ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರ್ವರಿಗೂ ಸ್ವಾಗತ!

ಸರ್ವರಿಗೂ ಸ್ವಾಗತ!

ಸರ್ವರಿಗೂ ಸ್ವಾಗತ!

ಯಾವುದಕ್ಕೆ? ಸಾಮಾನ್ಯವಾಗಿ ಬೆತೆಲ್‌ ಎಂದು ಕರೆಯಲಾಗುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸುಗಳಲ್ಲಿ ಒಂದನ್ನು ಸಂದರ್ಶಿಸುವುದಕ್ಕೆ. ಬೇರೆ ಬೇರೆ ದೇಶಗಳಲ್ಲಿ ಇಂಥ 118 ಬೆತೆಲ್‌ಗಳಿವೆ. ಬೆತೆಲನ್ನು ಸಂದರ್ಶಿಸಿದವರು ಹೆಚ್ಚಾಗಿ ಅಲ್ಲಿ ನಡೆಯುವ ಕೆಲಸವನ್ನು ನೋಡಿ ಮನಸಾರೆ ಪ್ರಶಂಸಿಸುತ್ತಾರೆ.

ಒಬ್ಬ ಯುವ ಬೈಬಲ್‌ ವಿದ್ಯಾರ್ಥಿಯು ಮೆಕ್ಸಿಕೊದ ಬ್ರಾಂಚ್‌ ಆಫೀಸಿನಲ್ಲಿ ಅನೇಕ ಕೆಲಸಗಾರರು ಶ್ರಮಪಟ್ಟು ಸಂತೋಷದಿಂದ ಕೆಲಸಮಾಡುವುದನ್ನು ನೋಡಿದನು. ಅದರಿಂದ ಅವನು ಎಷ್ಟೊಂದು ಪ್ರಭಾವಿತನಾದನೆಂದರೆ “ನಾನು ಇಲ್ಲಿ ಕೆಲಸಮಾಡಬೇಕಾದರೆ ಏನು ಮಾಡಬೇಕು?” ಎಂದು ಕೇಳಿದನು. “ಮೊದಲು ನೀನು ದೀಕ್ಷಾಸ್ನಾನ ಪಡೆದುಕೊಳ್ಳಬೇಕು. ಅದರ ನಂತರ ಪಯನೀಯರನಾಗಿ ಅಂದರೆ ಪೂರ್ಣ ಸಮಯದ ರಾಜ್ಯ ಘೋಷಕನಾಗಿ ಸೇವೆ ಮಾಡುವುದು ಒಳ್ಳೇದು” ಎಂದು ಅವನಿಗೆ ಹೇಳಲಾಯಿತು. ಅವನಿಗೆ ಏನನ್ನು ಮಾಡುವಂತೆ ಹೇಳಲಾಯಿತೋ ಅದರಂತೆಯೇ ಆ ಯುವಕನು ಮಾಡಿದನು ಮತ್ತು ಎರಡು ವರ್ಷಗಳ ನಂತರ ಅವನನ್ನು ಮೆಕ್ಸಿಕೊದ ಬೆತೆಲಿಗೆ ಆಮಂತ್ರಿಸಲಾಯಿತು. ಕಳೆದ 20 ವರ್ಷ ಅವನು ಬೆತೆಲಿನಲ್ಲಿ ಸೇವೆಸಲ್ಲಿಸಿದ್ದಾನೆ.

ಬೆತೆಲ್‌—ಅದು ಏನು?

