ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಷ್ಕೃತ್ಯಗಳ ಕೊನೆ ಖಚಿತ!

ದುಷ್ಕೃತ್ಯಗಳ ಕೊನೆ ಖಚಿತ!

ದುಷ್ಕೃತ್ಯಗಳ ಕೊನೆ ಖಚಿತ!

ದೇವರು ತನ್ನ ವಾಕ್ಯವಾದ ಬೈಬಲನ್ನು ನಮಗೆ ಕೊಟ್ಟಿದ್ದಾನೆ. ಜನರು ಕೆಟ್ಟ ಕೆಲಸಗಳನ್ನು ನಡೆಸುತ್ತಿರುವ ಕಾರಣಗಳನ್ನು ಅದರಲ್ಲಿ ತಿಳಿಸಿದ್ದಾನೆ. ಹಾಗೆಯೇ ಇಚ್ಛಾಸ್ವಾತಂತ್ರ್ಯವನ್ನೂ ಆತ್ಮಸಂಯಮ ತೋರಿಸುವ ಕ್ಷಮತೆಯನ್ನೂ ನಮಗೆ ಕೊಟ್ಟಿದ್ದಾನೆ. ಹಾಗಾಗಿ ಕೆಟ್ಟ ಕೆಲಸಗಳನ್ನು ಮಾಡದಿರಲು ನಾವು ಆರಿಸಬಹುದು. (ಧರ್ಮೋಪದೇಶಕಾಂಡ 30:15, 16, 19) ಇವುಗಳ ನೆರವಿನಿಂದ ನಾವು ನಮ್ಮಲ್ಲಿರಬಹುದಾದ ಕೆಟ್ಟ ಪ್ರವೃತ್ತಿಗಳನ್ನು ಗುರುತಿಸಿ ತಿದ್ದಲಿಕ್ಕಾಗಿ ಕ್ರಮ ತೆಗೆದುಕೊಳ್ಳಬಹುದು. ಹೀಗೆ ಕೆಟ್ಟ ಕೆಲಸಗಳನ್ನು ಮಾಡದೆ ಇರುವಾಗ ನಮಗೂ ಇತರರಿಗೂ ಸಂತೋಷ ತರುವೆವು.—ಕೀರ್ತನೆ 1:1, 2.

ಯಾವುದೇ ಕೆಟ್ಟ ಕೆಲಸಕ್ಕೆ ಕೈ ಹಾಕದಂತೆ ವೈಯಕ್ತಿಕವಾಗಿ ನಾವು ಹೆಣಗಾಡುತ್ತಿದ್ದರೂ ಈ ಜಗತ್ತು ಜೊತೆಮಾನವರ ದುಷ್ಕೃತ್ಯಗಳಿಂದ ತುಂಬಿಹೋಗಿದೆ. ಆದ್ದರಿಂದಲೇ, “ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು ಎಂಬುದನ್ನು ತಿಳಿದುಕೊ” ಎಂದು ಬೈಬಲ್‌ ಎಚ್ಚರಿಸುತ್ತದೆ. ಈ ದಿನಗಳನ್ನು ‘ನಿಭಾಯಿಸಲು ಕಷ್ಟಕರವಾಗಿ’ ಮಾಡುವಂಥದ್ದು ಯಾವುದು? ಅದು ಮುಂದುವರಿಸಿ ಹೇಳುವುದು: “ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ ದ್ರೋಹಿಗಳೂ ಹಟಮಾರಿಗಳೂ ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ ದೇವಭಕ್ತಿಯ ವೇಷವಿದ್ದು ಅದರ ಶಕ್ತಿಗೆ ವಿರುದ್ಧವಾಗಿ ವರ್ತಿಸುವವರೂ ಆಗಿರುವರು; ಇಂಥವರಿಂದ ದೂರವಿರು.”—2 ತಿಮೊಥೆಯ 3:1-5.

