ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಕೂಟಗಳ ಭಕ್ತಿವೃದ್ಧಿಯಲ್ಲಿ ನೀವು ಪಾಲಿಗರೊ?

ಕ್ರೈಸ್ತ ಕೂಟಗಳ ಭಕ್ತಿವೃದ್ಧಿಯಲ್ಲಿ ನೀವು ಪಾಲಿಗರೊ?

ಕ್ರೈಸ್ತ ಕೂಟಗಳ ಭಕ್ತಿವೃದ್ಧಿಯಲ್ಲಿ ನೀವು ಪಾಲಿಗರೊ?

“ನೀವು ಒಟ್ಟಾಗಿ ಕೂಡಿಬರುವಾಗ . . . ಎಲ್ಲ ವಿಷಯಗಳು ಭಕ್ತಿವೃದ್ಧಿಗಾಗಿ ಮಾಡಲ್ಪಡಲಿ.” —1 ಕೊರಿಂ. 14:26.

1. ಒಂದನೇ ಕೊರಿಂಥ 14ನೇ ಅಧ್ಯಾಯಕ್ಕನುಸಾರ ಕ್ರೈಸ್ತ ಕೂಟಗಳ ಒಂದು ಪ್ರಮುಖ ಉದ್ದೇಶವೇನು?

‘ಎಂಥ ಭಕ್ತಿವರ್ಧಕ ಕೂಟ!’ ಇಂಥ ಭಾವನಾತ್ಮಕ ಹೇಳಿಕೆಯನ್ನು ರಾಜ್ಯ ಸಭಾಗೃಹದ ಕೂಟದ ನಂತರ ನೀವು ವ್ಯಕ್ತಪಡಿಸಿದ್ದೀರೋ? ನಿಸ್ಸಂದೇಹವಾಗಿ ವ್ಯಕ್ತಪಡಿಸಿದ್ದೀರಿ! ಸಭಾ ಕೂಟಗಳು ನಿಜವಾಗಿಯೂ ಉತ್ತೇಜನದ ಮೂಲವಾಗಿವೆ. ಇದರಲ್ಲಿ ಆಶ್ಚರ್ಯವೂ ಇಲ್ಲ. ಏಕೆಂದರೆ ಆದಿ ಕ್ರೈಸ್ತರ ದಿನಗಳಲ್ಲಿದ್ದಂತೆಯೇ ನಮ್ಮ ಕೂಟಗಳ ಒಂದು ಪ್ರಾಮುಖ್ಯ ಉದ್ದೇಶವು ಹಾಜರಿರುವ ಎಲ್ಲರನ್ನು ಆಧ್ಯಾತ್ಮಿಕವಾಗಿ ಬಲಪಡಿಸುವುದೇ. ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದ ಮೊದಲ ಪತ್ರದಲ್ಲಿ ಕ್ರೈಸ್ತ ಕೂಟಗಳ ಆ ನಿರ್ದಿಷ್ಟ ಗುರಿಯನ್ನು ಹೇಗೆ ಒತ್ತಿಹೇಳುತ್ತಾನೆಂದು ಗಮನಿಸಿ. 14ನೇ ಅಧ್ಯಾಯದಾದ್ಯಂತ ಅವನು ಸಭಾ ಕೂಟಗಳಲ್ಲಿ ನೀಡಲಾಗುವ ಪ್ರತಿಯೊಂದು ಭಾಷಣಕ್ಕೆ ಅದೇ ಉದ್ದೇಶವಿರಬೇಕು ಎಂದು ಪದೇ ಪದೇ ಹೇಳುತ್ತಾನೆ. ಆ ಉದ್ದೇಶ ‘ಸಭೆಯ ಭಕ್ತಿವೃದ್ಧಿಯೇ.’1 ಕೊರಿಂಥ 14:3, 12, 26 ಓದಿ. *

2. (ಎ) ಯಾವುದರ ಪರಿಣಾಮವಾಗಿ ಕೂಟಗಳು ಭಕ್ತಿವರ್ಧಕವಾಗಿವೆ? (ಬಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

2 ಭಕ್ತಿಯನ್ನು ವರ್ಧಿಸುವ ಅಥವಾ ಆತ್ಮೋನ್ನತಿಮಾಡುವ ಕೂಟಗಳು ಮೊತ್ತಮೊದಲಾಗಿ ದೇವರ ಪವಿತ್ರಾತ್ಮದ ಪ್ರಭಾವದ ಪರಿಣಾಮವೇ ಎಂದು ನಾವು ಮನಗಾಣುತ್ತೇವೆ. ಆದ್ದರಿಂದ ನಾವು ಪ್ರತೀ ಸಭಾ ಕೂಟವನ್ನು ಯೆಹೋವನಿಗೆ ಹೃತ್ಪೂರ್ವಕವಾದ ಪ್ರಾರ್ಥನೆಯೊಂದಿಗೆ ಆರಂಭಿಸುತ್ತೇವೆ; ನಮ್ಮ ಕೂಟವನ್ನು ನಮ್ಮ ಸ್ವರ್ಗೀಯ ತಂದೆಯು ತನ್ನ ಪವಿತ್ರಾತ್ಮದಿಂದ ಆಶೀರ್ವದಿಸುವಂತೆ ಕೇಳಿಕೊಳ್ಳುತ್ತೇವೆ. ಆದರೂ ಕೂಟದ ಕಾರ್ಯಕ್ರಮವನ್ನು ಸಾಧ್ಯವಾದಷ್ಟು ಭಕ್ತಿವರ್ಧಕವಾಗಿ ಮಾಡುವುದರಲ್ಲಿ ಸಭೆಯ ಸದಸ್ಯರೆಲ್ಲರಿಗೆ ಒಂದು ಪಾಲಿದೆ. ಹೀಗಿರಲಾಗಿ ನಮ್ಮ ರಾಜ್ಯ ಸಭಾಗೃಹದಲ್ಲಿ ಪ್ರತಿ ವಾರ ನಡೆಸಲಾಗುವ ಕೂಟಗಳು ಯಾವಾಗಲೂ ಆಧ್ಯಾತ್ಮಿಕ ಚೈತನ್ಯ ಮತ್ತು ಉತ್ತೇಜನದ ಮೂಲವಾಗಿರುವಂತೆ ನಾವು ವೈಯಕ್ತಿಕವಾಗಿ ತಕ್ಕೊಳ್ಳಬಹುದಾದ ಕೆಲವು ಹೆಜ್ಜೆಗಳು ಯಾವುವು?

3. ಕ್ರೈಸ್ತ ಕೂಟಗಳು ಎಷ್ಟು ಪ್ರಾಮುಖ್ಯವಾಗಿವೆ?

