ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಕ್ರಿಸ್ತನೊಬ್ಬನೇ ನಿಮ್ಮ ನಾಯಕನು”

“ಕ್ರಿಸ್ತನೊಬ್ಬನೇ ನಿಮ್ಮ ನಾಯಕನು”

“ಕ್ರಿಸ್ತನೊಬ್ಬನೇ ನಿಮ್ಮ ನಾಯಕನು”

“‘ನಾಯಕರು’ ಎಂದು ಕರೆಸಿಕೊಳ್ಳಬೇಡಿರಿ; ಏಕೆಂದರೆ ಕ್ರಿಸ್ತನೊಬ್ಬನೇ ನಿಮ್ಮ ನಾಯಕನು.”—ಮತ್ತಾ. 23:10.

1. ಯೆಹೋವನ ಸಾಕ್ಷಿಗಳು ಯಾರನ್ನು ತಮ್ಮ ನಾಯಕನನ್ನಾಗಿ ಅಂಗೀಕರಿಸುತ್ತಾರೆ? ಏಕೆ?

ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿ ಮಾನವ ನಾಯಕರಿದ್ದಾರೆ. ಅವರಲ್ಲಿ ರೋಮ್‌ನ ಪೋಪರು, ಈಸ್ಟರ್ನ್‌ ಆರ್ತಡಾಕ್ಸ್‌ ಚರ್ಚ್‌ಗಳ ಸ್ಥಾಪಕರು, ಪ್ರಧಾನ ಬಿಷಪ್ಪರು ಹಾಗೂ ಬೇರೆ ಧರ್ಮಗಳ ಮುಖಂಡರೂ ಇದ್ದಾರೆ. ಆದರೆ ಯೆಹೋವನ ಸಾಕ್ಷಿಗಳು ಯಾವ ಮಾನವನನ್ನೂ ತಮ್ಮ ನಾಯಕನನ್ನಾಗಿ ಅಂಗೀಕರಿಸುವುದಿಲ್ಲ. ಯಾವನೇ ಮನುಷ್ಯನ ಹಿಂಬಾಲಕರು ಅಥವಾ ಶಿಷ್ಯರು ಅವರಲ್ಲ. ಇದು ಯೆಹೋವನು ತನ್ನ ಮಗನ ಕುರಿತು ನುಡಿದ ಈ ಪ್ರವಾದನಾತ್ಮಕ ಮಾತುಗಳಿಗೆ ಹೊಂದಿಕೆಯಲ್ಲಿದೆ: “ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.” (ಯೆಶಾ. 55:4) ಅಭಿಷಿಕ್ತ ಕ್ರೈಸ್ತರ ಹಾಗೂ ಅವರ ಸಂಗಡಿಗರಾದ ‘ಬೇರೆ ಕುರಿಗಳ’ ಅಂತಾರಾಷ್ಟ್ರೀಯ ಸಭೆಗೆ ಯೆಹೋವನು ಕೊಟ್ಟ ಒಬ್ಬನೇ ನಾಯಕನ ಹೊರತು ಬೇರೆ ನಾಯಕನ ಅಗತ್ಯವಿಲ್ಲ. (ಯೋಹಾ. 10:16) “ಕ್ರಿಸ್ತನೊಬ್ಬನೇ ನಿಮ್ಮ ನಾಯಕನು” ಎಂಬ ಯೇಸುವಿನ ಮಾತುಗಳನ್ನು ಅವರು ಮನಸಾರೆ ಒಪ್ಪುತ್ತಾರೆ.—ಮತ್ತಾ. 23:10.

ಇಸ್ರಾಯೇಲಿನ ಆಧ್ಯಾತ್ಮಿಕ ಪಾಲಕ

2, 3. ದೇವಕುಮಾರನು ಇಸ್ರಾಯೇಲ್ಯರಲ್ಲಿ ಯಾವ ಕ್ರಿಯಾಶೀಲ ಪಾತ್ರವನ್ನು ನಿರ್ವಹಿಸಿದನು?

2 ಕ್ರೈಸ್ತ ಸಭೆಯು ಸ್ಥಾಪನೆಯಾಗುವ ಅನೇಕ ಶತಮಾನಗಳ ಮುಂಚೆ ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರ ಮೇಲೆ ಒಬ್ಬ ದಿವ್ಯದೂತನನ್ನು ನಾಯಕನನ್ನಾಗಿ ನೇಮಿಸಿದ್ದನು. ಇಸ್ರಾಯೇಲ್ಯರನ್ನು ಈಜಿಪ್ಟ್‌ನಿಂದ ಹೊರತಂದ ಮೇಲೆ ಯೆಹೋವನು ಅವರಿಗೆ ಹೇಳಿದ್ದು: “ಇಗೋ, ದಾರಿಯಲ್ಲಿ ನಿಮ್ಮನ್ನು ಕಾಪಾಡುವದಕ್ಕೂ ನಾನು ಗೊತ್ತು ಮಾಡಿರುವ ಸ್ಥಳಕ್ಕೆ ಕರತರುವದಕ್ಕೂ ದೂತನನ್ನು ನಿಮ್ಮ ಮುಂದುಗಡೆಯಲ್ಲಿ ಕಳುಹಿಸುತ್ತೇನೆ. ನೀವು ಆತನಲ್ಲಿ ಲಕ್ಷ್ಯವಿಟ್ಟು ಆತನ ಮಾತಿಗೆ ಕಿವಿಗೊಡಬೇಕು; ಆತನಿಗೆ ಅವಿಧೇಯರಾಗಿರಬಾರದು; ಅವಿಧೇಯರಾದರೆ ನಿಮ್ಮನ್ನು ಕ್ಷಮಿಸಲಾರನು; ನನ್ನ ನಾಮಮಹಿಮೆ ಆತನಲ್ಲಿ ಇರುವದು.” (ವಿಮೋ. 23:20, 21) ಬೈಬಲ್‌ ತಿಳಿಸುವ ಮೇರೆಗೆ ‘ತನ್ನಲ್ಲಿ ಯೆಹೋವನ ನಾಮಮಹಿಮೆ’ ಇದ್ದ ಆ ದೇವದೂತನು ಬೇರೆ ಯಾರೂ ಅಲ್ಲ ಆತನ ಜ್ಯೇಷ್ಠಪುತ್ರನೇ ಎಂಬದು ವ್ಯಕ್ತ.

