ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ನಮ್ಮ ಸಮಗ್ರತೆಯಲ್ಲೇ ನಡೆಯುವೆವು!

ನಾವು ನಮ್ಮ ಸಮಗ್ರತೆಯಲ್ಲೇ ನಡೆಯುವೆವು!

ನಾವು ನಮ್ಮ ಸಮಗ್ರತೆಯಲ್ಲೇ ನಡೆಯುವೆವು!

‘ನಾನಾದರೋ ನಿರ್ದೋಷಿಯಾಗಿಯೇ [“ಸಮಗ್ರತೆಯಲ್ಲೇ,” NW] ನಡೆದುಕೊಳ್ಳುವೆನು.’—ಕೀರ್ತ. 26:11.

1, 2. ಯೋಬನು ತನ್ನ ಸಮಗ್ರತೆಯ ಕುರಿತು ಏನು ಹೇಳಿದನು? ಯೋಬ 31ನೇ ಅಧ್ಯಾಯದಲ್ಲಿ ಅವನ ಕುರಿತು ಏನನ್ನು ಸೂಚಿಸಲಾಗಿದೆ?

ಪು ರಾತನ ಕಾಲದಲ್ಲಿ ಜನರು ವಸ್ತುಗಳನ್ನು ತೂಕಮಾಡುತ್ತಿದ್ದದ್ದು ಹೆಚ್ಚಾಗಿ ತಕ್ಕಡಿ ಅಥವಾ ತ್ರಾಸಿನಿಂದ. ತ್ರಾಸಿನ ನಡುವಣ ಗೂಟದ ಮೇಲೆ ಒಂದು ಸಮತಟ್ಟಾದ ಅಡ್ಡದಿಂಡು ತೂಗುತ್ತದೆ. ಆ ಅಡ್ಡದಿಂಡಿನ ಎರಡೂ ಅಂಚಿನಲ್ಲಿ ಒಂದೊಂದು ತೂಕದ ತಟ್ಟೆಯನ್ನು ತೂಗಹಾಕುತ್ತಿದ್ದರು. ತೂಕಮಾಡುವ ವಸ್ತುವನ್ನು ಒಂದು ತಟ್ಟೆಯ ಮೇಲೂ ತೂಕದಕಲ್ಲನ್ನು ಇನ್ನೊಂದು ತಟ್ಟೆಯ ಮೇಲೂ ಇಟ್ಟು ತೂಕಮಾಡುತ್ತಿದ್ದರು. ದೇವಜನರು ತಮ್ಮ ವ್ಯವಹಾರದಲ್ಲಿ ಮೋಸದ ತ್ರಾಸನ್ನಾಗಲಿ ಅನ್ಯಾಯದ ತೂಕದ ಕಲ್ಲನ್ನಾಗಲಿ ಬಳಸಬಾರದಿತ್ತು.—ಜ್ಞಾನೋ. 11:1.

2 ದೇವಭಕ್ತನಾದ ಯೋಬನು ಸೈತಾನನ ಆಕ್ರಮಣದ ಕೆಳಗೆ ಕಷ್ಟವನ್ನು ಅನುಭವಿಸುತ್ತಿದ್ದಾಗ, “[ಯೆಹೋವನು] ನನ್ನನ್ನು ನ್ಯಾಯವಾದ ತ್ರಾಸಿನಲ್ಲಿ ತೂಗಿ ನನ್ನ ಯಥಾರ್ಥತ್ವವನ್ನು [“ಸಮಗ್ರತೆಯನ್ನು,” NW] ತಿಳಿದುಕೊಳ್ಳಲಿ!” ಎಂದು ಹೇಳಿದ್ದನು. (ಯೋಬ 31:5) ಆ ಸಂಬಂಧದಲ್ಲಿ, ಸಮಗ್ರತೆ ಪಾಲಕರನ್ನು ಪರೀಕ್ಷೆಗೆ ಒಳಪಡಿಸಸಾಧ್ಯವಿದ್ದ ಹಲವಾರು ಸನ್ನಿವೇಶಗಳನ್ನು ಯೋಬನು ತಿಳಿಸಿದನು. ಆದರೆ ಯೋಬನು ನಿಜವಾಗಿಯೂ ಆ ಪರೀಕ್ಷೆಯನ್ನು ಯಶಸ್ವಿಯಾಗಿ ಜಯಿಸಿದನೆಂದು ಯೋಬ 31ನೇ ಅಧ್ಯಾಯದಲ್ಲಿ ದಾಖಲಾದ ಅವನ ಮಾತುಗಳು ಸೂಚಿಸುತ್ತವೆ. ಅವನ ಉತ್ತಮ ಮಾದರಿಯು ನಾವು ಸಹ ಅದೇ ರೀತಿಯಲ್ಲಿ ಪರೀಕ್ಷೆಗಳನ್ನು ಜಯಿಸುವಂತೆ ನಿಜವಾಗಿ ನಮ್ಮನ್ನು ಪ್ರೇರಿಸುತ್ತದೆ. ಆಗ ಕೀರ್ತನೆಗಾರ ದಾವೀದನಂತೆ ನಾವೂ ಭರವಸೆಯಿಂದ, ‘ನಾನಾದರೋ ನಿರ್ದೋಷಿಯಾಗಿಯೇ [ಸಮಗ್ರತೆಯಲ್ಲೇ] ನಡೆದುಕೊಳ್ಳುವೆನು’ ಎಂದು ಹೇಳಬಲ್ಲೆವು.—ಕೀರ್ತ. 26:11.

3. ಚಿಕ್ಕದೊಡ್ಡ ವಿಷಯಗಳಲ್ಲೂ ನಾವು ದೇವರಿಗೆ ನಂಬಿಗಸ್ತರಾಗಿರುವುದು ಏಕೆ ಪ್ರಾಮುಖ್ಯ?

3 ಯೋಬನು ತೀಕ್ಷ್ಣ ಪರೀಕ್ಷೆಗೆ ಗುರಿಯಾಗಿದ್ದರೂ ದೇವರಿಗೆ ನಂಬಿಗಸ್ತನಾಗಿಯೇ ಉಳಿದನು. ಯೋಬನ ಕಷ್ಟದ ಪರೀಕ್ಷೆಗಳು ಮತ್ತು ನಿಶ್ಚಲ ಸಮಗ್ರತೆ ಪಾಲನೆಯು ಒಂದು ವೀರೋಚಿತ ಸಾಹಸವೆಂದು ಕೆಲವರು ಹೇಳಾರು ಸಹ. ಯೋಬನು ಅನುಭವಿಸಿದಂಥ ಅಷ್ಟು ಕಠಿನ ಕಷ್ಟಗಳನ್ನು ನಾವು ಅನುಭವಿಸುತ್ತಾ ಇಲ್ಲ ನಿಜ. ಆದರೂ ಸಮಗ್ರತೆ ಪಾಲಕರೂ ದೇವರ ಪರಮಾಧಿಕಾರದ ಬೆಂಬಲಿಗರೂ ಆಗಿ ದೃಢರಾಗಿ ನಿಲ್ಲಬೇಕಾದರೆ ಚಿಕ್ಕದೊಡ್ಡ ವಿಷಯಗಳಲ್ಲೂ ನಾವು ದೇವರಿಗೆ ನಂಬಿಗಸ್ತರಾಗಿರಲೇಬೇಕು.—ಲೂಕ 16:10 ಓದಿ.

