ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಮ್ಮ ಪರಮಾಧಿಕಾರಿ ಕರ್ತ!

ಯೆಹೋವನು ನಮ್ಮ ಪರಮಾಧಿಕಾರಿ ಕರ್ತ!

ಯೆಹೋವನು ನಮ್ಮ ಪರಮಾಧಿಕಾರಿ ಕರ್ತ!

‘[“ಪರಮಾಧಿಕಾರಿ,” NW] ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡಿದ್ದೇನೆ.’—ಕೀರ್ತ. 73:28.

1. ಒಂದನೇ ಕೊರಿಂಥ 7:31ರ ಮಾತುಗಳಿಂದ ಪೌಲನು ಯಾವುದಕ್ಕೆ ಸೂಚಿಸುತ್ತಿದ್ದನೆಂಬುದು ವ್ಯಕ್ತ?

“ಈಲೋಕದ ದೃಶ್ಯವು ಮಾರ್ಪಡುತ್ತಾ ಇದೆ.” ಹೀಗೆಂದು ಹೇಳಿದವನು ಅಪೊಸ್ತಲ ಪೌಲನು. (1 ಕೊರಿಂ. 7:31) ಅವನು ಈ ಲೋಕವನ್ನು ಒಂದು ನಾಟಕರಂಗಕ್ಕೆ ಹೋಲಿಸುತ್ತಿದ್ದನೆಂಬುದು ವ್ಯಕ್ತ. ಆ ನಾಟಕದ ದೃಶ್ಯಗಳು ಬದಲಾಗುವ ತನಕ ಒಳ್ಳೇ ಅಥವಾ ಕೆಟ್ಟ ಪಾತ್ರಧಾರಿಗಳು ಅದರಲ್ಲಿ ತಮ್ಮ ಪಾತ್ರಗಳನ್ನು ಅಭಿನಯಿಸುತ್ತಾ ಇರುತ್ತಾರೆ.

2, 3. (ಎ) ಯೆಹೋವನ ಪರಮಾಧಿಕಾರಕ್ಕೆ ಹಾಕಲಾದ ಸವಾಲನ್ನು ಯಾವುದಕ್ಕೆ ಹೋಲಿಸಬಹುದು? (ಬಿ) ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸುವೆವು?

2 ಇಂದು ಪರಮಪ್ರಧಾನ ನಾಟಕವೊಂದು ಲೋಕವೆಂಬ ನಾಟಕರಂಗದಲ್ಲಿ ನಡೆಯುತ್ತಾ ಇದೆ. ಅದರಲ್ಲಿ ನೀವೂ ಒಬ್ಬ ಪಾತ್ರಧಾರಿ! ಅದು ವಿಶೇಷವಾಗಿ ಯೆಹೋವ ದೇವರ ಪರಮಾಧಿಕಾರದ ನಿರ್ದೋಷೀಕರಣಕ್ಕೆ ಸಂಬಂಧಿಸಿದೆ. ಈ ನಾಟಕವನ್ನು ಒಂದು ನಿರ್ದಿಷ್ಟ ದೇಶದಲ್ಲಿ ಇರಬಹುದಾದ ಸನ್ನಿವೇಶದಿಂದ ಚಿತ್ರೀಕರಿಸಬಹುದು. ಒಂದು ಕಡೆ ಕಾಯಿದೆಕ್ರಮವನ್ನು ಕಾಪಾಡುವ ಸಂವಿಧಾನಬದ್ಧ ಸರ್ಕಾರವು ಅಲ್ಲಿದೆ. ಇನ್ನೊಂದು ಕಡೆ ವಂಚನೆ, ಹಿಂಸಾಚಾರ, ಕೊಲೆಪಾತಕದಿಂದ ಕೂಡಿದ ಅಪರಾಧಿ ಸಂಘಟನೆಯು ಆಡಳಿತ ನಡೆಸುತ್ತದೆ. ಈ ನ್ಯಾಯಬಾಹಿರ ಸಂಘಟನೆಯು ಪರಮಾಧಿಕಾರ ಆಡಳಿತಕ್ಕೆ ಪ್ರತಿ ಸವಾಲಾಗಿ ನಿಂತು ಪ್ರಜೆಗಳೆಲ್ಲರು ತಮ್ಮ ಸರ್ಕಾರಕ್ಕೆ ತೋರಿಸುವ ನಿಷ್ಠೆಯನ್ನು ಪರೀಕ್ಷೆಗೆ ಹಾಕುತ್ತದೆ.

3 ವಿಶ್ವವ್ಯಾಪಿರಂಗದಲ್ಲೂ ತದ್ರೀತಿಯ ಸನ್ನಿವೇಶ ಅಸ್ತಿತ್ವದಲ್ಲಿದೆ. ಒಂದು ಕಡೆ ‘ಪರಮಾಧಿಕಾರಿ ಕರ್ತನಾದ’ ಯೆಹೋವನ ಸಂವಿಧಾನಬದ್ಧ ಸರ್ಕಾರವಿದೆ. (ಅ. ಕಾ. 4:24) ಇನ್ನೊಂದು ಕಡೆ “ಕೆಡುಕನ” ವಶದಲ್ಲಿರುವ ಅಪರಾಧಿ ಸಂಘಟನೆಯು ಮಾನವಕುಲವನ್ನು ಇಂದು ಬೆದರಿಸುತ್ತಲಿದೆ. (1 ಯೋಹಾ. 5:19) ಇದು ದೇವರ ನ್ಯಾಯಬದ್ಧ ಸರ್ಕಾರಕ್ಕೆ ಸವಾಲನ್ನು ಹಾಕುತ್ತಾ ಆತನ ಪರಮಾಧಿಕಾರ ಆಡಳಿತದ ಕೆಳಗಿನ ಪ್ರಜೆಗಳೆಲ್ಲರ ನಿಷ್ಠೆಯನ್ನು ಪರೀಕ್ಷೆಗೆ ಹಾಕುತ್ತದೆ. ಈ ಸನ್ನಿವೇಶ ಉಂಟಾದದ್ದು ಹೇಗೆ? ದೇವರು ಅದನ್ನು ಅನುಮತಿಸುವುದೇಕೆ? ನಾವು ವ್ಯಕ್ತಿಶಃ ಆ ಕುರಿತು ಏನು ಮಾಡಬಲ್ಲೆವು?

ನಾಟಕದ ಮುಖ್ಯಾಂಶಗಳು

4. ವಿಶ್ವವ್ಯಾಪಿ ನಾಟಕದ ಆರಂಭವು ಪರಸ್ಪರ ಸಂಬಂಧಿಸಿರುವ ಯಾವ ಎರಡು ವಿವಾದಾಂಶಗಳನ್ನು ಒಳಗೂಡಿದೆ?