3 ಮನುಷ್ಯನಾಗಿ ಹುಟ್ಟುವುದಕ್ಕೆ ಮುಂಚೆ ಈ ದೇವಕುಮಾರನಿಗೆ ಮೀಕಾಯೇಲನೆಂಬ ಹೆಸರಿತ್ತೆಂದು ದೇವರ ವಾಕ್ಯ ತಿಳಿಸುತ್ತದೆ. ದಾನಿಯೇಲ ಪುಸ್ತಕದಲ್ಲಿ ಈತನನ್ನು ದಾನಿಯೇಲನ ಜನರಾದ ಇಸ್ರಾಯೇಲ್ಯರ “ಪಾಲಕನು” ಎಂದು ಕರೆಯಲಾಗಿದೆ. (ದಾನಿ. 10:21) ದಾನಿಯೇಲನ ದಿನಗಳಿಗಿಂತಲೂ ತುಂಬ ಹಿಂದೆ ಈ ಮೀಕಾಯೇಲನು ಇಸ್ರಾಯೇಲಿನ ಕಾರ್ಯಾದಿಗಳಲ್ಲಿ ಒಳಗೂಡಿದ್ದನು ಎಂದು ಶಿಷ್ಯ ಯೂದನು ಸೂಚಿಸುತ್ತಾನೆ. ಮೋಶೆಯ ಮರಣಾನಂತರ ಅವನ ಶವವನ್ನು ಉಪಯೋಗಿಸಿ ಸೈತಾನನು ತನ್ನ ದುರಿಚ್ಛೆಗಳನ್ನು ಯಾವ ರೀತಿಯಲ್ಲಾದರೂ ಸಾಧಿಸಲು ಬಯಸಿದ್ದನೆಂದು ವ್ಯಕ್ತ. ಇಸ್ರಾಯೇಲ್ಯರು ವಿಗ್ರಹಾರಾಧನೆ ಮಾಡುವಂತೆ ಪ್ರಚೋದಿಸಲು ಅವನು ಬಯಸಿದ್ದಿರಬೇಕು. ಆದರೆ ಮೀಕಾಯೇಲನು ಇದನ್ನು ತಡೆದನು. ಯೂದನು ಹೇಳುವುದು: “ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ದೇಹದ ವಿಷಯದಲ್ಲಿ ಪಿಶಾಚನೊಂದಿಗೆ ಭಿನ್ನಾಭಿಪ್ರಾಯದ ಕಾರಣ ವಾಗ್ವಾದಮಾಡುತ್ತಿದ್ದಾಗ ಅವನು ಪಿಶಾಚನ ವಿರುದ್ಧ ದೂಷಣಾತ್ಮಕ ಮಾತುಗಳಲ್ಲಿ ನ್ಯಾಯತೀರ್ಪನ್ನು ಬರಮಾಡಲು ಧೈರ್ಯಮಾಡದೆ, ‘ಯೆಹೋವನು ನಿನ್ನನ್ನು ಖಂಡಿಸಲಿ’ ಎಂದು ಹೇಳಿದನು.” (ಯೂದ 9) ತರುವಾಯ, ಯೆರಿಕೋ ಪಟ್ಟಣಕ್ಕೆ ಮುತ್ತಿಗೆ ಹಾಕುವುದಕ್ಕೆ ಸ್ವಲ್ಪ ಮುಂಚೆ ದೇವರ ಬೆಂಬಲದ ಆಶ್ವಾಸನೆ ಕೊಡಲು ಯೆಹೋಶುವನಿಗೆ ಕಾಣಿಸಿಕೊಂಡ “ಯೆಹೋವನ ಸೇನಾಪತಿ” ಕೂಡ ಮೀಕಾಯೇಲನೇ ಆಗಿದ್ದನು. (ಯೆಹೋಶುವ 5:13-15 ಓದಿ.) ಪ್ರವಾದಿ ದಾನಿಯೇಲನಿಗೆ ಪ್ರಮಖ ಸಂದೇಶವನ್ನು ಕೊಡಲು ಬಂದ ದೇವದೂತನನ್ನು ದೆವ್ವಾಧಿಪತಿಯು ತಡೆಯಲು ಪ್ರಯತ್ನಿಸಿದಾಗ ಆ ದೇವದೂತನಿಗೆ ನೆರವಾದವನು ಸಹ ಪ್ರಧಾನ ದೇವದೂತ ಮೀಕಾಯೇಲನೇ.—ದಾನಿ. 10:5-7, 12-14.

ಮುಂತಿಳಿಸಲಾದ ನಾಯಕನ ಆಗಮನ

4. ಮೆಸ್ಸೀಯನ ಬರೋಣದ ಕುರಿತು ಯಾವ ಪ್ರವಾದನೆಯನ್ನು ನುಡಿಯಲಾಗಿತ್ತು?

4 ಅದಕ್ಕೂ ಮುಂಚೆ ಯೆಹೋವನು ಪ್ರವಾದಿ ದಾನಿಯೇಲನ ಬಳಿಗೆ ಗಬ್ರಿಯೇಲ ದೇವದೂತನನ್ನು ಕಳುಹಿಸಿ ‘ಅಭಿಷಿಕ್ತನಾದ ಪ್ರಭುವಿನ’ [“ಮೆಸ್ಸೀಯ ನಾಯಕನ,” NW] ಬರೋಣದ ಕುರಿತಾದ ಪ್ರವಾದನೆಯನ್ನು ತಿಳಿಸಿದ್ದನು. (ದಾನಿ. 9:21-25) * ಮುಂತಿಳಿಸಿದ ಸಮಯಕ್ಕೆ ಸರಿಯಾಗಿ ಅಂದರೆ ಕ್ರಿ.ಶ. 29ರ ಶರತ್ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಪಡೆದುಕೊಂಡನು. ಆಗ ಯೇಸುವಿನ ಮೇಲೆ ಪವಿತ್ರಾತ್ಮ ಸುರಿಸಲ್ಪಟ್ಟು ಅವನು ಅಭಿಷಿಕ್ತನು ಅಂದರೆ ಮೆಸ್ಸೀಯ ಅಥವಾ ಕ್ರಿಸ್ತನಾದನು. (ಮತ್ತಾ. 3:13-17; ಯೋಹಾ. 1:29-34; ಗಲಾ. 4:4) ಹೀಗೆ ಅವನೊಬ್ಬ ಸರಿಸಾಟಿಯಿಲ್ಲದ ನಾಯಕನಾಗಲಿದ್ದನು.

