ನಿಮ್ಮ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಿ
ಕುಟುಂಬ ಸಂತೋಷಕ್ಕೆ ಕೀಲಿಕೈ
ನಿಮ್ಮ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಿ
ಹದಿವಯಸ್ಕಳಾದ ಶ್ರುತಿ *: “ಲೈಂಗಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ನನಗೆ. ಆದರೆ ಅಪ್ಪಅಮ್ಮನ ಹತ್ತಿರ ಕೇಳಿದರೆ ನನ್ನ ನಡತೆ ಬಗ್ಗೆ ಸಂಶಯಿಸುತ್ತಾರೆ ಎಂಬ ಭಯ.”
ಶ್ರುತಿಯ ತಾಯಿ ಹೇಮ: “ಶ್ರುತಿಯ ಜೊತೆ ಕೂತು ಲೈಂಗಿಕತೆ ಬಗ್ಗೆ ಹೇಳಬೇಕೆಂದು ನನಗೆ ತುಂಬ ಮನಸ್ಸು. ಆದರೆ ಅವಳಿಗೆಲ್ಲಿ ಸಮಯ, ಅವಳು ಇಡೀ ದಿನ ಬ್ಯುಸಿ.”
ಎಲ್ಲಿ ನೋಡಿದರೂ ಸೆಕ್ಸ್ ಇದ್ದೇ ಇದೆ. ಟಿವಿಯಲ್ಲಿ, ಚಲನಚಿತ್ರಗಳಲ್ಲಿ, ಜಾಹೀರಾತುಗಳಲ್ಲಿ ಅದರ ಚಿತ್ರಣಗಳಿವೆ. ಆದರೆ ಲೈಂಗಿಕ ವಿಷಯಗಳ ಬಗ್ಗೆ ಇಂದಿಗೂ ಪ್ರಸ್ತಾಪವೇ ಇರದ ಒಂದೇ ಒಂದು ಕ್ಷೇತ್ರವೆಂದರೆ ಹೆತ್ತವರ-ಮಕ್ಕಳ ನಡುವಿನ ಸಂಭಾಷಣೆಯಲ್ಲಿ. “ಹೆತ್ತವರೊಂದಿಗೆ ಸೆಕ್ಸ್ ಕುರಿತು ಮಾತಾಡಲು ನಮಗೆಷ್ಟು ಕಸಿವಿಸಿ, ಮುಜುಗರವಾಗುತ್ತದೆ ಎಂದು ಅವರಿಗೆ ಗೊತ್ತಿದ್ದರೆ ಒಳ್ಳೇದಿತ್ತು. ಅವರಿಗಿಂತ ಒಬ್ಬ ಫ್ರೆಂಡ್ ಜೊತೆ ಮಾತಾಡುವುದು ಹೆಚ್ಚು ಸುಲಭ” ಎನ್ನುತ್ತಾನೆ ಕೆನಡದ ತರುಣ ಮೈಕಲ್.
ಸೆಕ್ಸ್ ಬಗ್ಗೆ ಮಕ್ಕಳೊಂದಿಗೆ ಮಾತಾಡುವುದೆಂದರೆ ಹೆಚ್ಚಿನ ಹೆತ್ತವರೂ ಮೂಗುಮುರಿಯುತ್ತಾರೆ. ಸೆಕ್ಸ್ ಕುರಿತು ಮಕ್ಕಳೊಂದಿಗೆ ಮಾತಾಡುವುದರ ಬಗ್ಗೆ ಆರೋಗ್ಯ ಶಿಕ್ಷಕಿ ಡೆಬ್ರ ಡಬ್ಲ್ಯು. ಹಾಫ್ನೆರ್ ತಮ್ಮ ಪುಸ್ತಕದಲ್ಲಿ ಹೇಳುವುದು: “ಅನೇಕ ಹೆತ್ತವರು ನನ್ನ ಬಳಿ ಬಂದು, ‘ಲೈಂಗಿಕತೆ ಅಥವಾ ಹರೆಯದ ಕುರಿತ ಪುಸ್ತಕವನ್ನು ಖರೀದಿಸಿ ಪ್ರಾಯಕ್ಕೆ ಬರದ ತಮ್ಮ ಮಕ್ಕಳ ರೂಮಿನಲ್ಲಿ ಇಡುತ್ತೇವೆ, ಆಮೇಲೆ ಅದರ ಬಗ್ಗೆ ಮಾತೆತ್ತುವುದಿಲ್ಲ’ ಎಂದು ನನಗೆ ಹೇಳಿದ್ದಾರೆ.” ಹಾಫ್ನೆರ್ ಹೇಳುವುದು, ಈ ಮೂಲಕ ಹೆತ್ತವರು ಮಕ್ಕಳಿಗೆ ಕೊಡುವ ಸ್ಪಷ್ಟ ಸಂದೇಶ: “ಮಕ್ಕಳೇ, ನೀವು ನಿಮ್ಮ ದೇಹ ಹಾಗೂ ಸೆಕ್ಸ್ ಕುರಿತು ತಿಳಿದುಕೊಳ್ಳಬೇಕೆಂಬ ಮನಸ್ಸು ನಮಗಿದೆ. ಆದರೆ ಅದರ ಬಗ್ಗೆ ನಿಮ್ಮೊಂದಿಗೆ ಮಾತಾಡಲು ಮಾತ್ರ ನಮಗಿಷ್ಟವಿಲ್ಲ.”