3 ಇದಕ್ಕೆ ಉತ್ತರವಾಗಿ, ಕೂಟಗಳನ್ನು ನಡೆಸುವವರು ತಮ್ಮ ಮನಸ್ಸಿನಲ್ಲಿಡಬೇಕಾದ ಕೂಟಗಳ ಕೆಲವು ವೈಶಿಷ್ಟ್ಯಗಳನ್ನು ನಾವು ಪರೀಕ್ಷಿಸೋಣ. ಹಾಗೂ ಹಾಜರಾಗುವ ಎಲ್ಲರಿಗಾಗಿ ಕೂಟಗಳನ್ನು ಬಲವರ್ಧಕವಾಗಿ ಮಾಡುವಂತೆ ಇಡೀ ಸಭೆಯು ಹೇಗೆ ಪಾಲ್ಗೊಳ್ಳಬಹುದೆಂದು ಕೂಡ ಪರಿಗಣಿಸೋಣ. ಈ ವಿಷಯ ನಮಗೆ ಅತ್ಯಾಸಕ್ತಿಯುಳ್ಳದ್ದು, ಏಕೆಂದರೆ ಈ ಕೂಟಗಳು ಪವಿತ್ರ ಕೂಟಗಳಾಗಿವೆ. ನಿಶ್ಚಯವಾಗಿಯೂ ಕೂಟಗಳನ್ನು ಹಾಜರಾಗಿ ಅದರಲ್ಲಿ ಪಾಲ್ಗೊಳ್ಳುವುದು ಯೆಹೋವನಿಗೆ ಸಲ್ಲಿಸುವ ನಮ್ಮ ಆರಾಧನೆಯ ಪ್ರಧಾನ ಅಂಶ.—ಕೀರ್ತ. 26:12; 111:1; ಯೆಶಾ. 66:22, 23.

ಬೈಬಲ್‌ ಅಧ್ಯಯನಕ್ಕಾಗಿ ಕೂಟ

4, 5. ಕಾವಲಿನಬುರುಜು ಅಧ್ಯಯನದ ಉದ್ದೇಶವೇನು?

4 ನಮ್ಮ ಸಾಪ್ತಾಹಿಕ ಕಾವಲಿನಬುರುಜು ಅಧ್ಯಯನದಿಂದ ನಾವೆಲ್ಲರೂ ಪೂರ್ಣ ಪ್ರಯೋಜನ ಪಡೆಯಲು ಬಯಸುತ್ತೇವೆ. ಆದಕಾರಣ ಆ ಕೂಟದ ಪ್ರಧಾನ ಉದ್ದೇಶವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಕಾವಲಿನಬುರುಜು ಪತ್ರಿಕೆ ಮತ್ತು ಅಧ್ಯಯನ ಲೇಖನಗಳಲ್ಲಿ ಮಾಡಲಾದ ಕೆಲವು ಹೊಂದಾಣಿಕೆಗಳನ್ನು ನಾವೀಗ ಪರಾಮರ್ಶಿಸೋಣ.

5 ಜನವರಿ 15, 2008ರ ಕಾವಲಿನಬುರುಜುವಿನ ಮೊದಲನೇ ಅಧ್ಯಯನ ಆವೃತ್ತಿಯಿಂದ ಆರಂಭಿಸಿ ಮುಖಪುಟದಲ್ಲಿ ಒಂದು ಗಮನಾರ್ಹ ಅಂಶವನ್ನು ಸೇರಿಸಲಾಯಿತು. ನೀವದನ್ನು ಗಮನಿಸಿದ್ದೀರೋ? ನಿಮ್ಮ ಕೈಯಲ್ಲಿರುವ ಪತ್ರಿಕೆಯ ಮುಖಪುಟವನ್ನು ದೃಷ್ಟಿಯಿಟ್ಟು ನೋಡಿ. ಅಲ್ಲಿ, ಬುರುಜಿನ ಕೆಳಗಡೆ ತೆರೆದಿರುವ ಬೈಬಲನ್ನು ನೀವು ಕಾಣುವಿರಿ. ಈ ಹೊಸ ವೈಶಿಷ್ಟ್ಯವು ಕಾವಲಿನಬುರುಜು ಅಧ್ಯಯನದ ಉದ್ದೇಶವೇನು ಎಂಬುದಕ್ಕೆ ಒತ್ತುಕೊಡುತ್ತದೆ. ಅದೇನೆಂದರೆ, ಈ ಪತ್ರಿಕೆಯ ಸಹಾಯದಿಂದ ಬೈಬಲನ್ನು ಅಧ್ಯಯನ ಮಾಡುವುದೇ. ಹೌದು, ವಾರದ ನಮ್ಮ ಕಾವಲಿನಬುರುಜು ಅಧ್ಯಯನದಲ್ಲಿ ನೆಹೆಮೀಯನ ದಿನಗಳಲ್ಲಿದ್ದಂತೆ ದೇವರ ವಾಕ್ಯದ ‘ತಾತ್ಪರ್ಯವನ್ನು ವಿವರಿಸಲಾಗುತ್ತದೆ.’—ನೆಹೆ. 8:8; ಯೆಶಾ. 54:13.

6. (ಎ) ಕಾವಲಿನಬುರುಜು ಅಧ್ಯಯನದಲ್ಲಿ ಯಾವ ಹೊಂದಾಣಿಕೆ ಮಾಡಲಾಗಿದೆ? (ಬಿ) “ಓದಿ” ಎಂದು ಸೂಚಿಸಲಾದ ವಚನಗಳ ವಿಷಯದಲ್ಲಿ ಏನನ್ನು ಮನಸ್ಸಿನಲ್ಲಿಡಬೇಕು?

6 ನಮ್ಮ ಮುಖ್ಯ ಪಠ್ಯಪುಸ್ತಕವು ಬೈಬಲ್‌ ಆಗಿರುವ ಕಾರಣ ಕಾವಲಿನಬುರುಜು ಅಧ್ಯಯನದಲ್ಲಿ ಒಂದು ಹೊಂದಾಣಿಕೆಯನ್ನು ಮಾಡಲಾಗಿದೆ. ಅಧ್ಯಯನ ಲೇಖನಗಳಲ್ಲಿರುವ ಹಲವಾರು ವಚನಗಳನ್ನು “ಓದಿ” ಎಂದು ಸೂಚಿಸಲಾಗಿದೆ. ಕೂಟದ ಸಮಯದಲ್ಲಿ ಈ ವಚನಗಳನ್ನು ಓದಲಾಗುವಾಗ ತಮ್ಮ ತಮ್ಮ ಬೈಬಲನ್ನು ತೆರೆದು ನೋಡುವಂತೆ ಎಲ್ಲರಿಗೆ ಉತ್ತೇಜನ ನೀಡಲಾಗಿದೆ. (ಅ.ಕಾ. 17:11) ಏಕೆ? ನಮ್ಮ ಸ್ವಂತ ಬೈಬಲಿನಲ್ಲಿ ದೇವರ ಸಲಹೆಯನ್ನು ಕಾಣುವಾಗ ಅದು ನಮ್ಮ ಮೇಲೆ ಗಾಢ ಪ್ರಭಾವವನ್ನು ಬೀರುತ್ತದೆ. (ಇಬ್ರಿ. 4:12) ಆದ್ದರಿಂದ ಆ ವಚನಗಳು ಗಟ್ಟಿಯಾಗಿ ಓದಲ್ಪಡುವ ಮುಂಚೆ ಕೂಟದ ನಿರ್ವಾಹಕನು ಹಾಜರಿರುವ ಎಲ್ಲರಿಗೆ ವಚನಗಳನ್ನು ತೆರೆದು ನೋಡಲು ಸಾಕಷ್ಟು ಸಮಯ ಕೊಡಬೇಕು.

ನಂಬಿಕೆ ವ್ಯಕ್ತಪಡಿಸಲು ಹೆಚ್ಚು ಸಮಯ

7. ಕಾವಲಿನಬುರುಜು ಅಧ್ಯಯನದ ಸಮಯದಲ್ಲಿ ನಮಗೆ ಯಾವ ಹೆಚ್ಚಿನ ಅವಕಾಶಗಳಿವೆ?

