಾಗ ಸುಮ್ಮನೆ ದುಡ್ಡು ಯಾಕೆ ಕೊಡಬೇಕು?”

ಹಣಕಾಸು ಇಲ್ಲವೆ ಇತರ ವಿಷಯಗಳ ಬಗ್ಗೆ ನಿಮಗೆ ಇಂಥ ಸಲಹೆಗಳು ಸಿಕ್ಕಿರಬಹುದು. ಕೆಲವರ ಬಳಿಯಂತೂ ಪ್ರತಿಯೊಂದು ಸಮಸ್ಯೆಗೆ ಏನಾದರೊಂದು ಚತುರ ‘ಉಪಾಯ’ ಇದ್ದೇ ಇರುತ್ತದೆ. ಆದರೆ ಪ್ರಶ್ನೆಯೇನೆಂದರೆ ಆ ಉಪಾಯಗಳು ಪ್ರಾಮಾಣಿಕವೋ?

ಇಂದು ಅಪ್ರಾಮಾಣಿಕತೆಯು ಸರ್ವೇಸಾಮಾನ್ಯವಾಗಿದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲಿಕ್ಕೆ, ಹಣ ಮಾಡಲಿಕ್ಕೆ, ಜೀವನದಲ್ಲಿ ಮುಂದೆ ಬರಲಿಕ್ಕೆ ಸುಳ್ಳುಹೇಳಿದರೆ, ಮೋಸಮಾಡಿದರೆ, ಕಳ್ಳತನಮಾಡಿದರೆ ತಪ್ಪೇನಿಲ್ಲವೆಂದು ಹೆಚ್ಚಿನ ಜನರು ನೆನಸುತ್ತಾರೆ. ಪ್ರಾಮಾಣಿಕತೆಯ ವಿಷಯದಲ್ಲಿ ಸಮಾಜದ ಗಣ್ಯರೇ ಒಳ್ಳೇ ಮಾದರಿಯನ್ನಿಡುವುದಿಲ್ಲ. ಉದಾಹರಣೆಗೆ ಯುರೋಪಿನ ದೇಶವೊಂದರಲ್ಲಿ, ಮೋಸ ಮತ್ತು ಹಣದ ದುರ್ವವಹಾರದ ಪ್ರಕರಣಗಳು ಇಸವಿ 2005ರಿಂದ 2006ರೊಳಗೆ 85% ಹೆಚ್ಚಾದವು. ಇವುಗಳಲ್ಲಿ ಸೇರಿಸಿರದ ಚಿಕ್ಕಪುಟ್ಟ ಪ್ರಕರಣಗಳು ಇನ್ನೆಷ್ಟಿವೆಯೋ? ಏಕೆಂದರೆ ಇಂಥ ಪ್ರಕರಣಗಳನ್ನು ಅಲ್ಲಿನ ಕೆಲವು ಜನರು “ಕ್ಷುಲ್ಲಕ ತಪ್ಪುಗಳು” ಎಂದು ಪರಿಗಣಿಸುತ್ತಾರೆ. ಹೀಗಿರುವುದರಿಂದ, ಆ ದೇಶದ ಹೆಸರಾಂತ ವ್ಯಾಪಾರಿಗಳು ಹಾಗೂ ರಾಜಕಾರಣಿಗಳು ತಮ್ಮ ವೃತ್ತಿಜೀವನದಲ್ಲಿ ಮೇಲೇರಲು ನಕಲಿ ಪ್ರಮಾಣಪತ್ರಗಳನ್ನು ಬಳಸಿದ್ದರೆಂಬ ಹಗರಣದಲ್ಲಿ ಒಳಗೂಡಿದ್ದದ್ದು ಆಶ್ಚರ್ಯಕರವೇನಲ್ಲ.