4 ಈ ವಿಶ್ವವ್ಯಾಪಿ ನಾಟಕದ ಆರಂಭವು ಪರಸ್ಪರ ಸಂಬಂಧಿಸಿರುವ ಎರಡು ವಿವಾದಾಂಶಗಳನ್ನು ಒಳಗೂಡಿದೆ. ಅವು ಯಾವುವೆಂದರೆ ಯೆಹೋವನ ಪರಮಾಧಿಕಾರ ಮತ್ತು ಮಾನವ ಸಮಗ್ರತೆ. ಬೈಬಲಿನಲ್ಲಿ ಯೆಹೋವನನ್ನು “ಪರಮಾಧಿಕಾರಿ ಕರ್ತ” ಎಂದು ಅನೇಕ ಬಾರಿ ಕರೆಯಲಾಗಿದೆ. ಉದಾಹರಣೆಗೆ ಕೀರ್ತನೆಗಾರನು ಆತನಲ್ಲಿ ಪೂರ್ಣ ಭರವಸೆಯಿಟ್ಟವನಾಗಿ, ‘[“ಪರಮಾಧಿಕಾರಿ,” NW] ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡಿದ್ದೇನೆ’ ಎಂದು ಹಾಡಿದನು. (ಕೀರ್ತ. 73:28) “ಪರಮಾಧಿಕಾರ” ಎಂದರೆ ಶಕ್ತಿಯಲ್ಲಿ ಅಥವಾ ಆಳ್ವಿಕೆಯಲ್ಲಿ ಸರ್ವಶ್ರೇಷ್ಠತೆ ಎಂದರ್ಥ. ಒಬ್ಬ ಪರಮಾಧಿಕಾರಿಯು ಸರ್ವಶ್ರೇಷ್ಠ ಅಧಿಕಾರವನ್ನು ನಡಿಸುತ್ತಾನೆ. ಯೆಹೋವ ದೇವರನ್ನು ಸರ್ವಶ್ರೇಷ್ಠನೆಂದು ವೀಕ್ಷಿಸುವುದಕ್ಕೆ ನಮಗೆ ಸಕಾರಣಗಳಿವೆ.—ದಾನಿ. 7:22.

5. ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯಲು ನಾವೇಕೆ ಪ್ರೇರಿಸಲ್ಪಡಬೇಕು?

5 ಸೃಷ್ಟಿಕರ್ತನಾದ ಯೆಹೋವ ದೇವರು ಭೂಮಿಯ ಮತ್ತು ಇಡೀ ವಿಶ್ವದ ಪರಮಾಧಿಕಾರಿ. (ಪ್ರಕಟನೆ 4:11 ಓದಿ.) ಯೆಹೋವನು ನಮ್ಮ ನ್ಯಾಯಾಧಿಪತಿ, ನಿಯಮವಿಧಾಯಕ ಹಾಗೂ ರಾಜನೂ ಆಗಿದ್ದಾನೆ. ಏಕೆಂದರೆ ಆತನು ತನ್ನ ವಿಶ್ವ ಸರ್ಕಾರದಲ್ಲಿ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಶಾಖೆಗಳನ್ನು ಒಟ್ಟಾಗಿ ತಾನೇ ನಿರ್ವಹಿಸುತ್ತಾನೆ. (ಯೆಶಾ. 33:22) ನಮ್ಮ ಅಸ್ತಿತ್ವವು ಯೆಹೋವನಿಂದಲೇ ಹಾಗೂ ನಾವು ಆತನ ಮೇಲೆ ಹೊಂದಿಕೊಂಡಿರುವುದರಿಂದ ಆತನನ್ನು ನಮ್ಮ ಪರಮಾಧಿಕಾರಿ ಕರ್ತನಾಗಿ ವೀಕ್ಷಿಸಬೇಕು. “ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನು ಸಮಸ್ತವನ್ನೂ ಆಳುತ್ತಾನೆ” ಎಂಬುದನ್ನು ಯಾವಾಗಲೂ ನಾವು ಮನಸ್ಸಿನಲ್ಲಿಟ್ಟಲ್ಲಿ ಆತನ ಮಹೋನ್ನತ ಸ್ಥಾನವನ್ನು ಎತ್ತಿಹಿಡಿಯಲು ಪ್ರೇರಿಸಲ್ಪಡುವೆವು.—ಕೀರ್ತ. 103:19; ಅ. ಕಾ. 4:24.

6. ಸಮಗ್ರತೆ ಅಂದರೇನು?

6 ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಬೇಕಾದರೆ ನಾವು ಆತನಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲೇಬೇಕು. “ಸಮಗ್ರತೆ” ಅಂದರೆ ನೈತಿಕ ಸ್ವಸ್ಥಚಿತ್ತತೆ ಅಥವಾ ಯೆಹೋವನಿಗೆ ಪೂರ್ಣ ಹೃದಯದ ಭಕ್ತಿ ತೋರಿಸುವುದು ಎಂದರ್ಥ. ಸಮಗ್ರತೆ ಪಾಲಕನು ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ನಮ್ಮ ಪೂರ್ವಜನಾದ ಯೋಬನು ಅಂಥ ಒಬ್ಬ ಮನುಷ್ಯನಾಗಿದ್ದನು.—ಯೋಬ 1:1.

ನಾಟಕದ ತೆರೆ ಏಳುತ್ತದೆ

7, 8. ಯೆಹೋವನ ಪರಮಾಧಿಕಾರದ ನ್ಯಾಯಬದ್ಧತೆಗೆ ಸೈತಾನನು ಸವಾಲೊಡ್ಡಿದ್ದು ಹೇಗೆ?

7 ಸುಮಾರು ಆರು ಸಾವಿರ ವರ್ಷಗಳ ಹಿಂದೆ ಆತ್ಮಜೀವಿಯೊಬ್ಬನು ಯೆಹೋವನ ಪರಮಾಧಿಕಾರದ ನ್ಯಾಯಬದ್ಧತೆಯ ಬಗ್ಗೆ ಸವಾಲೊಡ್ಡಿದನು. ತನಗೆ ಆರಾಧನೆ ಸಲ್ಲಬೇಕೆಂಬ ಸ್ವಾರ್ಥಪರ ಅಪೇಕ್ಷೆಯೇ ಆ ದಂಗೆಕೋರನ ಮಾತುಗಳನ್ನೂ ಕೃತ್ಯಗಳನ್ನೂ ಪ್ರೇರೇಪಿಸಿತು. ಮೊದಲನೇ ಮಾನವ ದಂಪತಿಯಾದ ಆದಾಮಹವ್ವರನ್ನು ಯೆಹೋವನ ಪರಮಾಧಿಕಾರಕ್ಕೆ ದ್ರೋಹಬಗೆಯುವಂತೆ ಅವನು ಪ್ರೇರಿಸಿದನು. ಮತ್ತು ಯೆಹೋವನು ಸುಳ್ಳಾಡಿದನೆಂದು ವಾದಿಸಿದ ಮೂಲಕ ಆತನ ನಾಮಕ್ಕೆ ಕಳಂಕ ತಂದನು. (ಆದಿಕಾಂಡ 3:1-5 ಓದಿ.) ಹೀಗೆ ಆ ದಂಗೆಕೋರನು ಮಹಾ ವಿರೋಧಿಯಾದ ಸೈತಾನ (ಎದುರಾಳಿ), ಪಿಶಾಚ (ನಿಂದಕ), ಸರ್ಪ (ವಂಚಕ) ಮತ್ತು ಘಟಸರ್ಪ (ಭಕ್ಷಕ) ಆದನು.—ಪ್ರಕ. 12:9.