ಹೀಬ್ರು ಭಾಷೆಯಲ್ಲಿ “ಬೆತೆಲ್‌” ಅಥವಾ ಬೇತೇಲ್‌ ಅಂದರೆ “ದೇವರ ಮನೆ” ಎಂದು ಅರ್ಥ. (ಆದಿ. 28:19, ಪಾದಟಿಪ್ಪಣಿ.) ಬೈಬಲ್‌ ಹಾಗೂ ಬೈಬಲಾಧಾರಿತ ಸಾಹಿತ್ಯಗಳನ್ನು ಮುದ್ರಿಸಿ ವಿತರಿಸಲು ಮತ್ತು ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 1,00,000ಕ್ಕಿಂತ ಹೆಚ್ಚು ಸಭೆಗಳಿಗೆ ಆಧ್ಯಾತ್ಮಿಕ ನೆರವನ್ನು ನೀಡಲು ಈ ಹಲವಾರು ಬ್ರಾಂಚ್‌ ಆಫೀಸುಗಳಲ್ಲಿರುವ ಸೌಲಭ್ಯಗಳನ್ನು ಉಪಯೋಗಿಸಲಾಗುತ್ತದೆ. ಸರಿಸುಮಾರು 20,000ದಷ್ಟಿರುವ ಬೆತೆಲ್‌ ಕೆಲಸಗಾರರು ಬೇರೆ ಬೇರೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದ ಸ್ತ್ರೀಪುರುಷರಾಗಿದ್ದಾರೆ. ಅವರು ನಿಸ್ವಾರ್ಥಭಾವದಿಂದ ಪೂರ್ಣಸಮಯ ಯೆಹೋವನ ಹಾಗೂ ತಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರ ಸೇವೆ ಮಾಡುತ್ತಾರೆ. ಅನೇಕ ವರ್ಷಗಳಿಂದ ಈ ಕ್ರೈಸ್ತ ಕೆಲಸದಲ್ಲಿ ಭಾಗವಹಿಸಿರುವವರು ಸಹ ಚುರುಕಿನ ಇತರ ಯೌವನಸ್ಥರೊಂದಿಗೆ ಸೇರಿ ಕೆಲಸಮಾಡುತ್ತಾರೆ. ಬೆತೆಲ್‌ ಕುಟುಂಬಗಳ ಸದಸ್ಯರು ಸಾಯಂಕಾಲಗಳಲ್ಲಿ ಹಾಗೂ ವಾರಾಂತ್ಯಗಳಲ್ಲಿ ಕೂಟಗಳಿಗೆ ಹಾಜರಾಗುವ ಹಾಗೂ ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವ ಮೂಲಕ ಸಮೀಪದ ಯೆಹೋವನ ಸಾಕ್ಷಿಗಳ ಸಭೆಗಳೊಂದಿಗೆ ಸಹವಾಸದಲ್ಲಿ ಆನಂದಿಸುತ್ತಾರೆ. ಮಾತ್ರವಲ್ಲ ತಮ್ಮ ಬಿಡುವಿನ ಸಮಯವನ್ನು ಅವರು ಬೈಬಲ್‌ ಅಧ್ಯಯನ, ವಿನೋದ ವಿಹಾರ ಹಾಗೂ ವೈಯಕ್ತಿಕ ವಿಷಯಗಳಿಗಾಗಿ ವಿನಿಯೋಗಿಸುತ್ತಾರೆ.

