ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾಯಿಲೆಬಿದ್ದ ಮಿತ್ರರೊಬ್ಬರಿಗೆ ಹೇಗೆ ಸಹಾಯಮಾಡುವಿರಿ?

ಕಾಯಿಲೆಬಿದ್ದ ಮಿತ್ರರೊಬ್ಬರಿಗೆ ಹೇಗೆ ಸಹಾಯಮಾಡುವಿರಿ?

ಕಾಯಿಲೆಬಿದ್ದ ಮಿತ್ರರೊಬ್ಬರಿಗೆ ಹೇಗೆ ಸಹಾಯಮಾಡುವಿರಿ?

ಗಂಭೀರ ಕಾಯಿಲೆಯಿರುವ ಮಿತ್ರರೊಬ್ಬರೊಂದಿಗೆ ಏನು ಮಾತಾಡಬೇಕೆಂದು ತೋಚದೆ ನೀವು ಪರದಾಡಿದ್ದುಂಟೋ? ಚಿಂತೆಮಾಡಬೇಡಿ, ಈ ಸಮಸ್ಯೆಯನ್ನು ಖಂಡಿತ ನಿಭಾಯಿಸಬಲ್ಲಿರಿ. ಹೇಗೆ? ಹೀಗೇ ಮಾಡಬೇಕೆಂಬ ಯಾವುದೇ ಕಟ್ಟುನಿಟ್ಟಾದ ನಿಯಮಗಳಿಲ್ಲ. ಆದರೆ ಸಾಂಸ್ಕೃತಿಕ ಹಿನ್ನೆಲೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರ ವ್ಯಕ್ತಿತ್ವ ಭಿನ್ನವಾಗಿರುವುದರಿಂದ ಒಬ್ಬರಿಗೆ ಮಾಡಿದ್ದನ್ನೇ ಇನ್ನೊಬ್ಬರಿಗೆ ಮಾಡಿದರೆ ಸಹಾಯವಾಗಲಿಕ್ಕಿಲ್ಲ. ಅಲ್ಲದೆ ಅವರ ಪರಿಸ್ಥಿತಿಗಳು, ಭಾವನೆಗಳು ಇವತ್ತಿದ್ದ ಹಾಗೆಯೇ ನಾಳೆ ಇರಲಿಕ್ಕಿಲ್ಲ.

ಹೀಗಿರುವುದರಿಂದ ನೀವೀಗ ಮಾಡಬೇಕಾದದ್ದು ಏನೆಂದರೆ, ನಿಮ್ಮನ್ನೇ ಆ ವ್ಯಕ್ತಿಯ ಸ್ಥಾನದಲ್ಲಿರಿಸಿ, ಅವನಾಗಲಿ ಅವಳಾಗಲಿ ನಿಮ್ಮಿಂದ ಏನು ಬಯಸುತ್ತಾರೆಂದು ತಿಳಿದುಕೊಳ್ಳುವುದೇ. ನೀವು ಯಾವೆಲ್ಲ ವಿಧದಲ್ಲಿ ಸಹಾಯ ನೀಡಬಹುದು? ಬೈಬಲ್‌ ಸೂತ್ರಗಳ ಮೇಲೆ ಆಧರಿತವಾದ ಕೆಲವೊಂದು ಸಲಹೆಗಳು ಇಲ್ಲಿವೆ.

ಚೆನ್ನಾಗಿ ಕಿವಿಗೊಡಿರಿ

ಬೈಬಲ್‌ ಸೂತ್ರಗಳು:

“ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ . . . ಆಗಿರಬೇಕು.”ಯಾಕೋಬ 1:19.

“ಸುಮ್ಮನಿರುವ ಸಮಯ, ಮಾತಾಡುವ ಸಮಯ, . . . ಅಂತೂ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.”ಪ್ರಸಂಗಿ 3:7, 8.

◼ ಕಾಯಿಲೆಬಿದ್ದಿರುವ ಮಿತ್ರರೊಬ್ಬರನ್ನು ನೋಡಲು ಹೋದಾಗ ಅವರಿಗೆ ಸಹಾನುಭೂತಿಯಿಂದ ಕಿವಿಗೊಡಿ. ಸಲಹೆಸೂಚನೆ ಕೊಡಲು ಆತುರಪಡಬೇಡಿ. ಅವರ ಪ್ರತಿಯೊಂದು ಸಮಸ್ಯೆಗೆ ನೀವು ಪರಿಹಾರ ಸೂಚಿಸಬೇಕೆಂದು ಭಾವಿಸಬೇಡಿ. ನಿಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ತರಾತುರಿಯಲ್ಲಿ ಆಡಿದ ಯಾವುದೋ ಮಾತು ಅವರ ಮನನೋಯಿಸೀತು. ಅವರಿಗೆ ಉಪಾಯಗಳ ಬದಲಿಗೆ ಮುಕ್ತ ಹೃದಮನಸ್ಸಿನಿಂದ ಕಿವಿಗೊಡುವವರು ಬೇಕಾಗಿರಬಹುದು ಅಷ್ಟೇ.

