ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿರುವಾತನು

ನಮಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿರುವಾತನು

ದೇವರ ಸಮೀಪಕ್ಕೆ ಬನ್ನಿರಿ

ನಮಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿರುವಾತನು

2 ಅರಸುಗಳು 18:1-7

ಮಕ್ಕಳಿಗಾಗಿ ಒಳ್ಳೇ ಮಾದರಿಯಿಡುವುದು ಹೆತ್ತವರ ಕರ್ತವ್ಯ. ಇಂಥ ಮಾದರಿ ಮಕ್ಕಳು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು, ಜೀವನದಲ್ಲಿ ವಿವೇಕಯುತ ನಿರ್ಣಯಗಳನ್ನು ಮಾಡಲು ನೆರವಾಗಬಲ್ಲದು. ಆದರೆ ದುಃಖದ ವಿಷಯವೇನೆಂದರೆ ಹೆಚ್ಚಿನ ಹೆತ್ತವರು ಕೆಟ್ಟ ಮಾದರಿಯನ್ನೇ ಇಡುತ್ತಾರೆ. ಇಂಥವರ ಮಕ್ಕಳು ಕೂಡ ಅದೇ ಹಾದಿಯನ್ನೇ ತುಳಿಯಬೇಕೆಂದಿದೆಯೋ? ನಮಗೆ ನೆಮ್ಮದಿ ನೀಡುವ ಸತ್ಯವೊಂದರಲ್ಲಿ ಇದಕ್ಕೆ ಉತ್ತರವಿದೆ. ಅದೇನೆಂದರೆ ಯೆಹೋವ ದೇವರು ನಮ್ಮಲ್ಲಿ ಪ್ರತಿಯೊಬ್ಬರಿಗೂ ಇಚ್ಛಾಸ್ವಾತಂತ್ರ್ಯವೆಂಬ ಉಡುಗೊರೆ ಕೊಟ್ಟಿದ್ದಾನೆ. ಇದನ್ನು ಬೈಬಲಿನ 2 ಅರಸುಗಳು 18:1-7ರಲ್ಲಿ ಹಿಜ್ಕೀಯ ಎಂಬವನ ವೃತ್ತಾಂತದಲ್ಲಿ ನೋಡೋಣ.

ಹಿಜ್ಕೀಯ “ಯೆಹೂದರಾಜನಾದ ಆಹಾಜನ ಮಗ.” (ವಚನ 1) ಆಹಾಜನು ತನ್ನ ಪ್ರಜೆಗಳು ಯೆಹೋವ ದೇವರ ಆರಾಧನೆಯಿಂದ ದೂರಸರಿಯುವಂತೆ ಮಾಡಿದನು. ಈ ದುಷ್ಟ ಅರಸನು ಬಾಳ್‌ ಎಂಬ ದೇವತೆಯ ಆರಾಧಕನಾಗಿದ್ದು, ಆ ದೇವತೆಗಾಗಿ ನರಬಲಿಯನ್ನೂ ಕೊಡುತ್ತಿದ್ದನು. ತನ್ನ ಸ್ವಂತ ಮಕ್ಕಳಲ್ಲಿ ಕಡಿಮೆಪಕ್ಷ ಒಬ್ಬನನ್ನಾದರೂ ಬಲಿಕೊಟ್ಟಿದ್ದನು. ದೇವರ ಆಲಯದ ಬಾಗಲುಗಳನ್ನು ಮುಚ್ಚಿಬಿಟ್ಟನು ಮತ್ತು ತನಗಾಗಿ “ಯೆರೂಸಲೇಮಿನ ಪ್ರತಿಯೊಂದು ಮೂಲೆಯಲ್ಲಿಯೂ ಯಜ್ಞವೇದಿಗಳನ್ನು ಕಟ್ಟಿಸಿದನು.” ಹೀಗೆ “ಯೆಹೋವನನ್ನು ರೇಗಿಸಿದನು.” (2 ಪೂರ್ವಕಾಲವೃತ್ತಾಂತ 28:3, 24, 25) ಇದರಿಂದ ಸ್ಪಷ್ಟವಾಗುವುದೇನೆಂದರೆ ಆಹಾಜನು ತುಂಬ ಕೆಟ್ಟ ತಂದೆಯಾಗಿದ್ದನು. ಅವನ ಮಗನಾದ ಹಿಜ್ಕೀಯನು ಕೂಡ ತನ್ನ ತಂದೆಯ ತಪ್ಪನ್ನೇ ಮಾಡಿದನೋ?

