ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2 ಯಾರಿಗೆ ಮಾಡಬೇಕು?

2 ಯಾರಿಗೆ ಮಾಡಬೇಕು?

ನೀವು ಯಾರಿಗೆ ಪ್ರಾರ್ಥನೆ ಮಾಡಿದರೂ, ದೇವರು ಅದನ್ನ ಕೇಳುತ್ತಾನೆ ಅಂತ ಕೆಲವರ ಅನಿಸಿಕೆ. ನಿಮಗೆ ಇಷ್ಟವಾದ ಯಾವುದೇ ಧರ್ಮವನ್ನ ನಂಬಬಹುದು ಎಲ್ಲಾ ಧರ್ಮಗಳು ದೇವರ ಹತ್ತಿರ ನಡಿಸುತ್ತೆ ಅಂತ ಕೆಲವರು ಹೇಳುತ್ತಾರೆ. ಆದರೆ ಈ ಮಾತು ನಿಜನಾ?

ಹೆಚ್ಚಿನ ಜನರ ಪ್ರಾರ್ಥನೆಗಳನ್ನ ಕೇಳೋದಿಲ್ಲ ಅಂತ ಬೈಬಲ್‌ ಹೇಳುತ್ತೆ. ಹಿಂದಿನ ಕಾಲದಲ್ಲಿ, ಜನರು ಮೂರ್ತಿಗಳಿಗೆ ಅಥವಾ ವಿಗ್ರಹಗಳಿಗೆ ಪ್ರಾರ್ಥನೆ ಮಾಡುತ್ತಿದ್ದರು. ಆದರೆ ಈ ವಿಷಯ ದೇವರಿಗೆ ಒಂಚೂರು ಇಷ್ಟ ಇರಲಿಲ್ಲ. ಉದಾಹರಣೆಗೆ, ವಿಗ್ರಹಗಳ ಬಗ್ಗೆ ಕೀರ್ತನೆ 115:4-6ರಲ್ಲಿ ಹೀಗೆ ಹೇಳುತ್ತೆ, ‘ಅವಕ್ಕೆ ಕಿವಿ ಇದ್ರೂ ಕೇಳಿಸ್ಕೊಳ್ಳೋಕೆ ಆಗಲ್ಲ.’ ಹಾಗಾದ್ರೆ, ಪ್ರಾರ್ಥನೆಯನ್ನ ಕೇಳದೆ ಇರೋ ದೇವರಿಗೆ ಪ್ರಾರ್ಥನೆ ಮಾಡಿದರೆ ಏನಾದರೂ ಪ್ರಯೋಜನ ಇದೆಯಾ?

ಬೈಬಲಿನ ಒಂದು ಕಥೆಯಿಂದ ಈ ವಿಷಯವನ್ನ ನಾವು ಅರ್ಥ ಮಾಡಿಕೊಳ್ಳೋಣ. ಕೆಲವರು ಬಾಳ್‌ ಅನ್ನೋ ದೇವರನ್ನ ಆರಾಧನೆ ಮಾಡೋಕೆ ಶುರು ಮಾಡಿದರು. ಆಗ ದೇವರ ಸೇವಕನಾದ ಎಲೀಯ ಅವರಿಗೆ ‘ನೀವು ನಿಮ್ಮ ದೇವರಿಗೆ ಪ್ರಾರ್ಥಿಸಿ ನಾವು ಯೆಹೋವನಿಗೆ ಪ್ರಾರ್ಥಿಸ್ತೀವಿ, ಯಾವ ದೇವರು ಪ್ರಾರ್ಥನೆಯನ್ನ ಕೇಳಿಸಿಕೊಳ್ಳುತ್ತಾನೋ ಆತನೇ ಸತ್ಯ ದೇವರು’ ಅಂತ ಹೇಳಿದನು. ಬಾಳ್‌ ಪ್ರವಾದಿಗಳು ಇಡೀ ದಿನ ಜೋರಾಗಿ ಕೂಗಿ ಆಳುತ್ತಾ ಪ್ರಾರ್ಥಿಸಿದರು ಆದರೆ ಯಾವ ಪ್ರಯೋಜನನೂ ಆಗಲಿಲ್ಲ. ಬೈಬಲ್‌ ಹೀಗೆ ಹೇಳುತ್ತೆ, “ಯಾವ ಉತ್ತರನೂ ಬರಲಿಲ್ಲ ಮತ್ತು ಅವ್ರ ಕಡೆಗೆ ಯಾರೂ ಗಮನ ಕೊಡಲಿಲ್ಲ.” (1 ಅರಸು 18:29) ಈಗ ಎಲೀಯನ ಸರದಿ ಬಂತು. ದೇವರು ಅವನು ಮಾಡಿದ ಪ್ರಾರ್ಥನೆಯನ್ನ ಕೇಳಿದನಾ?