ನಿಮ್ಮ ಮಿತ್ರರು ಮನಬಿಚ್ಚಿ ಮಾತಾಡಬೇಕಾದರೆ ನೀವು ಮಧ್ಯೆಮಧ್ಯೆ ಬಾಯಿಹಾಕಿ ಅವರ ಸ್ಥಿತಿಯನ್ನು ಕ್ಷುಲ್ಲಕವಾಗಿಸುವ ಮಾತು ಇಲ್ಲವೆ ಅಭಿಪ್ರಾಯವನ್ನು ಪದೇ ಪದೇ ಹೇಳುತ್ತಾ ಇರಬಾರದು. ಎಮೀಲ್ಯು * ಎಂಬವರು ಹೇಳಿದ್ದು: “ನನಗೆ ಮಿದುಳುರಿತವಿತ್ತು. ಅದರಿಂದ ದೃಷ್ಟಿ ಕಳಕೊಂಡೆ. ಕೆಲವೊಮ್ಮೆ ತುಂಬ ಬೇಸರವೆನಿಸುತ್ತದೆ. ನನ್ನ ಸ್ನೇಹಿತರು, ‘ಲೋಕದಲ್ಲಿ ಸಮಸ್ಯೆಯಿರುವುದು ನಿನಗೊಬ್ಬನಿಗಾ? ನಿನಗಿಂತ ಎಷ್ಟೋ ಹೆಚ್ಚು ಸಮಸ್ಯೆಗಳಿರುವ ಜನರಿದ್ದಾರೆ’ ಎಂದು ಹೇಳಿ ಸಂತೈಸಲು ಪ್ರಯತ್ನಿಸುತ್ತಾರೆ. ಆದರೆ ಹೀಗೆ ಹೇಳಿ ನನ್ನ ಸ್ಥಿತಿಯನ್ನು ಕ್ಷುಲ್ಲಕವಾಗಿಸುವ ಮೂಲಕ ನನಗೇನೂ ಸಹಾಯವಾಗದೆ ಹೆಚ್ಚು ಬೇಸರವಾಗುತ್ತದೆಂದು ಅವರಿಗೆ ಗೊತ್ತಿಲ್ಲ.”

ತನ್ನ ಮನಸ್ಸಿನಲ್ಲಿದದ್ದನ್ನು ಹೇಳಿದರೆ ಎಲ್ಲಿ ಗದರಿಸುತ್ತೀರೋ ಎಂಬ ಭಯ ನಿಮ್ಮ ಮಿತ್ರನಿಗಿರಬಾರದು. ತುಂಬ ಹೆದರಿಕೆಯಾಗುತ್ತಿದೆ ಎಂದವನು ಹೇಳಿದರೆ, ಹೆದರಬೇಡ ಎಂದಷ್ಟೇ ಹೇಳದೆ ಆ ರೀತಿಯ ಭಾವನೆ ಸಹಜವೆಂದು ಹೇಳಿ. ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಇಂದಿರಾ ಹೇಳುವುದು: “ನನಗೇನಾಗಲಿದೆಯೋ ಎಂಬ ಹೆದರಿಕೆಯಿಂದ ಅಳುತ್ತೇನೆ. ಇದರರ್ಥ ದೇವರ ಮೇಲೆ ಭರವಸೆಯಿಲ್ಲ ಎಂದಲ್ಲ.” ನಿಮ್ಮ ಮಿತ್ರನು ನೀವೆಣಿಸುವಂತೆ ಇರಬೇಕೆಂದು ನಿರೀಕ್ಷಿಸದೆ, ಈಗ ಹೇಗಿದ್ದಾನೋ ಹಾಗೇ ಸ್ವೀಕರಿಸಲು ಯತ್ನಿಸಿ. ಭಾವನಾತ್ಮಕವಾಗಿ, ದೈಹಿಕವಾಗಿ ದುರ್ಬಲನಾಗಿದ್ದಾನೆಂದೂ ಮುಂಚಿನಂತಿಲ್ಲ ಎಂಬುದನ್ನೂ ಮನಸ್ಸಿನಲ್ಲಿಡಿ. ತಾಳ್ಮೆ ತೋರಿಸಿ. ಅವನು ಹೇಳಿದ್ದನ್ನೇ ಪುನಃ ಪುನಃ ಹೇಳಿದರೂ ಕಿವಿಗೊಡಿ. (1 ಅರಸುಗಳು 19:9, 10, 13, 14) ತನಗೇನೇನು ಆಗುತ್ತಿದೆಯೊ ಅದೆಲ್ಲವನ್ನೂ ನಿಮ್ಮ ಬಳಿ ತೋಡಿಕೊಳ್ಳಲು ಅವನಿಗೆ ಮನಸ್ಸಿರಬಹುದು.

ಅನುಭೂತಿ, ಪರಿಗಣನೆ ತೋರಿಸಿ

ಬೈಬಲ್‌ ಸೂತ್ರಗಳು:

“ಆನಂದಿಸುವವರೊಂದಿಗೆ ಆನಂದಿಸಿರಿ; ಅಳುವವರೊಂದಿಗೆ ಅಳಿರಿ.”ರೋಮನ್ನರಿಗೆ 12:15.

“ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು.”ಮತ್ತಾಯ 7:12.

◼ ನಿಮ್ಮ ಮಿತ್ರನ ಸ್ಥಾನದಲ್ಲಿ ನಿಂತು ಯೋಚಿಸಿ. ಶಸ್ತ್ರಚಿಕಿತ್ಸೆಯಾಗಲಿರುವ ಕಾರಣವೊ ಚಿಕಿತ್ಸೆ ಪಡೆಯುತ್ತಿರುವ ಕಾರಣವೊ ತಪಾಸಣೆಯ ಫಲಿತಾಂಶಗಳಿಗಾಗಿ ಕಾಯುತ್ತಿರುವ ಕಾರಣವೊ ಅವನು ತುಂಬ ಟೆನ್ಷನ್‌ನಲ್ಲಿರಬಹುದು. ಮಾತ್ರವಲ್ಲದೆ ಅವನು ಚಿಕ್ಕಪುಟ್ಟ ವಿಷಯಕ್ಕೆಲ್ಲ ಸುಲಭವಾಗಿ ಕೋಪಗೊಳ್ಳಬಹುದು ಇಲ್ಲವೆ ನೊಂದುಕೊಳ್ಳಬಹುದು. ಕಾರಣ ಗ್ರಹಿಸಲು ಪ್ರಯತ್ನಿಸಿ, ಅವನ ಮೂಡ್‌ ವೈಪರೀತ್ಯಗಳಿಗೆ ಹೊಂದಿಕೊಳ್ಳಿ. ತೀರ ಹೆಚ್ಚು ಪ್ರಶ್ನೆಗಳನ್ನು ಅದರಲ್ಲೂ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವ ಸಮಯ ಇದಲ್ಲ.