ಬೆತೆಲ್‌ ಕುಟುಂಬದ ಸದಸ್ಯರಿಗೆ ಅವರ ಖರ್ಚುವೆಚ್ಚಗಳಿಗಾಗಿ ತಿಂಗಳಿಗೆ ಚಿಕ್ಕ ಮೊತ್ತದ ಹಣವನ್ನು ಕೊಡಲಾಗುತ್ತದೆ. ಅವರು ರುಚಿಕರ ಪೌಷ್ಟಿಕ ಆಹಾರವನ್ನು ಆನಂದಿಸುತ್ತಾರೆ ಹಾಗೂ ಅವರು ವಾಸಿಸುವ ಸ್ಥಳವು ಸ್ವಚ್ಛವೂ ಆರಾಮಕರವೂ ಆಗಿರುತ್ತದೆ. ಬೆತೆಲ್‌ ಗೃಹಗಳು ಸುಖಭೋಗದ ಸ್ಥಳಗಳಲ್ಲ, ಬದಲಿಗೆ ಅವು ಅನುಕೂಲಕರವಾಗಿವೆ ಅಷ್ಟೆ. ಸಂದರ್ಶಕರು ಅಲ್ಲಿನ ಸುವ್ಯವಸ್ಥಿತ ಕಟ್ಟಡಗಳು, ವಠಾರ ಹಾಗೂ ಕ್ರಮಬದ್ಧ ವ್ಯವಸ್ಥಾಪನೆಯನ್ನು ನೋಡಿ ಪ್ರಭಾವಿತರಾಗುತ್ತಾರೆ. ಮಾತ್ರವಲ್ಲ ಬೆತೆಲಿನಲ್ಲಿ ತೋರಿಸಲ್ಪಡುವ ದಯೆ ಮತ್ತು ಸಹಕಾರ ಸಹ ಅವರ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಅಲ್ಲಿ ಪ್ರತಿಯೊಬ್ಬರು ಶ್ರದ್ಧೆಯಿಂದ ಕೆಲಸಮಾಡುತ್ತಾರೆ. ಆದರೆ ಒಬ್ಬರೊಂದಿಗೊಬ್ಬರು ಸ್ನೇಹಪರರಾಗಿರದಷ್ಟು ಕಾರ್ಯಮಗ್ನರಾಗಿರುವುದಿಲ್ಲ. ಬೆತೆಲಿನಲ್ಲಿ ಸಾಮಾಜಿಕ ಬೇಧಗಳಿಲ್ಲ ಅಥವಾ ತನಗಿರುವ ನೇಮಕದಿಂದಾಗಿ ತಾನು ಶ್ರೇಷ್ಠನು ಎಂಬ ಭಾವನೆಯು ಯಾರಲ್ಲೂ ಇಲ್ಲ. ಅಲ್ಲಿ ಶುಚಿಮಾಡುವ ಕೆಲಸವೇ ಇರಲಿ, ತೋಟಗಾರಿಕೆಯಿರಲಿ, ಅಡುಗೆಯಿರಲಿ, ಮುದ್ರಣದ ಅಥವಾ ಆಫೀಸಿನ ಕೆಲಸವೇ ಇರಲಿ, ಪ್ರತಿಯೊಂದು ನೇಮಕವೂ ಪ್ರಾಮುಖ್ಯವಾಗಿದೆ. ಬೆತಲಿಗರು ಅಂದರೆ ಬೆತೆಲ್‌ ಸೇವೆಯನ್ನು ಮಾಡುವವರು ಯೆಹೋವನ ಸಾಕ್ಷಿಗಳ ಶುಶ್ರೂಷೆಯನ್ನು ಬೆಂಬಲಿಸಲು ಒಂದು ತಂಡದೋಪಾದಿ ಒಟ್ಟಿಗೆ ಕೆಲಸಮಾಡುತ್ತಾರೆ.—ಕೊಲೊ. 3:23.

ಕೆಲವು ಬೆತಲಿಗರನ್ನು ಸಂದರ್ಶಿಸೋಣ

ಈ ಅಂತಾರಾಷ್ಟ್ರೀಯ ಕುಟುಂಬದ ಭಾಗವಾಗಿರುವವರ ಹೆಚ್ಚು ಪರಿಚಯವನ್ನು ಮಾಡಿಕೊಳ್ಳೋಣ. ಬೆತೆಲಿನಲ್ಲಿ ಸೇವೆ ಮಾಡುವಂತೆ ಯಾವುದು ಅವರನ್ನು ಪ್ರಚೋದಿಸಿತು? ಮಾರಿಯೋ ಎಂಬವನ ಕುರಿತು ನೋಡೋಣ. ಮಾರಿಯೋ ಯೆಹೋವನ ಸಾಕ್ಷಿಯಾದ ಸಮಯದಲ್ಲಿ ಅವನಿಗೆ ಜರ್ಮನಿಯ ಪ್ರಸಿದ್ಧ ಮೋಟಾರು ಕಂಪೆನಿಯಲ್ಲಿ ಕೈತುಂಬ ಸಂಬಳವಿರುವ ಕೆಲಸವಿತ್ತು, ಮಾತ್ರವಲ್ಲ ಇನ್ನೂ ದೊಡ್ಡ ಹುದ್ದೆಯನ್ನು ಪಡೆಯುವ ಅವಕಾಶವಿತ್ತು. ದೀಕ್ಷಾಸ್ನಾನವಾಗಿ ಸ್ವಲ್ಪವೇ ಸಮಯದ ನಂತರ ಅವನು ತನ್ನ ದೇಶದಲ್ಲಿನ ಬೆತೆಲಿನಲ್ಲಿ ಒಂದು ವಾರ ಸ್ವಯಂಸೇವೆಯನ್ನು ಮಾಡಲು ಬಂದನು. ಅವನನ್ನು ಪ್ರಿಂಟರಿ ಕೆಲಸದಲ್ಲಿ ಸಹಾಯಮಾಡಲು ನೇಮಿಸಲಾಯಿತು. ಆಗ ಮಾರಿಯೋ ತನ್ನ ಐಹಿಕ ಕೆಲಸದ ಜೊತೆಕಾರ್ಮಿಕರಿಗೂ ಬೆತೆಲಿನಲ್ಲಿ ಒಟ್ಟಿಗೆ ಕೆಲಸಮಾಡುವವರಿಗೂ ಇರುವ ಸ್ಪಷ್ಟ ವ್ಯತ್ಯಾಸವನ್ನು ನೋಡಿದನು. ಇದರಿಂದಾಗಿ ಪೂರ್ಣ ಸಮಯ ಬೆತೆಲ್‌ ಸೇವೆಗಾಗಿ ಅರ್ಜಿ ಹಾಕಿದನು. ಅವನ ಆ ನಿರ್ಧಾರ ಸಂಬಂಧಿಕರಲ್ಲಿ ಹಾಗೂ ಸಹೋದ್ಯೋಗಿಗಳಲ್ಲಿ ಅನೇಕರಿಗೆ ಅರ್ಥಮಾಡಿಕೊಳ್ಳಲು ಕಷ್ಟವಾಯಿತಾದರೂ ಮಾರಿಯೋ ಈಗ ಜರ್ಮನಿಯ ಬೆತೆಲಿನಲ್ಲಿ ಸಂತೋಷದಿಂದ ಸೇವೆಸಲ್ಲಿಸುತ್ತಿದ್ದಾನೆ.