ಎಲೀಯ ಪ್ರಾರ್ಥನೆ ಮಾಡಿದಾಗ ಅವನು ಆರಾಧಿಸುತ್ತಿದ್ದ ದೇವರು ತಕ್ಷಣ ಉತ್ತರ ಕೊಟ್ಟನು. ಹೇಗಂದ್ರೆ ದೇವರು ಸ್ವರ್ಗದಿಂದ ಬೆಂಕಿಯನ್ನ ಕಳಿಸಿ ಎಲೀಯ ಅರ್ಪಿಸಿದ ಬಲಿಯನ್ನ ಸ್ವೀಕರಿಸಿದನು. ದೇವರು ಯಾಕೆ ಎಲೀಯ ಪ್ರಾರ್ಥನೆಯನ್ನ ಕೇಳಿದನು? ಎಲೀಯ ಮಾಡಿದ ಪ್ರಾರ್ಥನೆ ತುಂಬ ಚಿಕ್ಕದಾಗಿತ್ತು. ಇಬ್ರಿಯ ಭಾಷೆಯಲ್ಲಿ ಅವನು ಮಾಡಿದ ಪ್ರಾರ್ಥನೆಯಲ್ಲಿ ಕೇವಲ 30 ಪದಗಳು ಇತ್ತು. ಹಾಗಿದ್ರೂ ಮೂರು ಸಲ ಯೆಹೋವ ಅನ್ನೋ ದೇವರ ಹೆಸರನ್ನ ಅವನು ಬಳಸಿದನು.—1 ಅರಸು 18:36, 37.

ಬಾಳ್‌ ಅನ್ನೋದು ಕಾನಾನ್ಯರ ದೇವರ ಹೆಸರು. ಇದರ ಅರ್ಥ “ಮಾಲೀಕ” ಅಂತ. ಆಗಿನ ಕಾಲದಲ್ಲಿ ಬೇರೆ-ಬೇರೆ ಜಾಗಗಳಲ್ಲಿ ಚಿಕ್ಕ-ಚಿಕ್ಕ ದೇವರುಗಳನ್ನ ಮಾಡಿಕೊಂಡು ಅವಕ್ಕೆ ಬಾಳ್‌ ಅನ್ನೋ ಹೆಸರು ಇಡುತ್ತಿದ್ದರು. ಆದರೆ ನಮ್ಮ ದೇವರಾದ ಯೆಹೋವನ ಬಗ್ಗೆ ಹೇಳೋದಾದ್ರೆ ಇಡೀ ವಿಶ್ವಕ್ಕೆ ಆತನೊಬ್ಬನೇ ದೇವರು. ಆತನು ತನ್ನ ಜನರಿಗೆ: “ನಾನು ಯೆಹೋವ. ಇದು ನನ್ನ ಹೆಸ್ರು, ನನಗೆ ಸಿಗಬೇಕಾದ ಮಹಿಮೆಯನ್ನ ನಾನು ಬೇರೆ ಯಾರ ಜೊತೆನೂ ಹಂಚ್ಕೊಳ್ಳಲ್ಲ” ಅಂತ ಹೇಳಿದ್ದಾನೆ.—ಯೆಶಾಯ 42:8.

