ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂಟಿ ಹೆತ್ತವರಿಗೆ ಗಮನಕೊಡಿ

ಒಂಟಿ ಹೆತ್ತವರಿಗೆ ಗಮನಕೊಡಿ

ಒಂಟಿ ಹೆತ್ತವರಿಗೆ ಗಮನಕೊಡಿ

ಒಂಟಿ ಹೆತ್ತವರಿಗೆ ಮಾಡಲಿಕ್ಕಿರುವಷ್ಟು ಹೆಚ್ಚು ಕೆಲಸ ಬೇರೆಯವರಿಗೆ ಇರುವುದು ಬಹಳ ಕಡಿಮೆ. ಅವರಿಗೆ ಎದುರಾಗುವ ಸವಾಲುಗಳು ಒಂದೆರಡಲ್ಲ, ಅನೇಕಾನೇಕ. ಸಂಸಾರದ ಬಂಡಿ ಎಳೆಯುವ ಜವಾಬ್ದಾರಿಯೆಲ್ಲ ಅವರೊಬ್ಬರ ಹೆಗಲ ಮೇಲಿರುತ್ತದೆ. ಹೊರಗೆ ದುಡಿದು ಸಂಪಾದಿಸಬೇಕು ಮಾತ್ರವಲ್ಲ ಖರೀದಿ, ಅಡಿಗೆ, ಶುಚಿಗೊಳಿಸುವಿಕೆ ಹಾಗೂ ಮಕ್ಕಳ ಲಾಲನೆಪಾಲನೆಯನ್ನೂ ಮಾಡಲಿಕ್ಕಿರುತ್ತದೆ. ಇದೆಲ್ಲದ್ದರ ಜೊತೆಗೆ ಮಕ್ಕಳಿಗೆ ಆರೋಗ್ಯಾರೈಕೆ, ಆಟೋಟ ಹಾಗೂ ಮನರಂಜನೆ, ಭಾವನಾತ್ಮಕ ಬೆಂಬಲವನ್ನೂ ಕೊಡಬೇಕಾಗುತ್ತದೆ. ಅಲ್ಲದೆ ತಮಗೆಂದು ಅಲ್ಪಸ್ವಲ್ಪ ಸಮಯವನ್ನೂ ಬದಿಗಿರಿಸಬೇಕು, ಅದೂ ಸಾಧ್ಯವಾದರೆ!

ಇಂದಿನ ಸಮಾಜದಲ್ಲಿ ಒಂಟಿ ಹೆತ್ತವರುಳ್ಳ ಕುಟುಂಬಗಳ ಸಂಖ್ಯೆ ಹೆಚ್ಚೆಚ್ಚಾಗುತ್ತಾ ಇದೆ. ಹಾಗಿದ್ದರೂ ಅಂಥ ಕುಟುಂಬಗಳು ನಮ್ಮ ಗಮನಕ್ಕೆ ಬಾರದೇ ಹೋದಾವು. “ಸ್ವತಃ ನಾನೇ ಒಂಟಿ-ಹೆತ್ತವಳಾಗುವ ತನಕ ಅಂಥ ಕುಟುಂಬಗಳ ಬಗ್ಗೆ ಯೋಚಿಸಿರಲೇ ಇಲ್ಲ” ಎಂದು ಒಬ್ಬಾಕೆ ತಾಯಿ ಪ್ರಾಮಾಣಿಕವಾಗಿ ನುಡಿದಳು. ಒಂಟಿ ಹೆತ್ತವರಿಗೆ ನೀವು ಹೇಗೆ ಗಮನಕೊಡಬಲ್ಲಿರಿ? ನೀವು ಅವರ ಬಗ್ಗೆ ಚಿಂತಿಸಬೇಕೋ? ಅವರ ಅಗತ್ಯಗಳಿಗೆ ಗಮನ ಕೊಡಲಿಕ್ಕೆ ಇರುವ ಮೂರು ಕಾರಣಗಳನ್ನು ಈಗ ನೋಡೋಣ.