7ಕಾವಲಿನಬುರುಜು ಅಧ್ಯಯನ ಲೇಖನಗಳಿಗೆ ಮಾಡಲಾದ ಇನ್ನೊಂದು ಹೊಂದಾಣಿಕೆಯು ಅವುಗಳ ಉದ್ದವನ್ನು ಕಡಿಮೆಗೊಳಿಸಿರುವುದೇ. ಇತ್ತೀಚಿನ ವರ್ಷಗಳಲ್ಲಿ ಅವು ಚಿಕ್ಕದಾಗಿವೆ. ಹೀಗೆ ಕಾವಲಿನಬುರುಜು ಅಧ್ಯಯನದಲ್ಲಿ ಪ್ಯಾರಗಳನ್ನು ಓದಲು ಕಡಿಮೆ ಸಮಯ ಬಳಸಲಾಗುತ್ತದೆ. ಆದರೆ ಸಭಿಕರ ಉತ್ತರಗಳಿಗಾಗಿ ಹೆಚ್ಚಿನ ಸಮಯ ಲಭ್ಯವಿದೆ. ಸಭೆಯಲ್ಲಿ ಹೆಚ್ಚಿನವರಿಗೆ ಈಗ ತಮ್ಮ ನಂಬಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಹೆಚ್ಚು ಅವಕಾಶಗಳಿವೆ. ಅವರು ಮುದ್ರಿತ ಪ್ರಶ್ನೆಗಳನ್ನು ಉತ್ತರಿಸುವ, ವಚನಗಳ ಅನ್ವಯ ಮಾಡುವ, ಬೈಬಲ್‌ ಮೂಲತತ್ತ್ವಗಳನ್ನು ಅನುಸರಿಸುವುದರಲ್ಲಿರುವ ವಿವೇಕದ ಒಂದು ಸಂಕ್ಷಿಪ್ತ ಅನುಭವವನ್ನು ತಿಳಿಸುವ ಮೂಲಕ ಹಾಗೂ ಬೇರೆ ವಿಧಗಳಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ. ಚಿತ್ರಗಳನ್ನು ಚರ್ಚಿಸುವುದಕ್ಕೂ ಸ್ವಲ್ಪ ಸಮಯವನ್ನು ಉಪಯೋಗಿಸಬೇಕು.—ಕೀರ್ತನೆ 22:22; 35:18; 40:9 ಓದಿ.

8, 9. ಕಾವಲಿನಬುರುಜು ಅಧ್ಯಯನ ನಿರ್ವಾಹಕನ ಪಾತ್ರವೇನು?

8 ಆದರೂ ಸಭಿಕರು ಸಂಕ್ಷಿಪ್ತವಾಗಿ ಉತ್ತರ ಕೊಡುವಲ್ಲಿ ಹಾಗೂ ಅಧ್ಯಯನ ನಿರ್ವಾಹಕನು ಹೆಚ್ಚು ಮಾತಾಡದಿರುವಲ್ಲಿ ಮಾತ್ರ ವಿವಿಧ ಉತ್ತರಗಳಿಗೆ ಅವಕಾಶ ಕೊಡಲು ಹೆಚ್ಚು ಸಮಯ ಸಿಗುತ್ತದೆ. ಆದ್ದರಿಂದ ಕೂಟವು ಎಲ್ಲರ ಭಕ್ತಿವೃದ್ಧಿ ಮಾಡಬೇಕಾದರೆ ನಿರ್ವಾಹಕನ ಹೇಳಿಕೆ ಮತ್ತು ಸಭಿಕರ ಉತ್ತರಗಳ ನಡುವೆ ಸಮತೋಲನವಿರಬೇಕು. ಇದನ್ನು ಅಧ್ಯಯನ ನಿರ್ವಾಹಕನು ಹೇಗೆ ಮಾಡಸಾಧ್ಯ?

9 ಉತ್ತರಕ್ಕಾಗಿ ಒಂದು ದೃಷ್ಟಾಂತವನ್ನು ಪರಿಗಣಿಸಿರಿ. ಉತ್ತಮವಾಗಿ ನಿರ್ವಹಿಸಲ್ಪಡುವ ಕಾವಲಿನಬುರುಜು ಅಧ್ಯಯನವು ನಯನಮನೋಹರ ಹೂಗುಚ್ಛದಂತಿದೆ. ಒಂದು ದೊಡ್ಡ ಹೂಗುಚ್ಛದಲ್ಲಿ ಹೇಗೆ ಅನೇಕ ವಿಧದ ಹೂಗಳಿವೆಯೋ ಹಾಗೆ ಕಾವಲಿನಬುರುಜು ಅಧ್ಯಯನದಲ್ಲಿ ಕೊಡಲಾಗುವ ಉತ್ತರಗಳು ವಿಧ ವಿಧವಾಗಿರುತ್ತವೆ. ಹೂಗುಚ್ಛದಲ್ಲಿರುವ ಒಂದೊಂದು ಹೂಗಳು ಗಾತ್ರ ಮತ್ತು ಬಣ್ಣದಲ್ಲಿ ಬೇರೆ ಬೇರೆಯಾಗಿರುವಂತೆಯೇ ಕೂಟದಲ್ಲಿ ಕೊಡಲಾಗುವ ಉತ್ತರಗಳ ಉದ್ದ ಮತ್ತು ವಿಧಾನಗಳು ಸಹ ಬೇರೆ ಬೇರೆಯಾಗಿರುತ್ತವೆ. ಇದರಲ್ಲಿ ಅಧ್ಯಯನ ನಿರ್ವಾಹಕನ ಪಾತ್ರವೇನು? ಅವನು ಆಗಿಂದಾಗ್ಗೆ ಕೊಡುವ ಹೇಳಿಕೆಗಳು ಹೂಗುಚ್ಛಕ್ಕೆ ಜಾಗ್ರತೆಯಿಂದ ಸೇರಿಸಲಾಗುವ ಹಸಿರೆಲೆಗಳ ತುಣುಕುಗಳಂತಿವೆ. ಈ ತುಣುಕುಗಳು ಎದ್ದುಕಾಣಬಾರದು. ಬದಲಾಗಿ ಇಡೀ ಗುಚ್ಛವನ್ನು ಒಂದುಗೂಡಿಸಿ ಅದರ ಅಂದವನ್ನು ಹೆಚ್ಚಿಸುವ ಸಾಧನವಾಗಿರಬೇಕು. ತದ್ರೀತಿಯಲ್ಲಿ ಅಧ್ಯಯನ ನಿರ್ವಾಹಕನ ಹೇಳಿಕೆಗಳು ಮಿತವಾಗಿರಬೇಕು. ಸಭಿಕರು ನೀಡುವ ಸ್ತುತಿಯ ಉತ್ತರಗಳಿಗೆ ಪೂರಕವಾಗಿರಬೇಕು ಎಂಬುದನ್ನು ಅವನು ಮನಸ್ಸಿನಲ್ಲಿಡಬೇಕು. ಹೌದು ಸಭಿಕರು ಭಿನ್ನ ಭಿನ್ನ ಹೇಳಿಕೆಗಳನ್ನು ನೀಡುವಾಗ ನಿರ್ವಾಹಕನು ಕೆಲವೇ ಕಾಲೋಚಿತ ಮಾತುಗಳನ್ನು ಜಾಣ್ಮೆಯಿಂದ ಕೂಡಿಸಿದ್ದಲ್ಲಿ ಆ ಉತ್ತರಗಳೆಲ್ಲಾ ಒಂದು ಸುಂದರವಾದ ಹೂಗುಚ್ಛದಂತೆ ಮೆರಗಿ ಹಾಜರಿರುವ ಎಲ್ಲರಿಗೆ ಅತ್ಯಾನಂದವನ್ನು ತರುವುದು.