8 ಹೀಗೆ ಸೈತಾನನು ತನ್ನನ್ನು ಒಬ್ಬ ಪ್ರತಿಸ್ಪರ್ಧಿ ಅಧಿಪತಿಯಾಗಿ ಮಾಡಿಕೊಂಡನು. ಈ ಸವಾಲು ಎದುರಾದಾಗ ಪರಮಾಧಿಕಾರಿ ಕರ್ತ ಯೆಹೋವನು ಏನು ಮಾಡಲಿದ್ದನು? ಆತನು ಆ ಮೂವರು ದಂಗೆಕೋರರನ್ನು ಅಂದರೆ ಸೈತಾನ, ಆದಾಮ ಮತ್ತು ಹವ್ವರನ್ನು ಆ ಕೂಡಲೆ ನಾಶಮಾಡಲಿದ್ದನೋ? ನಿಶ್ಚಯವಾಗಿಯೂ ಹಾಗೆ ಮಾಡುವ ಶಕ್ತಿ ಆತನಿಗಿತ್ತು. ಮತ್ತು ಅಂಥ ಕ್ರಿಯೆಯು ಯಾರು ಸರ್ವಶ್ರೇಷ್ಠ ಅಧಿಕಾರಿ ಎಂಬ ಪ್ರಶ್ನೆಯನ್ನು ಆ ಕೂಡಲೆ ಇತ್ಯರ್ಥಗೊಳಿಸುತ್ತಿತ್ತು. ಮಾತ್ರವಲ್ಲ, ನಿಯಮದ ಉಲ್ಲಂಘನೆಗಾಗಿ ಯೆಹೋವನು ವಿಧಿಸಿದ ದಂಡನೆ ಕೂಡ ಆ ಕೂಡಲೆ ಸತ್ಯವಾಗುತ್ತಿತ್ತು. ಆದರೆ ಯೆಹೋವನು ಅಂಥ ಕ್ರಮವನ್ನು ಕೈಕೊಳ್ಳಲಿಲ್ಲ. ಏಕೆ?

9. ಸೈತಾನನು ಯಾವ ಯಾವ ವಿಷಯದಲ್ಲಿ ಸವಾಲೊಡ್ಡಿದನು?

9 ಸೈತಾನನು ಸುಳ್ಳಾಡಿದ ಮೂಲಕ ಮತ್ತು ಆದಾಮಹವ್ವರನ್ನು ದೇವರಿಂದ ವಿಮುಖರಾಗುವಂತೆ ಮಾಡಿದ ಮೂಲಕ ಮಾನವರ ವಿಧೇಯತೆಯನ್ನು ಕೇಳಿಕೊಳ್ಳುವ ಯೆಹೋವನ ನ್ಯಾಯಬದ್ಧ ಹಕ್ಕಿಗೆ ಸವಾಲೊಡ್ಡಿದನು. ಅದಲ್ಲದೆ, ಮೊದಲನೇ ಮಾನವ ದಂಪತಿಯು ದೇವರಿಗೆ ಅವಿಧೇಯರಾಗುವಂತೆ ಪ್ರೇರೇಪಿಸುವ ಮೂಲಕ ಎಲ್ಲ ಬುದ್ಧಿಜೀವಿಗಳ ನಿಷ್ಠೆಗೆ ಸೈತಾನನು ಸವಾಲೊಡ್ಡಿದನು. ಯೆಹೋವನ ಪರಮಾಧಿಕಾರಕ್ಕೆ ನಿಷ್ಠಾವಂತನಾಗಿ ಉಳಿದ ಯೋಬನ ವಿಷಯವು ತೋರಿಸುವಂತೆ, ತಾನು ಮಾನವರೆಲ್ಲರನ್ನೂ ದೇವರಿಂದ ವಿಮುಖರಾಗುವಂತೆ ಮಾಡಶಕ್ತನೆಂದು ಸೈತಾನನು ವಾದಿಸಿದನು.—ಯೋಬ 2:1-5.

10. ದೇವರು ತನ್ನ ಪರಮಾಧಿಕಾರದ ಸಮರ್ಥನೆಯನ್ನು ಮುಂದೂಡುವ ಮೂಲಕ ಯಾವುದಕ್ಕೆ ಅನುಮತಿಕೊಟ್ಟನು?

10 ಯೆಹೋವನು ತನ್ನ ಪರಮಾಧಿಕಾರದ ಸಮರ್ಥನೆಯನ್ನು ಮತ್ತು ಸೈತಾನನ ನಾಶನವನ್ನು ಮುಂದೂಡುವ ಮೂಲಕ ಸೈತಾನನಿಗೆ ತನ್ನ ವಾದವನ್ನು ರುಜುಪಡಿಸಲು ಸಮಯ ಕೊಟ್ಟಿದ್ದಾನೆ. ಮನುಷ್ಯರಿಗೆ ಸಹ ತನ್ನ ಪರಮಾಧಿಕಾರಕ್ಕೆ ನಿಷ್ಠೆಯನ್ನು ತೋರಿಸುವ ಸದವಕಾಶವನ್ನು ದೇವರು ಕೊಟ್ಟಿರುತ್ತಾನೆ. ಶತಮಾನಗಳು ದಾಟಿಹೋದಂತೆ ಏನು ಸಂಭವಿಸಿತು? ಸೈತಾನನು ಒಂದು ಬಲಾಢ್ಯ ಅಪರಾಧಿ ಸಂಘಟನೆಯನ್ನು ರಚಿಸಿ, ಬೆಳೆಸಿದ್ದಾನೆ. ಯೆಹೋವನು ಕಟ್ಟಕಡೆಗೆ ಅದನ್ನೂ ಅದರ ರಚಕ ಪಿಶಾಚನನ್ನೂ ನಾಶಗೊಳಿಸಿ ತನ್ನ ನ್ಯಾಯಬದ್ಧ ಪರಮಾಧಿಕಾರಕ್ಕೆ ಪ್ರಚಂಡ ರುಜುವಾತನ್ನು ಕೊಡುವನು. ಯೆಹೋವ ದೇವರಿಗೆ ಆ ಧನಾತ್ಮಕ ಫಲಿತಾಂಶದ ವಿಷಯದಲ್ಲಿ ಎಷ್ಟು ಖಾಚಿತ್ಯವಿತ್ತೆಂದರೆ ಏದೆನ್‌ ತೋಟದಲ್ಲಿ ದಂಗೆಯು ನಡೆದಾಗಲೇ ಆತನು ಅದನ್ನು ಮುಂತಿಳಿಸಿದನು.—ಆದಿ. 3:15.