ನೀವು ಹೆತ್ತವರಾಗಿದ್ದರೆ ಈ ವಿಷಯದಲ್ಲಿ ನಿಮ್ಮ ಮನೋಭಾವ ಭಿನ್ನವಾಗಿರಬೇಕು. ಏಕೆಂದರೆ ಮಕ್ಕಳೊಂದಿಗೆ ಸೆಕ್ಸ್ ಕುರಿತು ಸ್ವತಃ ನೀವೇ ಮಾತಾಡುವುದು ಬಹಳ ಪ್ರಾಮುಖ್ಯ. ಇದಕ್ಕೆ ಮೂರು ಕಾರಣಗಳನ್ನು ಪರಿಗಣಿಸೋಣ.
1. ಲೈಂಗಿಕತೆಗೆ ಲೋಕ ಕೊಡುವ ಅರ್ಥ ಬದಲಾಗಿದೆ. “ಸೆಕ್ಸ್ ಎಂದರೆ ಗಂಡಹೆಂಡತಿಯ ಸಂಭೋಗ ಮಾತ್ರ ಎಂಬ ಅರ್ಥ ಇಂದು ಲೋಕದಲ್ಲಿಲ್ಲ. ಈಗ ಬಾಯಿ ಸೆಕ್ಸ್, ಗುದ ಸೆಕ್ಸ್, ಸೈಬರ್‌ಸೆಕ್ಸ್, ಸೆಕ್ಸ್‌ಟಿಂಗ್ * ಇವೆಲ್ಲವೂ ಇವೆ” ಎನ್ನುತ್ತಾನೆ 20ರ ಅಜಯ್.
2. ನಿಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲೇ ತಪ್ಪು ಮಾಹಿತಿ ಸಿಗುವ ಅಪಾಯವಿದೆ. “ಪುಟಾಣಿಗಳು ಶಾಲೆಯ ಮೆಟ್ಟಲೇರುತ್ತಿದ್ದಂತೆ ಸೆಕ್ಸ್ ಬಗ್ಗೆ ಕೇಳಿಸಿಕೊಳ್ಳುತ್ತಾರೆ. ನೀವು ಕೊಡಬೇಕೆಂದಿರುವ ಸರಿಯಾದ ಮಾಹಿತಿ ಅವರಿಗೆ ಸಿಗುವುದಿಲ್ಲ” ಎನ್ನುತ್ತಾಳೆ ಶೀಲಾ ಎಂಬ ತಾಯಿ.
3. ನಿಮ್ಮ ಮಕ್ಕಳಿಗೆ ಸೆಕ್ಸ್ ಕುರಿತ ಪ್ರಶ್ನೆಗಳಿರುತ್ತವಾದರೂ ಅದರ ಬಗ್ಗೆ ನಿಮ್ಮೊಂದಿಗೆ ಮಾತಾಡಲು ಮುಂದೆ ಬರುವುದಿಲ್ಲ. “ನಿಜ ಹೇಳಬೇಕೆಂದರೆ, ಅಪ್ಪಅಮ್ಮನ ಜೊತೆ ಸೆಕ್ಸ್ ವಿಷಯ ಹೇಗೆ ಮಾತಾಡಬೇಕೆಂದೇ ನನಗೆ ತೋಚುವುದಿಲ್ಲ” ಎನ್ನುತ್ತಾಳೆ ಬ್ರಸಿಲ್‌ನ 15 ವರ್ಷದ ಆ್ಯನ.