5. ಕ್ರಿಸ್ತನು ತನ್ನ ಭೂಶುಶ್ರೂಷೆಯ ಸಮಯದಲ್ಲಿ ನಾಯಕನ ಪಾತ್ರವಹಿಸಿದ್ದು ಹೇಗೆ?

5 ಯೇಸು ತನ್ನ ಭೂಶುಶ್ರೂಷೆಯ ಆರಂಭದಿಂದಲೇ ತನ್ನನ್ನು ‘ಮೆಸ್ಸೀಯ ನಾಯಕನಾಗಿ’ ರುಜುಪಡಿಸಿದನು. ಕೆಲವೇ ದಿನಗಳಲ್ಲಿ ಆತನು ಶಿಷ್ಯರನ್ನು ಆರಿಸಿಕೊಳ್ಳಲು ಪ್ರಾರಂಭಿಸಿದನು ಹಾಗೂ ಮೊದಲ ಅದ್ಭುತವನ್ನು ನಡಿಸಿದನು. (ಯೋಹಾ. 1:35–2:11) ಅವನು ರಾಜ್ಯದ ಸುವಾರ್ತೆಯನ್ನು ಸಾರುತ್ತಾ ದೇಶದಲ್ಲೆಲ್ಲಾ ಸಂಚರಿಸಿದಾಗ ಶಿಷ್ಯರು ಅವನನ್ನು ಹಿಂಬಾಲಿಸಿದರು. (ಲೂಕ 8:1) ಸಾರುವ ಕೆಲಸದಲ್ಲಿ ಅವನು ಅವರಿಗೆ ತರಬೇತಿ ನೀಡಿದನು ಮಾತ್ರವಲ್ಲ ಸಾರುವ ಹಾಗೂ ಬೋಧಿಸುವ ಕೆಲಸದಲ್ಲಿ ಸ್ವತಃ ನೇತೃತ್ವ ವಹಿಸುವ ಮೂಲಕ ಒಳ್ಳೇ ಮಾದರಿಯನ್ನಿಟ್ಟನು. (ಲೂಕ 9:1-6) ಯೇಸುವಿನ ಈ ಮಾದರಿಯನ್ನು ಕ್ರೈಸ್ತ ಹಿರಿಯರು ಅನುಕರಿಸಬೇಕು.

6. ಯೇಸು ಯಾವ ವಿಧಗಳಲ್ಲಿ ಕುರುಬ ಹಾಗೂ ನಾಯಕನಾಗಿ ರುಜುವಾದನು?

6 ಯೇಸು ತನ್ನನ್ನು ಒಬ್ಬ ಪ್ರೀತಿಪರ ಕುರುಬನಿಗೆ ಹೋಲಿಸುವ ಮೂಲಕ ತನ್ನ ನಾಯಕತ್ವದ ಇನ್ನೊಂದು ಅಂಶವನ್ನು ಸೂಚಿಸಿದನು. ಪೂರ್ವದೇಶದ ಕುರುಬರು ತಮ್ಮ ಮಂದೆಗಳನ್ನು ಸ್ವತಃ ತಾವೇ ನಡಿಸುತ್ತಾರೆ. ದ ಲ್ಯಾಂಡ್‌ ಆ್ಯಂಡ್‌ ದ ಬುಕ್‌ ಎಂಬ ಪುಸ್ತಕದಲ್ಲಿ ಡಬ್ಲ್ಯೂ. ಎಮ್‌. ಥಾಮ್ಸನ್‌ ಬರೆದದ್ದು: “ಕುರುಬನು ಕುರಿ ಮಂದೆಯ ಮುಂದೆ ಮುಂದೆ ನಡೆಯುವುದು ಕೇವಲ ದಾರಿ ತೋರಿಸಲಿಕ್ಕಾಗಿ ಅಲ್ಲ, ದಾರಿಯು ಸುರಕ್ಷಿತವೂ ಸುಗಮವೂ ಆಗಿದೆಯೋ ಎಂದು ಖಚಿತಪಡಿಸಿಕೊಳ್ಳಲೂ ಆಗಿದೆ. . . . ಅವನು ಕುರಿಗಳನ್ನು [ತನ್ನ] ಕೋಲಿನಿಂದ ಕ್ರಮಬದ್ಧವಾಗಿ ಮಾರ್ಗದರ್ಶಿಸುತ್ತಾ ಹಸುರು ಹುಲ್ಲುಗಾವಲಿಗೆ ಮುನ್ನಡೆಸುತ್ತಾನೆ ಹಾಗೂ ಪರಭಕ್ಷಕ ಪ್ರಾಣಿಗಳಿಂದ ಕಾಪಾಡುತ್ತಾನೆ.” ಯೇಸು ತಾನು ನಿಜ ಕುರುಬನೂ ನಾಯಕನೂ ಎಂದು ತೋರಿಸುತ್ತಾ ಅಂದದ್ದು: “ನಾನೇ ಒಳ್ಳೆಯ ಕುರುಬನು; ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಒಪ್ಪಿಸಿಕೊಡುತ್ತಾನೆ. ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ತಿಳಿದಿದ್ದೇನೆ ಮತ್ತು ಅವು ನನ್ನ ಹಿಂದೆ ಬರುತ್ತವೆ.” (ಯೋಹಾ. 10:11, 27) ತಾನು ಹೇಳಿದಂತೆಯೇ ಯೇಸು ತನ್ನ ಕುರಿಗಳಿಗಾಗಿ ತನ್ನ ಪ್ರಾಣವನ್ನು ಯಜ್ಞವಾಗಿ ಅರ್ಪಿಸಿದನು. ಆದರೆ ಯೆಹೋವನು ಆತನನ್ನು ಎಬ್ಬಿಸಿ “ನಾಯಕನೆಂತಲೂ ರಕ್ಷಕನೆಂತಲೂ . . . ಉನ್ನತಸ್ಥಾನಕ್ಕೆ ಏರಿಸಿದನು.”—ಅ. ಕಾ. 5:31 BSI; ಇಬ್ರಿ. 13:20.

