ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆ

ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆ

ಅವರ ನಂಬಿಕೆಯನ್ನು ಅನುಕರಿಸಿರಿ

ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆ

ಹನ್ನಳು ಪ್ರಯಾಣದ ತಯಾರಿಯಲ್ಲಿ ತಲ್ಲೀನಳಾಗಿ ತನ್ನ ಸಮಸ್ಯೆ ಹಾಗೂ ನೋವನ್ನು ಮರೆಯಲು ಪ್ರಯತ್ನಿಸಿದಳು. ಇದು ವಾಸ್ತವದಲ್ಲಿ ಸಂಭ್ರಮದ ಸಮಯವಾಗಿರಬೇಕಿತ್ತು. ಆಕೆಯ ಗಂಡ ಎಲ್ಕಾನನು ಇಡೀ ಕುಟುಂಬವನ್ನು ಶಿಲೋವಿನಲ್ಲಿದ್ದ ದೇವಗುಡಾರಕ್ಕೆ ಆರಾಧನೆಗೆಂದು ಪ್ರತಿ ವರ್ಷ ತಪ್ಪದೆ ಕರಕೊಂಡು ಹೋಗುತ್ತಿದ್ದನು. ಈ ಆರಾಧನೆಯ ಸಂದರ್ಭಗಳು ಆನಂದದಿಂದ ಕೂಡಿರಬೇಕೆಂಬುದು ಯೆಹೋವನ ಅಪೇಕ್ಷೆಯೂ ಆಗಿತ್ತು. (ಧರ್ಮೋಪದೇಶಕಾಂಡ 16:15) ಆದರೆ ಈ ಹಬ್ಬಗಳನ್ನು ಬಾಲ್ಯದಿಂದ ಆನಂದಿಸಿದ್ದ ಹನ್ನಳ ಸನ್ನಿವೇಶ ಇತ್ತೀಚಿನ ವರ್ಷಗಳಲ್ಲಿ ಬದಲಾಗಿತ್ತು.

ಹನ್ನಳ ಗಂಡ ಆಕೆಯನ್ನು ತುಂಬ ಪ್ರೀತಿಸುತ್ತಿದ್ದ. ಆದರೆ ಅವನಿಗೆ ಇಬ್ಬರು ಹೆಂಡತಿಯರು. ಇನ್ನೊಬ್ಬಳ ಹೆಸರು ಪೆನಿನ್ನ. ಹನ್ನಳ ಬಾಳಲ್ಲಿ ವಿಷಕಾರುವುದಕ್ಕೇ ಆಕೆ ಟೊಂಕ ಕಟ್ಟಿ ನಿಂತಿದ್ದಳು ಎಂಬಂತಿತ್ತು. ಈ ವಾರ್ಷಿಕ ಹಬ್ಬಗಳು ಹನ್ನಳಿಗೆ ಸಂಭ್ರಮದ ಬದಲು ಅತೀವ ದುಃಖದ ಸಂದರ್ಭಗಳಾಗಿ ಮಾಡುವ ವಿಧಾನವನ್ನೂ ಯೋಚಿಸಿಟ್ಟಿದ್ದಳು. ಅದೇನಾಗಿತ್ತು? ಇದಕ್ಕಿಂತಲೂ ಮುಖ್ಯವಾಗಿ, ಹನ್ನಳಿಗೆ ಯೆಹೋವನಲ್ಲಿದ್ದ ನಂಬಿಕೆಯು ತನ್ನ ನಿಯಂತ್ರಣದಲ್ಲಿಲ್ಲದ ಸನ್ನಿವೇಶವನ್ನು ನಿಭಾಯಿಸಲು ಹೇಗೆ ಸಹಾಯಮಾಡಿತು? ಜೀವನದ ಆನಂದವನ್ನು ಹೀರುವಂಥ ಸವಾಲುಗಳನ್ನು ನೀವೂ ಎದುರಿಸುತ್ತಿರಬಹುದು. ಹಾಗಿರುವಲ್ಲಿ ಹನ್ನಳ ಕಥೆ ಖಂಡಿತವಾಗಿಯೂ ನಿಮ್ಮ ಮನಮುಟ್ಟುವುದು.

“ನೀನು ವ್ಯಸನಪಡುವದೇಕೆ?”

ಹನ್ನಳ ಜೀವನದಲ್ಲಿ ಎರಡು ದೊಡ್ಡ ಸಮಸ್ಯೆಗಳಿದ್ದವೆಂದು ಬೈಬಲ್‌ ತೋರಿಸುತ್ತದೆ. ಮೊದಲ ಸಮಸ್ಯೆ ಏನಾಗಿತ್ತೆಂದರೆ ಆಕೆ ಬಹುಪತ್ನೀತ್ವ ವಿವಾಹ ಪದ್ಧತಿಯಲ್ಲಿ ಸಿಲುಕಿಕೊಂಡಿದ್ದಳು. ಸವತಿ ಆಕೆಯನ್ನು ನೋಡಿ ಕಿಡಿಕಾರುತ್ತಿದ್ದಳು. ಈ ವಿಷಯದಲ್ಲಿ ಹನ್ನ ಹೆಚ್ಚೇನು ಮಾಡಲೂ ಸಾಧ್ಯವಿರಲಿಲ್ಲ. ಎರಡನೇ ಸಮಸ್ಯೆ ಆಕೆಯ ಬಂಜೆತನ. ಇದಂತೂ ಆಕೆಯ ಕೈಯಲ್ಲೇ ಇರಲಿಲ್ಲ. ಮಕ್ಕಳನ್ನು ಹಡೆಯಲು ಹಾತೊರೆಯುತ್ತಿರುವ ಯಾವ ಹೆಂಗಸಿಗೂ ಬಂಜೆತನ ನುಂಗಲಾರದ ತುತ್ತಾಗಿರುತ್ತದೆ. ಅದರಲ್ಲೂ ಹನ್ನಳ ದಿನಗಳ ಸಂಸ್ಕೃತಿಯಲ್ಲಿ ಬಂಜೆತನವೆನ್ನುವುದು ಅಪಾರ ದುಃಖವನ್ನು ತರುತ್ತಿತ್ತು. ಏಕೆಂದರೆ ಪ್ರತಿಯೊಂದು ಕುಟುಂಬವೂ ತನ್ನ ಹೆಸರನ್ನು ಮುಂದುವರಿಸಿಕೊಂಡು ಹೋಗುವ ವಂಶದ ಕುಡಿಯನ್ನು ಬಯಸುತ್ತಿತ್ತು. ಹೀಗಿರುವುದರಿಂದ ಬಂಜೆತನವು ಅವಮಾನ ಹಾಗೂ ನಾಚಿಕೆಯ ಸಂಗತಿಯಾಗಿತ್ತು.