‘ದೇವರಿಗೆ ಯಾವಾಗಲೂ ಸ್ತೋತ್ರಯಜ್ಞವನ್ನು ಅರ್ಪಿಸೋಣ’

10. ಆದಿ ಕ್ರೈಸ್ತರು ಸಭಾ ಕೂಟಗಳನ್ನು ಹೇಗೆ ವೀಕ್ಷಿಸಿದರು?

10ಒಂದನೇ ಕೊರಿಂಥ 14:26-33ರಲ್ಲಿ ಕ್ರೈಸ್ತ ಕೂಟಗಳ ಕುರಿತ ಪೌಲನ ವರ್ಣನೆಯು ಪ್ರಥಮ ಶತಮಾನದಲ್ಲಿ ಅವು ಹೇಗೆ ನಡೆಸಲ್ಪಟ್ಟವು ಎಂಬ ಒಳನೋಟವನ್ನು ನಮಗೆ ಕೊಡುತ್ತದೆ. ಈ ವಚನಗಳನ್ನು ವಿವರಿಸುವಾಗ ಬೈಬಲ್‌ ಪರಿಣತರೊಬ್ಬರು ಬರೆದದ್ದು: “ಆರಂಭದ ಚರ್ಚ್‌ ಆರಾಧನೆಗೆ ಹಾಜರಾಗುತ್ತಿದ್ದ ಪ್ರತಿಯೊಬ್ಬನಿಗೆ ಅದರಲ್ಲಿ ಸ್ವಲ್ಪವಾದರೂ ಪಾಲ್ಗೊಳ್ಳುವ ಗೌರವ ಮತ್ತು ಕರ್ತವ್ಯದ ಭಾವನೆ ಇತ್ತೆಂಬುದು ಗಮನಾರ್ಹ. ಸುಮ್ಮನೆ ಕುಳಿತು ಕೇಳುವ ಒಂದೇ ಉದ್ದೇಶದಿಂದ ಅವನು ಅಲ್ಲಿಗೆ ಬರುತ್ತಿರಲಿಲ್ಲ. ಅಂದರೆ ಅವನು ಕೇವಲ ಪಡೆದುಕೊಳ್ಳಲಿಕ್ಕಾಗಿ ಅಲ್ಲ ಕೊಡಲಿಕ್ಕಾಗಿಯೂ ಬರುತ್ತಿದ್ದನು.” ನಿಶ್ಚಯವಾಗಿಯೂ ಆದಿ ಕ್ರೈಸ್ತರು ಸಭಾಕೂಟಗಳನ್ನು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸುವ ಅವಕಾಶಗಳಾಗಿ ವೀಕ್ಷಿಸಿದರು.—ರೋಮ. 10:10.

11. (ಎ) ಕೂಟಗಳನ್ನು ಭಕ್ತಿವರ್ಧಕವಾಗಿ ಮಾಡುವುದರಲ್ಲಿ ಯಾವುದು ಮಹತ್ತರ ಸಹಾಯ ನೀಡುತ್ತದೆ? ಏಕೆ? (ಬಿ) ಯಾವ ಸಲಹೆಗಳನ್ನು ಅನ್ವಯಿಸುವ ಮೂಲಕ ಕೂಟಗಳಲ್ಲಿ ನಾವು ನೀಡುವ ಉತ್ತರಗಳನ್ನು ಉತ್ತಮಗೊಳಿಸಬಹುದು? (ಪಾದಟಿಪ್ಪಣಿ ನೋಡಿ.)

11 ಕೂಟಗಳಲ್ಲಿ ನಮ್ಮ ನಂಬಿಕೆಯನ್ನು ವ್ಯಕ್ತಪಡಿಸುವುದು “ಸಭೆಯ ಭಕ್ತಿವೃದ್ಧಿ” ಮಾಡುವುದಕ್ಕೆ ಮಹತ್ತರ ಸಹಾಯ ನೀಡುತ್ತದೆ. ನಾವು ಎಷ್ಟೇ ವರ್ಷಗಳಿಂದ ಕೂಟಗಳಿಗೆ ಹಾಜರಾಗುತ್ತಿರಲಿ, ನಮ್ಮ ಸಹೋದರ ಸಹೋದರಿಯರು ನೀಡುವ ಉತ್ತರಗಳಿಗೆ ಕಿವಿಗೊಡುವುದು ಮನಸ್ಸಿಗೆ ಮುದನೀಡುತ್ತದೆ ಎಂಬುದನ್ನು ನೀವು ಒಪ್ಪುವಿರಿ ಖಂಡಿತ. ನಂಬಿಗಸ್ತ ವೃದ್ಧ ಜೊತೆವಿಶ್ವಾಸಿಯ ಹೃತ್ಪೂರ್ವಕ ಉತ್ತರವು ನಮ್ಮ ಹೃದಯವನ್ನು ಸ್ಪರ್ಶಿಸುತ್ತದೆ. ಪ್ರೀತಿಪರ ಹಿರಿಯನ ಒಳನೋಟವುಳ್ಳ ಉತ್ತರವು ನಮ್ಮನ್ನು ಹುರಿದುಂಬಿಸುತ್ತದೆ. ಪುಟ್ಟ ಮಗುವೊಂದು ಯೆಹೋವನಿಗೆ ಯಥಾರ್ಥ ಪ್ರೀತಿಯನ್ನು ವ್ಯಕ್ತಪಡಿಸುತ್ತ ತಟ್ಟನೆ ಆಡಿಬಿಡುವ ಪುಟ್ಟ ಉತ್ತರವು ನಮ್ಮಲ್ಲಿ ಕಿರುನಗೆ ಮೂಡಿಸದೆ ಇರಲಾರದು. ಉತ್ತರಗಳನ್ನು ಕೊಡುವ ಮೂಲಕ ನಾವೆಲ್ಲರೂ ಕ್ರೈಸ್ತ ಕೂಟಗಳನ್ನು ಭಕ್ತಿವರ್ಧಕವಾಗಿ ಮಾಡುವುದರಲ್ಲಿ ಪಾಲ್ಗೊಳ್ಳುತ್ತೇವೆಂಬುದು ನಿಶ್ಚಯ. *

12. (ಎ) ಮೋಶೆ ಮತ್ತು ಯೆರೆಮೀಯನ ಉದಾಹರಣೆಗಳಿಂದ ನಾವೇನನ್ನು ಕಲಿಯಸಾಧ್ಯವಿದೆ? (ಬಿ) ಉತ್ತರ ಹೇಳುವುದರಲ್ಲಿ ಪ್ರಾರ್ಥನೆಯು ಯಾವ ಪಾತ್ರವನ್ನು ವಹಿಸುತ್ತದೆ?