ಬಾಳನ ಆರಾಧಕರ ಪ್ರಾರ್ಥನೆಯನ್ನ ದೇವರು ಯಾಕೆ ಕೇಳಲಿಲ್ಲ? ಯಾಕೆ ಎಲೀಯನ ಪ್ರಾರ್ಥನೆಯನ್ನ ಮಾತ್ರ ಕೇಳಿದನು? ಯಾಕೆಂದ್ರೆ ಬಾಳನ ಆರಾಧಕರು ಅನೈತಿಕ ಕೆಲಸಗಳನ್ನ ಮಾಡುತ್ತಿದ್ದರು. ಮನುಷ್ಯರನ್ನ ಬಲಿಗಳಾಗಿ ಕೊಡುತ್ತಿದ್ದರು. ತನ್ನ ಜನರು ಯಾವಾಗಲೂ ಒಳ್ಳೇ ಕೆಲಸಗಳನ್ನ ಮಾಡಬೇಕು ಅನ್ನೋದು ಯೆಹೋವ ದೇವರ ಆಸೆಯಾಗಿತ್ತು. ಆಗ ಅವರ ಆರಾಧನೆಯನ್ನ ಯೆಹೋವನು ಸ್ವೀಕರಿಸುತ್ತಿದ್ದನು. ನಾವು ಸಹ ದೇವರಾದ ಯೆಹೋವನ ಹೆಸರೆತ್ತಿ ಪ್ರಾರ್ಥನೆ ಮಾಡಿದಾಗ ಆತನು ನಮ್ಮ ಪ್ರಾರ್ಥನೆಯನ್ನ ಕೇಳುತ್ತಾನೆ. ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆಯನ್ನ ನೋಡೋಣ. ನೀವು ನಿಮ್ಮ ಫ್ರೆಂಡ್‌ಗೆ ಒಂದು ಲೆಟರ್‌ ಬರೀಬೇಕು ಅಂತ ಇಷ್ಟಪಡ್ತೀರ. ಅದನ್ನ ಬರೆದು ಬೇರೆಯವರ ಅಡ್ರೆಸ್‌ಗೆ ಕಳುಹಿಸಿದ್ರೆ ನಿಮ್ಮ ಫ್ರೆಂಡ್‌ಗೆ ಆ ಲೆಟರ್‌ ಸಿಗುತ್ತಾ? ಖಂಡಿತ ಇಲ್ಲ!

ಎಲೀಯ ಮತ್ತು ಬಾಳನ ಆರಾಧಕರ ಕಥೆಯಿಂದ ನಮಗೇನು ಗೊತ್ತಾಗುತ್ತೆ ಅಂದರೆ, ಸತ್ಯ ದೇವರಿಗೆ ಪ್ರಾರ್ಥನೆ ಮಾಡಿದರೆ ಮಾತ್ರ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗುತ್ತೆ.

ಯೆಹೋವನು ಇಡೀ ವಿಶ್ವದ ಸೃಷ್ಟಿ ಕರ್ತನಾಗಿರೋದ್ರಿಂದ ಆತನಿಗೇ ಪ್ರಾರ್ಥನೆ ಮಾಡೋದು ಸರಿ. a ಯೆಶಾಯ ಅನ್ನೋ ದೇವರ ಸೇವಕ ಪ್ರಾರ್ಥನೆಯಲ್ಲಿ, ‘ಯೆಹೋವನೇ ನೀನು ನಮ್ಮ ತಂದೆ’ ಅಂತ ಹೇಳಿದ್ದಾನೆ. (ಯೆಶಾಯ 63:16) ಯೇಸು ಕೂಡ ಯೆಹೋವನನ್ನ ತಂದೆ ಅಂತ ಕರೆದನು. ತನ್ನ ಶಿಷ್ಯರ ಜೊತೆ ಮಾತಾಡುತ್ತಾ ಯೇಸು ಹೇಳಿದ್ದು: “ನನ್ನ ತಂದೆ ನಿಮ್ಮ ತಂದೆ, ನನ್ನ ದೇವರು ನಿಮ್ಮ ದೇವರು ಆಗಿರುವವನ ಹತ್ರ ಹೋಗ್ತಾ ಇದ್ದೀನಿ.” ತಂದೆ ಅಂತ ಹೇಳಿದಾಗ ಯೇಸು ಯೆಹೋವನ ಬಗ್ಗೆ ಮಾತಾಡುತ್ತಿದ್ದನು. (ಯೋಹಾನ 20:17) ಯೇಸು ಯಾವಾಗಲೂ ಯೆಹೋವನಿಗೆ ಪ್ರಾರ್ಥಿಸುತ್ತಿದ್ದನು ಮತ್ತು ತನ್ನ ಶಿಷ್ಯರು ಸಹ ಯೆಹೋವನಿಗೇ ಪ್ರಾರ್ಥಿಸಬೇಕು ಅಂತನೂ ಹೇಳಿಕೊಟ್ಟನು.—ಮತ್ತಾಯ 6:9.