ಹನ್ನಳು ತನ್ನ ಈ ಸ್ಥಿತಿಯನ್ನು ಹೇಗಾದರೂ ಸಹಿಸಿಕೊಳ್ಳುತ್ತಿದ್ದಳೊ ಏನೋ. ಆದರೆ ಪೆನಿನ್ನಳ ಕಾಟದಿಂದಾಗಿ ಆಕೆಯ ಕಷ್ಟ ದುಪ್ಪಟ್ಟಾಯಿತು. ಬಹುಪತ್ನೀತ್ವ ಪದ್ಧತಿಯಲ್ಲೇ ಲೋಪವಿತ್ತು. ಪತ್ನಿಯರ ಮಧ್ಯೆ ಪ್ರತಿಸ್ಪರ್ಧೆ, ಕಚ್ಚಾಟ, ಮನೋವೇದನೆ ಸರ್ವಸಾಮಾನ್ಯವಾಗಿತ್ತು. ಆ ಪದ್ಧತಿ, ದೇವರು ಏದೆನ್‌ ತೋಟದಲ್ಲಿ ಸ್ಥಾಪಿಸಿದ್ದ ಏಕಪತ್ನೀತ್ವದ ಮಟ್ಟಕ್ಕೆ ತದ್ವಿರುದ್ಧವಾಗಿತ್ತು. * (ಆದಿಕಾಂಡ 2:24) ಹೀಗೆ, ಬಹುಪತ್ನೀತ್ವದ ಏರ್ಪಾಡಿನ ಬಗ್ಗೆ ಬೈಬಲ್‌ ಒಂದು ವಿಷಣ್ಣ ಚಿತ್ರಣವನ್ನು ಬಿಡಿಸುತ್ತದೆ. ಎಲ್ಕಾನನ ಮನೆಯಲ್ಲಿನ ಜೀವನದ ಕುರಿತ ಹೃದಯಹಿಂಡುವ ವರ್ಣನೆಯು ಇದಕ್ಕೆ ಹಿಡಿದ ಕನ್ನಡಿಯಂತಿದೆ.

ಎಲ್ಕಾನ ಹನ್ನಳನ್ನೇ ಹೆಚ್ಚು ಪ್ರೀತಿಸುತ್ತಿದ್ದ. ಯೆಹೂದ್ಯರ ಪಾರಂಪಾರಿಕ ಕಥೆಗನುಸಾರ ಅವನು ಮೊದಲು ಮದುವೆಯಾದದ್ದು ಹನ್ನಳನ್ನೇ. ಕೆಲವು ವರ್ಷಗಳಾನಂತರ ಪೆನಿನ್ನಳನ್ನು ಮದುವೆಯಾದ. ಹೇಗೂ ಇರಲಿ ಪೆನಿನ್ನಳಿಗಂತೂ ಹನ್ನಳನ್ನು ಕಂಡರೆ ತುಂಬ ಹೊಟ್ಟೆಯುರಿ. ಆದ್ದರಿಂದ ಆಕೆಗೆ ಉಪದ್ರವಕೊಡಲು ಬೇರೆ ಬೇರೆ ಮಾರ್ಗಗಳಿಗಾಗಿ ಹುಡುಕುತ್ತಿದ್ದಳು. ಪೆನಿನ್ನ ಮಕ್ಕಳನ್ನು ಹಡೆಯಲು ಶಕ್ತಳಾಗಿದ್ದ ಒಂದೇ ಕಾರಣಕ್ಕಾಗಿ ಮೆರೆಯುತ್ತಿದ್ದಳು. ಆಕೆಗೆ ಒಂದರ ನಂತರ ಒಂದು ಮಕ್ಕಳು ಹುಟ್ಟಿದವು. ಒಂದೊಂದು ಮಗು ಹುಟ್ಟುತ್ತಾ ಹೋದಂತೆ ಆಕೆಯ ದರ್ಪವೂ ಹೆಚ್ಚುತ್ತಾ ಹೋಯಿತು. ಹನ್ನಳಿಗಾಗಿ ಕನಿಕರಪಟ್ಟು, ಆಕೆಯನ್ನು ಸಂತೈಸುವ ಬದಲು ಆಕೆಯ ಗಾಯದ ಮೇಲೆ ಉಪ್ಪುಸವರುತ್ತಿದ್ದಳು. “ಆಕೆಯನ್ನು ಕೆಣಕಿ ನೋಯಿಸುತ್ತಿದ್ದಳು” ಎನ್ನುತ್ತದೆ ಬೈಬಲ್‌. (1 ಸಮುವೇಲ 1:6) ಹೌದು, ನೋಯಿಸಲಿಕ್ಕೆಂದೇ ಕೆಣಕುತ್ತಿದ್ದಳು. ಅವಳ ಗುರಿ ಅದೇ ಆಗಿತ್ತು. ಇದನ್ನು ತಕ್ಕಮಟ್ಟಿಗೆ ಸಾಧಿಸಿದಳು ಸಹ.

ಎಲ್ಲಕ್ಕಿಂತಲೂ ಹೆಚ್ಚಾಗಿ, ಶಿಲೋವಿಗೆ ಅವರ ವಾರ್ಷಿಕ ಭೇಟಿಯ ಸಮಯದಲ್ಲಿ ಹನ್ನಳನ್ನು ಮೂದಲಿಸುವುದನ್ನು ಪೆನಿನ್ನ ತುಂಬ ಇಷ್ಟಪಡುತ್ತಿದ್ದಳೆಂದು ತೋರುತ್ತದೆ. ಎಲ್ಕಾನನು ಯೆಹೋವನಿಗೆ ಯಜ್ಞವನ್ನು ಅರ್ಪಿಸಿದಾಗ ಅದರ ಭಾಗಗಳನ್ನು ಪೆನಿನ್ನಳಿಗೂ ಆಕೆಯ ‘ಗಂಡು ಹೆಣ್ಣು ಮಕ್ಕಳಲ್ಲಿ’ ಪ್ರತಿಯೊಬ್ಬರಿಗೂ ಕೊಡುತ್ತಿದ್ದನು. ಆದರೆ ಮಕ್ಕಳಿಲ್ಲದ ಹನ್ನಳಿಗೆ ಆಕೆಯ ಭಾಗ ಮಾತ್ರ ಸಿಗುತ್ತಿತ್ತು. ಈ ವಿಷಯವನ್ನು ಬಳಸಿ ಈ ಸಾರಿಯೂ ಪೆನಿನ್ನ ಗತ್ತಿನಿಂದ ವರ್ತಿಸುತ್ತಾ ಹನ್ನಳಿಗೆ ಆಕೆಯ ಬಂಜೆತನದ ಬಗ್ಗೆ ಜ್ಞಾಪಕಹುಟ್ಟಿಸಿದಳು. ಅವಳೆಷ್ಟು ಚುಚ್ಚಿಮಾತಾಡಿದಳೆಂದರೆ ಪಾಪದ ಆ ಹೆಣ್ಣುಮಗಳು ಅತ್ತೇಬಿಟ್ಟಳು. ಆಕೆಯ ಗಂಟಲಲ್ಲಿ ಒಂದು ತುತ್ತು ಆಹಾರವೂ ಇಳಿಯುತ್ತಿರಲಿಲ್ಲ. ತನ್ನ ಮುದ್ದಿನ ಮಡದಿಯಾದ ಹನ್ನಳು ಕೊರಗುತ್ತಿರುವುದನ್ನೂ ತಿನ್ನದಿರುವುದನ್ನೂ ಗಮನಿಸಿದ ಎಲ್ಕಾನ ಆಕೆಗೆ “ಹನ್ನಾ, ಏಕೆ ಅಳುತ್ತೀ? ಉಣ್ಣದಿರುವದಕ್ಕೇನು ಕಾರಣ? ನೀನು ವ್ಯಸನಪಡುವದೇಕೆ? ನಾನು ನಿನಗೆ ಹತ್ತು ಮಂದಿ ಮಕ್ಕಳಿಗಿಂತ ಹೆಚ್ಚಾಗಿದ್ದೇನಲ್ಲಾ” ಎಂದು ಹೇಳಿ ಆಕೆಯನ್ನು ಸಂತೈಸಲು ಯತ್ನಿಸಿದ.—1 ಸಮುವೇಲ 1:4-8.