ನೈತಿಕ ಸಮಗ್ರತೆ ಆವಶ್ಯಕ

4, 5. ಸಮಗ್ರತೆ ಪಾಲಕನಾಗಿದ್ದ ಯೋಬನು ಯಾವ ದುರ್ನಡತೆಯಿಂದ ದೂರವಿದ್ದನು?

4 ಯೆಹೋವನಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕಾದರೆ ಯೋಬನಂತೆ ನಾವು ಸಹ ದೇವರ ನೈತಿಕ ಮಟ್ಟಗಳನ್ನು ಪಾಲಿಸಲೇಬೇಕು. ಯೋಬನು ಹೇಳಿದ್ದು: “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು? . . . ಒಂದು ವೇಳೆ ನನ್ನ ಹೃದಯವು ಪರಸ್ತ್ರೀಯಲ್ಲಿ ಮರುಳುಗೊಂಡು ನಾನು ನೆರೆಯವನ ಬಾಗಲಲ್ಲಿ ಹೊಂಚಿದ್ದರೆ ನನ್ನ ಹೆಂಡತಿಯು ಮತ್ತೊಬ್ಬನಿಗೆ ಧಾನ್ಯ ಬೀಸುವ ದಾಸಿಯಾಗಲಿ, ಇತರರು ಆಕೆಯನ್ನು ಸಂಗಮಿಸಲಿ!”—ಯೋಬ 31:1, 9, 10.

5 ದೇವರಿಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ದೃಢಸಂಕಲ್ಪವುಳ್ಳವನಾಗಿ ಯೋಬನು ಪರಸ್ತ್ರೀಯ ಮೇಲೆ ಕಾಮಾಸಕ್ತಿಯಿಂದ ಕಣ್ಣಿಡುತ್ತಿರಲಿಲ್ಲ. ವಿವಾಹಿತನಾದ ಅವನು ಅವಿವಾಹಿತ ಸ್ತ್ರೀಯೊಂದಿಗೆ ಪ್ರೇಮಚೆಲ್ಲಾಟವಾಡಲಿಲ್ಲ ಅಥವಾ ಮತ್ತೊಬ್ಬನ ಹೆಂಡತಿಯೊಂದಿಗೆ ಪ್ರಯಣಚೇಷ್ಟೆ ನಡಿಸಲಿಲ್ಲ. ಯೇಸು ಪರ್ವತ ಪ್ರಸಂಗದಲ್ಲಿ ಲೈಂಗಿಕ ನೈತಿಕತೆಯ ಕುರಿತು ಬಹು ಗಂಭೀರ ಹೇಳಿಕೆಯನ್ನಿತ್ತನಲ್ಲಾ. ಸಮಗ್ರತೆ ಪಾಲಕರು ನಿಶ್ಚಯವಾಗಿ ಮನಸ್ಸಿನಲ್ಲಿಡಬೇಕಾದ ಅಂಶವದು.—ಮತ್ತಾಯ 5:27, 28 ಓದಿ.

ಕುತಂತ್ರವನ್ನೆಂದೂ ಬಳಸಬೇಡಿ

6, 7. (ಎ) ಯೋಬನ ವಿಷಯದಲ್ಲಿದ್ದ ಹಾಗೆ ದೇವರು ನಮ್ಮ ಸಮಗ್ರತೆಯನ್ನು ತೂಗಿನೋಡಲು ಏನನ್ನು ಉಪಯೋಗಿಸುತ್ತಾನೆ? (ಬಿ) ನಾವು ಕುತಂತ್ರಿಗಳೂ ಮೋಸಗಾರರೂ ಆಗಿರಬಾರದು ಏಕೆ?

6 ನಾವು ಸಮಗ್ರತೆ ಪಾಲಕರಲ್ಲಿ ಒಬ್ಬರಾಗಿರಬೇಕಾದರೆ ಕಪಟ ಕುತಂತ್ರಗಳನ್ನು ಬಳಸಿ ಕೆಲಸ ಸಾಧಿಸಬಾರದು. (ಜ್ಞಾನೋಕ್ತಿ 3:31-33 ಓದಿ.) ಯೋಬನು ಅಂದದ್ದು: ‘ಒಂದು ವೇಳೆ ನಾನು ಕಪಟದ ಜೊತೆಯಲ್ಲಿ ನಡೆದು ಮೋಸವನ್ನು ಹಿಂಬಾಲಿಸಿ ಓಡಿದ್ದರೆ ದೇವರು [ಯೆಹೋವನು] ನನ್ನನ್ನು ನ್ಯಾಯವಾದ ತ್ರಾಸಿನಲ್ಲಿ ತೂಗಿ ನನ್ನ ಯಥಾರ್ಥತ್ವವನ್ನು [ಸಮಗ್ರತೆಯನ್ನು] ತಿಳಿದುಕೊಳ್ಳಲಿ!’ (ಯೋಬ 31:5, 6) ಯೆಹೋವನು ಸಕಲ ಮಾನವರನ್ನು “ನ್ಯಾಯವಾದ ತ್ರಾಸಿನಲ್ಲಿ” ತೂಗಿನೋಡುತ್ತಾನೆ. ಆತನು ಯೋಬನ ವಿಷಯದಲ್ಲಿ ಮಾಡಿದಂತೆ ಸಮರ್ಪಿತ ಸೇವಕರಾದ ನಮ್ಮ ಸಮಗ್ರತೆಯನ್ನು ತೂಗಿನೋಡಲು ತನ್ನ ಪರಿಪೂರ್ಣ ನ್ಯಾಯದ ಮಟ್ಟವನ್ನು ಉಪಯೋಗಿಸುತ್ತಾನೆ.