ಕ್ರೈಸ್ತ ಸಭೆಯ ಮೇಲ್ವಿಚಾರಕ

7. ಯೇಸು ಯಾವುದರ ಮೂಲಕ ಕ್ರೈಸ್ತ ಸಭೆಯ ಮೇಲ್ವಿಚಾರಣೆ ಮಾಡುತ್ತಾನೆ?

7 ಯೇಸು ಸ್ವರ್ಗಕ್ಕೇರಿ ಹೋಗುವ ಸ್ವಲ್ಪ ಮುಂಚೆ ತನ್ನ ಶಿಷ್ಯರಿಗೆ ಹೀಗಂದನು: “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರವು ನನಗೆ ಕೊಡಲ್ಪಟ್ಟಿದೆ.” (ಮತ್ತಾ. 28:18) ಈ ಶಿಷ್ಯರನ್ನು ಕ್ರೈಸ್ತ ಸತ್ಯದಲ್ಲಿ ಬಲಪಡಿಸಲು ಯೆಹೋವನು ಯೇಸುವಿನ ಮೂಲಕ ಪವಿತ್ರಾತ್ಮವನ್ನು ಒದಗಿಸಿಕೊಟ್ಟನು. (ಯೋಹಾ. 15:26) ಯೇಸು ಕ್ರಿ.ಶ. 33ರ ಪಂಚಾಶತ್ತಮದಂದು ಆರಂಭದ ಕ್ರೈಸ್ತರ ಮೇಲೆ ಆ ಪವಿತ್ರಾತ್ಮವನ್ನು ಸುರಿಸಿದನು. (ಅ. ಕಾ. 2:33) ಪವಿತ್ರಾತ್ಮದ ಆ ಸುರಿಸುವಿಕೆಯು ಕ್ರೈಸ್ತ ಸಭೆಯ ಸ್ಥಾಪನೆಯನ್ನು ಗುರುತಿಸಿತು. ಸ್ವರ್ಗದಲ್ಲಿ ಯೆಹೋವನು ತನ್ನ ಮಗನಾದ ಯೇಸುವಿಗೆ ಭೂಮಿಯ ಇಡೀ ಸಭೆಯ ಮೇಲಣ ನಾಯಕತ್ವವನ್ನು ವಹಿಸಿಕೊಟ್ಟನು. (ಎಫೆಸ 1:22; ಕೊಲೊಸ್ಸೆ 1:13, 18 ಓದಿ.) ಯೆಹೋವನ ಪವಿತ್ರಾತ್ಮದ ಮೂಲಕ ಯೇಸು ಕೈಸ್ತ ಸಭೆಯನ್ನು ಮಾರ್ಗದರ್ಶಿಸುತ್ತಾನೆ ಹಾಗೂ “ಅವನಿಗೆ ಅಧೀನಮಾಡಲ್ಪಟ್ಟ” ದೇವದೂತರು ಕೂಡ ಅವನ ಸೇವೆಗಾಗಿ ಇದ್ದಾರೆ.—1 ಪೇತ್ರ 3:22.

8. ಒಂದನೇ ಶತಮಾನದಲ್ಲಿ ತನ್ನ ಶಿಷ್ಯರನ್ನು ಮುನ್ನಡೆಸಲು ಕ್ರಿಸ್ತನು ಯಾವ ಭೌಮಿಕ ಸಾಧನವನ್ನು ಬಳಸಿದನು? ಇಂದು ಅವನು ಯಾರನ್ನು ಬಳಸುತ್ತಿದ್ದಾನೆ?

8 ಅಷ್ಟುಮಾತ್ರವಲ್ಲದೆ ಕ್ರಿಸ್ತನು ಪವಿತ್ರಾತ್ಮದ ಮೂಲಕ “ಮನುಷ್ಯರಲ್ಲಿ ದಾನಗಳನ್ನು” ಕೊಟ್ಟು ಅವರಲ್ಲಿ ಕೆಲವರನ್ನು ಸಭೆಯಲ್ಲಿ “ಕುರುಬರು ಮತ್ತು ಬೋಧಕರನ್ನಾಗಿ” ನೇಮಿಸಿದ್ದಾನೆ. (ಎಫೆ. 4:8, 11) ಅಪೊಸ್ತಲ ಪೌಲನು ಕ್ರೈಸ್ತ ಮೇಲ್ವಿಚಾರಕರನ್ನು ಪ್ರೋತ್ಸಾಹಿಸಿದ್ದು: “[ದೇವರ] ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮವು ನಿಮ್ಮನ್ನು ಮೇಲ್ವಿಚಾರಕರನ್ನಾಗಿ ನೇಮಿಸಿರುವುದರಿಂದ ನಿಮಗೂ ಇಡೀ ಮಂದೆಗೂ ಗಮನಕೊಡಿರಿ.” (ಅ. ಕಾ. 20:28) ಕ್ರೈಸ್ತ ಸಭೆಯ ಆರಂಭದಲ್ಲಿ ಆ ಎಲ್ಲ ಮೇಲ್ವಿಚಾರಕರು ಆತ್ಮಾಭಿಷಿಕ್ತ ಪುರುಷರಾಗಿದ್ದರು. ಯೆರೂಸಲೇಮ್‌ ಸಭೆಯಲ್ಲಿದ್ದ ಅಪೊಸ್ತಲರು ಹಾಗೂ ಹಿರಿಯರು ಆಡಳಿತ ಮಂಡಲಿಯಾಗಿ ಕಾರ್ಯನಿರ್ವಹಿಸಿದರು. ಈ ಆಡಳಿತ ಮಂಡಲಿಯನ್ನೇ ಭೂಮಿಯಲ್ಲಿರುವ ತನ್ನ ಅಭಿಷಿಕ್ತ ‘ಸಹೋದರರ’ ಇಡೀ ಗುಂಪನ್ನು ನಡೆಸುವ ಸಾಧನವಾಗಿ ಯೇಸು ಬಳಸಿದನು. (ಇಬ್ರಿ. 2:11; ಅ. ಕಾ. 16:4, 5) ಈ ಅಂತ್ಯಕಾಲದಲ್ಲಿ ಕ್ರಿಸ್ತನು ‘ತನ್ನ ಎಲ್ಲ ಆಸ್ತಿಯನ್ನು’ ಅಂದರೆ ರಾಜ್ಯಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ’ ಹಾಗೂ ಅದನ್ನು ಪ್ರತಿನಿಧಿಸುವ ಆಡಳಿತ ಮಂಡಲಿಗೆ ಒಪ್ಪಿಸಿದ್ದಾನೆ. (ಮತ್ತಾ. 24:45-47) ಅಭಿಷಿಕ್ತ ಕ್ರೈಸ್ತ ಪುರುಷರಿಂದ ಕೂಡಿರುವ ನಮ್ಮೀ ದಿನದ ಆಡಳಿತ ಮಂಡಲಿಯ ನೇತೃತ್ವವನ್ನು ಅನುಸರಿಸುವಾಗ ವಾಸ್ತವದಲ್ಲಿ ನಾಯಕ ಕ್ರಿಸ್ತನನ್ನು ಅನುಸರಿಸುತ್ತೇವೆಂದು ಅಭಿಷಿಕ್ತರೂ ಅವರ ಸಂಗಡಿಗರಾದ ಬೇರೆ ಕುರಿಗಳೂ ಒಪ್ಪುತ್ತಾರೆ.