ಮಕ್ಕಳಿಲ್ಲ ಎಂಬ ಕಾರಣಕ್ಕಾಗಿಯೇ ಹನ್ನಳು ಕೊರಗುತ್ತಿದ್ದಳು ಎಂಬುದನ್ನು ಎಲ್ಕಾನ ಗ್ರಹಿಸಿದ್ದು ಮೆಚ್ಚತಕ್ಕ ಮಾತೇ. ಅವನು ದಯೆಯಿಂದ ಆಕೆಗೆ ತನ್ನ ಪ್ರೀತಿಯ ಬಗ್ಗೆ ಕೊಟ್ಟ ಭರವಸೆಯ ಮಾತುಗಳು ಖಂಡಿತವಾಗಿಯೂ ಹನ್ನಳ ಹೃದಯಕ್ಕೆ ತಂಪೆರೆಚಿದವು. * ಆದರೆ ಹನ್ನಳ ದುಃಖಕ್ಕೆ ಕಾರಣ ಪೆನಿನ್ನಳ ಹಗೆಯೋ ಎಂದು ಎಲ್ಕಾನನು ಕೇಳಿದ್ದನ್ನಾಗಲಿ ಹನ್ನಳು ಅವನಿಗೆ ಅದರ ಬಗ್ಗೆ ಹೇಳಿದ್ದನ್ನಾಗಲಿ ಬೈಬಲ್‌ ಎಲ್ಲೂ ಹೇಳುವುದಿಲ್ಲ. ಪೆನಿನ್ನಳ ನೈಜ ಬಣ್ಣವನ್ನು ಬಯಲಿಗೆಳೆದರೆ ತನ್ನ ಕಷ್ಟ ಎಲ್ಲಿ ಹೆಚ್ಚಾದೀತೊ ಎಂಬ ಆತಂಕ ಹನ್ನಳಿಗಿದ್ದಿರಬಹುದು. ಎಲ್ಕಾನನಿಗೆ ಹೇಳಿದರೂ ಅವನು ಪರಿಸ್ಥಿತಿಯನ್ನು ನಿಜವಾಗಿ ಬದಲಾಯಿಸುತ್ತಿದ್ದನೇ? ಹೇಳಿದರೆ, ಪೆನಿನ್ನ ಮಾತ್ರವಲ್ಲ ಅವಳ ಮಕ್ಕಳೂ ಸೇವಕಸೇವಕಿಯರೂ ಹನ್ನಳನ್ನು ಇನ್ನೂ ಹೆಚ್ಚು ಹಗೆಮಾಡುವರಲ್ಲವೇ? ಆಕೆಯನ್ನು ತನ್ನ ಸ್ವಂತ ಮನೆಯಲ್ಲಿ ಮೂರನೇ ವ್ಯಕ್ತಿಯಂತೆ ಉಪಚರಿಸುವ ಸಾಧ್ಯತೆಯೂ ಇತ್ತು.

ಪೆನಿನ್ನಳ ಈ ಕೀಳು ವರ್ತನೆಯು ಎಷ್ಟರ ಮಟ್ಟಿಗಿತ್ತೆಂದು ಎಲ್ಕಾನನಿಗೆ ತಿಳಿದಿತ್ತೊ ಇಲ್ಲವೊ ಯೆಹೋವ ದೇವರಿಗಂತೂ ಎಲ್ಲವೂ ತಿಳಿದಿತ್ತು. ಅದ್ದರಿಂದಲೇ ಪೆನಿನ್ನಳ ವರ್ತನೆಯ ಪೂರ್ಣ ಚಿತ್ರಣವನ್ನು ಆತನ ವಾಕ್ಯ ನಮಗೆ ಕೊಡುತ್ತದೆ. ಇದು, ಕ್ಷುಲ್ಲಕವೆಂಬಂತೆ ತೋರುವ ಹೊಟ್ಟೆಕಿಚ್ಚು ಮತ್ತು ದ್ವೇಷದ ಕೃತ್ಯಗಳನ್ನು ನಡೆಸುವವರಿಗೆ ಕಟ್ಟೆಚ್ಚರಿಕೆ ಕೊಡುತ್ತದೆ. ಆದರೆ ಹನ್ನಳಂತೆ ಅಮಾಯಕರೂ ಶಾಂತಿಶೀಲರೂ ಆಗಿರುವವರಿಗೆ ಸಾಂತ್ವನವನ್ನೂ ಕೊಡುತ್ತದೆ. ನ್ಯಾಯದ ದೇವರು ತನ್ನ ಸಮಯದಲ್ಲಿ, ತನ್ನ ವಿಧಾನದಲ್ಲಿ ಎಲ್ಲವನ್ನೂ ಸರಿಪಡಿಸುವನು ಎಂದವರು ಭರವಸೆ ಇಡಬಲ್ಲರು. (ಧರ್ಮೋಪದೇಶಕಾಂಡ 32:4) ಈ ಭರವಸೆ ಹನ್ನಳಿಗೂ ಇದ್ದಿರಬೇಕು. ಆದ್ದರಿಂದಲೇ ಆಕೆ ಸಹಾಯಕ್ಕಾಗಿ ಯೆಹೋವನನ್ನು ಯಾಚಿಸಿದಳು.

“ಮೋರೆಯಲ್ಲಿ ದುಃಖವು ಕಾಣಲಿಲ್ಲ”

ಬೆಳ್ಳಂಬೆಳಿಗ್ಗೆ ಇಡೀ ಮನೆಯಲ್ಲಿ ಗಡಿಬಿಡಿಯ ಗದ್ದಲವಿತ್ತು. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಪ್ರಯಾಣದ ಸಿದ್ಧತೆಯಲ್ಲಿದ್ದರು. ಎಫ್ರಾಯಿಮೀನ ಗುಡ್ಡಗಾಡು ಪ್ರದೇಶದಿಂದ ಶಿಲೋವಿಗೆ 30 ಕಿಲೊಮೀಟರ್‌ ಇತ್ತು. * ಕಾಲ್ನಡಿಗೆಯಲ್ಲಿ ಅಲ್ಲಿ ತಲಪಲು ಆ ದೊಡ್ಡ ಕುಟುಂಬಕ್ಕೆ ಒಂದೆರಡು ದಿನಗಳಾದರೂ ಹಿಡಿಯಲಿತ್ತು. ಈ ಸಮಯದಲ್ಲಿ ತನ್ನ ಸವತಿಯ ವರ್ತನೆ ಹೇಗಿರುವುದೆಂದು ಹನ್ನಳಿಗೆ ಚೆನ್ನಾಗಿ ಗೊತ್ತಿದ್ದರೂ ಆಕೆ ಮನೆಯಲ್ಲೇ ಉಳಿಯಲಿಲ್ಲ. ಹೀಗೆ ಆಕೆಯಿಟ್ಟ ಉತ್ಕೃಷ್ಟ ಮಾದರಿ ಇಂದಿನ ವರೆಗೂ ದೇವರ ಆರಾಧಕರಿಗೆ ಅನ್ವಯವಾಗುತ್ತದೆ. ಬೇರೆಯವರ ದುರ್ವರ್ತನೆಯು ನಾವು ದೇವರಿಗೆ ಸಲ್ಲಿಸುವ ಆರಾಧನೆಗೆ ಅಡ್ಡಿಯಾಗುವಂತೆ ಬಿಡಬಾರದು. ಹಾಗೆ ಬಿಟ್ಟರೆ, ತಾಳಿಕೊಳ್ಳುವಂತೆ ನಮ್ಮನ್ನು ಬಲಪಡಿಸುವ ಆಶೀರ್ವಾದಗಳನ್ನೇ ಬೇಡವೆಂದಂತಾಗುತ್ತದೆ.