ಜಗತ್ತಿನೆಲ್ಲೆಡೆಯೂ ಅಪ್ರಾಮಾಣಿಕತೆ ಹಾಸುಹೊಕ್ಕಿದ್ದರೂ ಅನೇಕರಿಗೆ ಸರಿಯಾದದ್ದನ್ನು ಮಾಡುವ ಇಚ್ಛೆಯಿದೆ. ದೇವರ ಮೇಲಿರುವ ಪ್ರೀತಿಯಿಂದಾಗಿ ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡುವ ಮನಸ್ಸು ನಿಮಗೂ ಇರಬಹುದು. (1 ಯೋಹಾನ 5:3) ಅಪೊಸ್ತಲ ಪೌಲನಂತೆಯೇ ನಿಮಗೂ ಅನಿಸುತ್ತಿರಬಹುದು. ಆತ ಬರೆದದ್ದು: “ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುವುದರಿಂದ ನಮಗೆ ಪ್ರಾಮಾಣಿಕವಾದ ಮನಸ್ಸಾಕ್ಷಿಯಿದೆ ಎಂದು ನಾವು ನಂಬುತ್ತೇವೆ.” (ಇಬ್ರಿಯ 13:18) ಈ ಕಾರಣಕ್ಕಾಗಿಯೇ, ‘ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳಲು’ ಒಬ್ಬ ವ್ಯಕ್ತಿಗಿರುವ ಮನಸ್ಸನ್ನು ಪರೀಕ್ಷೆಗೊಳಪಡಿಸುವ ಸನ್ನಿವೇಶಗಳನ್ನು ಪರಿಗಣಿಸುವಂತೆ ನಿಮ್ಮನ್ನು ಆಮಂತ್ರಿಸುತ್ತೇವೆ. ಇಂಥ ಸನ್ನಿವೇಶಗಳಲ್ಲಿ ಸಹಾಯಕಾರಿಯಾಗಿರುವ ಬೈಬಲ್‌ ಮೂಲತತ್ತ್ವಗಳನ್ನೂ ನೋಡುವೆವು.

ಅಪಘಾತದ ವೆಚ್ಚಭರಿಸುವವರು ಯಾರು?

ಲೀಸಾ * ಎಂಬ ಯುವತಿ ಒಂದು ದಿನ ಕಾರ್‌ ಓಡಿಸುತ್ತಿದ್ದಾಗ ಆಕಸ್ಮಿಕವಾಗಿ ಇನ್ನೊಂದು ಕಾರನ್ನು ಗುದ್ದಿಬಿಟ್ಟಳು. ಯಾರಿಗೂ ಗಾಯವಾಗಲಿಲ್ಲ ಆದರೆ ಎರಡೂ ಕಾರುಗಳು ಜಖಂಗೊಂಡವು. ಲೀಸಾಳೊಂದಿಗೆ ಆಕೆಗಿಂತ ಹಿರಿವಯಸ್ಸಿನವನಾಗಿದ್ದ ಆಕೆಯ ದಾಯಾದಿಯಾದ ಗ್ರೆಗರ್‌ ಇದ್ದನು. ಆ ದೇಶದಲ್ಲಿ ಯುವ ವಾಹನ ಚಾಲಕರು ಕಾರ್‌ ವಿಮೆಗಾಗಿ ದೊಡ್ಡ ಮೊತ್ತದ ಕಂತು ಕಟ್ಟಬೇಕಾಗುತ್ತದೆ. ಅವರಿಂದಾಗಿ ಅಪಘಾತ ನಡೆದಾಗಲೆಲ್ಲ ಆ ಕಂತಿನ ಮೊತ್ತ ಹೆಚ್ಚೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ಆ ಸಮಯದಲ್ಲಿ ಗ್ರೆಗರ್‌ ಕಾರ್‌ ಓಡಿಸುತ್ತಿದ್ದನೆಂದು ವರದಿಸುವಂತೆ ಲೀಸಾಳ ಸ್ನೇಹಿತನೊಬ್ಬ ಹೇಳುತ್ತಾನೆ. ಹೀಗೆ ಮಾಡಿದರೆ ಆಕೆ ವಿಮೆಗಾಗಿ ದೊಡ್ಡ ಮೊತ್ತದ ಕಂತು ಕಟ್ಟುವುದು ತಪ್ಪುತ್ತದೆ. ಹಾಗಾಗಿ ಈ ಉಪಾಯ ತುಂಬ ಒಳ್ಳೇದೆಂದು ಆಕೆಗೆ ತೋರುತ್ತದೆ. ಆಕೆ ಏನು ಮಾಡಬೇಕು?