ಈ ಪ್ರವಾದನೆಯಲ್ಲಿ ‘ಕಡೇ ದಿವಸಗಳು’ ಎಂಬ ಪದಗಳನ್ನು ನೀವು ಗಮನಿಸಿರಬಹುದು. ಅದರ ಅರ್ಥವೇನು? ಅನೇಕರು ಸರಿಯಾಗಿ ಅರ್ಥಮಾಡಿಕೊಂಡಿರುವಂತೆ ಯಾವುದಕ್ಕೋ ಒಂದು ಕೊನೆ ಬರುತ್ತಿದೆ ಎಂಬುದನ್ನು ಅದು ಸೂಚಿಸುತ್ತದೆ. ಯಾವುದಕ್ಕೆ ಕೊನೆ? ದೇವರು ತನ್ನ ಗ್ರಂಥದಲ್ಲಿ ಕೊಟ್ಟ ಮಾತನ್ನು ಗಮನಿಸೋಣ.

ದುಷ್ಟರನ್ನು ನಾಶಮಾಡುವನು.

“ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”ಕೀರ್ತನೆ 37:10, 11.

“ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ; ಆದರೆ ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ.ಕೀರ್ತನೆ 145:20.

ದಬ್ಬಾಳಿಕೆಯನ್ನು ಅಂತ್ಯಗೊಳಿಸುವನು.

“ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”ಕೀರ್ತನೆ 72:12, 14.

‘ಸೃಷ್ಟಿಯು ಸಹ ನಾಶದ ದಾಸತ್ವದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು ಹೊಂದುವುದು.’ರೋಮನ್ನರಿಗೆ 8:21.

ಭೌತಿಕ ಅಗತ್ಯಗಳನ್ನು ಪೂರೈಸುವನು.

“ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”ಮೀಕ 4:4.

“ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.”ಯೆಶಾಯ 65:21, 22.

ನೀತಿನ್ಯಾಯ ಸ್ಥಾಪಿಸುವನು.

‘ದೇವರು ತಾನು ಆಯ್ದುಕೊಂಡವರು ಹಗಲಿರುಳು ಮೊರೆಯಿಡುವಾಗ ಅವರಿಗೆ ನ್ಯಾಯವನ್ನು ದೊರಕಿಸಿಕೊಡದೇ ಇರುವನೆ? ಅವರಿಗೆ ಬೇಗ ನ್ಯಾಯತೀರಿಸುವನೆಂದು ನಿಮಗೆ ಹೇಳುತ್ತೇನೆ.’ಲೂಕ 18:7.

“ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು.”ಕೀರ್ತನೆ 37:28.

“ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.”ಯೆಶಾಯ 26:9, NIBV.

[ದೇವರ] ವಾಗ್ದಾನಕ್ಕನುಸಾರ ನಾವು ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಿದ್ದೇವೆ ಮತ್ತು ಇವುಗಳಲ್ಲಿ ನೀತಿಯು ವಾಸವಾಗಿರುವುದು.”2 ಪೇತ್ರ 3:13.

ಜನರು ಈಗಲೇ ಬದಲಾಗುತ್ತಿದ್ದಾರೆ

ಮೇಲೆ ತಿಳಿಸಲಾದ ಬೈಬಲಿನ ವಾಗ್ದಾನಗಳನ್ನು ಕೇಳಿದಾಗ ನಮಗೆ ಹರ್ಷವಾಗುತ್ತದೆ ಎಂಬುದು ನಿಸ್ಸಂಶಯ. ಆದರೆ ಅವು ಖಂಡಿತ ನೈಜವಾಗುವವೆಂದು ಹೇಗೆ ಹೇಳಬಹುದು? ಅದಕ್ಕೆ ರುಜುವಾತು ನಮ್ಮ ಮುಂದೆಯೇ ಇದೆ. ಅದೇನು? ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರು ಸ್ವಾರ್ಥಪರ, ಅನೈತಿಕ, ಹಿಂಸಾತ್ಮಕ ಪ್ರವೃತ್ತಿಯಂಥ ದುರ್ಗುಣಗಳನ್ನು ತೊರೆದು ಪ್ರಾಮಾಣಿಕತೆ, ಶಾಂತಿಶೀಲತೆ, ದಯೆಯಂಥ ಸುಗುಣಗಳನ್ನು ಈಗಾಗಲೇ ಬೆಳೆಸಿಕೊಂಡಿದ್ದಾರೆ. ಇಂದು 70 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಯೆಹೋವನ ಸಾಕ್ಷಿಗಳು ಅಂತಾರಾಷ್ಟ್ರೀಯ ಸಹೋದರತ್ವದಲ್ಲಿ ಒಂದಾಗಿದ್ದಾರೆ. ಅವರು ಇತಿಹಾಸದುದ್ದಕ್ಕೂ ದ್ವೇಷ, ಹಿಂಸಾಚಾರ, ರಕ್ತಪಾತಗಳಿಗೆ ಕಾರಣವಾದ ಜನಾಂಗೀಯ, ರಾಷ್ಟ್ರೀಯ, ರಾಜಕೀಯ, ಆರ್ಥಿಕ ಎಲ್ಲೆಗಳನ್ನು ಮೆಟ್ಟಿನಿಂತು ಐಕ್ಯವಾಗಿದ್ದಾರೆ. * ಇಂದು ನಡೆಯುತ್ತಿರುವ ಈ ಬದಲಾವಣೆಯೇ ಮುಂದೆ ದೇವರ ವಾಗ್ದಾನಗಳೆಲ್ಲ ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಿಜವಾಗುವವು ಎಂಬುದಕ್ಕೆ ಬಲವಾದ ಪುರಾವೆಯಾಗಿದೆ.