“ರೋಗಿಗಳು ತಮ್ಮ ಕಾಯಿಲೆ ಬಗ್ಗೆ ಬೇಕೆಂದನಿಸಿದಾಗೆಲ್ಲ ತಮ್ಮ ಗತಿಯಲ್ಲೇ ಮಾತಾಡುವಂತೆ ಬಿಡಿ. ಅವರಿಗೆ ಹರಟೆಹೊಡೆಯಲು ಮನಸ್ಸಿರುವಾಗ ಅವರಿಚ್ಛಿಸುವ ವಿಷಯದ ಬಗ್ಗೆ ಮಾತಾಡಿ. ಆದರೆ ಅವರಿಗೆ ಮಾತಾಡಲು ಮನಸ್ಸಿಲ್ಲದಿರುವಾಗ ಮೌನವಾಗಿ ಅವರ ಪಕ್ಕದಲ್ಲೇ ಕುಳಿತಿರಿ. ಸ್ನೇಹದಿಂದ ಅವರ ಕೈ ಹಿಡಿದುಕೊಂಡರೂ ಸಾಕು, ಅದರಿಂದ ಸಹಾಯವಾದೀತು. ಇಲ್ಲವೆ ಅವರು ಅತ್ತು ಮನಸ್ಸು ಹಗುರಮಾಡಿಕೊಳ್ಳುವಾಗ ಕಂಬನಿಯೊರೆಸಿದರೂ ಸಾಕು” ಎನ್ನುತ್ತಾರೆ ಮನಶ್ಶಾಸ್ತ್ರಜ್ಞೆ ಆ್ಯನಾ ಕ್ಯಾಟಾಲಿಫೋಸ್‌.

ನಿಮ್ಮ ಮಿತ್ರನು ತನ್ನ ಕಾಯಿಲೆಯ ಕುರಿತ ವಿಷಯಗಳನ್ನು ಬಹಿರಂಗಗೊಳಿಸಲು ಇಚ್ಛಿಸದಿರುವಾಗ ಅದನ್ನು ಮಾನ್ಯಮಾಡಿ. ಎರಡು ಸಲ ಕ್ಯಾನ್ಸರ್‌ ದಾಳಿಯನ್ನು ಜಯಿಸಿ ಬಂದ ಲೇಖಕಿ ರೋಸಾನ್‌ಕ್ಯಾಲಿಕ್‌ ಬರೆದದ್ದು: “ರೋಗಿಯು ನಿಮಗೆ ತನ್ನ ಕಾಯಿಲೆ ಬಗ್ಗೆ ಹೇಳುವ ವಿಷಯವನ್ನು ಗೋಪ್ಯವಾಗಿಡಿ. ಅಂಥ ವಿಷಯವನ್ನು ಕುಟುಂಬದ ಇತರ ಸದಸ್ಯರಿಗೆ ತಿಳಿಸುವ ಕೆಲಸ ನಿಮಗೆ ವಹಿಸಲ್ಪಡದ ಹೊರತು ಅದನ್ನು ತಿಳಿಸಬೇಡಿ. ಯಾವೆಲ್ಲ ಮಾಹಿತಿಯನ್ನು ಇತರರಿಗೆ ತಿಳಿಸಲಿಚ್ಛಿಸುತ್ತಾನೆಂದು ರೋಗಿಗೇ ಕೇಳಿ.” ಕ್ಯಾನ್ಸರ್‌ನಿಂದ ಬದುಕಿ ಉಳಿದ ಇನ್ನೊಬ್ಬ ವ್ಯಕ್ತಿ ಎಡ್ಸನ್‌ ಹೇಳುವುದು: “ನನಗೆ ಕ್ಯಾನ್ಸರ್‌ ಇದೆಯೆಂದೂ ಹೆಚ್ಚು ಕಾಲ ಬದುಕುವುದಿಲ್ಲವೆಂದೂ ಸ್ನೇಹಿತನೊಬ್ಬ ಡಂಗುರ ಸಾರಿದ. ನನಗೆ ಆಗತಾನೇ ಶಸ್ತ್ರಚಿಕಿತ್ಸೆ ಆಗಿತ್ತು. ನನಗಿದ್ದದ್ದು ಕ್ಯಾನ್ಸರ್‌ ಎಂದು ಗೊತ್ತಿತ್ತು ಆದರೆ ಬೈಯಾಪ್ಸಿ ರಿಪೋರ್ಟ್‌ಗಾಗಿ ಕಾಯುತ್ತಾ ಇದ್ದೆ. ಸಿಕ್ಕಿದಾಗ, ಕ್ಯಾನ್ಸರ್‌ ದೇಹದ ಬೇರೆಡೆಗೆ ಹರಡಿಲ್ಲವೆಂದು ತಿಳಿದುಬಂತು. ಆದರೆ ಹಬ್ಬಿಸಲಾಗಿದ್ದ ಸುದ್ದಿಯಿಂದ ಆಗಲೇ ಹಾನಿಯಾಗಿತ್ತು. ಬೇರೆಯವರ ವಿಚಾರಹೀನ ಮಾತುಗಳು ಮತ್ತು ಪ್ರಶ್ನೆಗಳಿಂದ ನನ್ನ ಪತ್ನಿ ಜರ್ಜರಿತಳಾಗಿದ್ದಳು.”

