ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಪ್ರಾರ್ಥನೆಯನ್ನು ಕೇಳುವಾತನು’

‘ಪ್ರಾರ್ಥನೆಯನ್ನು ಕೇಳುವಾತನು’

ದೇವರ ಸಮೀಪಕ್ಕೆ ಬನ್ನಿರಿ

‘ಪ್ರಾರ್ಥನೆಯನ್ನು ಕೇಳುವಾತನು’

1 ಪೂರ್ವಕಾಲವೃತ್ತಾಂತ 4:9, 10

ಯೆಹೋವ ದೇವರು ಭಕ್ತ ಜನರ ಮನಃಪೂರ್ವಕ ಪ್ರಾರ್ಥನೆಗಳನ್ನು ನಿಜವಾಗಿ ಉತ್ತರಿಸುತ್ತಾನೋ? ಖಂಡಿತವಾಗಿಯೂ. ಯಾಬೇಚ ಎಂಬ ವ್ಯಕ್ತಿಯ ವೃತ್ತಾಂತವು ಯೆಹೋವನು ‘ಪ್ರಾರ್ಥನೆಯನ್ನು ಕೇಳುವಾತನು’ ಎಂಬದನ್ನು ತೋರಿಸುತ್ತದೆ. ಯಾಬೇಚನ ಕುರಿತು ಬೈಬಲ್‌ನಲ್ಲಿರುವ ಮಾಹಿತಿ ಕೊಂಚ. (ಕೀರ್ತನೆ 65:2) ಅದು ನಾವು ನೆನಸದಂಥ ಒಂದು ಭಾಗದಲ್ಲಿ ಅಂದರೆ ಒಂದನೇ ಪೂರ್ವಕಾಲವೃತ್ತಾಂತದ ಆರಂಭದಲ್ಲಿರುವ ವಂಶಾವಳಿಯ ನಡುವೆಯಿದೆ. ನಾವೀಗ 1 ಪೂರ್ವಕಾಲವೃತ್ತಾಂತ 4:9, 10ನ್ನು ಪರಿಶೀಲಿಸೋಣ.

ಯಾಬೇಚನ ಬಗ್ಗೆ ನಮಗೆ ಗೊತ್ತಿರುವುದೆಲ್ಲವೂ ಈ ಎರಡು ವಚನಗಳಲ್ಲಿ ಮಾತ್ರ ಇದೆ. 9ನೇ ವಚನಕ್ಕನುಸಾರ “ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು.” * ಆಕೆ ಆ ಹೆಸರನ್ನು ಆಯ್ಕೆಮಾಡಿದ್ದೇಕೆ? ಈ ಮಗನನ್ನು ಹೆರುವಾಗ ಆಕೆಗೆ ಸಹಜ ನೋವಿಗಿಂತ ಹೆಚ್ಚಿನ ನೋವಿತ್ತೆಂಬ ಕಾರಣಕ್ಕೊ? ಅಥವಾ, ಮಗು ಹುಟ್ಟುವಾಗ ತನ್ನ ಜೊತೆ ಸಂತೋಷಪಡಲು ಗಂಡನಿಲ್ಲವಲ್ಲಾ ಎಂದು ವಿಧವೆ ಆಗಿದ್ದಿರಬಹುದಾದ ಆಕೆ ಹಲುಬುತ್ತಿದ್ದದರಿಂದಲೋ? ಬೈಬಲ್‌ ಇದೇನನ್ನೂ ಹೇಳುವುದಿಲ್ಲ. ವಿಷಯ ಏನೇ ಇರಲಿ, ಆಕೆ ತನ್ನ ಈ ಮಗನ ಬಗ್ಗೆ ಹೆಮ್ಮೆಯಿಂದ ಬೀಗುವ ದಿನ ಮುಂದೆ ಖಂಡಿತ ಬರಲಿತ್ತು. ಯಾಬೇಚನ ಅಣ್ಣತಮ್ಮಂದಿರು ಒಳ್ಳೇ ಜನರಾಗಿದ್ದಿರಬಹುದೇನೊ ನಿಜ ಆದರೆ ಅವನು “ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು.”

