ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

4 ಯಾವುದಕ್ಕಾಗಿ ಪ್ರಾರ್ಥಿಸಬೇಕು?

4 ಯಾವುದಕ್ಕಾಗಿ ಪ್ರಾರ್ಥಿಸಬೇಕು?

ಯೇಸು ಭೂಮಿ ಮೇಲೆ ಇದ್ದಾಗ ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡೋದನ್ನ ಕಲಿಸಿದನು. ಜನರು ಇದನ್ನ ಕರ್ತನ ಪ್ರಾರ್ಥನೆ ಅಂತನೂ ಕರಿತಾರೆ. ತುಂಬ ಜನರಿಗೆ ಈ ಪ್ರಾರ್ಥನೆ ಬಾಯಿಪಾಠ ಆಗಿದೆ. ಜನರು ಈ ಪ್ರಾರ್ಥನೆಯನ್ನ ಒಂದು ಪದನೂ ಬಿಡದೆ ಪ್ರತಿ ದಿನ ಹೇಳ್ತಾನೇ ಇರುತ್ತಾರೆ. ನಾವು ಪ್ರಾರ್ಥನೆಯನ್ನ ಬಾಯಿಪಾಠ ಮಾಡಬೇಕು, ಹೇಳಿದ್ದನ್ನ ಹೇಳ್ತಾ ಇರಬೇಕು ಅನ್ನೋದು ಯೇಸುವಿನ ಉದ್ದೇಶ ಆಗಿರಲಿಲ್ಲ. ಇದು ನಮಗೆ ಹೇಗೆ ಗೊತ್ತು?

ಯೇಸು ಈ ಪ್ರಾರ್ಥನೆಯನ್ನ ಕಲಿಸೋಕೆ ಸ್ವಲ್ಪ ಮುಂಚೆ, ಹೀಗೆ ಹೇಳಿದನು: “ನೀನು ಪ್ರಾರ್ಥನೆ ಮಾಡುವಾಗ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಡ.” (ಮತ್ತಾಯ 6:7) ಇದರಿಂದ ನಮಗೇನು ಗೊತ್ತಾಗುತ್ತೆ ಅಂದರೆ ಯೇಸು ಕಲಿಸಿದ ಈ ಪ್ರಾರ್ಥನೆಯನ್ನ ಬಾಯಿಪಾಠ ಮಾಡಬೇಕು, ಹೇಳಿದ್ದನ್ನ ಹೇಳ್ತಾನೇ ಇರಬೇಕು ಅನ್ನೋದು ಆತನ ಉದ್ದೇಶ ಆಗಿರಲಿಲ್ಲ. ಬದಲಿಗೆ ಕೆಲವು ಪ್ರಾಮುಖ್ಯ ವಿಷಯಗಳಿಗೆ ನಾವು ಪ್ರಾರ್ಥನೆ ಮಾಡಬೇಕು ಅಂತ ಅವನು ಕಲಿಸಿಕೊಟ್ಟನು. ಆ ವಿಷಯಗಳನ್ನ ನಾವು ಮತ್ತಾಯ 6:9-13 ರಲ್ಲಿ ನೋಡಬಹುದು. ಬನ್ನಿ ಅದರ ಬಗ್ಗೆ ತಿಳಿದುಕೊಳ್ಳೋಣ.

“ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.”

ತಂದೆಯಾದ ಯೆಹೋವನಿಗೆ ಮಾತ್ರ ಪ್ರಾರ್ಥಿಸಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿಕೊಟ್ಟನು. ಆದರೆ ದೇವರ ಹೆಸರು ಮತ್ತು ಅದನ್ನ ಪವಿತ್ರೀಕರಿಸೋದು ಯಾಕೆ ಪ್ರಾಮುಖ್ಯ ಅಂತ ನಿಮಗೆ ಅನಿಸುತ್ತೆ?