ನಿಮ್ಮ ಮಿತ್ರನು ಭಿನ್ನಭಿನ್ನ ಚಿಕಿತ್ಸೆಗಳನ್ನು ತೂಗಿನೋಡುತ್ತಿದ್ದು ಯಾವ ಆಯ್ಕೆಮಾಡಬೇಕೆಂದು ಯೋಚಿಸುತ್ತಿರಬಹುದು. ಆಗ ನೀವು, ‘ನಾನಾಗಿರುತ್ತಿದ್ದರೆ . . . ಆಯ್ಕೆ ಮಾಡುತ್ತಿದ್ದೆ’ ಎಂದು ಹೇಳಬೇಡಿ. “ಕ್ಯಾನ್ಸರ್‌ ರೋಗಿಗೊ, ಅದನ್ನು ಪಾರಾದವರಿಗೊ ಯಾವುದೇ ಲೇಖನ ಇಲ್ಲವೆ ಮಾಹಿತಿಯನ್ನು ಕಳುಹಿಸುವ ಮುಂಚೆ, ಅವರು ಅಂಥ ಮಾಹಿತಿ ಪಡೆಯಲಿಚ್ಛಿಸುತ್ತಾರೋ ಎಂದು ಕೇಳಿನೋಡುವುದು ಒಳ್ಳೇದು. ಏಕೆಂದರೆ ನಿಮ್ಮ ಉದ್ದೇಶ ಒಳ್ಳೇದಿದ್ದರೂ ಮಿತ್ರನ ಮನಸ್ಸಿಗೆ ಘಾಸಿಯಾಗಬಹುದು. ಅದು ನಿಮಗೆ ಗೊತ್ತೇ ಆಗಲಿಕ್ಕಿಲ್ಲ” ಎಂದು ಕ್ಯಾನ್ಸರ್‌ರೋಗದಿಂದ ಗುಣಮುಖರಾದ ಲೇಖಕಿ ಲೊರಿ ಹೋಪ್‌ ಹೇಳಿದ್ದಾರೆ. ಎಲ್ಲರಿಗೆ ವಿಭಿನ್ನ ಪ್ರಕಾರದ ವೈದ್ಯಕೀಯ ಚಿಕಿತ್ಸೆಗಳ ಕುರಿತ ಮಾಹಿತಿಯ ಪ್ರವಾಹ ಇಷ್ಟವಾಗಲಿಕ್ಕಿಲ್ಲ.

ನೀವು ಆಪ್ತ ಮಿತ್ರರಾಗಿದ್ದರೂ ನಿಮ್ಮ ಮಿತ್ರನಿಗೆ ಬೇಸರವಾಗುವಷ್ಟು ಸಮಯ ಅವನೊಂದಿಗಿರಬೇಡಿ. ನೀವು ಅವನೊಂದಿಗಿರುವುದು ತುಂಬ ಮಹತ್ವವೇನೋ ನಿಜ. ಆದರೆ ಅವನು ನಿಮ್ಮೊಟ್ಟಿಗೆ ಕಾಲಕಳೆಯುವ ಸ್ಥಿತಿಯಲ್ಲಿರಲಿಕ್ಕಿಲ್ಲ. ಅವನು ದಣಿದಿರಬಹುದು. ಹೆಚ್ಚು ಸಮಯ ಮಾತಾಡಲು ಮಾತ್ರವಲ್ಲ ಮಾತು ಕೇಳಲಿಕ್ಕೂ ತ್ರಾಣವಿರಲಿಕ್ಕಿಲ್ಲ. ಅದೇ ಸಮಯ, ಅವಸರವಸರವಾಗಿ ಅಲ್ಲಿಂದ ಹೊರಡಲೂ ಬೇಡಿ. ನಿಮಗೆ ಅವನ ಬಗ್ಗೆ ಕಾಳಜಿಯಿಲ್ಲವೆಂದು ಅವನಿಗೆ ಅನಿಸಬಾರದು.

ಪರಿಗಣನೆ ತೋರಿಸಲಿಕ್ಕೆ ಸಮಚಿತ್ತ ಹಾಗೂ ವಿವೇಚನಾಶಕ್ತಿಯನ್ನೂ ಬಳಸಬೇಕು. ಉದಾಹರಣೆಗೆ, ಕಾಯಿಲೆಬಿದ್ದಿರುವ ಮಿತ್ರನಿಗೆ ಊಟ ತಯಾರಿಸಿ ಕೊಡುವ ಮುಂಚೆ ಇಲ್ಲವೆ ಹೂಗುಚ್ಫ ತಕ್ಕೊಂಡು ಹೋಗುವ ಮುಂಚೆ ಅವನಿಗೆ ಏನಾದರೂ ಅಲರ್ಜಿ ಇದೆಯೋ ಎಂದು ಕೇಳಿ ತಿಳಿದುಕೊಳ್ಳಿ. ಒಂದುವೇಳೆ ನೀವು ಅಸ್ವಸ್ಥರಾಗಿರುವಲ್ಲಿ ಬಹುಶಃ ನೆಗಡಿ ಇದ್ದರೆ, ವಾಸಿಯಾದ ಬಳಿಕವೇ ನೋಡಲು ಹೋಗುವ ಮೂಲಕ ಪ್ರೀತಿ ತೋರಿಸಿ.