ಅನೇಕರು ಯಾವುದೇ ವಿಶೇಷ ವಿದ್ಯಾಭ್ಯಾಸ ಅಥವಾ ಕೌಶಲಗಳಿಲ್ಲದೆಯೇ ಬೆತೆಲ್‌ ಸೇವೆಯನ್ನು ಪ್ರಾರಂಭಿಸುತ್ತಾರೆ. 15 ವರ್ಷ ಮೆಕ್ಸಿಕೊದ ಬೆತೆಲಿನಲ್ಲಿ ಸೇವೆ ಮಾಡಿರುವ ಆಬೆಲ್‌ ಇದಕ್ಕೊಂದು ನಿದರ್ಶನ. ಅವನು ಹೇಳುವುದು: “ನಿಜವಾಗಿಯೂ ಬೆತೆಲ್‌ ನನಗೆ ಶಾಲೆಯಂತಿತ್ತು. ನಾನು ಇಲ್ಲಿ ಅತ್ಯಾಧುನಿಕ ಮುದ್ರಣ ಯಂತ್ರಗಳಲ್ಲಿ ಕೆಲಸಮಾಡಲು ಕಲಿತೆ. ಈ ಜ್ಞಾನದಿಂದಾಗಿ ನಾನು ಹೊರಗೆ ಹೋಗಿ ತುಂಬ ಹಣವನ್ನು ಗಳಿಸಬಹುದಿತ್ತು. ಆದರೆ ಇಲ್ಲಿ ಸಿಗುವ ನೆಮ್ಮದಿ, ಸಂತೃಪ್ತಿಕರ ಜೀವನ ನನಗೆ ಅಲ್ಲಿ ಸಿಗಲಾರದು. ಇತರ ಅನೇಕ ಕಂಪನಿಗಳಲ್ಲಿರುವ ಸ್ಪರ್ಧಾತ್ಮಕತೆ, ಚಿಂತೆಗಳು ಇಲ್ಲಿ ಇಲ್ಲ. ಆಧ್ಯಾತ್ಮಿಕವಾಗಿಯೂ ಬೌದ್ಧಿಕವಾಗಿಯೂ ಪ್ರಗತಿಹೊಂದಲು ಸಹಾಯಮಾಡಿದ, ಸಿಗಸಾಧ್ಯವಿರುವುದರಲ್ಲೇ ಅತ್ಯುತ್ತಮ ಶಿಕ್ಷಣವನ್ನು ನಾನು ಇಲ್ಲಿ ಪಡೆದುಕೊಂಡಿದ್ದೇನೆ. ಇಂಥ ಆಧ್ಯಾತ್ಮಿಕ ಪ್ರಯೋಜನಗಳು ಅತ್ಯುನ್ನತ ವಿಶ್ವವಿದ್ಯಾನಿಲಯದಲ್ಲಿ ಕಲಿತರೂ ನನಗೆ ಲಭಿಸುತ್ತಿರಲಿಲ್ಲ.”