ಗಮನ ಕೊಡಲಿಕ್ಕಾಗಿ ಕಾರಣಗಳು

ಅನೇಕ ಒಂಟಿ ಹೆತ್ತವರು ಸಹಾಯ ಬಯಸುತ್ತಾರೆ. ಇಬ್ಬರು ಮಕ್ಕಳಿರುವ 41 ವರ್ಷದ ವಿಧವೆಯೊಬ್ಬಳು ಹೇಳಿದ್ದು: “ಒಮ್ಮೊಮ್ಮೆ ಏನು ಮಾಡಬೇಕೆಂದೇ ನನಗೆ ತೋಚುವುದಿಲ್ಲ. ನನಗಿರುವ ಜವಾಬ್ದಾರಿಗಳ ಹೊರೆಯಡಿ ಕುಸಿದುಹೋಗುತ್ತೇನೋ ಎಂದನಿಸುತ್ತದೆ.” ಇನ್ನೊಬ್ಬಳು ತಾಯಿ ಹೇಳಿದ್ದು: “ನಾವು ಸಹಾಯಕ್ಕಾಗಿ ಅಂಗಲಾಚುತ್ತಿದ್ದೇವೆ. ಅದರ ತೀವ್ರ ಅಗತ್ಯ ನಮಗಿದೆ!” ಪತಿಯ ಸಾವು, ಪರಿತ್ಯಾಗ ಇಲ್ಲವೆ ಬೇರಾವುದೋ ಕಷ್ಟಕರ ಸನ್ನಿವೇಶಗಳಿಂದಾಗಿ ಅನೇಕ ಮಂದಿ ಒಂಟಿ ಹೆತ್ತವರಿಗೆ ಹೀಗೆಯೇ ಅನಿಸುತ್ತದೆ.

ಅದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ಒಬ್ಬನಿಂದ ಹೊರಲಾಗದಷ್ಟು ಭಾರವನ್ನು ಹೊತ್ತಿರುವ ಯಾರಾದರೊಬ್ಬರಿಗೆ ನೀವು ಸಹಾಯಹಸ್ತ ಚಾಚಿದ್ದೀರೊ? ಹಾಗೆ ಮಾಡಿದ್ದಲ್ಲಿ ಅವರಿಗೆ ಪ್ರಾಯೋಗಿಕ ಸಹಾಯ ಮಾಡಿದ್ದೀರೆಂಬ ತೃಪ್ತಿ ನಿಮಗಿರಬಲ್ಲದು. ಅದೇ ರೀತಿಯಲ್ಲಿ ಒಂಟಿ ಹೆತ್ತವರ ಮೇಲಿರುವ ಜವಾಬ್ದಾರಿಯ ಹೊರೆಯು ಕೆಲವೊಮ್ಮೆ ಒಬ್ಬರಿಂದ ಹೊರಲು ಕಷ್ಟವಾಗುವಷ್ಟು ಭಾರವಾಗಿರುತ್ತದೆ. ಅವರ ಅಗತ್ಯಗಳಿಗೆ ಸ್ಪಂದಿಸಿ ನೀವು ನೆರವಿನಹಸ್ತ ಚಾಚುವಾಗ, “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು” ಅಥವಾ ಸಂತೋಷಿತನು ಎಂಬ ಕೀರ್ತನೆ 41:1ರಲ್ಲಿನ ಮಾತುಗಳ ಸತ್ಯತೆಯನ್ನು ಅನುಭವಿಸುವಿರಿ.