ಇಡೀ ದಿನ ಗುಡ್ಡಗಾಡಿನ ಅಂಕುಡೊಂಕಾದ ರಸ್ತೆಗಳಲ್ಲಿ ಪ್ರಯಾಣಿಸಿ ಆ ದೊಡ್ಡ ಕುಟುಂಬ ಕೊನೆಗೆ ಶಿಲೋವನ್ನು ಸಮೀಪಿಸಿತು. ಎತ್ತರದ ಗುಡ್ಡಗಳ ಮಧ್ಯೆ ಒಂದು ಗುಡ್ಡದ ಮೇಲೆ ನೆಲೆಸಿದ್ದ ಶಿಲೋ ಅವರಿಗೆ ಕಾಣಿಸುತ್ತಿತ್ತು. ಅದರ ಹತ್ತಿರಹತ್ತಿರ ಬರುತ್ತಿದ್ದಂತೆ ಹನ್ನಳು, ತಾನು ಯೆಹೋವನಿಗೆ ಪ್ರಾರ್ಥಿಸುವಾಗ ಏನೇನು ಹೇಳಬೇಕೆಂಬುದರ ಬಗ್ಗೆ ಖಂಡಿತ ತುಂಬ ಯೋಚಿಸುತ್ತಿದ್ದಿರಬೇಕು. ಅಲ್ಲಿ ತಲಪಿದ ಬಳಿಕ ಇಡೀ ಕುಟುಂಬ ಒಟ್ಟಿಗೆ ಊಟಮಾಡಿತು. ಆದಷ್ಟು ಬೇಗ ಹನ್ನ ಅವರಿಂದ ಪ್ರತ್ಯೇಕಗೊಂಡು ದೇವಗುಡಾರದ ದಾರಿಹಿಡಿದಳು. ಅಲ್ಲಿ, ಮಹಾ ಯಾಜಕ ಏಲಿಯು ಮಂದಿರದ್ವಾರದ ನಿಲುವುಪಟ್ಟಿಗಳ ಬಳಿಯಲ್ಲಿ ಕೂತುಕೊಂಡಿದ್ದನು. ಹನ್ನಳ ಗಮನವೆಲ್ಲಾ ಪ್ರಾರ್ಥಿಸುವುದರ ಮೇಲಿತ್ತು. ದೇವಗುಡಾರದಲ್ಲಿ ಪ್ರಾರ್ಥಿಸುವಾಗ ದೇವರು ಖಂಡಿತ ತನ್ನ ಮಾತನ್ನು ಕೇಳುವನೆಂದು ಆಕೆಗೆ ಅನಿಸಿತು. ತನ್ನ ಪರಿಸ್ಥಿತಿ ಯಾರಿಗೂ ಅರ್ಥವಾಗದಿದ್ದರೂ ತನ್ನ ತಂದೆಯಾದ ದೇವರಿಗೆ ಅರ್ಥವಾಗುವುದೆಂಬ ಭರವಸೆ ಆಕೆಗಿತ್ತು. ಆಕೆಯೊಳಗೆ ಮಡುಗಟ್ಟಿದ್ದ ದುಃಖದ ಕಟ್ಟೆಯೊಡೆದು ಕಣ್ಣೀರಾಗಿ ಹರಿಯಿತು.

ಬಿಕ್ಕಳಿಸುತ್ತಾ ಮಾತಿಲ್ಲದೆ ಯೆಹೋವನ ಮುಂದೆ ತನ್ನ ಮನಸ್ಸನ್ನು ಬಿಚ್ಚಿಡುತ್ತಿದ್ದಾಗ ಆಕೆಯ ಇಡೀ ಶರೀರ ಕಂಪಿಸುತ್ತಿತ್ತು. ತನ್ನ ನೋವನ್ನು ಮಾತುಗಳಲ್ಲಿ ವ್ಯಕ್ತಪಡಿಸುವಾಗ ಆಕೆಯ ತುಟಿಗಳು ಮಾತ್ರ ಅಲ್ಲಾಡುತ್ತಿದ್ದವು. ಆಕೆ ಬಹಳ ಹೊತ್ತಿನ ವರೆಗೆ ಪ್ರಾರ್ಥಿಸುತ್ತಾ ತಂದೆಯಾದ ದೇವರಲ್ಲಿ ತನ್ನ ಹೃದಯ ತೋಡಿಕೊಂಡಳು. ತಾಯಿಯಾಗುವ ತನ್ನ ಹಂಬಲವನ್ನು ಪೂರೈಸುವಂತೆ ಆಕೆ ಬೇಡಿಕೊಂಡಳು. ದೇವರಿಂದ ಆಶೀರ್ವಾದಗಳನ್ನು ಕೋರಿದ್ದಷ್ಟೇ ಅಲ್ಲ, ತನ್ನಿಂದ ಸಾಧ್ಯವಿದದ್ದನ್ನು ಆತನಿಗೆ ಕೊಡಲೂ ಇಚ್ಛಿಸಿದಳು. ಆಕೆ ಒಂದು ಹರಕೆಹೊತ್ತಳು. ತನಗೊಂದು ಗಂಡುಮಗು ಹುಟ್ಟಿದರೆ ಅವನನ್ನು ಜೀವನಪರ್ಯಂತದ ಸೇವೆಗಾಗಿ ಯೆಹೋವನಿಗೆ ಅರ್ಪಿಸುವೆನೆಂದು ಮಾತುಕೊಟ್ಟಳು.—1 ಸಮುವೇಲ 1:9-11.

ಹೀಗೆ ಪ್ರಾರ್ಥನೆಯ ವಿಷಯದಲ್ಲೂ ಹನ್ನಳು ದೇವರ ಎಲ್ಲ ಸೇವಕರಿಗೆ ಮಾದರಿಯಾಗಿದ್ದಾಳೆ. ಒಂದು ಮಗು ಪೂರ್ಣ ಭರವಸೆಯಿಂದ ತನ್ನ ಪ್ರೀತಿಯ ತಂದೆಯೊಂದಿಗೆ ಯಾವುದೇ ಅಳುಕಿಲ್ಲದೆ, ಮನಬಿಚ್ಚಿ ಮಾತಾಡುವಂತೆಯೇ ತನ್ನ ಜನರು ತಮ್ಮೆಲ್ಲ ಚಿಂತೆಗಳನ್ನು ತನಗೆ ಹೇಳುವಂತೆ ಯೆಹೋವನು ಆಮಂತ್ರಿಸುತ್ತಾನೆ. (ಕೀರ್ತನೆ 62:8; 1 ಥೆಸಲೊನೀಕ 5:17) ಆತನಿಗೆ ಪ್ರಾರ್ಥಿಸುವುದರ ಬಗ್ಗೆ ಅಪೊಸ್ತಲ ಪೇತ್ರನು ದೇವರಾತ್ಮ-ಪ್ರೇರಿತನಾಗಿ ಈ ಸಾಂತ್ವನದಾಯಕ ಮಾತುಗಳನ್ನು ಬರೆದನು: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.