ಮೊದಲ ಸ್ತ್ರೀ-ಪುರುಷ ಸೃಷ್ಟಿ ಆದಾಗಿಂದ ದೇವರ ವಿರೋಧಿಯಾದ ಸೈತಾನನು ಆತನ ಹೆಸರಿನ ಮೇಲೆ ಮಸಿ ಬಳಿತಾನೇ ಇದ್ದಾನೆ. ದೇವರು ಒಬ್ಬ ಸುಳ್ಳುಗಾರ, ಸ್ವಾರ್ಥಿ, ಜನರನ್ನ ಚೆನ್ನಾಗಿ ನೋಡಿಕೊಳ್ತಾ ಇಲ್ಲ ಅನ್ನೋ ಆರೋಪವನ್ನ ಸೈತಾನ ಯೆಹೋವ ದೇವರ ಮೇಲೆ ಹಾಕಿದ್ದಾನೆ. (ಆದಿಕಾಂಡ 3:1-6) ಸೈತಾನನು ಹಾಕಿದ ಈ ಆರೋಪವನ್ನ ತುಂಬ ಜನ ನಂಬುತ್ತಾರೆ. ದೇವರು ಕ್ರೂರಿಯಾಗಿದ್ದಾನೆ, ಜನರ ಮೇಲೆ ಒಂಚೂರೂ ಪ್ರೀತಿ ಇಲ್ಲ ಅಂತ ಅಂದುಕೊಂಡಿದ್ದಾರೆ. ಇನ್ನೂ ಕೆಲವು ಜನರು ದೇವರೇ ಇಲ್ಲ ಅಂತ ಹೇಳುತ್ತಾರೆ. ಇನ್ನು ಕೆಲವರು ದೇವರ ಹೆಸರನ್ನ ಬೈಬಲ್‌ನಿಂದ ತೆಗೆದುಹಾಕಿದ್ದಾರೆ ಮತ್ತು ಆತನ ಹೆಸರನ್ನ ಬಳಸೋ ಅಗತ್ಯ ಇಲ್ಲ ಅಂತನೂ ಹೇಳ್ತಾರೆ. ಜನರು ದೇವರ ಹೆಸರಿಗೆ ಕಳಂಕವನ್ನ ತಂದಿದ್ದಾರೆ.

ಆದರೆ ತನ್ನ ಹೆಸರನ್ನ ಪವಿತ್ರ ಮಾಡ್ತೀನಿ ಅಂತ ಯೆಹೋವ ದೇವರು ಬೈಬಲ್‌ನಲ್ಲಿ ಹೇಳಿದ್ದಾರೆ. (ಯೆಹೆಜ್ಕೇಲ 39:7) ಅದರ ಜೊತೆಗೆ, ಮನುಷ್ಯರಿಗಿರೋ ಎಲ್ಲಾ ಕಷ್ಟಗಳನ್ನ ದೇವರು ತೆಗೆದುಹಾಕ್ತಾನೆ. ಇದನ್ನ ಆತನು ಹೇಗೆ ಮಾಡುತ್ತಾನೆ? ಯೇಸು ಕಲಿಸಿದ ಪ್ರಾರ್ಥನೆಯಿಂದ ಇದಕ್ಕೆ ಉತ್ತರ ತಿಳಿದುಕೊಳ್ಳೋಣ.

“ನಿನ್ನ ಆಳ್ವಿಕೆ ಬರಲಿ.”