ಕ್ರಿಸ್ತನು ಪ್ರಾರಂಭಿಸಿದ ಸಾರುವ ಕೆಲಸ

9, 10. ದೇವರ ರಾಜ್ಯದ ಸುವಾರ್ತೆಯನ್ನು ಹಬ್ಬಿಸುವ ಕೆಲಸಕ್ಕೆ ಸಂಬಂಧಿಸಿದ ವಿಷಯಗಳನ್ನು ಕ್ರಿಸ್ತನು ಹೇಗೆ ನಿರ್ದೇಶಿಸಿದನು?

9 ಆರಂಭದಿಂದಲೇ ಯೇಸು ಲೋಕವ್ಯಾಪಕ ಸಾರುವ ಮತ್ತು ಬೋಧಿಸುವ ಕೆಲಸವನ್ನು ವೈಯಕ್ತಿಕವಾಗಿ ಮಾರ್ಗದರ್ಶಿಸಿದನು. ದೇವರ ರಾಜ್ಯದ ಸುವಾರ್ತೆಯು ಭೂನಿವಾಸಿಗಳಿಗೆ ಹೇಗೆ ಸಾರಲ್ಪಡಬೇಕೆಂಬ ಕ್ರಮವಿಧಾನವನ್ನು ಅವನು ಸ್ಥಾಪಿಸಿದನು. ಶುಶ್ರೂಷೆಯ ಸಮಯದಲ್ಲಿ ತನ್ನ ಶಿಷ್ಯರಿಗೆ ಯೇಸು ಈ ನಿರ್ದೇಶನ ಕೊಟ್ಟನು: “ಅನ್ಯಜನಾಂಗಗಳ ಬಳಿಗೆ ಹೋಗಬೇಡಿರಿ; ಸಮಾರ್ಯದವರ ಪಟ್ಟಣವನ್ನು ಪ್ರವೇಶಿಸಬೇಡಿರಿ; ಅದಕ್ಕೆ ಬದಲಾಗಿ ಇಸ್ರಾಯೇಲ್‌ ಮನೆತನದ ತಪ್ಪಿಹೋದ ಕುರಿಗಳ ಬಳಿಗೇ ಹೋಗಿರಿ. ನೀವು ಹೋಗುವಾಗ, ‘ಸ್ವರ್ಗದ ರಾಜ್ಯವು ಸಮೀಪಿಸಿದೆ’ ಎಂದು ಸಾರಿಹೇಳಿರಿ.” (ಮತ್ತಾ. 10:5-7) ಅಂತೆಯೇ ಶಿಷ್ಯರು ಯೆಹೂದ್ಯರಿಗೂ ಯೆಹೂದಿ ಮತಾವಲಂಬಿಗಳಿಗೂ ವಿಶೇಷವಾಗಿ ಕ್ರಿ.ಶ. 33ರ ಪಂಚಾಶತ್ತಮದ ನಂತರ ಹುರುಪಿನಿಂದ ಸಾರಿದರು.—ಅ. ಕಾ. 2:4, 5, 10, 11; 5:42; 6:7.

10 ತರುವಾಯ ಯೇಸು ಪವಿತ್ರಾತ್ಮದ ಮೂಲಕ ರಾಜ್ಯ ಸಾರುವ ಕೆಲಸವನ್ನು ಮೊದಲು ಸಮಾರ್ಯದವರಿಗೆ ಮತ್ತು ನಂತರ ಯೆಹೂದ್ಯರಲ್ಲದವರಿಗೂ ವಿಸ್ತರಿಸಿದನು. (ಅ. ಕಾ. 8:5, 6, 14-17; 10:19-22, 44, 45) ಸುವಾರ್ತೆಯನ್ನು ಅನ್ಯದೇಶಗಳ ನಡುವೆ ಹಬ್ಬಿಸುವ ಉದ್ದೇಶದಿಂದ ತಾರ್ಸದ ಸೌಲನನ್ನು ಕ್ರೈಸ್ತನಾಗುವಂತೆ ಪ್ರೇರೇಪಿಸಲು ಸ್ವತಃ ಯೇಸುವೇ ಕ್ರಿಯೆಗೈದನು. ಶಿಷ್ಯ ಅನನೀಯನಿಗೆ ಯೇಸು ಈ ನಿರ್ದೇಶನ ಕೊಟ್ಟನು: “ನೀನೆದ್ದು ನೆಟ್ಟನೆ ಬೀದಿ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದಿಂದ ಬಂದಿರುವ ಸೌಲನೆಂಬ ಮನುಷ್ಯನಿಗಾಗಿ ವಿಚಾರಿಸು. . . . ನೀನು ಹೋಗು; ಈ ಮನುಷ್ಯನು ಅನ್ಯಜನಾಂಗಗಳಿಗೂ ಅರಸರಿಗೂ ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಯಪಡಿಸಲಿಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.” (ಅ. ಕಾ. 9:3-6, 10, 11, 15) ‘ಈ ಮನುಷ್ಯನೇ’ ನಂತರ ಅಪೊಸ್ತಲ ಪೌಲನಾದನು.—1 ತಿಮೊ. 2:7.