ಪಾಲಿಸಿದಾರರು ಕಟ್ಟುವ ಕಂತು ಹಣವನ್ನೇ ಬಳಸಿ ವಿಮಾ ಕಂಪೆನಿಗಳು ಹಣದ ಬೇಡಿಕೆಗಳನ್ನು ಪೂರೈಸುತ್ತವೆ. ತಮಗಾದ ನಷ್ಟತುಂಬಿಸಲು ಇತರ ಪಾಲಿಸಿದಾರರ ವಿಮಾ ಕಂತನ್ನು ಏರಿಸುತ್ತವೆ. ಹೀಗಿರುವುದರಿಂದ ಲೀಸಾ ತನ್ನ ಸ್ನೇಹಿತನ ಸಲಹೆಗನುಸಾರ ನಡೆದರೆ, ತಾನು ಕಟ್ಟದೇ ತಪ್ಪಿಸಿಕೊಂಡ ಕಂತು ಹಣವನ್ನು ಮತ್ತು ತನ್ನ ಅಪಘಾತದ ಖರ್ಚನ್ನು ಬೇರೆ ಪಾಲಿಸಿದಾರರು ತುಂಬಿಸುವಂತೆ ಮಾಡುವಳು. ಹೀಗೆ ಆಕೆ ಅಪಘಾತದ ಬಗ್ಗೆ ಸುಳ್ಳಾಗಿ ವರದಿಸುತ್ತಿದ್ದಾಳೆ ಮಾತ್ರವಲ್ಲ ಇತರರ ಜೇಬಿನಿಂದ ಹಣ ಕದಿಯುತ್ತಿದ್ದಾಳೆ ಸಹ. ಅದೇ ರೀತಿ, ವಿಮಾ ಕಂಪೆನಿಯಿಂದ ಹೆಚ್ಚಿನ ಹಣವನ್ನು ಪಡೆಯಲಿಕ್ಕಾಗಿ ಬೇರಾವುದೇ ತಪ್ಪಾದ ಹೇಳಿಕೆಗಳನ್ನು ನೀಡುವುದು ಸಹ ಕಳ್ಳತನವಾಗಿದೆ.

ಕಾನೂನು ದಂಡ ವಿಧಿಸುತ್ತದೆಂಬ ಕಾರಣದಿಂದ ಅನೇಕರು ಇಂಥ ಅಪ್ರಾಮಾಣಿಕ ಕೃತ್ಯಕ್ಕೆ ಕೈಹಾಕದಿರಬಹುದು. ಆದರೆ ಅಪ್ರಾಮಾಣಿಕರಾಗದಿರಲು ಇದಕ್ಕಿಂತಲೂ ಹೆಚ್ಚು ಮಹತ್ವಪೂರ್ಣ ಕಾರಣ ಬೈಬಲಿನಲ್ಲಿದೆ. ದಶಾಜ್ಞೆಗಳಲ್ಲಿ, “ಕದಿಯಬಾರದು” ಎಂಬ ಆಜ್ಞೆಯೊಂದಿದೆ. (ವಿಮೋಚನಕಾಂಡ 20:15) ಆ ಆಜ್ಞೆಯನ್ನು ಕ್ರೈಸ್ತರಿಗಾಗಿ ಪುನಃ ತಿಳಿಸುತ್ತಾ ಅಪೊಸ್ತಲ ಪೌಲನಂದದ್ದು: ‘ಕಳ್ಳತನ ಮಾಡುವವನು ಇನ್ನು ಮುಂದೆ ಕಳ್ಳತನ ಮಾಡದಿರಲಿ.’ (ಎಫೆಸ 4:28) ದೇವರ ಈ ಮಾತನ್ನು ವಿಮೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಪಾಲಿಸುವ ಮೂಲಕ ಆತನು ಖಂಡಿಸುವಂಥ ಕೆಲಸವನ್ನು ಮಾಡದಿರುತ್ತೀರಿ. ಹೀಗೆ ದೇವರ ನಿಯಮದ ಕಡೆಗೆ ಮತ್ತು ನಿಮ್ಮ ನೆರೆಯವರ ಕಡೆಗೆ ಪ್ರೀತಿಗೌರವವನ್ನು ತೋರಿಸುತ್ತೀರಿ.—ಕೀರ್ತನೆ 119:97.

“ಕೈಸರನದನ್ನು ಕೈಸರನಿಗೆ ಕೊಡಿರಿ”

ಪೀಟರ್‌ ಒಬ್ಬ ವ್ಯಾಪಾರಿ. ಅವನ ಅಕೌಂಟೆಂಟ್‌ ಅವನಿಗೆ, ದುಬಾರಿ ಕಂಪ್ಯೂಟರ್‌-ಭಾಗಗಳನ್ನು ಖರೀದಿಸಿದ್ದೇವೆಂದು ಹೇಳಿ ತೆರಿಗೆ ರಿಯಾಯಿತಿ ಪಡೆದುಕೊಳ್ಳುವಂತೆ ಸಲಹೆಕೊಡುತ್ತಾನೆ. ಈ ರೀತಿಯ ದುಬಾರಿ ಖರೀದಿಗಳು ಪೀಟರ್‌ನ ವ್ಯಾಪಾರದಲ್ಲಿ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಹೀಗಿರುವುದರಿಂದ ಈ ಸಲ ಪೀಟರ್‌ ಆ ಸಲಕರಣೆ ಖರೀದಿಸದೇ ಇದ್ದರೂ ಸರ್ಕಾರವು ಅದರ ಬಗ್ಗೆ ವಿಚಾರಣೆಮಾಡುವುದಿಲ್ಲ. ಅವನಿಗೆ ಆ ರಿಯಾಯಿತಿ ಸಿಕ್ಕಿದರೆ ಅವನು ಕಟ್ಟುವ ತೆರಿಗೆ ಕಡಿಮೆಯಾಗಿ ಹಣ ಉಳಿತಾಯ ಆಗುವುದು. ಅವನೇನು ಮಾಡಬೇಕು? ಸರಿಯಾದ ನಿರ್ಣಯ ತೆಗೆದುಕೊಳ್ಳುವಂತೆ ಯಾವುದು ಸಹಾಯಮಾಡುವುದು?