ಇವತ್ತು ಅನೇಕ ಧರ್ಮಗುರುಗಳಿಗೆ ದೇವರ ಆಳ್ವಿಕೆ ಏನಂತನೇ ಗೊತ್ತಿಲ್ಲ. ಇದರ ಬಗ್ಗೆ ಅವರಿಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಆದರೆ ಯೇಸುವಿನ ಶಿಷ್ಯರಿಗೆ ದೇವರ ರಾಜ್ಯ ಅಂದರೆ ದೇವರ ಸರ್ಕಾರ ಅಂತ ಗೊತ್ತಿತ್ತು. ಅನೇಕ ಪ್ರವಾದಿಗಳು ಹೇಳಿದ ತರ ಈ ರಾಜ್ಯದ ರಾಜನು ಮೆಸ್ಸೀಯನಾಗಿದ್ದಾನೆ ಮತ್ತು ಇವನನ್ನ ದೇವರೇ ಆರಿಸಿದ್ದಾನೆ. (ಯೆಶಾಯ 9:6, 7; ದಾನಿಯೇಲ 2:44) ದೇವರ ರಾಜ್ಯ ಸೈತಾನನ ಎಲ್ಲಾ ಕೆಟ್ಟ ಕೆಲಸಗಳನ್ನ ಬಯಲು ಮಾಡುತ್ತೆ. ಅದರ ಜೊತೆಗೆ ದೇವರ ಹೆಸರಿಗೆ ಬಂದ ಕಳಂಕವನ್ನ ತೆಗೆದುಹಾಕುತ್ತೆ ಮತ್ತು ಸೈತಾನನ್ನು ಕೂಡ ನಾಶ ಮಾಡುತ್ತೆ. ದೇವರ ರಾಜ್ಯ ಬಂದಾಗ ಯಾವುದೇ ಕೆಟ್ಟತನ, ಯುದ್ಧಗಳು, ಯಾರಿಗೂ ಕಾಯಿಲೆಗಳು ಬರಲ್ಲ. ತಿನ್ನೋಕೆ-ಉಣ್ಣೋಕೆ ಏನೂ ಕಮ್ಮಿ ಇರಲ್ಲ. ಸಾವು ಕೂಡ ಇರಲ್ಲ. (ಕೀರ್ತನೆ 46:9; 72:12-16; ಯೆಶಾಯ 25:8; 33:24) ದೇವರ ರಾಜ್ಯ ಬರಲಿ ಅಂತ ನೀವು ಪ್ರಾರ್ಥಿಸ್ತಾ ಇರುವಾಗ ದೇವರು ಕೊಟ್ಟ ಈ ಎಲ್ಲಾ ಮಾತುಗಳು ನೆರವೇರಲಿ ಅಂತ ಬಯಸುತ್ತೀರ.

“ನಿನ್ನ ಇಷ್ಟ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ.”

ದೇವರ ಇಷ್ಟ ಯಾವ ರೀತಿಯಲ್ಲಿ ಸ್ವರ್ಗದಲ್ಲಿ ನೆರವೇರಿದೆಯೋ ಅದೇ ರೀತಿ ಭೂಮಿಯಲ್ಲೂ ನೆರವೇರುತ್ತೆ ಅಂತ ಯೇಸುವಿನ ಮಾತುಗಳಿಂದ ಗೊತ್ತಾಗುತ್ತೆ. ನಾವು ಇದನ್ನ ಹೇಗೆ ಹೇಳಬಹುದು? ಯೇಸು ಸೈತಾನನ ಮತ್ತು ಅವನ ಕೆಟ್ಟದೂತರನ್ನ ಸ್ವರ್ಗದಿಂದ ಭೂಮಿಗೆ ತಳ್ಳಿಬಿಟ್ಟಿದ್ದಾನೆ. ಆವಾಗಿಂದ ಸ್ವರ್ಗದಲ್ಲಿ ದೇವರ ಇಷ್ಟ ನೆರವೇರುತ್ತಾ ಇದೆ. ದೇವರ ಇಷ್ಟ ಈ ಭೂಮಿ ಮೇಲೆನೂ ಖಂಡಿತ ನೆರವೇರುತ್ತೆ ಅಂತ ನಮಗೆ ಇದರಿಂದ ಗೊತ್ತಾಗುತ್ತೆ. (ಪ್ರಕಟನೆ 12:9-12) ಯೇಸು ಮಾಡಿದ ಈ ಮೂರು ಬೇಡಿಕೆಗಳಿಂದ ನಮ್ಮ ಜೀವನದಲ್ಲಿ ಯಾವುದು ತುಂಬ ಮುಖ್ಯ ಅಂತ ಗೊತ್ತಾಗುತ್ತೆ. ಅದು ನಮ್ಮ ಇಷ್ಟ ಇಲ್ಲ ದೇವರ ಇಷ್ಟ ನೆರವೇರೋದೇ ತುಂಬ ಮುಖ್ಯ. ದೇವರ ಇಷ್ಟ ನೆರವೇರಿದ್ರೆ ಮಾತ್ರ ನಮ್ಮೆಲ್ಲರಿಗೆ ಒಳ್ಳೇದಾಗೋದು. ಅದಕ್ಕೆ ಯೇಸು: “ನನ್ನ ಇಷ್ಟ ಅಲ್ಲ, ನಿನ್ನ ಇಷ್ಟಾನೇ ಆಗಲಿ” ಅಂತ ಹೇಳಿದ.—ಲೂಕ 22:42.

