ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

7 ದೇವರು ನಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನಾ?

7 ದೇವರು ನಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನಾ?

ದೇವರು ನಮ್ಮ ಪ್ರಾರ್ಥನೆಯನ್ನ ಕೇಳ್ತಾನಾ ಇಲ್ವಾ ಅಂತ ತುಂಬಾ ಜನರಿಗೆ ಪ್ರಶ್ನೆ ಬರುತ್ತೆ. ಯೆಹೋವ ದೇವರು ನಮ್ಮ ಪ್ರಾರ್ಥನೆಯನ್ನ ಕೇಳ್ತಾರೆ ಅಂತ ಬೈಬಲ್‌ ನಮಗೆ ಹೇಳುತ್ತೆ. ಆದರೆ ಆತನು ನಮ್ಮ ಪ್ರಾರ್ಥನೆಯನ್ನ ಕೇಳ್ತಾನಾ ಇಲ್ವಾ ಅನ್ನೋದು ನಮ್ಮ ಕೈಯಲ್ಲಿದೆ.

ಯೇಸು ತನ್ನ ಸಮಯದಲ್ಲಿ ಜೀವಿಸುತ್ತಿದ್ದ ಧಾರ್ಮಿಕ ಗುರುಗಳನ್ನ ಖಂಡಿಸಿದನು. ಯಾಕೆಂದರೆ ಅವರು ಮನಸಾರೆ ಅಲ್ಲ ಜನರ ಗಮನ ಸೆಳೆಯೋಕೆ ಪ್ರಾರ್ಥನೆ ಮಾಡುತ್ತಿದ್ದರು. ಅದಕ್ಕೆ ಯೇಸು “ಅವ್ರಿಗೆ ಸಿಗಬೇಕಾಗಿದ್ದ ಆಶೀರ್ವಾದ ಆಗಲೇ ಸಿಕ್ಕಿರುತ್ತೆ” ಅಂತ ಹೇಳಿದನು. ಅಂದ್ರೆ ಅವರಿಗೆ ಜನರಿಂದ ಹೊಗಳಿಕೆ ಸಿಕ್ತು, ಆದರೆ ದೇವರು ಅವರ ಪ್ರಾರ್ಥನೆಯನ್ನ ಕೇಳಲಿಲ್ಲ. (ಮತ್ತಾಯ 6:5) ಇವತ್ತು ಕೂಡ ತುಂಬ ಜನರು ದೇವರ ಇಷ್ಟದ ಪ್ರಕಾರ ಪ್ರಾರ್ಥನೆ ಮಾಡಲ್ಲ ಬದಲಿಗೆ ತಮ್ಮ ಇಷ್ಟದ ಪ್ರಕಾರ ಮಾಡುತ್ತಾರೆ. ಇಂಥವರ ಪ್ರಾರ್ಥನೆಯನ್ನ ದೇವರು ಖಂಡಿತ ಕೇಳಲ್ಲ.