ಮಕ್ಕಳಿಗೆ ಲೈಂಗಿಕ ಶಿಕ್ಷಣ ಕೊಡುವುದು ದೇವರು ನಿಮಗೆ ಕೊಟ್ಟ ಜವಾಬ್ದಾರಿ. (ಎಫೆಸ 6:4) ಸೆಕ್ಸ್ ಬಗ್ಗೆ ಮಾತಾಡಲು ನಿಮಗೂ ನಿಮ್ಮ ಮಕ್ಕಳಿಗೂ ಮುಜುಗರವಾಗಬಹುದೇನೋ ನಿಜ. ಆದರೆ 14ರ ತಮನ್ನಾ ಹೇಳುವ ಮಾತಿಗೆ ಅನೇಕ ಯುವಜನರು ತಲೆಯಾಡಿಸುತ್ತಾರೆ. ಅವಳನ್ನುವುದು: “ನಾವು ಸೆಕ್ಸ್ ಬಗ್ಗೆ ಟೀಚರಿಂದಲೋ ಟಿವಿ ಕಾರ್ಯಕ್ರಮದಿಂದಲೋ ಅಲ್ಲ ನಮ್ಮ ಹೆತ್ತವರಿಂದಲೇ ತಿಳಿಯಲು ಇಷ್ಟಪಡುತ್ತೇವೆ.” ಹಾಗಾದರೆ ಮುಜುಗರದ್ದಾದರೂ ಮುಖ್ಯವಾದ ಈ ವಿಷಯದ ಬಗ್ಗೆ ಮಕ್ಕಳೊಂದಿಗೆ ಹೇಗೆ ಮಾತಾಡುವಿರಿ?
ವಯಸ್ಸಿಗನುಸಾರ ಮಾಹಿತಿ ಕೊಡಿ
ಯಾರ ಸಂಪರ್ಕವಿಲ್ಲದೇ ಪ್ರತ್ಯೇಕವಾಗಿ ಜೀವಿಸುತ್ತಿರುವ ಮಕ್ಕಳನ್ನು ಬಿಟ್ಟು ಹೆಚ್ಚಿನವರು ಚಿಕ್ಕಂದಿನಿಂದಲೇ ಸೆಕ್ಸ್ ಬಗ್ಗೆ ಕೇಳಿಸಿಕೊಳ್ಳುತ್ತಾರೆ. ಇನ್ನಷ್ಟು ನಿದ್ದೆಗೆಡಿಸುವ ವಿಷಯವೇನೆಂದರೆ ಈ “ಕಡೇ ದಿವಸಗಳಲ್ಲಿ” ದುಷ್ಟರು ಇನ್ನೂ “ಹೆಚ್ಚಾದ ಕೆಟ್ಟತನ” ನಡೆಸುತ್ತಿರುವುದೇ. (2 ತಿಮೊಥೆಯ 3:1, 13, ಸತ್ಯವೇದವು) ಹಾಗಾಗಿ ಇಂದು ಅನೇಕ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿರುವುದು ದುಃಖಕರ.
ಆದ್ದರಿಂದ ನಿಮ್ಮ ಮಕ್ಕಳು ತುಂಬ ಚಿಕ್ಕವರಿರುವಾಗಲೇ ಸೆಕ್ಸ್ ಕುರಿತು ಅವರಿಗೆ ಶಿಕ್ಷಣ ಕೊಡಲಾರಂಭಿಸುವುದು ಬಹಳ ಮುಖ್ಯ. “ಮಕ್ಕಳು ಹದಿವಯಸ್ಸಿಗೆ ಹತ್ತಿರವಾಗುವ ತನಕ ಕಾಯುವುದಾದರೆ ಹರೆಯದಲ್ಲಿ ಸಹಜವಾಗಿ ಬರುವ ಸಂಕೋಚದಿಂದಾಗಿ ಅವರು ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತಾಡಲಿಕ್ಕಿಲ್ಲ” ಎನ್ನುತ್ತಾಳೆ ಜರ್ಮನಿಯ ರೆನಾಟೆ ಎಂಬ ತಾಯಿ. ಆದರೆ ಮಹತ್ವದ ವಿಷಯವೇನೆಂದರೆ ಮಕ್ಕಳ ವಯಸ್ಸಿಗೆ ತಕ್ಕಂಥ ಲೈಂಗಿಕ ಶಿಕ್ಷಣ ನೀಡುವುದೇ.