“ಇವತ್ತಿಗೆ ಬೇಕಾಗಿರೋ ಊಟನ ದಯವಿಟ್ಟು ಕೊಡು.”

ನಮ್ಮ ಅಗತ್ಯಗಳಿಗೋಸ್ಕರನೂ ನಾವು ಪ್ರಾರ್ಥನೆ ಮಾಡಬಹುದು ಅಂತ ಯೇಸುವಿನ ಈ ಮಾತುಗಳಿಂದ ಗೊತ್ತಾಗುತ್ತೆ. ನಾವು ಈ ರೀತಿ ಪ್ರಾರ್ಥನೆ ಮಾಡೋದ್ರಿಂದ ಯೆಹೋವನೇ ನಮ್ಮ ಎಲ್ಲಾ ಅಗತ್ಯಗಳನ್ನ ಪೂರೈಸುತ್ತಾನೆ ಅಂತ ತೋರಿಸಿಕೊಡ್ತೀವಿ. ಯಾಕಂದ್ರೆ “ಆತನೇ ಎಲ್ರಿಗೂ ಜೀವವನ್ನ, ಉಸಿರನ್ನ, ಎಲ್ಲವನ್ನೂ ಕೊಡ್ತಾನೆ.” (ಅಪೊಸ್ತಲರ ಕಾರ್ಯ 17:25) ಯಾವ ತರ ಅಪ್ಪಅಮ್ಮ ತಮ್ಮ ಮಕ್ಕಳ ಅಗತ್ಯಗಳನ್ನ ಪ್ರೀತಿಯಿಂದ ಪೂರೈಸುತ್ತಾರೋ, ಅದೇ ತರ ಯೆಹೋವ ತನ್ನ ಸೇವಕರ ಅಗತ್ಯಗಳನ್ನ ಪೂರೈಸುತ್ತಾನೆ. ಯಾವ ರೀತಿ ಅಪ್ಪಅಮ್ಮ ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸಲ್ಲವೋ, ಅದೇ ತರ ನಮಗೆ ಹಾನಿ ಆಗೋ ವಿಷಯ ಅಥವಾ ಪ್ರಯೋಜನ ಇಲ್ಲದೇ ಇರೋ ವಿಷಯಗಳನ್ನ ಯೆಹೋವ ಪೂರೈಸುವುದಿಲ್ಲ.

‘ನಮ್ಮ ತಪ್ಪುಗಳನ್ನ ಕ್ಷಮಿಸು.’

ನಮ್ಮ ಪಾಪಗಳಿಗೆ ದೇವರ ಹತ್ತಿರ ಕ್ಷಮೆ ಕೇಳೋದು ಸರಿ ಅಂತ ನಿಮಗೆ ಅನಿಸುತ್ತಾ? ಇವತ್ತು ತುಂಬ ಜನರಿಗೆ ಪಾಪ ಅಂದರೇನು ಮತ್ತು ಅದರಿಂದ ಎಷ್ಟು ಕೆಟ್ಟ ಪರಿಣಾಮಗಳು ಆಗುತ್ತೆ ಅನ್ನೋದು ಅವರಿಗೆ ಗೊತ್ತೇ ಇಲ್ಲ. ನಾವು ಹುಟ್ಟಿದಾಗಿಂದ ಪಾಪಿಗಳು ಅಂತ ಬೈಬಲ್‌ ಹೇಳುತ್ತೆ. ಈ ಕಾರಣದಿಂದಾನೇ ಕೆಲವೊಂದು ಸರಿ ನಾವು ತಪ್ಪುತಪ್ಪಾಗಿ ಮಾತಾಡುತ್ತೀವಿ, ತಪ್ಪು ಕೆಲಸಗಳನ್ನ ಮಾಡುತ್ತೀವಿ. ನಮ್ಮಲ್ಲಿ ಪಾಪ ಇರೋದ್ರಿಂದಾನೇ ನಮಗೆ ವಯಸ್ಸಾಗುತ್ತೆ, ಮರಣವೂ ಬರುತ್ತೆ. ಆದರೆ ದೇವರು ನಮ್ಮನ್ನ ಕ್ಷಮಿಸಿದ್ರೆ ಮಾತ್ರ ನಮಗೆ ಶಾಶ್ವತ ಜೀವನ ಸಿಗುತ್ತೆ. (ರೋಮನ್ನರಿಗೆ 3:23; 5:12; 6:23) ದೇವರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಯೆಹೋವನೇ, ನೀನು ಒಳ್ಳೆಯವನು, ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ.”—ಕೀರ್ತನೆ 86:5.