12 ಸಂಕೋಚ ಸ್ವಭಾವದವರಿಗಾದರೋ ಸಭೆಯಲ್ಲಿ ಉತ್ತರ ಹೇಳುವುದು ಕಷ್ಟಕರವಾಗಿ ಕಂಡೀತು. ನೀವು ಅಂಥವರಾಗಿದ್ದಲ್ಲಿ ನಿಮ್ಮ ಸನ್ನಿವೇಶವು ಅಸಾಮಾನ್ಯವಲ್ಲ ಎಂಬುದನ್ನು ನೆನಪಿಡಿ. ಮೋಶೆ, ಯೆರೆಮೀಯರಂಥ ನಂಬಿಗಸ್ತ ದೇವಸೇವಕರಿಗೂ ಬಹಿರಂಗವಾಗಿ ಮಾತಾಡಲು ಹಿಂಜರಿಕೆ ಹೆದರಿಕೆಯಿತ್ತು. (ವಿಮೋ. 4:10; ಯೆರೆ. 1:6) ಆದರೂ ಬಹಿರಂಗವಾಗಿ ಸ್ತುತಿಸಲು ಆ ನಂಬಿಗಸ್ತ ಸೇವಕರಿಗೆ ದೇವರು ಸಹಾಯಮಾಡಿದನು. ಅಂತೆಯೇ ನಿಮಗೂ ಸ್ತೋತ್ರಯಜ್ಞಗಳನ್ನು ಅರ್ಪಿಸಲು ಆತನು ಸಹಾಯಮಾಡುವನು. (ಇಬ್ರಿಯ 13:15 ಓದಿ.) ಉತ್ತರ ಕೊಡಲು ನಿಮಗಿರುವ ಹೆದರಿಕೆಯನ್ನು ಪರಿಹರಿಸಲು ಯೆಹೋವನ ಸಹಾಯ ನಿಮಗೆ ಹೇಗೆ ಸಿಗಬಲ್ಲದು? ಮೊದಲಾಗಿ ಕೂಟಕ್ಕಾಗಿ ಚೆನ್ನಾಗಿ ತಯಾರಿಸಿರಿ. ಅನಂತರ ರಾಜ್ಯ ಸಭಾಗೃಹಕ್ಕೆ ಹೋಗುವ ಮುನ್ನ ಯೆಹೋವನಿಗೆ ಪ್ರಾರ್ಥನೆಮಾಡಿರಿ. ಉತ್ತರ ಹೇಳಲು ನಿಮಗೆ ಧೈರ್ಯವನ್ನು ಕೊಡುವಂತೆ ನಿರ್ದಿಷ್ಟವಾಗಿ ವಿನಂತಿಸಿರಿ. (ಫಿಲಿ. 4:6) ನೀವು ವಿನಂತಿಸುವುದು ‘ದೇವರ ಚಿತ್ತಕ್ಕನುಸಾರ’ ಇರುವುದರಿಂದ ಆತನು ನಿಮ್ಮ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆಂಬ ಭರವಸೆಯಿಂದಿರಿ.—1 ಯೋಹಾ. 5:14; ಜ್ಞಾನೋ. 15:29.

‘ಭಕ್ತಿವೃದ್ಧಿ, ಪ್ರೋತ್ಸಾಹ, ಸಾಂತ್ವನ’ ನೀಡುವ ಕೂಟಗಳು

13. (ಎ) ನಮ್ಮ ಕೂಟಗಳು ಹಾಜರಾಗುವವರ ಮೇಲೆ ಯಾವ ಪರಿಣಾಮ ಬೀರತಕ್ಕದ್ದು? (ಬಿ) ಯಾವ ಪ್ರಶ್ನೆಯನ್ನು ಕೇಳಿಕೊಳ್ಳುವುದು ಹಿರಿಯರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ?

13 ಸಭಾ ಕೂಟಗಳ ಒಂದು ಪ್ರಾಮುಖ್ಯ ಉದ್ದೇಶವು ಹಾಜರಾದವರಿಗೆ ಭಕ್ತಿವೃದ್ಧಿ, ಪ್ರೋತ್ಸಾಹ, ಸಾಂತ್ವನ ನೀಡುವುದೇ ಎಂಬುದಾಗಿ ಪೌಲನು ತಿಳಿಸುತ್ತಾನೆ. * (1 ಕೊರಿಂ. 14:3) ಇಂದು ಕ್ರೈಸ್ತ ಹಿರಿಯರು ಕೂಟದಲ್ಲಿ ಕೊಡುವ ಭಾಷಣಗಳು ಸಹೋದರ ಸಹೋದರಿಯರ ಮನಸ್ಸನ್ನು ಹುರಿದುಂಬಿಸಿ ಸಾಂತ್ವನ ಕೊಡುವವೆಂದು ಅವರು ಹೇಗೆ ಖಾತ್ರಿಯಿಂದಿರಬಲ್ಲರು? ಇದನ್ನು ತಿಳಿಯಲಿಕ್ಕಾಗಿ ಯೇಸು ತನ್ನ ಪುನರುತ್ಥಾನದ ಬಳಿಕ ನಡೆಸಿದ ಒಂದು ಕೂಟವನ್ನು ನಾವೀಗ ಪರಿಗಣಿಸೋಣ.

14. (ಎ) ಯೇಸು ಏರ್ಪಡಿಸಿದ ಕೂಟಕ್ಕೆ ಮುಂಚೆ ಏನೆಲ್ಲಾ ಸಂಭವಿಸಿತು? (ಬಿ) ‘ಯೇಸು ಹತ್ತಿರಕ್ಕೆ ಬಂದು’ ಮಾತಾಡಿದಾಗ ಅಪೊಸ್ತಲರು ಏಕೆ ಉಪಶಮನ ಹೊಂದಿದ್ದಿರಬೇಕು?

14 ಮೊದಲಾಗಿ ಆ ಕೂಟಕ್ಕೆ ಮುಂಚೆ ಸಂಭವಿಸಿದ ಘಟನೆಗಳನ್ನು ಗಮನಿಸಿರಿ. ಯೇಸು ಮರಣಕ್ಕೆ ಒಪ್ಪಿಸಲ್ಪಡುವ ಮುಂಚೆ ಅಪೊಸ್ತಲರು “ಅವನನ್ನು ಬಿಟ್ಟು ಓಡಿಹೋದರು.” ಮುಂತಿಳಿಸಲ್ಪಟ್ಟಂತೆ ಅವರು “ಚೆದರಿ” ತಮ್ಮ ತಮ್ಮ ಮನೆಗೆ ಹೊರಟುಹೋದರು. (ಮಾರ್ಕ 14:50; ಯೋಹಾ. 16:32) ಮನಗುಂದಿದ್ದ ತನ್ನ ಅಪೊಸ್ತಲರನ್ನು ಯೇಸು ಪುನರುತ್ಥಾನದ ನಂತರ ಒಂದು ವಿಶೇಷ ಕೂಟಕ್ಕೆ ಆಮಂತ್ರಿಸಿದನು. * ಆಗ “ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಯೇಸು ತಮಗಾಗಿ ಗೊತ್ತುಮಾಡಿದ್ದ ಬೆಟ್ಟಕ್ಕೆ ಹೋದರು.” ಅವರು ಅಲ್ಲಿ ಒಟ್ಟುಸೇರಿದಾಗ “ಯೇಸು ಅವರ ಹತ್ತಿರಕ್ಕೆ ಬಂದು” ಮಾತಾಡಿದನು. (ಮತ್ತಾ. 28:10, 16, 18) ಅವರೊಂದಿಗೆ ಮಾತಾಡಲು ಯೇಸುವೇ ಮೊದಲ ಹೆಜ್ಜೆ ತಕ್ಕೊಂಡನು. ಅದು ಆ ಅಪೊಸ್ತಲರಿಗೆ ಎಷ್ಟೊಂದು ಉಪಶಮನ ಕೊಟ್ಟಿರಬೇಕೆಂದು ಊಹಿಸಿರಿ! ಯೇಸು ಅಲ್ಲಿ ಏನನ್ನು ಚರ್ಚಿಸಿದನು?