11. ಕ್ರಿಸ್ತನು ಪವಿತ್ರಾತ್ಮದ ಮೂಲಕ ಸಾರುವ ಕೆಲಸವನ್ನು ಹೇಗೆ ವಿಸ್ತರಿಸಿದನು?

11 ರಾಜ್ಯದ ಸುವಾರ್ತೆಯನ್ನು ಅನ್ಯಜನಾಂಗಗಳಲ್ಲಿ ಹಬ್ಬಿಸುವ ಸಮಯ ಬಂದಾಗ ಯೆಹೋವನ ಪವಿತ್ರಾತ್ಮವು ಪೌಲನನ್ನು ಏಷ್ಯಾ ಮೈನರ್‌ಗೆ ಹಾಗೂ ಮುಂದೆ ಯೂರೋಪಿಗೆ ಮಿಷನೆರಿ ಪ್ರಯಾಣಗಳನ್ನು ಕೈಕೊಳ್ಳುವಂತೆ ನಡೆಸಿತು. ‘ಅಪೊಸ್ತಲರ ಕಾರ್ಯಗಳು’ ಪುಸ್ತಕದಲ್ಲಿರುವ ಲೂಕನ ವೃತ್ತಾಂತವು ಹೇಳುವುದು: “ಅವರು [ಸಿರಿಯದ ಅಂತಿಯೋಕ್ಯದಲ್ಲಿದ್ದ ಸಭೆಯ ಕ್ರೈಸ್ತ ಪ್ರವಾದಿಗಳು ಮತ್ತು ಬೋಧಕರು] ಯೆಹೋವನಿಗೆ ಬಹಿರಂಗವಾಗಿ ಸೇವೆಮಾಡುತ್ತಾ ಉಪವಾಸಮಾಡುತ್ತಾ ಇದ್ದಾಗ ಪವಿತ್ರಾತ್ಮವು ಅವರಿಗೆ, ‘ಎಲ್ಲ ಜನರಲ್ಲಿ ಬಾರ್ನಬ ಮತ್ತು ಸೌಲರನ್ನು ನನಗಾಗಿ, ನಾನು ಅವರನ್ನು ಕರೆದಿರುವ ಕೆಲಸಕ್ಕಾಗಿ ಪ್ರತ್ಯೇಕಿಸಿರಿ’ ಎಂದು ಹೇಳಿತು. ಬಳಿಕ ಅವರು ಉಪವಾಸವಿದ್ದು ಪ್ರಾರ್ಥನೆಮಾಡಿ ಅವರ ಮೇಲೆ ತಮ್ಮ ಕೈಗಳನ್ನಿಟ್ಟು ಅವರನ್ನು ಕಳುಹಿಸಿಕೊಟ್ಟರು.” (ಅ. ಕಾ. 13:2, 3) ತನ್ನ ಹೆಸರನ್ನು ಜನಾಂಗಗಳಿಗೆ ತಿಳಿಯಪಡಿಸಲಿಕ್ಕಾಗಿ ತಾನು ‘ಆರಿಸಿಕೊಂಡ ಸಾಧನವಾಗಿರಲು’ ಯೇಸು ಸ್ವತಃ ತಾರ್ಸದ ಸೌಲನನ್ನು ಕರೆದನು. ಆದಕಾರಣ ಸಾಕ್ಷಿಕಾರ್ಯ ಮಾಡಲು ಈ ಹೊಸ ಪ್ರಚೋದನೆಯು ಸಭೆಯ ನಾಯಕನಾದ ಕ್ರಿಸ್ತನಿಂದಲೇ ಬಂತು. ಯೇಸು ಈ ಕೆಲಸವನ್ನು ಪವಿತ್ರಾತ್ಮದ ಮೂಲಕ ನಿರ್ದೇಶಿಸುವುದು ಪೌಲನ ಎರಡನೇ ಮಿಷನೆರಿ ಪ್ರಯಾಣದ ಸಮಯದಲ್ಲಿ ಸ್ಪಷ್ಟವಾಯಿತು. ಆ ವೃತ್ತಾಂತವು ಹೇಳುವ ಪ್ರಕಾರ, “ಯೇಸು ಪವಿತ್ರಾತ್ಮದ ಮೂಲಕ” ಪೌಲ ಮತ್ತು ಅವನ ಸಂಗಡಿಗರಿಗೆ ಎಲ್ಲಿಗೆ, ಯಾವಾಗ ಪ್ರಯಾಣಿಸಬೇಕೆಂದು ತೀರ್ಮಾನಿಸಲು ಸಹಾಯಮಾಡಿದನು. ಅವರು ಯೂರೋಪಿಗೆ ಪ್ರಯಾಣಿಸುವಂತೆ ಒಂದು ದರ್ಶನವು ಸಹ ಅವರನ್ನು ನಿರ್ದೇಶಿಸಿತು.—ಅ. ಕಾರ್ಯಗಳು 16:6-10 ಓದಿ.

ಸಭೆಯ ಮೇಲೆ ಯೇಸುವಿನ ನಾಯಕತ್ವ

12, 13. ಪ್ರತಿಯೊಂದು ಸಭೆಯಲ್ಲಿ ನಡೆಯುತ್ತಿರುವ ವಿಷಯಗಳನ್ನು ಯೇಸು ಗಮನಕೊಟ್ಟು ನೋಡುತ್ತಾನೆಂದು ಪ್ರಕಟನೆ ಪುಸ್ತಕವು ಹೇಗೆ ತೋರಿಸುತ್ತದೆ?