ಅಪೊಸ್ತಲ ಪೌಲನು ತನ್ನ ದಿನಗಳಲ್ಲಿದ್ದ ಕ್ರೈಸ್ತರಿಗಂದದ್ದು: “ಪ್ರತಿಯೊಬ್ಬನು ಮೇಲಧಿಕಾರಿಗಳಿಗೆ ಅಧೀನನಾಗಿರಲಿ . . . ಅವರವರಿಗೆ ಸಲ್ಲತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ತೆರಿಗೆಯೋ ಅವರಿಗೆ ತೆರಿಗೆಯನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು . . . ಸಲ್ಲಿಸಿರಿ.” (ರೋಮನ್ನರಿಗೆ 13:1, 7) ದೇವಾನುಗ್ರಹ ಪಡೆಯಲಿಚ್ಛಿಸುವವರು ಅಧಿಕಾರಿಗಳು ಕೇಳಿಕೊಳ್ಳುವ ಎಲ್ಲ ತೆರಿಗೆಗಳನ್ನು ತಪ್ಪದೆ ಸಲ್ಲಿಸುತ್ತಾರೆ. ಆದರೆ ದೇಶದ ಕಾನೂನು ನಿರ್ದಿಷ್ಟ ವ್ಯಕ್ತಿಗಳು ಇಲ್ಲವೆ ವ್ಯಾಪಾರಗಳಿಗೆ ತೆರಿಗೆ ರಿಯಾಯಿತಿ ಕೊಡುತ್ತಿರುವಲ್ಲಿ, ಅರ್ಹರಾಗಿರುವವರು ಅದನ್ನು ಕೇಳಿ ಪಡೆಯುವುದರಲ್ಲಿ ತಪ್ಪೇನಿಲ್ಲ.

ತೆರಿಗೆಗಳಿಗೆ ಸಂಬಂಧಪಟ್ಟ ಇನ್ನೊಂದು ಸನ್ನಿವೇಶ ಇಲ್ಲಿದೆ. ಡೇವಿಡ್‌ ಒಂದು ಅಂಗಡಿಯಿಟ್ಟಿದ್ದಾನೆ. ಒಬ್ಬ ಗಿರಾಕಿ ಬಂದು, ‘ನಾನು ಬಿಲ್‌ ತೆಗೆದುಕೊಳ್ಳದಿದ್ದರೆ ಸಾಮಾನನ್ನು ಎಷ್ಟು ಕಡಿಮೆಗೆ ಮಾರುತ್ತೀರಾ?’ ಎಂದು ಕೇಳುತ್ತಾನೆ. ಒಂದುವೇಳೆ ಡೇವಿಡ್‌ ಆ ಗಿರಾಕಿ ಹೇಳಿದಂತೆ ಮಾಡಿದರೆ ಗಿರಾಕಿಗೆ ಸಾಮಾನು ಅಗ್ಗವಾಗುವುದು. ಮಾತ್ರವಲ್ಲ ಆ ಮಾರಾಟದ ಯಾವುದೇ ದಾಖಲೆ ಇಲ್ಲದಿರುವುದರಿಂದ ಡೇವಿಡ್‌ ಸಹ ತೆರಿಗೆ ಕಟ್ಟಬೇಕಾಗಿಲ್ಲ. ಹೀಗೆ ಮಾಡುವುದರಲ್ಲಿ ತಪ್ಪೇನಿಲ್ಲವೆಂದು ಅನೇಕರಿಗೆ ಅನಿಸುತ್ತದೆ ಯಾಕೆಂದರೆ ಇದರಿಂದ ‘ಎಲ್ಲರಿಗೂ ಲಾಭವಿದೆ.’ ಆದರೆ ಡೇವಿಡ್‌ ದೇವರನ್ನು ಮೆಚ್ಚಿಸಲು ಬಯಸುವುದರಿಂದ, ಬಿಲ್‌ ಕೊಡದೆ ವ್ಯಾಪಾರ ನಡೆಸುವುದರ ಬಗ್ಗೆ ಅವನ ನೋಟ ಏನಾಗಿರಬೇಕು?