ಶಾಲಾ ವಯಸ್ಸನ್ನು ತಲಪಿರದ ಮಕ್ಕಳಿಗೆ: ಮಕ್ಕಳಿಗೆ ಜನನಾಂಗಗಳ ಸೂಕ್ತ ಹೆಸರುಗಳನ್ನು ಕಲಿಸಬೇಕು ಮತ್ತು ಅವುಗಳನ್ನು ಯಾರೂ ಮುಟ್ಟಬಾರದೆಂದು ಒತ್ತಿಹೇಳಬೇಕು. “ನನ್ನ ಮಗ 3 ವರ್ಷದವನಿರುವಾಗಲೇ ಅವನಿಗೆ ಇದನ್ನು ಕಲಿಸಲು ಆರಂಭಿಸಿದೆ. ಏಕೆಂದರೆ ಶಿಕ್ಷಕರು, ಮಕ್ಕಳನ್ನು ನೋಡಿಕೊಳ್ಳುವವರು ಇಲ್ಲವೆ ದೊಡ್ಡ ಮಕ್ಕಳು ಅವನಿಗೆ ಕಿರುಕುಳ ಕೊಡಬಹುದೆಂಬ ಭಯ ನನ್ನನ್ನು ಕಾಡುತ್ತಿತ್ತು. ಆಗಂತುಕರ ಕೈಯಿಂದ ತನ್ನನ್ನು ರಕ್ಷಿಸಿಕೊಳ್ಳುವ ಬಗೆಯನ್ನು ಅವನು ತಿಳಿದಿರುವ ಅಗತ್ಯವಿತ್ತು” ಎನ್ನುತ್ತಾಳೆ ಮೆಕ್ಸಿಕೊದ ಜೂಲ್ಯ ಎಂಬ ತಾಯಿ.
ಪ್ರಯತ್ನಿಸಿ ನೋಡಿ: ನಿಮ್ಮ ಮಗುವಿನ ಜನನಾಂಗಗಳನ್ನು ಯಾರಾದರೂ ಮುಟ್ಟಲು ಪ್ರಯತ್ನಿಸಿದ್ದಲ್ಲಿ ಅದನ್ನು ದೃಢವಾಗಿ ವಿರೋಧಿಸಲು ತರಬೇತಿ ನೀಡಿ. ಉದಾಹರಣೆಗೆ, ಅಂಥ ಸಂದರ್ಭದಲ್ಲಿ “ನನ್ನನ್ನು ಮುಟ್ಟಬೇಡ! ನಿನ್ನ ಬಗ್ಗೆ ಹೇಳ್ತೇನೆ ನೋಡು!” ಎಂದು ಹೇಳಲು ನೀವು ಕಲಿಸಿಕೊಡಬಹುದು. ಒಂದುವೇಳೆ ಅಂಥ ವ್ಯಕ್ತಿಗಳು ಏನಾದರೂ ಕೊಡುತ್ತೇನೆಂದು ಪುಸಲಾಯಿಸಿದರೂ ಬೆದರಿಕೆ ಹಾಕಿದರೂ ಪರವಾಗಿಲ್ಲ ಅದನ್ನು ಬಂದು ಹೇಳಲೇಬೇಕೆಂದು ಮಕ್ಕಳನ್ನು ಉತ್ತೇಜಿಸಿ.
ಪ್ರಾಥಮಿಕ ಶಾಲಾ ಮಕ್ಕಳಿಗೆ: ಈ ವಯಸ್ಸಿನ ಅವಧಿಯಲ್ಲಿ ಮಕ್ಕಳಿಗೆ ಇನ್ನಷ್ಟನ್ನು ಸ್ವಲ್ಪ ಸ್ವಲ್ಪವಾಗಿ ಕಲಿಸಿಕೊಡಿ. “ಸೆಕ್ಸ್ ಕುರಿತು ಮಾತು ಆರಂಭಿಸುವ ಮುಂಚೆ ಈಗಾಗಲೇ ನಿಮ್ಮ ಮಕ್ಕಳಿಗೆ ಎಷ್ಟು ಗೊತ್ತಿದೆ ಎಂಬುದನ್ನು ಮೊದಲು ಕಂಡುಹಿಡಿಯಿರಿ. ಇನ್ನೂ ಹೆಚ್ಚಿನ ವಿಷಯ ತಿಳಿಯಲು ಬಯಸುತ್ತಾರೋ ಎಂದು ತಿಳಿದುಕೊಳ್ಳಿ. ಆದರೆ ಒತ್ತಾಯದಿಂದ ಚರ್ಚೆ ಮಾಡಬೇಡಿ. ನೀವು ಅವರೊಂದಿಗೆ ಕ್ರಮವಾಗಿ ಸಮಯ ಕಳೆಯುವಲ್ಲಿ ಆ ವಿಷಯ ಸಹಜವಾಗಿಯೇ ಬರುವುದು” ಎನ್ನುತ್ತಾರೆ ಸುಹಾಸ್ ಎಂಬ ತಂದೆ.