ದೇವರು ಅದನ್ನು ಮೆಚ್ಚುತ್ತಾನೆ. ಯಾಕೋಬ 1:27 ಹೀಗನ್ನುತ್ತದೆ: “ಸಂಕಟದಲ್ಲಿರುವ ಅನಾಥರನ್ನೂ ವಿಧವೆಯರನ್ನೂ ಪರಾಮರಿಸುವುದು ಮತ್ತು ಲೋಕದ ದೋಷವು ಹತ್ತದಂತೆ ನೋಡಿಕೊಳ್ಳುವುದೇ ನಮ್ಮ ದೇವರೂ ತಂದೆಯೂ ಆಗಿರುವಾತನ ದೃಷ್ಟಿಯಲ್ಲಿ ಶುದ್ಧವೂ ಕಳಂಕರಹಿತವೂ ಆಗಿರುವ ಆರಾಧನಾ ರೀತಿಯಾಗಿದೆ.” ಇದರಲ್ಲಿ ಒಂಟಿ ಹೆತ್ತವರನ್ನು ಪರಾಮರಿಸುವುದೂ ಸೇರಿರುತ್ತದೆ. * ಇಬ್ರಿಯ 13:16 ಹೀಗನ್ನುತ್ತದೆ: “ಒಳ್ಳೇದನ್ನು ಮಾಡುವುದನ್ನೂ ಇತರರೊಂದಿಗೆ ಹಂಚಿಕೊಳ್ಳುವುದನ್ನೂ ಮರೆಯಬೇಡಿರಿ, ಏಕೆಂದರೆ ಇಂಥ ಯಜ್ಞಗಳಲ್ಲಿ ದೇವರು ಸಂತೃಪ್ತನಾಗುತ್ತಾನೆ.”

ಈ ಮೂರು ಕಾರಣಗಳನ್ನು ಮನಸ್ಸಿನಲ್ಲಿಟ್ಟು ಒಂಟಿ ಹೆತ್ತವರಿಗೆ ನೀವು ಹೇಗೆ ನೆರವಾಗಬಹುದು ಹಾಗೂ ಅದು ಪ್ರಾಯೋಗಿಕವಾಗಿರುವಂತೆ ಹೇಗೆ ಖಚಿತಪಡಿಸಬಹುದೆಂದು ಈಗ ನೋಡೋಣ.

ಅವರ ಅಗತ್ಯಗಳನ್ನು ವಿವೇಚಿಸಿ ತಿಳಿದುಕೊಳ್ಳಿ

“ನಿಮಗೇನು ಸಹಾಯ ಬೇಕು ಹೇಳಿ” ಎಂದು ಒಂಟಿ ಹೆತ್ತವರ ಬಳಿ ನೇರವಾಗಿ ಕೇಳುವುದು ಉಚಿತವೆಂದು ತೋರಬಹುದು. ಆದರೆ ನಿಜವಾಗಿ ತನಗೇನು ಬೇಕೆಂದು ಯಾರಾದರೂ ಬಾಯಿಬಿಟ್ಟು ಹೇಳುತ್ತಾರಾ? ತುಂಬ ಅಪರೂಪ! ಈ ಹಿಂದೆ ನೋಡಿದಂತೆ ನಾವು ‘ಪರಾಂಬರಿಸಬೇಕೆಂದು’ ಕೀರ್ತನೆ 41:1 ಹೇಳುತ್ತದೆ. ಇಲ್ಲಿ ಬಳಸಲಾಗಿರುವ ಹೀಬ್ರು ಪದದ ಅರ್ಥ ‘ಕೂಲಂಕಷವಾಗಿ ಯೋಚಿಸಿ, ವಿವೇಕಯುತವಾಗಿ ಕ್ರಿಯೆಗೈಯುವುದು’ ಎಂದಾಗಿದೆ.