ಈ ರೀತಿಯ ಕೆಲಸ ಮಾಡುವ ವ್ಯಕ್ತಿ ಸಿಕ್ಕಿಬೀಳದೇ ಇರಬಹುದು ನಿಜ. ಆದರೆ ಆತ ಸರ್ಕಾರಕ್ಕೆ ನ್ಯಾಯವಾಗಿ ಸಿಗಬೇಕಾದ ತೆರಿಗೆಗಳನ್ನು ಕೊಡುತ್ತಿಲ್ಲ. ಯೇಸು ಆಜ್ಞಾಪಿಸಿದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ.” (ಮತ್ತಾಯ 22:17-21) ಯೇಸು ಹಾಗಂದದ್ದು, ತೆರಿಗೆಗಳನ್ನು ಕಟ್ಟುವ ವಿಷಯದಲ್ಲಿ ತನ್ನ ಕೇಳುಗರ ಯೋಚನಾಧಾಟಿಯನ್ನು ತಿದ್ದಲಿಕ್ಕಾಗಿಯೇ. ಅವನು ಯಾರನ್ನು “ಕೈಸರ” ಎಂದು ಕರೆದನೋ ಆ ಸರ್ಕಾರಿ ಅಧಿಕಾರಿಗಳು, ಜನರಿಂದ ತೆರಿಗೆ ಪಡೆಯುವುದು ತಮ್ಮ ನ್ಯಾಯವಾದ ಹಕ್ಕೆಂದು ಪರಿಗಣಿಸುತ್ತಾರೆ. ಹೀಗಿರುವುದರಿಂದ ಕ್ರಿಸ್ತನ ಹಿಂಬಾಲಕರು, ಎಲ್ಲ ರೀತಿಯ ತೆರಿಗೆಗಳ ಪಾವತಿಯನ್ನು ತಮ್ಮ ಶಾಸ್ತ್ರಾಧಾರಿತ ಕರ್ತವ್ಯವೆಂದು ಪರಿಗಣಿಸುತ್ತಾರೆ.

ಕಾಪಿಹೊಡೆಯುವುದು ತಪ್ಪಾ?

ಮಾರ್ಟಾ ತನ್ನ ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಳೆ. ಗರಿಷ್ಠ ಅಂಕಗಳು ಸಿಕ್ಕಿದರೆ ಮಾತ್ರ ಆಕೆಗೊಂದು ಒಳ್ಳೇ ಕೆಲಸ ಸಿಗುವುದು. ಆದುದರಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿದ್ದಾಳೆ. ಆಕೆಯ ಸಹಪಾಠಿಗಳಲ್ಲೂ ಕೆಲವರು ಸಿದ್ಧತೆ ನಡೆಸಿದ್ದಾರೆ. ಆದರೆ ಬೇರೆ ರೀತಿಯಲ್ಲಿ. ಅವರು ಹೆಚ್ಚು ಅಂಕಗಳನ್ನು ಪಡೆಯಲಿಕ್ಕಾಗಿ ಕಾಪಿಹೊಡೆಯಲೆಂದು ಪೇಜರ್‌ಗಳನ್ನು, ಮಾಹಿತಿಯನ್ನು ಮೊದಲೇ ಶೇಖರಿಸಿಡುವಂಥ ಕ್ಯಾಲ್‌ಕ್ಯುಲೇಟರ್‌ಗಳನ್ನು, ಸೆಲ್‌ಫೋನ್‌ಗಳನ್ನು ಕೊಂಡೊಯ್ಯಲಿದ್ದಾರೆ. ಮಾರ್ಟಾ ಸಹ ಉತ್ತಮ ಅಂಕಗಳನ್ನು ಪಡೆದೇ ತೀರಲು ‘ಎಲ್ಲರೂ’ ಮಾಡುತ್ತಿರುವುದನ್ನೇ ಮಾಡಬೇಕೋ?