7 ನಾವು ಕುತಂತ್ರಿಗಳೂ ಮೋಸಗಾರರೂ ಆಗಿದ್ದಲ್ಲಿ ದೇವರಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲಾರೆವು. ಸಮಗ್ರತೆ ಪಾಲಕರು “ನಾಚಿಕೆಪಡುವಂಥ ಗುಪ್ತಕಾರ್ಯಗಳನ್ನು” ಬಿಟ್ಟುಬಿಟ್ಟಿದ್ದಾರೆ ಮತ್ತು ‘ಕುತಂತ್ರದಿಂದ ನಡೆಯುವುದಿಲ್ಲ.’ (2 ಕೊರಿಂ. 4:1, 2) ಆದರೆ ನಾವು ನಮ್ಮ ವಂಚನೆಯ ಮಾತು ಮತ್ತು ಕ್ರಿಯೆಗಳಿಂದ ನಮ್ಮ ಜೊತೆವಿಶ್ವಾಸಿಯನ್ನು ವ್ಯಥೆಗೀಡುಮಾಡಿ ಅವನು ಸಹಾಯಕ್ಕಾಗಿ ದೇವರಿಗೆ ಮೊರೆಯಿಡುವಂತೆ ಮಾಡುವುದಾದರೆ ಆಗೇನು? ಆಗ ನಮ್ಮ ಸ್ಥಿತಿ ನಿಜವಾಗಿ ಶೋಚನೀಯ! “ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು; ಆತನು ಸದುತ್ತರವನ್ನು ದಯಪಾಲಿಸಿದನು. ಯೆಹೋವನೇ, ಸುಳ್ಳುಬಾಯಿಯೂ ವಂಚಿಸುವ ನಾಲಿಗೆಯೂ ಉಳ್ಳವರಿಂದ ನನ್ನನ್ನು ಬಿಡಿಸು” ಎಂದು ಹಾಡಿದನು ಕೀರ್ತನೆಗಾರನು. (ಕೀರ್ತ. 120:1, 2) ದೇವರು ನಮ್ಮ ಆಂತರ್ಯದ ಆಳವನ್ನೂ ನೋಡಬಲ್ಲನು ಎಂದು ನೆನಪಿಡುವುದು ಒಳ್ಳೇದು. ನಾವು ನಿಜ ಸಮಗ್ರತೆ ಪಾಲಕರೋ ಅಲ್ಲವೋ ಎಂಬುದನ್ನು ನಿರ್ಧರಿಸಲು ಆತನು ನಮ್ಮ ‘ಹೃದಯವನ್ನೂ ಅಂತರಿಂದ್ರಿಯವನ್ನೂ ಪರಿಶೋಧಿಸುತ್ತಾನೆ.’—ಕೀರ್ತ. 7:8, 9.

ಇತರರನ್ನು ಉಪಚರಿಸುವುದರಲ್ಲಿ ಮಾದರಿಯನ್ನಿಡಿ

8. ಯೋಬನು ಇತರರನ್ನು ಹೇಗೆ ಉಪಚರಿಸಿದನು?

8 ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಾವು ಯೋಬನಂತಿರುವ ಅಗತ್ಯವಿದೆ. ಅವನು ನ್ಯಾಯವಂತನೂ ದೀನನೂ ಇತರರಿಗೆ ಪರಿಗಣನೆ ತೋರಿಸುವವನೂ ಆಗಿದ್ದನು. ಅವನಂದದ್ದು: “ಒಂದು ವೇಳೆ ನನಗೂ ನನ್ನ ದಾಸನಿಗೂ ಇಲ್ಲವೆ ದಾಸಿಗೂ ವ್ಯಾಜ್ಯವಾದಾಗ ನಾನು ಅವರ ನ್ಯಾಯವನ್ನು ಅಲಕ್ಷ್ಯಮಾಡಿದ್ದರೆ ದೇವರು [ನ್ಯಾಯಸ್ಥಾಪನೆಗೆ] ಏಳುವಾಗ ನಾನು ಏನು ಮಾಡೇನು? ಆತನು ವಿಚಾರಿಸುವಾಗ ಯಾವ ಉತ್ತರ ಕೊಟ್ಟೇನು? ನನ್ನನ್ನು ಗರ್ಭದಲ್ಲಿ ನಿರ್ಮಿಸಿದಾತನೇ ಅವನನ್ನೂ ನಿರ್ಮಿಸಲಿಲ್ಲವೋ? ಆತನೊಬ್ಬನೇ ನಮ್ಮಿಬ್ಬರನ್ನೂ ಹೊಟ್ಟೆಯಲ್ಲಿ ರೂಪಿಸಿದನಲ್ಲವೇ.”—ಯೋಬ 31:13-15.

9. ಯೋಬನು ತನ್ನ ದಾಸರೊಂದಿಗೆ ವ್ಯವಹರಿಸುವಾಗ ಯಾವ ಗುಣಗಳನ್ನು ತೋರಿಸಿದನು? ನಾವು ಈ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕು?

9 ಯೋಬನ ದಿನಗಳಲ್ಲಿ ಮೊಕದ್ದಮೆಗಳನ್ನು ನಿರ್ವಹಿಸುವುದಕ್ಕಾಗಿ ಕಷ್ಟಕರವಾದ ಕಾಯಿದೆಕ್ರಮ ಇರಲಿಲ್ಲ ಎಂಬುದು ವ್ಯಕ್ತ. ವ್ಯಾಜ್ಯಗಳನ್ನು ವ್ಯವಸ್ಥಿತವಾಗಿ ನಡಿಸಲಾಗುತ್ತಿತ್ತು ಮತ್ತು ದಾಸರಿಗೂ ನ್ಯಾಯಾಲಯದ ಸೌಕರ್ಯ ಸಹಾಯಗಳು ದೊರೆಯುತ್ತಿದ್ದವು. ಯೋಬನು ತನ್ನ ದಾಸದಾಸಿಯರನ್ನು ನ್ಯಾಯದಿಂದಲೂ ದಯೆಯಿಂದಲೂ ಉಪಚರಿಸುತ್ತಿದ್ದನು. ನಾವು ನಮ್ಮ ಸಮಗ್ರತೆಯಲ್ಲಿ ನಡೆಯಬೇಕಾದರೆ ಅಂಥ ಗುಣಗಳನ್ನು ತೋರಿಸಲೇಬೇಕು. ವಿಶೇಷವಾಗಿ ನಾವು ಕ್ರೈಸ್ತ ಸಭೆಯಲ್ಲಿ ಹಿರಿಯರಾಗಿ ಸೇವೆಮಾಡುವುದಾದರೆ ಇದು ಅತ್ಯಾವಶ್ಯಕ.