11. ಯೆಹೋವನ ಪರಮಾಧಿಕಾರದ ವಿಷಯದಲ್ಲಿ ಅನೇಕ ಮಾನವರು ಏನನ್ನು ಮಾಡಿದ್ದಾರೆ?

11 ಅನೇಕ ನಂಬಿಗಸ್ತ ಮಾನವರು ಯೆಹೋವನ ಪರಮಾಧಿಕಾರ ಮತ್ತು ಆತನ ನಾಮದ ಪವಿತ್ರೀಕರಣದ ಸಂಬಂಧದಲ್ಲಿ ತಮ್ಮ ನಂಬಿಕೆಯನ್ನು ತೋರಿಸಿ ಸಮಗ್ರತೆಯನ್ನು ಕಾಪಾಡಿಕೊಂಡಿದ್ದಾರೆ. ಅವರಲ್ಲಿ ಹೇಬೆಲ, ಹನೋಕ, ನೋಹ, ಅಬ್ರಹಾಮ, ಸಾರ, ಮೋಶೆ, ರೂತ್‌, ದಾವೀದ, ಯೇಸು ಕ್ರಿಸ್ತ, ಆತನ ಆರಂಭದ ಶಿಷ್ಯರು ಹಾಗೂ ಇಂದಿರುವ ಲಕ್ಷಾಂತರ ಮಂದಿ ಸಮಗ್ರತೆ ಪಾಲಕರು ಸೇರಿದ್ದಾರೆ. ಯೆಹೋವನ ಪರಮಾಧಿಕಾರದ ಇಂಥ ಸಮರ್ಥಕರು ಸೈತಾನನು ಸುಳ್ಳುಗಾರನು ಎಂದು ರುಜುಪಡಿಸುವುದರಲ್ಲಿ ಸಹಭಾಗಿಗಳು. ಮಾತ್ರವಲ್ಲ ಮಾನವರೆಲ್ಲರನ್ನೂ ದೇವರಿಂದ ದೂರಸರಿಸಲು ತಾನು ಶಕ್ತನೆಂದು ಕೊಚ್ಚಿಕೊಂಡ ಮೂಲಕ ಪಿಶಾಚನು ಯೆಹೋವನ ನಾಮದ ಮೇಲೆ ತಂದ ಕಳಂಕವನ್ನು ತೆಗೆದುಹಾಕುವುದರಲ್ಲಿ ಸಹ ಅವರು ಭಾಗಿಗಳು.—ಜ್ಞಾನೋ. 27:11.

ನಾಟಕದ ಸುಖಾಂತ್ಯ ಖಚಿತ

12. ದೇವರು ದುಷ್ಟತನವನ್ನು ನಿರಂತರವೂ ಸಹಿಸಲಾರನು ಎಂಬ ವಿಷಯದಲ್ಲಿ ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?

12 ಯೆಹೋವನು ಬೇಗನೆ ತನ್ನ ಪರಮಾಧಿಕಾರವನ್ನು ಖಂಡಿತ ಸಮರ್ಥಿಸುವನೆಂಬ ನಿಶ್ಚಯತೆ ನಮಗಿರಬಲ್ಲದು. ಆತನು ದುಷ್ಟತನವನ್ನು ನಿರಂತರವಾಗಿ ಸಹಿಸಿಕೊಳ್ಳನು. ಮತ್ತು ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂದು ನಮಗೆ ಗೊತ್ತಿದೆ. ಜಲಪ್ರಳಯದ ಸಮಯದಲ್ಲಿ ಯೆಹೋವನು ದುಷ್ಟರ ವಿರುದ್ಧವಾಗಿ ಕ್ರಮಕೈಗೊಂಡನು. ಸೊದೋಮ್‌ ಗೊಮೋರವನ್ನು ದುಷ್ಟತನಕ್ಕಾಗಿ ನಾಶಮಾಡಿದನು. ದೇವರನ್ನು ವಿರೋಧಿಸಿದ ಫರೋಹನನ್ನೂ ಅವನ ಸೈನ್ಯವನ್ನೂ ನಿರ್ನಾಮಮಾಡಿದನು. ಸೀಸೆರ ಮತ್ತು ಅವನ ಸೈನ್ಯ, ಸನ್ಹೇರೀಬ ಮತ್ತು ಅವನ ಅಶ್ಶೂರ್ಯ ಸೇನೆ ಮಹೋನ್ನತನನ್ನು ಎದುರಿಸಲಾರದೆ ಸೋತುಹೋದವು. (ಆದಿ. 7:1, 23; 19:24, 25; ವಿಮೋ. 14:30, 31; ನ್ಯಾಯ. 4:15, 16; 2 ಅರ. 19:35, 36) ಆದ್ದರಿಂದ ತನ್ನ ನಾಮಕ್ಕೆ ಅಗೌರವ ತೋರಿಸುವವರನ್ನು, ತನ್ನ ಸಾಕ್ಷಿಗಳನ್ನು ದುರುಪಚರಿಸುವವರನ್ನು ಯೆಹೋವನು ನಿರಂತರವೂ ಸಹಿಸಲಾರನು ಎಂಬ ಭರವಸೆ ನಮಗಿರಬಲ್ಲದು. ಅದಲ್ಲದೆ ಯೇಸುವಿನ ಸಾನ್ನಿಧ್ಯದ ಸೂಚನೆಗೆ ಹಾಗೂ ಈ ದುಷ್ಟ ವ್ಯವಸ್ಥೆಯ ಅಂತ್ಯಕ್ಕೆ ಪುರಾವೆಯನ್ನು ನಾವಿಂದು ಕಣ್ಣಾರೆ ಕಾಣುತ್ತಿದ್ದೇವೆ.—ಮತ್ತಾ. 24:3.

13. ನಾವು ಯೆಹೋವನ ಶತ್ರುಗಳೊಂದಿಗೆ ನಾಶವಾಗದೆ ಹೇಗೆ ಪಾರಾಗಿ ಉಳಿಯಬಲ್ಲೆವು?