ಒಂದು ಭೇಟಿ ಭಕ್ತಿವರ್ಧಕವಾಗಿರಬಲ್ಲದು

ಬೆತೆಲನ್ನು ಸಂದರ್ಶಿಸುವುದೇ ಒಬ್ಬ ವ್ಯಕ್ತಿಯ ಆಧ್ಯಾತ್ಮಿಕತೆಯ ಮೇಲೆ ಒಳ್ಳೇ ಪರಿಣಾಮ ಬೀರಬಲ್ಲದು. ಮೆಕ್ಸಿಕೊದ ಓಮಾರ್‌ ಎಂಬವನಿಗೆ ಹಾಗೆಯೇ ಆಯಿತು. ಅವನ ತಾಯಿ ಅವನಿಗೆ ಬೈಬಲ್‌ ಸತ್ಯವನ್ನು ಕಲಿಸಿದ್ದಳು. ಆದರೆ 17 ವರ್ಷದವನಿದ್ದಾಗ ಓಮಾರ್‌ ಕೂಟಗಳಿಗೆ ಹಾಜರಾಗುವುದನ್ನು ಹಾಗೂ ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದನು. ಕ್ರಮೇಣ ಅವನು ದುರಭ್ಯಾಸಗಳನ್ನು ಬೆಳೆಸಿಕೊಂಡು ಪ್ರಾಪಂಚಿಕ ಜೀವನವನ್ನು ನಡೆಸಿದನು. ಒಮ್ಮೆ ಅವನು ಕಂಪನಿಯ ಕೆಲಸದ ಮೇಲೆ ಬೆತೆಲಿಗೆ ಭೇಟಿನೀಡಿದನು. ಓಮಾರ್‌ ಹೇಳುವುದು: “ಕೆಲಸದ ನಂತರ ನಮಗೆ ಬೆತೆಲ್‌ ಸೌಕರ್ಯಗಳನ್ನು ತೋರಿಸಲಾಯಿತು. ನಾನಲ್ಲಿ ನೋಡಿದ ವಿಷಯಗಳು ಹಾಗೂ ನನ್ನನ್ನು ದಯೆಯಿಂದ ಉಪಚರಿಸಿದ ರೀತಿಯು, ನಾನು ಯೆಹೋವನಿಂದ ದೂರಸರಿದು ನಡೆಸುತ್ತಿರುವ ಜೀವನದ ಕುರಿತು ಆಲೋಚಿಸುವಂತೆ ಮಾಡಿತು. ಕೂಡಲೆ ನಾನು ಕೂಟಗಳಿಗೆ ಹಾಜರಾಗಲು ಮತ್ತು ಬೈಬಲನ್ನು ಅಧ್ಯಯನ ಮಾಡಲು ಪುನಃ ಆರಂಭಿಸಿದೆ. ಬೆತೆಲಿಗೆ ಭೇಟಿನೀಡಿದ ಆರು ತಿಂಗಳುಗಳಲ್ಲಿ ನಾನು ದೀಕ್ಷಾಸ್ನಾನ ಪಡೆದೆ. ಬೆತೆಲಿನ ಸಂದರ್ಶನವು ನನ್ನಲ್ಲಿ ಪ್ರಚೋದನೆಯನ್ನು ಉಂಟುಮಾಡಿದ್ದಕ್ಕಾಗಿ ನಾನು ಯೆಹೋವನಿಗೆ ಕೃತಜ್ಞತೆ ಸಲ್ಲಿಸುತ್ತೇನೆ.”