“ಸೈತಾನನಿಂದ ನಮ್ಮನ್ನ ರಕ್ಷಿಸು.”

ಸೈತಾನನಿಂದ ನಮ್ಮನ್ನ ಕಾಪಾಡು ಅಂತ ಬೈಬಲ್‌ನಲ್ಲಿದೆ. ಅದರ ಅರ್ಥ ದೇವರಿಂದ ಮಾತ್ರ ನಮ್ಮನ್ನ ಸೈತಾನನಿಂದ ಕಾಪಾಡೋಕೆ ಸಾಧ್ಯ. ತುಂಬ ಜನ ಸೈತಾನ ಇದ್ದಾನೆ ಅಂತ ನಂಬಲ್ಲ. ಆದರೆ ಸೈತಾನ ಇದ್ದಾನೆ ಅಂತ ಯೇಸು ಹೇಳಿದನು. ಅಷ್ಟೇ ಅಲ್ಲ, ಅವನೇ ಈ ‘ಲೋಕದ ನಾಯಕ’ ಅಂತನೂ ಕರೆದಿದ್ದಾನೆ. (ಯೋಹಾನ 12:31; 16:11) ಸೈತಾನನು ಈ ಲೋಕವನ್ನ ದೇವರಿಂದ ತುಂಬ ದೂರ ಮಾಡಿದ್ದಾನೆ. ಆತನು ನಿಮ್ಮನ್ನೂ ಕೂಡ ದೇವರಿಂದ ದೂರ ಮಾಡೋಕೆ ಪ್ರಯತ್ನಿಸುತ್ತಿದ್ದಾನೆ. ಯಾಕಂದ್ರೆ ನೀವು ದೇವರಿಗೆ ಹತ್ತಿರ ಆಗೋದು ಆತನಿಗೆ ಒಂಚೂರು ಇಷ್ಟ ಇಲ್ಲ. (1 ಪೇತ್ರ 5:8) ಯೆಹೋವನಿಗೆ ಸೈತಾನನಿಗಿಂತ ತುಂಬ ಶಕ್ತಿ ಇದೆ. ತನ್ನನ್ನ ಪ್ರೀತಿಸುವವರನ್ನ ಆತನು ಖಂಡಿತ ಕಾಪಾಡುತ್ತಾನೆ.

ಯೇಸು ಕಲಿಸಿಕೊಟ್ಟ ಪ್ರಾರ್ಥನೆಯಿಂದ ನಾವು ಯಾವೆಲ್ಲ ವಿಷಯಗಳಿಗೆ ಪ್ರಾರ್ಥನೆ ಮಾಡಬೇಕು ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ, ನಾವು ಬೇರೆ ವಿಷಯಗಳಿಗೂ ಪ್ರಾರ್ಥನೆ ಮಾಡಬಹುದು. 1 ಯೋಹಾನ 5:14 ದೇವರ ಬಗ್ಗೆ ಹೀಗೆ ಹೇಳುತ್ತೆ: “ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ.” ಇದು ತುಂಬ ಚಿಕ್ಕ ವಿಷಯ ಇದರ ಬಗ್ಗೆ ದೇವರಿಗೆ ಹೇಗೆ ಪ್ರಾರ್ಥನೆ ಮಾಡಲಿ ಅಂತ ಯಾವತ್ತೂ ಯೋಚಿಸಬೇಡಿ.—1 ಪೇತ್ರ 5:7.

ಹಾಗಾದರೆ ನಾವು ಯಾವ ಸಮಯದಲ್ಲಿ, ಯಾವ ಸ್ಥಳದಲ್ಲಿ ಪ್ರಾರ್ಥಿಸಬೇಕು?