ಯೆಹೋವನಂತೂ ತುಂಬ ಅರ್ಥಮಾಡಿಕೊಳ್ಳುತ್ತಾನೆ ಮತ್ತು ಸಹಾನುಭೂತಿ ತೋರಿಸುತ್ತಾನೆ. ಆದರೆ ಮನುಷ್ಯರು? ಹನ್ನಳು ಅಳುತ್ತಾ ಪ್ರಾರ್ಥಿಸುತ್ತಿದ್ದಾಗ ಒಂದು ಧ್ವನಿ ಕೇಳಿ ಚಕಿತಳಾದಳು. ಆ ಧ್ವನಿ ಮಹಾ ಯಾಜಕನಾದ ಏಲಿಯದ್ದಾಗಿತ್ತು. ಆಕೆಯನ್ನು ಗಮನಿಸುತ್ತಾ ಇದ್ದ ಅವನು, “ನಿನ್ನ ಅಮಲು ಇನ್ನೂ ಇಳಿಯಲಿಲ್ಲವೋ? ದ್ರಾಕ್ಷಾರಸದ ಮತ್ತು ನಿನ್ನನ್ನು ಬಿಟ್ಟು ಹೋಗಲಿ” ಎಂದು ಹೇಳಿದನು. ಆಕೆಯ ತುಟಿಗಳ ತರಗುಟ್ಟುವಿಕೆ, ಬಿಕ್ಕಳಿಕೆ, ಆಕೆ ನಡೆದುಕೊಳ್ಳುತ್ತಿದ್ದ ರೀತಿಯನ್ನು ಅವನು ಗಮನಿಸಿದ್ದನು. ಏನಾಯಿತು ಎಂದು ಆಕೆಗೇ ಕೇಳುವ ಬದಲು ಪಾನಮತ್ತಳಾಗಿದ್ದಾಳೆ ಎಂದು ದುಡುಕಿ ತೀರ್ಮಾನಿಸಿದನು.—1 ಸಮುವೇಲ 1:12-14.

ಮೊದಲೇ ಸಂಕಟದಲ್ಲಿದ್ದ ಹನ್ನಳ ಮೇಲೆ ಎಂಥ ಆರೋಪ! ಅದೂ ಇಷ್ಟೊಂದು ಗೌರವಾನ್ವಿತ ಸ್ಥಾನದಲ್ಲಿರುವ ವ್ಯಕ್ತಿಯಿಂದ! ಹನ್ನಳು ಇನ್ನೆಷ್ಟು ನೊಂದಿರಬೇಕಲ್ಲವೇ? ಆವಾಗಲೂ ಆಕೆ ನಂಬಿಕೆಯ ಉತ್ಕೃಷ್ಟ ಮಾದರಿಯನ್ನಿಟ್ಟಳು. ತಾನು ಯೆಹೋವನಿಗೆ ಸಲ್ಲಿಸುತ್ತಿದ್ದ ಆರಾಧನೆಗೆ ಒಬ್ಬ ಮನುಷ್ಯನ ತಪ್ಪು ಅಡ್ಡಬರುವಂತೆ ಆಕೆ ಬಿಡಲಿಲ್ಲ. ಗೌರವದಿಂದಲೇ ಏಲಿಗೆ ಉತ್ತರಕೊಡುತ್ತಾ ತನ್ನ ಸನ್ನಿವೇಶದ ಬಗ್ಗೆ ವಿವರಿಸಿದಳು. ಈಗಾತನು ತನ್ನ ತಪ್ಪನ್ನು ಅರಿತುಕೊಂಡು, ಬಹುಶಃ ಮೃದುವಾದ ಧ್ವನಿಯಲ್ಲಿ ಹೀಗಂದನು: “ಸಮಾಧಾನದಿಂದ ಹೋಗು; ಇಸ್ರಾಯೇಲ್‌ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ.”—1 ಸಮುವೇಲ 1:15-17.

ಹನ್ನಳು ಯೆಹೋವನಲ್ಲಿ ತನ್ನ ಹೃದಯ ತೋಡಿಕೊಂಡದ್ದು, ಆತನ ಗುಡಾರದಲ್ಲಿ ಆರಾಧಿಸಿದ್ದು ಆಕೆಯ ಮೇಲೆ ಯಾವ ಪರಿಣಾಮ ಬೀರಿತು? ಆಕೆ “ಹೊರಟುಹೋಗಿ ಊಟಮಾಡಿದಳು. ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ” ಎನ್ನುತ್ತದೆ ವೃತ್ತಾಂತ. (1 ಸಮುವೇಲ 1:18) ಹನ್ನಳ ಮನಸ್ಸು ಹೂವಿನಷ್ಟು ಹಗುರವಾಯಿತು. ಒಂದರ್ಥದಲ್ಲಿ ತನ್ನ ಹೆಗಲ ಮೇಲಿದ್ದ ಭಾವನಾತ್ಮಕ ಹೊರೆಯನ್ನು ತನ್ನ ಸ್ವರ್ಗೀಯ ತಂದೆಯ ಬಲಿಷ್ಠ ಹೆಗಲ ಮೇಲೆ ಹಾಕಿಬಿಟ್ಟಿದ್ದಳು. (ಕೀರ್ತನೆ 55:22) ಯಾವುದೇ ಸಮಸ್ಯೆ ಆತನಿಗೆ ಭಾರವೆನಿಸುತ್ತದೋ? ಇಲ್ಲ! ಅಂದು ಇಂದು ಮುಂದೆಂದಿಗೂ ಆತನಿಗೆ ಹಾಗನಿಸದು.

ದುಃಖದ ಭಾರದಡಿಯಲ್ಲಿ ಹೂತುಹೋಗಲಿದ್ದೇವೆ ಎಂದನಿಸುವಾಗ ನಾವು ಹನ್ನಳಂತೆ ಮನಸ್ಸುಬಿಚ್ಚಿ ದೇವರೊಂದಿಗೆ ಮಾತಾಡಬೇಕು. ಆತನು “ಪ್ರಾರ್ಥನೆಯನ್ನು ಕೇಳುವವ” ಎನ್ನುತ್ತದೆ ಬೈಬಲ್‌. (ಕೀರ್ತನೆ 65:2) ನಾವು ನಂಬಿಕೆಯಿಂದ ಪ್ರಾರ್ಥಿಸಿದರೆ, ನಮ್ಮ ಮನಸ್ಸಲ್ಲಿರುವ ದುಃಖ ಮಾಯವಾಗಿ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ” ತುಂಬುವುದನ್ನು ನೋಡುವೆವು.—ಫಿಲಿಪ್ಪಿ 4:6, 7.

“ನಮ್ಮ ದೇವರೇ ಅಸಮಾನವಾದ ಆಶ್ರಯದುರ್ಗವು”

ಮರುದಿನ ಬೆಳಗ್ಗೆ ಹನ್ನ ಎಲ್ಕಾನನೊಂದಿಗೆ ದೇವಗುಡಾರಕ್ಕೆ ಪುನಃ ಹೋದಳು. ತಾನು ದೇವರಿಗೆ ಮಾಡಿದ್ದ ಬೇಡಿಕೆ ಹಾಗೂ ಹರಕೆಯ ಬಗ್ಗೆ ಆಕೆ ಅವನಿಗೆ ಹೇಳಿರಬೇಕು. ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಹೆಂಡತಿ ತನ್ನ ಗಂಡನ ಅನುಮತಿಯಿಲ್ಲದೆ ಹರಕೆ ಮಾಡಿದರೆ ಅದನ್ನು ರದ್ದುಗೊಳಿಸುವ ಹಕ್ಕು ಗಂಡನಿಗಿತ್ತು. (ಅರಣ್ಯಕಾಂಡ 30:10-15) ಆದರೆ ಆ ನಂಬಿಗಸ್ತ ಪುರುಷನು ಅದನ್ನು ರದ್ದು ಮಾಡಲಿಲ್ಲ. ಬದಲಿಗೆ, ಅವನೂ ಹನ್ನಳೂ ಸೇರಿ ದೇವಗುಡಾರದಲ್ಲಿ ಯೆಹೋವನನ್ನು ಆರಾಧಿಸಿ ಆಮೇಲೆ ತಮ್ಮ ಊರಿಗೆ ಹೊರಟರು.