ಜಪಾನಿನ ಮಾಸಾಹಿಕೋ ಸಹ ಸಾಕ್ಷಿ ಕುಟುಂಬದಲ್ಲಿ ಬೆಳೆದವನು. ಆದರೆ ಅವನಿಗೆ ಕ್ರೈಸ್ತ ಜೀವನರೀತಿಯು ತುಂಬ ನಿರ್ಬಂಧಕವೆನಿಸತೊಡಗಿತು. ಅವನು ಶಾಲಾ ಚಟುವಟಿಕೆಯಲ್ಲಿ ತುಂಬ ಒಳಗೂಡಿದನು ಮತ್ತು ಕೂಟಗಳಿಗೆ ಹಾಜರಾಗುವುದನ್ನೂ ಸಾರುವ ಕೆಲಸದಲ್ಲಿ ಭಾಗವಹಿಸುವುದನ್ನೂ ಬಿಟ್ಟುಬಿಟ್ಟನು. ಮಾಸಾಹಿಕೋ ನೆನಪಿಸಿಕೊಳ್ಳುವುದು: “ಒಂದು ದಿನ ನನ್ನ ಕುಟುಂಬದವರು ಹಾಗೂ ಕೆಲವು ಕ್ರೈಸ್ತ ಸ್ನೇಹಿತರು ಬೆತೆಲಿಗೆ ಭೇಟಿನೀಡಲು ನಿರ್ಣಯಿಸಿದರು. ಕುಟುಂಬದವರ ಒತ್ತಾಯಕ್ಕೆ ನಾನು ಸಹ ಅವರೊಂದಿಗೆ ಹೋದೆ. ಆದರೆ ಬೆತೆಲನ್ನು ನೋಡುತ್ತಾ ಇರುವಾಗ ಹಿಂದೆಂದೂ ಆಗಿರದ ರೀತಿಯಲ್ಲಿ ನಾನು ಉಲ್ಲಾಸಗೊಂಡೆ. ಬೆತೆಲಿನಲ್ಲಿ ಇತರ ಕ್ರೈಸ್ತರೊಂದಿಗಿನ ಸಹವಾಸದಿಂದ ಸಿಕ್ಕಿದ ಸಂತೋಷವನ್ನು ನಾನೆಂದೂ ಸಾಕ್ಷಿಗಳಲ್ಲದ ನನ್ನ ಸ್ನೇಹಿತರಿಂದ ಪಡೆದುಕೊಂಡಿರಲಿಲ್ಲ. ಕ್ರೈಸ್ತ ಜೀವನಮಾರ್ಗದಲ್ಲಿ ನಡೆಯುವ ಬಯಕೆ ಆಗ ನನ್ನಲ್ಲಿ ಹೆಚ್ಚಾಯಿತು. ನಾನು ಬೈಬಲ್‌ ಅಧ್ಯಯನಕ್ಕಾಗಿ ಕೇಳಿಕೊಳ್ಳಲು ನಿರ್ಧರಿಸಿದೆ.” ಮಾಸಾಹಿಕೋ ಈಗ ತನ್ನ ಸಭೆಯಲ್ಲಿ ಪೂರ್ಣ ಸಮಯದ ಸೇವಕನಾಗಿ ಸೇವೆಸಲ್ಲಿಸುತ್ತಿದ್ದಾನೆ.

ಒಬ್ಬ ಸಾಕ್ಷಿಯು ಕೆಲಸಕ್ಕಾಗಿ ಫ್ರಾನ್ಸ್‌ನಿಂದ ಮಾಸ್ಕೋಗೆ ಬಂದಳು. ಅಲ್ಲಿ ಆಕೆ ಸಾಕ್ಷಿಗಳ ಸಂಪರ್ಕವನ್ನು ಕಳೆದುಕೊಂಡು ಆಧ್ಯಾತ್ಮಿಕವಾಗಿ ಬಲಹೀನಳಾದಳು. ನಂತರ ಅವಳು ತಪ್ಪುಕೃತ್ಯದಲ್ಲಿ ಒಳಗೂಡಿದಳು, ಹಾಗೂ ಕ್ರಮೇಣ ಸಾಕ್ಷಿಯಲ್ಲದ ಒಬ್ಬನೊಂದಿಗೆ ವಿವಾಹವಾದಳು. ಸ್ವಲ್ಪ ಸಮಯದ ಬಳಿಕ ಫ್ರಾನ್ಸ್‌ನಿಂದ ಒಬ್ಬ ಸಾಕ್ಷಿ ಸಹೋದರಿ ಅವಳನ್ನು ನೋಡಲು ಬಂದಳು ಹಾಗೂ ಇಬ್ಬರೂ ಬೆತೆಲ್‌ ಗೃಹವನ್ನು ನೋಡಲಿಕ್ಕಾಗಿ ರಷ್ಯಾದ ಸೆಂಟ್‌ ಪೀಟರ್ಸ್‌ಬರ್ಗ್‌ಗೆ ಪ್ರಯಾಣಿಸಿದರು. ಆಕೆ ಹೇಳುವುದು: “ಬೆತೆಲಿನಲ್ಲಿ ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಮತ್ತು ಇದು ನನ್ನ ಮನಸ್ಸನ್ನು ಸ್ಪರ್ಶಿಸಿತು. ಎಂಥ ಶಾಂತಿ ಅಲ್ಲಿತ್ತು! ಯೆಹೋವನ ಪವಿತ್ರಾತ್ಮ ಅಲ್ಲಿ ಕೆಲಸಮಾಡುತ್ತಿತ್ತೆಂದು ನಾನು ಕಂಡುಕೊಂಡೆ. ಯೆಹೋವನ ಸಂಘಟನೆಯಿಂದ ದೂರಸರಿಯುವ ತಪ್ಪನ್ನು ನಾನು ಏಕೆ ತಾನೆ ಮಾಡಿದೆನೋ? ಬೆತೆಲನ್ನು ನೋಡಿ ಬಂದ ಬಳಿಕ ನಾನು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದೆ ಮತ್ತು ಒಂದು ಹೊಸ ತೀರ್ಮಾನದೊಂದಿಗೆ ನನ್ನ ಮಕ್ಕಳಿಗೆ ಬೈಬಲನ್ನು ಕಲಿಸಲು ಪ್ರಾರಂಭಿಸಿದೆ.” ಆಧ್ಯಾತ್ಮಿಕವಾಗಿ ಬಲಹೀನಳಾಗಿದ್ದ ಈ ಸಹೋದರಿ ಬೇರೆ ಸಹಾಯವನ್ನು ಖಂಡಿತ ಪಡೆದಿರಬಹುದು, ಆದರೆ ಬೆತೆಲನ್ನು ಸಂದರ್ಶಿಸಿದ್ದು ಅವಳಿಗೆ ಹೆಚ್ಚು ಬಲವನ್ನು ನೀಡಿತು ಮತ್ತು ಆಕೆ ತದನಂತರ ಉತ್ತಮ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿದಳು.