ಪ್ರಯತ್ನಿಸಿ ನೋಡಿ: ಒಮ್ಮೆಲೇ ಎಲ್ಲವನ್ನು ಹೇಳಿ ಮುಗಿಸುವ ಬದಲು ಆಗಾಗ್ಗೆ ಸ್ವಲ್ಪ ಸ್ವಲ್ಪವಾಗಿ ಚರ್ಚಿಸಿ. (ಧರ್ಮೋಪದೇಶಕಾಂಡ 6:6-9) ಹೀಗೆ ಮಾಡುವುದರಿಂದ ನೀವು ಅತಿಯಾದ ಮಾಹಿತಿಯಿಂದ ಮಕ್ಕಳನ್ನು ಕಂಗೆಡಿಸುವುದಿಲ್ಲ. ಅಷ್ಟಲ್ಲದೆ ಅವರು ಬೆಳೆಯುತ್ತಾ ಹೋದಂತೆ ಅವರ ವಯಸ್ಸಿಗೆ ಎಷ್ಟು ಬೇಕೋ ಅಷ್ಟು ಮಾಹಿತಿ ಅವರಿಗೆ ಸಿಕ್ಕಿದಂತಾಗುವುದು.
ತರುಣರಿಗೆ: ಸೆಕ್ಸ್‌ಗೆ ಸಂಬಂಧಪಟ್ಟ ದೈಹಿಕ, ಭಾವನಾತ್ಮಕ, ನೈತಿಕ ಅಂಶಗಳ ಬಗ್ಗೆ ನಿಮ್ಮ ತರುಣ ಮಕ್ಕಳಿಗೆ ಸಾಕಷ್ಟು ಮಾಹಿತಿ ಇದೆಯೋ ಎಂದು ಈ ಘಟ್ಟದಲ್ಲಿ ಖಚಿತಪಡಿಸಿಕೊಳ್ಳಿ. “ನಮ್ಮ ಶಾಲೆಯಲ್ಲಿ ಈಗಾಗಲೇ ಹುಡುಗ ಹುಡುಗಿಯರು ‘ಹುಕಪ್’ ಮಾಡುತ್ತಾರೆ. ಕ್ರೈಸ್ತಳಾಗಿರುವ ನನಗಾದರೋ ಸೆಕ್ಸ್ ಬಗ್ಗೆ ಸಾಕಷ್ಟು ತಿಳಿವಳಿಕೆ ಇರಬೇಕೆಂಬುದು ನನ್ನ ಅನಿಸಿಕೆ. ಸೆಕ್ಸ್ ಬಗ್ಗೆ ಹೆತ್ತವರೊಂದಿಗೆ ಮಾತಾಡುವುದು ತುಂಬ ಮುಜುಗರ ನಿಜ. ಆದರೂ ನಾನದನ್ನು ತಿಳಿದುಕೊಳ್ಳಲೇಬೇಕು” ಎನ್ನುತ್ತಾಳೆ ಈ ಮುಂಚೆ ತಿಳಿಸಲಾದ 15ರ ಆ್ಯನ. *
ಎಚ್ಚರವಹಿಸಿ: ಸೆಕ್ಸ್ ಬಗ್ಗೆ ಹದಿಹರೆಯದವರು ಪ್ರಶ್ನೆಗಳನ್ನು ಕೇಳದಿರಬಹುದು ಏಕೆಂದರೆ ಹೆತ್ತವರು ತಮ್ಮ ನಡತೆಯನ್ನು ಶಂಕಿಸುವರು ಎಂಬ ಭಯ ಅವರಿಗೆ. ಮಹೇಶ್ ಎಂಬ ತಂದೆಗೆ ಇದು ತಿಳಿದುಬಂತು. ಅವರನ್ನುವುದು: “ನಾವು ನಮ್ಮ
ಮಗನೊಂದಿಗೆ ಸೆಕ್ಸ್ ಬಗ್ಗೆ ಮಾತಾಡಬೇಕೆಂದಿದ್ದಾಗ ಅವನು ಹಿಂದೇಟುಹಾಕಿದ. ಅವನ ನಡತೆಯ ಬಗ್ಗೆ ನಾವು ಸಂಶಯಿಸುತ್ತಿದ್ದರಿಂದಲೇ ಮಾತಾಡಬಯಸುತ್ತೇವೆ ಎಂದು ಅವ ನೆನಸಿದ. ಆದರೆ ನಮಗೆ ಆ ರೀತಿ ಯಾವುದೇ ಸಂಶಯವಿರಲಿಲ್ಲ; ಸುತ್ತಮುತ್ತ ಇರುವ ಕೆಟ್ಟ ವಿಷಯಗಳ ಪ್ರಭಾವದಿಂದ ಅವನು ತನ್ನನ್ನು ರಕ್ಷಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಮಾತ್ರ ನಾವು ಮಾತಾಡಲಿಚ್ಛಿಸುತ್ತೇವೆ ಎಂದು ಹೇಳಿದೆವು.”