ಈ ರೀತಿಯ ಬದಲಾವಣೆಗೆ ಕಾರಣ? ಅದನ್ನು ಬೈಬಲಿನ ಇನ್ನೊಂದು ವಾಗ್ದಾನದಲ್ಲಿ ತಿಳಿಸಲಾಗಿದೆ. ಅದನ್ನು ಬರೆದವನು ದೇವರ ಒಬ್ಬ ಪ್ರವಾದಿಯಾದ ಯೆಶಾಯ. ಅವನು ಬರೆದದ್ದು:

“ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡಿಸುವದು. . . . ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು. ಮೊಲೆಕೂಸು ನಾಗರಹುತ್ತದ ಮೇಲೆ ಆಡುವದು; ಮೊಲೆಬಿಟ್ಟ ಮಗು ಹಾವಿನ ಬಿಲದ ಮೇಲೆ ಕೈಹಾಕುವದು. ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”—ಯೆಶಾಯ 11:6-9.

ಈ ವಾಗ್ದಾನ ಮುಂದೊಂದು ದಿನ ಪ್ರಾಣಿಗಳು ಮನುಷ್ಯರೊಂದಿಗೆ ಶಾಂತಿಯಿಂದ ಬಾಳುವ ಸಂಗತಿಯನ್ನು ಮಾತ್ರ ಮುಂತಿಳಿಸಿತ್ತೋ? ಇಲ್ಲ, ಅದು ಇನ್ನೂ ಹೆಚ್ಚಿನದ್ದನ್ನು ತಿಳಿಸುತ್ತದೆ. ಆ ಬದಲಾವಣೆಗೆ ಕಾರಣವೇನೆಂಬದನ್ನು ವಾಗ್ದಾನದ ಕೊನೆಯ ಮಾತುಗಳು ತಿಳಿಸುತ್ತದೆಂದು ಗಮನಿಸಿ: “ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” ಪ್ರಾಣಿಗಳಿಗೆ ಜ್ಞಾನ ಕೊಟ್ಟು ಅವುಗಳ ಸ್ವಭಾವ ಬದಲಾಯಿಸಲಿಕ್ಕಾಗುತ್ತದೊ? ಇಲ್ಲ. ಆದರೆ ದೇವಜ್ಞಾನವು ಮನುಷ್ಯರನ್ನು ಖಂಡಿತ ಬದಲಾಯಿಸಬಲ್ಲದು. ಈ ವಾಗ್ದಾನವು, ಮೃಗೀಯ ಗುಣಗಳುಳ್ಳ ಜನರು ಬೈಬಲ್‌ ಬೋಧನೆಗಳನ್ನು ಕಲಿತು, ಅನ್ವಯಿಸುವುದರ ಫಲವಾಗಿ ಆ ದುರ್ಗುಣಗಳನ್ನು ಕಳಚಿಹಾಕಿ ಕ್ರಿಸ್ತನ ಗುಣಗಳನ್ನು ಬೆಳೆಸಿಕೊಳ್ಳುವರು ಎಂಬುದನ್ನು ಮುಂತಿಳಿಸಿತು.