ನಾವು ಯೇಸುವಿಗೆ, ಮರಿಯಳಿಗೆ, ಸಂತರಿಗೆ ಅಥವಾ ದೇವದೂತರಿಗೆ ಪ್ರಾರ್ಥನೆ ಮಾಡಬೇಕಾ? ಇಲ್ಲ ನಾವು ಯೆಹೋವನನ್ನ ಮಾತ್ರ ಆರಾಧಿಸಬೇಕು. ಯಾಕಂದ್ರೆ ಪ್ರಾರ್ಥನೆ ಅನ್ನೋದು ಆರಾಧನೆಯ ಭಾಗ ಆಗಿದೆ. ಅಷ್ಟೇ ಅಲ್ಲ, ಯೆಹೋವನನ್ನ ಮಾತ್ರ ಆರಾಧಿಸಬೇಕು ಅಂತ ಬೈಬಲ್‌ ಹೇಳುತ್ತೆ. (ವಿಮೋಚನಕಾಂಡ 20:5) ಯೆಹೋವನನ್ನ ‘ಪ್ರಾರ್ಥನೆಯನ್ನ ಕೇಳುವವನು’ ಅಂತನೂ ಬೈಬಲ್‌ ಹೇಳುತ್ತೆ. (ಕೀರ್ತನೆ 65:2) ಯೆಹೋವನು ಬೇರೆಯವರಿಗೆ ಅನೇಕ ಜವಾಬ್ದಾರಿಗಳನ್ನ ಕೊಟ್ಟಿರೋದಾದ್ರೂ ಪ್ರಾರ್ಥನೆಗಳನ್ನ ಕೇಳುವ ಜವಾಬ್ದಾರಿಯನ್ನ ಮಾತ್ರ ಯಾರಿಗೂ ಕೊಟ್ಟಿಲ್ಲ. ನಮ್ಮ ಪ್ರಾರ್ಥನೆಯನ್ನ ಕೇಳೋದು ಆತನು ಮಾತ್ರ.

ದೇವರು ನಿಮ್ಮ ಪ್ರಾರ್ಥನೆಯನ್ನ ಕೇಳಬೇಕು ಅಂತ ನೀವು ಬಯಸುವುದಾದರೆ ಬೈಬಲ್‌ನಲ್ಲಿರುವ ಈ ಮಾತನ್ನ ಮನಸ್ಸಲ್ಲಿಡಿ: “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.” (ಅಪೊಸ್ತಲರ ಕಾರ್ಯ 2:21) ಹಾಗಂತ ದೇವರು ಎಲ್ಲರ ಪ್ರಾರ್ಥನೆಗಳನ್ನ ಕೇಳ್ತಾನಾ? ನಿಮ್ಮ ಪ್ರಾರ್ಥನೆಯನ್ನ ಕೇಳಬೇಕು ಅಂತ ನೀವು ಬಯಸೋದಾದ್ರೆ ಇನ್ನು ಯಾವ ವಿಷಯಗಳನ್ನ ಮನಸ್ಸಲ್ಲಿಡಬೇಕು?

a ಕೆಲವು ಧರ್ಮಗುರುಗಳು ದೇವರ ಹೆಸರನ್ನ, ಪ್ರಾರ್ಥನೆ ಮಾಡುವಾಗ ಆಗಲಿ ಅಥವಾ ಬೇರೆ ಸಮಯದಲ್ಲಿ ಆಗಲಿ ಬಳಸಬಾರದು ಅಂತ ಕಲಿಸುತ್ತಾರೆ. ಆದರೆ 7,000ಕ್ಕಿಂತ ಹೆಚ್ಚು ಬಾರಿ ದೇವರು ತನ್ನ ಹೆಸರನ್ನ ಬೈಬಲ್‌ನಲ್ಲಿ ಬರೆಸಿದ್ದಾನೆ. ದೇವರ ಹೆಸರನ್ನ ಬಳಸಿರೋ ಅನೇಕ ಪ್ರಾರ್ಥನೆಗಳು ಮತ್ತು ಕೀರ್ತನೆಗಳು ಬೈಬಲ್‌ನಲ್ಲಿವೆ.