ಕಾಪಿಹೊಡೆಯುವುದು ತುಂಬ ಸಾಮಾನ್ಯವಾಗಿ ಬಿಟ್ಟಿರುವುದರಿಂದ, ಅದು ತಪ್ಪಲ್ಲವೆಂದು ಅನೇಕರಿಗನಿಸುತ್ತದೆ. “ಏನೇ ಮಾಡಿದರೂ ಸಿಕ್ಕಿಬೀಳಬಾರದು ಅಷ್ಟೇ” ಎಂದವರು ತರ್ಕಿಸುತ್ತಾರೆ. ಆದರೆ ಈ ತರ್ಕ ನಿಜ ಕ್ರೈಸ್ತರಿಗೆ ಸೂಕ್ತವಾದದ್ದಲ್ಲ. ಕಾಪಿಹೊಡೆಯುವವರನ್ನು ಟೀಚರ್‌ ನೋಡದೇ ಇರಬಹುದಾದರೂ ಒಬ್ಬನು ಖಂಡಿತ ನೋಡುತ್ತಿರುತ್ತಾನೆ. ಆತನು ಯೆಹೋವ ದೇವರೇ. ನಾವೇನು ಮಾಡುತ್ತೇವೋ ಅದಕ್ಕಾತನು ನಮ್ಮಿಂದ ಲೆಕ್ಕಕೇಳುವನು. ಪೌಲನು ಬರೆದದ್ದು: “ಆತನ ದೃಷ್ಟಿಗೆ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ; ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ಕಣ್ಣುಗಳಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದೂ ಬಟ್ಟಬಯಲಾದದ್ದೂ ಆಗಿದೆ.” (ಇಬ್ರಿಯ 4:13) ನಾವು ಸರಿಯಾದದ್ದನ್ನೇ ಮಾಡಬೇಕೆಂದು ದೇವರು ಇಚ್ಛಿಸುವುದರಿಂದ ಆತನು ನಮ್ಮನ್ನು ನೋಡುತ್ತಿರುತ್ತಾನೆ. ಇದನ್ನು ಮನಸ್ಸಿನಲ್ಲಿಟ್ಟರೆ, ನಾವು ಪರೀಕ್ಷೆ ಬರೆಯುವಾಗ ಪ್ರಾಮಾಣಿಕರಾಗಿರಲು ಬಲವಾದ ಪ್ರಚೋದನೆ ಸಿಗುತ್ತದೆ ಅಲ್ಲವೇ?

ನೀವೇನು ಮಾಡುವಿರಿ?

ಲೀಸಾ, ಗ್ರೆಗರ್‌, ಪೀಟರ್‌, ಡೇವಿಡ್‌, ಮಾರ್ಟಾ ತಮಗೆದುರಾದ ಸನ್ನಿವೇಶದ ಗಂಭೀರತೆಯನ್ನು ಗ್ರಹಿಸಿದರು. ಅವರು ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ನಿರ್ಣಯ ಮಾಡಿದರು. ಹೀಗೆ ತಮ್ಮ ಮನಸ್ಸಾಕ್ಷಿಯನ್ನು ಶುದ್ಧವಾಗಿರಿಸಿದರು ಮತ್ತು ನೈತಿಕ ಮೌಲ್ಯಗಳಿಗೆ ಅಂಟಿಕೊಂಡರು. ನಿಮಗೂ ಅದೇ ರೀತಿಯ ಸನ್ನಿವೇಶಗಳು ಎದುರಾದರೆ ಏನು ಮಾಡುವಿರಿ?

ಸುಳ್ಳುಹೇಳುವುದು, ಕಾಪಿಹೊಡೆಯುವುದು ಇಲ್ಲವೇ ಕದಿಯುವುದರ ಬಗ್ಗೆ ನಿಮ್ಮ ಸಹೋದ್ಯೋಗಿಗಳು, ಸಹಪಾಠಿಗಳು, ನೆರೆಯವರು ಸ್ವಲ್ಪವೂ ತಲೆಕೆಡಿಸಿಕೊಳ್ಳಲಿಕ್ಕಿಲ್ಲ. ಅಲ್ಲದೆ, ನಿಮ್ಮನ್ನು ಅಪಹಾಸ್ಯ ಮಾಡುವ ಮೂಲಕ ನೀವೂ ತಮ್ಮಂತೆ ಮಾಡಲು ಅವರು ಒತ್ತಡಹೇರಬಹುದು. ಅಪ್ರಾಮಾಣಿಕತೆಯಿಂದ ನಡೆದುಕೊಳ್ಳುವಂತೆ ಇತರರು ಒತ್ತಾಯಿಸುವಾಗ ನೀವು ಹೇಗೆ ಸರಿಯಾದ ನಿರ್ಣಯ ಮಾಡಬಲ್ಲಿರಿ?

