ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

5 ನಾವು ಯಾವಾಗ ಮತ್ತು ಎಲ್ಲಿ ಪ್ರಾರ್ಥಿಸಬೇಕು?

5 ನಾವು ಯಾವಾಗ ಮತ್ತು ಎಲ್ಲಿ ಪ್ರಾರ್ಥಿಸಬೇಕು?

ಯಾವ ಜಾಗದಲ್ಲಿ ಪ್ರಾರ್ಥನೆ ಮಾಡಬೇಕು, ಎಷ್ಟೊತ್ತು ಮಾಡಬೇಕು, ಯಾವ್ಯಾವ ಟೈಮಲ್ಲಿ ಮಾಡಬೇಕು ಅನ್ನೋದ್ರ ಬಗ್ಗೆ ತುಂಬಾ ಧರ್ಮಗಳು ಹೇಳಿರೋದನ್ನ ಮತ್ತು ಅವರು ಮಾಡ್ತಿರೋದನ್ನ ನೀವು ನೋಡಿರಬಹುದು. ಅವರು ಹೇಳೋ ತರನೇ ಪ್ರಾರ್ಥನೆ ಮಾಡಬೇಕು ಅಂತ ಬೈಬಲ್‌ ಹೇಳುತ್ತಾ?

ನಾವು ಯಾವ-ಯಾವ ಸಂದರ್ಭಗಳಲ್ಲಿ ಪ್ರಾರ್ಥನೆ ಮಾಡಬೇಕು ಅನ್ನೋದರ ಬಗ್ಗೆ ಬೈಬಲ್‌ ಹೇಳುತ್ತೆ. ಉದಾಹರಣೆಗೆ, ಯೇಸು ತನ್ನ ಶಿಷ್ಯರ ಜೊತೆ ಊಟ ಮಾಡೋದಕ್ಕಿಂತ ಮುಂಚೆ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದನು. (ಲೂಕ 22:17) ಆತನ ಶಿಷ್ಯರು ಆರಾಧನೆ ಮಾಡುವುದಕ್ಕೋಸ್ಕರ ಒಟ್ಟಿಗೆ ಸೇರಿದಾಗ ಕೂಡ ಪ್ರಾರ್ಥನೆ ಮಾಡಿದರು. ಈ ತರ ಪ್ರಾರ್ಥನೆ ಮಾಡೋ ರೂಢಿ ಯೆಹೂದಿ ಸಭಾಮಂದಿರಗಳಲ್ಲಿ ಮತ್ತು ಯೆರೂಸಲೇಮ್‌ನಲ್ಲಿದ್ದ ದೇವಾಲಯದಲ್ಲಿ ಇತ್ತು. ಈ ಪದ್ಧತಿಯನ್ನ ಯೇಸುವಿನ ಶಿಷ್ಯರು ಕೂಡ ಪಾಲಿಸುತ್ತಿದ್ದರು. ‘ದೇವಾಲಯ ಎಲ್ಲ ದೇಶದ ಜನ್ರ ಪ್ರಾರ್ಥನಾ ಮಂದಿರ’ ಆಗಬೇಕು ಅನ್ನೋದು ಯೆಹೋವನ ಆಸೆ ಆಗಿತ್ತು.—ಮಾರ್ಕ 11:17.