15. (ಎ) ಯೇಸು ಯಾವ ವಿಷಯಗಳನ್ನು ಚರ್ಚಿಸಿದನು? ಆದರೆ ಏನನ್ನು ಚರ್ಚಿಸಲಿಲ್ಲ? (ಬಿ) ಆ ಕೂಟವು ಅಪೊಸ್ತಲರ ಮೇಲೆ ಹೇಗೆ ಪರಿಣಾಮ ಬೀರಿತು?

15 “ಎಲ್ಲ ಅಧಿಕಾರವು ನನಗೆ ಕೊಡಲ್ಪಟ್ಟಿದೆ” ಎಂಬ ಪ್ರಕಟಣೆಯನ್ನು ಮಾಡುವ ಮೂಲಕ ಯೇಸು ಆ ಕೂಟವನ್ನು ಆರಂಭಿಸಿದನು. ನಂತರ “ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ” ಎಂಬ ನೇಮಕವನ್ನು ಕೊಟ್ಟನು. ಕೊನೆಗೆ, “ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂಬ ಪ್ರೀತಿಪರ ಆಶ್ವಾಸನೆಯನ್ನೂ ನೀಡಿದನು. (ಮತ್ತಾ. 28:18-20) ಆದರೆ ಯೇಸು ಆ ಕೂಟದಲ್ಲಿ ಏನು ಮಾಡಲಿಲ್ಲ ಎಂಬುದನ್ನು ನೀವು ಗಮನಿಸಿದಿರೋ? ಅವನು ತನ್ನ ಅಪೊಸ್ತಲರನ್ನು ಗದರಿಸಲಿಲ್ಲ. ಅವರ ಇರಾದೆಗಳನ್ನು ಪ್ರಶ್ನಿಸಲಿಲ್ಲ ಇಲ್ಲವೆ ಅವರ ನಂಬಿಕೆಯ ಕೊರತೆಗೆ ಸೂಚಿಸುವ ಮೂಲಕ ಅವರ ದೋಷಿಭಾವನೆಯನ್ನು ಹೆಚ್ಚಿಸಲಿಲ್ಲ. ಬದಲಾಗಿ ಅವರಿಗೆ ಮಹತ್ವದ ನೇಮಕವನ್ನು ವಹಿಸಿಕೊಡುವ ಮೂಲಕ ತನ್ನ ಮತ್ತು ತನ್ನ ತಂದೆಯ ಪ್ರೀತಿಯ ಆಶ್ವಾಸನೆಯನ್ನು ಯೇಸು ಕೊಟ್ಟನು. ಯೇಸುವಿನ ಈ ಮನೋಭಾವ ಅಪೊಸ್ತಲರ ಮೇಲೆ ಯಾವ ಪರಿಣಾಮ ಬೀರಿತು? ಅವರು ಬಹಳವಾಗಿ ಭಕ್ತಿವೃದ್ಧಿ ಹೊಂದಿದರು, ಉತ್ತೇಜನ ಮತ್ತು ಸಾಂತ್ವನ ಪಡೆದರು. ಎಷ್ಟೆಂದರೆ ಆ ಕೂಟದ ಬಳಿಕ ಸ್ವಲ್ಪದರಲ್ಲೇ ಅವರು ಪುನಃ “ಬೋಧಿಸುತ್ತಾ . . . ಸುವಾರ್ತೆಯನ್ನು ಸಾರುತ್ತಾ ಇದ್ದರು.”—ಅ. ಕಾ. 5:42.

16. ಚೈತನ್ಯದ ಮೂಲವಾಗಿರುವ ಕೂಟಗಳನ್ನು ನಡಿಸುವುದರಲ್ಲಿ ಇಂದು ಕ್ರೈಸ್ತ ಹಿರಿಯರು ಯೇಸುವಿನ ಮಾದರಿಯನ್ನು ಹೇಗೆ ಅನುಸರಿಸುತ್ತಾರೆ?

16 ಇಂದು ಹಿರಿಯರು ಸಹ ಯೇಸುವನ್ನು ಅನುಕರಿಸುತ್ತಾರೆ. ಜೊತೆವಿಶ್ವಾಸಿಗಳಿಗೆ ಯೆಹೋವನ ವಿಫಲವಾಗದ ಪ್ರೀತಿಯ ಆಶ್ವಾಸನೆಯನ್ನು ಕೊಡಲು ಕೂಟಗಳನ್ನು ಸದವಕಾಶಗಳಾಗಿ ವೀಕ್ಷಿಸುತ್ತಾರೆ. (ರೋಮ. 8:38, 39) ಆದ್ದರಿಂದ ಕೂಟಗಳಲ್ಲಿ ನೀಡುವ ಭಾಷಣಗಳಲ್ಲಿ ಹಿರಿಯರು ತಮ್ಮ ಸಹೋದರರ ಸದ್ಗುಣಗಳ ಮೇಲೆ ಕೇಂದ್ರೀಕರಿಸುತ್ತಾರೆಯೇ ಹೊರತು ಅವರ ಬಲಹೀನತೆಗಳನ್ನು ಎತ್ತಿಹೇಳುವುದಿಲ್ಲ. ತಮ್ಮ ಸಹೋದರರ ಇರಾದೆಗಳನ್ನು ಪ್ರಶ್ನಿಸುವುದಿಲ್ಲ. ಬದಲಾಗಿ ತಮ್ಮ ಜೊತೆವಿಶ್ವಾಸಿಗಳು ಯೆಹೋವನನ್ನು ಪ್ರೀತಿಸುವವರೂ ಸರಿಯಾದದ್ದನ್ನು ಮಾಡಲು ಬಯಸುವವರೂ ಆಗಿದ್ದಾರೆಂದು ಅವರು ತಮ್ಮ ಮಾತುಗಳಿಂದ ಸೂಚಿಸುತ್ತಾರೆ. (1 ಥೆಸ. 4:1, 9-12) ಕೆಲವೊಮ್ಮೆ ಹಿರಿಯರು ಸಭೆಯ ಎಲ್ಲರಿಗೆ ತಿದ್ದುಪಾಟು, ಸಲಹೆ ನೀಡಬೇಕಾಗುತ್ತದೆ ನಿಶ್ಚಯ. ಆದರೆ ಕೆಲವೇ ಮಂದಿಗೆ ತಿದ್ದುಪಾಟಿನ ಅಗತ್ಯವಿದ್ದಲ್ಲಿ ಅದನ್ನು ಇಡೀ ಸಭೆಗೆ ನೀಡುವ ಬದಲಿಗೆ ಸಲಹೆ ಬೇಕಾದವರಿಗೆ ಮಾತ್ರ ಖಾಸಗಿಯಾಗಿ ಅದನ್ನು ನೀಡುವುದು ಉತ್ತಮ. (ಗಲಾ. 6:1; 2 ತಿಮೊ. 2:24-26) ಇಡೀ ಸಭೆಯನ್ನು ಉದ್ದೇಶಿಸಿ ಮಾತಾಡುವಾಗ ತಕ್ಕ ಸಂದರ್ಭದಲ್ಲೆಲ್ಲಾ ಪ್ರಶಂಸೆ ಕೊಡುವುದನ್ನು ಹಿರಿಯರು ಗುರಿಯಾಗಿಡುತ್ತಾರೆ. (ಯೆಶಾ. 32:2) ಭಕ್ತಿವೃದ್ಧಿಯ ಮಾತುಗಳನ್ನಾಡಲು ಅವರು ಮಾಡುವ ಪ್ರಯತ್ನದಿಂದಾಗಿ, ಹಾಜರಾಗಿರುವ ಎಲ್ಲರು ಕೂಟದ ಅಂತ್ಯದಲ್ಲಿ ನವಚೈತನ್ಯ ಹಾಗೂ ನವಶಕ್ತಿ ಪಡೆದುಕೊಳ್ಳುವರು.—ಮತ್ತಾ. 11:28; ಅ. ಕಾ. 15:32.

