ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

3 ಹೇಗೆ ಮಾಡಬೇಕು?

3 ಹೇಗೆ ಮಾಡಬೇಕು?

ಅನೇಕ ಧರ್ಮಗಳಲ್ಲಿ ನಾವು ಮಂಡಿಯೂರಿ, ನಿಂತುಕೊಂಡು ಅಥವಾ ಕೂತುಕೊಂಡು ಪ್ರಾರ್ಥನೆ ಮಾಡಬೇಕು ಅನ್ನೋದಕ್ಕೆ ಜಾಸ್ತಿ ಗಮನಕೊಡ್ತಾರೆ. ಪ್ರಾರ್ಥನೆ ಮಾಡುವಾಗ ನಾವು ವಿಶೇಷ ಪದಗಳನ್ನ ಬಳಸಬೇಕು ಅಂತನೂ ಹೇಳ್ತಾರೆ. ಆದರೆ “ನಾವು ಹೇಗೆ ಪ್ರಾರ್ಥನೆ ಮಾಡಬೇಕು” ಅನ್ನೋದ್ರ ಬಗ್ಗೆ ಬೈಬಲ್‌ನಲ್ಲಿ ಏನಿದೆ ಅಂತ ನೋಡೋಣ?

ದೇವರ ಸೇವಕರು ಬೇರೆ-ಬೇರೆ ವಿಧಗಳಲ್ಲಿ ಪ್ರಾರ್ಥನೆ ಮಾಡಿದ್ರ ಬಗ್ಗೆ ಬೈಬಲ್‌ನಲ್ಲಿದೆ. ಕೆಲವರು ಮನಸ್ಸಲ್ಲಿ ಪ್ರಾರ್ಥನೆ ಮಾಡಿದ್ರು, ಇನ್ನು ಕೆಲವರು ಜನರ ಮುಂದೆ ಜೋರಾಗಿ ಪ್ರಾರ್ಥನೆ ಮಾಡಿದ್ರು. ಇನ್ನು ಕೆಲವರು ಆಕಾಶದ ಕಡೆಗೆ ನೋಡುತ್ತಾ ಪ್ರಾರ್ಥನೆ ಮಾಡಿದ್ರು, ಇನ್ನೂ ಕೆಲವರು ತಲೆಬಗ್ಗಿಸಿ ಪ್ರಾರ್ಥನೆ ಮಾಡಿದ್ರು. ಆದರೆ ಇವರು ಯಾರೂ ಒಂದು ಫೋಟೋ ಮುಂದೆ ಆಗಲಿ, ಜಪಮಾಲೆಯನ್ನ ಬಳಸಿಕೊಂಡು ಆಗಲಿ ಅಥವಾ ಒಂದು ಪುಸ್ತಕವನ್ನ ಓದ್ತಾ ಆಗಲಿ ಪ್ರಾರ್ಥನೆ ಮಾಡಿಲ್ಲ. ಈ ದೇವರ ಸೇವಕರು ಮನಸ್ಸಲ್ಲಿ ಇರೋದನ್ನೆಲ್ಲ ತಮ್ಮ ಪ್ರಾರ್ಥನೆಯಲ್ಲಿ ದೇವರ ಹತ್ತಿರ ಹೇಳಿಕೊಂಡರು. ಅವರ ಪ್ರಾರ್ಥನೆಯನ್ನ ದೇವರು ಕೇಳಿದನು ಅಂತ ನಾವು ಹೇಗೆ ಹೇಳಬಹುದು?

ಈ ಮುಂಚೆ ನಾವು ನೋಡಿರೋ ಹಾಗೆ ದೇವರ ಸೇವಕರೆಲ್ಲರು ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿರೋದ್ರಿಂದ ಆತನು ಅವರು ಪ್ರಾರ್ಥನೆಗಳನ್ನ ಕೇಳಿದನು. ದೇವರು ಅವರ ಪ್ರಾರ್ಥನೆಗಳನ್ನ ಕೇಳಿದನು ಅನ್ನೋದಕ್ಕೆ 1 ಯೋಹಾನ 5:14 ರಲ್ಲಿ ಇನ್ನೊಂದು ಕಾರಣ ಇದೆ. ಅಲ್ಲಿ ಹೀಗಿದೆ: “ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ ಅನ್ನೋ ನಂಬಿಕೆ ನಮಗಿದೆ.” ಇದರಿಂದ ನಮಗೇನು ಗೊತ್ತಾಗುತ್ತೆ ಅಂದರೆ ನಮ್ಮ ಪ್ರಾರ್ಥನೆ ದೇವರ ಇಷ್ಟದ ಪ್ರಕಾರ ಇರಬೇಕು. ಇದರ ಅರ್ಥವೇನು?