12 ಪ್ರಥಮ ಶತಮಾನದ ತನ್ನ ಅಭಿಷಿಕ್ತ ಹಿಂಬಾಲಕರ ಸಭೆಗಳೊಳಗೆ ಏನು ನಡೆಯುತ್ತಿತ್ತೆಂದು ಯೇಸು ಗಮನಕೊಟ್ಟು ನೋಡುತ್ತಿದ್ದನು. ಪ್ರತಿಯೊಂದು ಸಭೆಯ ಆಧ್ಯಾತ್ಮಿಕ ಸ್ಥಿತಿಗತಿಯ ಕುರಿತು ಅವನಿಗೆ ನಿಖರವಾಗಿ ತಿಳಿದಿತ್ತು. ಇದು ಪ್ರಕಟನೆ 2 ಮತ್ತು 3ನೇ ಅಧ್ಯಾಯಗಳನ್ನು ಓದುವಾಗ ನಮಗೆ ತಿಳಿದುಬರುತ್ತದೆ. ಅವನು ಏಷ್ಯಾ ಮೈನರ್‌ನಲ್ಲಿದ್ದ ಎಲ್ಲ ಏಳು ಸಭೆಗಳ ಹೆಸರುಗಳನ್ನು ತಿಳಿಸುತ್ತಾನೆ. (ಪ್ರಕ. 1:11) ಆ ಸಭೆಗಳ ಬಗ್ಗೆ ಮಾತ್ರವಲ್ಲ ಆ ಸಮಯದಲ್ಲಿದ್ದ ಇತರ ಸಭೆಗಳ ಆಧ್ಯಾತ್ಮಿಕ ಸ್ಥಿತಿಗತಿಯ ಕುರಿತು ಸಹ ಯೇಸು ಸುಪರಿಚಿತನಾಗಿದ್ದನು ಎಂಬುದರಲ್ಲಿ ಕಿಂಚಿತ್ತೂ ಸಂಶಯವಿಲ್ಲ.—ಪ್ರಕಟನೆ 2:23 ಓದಿ.

13 ತಾಳ್ಮೆ, ಪರೀಕ್ಷೆಗಳ ಕೆಳಗೆ ನಂಬಿಗಸ್ತಿಕೆ, ಆತನ ವಾಕ್ಯಕ್ಕೆ ನಿಷ್ಠೆ ಹಾಗೂ ಧರ್ಮಭ್ರಷ್ಟರನ್ನು ಸಹಿಸಿಕೊಳ್ಳದೆ ತಿರಸ್ಕರಿಸಿದ್ದಕ್ಕಾಗಿ ಯೇಸು ಕೆಲವು ಸಭೆಗಳನ್ನು ಪ್ರಶಂಸಿಸಿದನು. (ಪ್ರಕ. 2:2, 9, 13, 19; 3:8) ಆದರೆ ಅದೇ ಸಮಯದಲ್ಲಿ ಯೇಸು ಇತರ ಅನೇಕ ಸಭೆಗಳಿಗೆ ಕಟ್ಟುನಿಟ್ಟಾದ ಸಲಹೆಯನ್ನು ಕೊಟ್ಟನು. ಏಕೆಂದರೆ ಅವನ ಮೇಲೆ ಅವರಿಗಿದ್ದ ಪ್ರೀತಿಯು ತಣ್ಣಗಾಗಿ ಹೋಗಿತ್ತು. ಅವರು ವಿಗ್ರಹಾರಾಧನೆ, ಜಾರತ್ವ, ಪಂಥೀಯ ಮನೋಭಾವವನ್ನು ಸಹಿಸಿಕೊಂಡಿದ್ದರು. (ಪ್ರಕ. 2:4, 14, 15, 20; 3:15, 16) ಈ ರೀತಿ ತಾನು ಗಂಭೀರ ಎಚ್ಚರಿಕೆ ಕೊಟ್ಟವರಿಗೆ ಸಹ ಪ್ರೀತಿಪರ ಆಧ್ಯಾತ್ಮಿಕ ಮೇಲ್ವಿಚಾರಕನಾದ ಯೇಸು ಹೇಳಿದ್ದು: “ಯಾರ ಬಗ್ಗೆ ನನಗೆ ಮಮತೆಯಿದೆಯೋ ಅವರೆಲ್ಲರನ್ನು ನಾನು ಗದರಿಸುತ್ತೇನೆ ಮತ್ತು ಶಿಸ್ತುಗೊಳಿಸುತ್ತೇನೆ. ಆದುದರಿಂದ ಹುರುಪುಳ್ಳವನಾಗಿರು ಮತ್ತು ಪಶ್ಚಾತ್ತಾಪಪಡು.” (ಪ್ರಕ. 3:19) ಯೇಸು ಸ್ವರ್ಗದಲ್ಲಿದ್ದರೂ ಭೂಮಿಯಲ್ಲಿ ತನ್ನ ಶಿಷ್ಯರ ಸಭೆಗಳನ್ನು ಪವಿತ್ರಾತ್ಮದ ಮೂಲಕ ಮಾರ್ಗದರ್ಶಿಸುತ್ತಿದ್ದನು. ಆ ಸಭೆಗಳಿಗೆ ಕೊಟ್ಟ ಸಂದೇಶಗಳ ಕೊನೆಯಲ್ಲಿ ಯೇಸು ಹೇಳಿದ್ದು: “ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.”—ಪ್ರಕ. 3:22.

14-16. (ಎ) ಯೇಸು ಹೇಗೆ ಯೆಹೋವನ ಭೂಸೇವಕರ ಧೀರ ನಾಯಕನಾಗಿದ್ದಾನೆ? (ಬಿ) ಯೇಸು “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ” ತನ್ನ ಶಿಷ್ಯರ “ಸಂಗಡ” ಇರುವುದರ ಫಲಿತಾಂಶವೇನು? (ಸಿ) ಮುಂದಿನ ಲೇಖನದಲ್ಲಿ ನಾವೇನನ್ನು ಚರ್ಚಿಸಲಿದ್ದೇವೆ?