ಪ್ರಯತ್ನಿಸಿ ನೋಡಿ: ನಿಮ್ಮ ಹದಿಹರೆಯದ ಮಗನಿಗೆ/ಳಿಗೆ ಸೆಕ್ಸ್ ಕುರಿತ ಒಂದು ನಿರ್ದಿಷ್ಟ ವಿಷಯವನ್ನು ನೇರವಾಗಿ ಕೇಳಬೇಡಿ. ಬದಲಾಗಿ ಆ ಬಗ್ಗೆ ಅವನ/ಳ ಸಹಪಾಠಿಗಳ ನೋಟವೇನೆಂದು ಕೇಳಿ. ಉದಾಹರಣೆಗೆ, “ಇಂದು ಅನೇಕರು ಬಾಯಿ ಸೆಕ್ಸ್ ತಪ್ಪಲ್ಲ ಎಂದು ನೆನಸುತ್ತಾರೆ. ನಿನ್ನ ಸಹಪಾಠಿಗಳು ಕೂಡ ಹಾಗೆಯೇ ನೆನಸುತ್ತಾರಾ?” ಎಂದು ಕೇಳಿ. ಇಂಥ ಪರೋಕ್ಷ ಪ್ರಶ್ನೆಗಳಿಂದ ನಿಮ್ಮ ಹರೆಯದ ಮಕ್ಕಳನ್ನು ಮಾತಿಗೆಳೆಯಲು ಹಾಗೂ ಅವರು ತಮ್ಮ ನೋಟಗಳನ್ನು ಮುಕ್ತವಾಗಿ ತಿಳಿಸಲು ಸುಲಭವಾದೀತು.
ಮುಜುಗರ ಹೋಗಲಾಡಿಸುವುದು ಹೇಗೆ?
ಮಕ್ಕಳೊಂದಿಗೆ ಸೆಕ್ಸ್ ಬಗ್ಗೆ ಮಾತಾಡುವುದು ಹೆತ್ತವರಿಗಿರುವ ಕರ್ತವ್ಯಗಳಲ್ಲಿ ಅತ್ಯಂತ ಮುಜುಗರದ ವಿಷಯ ನಿಜ. ಹಾಗಿದ್ದರೂ ನೀವು ಮಾಡುವ ಪ್ರಯತ್ನ ಸಾರ್ಥಕ. “ಮಾತಾಡುತ್ತಾ ಮಾತಾಡುತ್ತಾ ಸಂಕೋಚ ದೂರವಾಗುತ್ತದೆ. ಹೆತ್ತವರ-ಮಕ್ಕಳ ಬಂಧ ಇನ್ನೂ ಬಲಗೊಳ್ಳುತ್ತದೆ” ಎನ್ನುತ್ತಾರೆ ಅಂಜು ಎಂಬ ತಾಯಿ. ಹಿಂದೆ ತಿಳಿಸಲಾದ ಮಹೇಶ್ ಸಹ ಇದನ್ನು ಒಪ್ಪುತ್ತಾರೆ. “ಯಾವುದೇ ವಿಷಯ ಇರಲಿ ಕುಟುಂಬದಲ್ಲಿ ಅದರ ಬಗ್ಗೆ ಮುಕ್ತವಾಗಿ ಚರ್ಚಿಸುವ ರೂಢಿ ಬೆಳೆಸಿಕೊಂಡಲ್ಲಿ ಸೆಕ್ಸ್‌ನಂಥ ಮುಜುಗರದ ವಿಷಯವನ್ನೂ ಚರ್ಚಿಸಲು ಸುಲಭವಾಗುತ್ತದೆ. ಮುಜುಗರ ಪೂರ್ಣವಾಗಿ ಮಾಯವಾಗಲಿಕ್ಕಿಲ್ಲ. ಆದರೂ ಮುಕ್ತ ಸಂವಾದ ನಿಜ ಕ್ರೈಸ್ತ ಕುಟುಂಬದ ಜೀವಾಳ.” (w10-E 11/01)
[ಪಾದಟಿಪ್ಪಣಿಗಳು]
^ ಪ್ಯಾರ. 3 ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.