ಪೇತ್ರೊ * ಎಂಬವನ ಉದಾಹರಣೆ ಗಮನಿಸಿ. ಆತ ಒಂದು ಭಯೋತ್ಪಾದಕ ಸಂಘಟನೆಗೆ ಸೇರಿಕೊಂಡ. ತಾನು ನ್ಯಾಯಕ್ಕಾಗಿಯೇ ಹೋರಾಡುತ್ತಿದ್ದೇನೆ ಅಂದುಕೊಂಡಿದ್ದ. ತರಬೇತಿಯ ಬಳಿಕ ಪೊಲೀಸರ ಸಾಲುಮನೆಗಳನ್ನು ಉಡಾಯಿಸುವ ಅಪ್ಪಣೆ ಆತನಿಗೆ ಸಿಕ್ಕಿತ್ತು. ಅದಕ್ಕಾಗಿ ಆತ ತಯಾರಿನಡೆಸುತ್ತಿದ್ದಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದ. 18 ತಿಂಗಳು ಜೈಲಿನಲ್ಲಿ ಕಳೆದ. ಆದರೆ ಅಲ್ಲೂ ಸರ್ಕಾರಿ ವಿರೋಧಿ ಕೆಲಸ ಮುಂದುವರಿಸಿದ. ಈ ಮಧ್ಯೆ ಪೇತ್ರೊವಿನ ಪತ್ನಿ ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದಳು. ಜೈಲಿನಿಂದ ಬಿಡುಗಡೆಯಾದ ಮೇಲೆ ಪೇತ್ರೊ ಕೂಡ ಬೈಬಲ್‌ ಅಧ್ಯಯನ ಮಾಡತೊಡಗಿದ. ಯೆಹೋವ ದೇವರ ಬಗ್ಗೆ ಕಲಿತುಕೊಂಡ ವಿಷಯಗಳು ಆತನು ತನ್ನ ಮನೋಭಾವ ಮತ್ತು ಜೀವದ ಬಗ್ಗೆ ತನ್ನ ನೋಟದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡುವಂತೆ ಪ್ರಚೋದಿಸಿತು. “ನಾನು ಭಯೋತ್ಪಾದಕನಾಗಿದ್ದಾಗ ಯಾರ ಜೀವವನ್ನೂ ತೆಗೆದಿರಲಿಲ್ಲ. ಅದಕ್ಕಾಗಿ ಯೆಹೋವನಿಗೆ ಕೃತಜ್ಞನು. ನಾನೀಗ ಪವಿತ್ರಾತ್ಮದ ಕತ್ತಿಯಾಗಿರುವ ಬೈಬಲನ್ನು ಬಳಸಿ ದೇವರ ರಾಜ್ಯದ ಸುವಾರ್ತೆ ಅಂದರೆ ನಿಜ ಶಾಂತಿ ಮತ್ತು ನ್ಯಾಯದ ಕುರಿತ ಸಂದೇಶವನ್ನು ಜನರಿಗೆ ಕೊಡುತ್ತಿದ್ದೇನೆ” ಎನ್ನುತ್ತಾನೆ ಪೇತ್ರೊ. ತಾನು ಉಡಾಯಿಸಬೇಕೆಂದಿದ್ದ ಪೊಲೀಸರ ಸಾಲುಮನೆಗೂ ಭೇಟಿನೀಡಿ ಹಿಂಸಾಚಾರವಿಲ್ಲದ ಶಾಂತಿಯುತ ಲೋಕದ ಬಗ್ಗೆ ತಿಳಿಸಿದನು.