ದೇವರ ಚಿತ್ತಕ್ಕನುಸಾರ ನಡೆದರೆ ನಮಗೆ ಶುದ್ಧ ಮನಸ್ಸಾಕ್ಷಿ ಇರುತ್ತದೆ ಮಾತ್ರವಲ್ಲ ದೇವರ ಅನುಗ್ರಹವೂ ದೊರೆಯುತ್ತದೆ ಎಂಬುದನ್ನು ನೆನಪಿನಲ್ಲಿಡಿ. ರಾಜ ದಾವೀದನು ಬರೆದದ್ದು: “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು? ಅವನು ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ ಆಗಿರಬೇಕು. . . . ಇಂಥವನು ಎಂದಿಗೂ ಕದಲುವದಿಲ್ಲ.” (ಕೀರ್ತನೆ 15:1-5) ಸ್ವರ್ಗದಲ್ಲಿರುವ ದೇವರೊಂದಿಗಿನ ಸ್ನೇಹ ಹಾಗೂ ಶುದ್ಧ ಮನಸ್ಸಾಕ್ಷಿಯು, ಅಪ್ರಾಮಾಣಿಕತೆಯಿಂದ ಗಳಿಸಬಹುದಾದ ಯಾವುದೇ ಆರ್ಥಿಕ ಲಾಭಕ್ಕಿಂತ ಎಷ್ಟೋ ಹೆಚ್ಚು ಅಮೂಲ್ಯವಾದದ್ದಾಗಿದೆ ಅಲ್ಲವೇ? (w10-E 06/01)

[ಪಾದಟಿಪ್ಪಣಿ]

^ ಪ್ಯಾರ. 10 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 18ರಲ್ಲಿರುವ ಸಂಕ್ಷಿಪ್ತ ವಿವರಣೆ]

‘ಕಳ್ಳತನ ಮಾಡುವವನು ಇನ್ನು ಮುಂದೆ ಕಳ್ಳತನ ಮಾಡದಿರಲಿ.’

ದೇವರ ನಿಯಮಕ್ಕೆ ಗೌರವ ಮತ್ತು ನೆರೆಯವರ ಮೇಲಿನ ಪ್ರೀತಿ ನಾವು ವಿಮೆಯ ವಿಷಯಗಳಲ್ಲಿ ಪ್ರಾಮಾಣಿಕರಾಗಿರುವಂತೆ ಪ್ರೇರಿಸುವುದು

[ಪುಟ 18ರಲ್ಲಿರುವ ಸಂಕ್ಷಿಪ್ತ ವಿವರಣೆ]

‘ಅವರವರಿಗೆ ಸಲ್ಲತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ತೆರಿಗೆಯೋ ಅವರಿಗೆ ತೆರಿಗೆಯನ್ನು ಸಲ್ಲಿಸಿರಿ.’

ದೇವರ ಅನುಗ್ರಹವನ್ನು ಪಡೆಯಲಿಕ್ಕಾಗಿ, ಕಾನೂನು ಅವಶ್ಯಪಡಿಸುವ ಎಲ್ಲ ತೆರಿಗೆಗಳನ್ನು ಪಾವತಿಸುತ್ತೇವೆ

[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ಕಣ್ಣುಗಳಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದೂ ಬಟ್ಟಬಯಲಾದದ್ದೂ ಆಗಿದೆ.”

ಕಾಪಿಹೊಡೆಯುವುದು ಟೀಚರ್‌ ಕಣ್ಣಿಗೆ ಬೀಳದಿದ್ದರೂ ದೇವರು ಗಮನಿಸುತ್ತಿರುವುದರಿಂದ ನಾವು ಪ್ರಾಮಾಣಿಕರಾಗಿರಬೇಕು

[ಪುಟ 20ರಲ್ಲಿರುವ ಚೌಕ/ ಚಿತ್ರಗಳು]

“ಕಣ್ಣಿಗೆ ಕಾಣದ” ಕಳ್ಳತನ

ನಿಮ್ಮ ಸ್ನೇಹಿತ ಒಂದು ಅತ್ಯಾಧುನಿಕ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ ಖರೀದಿಸಿದ್ದಾನೆ. ಅದು ನಿಮಗೂ ಬೇಕಿತ್ತು. ನಿಮ್ಮ ಹಣ ಉಳಿಸಲು ಅವನು ಆ ಸಾಫ್ಟ್‌ವೇರ್‌ನ ಒಂದು ನಕಲುಪ್ರತಿಯನ್ನು ಮಾಡಿ ಕೊಡುತ್ತೇನೆಂದು ಹೇಳುತ್ತಾನೆ. ಇದನ್ನು ಪ್ರಾಮಾಣಿಕತೆ ಎನ್ನುತ್ತೀರೋ?