ನಿಮ್ಮ ಪ್ರಾರ್ಥನೆಯನ್ನ ದೇವರು ಕೇಳ್ತಾನಾ? ನೀವು ಯಾವ ದೇಶದವರು, ಯಾವ ಜಾತಿ, ನಿಮ್ಮ ಬಗ್ಗೆ ಜನರು ಏನು ಯೋಚನೆ ಮಾಡುತ್ತಾರೆ ಅನ್ನೋದನ್ನ ದೇವರು ಯಾವತ್ತು ನೋಡಲ್ಲ. ಇದರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ “ದೇವರು ಭೇದಭಾವ ಮಾಡಲ್ಲ ಅಂತ ಈಗ ಚೆನ್ನಾಗಿ ಅರ್ಥ ಆಗಿದೆ. ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.” (ಅಪೊಸ್ತಲರ ಕಾರ್ಯ 10:34, 35) ನಿಮಗೆ ಯೆಹೋವನ ಮೇಲೆ ಭಯಭಕ್ತಿ ಇದ್ದರೆ ನೀವು ಯಾವಾಗಲೂ ಒಳ್ಳೇ ಕೆಲಸಗಳನ್ನೇ ಮಾಡ್ತೀರ. ದೇವರ ಮೇಲೆ ನಿಮಗೆ ಭಯ ಇದ್ದರೆ ಆತನಿಗೆ ನೋವಾಗುವ ಯಾವ ಕೆಲಸವನ್ನೂ ನೀವು ಮಾಡಲ್ಲ. ಬದಲಿಗೆ ನೀವು ಅವನನ್ನ ಗೌರವಿಸ್ತೀರ. ಒಳ್ಳೇ ಕೆಲಸಗಳೆಂದರೆ ನಮಗೆ ಯಾವುದು ಸರಿ ಕಾಣಿಸುತ್ತೋ ಅಥವಾ ಬೇರೆಯವರಿಗೆ ಯಾವುದು ಸರಿ ಅನಿಸುತ್ತೋ ಅದು ಅಲ್ಲ ಬದಲಿಗೆ ದೇವರ ದೃಷ್ಟಿಯಲ್ಲಿ ಯಾವುದು ಸರಿ ಇದೆಯೋ ಅದನ್ನ ಮಾಡಬೇಕು. ನಾವು ದೇವರ ಮೇಲೆ ಭಯಭಕ್ತಿ ತೋರಿಸಿ ಒಳ್ಳೇದನ್ನ ಮಾಡಿದರೆ, ದೇವರು ಖಂಡಿತ ನಮ್ಮ ಪ್ರಾರ್ಥನೆಯನ್ನ ಕೇಳುತ್ತಾನೆ. a

ದೇವರು ಏನಾದ್ರೂ ಅದ್ಭುತ ಮಾಡಿ ನಮ್ಮ ಪ್ರಾರ್ಥನೆ ಕೇಳಬೇಕು ಅಂತ ತುಂಬ ಜನ ನೆನಸುತ್ತಾರೆ. ಆದರೆ ನಾವು ಈ ರೀತಿ ಅಂದುಕೊಳ್ಳೋದು ಸರಿಯಲ್ಲ. ಹಿಂದಿನ ಕಾಲದಲ್ಲಿ ಕೇವಲ ಕೆಲವೇ ಸಂದರ್ಭಗಳಲ್ಲಿ ದೇವರು ಅದ್ಭುತ ಮಾಡಿ ಅವರ ಪ್ರಾರ್ಥನೆಗೆ ಉತ್ತರ ಕೊಟ್ಟನು. ಕೆಲವೊಮ್ಮೆ ಶತಮಾನಗಳು ಕಳೆದ್ರೂ ದೇವರು ಯಾವದೇ ಅದ್ಭುತ ಮಾಡಲಿಲ್ಲ. ಅಪೊಸ್ತಲರು ತೀರಿಹೋದ ಮೇಲೆ ಅದ್ಭುತಗಳು ಆಗೋದೆ ನಿಂತುಹೋಯ್ತು. (1 ಕೊರಿಂಥ 13:8-10) ಇವತ್ತು ನಮ್ಮ ಪ್ರಾರ್ಥನೆಗಳನ್ನ ದೇವರು ಕೇಳಲ್ಲ ಅಂತ ಇದರ ಅರ್ಥನಾ? ಖಂಡಿತ ಇಲ್ಲ. ದೇವರು ಯಾವ ರೀತಿಯ ಪ್ರಾರ್ಥನೆಯನ್ನ ಕೇಳ್ತಾನೆ ಅಂತ ನೊಡೋಣ.

ದೇವರು ವಿವೇಕವನ್ನ ಕೊಡುತ್ತಾನೆ. ಬುದ್ಧಿ, ವಿವೇಕ ಇರೋದು ಯೆಹೋವನಿಗೆ ಮಾತ್ರ ಅಂತ ಬೈಬಲ್‌ ಹೇಳುತ್ತೆ. ಯಾರು ಯೆಹೋವನಿಗೆ ವಿವೇಕಕ್ಕಾಗಿ ಬೇಡಿಕೊಳ್ಳುತ್ತಾರೋ ಮತ್ತು ಆತನ ಇಷ್ಟದ ಪ್ರಕಾರ ನಡೆಯುತ್ತಾರೋ ಅಂಥವರಿಗೆ ಉದಾರವಾಗಿ ವಿವೇಕವನ್ನ ಕೊಡುತ್ತಾನೆ.—ಯಾಕೋಬ 1:5.