ಪ್ರೋತ್ಸಾಹ ಕೊಡಿರಿ

ಬೈಬಲ್‌ ಸೂತ್ರಗಳು:

“ಮತಿವಂತರ ಮಾತೇ ಮದ್ದು.”ಜ್ಞಾನೋಕ್ತಿ 12:18.

“ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ.”ಕೊಲೊಸ್ಸೆ 4:6.

◼ ಕಾಯಿಲೆಬಿದ್ದಿರುವ ಮಿತ್ರನ ಬಗ್ಗೆ ಸಕಾರಾತ್ಮಕ ನೋಟವಿಟ್ಟರೆ ಅದು ನಿಮ್ಮ ಮಾತು ಹಾಗೂ ಕ್ರಿಯೆಯಲ್ಲಿ ತೋರಿಬರುವುದು. ಅವನೀಗ ಅಸೌಖ್ಯದಲ್ಲಿದ್ದರೂ ಮುಂಚಿನಂಥ ವ್ಯಕ್ತಿಯೇ ಆಗಿದ್ದಾನೆಂದೂ ಹಿಂದೆ ನಿಮ್ಮನ್ನು ಆಕರ್ಷಿಸಿದ ಗುಣಗಳು ಈಗಲೂ ಅವನಲ್ಲಿವೆ ಎಂಬದನ್ನು ಮನಸ್ಸಿನಲ್ಲಿಡಿ. ಅವನನ್ನು ಮಿತ್ರನಾಗಿಯೇ ನೋಡಿ, ಬರೀ ರೋಗಿಯಾಗಿ ಅಲ್ಲ. ನಿಸ್ಸಹಾಯಕ ವ್ಯಕ್ತಿಯಾಗಿದ್ದಾನೆ ಎಂಬಂತೆ ಅವನೊಂದಿಗೆ ಮಾತಾಡಿದರೆ ಅವನು ಹಾಗೆಯೇ ಯೋಚಿಸಲಾರಂಭಿಸುವನು. ಅಪರೂಪದ ವಂಶವಾಹಿ ಎಲುಬು ರೋಗವಿರುವ ರಾಜಶ್ರೀ ಎಂಬಾಕೆ ಹೇಳುವುದು: “ನನ್ನನ್ನು ಒಬ್ಬ ಸಾಧಾರಣ ವ್ಯಕ್ತಿಯಂತೆ ಉಪಚರಿಸಿ. ನನ್ನಲ್ಲಿ ದೈಹಿಕ ಅಸಾಮರ್ಥ್ಯವಿದೆ ನಿಜ. ಆದರೂ ನನಗೆ ನನ್ನದೇ ಆದ ಅಭಿಪ್ರಾಯ, ಆಸೆಗಳಿವೆ. ‘ಅಯ್ಯೋ ಪಾಪ’ ಎಂಬ ದೃಷ್ಟಿಯಿಂದ ನನ್ನನ್ನು ನೋಡಬೇಡಿ. ಏನೂ ತಿಳಿಯದ ಪೆದ್ದಿ ಎಂಬಂತೆ ನನ್ನೊಂದಿಗೆ ಮಾತಾಡಬೇಡಿ.”

ನೆನಪಿಡಿ, ನೀವೇನು ಹೇಳುತ್ತೀರೋ ಅದು ಮಾತ್ರವಲ್ಲ ಹೇಗೆ ಹೇಳುತ್ತೀರೊ ಅದೂ ಪ್ರಾಮುಖ್ಯ. ಯಾವ ದನಿಯಲ್ಲಿ ಹೇಳುತ್ತೀರೊ ಅದೂ ಪರಿಣಾಮ ಬೀರುತ್ತದೆ. ಅಮರ್‌ ಎಂಬವನಿಗೆ ಕ್ಯಾನ್ಸರ್‌ ಇದೆಯೆಂದು ಪತ್ತೆಯಾದ ಸ್ವಲ್ಪ ಸಮಯದಲ್ಲಿ ವಿದೇಶದಲ್ಲಿದ್ದ ಸ್ನೇಹಿತನೊಬ್ಬನಿಂದ ಫೋನ್‌ ಕರೆ ಬಂತು. ಅವನು, “ಕ್ಯಾನ್ಸರ್‌, ಅದೂ ನಿನಗೆ. ನನಗೆ ನಂಬಲಿಕ್ಕೇ ಆಗುವುದಿಲ್ಲ!” ಎಂದು ಹೇಳಿದನು. ಅಮರ್‌ ಜ್ಞಾಪಿಸಿಕೊಳ್ಳುವುದು: “ನನ್ನ ಮಿತ್ರನು, ‘ನಿನಗೆ’ ಮತ್ತು ‘ಕ್ಯಾನ್ಸರ್‌’ ಎಂಬ ಪದಗಳನ್ನು ಹೇಳಿದ ಧಾಟಿಯಿಂದ ಎದೆ ಧಸಕ್ಕೆಂದಿತು.”

ಲೇಖಕಿ ಲೊರಿ ಹೋಪ್‌ ಇನ್ನೊಂದು ಉದಾಹರಣೆ ಕೊಡುತ್ತಾರೆ: “‘ನೀವು ಹೇಗಿದ್ದೀರಿ?’ ಎಂಬ ಪ್ರಶ್ನೆಯನ್ನು ರೋಗಿ ಬೇರೆ ಬೇರೆ ರೀತಿಯಲ್ಲಿ ಅರ್ಥಮಾಡಬಲ್ಲನು. ಪ್ರಶ್ನೆ ಕೇಳಿದವರ ದನಿ, ದೇಹ ಭಾಷೆ, ರೋಗಿಯೊಂದಿಗಿನ ಸಂಬಂಧ, ಆತ್ಮೀಯತೆಯ ಮಟ್ಟ, ಸಮಯದ ಮೇಲೆ ಹೊಂದಿಕೊಂಡು ಆ ಪ್ರಶ್ನೆ ಒಂದೊ ಹೃದಯಕ್ಕೆ ತಂಪೆರಚಬಲ್ಲದು, ನೋವು ಬರಿಸಬಲ್ಲದು ಇಲ್ಲವೆ ಸುಪ್ತವಾಗಿದ್ದ ಭಯವನ್ನು ಬಡಿದೆಬ್ಬಿಸಬಲ್ಲದು.”