ಇನ್ನು ಮುಂದೆ ಹನ್ನಳ ಮನನೋಯಿಸಲು ಅಸಾಧ್ಯ ಎಂದು ಪೆನಿನ್ನಳಿಗೆ ಗೊತ್ತಾದದ್ದು ಯಾವಾಗ? ವೃತ್ತಾಂತ ಇದನ್ನು ತಿಳಿಸುವುದಿಲ್ಲವಾದರೂ, ಅಂದಿನಿಂದ ಹನ್ನಳು ಖುಷಿಯಿಂದಿದ್ದಳು ಎಂಬುದನ್ನು “ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ” ಎಂಬ ಮಾತುಗಳು ಸೂಚಿಸುತ್ತವೆ. ತಾನು ಹೇಗೆ ವರ್ತಿಸಿದರೂ ಅದು ಹನ್ನಳ ಮೇಲೆ ಪರಿಣಾಮವನ್ನೇ ಬೀರುವುದಿಲ್ಲವೆಂದು ಪೆನಿನ್ನಳಿಗೆ ಸ್ವಲ್ಪದರಲ್ಲೇ ಗೊತ್ತಾಯಿತೆಂದು ತೋರುತ್ತದೆ. ಇದಾದ ಮೇಲೆ ಬೈಬಲ್‌ನಲ್ಲಿ ಇನ್ನೆಲ್ಲೂ ಆಕೆಯ ಹೆಸರು ತೋರಿಬರುವುದಿಲ್ಲ.

ತಿಂಗಳುಗಳು ಉರುಳಿದಂತೆ ಹನ್ನಳ ನೆಮ್ಮದಿ ಅರಳಿತು. ಆಕೆ ಗರ್ಭವತಿಯಾದಳು! ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಈ ಆನಂದದ ಮಧ್ಯೆಯೂ ತನಗೆ ಈ ಆಶೀರ್ವಾದ ಸಿಕ್ಕಿದ್ದು ಎಲ್ಲಿಂದ ಎಂಬದನ್ನು ಆಕೆ ಒಂದು ಕ್ಷಣಕ್ಕೂ ಮರೆಯಲಿಲ್ಲ. ಹುಟ್ಟಿದ ಮಗುವಿಗೆ ಸಮುವೇಲ ಎಂದು ಹೆಸರಿಟ್ಟಳು. ಹೀಬ್ರು ಭಾಷೆಯಲ್ಲಿ ಸಮುವೇಲ ಅಂದರೆ “ದೇವರ ಹೆಸರು” ಎಂದರ್ಥ. ಇದು, ಹನ್ನಳು ಮಾಡಿದಂತೆ ದೇವರ ಹೆಸರಿನಲ್ಲಿ ಕೋರುವುದಕ್ಕೆ ಸೂಚಿಸುತ್ತಿದ್ದಿರಬೇಕು. ಆ ವರ್ಷ ಆಕೆ ಎಲ್ಕಾನ ಮತ್ತವನ ಕುಟುಂಬದವರೊಂದಿಗೆ ಶಿಲೋವಿಗೆ ಹೋಗಲಿಲ್ಲ. ಮಗುವಿಗೆ ಮೊಲೆಬಿಡಿಸುವ ತನಕ ಅಂದರೆ ಅದಕ್ಕೆ 3 ವರ್ಷ ತುಂಬುವವರೆಗೂ ಆಕೆ ಮನೆಯಲ್ಲೇ ಇದ್ದಳು. ಆಮೇಲೆ ತನ್ನ ಪುಟ್ಟ ಕಂದನಿಂದ ಅಗಲುವ ದಿನಕ್ಕಾಗಿ ತನ್ನ ಮನಸ್ಸನ್ನು ಗಟ್ಟಿಮಾಡಿಕೊಂಡಳು.

ಈ ಅಗಲುವಿಕೆ ಖಂಡಿತವಾಗಿಯೂ ಸುಲಭವಾದದ್ದಾಗಿರಲಿಕ್ಕಿಲ್ಲ. ಶಿಲೋವಿನಲ್ಲಿ ಸಮುವೇಲನ ಒಳ್ಳೇ ಆರೈಕೆಮಾಡಲಾಗುವುದು, ಬಹುಶಃ ದೇವಗುಡಾರದಲ್ಲಿ ಸೇವೆಸಲ್ಲಿಸುತ್ತಿದ್ದ ಸ್ತ್ರೀಯರು ಅವನನ್ನು ನೋಡಿಕೊಳ್ಳುವರು ಎಂದು ಹನ್ನಳಿಗೆ ಗೊತ್ತಿತ್ತೇನೋ ನಿಜ. ಆದರೆ ಅವನಿನ್ನೂ ತುಂಬ ಚಿಕ್ಕವನಲ್ಲವೇ? ತನ್ನ ಕೂಸಿನೊಂದಿಗೇ ಇರಲು ಹೆತ್ತ ಕರುಳು ಬಯಸದೇ? ಹಾಗಿದ್ದರೂ ಹನ್ನ ಎಲ್ಕಾನರು ತಮ್ಮ ಮಗನನ್ನು ದೇವಗುಡಾರಕ್ಕೆ ತಂದರು. ಅರೆಮನಸ್ಸಿನಿಂದಲ್ಲ, ಕೃತಜ್ಞತಾಭಾವದಿಂದ. ಅವರು ದೇವರ ಆಲಯದಲ್ಲಿ ಯಜ್ಞಗಳನ್ನು ಅರ್ಪಿಸಿದರು. ನಂತರ, ಹನ್ನಳು ಮೂರು ವರ್ಷಗಳ ಹಿಂದೆ ಮಾಡಿದ ಹರಕೆಯನ್ನು ಏಲಿಗೆ ಜ್ಞಾಪಿಸಿ ಸಮುವೇಲನನ್ನು ಅವನಿಗೆ ಒಪ್ಪಿಸಿದರು.

ಬಳಿಕ ಹನ್ನ ದೇವರಿಗೆ ಒಂದು ಪ್ರಾರ್ಥನೆಮಾಡಿದಳು. ಆ ಪ್ರಾರ್ಥನೆಯನ್ನು ದೇವರು ತನ್ನ ವಾಕ್ಯದಲ್ಲಿ ಸೇರಿಸುವುದಕ್ಕೆ ಯೋಗ್ಯವೆಂದೆಣಿಸಿದನು. 1 ಸಮುವೇಲ 2:1-10ರಲ್ಲಿ ದಾಖಲಾಗಿರುವ ಆ ಪ್ರಾರ್ಥನೆಯನ್ನು ನೀವು ಓದುವಾಗ ಪ್ರತಿಯೊಂದು ಸಾಲಿನಲ್ಲೂ ಆಕೆಯ ಗಾಢ ನಂಬಿಕೆಯನ್ನು ನೋಡಬಲ್ಲಿರಿ. ಯೆಹೋವನು ತನ್ನ ಸರಿಸಾಟಿಯಿಲ್ಲದ ಶಕ್ತಿಯನ್ನು ಅದ್ಭುತವಾಗಿ ಅಂದರೆ ಗರ್ವಿಷ್ಟರ ಸೊಕ್ಕನ್ನು ಮುರಿಯಲು, ದಬ್ಬಾಳಿಕೆಗೊಳಗಾದವರನ್ನು ಆಶೀರ್ವದಿಸಲು, ಜೀವ ತೆಗೆಯಲು ಇಲ್ಲವೆ ಉಳಿಸಲು ಬಳಸುತ್ತಾನೆ ಎಂದು ಕೊಂಡಾಡಿದಳು. ತನ್ನ ತಂದೆಯಾದ ದೇವರನ್ನು ಆತನ ಅಪೂರ್ವ ಪಾವಿತ್ರ್ಯಕ್ಕಾಗಿ, ನ್ಯಾಯಕ್ಕಾಗಿ ಮತ್ತು ನಂಬಿಗಸ್ತಿಕೆಗಾಗಿಯೂ ಸ್ತುತಿಸಿದಳು. “ನಮ್ಮ ದೇವರೇ ಅಸಮಾನವಾದ ಆಶ್ರಯದುರ್ಗವು” ಎಂದು ಹೇಳಲು ಹನ್ನಳಿಗೆ ಸಕಾರಣವಿತ್ತು. ಯೆಹೋವನು ಭರವಸಾರ್ಹನೂ ಬದಲಾಗದವನೂ ಆಶ್ರಯಕೊಡುವಾತನೂ ಆಗಿರುವುದರಿಂದ ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾದವರು ಸಹಾಯಕ್ಕಾಗಿ ಆತನ ಮೊರೆಹೋಗಬಲ್ಲರು.