ಯೆಹೋವನ ಸಾಕ್ಷಿಗಳ ಪರಿಚಯವಿಲ್ಲದ ಜನರ ಮೇಲೆ ಬೆತೆಲ್‌ ಸಂದರ್ಶನವು ಯಾವ ಪರಿಣಾಮ ಬೀರಬಹುದು? ರಾಜಕೀಯದಲ್ಲೇ ಮುಳುಗಿದ್ದ ಆಲ್ಬರ್ಟೂ 1988ರಲ್ಲಿ ಬ್ರಸಿಲ್‌ನ ಬೆತೆಲನ್ನು ಸಂದರ್ಶಿಸಿದರು. ಅಲ್ಲಿನ ಶುಚಿತ್ವ, ವ್ಯವಸ್ಥಿತ ಸ್ಥಿತಿ ಹಾಗೂ ವಿಶೇಷವಾಗಿ ಮುಚ್ಚುಮರೆಯಿಲ್ಲದೆ ಮಾಡಲಾಗುವ ಕೆಲಸ ಅವರನ್ನು ತುಂಬ ಪ್ರಭಾವಿಸಿತು. ಬೆತೆಲನ್ನು ಸಂದರ್ಶಿಸುವ ಸ್ವಲ್ಪವೇ ಮುಂಚೆ ಅವರು ತಮ್ಮ ಭಾವಮೈದುನನು ಪಾದ್ರಿಯಾಗಿ ಸೇವೆಮಾಡುತ್ತಿದ್ದ ಒಂದು ಸೆಮಿನೆರಿಯನ್ನು ಸಂದರ್ಶಿಸಿದ್ದರು. ಅಲ್ಲಿಗೂ ಇಲ್ಲಿಗೂ ಇರುವ ವ್ಯತ್ಯಾಸವನ್ನು ಆಲ್ಬರ್ಟೂ ಗ್ರಹಿಸಿದರು. ಸೆಮಿನೆರಿಯ ಕುರಿತು ಹೇಳುತ್ತಾ, “ಅಲ್ಲಿ ಎಲ್ಲವನ್ನೂ ಗೋಪ್ಯವಾಗಿ ಮಾಡುತ್ತಿದ್ದರು” ಎನ್ನುತ್ತಾರೆ ಆಲ್ಬರ್ಟೂ. ಬೆತೆಲನ್ನು ಸಂದರ್ಶಿಸಿದ ಸ್ವಲ್ಪವೇ ಸಮಯದಲ್ಲಿ ಅವರು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದರು, ರಾಜಕೀಯವನ್ನು ತ್ಯಜಿಸಿಬಿಟ್ಟರು ಮತ್ತು ಈಗ ಸಭೆಯಲ್ಲಿ ಒಬ್ಬ ಹಿರಿಯರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಬನ್ನಿ, ಬೆತೆಲನ್ನು ನೋಡಿ!