ದೇವರ ಇಷ್ಟದ ಪ್ರಕಾರ ನಾವು ಪ್ರಾರ್ಥನೆ ಮಾಡಬೇಕಂದ್ರೆ ಆತನ ಇಷ್ಟ ಏನು ಅಂತ ಮೊದಲು ಅರ್ಥ ಮಾಡಿಕೊಳ್ಳಬೇಕು. ನಾವು ಬೈಬಲ್‌ ಓದಿದಾಗ, ಬೈಬಲ್‌ ಅಧ್ಯಯನ ಮಾಡಿದಾಗ ದೇವರ ಇಷ್ಟ ಏನು ಅಂತ ನಮಗೆ ಗೊತ್ತಾಗುತ್ತೆ. ಹಾಗಂತ ನಾವು ಬೈಬಲ್‌ನ ವಿದ್ವಾಂಸರೇ ಆಗಬೇಕಂತ ದೇವರು ಬಯಸಲ್ಲ. ಆತನ ಇಷ್ಟವನ್ನ ಅರ್ಥ ಮಾಡಿಕೊಂಡು ಅದರ ಪ್ರಕಾರ ಜೀವನ ಮಾಡಿದರೆ ದೇವರಿಗೆ ತುಂಬ ಖುಷಿ ಆಗುತ್ತೆ. (ಮತ್ತಾಯ 7:21-23) ಕಲಿತ ವಿಷಯದ ಪ್ರಕಾರ ನಮ್ಮ ಪ್ರಾರ್ಥನೆ ಇದ್ರೆ ದೇವರು ಅದನ್ನ ಖಂಡಿತ ಕೇಳುತ್ತಾನೆ.

ನಮ್ಮ ಪ್ರಾರ್ಥನೆ ದೇವರ ಇಷ್ಟದ ಪ್ರಕಾರ ಇದ್ದು, ನಂಬಿಕೆ ತೋರಿಸಿ, ಯೇಸುವಿನ ಹೆಸರಿನ ಮೂಲಕ ದೇವರಿಗೆ ಪ್ರಾರ್ಥನೆ ಮಾಡಿದಾಗ ಆತನು ಅದನ್ನ ಖಂಡಿತ ಕೇಳುತ್ತಾನೆ.

ಯೆಹೋವ ದೇವರ ಬಗ್ಗೆ ಮತ್ತು ಆತನ ಇಷ್ಟದ ಬಗ್ಗೆ ನಾವು ಕಲಿಯುತ್ತಾ ಹೋದಹಾಗೆ ನಮ್ಮಲ್ಲಿ ನಂಬಿಕೆನೂ ಬೆಳೆಯುತ್ತೆ. ಈ ಗುಣ ದೇವರು ನಮ್ಮ ಪ್ರಾರ್ಥನೆಯನ್ನ ಕೇಳ್ತಾನೆ ಅನ್ನೋದಕ್ಕೆ ತುಂಬ ಪ್ರಾಮುಖ್ಯ. ಯೇಸು: “ನಂಬಿಕೆಯಿಂದ ಏನೇ ಬೇಡ್ಕೊಂಡ್ರೂ ಅದೆಲ್ಲ ಸಿಗುತ್ತೆ” ಅಂದನು. (ಮತ್ತಾಯ 21:22) ನಂಬಿಕೆ ಅಂದರೆ ಕಣ್ಣ ಮುಚ್ಚಿಕೊಂಡು ಎಲ್ಲಾ ವಿಷಯಗಳನ್ನ ನಂಬೋದು ಅಂತಲ್ಲ. ನಾವು ನಂಬುವಂಥ ವಿಷಯಗಳು ಕಣ್ಣಿಗೆ ಕಾಣದೆ ಇದ್ರೂ ಯಾಕೆ ನಂಬುತ್ತೀವಿ ಅನ್ನೋದರ ಬಗ್ಗೆ ನಮ್ಮ ಹತ್ತಿರ ಬಲವಾದ ಆಧಾರ ಇರಬೇಕು. (ಇಬ್ರಿಯ 11:1) ಯೆಹೋವ ದೇವರನ್ನ ನೋಡೋಕಾಗಲ್ಲ. ಆದರೆ ದೇವರು ಇದ್ದಾನೆ, ಆತನನ್ನ ನಂಬುವವರ ಪ್ರಾರ್ಥನೆಗಳನ್ನ ಆತನು ಕೇಳುತ್ತಾನೆ ಅನ್ನೋದಕ್ಕೆ ಬೈಬಲ್‌ನಲ್ಲಿ ಅನೇಕ ಪುರಾವೆಗಳಿವೆ. ನಮ್ಮ ನಂಬಿಕೆಯನ್ನ ಹೆಚ್ಚಿಸುವಂತೆ ನಾವು ದೇವರ ಹತ್ತಿರ ಬೇಡಿಕೊಂಡರೆ ಆತನು ಅದಕ್ಕೂ ಉತ್ತರ ಕೊಡುತ್ತಾನೆ.—ಲೂಕ 17:5; ಯಾಕೋಬ 1:17.