ಕಾಯಿಲೆಬಿದ್ದಿರುವ ಮಿತ್ರನಿಗೆ ನಿಮ್ಮ ಕಾಳಜಿ, ಗೌರವ ಬೇಕು. ತನ್ನನ್ನು ಅರ್ಥಮಾಡಿಕೊಳ್ಳಬೇಕೆಂದೂ ಅವನು ಬಯಸಬಹುದು. ಆದುದರಿಂದ, ಅವನು/ಅವಳು ನಿಮಗೆ ತುಂಬ ಬೇಕಾದವರೆಂದೂ ಸಹಾಯನೀಡಲು ಸದಾ ಸಿದ್ಧರಾಗಿದ್ದೀರೆಂದೂ ಭರವಸೆ ಕೊಡಿ. ಮಿದುಳಿನ ಟ್ಯೂಮರ್‌ ಇದ್ದ ರೋಸ್‌ಮೇರಿ ಎಂಬಾಕೆ ಹೇಳುವುದು: “ನನ್ನನ್ನು ಪ್ರೀತಿಸುತ್ತಾರೆಂದೂ ಏನೇ ಆದರೂ ನನ್ನ ಜೊತೆ ಇರುವರೆಂದೂ ನನ್ನ ಮಿತ್ರರು ಹೇಳಿದಾಗ ನನಗೆ ನೂರಾನೆ ಬಲ ಸಿಕ್ಕಿದಂತಾಯಿತು.”—ಜ್ಞಾನೋಕ್ತಿ 15:23; 25:11.

ಸಹಾಯಹಸ್ತ ಚಾಚಿ

ಬೈಬಲ್‌ ಸೂತ್ರ:

“ನಾವು ಬರೀ ಮಾತಿನಲ್ಲಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ.”1 ಯೋಹಾನ 3:18.

◼ ನಿಮ್ಮ ಮಿತ್ರನ ಕಾಯಿಲೆ ಪತ್ತೆಯಾಗಿ ಚಿಕಿತ್ಸೆ ಆರಂಭವಾಗುವಾಗ ಅವನ ಅಗತ್ಯಗಳು ಬದಲಾಗಬಹುದು. ಅವನಿಗೆ ನಿಮ್ಮ ಸಹಾಯ ಬೇಕಾದೀತು. “ಏನಾದರೂ ಸಹಾಯ ಬೇಕಿದ್ದರೆ ಹೇಳಿ” ಎಂಬ ಸಾರಾಸಗಟಾದ ಹೇಳಿಕೆಯ ಬದಲಿಗೆ ನಿರ್ದಿಷ್ಟವಾಗಿ ಅವರಿಗಾಗಿ ಏನು ಮಾಡಲಿಚ್ಛಿಸುತ್ತೀರೆಂದು ಹೇಳಿ. ಉದಾಹರಣೆಗೆ ಅಡಿಗೆಮಾಡುವುದು, ಶುಚಿಗೊಳಿಸುವುದು, ಬಟ್ಟೆ ಒಗೆಯುವುದು, ಇಸ್ತ್ರಿಮಾಡುವುದು, ಪಾತ್ರೆ ತೊಳೆಯುವುದು, ಓಡಾಟದ ಕೆಲಸ, ಖರೀದಿಮಾಡುವುದು, ಅವನನ್ನು ಕ್ಲಿನಿಕ್‌ ಇಲ್ಲವೆ ಆಸ್ಪತ್ರೆಗೆ ಕೊಂಡೊಯ್ದು ವಾಪಸ್‌ ತರುವುದು ಇತ್ಯಾದಿ ದೈನಂದಿನ ಕೆಲಸಕಾರ್ಯಗಳಲ್ಲಿ ನೆರವುನೀಡಲು ಸಿದ್ಧರಿದ್ದೀರೆಂದು ಹೇಳಿ. ಇವು ಕಾಳಜಿತೋರಿಸುವ ಪ್ರಾಯೋಗಿಕ ಮಾರ್ಗಗಳಲ್ಲಿ ಕೆಲವೊಂದಾಗಿವೆ ಅಷ್ಟೇ. ಭರವಸಾರ್ಹರೂ ಸಮಯನಿಷ್ಠರೂ ಆಗಿರಿ. ಕೊಟ್ಟ ಮಾತಿನಂತೆ ನಡೆದುಕೊಳ್ಳಿ.—ಮತ್ತಾಯ 5:37.