13 ದೇವರ ಶತ್ರುಗಳೊಂದಿಗೆ ನಾವು ನಾಶವಾಗದೇ ಪಾರಾಗಿ ಉಳಿಯಬೇಕಾದರೆ ಯೆಹೋವನ ಪರಮಾಧಿಕಾರಕ್ಕೆ ನಿಷ್ಠರಾಗಿ ಉಳಿಯಲೇಬೇಕು. ನಾವದನ್ನು ಮಾಡುವುದು ಹೇಗೆ? ಹೇಗೆಂದರೆ ಸೈತಾನನ ಅಪರಾಧಿ ಆಡಳಿತದಿಂದ ನಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳುವ ಮತ್ತು ಅವನ ಕಾರುಬಾರಿಗಳ ಬೆದರಿಕೆಗೆ ಒಂದಿಷ್ಟೂ ಬಗ್ಗದಿರುವ ಮೂಲಕವೇ. (ಯೆಶಾ. 52:11; ಯೋಹಾ. 17:16; ಅ. ಕಾ. 5:29) ಸೈತಾನನ ದುರಾಡಳಿತದಿಂದ ಪ್ರತ್ಯೇಕವಾಗಿದ್ದರೆ ಮಾತ್ರ ನಾವು ನಮ್ಮ ಸ್ವರ್ಗೀಯ ತಂದೆಯ ಪರಮಾಧಿಕಾರವನ್ನು ಎತ್ತಿಹಿಡಿಯಬಲ್ಲೆವು. ಯೆಹೋವನು ತನ್ನ ನಾಮಕ್ಕೆ ಹತ್ತಿದ ಕಳಂಕವನ್ನು ತೆಗೆಯುವಾಗ ಹಾಗೂ ತನ್ನ ವಿಶ್ವಪರಮಾಧಿಕಾರವನ್ನು ಪ್ರದರ್ಶಿಸುವಾಗ ಪಾರಾಗುವ ನಿರೀಕ್ಷೆಯನ್ನೂ ನಾವು ಹೊಂದಬಲ್ಲೆವು.

14. ಬೈಬಲಿನ ವಿವಿಧ ಭಾಗಗಳಲ್ಲಿ ಯಾವ ವಿಷಯಗಳು ಪ್ರಕಟವಾಗಿವೆ?

14 ಇಡೀ ಬೈಬಲಿನಲ್ಲಿ ಯೆಹೋವನ ಪರಮಾಧಿಕಾರ ಮತ್ತು ಮಾನವಕುಲದ ಬಗ್ಗೆ ವಿವರಣೆಗಳನ್ನು ನೀಡಲಾಗಿದೆ. ಅದರ ಮೊದಲ ಮೂರು ಅಧ್ಯಾಯಗಳು ಸೃಷ್ಟಿಕ್ರಿಯೆಗಳ ಕುರಿತು ಮತ್ತು ಮನುಷ್ಯನು ಅವಿಧೇಯನಾಗಿ ಪಾಪಮಾಡಿದ ಕುರಿತು ನಮಗೆ ತಿಳಿಸುತ್ತವೆ. ಬೈಬಲಿನ ಕೊನೆಯ ಮೂರು ಅಧ್ಯಾಯಗಳು ಮಾನವಕುಲವು ಪುನಃ ಸುಸ್ಥಿತಿಗೆ ಹೇಗೆ ತರಲ್ಪಡಲಿದೆ ಎಂದು ತಿಳಿಸುತ್ತವೆ. ನಡುವಣ ಪುಟಗಳು ಮಾನವಕುಲ, ಭೂಮಿ ಮತ್ತು ವಿಶ್ವದ ಸಂಬಂಧದಲ್ಲಿ ಪರಮಾಧಿಕಾರಿ ಕರ್ತನಾದ ಯೆಹೋವನು ತನ್ನ ಉದ್ದೇಶವನ್ನು ಪೂರೈಸಲು ಯಾವ ಹೆಜ್ಜೆಗಳನ್ನು ತೆಗೆದುಕೊಂಡನೆಂದು ವಿವರಿಸುತ್ತವೆ. ಸೈತಾನನು ಮತ್ತು ದುಷ್ಟತನವು ಲೋಕವನ್ನು ಪ್ರವೇಶಿಸಿದ್ದು ಹೇಗೆಂದು ಆದಿಕಾಂಡ ಪುಸ್ತಕವು ತೋರಿಸುವಾಗ ಪ್ರಕಟನೆ ಪುಸ್ತಕದ ಕೊನೆಯ ಭಾಗವಾದರೋ ದುಷ್ಟತನದ ನಿರ್ಮೂಲನ, ಪಿಶಾಚನ ನಾಶನ ಹಾಗೂ ದೇವರ ಚಿತ್ತವು ಸ್ವರ್ಗದಲ್ಲಿ ನೆರವೇರುವಂತೆ ಭೂಮಿಯಲ್ಲೂ ನೆರವೇರುವುದು ಹೇಗೆಂದು ವಿವರಿಸುತ್ತದೆ. ಪಾಪ ಮತ್ತು ಮರಣವು ಬಂದದ್ದು ಹೇಗೆ, ಅವು ಭೂಮಿಯಿಂದ ಹೇಗೆ ತೆಗೆಯಲ್ಪಡಲಿವೆ ಹಾಗೂ ಸಮಗ್ರತೆ ಪಾಲಕರಿಗೆ ಅನಂತ ಆನಂದ, ನಿತ್ಯಜೀವವು ಹೇಗೆ ಲಭಿಸಲಿದೆ ಎಂದೂ ಬೈಬಲ್‌ ತಿಳಿಸುತ್ತದೆ.

15. ಪರಮಾಧಿಕಾರವನ್ನು ಒಳಗೊಂಡ ನಾಟಕಕ್ಕೆ ತೆರೆಬೀಳುವಾಗ ನಾವು ವೈಯಕ್ತಿಕವಾಗಿ ಪ್ರಯೋಜನ ಹೊಂದಲು ಏನು ಮಾಡಬೇಕು?