ಯೆಹೋವನಲ್ಲಿ ಇಷ್ಟೊಂದು ನಂಬಿಕೆಯಿದ್ದ ತಾಯಿ ಇದದ್ದು ಖಂಡಿತವಾಗಿಯೂ ಪುಟ್ಟ ಸಮುವೇಲನಿಗೆ ಒಂದು ಆಶೀರ್ವಾದವಾಗಿತ್ತು. ಅವನು ಬೆಳೆಯುತ್ತಾ ಹೋದಂತೆ ಅವನಿಗೆ ತಾಯಿಯ ನೆನಪು ಬಂದಿರಲೇಬೇಕು. ಆದರೆ ಆಕೆ ತನ್ನನ್ನು ಮರೆತಿಲ್ಲವೆಂಬ ಖಾತ್ರಿ ಅವನಿಗಿತ್ತು. ಪ್ರತಿ ವರ್ಷ ಹನ್ನ ಶಿಲೋವಿಗೆ ಬರುತ್ತಿದ್ದಾಗ, ದೇವಗುಡಾರದಲ್ಲಿ ಸೇವೆಸಲ್ಲಿಸುವಾಗ ತೊಟ್ಟುಕೊಳ್ಳಲು ಅವನಿಗಾಗಿ ತೋಳಿಲ್ಲದ ಒಂದು ಪುಟ್ಟ ಅಂಗಿಯನ್ನು ತರುತ್ತಿದ್ದಳು. ತಾನು ಕೈಯಾರೆ ಹೊಲಿದಿದ್ದ ಆ ಅಂಗಿಯ ಒಂದೊಂದು ಹೊಲಿಗೆಯಲ್ಲೂ ಆಕೆಯ ಪ್ರೀತಿಮಮಕಾರ ತುಂಬಿತ್ತು. (1 ಸಮುವೇಲ 2:19) ಆಕೆ ಆ ಹೊಸ ಅಂಗಿಯನ್ನು ತನ್ನ ಮಗನಿಗೆ ತೊಡಿಸುತ್ತಿರುವುದನ್ನು, ಅದನ್ನು ಕೈಯಿಂದ ಸವರಿ ಸರಿಮಾಡುವುದನ್ನು, ಅವನೊಂದಿಗೆ ದಯೆಯಿಂದ ಪ್ರೋತ್ಸಾಹದ ಮಾತುಗಳನ್ನಾಡುತ್ತಾ ಪ್ರೀತಿವಾತ್ಸಲ್ಯದಿಂದ ಕಣ್ತುಂಬ ನೋಡುತ್ತಿರುವುದನ್ನು ನಾವು ಊಹಿಸಿಕೊಳ್ಳಬಹುದು. ಇಂಥ ತಾಯಿಯನ್ನು ಪಡೆಯುವ ಆಶೀರ್ವಾದಹೊಂದಿದ್ದ ಸಮುವೇಲನು ದೊಡ್ಡವನಾಗಿ ತನ್ನ ಹೆತ್ತವರಿಗೂ ಇಡೀ ಇಸ್ರಾಯೇಲ್‌ ಜನಾಂಗಕ್ಕೂ ಆಶೀರ್ವಾದವಾಗಿ ಪರಿಣಮಿಸಿದನು.

ಯೆಹೋವನು ಹನ್ನಳನ್ನು ಮರೆಯಲಿಲ್ಲ. ಇನ್ನಷ್ಟು ಮಕ್ಕಳನ್ನು ಕೊಟ್ಟು ಆತನು ಆಕೆಯನ್ನು ಆಶೀರ್ವದಿಸಿದನು. ಆಕೆ ಎಲ್ಕಾನನಿಗೆ ಇನ್ನೂ ಐದು ಮಂದಿ ಮಕ್ಕಳನ್ನು ಹೆತ್ತುಕೊಟ್ಟಳು. (1 ಸಮುವೇಲ 2:21) ಆದರೆ ಹನ್ನಳಿಗಿದ್ದ ಅತ್ಯಂತ ದೊಡ್ಡ ಆಶೀರ್ವಾದವು ಆಕೆಗೆ ತಂದೆಯಾದ ಯೆಹೋವನೊಂದಿಗಿದ್ದ ಬಂಧವೇ ಆಗಿತ್ತು. ಈ ಬಂಧ ವರ್ಷಗಳು ಸಂದಂತೆ ಹೆಚ್ಚೆಚ್ಚು ಬಲವಾಗುತ್ತಾ ಹೋಯಿತು. ನಿಮ್ಮ ವಿಷಯದಲ್ಲೂ ಹೀಗೆಯೇ ಆಗಲಿ. ಹನ್ನಳ ನಂಬಿಕೆಯನ್ನು ಅನುಕರಿಸುತ್ತಾ ಇರಿ. (w10-E 07/01)

[ಪಾದಟಿಪ್ಪಣಿಗಳು]

^ ಪ್ಯಾರ. 7 ದೇವರು ಸ್ವಲ್ಪ ಸಮಯದ ವರೆಗೆ ತನ್ನ ಜನರೊಳಗೆ ಬಹುಪತ್ನೀತ್ವ ಪದ್ಧತಿಯನ್ನು ಏಕೆ ಅನುಮತಿಸಿದನೆಂದು ತಿಳಿದುಕೊಳ್ಳಲು ಕಾವಲಿನಬುರುಜು 2003ರ ಆಗಸ್ಟ್‌ 1, ಪುಟ 28 ನೋಡಿ.

^ ಪ್ಯಾರ. 10 “ಯೆಹೋವನು ಆಕೆಗೆ ಮಕ್ಕಳನ್ನು ಕೊಡಲಿಲ್ಲ” ಎಂದು ಬೈಬಲ್‌ ಹೇಳಿದರೂ ಆಕೆಯ ವಿಷಯದಲ್ಲಿ ದೇವರು ಅಸಂತುಷ್ಟನಾಗಿದ್ದನೆಂಬದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆಕೆ ನಮ್ರಳೂ ನಂಬಿಗಸ್ತಳೂ ಆಗಿದ್ದಳು. (1 ಸಮುವೇಲ 1:5) ದೇವರು ಸ್ವಲ್ಪ ಸಮಯದ ವರೆಗೆ ಅನುಮತಿಸುವಂಥ ಸಂಗತಿಗಳನ್ನು ಸ್ವತಃ ಆತನೇ ನಡೆಸುತ್ತಾನೋ ಎಂಬಂತೆ ಬೈಬಲ್‌ ಕೆಲವೊಂದು ಘಟನೆಗಳನ್ನು ವರ್ಣಿಸುತ್ತದೆ.