ಹೀಗಿರುವುದರಿಂದ ಒಂಟಿ ಹೆತ್ತವರೊಬ್ಬರಿಗೆ ಸಹಾಯಕೊಡುವ ಅತ್ಯುತ್ತಮ ವಿಧ ಯಾವುದೆಂದು ತಿಳಿಯಲಿಕ್ಕಾಗಿ, ಅವರು ಎದುರಿಸುವ ಸವಾಲುಗಳ ಬಗ್ಗೆ ನೀವು ಗಂಭೀರವಾಗಿ ಯೋಚಿಸಬೇಕು. ಅವರ ಪರಿಸ್ಥಿತಿಯನ್ನು ಬರೇ ಮೇಲಿಂದ ಮೇಲೆ ನೋಡದೆ ಅವರನ್ನು ನಿಕಟವಾಗಿ ಅವಲೋಕಿಸಿ. ‘ಒಂದುವೇಳೆ ನಾನು ಅವರ ಪರಿಸ್ಥಿತಿಯಲ್ಲಿರುತ್ತಿದ್ದರೆ ನನಗೆ ಯಾವ ಸಹಾಯ ಬೇಕಾಗುತ್ತಿತ್ತು?’ ಎಂದು ನಿಮ್ಮನ್ನೇ ಕೇಳಿ. ‘ಸ್ವತಃ ನೀವು ಒಂಟಿ ಹೆತ್ತವರಾಗಿದ್ದರೆ ಮಾತ್ರ ನಮ್ಮ ಪರಿಸ್ಥಿತಿ ಅರ್ಥವಾಗುವುದು. ಇಲ್ಲದಿದ್ದಲ್ಲಿ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಿಲ್ಲ’ ಎಂದು ಅನೇಕ ಒಂಟಿ ಹೆತ್ತವರು ಹೇಳಬಹುದು ನಿಜ. ಹಾಗಿದ್ದರೂ, ಅವರ ಪರಿಸ್ಥಿತಿಗಳ ಬಗ್ಗೆ ಸಹಾನುಭೂತಿ ತೋರಿಸಲು ನಿಮ್ಮಿಂದಾದಷ್ಟು ಪ್ರಯತ್ನ ಮಾಡಿದ್ದಲ್ಲಿ ಅವರ ಅಗತ್ಯಗಳಿಗೆ ಗಮನಕೊಡಲು ನಿಮಗೆ ತುಂಬ ಸಹಾಯವಾಗುವುದು.

ದೇವರ ಪರಿಪೂರ್ಣ ಮಾದರಿಯನ್ನು ಅನುಕರಿಸಿರಿ

ಒಂಟಿ ಹೆತ್ತವರನ್ನು ಪರಾಮರಿಸುವ ವಿಷಯದಲ್ಲಿ ಯೆಹೋವ ದೇವರು ತೋರಿಸಿದಷ್ಟು ಪ್ರೀತಿ ಮತ್ತು ಪರಿಣಾಮಕಾರಿತ್ವವನ್ನು ಬೇರಾರೂ ತೋರಿಸಿರುವುದಿಲ್ಲ. ಆತನು ವಿಧವೆಯರಿಗೆ ಅಂದರೆ ಒಂಟಿ ಹೆತ್ತವರಿಗೆ ಕೊಟ್ಟಿರುವ ಗಮನ ಹಾಗೂ ತೋರಿಸುವ ಚಿಂತೆಯನ್ನು ಅನೇಕ ಬೈಬಲ್‌ ವಚನಗಳು ಎತ್ತಿಹೇಳುತ್ತವೆ. ದಿಕ್ಕಿಲ್ಲದವರಾದ ಅಂಥವರ ಅಗತ್ಯಗಳಿಗೆ ದೇವರು ಸ್ಪಂದಿಸುವ ರೀತಿಯನ್ನು ಪರಿಶೀಲಿಸುವ ಮೂಲಕ, ನಿಜವಾಗಿಯೂ ಸಹಾಯಕರ ಹಾಗೂ ಪ್ರಾಯೋಗಿಕ ನೆರವನ್ನು ನೀಡುವುದರ ಬಗ್ಗೆ ಬಹಳಷ್ಟನ್ನು ಕಲಿಯಬಲ್ಲೆವು. ಗಮನಿಸತಕ್ಕ ನಾಲ್ಕು ಮುಖ್ಯ ವಿಷಯಗಳು ಅದರಲ್ಲಿವೆ.