“ರೋಗಿಯನ್ನು ಕಾಯಿಲೆಯ ಗುಂಗಿನಿಂದ ಹೊರಸೆಳೆಯಲು ನಾವು ಮಾಡುವ ಯಾವುದೇ ಸಂಗತಿ, ಚಿಕ್ಕದ್ದಾಗಿರಲಿ ದೊಡ್ಡದ್ದಾಗಿರಲಿ ತುಂಬ ಸಹಾಯಕಾರಿ” ಎಂದು ಲೇಖಕಿ ರೋಸಾನ್‌ ಕ್ಯಾಲಿಕ್‌ಹೇಳುತ್ತಾರೆ. ಕ್ಯಾನ್ಸರ್‌ನಿಂದ ಎರಡು ಬಾರಿ ಪಾರಾದ ಸಿಲ್ವಿಯಾ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ: “ಪ್ರತಿದಿನ ಬೇರೆ ಬೇರೆ ಮಿತ್ರರು ನನ್ನನ್ನು ವಿಕಿರಣ-ಚಿಕಿತ್ಸೆಗಾಗಿ ಇನ್ನೊಂದು ನಗರಕ್ಕೆ ವಾಹನದಲ್ಲಿ ಕರಕೊಂಡು ಹೋಗುತ್ತಿದ್ದಾಗ ಎಷ್ಟು ನೆಮ್ಮದಿ, ಸಾಂತ್ವನ ಸಿಗುತ್ತಿತ್ತು! ದಾರಿಯುದ್ದಕ್ಕೂ ಲೋಕಾಭಿರಾಮವಾಗಿ ಮಾತಾಡುತ್ತಿದ್ದೆವು. ಚಿಕಿತ್ಸೆ ಪಡೆದು ವಾಪಸ್ಸಾಗುವಾಗ ಎಲ್ಲಾದರೂ ಕಾಫಿ ಕುಡಿದು ಬರುತ್ತಿದ್ದೆವು. ಇದರಿಂದ ನನ್ನ ಮನಸ್ಸು ಯಥಾಸ್ಥಿತಿಗೆ ಮರಳುತ್ತಿತ್ತು.”

ಆದರೆ ನಿಮ್ಮ ಮಿತ್ರನಿಗೆ ಏನು ಬೇಕೋ ಅದು ನಿಮಗೆ ಚೆನ್ನಾಗಿ ಗೊತ್ತೆಂದು ಊಹಿಸಬೇಡಿ. “ಅವರನ್ನೇ ಕೇಳಿ ತಿಳಿದುಕೊಳ್ಳಿ” ಎಂಬ ಸಲಹೆ ಕ್ಯಾಲಿಕ್‌ ಅವರದ್ದು. ಅವರು ಸೇರಿಸಿ ಹೇಳಿದ್ದು: “ಸಹಾಯಮಾಡುವ ಹುಮ್ಮಸ್ಸಿನಿಂದ ಎಲ್ಲವನ್ನು ನಿಯಂತ್ರಿಸಲು ಹೋಗಬೇಡಿ. ಹೀಗೆ ಮಾಡಿದರೆ ನಿಮ್ಮಿಂದ ರೋಗಿಗೆ ಉಪಕಾರಕ್ಕಿಂತ ಉಪಟಲವೇ ಜಾಸ್ತಿಯಾಗಬಹುದು. ನನಗೇನೂ ಮಾಡಲು ಬಿಡದಿದ್ದರೆ, ‘ನಿನ್ನಿಂದೇನೂ ಮಾಡಲು ಸಾಧ್ಯವಿಲ್ಲ’ ಎಂದು ಪರೋಕ್ಷವಾಗಿ ಹೇಳಿದಂತಾಗುತ್ತದೆ. ನಾನು ಸಮರ್ಥಳು ಎಂಬ ಭಾವನೆ ನನ್ನಲ್ಲಿ ಮೂಡಬೇಕು. ನಾನು ನಿಸ್ಸಹಾಯಕ ಸ್ಥಿತಿಯಲ್ಲಿಲ್ಲ ಎಂದು ನನಗನಿಸಬೇಕು. ಆದ್ದರಿಂದ ನನ್ನಿಂದಾಗುವುದನ್ನು ನಾನೇ ಮಾಡಲು ಸಹಾಯಮಾಡಿ.”

ನಿಮ್ಮ ಮಿತ್ರನಲ್ಲೂ ಅವನು ಸಮರ್ಥನು ಎಂಬ ಭಾವನೆಯನ್ನು ಮೂಡಿಸಬೇಕಾದೀತು. ಏಡ್ಸ್‌ ರೋಗವಿರುವ ಆದಿತ್ಯ ಹೇಳುವುದು: “ನಿಷ್ಪ್ರಯೋಜಕನೆಂದೋ ಯಾವ ಕೆಲಸ ಮಾಡಲೂ ಸಮರ್ಥನಲ್ಲ ಎಂದೋ ಮೂಲೆಗುಂಪು ಮಾಡುವುದನ್ನು ಕಾಯಿಲೆಬಿದ್ದಿರುವ ವ್ಯಕ್ತಿ ಇಷ್ಟಪಡುವುದಿಲ್ಲ. ತನ್ನಿಂದ ಬೇರೆಯವರಿಗೆ ಏನಾದರೂ ಸಹಾಯ ಆಗಬೇಕೆಂಬ ಮನಸ್ಸು ಅವನಿಗಿರುವುದರಿಂದ ಎಷ್ಟೇ ಚಿಕ್ಕ ಕೆಲಸವಾಗಿರಲಿ ಅದನ್ನು ಮಾಡಲಿಚ್ಛಿಸುತ್ತಾನೆ. ಒಂದು ಕೆಲಸವನ್ನು ಮಾಡುವ ಸಾಮರ್ಥ್ಯ ಈಗಲೂ ತನಗಿದೆ ಎಂಬ ಭಾವನೆ ಎಷ್ಟೊಂದು ಸಂತೋಷ ತರುತ್ತದೆ! ಜೀವಿಸಬೇಕೆಂಬ ಸ್ಫೂರ್ತಿ ಸಿಗುವುದು ಅದರಿಂದಲೇ. ಬೇರೆಯವರು ನನಗೆ ನಿರ್ಣಯಮಾಡಲು ಬಿಡಬೇಕು ಮತ್ತು ಆ ನಿರ್ಣಯಗಳನ್ನು ಮಾನ್ಯಮಾಡಬೇಕೆಂಬುದು ನನ್ನಿಚ್ಛೆ. ಕಾಯಿಲೆಬಿದ್ದಿದ್ದೇವೆಂಬ ಮಾತ್ರಕ್ಕೆ ಒಬ್ಬ ತಂದೆ, ತಾಯಿ ಅಥವಾ ನಮಗಿರುವ ಬೇರಾವುದೇ ಪಾತ್ರವನ್ನು ನಿಭಾಯಿಸಲಾರೆವು ಎಂದರ್ಥವಲ್ಲ.”