^ ಪ್ಯಾರ. 13 ಯೇಸುವಿನ ದಿನದಲ್ಲಿ ಅರಿಮಥಾಯ ಎಂದು ಜ್ಞಾತವಾಗಿದ್ದ ಸ್ಥಳವೇ ಎಲ್ಕಾನನ ಊರಾದ ರಾಮಾ ಆಗಿದ್ದಿರಬಹುದು ಎಂಬ ಎಣಿಕೆಗನುಸಾರ ಈ ಅಂತರವನ್ನು ಅಳೆಯಲಾಗಿದೆ.

[ಪುಟ 27ರಲ್ಲಿರುವ ಚೌಕ]

ಗಮನಸೆಳೆಯುವ ಎರಡು ಪ್ರಾರ್ಥನೆಗಳು

ಒಂದನೇ ಸಮುವೇಲ 1:11 ಮತ್ತು 2:1-10ರಲ್ಲಿ ದಾಖಲಾಗಿರುವ ಹನ್ನಳ ಎರಡು ಪ್ರಾರ್ಥನೆಗಳಲ್ಲಿ ಹಲವಾರು ಗಮನಾರ್ಹ ಅಂಶಗಳಿವೆ. ಕೆಲವೊಂದನ್ನು ಪರಿಗಣಿಸಿ:

◼ ಹನ್ನಳು ಆ ಎರಡು ಪ್ರಾರ್ಥನೆಗಳ ಪೈಕಿ ಮೊದಲನೆಯದ್ದರಲ್ಲಿ ಯೆಹೋವನನ್ನು “ಸೇನಾಧೀಶ್ವರ” ಎಂದು ಸಂಬೋಧಿಸಿದಳು. ಬೈಬಲ್‌ ದಾಖಲೆಯಲ್ಲಿ, ಆ ಬಿರುದನ್ನು ಬಳಸಿರುವ ಪ್ರಥಮ ಉಲ್ಲೇಖ ಆಕೆಯದ್ದೇ. ಈ ಬಿರುದು ಬೈಬಲಿನಲ್ಲಿ ಮೂಲ ಭಾಷೆಗಳಲ್ಲಿ 285 ಸಲ ತೋರಿಬರುತ್ತದೆ. ಅದು ದೇವದೂತರ ದೊಡ್ಡ ಸೈನ್ಯದ ಮೇಲೆ ದೇವರಿಗಿರುವ ಅಧಿಕಾರಕ್ಕೆ ಸೂಚಿಸುತ್ತದೆ.

◼ ಎರಡನೇ ಪ್ರಾರ್ಥನೆಯನ್ನು ಆಕೆ, ತನ್ನ ಮಗ ಹುಟ್ಟಿದಾಗ ಅಲ್ಲ ಬದಲಾಗಿ ಅವನನ್ನು ಶಿಲೋವಿನಲ್ಲಿ ದೇವರ ಸೇವೆಗಾಗಿ ಅರ್ಪಿಸಿದಾಗ ಮಾಡಿದ್ದಳೆಂದು ಗಮನಿಸಿ. ಹಾಗಾದರೆ ಆಕೆ ತುಂಬ ಸಂತೋಷಪಟ್ಟದ್ದು ಪ್ರತಿಸ್ಪರ್ಧಿಯಾಗಿದ್ದ ಪೆನಿನ್ನಳ ಬಾಯಿಮುಚ್ಚಿಸಲು ಶಕ್ತಳಾದದ್ದಕ್ಕಾಗಿ ಅಲ್ಲ ಬದಲಾಗಿ ಯೆಹೋವನಿಂದ ಆಶೀರ್ವಾದ ಪಡೆದದ್ದಕ್ಕಾಗಿಯೇ.

◼ ಹನ್ನಳು “ನನ್ನ ಕೊಂಬು ಯೆಹೋವನಿಂದ ಎತ್ತಲ್ಪಟ್ಟಿದೆ” ಎಂದು ಹೇಳಿದಾಗ, ಕೊಂಬುಗಳನ್ನು ಬಲಿಷ್ಠ ರೀತಿಯಲ್ಲಿ ಬಳಸುವ ಪ್ರಾಣಿಯಾದ ಎತ್ತು ಆಕೆಯ ಮನಸ್ಸಿನಲ್ಲಿದ್ದಿರಬಹುದು. ಆ ಮಾತುಗಳ ಮೂಲಕ ಹನ್ನ ‘ಯೆಹೋವನೇ ನೀನು ನನ್ನನ್ನು ಬಲಪಡಿಸಿದೀ’ ಎಂದು ಕಾರ್ಯತಃ ಹೇಳುತ್ತಿದ್ದಳು.—1 ಸಮುವೇಲ 2:1.

◼ ದೇವರ “ಅಭಿಷಿಕ್ತನ” ಕುರಿತು ಹನ್ನಳು ಹೇಳಿದ ಮಾತುಗಳು ಪ್ರವಾದನಾತ್ಮಕ. ಅಭಿಷಿಕ್ತನು ಎಂಬುದರ ಸಮಾನಪದ “ಮೆಸ್ಸೀಯ.” ಭವಿಷ್ಯತ್ತಿನ ಅಭಿಷಿಕ್ತ ರಾಜನಿಗೆ ಸೂಚಿಸಲು ‘ಅಭಿಷಿಕ್ತನು’ ಎಂಬ ಪದವನ್ನು ಬೈಬಲ್‌ ದಾಖಲೆಯಲ್ಲಿ ಬಳಸಿದ ಪ್ರಥಮ ವ್ಯಕ್ತಿ ಹನ್ನಳೇ.—1 ಸಮುವೇಲ 2:10.

◼ ಸುಮಾರು 1,000 ವರ್ಷಗಳ ಬಳಿಕ ಯೇಸುವಿನ ತಾಯಿ ಮರಿಯಳು ಯೆಹೋವನನ್ನು ಸ್ತುತಿಸುತ್ತಾ ಹೇಳಿದ ಮಾತುಗಳಲ್ಲಿ ಹನ್ನಳ ಭಾವನೆಗಳು ತೋರಿಬರುತ್ತವೆ.—ಲೂಕ 1:46-55.

[ಪುಟ 26ರಲ್ಲಿರುವ ಚಿತ್ರ]

ಹನ್ನಳು ತಾನು ಬಂಜೆಯೆಂದು ತುಂಬ ಕೊರಗುತ್ತಿದ್ದಳು; ಆಕೆಯನ್ನು ಇನ್ನಷ್ಟು ನೋಯಿಸಲು ಪೆನಿನ್ನ ಶತಪ್ರಯತ್ನ ಮಾಡುತ್ತಿದ್ದಳು

[ಪುಟ 26, 27ರಲ್ಲಿರುವ ಚಿತ್ರ]

ಹನ್ನಳನ್ನು ಏಲಿ ಅಪಾರ್ಥಮಾಡಿಕೊಂಡರೂ ಆಕೆ ಸಿಟ್ಟುಗೊಳ್ಳಲಿಲ್ಲ

[ಪುಟ 27ರಲ್ಲಿರುವ ಚಿತ್ರ]

ಹೃದಯದಾಳದಿಂದ ಪ್ರಾರ್ಥಿಸುವ ವಿಷಯದಲ್ಲಿ ಹನ್ನಳ ಮಾದರಿಯನ್ನು ಅನುಕರಿಸಬಲ್ಲಿರಾ?