ಕೂಟಗಳು ನಮಗೆ ಸುರಕ್ಷಿತ ಬೀಡು

17. (ಎ) ನಮ್ಮ ಕೂಟಗಳು ಸುರಕ್ಷಿತ ಬೀಡಾಗಿರುವುದು ಎಂದಿಗಿಂತಲೂ ಹೆಚ್ಚು ಪ್ರಾಮುಖ್ಯವಾಗಿದೆ ಏಕೆ? (ಬಿ) ಕೂಟಗಳನ್ನು ಭಕ್ತಿವರ್ಧಕವಾಗಿ ಮಾಡಲು ವೈಯಕ್ತಿಕವಾಗಿ ನೀವೇನು ಮಾಡಬಲ್ಲಿರಿ? (“ಕೂಟಗಳನ್ನು ನಿಮಗೂ ಇತರರಿಗೂ ಭಕ್ತಿವರ್ಧಕವನ್ನಾಗಿ ಮಾಡುವ 10 ವಿಧಗಳು” ಚೌಕ ನೋಡಿ.)

17 ಸೈತಾನನ ಲೋಕವು ಹೆಚ್ಚೆಚ್ಚು ಕ್ಲೇಶವನ್ನು ತರುತ್ತಿರುವಾಗ ನಮ್ಮ ಕ್ರೈಸ್ತ ಕೂಟಗಳು ಸಕಲರಿಗೆ ಸಾಂತ್ವನದ ಮೂಲವಾದ ಸುರಕ್ಷಿತ ಬೀಡಾಗಿರುವಂತೆ ನಾವು ಖಾತ್ರಿಯಿಂದಿರಬೇಕು. (1 ಥೆಸ. 5:11) ಕೆಲವು ವರ್ಷಗಳ ಹಿಂದೆ ಒಬ್ಬಾಕೆ ಸಹೋದರಿ ಮತ್ತು ಆಕೆಯ ಗಂಡ ತೀವ್ರ ಸಂಕಷ್ಟಗಳನ್ನು ಎದುರಿಸಿದರು. ಆಕೆ ಅಂದದ್ದು: “ರಾಜ್ಯ ಸಭಾಗೃಹದಲ್ಲಿರುವುದು ಯೆಹೋವನ ಆರೈಕೆಯ ಹಸ್ತದಲ್ಲಿ ಇದ್ದಂತಿತ್ತು. ಕ್ರೈಸ್ತ ಸಹೋದರ ಸಹೋದರಿಯರೊಂದಿಗೆ ನಾವಲ್ಲಿ ಇದ್ದ ಕೆಲವು ತಾಸುಗಳು ನಮ್ಮ ಚಿಂತೆಯನ್ನು ಯೆಹೋವನ ಮೇಲೆ ಹಾಕಬಲ್ಲೆವು ಎಂಬ ಅನಿಸಿಕೆಯನ್ನು ಕೊಟ್ಟವು ಮತ್ತು ತಕ್ಕಮಟ್ಟಿಗಿನ ಆಂತರಿಕ ಶಾಂತಿಯನ್ನು ಅನುಭವಿಸಿದೆವು.” (ಕೀರ್ತ. 55:22) ಹೀಗೆ ನಮ್ಮ ಕೂಟಗಳಿಗೆ ಹಾಜರಾಗುವ ಎಲ್ಲರೂ ತದ್ರೀತಿಯ ಪ್ರೋತ್ಸಾಹವನ್ನೂ ಸಾಂತ್ವನವನ್ನೂ ಪಡೆದುಕೊಳ್ಳಲಿ. ಇದಕ್ಕಾಗಿ ನಾವೆಲ್ಲರೂ ಕ್ರೈಸ್ತ ಕೂಟಗಳನ್ನು ಭಕ್ತಿವರ್ಧಕವಾಗಿ ಮಾಡುವುದರಲ್ಲಿ ನಮ್ಮ ನಮ್ಮ ಪಾಲನ್ನು ಮಾಡುತ್ತಾ ಇರೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 1 ಒಂದನೇ ಶತಮಾನದ ಕ್ರೈಸ್ತ ಕೂಟಗಳಲ್ಲಿದ್ದ ಕೆಲವು ವೈಶಿಷ್ಟ್ಯಗಳು ನಿಂತುಹೋಗುವವು ಎಂದು ಮುಂತಿಳಿಸಲಾಗಿತ್ತು. ಉದಾಹರಣೆಗೆ, ನಾವೀಗ “ವಿವಿಧ ಭಾಷೆಗಳಲ್ಲಿ” ಮಾತಾಡುವುದಿಲ್ಲ ಅಥವಾ ‘ಪ್ರವಾದಿಸುವುದಿಲ್ಲ.’ (1 ಕೊರಿಂ. 13:8; 14:5) ಹಾಗಿದ್ದರೂ ಪೌಲನ ಸೂಚನೆಗಳು ಇಂದು ಕ್ರೈಸ್ತ ಕೂಟಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತ ಒಳನೋಟವನ್ನು ನಮಗೆ ಕೊಡುತ್ತವೆ.

^ ಪ್ಯಾರ. 11 ಕೂಟಗಳಲ್ಲಿ ನಾವು ಕೊಡುವ ಉತ್ತರಗಳನ್ನು ಉತ್ತಮಗೊಳಿಸಲು ಸಲಹೆಗಾಗಿ 2003, ಸೆಪ್ಟೆಂಬರ್‌ 1ರ ಕಾವಲಿನಬುರುಜು ಪುಟ 19-22 ನೋಡಿ.

^ ಪ್ಯಾರ. 13 “ಪ್ರೋತ್ಸಾಹ” ಮತ್ತು “ಸಾಂತ್ವನ” ಎಂಬ ಎರಡು ಪದಗಳ ನಡುವಣ ವ್ಯತ್ಯಾಸವನ್ನು ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ಓಲ್ಡ್‌ ಆ್ಯಂಡ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಹೀಗೆ ವಿವರಿಸುತ್ತದೆ: “ಸಾಂತ್ವನ” ಎಂದು ಅನುವಾದಿಸಲಾದ ಗ್ರೀಕ್‌ ಪದದಲ್ಲಿ “[ಪ್ರೋತ್ಸಾಹಕ್ಕಿಂತ] ಹೆಚ್ಚು ಮಟ್ಟಿನ ಕೋಮಲತೆ” ಇದೆ.—ಯೋಹಾನ 11:19 ಹೋಲಿಸಿ.

^ ಪ್ಯಾರ. 14 ಯೇಸು ಸುಮಾರು ‘ಐನೂರಕ್ಕಿಂತಲೂ ಹೆಚ್ಚು ಮಂದಿಗೆ ಕಾಣಿಸಿಕೊಂಡನು’ ಎಂದು ಪೌಲನು ತದನಂತರ ನಿರ್ದೇಶಿಸಿದಾಗ ಈ ಸಂದರ್ಭಕ್ಕೇ ಸೂಚಿಸಿದ್ದಿರಬಹುದು.—1 ಕೊರಿಂ. 15:6.