ಆಹಾಜನ ನಂತರ ಗದ್ದುಗೆ ಏರಿದ ಹಿಜ್ಕೀಯನು ತನ್ನ ತಂದೆಯ ಕೆಟ್ಟ ಮಾದರಿಯನ್ನು ಅನುಸರಿಸಲಿಲ್ಲ. ಅವನು “ಯೆಹೋವನ ಚಿತ್ತಾನುಸಾರವಾಗಿ ನಡೆದನು.” (ವಚನ 3) ಯೆಹೋವನಲ್ಲಿ ಭರವಸವಿಟ್ಟನು. “ಯೆಹೂದ್ಯರಲ್ಲಿ ಇವನಿಗೆ ಸಮಾನನಾದ ಅರಸನು ಮುಂಚೆಯೂ ತರುವಾಯವೂ ಇರಲಿಲ್ಲ.” (ವಚನ 5) ಯುವರಾಜನಾದ ಹಿಜ್ಕೀಯನು ತನ್ನ ಆಳ್ವಿಕೆಯ ಮೊದಲ ವರ್ಷದಲ್ಲೇ ಸತ್ಯಾರಾಧನೆಯ ಸಂಬಂಧದಲ್ಲಿ ಒಂದು ಕಾರ್ಯಾಚರಣೆ ಆರಂಭಿಸಿದನು. ಬೇರೆ ಧರ್ಮದ ವಿಗ್ರಹಗಳ ಪೂಜಾಸ್ಥಳಗಳನ್ನು ಕೆಡವಿಹಾಕಿದನು. ಆಲಯವನ್ನು ಪುನಃ ತೆರೆಯಲಾಯಿತು ಮತ್ತು ಸತ್ಯಾರಾಧನೆಯ ಪುನಃಸ್ಥಾಪನೆಯಾಯಿತು. (ವಚನ 4; 2 ಪೂರ್ವಕಾಲವೃತ್ತಾಂತ 29:1-3, 27-31) ಹಿಜ್ಕೀಯನು ‘ಯೆಹೋವನನ್ನೇ ಹೊಂದಿಕೊಂಡನು. ಯೆಹೋವನು ಅವನ ಸಂಗಡ ಇದ್ದನು.’—ವಚನಗಳು 6, 7.

ಹಿಜ್ಕೀಯನು ತನ್ನ ತಂದೆಯ ಕೆಟ್ಟ ಮಾದರಿಯಂತೆ ನಡೆಯದಿರಲು ಯಾವುದು ಸಹಾಯಮಾಡಿತು? ಹಿಜ್ಕೀಯನ ತಾಯಿಯಾದ ಅಬೀಯಳ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಆದರೆ ಆಕೆ ಹಿಜ್ಕೀಯನ ಮೇಲೆ ಒಳ್ಳೇ ಪ್ರಭಾವ ಬೀರಿರಬಹುದೋ? ಅಥವಾ ಯುವರಾಜನಾದ ಹಿಜ್ಕೀಯನು ಹುಟ್ಟುವ ಮುಂಚೆಯೇ ದೇವರ ಪ್ರವಾದಿಯಾಗಿ ಕೆಲಸ ಮಾಡಲಾರಂಭಿಸಿದ್ದ ಯೆಶಾಯನ ಒಳ್ಳೇ ಮಾದರಿ ಅವನ ಮೇಲೆ ಪ್ರಭಾವ ಬೀರಿರಬಹುದೋ? * ಇದರ ಬಗ್ಗೆ ಬೈಬಲ್‌ ಏನೂ ತಿಳಿಸುವುದಿಲ್ಲ. ಏನೇ ಆದರೂ ಒಂದಂತೂ ಸತ್ಯ. ಅದೇನೆಂದರೆ, ಹಿಜ್ಕೀಯನು ತನ್ನ ತಂದೆ ನಡೆದ ಮಾರ್ಗಕ್ಕೆ ತದ್ವಿರುದ್ಧವಾದ ಮಾರ್ಗದಲ್ಲಿ ನಡೆಯುವ ಆಯ್ಕೆಮಾಡಿದ್ದನು.