ಆಪ್ತರಾಗಿ ಉಳಿಯಿರಿ

ಬೈಬಲ್‌ ಸೂತ್ರ:

“ಮಿತ್ರನ ಪ್ರೀತಿಯು ನಿರಂತರ.”ಜ್ಞಾನೋಕ್ತಿ 17:17.

◼ ನೀವು ಒಂದೇ ಊರಿನಲ್ಲಿರದ ಕಾರಣವೊ ಬೇರಾವುದೋ ಪರಿಸ್ಥಿತಿಗಳ ಕಾರಣವೊ ನಿಮ್ಮ ಮಿತ್ರನನ್ನು ಕಾಣಲು ಸಾಧ್ಯವಿಲ್ಲದಿರುವಲ್ಲಿ ಫೋನ್‌ಮಾಡಿ ಮಾತಾಡಬಹುದು, ಚಿಕ್ಕ ಪತ್ರ ಬರೆದು ಕಳುಹಿಸಬಹುದು ಇಲ್ಲವೆ ಈ-ಮೇಲ್‌ ಮಾಡಬಹುದು. ಏನು ಬರೆಯುವಿರಿ? ದುಃಖ ನಿಭಾವಣೆಯ ಸಲಹೆಗಾರರಾದ ಆ್ಯಲನ್‌ ಡಿ. ವುಲ್ಫೆಲ್ಟ್‌ ಹೀಗನ್ನುತ್ತಾರೆ: “ನೀವಿಬ್ಬರೂ ಸೇರಿ ಹಿಂದೆ ಆನಂದಿಸಿದ್ದ ಮೋಜಿನ ಸಮಯಗಳ ಬಗ್ಗೆ ಬರೆಯಿರಿ. . . . ಸ್ವಲ್ಪ ಸಮಯದಲ್ಲೇ ಮತ್ತೊಂದು ಪತ್ರ ಬರೆಯುವಿರೆಂದು ಮಾತು ಕೊಡಿ. ಆಮೇಲೆ ಆ ಮಾತನ್ನು ಉಳಿಸಿರಿ.”

ಕಾಯಿಲೆಬಿದ್ದಿರುವ ಮಿತ್ರನಿಗೆ ಬಾಯಿತಪ್ಪಿ ಏನಾದರೂ ಹೇಳುವೀರೆಂದೊ ನಿಮ್ಮಿಂದ ಏನಾದರೂ ಎಡವಟ್ಟು ಆಗುವುದೆಂದೊ ಹೆದರಿ ಅವನಿಂದ ದೂರ ಇರಬೇಕಾಗಿಲ್ಲ. ಹೆಚ್ಚಾಗಿ, ನೀವು ಅವರೊಂದಿಗಿದ್ದರೆ ಅವರಿಗೆ ಅಷ್ಟೇ ಸಾಕು. ಲೊರಿ ಹೋಪ್‌ ತಮ್ಮ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: “ತಪ್ಪಾರ್ಥ ಕೊಡುವ ಇಲ್ಲವೆ ಮನನೋಯಿಸುವ ವಿಷಯಗಳನ್ನು ಅರಿವಿಲ್ಲದೆ ನಾವೆಲ್ಲರೂ ಹೇಳುತ್ತೇವೆ ಇಲ್ಲವೆ ಮಾಡುತ್ತೇವೆ. ಸಮಸ್ಯೆ ಅದಲ್ಲ. ಸಮಸ್ಯೆ ಹುಟ್ಟುವುದು ಯಾವಾಗ ಅಂದರೆ ತಪ್ಪುಮಾಡುವಿರೆಂಬ ಅತಿಯಾದ ಹೆದರಿಕೆಯಿಂದಾಗಿ ನಿಮ್ಮ ಸಹಾಯದ ಅಗತ್ಯವಿರುವವರೊಬ್ಬರಿಂದ ದೂರ ಇರುವಾಗಲೇ.”

ಗಂಭೀರ ಕಾಯಿಲೆಯಿರುವ ಮಿತ್ರನೊಬ್ಬನಿಗೆ ಹಿಂದೆಂದಿಗಿಂತಲೂ ಈಗ ನಿಮ್ಮ ಹೆಚ್ಚಿನ ಅಗತ್ಯವಿರಬಹುದು. ನೀವು ನಿಜ ಮಿತ್ರರಾಗಿದ್ದೀರೆಂದು ಈಗ ಸಾಬೀತುಪಡಿಸಿ. ನೀವು ಪ್ರೀತಿಸುವ ಆ ವ್ಯಕ್ತಿಯ ದೈಹಿಕ ನೋವು ನಿಮ್ಮ ಪ್ರಯತ್ನಗಳಿಂದಾಗಿ ಮಾಯವಾಗಲಿಕ್ಕಿಲ್ಲವಾದರೂ ಆ ನೋವನ್ನು ಸಹಿಸಲು ಅವರಿಗೆ ಹೆಚ್ಚು ಸುಲಭವಾಗುವುದಂತೂ ಖಂಡಿತ. (w10-E 07/01)

[ಪಾದಟಿಪ್ಪಣಿ]

^ ಪ್ಯಾರ. 9 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.