ದೇವರ ವಾಕ್ಯವಾದ ಬೈಬಲ್‌ ಜನರ ಮೇಲೆ ಬೀರುತ್ತಿರುವ ಸತ್ಪ್ರಭಾವ ತಾನೇ ದುಷ್ಕೃತ್ಯಗಳು ಖಂಡಿತ ಕೊನೆಗೊಳ್ಳುವವೆಂಬ ದೇವರ ವಾಗ್ದಾನದಲ್ಲಿ ಭರವಸೆಯಿಡಲು ಒಂದು ದೊಡ್ಡ ಕಾರಣವಾಗಿದೆ. ಹೌದು, ಜನರು ಕೆಟ್ಟ ಕೆಲಸಗಳನ್ನು ಮಾಡದಿರುವ ಒಂದು ಸಮಯ ಬರಲಿದೆ. ಒಳ್ಳೆಯವರಾಗಿ ಬದಲಾದ ಜನರು ಮಾತ್ರ ಆಗ ಇರುವರು. ಅಲ್ಲದೆ ಕೆಟ್ಟ ಕೆಲಸಗಳಿಗೆಲ್ಲ ಮೂಲನಾದ ಸೈತಾನನನ್ನು ಯೆಹೋವ ದೇವರು ಬೇಗನೆ ತೆಗೆದುಹಾಕಲಿದ್ದಾನೆ. ಇಂದು ಲೋಕ ವ್ಯವಹಾರಗಳನ್ನು ತೆರೆಮರೆಯಲ್ಲಿದ್ದು ನಿಯಂತ್ರಿಸುತ್ತಿರುವವನು ಈ ಸೈತಾನನೇ. “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಬೈಬಲ್‌ ಹೇಳುತ್ತದೆ. (1 ಯೋಹಾನ 5:19) ಸದ್ಯದಲ್ಲೇ ಅವನನ್ನು ತೊಲಗಿಸಲಾಗುವುದು ಮತ್ತು ದುರ್ಮಾರ್ಗವನ್ನು ಬಿಡದ ಮೊಂಡ ವ್ಯಕ್ತಿಗಳನ್ನೂ ನಾಶಮಾಡಲಾಗುವುದು. ಅಂಥ ಸಮಯ ನೋಡಲು ಸಿಗುವುದು ಎಂಥ ಆಶೀರ್ವಾದ ಅಲ್ಲವೇ?

ಈ ಆಶೀರ್ವಾದ ಸಿಗಬೇಕಾದರೆ ಏನು ಮಾಡಬೇಕು? ಸ್ವಲ್ಪ ನೆನಪಿಸಿಕೊಳ್ಳಿ. “ಯೆಹೋವನ ಜ್ಞಾನ” ಇಂದು ಜನರಲ್ಲಿ ಬದಲಾವಣೆಯನ್ನು ತರುತ್ತಿದೆ ಮತ್ತು ಇದರಿಂದಾಗಿಯೇ ಮುಂದೆ ಭೂವ್ಯಾಪಕ ಬದಲಾವಣೆಯಾಗಲಿದೆ. ಆದ್ದರಿಂದ ಪೇತ್ರೊ ಮಾಡಿದಂತೆ ಬೈಬಲಿನ ನಿಖರ ಜ್ಞಾನವನ್ನು ಪಡೆದು, ಅದನ್ನು ಅನ್ವಯಿಸಿದರೆ ನೀವು ಕೂಡ ‘ನೀತಿಯು ವಾಸವಾಗಿರುವ’ ಒಂದು ಲೋಕದಲ್ಲಿ ಜೀವಿಸಲು ಎದುರುನೋಡಬಲ್ಲಿರಿ. (2 ಪೇತ್ರ 3:13) ಆದಕಾರಣ ದೇವರ ಮತ್ತು ಯೇಸು ಕ್ರಿಸ್ತನ ಕುರಿತು ಜ್ಞಾನ ಪಡೆದುಕೊಳ್ಳಲು ಈಗಿರುವ ಅವಕಾಶವನ್ನು ಸದುಪಯೋಗಿಸುವಂತೆ ನಿಮ್ಮನ್ನು ಕೇಳಿಕೊಳ್ಳುತ್ತೇವೆ. ಈ ಮೂಲಕ ನೀವು ಶಾಶ್ವತವಾಗಿ ಬದುಕುವ ಆಶೀರ್ವಾದ ಪಡೆದುಕೊಳ್ಳಬಲ್ಲಿರಿ.—ಯೋಹಾನ 17:3. (w10-E 09/01)

[ಪಾದಟಿಪ್ಪಣಿಗಳು]

^ ಪ್ಯಾರ. 20 ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರ್‌ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 24 ಹೆಸರನ್ನು ಬದಲಾಯಿಸಲಾಗಿದೆ.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

ನೀವು ಕೂಡ ‘ನೀತಿಯು ವಾಸವಾಗಿರುವ’ ಲೋಕದಲ್ಲಿ ಜೀವಿಸಲು ಎದುರುನೋಡಬಲ್ಲಿರಿ.—2 ಪೇತ್ರ 3:13