14 ಯೇಸುವಿನ ಕುರಿತು ನಾವು ಅನೇಕ ವಿಷಯಗಳನ್ನು ಕಲಿತೆವು. ಪ್ರಧಾನ ದೇವದೂತನಾದ ಮೀಕಾಯೇಲನು (ಯೇಸು) ಇಸ್ರಾಯೇಲಿನ ಧೀರ ನಾಯಕನಾಗಿದ್ದನು. ತದನಂತರ ಯೇಸು ತನ್ನ ಆರಂಭದ ಶಿಷ್ಯರ ಧೈರ್ಯವಂತ ನಾಯಕನೂ ಪ್ರೀತಿಪರ ಕುರುಬನೂ ಆಗಿದ್ದನು. ತನ್ನ ಭೂಶುಶ್ರೂಷೆಯ ಸಮಯದಲ್ಲಿ ಸಾರುವ ಕೆಲಸದ ನೇತೃತ್ವ ವಹಿಸಿದನು. ಪುನರುತ್ಥಾನದ ನಂತರ ಅವನು ರಾಜ್ಯ ಸುವಾರ್ತೆಯ ಹಬ್ಬುವಿಕೆಯ ಸಂಪೂರ್ಣ ಮೇಲ್ವಿಚಾರಣೆ ಮಾಡಿದನು.

15 ಯೇಸು ಪವಿತ್ರಾತ್ಮದ ಮೂಲಕ ಕ್ರಮೇಣ ಈ ಸಾಕ್ಷಿಕಾರ್ಯವನ್ನು ಭೂಮಿಯ ಕಟ್ಟಕಡೆಯ ವರೆಗೆ ವಿಸ್ತರಿಸಲಿದ್ದನು. ಅವನು ಸ್ವರ್ಗಕ್ಕೆ ಏರಿಹೋಗುವ ಮೊದಲು ಶಿಷ್ಯರಿಗೆ ಹೇಳಿದ್ದು: “ಪವಿತ್ರಾತ್ಮವು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ.” (ಅ. ಕಾ. 1:8; 1 ಪೇತ್ರ 1:12 ಓದಿ.) ಅಂತೆಯೇ ಪ್ರಥಮ ಶತಮಾನದಲ್ಲಿ ಕ್ರಿಸ್ತನ ಮಾರ್ಗದರ್ಶನದ ಕೆಳಗೆ ಬಹು ವಿಸ್ತಾರವಾದ ಸಾಕ್ಷಿಯು ಕೊಡಲ್ಪಟ್ಟಿತು.—ಕೊಲೊ. 1:23.

16 ಆದರೆ ಈ ಕೆಲಸವು ಅಂತ್ಯಕಾಲದಲ್ಲೂ ಮುಂದುವರಿಯುವುದೆಂದು ಯೇಸು ಸ್ವತಃ ಸೂಚಿಸಿದನು. ಎಲ್ಲ ಜನಾಂಗಗಳ ಜನರಿಗೆ ಸಾರುವ ಮತ್ತು ಅವರನ್ನು ಶಿಷ್ಯರನ್ನಾಗಿ ಮಾಡುವ ನೇಮಕವನ್ನು ತನ್ನ ಹಿಂಬಾಲಕರಿಗೆ ಕೊಟ್ಟ ನಂತರ, “ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಯೇಸು ವಚನವಿತ್ತನು. (ಮತ್ತಾ. 28:19, 20) ಕ್ರಿಸ್ತನು 1914ರಲ್ಲಿ ರಾಜ್ಯಾಧಿಕಾರ ಪಡೆದಂದಿನಿಂದ ಎಂದಿಗಿಂತಲೂ ಹೆಚ್ಚಾಗಿ ತನ್ನ ಶಿಷ್ಯರ “ಸಂಗಡ” ಇದ್ದು ಅವರ ಕ್ರಿಯಾಶೀಲ ನಾಯಕನಾಗಿದ್ದಾನೆ. 1914ರಿಂದ ಅವನ ತೀವ್ರಗತಿಯ ಚಟುವಟಿಕೆಯನ್ನು ನಾವು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.

[ಪಾದಟಿಪ್ಪಣಿ]

ಪುನರ್ವಿಮರ್ಶೆಗಾಗಿ

• ದೇವಕುಮಾರನು ಹೇಗೆ ಇಸ್ರಾಯೇಲ್ಯರ ಕ್ರಿಯಾಶೀಲ ನಾಯಕನಾಗಿ ರುಜುವಾದನು?

• ಯಾವುದರ ಮೂಲಕ ಕ್ರಿಸ್ತನು ಭೂಮಿಯಲ್ಲಿರುವ ತನ್ನ ಸಭೆಯ ನೇತೃತ್ವ ವಹಿಸುತ್ತಾನೆ?

• ಸುವಾರ್ತೆಯ ಹಬ್ಬುವಿಕೆಯನ್ನು ಕ್ರಿಸ್ತನು ಹೇಗೆ ನಿರ್ದೇಶಿಸಿದ್ದಾನೆ?

• ಪ್ರತಿಯೊಂದು ಸಭೆಯ ಆಧ್ಯಾತ್ಮಿಕ ಸ್ಥಿತಿಗತಿಯನ್ನು ಕ್ರಿಸ್ತನು ಗಮನಕೊಟ್ಟು ನೋಡುತ್ತಾನೆಂದು ಯಾವುದು ತೋರಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರ]

‘ನಾನು ದೂತನನ್ನು ನಿಮ್ಮ ಮುಂದುಗಡೆಯಲ್ಲಿ ಕಳುಹಿಸುತ್ತೇನೆ’

[ಪುಟ 23ರಲ್ಲಿರುವ ಚಿತ್ರ]

ಹಿಂದಿನಂತೆ ಈಗಲೂ ಕ್ರಿಸ್ತನು “ಮನುಷ್ಯರಲ್ಲಿ ದಾನಗಳ” ಮೂಲಕ ತನ್ನ ಮಂದೆಯನ್ನು ಪಾಲಿಸುತ್ತಾನೆ