ಉದಾರಿಗಳಾಗಿರ್ರಿ, ಅತ್ಯಾಶೆಪಡಬೇಡಿ

10, 11. (ಎ) ಯೋಬನು ಉದಾರಿಯೂ ಉಪಕಾರಿಯೂ ಆಗಿದ್ದನೆಂದು ನಮಗೆ ಹೇಗೆ ತಿಳಿದಿದೆ? (ಬಿ) ಯೋಬ 31:16-25ರಲ್ಲಿರುವ ವಿಷಯವು ಬೈಬಲಿನ ಬೇರೆ ಯಾವ ಸಲಹೆಯನ್ನು ನೆನಪಿಗೆ ತರುತ್ತದೆ?

10 ಯೋಬನು ಉದಾರಿಯೂ ಉಪಕಾರಿಯೂ ಆಗಿದ್ದನು, ಸ್ವಾರ್ಥಿಯೂ ಅತ್ಯಾಶೆಯುಳ್ಳವನೂ ಆಗಿರಲಿಲ್ಲ. ಅವನಂದದ್ದು: “ನಾನು . . . ವಿಧವೆಯನ್ನು ಕಂಗೆಡಿಸಿದೆನೋ? ನನಗಿರುವ ತುತ್ತು ಅನ್ನದಲ್ಲಿ ಅನಾಥರಿಗೆ ಏನೂ ಕೊಡದೆ ನಾನೇ ಒಂಟಿಗನಾಗಿ ತಿಂದೆನೋ? . . . ಬಟ್ಟೆಯಿಲ್ಲದೆ ಅಳಿದುಹೋಗುವವನನ್ನೂ ಹೊದಿಕೆಯಿಲ್ಲದ ಬಡವನನ್ನೂ ನಾನು ಕಂಡಾಗೆಲ್ಲಾ ಅವರ ಸೊಂಟವು ನನ್ನ ಕುರಿಗಳ ಉಣ್ಣೆಯಿಂದ ಬೆಚ್ಚಗಾಗಿ ನಾನು ಹರಸಲ್ಪಡಲಿಲ್ಲವೋ? ನ್ಯಾಯಸ್ಥಾನದಲ್ಲಿ ನನಗೆ ಸಹಾಯ ಉಂಟೆಂದು ಅನಾಥನ ಮೇಲೆ ಕೈಮಾಡಿದೆನೋ? ಹೀಗಿದ್ದರೆ ನನ್ನ ಹೆಗಲಿನ ಕೀಲು ತಪ್ಪಲಿ! ತೋಳು ಸಂದಿನಿಂದ ಮುರಿದು ಬೀಳಲಿ.” ಒಂದುವೇಳೆ ಯೋಬನು ಬಂಗಾರದಲ್ಲಿ ಭರವಸವಿಟ್ಟು “ನಿನ್ನನ್ನೇ ನಂಬಿದ್ದೇನೆ” ಎಂದು ಹೇಳುತ್ತಿದ್ದಲ್ಲಿ ಅವನೆಂದೂ ಸಮಗ್ರತೆ ಪಾಲಕನಾಗಿರುತ್ತಿರಲಿಲ್ಲ!—ಯೋಬ 31:16-25.

11 ಅಂಥ ಕಾವ್ಯಾತ್ಮಕ ಅಭಿವ್ಯಕ್ತಿಗಳು ಶಿಷ್ಯ ಯಾಕೋಬನ ಈ ಮಾತುಗಳನ್ನು ನಮ್ಮ ನೆನಪಿಗೆ ತರುತ್ತವೆ: “ಸಂಕಟದಲ್ಲಿರುವ ಅನಾಥರನ್ನೂ ವಿಧವೆಯರನ್ನೂ ಪರಾಮರಿಸುವುದು ಮತ್ತು ಲೋಕದ ದೋಷವು ಹತ್ತದಂತೆ ನೋಡಿಕೊಳ್ಳುವುದೇ ನಮ್ಮ ದೇವರೂ ತಂದೆಯೂ ಆಗಿರುವಾತನ ದೃಷ್ಟಿಯಲ್ಲಿ ಶುದ್ಧವೂ ಕಳಂಕರಹಿತವೂ ಆಗಿರುವ ಆರಾಧನಾ ರೀತಿಯಾಗಿದೆ.” (ಯಾಕೋ. 1:27) ಯೇಸುವಿನ ಎಚ್ಚರಿಕೆಯ ಮಾತುಗಳನ್ನು ಕೂಡ ನಾವು ನೆನಪಿಗೆ ತರಬಲ್ಲೆವು: “ನಿಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಂಡು ಪ್ರತಿಯೊಂದು ರೀತಿಯ ದುರಾಶೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ; ಏಕೆಂದರೆ ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು.” ಯೇಸು ತದನಂತರ ದುರಾಶೆಯ ಧನಿಕನೊಬ್ಬನ ದೃಷ್ಟಾಂತವೊಂದನ್ನು ಕೊಟ್ಟನು. ಆ ಧನಿಕನು ತನ್ನ ದುರಾಶೆಯಿಂದಾಗಿ “ದೇವರ ವಿಷಯದಲ್ಲಿ ಐಶ್ವರ್ಯವಂತನಾಗದೆ” ಸತ್ತನು. (ಲೂಕ 12:15-21) ಸಮಗ್ರತೆ ಪಾಲಕರಾಗಿರಬೇಕಾದರೆ ನಾವು ಪಾಪಭರಿತ ಲೋಭ ಅಥವಾ ಅತ್ಯಾಶೆಗೆ ಬಲಿಬೀಳಲೇಬಾರದು. ಲೋಭವು ವಿಗ್ರಹಾರಾಧನೆಯಾಗಿದೆ. ಏಕೆಂದರೆ ಲೋಭಿಯು ವಸ್ತುವನ್ನು ಅತಿಯಾಗಿ ಆಶಿಸುವುದರಿಂದ ಅದು ಅವನನ್ನು ಯೆಹೋವನ ಭಕ್ತಿಯಿಂದ ದೂರಸರಿಸುತ್ತದೆ. ಅತಿಯಾಗಿ ಆಶಿಸುವ ಆ ವಸ್ತುವೇ ಅವನಿಗೆ ದೇವರಾಗುತ್ತದೆ. (ಕೊಲೊ. 3:5) ಸಮಗ್ರತೆ ಮತ್ತು ಅತ್ಯಾಶೆ ಎಂದೂ ಒಂದಕ್ಕೊಂದು ಬೆಸೆಯದು!

ಸತ್ಯಾರಾಧನೆಗೆ ಅಂಟಿಕೊಳ್ಳಿ

12, 13. ವಿಗ್ರಹಾರಾಧನೆಯನ್ನು ತೊರೆದುಬಿಡುವುದರಲ್ಲಿ ಯೋಬನು ಯಾವ ಮಾದರಿಯನ್ನಿಟ್ಟನು?