ಅನೇಕರು ತಮ್ಮ ದೇಶದಲ್ಲಿರುವ ಬ್ರಾಂಚ್‌ ಆಫೀಸನ್ನು ಸಂದರ್ಶಿಸಲು ಅಸಾಧಾರಣ ಪ್ರಯತ್ನಗಳನ್ನು ಮಾಡಿದ್ದಾರೆ. ಉದಾಹರಣೆಗೆ, ಬ್ರಸಿಲ್‌ನಲ್ಲಿರುವ ಪೌಲೂ ಮತ್ತು ಔಝೇನ್ಯಾ ತಮ್ಮ ದೇಶದಲ್ಲಿನ ಬೆತೆಲನ್ನು ಸಂದರ್ಶಿಸಬೇಕಾದರೆ ಎರಡು ದಿನ ಬಸ್‌ ಪ್ರಯಾಣ ಮಾಡಿ 3,000 ಕಿ.ಮೀ.ಗಳಷ್ಟು ದೂರ ಹೋಗಬೇಕಿತ್ತು. ಇದಕ್ಕಾಗಿ ಅವರು ನಾಲ್ಕು ವರ್ಷಗಳಿಂದ ಹಣವನ್ನು ಉಳಿತಾಯ ಮಾಡಿದ್ದರು. ಅವರು ಹೀಗೆ ಹೇಳುತ್ತಾರೆ: “ನಾವು ಮಾಡಿದ ಪ್ರಯತ್ನವೆಲ್ಲವು ಸಾರ್ಥಕವಾಗಿತ್ತು. ನಮಗೀಗ ಯೆಹೋವನ ಸಂಘಟನೆಯ ಕುರಿತು ಹೆಚ್ಚು ತಿಳಿದಿದೆ. ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ಬೆತೆಲಿನಲ್ಲಿ ಆಗುವ ಕೆಲಸದ ಕುರಿತು ವಿವರಿಸುವಾಗ ಅವರು ಕೆಲವೊಮ್ಮೆ ‘ನೀವು ಬೆತೆಲನ್ನು ನೋಡಿದ್ದೀರಾ?’ ಎಂದು ಕೇಳುತ್ತಾರೆ. ಈಗ ನಾವು ‘ಹೌದು, ನೋಡಿದ್ದೇವೆ’ ಎಂದು ಹೇಳಬಲ್ಲೆವು.”

ನಿಮ್ಮ ದೇಶದಲ್ಲಿ ಅಥವಾ ನಿಮಗೆ ಹತ್ತಿರವಿರುವ ದೇಶದಲ್ಲಿ ಒಂದು ಬ್ರಾಂಚ್‌ ಆಫೀಸ್‌ ಮತ್ತು ಬೆತೆಲ್‌ ಗೃಹವು ಇದೆಯೊ? ಇರುವುದಾದರೆ ಆ ಸೌಕರ್ಯಗಳನ್ನು ಹೋಗಿ ನೋಡುವಂತೆ ನಿಮ್ಮನ್ನು ನಾವು ಆಮಂತ್ರಿಸುತ್ತೇವೆ. ಅಲ್ಲಿ ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸುವರು ಮತ್ತು ಆ ಸಂದರ್ಶನದಿಂದ ನೀವು ಖಂಡಿತವಾಗಿಯೂ ಮಹಾ ಆಧ್ಯಾತ್ಮಿಕ ಪ್ರಯೋಜನವನ್ನು ಪಡೆದುಕೊಳ್ಳುವಿರಿ.

[ಪುಟ 18ರಲ್ಲಿರುವ ಚಿತ್ರ]

ಮಾರಿಯೋ

[ಪುಟ 18ರಲ್ಲಿರುವ ಚಿತ್ರ]

ಆಬೆಲ್‌

[ಪುಟ 18ರಲ್ಲಿರುವ ಚಿತ್ರ]

ಜರ್ಮನಿ

[ಪುಟ 18ರಲ್ಲಿರುವ ಚಿತ್ರ]

ಜಪಾನ್‌

[ಪುಟ 18ರಲ್ಲಿರುವ ಚಿತ್ರ]

ಬ್ರಸಿಲ್‌