ಅವರಿಗೆ ಕಿವಿಗೊಡಿ

ಕಷ್ಟದಲ್ಲಿರುವವನ ‘ಮೊರೆಗೆ ತಾನು ಕಿವಿಗೊಡುವೆನು’ ಎಂದು ಯೆಹೋವನು ಪುರಾತನಕಾಲದ ಇಸ್ರಾಯೇಲಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ತಿಳಿಸಿದನು. (ವಿಮೋಚನಕಾಂಡ 22:22, 23) ಆತನ ಈ ಉತ್ತಮ ಮಾದರಿಯನ್ನು ನೀವು ಹೇಗೆ ಅನುಕರಿಸಬಲ್ಲಿರಿ? ಮನೆಯಲ್ಲಿ ಬೇರಾರೂ ವಯಸ್ಕ ವ್ಯಕ್ತಿ ಇಲ್ಲದಿರುವುದರಿಂದ ಒಂಟಿ ಹೆತ್ತವರಿಗೆ ಅನೇಕವೇಳೆ ತೀಕ್ಷ್ಣ ಒಂಟಿ ಭಾವನೆ ಕಾಡುತ್ತಿರುತ್ತದೆ. “ಮಕ್ಕಳು ರಾತ್ರಿ ಮಲಗಿದ ಬಳಿಕ ಕೆಲವೊಮ್ಮೆ ನನ್ನ ದುಃಖದ ಕಟ್ಟೆಯೊಡೆದು ಅಳುತ್ತಿರುತ್ತೇನೆ. ಒಮ್ಮೊಮ್ಮೆ ಈ ಒಂಟಿತನವನ್ನು ಸಹಿಸಲಿಕ್ಕೇ ಆಗುವುದಿಲ್ಲ” ಎಂದು ಪ್ರಲಾಪಿಸಿದಳು ಒಂಟಿ ಹೆತ್ತವಳೊಬ್ಬಳು. ಒಂಟಿ ಹೆತ್ತವರೊಬ್ಬರು ತಮ್ಮ ಮನದಾಳದ ಭಾವನೆಗಳನ್ನು ತೋಡಿಕೊಳ್ಳಬೇಕೆಂದಿರುವಾಗ ಅವರ ‘ಮೊರೆಗೆ ಕಿವಿಗೊಡಲು’ ನೀವು ಅಲ್ಲಿರುವಿರೋ? ಆದರೆ ಅದನ್ನು ಸರಿಯಾದ ಸಮಯ ಹಾಗೂ ಸ್ಥಳದಲ್ಲಿ ಮಾಡಬೇಕು. ಒಂಟಿ ಹೆತ್ತವರಿಗೆ ಕಿವಿಗೊಡುವುದರಿಂದ ಸವಾಲುಗಳನ್ನು ನಿಭಾಯಿಸಲು ಅವರಿಗೆ ತುಂಬ ಸಹಾಯವಾದೀತು.