15 ಶೀಘ್ರದಲ್ಲೇ ಈ ಲೋಕದ ದೃಶ್ಯವು ಪೂರ್ಣವಾಗಿ ಬದಲಾಗುವುದು. ಯೆಹೋವನ ಪರಮಾಧಿಕಾರವನ್ನು ಒಳಗೊಂಡಿರುವ ಶತಮಾನಗಳಷ್ಟು ಹಳೆಯ ನಾಟಕಕ್ಕೆ ತೆರೆಬೀಳುವುದು. ಸೈತಾನನು ನಾಟಕರಂಗದಿಂದ ಹೊರಹಾಕಲ್ಪಡುವನು. ಕಟ್ಟಕಡೆಗೆ ನಾಶವಾಗಿ ಇಲ್ಲದೇ ಹೋಗುವನು. ದೇವರ ಉದ್ದೇಶವು ನಿಶ್ಚಯವಾಗಿಯೂ ಜಯಶಾಲಿಯಾಗುವುದು. ಆದರೆ ಇದರಿಂದ ಪ್ರಯೋಜನಹೊಂದಿ ದೇವರ ವಾಕ್ಯದಲ್ಲಿ ಮುಂತಿಳಿಸಿದ ಅನೇಕ ಆಶೀರ್ವಾದಗಳನ್ನು ಹೊಂದಬೇಕಾದರೆ ನಾವೀಗ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲೇಬೇಕು. ನಾವು ಎರಡೂ ದೋಣಿಗಳಲ್ಲಿ ಕಾಲಿಡಲುಸಾಧ್ಯವಿಲ್ಲ. ಯೆಹೋವನ ಪಕ್ಷದಲ್ಲಿ ಉಳಿದರೆ ಮಾತ್ರ “ಯೆಹೋವನು ನನಗಿದ್ದಾನೆ” ಎಂದು ಹೇಳಲು ನಾವು ಶಕ್ತರಾಗುವೆವು.—ಕೀರ್ತ. 118:6, 7.

ಸಮಗ್ರತೆ ಕಾಪಾಡಿಕೊಳ್ಳಲು ಸಾಧ್ಯ!

16. ದೇವರ ಕಡೆಗೆ ಸಮಗ್ರತೆ ಕಾಪಾಡಿಕೊಳ್ಳಲು ಮಾನವರಿಗೆ ಸಾಧ್ಯವಿದೆ ಎಂಬ ನಿಶ್ಚಯತೆ ನಮಗಿರಬಲ್ಲದು ಏಕೆ?

16 ಯೆಹೋವನ ಪರಮಾಧಿಕಾರಕ್ಕೆ ಬೆಂಬಲ ಕೊಡಲು ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಮಗೆ ಸಾಧ್ಯ. ಏಕೆಂದರೆ ಅಪೊಸ್ತಲ ಪೌಲನು ಬರೆದದ್ದು: “ಮನುಷ್ಯರಿಗೆ ಸಹಜವಾಗಿರುವ ಪ್ರಲೋಭನೆಯೇ ಹೊರತು ಬೇರಾವುದೂ ನಿಮಗೆ ಸಂಭವಿಸಲಿಲ್ಲ. ಆದರೆ ದೇವರು ನಂಬಿಗಸ್ತನು; ನೀವು ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ ಆತನು ಅನುಮತಿಸುವುದಿಲ್ಲ; ನೀವು ತಾಳಿಕೊಳ್ಳಲು ಶಕ್ತರಾಗುವಂತೆ ಪ್ರಲೋಭನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಆತನು ಸಿದ್ಧಪಡಿಸುವನು.” (1 ಕೊರಿಂ. 10:13) ಪೌಲನು ತಿಳಿಸಿದ ಆ ಪ್ರಲೋಭನೆ ಯಾವ ರೀತಿಯದ್ದಾಗಿತ್ತು? ಅದರಿಂದ ನಾವು ತಪ್ಪಿಸಿಕೊಳ್ಳುವ ಮಾರ್ಗವನ್ನು ದೇವರು ಸಿದ್ಧಪಡಿಸುವುದು ಹೇಗೆ?

17-19. (ಎ) ಇಸ್ರಾಯೇಲ್ಯರು ಅರಣ್ಯದಲ್ಲಿ ಯಾವ ಪ್ರಲೋಭನೆಗೆ ಬಲಿಯಾದರು? (ಬಿ) ನಾವು ಯೆಹೋವನಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಏಕೆ?

17 ಇಸ್ರಾಯೇಲ್ಯರಿಗೆ ಅರಣ್ಯದಲ್ಲಾದ ಅನುಭವಗಳು ತೋರಿಸುವಂತೆ ದೇವರ ನಿಯಮವನ್ನು ಮುರಿಯಲು ಪ್ರಚೋದಿಸುವ ಸನ್ನಿವೇಶಗಳ ಮೂಲಕ “ಪ್ರಲೋಭನೆ” ಬರುತ್ತದೆ. (1 ಕೊರಿಂಥ 10:6-10 ಓದಿ.) ಇಸ್ರಾಯೇಲ್ಯರು ಆ ಪ್ರಲೋಭನೆಯನ್ನು ಎದುರಿಸಿ ನಿಲ್ಲಸಾಧ್ಯವಿತ್ತು. ಆದರೆ ಯೆಹೋವನು ತಿಂಗಳ ತನಕ ಲಾವಕ್ಕಿ ಮಾಂಸವನ್ನು ಅವರಿಗೆ ಅದ್ಭುತಕರವಾಗಿ ಒದಗಿಸಿದಾಗ ಅವರು “ಹಾನಿಕಾರಕ ವಿಷಯಗಳನ್ನು” ಆಶಿಸಿದರು. ಆ ಜನರಿಗೆ ಕೆಲವು ಸಮಯದ ತನಕ ಮಾಂಸಾಹಾರವು ದೊರೆತಿರಲಿಲ್ಲ ನಿಜ. ಆದರೆ ದೇವರು ಅವರಿಗೆ ಆಹಾರಕ್ಕಾಗಿ ಸಾಕಷ್ಟು ಮನ್ನವನ್ನು ಕೊಟ್ಟಿದ್ದನಲ್ಲಾ. ಹಾಗಿದ್ದರೂ ಅವರು ಲಾವಕ್ಕಿಗಳನ್ನು ಕೂಡಿಸಿಕೊಳ್ಳುತ್ತಿದ್ದಾಗ ಮಿತಿಮೀರಿದ ಅತ್ಯಾಶೆಗೆ ಒಳಗಾಗುವ ಪ್ರಲೋಭನೆಗೆ ಬಲಿಬಿದ್ದರು.—ಅರ. 11:19, 20, 31-35.