12 ಸಮಗ್ರತೆ ಪಾಲಕರು ಸತ್ಯಾರಾಧನೆಯನ್ನು ಬಿಟ್ಟು ದೂರ ಸರಿಯುವುದಿಲ್ಲ. ಯೋಬನೂ ಹಾಗೆ ಮಾಡಲಿಲ್ಲ. ಅವನು ಹೇಳಿದ್ದು: “ಸೂರ್ಯನು ಪ್ರಕಾಶಿಸುವದನ್ನಾಗಲಿ ಚಂದ್ರನು ಕಳೆದುಂಬಿದವನಾಗಿ ಚರಿಸುವದನ್ನಾಗಲಿ ನಾನು ನೋಡಿದಾಗ ಹೃದಯವು ಮರುಳುಗೊಂಡು ಕೈಯನ್ನು ಬಾಯಿ ಮುದ್ದಾಡಿದ್ದರೆ ಇದು ಸಹ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು, ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.”—ಯೋಬ 31:26-28.

13 ಯೋಬನು ನಿರ್ಜೀವ ವಸ್ತುಗಳನ್ನು ಆರಾಧಿಸಲಿಲ್ಲ. ಚಂದ್ರನೇ ಮುಂತಾದ ಸುಂದರ ಆಕಾಶಕಾಯಗಳನ್ನು ನೋಡಿದಾಗ ಅವನ ಹೃದಯವು ಒಳಗಿಂದೊಳಗೆ ಮರುಳಾಗಿ, ಪ್ರಾಯಶಃ ವಿಗ್ರಹಾರಾಧಕರು ಮಾಡುವಂತೆ ‘ಕೈಯನ್ನು ಬಾಯಿಂದ ಮುದ್ದಿಸಿದ್ದರೆ’ ಅವನು ಸತ್ಯದೇವರನ್ನು ತೊರೆದ ವಿಗ್ರಹಾರಾಧಕನಾಗಿರುತ್ತಿದ್ದನು. (ಧರ್ಮೋ. 4:15, 19) ದೇವರಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಾವು ಸಕಲ ವಿಧವಾದ ವಿಗ್ರಹಾರಾಧನೆಯನ್ನು ತೊರೆದುಬಿಡಲೇಬೇಕು.—1 ಯೋಹಾನ 5:21 ಓದಿ.

ಸೇಡುತೀರಿಸಬೇಡಿ, ಕಪಟಿಗಳಾಗಿರಬೇಡಿ

14. ಯೋಬನಲ್ಲಿ ಮತ್ಸರವಿರಲಿಲ್ಲವೆಂದು ನಮಗೆ ಹೇಗೆ ಗೊತ್ತು?

14 ಯೋಬನಲ್ಲಿ ಮತ್ಸರವಿರಲಿಲ್ಲ, ಅವನು ಕ್ರೂರಿಯೂ ಆಗಿರಲಿಲ್ಲ. ಅಂಥ ಸ್ವಭಾವಗಳು ತನ್ನ ಸಮಗ್ರತೆಯ ಲೋಪವನ್ನು ತೋರಿಸುತ್ತವೆಂದು ಅವನಿಗೆ ತಿಳಿದಿತ್ತು. ಏಕೆಂದರೆ ಅವನಂದದ್ದು: “ನನ್ನನ್ನು ದ್ವೇಷಿಸುವವನಿಗೆ ಕೇಡುಬಂದಾಗ ಉಬ್ಬಿಕೊಂಡು ಅವನ ನಾಶನಕ್ಕೆ ಹಿಗ್ಗಿದೆನೋ? ಇಲ್ಲ, ನನ್ನ ಬಾಯಿ ಅವನನ್ನು ಶಪಿಸಿ ಅವನ ಪ್ರಾಣ ಹೋಗಲಿ ಎಂದು ಬೇಡಿಕೊಂಡು ಪಾಪವಶವಾಗುವದಕ್ಕೆ ನಾನು ಒಪ್ಪಲೇ ಇಲ್ಲ.”—ಯೋಬ 31:29, 30.

15. ನಮ್ಮನ್ನು ದ್ವೇಷಿಸುವವರ ಮೇಲೆ ಕೇಡು ಬಂದಾಗ ನಾವು ಹರ್ಷಿಸುವುದು ಏಕೆ ತಪ್ಪು?

15 ತನ್ನನ್ನು ದ್ವೇಷಿಸಿದವನಿಗೆ ಕೇಡುಬಂದಾಗ ನೀತಿವಂತನಾದ ಯೋಬನು ಎಂದೂ ಹಿಗ್ಗಲಿಲ್ಲ, ಹರ್ಷಿಸಲಿಲ್ಲ. ತದನಂತರದ ಜ್ಞಾನೋಕ್ತಿಯೊಂದು ಎಚ್ಚರಿಸುವುದು: “ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ, ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ! ಯೆಹೋವನು ನಿನ್ನ ಹರ್ಷವನ್ನು ಕಂಡು ಬೇಸರಗೊಂಡು ತನ್ನ ಕೋಪವನ್ನು ಅವನ ಕಡೆಯಿಂದ ತಿರುಗಿಸಾನು.” (ಜ್ಞಾನೋ. 24:17, 18) ಯೆಹೋವನು ಹೃದಯವನ್ನು ನೋಡಶಕ್ತನು. ಆದ್ದರಿಂದ ಇನ್ನೊಬ್ಬನಿಗೆ ಕೇಡುಬಂದಾಗ ನಾವು ಒಳಗಿಂದೊಳಗೆ ಹಿಗ್ಗುತ್ತೇವೋ ಇಲ್ಲವೋ ಎಂಬುದನ್ನು ಆತನು ಬಲ್ಲನು ಮತ್ತು ಅಂಥ ಸ್ವಭಾವವನ್ನು ಆತನೆಂದೂ ಮೆಚ್ಚಲಾರನು. (ಜ್ಞಾನೋ. 17:5) ನಾವು ಯಾವ ರೀತಿಯಲ್ಲಿ ವರ್ತಿಸುತ್ತೇವೋ ಅದಕ್ಕನುಸಾರ ಯೆಹೋವನು ನಮ್ಮೊಂದಿಗೂ ವ್ಯವಹರಿಸುವನು. ಏಕೆಂದರೆ “ಪ್ರತೀಕಾರಮಾಡಿ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ” ಎಂದು ಆತನನ್ನುತ್ತಾನೆ.—ಧರ್ಮೋ. 32:35.

16. ನಾವು ಐಶ್ವರ್ಯವಂತರಲ್ಲದಿದ್ದರೂ ಹೇಗೆ ಅತಿಥಿಸತ್ಕಾರ ತೋರಿಸಬಹುದು?