ಪ್ರೋತ್ಸಾಹನೆಯ ಮಾತುಗಳನ್ನಾಡಿ

ಯೆಹೋವನ ಪ್ರೇರಣೆಯಿಂದ ಕೀರ್ತನೆಗಳನ್ನು ಅಂದರೆ ಪವಿತ್ರ ಗೀತೆಗಳನ್ನು ಬರೆಯಲಾಯಿತು. ಈ ಗೀತೆಗಳನ್ನು ಇಸ್ರಾಯೇಲ್ಯರು ಆರಾಧನಾ ಸಂದರ್ಭಗಳಲ್ಲಿ ಹಾಡುತ್ತಿದ್ದರು. ದಿಕ್ಕಿಲ್ಲದವರಿಗೂ ವಿಧವೆಯರಿಗೂ ಯೆಹೋವನು ತಂದೆಯೆಂದೂ ಸಹಾಯಕನೆಂದೂ ಆತನೇ ಪರಿಹಾರ ಕೊಡುವವನೆಂದೂ ಹೇಳುವ ಮಾತುಗಳು ಆ ಗೀತೆಗಳಲ್ಲಿದ್ದವು. ಈ ದೇವಪ್ರೇರಿತ ಗೀತೆಗಳನ್ನು ಹಾಡುವಾಗ ಇಸ್ರಾಯೇಲ್ಯ ವಿಧವೆಯರಿಗೂ ಅವರ ಮಕ್ಕಳಿಗೂ ಎಷ್ಟೊಂದು ಪ್ರೋತ್ಸಾಹ ಸಿಗುತ್ತಿತ್ತೆಂದು ಸ್ವಲ್ಪ ಊಹಿಸಿ! (ಕೀರ್ತನೆ 68:5; 146:9) ನಾವು ಸಹ ಒಂಟಿ ಹೆತ್ತವರಿಗೆ ಪ್ರೋತ್ಸಾಹನೀಯ ಮಾತುಗಳನ್ನಾಡಬಹುದು. ಆ ಮಾತುಗಳು ಹಲವಾರು ವರ್ಷಗಳ ವರೆಗೆ ಅವರ ನೆನಪಿನಲ್ಲಿ ಉಳಿಯುವವು. “ನಿನ್ನ ಇಬ್ಬರು ಹುಡುಗರನ್ನು ಚೆನ್ನಾಗಿ ಬೆಳೆಸುತ್ತಿರುವಿ. ತುಂಬ ಒಳ್ಳೇದು!” ಎಂದು 20 ವರ್ಷಗಳ ಹಿಂದೆ ಒಬ್ಬ ಅನುಭವಸ್ಥ ತಂದೆಯು ರೂತ್‌ ಎಂಬ ಒಂಟಿ ಹೆತ್ತವಳಿಗೆ ಹೇಳಿದ್ದನ್ನು ಆಕೆ ಈಗಲೂ ಅಕ್ಕರೆಯಿಂದ ನೆನಪಿಸಿಕೊಳ್ಳುತ್ತಾಳೆ. “ಅವರ ಬಾಯಿಂದ ಆ ಮಾತುಗಳನ್ನು ಕೇಳಿ ನನಗಾದ ಸಂತೋಷ ಅಷ್ಟಿಷ್ಟಲ್ಲ” ಎನ್ನುತ್ತಾಳೆ ರೂತ್‌. ಹೌದು, ‘ಕನಿಕರದ ಮಾತು ಮನಸ್ಸನ್ನು ಹಿಗ್ಗಿಸುವದು.’ ಅದು ಒಂಟಿ ಹೆತ್ತವರಿಗೆ ನಾವು ನೆನಸುವುದಕ್ಕಿಂತಲೂ ಎಷ್ಟೋ ಹೆಚ್ಚು ಪ್ರೋತ್ಸಾಹ ಕೊಡುತ್ತದೆ. (ಜ್ಞಾನೋಕ್ತಿ 12:25) ಒಂಟಿ ಹೆತ್ತವರೊಬ್ಬರನ್ನು ಶ್ಲಾಘಿಸಲಿಕ್ಕಾಗಿ ಯಥಾರ್ಥವೂ ನಿರ್ದಿಷ್ಟವೂ ಆದ ವಿಷಯವೊಂದರ ಕುರಿತು ಯೋಚಿಸಬಲ್ಲಿರೋ?

ಕೊರತೆಯುಳ್ಳವರಿಗೆ ಭೌತಿಕ ನೆರವನ್ನೂ ನೀಡಿ

ಪುರಾತನ ಕಾಲದ ಇಸ್ರಾಯೇಲ್ಯರಿಗೆ ಯೆಹೋವನು ಕೊಟ್ಟ ಧರ್ಮಶಾಸ್ತ್ರದಲ್ಲಿ, ವಿಧವೆಯರಿಗೂ ಅವರ ಮಕ್ಕಳಿಗೂ ಅವರ ಮರ್ಯಾದೆಗೆ ಕುಂದು ಬಾರದಂಥ ರೀತಿಯಲ್ಲಿ ಊಟ ಸಿಗುವ ಹಾಗೆ ಏರ್ಪಾಡುಗಳನ್ನೂ ಮಾಡಲಾಗಿತ್ತು. ಇವುಗಳಿಂದಾಗಿ, ದಿಕ್ಕಿಲ್ಲದ ಆ ಜನರ ಆಹಾರದ ಕೊರತೆ ನೀಗುತ್ತಿತ್ತು. (ಧರ್ಮೋಪದೇಶಕಾಂಡ 24:19-21; 26:12, 13) ಬಡವರಾದ ಒಂಟಿ ಹೆತ್ತವರ ಕುಟುಂಬಕ್ಕೆ ನಾವು ಸಹ ಭೌತಿಕ ಸಹಾಯ ಕೊಡಬಹುದು. ಆದರೆ ಅದನ್ನು ಗಮನಸೆಳೆಯದ ಹಾಗೂ ಅವರ ಮರ್ಯಾದೆಗೆ ಕುಂದು ಬಾರದ ರೀತಿಯಲ್ಲಿ ಮಾಡಬೇಕು. ಏನಾದರೂ ಊಟ ಅಥವಾ ದಿನಸಿಗಳನ್ನು ಅವರ ಮನೆಯಲ್ಲಿ ಬಿಟ್ಟುಬರಬಹುದೋ? ಒಂಟಿ ಹೆತ್ತವರಾಗಲಿ ಅವರ ಮಕ್ಕಳಾಗಲಿ ಬಳಸಬಹುದಾದ ಬಟ್ಟೆಬರೆ ನಿಮ್ಮಲ್ಲಿರುವುದಾದರೆ ಅವರಿಗೆ ಕೊಡಬಹುದೋ? ಇಲ್ಲವೆ, ಆ ಕುಟುಂಬಕ್ಕೆ ಅಗತ್ಯವಿರುವ ನಿರ್ದಿಷ್ಟ ವಸ್ತುಗಳನ್ನು ಖರೀದಿಸಲು ಸ್ವಲ್ಪ ಹಣಕಾಸಿನ ಸಹಾಯ ನೀಡಬಹುದೋ?