ಯಾಬೇಚ ಪ್ರಾರ್ಥನಾಸಕ್ತ ವ್ಯಕ್ತಿ. ವೃತ್ತಾಂತದಲ್ಲಿನ ತನ್ನ ಪ್ರಾರ್ಥನೆಯಲ್ಲಿ ಮೊದಲಾಗಿ ದೇವರ ಆಶೀರ್ವಾದಕ್ಕಾಗಿ ಬೇಡಿಕೊಂಡನು. ನಂತರ ಮೂರು ವಿನಂತಿಗಳನ್ನು ಮಾಡಿದನು. ಅವು ಯಾಬೇಚನ ಬಲವಾದ ನಂಬಿಕೆಯನ್ನು ತೋರಿಸುತ್ತವೆ.

ಮೊದಲನೆಯದಾಗಿ ಯಾಬೇಚನು ‘ನನ್ನ ಪ್ರಾಂತವನ್ನು ವಿಸ್ತರಿಸು’ ಎಂದು ದೇವರ ಬಳಿ ಬೇಡಿಕೊಂಡನು. (ವಚನ 10) ಈ ಘನವಂತ ವ್ಯಕ್ತಿ ಜಮೀನು-ಕಬಳಿಸುವ ವ್ಯಕ್ತಿಯಾಗಿರಲಿಲ್ಲ, ಇತರರಿಗೆ ಸೇರಿದ ಜಮೀನು ತನ್ನದಾಗಬೇಕೆಂದು ಆಸೆಪಡುತ್ತಿರಲಿಲ್ಲ. ಅವನ ವಿನಂತಿಯು ಜಮೀನಿಗಿಂತಲೂ ಹೆಚ್ಚಾಗಿ ಜನರಿಗೆ ಸಂಬಂಧಪಟ್ಟಿದ್ದಿರಬಹುದು. ತನ್ನ ಪ್ರಾಂತವನ್ನು ಶಾಂತಿಭರಿತವಾಗಿ ವಿಸ್ತರಿಸಲಿಕ್ಕಾಗಿ ಆತನು ಪ್ರಾಯಶಃ ಕೇಳುತ್ತಿದ್ದನು. ಯಾಕೆಂದರೆ ಸತ್ಯ ದೇವರ ಇನ್ನೂ ಹೆಚ್ಚು ಆರಾಧಕರನ್ನು ಸೇರಿಸಿಕೊಳ್ಳಲಾಗುವಂತೆ ಇಚ್ಛಿಸುತ್ತಿದ್ದನು. *

ಎರಡನೆಯದಾಗಿ ದೇವರು ತನ್ನ “ಹಸ್ತ”ದಿಂದ ತನ್ನನ್ನು ಹಿಡಿಯುವಂತೆ ಯಾಬೇಚನು ಯಾಚಿಸಿದನು. ದೇವರ ಸಾಂಕೇತಿಕ ಕೈ ಆತನು ಪ್ರಯೋಗಿಸುವ ಶಕ್ತಿ ಆಗಿದೆ. ತನ್ನ ಆರಾಧಕರಿಗೆ ಸಹಾಯಮಾಡಲು ಆತನು ಇದನ್ನು ಬಳಸುತ್ತಾನೆ. (1 ಪೂರ್ವಕಾಲವೃತ್ತಾಂತ 29:12) ತನ್ನಲ್ಲಿ ನಂಬಿಕೆಯಿಡುವವರ ಕಡೆಗೆ ಯೆಹೋವನು “ಮೋಟುಗೈ”ಯವನಲ್ಲ. ಆದ್ದರಿಂದ ಯಾಬೇಚನು ತನ್ನ ಮನದಾಳದ ವಿನಂತಿಗಳನ್ನು ಪೂರೈಸುವಂತೆ ಆ ದೇವರಲ್ಲೇ ಭರವಸೆಯಿಟ್ಟನು.—ಯೆಶಾಯ 59:1.