16 ಯೋಬನು ಅತಿಥಿಸತ್ಕಾರವನ್ನೂ ಮಾಡುತ್ತಿದ್ದನು. (ಯೋಬ 31:31, 32) ನಾವು ಐಶ್ವರ್ಯವಂತರಾಗಿರದಿದ್ದರೂ ‘ಅತಿಥಿಸತ್ಕಾರದ ಪಥವನ್ನು ಅನುಸರಿಸಬಲ್ಲೆವು.’ (ರೋಮ. 12:13) ನಾವು ನಮ್ಮ ಅತಿಥಿಗಳಿಗೆ ಭರ್ಜರಿ ಊಟವನ್ನೇ ಕೊಡಬೇಕೆಂದಿಲ್ಲ. ಸರಳವಾದ ಸಾದಾ ಊಟವೇ ಸಾಕು. “ದ್ವೇಷವಿರುವಲ್ಲಿ ಕೊಬ್ಬಿದ ದನದ ಮಾಂಸಕ್ಕಿಂತಲೂ ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ” ಎಂಬುದನ್ನು ನೆನಪಿನಲ್ಲಿಡಿರಿ. (ಜ್ಞಾನೋ. 15:17) ಜೊತೆ ಸಮಗ್ರತೆ ಪಾಲಕರೊಂದಿಗೆ ಪ್ರೀತಿಪರ ವಾತಾವರಣದಲ್ಲಿ ಊಟಮಾಡುವುದು ಸರಳ ಊಟವನ್ನೂ ಅತ್ಯಂತ ರುಚಿಕರವನ್ನಾಗಿ ಮಾಡಬಲ್ಲದು ಮತ್ತು ನಮ್ಮನ್ನು ಆಧ್ಯಾತ್ಮಿಕವಾಗಿ ಬಲಪಡಿಸಬಲ್ಲದು ನಿಶ್ಚಯ.

17. ಗಂಭೀರ ಪಾಪವನ್ನು ಅಡಗಿಸಿಕೊಳ್ಳಲು ನಾವೇಕೆ ಪ್ರಯತ್ನಿಸಬಾರದು?

17 ಯೋಬನ ಆತಿಥ್ಯದಲ್ಲಿ ಭಾಗಿಗಳಾದವರಿಗೆ ಅದು ಆಧ್ಯಾತ್ಮಿಕವಾಗಿ ಭಕ್ತಿವರ್ಧಕವಾಗಿದ್ದಿರಬೇಕು. ಏಕೆಂದರೆ ಅವನಲ್ಲಿ ಕಪಟವಿರಲಿಲ್ಲ. ಒಂದನೇ ಶತಮಾನದ ಸಭೆಯೊಳಗೆ ನುಸುಳಿಕೊಂಡ ಭಕ್ತಿಹೀನ ಜನರಂತೆ ಅವನಿರಲಿಲ್ಲ. ಆ ಜನರು ‘ತಮ್ಮ ಸ್ವಂತ ಪ್ರಯೋಜನಕ್ಕಾಗಿ ಇತರರನ್ನು ಹೊಗಳುತ್ತಿದ್ದರು.’ (ಯೂದ 3, 4, 16) ಅಲ್ಲದೆ ಯೋಬನು ಎಂದೂ ತನ್ನ ತಪ್ಪುಗಳನ್ನು ಅಡಗಿಸಿಕೊಳ್ಳುತ್ತಿರಲಿಲ್ಲ ಅಥವಾ ತನ್ನ ತಪ್ಪುಗಳು ಬೇರೆಯವರಿಗೆ ಗೊತ್ತಾದರೆ ತಿರಸ್ಕಾರಕ್ಕೆ ಗುರಿಯಾದೇನೆಂಬ ಭಯದಿಂದ ‘ಎದೆಯಲ್ಲಿ ತನ್ನ ಪಾಪವನ್ನು ಬಚ್ಚಿಟ್ಟುಕೊಂಡಿರಲಿಲ್ಲ.’ ಅವನು ದೇವರಿಂದ ಪರಿಶೋಧಿಸಲ್ಪಡಲು ಸಿದ್ಧಮನಸ್ಕನಾಗಿದ್ದನು. ತನ್ನ ತಪ್ಪುಗಳನ್ನು ದೇವರ ಮುಂದೆ ಅರಿಕೆಮಾಡುತ್ತಿದ್ದನು. (ಯೋಬ 31:33-37) ನಾವು ಗಂಭೀರ ಪಾಪವನ್ನು ಮಾಡಿದ್ದಲ್ಲಿ ನಮಗೆ ಮುಖಭಂಗವಾಗಬಾರದೆಂದು ಅದನ್ನು ಅಡಗಿಸಿಡಲು ಪ್ರಯತ್ನಿಸದಿರೋಣ. ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆಂದು ಹೇಗೆ ತೋರಿಸಬಲ್ಲೆವು? ನಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಪಶ್ಚಾತ್ತಾಪಪಟ್ಟು, ಆಧ್ಯಾತ್ಮಿಕ ಸಹಾಯವನ್ನು ಕೋರುತ್ತಾ, ಅದನ್ನು ಸರಿಪಡಿಸಲು ಬೇಕಾದದ್ದೆಲ್ಲವನ್ನು ಮಾಡುವ ಮೂಲಕವೇ.—ಜ್ಞಾನೋ. 28:13; ಯಾಕೋ. 5:13-15.

ಸಮಗ್ರತೆ ಪಾಲಕನ ವಿಚಾರಣೆ

18, 19. (ಎ) ಯೋಬನು ಯಾರನ್ನಾದರೂ ಎಂದೂ ಅನ್ಯಾಯವಾಗಿ ದುಡಿಸಿಕೊಳ್ಳಲಿಲ್ಲವೆಂದು ನಾವು ಹೇಗೆ ಹೇಳಬಲ್ಲೆವು? (ಬಿ) ತಪ್ಪು ತನ್ನದಾಗಿದ್ದರೆ ಏನನ್ನು ಮಾಡಲು ಯೋಬನು ಸಿದ್ಧಮನಸ್ಕನಾಗಿದ್ದನು?