ಸಹವಾಸಕ್ಕಾಗಿ ಸಂದರ್ಭ ಒದಗಿಸಿ

ಇಸ್ರಾಯೇಲ್‌ ಜನಾಂಗದ ವಾರ್ಷಿಕ ಹಬ್ಬಗಳ ಆಚರಣೆಯಲ್ಲಿ ವಿಧವೆಯರನ್ನೂ ಅವರ ಮಕ್ಕಳನ್ನೂ ಸೇರಿಸಿಕೊಳ್ಳಬೇಕೆಂದು ಯೆಹೋವನು ಅಪ್ಪಣೆಕೊಟ್ಟನು. ಅಂಥ ಹಬ್ಬಗಳಲ್ಲಿ ಅವರು ಜೊತೆ ಇಸ್ರಾಯೇಲ್ಯರ ಸಹವಾಸವನ್ನು ಆನಂದಿಸಬಹುದಿತ್ತು. ಅವರು ಸಂಭ್ರಮದಿಂದಿರಬೇಕು ಎಂದು ಹೇಳಲಾಗಿತ್ತು. (ಧರ್ಮೋಪದೇಶಕಾಂಡ 16:10-15) ಅದೇ ರೀತಿ ಇಂದು “ಒಬ್ಬರಿಗೊಬ್ಬರು ಅತಿಥಿಸತ್ಕಾರಮಾಡಿರಿ” ಎಂದು ಕ್ರೈಸ್ತರಿಗೆ ಉತ್ತೇಜಿಸಲಾಗಿದೆ. ಇಂಥ ಸಂದರ್ಭಗಳು ಸಂತೋಷಭರಿತ ಸಹವಾಸಕ್ಕೆ ಎಡೆಮಾಡುತ್ತವೆ. (1 ಪೇತ್ರ 4:9) ಆದ್ದರಿಂದ ಒಂಟಿ ಹೆತ್ತವರಿರುವ ಕುಟುಂಬವನ್ನು ಯಾವತ್ತಾದರೂ ಊಟಕ್ಕಾಗಿ ನಿಮ್ಮ ಮನೆಗೆ ಕರೆಯಬಹುದಲ್ಲವೇ? ಅದಕ್ಕಾಗಿ ವಿಧವಿಧವಾದ ಭಕ್ಷ್ಯಗಳಿರಬೇಕೆಂದಿಲ್ಲ. “ಬೇಕಾಗಿರುವುದು ಕೆಲವು ಮಾತ್ರ, ಅಥವಾ ಬರೀ ಒಂದೇ” ಎಂದು ಯೇಸು ತನ್ನ ಮಿತ್ರರ ಮನೆಯಲ್ಲಿ ಸಹವಾಸ ಮಾಡುತ್ತಿದ್ದಾಗ ಹೇಳಿದನು.—ಲೂಕ 10:42.