ನಿಮ್ಮ ಉತ್ತರವೇನು?

• ಕ್ರೈಸ್ತ ಕೂಟಗಳು ಎಷ್ಟು ಪ್ರಾಮುಖ್ಯವಾಗಿವೆ?

• ಕೂಟಗಳಲ್ಲಿ ಕೊಡಲಾಗುವ ಉತ್ತರಗಳಿಂದ ‘ಸಭೆಯ ಭಕ್ತಿವೃದ್ಧಿಯಾಗುತ್ತದೆ’ ಹೇಗೆ?

• ಯೇಸು ತನ್ನ ಹಿಂಬಾಲಕರೊಂದಿಗೆ ನಡೆಸಿದ ಒಂದು ಕೂಟದಿಂದ ನಾವೇನನ್ನು ಕಲಿಯುತ್ತೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 22, 23ರಲ್ಲಿರುವ ಚೌಕ/ ಚಿತ್ರಗಳು]

ಕೂಟಗಳನ್ನು ನಿಮಗೂ ಇತರರಿಗೂ ಭಕ್ತಿವರ್ಧಕವನ್ನಾಗಿ ಮಾಡುವ 10 ವಿಧಗಳು

ಮುಂಚಿತವಾಗಿ ತಯಾರಿಸಿ. ರಾಜ್ಯ ಸಭಾಗೃಹದಲ್ಲಿ ಚರ್ಚಿಸಲಾಗುವ ವಿಷಯಭಾಗವನ್ನು ನೀವು ಮುಂಚಿತವಾಗಿ ತಯಾರಿಸುವಾಗ ಕೂಟಗಳು ನಿಮ್ಮ ಆಸಕ್ತಿಯನ್ನು ಪೂರ್ಣವಾಗಿ ಸೆಳೆದು ಮನಸ್ಸನ್ನು ಆಳವಾಗಿ ಪ್ರಭಾವಿಸುವವು.

ಕ್ರಮವಾಗಿ ಹಾಜರಾಗಿ. ಕೂಟದಲ್ಲಿ ಒಳ್ಳೇ ಹಾಜರಿ ಇರುವಾಗ ಪ್ರತಿಯೊಬ್ಬರಿಗೆ ಹೆಚ್ಚು ಉತ್ತೇಜನ ದೊರೆಯುವುದರಿಂದ ನಿಮ್ಮ ಹಾಜರಿಯೂ ಅಗತ್ಯವೆಂಬುದನ್ನು ಮರೆಯಬೇಡಿ.

ಸಮಯಕ್ಕೆ ಸರಿಯಾಗಿ ಬನ್ನಿ. ಕೂಟ ಪ್ರಾರಂಭವಾಗುವ ಮುಂಚೆಯೇ ಬಂದು ಕೂತಿದ್ದರೆ ಆರಂಭದ ಗೀತೆ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಸಾಧ್ಯ. ಅವು ಯೆಹೋವನ ಆರಾಧನೆಯ ಭಾಗ.

ಬೇಕಾದ ಸಕಲ ಸಾಹಿತ್ಯವನ್ನು ತನ್ನಿ. ನಿಮ್ಮ ಬೈಬಲನ್ನೂ ಕೂಟಗಳಲ್ಲಿ ಬಳಸಲಾಗುವ ಪ್ರಕಾಶನಗಳನ್ನೂ ತನ್ನಿರಿ. ಹೀಗೆ ಚರ್ಚಿಸಲಾಗುವ ವಿಷಯವನ್ನು ನೀವು ತೆರೆದು ನೋಡಿ ಚೆನ್ನಾಗಿ ಗ್ರಹಿಸಿಕೊಳ್ಳುವಿರಿ.

ಅಪಕರ್ಷಣೆ ವರ್ಜಿಸಿರಿ. ಉದಾಹರಣೆಗೆ, ಮೊಬೈಲ್‌ನಲ್ಲಿ ಬರುವ ಮೆಸೆಜ್‌ಗಳನ್ನು ಕೂಟದ ಸಮಯದಲ್ಲಿ ಓದಬೇಡಿ, ನಂತರ ಓದಿ. ಈ ರೀತಿಯಲ್ಲಿ ನಿಮ್ಮ ವೈಯಕ್ತಿಕ ವಿಷಯಗಳಿಗೆ ತಕ್ಕ ಸ್ಥಾನ ಕೊಡಿರಿ.

ಭಾಗವಹಿಸಿರಿ. ಹೆಚ್ಚು ಮಂದಿ ಉತ್ತರ ಕೊಡುವಾಗ ಅವರ ನಂಬಿಕೆಯ ವಿಭಿನ್ನ ಅಭಿವ್ಯಕ್ತಿಗಳು ಇತರರನ್ನು ಉತ್ತೇಜಿಸಿ ಭಕ್ತಿವೃದ್ಧಿ ಮಾಡುತ್ತವೆ.

ನಿಮ್ಮ ಉತ್ತರ ಚುಟುಕಾಗಿರಲಿ. ಇದರಿಂದ ಆದಷ್ಟು ಹೆಚ್ಚು ಮಂದಿಗೆ ಉತ್ತರ ಹೇಳುವ ಅವಕಾಶವು ದೊರೆಯುತ್ತದೆ.

ನೇಮಕಗಳನ್ನು ಪೂರೈಸಿರಿ. ನೀವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ವಿದ್ಯಾರ್ಥಿಗಳಾಗಿದ್ದರೆ ಅಥವಾ ಸೇವಾ ಕೂಟದಲ್ಲಿ ಭಾಗವಹಿಸುವುದಾದರೆ ಅದಕ್ಕಾಗಿ ಚೆನ್ನಾಗಿ ತಯಾರಿಸಿರಿ. ಮುಂಚಿತವಾಗಿಯೇ ರಿಹರ್ಸ್‌ ಮಾಡಿರಿ. ನಿಮಗೆ ದೊರೆತ ನೇಮಕಗಳನ್ನು ತಪ್ಪಿಸಬೇಡಿರಿ.

ಭಾಗವಹಿಸಿದವರನ್ನು ಶ್ಲಾಘಿಸಿರಿ. ಕೂಟದಲ್ಲಿ ಭಾಷಣಗಳನ್ನು ನೀಡುವವರಿಗೆ ಅಥವಾ ಉತ್ತರ ಕೊಡುವವರಿಗೆ ಅವರ ಒಳ್ಳೇ ತಯಾರಿಗಾಗಿ ಶ್ಲಾಘಿಸಿರಿ.

ಸಹವಾಸದಲ್ಲಿ ಆನಂದಿಸಿ. ಕೂಟಗಳ ಮುಂಚೆ ಮತ್ತು ನಂತರ ಒಬ್ಬರನ್ನೊಬ್ಬರು ಸ್ನೇಹದಿಂದ ವಂದಿಸಿರಿ ಮತ್ತು ಭಕ್ತಿವರ್ಧಕ ಸಂಭಾಷಣೆ ಮಾಡಿರಿ. ಇದು ಕೂಟಗಳ ಹಾಜರಿಯಿಂದ ಬರುವ ಉಲ್ಲಾಸ ಹಾಗೂ ಪ್ರಯೋಜನವನ್ನು ಇಮ್ಮಡಿಗೊಳಿಸುವುದು.