18 ಇದಕ್ಕೆ ಮುಂಚೆಯೂ ಇಸ್ರಾಯೇಲ್ಯರು ಪ್ರಲೋಭನೆಗೆ ಒಳಗಾದದ್ದು ಮೋಶೆಯು ಸೀನಾಯಿ ಬೆಟ್ಟದಲ್ಲಿ ಧರ್ಮಶಾಸ್ತ್ರವನ್ನು ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ. ಆಗ ಅವರು ಬಸವನ ಪೂಜೆಯನ್ನು ನಡೆಸುತ್ತಾ ವಿಗ್ರಹಾರಾಧಕರಾದರು. ಇಂದ್ರಿಯ ಸುಖಭೋಗಕ್ಕೆ ಬಲಿಬಿದ್ದರು. ಅವರ ದೃಶ್ಯ ನಾಯಕ ಮೋಶೆ ಅಲ್ಲಿರದಿದ್ದರಿಂದ ಆ ಪ್ರಲೋಭನೆಯು ಎಲ್ಲೆಮೀರಿ ಹೋಗುವಂತೆ ಅವರು ಬಿಟ್ಟುಕೊಟ್ಟರು. (ವಿಮೋ. 32:1, 6) ವಾಗ್ದತ್ತ ದೇಶವನ್ನು ಪ್ರವೇಶಿಸುವ ಸ್ವಲ್ಪ ಮೊದಲು ಕೂಡ ಸಾವಿರಾರು ಇಸ್ರಾಯೇಲ್ಯರು ಮೋವಾಬ್ಯ ಸ್ತ್ರೀಯರ ಮೋಹಕ್ಕೆ ಮರುಳಾಗಿ ಅವರೊಂದಿಗೆ ಲೈಂಗಿಕ ಅನೈತಿಕತೆ ನಡೆಸಿದರು. ಆ ಸಂದರ್ಭದಲ್ಲಿ ಸಾವಿರಾರು ಇಸ್ರಾಯೇಲ್ಯರು ತಮ್ಮ ಪಾಪಗಳಿಗೆ ತಕ್ಕ ಶಾಸ್ತಿಯನ್ನು ಅನುಭವಿಸಿ ಸತ್ತರು. (ಅರ. 25:1, 9) ಕೆಲವೊಮ್ಮೆ ಇಸ್ರಾಯೇಲ್ಯರು ದಂಗೆಯೆದ್ದವರಾಗಿ ಗುಣುಗುಟ್ಟುವ ಪ್ರಲೋಭನೆಗೆ ಬಲಿಯಾದರು. ಒಂದು ಸಂದರ್ಭದಲ್ಲಿ ಮೋಶೆಯ ವಿರುದ್ಧವಾಗಿ ಹಾಗೂ ಸ್ವತಃ ದೇವರ ವಿರುದ್ಧವಾಗಿಯೂ ಗುಣುಗುಟ್ಟಿದರು! (ಅರ. 21:5) ದುಷ್ಟರಾದ ಕೋರಹ, ದಾತಾನ್‌, ಅಬೀರಾಮ್‌ ಹಾಗೂ ಅವರ ಜೊತೆಗಾರರು ನಾಶವಾದಾಗಲೂ ಇಸ್ರಾಯೇಲ್ಯರು ಗುಣುಗುಟ್ಟಿದರು. ಏಕೆಂದರೆ ಆ ದಂಗೆಕೋರರ ನಾಶನವು ಅನ್ಯಾಯವಾಗಿತ್ತೆಂದು ಅವರು ತಪ್ಪಾಗಿ ತರ್ಕಿಸಿದರು. ಫಲಿತಾಂಶವಾಗಿ ದೇವರು ಕಳುಹಿಸಿದ ಘೋರವ್ಯಾಧಿಯಿಂದ 14,700 ಇಸ್ರಾಯೇಲ್ಯರು ಸತ್ತುಹೋದರು.—ಅರ. 16:41, 49.

19 ಮೇಲೆ ತಿಳಿಸಲಾದ ಪ್ರಲೋಭನೆಗಳಲ್ಲಿ ಯಾವುದೂ ಇಸ್ರಾಯೇಲ್ಯರು ಸಹಿಸಲು ಸಾಧ್ಯವಾಗದ ಪ್ರಲೋಭನೆಗಳಲ್ಲ. ಜನರು ಪ್ರಲೋಭನೆಗೆ ಬಲಿಬಿದ್ದದ್ದು ಯೆಹೋವನಲ್ಲಿ ನಂಬಿಕೆಯನ್ನು ಕಳಕೊಂಡು ಆತನನ್ನೂ ಆತನ ಪ್ರೀತಿಯ ಪರಾಮರಿಕೆ ಮತ್ತು ಯೋಗ್ಯ ಮಾರ್ಗಗಳನ್ನೂ ಮರೆತುಬಿಟ್ಟದ್ದರಿಂದಲೇ. ಇಸ್ರಾಯೇಲ್ಯರ ವಿಷಯದಲ್ಲಿ ಹೇಗೋ ಹಾಗೆಯೇ ನಾವು ಎದುರಿಸುವ ಪ್ರಲೋಭನೆಗಳು ಮಾನವ ಅನುಭವಕ್ಕೆ ಸಹಜವಾದವುಗಳೇ. ಅವನ್ನು ಎದುರಿಸಲು ನಾವು ಬೇಕಾದ ಪ್ರಯತ್ನ ಮಾಡುವುದಾದರೆ ಮತ್ತು ನಮ್ಮನ್ನು ಬಲಪಡಿಸಲು ಯೆಹೋವನನ್ನು ಆತುಕೊಳ್ಳುವುದಾದರೆ ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳಬಲ್ಲೆವು. ಇದರ ದೃಢಭರವಸೆ ನಮಗಿರಬಲ್ಲದು ಏಕೆಂದರೆ “ದೇವರು ನಂಬಿಗಸ್ತನು.” “[ನಾವು] ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ” ಆತನು ಪ್ರಲೋಭನೆಯನ್ನು ಅನುಮತಿಸುವುದಿಲ್ಲ. ಆತನ ಚಿತ್ತವನ್ನು ಮಾಡಲು ನಮ್ಮಿಂದ ಸಾಧ್ಯವಾಗದಷ್ಟು ಕಷ್ಟಕರ ಸನ್ನಿವೇಶವನ್ನು ಬರಗೊಡಿಸುವುದಿಲ್ಲ. ಹೀಗೆ ಆತನು ನಮ್ಮನ್ನೆಂದೂ ತಳ್ಳಿಹಾಕಲಾರನು.—ಕೀರ್ತ. 94:14.

20, 21. ನಾವು ಪ್ರಲೋಭನೆಗೆ ಒಳಗಾದಾಗ ಅದರಿಂದ ‘ತಪ್ಪಿಸಿಕೊಳ್ಳುವ ಮಾರ್ಗವನ್ನು’ ದೇವರು ಹೇಗೆ ಸಿದ್ಧಪಡಿಸುತ್ತಾನೆ?