^ ಪ್ಯಾರ. 8 ಸೆಕ್ಸ್‌ಟಿಂಗ್ ಅಂದರೆ ಮೊಬೈಲ್ ಮೂಲಕ ಸೆಕ್ಸ್ ಕುರಿತ ಮೆಸೆಜ್, ಚಿತ್ರಗಳನ್ನು ಕಳುಹಿಸುವುದು.
^ ಪ್ಯಾರ. 19 ನಿಮ್ಮ ತರುಣ ಮಕ್ಕಳೊಂದಿಗೆ ಸೆಕ್ಸ್ ಕುರಿತ ಚರ್ಚೆಗಳಿಗಾಗಿ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಸಂಪುಟ 1) ಪುಸ್ತಕದ ಅಧ್ಯಾಯಗಳು 23-26; ಎಚ್ಚರ! 2007 (ಏಪ್ರಿಲ್-ಜೂನ್) ಪುಟ 26; ಎಚ್ಚರ! 2007 (ಜನವರಿ-ಮಾರ್ಚ್) ಪುಟ 12-17ನ್ನು ಬಳಸಿ.
[ಪುಟ 22ರಲ್ಲಿರುವ ಚೌಕ/ಚಿತ್ರ]
ಕೇಳಿಕೊಳ್ಳಿ . . .
ಜಗತ್ತಿನಾದ್ಯಂತ ಇರುವ ಯುವಜನರು ಬರೆದ ಈ ಹೇಳಿಕೆಗಳನ್ನು ಓದಿರಿ. ಕೊಡಲಾದ ಪ್ರಶ್ನೆಗಳನ್ನು ಅನಂತರ ನಿಮಗೆ ಕೇಳಿಕೊಳ್ಳಿ.
• “ಸೆಕ್ಸ್‌ಗೆ ಸಂಬಂಧಪಟ್ಟ ಲೇಖನಗಳನ್ನು ಓದಿದ ಮೇಲೆ ಏನಾದರೂ ಪ್ರಶ್ನೆ ಇದ್ದರೆ ಕೇಳುವಂತೆ ನನ್ನ ಹೆತ್ತವರು ಹೇಳುತ್ತಾರೆ. ಆದರೆ ನೇರವಾಗಿ ಅವರೇ ನನ್ನೊಟ್ಟಿಗೆ ಮಾತಾಡುತ್ತಿದ್ದರೆ ತುಂಬ ಚೆನ್ನಾಗಿರುತ್ತಿತ್ತು.”—ಆ್ಯನ, ಬ್ರಸಿಲ್.
ಮಕ್ಕಳಿಗೆ ಇಂಥ ಲೇಖನಗಳನ್ನು ಬರೇ ಓದಲು ಕೊಡುವುದಕ್ಕಿಂತ ಹೆಚ್ಚನ್ನು ಮಾಡುವುದು ಏಕೆ ಪ್ರಾಮುಖ್ಯವೆಂದು ನೀವು ನೆನಸುತ್ತೀರಿ?
• “ಎಷ್ಟೋ ವಿಕೃತ ಲೈಂಗಿಕ ಕೃತ್ಯಗಳ ಬಗ್ಗೆ ಕೇಳಿದ್ದೇನೆ. ಇಂಥ ವಿಷಯಗಳ ಬಗ್ಗೆ ಬಹುಶಃ ನನ್ನ ತಂದೆಗೂ ಗೊತ್ತಿರಲಿಕ್ಕಿಲ್ಲ, ಒಂದುವೇಳೆ ಕೇಳಿದರೆ ಕಂಗಾಲಾಗುವರು.”—ಕೆನ್, ಕೆನಡ.