ದೇವರ ಸೇವಕರು, ಆತನ ಚಿತ್ತಕ್ಕನುಸಾರ ಒಟ್ಟಿಗೆ ಸೇರಿ ಒಂದೇ ಮನಸ್ಸಿನಿಂದ ಪ್ರಾರ್ಥನೆ ಮಾಡಿದಾಗ ಅವರ ಪ್ರಾರ್ಥನೆಗೆ ತುಂಬಾ ಶಕ್ತಿ ಇರುತ್ತೆ. ಇಂತಹ ಪ್ರಾರ್ಥನೆಗಳು ದೇವರಿಗೆ ಎಷ್ಟು ಇಷ್ಟ ಆಗುತ್ತೆ ಅಂದ್ರೆ ಆ ಪ್ರಾರ್ಥನೆಗಳಿಗೆ ದೇವರು ಖಂಡಿತ ಉತ್ತರ ಕೊಟ್ಟೆ ಕೊಡುತ್ತಾನೆ. ಕೆಲವೊಂದು ಸಲ ಅವನು ಯೋಚನೆ ಮಾಡದೇ ಇರೋದನ್ನ ಕೂಡ ನಾವು ಪ್ರಾರ್ಥನೆ ಮಾಡಿದಾಗ ನಮಗೆ ಕೊಡುತ್ತಾನೆ. (ಇಬ್ರಿಯ 13:18, 19) ಪ್ರತಿ ಕೂಟಗಳಲ್ಲಿ ಯೆಹೋವನ ಸಾಕ್ಷಿಗಳು ಪ್ರಾರ್ಥನೆ ಮಾಡ್ತಾರೆ. ನೀವು ಕೂಡ ನಿಮ್ಮ ಮನೆ ಹತ್ತಿರ ಇರೋ ಅವರ ಸಭೆಗೆ ಹೋಗಿ, ಅವರು ಹೇಗೆ ಪ್ರಾರ್ಥಿಸುತ್ತಾರೆ ಅಂತ ನೋಡಬಹುದು.

ಆದ್ರೆ ನೀವು ಈ ಟೈಮಲ್ಲಿ, ಈ ಸ್ಥಳದಲ್ಲೇ ಪ್ರಾರ್ಥನೆ ಮಾಡಬೇಕು ಅಂತ ಬೈಬಲ್‌ ಹೇಳಲ್ಲ. ದೇವರ ಸೇವಕರು ಬೇರೆ-ಬೇರೆ ಟೈಮಲ್ಲಿ, ಸ್ಥಳಗಳಲ್ಲಿ ಪ್ರಾರ್ಥನೆ ಮಾಡಿರೋ ಉದಾಹರಣೆಗಳು ಬೈಬಲ್‌ನಲ್ಲಿವೆ. ಯೇಸು ಹೀಗಂದನು: “ನೀನು ಪ್ರಾರ್ಥನೆ ಮಾಡುವಾಗ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿ ರಹಸ್ಯ ಸ್ಥಳದಲ್ಲಿರೋ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಆಗ ರಹಸ್ಯ ಸ್ಥಳದಿಂದ ನೋಡೋ ನಿನ್ನ ತಂದೆ ನಿನ್ನನ್ನ ಆಶೀರ್ವದಿಸ್ತಾನೆ.”—ಮತ್ತಾಯ 6:6.