ಹೆತ್ತವರ ಕೆಟ್ಟ ಮಾದರಿಯಿಂದಾಗಿ ಬಾಲ್ಯದಲ್ಲಿ ಕಷ್ಟವನ್ನು ಅನುಭವಿಸಿರುವವರಿಗೆ ಹಿಜ್ಕೀಯನ ಉದಾಹರಣೆ ಒಂದು ಪ್ರೇರಣೆಯಾಗಿದೆ. ಹಿಂದೆ ಆಗಿ ಹೋದದ್ದನ್ನು ತಿದ್ದಲಾಗದು, ನೋವಿನ ಅನುಭವಗಳನ್ನು ಅಳಿಸಲಾಗದು. ಹಾಗೆಂದು ನಮ್ಮ ಬದುಕು ನೆಲಕಚ್ಚಬೇಕಾಗಿಲ್ಲ. ಮುಂದೆ ಸಂತೋಷಕ್ಕೆ ನಡೆಸಬಲ್ಲ ಆಯ್ಕೆಗಳನ್ನು ನಾವೀಗಲೇ ಮಾಡಬಹುದು. ಹಿಜ್ಕೀಯನಂತೆ ನಾವೂ ಸತ್ಯ ದೇವರಾದ ಯೆಹೋವನನ್ನು ಪ್ರೀತಿಸುವ, ಆರಾಧಿಸುವ ಆಯ್ಕೆ ಮಾಡಬಹುದು. ಈ ಆಯ್ಕೆ ಈಗಲೇ ನಮಗೆ ಸಂತೃಪ್ತ ಜೀವನವನ್ನು ಕೊಟ್ಟು, ಮುಂದೆ ದೇವರ ಹೊಸ ಲೋಕದಲ್ಲಿ ಶಾಶ್ವತ ಜೀವನಕ್ಕೆ ನಡೆಸಬಲ್ಲದು. (2 ಪೇತ್ರ 3:13; ಪ್ರಕಟನೆ 21:3, 4) ನಮಗೆಲ್ಲರಿಗೂ ಇಚ್ಛಾಸ್ವಾತಂತ್ರ್ಯದಂಥ ಅಮೂಲ್ಯ ಉಡುಗೊರೆಯನ್ನು ಕೊಟ್ಟ ಪ್ರೀತಿಯ ದೇವರಿಗೆ ನಾವೆಷ್ಟು ಕೃತಜ್ಞರಾಗಿರಬೇಕಲ್ಲವೇ? (w10-E 09/01)

[ಪಾದಟಿಪ್ಪಣಿ]

^ ಪ್ಯಾರ. 7 ಸುಮಾರು ಕ್ರಿ.ಪೂ. 778ರಿಂದ ಆರಂಭಿಸಿ ಕ್ರಿ.ಪೂ. 732ರ ಸ್ವಲ್ಪ ಸಮಯದ ನಂತರದ ತನಕ ಯೆಶಾಯನು ಪ್ರವಾದಿಸುವ ಕೆಲಸ ಮಾಡಿದನು. ಹಿಜ್ಕೀಯನು ಕ್ರಿ.ಪೂ. 745ರಲ್ಲಿ, 25ನೇ ವಯಸ್ಸಿನಲ್ಲಿ ಆಳಲಾರಂಭಿಸಿದನು.