ನಿಮ್ಮ ಕಾಳಜಿಗಾಗಿ ಕೃತಜ್ಞರಾಗಿರುವರು

“ಏನನ್ನೂ ನಿರೀಕ್ಷಿಸದಿರು, ಎಲ್ಲದಕ್ಕೂ ಕೃತಜ್ಞಳಾಗಿರು” ಎಂಬ ವಿವೇಕಯುತ ಸಲಹೆಯನ್ನು ನಾನೆಂದೂ ಮರೆಯಲಾರೆ ಎನ್ನುತ್ತಾಳೆ ಕ್ಯಾತ್ಲಿನ್‌. ಆಕೆ ಒಂಟಿ ಹೆತ್ತವಳಾಗಿದ್ದರೂ ಮೂವರು ಮಕ್ಕಳನ್ನು ಬೆಳೆಸಿದಳು. ಆಕೆಯಂತೆಯೇ ಅನೇಕ ಒಂಟಿ ಹೆತ್ತವರು ತಮ್ಮ ಮಕ್ಕಳನ್ನು ಬೆಳೆಸುವುದು ತಮ್ಮ ಜವಾಬ್ದಾರಿ ಎಂದು ಪರಿಗಣಿಸುತ್ತಾರೆ. ಆದುದರಿಂದ ತಾವು ಸ್ವತಃ ನಿಭಾಯಿಸಬೇಕಾದ ಈ ಜವಾಬ್ದಾರಿಯನ್ನು ಇತರರು ಹೊರಬೇಕೆಂದು ಅವರು ನಿರೀಕ್ಷಿಸುವುದಿಲ್ಲ. ಆದರೆ ಯಾರಾದರೂ ಅವರಿಗೆ ಯಾವುದೇ ನೆರವನ್ನು ಕೊಡುವಲ್ಲಿ ಅದನ್ನು ಕೃತಜ್ಞತೆಯಿಂದ ಸ್ವೀಕರಿಸುತ್ತಾರೆ. ಒಂಟಿ ಹೆತ್ತವರಿಗೆ ಗಮನಕೊಡುವ ಮೂಲಕ ಅವರಿಗೆ ಒಳಿತಾಗುವುದು ಮಾತ್ರವಲ್ಲ ನಿಮ್ಮ ಸ್ವಂತ ಸಂತೋಷ ಹೆಚ್ಚಾಗುವುದು. ನೀವು ಮಾಡಿದ “ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು” ಎಂಬ ಭರವಸೆಯೂ ನಿಮಗಿರಬಲ್ಲದು.—ಜ್ಞಾನೋಕ್ತಿ 19:17. (w10-E 12/01)

[ಪಾದಟಿಪ್ಪಣಿ]

^ ಪ್ಯಾರ. 7 “ಒಂಟಿ ಹೆತ್ತವರು” ಎಂಬ ಅಭಿವ್ಯಕ್ತಿ ಬೈಬಲಿನಲ್ಲಿ ಇರದಿದ್ದರೂ, “ವಿಧವೆ” ಮತ್ತು ‘ತಾಯಿತಂದೆಯಿಲ್ಲದ ಮಕ್ಕಳು,’ ‘ದಿಕ್ಕಿಲ್ಲದ ಹುಡುಗರು,’ ‘ಅನಾಥರು’ (ಬೈಬಲಿನ ಮೂಲ ಭಾಷೆಯಲ್ಲಿ “ತಂದೆಯಿಲ್ಲದ ಬಾಲಕರು”) ಎಂಬ ಪದಗಳನ್ನು ಪದೇ ಪದೇ ಬಳಸಲಾಗಿದೆ. ಇದು ಬೈಬಲ್‌ ಸಮಯಗಳಲ್ಲೂ ಒಂಟಿ ಹೆತ್ತವರಿದ್ದರೆಂದು ಸೂಚಿಸುತ್ತದೆ.—ಯೆಶಾಯ 1:17.

[ಪುಟ 32ರಲ್ಲಿರುವ ಚಿತ್ರ]

ಒಂಟಿ ಹೆತ್ತವರುಳ್ಳ ಕುಟುಂಬವನ್ನು ನೀವು ಊಟಕ್ಕೆ ಕರೆದು ಎಷ್ಟು ಸಮಯವಾಯಿತು? ಅದನ್ನು ಆದಷ್ಟು ಬೇಗ ಮಾಡಬಹುದಲ್ಲವೇ?