ಸೆಕ್ಸ್ ಬಗ್ಗೆ ತಮ್ಮ ಮನಸ್ಸಿನಲ್ಲಿ ಇದ್ದದ್ದನ್ನು ನಿಮಗೆ ಹೇಳಲು ಮಕ್ಕಳು ಯಾಕೆ ಅಂಜುತ್ತಿರಬಹುದು?
• “ಹೇಗೋ ಧೈರ್ಯಮಾಡಿ ಸೆಕ್ಸ್ ಬಗ್ಗೆ ಅಪ್ಪಅಮ್ಮನ ಬಳಿ ಒಂದು ಪ್ರಶ್ನೆಕೇಳಿದೆ. ‘ಇದನ್ನು ಯಾಕೆ ಕೇಳುತ್ತಿದ್ದಿಯಾ? ಏನಾದರೂ ಮಾಡಿದ್ದಿಯಾ?’ ಎಂದು ನಾನೇ ಏನೋ ತಪ್ಪು ಮಾಡಿರುವ ಹಾಗೆ ನನ್ನನ್ನು ಮರುಪ್ರಶ್ನಿಸಿದರು.”—ಮಾಸಾಮಿ, ಜಪಾನ್.
ನಿಮ್ಮ ಮಕ್ಕಳು ಸೆಕ್ಸ್ ಬಗ್ಗೆ ಏನಾದರೂ ಪ್ರಶ್ನೆ ಕೇಳಿದಾಗ ನಿಮ್ಮ ಪ್ರತಿಕ್ರಿಯೆಯು ಮುಂದಣ ಚರ್ಚೆಗಳಿಗೆ ದಾರಿಮಾಡಬಹುದು ಅಥವಾ ಸಂಭಾಷಣೆಯನ್ನು ಮುಗಿಸಿಬಿಡಬಹುದು. ಹೇಗೆ?
• “‘ನಿನ್ನ ಪ್ರಾಯದಲ್ಲಿ ನಾವೂ ಇಂಥ ಪ್ರಶ್ನೆಗಳನ್ನೇ ಕೇಳುತ್ತಿದ್ದೆವು, ನೀನು ಕೂಡ ಹಾಗೆ ಕೇಳುವುದು ಸಹಜ’ ಎಂದು ನನ್ನ ಹೆತ್ತವರು ನನಗೆ ಹೇಳುವುದಾದರೆ ಅದು ನನಗೆ ತುಂಬ ಭರವಸೆ ಕೊಡಬಲ್ಲದು.”—ಲಿಸೆಟ್, ಫ್ರಾನ್ಸ್.
ಮಕ್ಕಳು ನಿಮ್ಮೊಂದಿಗೆ ಸೆಕ್ಸ್ ಬಗ್ಗೆ ಅಳುಕಿಲ್ಲದೆ ಮಾತಾಡುವಂತೆ ನೀವು ಅವರನ್ನು ಹೇಗೆ ಹಾಯಾಗಿರಿಸಬಲ್ಲಿರಿ?
• “ಅಮ್ಮ ನನಗೆ ಸೆಕ್ಸ್‌ನ ಕುರಿತ ಪ್ರಶ್ನೆಗಳನ್ನು ಕೇಳುತ್ತಿದ್ದರೂ ಅದನ್ನು ಮೃದು ಧ್ವನಿಯಲ್ಲಿ ಕೇಳುತ್ತಿದ್ದರು. ಈ ಧ್ವನಿಯಲ್ಲಿ ಮಾತಾಡುವುದು ತುಂಬ ಮುಖ್ಯವೆಂಬುದು ನನ್ನ ಭಾವನೆ. ಏಕೆಂದರೆ ಆಗ ಮಕ್ಕಳಿಗೆ ತಾವು ತಪ್ಪಿತಸ್ಥರೋ ಎಂದು ಅನಿಸುವುದಿಲ್ಲ.”—ಜರಾಲ್ಡ್, ಫ್ರಾನ್ಸ್.
ಮಕ್ಕಳೊಂದಿಗೆ ಸೆಕ್ಸ್ ಬಗ್ಗೆ ನೀವು ಯಾವ ಧ್ವನಿಯಲ್ಲಿ ಮಾತಾಡುತ್ತೀರಿ? ಅದರಲ್ಲೇನಾದರೂ ಬದಲಾವಣೆ ಮಾಡಬೇಕೋ?