ಒಬ್ಬ ವ್ಯಕ್ತಿ ಕಂಪ್ಯೂಟರ್‌ ಸಾಫ್ಟ್‌ವೇರ್‌ ಅನ್ನು ಖರೀದಿಸಿದಾಗ, ಆ ಪ್ರೋಗ್ರ್ಯಾಮ್‌ನ ಲೈಸೆನ್ಸ್‌-ಕರಾರಿನಲ್ಲಿರುವ ಷರತ್ತುಗಳನ್ನು ತಾನು ಪಾಲಿಸುತ್ತೇನೆಂದು ಒಪ್ಪಿಕೊಂಡಿರುತ್ತಾನೆ. ಆ ಪ್ರೋಗ್ರ್ಯಾಮನ್ನು ಕೇವಲ ಒಂದೇ ಕಂಪ್ಯೂಟರ್‌ನಲ್ಲಿ ಅಳವಡಿಸಿ ಬಳಸಲು ಅನುಮತಿ ಇರುತ್ತದೆ. ಹೀಗಿರುವುದರಿಂದ ಒಂದುವೇಳೆ ಆ ವ್ಯಕ್ತಿ ಬೇರೆಯವರಿಗೋಸ್ಕರ ಆ ಸಾಫ್ಟ್‌ವೇರ್‌ನ ನಕಲುಪ್ರತಿ ಕೊಟ್ಟರೆ ಅವನು ಆ ಲೈಸೆನ್ಸ್‌-ಕರಾರನ್ನು ಮುರಿದಂತಾಗುತ್ತದೆ. ಇದು ಕಾನೂನುಬಾಹಿರ. (ರೋಮನ್ನರಿಗೆ 13:4) ಈ ರೀತಿಯಲ್ಲಿ ನಕಲು ಮಾಡುವುದು ಕಳ್ಳತನವೂ ಆಗಿದೆ. ಏಕೆಂದರೆ ಅದರ ಕಾಪಿರೈಟ್‌ ಹೊಂದಿರುವವರು ನ್ಯಾಯವಾಗಿ ಪಡೆಯಬೇಕಾದ ಆದಾಯದಿಂದ ವಂಚಿತರಾಗುತ್ತಾರೆ.—ಎಫೆಸ 4:28.

‘ಯಾರಿಗೂ ಗೊತ್ತಾಗುವುದಿಲ್ಲ’ ಎಂದು ಕೆಲವರು ತರ್ಕಿಸಬಹುದು. ಅದು ನಿಜವೇ ಇರಬಹುದು. ಆದರೆ ನಾವು ಯೇಸುವಿನ ಈ ಮಾತುಗಳನ್ನು ನೆನಪಿಡಬೇಕು: “ಆದಕಾರಣ ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು.” (ಮತ್ತಾಯ 7:12) ಮಾಡಿದ ಕೆಲಸಕ್ಕೆ ನ್ಯಾಯವಾಗಿ ಬರಬೇಕಾದ ಹಣ ನಮಗೆ ಸಿಗಬೇಕೆಂದೂ ನಮ್ಮ ಸ್ವತ್ತಿಗೆ ಇತರರು ಕೈಹಾಕಬಾರದೆಂದೂ ಬಯಸುತ್ತೇವೆ. ಆದುದರಿಂದ ನಾವೂ ಅದನ್ನೇ ಇತರರಿಗೆ ಮಾಡಬೇಕು. ‘ಕಣ್ಣಿಗೆ ಕಾಣದ’ ಕಳ್ಳತನವನ್ನು ಮಾಡದಿರುವೆವು. ಇದರರ್ಥ ನಮ್ಮದಲ್ಲದ ಅಂದರೆ ಕಾಪಿರೈಟ್‌ ಇರುವ ಸಂಗೀತ, ಪುಸ್ತಕ, ಕಾಗದದಲ್ಲಿ ಮುದ್ರಿತವಾದ ಇಲ್ಲವೆ ಇಲೆಕ್ಟ್ರಾನಿಕ್‌ ರೂಪದಲ್ಲಿರುವ ಸಾಫ್ಟ್‌ವೇರ್‌ಗಳನ್ನು ನಕಲುಮಾಡದಿರುವೆವು. ಇದು ಟ್ರೇಡ್‌ಮಾರ್ಕುಗಳು, ಪೇಟೆಂಟುಗಳು, ವ್ಯಾಪಾರದ ಗುಟ್ಟುಗಳು, ಜಾಹೀರಾತು ಹಕ್ಕುಗಳಿಗೂ ಅನ್ವಯವಾಗುತ್ತದೆ.—ವಿಮೋಚನಕಾಂಡ 22:7-9.