20 ಪ್ರಲೋಭನೆಯನ್ನು ಎದುರಿಸಲು ಬೇಕಾದ ಶಕ್ತಿಯನ್ನು ಕೊಡುವ ಮೂಲಕ ಯೆಹೋವನು ‘ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಪಡಿಸುವನು.’ ಉದಾಹರಣೆಗೆ ನಮ್ಮ ನಂಬಿಕೆಯನ್ನು ನಾವು ತ್ಯಜಿಸಿಬಿಡುವಂತೆ ಮಾಡಲು ಹಿಂಸಕರು ನಮ್ಮನ್ನು ದೈಹಿಕವಾಗಿ ಹಿಂಸೆಪಡಿಸಬಹುದು. ಹೆಚ್ಚಿನ ಹೊಡೆತ, ಚಿತ್ರಹಿಂಸೆ ಅಥವಾ ಮರಣವನ್ನೇ ತಪ್ಪಿಸಿಕೊಳ್ಳಲು ರಾಜಿಮಾಡಿಕೊಳ್ಳುವ ಪ್ರಲೋಭನೆಗೆ ನಾವು ಒಳಗಾದೇವು. ಆದರೆ 1 ಕೊರಿಂಥ 10:13ರಲ್ಲಿ ತಿಳಿಸಲಾದ ಪೌಲನ ಪ್ರೇರಿತ ಆಶ್ವಾಸನೆಯಿಂದ ನಮಗೆ ತಿಳಿದಿದೆ ಏನೆಂದರೆ ಪ್ರಲೋಭನೆಯ ಸನ್ನಿವೇಶವು ಕೇವಲ ತಾತ್ಕಾಲಿಕ. ಆ ಸನ್ನಿವೇಶವು ನಾವು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲಾಗದಷ್ಟು ಕಷ್ಟಕರವಾಗುವಂತೆ ಆತನು ಅನುಮತಿಸನು. ಆತನು ನಮ್ಮ ನಂಬಿಕೆಯನ್ನು ಬಲಗೊಳಿಸಿ ಸಮಗ್ರತೆಯನ್ನು ಕಾಪಾಡಿಕೊಳ್ಳುವುದಕ್ಕೆ ಬೇಕಾದ ಆಧ್ಯಾತ್ಮಿಕ ಬಲವನ್ನು ಕೊಡಬಲ್ಲನು ಖಂಡಿತ.

21 ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ನಮ್ಮನ್ನು ಬಲಪಡಿಸುತ್ತಾನೆ. ಪ್ರಲೋಭನೆಯನ್ನು ಎದುರಿಸಲು ಬೇಕಾದ ಬೈಬಲಿನ ವಿಷಯಗಳನ್ನು ಕೂಡ ಪವಿತ್ರಾತ್ಮವು ನಮ್ಮ ನೆನಪಿಗೆ ತರುತ್ತದೆ. (ಯೋಹಾ. 14:26) ಫಲಿತಾಂಶವಾಗಿ ಕೆಟ್ಟ ಮಾರ್ಗವನ್ನು ಅನುಸರಿಸುವಂತೆ ನಾವು ಮೋಸಹೋಗಲಾರೆವು. ಉದಾಹರಣೆಗೆ, ಯೆಹೋವನ ಪರಮಾಧಿಕಾರ ಮತ್ತು ಮಾನವ ಸಮಗ್ರತೆಗೆ ಸಂಬಂಧಿಸಿದ ವಿವಾದಗಳನ್ನು ನಾವು ಅರಿತಿದ್ದೇವೆ. ಆ ತಿಳಿವಳಿಕೆಯಿಂದಾಗಿ ಅನೇಕರಿಗೆ ತಮ್ಮ ಮರಣದ ತನಕ ನಂಬಿಗಸ್ತರಾಗಿ ಉಳಿಯಲು ದೇವರು ಬಲಕೊಟ್ಟಿದ್ದಾನೆ. ಅವರು ಪ್ರಲೋಭನೆಯಿಂದ ತಪ್ಪಿಸಿಕೊಂಡ ಮಾರ್ಗವು ಮರಣವಲ್ಲ. ಪ್ರಲೋಭನೆಗೆ ಬಲಿಬೀಳದೆ ಕೊನೇ ತನಕ ತಾಳಿಕೊಳ್ಳಲು ಅವರಿಗೆ ಸಾಧ್ಯಮಾಡಿದ್ದು ಯೆಹೋವನ ಸಹಾಯವೇ. ನಮಗೂ ಆತನು ಖಂಡಿತ ಸಹಾಯಮಾಡುವನು. ಮಾತ್ರವಲ್ಲ, ನಮ್ಮ ಪರವಾಗಿ ತನ್ನ ನಂಬಿಗಸ್ತ ದೇವದೂತರನ್ನೂ ಸಾರ್ವಜನಿಕ ಸೇವಕರನ್ನಾಗಿ ಮಾಡಿ “ರಕ್ಷಣೆಯನ್ನು ಹೊಂದಲಿಕ್ಕಿರುವವರ ಶುಶ್ರೂಷೆಗಾಗಿ” ಉಪಯೋಗಿಸುತ್ತಾನೆ. (ಇಬ್ರಿ. 1:14) ಮುಂದಿನ ಲೇಖನವು ತೋರಿಸುವಂತೆ ಸಮಗ್ರತೆ ಪಾಲಕರಿಗೆ ಮಾತ್ರವೇ ಯೆಹೋವನ ಪರಮಾಧಿಕಾರವನ್ನು ನಿತ್ಯನಿರಂತರವೂ ಬೆಂಬಲಿಸುವ ಹರ್ಷಕರ ಸೌಭಾಗ್ಯದ ನಿರೀಕ್ಷೆಯಿದೆ. ಯೆಹೋವನನ್ನು ನಮ್ಮ ಪರಮಾಧಿಕಾರಿ ಕರ್ತನಾಗಿ ಸ್ವೀಕರಿಸುತ್ತಾ ಆತನಿಗೆ ಒತ್ತಾಗಿ ಅಂಟಿಕೊಂಡರೆ ನಾವೂ ಸಮಗ್ರತೆ ಪಾಲಕರಾಗಿರುವೆವು.

ಹೇಗೆ ಉತ್ತರಿಸುವಿರಿ?

• ಯೆಹೋವನನ್ನು ನಮ್ಮ ಪರಮಾಧಿಕಾರಿ ಕರ್ತನೆಂದು ನಾವು ಅಂಗೀಕರಿಸಬೇಕು ಏಕೆ?

• ದೇವರಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವುದರ ಅರ್ಥವೇನು?

• ಯೆಹೋವನು ಶೀಘ್ರದಲ್ಲೇ ತನ್ನ ಪರಮಾಧಿಕಾರವನ್ನು ಸಮರ್ಥಿಸುವನು ಎಂದು ನಮಗೆ ಹೇಗೆ ತಿಳಿದಿದೆ?

1 ಕೊರಿಂಥ 10:13ಕ್ಕನುಸಾರ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 24ರಲ್ಲಿರುವ ಚಿತ್ರ]

ಯೆಹೋವನಿಗೆ ದ್ರೋಹಿಗಳಾಗುವಂತೆ ಆದಾಮಹವ್ವರನ್ನು ಸೈತಾನನು ವಂಚಿಸಿದನು

[ಪುಟ 26ರಲ್ಲಿರುವ ಚಿತ್ರ]

ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲು ದೃಢಸಂಕಲ್ಪ ಮಾಡಿರಿ