ನಾವು ಎಲ್ಲಿ ಬೇಕಾದ್ರೂ ಯಾವ ಸಮಯದಲ್ಲಿ ಬೇಕಾದ್ರೂ ಪ್ರಾರ್ಥನೆ ಮಾಡಬಹುದು

ಈ ಆಮಂತ್ರಣದ ಬಗ್ಗೆ ತಿಳಿದುಕೊಂಡ ಮೇಲೆ ನಿಮಗೂ ಪ್ರಾರ್ಥನೆ ಮಾಡಬೇಕು ಅಂತ ಅನಿಸ್ತಿದ್ಯಾ? ಹೌದು, ಇಡೀ ಭೂಮಿಯನ್ನೇ ಸೃಷ್ಟಿ ಮಾಡಿದ ದೇವರನ್ನ ನೀವು ಯಾವಾಗ ಬೇಕಾದ್ರೂ, ಯಾವ ಸಮಯದಲ್ಲಿ ಬೇಕಾದ್ರೂ, ಒಂಟಿಯಾಗಿ ಇರೋವಾಗಲೂ ಪ್ರಾರ್ಥನೆ ಮಾಡಬಹುದು. ಹೀಗೆ ನೀವು ಯಾವಾಗ ಪ್ರಾರ್ಥನೆ ಮಾಡಿದ್ರೂ ದೇವರು ಕೇಳೇ ಕೇಳ್ತಾನೆ ಅನ್ನೋ ಭರವಸೆ ನಿಮಗಿರಲಿ. ಯೇಸು ಒಂಟಿಯಾಗಿದ್ದಾಗ ತುಂಬಾ ಸಲ ದೇವರಿಗೆ ಪ್ರಾರ್ಥನೆ ಮಾಡೋದ್ರಲ್ಲಿ ಸಮಯ ಕಳೆಯುತ್ತಿದ್ದ. ಒಂದು ಸಂದರ್ಭದಲ್ಲಿ, ಯೇಸು ಒಂದು ಮುಖ್ಯವಾದ ನಿರ್ಣಯ ಮಾಡೋದಕ್ಕಿಂತ ಮುಂಚೆ ಇಡೀ ರಾತ್ರಿ ದೇವರ ಹತ್ರ ಪ್ರಾರ್ಥನೆ ಮಾಡ್ತಾ ಕಳೆದ.—ಲೂಕ 6:12, 13.

ಬೈಬಲ್‌ನಲ್ಲಿರುವ ನಂಬಿಗಸ್ತ ಸ್ತ್ರೀ-ಪುರುಷರು ಮುಖ್ಯವಾದ ನಿರ್ಧಾರ ಮಾಡೋವಾಗ ಅಥವಾ ಯಾವುದೊ ಒಂದು ಸಂಕಷ್ಟವನ್ನ ಎದುರಿಸುತ್ತಿರುವಾಗ ಪ್ರಾರ್ಥನೆ ಮಾಡ್ತಿದ್ರು. ಕೆಲವು ಸಲ ಎಲ್ಲರಿಗೂ ಕೇಳೋ ತರ ಮಾಡ್ತಿದ್ರು, ಕೆಲವು ಸಲ ಮೌನವಾಗಿ ಮಾಡ್ತಿದ್ರು. ಕೆಲವು ಸಲ ಗುಂಪಲ್ಲಿ ಪ್ರಾರ್ಥನೆ ಮಾಡಿದ್ರೆ ಇನ್ನು ಕೆಲವು ಸಲ ಒಂಟಿಯಾಗಿದ್ದಾಗ ಮಾಡ್ತಿದ್ರು. ಒಟ್ನಲ್ಲಿ ಇವರೆಲ್ರೂ ತಪ್ಪದೇ ದೇವರಿಗೆ ಪ್ರಾರ್ಥನೆ ಮಾಡ್ತಿದ್ರು. “ಯಾವಾಗ್ಲೂ ಪ್ರಾರ್ಥನೆ ಮಾಡಿ” ಅಂತ ದೇವರು ತನ್ನ ಸೇವಕರನ್ನ ಆಮಂತ್ರಿಸುತ್ತಾನೆ. (1 ಥೆಸಲೊನೀಕ 5:17) ಆತನ ಚಿತ್ತ ಮಾಡುವವರ ಪ್ರಾರ್ಥನೆಯನ್ನ ಕೇಳೋಕೆ ದೇವರು ಯಾವಾಗಲೂ ಸಿದ್ಧನಿರುತ್ತಾನೆ. ದೇವರಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅಲ್ವಾ?

ಆದ್ರೆ ಇವತ್ತಿನ ಲೋಕದಲ್ಲಿ ತುಂಬಾ ಜನ ಪ್ರಾರ್ಥನೆ ಮಾಡೋದ್ರಿಂದ ನಮಗೇನು ಪ್ರಯೋಜನ ಸಿಗಲ್ಲ ಅಂತ ಹೇಳ್ತಾರೆ. ನಿಮಗೂ ಈ ತರ ಅನಿಸಿದ್ಯಾ?