18 ಯೋಬನು ಪ್ರಾಮಾಣಿಕನೂ ನ್ಯಾಯಪರನೂ ಆಗಿದ್ದನು. ಆದ್ದರಿಂದ ಅವನು ಹೀಗೆ ಹೇಳಶಕ್ತನಾದನು: “ನನ್ನ ಭೂಮಿಯು ನನ್ನ ಮೇಲೆ ಕೂಗಿಕೊಂಡರೆ ಅದರ ನೇಗಿಲಗೆರೆಗಳೆಲ್ಲಾ ಅತ್ತರೆ ನಾನು ಹಣಕೊಡದೆ ಅದರ ಸಾರವನ್ನನುಭವಿಸಿ ಅದರ ದಣಿಗಳ ಪ್ರಾಣ ಹೋದದ್ದಕ್ಕೆ ಕಾರಣನಾಗಿದ್ದರೆ ಗೋದಿಗೆ ಬದಲಾಗಿ ಮುಳ್ಳುಗಳೂ ಜವೆಗೋದಿಗೆ ಪ್ರತಿಯಾಗಿ ಕೆಟ್ಟ ಕಳೆಗಳೂ ಬೆಳೆಯಲಿ.” (ಯೋಬ 31:38-40) ಯೋಬನೆಂದೂ ಬೇರೆಯವರ ಭೂಮಿಯನ್ನು ಅನ್ಯಾಯದಿಂದ ಕಸಿದುಕೊಳ್ಳಲಿಲ್ಲ, ಕೂಲಿಯಾಳುಗಳನ್ನು ಅನ್ಯಾಯವಾಗಿ ದುಡಿಸಿ ದೋಚಿಕೊಳ್ಳಲಿಲ್ಲ. ಅವನಂತೆ ನಾವು ಕೂಡ ಚಿಕ್ಕದೊಡ್ಡ ವಿಷಯಗಳಲ್ಲೂ ಯೆಹೋವನಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು.

19 ಯೋಬನು ತನ್ನ ಮೂವರು ಸಂಗಡಿಗರು ಹಾಗೂ ಯುವಕನಾದ ಎಲೀಹುವಿನ ಮುಂದೆ ತನ್ನ ಬಾಳಿನ ಕಥೆಯನ್ನು ವಿವರಿಸಿದ್ದನು. ತನ್ನ ‘ಕೈಗುರುತಿನಿಂದ’ ದೃಢೀಕರಿಸಲಾದ ತನ್ನ ಜೀವಮಾನದ ದಾಖಲೆಯ ವಿರುದ್ಧ ಯಾವ ವಿರೋಧಿಯಾದರೂ ದಾವೆ ಹೂಡಲು ಬಯಸಿದ್ದಲ್ಲಿ ಹಾಗೆ ಮಾಡುವಂತೆ ಯೋಬನು ಕರೆನೀಡಿದ್ದನು. ಅದು ಯೋಬನನ್ನು ಅಪರಾಧಿಯೆಂದು ಸಾಬೀತುಮಾಡಿದ್ದಲ್ಲಿ ಅವನು ಶಿಕ್ಷೆಯನ್ನು ಅನುಭವಿಸಲು ಸಿದ್ಧನಾಗಿದ್ದನು. ಆದ್ದರಿಂದ ಅವನು ತನ್ನ ಮೊಕದ್ದಮೆಯನ್ನು ದೈವಿಕ ನ್ಯಾಯಾಲಯಕ್ಕೆ ಒಪ್ಪಿಸಿಕೊಟ್ಟು ಆತನ ತೀರ್ಪಿಗಾಗಿ ಕಾದುಕುಳಿತನು. “ಹೀಗೆ ಯೋಬನ ಮಾತುಗಳು ಮುಗಿದವು.”—ಯೋಬ 31:35, 40.

ಸಮಗ್ರತೆ ಕಾಪಾಡಿಕೊಳ್ಳಲು ನಿಮಗೆ ಸಾಧ್ಯ!

20, 21. (ಎ) ಯೋಬನು ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶಕ್ತನಾದನೇಕೆ? (ಬಿ) ದೇವರ ಮೇಲಣ ಪ್ರೀತಿಯನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು?

20 ಯೋಬನು ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶಕ್ತನಾದನು ಏಕೆಂದರೆ ಅವನು ಯೆಹೋವನನ್ನು ಪ್ರೀತಿಸಿದನು. ಯೆಹೋವನೂ ಅವನನ್ನು ಪ್ರೀತಿಸಿದನು ಮತ್ತು ಸಹಾಯಮಾಡಿದನು. ಯೋಬನಂದದ್ದು: “ನೀನು ನನಗೆ ಜೀವವನ್ನು ಅನುಗ್ರಹಿಸಿ ಕೃಪೆ [ನಿಷ್ಠೆಯುಳ್ಳ ಪ್ರೀತಿ] ತೋರಿಸಿದ್ದೀ; ನಿನ್ನ ಪರಾಮರಿಕೆ ನನ್ನ ಆತ್ಮವನ್ನು ಕಾಪಾಡಿದೆ.” (ಯೋಬ 10:12) ಅದಲ್ಲದೆ ಯೋಬನು ಇತರರಿಗೂ ಪ್ರೀತಿ ತೋರಿಸಿದನು. ಏಕೆಂದರೆ ಜೊತೆಮಾನವರಿಗೆ ನಿಷ್ಠೆಯುಳ್ಳ ಪ್ರೀತಿಯನ್ನು ತೋರಿಸದವನು ಸರ್ವಶಕ್ತನ ಭಯಭಕ್ತಿಯನ್ನು ತೊರೆದುಬಿಡುವವನಾಗುತ್ತಾನೆ ಎಂದು ಅವನು ಮನಗಂಡನು. ಸಮಗ್ರತೆಪಾಲಕರು ದೇವರನ್ನೂ ತಮ್ಮ ನೆರೆಯವರನ್ನೂ ಪ್ರೀತಿಸುತ್ತಾರೆ.—ಮತ್ತಾ. 22:37-40.

21 ದೇವರ ವಾಕ್ಯವನ್ನು ಅನುದಿನವೂ ಓದುವ ಮೂಲಕ ಮತ್ತು ಅದು ಆತನ ಕುರಿತು ತಿಳಿಸುವುದನ್ನು ಧ್ಯಾನಿಸುವ ಮೂಲಕ ನಾವು ದೇವರ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಬಲ್ಲೆವು. ಯೆಹೋವನು ನಮಗೆ ತೋರಿಸಿದ ಒಳ್ಳೇತನಕ್ಕಾಗಿ ನಾವು ಆತನಿಗೆ ಕೃತಜ್ಞತಾಸ್ತುತಿಯನ್ನು ಹೃತ್ಪೂರ್ವಕ ಪ್ರಾರ್ಥನೆಯ ಮೂಲಕ ಸಲ್ಲಿಸಬಲ್ಲೆವು. (ಫಿಲಿ. 4:6, 7) ಯೆಹೋವನಿಗೆ ಸ್ತುತಿಹಾಡುತ್ತಾ ಆತನ ಜನರೊಂದಿಗೆ ಕ್ರಮವಾಗಿ ಸಹವಾಸಮಾಡುವ ಮೂಲಕವೂ ನಾವು ಪ್ರಯೋಜನ ಹೊಂದುತ್ತೇವೆ. (ಇಬ್ರಿ. 10:23-25) ಅದಲ್ಲದೆ ಶುಶ್ರೂಷೆಯಲ್ಲಿ ಭಾಗವಹಿಸುತ್ತಾ “ಆತನ ರಕ್ಷಣೆಯ” ಸುವಾರ್ತೆಯನ್ನು ಸಾರಿಹೇಳುವಾಗ ದೇವರ ಮೇಲಣ ನಮ್ಮ ಪ್ರೀತಿಯು ಹೆಚ್ಚುತ್ತಾ ಹೋಗುವುದು. (ಕೀರ್ತ. 96:1-3) ಈ ವಿಧಗಳಲ್ಲಿ ನಾವು ಸಮಗ್ರತೆಯನ್ನು ಕಾಪಾಡಿಕೊಂಡು ಕೀರ್ತನೆಗಾರನಂತೆ ಹೀಗೆ ಹಾಡಬಲ್ಲೆವು. “ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.”—ಕೀರ್ತ. 73:28.