ಪ್ರಾರ್ಥನೆ ಮಾಡುವಾಗ ನಾವು ಇನ್ನೊಂದು ವಿಷಯವನ್ನ ನೆನಪಿನಲ್ಲಿಡಬೇಕು. ಅದರ ಬಗ್ಗೆ ಯೇಸು ಹೀಗಂದನು: “ನನ್ನ ಮೂಲಕ ಅಲ್ಲದೆ ಯಾರೂ ತಂದೆ ಹತ್ರ ಬರೋಕಾಗಲ್ಲ.” (ಯೋಹಾನ 14:6) ಯೆಹೋವ ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಬೇಕು ಅಂತ ನಾವು ಆಸೆ ಪಡುವುದಾದರೆ ನಮ್ಮ ಪ್ರಾರ್ಥನೆಗಳನ್ನ ಯೇಸುವಿನ ಮೂಲಕ ಮಾಡಬೇಕು. ಹೇಗೆ ಮಾಡಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಯೋಹಾನ 14:13; 15:16) ಇದರ ಅರ್ಥ ಅವರು ಯೇಸುವಿಗೆ ಪ್ರಾರ್ಥನೆ ಮಾಡಬೇಕು ಅಂತ ಆಗಿರಲಿಲ್ಲ. ಅವರು ಯೆಹೋವನಿಗೇ ಪ್ರಾರ್ಥಿಸಬೇಕಿತ್ತು. ಆದರೆ ಯೇಸುವಿನ ಮೂಲಕ ಪ್ರಾರ್ಥನೆ ಮಾಡಬೇಕಿತ್ತು. ಯೆಹೋವನ ಜೊತೆ ಮಾತಾಡೋ ಅವಕಾಶವನ್ನ ಯೇಸುನೇ ಮಾಡಿಕೊಟ್ಟಿರೋದು ಅನ್ನೋದನ್ನ ಅವರು ಮರಿಬಾರ್ದಿತ್ತು.

ಒಂದು ಸಲ ಯೇಸುವಿನ ಶಿಷ್ಯರು: “ಸ್ವಾಮಿ, ನಮಗೂ ಪ್ರಾರ್ಥನೆ ಮಾಡೋದನ್ನ ಕಲಿಸು” ಅಂತ ಕೇಳಿದರು. (ಲೂಕ 11:1) ಅಂದರೆ ನಾವು ಯಾರಿಗೆ ಪ್ರಾರ್ಥನೆ ಮಾಡಬೇಕು, ಯಾವ ರೀತಿ ಮಾಡಬೇಕು ಅಂತ ಅವರು ಕೇಳ್ತಿರಲಿಲ್ಲ. ಬದಲಿಗೆ ಪ್ರಾರ್ಥನೆಯಲ್ಲಿ ಏನು ಹೇಳಬೇಕು ಅಂತ ಯೇಸುವಿನ ಹತ್ತಿರ ಕೇಳಿದರು.