ಮೂರನೆಯದಾಗಿ ಯಾಬೇಚನು “ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ರಕ್ಷಿಸಬಾರದೇ” ಎಂದು ಪ್ರಾರ್ಥಿಸಿದನು. ‘ವೇದನೆ ಉಂಟಾಗದಂತೆ’ ಎಂಬ ಪದಗಳು, ಯಾಬೇಚನು ತನಗೆ ಆಪತ್ತುಗಳು ಬರದಂತೆ ಅಲ್ಲ ಬದಲಾಗಿ ಕೆಡುಕಿನಿಂದಾಗುವ ಪರಿಣಾಮಗಳಿಂದ ತಾನು ದುಃಖಿತನಾಗದಂತೆ ಇಲ್ಲವೆ ಕುಗ್ಗಿಹೋಗದಂತೆ ರಕ್ಷಿಸಲಿಕ್ಕಾಗಿ ದೇವರಿಗೆ ಪ್ರಾರ್ಥಿಸಿದನೆಂದು ಸೂಚಿಸುತ್ತಿರಬಹುದು.

ಯಾಬೇಚನ ಪ್ರಾರ್ಥನೆ ಅವನಿಗೆ ಸತ್ಯಾರಾಧನೆಯ ಬಗ್ಗೆ ಇದ್ದ ಕಳಕಳಿ ಮತ್ತು ಪ್ರಾರ್ಥನೆಯನ್ನು ಕೇಳುವಾತನಲ್ಲಿ ಅವನಿಗಿದ್ದ ನಂಬಿಕೆ, ಭರವಸೆಯನ್ನು ತೋರಿಸಿತು. ಯೆಹೋವನು ಈ ಪ್ರಾರ್ಥನೆಗೆ ಹೇಗೆ ಪ್ರತಿಕ್ರಿಯಿಸಿದನು? “ದೇವರು ಅವನ ಮೊರೆಯನ್ನು ಲಾಲಿಸಿದನು” ಎನ್ನುತ್ತಾ ಆ ಚುಟುಕಾದ ವೃತ್ತಾಂತ ಕೊನೆಗೊಳ್ಳುತ್ತದೆ.

ಪ್ರಾರ್ಥನೆಯನ್ನು ಕೇಳುವಾತನು ಬದಲಾಗಿಲ್ಲ. ಈಗಲೂ ಆತನು ತನ್ನ ಆರಾಧಕರ ಪ್ರಾರ್ಥನೆಗಳನ್ನು ಕೇಳಿ ಹರ್ಷಿಸುತ್ತಾನೆ. “ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆ” ಎಂಬ ಭರವಸೆ ಆತನಲ್ಲಿ ನಂಬಿಕೆಯಿಡುವವರಿಗೆ ಇರಬಲ್ಲದು.—1 ಯೋಹಾನ 5:14. (w10-E 10/01)

[ಪಾದಟಿಪ್ಪಣಿಗಳು]

^ ಪ್ಯಾರ. 5 ಯಾಬೇಚ ಎಂಬ ಹೆಸರಿನ ಮೂಲಪದದ ಅರ್ಥ “ನೋವು” ಆಗಿರಬಲ್ಲದು.

^ ಪ್ಯಾರ. 7 ಪವಿತ್ರ ಶಾಸ್ತ್ರಗ್ರಂಥದ ಯೆಹೂದಿ ಭಾವಾನುವಾದ ಆಗಿರುವ ‘ಟಾರ್ಗಮ್ಸ್‌’ ಯಾಬೇಚನ ಮಾತುಗಳನ್ನು ಹೀಗೆ ಭಾಷಾಂತರಿಸುತ್ತದೆ: “ನನಗೆ ಮಕ್ಕಳನ್ನು ಕೊಟ್ಟು ಆಶೀರ್ವದಿಸು, ಹೆಚ್ಚು ಶಿಷ್ಯರನ್ನು ಕೊಟ್ಟು ನನ್ನ ಮೇರೆಗಳನ್ನು ವಿಸ್ತರಿಸು.”