ದೇವರು ತನ್ನ ಶಕ್ತಿಯನ್ನ ಅಂದ್ರೆ ಪವಿತ್ರ ಶಕ್ತಿಯನ್ನ ಕೊಡುತ್ತಾನೆ. ವಿಶ್ವದಲ್ಲಿ ಇದಕ್ಕಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ. ಈ ಶಕ್ತಿಯಿಂದ ನಮ್ಮ ಕಷ್ಟಗಳನ್ನ ಎದುರಿಸೋಕೆ ಸಹಾಯ ಆಗುತ್ತೆ. ನಮಗೆ ಬೇಜಾರಾದಾಗ ಸಮಾಧಾನ ಸಿಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಮನಃಶಾಂತಿ ಸಿಗುತ್ತೆ. ಅಷ್ಟೇ ಅಲ್ಲ, ದೇವರ ಪವಿತ್ರ ಶಕ್ತಿಯಿಂದ ನಾವು ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳೋಕೂ ಸಹಾಯ ಆಗುತ್ತೆ. (ಗಲಾತ್ಯ 5:22, 23) ಪವಿತ್ರ ಶಕ್ತಿಯನ್ನ ಕೇಳಿದ್ರೆ ದೇವರು ಖಂಡಿತ ಕೊಟ್ಟೇ ಕೊಡುತ್ತಾನೆ ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು.—ಲೂಕ 11:13.

ಯಾರು ದೇವರ ಬಗ್ಗೆ ತಿಳಿದುಕೊಳ್ಳೋಕೆ ಇಷ್ಟಪಡುತ್ತಾರೋ ದೇವರು ಅವರಿಗೆ ಸಹಾಯ ಮಾಡ್ತಾನೆ. (ಅಪೊಸ್ತಲರ ಕಾರ್ಯ 17:26, 27) ಅನೇಕ ಜನರು ದೇವರ ಹೆಸರೇನು, ಆತನು ಮನುಷ್ಯನನ್ನ ಯಾಕೆ ಸೃಷ್ಟಿ ಮಾಡಿದ್ದಾನೆ ಮತ್ತು ಆತನ ಜೊತೆ ಫ್ರೆಂಡ್‌ ಆಗೋಕೆ ಏನು ಮಾಡಬೇಕು ಅಂತ ತಿಳಿದುಕೊಳ್ಳೋಕೆ ಬಯಸುತ್ತಾರೆ. (ಯಾಕೋಬ 4:8) ಈ ಎಲ್ಲಾ ಪ್ರಶ್ನೆಗಳಿಗೆ ಯೆಹೋವನ ಸಾಕ್ಷಿಗಳು ಬೈಬಲಿನಿಂದ ಉತ್ತರ ಕೊಡುತ್ತಾರೆ.

ಬೈಬಲ್‌ ಬಗ್ಗೆ ತಿಳಿದುಕೊಳ್ಳೋಕೆ ನೀವು ಇಷ್ಟಪಡ್ತಿರಾ? ಬಹುಶಃ ದೇವರು ನಿಮ್ಮ ಪ್ರಾರ್ಥನೆಯನ್ನ ಕೇಳಿ ಈ ಪತ್ರಿಕೆಯ ಮೂಲಕ ಉತ್ತರ ಕೊಟ್ಟಿದ್ದಾನೆ.

a ಹೆಚ್ಚಿನ ಮಾಹಿತಿಗಾಗಿ ಪ್ರಾರ್ಥನೆ ಮಾಡೋದು ಹೇಗೆ ಅಂತ ತಿಳಿದುಕೊಳ್ಳೋಕೆ ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕದ 17ನೇ ಅಧ್ಯಾಯವನ್ನ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.