22, 23. ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುವವರಾದ ನಮ್ಮ ಕಾರ್ಯಗಳು ಆರಂಭದ ಸಮಗ್ರತೆ ಪಾಲಕರ ಕಾರ್ಯಗಳೊಂದಿಗೆ ಹೇಗೆ ಹೋಲಿಕೆಯಾಗಿವೆ?

22 ಶತಮಾನಗಳಾದ್ಯಂತ ಯೆಹೋವನು ಸಮಗ್ರತೆ ಪಾಲಕರಿಗೆ ಅನೇಕ ವಿಧವಿಧವಾದ ನೇಮಕಗಳನ್ನು ಕೊಟ್ಟಿದ್ದಾನೆ. ನೋಹನು ನಾವೆಯನ್ನು ಕಟ್ಟಿದನು ಮಾತ್ರವಲ್ಲ ‘ನೀತಿಯನ್ನು ಸಾರುವವನಾಗಿದ್ದನು.’ (2 ಪೇತ್ರ 2:5) ಯೆಹೋಶುವನು ಇಸ್ರಾಯೇಲ್ಯರನ್ನು ವಾಗ್ದತ್ತ ದೇಶದೊಳಗೆ ನಡೆಸಿದನು. ಆದರೆ ಅವನು ಅದರಲ್ಲಿ ಯಶಸ್ವಿಯಾದದ್ದು “ಧರ್ಮೋಪದೇಶವನ್ನೆಲ್ಲಾ” “ಹಗಲಿರುಳು” ಓದಿದ್ದರಿಂದ ಮತ್ತು ಅದಕ್ಕನುಸಾರ ಕ್ರಿಯೆಗೈದದ್ದರಿಂದಲೇ. (ಯೆಹೋ. 1:7, 8) ಒಂದನೇ ಶತಮಾನದ ಕ್ರೈಸ್ತರು ಜನರನ್ನು ಶಿಷ್ಯರನ್ನಾಗಿ ಮಾಡಿದರು ಮಾತ್ರವಲ್ಲ ಶಾಸ್ತ್ರಗ್ರಂಥವನ್ನು ಅಧ್ಯಯನ ಮಾಡಲು ಕ್ರಮವಾಗಿ ಕೂಡಿಬಂದರು.—ಮತ್ತಾ. 28:19, 20.

23 ಹೀಗೆ ನಾವು ನೀತಿಯನ್ನು ಸಾರುವ ಮೂಲಕ, ಜನರನ್ನು ಶಿಷ್ಯರನ್ನಾಗಿ ಮಾಡುವ ಮೂಲಕ, ಬೈಬಲಿನ ಸಲಹೆಗಳನ್ನು ಅನ್ವಯಿಸುವ ಮೂಲಕ, ಸಭಾಕೂಟ, ಸಮ್ಮೇಳನ, ಅಧಿವೇಶನಗಳಲ್ಲಿ ಜೊತೆವಿಶ್ವಾಸಿಗಳೊಂದಿಗೆ ಕೂಡಿಬರುವ ಮೂಲಕ ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುತ್ತೇವೆ ಮತ್ತು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತೇವೆ. ಅಂಥ ಕಾರ್ಯಗಳು ದೇವರ ಚಿತ್ತವನ್ನು ಮಾಡುವುದರಲ್ಲಿ ನಾವು ಧೈರ್ಯವಂತರೂ ಆಧ್ಯಾತ್ಮಿಕವಾಗಿ ಬಲಾಢ್ಯರೂ ಮಾತ್ರವಲ್ಲ ಯಶಸ್ವಿಗಳೂ ಆಗುವಂತೆ ನೆರವಾಗುತ್ತವೆ. ಇದು ತುಂಬ ಕಷ್ಟಕರವಾಗಿಲ್ಲ ಏಕೆಂದರೆ ನಮಗೆ ನಮ್ಮ ಸ್ವರ್ಗೀಯ ತಂದೆಯ ಮತ್ತು ಆತನ ಪುತ್ರನ ಬೆಂಬಲವಿದೆ. (ಧರ್ಮೋ. 30:11-14; 1 ಅರ. 8:57) ಅಷ್ಟಲ್ಲದೆ, ಸಮಗ್ರತೆಯಲ್ಲಿ ನಡೆಯುತ್ತಿರುವ ಹಾಗೂ ತಮ್ಮ ಪರಮಾಧಿಕಾರಿ ಕರ್ತನಾದ ಯೆಹೋವನನ್ನು ಗೌರವಿಸುವ ‘ಸಹೋದರರ ಇಡೀ ಬಳಗದ’ ಬೆಂಬಲವೂ ನಮಗಿದೆ.—1 ಪೇತ್ರ 2:17.

ನಿಮ್ಮ ಉತ್ತರವೇನು?

• ಯೆಹೋವನ ನೈತಿಕ ಮಟ್ಟಗಳನ್ನು ನಾವು ಹೇಗೆ ವೀಕ್ಷಿಸಬೇಕು?

• ಯೋಬನ ಯಾವ ಗುಣಗಳು ನಿಮಗೆ ವಿಶೇಷವಾಗಿ ಇಷ್ಟ?

ಯೋಬ 31:29-37 ಹೇಳುವಂತೆ ಯೋಬನ ನಡವಳಿಕೆ ಹೇಗಿತ್ತು?

• ದೇವರಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಮ್ಮಿಂದ ಸಾಧ್ಯ ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 29ರಲ್ಲಿರುವ ಚಿತ್ರ]

ಯೋಬನು ಯೆಹೋವನಿಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು, ನಮಗೂ ಅದು ಸಾಧ್ಯ!

[ಪುಟ 32ರಲ್ಲಿರುವ ಚಿತ್ರ]

ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳಬಲ್ಲೆವು!